May 4, 2010

ಶಾಪ.. ೩ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
*******************************


ನಟ್ಟಿರುಳಿನಲ್ಲಿ ಅಶ್ವಗಳು ಬಹಳದೂರ ಪ್ರಯಾಣಿಸಲಾರದಾದವು.  ಕೈಯಲ್ಲಿ ಹಿಡಿದಿದ್ದ ದೀವಟಿಗೆಗಳು ನಂದಿಹೋದವು. ಯುವಕರಿಬ್ಬರೂ, ಸನಿಹದಲ್ಲಿ ಗೋಚರಿಸಿದ ಪುಟ್ಟ ಆಲಯದೊಳಗೆ ಹೊಕ್ಕರು. ರಾತ್ರಿಯನ್ನು ಅಲ್ಲೇ ಕಳೆಯುವುದೆಂದು ನಿರ್ಧರಿಸಿ,  ನಿದ್ರೆಗೆ ಶರಣಾದರು.
ನಸುಕಿನಲ್ಲಿ ಹಕ್ಕಿಗಳ ಕಲರವವು ಕಿವಿಗೆ ಬಿದ್ದಾಗಲೇ ಯುವಕರಿಬ್ಬರಿಗೂ ಎಚ್ಚರವಾದುದು. ಆಲಯದ ಮುಂದೆಯೇ ಹರಿಯುತ್ತಿದ್ದ ನದಿಯಲ್ಲಿ ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು, ಪುನಃ ಅಶ್ವಗಳನ್ನೇರಿ ದ್ವಾರಾವತಿಯತ್ತ ಪ್ರಯಾಣ ಬೆಳಸಿದರು. ಹಾದಿಯುದ್ದಕ್ಕೂ ಕಂಡ ಊರುಗಳು, ನಗರಗಳನ್ನು ದರ್ಶಿಸುತ್ತಾ ಅಲ್ಲಲ್ಲಿ ವಿರಮಿಸಿಕೊಳ್ಳುತ್ತಾ , ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ದ್ವಾರವತಿಯನ್ನು ತಲುಪಿದರು. ದ್ವಾರವತಿಯ ಭವ್ಯ ಕೋಟೆಯನ್ನು ಕಂಡು ಯುವಕರು ಮೂಕವಿಸ್ಮಿತರಾದರು. ಎರಡು ಸುತ್ತಿನ ಕೋಟೆಯನ್ನು ದಾಟಿ , ನಗರದೊಳಗೆ ಪ್ರವೇಶಿಸಿದರು. ದ್ವಾರವತಿಯ ವೈಭವವನ್ನು ಕಣ್ಣಾರೆ ಕಾಣುವ ಅವರ ಕನಸು ನನಸಾಗಿತ್ತು. ಸಮುದ್ರದಂತೆ ಗೋಚರಿಸುತ್ತಿದ್ದ ಬೃಹತ್ ಕೆರೆಯನ್ನು , ಪ್ರವೇಶದ್ವಾರದಲ್ಲೇ ಕಂಡ ಯುವಕರು ಬಹು ಸಂತಸಗೊಂಡರು. ಅರಮನೆಯನ್ನು ದರ್ಶಿಸುವ ಮೊದಲು , ಕೆಲ ಹೊತ್ತು ವಿರಮಿಸಿಕೊಳ್ಳುವ ನಿರ್ಧಾರಕ್ಕೆ ಬಂದ ಯುವಕರು , ಸನಿಹದಲ್ಲೇ ಕಂಡ ಸುಂದರ ’ಕಲ್ಯಾಣಿ’ಯಲ್ಲಿ ಮುಖ ಮಾರ್ಜನೆ ಮಾಡಿಕೊಂಡು ಪಕ್ಕದಲ್ಲೇ ಇದ್ದ ಉದ್ಯಾನವನದಲ್ಲಿ ವಿರಮಿಸತೊಡಗಿದರು. ತಂಪಾದ ಗಾಳಿಗೆ ಮೈಯೊಡ್ಡಿ ಮಲಗಿದ ಯುವಕರಿಗೆ ನಿದ್ದೆಯ ಜೋಂಪು ಹತ್ತಿದ್ದು ತಿಳಿಯಲಿಲ್ಲ. ಸಾಯಂಕಾಲವಾದರೂ, ಅವರ ನಿದ್ರೆಗೆ ಯಾವ ಭಂಗವೂ ಆಗಲಿಲ್ಲ.

-------*-------

ಪ್ರತಿನಿತ್ಯದಂತೆ , ಮಹಾರಾಣಿ ತಿರುಮಲಾಂಬೆಯು ಸಂಜೆಯ ವಾಯುವಿಹಾರಕ್ಕೆ ’ಕಲ್ಯಾಣಿ’ಯಿದ್ದ ಉದ್ಯಾನವನಕ್ಕೆ ಬರುವುದು ವಾಡಿಕೆಯಾಗಿತ್ತು. ಅಂದೂ ಸಹ ವಿಹಾರಕ್ಕೆ ರಾಣಿಯು ಆಗಮಿಸಿದಳು. ಉದ್ಯಾನವನದಲ್ಲಿ ಸಂಚರಿಸುತ್ತಿದ್ದ ರಾಣಿಗೆ, ನಿದ್ರೆಯಲ್ಲಿದ್ದ ಇಬ್ಬರು ಸ್ಪುರದ್ರೂಪಿ ಯುವಕರು ಕಂಡರು. ಅಡಿಯಿಂದ ಮುಡಿಯವರೆಗೂ ತರುಣರನ್ನು ದೃಷ್ಟಿಸಿದ ರಾಣಿಯು, ತನ್ನ ಸೇವಕರಿಗೆ ಯುವಕರನ್ನು ಎಚ್ಚರಗೊಳಿಸಲು ಆಜ್ಞಾಪಿಸಿದಳು. ನವ ತರುಣರ ದೇಹದಾರ್ಢ್ಯ, ಸ್ಪುರದ್ರೂಪ ರಾಣಿಯನ್ನು ಬಹುವಾಗಿ ಆಕರ್ಷಿಸಿತು. ಯುವಕರ ತಾರುಣ್ಯ, ರಾಣಿಯನ್ನು ಮೋಹಗೊಳಿಸಿತು !.  ಸೇವಕರ ಕರೆಗೆ ಎಚ್ಚರಗೊಂಡ ಲಕ್ಷ್ಮಣ-ವೀರೇಶರು , ತಮ್ಮೆದುರಿಗೆ ನಿಂತಿದ್ದವರನ್ನು ಕಂಡು ಬೆರಗಾದರು. ಸೇವಕರು , ಯುವಕರಿಗೆ ರಾಣಿ ತಿರುಮಲಾಂಬೆಯ ಪರಿಚಯವನ್ನು ಹೇಳಿದರು. ಯುವಕರು ಬಹಳ ವಿನಯದಿಂದ ಎದ್ದುನಿಂತು ಗೌರವವನ್ನು ಸೂಚಿಸಿದರು. ಯುವಕರ ರೂಪ-ವಿನಯವರ್ತನೆಗೆ ತಿರುಮಲಾಂಬೆಯು ಮಾರುಹೋದಳು.

