Jul 21, 2010

ಆಹಾ ! ನೋಡದೊ ಹೊನ್ನಿನ ಜಿಂಕೆ ...

ಅದೊಂದು ಬಸ್ಸು. ಆ ಬಸ್ಸಿಗೆ ಬಾಗಿಲುಗಳಿರಲಿಲ್ಲ. ಬಸ್ಸೇ ಬಿರಿದು ಸಿಡಿದು ಹೋಗುವಂತೆ ಜನ ಅದರೊಳಗೆ ತುರುಕಿಕೊಂಡಿದ್ದರು. ಹಳ್ಳ-ಗುಂಡಿಗಳಿಂದ ಕೂಡಿದ್ದ ’ರಸ್ತೆ’ ಎನ್ನುವುದರ ಮೇಲೆ ಆ ’ಬಸ್ಸು’ ನಿಧಾನವಾಗಿ ಚಲಿಸುತ್ತಿತ್ತು. ಅದು express ಬಸ್ಸು. ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ನಾನಾ ಸ್ಟಾಪುಗಳು. ಒಂದೊಂದು ಸ್ಟಾಪಿನಲ್ಲೂ ಹತ್ತರಿಂದ ಹದಿನೈದು ನಿಮಿಷಗಳ ಕಮರ್ಷಿಯಲ್ ಬ್ರೇಕ್ !. ಡಯಾಬಿಟಿಸ್ ಇದ್ದು, ಹದಿನೈದು ನಿಮಿಷಕ್ಕೊಮ್ಮೆ ಮೂತ್ರವಿಸರ್ಜನೆ ಮಾಡಲೇಬೇಕಾದವರಿಗೆ ’ಈ’ ಬಸ್ಸು ಹೇಳಿ ಮಾಡಿಸಿದಂತಿತ್ತು. ತಾವು ಇಳಿಯಬೇಕಾಗಿರುವ ಸ್ಥಳ ಬಂದರೂ, ಸೀಟು ಬಿಟ್ಟು ಏಳಲೊಲ್ಲೆ ಎಂಬ ಮನೋಭಾವದಲ್ಲಿ ಅಂಟಿಕೊಂಡು ಕುಳಿತಿರುತ್ತಿದ್ದ ಜನರನ್ನು ಕಂಡಕ್ಟರನೇ ಕರೆದು ’ಎಬ್ಬಿಸಿ’ ಕೆಳಗೆ ಇಳಿಸಬೇಕಿತ್ತು. ಇಂತಹ ಅಪೂರ್ವವಾದ ಬಸ್ಸಿನಲ್ಲೇ ’ಗೋಪಾಲಯ್ಯ’ ಮತ್ತು ’ಚಿರಂತ’ ಪ್ರಯಾಣಿಸಲೇಬೇಕಾದ ಸಂದರ್ಭ ಒದಗಿ ಬಂದಿತ್ತು. ಬೆಂಗಳೂರಿನಿಂದ ಸಂಗಮೇಶ್ವರ ಪೇಟೆಯ ತನಕ ಸುಮಾರು ೩೦೦ ಕಿ.ಮೀ ದೂರವನ್ನು ನಿರಾಳವಾಗಿ ಕ್ರಮಿಸಿದ್ದ ಚಿರಂತನಿಗೆ , ಮುಂದಿನ ೨೦ ಕಿ.ಮೀ. ದೂರದ ’ಮಾರ್ಕಂಡೇಯ ಪುರವನ್ನು ತಲುಪುವುದು ಪ್ರಯಾಸದ ಪ್ರಯಾಣವಾಗಿತ್ತು. ಸಂಗಮೇಶ್ವರ ಪೇಟೆಯಲ್ಲಿಳಿದು ಇನ್ನೊಂದು ಸರ್ಕಾರಿ ಬಸ್ಸು ಹಿಡಿದು ಮಾರ್ಕಂಡೇಯ ಪುರವನ್ನು ತಲುಪಬೇಕಿತ್ತು. ಹಾಗೆಯೇ, ಆಶ್ಚರ್ಯವೆಂಬಂತೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದ ಬಸ್ಸೊಂದನ್ನು ಹತ್ತಿದ ಗೋಪಾಲಯ್ಯ ಮತ್ತು ಚಿರಂತ, ಮಾರ್ಕಂಡೇಯ ಪುರಕ್ಕೆ ಎರಡು ಟಿಕೀಟುಗಳನ್ನು ಪಡೆದುಕೊಂಡರು. ಟಿಕೀಟಿನ ಮುಖದ ಮೇಲೆ express ಎಂದಿದುದನ್ನು ನೋಡಿ ಚಿರಂತನಿಗೆ ರವಷ್ಟು ಸಂತೋಷವಾಗಿತ್ತು. ಬಸ್ಸು ಐದು ಕಿ.