May 12, 2010

ಶಾಪ..೪ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
-----------------------------------------------------------------------------

...ಹರಿಯಾಳ ರಾಣಿಯ ಮನಸು ದ್ವಾರಾವತಿಯೆಡೆಗೆ ಸೆಳೆಯುತ್ತಿತ್ತು. ಮಕ್ಕಳೇನಾದರೂ ನನ್ನಾಜ್ಞೆಯನ್ನು ಮೀರಿ ದ್ವಾರಾವತಿಗೆ ಹೋಗಿಬಿಟ್ಟರೆ ? ಅಲ್ಲೇನಾದರೂ ಅವಘಡಗಳು ಸಂಭವಿಸಿರಬಹುದೆ ? ರಾಣಿಗೆ ಅಪಶಕುನಗಳೇ ಹೆಚ್ಚಾಯಿತು. ಮನದಲ್ಲಿ ಎನೋ ಕಸಿವಿಸಿ, ಆತಂಕ. ರಾಣಿಯ ಮನಸ್ಸು ತಡೆಯಲಿಲ್ಲ . ದ್ವಾರವತಿಗೊಮ್ಮೆ ಹೋಗಿ ಬರುವ ತವಕ ಹೆಚ್ಚಾಗತೊಡಗಿತು. ಮಕ್ಕಳೇನಾದರು ದ್ವಾರಾವತಿಗೆ ಹೋಗಿರಬಹುದಾದರೆ, ಅರಮನೆಯ ಕಾವಲುಗಾರರ ಸಹಾಯವಿರಲೇಬೇಕೆಂಬ ಯೋಚನೆ ರಾಣಿಯ ಸ್ಮೃತಿಪಟಲದಲ್ಲೊಮ್ಮೆ ಹಾದುಹೋಯಿತು. ಗುಪ್ತ ಸುರಂಗಮಾರ್ಗದ ಮೇಲ್ವಿಚಾರಕನನ್ನು ರಾಣಿಯು ಬರಹೇಳಿದಳು. ರಾಣಿಯ ಅಬ್ಬರಿಕೆಯ ಮುಂದೆ ಕಾವಲುಗಾರ ಕಂಪಿಸಿಹೋದ !. ಮಕ್ಕಳಿಬ್ಬರಿಗೂ ದ್ವಾರಾವತಿಯನ್ನು ದರ್ಶಿಸಲು ಕುದುರೆಗಳ ವ್ಯವಸ್ಥೆಯನ್ನು ಮಾಡಿಕೊಟ್ಟುದನ್ನು ಅನಿವಾರ್ಯವಾಗಿ ರಾಣಿಯ ಮುಂದೆ ಹೇಳಿದ. ರಾಣಿಯ ಆತಂಕ ಮತ್ತಷ್ಟು ಹೆಚ್ಚಾಯಿತು. ನನ್ನ ಮಾತು ಕೇಳದೆ ದ್ವಾರಾವತಿಗೆ ಹೋದ ಮಕ್ಕಳಿಗೆ ಅಲ್ಲಿ ಎಂತಹ ಪರಿಸ್ಥಿತಿ ಉಂಟಾಗಿದೆಯೋ ಎಂದು ಹಲುಬಿದಳು. ಇನ್ನು ತಡಮಾಡುವುದು ತರವಲ್ಲವೆಂದು ಹರಿಯಾಳ ದೇವಿಯು ಕುದುರೆಯೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟಳು. ಮನಸಿನ ವೇಗದಂತೆ ಕುದುರೆಯನ್ನೂ ರಭಸದಿಂದ ಮುನ್ನೆಡೆಸಿದಳು. ಯಾವಾಗ ತನ್ನ ಮಕ್ಕಳನ್ನು ನೋಡುತ್ಟೇನೋ, ದ್ವಾರಾವತಿಯಲ್ಲಿ ತನ್ನ ಮಕ್ಕಳಿಗೆ ಎಂತಹ ಪರಿಸ್ಥಿತಿಯುಂಟಾಗಿದೆಯೋ ಎಂಬ ದುಗುಡವೊಂದೆ ಅವಳ ಮನದಲ್ಲಿ ತುಂಬಿಕೊಂಡಿತ್ತು. ಹಲವು ತಾಸುಗಳ ಪ್ರಯಾಣದ ನಂತರ ರಾಣಿಯು ದ್ವಾರಾವತಿಯನ್ನು ಸಮೀಪಿಸಿದಳು. ನೇರವಾಗಿ ತನ್ನ ಅಣ್ಣ ಬಲ್ಲಾಳರಾಜನಲ್ಲೇ ತನ್ನ ಮಕ್ಕಳ ವಿಚಾರವನ್ನು ಕೇಳುವುದು ಸೂಕ್ತವೆಂದೆಣಿಸಿ ಅರಮನೆಯನ್ನು ತಲುಪಿದಳು. ರಾಣಿ ಹರಿಯಾಳ ದೇವಿಗೆ ಅರಮನೆಯ ಪ್ರವೇಶವು ಸುಲಭಸಾಧ್ಯವಾಗಲಿಲ್ಲ. ಅದಾಗಲೆ ಬಲಾಳರಾಯನು, ಹರಿಯಾಳ ದೇವಿಗೆ ದ್ವಾರಾವತಿಯಲ್ಲಿ ಹನಿ ನೀರನ್ನೂ ಸಹ ಕೊಡಬಾರದೆಂದು ಆಜ್ಞಾಪಿಸಿದ್ದನು. ತನ್ನ ಮಾತಿಗೆ ಎದುರಾಡಿ ಚಂದ್ರಗಿರಿಗೆ ಹೋದ ಹರಿಯಾಳ ರಾಣಿಗೆ ದ್ವಾರಾವತಿಯಲ್ಲಿ ಅನ್ನಾಹಾರಗಳನ್ನು ನಿಡಬಾರದೆಂಬ ಕಟ್ಟಾಜ್ಞೆಯನ್ನು ಬಲ್ಲಾಳರಾಜ ಜಾರಿಯಲ್ಲಿಟ್ಟಿದ್ದ.    ರಾಣಿಗೆ ಅರಮನೆಯ ಪ್ರವೇಶವು ದೊರೆಯಲಿಲ್ಲ. ದ್ವಾರಾವತಿಯ ಮಗಳೆಂಬ ಕಿಂಚಿತ್ತು ಗೌರವವೂ ಸಿಗಲಿಲ್ಲ. ಕಾವಲುಗಾರರು ರಾಣಿಯನ್ನು ದ್ವಾರದಲ್ಲಿಯೇ ತಡೆದರು.

" ತಾವು ಅರಮನೆಗೆ ಪ್ರವೆಶಿಸುವಂತಿಲ್ಲ, ಇದು ರಾಜಾಜ್ಞೆ !". 

 ಭಟರ ಮಾತಿಗೆ ಅಳುಕದ ರಾಣಿ ತಾನು ಬಂದಿರುವ ವಿಚಾರವನ್ನು ತಿಳಿಸಿದಳು.

" ನಾನಿಲ್ಲಿ ನಿಮ್ಮ ರಾಜನನ್ನಾಗಲಿ, ಈ ವೈಭೋಗಗಳನ್ನಾಗಲಿ ಸವಿಯಲು ಬಂದಿಲ್ಲ, ನನ್ನಿಬ್ಬರು ಮಕ್ಕಳು ನನ್ನಪ್ಪಣೆಯನ್ನು ಮೀರಿ ಇಲ್ಲಿಗೆ ಬಂದಿದ್ದಾರೆ. ಅವರೆಲ್ಲಿಹರೆಂದು ತಿಳಿಯಲೋಸುಗ ಇಲ್ಲಿಗೆ ಬಂದಿದ್ದೇನೆಷ್ಟೆ, ನಿಮಗೆ ನನ್ನ ಮಕ್ಕಳೆಲ್ಲಿಹರೆಂದು  ತಿಳಿದಿದ್ದರೆ ಹೇಳಿ, ಈ ಕ್ಷಣವೆ ಅವರೊಡಗೂಡಿ ಇಲ್ಲಿಂದ ಹೊರಟು ಬಿಡುವೆ .."

" ಒಹೋ..! ಅವರುಗಳೆ ? ಆ ಇಬ್ಬರು ಅವಳಿ ಯುವಕರು ನಿಮ್ಮ ಮಕ್ಕಳೊ ? ಎಂತಹ ಮಕ್ಕಳನ್ನು ಹೆತ್ತಿದ್ದೀಯಮ್ಮ ನೀನು..! "

" ಏಕೆ ? ನನ್ನ ಮಕ್ಕಳು ನೀತಿವಂತರಲ್ಲವೆ ? ಅವರು ಸಾತ್ವಿಕರು, ಅನ್ಯರಿಗೆ ಕೇಡು ಬಗೆಯುವ ಸ್ವಭಾವದವರಲ್ಲ, ಬಹಳ ಮುಗ್ಧರು ನನ್ನ ಮಕ್ಕಳು...ದಯವಿಟ್ಟು ಎಲ್ಲಿದ್ದಾರೆಂದು ತಿಳಿಸಿಕೊಡಿ.."