" ಯುವಕರೆ, ನೀವು ನೋಡುವುದಕ್ಕೆ ರಾಜಕುಮಾರರಂತೆ  ಕಾಣುವಿರಿ. ದ್ವಾರಾವತಿಯಲ್ಲಿ ನಿಮ್ಮನ್ನೆಂದೂ ನಾನು ಕಂಡಿಲ್ಲ. ಎಲ್ಲಿಂದ ಬಂದಿರುವಿರಿ ನೀವು ? "

ರಾಣಿಯ ಮಾತುಗಳಿಗೆ ಉತ್ತರಿಸಲು ತರುಣರಿಗೆ ಹಿಂಜರಿಕೆಯಾಯಿತು. ಈಗಲೇ ಸತ್ಯ ನುಡಿಯುವುದು ಬೇಡವೆಂದು ಮನದಲ್ಲೇ ನಿರ್ಧರಿಸಿದರು. ಲಕ್ಷ್ಮಣನೇ ಉತ್ತರವನ್ನು ಕೊಡಲನುವಾದ

" ಮಹಾರಾಣಿ, ನಾವು ವಿಜಯಪುರದವರು, ದ್ವಾರಾವತಿಯ ಸೊಬಗನ್ನು ಸವಿಯಲು, ಯಾತ್ರಾರ್ಥಿಗಳಾಗಿ ಬಂದಿರುವೆವು. ಇಂದು ಇಲ್ಲೇ   ಉಳಿದು ನಾಳೆ ಹೊರಟು ಬಿಡುವೆವು..ತಮ್ಮ  ಆದರ-ವಿಶ್ವಾಸಗಳು ನಮ್ಮನ್ನು ಸಂತಸಗೊಳಿಸಿತು.."

ಮಹಾರಾಣಿಗೆ , ಯುವಕರು ದ್ವಾರವತಿಯವರಲ್ಲವೆಂದು ತಿಳಿದಾಗ , ಆಕೆಯ ಬಯಕೆ ಹೆಚ್ಚಾಯಿತು..ಮನಸು ವಿಚಲಿತವಾಯಿತು. ಮೋಹದ ಮಾತುಗಳನ್ನಾಡುತ್ತಾ ಯುವಕರೆಡೆಗೆ , ಸನಿಹಕ್ಕೆ ತೆರಳಿದಳು.

"ಯುವಕರೆ, ತಾವು ವಿಜಯಪುರದವರೆನ್ನುತ್ತೀರಿ. ಅಷ್ಟು ದೂರದಿಂದ ಇಲ್ಲಿಯವರೆಗೂ ಬಂದು ಬರಿ ಕೈಯಲ್ಲಿ ತೆರಳುವಿರೇನು ? ..ನಿಮ್ಮ ಆಸೆಗಳೇನಿದ್ದರೂ  ಹೇಳಿ..ನಾನು ಪೂರೈಸುತ್ತೇನೆ..!..ಹಾಗೆಯೇ ಈ ರಾಣಿಯ ಆಸೆಯನ್ನೂ ನೀವು ಪೂರೈಸಬೇಕಿದೆ ..!! "    

ಯುವಕರಿಗೆ ರಾಣಿಯ ಮಾತುಗಳು ವಿಚಿತ್ರವೆನಿಸತೊಡಗಿತು. ದ್ವಾರಾವತಿಯ ಮಹಾರಾಣಿಯಿಂದ ಇಂತಹ ಅನುಚಿತ ವರ್ತನೆ ಸಾಧ್ಯವೇ ? ....ರಾಣಿಯ ಆಸೆಯನ್ನು ನಾವು ತಣಿಸುವುದೆಂದರೇನು ..?? ...ಯುವಕರು ಗೊಂದಲಕ್ಕೀಡಾದರು..

" ಮಹಾರಾಣಿ, ತಮ್ಮ ಮಾತುಗಳು ನಮಗೆ ಅರ್ಥವಾಗಲಿಲ್ಲ !. ಆದರೂ , ನಾವಿಲ್ಲಿ ಬಂದಿರುವುದು ಯಾತ್ರಿಕರಾಗಿಯೇ ವಿನಃ , ಯಾವುದೇ ಭೋಗದ ಆಸೆಯಿಂದಲ್ಲ..., ನಮಗಾವ ಆಕಾಂಕ್ಷೆಗಳು ಇಲ್ಲ..ಸಾಧ್ಯವಾದರೆ, ಆಲಯಗಳನ್ನೂ, ಅರಮನೆಯನ್ನೂ ಈಗಲೇ ದರ್ಶಿಸಿ..ಇಂದೇ ಹೊರಟುಬಿಡುವೆವು .."

ಯುವಕರ ಮಾತಿಗೆ ತಿರುಮಲಾಂಬೆಯು ಹೆಚ್ಚು ಅವಕಾಶ ನೀಡದೆ, ಅವರನ್ನು ಇನ್ನಷ್ಟು ಸಮೀಪಿಸಿದಳು. ಯುವಕರು ಹಿಂದೆ-ಹಿಂದೆ ಸರಿಯುತ್ತಿದ್ದರು. ರಾಣಿಯು ಮೋಹಿಸುತ್ತಾ ಮತ್ತಷ್ಟು ಹತ್ತಿರವಾದಳು.

" ನವತರುಣರೆ, ನಿಮ್ಮ ತಾರುಣ್ಯವನ್ನೇಕೆ ಸುಮ್ಮನೆ ಹಾಳುಗೆಡಹುವಿರಿ ..? ಮಹಾರಾಣಿಯ ದೇಹಾಕಾಂಕ್ಷೆಯನ್ನೊಮ್ಮೆ ತಣಿಸಿಬಿಡಿ..ನಿಮ್ಮ ತಾರುಣ್ಯದ ಸೌಂದರ್ಯ ನನ್ನ ಮನಸನ್ನು ಮೋಹಗೊಳಿಸಿದೆ. ರಾಣಿಯನ್ನು ಏಕಾಂತದಲ್ಲಿ ಕಾಣುವ ಭಾಗ್ಯ ಅನ್ಯರಾರಿಗೂ ದೊರೆಯುವುದಿಲ್ಲ . ನಿಮಗೆ ಆ ಭಾಗ್ಯ ಸಿಗುತ್ತಿದೆ. ಮೂಢರಂತೆ ಸಮಯ ಹಾಳುಮಾಡದೆ ನನ್ನೊಂದಿಗೆ ಹೊರಟುಬನ್ನಿ.."....