ಮೀ. ಕ್ರಮಿಸುವಷ್ಟರಲ್ಲಿ ಅವನ ಮುಖ ಹರಳೆಣ್ಣೆ ಕುಡಿದವರ ಮುಖದಂತಾಗಿತ್ತು. ಬೆಂಗಳೂರಿನಲ್ಲಿ ತನ್ನ ಐಶಾರಾಮಿ ಬೈಕಿನಲ್ಲಿ ಬುರ್ರೆಂದು ತಿರುಗಾಡಿಕೊಂಡಿದ್ದವನನ್ನು ದಿಢೀರೆಂದು ಎತ್ತಿನ ಬಂಡಿಯ ಮೇಲೆ ಕುಳ್ಳಿರಿಸಿ ’ನಡೆ ಮುಂದೆ’ ಎಂದರೆ ಹೇಗಾಗಬೇಕು !?.  ಗೋಪಾಲಯ್ಯನವರದು ಷಷ್ಟಬ್ದಿ ಪೂರೈಸಿದ್ದ ವಯಸ್ಸು. ಚಿರಂತನಿಗೆ ಈಗಷ್ಟೇ ವಿವಾಹದ ವಯಸ್ಸು. ಬೆಂಗಳೂರಿನ ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಯೊಗ್ಯ ಕೆಲಸ ಮಾಡಿಕೊಂಡಿರುವವನು. ತಮ್ಮ ವಯಸ್ಸು ಹಾಗೂ ಅನುಭವಕ್ಕೆ ತಕ್ಕಂತೆ ಗೋಪಾಲಯ್ಯ ಎಲ್ಲಿ ಬೇಕಾದರೂ ತಿರುಗಬಲ್ಲವರಾಗಿದ್ದರು. ಚಿರಂತನಿಗೆ ಅಂತಹ ಅನುಭವಗಳು ಕಡಿಮೆಯಿತ್ತು. ತಂದೆಯ ಮಾತಿಗೆ ಕಟ್ಟುಬಿದ್ದು ’ಹೆಣ್ಣು’ ನೋಡುವುದಕ್ಕೆ ಗೋಪಾಲಯ್ಯನವರೊಟ್ಟಿಗೆ ಚಿರಂತ ಮಾರ್ಕಂಡೇಯ ಪುರಕ್ಕೆ ಹೊರಟಿದ್ದು ಅವನ ಮಟ್ಟಿಗೆ ಒಂದು ಸಾಧನೆಯೆ !.  ’ಈಗಲೇ ಮದುವೆ ಬೇಡ’ ಎಂದು ಹಟ ಹಿಡಿದಿದ್ದ ಮಗನನ್ನು ಹಾಗೂ-ಹೀಗೂ ಓಲೈಸಿ , ತಮ್ಮ ಸ್ನೇಹಿತ ಗೋಪಾಲಯ್ಯನೊಟ್ಟಿಗೆ ಹೆಣ್ಣು ನೋಡಿಕೊಂಡು ಬರಲು ಕಳುಹಿಸಿದ್ದರು ಶ್ರೀನಿವಾಸರಾಯರು. ಗೋಪಾಲಯ್ಯನವರಿಗೂ ರಾಯರ ಬಗೆಗೆ ಅನನ್ಯ ಪ್ರೀತಿಯಿತ್ತು. ಅವರಿಬ್ಬರೂ ಬಾಲ್ಯದ ಗೆಳೆಯರು. ಅದೂ, ಚಡ್ಡಿ ಹಾಕಿಕೊಳ್ಳುವುದಕ್ಕೂ ಮುಂಚಿನಿಂದಲೆ !. ಅಂದಮೇಲೆ ರಾಯರ ಮಾತಿಗೆ ಗೋಪಾಲಯ್ಯ ಇಲ್ಲವೆಂದಾರೆ ?. ಹೊರಟಿತು ’ಸವಾರಿ’ ಮಾರ್ಕಂಡೇಯ ಪುರಕ್ಕೆ. ಬಹಳ ತ್ರಾಸದಾಯಕ ಪ್ರಯಾಣದ ನಂತರ ಇಬ್ಬರೂ ಮಾರ್ಕಂಡೇಯ ಪುರದಲ್ಲಿ ಬಂದಿಳಿದಾಗ ಮಧ್ಯಾಹ್ನ ೧೨ ಗಂಟೆಯಾಗಿತ್ತು. ಮುಂಗಾರಿನ ಮೋಡಗಳು ಬಿಸಿಲ ಝಳವನ್ನು ಕಡಿಮೆಗೊಳಿಸಿದ್ದರಿಂದ ಚಿರಂತನಿಗೆ ಒಂದಷ್ಟು ಸಮಾಧಾನವಾಯಿತು.

