Feb 4, 2010

'ಒಡೆಯ’ ನ ಕಥೆ...

ಚಹಾ ಅಂಗಡಿ ’ಚಂದ್ರ’ನ ರೇಡಿಯೋ ಅರಚುತ್ತಲೇ ಇತ್ತು. ರೇಡಿಯೋದ ಎಲ್ಲಾ ಭಾಗಗಳನ್ನೂ ಒಗ್ಗೂಡಿಸಿ ಅದರ ಮೇಲೊಂದು ರಬ್ಬರ್ ಬ್ಯಾಂಡ್ ಹಾಕಿಟ್ಟಿದ್ದ ಚಂದ್ರ. ಅವನ ಪ್ರತಿಯ ಅನುಕಂಪದಿಂದಲೋ ಏನೋ , ಅದು ಅರಚುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.
  " ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..."


ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಾ ತಾವು ಹೊದ್ದಿದ್ದ ಶಲ್ಯದಿಂದ ಗಾಳಿಹಾಕಿಕೊಳ್ಳುತ್ತಾ ’ಕೃಷ್ಣರಾಯರು’ ಅಂಗಡಿಯ ಮುಂದೆ ಕುಳಿತಾಗಲೇ ಚಂದ್ರನಿಗೆ ಅರಿವಾದದ್ದು..ಗಿರಾಕಿಯೊಬ್ಬರು ಬಂದಿದ್ದಾರೆ ಎಂದು.  " ಓಹ್ ರಾಯರೇ...ಬಹಳ ದಣಿದಿದ್ದೀರಿ ಅನ್ಸುತ್ತೆ..ಶರಬತ್ತು ಕೊಡಲೇ..?" ರಾಯರು ಚಂದ್ರನನ್ನೊಮ್ಮೆ ಸುಡುವಂತೆ ನೋಡಿದರು.." ಪುಗಸಟ್ಟೆ ಕೊಡೋದಾದ್ರೆ ಕೊಡು..ಇಲ್ಲಾಂದ್ರೆ ಇಲ್ಲಿ ಕೂರೋದಿಲ್ಲ  ನಾನು..." ರಾಯರು ಏಳಲು ಮುಂದಾದರು. ಚಂದ್ರ ಮೊದಲೇ ಮಾಡಿಟ್ಟಿದ್ದ  ಶರಬತ್ತನ್ನು ರಾಯರಿಗೆ ತಂದುಕೊಟ್ಟ.  " ಏನ್ ರಾಯ್ರೆ ನೀವು ..ಈ ಇಳಿ ವಯಸ್ಸಿನಲ್ಲೂ ಆ ತುಂಡು ಭೂಮಿಗಾಗಿ ಅಲೆದಾಡ್ತಾ ಇದ್ದೀರಲ್ಲ..ನಿಮ್ಮ ಮಗನಿಗಾದ್ರು ಹೇಳಬಾರ‍್ದೆ..ಸ್ವಲ್ಪ ಓಡಾಡಿ ಜಮೀನನ್ನ ಬಿಡಿಸಿಕೊಡು ಅಂತ "  ತಗ್ಗಿಸಿದ್ದ ತಲೆಯನ್ನು ರಾಯರು ಎತ್ತಲಿಲ್ಲ. ವಿದೇಶದಲ್ಲಿರುವ ಮಗನಿಗೆ ಜಮೀನಿನ ಚಿಂತೆಯೂ ಇರಲಿಲ್ಲ. ಕಷ್ಟಪಟ್ಟು ಬೆಳೆಸಿದ್ದ ಹತ್ತಾರು ಎಕರೆ ಅಡಿಕೆ ತೋಟ ವಿನಾಕಾರಣ ಅನ್ಯರ ಪಾಲಾಗುವುದು ರಾಯರಿಗೆ ಇಷ್ಟವಿರಲಿಲ್ಲ. ಇಷ್ಟಕ್ಕೂ ರಾಯರದ್ದು ಹುಟ್ಟಿನಿಂದಲೂ ಸಂಕೋಚದ ಸ್ವಭಾವವೇ ! .  ಅಕ್ಕ-ಪಕ್ಕ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಕೋಣೆಯ ಮೂಲೆಯಲ್ಲಿ  ನಿಂತು ’ಹೂಸು’ ಬಿಡುವಷ್ಟು ಸಂಕೋಚ ಅವರಿಗೆ !. ತಮ್ಮ ಜಮೀನಿನ ಮೇಲೆ ’ಉಳುವವನೇ ಒಡೆಯ’ ಎಂಬ ಹಕ್ಕನ್ನು ಸಾಧಿಸಹೊರಟಿದ್ದ ’ಚನ್ನಪ್ಪ ’ ನ ವಿರುದ್ದ ನಿಂತಾಗಲೇ ರಾಯರು ತಮ್ಮ ಸಂಕೋಚ, ತಾಳ್ಮೆ, ನಮ್ರತೆ, ಎಲ್ಲವನ್ನೂ ಕಳೆದುಕೊಂಡದ್ದು.  ಚನ್ನಪ್ಪನೂ ಸಾಕಷ್ಟು ಉದಾರತೆಯಿಂದಲೇ ನೆಡೆದುಕೊಂಡಿದ್ದ, ಫಸಲು ಬಂದಾಗಲೆಲ್ಲಾ ಅವರಿಗೆ ತಲುಪಬೇಕಾದ್ದನ್ನು ತಲುಪಿಸುತ್ತಿದ್ದ. ’ಒಡೆಯ’ ನ ಕಾನೂನು ಬಂದಾಗಲೂ ರಾಯರ ಪಾಲನ್ನೇನೂ ಅವನು ಕಡಿಮೆ ಮಾಡಿರಲಿಲ್ಲ. ಆದರೆ ಅದೆಕೋ ಏನೋ ಒಂದು ದಿನ ರಾಯರಿಗೇ ಅನ್ನಿಸಿಬಿಟ್ಟಿತ್ತು..’ ಜಮೀನನ್ನು ಚನ್ನಪ್ಪನಿಂದ ಬಿಡಿಸಿಕೊಂಡು ಸ್ವಂತ ನೆಡೆಸಬೇಕೆಂದು ’ . ಈ ವಿಷಯ ಪ್ರಸ್ತಾಪವಾದಾಗಲೇ ಚನ್ನಪ್ಪನಿಗೆ ಪಿತ್ತ ನೆತ್ತಿಗೇರಿದ್ದು.  ’ಬಿಲ್ ಕುಲ್’ ಆಗುವುದಿಲ್ಲ ,ಎಂದ ಚನ್ನಪ್ಪನ ಹಠಮಾರೀ ಧೋರಣೆಗೆ ಬೇಸತ್ತ ರಾಯರು "ನಿನ್ನನ್ನು ಮಾಟ ಮಾಡಿಸಿಯಾದರೂ ತೆಗೆಯುತ್ತೇನೆ ಕಣೋ " ಎಂದು ಶಪಿಸಿ ಹೊರಬಂದಿದ್ದರು. ಪಾಪ ರಾಯರಿಗೇನು ಗೊತ್ತು, ಚನ್ನಪ್ಪ ಒಳಗಿಂದೊಳಗೇ ಹಣ ಖರ್ಚು ಮಾಡಿ ಜಮೀನಿನ ಖಾತೆ -ಪಹಣಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡದ್ದು. ಈ ವಿಚಾರ ರಾಯರಿಗೆ ತಡವಾಗಿಯೇ ತಿಳಿದರೂ ಅತ್ಯಂತ ಜಾಗ್ರತೆಯಾಗಿ ಪರಿಚಯದ ವಕೀಲರನ್ನು ಭೇಟಿಮಾಡಿ , ತಮ್ಮಲ್ಲಿದ್ದ ಧಾಖಲಾತಿಗಳನ್ನು ಒದಗಿಸಿ "ಏನಾದರೂ" ಮಾಡುವಂತೆ ವಿನಂತಿಸಿದರು. ರಾಯರ ವಯಸ್ಸಿನ ಸೋಲನ್ನು ಅರಿತ ವಕೀಲರು ಸಾಕ್ಷಿಗಳನ್ನಿಟ್ಟುಕೊಂಡು ವಾದ ಮಂಡಿಸಿದರು. ಆಶ್ಚರ್ಯವೆಂಬಂತೆ ತೀರ್ಪು ರಾಯರ ಪರವಾಗಿಯೇ ಬರುವುದರಲ್ಲಿತ್ತು.. ಆದರೂ ರಾಯರಿಗೇನೋ ಅನುಮಾನ-ಚಿಂತೆ ಕಾಡುತ್ತಿತ್ತು, ಕೋರ್ಟಿನ ಮುಂಭಾಗದಲ್ಲಿ ನಿಂತು ಚನ್ನಪ್ಪನಾಡಿದ್ದ ಕಠೋರ ನುಡಿಗಳು ಅವರನ್ನು ಇರಿಯುತ್ತಿತ್ತು.   " ಲೇ ಆರುವಾ..ನಿನ್ನ ಬಿಡಾಕಿಲ್ಲ ಕಣಲೇ ...ಬಿಡಾಕಿಲ್ಲ " ಎಂಬ ಮಾತು ಅವರಲ್ಲಿ ಭಯವನ್ನೂ ಹುಟ್ಟಿಸಿತ್ತು. ಚಂದ್ರ ಕೊಟ್ಟ ಶರಬತ್ತನ್ನು ಕುಡಿದ ರಾಯರು "ಚಂದ್ರ ...ತುಂಬಾ ದಾಹವಾಗಿತ್ತು ಕಣೋ..ಶರಬತ್ತು ಕೊಟ್ಟು ಉಪಕಾರ ಮಾಡಿದೆ..ನಿನ್ನ ಹೊಟ್ಟೆ ತಣ್ಣಗಿರಲಪ್ಪಾ..ಸರಿ ಇನ್ನು ನಾನು ಬರಲೇ" ಎದ್ದು ಹೊರಟ ರಾಯರನ್ನು ಚಂದ್ರ ತಡೆದ " ರಾಯರೇ ..ಚನ್ನಪ್ಪ ಕೊಟ್ಟಷ್ಟು ಹಣ ತೆಗೆದುಕೊಂಡು ಸುಮ್ಮನಾಗಿ ಬಿಡಿ, ಅವನ ಸಹವಾಸ ಕಷ್ಟ, ಇಷ್ಟಕ್ಕೂ ನೀವು ಇನ್ನೇನು ಸಾಧನೆ ಮಾಡಬೇಕಿದೆ ?!...ಬರೋ ಹಣಾನ ಬಡ್ಡಿಗಿಟ್ಟುಕೊಂಡು ನಿಶ್ಚಿಂತರಾಗಿದ್ದುಬಿಡಿ" ರಾಯರಿಗೆ ಚಂದ್ರನ ಮಾತು ರುಚಿಸಲಿಲ್ಲ " ಹಣ ನನ್ನ ಮಗನ ಬಳಿಯೂ ಇದೆ ಕಣೋ, ಏನೋ ಪ್ರಯೋಜನ..ಒಬ್ಬ ತಂದೆಯನ್ನು ಸಾಕೋ ಯೊಗ್ಯತೆಯಿಲ್ವಲ್ಲೋ ಅವನಿಗೆ, ಅಯೋಗ್ಯ ! ಅಡಿಕೆ ಸಸಿಗಳನ್ನ ನನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದೀನಿ ಕಣೋ, ನನಗೆ ಅನ್ನ ಕೊಟ್ಟಿದೆ ಕಣೊ ಅದು, ಚನ್ನಪ್ಪ ಅಲ್ಲ ಅವರಪ್ಪ ಬಂದರೂ ಜಮೀನು ಬಿಟ್ಟುಕೊಡಲ್ಲ , ನಾನು ಸಾಯೋವರ‍್ಗೂ ನೋಡ್ತೀನೋ, ಆಮೇಲೆ ಮಗನಾದ್ರೂ ತಿನ್ಲಿ..ಯಾವೋನಾದ್ರೂ ತಿನ್ಲಿ..ನಂಗೇನು......." ರಾಯರು ಮಾತನಾಡುತ್ತಲೇ ಇದ್ದರು,  ಚನ್ನಪ್ಪ ಕಳುಹಿಸಿದ್ದ ’ಮಾರಿಗುಡಿ’ ಯ ಕೈಯಲ್ಲಿನ ಹರಿತವಾದ ಮಚ್ಚು ರಾಯರ ಮುಂಡವನ್ನು ಅರೆಕ್ಷಣದಲ್ಲಿ ಕತ್ತರಿಸಿ ಹಾಕಿತ್ತು ..!. ಚೆಲ್ಲಾಡಿದ ರಕ್ತವನ್ನು ಚಂದ್ರ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ. ರೇಡಿಯೋ ಅರಚುತ್ತಲೇ ಇತ್ತು....