ರಾಣಿಯ ಮಾತುಗಳು ಲಕ್ಷ್ಮಣ-ವೀರೇಶರನ್ನು ದಿಗ್ಭ್ರಾಂತರನ್ನಾಗಿಸಿತು. ಅವರ ಬಾಯಿಂದ ಮಾತುಗಳು ಹೊರಡದಾದವು. ಇನ್ನು, ಸತ್ಯವನ್ನು ಮುಚ್ಚಿಟ್ಟರೆ, ಮಹಾಪರಾಧವಾಗುತ್ತದೆಂದು ಆಲೋಚಿಸಿ..ಮಹಾರಾಣಿಯೆದುರು ಸತ್ಯವನ್ನು ನಿವೇದಿಸಿಕೊಂಡರು..

" ಮಹಾರಾಣಿಯವರೆ, ..ನೀವು ತಿಳಿದಂತೆ ನಾವು ವಿಜಯಪುರದವರಲ್ಲ..ಚಂದ್ರಗಿರಿಯ ರಾಣಿ ’ಹರಿಯಾಳ ದೇವಿಯ’ ಅವಳಿಮಕ್ಕಳು.  ಮಹಾರಾಜ ಬಲ್ಲಾಳರಾಯರು ನಮ್ಮ ಸೋದರಮಾವನವರು, ತಾವು ನಮಗೆ ಮಾತೃಶ್ರೀ ಸಮಾನರಾದ ಅತ್ತೆಯವರಾಗಬೇಕು....ದ್ವಾರಾವತಿಯ ಸೊಬಗನ್ನು ನೋಡಲು , ತಾಯಿಗೂ ತಿಳಿಸದೆ ಬಂದಿರುವೆವು. ತಾವು ನಮ್ಮನ್ನು ಈ ರೀತಿ ಸಮೀಪಿಸುತ್ತಿರುವುದು ಸರಿಯಲ್ಲ..! "

ತಿರುಮಲಾಂಬೆಗೆ ಆಕಾಶವೇ ಕಳಚಿಬಿದ್ದಂತಾಯಿತು. ಆಕೆಯಲ್ಲಿದ್ದ ಮೋಹಾಕಾಂಕ್ಷೆಗಳೆಲ್ಲವೂ ಇಳಿದುಹೋಯಿತು. ಹರಿಯಾಳ ದೇವಿಯ ಹೆಸರನ್ನು ಕೇಳಿದ ನಂತರವಂತೂ, ರಾಣಿಯ ಕೋಪ ಇಮ್ಮಡಿಯಾಯಿತು. ಯುವಕರನ್ನು ಸುಮ್ಮನೆ ಹೀಗೆಯೇ ಬಿಟ್ಟುಬಿಟ್ಟರೆ, ತನ್ನ  ಮಹಾರಾಣಿಯೆಂಬ ಗೌರವಕ್ಕೆ ಚ್ಯುತಿ ಬರುವುದೆಂದು ಎಣಿಸಿದಳು.  ಹರಿಯಾಳ ದೇವಿಯ ಮಕ್ಕಳ ಮುಂದೆ ತಾನು ನಗೆಪಾಟಲಿಗೀಡಾಗುವೆನೆಲ್ಲಾ ಎಂದು ಹಲುಬಿದಳು. ಹೆಚ್ಚು ಚಿಂತಿಸುತ್ತಾ ಕೂರುವ ಸಮಯವಿದಲ್ಲವೆಂದು ಅರಿತ ರಾಣಿಯು, ಸೇವಕರಿಗೆ ಅವರೀರ್ವರನ್ನೂ ಬಂಧಿಸಲು ಆಜ್ಞೆಯಿತ್ತಳು . ಸೇವಕರು ಯುವಕರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಬಂಧನಕ್ಕೊಳಪಡಿಸಿದರು. ರಾಣಿಯು ಪುನಃ ಯುವಕರ ಸಮೀಪಕ್ಕೆ  ತೆರಳಿದಳು..

" ಹೇಗೂ ನನ್ನ ಮಾತುಗಳು ನಿಮಗೆ ಅರ್ಥವಾಗಿಬಿಟ್ಟಿದೆ. ಮುಂದೆ, ನೀವು ನನ್ನ ತೇಜೋವಧೆ ಮಾಡುವುದಿಲ್ಲವೆಂಬ ನಂಬಿಕೆ ನನಗಿಲ್ಲ.  ನನ್ನ ಆಸೆಯನ್ನು ಈಡೇರಿಸಿ..ಇಲ್ಲವಾದರೆ ನಿಮ್ಮನ್ನು ಜೀವಸಹಿತ ಉಳಿಸುವುದು ಅಸಾಧ್ಯವಾದ ವಿಚಾರ, ಇದು ನಿಮಗೆ ನನ್ನ ಅಂತಿಮ ಯಾಚನೆ..,  ಹೇಳಿ.. ಏನು ಮಾಡುವಿರಿ ?.."

 ಯುವಕರು ತಮ್ಮ ಪಟ್ಟು ಸಡಿಲಿಸಲಿಲ್ಲ. ಧೈರ್ಯದಿಂದಲೇ ರಾಣಿಯೊಡನೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

" ತಾಯಿ, ನಾವು ಪಾಪ ಮಾಡುವ ಚಾಂಡಾಲ ವೃತ್ತಿಯವರಲ್ಲ,  ಗುರು-ಹಿರಿಯರಿಂದ ಸುಸಂಸ್ಕೃತ ವಿದ್ಯೆಕಲಿತು ಬದುಕನ್ನು ಹಸನಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯುಳ್ಳವರು. ನಿಮ್ಮ ಯಾವ ಆಮಿಷಗಳಿಗೂ ನಾವು ಬಗ್ಗಲಾರೆವು. ಬಲ್ಲಾಳರಾಯನಿಗೆ ನಿಜಾಂಶವನ್ನು ಹೇಳಲು ನಮಗಾವ ಅಳುಕೂ ಇಲ್ಲ. ತಾವು ನಮ್ಮನ್ನು ಸಮೀಪಿಸಿದರೆ  ಶಿವನಾಣೆ ..!! " ...

ರಾಣಿ ತಿರುಮಲಾಂಬೆಗೆ ದಿಕ್ಕುತೋಚದಂತಾಯಿತು. ಯುವಕರನ್ನು ಸುಮ್ಮನೆ ಬಿಡುವುದಕ್ಕೂ ಸಾಧ್ಯವಿರಲಿಲ್ಲ. ಸೇವಕರಿಗೆ ಉದ್ಯಾನದಲ್ಲಿ ನಡೆದ ವಿಷಯವನ್ನು ಎಲ್ಲೂ ಬಾಯಿಬಿಡದಂತೆ ತಾಕೀತು ಮಾಡಿದಳು.  ಬಂಧಿಸಿದ್ದ ಯುವಕರನ್ನು ಕಾರಾಗೃಹದಲ್ಲಿಡಲು ಸೂಚಿಸಿ, ತನ್ನ ಅಂತಃಪುರದೆಡೆಗೆ ತೆರಳಿದಳು.  ಆಗಷ್ಟೆ... ಭಾಸ್ಕರ ಅಸ್ತಮಿಸಿದ.

