" ಆ ಸ್ವಾಮೀಜಿಗೆ ಬಿಳಿ ತೊನ್ನುರೋಗ ಇತ್ತೂಂತ ಅನ್ಸುತ್ತೆ. ನಾನು ಒಮ್ಮೆ ಅವರ ಮೈಮೇಲೆ ಬಿಳಿ ಕಲೆಗಳನ್ನು ನೋಡಿದ್ದೆ. ನಾವ್ಯಾಕೆ ಒಮ್ಮೆ ಪರೀಕ್ಷೆ ಮಾಡಬಾರದು ? "
ಅವನ ಮಾತು ಕೇಳಿ ನನಗೆ ಗಾಬರಿಯಾಯ್ತು. ಯಾವುದೋ ದುಃಸಾಹಸದ ಕಾರ್ಯಕ್ಕೆ ಕೈಹಾಕುತ್ತಿದ್ದಾನೆ ಅನಿಸಿತು.
" ಎಂತಹ ಪರೀಕ್ಷೆ ಮಾಡ್ತೀಯಪ್ಪಾ ನೀನು ? ಏನಾದ್ರೂ ಗಲಾಟೆ ಹೂಡಿ ತಗಾದೆ ತಂದು ಹಾಕಿ ತಮಾಷೆ ನೋಡೋಲ್ಲ ತಾನೆ ?". ನನ್ನ ಆತಂಕ ಸತೀಶನ ಆಲೋಚನೆಯ ಧಾಟಿಯನ್ನೇನೂ ಬದಲಾಯಿಸಲಿಲ್ಲ. ಪುನಃ ವಟಗುಟ್ಟಲು ಪ್ರಾರಂಭಿಸಿದ.
"ಬಿಳಿ ತೊನ್ನು ರೋಗ ಇದ್ದ ಸ್ವಾಮಿಯನ್ನ ಮಣ್ಣು ಮಾಡಿದರಲ್ಲ , ಈಗ ನೋಡು, ಈ ವರ್ಷ ಮಳೆಗಾಲ ಮುಗಿಯಕ್ಕೆ ಬಂದ್ರೂ ಇನ್ನೂ ಒಂದು ಹನಿಯೂ ಸಹ ಭೂಮಿಗೆ ಉದ್ರಿಲ್ಲ, ತೊನ್ನು ಬಂದೋರ್ನ ಹೂಳ್ಬಾರ್ದಂತೆ ಕಣೋ..ಸುಟ್ಟು ಹಾಕಬೇಕಂತೆ,ಹಾಗೆ ಹೂತಾಕಿದ್ದರಿಂದಲೇ ಈಗ ಮಳೆ ಬರ್ತಾ ಇಲ್ಲ. ಈಗಾಗಲೇ ಮಳೆಗಾಲ ಮುಗೀತಾ ಇದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವರ್ಷ ತೊಳೆದುಕೊಳ್ಳೋಕು ನೀರಿರಲ್ಲ ಮತ್ತೆ " ಹೊಸದೊಂದು ಸಂಶೊಧನೆ ಮಾಡಿದವನಂತೆ ವದರಿದ ಸತೀಶ.
ಅವನು ಇಷ್ಟೆಲ್ಲಾ ಯೋಚಿಸುವುದಕ್ಕೆ ಪ್ರಭಲವಾದ ಕಾರಣವೂ ಇತ್ತು. ನಮ್ಮೂರಲ್ಲಿ ಮಳೆಗಾಲ ಇಲ್ಲದ ತಿಂಗಳೆಂದರೆ ಜನವರಿ ಮತ್ತು ಫೆಬ್ರವರಿ ಮಾತ್ರ !. ಮಾರ್ಚಿ ತಿಂಗಳಿನಲ್ಲಿ ಗುಡುಗಿಕೊಂಡು ಬರುವ ಬಿರುಸುಮಳೆ, ಮುಂದಿನ ಮುಂಗಾರು ಬರುವವರೆಗೂ ಆರ್ಭಟಿಸುತ್ತಲೇ ಇರುತ್ತದೆ. ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಜಿಟಿ-ಜಿಟಿ ಮುಂಗಾರುಮಳೆ ಗಣಪತಿ ಹಬ್ಬ ಮುಗಿಯುವವರೆಗೂ ನನ್ನೂರನ್ನು ತೋಯಿಸುತ್ತದೆ. ನಂತರ ಯಥಾಪ್ರಕಾರ ಮಿಂಚು-ಗುಡುಗಿನ ಆರ್ಭಟದೊಂದಿಗೆ ಡಿಸಂಬರ್ ಮೊದಲವಾರದವರೆವಿಗೂ ಆಗಾಗ್ಗೆ ಬಂದು ಹೋಗುತ್ತಿರುತ್ತದೆ. ಇಂತಹ ನನ್ನೂರಿಗೆ ಈ ವರ್ಷ ಮಳೆಯ ಒಂದು ಹನಿಯೂ ಬಿದ್ದಿಲ್ಲವೆಂದಮೇಲೆ...., ಸತೀಶ ಮಾತನಾಡದೇ ಇರಲು ಸಾಧ್ಯವೆ ?. ಆದರೆ ಸತೀಶನ ಆಲೋಚನೆಯ ಹಿಂದಿರುವ ಪ್ರಸಂಗ ಮಾತ್ರ ಕೂತುಹಲಕರವಾದುದು. ಅದೇನು ಗ್ರಹಚಾರವೋ, ಈ ವರ್ಷ ಮಳೆರಾಯ ಮಾತ್ರ ಭೂತ ನೋಡಿ ಬೆದರಿವರಂತೆ ಮೋಡದಿಂದ ಕೆಳಗಿಳಿದಿರಲಿಲ್ಲ. ನನ್ನೂರು, ನದಿ ಮೂಲದ ನೀರಾವರಿ ಇಲ್ಲದ ಪ್ರದೇಶವಾದ್ದರಿಂದ ರೈತರೆಲ್ಲಾ ಕಂಗಾಲಾಗಿ ಬೆಳೆ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದರು. ಕೆರೆ-ಬಾವಿಗಳೆಲ್ಲಾ ಖಾಲಿಯಾಗಿದ್ದವು. ಕುಡಿಯುವ ನೀರಿನ ಕೊಳವೆ ಬಾವಿಗಳು ಸೋತು ಸೊರಗಿದ್ದವು. ನನ್ನೂರಿನ ಸುತ್ತೆಲ್ಲಾ ಉತ್ತಮ ಮಳೆಯಾಗುತ್ತಿದ್ದರೂ , ನನ್ನೂರಿಗೆ ಮಾತ್ರ ಹನಿಯೂ ಉದುರಿರಲಿಲ್ಲ !. ಸತೀಶ ಬಹಳ "ಮಂಡೆಬಿಸಿ" ಮಾಡಿಕೊಂಡಿದ್ದ. ಅವನೊಬ್ಬನೇ ಅಲ್ಲ, ನನ್ನೂರಿನ ಸಮಸ್ತರಿಗೂ ಈ ಮಳೆ ಎನ್ನುವುದು ಬಿಡಿಸಲಾಗದ ಒಗಟಾಯಿತು. ಬಾರದಮಳೆ ನನ್ನೂರಿನ ಮಹಾಜನಗಳಲ್ಲಿ ಅನೇಕ ಯೋಚನೆಗಳನ್ನು ಹುಟ್ಟುಹಾಕಿತು. ಅದರಲ್ಲಿ ಪ್ರಮುಖವಾಗಿ ಎರಡು ವಿಷಯಗಳು ತೀವ್ರ ಚರ್ಚೆಗೆ ಈಡುಮಾಡಿತು, ಮೊದಲನೆಯ ವಿಷಯ ನನ್ನೂರಿನ ಗ್ರಾಮದೇವತೆಯದು, ಎರಡನೆಯದು ಮಠದ ಸ್ವಾಮಿಗಳು.