" ದೇದಿ ಹಮೆ ಆಜಾದಿ ಬಿನಾ ಖಡ್ಗ್ ಬಿನಾ ಢಾಳ್..
  ಸಾಬರ್ ಮತೀಕೆ ಸಂತ್ ತೂನೆ ಕರ್ ದಿಯಾ ಕಮಾಲ್ "!!
( ಪುಟ್ಟ ವಿನಂತಿ....ನಾನು ಬರೆಯಲು ಪ್ರಾರಂಭಿಸಿದ್ದು ನನ್ನ ಕಾಲೇಜು ದಿನಗಳಲ್ಲಿ. ನಾನು ಓದುತ್ತಿದ್ದ ದ.ಕ.ಜಿಲ್ಲೆಯ ಉಜಿರೆ ಯ SDM {Sri Dharmasthala Manjunaatheshwara College) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಗುರುಗಳಾದ ಶ್ರೀಯುತ ’ನಿರಂಜನ ವಾನಳ್ಳಿ’ ಯವರ ( ಈಗ ಮಾನಸಗಂಗೋತ್ರಿ..ಮೈಸೂರು) ಮಾರ್ಗದರ್ಶನದಲ್ಲಿ ಕೇವಲ ವಿಚಾರ- ವಿಮರ್ಶೆಗಳನ್ನಷ್ಟೇ ಬರೆದುಕೊಂಡು ಬಂದಿದ್ದೆ. ಕಥೆ-ಕವನ ನಾನೆಂದೂ ಬರೆಯಲಿಲ್ಲ. ಈಗ ಬರೆದದ್ದೇ ನನ್ನ ಮೊದಲ ಕಥೆ..(ಹಾಗಂದುಕೊಂಡಿದ್ದೇನೆ !) . ಬ್ಲಾಗಿನ ಗುರುಗಳು, ಸಹೃದಯ ಮಿತ್ರರ ಪ್ರೋತ್ಸಾಹದಿಂದ ೧ ತಿಂಗಳ ಕೂಸು ನನ್ನ  ’ ಶಂಭುಲಿಂಗ ಪುರಾಣ ’ ದಲ್ಲಿ ಹುಮ್ಮಸ್ಸಿನಿಂದ ಕಥೆಯೊಂದನ್ನು ಬರೆದುಬಿಟ್ಟಿದ್ದೇನೆ...ನನಗೆ ಭಾವಗಳ ಆಳ-ಅಗಲಗಳ ಅರಿವಿಲ್ಲ...ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ತಿದ್ದಿ...ತೀಡಿ...ಹರಸಿ...ಹಣ್ಣನ್ನು ಹಂಚಿ ತಿಂದರೇ ರುಚಿ ಎಂದು ನನ್ನ ನಂಬಿಕೆ . ನಿಮ್ಮ ಪ್ರತಿಕ್ರಿಯೆಗಳೇ ನನಗೆ ಪ್ರೋತ್ಸಾಹ...ಇಲ್ಲಿಗೂ ಬರೆಯಿರಿ..subrahmanyahs@gmail.com)  