--------------+----------------

ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದ ರಾಣಿಯನ್ನು ಕಂಡ ಬಲ್ಲಾಳರಾಯನಿಗೆ ಆಶ್ಚರ್ಯವಾಯಿತು. ಏಕಾಂತದಲ್ಲಿ ಎಂದೂ ರಾಣಿಯು ಹೀಗೆ ವಿಚಲಿತಲಾದವಳಂತೆ ಬಲ್ಲಾಳರಾಯನಿಗೆ ಕಂಡುಬಂದಿರಲಿಲ್ಲ. ಕಾರಣವನ್ನು ತಿಳಿಯುವ ಕೂತೂಹಲವಾಯಿತು ರಾಯನಿಗೆ..

"ತಿರುಮಲಾಂಬಾ, ಏನಾಗಿದೆ ನಿನ್ನ ಸಂತೋಷಕ್ಕೆ ? ಇಂದೇಕೋ ಬಹಳ ವ್ಯಾಕುಲಳಾದಂತೆ ಕಾಣುತ್ತಿರುವೆ.."


 ಇಂತಹ ಆಪ್ತ ಮಾತುಗಳ ನಿರೀಕ್ಷೇಯಲ್ಲೇ ಇದ್ದ ರಾಣಿಗೆ , ಇಂತಹ ಸುಸಂದರ್ಭವನ್ನು ಉಪಯೋಗಿಸಿಕೊಳ್ಳದೇ ಬಿಡಬಾರದೆಂದೆನಿಸಿತು...

" ರಾಯ, ಇಂದು ಉದ್ಯಾನದಲ್ಲಿ ಮನಸಿಗೆ ಬೇಸರವಾಗುವ ಘಟನೆಯೊಂದು ನಡೆಯಿತು. ನಾನೆಂದೂ ಅಂತಹ ಅಚಾತುರ್ಯವನ್ನು ಕಂಡಿರಲಿಲ್ಲ.."

" ಅಂತಹುದ್ದೇನಾಯಿತು ? ದ್ವಾರಾವತಿಯ ಮಹಾರಾಣಿಗೆ ಯಾರಾದರೂ ಅಪಮಾನ ಮಾಡಿದರೆ.. ? ನಿನ್ನ ಬಾಡಿರುವ ವದನವನ್ನು ನೋಡಿದರೆ ನನಗೇಕೋ ಅದೇ ಅನುಮಾನ ಕಾಡುತ್ತಿದೆ.."

" ಅಪಮಾನವಿರಲಿ, ನನ್ನ ಮಾನವೇ ಹರಣವಾಗುವುದರಲ್ಲಿತ್ತು,....ಅಷ್ಟರಲ್ಲಿ ಸೇವಕರು ನನ್ನನ್ನು ಕಾಪಾಡಿದರು..! "

" ಏನು ..!!?? ನಿನ್ನ ಮಾನಾಪಹರಣವೇ..?  ಅದು ಹೇಗೆ ಸಾಧ್ಯ ? ಈ ವಿರೂಪಾಕ್ಷಬಲ್ಲಾಳನ ರಾಜ್ಯದಲ್ಲಿ ಅಂತಹ ಹೀನರಾರಿಹರು ...ಅವರ ಶಿರವನ್ನು ತುಂಡರಿಸಿಬಿಡುತ್ತೇನೆ..ಹೇಳು..ಯಾರದು..? "   

" ಇಂದು ಸಾಯಂಕಾಲ, ಉದ್ಯಾನವನದಲ್ಲಿ ವಿಹಾರಕ್ಕೆ ತೆರಳಿದ್ದಾಗ, ಇಬ್ಬರು ಯುವಕರು ನನ್ನ ಮಾನಾಪಹರಣ ಮಾಡಲೆತ್ನಿಸಿದರು. ನಾನೆಷ್ಟೇ ಪರಿಯಾಗಿ ಬೇಡಿಕೊಂಡರೂ ಅವರು ಕನಿಕರಿಸಲಿಲ್ಲ..ಅಷ್ಟರಲ್ಲಿ , ಭಟರು ಬಂದು ನನ್ನ ಜೀವವನ್ನು ಉಳಿಸಿದರು. ಬಲ್ಲಾಳರಾಯನ ರಾಜ್ಯದಲ್ಲಿ ಪತಿವ್ರತೆಯರಿಗೆ ಬೆಲೆಯೇ ಇಲ್ಲವಾಯಿತೇ !! ? .....ಹೇಳಿ.. ಏನು ಮಾಡುವಿರಿ ಈಗ  ? "

 ರಾಣಿಯ ಮಾತಿನಲ್ಲಿನ ನಾಜೂಕುತನವನ್ನು ಬಲ್ಲಾಳರಾಯ ಗಮನಿಸಲಾರದೆ ಹೋದ. ತನ್ನ ಪತ್ನಿಗಾದ ಅಪಮಾನವೊಂದೇ  ಆತನ ಮನಸನ್ನು ತುಂಬಿಕೊಂಡಿತ್ತು.

" ಯಾವ ದೇಶದವರಂತೆ ಆ ಧೂರ್ತರು ..."    ಬಲ್ಲಾಳರಾಯ ಗುಡುಗಿದ.

 ರಾಣಿ ಹೆದರಿವಳಂತೆ , ನಿಧಾನವಾಗಿ ಹೇಳಿದಳು

" ಚಂದ್ರಗಿರಿಯ ಪ್ರಜೆಗಳಂತೆ, ನನ್ನ ಮಾನಾಪಹರಣಕ್ಕಾಗಿಯೇ, ಹರಿಯಾಳ ದೇವಿಯೇ ಇವರನ್ನು ಕಳುಹಿಸಿದ್ದಾಳಂತೆ..!! " 

ತಿರುಮಲಾಂಬೆಯ ಆಂತರ್ಯದಲ್ಲಿ ಸಂತಸ ಮನೆಮಾಡುತ್ತಿತ್ತು. ತನ್ನ ಕಾರ್ಯ ಯಶಸ್ವಿಯಾಗುವ ಸೂಚನೆಗಳು ಬಲ್ಲಾಳರಾಯನ ಮಾತುಗಳಲ್ಲೆ ಅವಳಿಗೆ ದೊರೆಯುತ್ತಿತ್ತು . ಚಂದ್ರಗಿರಿಯ ಹೆಸರನ್ನು ಕೇಳಿದ ಬಲ್ಲಾಳರಾಯ ಮತ್ತಷ್ಟು ಕ್ರೋಧಗೊಂಡ.