" ಮುಗ್ಧರೇ ನಿನ್ನ ಮಕ್ಕಳು !? ಅಬ್ಬಾ..! ಅವರು ನಡೆಸಿರುವ ಕೃತ್ಯಕ್ಕೆ ಕ್ಷಮಯೇ ಇಲ್ಲವಾಗಿದೆ. ಮಹಾರಾಜರು ಅವರಿಗೆ ಸರಿಯಾದ ಗತಿಯನ್ನೇ ಕಾಣಿಸಿದ್ದಾರೆ. ತಾವು ವಿನಾಕಾರಣ ವ್ಯಥೆಪಡುತ್ತಲಿದ್ದೀರಿ. ನಿಮ್ಮ ಮಕ್ಕಳ ನಿರೀಕ್ಷೆಯನ್ನು ಬಿಟ್ಟು ಸುಖವಾಗಿ ಸ್ವಸ್ಥಾನಕ್ಕೆ ತೆರಳಿರಿ.." 

 ಭಟರು ಅಪಹಾಸ್ಯದಿಂದ ನಕ್ಕರು. ರಾಣಿಗೆ ಮನದೊಳಗೆ ಕಸಿವಿಯಾಯಿತು. ಇದೆಂತಹ ಕೆಟ್ಟಗಳಿಗೆ ಒದಗಿಬಂದಿತೆಂದು ಚಿಂತಿಸಿದಳು. ಪ್ರವೇಶದ್ವಾರದಲ್ಲಿ ರಾಣಿಯ ಆಗಮನದ ವಾರ್ತೆಯನ್ನು ಕೇಳಿದ ಬಲ್ಲಾಳರಾಯ , ತಾನೇ ಅಲ್ಲಿಗೆ ಆಗಮಿಸಿದ. ಕಳೆಗುಮ್ದಿದ ಹರಿಯಾಳ ದೇವಿಯ ಮುಖವನ್ನು ನೋಡಿದ ರಾಯನಿಗೆ ವಿಚಿತ್ರವಾದ ಆನಂದವುಂಟಾಯಿತು. ಅಪಹಾಸ್ಯದಿಂದಲೇ ರಾಣಿಯನ್ನು ಮಾತನಾಡಿಸಿದ..

" ಮಹಾರಾಣಿ ಹರಿಯಾಳ ದೇವಿಯವರು ಇಲ್ಲಿಯವರೆಗೂ ಬಂದ ಮಹತ್ತರ ವಿಚಾರವನ್ನು ಈ ಪಾಮರನು ತಿಳಿದುಕೊಳ್ಳಬಹುದೆ ? " 

" ರಾಜ, ನಿನ್ನ ಹೀಯಾಳಿಕೆಯ ವಾಕ್ಯಗಳು ನನಗರ್ಥವಾಗುತ್ತಿದೆ. ಆದರೆ ನನಗೆ ಅದನ್ನು ಮುಂದುವರಿಸುವಷ್ಟು ಸಹನೆ , ಸಮಯಗಳು ಇಲ್ಲವಾಗಿದೆ. ದಯಮಾಡಿ ನನ್ನ ಮಕ್ಕಳಾದ ಲಕ್ಷ್ಮಣ-ವೀರೇಶರು ಎಲ್ಲಿಹರೆಂದು ತಿಳಿಸಿಕೊಡು, ನಾನೀಗ ಅವರನ್ನು ನೋಡಬೇಕಿದೆ .." 

ಹರಿಯಾಳ ರಾಣಿಯ ಆರ್ತನಾದ , ಬಲ್ಲಾಳರಾಯನಿಗೆ ಮಹದಾನಂದವನ್ನುಂಟುಮಾಡಿತು. ತನ್ನ ಪ್ರತಿಷ್ಠೆಗೆ ಕಳಂಕವಿತ್ತವಳನ್ನು ಇನ್ನಷ್ಟು ಹೀಯಾಳಿಸುವ ಮನಸಾಯಿತು ರಾಯನಿಗೆ..

" ನಿನ್ನ ಮಕ್ಕಳು ಮಹಾನ್ ರಸಿಕರಮ್ಮಾ ! ಅವರಿಗೆ  ಮೃಷ್ಟಾನ್ನ ಭೋಜನವೆ ಬೇಕಂತೆ .  ಆದರೇನು ಮಾಡುವುದು, ನನ್ನ ದ್ವಾರಾವತಿಯಲ್ಲಿ ಕೇವಲ ಹಣ್ಣು-ಗೆಡ್ಡೆಗಳಷ್ಟೆ ಲಭ್ಯವಿದೆ. ! ನಿನ್ನ ಮಕ್ಕಳು ನಿನ್ನಂತಯೇ ಹೀನ  ಕೃತ್ಯವೆಸಗಿದರು.
  ನನ್ನ ರಾಣಿಯ , ಮನದನ್ನೆಯ ಸೌಂದರ್ಯವೇ ಅವರ ಉಪಾಸನೆಗೆ ಅವಶ್ಯವಾಗಿತ್ತು. ದ್ವಾರಾವತಿಯ ಮಹಾರಾಣಿಯನ್ನೇ ಮಾನಭಂಗಗೊಳಿಸಲು ಯತ್ನಿಸಿದ ಧೂರ್ತರವರು. ಶೀಲಾಪಹರಣಕ್ಕೆ ಬಲ್ಲಾಳರಾಜನ ರಾಜ್ಯದಲ್ಲಿ ಯಾವ ಶಿಕ್ಷೆಯಿದೆಯೆಂದು ನಿನಗೆ ತಿಳಿದೇ ಇದೆ. ಅದರಂತೆ , ಕಲ್ಯಾಣಿಯಿರುವ ಉದ್ಯಾನವನದಲ್ಲಿ ನಿನ್ನ ಮಕ್ಕಳೀರ್ವರನ್ನೂ ಶೂಲಕ್ಕೇರಿಸಲಾಗಿದೆ. ನಿನಗೆ ಚೈತನ್ಯವಿದ್ದರೆ ಅಲ್ಲಿಗೆ ಹೋಗಿ ನೊಡು..." 

 ದರ್ಪದಿಂದ ಅಬ್ಬರಿಸಿದ  ಬಲ್ಲಾಳರಾಯ ತಿರುಗಿಯೂ ನೋಡದೆ ಅರಮನೆಯೊಳಗೆ ನಡೆದುಹೋರಟ. ತನ್ನ ಮಕ್ಕಳನ್ನು ಶೂಲಕ್ಕೇರಿಸಲಾಗಿದೆ  ಎಂಬ ಸುದ್ದಿ ಕಿವಿಗೆ ಬಿದ್ದಾಕ್ಷಣವೆ ಹರಿಯಾಳ ರಾಣಿಗೆ ಭೂಮಿ ಬಾಯ್ಬಿಟ್ಟಂತೆ ಭಾಸವವಾಯಿತು. ನಿಂತಿರುವ ನೆಲ ಕುಸಿಯುತ್ತಿರುವಂತೆನಿಸಿತು. ತನ್ನ ಕೇಳಿದ ಸುದ್ದಿಯನ್ನು ನಂಬಲಾಗಲಿಲ್ಲ ರಾಣಿಗೆ. ಕುದುರೆಯನ್ನೇರಿ ಶರವೇಗದಲ್ಲಿ ಉದ್ಯಾನವನ್ನು ತಲುಪಿದಳು. ಶೂಲಕ್ಕೇರಿಸಿ ಹಲವು ದಿನಗಳಾದರೂ ಹಾಗೆಯೇ ಬಿಟ್ಟಿದ್ದ ತನ್ನ ಮಕ್ಕಳ ಹುಳು ಬಿದ್ದ ದೇಹಗಳನ್ನು ಕಂಡು ಕಣ್ಣು ಕಪ್ಪಿಂಟಾಯಿತು. ಆಗಸವೇ ಬಿರಿಯುವಂತೆ ರೋಧಿಸಿದಳು. ಆಕೆಯ ಆಕ್ರಂದನಕ್ಕೆ ದನಿಗೂಡಿಸಲು, ಸಮಾಧಾನಗೊಳಿಸಲು ದ್ವಾರವತಿಯಲ್ಲಿ ಯಾರೊಬ್ಬರೂ ಧಾವಿಸಲಿಲ್ಲ. ಬಹಳ ತ್ರಾಸಪಟ್ಟು ಮಕ್ಕಳ ದೇಹಗಳನ್ನು ಕೆಳಗಿಳಿಸಿ, ಅದೇ ಉದ್ಯಾನದಲ್ಲಿ ತನ್ನ ಸ್ವಹಸ್ತದಿಮ್ದ ಕಳೇಬರಗಳಿಗೆ ಸಮಾಧಿ ಮಾಡಿದಳು. ಬಲ್ಲಾಳರಾಜನ ಅನ್ಯಾಯಕ್ಕೆ ಧಿಕ್ಕಾರವೆಂದಳು. ಅವಳ ನೋವಿಗೆ ಆಸರೆಯಾಗಲು ಬಲ್ಲಾಳರಾಯನ ಕಟ್ಟಪ್ಪಣೆಯು ಪುರಜನರಿಗೆ ಅಡ್ಡಿಯಾಗಿತ್ತು. ಮಕ್ಕಳನ್ನು ಕಳೇದುಕೊಂಡ ದುಃಖದಲ್ಲಿ ಮಾನಸಿಕವಾಗಿ ಜರ್ಝರಿತಗೊಂಡಳು ಹರಿಯಾಳ ರಾಣಿ. ಸಂಪೂರ್ಣ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಂತೆ ವರ್ತಿಸತೊಡಗಿದಳು. ನೀರು-ಅನ್ನಾಹಾರಗಳಿಲ್ಲದೆ ದೇಹವೂ ಸೊರಗಿಹೋಯಿತು. ಚಂದ್ರಗಿರಿಗೆ ಹಿಂತಿರುಗುವ ಚೈತನ್ಯವೂ, ಸ್ವಾಸ್ಥ್ಯವೂ ಅವಳಿಗಿಲ್ಲವಾಯಿತು. ಹಲವು ದಿನಗಳು ದ್ವಾರಾವತಿಯ ಬೀದಿಗಳನ್ನು ಸುತ್ತುತ್ತಾ ಗೋಗರೆದಳು. ಅದೊಂದು ದಿನ ಮಧ್ಯಾಹ್ನ ಭಾಸ್ಕರ ನಡುನೆತ್ತಿಯಲ್ಲಿದ್ದನು. ದ್ವಾರಾವತಿಯ ಕುಂಬಾರರ ಕೇರಿಯಲ್ಲಿ ದಾಹ ಪೀಡಿತಳಾಗಿ , ಪ್ರಜ್ಞಾಶೂನ್ಯಳಾಗಿ ಬಿದ್ದುಬಿಟ್ಟಳು.  ಹನಿ ನೀರನ್ನೂ ಕೊಡಬಾರದೆಮ್ಬ ಆದೇಶಕ್ಕೆ ಹೆದರಿ ಆಕೆಯನ್ನು ಸಮೀಪಿಸಲೂ ಜನರು ಬರಲಿಲ್ಲ. ಮುದುಕ ರಾಜಯ್ಯ ಕುಂಬಾರನ ಮನೆಯ ಮುಂದೆ ರಾಣಿಯು ನಿಸ್ತೇಜಳಾಗಿ ಬಿದ್ದಿದ್ದಳು. ಹರಿಯಾಳ ದೇವಿಯನ್ನು ಗುರುತಿಸಿದ ರಾಜಯ್ಯನು , ಆಕೆಯ ಸ್ಥಿತಿಯನ್ನು ಕಂಡು ಮರುಗಿದನು..

" ಇದೇನವ್ವ ತಾಯಿ, ನಿನಗೆ ಇಂತಹ ಗತಿ  ಬಂದುಬಿಡ್ತಲ್ಲಾ, ಆ ಶಿವನಿಗೂ ನಿನ್ ಮ್ಯಾಲೆ ಕರುಣೆ ಇಲ್ಲವಾಯ್ತಲ್ಲಾ, ಇರವ್ವ ನೀರು ತರ್ತೇನೆ.."  

ಮನೆಯೊಳಗೆ ಹೋದ ಕುಂಬಾರ ರಾಜಯ್ಯನು ತಂಬಿಗೆಯಲ್ಲಿ ನೀರು ತಂದು ರಾಣಿಯ ಮುಖದ ಮೇಲೆ ಚಿಮುಕಿಸಿದನು. ಚೇತರಿಸಿಕೊಂದ ರಾಣಿಯು ರಾಜಯ್ಯನ ಮುಖವನ್ನೊಮ್ಮೆ ನೋಡಿ, ಅತನನ್ನು ಗುರುತಿಸಿದಳು. 

"ತಾತ, ನಿಮ್ಮ ಮಹಾರಾಜ ನನಗೆ ನೀರನ್ನೂ ಕೊಡಬಾರದೆಂದು ಅಪ್ಪಣೆಮಾಡಿದ್ದಾನೆ , ಅಂತಹುದರಲ್ಲಿ ನೀನು ನೀರು ಕೊಟ್ಟೆಯಲ್ಲಾ..ನಿನಗೆ ಶಿಕ್ಷೆಯಾಗುವುದಿಲ್ಲವೇ.."  ರಾಣಿಯು ಆಶ್ಚರ್ಯದಿಂದ ಕೇಳಿದಳು.

" ಅಯ್ಯೋ , ಬಿಡವ್ವ,.. ನಾನು ಗಾಳಿಗೆ ಬಿದ್ದೋಗೊ ಮರ !. ನಾನಿದ್ದು ತಾನೆ ಏನು ಮಾಡಬೇಕು..?"  

ಎಂದು ಹೇಳಿದ ಕುಂಬಾರನ ಮಾತನ್ನು ಕೇಳಿ ರಾಣಿಗೆ ಅಮಿತಾನಂದವಾಯಿತು. ಕುಂಬಾರ ತಾತನ ತೊಡೆಯಮೇಲೆ ಮಲಗಿದಳು. ತನಗೆ , ತನ್ನ ಮಕ್ಕಳಿಗಾದ ನೋವು ಆಕೆಯನ್ನು ಕ್ರುದ್ದಗೊಳಿಸಿತು. ಕ್ರೋಧದಕಿಡಿ ಆಕೆಯ ಮನಸಿನಲ್ಲಿ ಹೊತ್ತಿ ಉರಿಯುತ್ತಿತ್ತು.  ಅದೇ ಆವೇಶದಲ್ಲಿ ಗುಡುಗಿನ ಆರ್ಭಟದಂತೆ ಹರಿಯಾಳ ರಾಣಿಯು ಶಾಪವಿತ್ತಳು.

" ಹೊಯ್ಸಳ ಸಾಮ್ರಾಜ್ಯ , ಈ ವೈಭೋಗದ ಬೀಡು ಹಾಳಾಗಿ ಹೋಗಲಿ, ನಶಿಸಿಹೋಗಲಿ. ದಾಹಕ್ಕೆ ನೀರಿತ್ತ ಈ ಕುಂಬಾರಕೇರಿ ಉದ್ದಾರವಾಗಲಿ.." . 

 ರಾಣಿಯ ಮನಸಿನಾಳದಿಂದ ಶಾಪದಂತೆ ಬಂದ ವಾಕ್ಯಗಳು, ಕುಂಬಾರಕೇರಿಯಲ್ಲಿ ಮಾರ್ದನಿಸಿತು. ಶಾಪವಿತ್ತ ರಾಣಿಯ ಜೀವ ಕುಂಬಾರ ರಾಜಯ್ಯನ ತೊಡೆಯ ಮೇಲೆ ನಿಸ್ತೇಜವಾಯಿತು. ಅವಳ ಅಂತರಾತ್ಮ ವಿಶ್ವಶಕ್ತಿಯಲ್ಲಿ ಲೀನವಾಯಿತು. 

ಕೆಲವೇ ವರುಷಗಳಲ್ಲಿ ರಾಣಿ ಹರಿಯಾಳ ದೇವಿಯ ಶಾಪ ಫಲಿಸಿತು. ವೈಭೋಗದ ಹೊಯ್ಸಳರ ರಾಜಧಾನಿ ದ್ವಾರಾವತಿ-ದ್ವಾರಸಮುದ್ರ ನಾಶವಾಯಿತು.  ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ದಕ್ಷಿಣ ಭಾರತವೇ ಅರಾಜಕತೆಗೆ ತಳ್ಳಲ್ಪಟ್ಟಿತು. ಪರಕೀಯರ ಆಳ್ವಿಕೆಗೆ ಕನ್ನಡನಾಡೂ ಸೇರಿದಂತೆ ಇಡೀ ದಕ್ಷಿಣ ಭಾರತವೇ ತಲೆಬಾಗಬೇಕಾಯಿತು.         