30 comments:

Narayan Bhat said...

ಒಡೆಯನ ತಲೆ ಚೆಂಡಾಡಿದ ಕಥೆ ಚೆನ್ನಾಗಿ ಬಂದಿದೆ.

ಚುಕ್ಕಿಚಿತ್ತಾರ said...

ಉಳುವವನೇ ಒಡೆಯ...ಸರ್ಕಾರದ ಕಾನೂನು ಸರಿಯಾದದ್ದೆ.
ತಮ್ಮ ಜಮೀನನ್ನು ತಾವೇ ಮಾಡಲಾಗದೇ ಇದ್ದದ್ದು, ಗೇಣಿಗೆ ಬಿಟ್ಟಿದ್ದು ಸೋಮಾರೀತನ ಮತ್ತು ಬೇಜವಾಬ್ಧಾರಿ.
ಬೇರೆಯವರಿಗೆ ದಕ್ಕಿಬಿಡುತ್ತೆ ಅ೦ದಾಗ ಮನುಶ್ಯನಿಗೆ ಹೇಗೆ ಆಸೆ,ಪ್ರಲೋಭನೆ ಹುಟ್ಟಿಕೊಳ್ಳುತ್ತೆ ಅನ್ನುವ ವಿಚಾರವನ್ನು ಅರ್ಥಪೂರ್ಣವಾಗಿ ಕಥೆಯ ಮೂಲಕ ಹೇಳಿದ್ದೀರಿ..
ನಿರೂಪಣೆ ಚನ್ನಾಗಿದೆ.ಕಥಾಸಾಗರದಲ್ಲಿ ಮು೦ದುವರೆಯಿರಿ....ಶ೦ಬುಲಿ೦ಗ....!!

ಮನಸು said...

chennagide, nimma neeroopaNa shaili tumba chennagide. oLLeya vishayavannu tiLisiddeeri

sunaath said...

ಮಚ್ಚು ಇದ್ದರೂ ಸಹ ನಿಮ್ಮ ‘ಹಣ್ಣು’ ಮಧುರವಾಗಿದೆ.

ಮನಮುಕ್ತಾ said...

ಚೆನ್ನಾಗಿದೆ..ಮು೦ದುವರೆಸಿ..ನಮ್ಮೆಲ್ಲರ ಪ್ರೋತ್ಸಾಹ ಇದ್ದೇ ಇದೆ.