" ಆ ಚಂದ್ರಗಿರಿಯ ರಕ್ತವೇ ಅಂತಹುದು, ಅಲ್ಲಿಯವರ‍್ಯಾರಿಗೂ ನೈತಿಕತೆಯ ಅರ್ಥವೇ ತಿಳಿದಿಲ್ಲ.  ನನ್ನ ರಾಣಿಯ ಮಾನಾಪಹರಣ ಮಾಡುವುದೆಂದರೇನು ? ಹರಿಯಾಳ ದೇವಿಗೆ ಅಷ್ಟೊಂದು ಮದವೇರಿತೆ ? ..ಆಕೆಗೆ ಸರಿಯಾದ ಪಾಠ ಕಲಿಸುತ್ತೇನೆ..ಇಗೋ ರಾಣಿ..ಈಗಲೇ ಬರುತ್ತೇನೆ...ಅದೂ ನಿನಗೊಂದು ಸಂತಸದ ಸುದ್ದಿಯೊಡನೆ..." 

.....ಬಲ್ಲಾಳರಾಯ ಮಿಂಚಿನಂತೆ ಅಂತಃಪುರದಿಂದ ತೆರಳಿದ. ರಾಣಿ ತಿರುಮಲಾಂಬೆಯ ಮನಸ್ಸು ಮುಂದಾಗಲಿರುವುದನ್ನು ಕಂಡು ಹಿರಿಹಿಗ್ಗುತ್ತಲಿತ್ತು.  ಭಟರನ್ನು ಕರೆದ ಬಲ್ಲಾಳರಾಯ, ಚಂದ್ರಗಿರಿಯ ಇಬ್ಬರು ಯುವಕರನ್ನು ತಕ್ಷಣವೇ ನ್ಯಾಯಸ್ಥಾನಕ್ಕೆ ಕರೆತರಲು ಆದೇಶಿಸಿದ.  ಕಾರಾಗೃಹಕ್ಕೆ ತೆರಳಿದ ಸೇವಕರು, ಲಕ್ಷ್ಮಣ ಮತ್ತು ವೀರೇಶ್ವರರಿಬ್ಬರನ್ನೂ ಹಗ್ಗಗಳಿಂದ ಕಟ್ಟಿ ಎಳೆದು ತಂದು ಬಲ್ಲಾಳರಾಯನ ಮುಂದೆ ನಿಲ್ಲಿಸಿದರು. ಮಹಾರಾಜ ಯುವಕರನ್ನೊಮ್ಮೆ ನಖಶಿಖಾಂತ ದೃಷ್ಟಿಸಿದ.....

" ನಿಮ್ಮದು ಚಂದ್ರಗಿರಿಯೇ ? ಅಲ್ಲಿಯ ರಾಣಿಯ ಮನಸ್ಥಿತಿಗೆ ತಕ್ಕಂತಹ ಘನಕಾರ್ಯವನ್ನೇ ಮಾಡಿರುವಿರಿ ನೀವು ....ಎಂತಹ ಅಪರಾಧ, ನನ್ನ ರಾಜ್ಯದಲ್ಲಿ ಸ್ತ್ರೀಯರ ಮಾನಾಪಹರಣವೇ ? ಅದೂ ಚಂದ್ರಗಿರಿಯ ಪ್ರಜೆಗಳಿಂದ..ನಿಮ್ಮನ್ನು ಇಲ್ಲಿಗೆ ಕಳುಹಿಸಿರುವವರಾರೆಂದು ನಮಗೆ ತಿಳಿದಿದೆ..ನಿಮ್ಮನ್ನು ಯಾವ ವಿಚಾರಣೆಗೂ ಒಳಪಡಿಸುವ ಅವಶ್ಯಕತೆಯೇ ಇಲ್ಲವೆಂದು ತೋರುತ್ತಿದೆ...ನಿಮಗಾವ ಕಠಿಣ ಶಿಕ್ಷೆಯನ್ನು ವಿಧಿಸಲಿ..ನೀವೇ ಹೇಳಿಬಿಡಿ.."

ಬಲ್ಲಾಳರಾಯ , ಯುವಕರಿಕೆ ಮಾತನಾಡಲು ಅವಕಾಶವನ್ನೇ ಕೊಡದೆ..ಅಪ್ಪಣೆ ಹೊರಡಿಸಿದ. ದಿಗ್ಭ್ರಮೆಗೊಂಡ ಯುವಕರು, ರಾಜನೆದುರಿಗೆ ಏನು ಮಾತನಾಡಬೇಕೆಂದು ತೋರದೆ, ತಮಗಾದ ಅಪಮಾನಕ್ಕೆ ರೋಧಿಸಿದರು..

" ನ್ಯಾಯಾನ್ಯಾಯಗಳ ವಿವೇಚನೆ ನೆಡಸದ ನೀನೂ ಒಬ್ಬ ರಾಜನೇ ? ಬಲ್ಲಾಳರಾಯನೆಂದರೆ ..ನ್ಯಾಯಪರ, ಧರ್ಮಸಹಿಷ್ಣು, ಕಲಾರಾಧಕ, ಗಂಡೆದೆಯ ಕರಿಭಂಟ..ಎಂದೆಲ್ಲಾ ಕೇಳಿದ್ದೆವು..! , ನಿನ್ನದೂ ಒಂದು ರಾಜ್ಯವೇ ? ಕ್ಷಣ ಹೊತ್ತಾದರು ನಾವು ಹೇಳುವುದನ್ನು ಕೇಳು, ನಿನಗೆ ಸತ್ಯ ತಿಳಿದರೆ..ನೀನು ಸನ್ಯಾಸಿಯಾಗಿಬಿಡುವೆ..!!! "

ಯುವಕರ ಹರಿತವಾದ ಮಾತುಗಳು ಬಲ್ಲಾಳರಾಯನನ್ನು ಬಡಿದೆಬ್ಬಿಸಿತು. ಅವನ ಕೋಪ ನೂರ್ಮಡಿಯಾಯಿತು.

" ಸೇವಕರೆ, ಎಳೆದುಕೊಂಡು ಹೋಗಿ ಈ ಮೂಢರನ್ನು...ಇವರು ತಂಗಿದ್ದ ಕಲ್ಯಾಣಿಯ ಉದ್ಯಾನವನದಲ್ಲೇ ಇವರನ್ನು ಶೂಲಕ್ಕೇರಿಸಿಬಿಡಿ...ಬಲ್ಲಾಳರಾಯನ ಮಾತಿಗೆ ಎದುರಾಡುವಷ್ಟು ಅಹಂಕಾರವಿರುವ ಇವರಿಗೆ ಮರಣವೇ ತಕ್ಕ ಶಾಸ್ತಿ. ಇದು, ಇವರಂತಹ ಕಾಮುಕ ಹೀನರಿಗೆಲ್ಲಾ ಒಂದು ಎಚ್ಚರಿಕೆಯಾಗಲಿ..ಎಳೆದೊಯ್ಯಿರಿ ಇವರನ್ನು...ಈ ಕ್ಷಣವೇ.. ಶೂಲಕ್ಕೇರಿಸಿ ಬಂದು , ನನಗೆ ಆ ಸಂತಸದ ಸುದ್ದಿಯನ್ನು ಹೇಳಿ, ನಾನು ನನ್ನ ರಾಣಿಗೆ ಆ ವಿಷಯವನ್ನು ಅತಿ ಶೀಘ್ರದಲ್ಲಿ ತಿಳಿಸಬೇಕಿದೆ.." 