(ಮುಗಿಯಿತು)
----------------------*-------------------------------

ಟಿಪ್ಪಣಿ :

ರಾಜ ವಿರೂಪಾಕ್ಷ ಬಲ್ಲಾಳ :  
ಈತ ಹೊಯ್ಸಳ ಸಾಮ್ರಾಜ್ಯದ ಪ್ರಮುಖ ಅರಸು. ಹೊಯ್ಸಳರು ತಮ್ಮ ೩೫೦ ವರ್ಷಗಳ ಆಡಳಿತದಲ್ಲಿ ಎಂದೂ ಸಾರ್ವಭೌಮರಾಗಲೇ ಇಲ್ಲ , ಸಾಮಂತರಾಗಿಯೇ ಉಳಿದುಬಂದರು. ಇದ್ದುದರಲ್ಲಿ ಮಹಾರಾಜ "ವಿಷ್ಣುವರ್ಧನ " ಮತ್ತು ನಂತರ ಬಂದ "ವಿರೂಪಾಕ್ಷ ಬಲ್ಲಾಳ" ರು ಮಾತ್ರ ಸ್ವಯಂಪ್ರಭೆಯಿಂದ ಆಡಳಿತ ನಡೆಸಿದರು. ಬಲ್ಲಾಳರಾಯನು ಮೊದಮೊದಲು ದಕ್ಷತೆಯಿಂದ ಆಡಳಿತ ನಡೆಸಿದರೂ, ಅಂತ್ಯಕಾಲದಲ್ಲಿ, ಆಂತರಿಕ ಕಲಹಗಳು, ಅವಿವೇಕತನ, ವೈಚಾರಿಕತೆಯ ಕೊರತೆಯಿಂದ ಅದಕ್ಷನಾಗಿಬಿಟ್ಟನು. ಇದು ಪರಕೀಯರಿಗೆ ಸುಲಭದ ತುತ್ತಾಯಿತು. ಇವನ ನಂತರ ಬಂದ "ರಾಮನಾಥ" ಹಾಗೂ "ವಿಶ್ವನಾಥ" ಬಲ್ಲಾಳರು ನಾಮಕೆವಾಸ್ತೇ ರಾಜ್ಯಭಾರವನ್ನಷ್ಟೇ ನಡೆಸಿದರು. 
ಹೊಯ್ಸಳರ ಕಾಲಮಾನ ಮತ್ತು ನವ ಬಲ್ಲಾಳರ ವಂಶಾವಳಿಯನ್ನು ಸಂಶೋಧಕರ ಅಭಿಪ್ರಾಯದಂತೆ ಇಲ್ಲಿ ಕೊಟ್ಟಿದ್ದೇನೆ.

ಕಾಲಮಾನ                                       ರಾಜರುಗಳು
೧೦ ರಿಂದ ೧೧ ನೆಯ ಶತಮಾನ                 ೧) ನೃಪಕಾಮ (ಸಳ) ಹೊಯ್ಸಳರ  ಮೂಲಪುರುಷ 
                                                               (ರಾಜ ಎರೆಯಂಗ ?)
                                                        ೨) ಚನ್ನಮ್ಮ ದಂಡಾಧೀಶ
                                                        ೩) ವೀರಬಲ್ಲಾಳ 
                                                             ೪) ಬಿಟ್ಟಿದೇವ 
                                                            ( ರಾಜ ವಿಷ್ಣುವರ್ಧನ-ರಾಣಿ ಶಾಂತಲಾದೇವಿ)

೧೧ ರಿಂದ ೧೨ ನೆಯ ಶತಮಾನ              ೫) ಲಕ್ಷ್ಮೀ ನರಸಿಂಹ ಬಲ್ಲಾಳ
                                                      ೬) ೨ನೆಯ ನರಸಿಂಹ ಬಲ್ಲಾಳ

೧೨ ರಿಂದ ೧೩ ನೆಯ ಶತಮಾನ              ೭) ವಿರೂಪಾಕ್ಷಬಲ್ಲಾಳ
                                                       ೮) ರಾಮನಾಥ ಬಲ್ಲಾಳ
                                                       ೯) ವಿಶ್ವನಾಥ ಬಲ್ಲಾಳ

( ೧೩ ನೆಯ ಶತಮಾನದ ಆದಿಯಲ್ಲಿಯೇ ಹೊಯ್ಸಳರ ಪತನ ಪ್ರಾರಂಭವಾಯಿತು)

ದ್ವಾರಾವತಿ-ದ್ವಾರಸಮುದ್ರ
ಇದು ಹೊಯ್ಸಳರ ರಾಜಧಾನಿಯಾಗಿ ಮೆರೆದ ಊರು. ಇದೇ ಇಂದಿನ "ಹಳೇಬೀಡು" .  ಹರಿಯಾಳ ರಾಣಿಯ ಶಾಪವೋ , ಹೊಯ್ಸಳರಲ್ಲಿ ಬುಗಿಲೆದ್ದ ಆಂತರಿಕ ಕಲಹಗಳೊ, ಅಥವ ದ್ವಾರಾವತಿಯ ವೈಭೋಗದ ಮೇಲಿದ್ದ ಚಾಪಲ್ಯವೋ...ಅಂತೂ ೧೩ ನೆಯ ಶತಮಾನದ ಆದಿಭಾಗದಲ್ಲಿ ( ೧೩೨೯) ಅಲ್ಲಾವುದ್ದೀನ್ ಖಿಲ್ಜಿ ಮತ್ತು ಅವನ ದಂಡನಾಯಕ ಮಾಲಿಕಾಫರ್ ದಂಡಯಾತ್ರೆ ಕೈಗೊಂಡು ಹೊಯ್ಸಳ ಸಾಮ್ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ( ೮ ಬಾರಿ ದಾಳಿಯಾಯಿತೆಂದು ಕೆಲವರು ಅಭಿಪ್ರಾಯ ಪಡುತ್ತಾರೆ) , ಅಪಾರ ಸಂಪತ್ತನ್ನು ಶೇಕರಿಸಿಟ್ಟಿದ್ದ ಹಲವು ದೇವಾಲಯಗಳ ಮೇಲೂ ದಾಳಿ ನಡೆಸಿ ನಾಶಗೊಳಿಸುತ್ತಾರೆ. ದ್ವಾರಾವತಿ ಹಾಳಾದ ಬೀಡಾಗುತ್ತದೆ. ರಾಷ್ಟ್ರಕೂಟರ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ದ್ವಾರಾವತಿಗೆ ಹಳೇಬಿಡು (Old setttlement, Old city)  ಎಂಬ ನಾಮವೂ ಬಂದಿದೆ. ಹಾಳಾದ ಊರು ಹಳೇಬೀಡು ಎನ್ನುವುದನ್ನು ನಾನು ಒಪ್ಪುವುದಿಲ್ಲ.  ಹಳೆಯ ಊರು ಹಳೇಬಿಡಾಗಿದೆ. ಹೀಗೆ ಹರಿಯಾಳ ರಾಣಿಯ ಶಾಪವೂ ಪಲಿಸಿದೆ. ಸುಮಾರು ೯೦೦ ವರ್ಷಗಳ ಇತಿಹಾಸ ಸಾರುವ ದೇವಾಲಯಗಳು ಇಂದಿಗೂ ಇಲ್ಲಿ ರಾರಾಜಿಸುತ್ತಿದೆ.

ನಖ(ಗ)ರೇಶ್ವರ-ಹೊಯ್ಸಳೇಶ್ವರ :
 ಕತೆಯಲ್ಲಿ ಪ್ರಸ್ತಾಪವಾಗಿರುವ ಈ ಎರಡು ಆಲಯಗಳು ದ್ವಾರಾವತಿಯಲ್ಲೇ( ಹಳೇಬೀಡು) ಇದೆ.  ವಿಷ್ಣುವರ್ಧನನ ಕಾಲದಲ್ಲಿ ಪ್ರಾರಂಭವಾದ ಈ ದೇವಾಲಯಗಳ ನಿರ್ಮಾಣ ವಿರೂಪಾಕ್ಷ ಬಲ್ಲಾಳನ ಕಾಲದಲ್ಲಿ ಮುಕ್ತಾಯವಾಯಿತೆಂದು ಅಭಿಪ್ರಾಯವಿದೆ. ( ಸುಮಾರು ನಾಲ್ಕುತಲೆಮಾರುಗಳ ಕಾಲ) . ನಗರೇಶ್ವರ ದೇವಾಯಲವೇ ಅತಿ ಮುಖ್ಯ ದೇವಾಲಯವಾಗಿದ್ದು, ಇದು ರಾಜ ಪರಿವಾರದ ದೇವಾಲಯವೂ ಆಗಿತ್ತು. ಸಮಸ್ತ ಸಂಪತ್ತೂ ಇಲ್ಲೇ ಶೇಖರವಾಗಿತ್ತೆನ್ನಲಾಗಿದೆ. ಅರಮನೆಗೆ ಸನಿಹದಲ್ಲೇ ಇದೆ.
ಆದ್ದರಿಂದ ಪರಕೀಯರ ದಾಳಿಯಾದಾಗ ಮೊದಲು ಬಲಿಯಾಗಿದ್ದು ನಗರೇಶ್ವರ ದೇವಾಲಯ ಮತ್ತು ಅರಮನೆ. ಇಂದು ಅರಮನೆಯ ತಳಪಾಯ ಮತ್ತು ದೇವಾಲಯದ ಜಗತಿಯನ್ನು (Flatform) ಮಾತ್ರ ಕಾಣಬಹುದಾಗಿದೆ !. ಅಷ್ಟರಮಟ್ಟಿಗೆ ದಾಳಿಗೆ  ತುತ್ತಾಗಿದೆ. ಇದು ಇಂದು ಪ್ರವಾಸಿಗರು ದರ್ಶಿಸುತ್ತಿರುವ ಹೊಯ್ಸಳೇಶ್ವರ ದೇವಾಲಯಕ್ಕಿಂತಲೂ ಎರಡು ಪಟ್ಟು ದೊಡ್ಡ ವಿಸ್ತಾರವನ್ನು ಹೊಂದಿದೆ.   ಹೊಯ್ಸಳ ಸಾಮ್ರಾಜ್ಯಕ್ಕೆ ಇದೇ ಮುಖ್ಯ ದೇವಾಲಯವಾಗಿತ್ತು.