" ರೀ ಗೋಪಾಲಯ್ಯ, ಎಲ್ರೀ ಅವರ ಮನೆ ? "
ತಮ್ಮಷ್ಟಕ್ಕೆ ಅದೇನನ್ನೋ ಯೋಚಿಸುತ್ತಿದ್ದ ಗೋಪಾಲಯ್ಯ, ಚಿರಂತನ ಮಾತಿನಿಂದ ವಾಸ್ತವಕ್ಕೆ ಬಂದರು.
" ಇಲ್ಲೇ, ಇನ್ನು ಎರಡು ಕಿ.ಮೀ. ಇದೇ ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಬಿಟ್ಟರೆ ರಸ್ತೆ ಬದಿಯಲ್ಲಿ ಕಾಫಿ಼ ತೋಟವೊಂದು ಸಿಗುತ್ತೆ, ಅಲ್ಲೇ ಇರೋದು ಅವರ ಮನೆ "  ಇಷ್ಟು ಹೇಳಿ ಗೋಪಾಲಯ್ಯ ಸರಸರನೆ ಹೆಜ್ಜೆ ಹಾಕಲು ಶುರುವಾದರು.
" ಇಷ್ಟಾಗಿದ್ದಲ್ಲದೆ ಇನ್ನು ನೆಡೆದು ಬೇರೆ ಹೋಗಬೇಕೆನ್ರಿ, ಮೊದಲೆ ಹೇಳಿದ್ದರೆ ನಾನು ಖಂಡಿತ ಬರ್ತಿರಲಿಲ್ಲ " ಚಿರಂತ ತನ್ನ ಹೆಗಲಲ್ಲಿದ್ದ ಬ್ಯಾಗನ್ನು  ಕೆಳಗೆ ಬಿಸುಟು ನಿಂತ.
ಚಿರಂತನ ಬಳಲಿಕೆಯನ್ನು ಅರಿತ ಗೋಪಾಲಯ್ಯ ಸಾವಧಾನವಾಗಿ ಬ್ಯಾಗನ್ನು ಮತ್ತೆ ಅವನ ಹೆಗಲಿಗೇರಿಸಿದರು.
"ಹುಡುಗಿ ತುಂಬ ಒಳ್ಳೆಯವಳು ಚಿರಂತ. ಆಚಾರ-ವಿಚಾರ ತಿಳಿದುಕೊಂಡಿರುವವಳು. ಸಂಪ್ರದಾಯಸ್ತರ ಮನೆಯ ಹುಡುಗಿ. ಆಕೆಯ ತಂದೆ-ತಾಯಿ ನನಗೂ ಆತ್ಮೀಯರಾಗಬೇಕು. ನೀನೊಮ್ಮೆ ವಧುವನ್ನು ನೋಡಿದೆಯೆಂದರೆ, ’ಇಲ್ಲ’ ಅನ್ನೋ ಮಾತೆ ನಿನ್ನಿಂದ ಬರೋದಿಲ್ಲ. ನೀನು ಒಪ್ಪಿಕೊಂಡ ನಂತರ ಸಂಪ್ರದಾಯದಂತೆ ಹೆಣ್ಣು ನೋಡೋ ಶಾಸ್ತ್ರ ಮಾಡೊಣ. ಏನಂತಿಯಾ ? "
" ನಾನು ಒಪ್ಪಿದರೆ ಸಾಕೆನ್ರೀ, ಆ ಹುಡುಗಿನೂ ಒಪ್ಪಬೇಕಲ್ವಾ, ನನ್ನಂತಹ ಎಡಬಿಡಂಗಿಯನ್ನು ಆಕೆ ಒಪ್ಪಿಕೊಂಡರೆ ಅದು ಆಕೆಯ ದುರಾದೃಷ್ಟವಷ್ಟೆ. ಹೋಗಲಿ ಬಿಡಿ.., ಇದೇನ್ರೀ ಗೋಪಾಲಯ್ಯ , ಬರೀ ಕಾಡಿನ ತರಹ ಕಾಣ್ತಾ ಇದೆ. ಮನೆಗಳೇ ಇಲ್ವೇನ್ರೀ ಇಲ್ಲಿ !? " ತಾನು ನಡೆದುಕೊಂಡು ಬಂದ ಅರ್ಧ ಕಿ.ಮೀ. ದಾರಿಯಲ್ಲಿ ಮನೆಗಳನ್ನು ಕಾಣದೆ ಕೇವಲ ಮರ-ಗಿಡಗಳನ್ನು ಕಂಡ ಚಿರಂತನ ಪ್ರಶ್ನೆ ಸಹಜವೆನಿಸಿತು ಗೋಪಾಲಯ್ಯನವರಿಗೆ.