ಬಲ್ಲಾಳರಾಯ ಆವೇಶಭರಿತನಾಗಿ ಆಜ್ಞಾಪಿಸಿದ. ರಾಜನ ಕೋಪವನ್ನು ಕಂಡರಿದಿದ್ದ ಸೇವಕರು, ತಡಮಾಡದೆ ಯುವಕರೀರ್ವರನ್ನೂ ಉದ್ಯಾನವನಕ್ಕೆ ಎಳೆದೊಯ್ದರು. ಲಕ್ಷ್ಮಣ-ವೀರೇಶರು ಮಾಡಿದ ವಿನಂತಿಗಳೆಲ್ಲವೂ ವ್ಯರ್ಥವಾಯಿತು. ಅವರ ಮಾತುಗಳನ್ನು ಆಲೈಸುವ ಸಹನೆ ಅಲ್ಲ್ಯಾರಿಗೂ ಇರಲಿಲ್ಲ. ಕಲ್ಯಾಣಿಯ ಉದ್ಯಾನವನಕ್ಕೆ ಯುವಕರನ್ನು ಎಳೆದು ತಂದ ಭಟರು..ಶೂಲಕ್ಕೇರಿಸಲು ಸನ್ನದ್ಧರಾದರು. ಅದಾಗಲೇ ಮಧ್ಯರಾತ್ರಿಯ ಕತ್ತಲು ಆವರಿಸಿಕೊಂಡಿತ್ತು.  ಯುವಕರಿಬ್ಬರೂ. ತಾಯಿಗೆ ತಿಳಿಸದೆ ಬಂದ ತಮ್ಮ ತಪ್ಪಿಗೆ ಪಶ್ಚಾತ್ತಾಪಪಡುತ್ತಿದ್ದರು. ಅವರ ಯಾವ ಕೋರಿಕೆಗಳೂ ಕಟುಕರ ಮನಸನ್ನು ಬದಲಾಯಿಸಲಿಲ್ಲ...ಮಧ್ಯರಾತ್ರಿಯ ಕತ್ತಲಿನಲ್ಲಿ , ಯುವಕರ ದೇಹಗಳು ಶೂಲದಲ್ಲಿ ನೇತಾಡಿದವು !.  ಲಕ್ಷ್ಮಣ-ವೀರೇಶರ ಪ್ರಾಣಪಕ್ಷಿ ಹಾರಿಹೋಗಿತ್ತು.  ಉದ್ಯಾನವನ ಶೂಲವನವಾಯಿತು.

_______________________+_______________________

ಬೆಳಗಿನ ಸಮಯದಿಂದ ಕಾಣೆಯಾಗಿದ್ದ ತನ್ನ ಮಕ್ಕಳನ್ನು  ಹುಡುಕಿಸಲು ಹರಿಯಾಳ ದೇವಿಯು ಕಳುಹಿಸಿದ್ದ ಭಟರೆಲ್ಲಾ ಬರಿಗೈಯಲ್ಲಿ ಹಿಂತಿರುಗಿದ್ದರು.  ಆ ರಾತ್ರಿಯು ಅವಳಿಗೆ ನಿದ್ರೆ ಹತ್ತಿರಲಿಲ್ಲ. ನಸುಕಿನವರೆಗೂ, ಆಕೆ ತನ್ನ ಮಕ್ಕಳಳೀರ್ವರ ಯೋಚನೆಯಲ್ಲೇ ಕಾಲಕಳೆದಿದ್ದಳು. ಆಯಾಸದಿಂದ ನಸುಕಿನಲ್ಲಿ ನಿದ್ರೆಯ ಜೊಂಪು ಹತ್ತಿದ್ದ ಹರಿಯಾಳ ರಾಣಿಯು ದುಃಸ್ವಪ್ನವೊಂದನ್ನು ಕಂಡಂತೆ ಚಿಟ್ಟನೆ ಚೀರಿಕೊಂಡು ಎದ್ದಳು...
______________+_________________________________


(ಮುಂದುವರಿಯುತ್ತದೆ..)


(ಮುಂದಿನ ಭಾಗ ಕೊನೆಯ ಕಂತಾಗಿ ಬರಲಿದೆ..! ಅಲ್ಲಿಯವರೆಗೆ ಬೀಳ್ಕೊಡಿ..)


ವಂದನೆಗಳೊಂದಿಗೆ...




30 comments:

ಮನದಾಳದಿಂದ............ said...

ಅಲ್ಲಾ ಸ್ವಾಮಿ ಕತೆಯನ್ನು ಇನ್ನು ಕೆಲವು ಕಂತುಗಳಲ್ಲಿ ಮೂಡಿಬರಲಿದೆ ಅಂದುಕೊಂಡರೆ ಮುಂದಿನ ಕಂತಿನಲ್ಲಿಯೇ ಮುಗಿಸ್ತೀನಿ ಅಂತೀರಲ್ಲಾ?
ಇರಲಿ ಬಿಡಿ,
ಕತೆ ಚೆನ್ನಾಗಿ ಮೂಡಿ ಬರುತ್ತಿದೆ! ಕುತೂಹಲ ಇನ್ನೂ ಹೆಚ್ಚಾಗುತ್ತಿದೆ. ಮುಂದಿನ ಭಾಗಕ್ಕಾಗಿ ಎದುರುನೋಡುತ್ತಿದ್ದೇನೆ.

ಮಹಾಬಲ ಭಟ್ಟ said...

ಕತೆಯ ಜೊತೆ-ಜೊತೆಗೆ ಕೆಲವು ಆಸಕ್ತಿಕರ ಮಾಹಿತಿಗಳೂ ಲಭ್ಯವಾಗುತ್ತಿದೆ. ಇಂತಹ ಪ್ರಯತ್ನಗಳು ಇನ್ನಷ್ಟು ಮೂಡಿಬರಲಿ. ಮುಂದಿನ ರೋಚಕ ಕಂತಿಗಾಗಿ ಕಾಯುತ್ತೇನೆ. ಅಭಿನಂದನೆಗಳು, ಉತ್ತಮ ಕತೆ ಕೊಡುತ್ತಿರುವುದಕ್ಕೆ.

shridhar said...