ಮೊದಲನೆಯ ವಿಷಯಕ್ಕೆ ಬಂದರೆ, ಗ್ರಾಮದೇವತೆಯ ವಿಚಾರ ಮಾತನಾಡುವಾಗ ಸ್ವಲ್ಪ ಅಂಜಿಕೆಯಾಗುತ್ತದೆ !. ಆದರೂ ಹೇಳುತ್ತೇನೆ...ಈಗಿರುವ ನನ್ನೂರಿನ ಗ್ರಾಮದೇವತೆಯ ದೇವಾಲಯ ಬಹಳ ಪುರಾತನ ಕಾಲದ್ದು. ಬಿದ್ದು ಹೋಗುವ ಗೋಳಿನಲ್ಲಿದ್ದ ದೇವಾಲಯವನ್ನು ಸುಂದರ ದೇವಾಲಯವನ್ನಾಗಿ ಮರು ನಿರ್ಮಿಸಿದ ಕೀರ್ತಿ ನನ್ನೂರಿನ ಯುವಕರ ಬಳಗಕ್ಕೆ ಸಲ್ಲುತ್ತದೆ. ಯುವಕರ ಬಳಗದಲ್ಲಿ ಕುರುಬರು ಹಾಗು ಒಕ್ಕಲಿಗರೇ ಬಹುಸಂಖ್ಯಾತರು. ನಿರ್ಮಾಣದ ಕಾರ್ಯವೇನೋ ಸುಗಮವಾಗಿ ನೆರವೇರಿತು, ಆದರೆ ಹೊಸದಾಗಿ ದೇವಾಲಯವನ್ನು ನಿರ್ಮಿಸುವಾಗ ಗುಡಿಯೊಳಗಿದ್ದ ಮೊಲವಿಗ್ರಹದ ಮೂಗು ಅದು ’ಹೇಗೋ’ ಮುರಿದುಹೋಗಿಬಿಟ್ಟಿತ್ತು !. ಇನ್ನು ಭಗ್ನಗೊಂಡ ಮೂರ್ತಿಪೂಜೆ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದ ಯುವಕರು , ನವೀನ ವಿಗ್ರಹವೊಂದನ್ನು ತಯಾರುಮಾಡಿಸಿ ಸ್ಥಾಪಿಸಲು ಮುಂದಾದರು. ಇಷ್ಟಾಗುವಷ್ಟರಲ್ಲಿ ’ಬಳಗದ’ ಜೇಬು ಖಾಲಿಯಾಗಿತ್ತು. ವಿಗ್ರಹ ಸ್ಥಾಪನೆಗೆ, ದೇವಾಲಯದ ಪ್ರವೇಶ ಉತ್ಸವಕ್ಕೆ ಹಣ ಹೊಂದಿಸುವುದು ಯುವಕರಿಗೆ ಕಬ್ಬಿಣದ ಕಡಲೆಯಾಯಿತು. ಇಂತಹ ಸಂದರ್ಭದಲ್ಲೆ ದಾನಿ ಚಂದ್ರಣ್ಣನವರು , ದೇವಾಲಯದ ಧಾರ್ಮಿಕಕಾರ್ಯಗಳ ಸಂಪೂರ್ಣ ಖರ್ಚನ್ನು ಹೊರಲು ಸಿದ್ದರಾದರು. ಅವರದ್ದೊಂದು ಷರತ್ತು. ಧಾರ್ಮಿಕ ಪೂಜಾವಿಧಿಗಳನ್ನು ವೀರಶೈವರೇ , ಅದರಲ್ಲೂ ಜಂಗಮರೇ ನಿರ್ವಹಿಸಬೇಕೆಂಬುದು. ಕಾರಣ, ಚಂದ್ರಣ್ಣನವರು ಲಿಂಗಾಯತ ಕೋಮಿಗೆ ಸೇರಿದವರು. ಸ್ವಜಾತಿ ಪ್ರೇಮ !. ಇದು ಒಕ್ಕಲಿಗರು, ಕುರುಬರಿಂದ ಕೂಡಿದ್ದ ಯುವಕರ ಬಳಗಕ್ಕೆ ನುಂಗಲಾರದ ತುತ್ತಾಯಿತು. ಸತಿಶನಂತಹ ಕೆಲವು ಹುಡುಗರು ಆಕ್ಷೇಪಣೇಯನ್ನೂ ಎತ್ತಿದರು.
"ಅದೆಂಗ್ಲಾ ಆಯ್ತದೆ ? ಆರುವಯ್ನೋರೇ ಇದ್ನೆಲ್ಲಾ ಮಾಡ್ಬೇಕು ಕಣಲಾ, ಇಲ್ಲಾಂದ್ರೆ ಮುಂದೆ ಗರಬಡಿತದೆ ನಮ್ಮೂರ್ಗೆ ನೋಡ್ಕಳಿ " . ಹೀಗೆ ಆಕ್ಷೇಪಿಸಿದ ಹುಡುಗರ ಮಾತಿಗೆ ಕಿಮ್ಮತ್ತು ದೊರೆಯಲಿಲ್ಲ. ಚಂದ್ರಣ್ಣನ ಹಣದ ಥೈಲಿಯ ಮುಂದೆ ಬಳಗದ ಹುಡುಗರು ಮೊಕರಾದರು. ಬ್ರಾಹ್ಮಣರಿಗೆ, ಒಕ್ಕಲಿಗರಿಗೆ ಒಳಗೊಳಗೆ ಅಸಹನೆಯಿದ್ದರೂ, ಕೆಲಸವಾಗಲಿ ಎಂದು ತೆಪ್ಪಗಾದರು. ಜಂಗಮರು ಹೋಮ ಸುಟ್ಟರು !. ಮೊರ್ತಿ ಸ್ಥಾಪನೆಯೂ ಆಯಿತು. ಅಲ್ಲಿಂದ ಕೈಕೊಟ್ಟ ಮಳೆ , ಮುಂಗಾರು ಮುಗಿಯುತ್ತಾ ಬಂದರೂ ಹನಿಯುದುರಿಸಲಿಲ್ಲ. ಇಷ್ಟು ಸಾಕಿತ್ತು ಬಳಗದ ಯುವಕರಿಗೆ, ಗ್ರಾಮದೇವತೆಯ ಪ್ರತಿಷ್ಠಾಪನೆಯ ವಿಧಿಯಲ್ಲಿ ಅಪಚಾರವಾಗಿದೆಯೆಂದು ಊರೆಲ್ಲಾ ಸುದ್ದಿಯನ್ನು ಹರಡಿದರು. ಇದಕ್ಕೆ ಲಿಂಗಾಯತರೇ ಕಾರಣವೆಂಬ ಗುಲ್ಲೆದ್ದಿತು. ಲಿಂಗಾಯತರು ಹಾಗೂ ಮಿಕ್ಕುಳಿದ ಪಂಗಡಗಳ ನಡುವೆ ದ್ವೇಷದ ಹೊಗೆ ಕಪ್ಪು ಕಾರ್ಮೋಡದಂತೆ ದಟ್ಟೈಸತೊಡಗಿತು.