ಆತ್ಮೀಯತೆಯಿಂದ ಅವನ ಬೆನ್ನುತಟ್ಟಿದರು ಗೋಪಾಲಯ್ಯ.  " ಇದು ಕಾಡಿನ ದಾರಿಯೇ ರಾಜ !. ಕಾಡಿನ ಒಳಗೆ ತಮ್ಮದೇ ಒಂದು ಕಾಫಿ಼ತೋಟ ಮಾಡಿಕೊಂಡು, ಸ್ವಂತ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಮಾಡ್ತಾ ಇದ್ದಾರೆ ನಿನ್ನ ಭಾವೀ ಮಾವನವರು ! "
ಗೋಪಾಲಯ್ಯನವರ ಮಾತನ್ನು ಕೇಳಿ ಚಿರಂತನಿಗೆ ನಗೆಯುಕ್ಕಿತು. " ಅಲ್ರೀ, ನಾನಿನ್ನು ಯಾರನ್ನೂ ನೋಡಿಯೇ ಇಲ್ಲ. ಭೇಟಿಯೂ ಆಗಿಲ್ಲ. ಆಗಲೇ ಸಂಬಂಧ ಕಲ್ಪಿಸ್ತಾ ಇದೀರಲ್ರೀ.., ಏನೋ , ನಿಮ್ಮ ಜೊತೆ ಬರದೇ ಇದ್ರೆ ನಮ್ಮಪ್ಪ ನನಗೆ ’ಕ್ಲಾಸ್’ ತಗೋತಿದ್ರು..ಬೇಸರ ಪಟ್ಟುಕೊಳ್ತಾ ಇದ್ರು ಅನ್ನೋ ಒಂದೇ ಕಾರಣಕ್ಕೆ ನಿಮ್ಮ ಜೊತೆ ಬಂದಿದೀನಿ ಅಷ್ಟೆ. ನೀವು ಈಗಲೇ ಸಂಬಂಧ ಕಲ್ಪಿಸಬೇಡ್ರಿ.."
ಹೀಗೇ ಸಾಗಿತ್ತು ಮಾತಿನ ಲಹರಿ.  ಕ್ರಮಿಸುತ್ತಿದ್ದ ದೂರವೂ ಸಾಗಿತ್ತು.  ಹಾಗೆ ಸಾಗುತ್ತಲೆ ಇದ್ದ ಚಿರಂತನಿಗೆ ನಾಮ ಫಲಕವೊಂದು ಕಾಣಿಸಿತು.  "ಭದ್ರಾ ವನ್ಯಧಾಮ" ಎಂದು ಬರೆದಿದ್ದುದರ ಕೆಳಗೆ ದಪ್ಪಕ್ಷರಗಳಲ್ಲಿ "ಆನೆಗಳಿವೆ ಎಚ್ಚರಿಕೆ" ಎಂದು ಬರೆಯಲಾಗಿತ್ತು. ಚಿರಂತ ಬೋರ್ಡಿನತ್ತ ಗೋಪಾಲಯ್ಯನವರ ಗಮನವನ್ನು ಸೆಳೆದ,...
" ಗೋಪಾಲಯ್ಯ, "ಆನೆಗಳಿವೆ ಎಚ್ಚರಿಕೆ" ಅನ್ನೋದು symbollic ಇರಬಹುದೇನ್ರೀ ? " ಚಿರಂತ ನಗುತ್ತಾ ಕೇಳಿದ. ಗೋಪಾಲಯ್ಯನವರೂ ನಕ್ಕರು..