ಸರ್,
ಎಂತಹ ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಿ ಬಿಟ್ಟಿರಿ ....
ಸುಂದರ ನಿರೂಪಣೆಯೊಂದಿಗೆ , ಎಂತವರನ್ನು ಹಿಡಿದಿಡಿಸಿ ಓದಿಸಿಕೊಂಡು ಹೋಗುವಂತಹ ಕಥೆ.
ಮುಂದಿನ ಭಾಗದಲ್ಲಿ ಕೊನೆಯಾದರು .. ಇಂತಹ ಹಲವು ಕಥೆಗಳು ಮತ್ತೆ ಬರಲಿ.

ಮನಸು said...

ಅಬ್ಬಾ!!! ಎಂತಾ ಕಥೆ ಅದ್ಭುತ ನಿರೂಪಣೆ, ಒಮ್ಮೆ ಮೊದಲ ಸಾಲು ಓದುತಿದ್ದಂತೆ ಸರಾಗವಾಗಿ ಓದಿಸಿಕೊಂಡೋಯ್ಯಿತು. ಬಹಳ ಚೆನ್ನಾಗಿದೆ...ಇದೇ ರೀತಿ ಮತ್ತಷ್ಟು ಕಥೆಗಳನ್ನು ಬರೆಯಿರಿ.

AntharangadaMaathugalu said...

ಇನ್ನೂ ಕೆಲವು ಕಂತುಗಳಾದರೂ ಇರತ್ತೆ ಅಂತ ನಾನೂ ಅನ್ಕೊಂಡಿದ್ದೆ.... ಮುಗಿಸಿಬಿಡುತ್ತೀರಾ...? ನಿರೂಪಣೆ ಸರಳವಾಗಿ ಆಕರ್ಷಕವಾಗಿದೆ. ಇಷ್ಟವಾಯಿತು.....

sunaath said...

ಮನಸ್ಸ ಖಿನ್ನವಾಯಿತು. ಯಾಕೆಂದರೆ ಇದು ಕೇವಲ ಕಾಲ್ಪನಿಕ ಕತೆಯಲ್ಲ, ಇತಿಹಾಸದಲ್ಲಿ ಜರುಗಿದ್ದು. ಬಲ್ಲಾಳರಾಯನ ಈ ಅವಿವೇಕದಿಂದ ಕನ್ನಡ ಸಾಮ್ರಾಜ್ಯವಷ್ಟೇ ಏಕೆ, ದಕ್ಷಿಣ ಭಾರತವೆಲ್ಲ ಪರಾಕ್ರಾಂತವಾಯಿತು ಎಂದು ಕಾಣುತ್ತದೆ. ಮುಂದಿನ ಭಾಗಕ್ಕಾಗಿ ಕಾಯುತ್ತೇನೆ.

shivu.k said...

ಸುಬ್ರಮಣ್ಯ ಸರ್,

ಕತೆ ಚೆನ್ನಾಗಿ ಮೂಡಿಬರುತ್ತಿದೆ. ನೀವು ಸಂಗ್ರಹಿಸಿದ ವಿಚಾರಗಳು ಮತ್ತು ಸ್ಥಳದ ಬಗ್ಗೆ ತಿಳಿದುಕೊಂಡು ಚೆನ್ನಾಗಿ ಬರೆಯುತ್ತಿದ್ದೀರಿ...
ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ...

Subrahmanya said...

ಪ್ರವೀಣ್ ಅವರೆ,

ಎಂದಿನಂತೆ ಆತ್ಮೀಯ ಪ್ರೋತ್ಸಾಹಕ ಪ್ರತಿಕ್ರಿಯೆಯೊಡನೆ ಬಂದು ಮೆಚ್ಹಿದಿರಿ. ಕತೆಯ ಹರವಿರುವಷ್ಟು ಬರೆಯುವ ಇಚ್ಚೆಯಿದೆ, ಹಾಗಾಗಿ ಮುಂದಿನ ಕಂತು ಕೊನೆಯದಾಗಲಿದೆ. ಧನ್ಯವಾದಗಳು.

Subrahmanya said...

ಮಹಾಬಲ ಭಟ್ಟರೆ,

ಕತೆಯೊಡನೆ ಇತಿಹಾಸವೂ ತಳುಕು ಹಾಕಿಕೊಂಡಿರುವುದರಿಂದ ಮಾಹಿತಿಗಳು ಲಭ್ಯವಾಗಿತ್ತಿದೆ. ಧನ್ಯವಾದಗಳು.

Subrahmanya said...

ಶ್ರೀಧರ್ ಅವರೆ,

ನಿಮ್ಮ ಪ್ರೋತ್ಸಾಹವೇ ಇಂತಹದ್ದೊಂದು ಕತೆ ಬರೆಯಲು ಕಾರಣವಾಗಿದ್ದು. ನನ್ನ ಸಾಮರ್ಥ್ಯವಿರುವಷ್ಟು ಕತೆಗಳನ್ನು ಬರೆಯುವ ಇಚ್ಚೆಯಿದೆ. ಮುಂದಿನ ಭಾಗಕ್ಕೆ ಮತ್ತೆ ಬನ್ನಿ. ಧನ್ಯವಾದಗಳು.

Subrahmanya said...

ಮನಸು,

ನಿಮ್ಮ ಪ್ರೋತ್ಸಾಹವಿರುವವರೆಗೂ ಇದೇ ರೀತಿಯಾಗದಿದ್ದರೂ ಉತ್ತಮ ಕತೆ ಕೊಡಲು ಪ್ರಯತ್ನಿಸುತ್ತೇನೆ. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.

Subrahmanya said...

ಶ್ಯಾಮಲಾ ಅವರೆ,

ಕತೆಗೆ ಆಹಾರ ಸಿಕ್ಕಷ್ಟು ಬರೆದಿದ್ದೇನೆ. ಮುಂದಿನ ಕಂತಿನಲ್ಲಿ ಇನ್ನಷ್ಟು ಆಸಕ್ತಿದಾಯಕ ಮಾಹಿತಿಗಳನ್ನು ಕೊಡಲಿದ್ದೇನೆ. ಕತೆಯನ್ನು ಓದಿ ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು.

Subrahmanya said...

ಕಾಕಾಶ್ರೀ,

ಹ್ಮ್...ನಿಜ. ಕತೆಯ ಜಾಡನ್ನು ನೀವು ಹಿಡಿದುಬಿಟ್ಟಿರಿ !. ಮುಂದಿನ ಕಂತು ಬೇಗ ಬರಲಿದೆ. ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು.

Subrahmanya said...

ಶಿವು ಸರ್,

ಕತೆಯ ಮತ್ತು ಇತಿಹಾಸ ನಡೆದಿರುವ ಪ್ರದೇಶಗಳಿಂದ ಮತ್ತು ಕೆಲವು ಶಾಸನಗಳಿಂದ ಮಾಹಿತಿ ಸಂಗ್ರಹಿಸಿಕೊಂಡು ಈ ಕತೆಯನ್ನು ಬರೆದಿದ್ದೇನೆ. ನಿಮ್ಮ ಅಭಿಪ್ರಾಯ ಸರಿಯಾಗಿಯೇ ಇದೆ. ಎಂದಿನ ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು.