ಇನ್ನು ಎರಡನೆಯ ವಿಷಯಕ್ಕೆ ಬಂದರೆ, ನನ್ನೂರಿನ ಸನಿಹದಲ್ಲೇ ಲಿಂಗಾಯತರ ಮಠವೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಘನ ಸರ್ಕಾರದ ’ಆಸಕ್ತಿ’ಯಿಂದಾಗಿ ಮಠ ಸಮೃದ್ಧಿಯಾಗಿ ಬೆಳೆಯಿತು. ಒಕ್ಕಲಿಗರು ಹಾಗೂ ಇತರೆ ಜಾತಿಯ ಜನಗಳಿಗೆ ಮಠದ ಏಳಿಗೆಯನ್ನು ಸಹಿಸಲಾಗುತ್ತಿರಲಿಲ್ಲ. ಮಠಕ್ಕೊಬ್ಬರು ಸ್ವಾಮಿಗಳೂ ಇದ್ದರು. ಅವರಿಗ್ಯಾವುದೋ ಕಾಯಿಲೆ ಬಂದು ನರಳಾಡಿ , ಕೊನೆಗೊಂದು ದಿವಸ ಕೊನೆಯುಸಿರೆಳೆದರು. ವೀರಶೈವ ಪದ್ಧತಿಯಂತೆ ಅವರ ಸಮಾಧಿಯನ್ನು ಮಠದ ಆವರಣದಲ್ಲೇ ನಿರ್ಮಿಸಲಾಯಿತು. ಸ್ವಾಮಿಗಳನ್ನು ಮಣ್ಣುಮಾಡುವ ಸಮಯದಲ್ಲಿ ಹಾಜರಿದ್ದ ಕೆಲವರಿಗೆ , ಅವರ ಮೈಮೇಲಿದ್ದ ಬಿಳಿಕಲೆಗಳು ಕಾಣಿಸಿಕೊಂಡವು. ಗುಸುಗುಸು ಮಾತನಾಡಿಕೊಂಡರು. " ತೊನ್ನಿದ್ದವರನ್ನ ಸುಡಬೇಕು ಕಣ್ರಲಾ..ಊತಾಕುದ್ರೆ ಬರಗಾಲ ಬತ್ತದೆ !". ಇಂತಹ ಮಾತುಗಳು ಮಠದ ಆಡಳಿತಗಾರರನ್ನು ತಲುಪಿದರೂ ಸಹ , ಸಮಾಧಿ ನಿರ್ಮಾಣವಾಯಿತು. ಅಲ್ಲಿಂದ ಶುರುವಾಯಿತು ನನ್ನೂರಿನ ಬರಗಾಲ. ಮಳೆ ಬರಲೇ ಇಲ್ಲ !. ಸತೀಶ ಕ್ರಾಂತಿಕಾರನಂತೆ ಬುಸುಗುಡುತ್ತಿದ್ದ. ಏನಾದರೂ ಸರಿಯೇ , ನನ್ನೂರಿಗೆ ಮಳೆ ತರಿಸಲೇಬೇಕೆಂಬ ಹಟತೊಟ್ಟವನಂತೆ ವ್ಯಗ್ರನಾಗಿ ಕುಳಿತಿದ್ದ. ನಾನು ಸ್ವಲ್ಪ ಸಮಾಧಾನ ಪಡಿಸಲು ಯತ್ನಿಸಿದೆ. " ಸತೀಶ ಬಿಳಿ ಚರ್ಮದ ಸ್ವಾಮಿಗೂ, ಮಳೆಗೂ ಏನು ಸಂಬಂಧನಯ್ಯಾ ? ಏನೇನೋ ಮಾತನಾಡಿ ಜನಗಳನ್ನ ತಪ್ಪುದಾರಿಗೆ ಎಳೀಬೇಡ ನೀನು ". ನನ್ನ ಉಪದೇಶಗಳಾವುದೂ ಅವನಿಗೆ ಬೇಕೆನಿಸಲಿಲ್ಲ. ಮತ್ತೆ ಬುಸುಗುಟ್ಟಿದ. "ಹಾಗಾದ್ರೆ ತಿಂಗಳ ಹಿಂದೆ ಪಕ್ಕದೂರಿವವರು ಗ್ರಾಮದೇವತೆಗೆ ಪೂಜೆ ಮಾಡ್ಕಂಡು ಹೋದ್ರಲಾ..ಅಲ್ಲಿ ಎಂಥಾ ಮಳೆ ಆಯ್ತು ಗೊತ್ತಾ..? ಕೆರೆ ಕಟ್ಟೆ ಎಲ್ಲಾ ತುಂಬಿ ಹೋದವಂತೆ..ನಂಬಿಕೆ ಮುಖ್ಯ . ಆ ತೊನ್ನು ಸ್ವಾಮಿಯನ್ನ ಹೂಳದೆ ಸುಟ್ಟಿದ್ದರೆ , ಇಷ್ಟು ಹೊತ್ತಿಗಾಗಲೇ ಮಳೆ ಸುರಿದುಹೋಗಿರೋದು ಗೊತ್ತಾ ?! ಈಗಲೂ ಹೂತಿರೋ ಆ ಹೆಣ ತೆಗೆದು ಸುಟ್ಟರೆ ಮಳೆ ಬರುತ್ತೆ ನೊಡು ! " ಸತೀಶನ ಮಾತಿಗೆ ನಗಬೇಕೋ , ಅಳಬೇಕೋ ನನಗೆ ತಿಳಿಯಲಿಲ್ಲ. " ಸತೀಶ, ಪೂಜೆ- ಆಚರಣೆಗಳಿಂದ ಧಾರ್ಮಿಕ ಶ್ರದ್ಧೆ, ನಂಬಿಕೆ ಸಂಸ್ಕೃತಿ ಬೇಳೆಯುತ್ತೆ ಅನ್ನೋದು ನಿಜ, ಆದರೆ ಹೂತಿರುವ ಹೆಣ ತೆಗೆದು ಸುಡೋದು ಯಾವ ಸಂಸ್ಕೃತಿನಯ್ಯಾ ? ". ಸತೀಶನಿಗೆ ನನ್ನೋಡನೆ ಚರ್ಚೆಮಾಡುವ ಆಸಕ್ತಿಯಿರಲಿಲ್ಲ. ಯುವಕರ ಬಳಗದ ಗುಂಪು ನಾವಿದ್ದೆಡೆಗೆ ಬರಲು , ಸತೀಶ ಅವರನ್ನು ಸೇರಿಕೊಂಡ. ನಾನು ಅಲ್ಲಿಂದ ಕಳಚಿಕೊಂಡೆ. ಸತೀಶ ಒಕ್ಕಲಿಗ ಕುಟುಂಬದಿಂದ ಬಂದಿದ್ದ ಹುಡುಗ . ಒರಟು ಸ್ವಭಾವದವನಾದರೂ ನನ್ನೂರಿನ ಬಗೆಗೆ ಅತೀವ ಅಭಿಮಾನವಿರಿಸಿಕೊಂಡಿದ್ದ. ಒಮ್ಮೊಮ್ಮೆ ಅಭಿಮಾನ ಅತಿರೇಕಕ್ಕೆ ತಿರುಗಿ ಸಂಘರ್ಷಗಳಾಗುತ್ತಿದ್ದವು. ಯುವಕರ ಬಳಗದವರು ಮಳೆ ತರಿಸಲು ಶೃಂಗೇರಿಯಿಂದ ದೀಕ್ಷಿತರನ್ನು ಕರೆತರಲು ತೀರ್ಮಾನಿಸಿದರು. ಅದರಂತೆ ಸಕಾಲಕ್ಕೆ ಬಂದ ಆಚಾರ್ಯರು ಮೂರು ದಿವಸಗಳ ಕಾಲ ಯಾಗಗಳನ್ನು ನಡೆಸಿ ಮಳೆಯಾಗಲೆಂದು ಹರಸಿದರು. ಕೊನೆಯ ದಿವಸ ತಿರ್ಥ-ಪ್ರಸಾದ ವಿನಿಯೋಗ. ಅಂದು ಲಿಂಗಾಯತ ಮುಖಂಡ ಚಂದ್ರಣ್ಣನೂ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು. ತೀರ್ಥ ಪಡೆದುಕೊಳ್ಳಲು ಮುಗಿಬಿದ್ದ ಜನರನ್ನು ನೋಡಿ ಚಂದ್ರಣ್ಣ ಛೇಡಿಸಿದ್ದ " ದೇಸಕ್ಕೆ ಓರಾಟ ಮಾಡ್ರುಲಾ ಅಂದ್ರೆ, ಅಯ್ನೋರ್ ಕೊಡೊ ತೀರ್ಥಕ್ ಓರಾಟ ಮಾಡ್ತಿರಲ್ರುಲಾ " . ಚಂದ್ರಣ್ಣನ ಮಾತಿನಿಂದ ಸಿಟ್ಟಿಗೆದ್ದಿದ್ದ ಮಿಕ್ಕುಳಿದವರು ಅಂದಿನ ದಿನ ರಾತ್ರಿಯೇ ಸಭೆ ಸೇರಿದರು. ಲಿಂಗಾಯತರನ್ನು ಹೊರತುಪಡಿಸಿ ಮಿಕ್ಕುಳಿದ ಎಲ್ಲಾ ಪಂಗಡದವರೂ ಮಠದೊಳಕ್ಕೆ ನುಗ್ಗಿ ಸಮಾಧಿಯಿಂದ ಸ್ವಾಮಿಗಳ ಹೆಣ ತೆಗೆದು ಸುಡಬೇಕೆಂಬ ನಿರ್ಧಾರಕ್ಕೆ ಬಂದರು. ಅದು ಹೇಗೋ ಲಿಂಗಾಯತ ಮುಖಂಡರಿಗೆ ಈ ವಿಷಯ ತಿಳಿದುಹೋಯಿತು. ಬೆಳಗಾಗುವಷ್ಟರಲ್ಲಿ ದೊಣ್ಣೆ, ಮಚ್ಚು ಹಿಡಿದ ಹತ್ತಾರು ಲಿಂಗಾಯತ ಯೋಧರು ಸಮಾಧಿಯ ಕಾವಲಿಗೆ ನಿಂತರು. ಇನ್ನೊಂದು ದಿಕ್ಕಿನಿಂದ ಚೈನು, ಮಚ್ಚು, ದೊಣ್ಣೆಗಳನ್ನು ಹಿಡಿದ ಯುವಕರ ಗುಂಪು ಸಮಾಧಿಯ ಮೇಲೆ ದಾಳಿಯಿಟ್ಟಿತು. ದೊಡ್ಡ ಸಂಗ್ರಾಮವೇ ನಡೆದುಹೋಯಿತು. ಒಂದಷ್ಟು ಹೆಣಗಳೂ ಬಿದ್ದವು. ಕೈ-ಕಾಲುಗಳು ತುಂಡಾಗಿ ಬಿದ್ದಿತು. ಹೊಡೆತ ತಾಳಲಾರದೆ ಕೆಲವರು ಪಲಾಯನಗೈದರು. ಇನ್ನೂ ಕೆಲವರು ಕೊನೆಯವರೆಗೂ ಹೋರಾಡಿ ವೀರಮರಣವನ್ನಪ್ಪಿದರು !. ಇದರ ನಡುವೆಯೇ , ಅದ್ಯರೋ ಒಬ್ಬರು ಸಮಾಧಿಯನ್ನು ಬಗೆದುಬಿಟ್ಟರು. ಸ್ವಾಮಿಗಳ ದೇಹ ಅರ್ಧದಷ್ಟು ಹೊರಗೆ ಬಂದಿತು. ಅಷ್ಟರಲ್ಲಿ ಪೋಲಿಸಿನವರ ಆಗಮನವಾಗಲು ಅಳಿದುಳಿದ ಮಂದಿಯೂ ದಿಕ್ಕುಪಾಲಾದರು. ಇಷ್ಟಾದ ನಂತರ ಮಠದೆಡೆಗೆ ಹೋಗಲು ಜನಗಳು ಹಿಂಜರಿಯತೊಡಗಿದರು. ಸ್ವಾಮಿಗಳ ಜೊತೆಗೆ ಇನ್ನಷ್ಟು ಹೆಣಗಳು ಅವರ ಸಖ್ಯ ಬೆಳಸಿದವು !. ನನಗೆ ಸತೀಶನ ನೆನಪಾಯಿತು. ಹುಡುಕಿಕೊಂಡು ಹೊರಟೆ. ಹೊಂಗೆ ಮರದ ಬುಡದಲ್ಲಿ ಕುಳಿತು ಯೋಚನಾಮಗ್ನನಾಗಿದ್ದವನನ್ನು ಮಾತಿಗೆಳೆದೆ. " ಏನೋ ಸತೀಶ, ಅವತ್ತು ಹೊಡೆದಾಟವಾದಾಗ ನೀನಲ್ಲಿರಲಿಲ್ಲವಂತೆ ?". ಕೂತೂಹಲದಿಂದ ಕೇಳಿದೆ. ಸತೀಶನ ಬಳಿ ಉತ್ತರ ಸಿದ್ಧವಾಗಿತ್ತು. " ಹೌದಪ್ಪಾ, ಅಂದು ನಾನು ಊರಿನಲ್ಲಿರಲಿಲ್ಲ..ನಾನೇನಾದರೂ ಇದ್ದಿದ್ದರೆ..ಆ ಸ್ವಾಮಿಯ ಹೆಣ ತೆಗೆದು ಸುಟ್ಟುಬರುತ್ತಿದ್ದೆ !". ಕಟಕಟನೆ ಹಲ್ಲುಕಡಿದ ಸತೀಶ. ಇಷ್ಟಾದರೂ ಇವನಿಗೆ ಬುದ್ಧಿ ಬರಲಿಲ್ಲವಲ್ಲಾ ಎಂದು ಮರುಗಲು ಅಲ್ಲಿದ್ದುದು ನಾನೊಬ್ಬನೆ !. ಸತೀಶ ಮತ್ತೆ ವಟಗುಟ್ಟಲು ಶುರುಮಾಡಿದ. " ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ..ಎಲ್ಲಾ ಮಳೇನೂ ಮುಗೀತು. ಇನ್ನೇನು ಚಳಿಗಾಲನೂ ಶುರುವಾಗುತ್ತೆ. ಇನ್ನೆಲ್ಲಿಂದ ಮಳೆ ಬರುತ್ತಯ್ಯಾ ? ಮುಂದೆ ಗತಿಯೇನು ? ನಮ್ಮನ್ನ ಆ ದೇವರೇ ಕಾಪಾಡಬೇಕು " . ನಾನು ರೇಗಿಸಲೆಂದೇ ಸತೀಶನನ್ನು ಕೆಣಕಿದೆ. " ಅಲ್ಲಯ್ಯಾ, ಸ್ವಾಮಿಗಳ ಸಮಾಧಿನೂ ಬಗೆದಾಯ್ತು, ಶೃಂಗೇರಿಯಿಂದ ಬ್ರಾಂಬ್ರನ್ನೇ ಕರೆಸಿ ಪೂಜೆ ಮಾಡಿಸಿದ್ದಾಯ್ತು..ಇನ್ನೂ ಯಾಕೆ ಮಳೆ ಬರಲಿಲ್ಲ ಈ ಊರಿಗೆ ?". ಸತೀಶನ ಮುಖ ಚಿಕ್ಕದಾಯಿತು. ಡಿಸಂಬರ್ ಆರಂಭದ ಸಣ್ಣ ಚಳಿಯಲ್ಲೂ ಆತ ತುಸು ಬೆವರಿದ್ದು ನನಗೆ ತಿಳಿಯಿತು. ಆದರೂ ಅವನು ಹಠ ಬಿಡಲಿಲ್ಲ. " ಮಳೆಗಾಲ ಮುಗಿದು ಚಳಿ ಶುರುವಾಯ್ತು. ಈಗಿನ್ನೆಂಥಾ ಮಳೆ ಬರುತ್ತೆ. ಇನ್ನು ಮುಂದೆ ಬಹಿರ್ದೆಸೆಗೆ ಹೋಗೋವಾಗ ಕಾಗದ ತೆಗೆದುಕೊಂಡು ಹೋಗಬೇಕಾಗುತ್ತೆ. ಆದರು ನಾನು ಬಿಡಲ್ಲ..ನಾಳೆ ನೀನೂ ನನ್ನ ಜೊತೆ ಬಾ..ಆ ಸ್ವಾಮಿಯನ್ನ ಸಮಾಧಿಯಿಂದ ತಗೆದು ಸುಟ್ಟಾಕಿ ಬರೋಣ , ಆಮೇಲೆ ನೋಡು ಮಳೆ ಹೇಗೆ ಬರುತ್ತೆ ಅಂತ ..". ಅವನ ವಿತಂಡವಾದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಗ್ರಾಮದೇವತೆಯ ದೇವಾಲಯದ ನೂತನ ಶಿಖರದ ನೆರಳು ಅಷ್ಟುದ್ದಕ್ಕೂ ಬಿದ್ದಿತ್ತು. ಸೂರ್ಯ ತನ್ನ ನಿತ್ಯಕಾರ್ಯ ಮುಗಿಸಿ ಮರೆಯಾಗುತ್ತಲಿದ್ದ. ಕತ್ತಲಾಗುತ್ತಲಿದ್ದರಿಂದ ಅವನಿಂದ ಬಿಡುಗಡೆಗೊಂಡು ನಾನು ಮನೆ ಸೇರಿದೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯ ಹೆಂಚಿನ ಮೇಲೆ ಸಣ್ಣ ಮಳೆ ಹನಿಗಳು ಬಿದ್ದ ಸದ್ದಾಯಿತು. ಒಂಬತ್ತು ಗಂಟೆಯಾಗುವಷ್ಟರಲ್ಲಿ ದೊಡ್ಡ ಹನಿಗಳು ಶುರುವಾಗಿದ್ದವು. ಅಕಾಲದಲ್ಲಿ ಇದೆಂತಹ ಮಳೆಯೆಂದು ಆಶ್ಚರ್ಯಗೊಂಡು