"ಹಾಗೇನಿಲ್ಲಪ್ಪಾ , ನಿನ್ನ ಭಾವೀ ಪತ್ನಿ ಶಾಖವಾಗಿದ್ದಾಳೆ. ಶರೀರ-ಶಾರೀರಗಳನ್ನು ಹಿತ-ಮಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ನಿನಗೆ ಆಕೆಯ ಶರೀರದ ಬಗೆಗೆ ಯಾವ ಆತಂಕವೂ ಬೇಡ ".
ಇನ್ನೂ ಹೆಚ್ಚು ಮಾತನಾಡಿದರೆ ಈಗಲೇ ಎಲ್ಲರೊಡನೆಯೂ ಸಂಬಂಧ ಕಲ್ಪಿಸಿಬಿಡುತ್ತಾರೆನ್ನುವ ಯೋಚನೆಯಲ್ಲಿ ಚಿರಂತ ಮಾತಿಗೆ ತಾತ್ಕಾಲಿಕ ವಿರಾಮವನ್ನಿಟ್ಟ. ಮುಂದಿನ ದಾರಿ ಮೌನವಾಗಿಯೇ ಸಾಗಿತು. ಕಾಡಿನದಾರಿ, ಹಸಿರಿನ ಪರಿಸರ , ನಿತ್ಯವೂ ಮಾಲಿನ್ಯದೊಳಗೇ ಸಂಚರಿಸುತ್ತಿದ್ದ ಚಿರಂತನ ಮನಸಿಗೆ ಹಿತವೆನಿಸತೊಡಗಿತು. ಅದೇ ಮಧುರಲಹರಿಯಲ್ಲಿರುವಾಗಲೇ ಗೋಪಾಲಯ್ಯ ’ಮನೆ’ ಬಂತೆಂದು ಎಚ್ಚರಿಸಿದರು. ಸುತ್ತಲೂ ’ಕಾಫಿ಼’ ಗಿಡಗಳು. ಗಿಡಗಳ ಮಧ್ಯೆ  ಹತ್ತಾಳೆತ್ತರದ ಮರಗಳು, ಮರಗಳನ್ನು  ತಬ್ಬಿಕೊಂಡು ಹಬ್ಬಿದ್ದ ಏಲಕ್ಕಿ, ಮೆಣಸು, ವೀಳ್ಯದೆಲೆಯ ಬಳ್ಳಿಗಳು , ಇಡೀ ಪರಿಸರ ಚಿರಂತನ ಮನಸನ್ನು ಹಿಡಿದಿಟ್ಟಿತು. ಇವುಗಳ ನಡುವೆ ದೊಡ್ಡದೇ ಎನ್ನಬಹುದಾದ ಮಂಗಳೂರು ಹೆಂಚಿನ ಮನೆ. ಹಾಗೇ ಮೈಮರೆತಿದ್ದ ಚಿರಂತನನ್ನು ಗೋಪಾಲಯ್ಯ ಮನೆಯೊಳಗೆ ಬರುವಂತೆ ಕರೆದರು. ’ಶೂ’ ಕಳಚಿಟ್ಟ ಚಿರಂತನ ಕೈಯಿಗೆ ಹೆಂಗಸೊಬ್ಬರು ನೀರಿತ್ತರು. ಕೈ-ಕಾಲು ತೊಳೆದುಕೊಂಡು ಮನೆಯ ಹಜಾರಕ್ಕೆ ಕಾಲಿಟ್ಟವನಿಗೆ ಯಾವುದೋ ಸಿನಿಮಾದಲ್ಲಿಯ ತೊಟ್ಟಿ ಮನೆಯನ್ನು ನೋಡಿದ ಅನುಭವವಾಯ್ತು. ಗೋಪಾಲಯ್ಯ ಅದಾಗಲೇ ಚಾಪೆಯ ಮೇಲೆ ತಳವೂರಿದ್ದರು. ಚಿರಂತ ಅವರ ಪಕ್ಕದಲ್ಲೇ ಕುಳಿತುಕೊಂಡ. ಕುಳಿತುಕೊಂಡಿದ್ದು ನೆಪವಷ್ಟೆ..ಅವನ ಕಣ್ಣು ಬೇರೇನನ್ನೋ ಹುಡುಕುತ್ತಿತ್ತು !.