Subrahmanya Bhat said...

* ನಾರಾಯಣ ಭಟ್ ಅವರೇ..
ತೆವಳುತ್ತಿರುವ ಕೂಸಿಗೆ ಪ್ರ‍ೋತ್ಸಾಹಿಸಿದ್ದೀರಿ...ಸಲಹೆಗಳನ್ನೂ ನೀಡಿ. ಧನ್ಯವಾದಗಳು

Subrahmanya Bhat said...

ಚುಕ್ಕಿ ಚಿತ್ತಾರ...
ಶಂಭುಲಿಂಗನ ಬ್ಲಾಗ್ ನಲ್ಲಿ ತಿಂಗಳ ಹಿಂದೆ ಮೊದಲು ಬಂದ ಪ್ರೋತ್ಸಾಹ ನಿಮ್ಮದೇ..(Comment)..:)ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ..ಹೀಗೇ ನೆಡೆಸಿ.....
ಇನ್ನು ಕಥೆಯಲ್ಲಿ ನಾನು ರಾಯರ ಹಾಗೂ ಚನ್ನಪ್ಪನ ಇಬ್ಬರ ಪ್ರಲೋಭನೆಗಳನ್ನೂ ತೋರಿಸಲು ಪ್ರಯತ್ನಿಸಿದ್ದೇನೆ...ಅಂತ್ಯದಲ್ಲಿ ಹಿಂಸೆ ಬೇಕಿತ್ತೇ..ಎನ್ನುವ ವಿಚಾರವನ್ನೂ ನಿಮ್ಮ ಮುಂದಿಟ್ಟಿದ್ದೇನೆ...ನಿರೂಪಣೆ ಚೆನ್ನಾಗಿದೆ ಎಂದಿದ್ದೀರಿ..ಸಲಹೆಗಳನ್ನೂ ತಿಳಿಸಿ..ಧನ್ಯವಾದಗಳು..ಶಂಭುಲಿಂಗ ಎಂದದ್ದು ಆತ್ಮೀಯವಾಯಿತು..:)

Subrahmanya Bhat said...

* ಮನಸು..
ಮರಳುಗಾಡಿನಿಂದ ಮನಸು ಮಾಡಿದ್ದೀರಿ..ತುಂಬಾ ಧನ್ಯವಾದಗಳು. ನಿಮ್ಮ ಕಥೆಗೂ all the best !

Subrahmanya Bhat said...

* ಮನಮುಕ್ತಾ...
ನಿಮ್ಮ ಆತ್ಮೀಯತೆಗೆ ಧನ್ಯವಾದಗಳು...ಪ್ರಯತ್ನಿಸುತ್ತೇನೆ..ಖಂಡಿತಾ ಮುಂದುವರಿಯುತ್ತೇನೆ..ಪ್ರೋತ್ಸಾಹ ಹೀಗೇ ಇರಲಿ

Subrahmanya Bhat said...

* ಕಾಕಾಶ್ರೀ..(ಪ್ರೀತಿಯಿಂದ ಕರೆಯುತ್ತೀದ್ದೇನೆ..ಆಗಬಹುದೇ ..?)
ನಿಮ್ಮಿಂದ ಇನ್ನಷ್ಟು ಸಲಹೆಗಳನ್ನು ನಿರೀಕ್ಷಿಸಿದ್ದೆ...ಒಂದೇ ಮಾತಿನಲ್ಲಿ ಪ್ರೋತ್ಸಾಹ ತುಂಬಿದ್ದೀರಿ...ಹೀಗೇ ಬರೆಯುತ್ತಿರಿ..ಬರುತ್ತಾ ಇರಿ..ಧನ್ಯವಾದಗಳು

ಸೀತಾರಾಮ. ಕೆ. said...

Nice attempt. Keep it up

Guru's world said...

ಚೆನ್ನಾಗಿ ಮೂಡಿ ಬಂದಿದೆ ಕಥೆ,,, ಮುಂದುವರಿಸಿ.....
ಗುರು

kuusu Muliyala said...