ನೋಡುವಷ್ಟರಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ನನ್ನೂರಿನ ಜನತೆ ಇತಿಹಾಸದಲ್ಲಿ ಕಂಡು ಕೇಳರಿಯದಿದ್ದ ಬಿರುಸಾದ ಮಳೆ ಅದು. ಬಿರುಗಾಳಿಯ ಸಹಿತ ಸುರಿದ ಕುಂಭದ್ರೋಣ ಮಳೆ ನಿಂತಾಗ ಬೆಳಗಿನ ಜಾವ ಸುಮಾರು ಐದು ಗಂಟೆ !. ಎಂದಿನಂತೆ ಬೆಳಗಾಗೆದ್ದು ಮನೆಯಿಂದ ಹೊರಬಂದು ಬೀದಿಯನ್ನೊಮ್ಮೆ ದಿಟ್ಟಿಸಿದೆ. ಎಲ್ಲೆಲ್ಲು ನೀರು. ಮಳೆ ನೀರು. ತಕ್ಷಣ ಸತೀಶನ ನೆನಪಾಯಿತು. ಅವನನ್ನು ಮಾತನಾಡಿಸಲೆಂದು ಬನಿಯನ್ ಮೇಲೆ ಅಂಗಿ ಧರಿಸಿ ಹೊರಟೆ. ಅರೆ ! ನನ್ನೂರಿನ ಗ್ರಾಮದೇವತೆಯ ದೇವಾಲಯದ ಮುಂದೆ ಜನವೋ ಜನ !. ಹತ್ತಿರ ಹೋಗಿ ನೋಡಿದೆ...ರಾತ್ರಿ ಸುರಿದ ಬಿರುಗಾಳಿ ಮಳೆಗೆ ದೇವಾಲಯ ಶಿಖರದ ಸಮೇತ ಕುಸಿದು ಬಿದ್ದಿದೆ. ಗ್ರಾಮದೇವತೆ ಕಲ್ಲುಗಳಡಿಯಲ್ಲಿ ಅಪ್ಪಚ್ಚಿ !. ಸತೀಶ ಏದುಸಿರು ಬಿಡುತ್ತಾ ಓಡೋಡಿ ಬಂದ..ವಟಗುಟ್ಟಿದ.."ಹೆಣ ತೆಗೆಯೋಣ ಅಂತ ಮಠದ ಹತ್ತಿರ ಹೋಗಿದ್ದೆ ಕಣೊ, ಅಲ್ಲಿ ಸಮಾಧಿಯೇ ಇಲ್ಲ !. ಮಳೆ ನೀರಲ್ಲಿ ಎಲ್ಲಾ ಕೊಚ್ಕೊಂಡು ಹೋಗಿದೆ..ಅಲ್ಲಿ ಏನಿತ್ತು ಅಂತಲೂ ಗೊತ್ತಾಗುತ್ತಿಲ್ಲ ..!" .
ಪ್ರಕೃತಿಯ ಮುಂದೆ, ಜಾತಿ-ಪಂಗಡಗಳನ್ನು ಮೇಳೈಸಿಕೊಂಡಿರುವ ಮನುಷ್ಯ ತೀರಾ ಕುಬ್ಜನೆನಿಸಿತು ನನಗೆ. ಸೀದಾ ಮನಗೆ ಹೋಗಿ ಬೆಚ್ಚಗೆ ರಗ್ ಹೊದೆದು ಮಲಗಿದೆ.
(ಈ ಕತೆಯಲ್ಲಿರುವುದೆಲ್ಲವೂ ಕೇವಲ ಕಾಲ್ಪನಿಕ. ಯಾರಿಗೂ ಸಂಬಧಿಸಿದ್ದಲ್ಲ !)
...............................................................................................
ಖೊನೆಖಿಡಿ:
ಶಂಭುಲಿಂಗನಿಗೆ ಪರೋಪಕಾರವೆಂದರೆ ಬಲು ಪ್ರೀತಿ !. ಹೀಗೆ ಒಮ್ಮೆ ವಾಯುವಿಹಾರಕ್ಕೆ ಹೊರಟ ಶಂಭುವಿಗೆ ವಿಚಿತ್ರವೊಂದು ಕಾಣಿಸಿತು. ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಹುಲ್ಲನ್ನು ವ್ಯಕ್ತಿಯೊಬ್ಬ ಗಬಗಬನೆ ತಿನ್ನುತ್ತಿದ್ದ. ಚಕಿತನಾದ ಶಂಭು ವ್ಯಕ್ತಿಯನ್ನು ಮಾತಿಗೆಳೆದ
" ಏನಾಯ್ತಯ್ಯಾ ನಿನಗೆ ? ದನಗಳ ತರಹ ಹುಲ್ಲು ತಿನ್ನುತ್ತಿದ್ದೀ ! "
"ಬುದ್ದಿ, ನಂಗೆ ತಿನ್ನಕ್ಕೆ ಏನು ಇಲ್ರಾ...ಹೊಟ್ಟೆಗಿಲ್ದೆ ವಾರಾತು ಸೋಮಿ.." ಗೋಳಾಡಿತು ಆ ವ್ಯಕ್ತಿ.
" ಹಾಗಾದರೆ ನೀನು ನನ್ನ ಜೊತೆ ಬರಲೇಬೇಕು " ಶಂಭು ಉಪಕರಿಸಲು ಮುಂದಾದ. ವ್ಯಕ್ತಿ ಹರುಷಗೊಂಡಿತು.
" ಆಗಲಿ ಬುದ್ದಿ, ಮತ್ತೇ ನಂಜೊತೆ ನನ್ ಹೆಂಡ್ರು, ೩ ಮಕ್ಳು ಎಲ್ಲಾ ಇದಾರಲ್ಲಾ ಸೋಮಿ "
"ಹೆದರಬೇಡ !. ಎಲ್ಲರನ್ನೂ ಕರೆದುಕೊಂಡು ಬಾ "
"ಆಗಲಿ ಬುದ್ದಿ " ಓಡಿ ಹೋದ ಆ ವ್ಯಕ್ತಿ ತನ್ನ ಕುಟುಂಬವನ್ನು ಕರೆದುಕೊಂಡು ಬಂದ. ವ್ಯಕ್ತಿಯ ಹೆಂಡತಿ ಶಂಭುವಿನ ಉಪಕಾರವನ್ನು ಹೊಗಳಿತು.
" ಭೋ ಉಪ್ಕಾರ ಆತು ಸೋಮಿ , ನೀವು ತುಂಬಾ ದೊಡ್ಡೋರು ...ನಮ್ ಕೆಲ್ಸ ಏನು ಬುದ್ದಿ ? "
ಶಂಭು ನಸುನಕ್ಕಿದ "ಒಳ್ಳೆಯದು , ವಿಷಯ ಏನಪ್ಪಾ ಅಂದ್ರೆ, ಒಂದು ವರ್ಷದಿಂದ ನನ್ನ ಮನೆಯ ತೋಟದ ಹುಲ್ಲು ಕತ್ತರಿಸಿಲ್ಲ ನಾನು !!!!. ನಿಮ್ಮಿಂದ ನನಗೇ ಉಪಕಾರವಾಗುತ್ತದೆ .ಬನ್ನಿ !! "
.......................................................
ವಂದನೆಗಳೊಂದಿಗೆ...
43 comments:
kathe chennaagi moodibandide... vastu,aala, ota, ellavoo hondikeyide..
koneya pyaaravannu svalpa chikka chikka daagi vibhaagisiddare innoo hechchu aakarshaneeyavaaguttittendu nanna anisike...
[baraha kannada kai kottide..haagaagi english aksharagalalliye barediddene.]
ಕಥೆ ಮಸ್ತ್ ಆಗಿದೆ...