ಹೊಯ್ಸಳೇಶ್ವರ ದೇವಾಲಯ , ಬಲ್ಲಾಳರಾಯನ ಮಂತ್ರಿ ಕಟ್ಟಿಸಿದನೆಂಬ ಪ್ರತೀತಿಯೆದೆ. ರಾಜ ವಂಶದ ಹೆಸರಿನಲ್ಲಿ ಕಟ್ಟಿಸಿರುವ ಶಿವನ ದೇವಾಲಯವಿದು.  ಅಂದಿನ ಕಾಲಕ್ಕೆ ಇದೊಂದು ಸಾಮಾನ್ಯ ದೇವಾಲಯವಾಗಿತ್ತು. (Just like Out house !). ಇಂದು ನಮಗೆ ಇದೇ ವಿಸ್ಮಯಗಳ ಆಗರ !. ಇಲ್ಲಿ ರಾಜಧನ ಸಂಪತ್ತುಗಳನ್ನೇನೂ ಇಟ್ಟಿರಿಲಿಲ್ಲವೆಂದು ತಿಳಿದುಬರುತ್ತದೆ. ಆದ್ದರಿಂದ ಇಡೀ ದ್ವಾರಾವತಿಯಲ್ಲಿ ಸದ್ಯಕ್ಕೆ ಇದೊಂದೇ ದೇವಾಲಯ ಸುಸ್ಥಿತಿಯಲ್ಲಿದೆ (Active temple)  !.  ಇಂದು ಸಂದರ್ಶಕರು-ಪ್ರವಾಸಿಗರು  ಅದ್ಭುತವೆಂದು ಮಾರುಹೋಗುವ ದೇವಾಲಯವೂ ಇದೇ ಆಗಿದೆ. ನಗರೇಶ್ವರ ಆಲಯವೇನಾದರೂ ಸುಸ್ಥಿತಿಯಲ್ಲಿದ್ದಿದ್ದರೆ..???? ಹೇಗಿರಬಹುದಿತ್ತು ಅದರ ವೈಭವ ? ನೀವೇ ಊಹಿಸಿಕೊಳ್ಳಿ !. ದ್ವಾರಾವತಿಯಲ್ಲಿದ್ದ ನೂರಾರು ಜೈನ ಬಸದಿಗಳು ಹತ್ತಾರು ಶಿಲ್ಪಕಲಾ ವೈಭವದ ಆಲಯಗಳು ದಾಳಿಗೆ ತುತ್ತಾಗಿ ಹಾಳಾಗಿದ್ದರೆ, ಹೊಯ್ಸಳೇಶ್ವರ ದೇವಾಲಯವೊಂದೆ ನಮಗಾಗಿ ಉಳಿದುಕೊಂಡಿರುವುದು (Still active-worshipping) .  ಈ ಎಲ್ಲಾ ಅವಶೇಷಗಳು ಮತ್ತು ಆಲಯಗಳು ಇಂದು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲ್ಪಟ್ಟು ಕೇಂದ್ರಸರ್ಕಾರದ ಅಧೀನದಲ್ಲಿದೆ ( Archeological Survey of India). ಸದ್ಯದಲ್ಲೇ ವಿಶ್ವಪರಂಪರೆಯ ತಾಣವಾಗುವ ಭಾಗ್ಯವೂ ಇದಕ್ಕೆ ಒದಗಿಬರಲಿದೆ.

ಲಕ್ಷ್ಮಣ-ವೀರೇಶ :  
ಇವರಿಬ್ಬರನ್ನು ಶೂಲಕ್ಕೇರಿಸಿದ ಸ್ಥಳವನ್ನು ಇಂದು ಸ್ಮಾರಕವನ್ನಾಗಿ ಗುರ್ತಿಸಲಾಗಿದೆ. ಇದಕ್ಕೆ ಶೂಲವನವೆಂದೂ ಕರೆಯಲಾಗುತ್ತದೆ. ಸನಿಹದಲ್ಲೇ ಮನಸೆಳೆಯುವ ಕಲ್ಯಾಣಿಯೂ(ನೀರಿನ ಕೊಳ) ಇದೆ. ಗ್ರಾಮ್ಯ ಭಾಷೆಯಲ್ಲಿ ಇದು "ಲಕ್ಕಣ್ಣ -ವೀರಣ್ಣ" ಎಂದು ಕರೆಯಲಾಗಿ ಎರಡು ವೀರಗಲ್ಲುಗಳನ್ನೂ ಕೆತ್ತಿಸಲಾಗಿದೆ (೧೩ ನೆಯ ಶತಮಾನದಲ್ಲಿ) . ಈ ವೀರಗಲ್ಲುಗಳಿಗೆ ಇಂದು ಧಾರ್ಮಿಕ ವಿಧಿಗಳು ಸಲ್ಲುತ್ತಿದೆ !. ಇದು ಹಳೇಬಿಡಿನಿಂದ ೨ ಕಿ.ಮೀ. ದೂರದಲ್ಲಿದೆ. 

ರಾಣಿ ಹರಿಯಾಳ ದೇವಿಯ ಶಾಪವೋ, ಆಕ್ರಮಣಕ್ಕೆ ತುತ್ತಾಗಿಯೊ ಹೊಯ್ಸಳಸಾಮ್ರಾಜ್ಯನಾಶವಾಗುವುದರೋದಿಗೆ ಮುಂದೆ ದಕ್ಷಿಣಭಾರತದಲ್ಲಿ ಅರಾಜಕತೆಯುಂಟಾಗುತ್ತದೆ . ದ್ವಾರವತಿ ಹಳೇಬೀಡಾದರೂ, ಇಲ್ಲಿ ಇಂದಿಗೂ ಕುಂಬಾರಕೇರಿ ಉರ್ಜಿತವಾಗಿರುವುದು ಮತ್ತೊಂದು ವಿಶೇಷ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರವೇ ಕನ್ನಡನಾಡು ಮತ್ತೆ ಉದಯಿಸಿದ್ದು. ವಿಜಯನಗರ ನಾಯಕರುಗಳ ಕಾಲದಲ್ಲಿ ದ್ವಾರಾವತಿಯ ಹಲವು ದೇವಾಲಯಗಳಿಗೆ ಕಾಯಕಲ್ಪವನ್ನು ನೀಡಲಾಗಿದೆ.  

ಇದು ಹೊಯ್ಸಳ ಇತಿಹಾಸದ-ಪ್ರಸ್ತುತ ಸ್ಥಿತಿಯ ಅತ್ಯಂತ ಸಂಕ್ಷಿಪ್ತ ವಿವರ. ಕತೆಯಲ್ಲಿ ಉದ್ಭವಿಸಿರಬಹುದಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಮಾಡಿದ್ದೇನೆ. ನಿಮ್ಮ ಸಲಹೆಗಳನ್ನು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇನೆ. ...


ವಂದನೆಗಳೊಂದಿಗೆ...    
  




  

35 comments:

sunaath said...

ಪುತ್ತರ್,
ರಾಜನು ಅವಿವೇಕಿಯಾದರೆ, ರಾಜ್ಯವು ಹಾಳಾಗುವದೆನ್ನುವ ಸಂದೇಶವನ್ನು ಈ ಕತೆಯಲ್ಲಿ ನೋಡಿದಂತಾಯಿತು. ಅನ್ಯಾಯಕ್ಕೊಳಗಾದವರ ಬಗೆಗೆ ಮನಸ್ಸು ವ್ಯಥೆಯಿಂದ ತುಂಬುತ್ತಿದೆ.

ಕನ್ನಡ ನಾಡಿನ ಬಹು ಮುಖ್ಯ ಇತಿಹಾಸಭಾಗವನ್ನು ಕಥಾರೂಪದಲ್ಲಿ ಸ್ವಾರಸ್ಯಕರವಾಗಿ ನಮಗೆಲ್ಲ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
-ಸುನಾಥ ಕಾಕಾ

Unknown said...