ಹಣ ನನ್ನ ಮಗನ ಬಳಿಯೂ ಇದೆ ಕಣೋ, ಏನೋ ಪ್ರಯೋಜನ..ಒಬ್ಬ ತಂದೆಯನ್ನು ಸಾಕೋ ಯೊಗ್ಯತೆಯಿಲ್ವಲ್ಲೋ ಅವನಿಗೆ, ಅಯೋಗ್ಯ ! ಅಡಿಕೆ ಸಸಿಗಳನ್ನ ನನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದೀನಿ ಕಣೋ, ನನಗೆ ಅನ್ನ ಕೊಟ್ಟಿದೆ ಕಣೊ ಅದು, ಚನ್ನಪ್ಪ ಅಲ್ಲ ಅವರಪ್ಪ ಬಂದರೂ ಜಮೀನು ಬಿಟ್ಟುಕೊಡಲ್ಲ , ನಾನು ಸಾಯೋವರ‍್ಗೂ ನೋಡ್ತೀನೋ, ಆಮೇಲೆ ಮಗನಾದ್ರೂ ತಿನ್ಲಿ..ಯಾವೋನಾದ್ರೂ ತಿನ್ಲಿ..ನಂಗೇನು......."ನಿಮ್ಮ ಇಡೀ ಕಥೆಯ ಸಾರವಿರುವುದೇ ಈ ವಾಕ್ಯಗಳಲ್ಲಿ...ಕಳಚಿಕೊಳ್ಳುತ್ತಿರುವ ಸ೦ಬ೦ಧಗಳು ,ಕೊನೆ ತನಕದ ಜೀವನ ಪ್ರೀತಿ ,ಹತಾಶೆ ಇದು ಓದುಗರನ್ನು ಯೋಚನೆಗೆ ಹಚ್ಚುತ್ತದೆ.ಚೆನ್ನಾಗಿದೆ ಮು೦ದುವರಿಸಿ

ವಿ.ಆರ್.ಭಟ್ said...

practice makes man perfect !

Subrahmanya Bhat said...

* ಸೀತಾರಾಮ್ ಗುರುಗಳೇ..

ನಿಮ್ಮಿಂದಲೂ ಇನ್ನಷ್ಟು ಸಲಹೆಗಳನ್ನು ನಿರೀಕ್ಷಿಸುತ್ತೇನೆ...ಪ್ರೋತ್ಸಾಹಿಸಿದ್ದೀರಿ..ಧನ್ಯವಾದಗಳು.

* ’ಗುರು’ ಪ್ರಪಂಚದವರೇ...

ಚೆನ್ನಾಗಿದೆ ಎಂದಿದ್ದೀರಿ..ಹೀಗೆ ಬರುತ್ತಿರಿ..ಪ್ರೋತ್ಸಾಹಕ್ಕೆ ಧನ್ಯವಾದಗಳು

* ಕೂಸು ಮುಳಿಯಾಳದವರೇ...

ಆ ವಾಕ್ಯಗಳನ್ನು ಬರೆಯುವಾಗ ಒಂದಷ್ಟು ನಾಕಂಡ ಅನುಭವಗಳನ್ನೂ ಸೇರಿಸಿ ಬರೆದಿದ್ದೇನೆ...ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ...ಬರುತ್ತಿರಿ . ಧನ್ಯವಾದಗಳು

* ವಿ. ಆರ್. ಭಟ್ಟರೇ..

ಸರಿಯಾಗಿ ಹೇಳಿದ್ದೀರಿ...ಪ್ರಯತ್ನ ಮುಂದುವರಿಸುತ್ತೇನೆ. ಧನ್ಯವಾದಗಳು.

ಸವಿಗನಸು said...

ನಿರೂಪಣೆ ಚೆನ್ನಾಗಿದೆ ಸರ್...

Subrahmanya Bhat said...

* ಸವಿಗನಸು...
ಪ್ರೋತ್ಸಾಹಕ್ಕೆ ಧನ್ಯವಾದಗಳು...ಬರುತ್ತಿರಿ.

VASANT said...

modal kathe antha yaake sankocha patkondu heltiri bhatre! nijavaagiyoo proudha baravanige. kathe theme chennagide. paatragalannu innooo baliyalu bidi. nimmolage avaahane maadikolli. avugalottige sambhaashane maadi aaga kathe tannintaane teredukollutta hoguttade. heegeye breyiri. Baravanige nimmannu belesuttade! Thanks for a good piece of writing

Subrahmanya Bhat said...

* ’ವಸಂತ್’ ರವರೇ....

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಅನುಭವಿಸಿ ಬರೆಯಬೇಕು ಅನ್ನೋ ನಿಮ್ಮ ಮಾತು-ಸಲಹೆ ಸತ್ಯವಾದದ್ದು. ಕಥೆ ಎಲ್ಲಿ ಬೋರ್ ಹಿಡಿಸಿಬಿಡುತ್ತೋ ಎನ್ನುವ ಭರದಲ್ಲಿ ಚಿಕ್ಕದಾಗಿ ಬರೆದೆ...ಮೊದಲ ಪ್ರಯತ್ನವಲ್ಲವೇ ! :) ಮೊದಲು ’ದರ್ಶನ’ ನಂತರ ’ಪ್ರದರ್ಶನ ’ ಎನ್ನುವ ನಿಮ್ಮ ಪ್ರೋತ್ಸ್ಯಾಹಕ್ಕೆ ಮತ್ತೊಮ್ಮೆ ನನ್ನ ಧನ್ಯವಾದಗಳು. ಮುಂದೆ ಸಂಕೋಚವಿಲ್ಲದೇ ಬರೆಯುತ್ತೇನೆ...:) ಹೀಗೇ ಬರುತ್ತಿರಿ..