ಕೊನೆ ಖಿಡಿಯಲ್ಲಿ ಶಂಭುವಿನ ಪರೋಪಕಾರ ಚೆನ್ನಾಗಿತ್ತು...
ದೇವಿ ಪೂಜೆಯ ಕಟ್ಲೆ ತಪ್ಪಿದ್ದರಿಂದ, ತೊನ್ನು ಸ್ವಾಮಿಯನ್ನು ಹೂತಿದ್ದರಿಂದ ಮಳೆ ಕೈಗೊಟ್ಟಿತು. ಅದರಿಂದ ಕುದಿಯುತ್ತಲೇ ಇದ್ದ ಸತೀಶನ ಆತಂಕ ತಾರಕಕ್ಕೇರುತ್ತಿರುವಂತೆಯೇ ಅದರ ಸಹಜ ಪರಿಣಾಮವೋ ಎಂಬಂತೆ ಮಳೆ ಬಂದಿತು. ಯಾವ "ಅನಾಚಾರ" ಮಳೆಬರದಂತೆ ತಡೆದು ಜನರ ಕಣ್ಣು ಕುಕ್ಕಿತ್ತೋ ಆ ಅನಾಚಾರಗಳನ್ನು ಮಳೆಯೇ ಕೊಚ್ಚಿಹಾಕಿತು. ಆದ್ದರಿಂದ ಅದು "ಅನಾಚಾರ"ಗಳಲ್ಲವೆಂದು prove ಆಯಿತು; ಆದರೂ ಜನಕ್ಕೆ "ಇಷ್ಟ"ವಿಲ್ಲದ ಅವುಗಳನ್ನು ಮಳೆ ತೊಡೆದುಹಾಕಿದ್ದು ಒಂದುರೀತಿ ವಿಚಿತ್ರ ಸಮಾಧಾನವನ್ನೂ ಕೊಟ್ಟಿತು (ಮಳೆಯ ಗುಣವೇ ಅದಲ್ಲವೇ?)
Nice story line, full of under-currents. ಉತ್ತಮ ಶೈಲಿ, ಭಾಷೆ, ಚೊಕ್ಕದಾದ ಪಾತ್ರನಿರ್ವಹಣೆ.
ಮೂಢನಂಬಿಕೆಯ ಪ್ರಶ್ನೆಯನ್ನು ಬಹು ಜಾಣ್ಮೆಯಿಂದ ನಿರ್ವಹಿಸಿದ್ದೀರಿ
ಇಂತಹ ಒಂದು sensitive ಕತೆಯನ್ನು ಹೆಣೆಯಲು ತಾಳ್ಮೆ ಹಾಗು ವಿವೇಚನೆ ಬೇಕು. ನೀವು ಅವೆರಡನ್ನೂ ತೋರಿಸಿದ್ದೀರಿ. ಜೊತೆಗೆ ಕೊನೆವರೆಗೂ ಸ್ವಾರಸ್ಯವನ್ನು ಉಳಿಸಿಕೊಂಡು ಬಂದಿದ್ದೀರಿ.
Rational thinking ಇಲ್ಲದ ನಮ್ಮ ಜನ ಹೇಗೆ ಹಾಳಾಗುತ್ತಾರೆನ್ನುವದನ್ನು ಸೊಗಸಾಗಿ ತೋರಿಸಿದ್ದೀರಿ. ಅಭಿನಂದನೆಗಳು.
ಕುತೂಹಲಭರಿತ ಕಥೆ ಮೌಲ್ಯಯುತವೂ ಆಗಿದೆ. ಕಾಲ್ಪನಿಕವಾಗಿದ್ದರೂ ವಾಸ್ತವಿಕತೆಗೆ ಕನ್ನಡಿ ಹಿಡಿವಂತಿದೆ.
ಹಾಂ... ಈ ಸಲದ ನಿಮ್ಮ ಕೊನೆಯ ಖಿಡಿ ಕೂಡ ತುಂಬಾ ಇಷ್ಟವಾಯಿತು.
ಚುಕ್ಕಿಚಿತ್ತಾರ,
ನಿಮ್ಮ ಉಪಯುಕ್ತ ಸಲಹೆ ನನ್ನ ಮುಂದಿನ ಕತೆಗಳಿಗೆ ಸಹಾಯವಾಗಲಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಸವಿಗನಸು,
ಪರೋಪಕಾರಕ್ಕೇ ಅಲ್ಲವೇ ಈ ಶರೀರವಿರುವುದು !. ಖಿಡಿ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಮಂಜುನಾಥರೆ,
ನನ್ನ ಕತೆ, ನಿಮ್ಮ ಪ್ರತಿಕ್ರಿಯೆಯಿಂದ ಪೂರ್ಣರೂಪ ಪಡೆಸುಕೊಂಡಿತು !. ಹೂತಿದ್ದ ಹೆಣ ತೆಗೆಯದಿದ್ದರೂ ಮಳೆ ಬಂದಿತಲ್ಲ, ಪ್ರಕೃತಿಗೂ , ಮನುಷ್ಯರ ಆಲೋಚನೆಗೂ ಹೋಲಿಸಲು ಸಾಧ್ಯವೆ ?. ಸತೀಶನ ನಿಜವಾದ ಬಣ್ಣ ಬಯಲಾದುದು ಮಳೆ ಬಂದ ನಂತರವೆ.
ಕತೆಯನ್ನು ವಿಶಿಷ್ಟವಾಗಿ ಗ್ರಹಿಸಿದ ನಿಮಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಎಂದೂ ಇರಲಿ.
ಕಾಕಾಶ್ರೀ,
ಪ್ರತಿಬಾರಿಯೂ ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆ ನನಗೆ ಬೇಕು, ಆದರೆ ಈ ಬಾರಿ ನಿಜಕ್ಕೂ ನಿಮ್ಮ ಪ್ರತಿಕ್ರಿಯೆಯೆ ನಿರೀಕ್ಷೆಯಲ್ಲೇ ಇದ್ದೆ. ಕತೆಯನ್ನು ಅರ್ಥೈಸಿ , ಪ್ರೋತ್ಸಾಹಕ ಮಾತುಗಳನ್ನು ಬರೆದು ಬೆನ್ನು ತಟ್ಟಿದಿರಿ. ತುಂಬಾ ಧನ್ಯವಾದಗಳು.
ಜನಗಳು ತಮ್ಮ ಅವಶ್ಯಕತೆಗಳು ನೆರವೇರದಿದ್ದಾಗಲೇ ಸಲ್ಲದ ಆಲೋಚನೆಗಳಿಗೆ, ನಂಬಿಕೆಗಳಿಗೆ ಮೊರೆಹೋಗುವುದು. ಎಲ್ಲವೂ ಸುಸೂತ್ರವಾಗಿದ್ದುಬಿಟ್ಟಿದ್ದರೆ, ದೇವರನ್ನೂ ಮರೆತುಬಿಡುತ್ತಿದ್ದರೇನೋ ?
ಧನ್ಯವಾದಗಳು.
June 21, 201
ತೇಜಸ್ವಿನಿಯವರೆ,
ಕತೆಯ ಮೌಲ್ಯವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತೋಷವಾಯಿತು.
ಅಂದಹಾಗೆ...ಖಿಡಿ ಮೆಚ್ಚಿದ್ದಕ್ಕೆ ವಿಶೇಷ ಧನ್ಯವಾದಗಳು :).
ಸುಬ್ರಮಣ್ಯ ಸರ್,
ಕಥೆ ಕಟ್ಟಿದ ರೀತಿ, ಅದರ ಆಳ, ಪಾತ್ರದ ಗಾತ್ರ ಮತ್ತು ಮೂಡನಂಬಿಕೆ ಬಗ್ಗೆ ಬರೆದ ರೀತಿ ತುಂಬಾ ಇಷ್ಟ ಆಯ್ತು ಸರ್....... ಯಾವ ವಿಷಯವನ್ನೂ ಮೆರೆಸಲು ಹೋಗಿಲ್ಲ, ಕಥೆಯ ಸಾರದ ಸುತ್ತ ಮುತ್ತಲೇ ಬರೆದಿದ್ದೀರಿ..... ಕೊನೆ ಖಿಡಿಸೂಪರ್...........
idu kathe alla sir.. nija jeevanadalli nadeyode heege..
nice writeup...
last punch channagide..