ಸಾಗರಿ.. said...

ಶಂಭುಲಿಂಗ ಅವರೇ,
ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಎಷ್ಟೊಂದು ಇಂತಹ ವಿವೇಚನೆ ಇಲ್ಲದ ಆಜ್ಞೆಗಳನ್ನು, ಅದಕ್ಕೆ ಬಲಿಯಾದ ಅಮಾಯಕರನ್ನು ಕಾಣಬಹುದಾಗಿದೆ. ಪ್ರಸ್ತುತವೂ ಇದಕ್ಕೆ ಹೊರತಾಗಿಲ್ಲ. ವೀರೇಶ ಮತ್ತು ಲಕ್ಷ್ಮಣರ ಸಾವು ಬಹಳ ನೋವೆನಿಸಿತು. ಕಥೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಮುಂದಿನ ಭಾಗಕ್ಕೆ ಮತ್ತೆ ಕಾಯುತ್ತಿದ್ದೇನೆ.

Subrahmanya said...

ಸಾಗರಿಯವರೆ,

ನಿಜ, ಇತಿಹಾಸದಲ್ಲಿ ಇಂತಹ ಕೆಲವು ಅವಿವೇಕತನದ ನಡೆವಳಿಕೆಗಳು ದೊಡ್ಡ ಬದಲಾವಣೆಯನ್ನೇ ಸೃಷ್ಟಿಸಿದೆ. ಮುಂದಿನ ಕಂತಿಗೆ ಮತ್ತೆ ಬನ್ನಿ. ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ತು೦ಬಾ ರೋಚಕ, ನವಿರು ಮತ್ತು ಸರಳ ನಿರೂಪಣೆ. ಕಥೆ ಓದಿಸಿಕೊ೦ಡು ಓದಿಸಿಕೊಳ್ಳುತ್ತಾ ಹೋಗುತ್ತಿದೆ. ರೋಚಕ ಘಟ್ಟದಲ್ಲಿ ಕ೦ತು ನಿಲ್ಲುತ್ತಿದೆ. ಆದರೆ ರಾಜಕುಮಾರರಿರ್ವರ ಹತ್ಯೆ ಮನಸ್ಸು ಜರ್ಜರಿತಗೊಳಿಸಿತು. ಜೊತೆಗೆ ಇದು ಕಥೆಯಲ್ಲ ಇತಿಹಾಸವೆ೦ದೆಣಿಸಿದಾಗ ಮನ ಇನ್ನು ಖಿನ್ನಗೊ೦ಡಿತು.
ಮು೦ದಿನ ಕ೦ತಿಗೆ ಕಾಯುತ್ತಿರುವೆ.

ಸಾಗರದಾಚೆಯ ಇಂಚರ said...

mattondu adbhuta rochaka niroopane

Subrahmanya said...

ಸೀತಾರಾಮ ಗುರುಗಳೆ,
..ಇತಿಹಾಸದಲ್ಲಿ ಈ ರೀತಿಯ ಮರಣಗಳು ಸಾಕಷ್ಟು ಕಂಡುಬರುತ್ತದೆ. ಅಮ್ತಹ ಸಂದರ್ಭಗಳಲ್ಲಿ ವ್ಯತಿರಿಕ್ತ ಪರಿಣಾಮಗಳೂ ಉಂತಾಗಿವೆ. ನಿಮ್ಮ ತುಂಬು ಹೃದಯದ ಪ್ರೋತ್ಸಾಹ ಹೀಗೇ ಇರಲಿ. ಧನ್ಯವಾದ.

Subrahmanya said...

ಗುರುಮೂರ್ತಿಯವರೆ,

ಕೊನೆಯ ಭಾಗವನ್ನೋದಲು ಮತ್ತೆ ಬನ್ನಿ. ಧನ್ಯವಾದ.

Ittigecement said...

ಇತಿಹಾಸ ಗರ್ಭದಲ್ಲಿ ಇನ್ನೇನು ಅಡಗದಿಯೋ...

ಬಹಲ ಚಂದದ ನಿರೂಪಣೆ..
ಕುತೂಹಲ..ಮತ್ತೆ ಕಾಡುತ್ತಿದೆ..

ಮುಂದಿನ ಕಂತಿಗೆ ಮುಗಿಸ ಬೇಡಿ..
ವಿವರಗಳು ಇದ್ದಲ್ಲಿ ಮುಂದುವರೆಸಿ...

ತಿರುಮಲಾಂಬಾ ಪಾತ್ರ , ಆ ಯುವಕರ ಪಾತ್ರ
ಕಾಡುತ್ತಿದೆ..

ಯುವಕರ ಸಾವು ದುಃಖ ತರಿಸಿತು...

ಅಭಿನಂದನೆಗಳು...

ಸವಿಗನಸು said...

ಅದ್ಭುತ ಕಥೆ ...
ನಿರೂಪಣೆ super....

Subrahmanya said...

ಪ್ರಕಾಶಣ್ಣ,

ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ವಿವರಗಳು ಹೆಚ್ಚಾದಲ್ಲಿ ಮುಂದುವರಿಸುತ್ತೇನೆ, ಬರೆಯುತ್ತೇನೆ. ನಿಮ್ಮ ಎಂದಿನ ಪ್ರೋತ್ಸಾಕಹ್ಹೆ ಧನ್ಯವಾದಗಳು.

Subrahmanya said...

ಸವಿಗನಸು,

ಥ್ಯಾಂಕ್ಯು.

V.R.BHAT said...

ಕಥೆ ಚೆನ್ನಾಗಿದೆ,ಮತ್ತೆ ಇಂತಹ ಕಥೆಗಳು ಮೂಡಿಬರಲಿ

Subrahmanya said...

ವಿ.ಆರ್. ಭಟ್ಟರೆ,

ಧನ್ಯವಾದಗಳು. ಮುಂದಿನ ಭಾಗಕ್ಕೆ ಮತ್ತೆ ಬನ್ನಿ.

Badarinath Palavalli said...

Sir,

Thanks for visiting my blog:
www.badari-poems.blogspot.com

Your writing is good for reading.

I will be visiting your blog regularly.

- Badarinath Palavalli

Unknown said...

Super.. Bega munduvaresi..

Subrahmanya said...

ಬದರಿನಾಥರೆ,

ತುಂಬ ಧನ್ಯವಾದಗಳು. ಹೀಗೆ ಬರುತ್ತಿರಿ.

Subrahmanya said...

ರವಿಕಾಂತರೆ,

ಆದಷ್ಟು ಬೇಗ ಬರೆಯುತ್ತೇನೆ. ನಿಮ್ಮ ಎಂದಿನ ಪ್ರೋತ್ಸಾಹ ಹೀಗೆ ಇರಲಿ.