ಶಿವಪ್ರಕಾಶ್ said...

enri, story li murder maadisibitri...
kathe channagide..

Subrahmanya Bhat said...

* 'Shivu ' maharaj

'story ne murder maadbitri ' anthaheldhreno ankonde.....thanks for encouragement,...

ಏಕಾಂತ said...

ನಮಸ್ತೆ...
ನಾನು ಹೊಸಬ. ಬರವಣಿಗೆ ತುಂಬಾ ನೈಜವಾಗಿದೆ. ಸರಳ ಶೈಲಿ ಹಿಡಿಸಿತು. ಕೊನೆಯಲ್ಲಿ ವಾನಾಳ್ಳಿಯವರನ್ನು ನೆನಪಿಸಿಕೊಂಡದ್ದು ಖುಷಿಯಾಯ್ತು. ನನ್ನ ಗುರುಗಳು ಕೂಡಾ! ಹೀಗೇ ಬರೆಯುತ್ತಿರಿ. ಶುಭವಾಗಲಿ...

ತೇಜಸ್ವಿನಿ ಹೆಗಡೆ- said...

ಮೊದಲ ಪ್ರಯತ್ನದಲ್ಲೇ ತುಂಬಾ ಚೆನ್ನಾಗಿ ನಿರೂಪಣೆ ಕೊಟ್ಟಿದ್ದೀರಿ. ಆದರೆ ತುಸು ಅವಸರದಲ್ಲಿ ಕಥೆ ಮುಗಿಸಿದಂತೆ ಅನಿಸಿತು. ಮತ್ತೂ ಬೆಳೆಸಲು ಅವಕಾಶವಿತ್ತು. ಬೆಳೆಸಿದ್ದರೆ ಇನ್ನೂ ಚೆನ್ನಾಗಿ ಮೂಡುತ್ತಿತ್ತೇನೋ ಅನ್ನಿಸಿತು.

ಇಂತಹ ಉತ್ತಮ ಪ್ರಯತ್ನಗಳು ಮತ್ತಷ್ಟು ನಡೆಯಲಿ.

Subrahmanya Bhat said...

* "ಏಕಾಂತ" ದಲ್ಲಿರುವವರೇ...

ಪ್ರೋತ್ಸಾಹಕ್ಕೆ ಧನ್ಯವಾದಗಳು. ’ನಿರಂಜನ ವಾನಳ್ಳಿ’ ಯವರು ನಾನು ಪದವಿಪೂರ್ವ ಮತ್ತು ಪದವಿ ಶಿಕ್ಷಣ ನೆಡೆಸುವಾಗ ಪತ್ರಿಕೋದ್ಯಮ ವಿಭಾಗದ ( ನಾನು ವಿಜ್ಞಾನ ವಿದ್ಯಾರ್ಥಿ) ಮುಖ್ಯಸ್ಥರಾಗಿದ್ದರು. ಆ ೫ ವರ್ಷಗಳು ನಾನವರನ್ನು ನೋಡಿ-ಕೇಳಿ-ಅನುಭವಿಸಿ ತಿಳಿದುಕೊಂಡಿದ್ದು ಸಾಕಷ್ಟು. ಇದು ೧೦ ವರ್ಷಗಳ ಹಿಂದಿನ ಮಾತು. ಮತ್ತೆ ಇಲ್ಲಿಯ ತನಕ ನಾನವರನ್ನು ಭೇಟಿಯಾಗಿಲ್ಲ. ( ಅವರನ್ನು ಗಮನಿಸುವುದನ್ನಂತೂ ಬಿಟ್ಟಿಲ್ಲ !!) ಶಿಷ್ಯರು ಅವರಿಗೆ ಸಾವಿರಾರು...ಆದರೆ ಅಂತಹ ಗುರುಗಳು ನಮಗೆ ಕೆಲವೇ ಕೆಲವರು ! ನಿಮಗೂ ಅವರು ಗುರುಗಳು ಎಂದಿರಿ...ಸಂತೋಷವಾಯ್ತು. ಹೀಗೇ ಬರುತ್ತಿರಿ. ಧನ್ಯವಾದಗಳು


* ’ತೇಜಸ್ವಿನಿ ಹೆಗಡೆ’ ಯವರೆ..