ಸುಬ್ರಮಣ್ಯರವರೆ,
ಒಳ್ಳೆಯ ಕಥೆಯನ್ನು ತಿಳಿಸಿದ್ದೀರಿ, ಮೂಡನಂಬಿಕೆ ದೂರ ಮಾಡಲೇ ಬೇಕು.... ಧನ್ಯವಾದಗಳು
ದಿನಕರ್ ಸರ್,
ಮಳೆಯಂತಹ ಕ್ರಾಂತಿಯೊಂದು ನಮ್ಮಲ್ಲಿರುವ ಕೆಲವು ಅನಾಚಾರಗಳನ್ನು ತೊಡೆದುಹಾಕಬೇಕಿದೆ ಅಲ್ಲವೆ ?
ನಿಮ್ಮ ಸ್ಪಂದನೆಗೆ ವಂದನೆಗಳು.
ಶಿವಪ್ರಕಾಶ್,
ನಿಮ್ಮ ಮಾತು ನಿಜ. ಇಂತಹ ಘಟನೆಗಳು ಗ್ರಾಮಗಳಲ್ಲಿ ಕಂಡುಬರುತ್ತವೆ. ಮುಖ್ಯವಾಗಿ, ಅರಿವು ಮೂಡಬೇಕಿದೆ.
ಧನ್ಯವಾದಗಳು.
ಮನಸು,
ನಿಮ್ಮ ಪ್ರೋತ್ಸಾಹ ಹಾಗು ಸ್ಪಂದನೆಗೆ ಧನ್ಯವಾದಗಳು.
ಅದ್ಭುತವಾದ ಕಥೆ, ಕಥಾಶೈಲಿ, ವಸ್ತು, ಭಾಷೆ, ಮತ್ತು ತ೦ತ್ರ. ನಮಗೆ ಕಾಣಸಿಗುವ ಸುತ್ತಲಿನ ಮೌಢ್ಯಗಲಲ್ಲಿ ಜೋಡಿಸಿ ಹೆಣೆದ ಕಥೆಯ ಕಾಲ್ಪನಿಕ ಅ೦ತ್ಯಮೌಢ್ಯರ ಕಣ್ಣು ತೆರೆಸುವ೦ತಿದೆ.
ಶ೦ಭಣ್ಣನ ಖಿಡಿ ಸಕತ್ ಆಗಿದೆ. ಧನ್ಯವಾದಗಳು.
ಸೀತಾರಮರೆ,
ಕೆಲವು ಹೈಟೆಕ್ ಮೌಢ್ಯಗಳು ಇಂದು ನಗರಗಳನ್ನು ವ್ವ್ಯಾಪಿಸಿಕೊಂಡಿದೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಸ್ವಹಿತಾಸಕ್ತಿಯ ವಿಷಯ ಬಂದಾಗ ಮೂಢರಾಗುತ್ತಾರೆ.
ನಿಮ್ಮ ಎಂದಿನ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಕತೆ ಬಹಳ ಚೆನ್ನಾಗಿದೆ ಶಂಭುಲಿಂಗ ಅವರೇ. ಮೂಢನಂಬಿಕೆಗಳು ಎಷ್ಟು ಹಾಸುಹೊಕಾಗಿದೆ ಅಲ್ಲ ನಮ್ಮ ಸಮಾಜದಲ್ಲಿ,, ಒಂದು ಅವಿಭಾಜ್ಯ ಅಂಗದಂತೆ.
kathe tumba chennagide sir..kone kidi ista aithu :)
ಸಾಗರಿ,
ವಿಶಾಲ ಮನೋಭಾವ ಮತ್ತು ಧರ್ಮಾಧರ್ಮಗಳ ವಿವೇಚನೆಯಿಲ್ಲದ ಜನ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದರ ಜೊತೆಗೆ ತಾವೂ ಹಾಳಾಗಿಹೋಗುತ್ತಾರೆ ಅಲ್ಲವೆ ?
ನಿಮ್ಮ ಸ್ಪಂದನೆಗೆ ವಂದನೆಗಳು.
ಸ್ನೋವೈಟ್,
ನಿಮ್ಮ ಮೆಚ್ಚುಗೆಗೆ ತುಂಬ ಧನ್ಯವಾದಗಳು.
ಯೋಚನಾರ್ಹ ಕತೆ.
ಮೂಢ ನಂಬಿಕೆಗಳು ನಮ್ಮಿಂದ ದೂರವಾಗುವವರೆಗೂ ಇಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಜಾತಿಗಾಗಿ ಹೋರಾಡಿದರೂ ಕೊನೆಗೆ ನಾವೆಲ್ಲಾ ಒಂದೇ ಮಣ್ಣಿಗೆ ಸೇರುವ ಸತ್ಯ ಯಾರಿಗೂ ತಿಳಿದಿಲ್ಲವೇ?
ಪ್ರಕೃತಿ ಎಲ್ಲಾ ಸಮಸ್ಯೆಗಳನ್ನು ಕಳೆಯುತ್ತದೆನ್ನುವ ಸತ್ಯ ನಿಮ್ಮ ಕತೆಯಲ್ಲಿ ತೋರಿಸಿದ್ದೀರಾ......
ಎಂದಿನಂತೆ ಕೊನೆ ಖಿಡಿ super......
ಪ್ರವೀಣ್ ಅವರೆ,
" ಸತ್ತಮೇಲೆ ಸಮನಾದಾರೂ " ಎಂಬ ಗೀತೆಯಂತೂ ಇದೆ. ಸತ್ತರೂ ಬಿಡದ ಈ ’ಭೂತ’ವನ್ನು ಪ್ರಕೃತಿಯೇ ಹೊಡೆದೋಡಿಸಬೇಕೆನಿಸುತ್ತದೆ. ಧನ್ಯವಾದಗಳು.
ಕಥೆ ಚೆನ್ನಾಗಿದೆ, ಕಥೆಯ ಹೆಣೆಗಾರಿಕೆ ಮತ್ತು ಹೊಣೆಗಾರಿಕೆ ಎರಡೂ ಖುಷಿಪಡಿಸಿತು. ಗ್ರಾಮೀಣ ಸೊಗಡಿರದ ಜನರ ಬದುಕೇ ಒಂಥರ, ಅದನ್ನೂ ಅರಿತವರ ಜೀವನ ಇನ್ನೊಂಥರ, ಈ ಎರಡರ ನಡುವೆ ಶಂಭುಲಿಂಗ ಕಿಡಿ ಹಾರಿಸುವುದು ಮತ್ತೊಂಥರ-ಸುಂದರ, ಬೆಳೆಯಿರಿ ಆಗಸದೆತ್ತರಕ್ಕೆ, ಬೆಳಗಿರಿ ದೀವಿಗೆಯನ್ನು ಕನ್ನಡ ಮಾತೆಗೆ, ಧನ್ಯವಾದಗಳು
ವ್ಹಿ.ಆರ್. ಭಟ್ಟರೆ,
ನಿಮ್ಮ ಅಭಿಮಾನಪೂರ್ವಕ ಪ್ರೋತ್ಸಾಹದ ನುಡಿಗಳಿಗೆ ನಾನು ಆಭಾರಿ. ಕನ್ನಡಮ್ಮನ ಸೇವಕರಲ್ಲಿ ನಾನೂ ಒಬ್ಬನಷ್ಟೆ. ನಿಮ್ಮ ಹಾರೈಕೆ ಇನ್ನಷ್ಟು ಸ್ಪೂರ್ತಿ ಕೊಡುತ್ತದೆ. ಕತೆಯನ್ನು ಮೆಚ್ಚಿ ಸ್ಪಂದಿಸಿದ ನಿಮಗೆ ಧನ್ಯವಾದಗಳು.
ಕಥೆ ತುಂಬಾ ಚೆನ್ನಾಗಿದೆ. ಹೊಸ 'ಖಿಡಿ' ಮಸ್ತ್ ಇದೆ.
ನಿಮ್ಮವ,
ರಾಘು.
ರಾಘು,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.
Subrahmanya ,
ಚೆನ್ನಾಗಿದೆ..