ತುಂಬಾ ಚೆನ್ನಾಗಿದೆ.. ಹೊಯ್ಸಳರ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ..

ಕೆಲವು ತಿಂಗಳ ಹಿಂದೆ ನಾನೂ ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದೆ.. "ತಾಜ್ ಮಹಲ್" ಬಗ್ಗೆ ಬರೀಬೇಕು ಅನ್ನೋದು ಅದೆಷ್ಟೋ ದಿನಗಳಿಂದ ನನ್ನ ತಲೆ ತಿನ್ನುತ್ತಿದೆ.. ಆದರೆ ಈ ಇತಿಹಾಸದ ನಿಮ್ಮ ಬರಹ ಓದಿ , ಈ ಬಗ್ಗೆ ನೀವೇ ಬರೆದರೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯ.. "ತಾಜ್ ಮಹಲ್" ನ ನಿಜಾಂಶ ನಿಮ್ಮ ಬ್ಲಾಗ್ ನಲ್ಲಿ ಆದಷ್ಟು ಬೇಗ ಮೂಡಿ ಬರಲಿ ಎಂದು ಆಶಿಸುತ್ತೇನೆ.. ಬರೆಯುವಿರಲ್ಲವೇ?

ನಾಲ್ಕು ಭಾಗಗಳನ್ನೂ ಮತ್ತೊಮ್ಮೆ ಓದಿದೆ .. ತುಂಬಾ ಸುಂದರ ನಿರೂಪಣೆ.. ಘಟನೆಗಳೆಲ್ಲವೂ ಕಣ್ಣ ಮುಂದೆ ಹಾದು ಹೋದವು... ಇನ್ನಷ್ಟು ಬರೆಯಿರಿ ..

shridhar said...

ಸುಬ್ರಮಣ್ಯರವರೇ..
ಅವಿವೇಕಿ ತನದಿಂದ ಎನೆಲ್ಲಾ ಕೆಡುಕು ಆಗಬಹುದು ಎಂಬುದಕ್ಕೆ ಈ ಕಥೆಯೂ ಒಂದು ಸಾಕ್ಷಿಯಾದಂತಾಯಿತು.
ಇನ್ನು ಹಳೇಬೀಡಿಗೆ ಹೋಗಲು ನನಗೆ ಆಗಲಿಲ್ಲ.. ಈ ಕಥೆಯನ್ನು ಓದಿದ ಮೇಲೆ ಮೇಲೆ ಹೋಗಲೇ ಬೇಕೆಂದು ಮನಸು ತುಡಿಯುತ್ತಿದೆ.

ಐತಿಹಾಸಿಕ ಈ ಸುಂದರ ಕಥೆಗಾಗಿ ಧನ್ಯವಾದಗಳು.

Subrahmanya said...

ಕಾಕ,

ನಾಲ್ಕು ಭಾಗಗಳನ್ನು ಓದಿ ಪ್ರೋತ್ಸಾಹಿಸಿ, ಇಂತಹ ಒಂದು ಕತೆ ಬರೆಯಲು ಪ್ರೇರಣೆಯಾಗಿದ್ದು ನೀವು. ನಿಮಗೆ ನನ್ನ ಧನ್ಯವಾದಗಳು.

ಕನ್ನಡ ನಾಡಿನಲ್ಲಿ ಹೊಯ್ಸಳರ ಪಾತ್ರ ಬಹು ಮುಖ್ಯವಾಗಿತ್ತು. ಲಲಿತಕಲೆಗಳಿಗೆ ಅವರಿತ್ತ ಪ್ರೋತ್ಸಾಹ ಇಂದೂ ಸಹ ನಮ್ಮ ಮುಂದೆ ಸಾಕ್ಷೀಭೂತವಾಗಿ ಕುಳಿತಿದೆ. ಆದರೆ, ಸ್ವಸಾಮರ್ಥ್ಯದಿಂದ ಆಡಳಿತ ನಡೆಸಲಾರದೇ ಹೋದ ಹೊಯ್ಸಳರ ಅವನತಿಗೆ ಹರಿಯಾಳ ರಾಣಿಯೂ ಕಾರಣಳಾದಳಲ್ಲವೆ ?

ನಿಮ್ಮ ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಹೊಯ್ಸಳ ಸಾಮ್ರಾಜ್ಯದ ಇತಿಹಾಸವನ್ನು ಸಮಗ್ರ-ಸ್ತೂಲವಾಗಿ ವಿಶಿಷ್ಟ ಐತಿಹಾಸಿಕ ಅಪ್ರಚಲಿತ ಕಥೆಯೊ೦ದಿಗೆ ಹೇಳುತ್ತಾ ವಿವರಿಸಿದ್ದಿರಾ!. ನಖೇಶ್ವರ ದೇವಾಲಯದ ಬಗ್ಗೆ ಕುತೂಹಲವನ್ನು೦ಟು ಮಾಡಿದ್ದಿರಾ... ಎಷ್ಟೋ ಹೊರಬಾರದ ಇತಿಹಾಸ ಸ೦ಶೋಧನೆಯ ವಿಶಿಷ್ಟಾ೦ಶಗಳನ್ನು ಹೆಕ್ಕಿ ಹ೦ಚಿದ್ದಿರಾ! ತಮಗೆ ಅನ೦ತ ವ೦ದನೆಗಳು. ತಮ್ಮ ಸುತ್ತಲಿನ ಪರಿಸರ-ಸ್ಥಳದ ಇತಿಹಾಸ ತಿಳಿದುಕೊಳ್ಳುವಲ್ಲಿನ ತಮ್ಮ ಆಸಕ್ತಿಗೆ ನಮ್ಮ ಶರಣು.

Subrahmanya said...

ರವಿಕಾಂತರೆ,

ಮೊದಲಿಗೆ, ಮತ್ತೊಮ್ಮೆ ಇಡೀ ಕತೆಯನ್ನು ಓದಿದ ನಿಮಗೆ ಧನ್ಯವಾದಗಳು.

ತಾಜಮಹಲಿನ ಹಿಂದಿನ ಸ್ವಾರಸ್ಯ ಬಹಲ ಚೆನ್ನಾಗಿದೆ. ಇದಕ್ಕೆ ಇನ್ನಷ್ಟು ಇತಿಹಾಸದ ವಿಚಾರಗಳನ್ನು ಅಧ್ಯಯನ ಮಾಡಿ ಮುಂದೆಂದಾದರೂ ಬರೆಯಲು ಯತ್ನಿಸುತ್ತೇನೆ. ಆದರೂ ನೀವೂ ನಿಮ್ಮದೇ ಧಾತಿಯಲ್ಲಿ ಬರೆಯಿರೆಂದು ನಾನೂ ಆಶಿಸುತ್ತೇನೆ.
ನಿಮ್ಮ ಸಲಹೆಯನ್ನು ಧನಾತ್ಮಕವಾಗಿ ಸ್ವಿಕರಿಸಿರುವೆ.

ಧನ್ಯವಾದಗಳು.

Subrahmanya said...

ಶ್ರೀಧರ್ ಅವರೆ,

ನಿಮ್ಮ ಹಳೇಬಿಡು ಯಾತ್ರೆ ಫಲಪ್ರದವಾಗಲಿ. ನನ್ನ ಬರಹದಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವೇ ಇಲ್ಲ !. ದ್ವಾರಾವತಿಯ ಐತಿಹಾಸಿಕ ಮಹತ್ವವೇ ಅಂತದ್ದು. ಇಲ್ಲಿಯವರೆಗೂ ಓದಿಕೊಂಡು ಬಂದು ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು.

Subrahmanya said...

ಸೀತಾರಾಮ ಗುರುಗಳೆ,

ನಿಮ್ಮ ಮಾತು ನಿಜ. ಹೆಚ್ಚು ಪ್ರಚಲಿತದಲ್ಲಿಲ್ಲದ ಕತೆಯ ಎಳೆಯೊಂದನ್ನು ಅಧಾರವಾಗಿಟ್ಟುಕೊಂಡು, ಇತಿಹಾಸವನ್ನು ತಳುಕು ಹಾಕಿ, ಒಂದು ಕತೆಯ ರೂಪದಲ್ಲಿ ಅಮ್ದು ನಡೆದ ಘಟನಾವಳಿಗಳನ್ನು ತೆರೆದಿಟ್ಟಿದ್ದೇನೆ. ನಖರೇಶ್ವರ ಹಾಗೂ ಉಳಿದ ಆಲಯಗಳನ್ನು ನೋಡಬೇಕೆನ್ನುವ ನಿಮ್ಮ ತವಕ ಬಹು ಬೇಗ ಈಡೇರಲಿ.
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಮನದಾಳದಿಂದ............ said...

ಸುಬ್ರಮಣ್ಯ ಸರ್,
ನಾಲ್ಕು ಕಂತುಗಳಲ್ಲಿ ಕುತೂಹಲ ಕೆರಲಿಸಿಕೊಂಡು ಸಾಗಿದ ಕತೆಗೆ ಕೊನೆಗೂ ದುರಂತದ ಅಂತ್ಯವಾಯಿತು. ಒಬ್ಬ ರಾಜ ಅಥವಾ ಪ್ರಜಾಪಾಲಕ ತನ್ನ ಅವಿವೇಕ, ಅಹಂಕಾರ ಕರುನಾಡಿನ ಕಲಾ ಸಂಸ್ಕೃತಿಗೇ ಪೆಟ್ಟು ಕೊಟ್ಟಿತು. ನ್ಯಾಯ ಪರಿಪಾಲನೆಯಲ್ಲಿ ತುಲನೆ ಮಾಡುವ ವ್ಯವದಾನವೇ ಇಲ್ಲದ ರಾಜನಿಗೆ ಆ ಪಟ್ಟವೇಕೆ?
ವಿರೂಪಾಕ್ಷ ಬಲ್ಲಾಳನ ಆಡಳಿತ ವೈಕರಿ, ದುರಹಂಕಾರ, ತಾಳ್ಮೆ ಇಲ್ಲದಿರುವಿದು ಇಂದಿನ ರಾಜಕಾರಣಿಗಳಿಗೆ ಹೋಲಿಕೆಯಾಗುತ್ತದೆ ಅಲ್ಲವೇ?

ಒಂದು ಉತ್ತಮ ಪೌರಾಣಿಕ ಕತೆ ಕೊಟ್ಟಿದ್ದಕ್ಕೆ ದನ್ಯವಾದಗಳು
ಹಾಗೆಯೇ ಕೆಲವು ತಿಳಿಯದೆ ಇದ್ದ ಮಾಹಿತಿಗಳನ್ನು ತಿಳಿಸಿದ್ದೀರಾ, ಧನ್ಯವಾದಗಳು.

ದಿನಕರ ಮೊಗೇರ said...

ಇತಿಹಾಸಭಾಗವನ್ನು ಕಥಾರೂಪದಲ್ಲಿ ಸ್ವಾರಸ್ಯಕರವಾಗಿ ನಮಗೆಲ್ಲ ತಿಳಿಸಿದ್ದಕ್ಕಾಗಿ ಧನ್ಯವಾದಗಳು.ತುಂಬಾ ತುಂಬಾ ಧನ್ಯವಾದ.........

AntharangadaMaathugalu said...

ಇತಿಹಾಸವನ್ನು ಇಷ್ಟು ಕುತೂಹಲಕರ ಕಥೆಯಾಗಿ ಸರಳವಾಗಿ ಬಿಡಿಸಿಟ್ಟ ನಿಮಗೆ ಧನ್ಯವಾದಗಳು. ನಿರೂಪಣೆ ತುಂಬಾ ಚೆನ್ನಾಗಿತ್ತು. ಮತ್ತೊಂದು ಹೊಸತು.... ಇತಿಹಾಸದ ಸರಣಿ ಆರಂಭಿಸುತ್ತೀರೆಂದು ಕಾಯುತ್ತಿದ್ದೇನೆ....

ಸವಿಗನಸು said...

ನಾಲ್ಕು ಕಂತುಗಳು ಸಹ ಚೆನ್ನಾಗಿ ಮೂಡಿ ಬಂಡಿವೆ....
ಹೊಯ್ಸಳರ ಇತಿಹಾಸ ಬಹಳ ಚೆನ್ನಾಗಿ ತಿಳಿಸಿದ್ದೀರಿ..
ತುಂಬಾ ಚೆನ್ನಾಗಿದೆ.. ..
ಮತ್ತಷ್ಟು ಬರೆಯಿರಿ....

ಮನಸು said...

ತುಂಬಾ ಚೆನ್ನಾಗಿದೆ ಐತಿಹಾಸಿಕ ಕಥೆ ಕೇಳಲು ಆದರೆ ಬೇಸರವೂ ಆಗಿದೆ..... ರಾಜನ ಅವಿವೇಕತನಕ್ಕೆ ಅನ್ಯಾಯವಾಗಿ ೩ ಪ್ರಾಣ ಬಲಿಯಾದವು... ಇತಿಹಾಸ ಕಥೆಗಳನ್ನು ಮತ್ತಷ್ಟು ನಮಗೆ ನೀಡಿ ನಿಜಕ್ಕೂ ನಾವುಗಳು ಉತ್ಸುಕರಾಗಿದ್ದೇವೆ ನಿಮ್ಮ ಕಥೆಗಳನ್ನು ಓದಲು.
ಧನ್ಯವಾದಗಳು

Subrahmanya said...

ಪ್ರವೀಣ್ ಅವರೆ,

ವಿರೂಪಾಕ್ಷ ಬಲ್ಲಾಳರಾಜ ತನ್ನ ಅರ್ಧದಷ್ಟು ರಾಜ್ಯಭಾರವನ್ನು ಅತ್ಯಂತ ಸಮರ್ಥವಾಗಿ ನಡೆಸಿದ್ದಾನೆಮ್ದು ತಿಳಿದುಬರುತ್ತದೆ. ರಾಜ್ಯಭಾರದ ಕಡೆಯ ದಿನಗಳಲ್ಲಿ ಕೆಲವು ಅಚಾತುರ್ಯಗಳು ಸಂಭವಿಸಿವೆ. ಅದು ಅವನತಿಗೂ ಕಾರಣವಾಗಿದೆ. ಭಾರತೀಯ ಸಂಸ್ಕೃತಿಗೆ ಹೊಯ್ಸಳರ ಕೊಡುಗೆ ಅನನ್ಯವಾದುದು.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Subrahmanya said...

ದಿನಕರ್ ಅವೆರೆ,

ನಾಲ್ಕೂ ಕಂತುಗಳನ್ನು ಓದಿ ಮೆಚ್ಚಿ ಬರೆದ ನಿಮಗೂ ನನ್ನ ಧನ್ಯವಾದಗಳು.

Subrahmanya said...

ಶ್ಯಾಮಲಾ ಅವರೆ,

ತುಂಬಾ ಧನ್ಯವಾದಗಳು. ಮತ್ತೊಂದು ಇತಿಹಾಸದ ಕತೆ ಬರೆಯಲು ತುಂಬ ಸಮಯ ಬೇಕಿನಿಸುತ್ತಿದೆ. ಪ್ರಯತ್ನಿಸುವೆ.
ಧನ್ಯವಾದಗಳು.

Subrahmanya said...

ಸವಿಗನಸು,

ಮೊದಲಿನಿಮ್ದ ಕೊನೆಯವರೆಗೂ ಓದಿಕೊಂಡುಬಂದು ಮೆಚ್ಚಿ ಬೆನ್ನು ತಟ್ಟಿದ ನಿಮಗೆ ಥ್ಯಾಂಕ್ಸ್ !.

Subrahmanya said...

ಮನಸು,

ನಿಮ್ಮ ಉತ್ಸುಕತೆಗೆ ನಾನು ಆಭಾರಿ. ನನ್ನ ಸಾಮರ್ಥ್ಯವಿರುವಷ್ಟು ಬರೆಯಲು ಯತ್ನಿಸುತ್ತೇನೆ. ಧನ್ಯವಾದಗಳು.

Ittigecement said...

ಸುಬ್ರಮಣ್ಯ...

ಇತಿಹಾಸ ಗರ್ಭದಲ್ಲಿ ಇನ್ನೂ ಏನೇನಿದೆಯೋ...

ಈ ಕಥೆ ನನಗೆ ಗೊತ್ತಿರಲಿಲ್ಲ...

ಮೊದಲ ಮೂರು ಕಂತುಗಳಲ್ಲಿ..
ಕುತೂಹಲ ಉಳಿಸಿಕೊಂಡು..
ಕೊನೆಯಲ್ಲಿ ದುರಂತದವಾದದ್ದು ಬೇಸರವಾಯಿತು..

ಇತಿಹಾಸದ ತುಣುಕೊಂದನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ..

ಇತಿಹಾಸದ ಮೇಲೆ ಬೆಳಕು ಚೆಲ್ಲುವ ಇಂಥಹ ಇನ್ನಷ್ಟು ಲೇಖನ ಬರಲಿ...

Subrahmanya said...