ನಿಜ...ಕಥೆಯನ್ನು ಹಿಗ್ಗಿಸುವುದು ಬೇಡ ಎಂದು ಮೊದಲೇ ನಿರ್ಧರಿಸಿದ್ದೆ..:) ಹಾಗಾಗಿ ಕತ್ತರಿಸಿಬಿಟ್ಟೆ..!
’ಬೆಳೆಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎನ್ನುವ ನಿಮ್ಮ ಪ್ರೋತ್ಸಾಹದಾಯಕ ನುಡಿಗಳೇ ಇನ್ನಷ್ಟು ಬರೆಯಲು ಪ್ರೆರೇಪಣೆಯಾಗಿದೆ. ಉತ್ತಮ ಪ್ರಯತ್ನ ಎಂದಿದ್ದೀರಿ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು .

ರವಿಕಾಂತ ಗೋರೆ said...

ಚೆನ್ನಾಗಿದೆ ನಿಮ್ಮ ರಕ್ತ ಸಿಕ್ತ ಕಥೆ...

Subrahmanya Bhat said...

* ’ ಗೋರೆ ’ ಯವರೇ....
ನಿಮಗೂ ರಕ್ತ...ಸಿಕ್ಕಿಬಿಟ್ಟಿತೇ ..! ಹಿಂಸೆ ಬೇಕಿತ್ತೇ ಎನ್ನುವ ವಿಚಾರದಲ್ಲಿ ರಕ್ತವನ್ನು ತೋರಿಸಿದೆ...ಚೆನ್ನಾಗಿದೆ ಎನ್ನುವ ನಿಮ್ಮ ಪ್ರೋತ್ಸಾಹ ಸದಾ ಇರಲಿ...ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಕಥೆ ಚೆನ್ನಾಗಿದೆ...
ಸ್ವಲ್ಪ ಬೆಳೆಸಿದ್ದರೆ ಇನ್ನೂ ಚೆನ್ನಾಗಿತ್ತು...

ನಿಮ್ಮ ಹಣ್ಣು ರುಚಿಕರವಾಗಿದೆ...

Subrahmanya Bhat said...

’ಪ್ರಕಾಶಣ್ಣ’....
ಹಣ್ಣನ್ನು ತಿಂದದ್ದಕ್ಕೆ ಧನ್ಯವಾದಗಳು..:)
ಹೌದು..ಬೆಳೆಸಬೇಕಿತ್ತು...
ಮುಂದೆ ಸರಿಮಾಡುತ್ತೇನೆ...
ಪ್ರೋತ್ಸಾಹಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು

ಜಲನಯನ said...

ಸುಭರೇ, ಬಹಳ ಚನ್ನಾಗಿ ಚಿಕ್ಕ ಚೊಕ್ಕ ನವಿರು ಹಾಸ್ಯಲೇಪಿತ ಕಥೆ...ನಿಜಕ್ಕೂ ಮೆಚ್ಚುಗೆಯಾಯ್ತು...ಅಕ್ಕ ಪಕ್ಕ ನೋಡಿ ಮೂಲೆಗೆಹೋಗಿ ಹೂಸುಬಿಡುವಷ್ಟು ಸಂಕೋಚ...ಹಹಹಹ...ಎಂಥ ಉಪಮೆ....!!! ಭಲಾ....ರಾಯರ ಹೂಸಿಗೂ ಹೆದರಲಿಲ್ಲ ಮಾರಿಗುಡಿಯ ಮಚ್ಚು...

Subrahmanya Bhat said...

* ’ಜಲನಯನ’ದವರೇ...
ನಿಮ್ಮ ಮಾತು ಓದಿ ನಗು ಬಂತು...ಬರೆಯುವಾಗ ಇಷ್ಟು ’ಪರಿಮಳ’ ಸೂಸಬಹುದೆಂದು ನಾನೆಣಿಸಿರಲಿಲ್ಲ..!! ಉಪಮೆ ಎಂದುಬಿಟ್ಟಿದ್ದೀರಿ...ಉಪಮಾಲಂಕಾರದ ಬಗ್ಗೆ ಗೊತ್ತು..ಪ್ರಯೋಗ ತಿಳಿದಿಲ್ಲ..! ಆದರೂ ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ..ಬರುತ್ತಿರಿ..ಯಾಕೋ.. ಶಂಭುಲಿಂಗನ ಭಕ್ತರ ಲಿಸ್ಟಲ್ಲಿ ನೀವಿಲ್ಲ..???!..ಧನ್ಯವಾದಗಳು