ಒಂದ್ ವಿಸ್ಯ: ನಮ್ಮೂರ್ನಗೂ ತೊನ್ನ್ ಇರೋರ್ ಒಬ್ರನ್ನ ಹೂತಾಕಿದ್ರು.. ಮಳೆ ಬರ್ಲಿಲ್ಲ.. ಹಾಗಂತ ಅವ್ರು ಆ ಹೆಣನ ಮತ್ತೆ ತೆಗದು ಸುಟ್ಟು ಹಾಕಿದರು.. ಆಮೇಲೆ ಬಂತು ಮಳೆ.. ಆ ಹೆಣ ಹೊರತೆಗೆದಾಗ ಉಗುರುಗಳು ತುಂಬಾ ಉದ್ದ ಬೆಳೆದಿದ್ದವು..
ಅದಕ್ಕಾಗಿ ತೊನ್ನ್ ಇರೋರ್ನ ಹೂಳಲ್ಲ.. ಆದ್ರೆ 'ಗುರುಭಜನೆ' ತೆಗೆದು ಕೊಂಡಿರೋರ್ನ ಸುಡ್ಬಾರ್ದು ಅಂತ ಜಾಸ್ತಿ ಉಪ್ಪು ಹಾಕಿ ಹೂತಾಕ್ತರೆ..
ಕೊನೆ ಖಿಡಿ ಸೂಪರ್ರ್..
ಜ್ಞಾನಾರ್ಪಣಮಸ್ತು,
ಕಾಗೆ ಕೂರಕ್ಕೂ ಕೊಂಬೆ ಮುರ್ಯಕ್ಕೂ ಒಂದೇ ಆದಂಗಾತು ನೀವ್ ಯೋಳಿದ್ದು. ತೊನ್ ಅಂಬೋದು A type of skinಉ ಅಂತ ಇಜ್ಞಾನಿಗಳು ತುಂಬ ಪುರ್ಸತ್ ಮಾಡ್ಕ್ಯಂಡು ಕಂಡುಹಿಡದವ್ರೆ..ಓಕ್ಕಳ್ಳಿ ಬುಡಿ !. ’ಗುರುಭಜನೆ’ ಬಗ್ಗೆ ನಂಗೆ ಗೊತ್ತಿಲ್ರಾ..ವಸಿ ಬುಡ್ಸ್ ಏಳುದ್ರೆ ಅರ್ಥ ಆಗ್ಬೋದು....
ತೊನ್ ಬಗ್ಗೆ ಇಲ್ಲೊಂದಷ್ಟು ಡಾಕುಟ್ರು ಯೋಳಿರೊದು ಐತೆ...ಪುರ್ಸೊತ್ ಮಾಡ್ಕ್ಯಂಡು ಓದ್ಕಳಿ
http://www.kannadaprabha.com/NewsItems.asp?ID=KP820100511124705&Title=ArogyaPrabha&lTitle=A%C1%E6%E0%DEV%DA%C0%AE%DA%C3%BA%DA&Topic=0&ndate=5/12/2010&Dist=0
ಅಡ್ಬುದ್ದೆ...
ಸರ್,
ಕತೆ ಸೂಪರ್ ಆಗಿದೆ. ಮೂಡನಂಬಿಕೆಯ ವಿಚಾರದಲ್ಲಿ ನೀವು ಬರೆದಿರುವ ಶೈಲಿ ಇಷ್ಟವಾಗುತ್ತದೆ. ಕೊನೆ ಖಿಡಿಯಲ್ಲಿ ಶಂಭುವಿನ ಉಪಕಾರ ಚೆನ್ನಾಗಿದೆ.
ಶಿವು ಸರ್,
ಬಿಡುವು ಮಾಡಿಕೊಂಡು ಬಂದು ಸ್ಪಂದಿಸಿದ ನಿಮಗೆ ನನ್ನ ಧನ್ಯವಾದಗಳು.
ಕಥೆಯ ನಿರೂಪಣೆ ಇಷ್ಟವಾಯಿತು. ಕೊನೆಯ ಖಿಡಿ ಸಕ್ಕತ್...
ಶ್ಯಾಮಲ
ಶ್ಯಾಮಲ ಅವರೆ,
ಧನ್ಯವಾದಗಳು.
Nice story Subrahmanya ,
ishta aaytu... :-)
ದಿವ್ಯಾ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.
ಕಥೆಯ ಶೈಲಿ,ಸಾರಸ್ಯಕರವಾದ ವರ್ಣನೆ,ಹಿಡಿಸಿತು.
ಮನಮುಕ್ತಾ,
ಬಹಳ ದಿನಗಳ ನಂತರ ಬಂದರೂ ಮರೆಯದೆ ನನ್ನ ತಾಣಕ್ಕೆ ಬಂದ ನಿಮಗೆ ಧನ್ಯವಾದಗಳು.
ಸುಬ್ರಮಣ್ಯರೇ...ಕಥೆ ಬಹಳ ವೈಚಾರಿಕ,,,ಚನ್ನಾಗಿ ಮೂಡಿದೆ.... ತೊನ್ನು ರೋಗವಲ್ಲ ಅಂಟುರೋಗವಂತೂ ಅಲ್ಲ....ಮೌಢ್ಯಗಳಿಗೆ ಈಗಲೂ ಹಳ್ಳಿಗಾಡಿನ ಜನ ಇನ್ನೂ ಬಲಿಯಾಗುತ್ತಿರುವುದು ವಿಶಾದನೀಯ.....ಸುಬ್ರಮಣ್ಯ....ಖೊನೆ ಖಿಡಿ...? ಏನಿದು..ನನಗೆ ಅರ್ಥವಾಗಲಿಲ್ಲ....ಕೊನೆ ಕಿಡಿ...ಹತ್ತಿ ಉರಿದಾದ ಮೇಲೆ ಮತ್ತೊಮ್ಮೆ ಜಗಜಗಿಸೋ ಕಿಡಿಯೇ...? ಅಂತೂ ಆ ಸಾಲುಗಳು ನಿಮ್ಮ ಲೇಖನಕ್ಕೆ ಹೊಸ ದಿಕ್ಕನ್ನು ಕೊಟ್ಟಿವೆ.
ಜಲನಯನ,
ಕಥೆಯ ಅಂತರಾಳವನ್ನು ಗ್ರಹಿಸುವುದು ಓದುಗನಿಗೇ ಬಿಟ್ಟದ್ದು ಅಲ್ಲವೇ ?. ನಿಮ್ಮ ಅಭಿಪ್ರಾಯಗಳು ಸರಿಯಾಗಿವೆ ಅನ್ನಿಸಿತು ನನಗೆ.
ಇನ್ನು ಕೊನೆಕಿಡಿ..ಖೊನೆಖಿಡಿಯಾಗಿರುವುದು ಸುಮ್ಮನೆ ಹಾಸ್ಯಕ್ಕಾಗಿ ಅಷ್ಟೆ.
ನಿಮ್ಮ ಸ್ಪಂದನೆಗೆ ಅನೇಕ ವಂದನೆಗಳು.
Subrahmanya,
ಕಥೆ ಚೆನ್ನಾಗಿ ಮೂಡಿ ಬಂದಿದೆ...
ಹಾಗೇ ಇಷ್ಟೊಂದು ದೊಡ್ಡ ಪೋಸ್ಟನ್ನು, ಚೂರೂ ತಪ್ಪದೆ ಟೈಪ್ ಮಾಡಿದ ನಿಮ್ಮ patienceಗೆ ಮೆಚ್ಚಲೇ ಬೇಕು.. :) good ...
ದಿವ್ಯಾ,
ನಾನು ಬರೆದುದಕ್ಕಿಂತಲೂ, ತಾಳ್ಮೆಯಿಂದ ಒದಿದ ನಿಮಗೇ ನಾನು ಧನ್ಯವಾದವನ್ನು ಹೇಳಬೇಕು. ನಿಮ್ಮಂತಹ ಓದುಗರಿಂದ ಸಿಗುವ ಇಂತಹ ಪ್ರೋತ್ಸಾಹಕ ನುಡಿಗಳಿಗಿಂತ ಬೇರೇನು ಬೇಕಿದೆ ?.
Post a Comment