ಪ್ರಕಾಶಣ್ಣ,

ನಿಮ್ಮ ಆತ್ಮೀಯ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಹೊಯ್ಸಳರ ಅವನತಿಯ ಕಾಲದ ದುರಂತ ಕತೆಯಿದು. ಅವನತಿಯ ನಂತರ ಹಿಂದೂ ಸಂಸ್ಕೃತಿಯ ಮೇಲಾದ ದೌರ್ಜನ್ಯಗಳು ಅಸಹನೀಯವಾದುದು. ಇತಿಹಾಸದಲ್ಲಿ ನಡೆದುಹೊದ ಘಟನೆಯೊಂದರ ಮೇಲೆ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನಯನ್ನು ಮಾಡಿದೆ. ನಿಮ್ಮ ಪ್ರೋತ್ಸಾಹ ಕತೆಯನ್ನು ಇನ್ನಷ್ಟು ಚೆಂದಗಾಣಿಸಿತು !. ಧನ್ಯವಾದಗಳು.

ಮಹಾಬಲ ಭಟ್ಟ said...

ಸುಬ್ರಹ್ಮಣ್ಯರೆ,

ಕತೆಯ ಮೂಲಕ ಇತಿಹಾಸದಲ್ಲಿ ಜರುಗಿದ ಘಟನೆಯನ್ನು ಸ್ವಾರಸ್ಯಕರವಾಗಿ ತೆರೆದಿಟ್ಟುಬಿಟ್ಟಿರಿ. ತುಂಬಾ ಸಂತೋಷವಾಯಿತು. ಮುಂದೆಯೂ ಇನ್ನಷ್ಟು ಕತೆಗಳು ನಿಮ್ಮಿಂದ ಬರಲಿ. ಶುಭಾಷಯಗಳು.

shivu.k said...

ಸುಬ್ರಮಣ್ಯ ಸರ್,

ನಮ್ಮ ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರ ಇತಿಹಾಸವನ್ನು ಒಂದು ಸುಂದರ ಕಥಾ ರೂಪದಲ್ಲಿ ಕೊಟ್ಟಿದ್ದೀರಿ. ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಹೊರಗೆಡಹಿದ್ದೀರಿ...ಅದಕ್ಕೆ ತುಂಬಾ ಧನ್ಯವಾದಗಳು.

Subrahmanya said...

ಮಹಾಬಲ ಭಟ್ಟರೆ,

ಕತೆಯ ಪೂರ್ಣಭಾಗವನ್ನು ಓದಿ ಪ್ರೋತ್ಸಾಹಿಸಿದ ನಿಮಗೆ ನನ್ನ ನಮನಗಳು.

Subrahmanya said...

ಶಿವು ಸರ್,

ಇತಿಹಾಸ ಪುಸ್ತಕಗಳಲ್ಲಿ ಕಂಡುಬರದ ಕೆಲವು ವಿಷಯಗಳನ್ನು ಇಲ್ಲಿ ಕೊಡುವ ಪ್ರಯತ್ನಮಾಡಿದ್ದೇನೆ. ಹೊಯ್ಸಳರು ಕನ್ನದನಾಡಿನ ಸಾಂಸ್ಕೃತಿಕ ರೂವಾರಿಗಳೆಂದರೆ ತಪ್ಪಾಗುವುದಿಲ್ಲ. ಕಲೆಯ ವಿಷಯದಲ್ಲಂತೂ ನಿಮ್ಮಂತಹ ಕಲಾವಿದರಿಗೆ , ಛಾಯಾಗ್ರಾಹಕರಿಗೆ ರಸದೌತಣವನ್ನೇ ನೀಡುತ್ತವೆ ಹೊಯ್ಸಳರ ದೇವಾಲಯಗಳು !.

ಧನ್ಯವಾದಗಳು.

Snow White said...

tumba chennagide sir :) heege bareyuttiri :)

Subrahmanya said...

ಸ್ನೋವೈಟ್,

ತುಂಬ ಧನ್ಯವಾದಗಳು.

ಸಾಗರಿ.. said...

ಹಳಿಯಾಳ ದೇವಿಯ ವ್ಯಥೆ ಮನವನ್ನು ಕಲುಕಿಬಿಟ್ಟಿತು. ಕತೆಯೊಂದಿಗೆ ಅಂದಿನ ಕಾಲದ ವಿವರಣೆಗಳನ್ನೂ ಟಿಪ್ಪಣಿರೂಪದಲ್ಲಿ ಇಟ್ಟಿದ್ದೀರಿ. ಬಹಳ ಚೆನ್ನಾಗಿದೆ.

Subrahmanya said...

ಸಾಗರಿಯವರೆ,

ಹರಿಯಾಳ ರಾಣಿಯ ಜೀವನ ದುರಂತಮಯವಾಗಿತ್ತು ಎನ್ನುವುದನ್ನು ಇತಿಹಾಸವೇ ಹೇಳುತ್ತದೆ. ಕತೆಗೆ ಪೂರಕವಾಗಿ ಕೆಲವೊಂದು ಅಂಶಗಳನ್ನು ಟಿಪ್ಪಣಿ ರೂಪದಲ್ಲಿ ಸೇರಿಸಿದ್ನೇನೆ.
ಧನ್ಯವಾದಗಳು.

ದೀಪಸ್ಮಿತಾ said...

ಐತಿಹಾಸಿಕ ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಮಯದ ಅಭಾವದಿಂದ ಸಂಪೂರ್ಣ ಓದಲಾಗಲಿಲ್ಲ, ಮೇಲಿಂದ ಮೇಲೆ ಓದಿದೆ ಅಷ್ಟೆ. ಸಿಕ್ಕಾಗ ಬಿಡದೆ ಇನ್ನೊಮ್ಮೆ ಸರಿಯಾಗಿ ಓದುತ್ತೇನೆ

Subrahmanya said...

ದೀಪಸ್ಮಿತರೆ,

ಮತ್ತೊಮ್ಮೆ ನಿಧಾನವಾಗಿ ಓದಿ ಅಭಿಪ್ರಾಯ ತಿಳಿಸಿ. ಕೆಲಸದ ನಡುವೆಯೂ ಬಂದು ಓದಿದ ನಿಮಗೇ ನಾನು ಥ್ಯಾಂಕ್ಸ್ ಹೇಳಬೇಕು.

nenapina sanchy inda said...

Subramnaya avare
nimma narration style tumbaa chennaagi.hoysaLara itihasa chennagi OdisikonDu hOytu. thank you
i cannot see my followers in my blog, hence i am unable to read many of the bloggers updates.
since u commented i just clicked on your link and here i am. :-)
keLadi arasara kOTeyondide, teerthahlli baLi nagara emba Urinalli. adara history Enaadroo nimage gottaa??

Subrahmanya said...

ಮಾಲತಿಯವರೆ,

ತುಂಬಾ ಸಂತೋಷವಾಯಿತು, ನೀವು ನನ್ನ ತಾಣವನ್ನು ಹುಡುಕಿಕೊಂಡು ಬಂದಿದ್ದು.

"ನಗರ" ಊರು ಕೇಳಿದ್ದೇನೆ, ನೋಡಿಯೂ ಇದ್ದೇನೆ. ಕೆಳದಿ ಅರಸರ ಇತಿಹಾಸ ಅಲ್ಪಮಟ್ಟಿಗೆ ತಿಳಿದಿದ್ದೇನೆ, ಮುಂದೆದಾದರೂ ಬರೆಯುವ ಪ್ರಯತ್ನ ಮಾಡುತ್ತೇನೆ.

hamsanandi said...

ಕಥೆ ಚೆನ್ನಾಗಿ ಬಂದಿದೆ. ಇದಕ್ಕೆ ಶಾಸನಾಧಾರವೇನಾದರೂ, ಅಥವಾ ಜನಪದದಲ್ಲಿ ಉಳಿದು ಬಂದಿರುವ ಕಥೆಯ ಹಿನ್ನೆಲೆಯೇನಾದರೂ ಉಂಟೇ?

Subrahmanya said...

ಹಂಸಾನಂದಿಯವರೆ,

ಈ ಕತೆಗೆ ಸಾಕಷ್ಟು ಪುರಾವೆಗಳು ಕತೆಯಲ್ಲಿ ಬರುವ ಪ್ರದೇಶಗಳಲ್ಲೇ ದೊರೆತಿದೆ. ಶಾಸನಾಧರವೂ ಇದೆ. ಒಂದಷ್ಟು ಜನರ ಬಾಯಲ್ಲಿ ಹರಿದಾಡಿರುವಂತಹುದೂ ಇದೆ.

ಎಲ್ಲವನ್ನೂ ಒಟ್ಟಾರೆ ಗ್ರಹಿಸಿ ಕಥಾರೂಪದಲ್ಲಿ ಹೇಳುವ
ಪ್ರಯತ್ನವನ್ನು ಮಾಡಿದ್ದೇನೆ.

ಆಸಕ್ತಿಯಿಂದ ಬಂದು ಸ್ಪಂದಿಸಿದ ನಿಮಗೆ ಧನ್ಯವಾದಗಳು.

Anonymous said...

Hey, I am checking this blog using the phone and this appears to be kind of odd. Thought you'd wish to know. This is a great write-up nevertheless, did not mess that up.

- David