(ಮುಂದುವರಿಸುತ್ತೇನೆ..)  
............................................................................

{ ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು,
ಎತ್ತಿಕೊಳಲು ಹೋದರದಕೆ ಕೋಪ ಬರುವುದು,
ಕೋಪ ಬಂದು ತನ್ನ ಮೈಯ ಪರಚಿಕೊಳುವುದು,
ಪರಚಿಕೊಂಡು ತನಗೆ ತಾನೇ ಅತ್ತುಬಿಡುವುದು . ಜಿ.ಪಿ.ಆರ್. }

(ಮೂರುವರೆ ತಿಂಗಳಿನ ನನ್ನ ಮಗನ ತುಂಟಾಟಗಳಿಂದಾಗಿ ಒಂದು ತಿಂಗಳಿನಿಂದ ನನ್ನ ಬ್ಲಾಗಿನಲ್ಲಿ ಏನೂ ಬರೆಯಲಾಗಿರಲಿಲ್ಲ. ಸದ್ಯಕ್ಕೆ ಕತೆಯೊಂದರ ಭಾಗವನ್ನು ಬರೆದಿದ್ದೇನೆ. ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ. ಎಂದಿನಂತೆ ಸ್ವೀಕರಿಸುವೆರೆಂದು ನಂಬಿದ್ದೇನೆ. )

****************************************************

ಕೊನೆಕಿಡಿ.

ಶಂಭುಲಿಂಗನಿಗೆ ಅಚಾನಕ್ಕಾಗಿ ಮಾತು ನಿಂತುಹೋಯಿತು. ವೈದ್ಯರನ್ನು ಕಾಣಲು ಒಡೋಡಿ ಹೋದ.
ಡಾಕ್ಟರೆದುರಿಗೆ ಇಟ್ಟಿದ್ದ ಹಾಳೆಯೊಂದರ ಮೇಲೆ ತನ್ನ ಸಮಸ್ಯೆಯನ್ನು ಬರೆದ. " ನನಗೆ ಮಾತು ನಿಂತು ಹೋಗಿದೆ " ಎಂದು.
ವೈದ್ಯ ಮಹಾಶಯರಿಗೆ ಅರ್ಥವಾಯಿತು. ಶಂಭುಲಿಂಗನನ್ನು ಪ್ರಶ್ನಿಸಿದರು..

" ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ನಿಮ್ಮ ಮಾತು ನಿಂತುಹೋಗಿರುವುದು ದೊಡ್ಡ ಸಮಸ್ಯೆಯೇನಲ್ಲ. ಇದನ್ನು ಖಂಡಿತ ಗುಣಪಡಿಸಬಹುದು. ಈಗ ಹೇಳಿ..ಅಂದಹಾಗೆ
 ಯಾವಾಗ ಹೀಗಾಯಿತು ನಿಮಗೆ...ಒಂದಷ್ಟು ನಿಮ್ಮ ಮಾತಿನಲ್ಲೇ ಹೇಳಿ..! "

 ಶಂಭುಲಿಂಗ ತನ್ನ  ಮುಂದಿದ್ದ ಮೇಜಿಗೆ ಹಣೆ ಚಚ್ಚಿಕೊಂಡ !!.

 ---------------------------------------------------------------------------------

                                                 ವಂದನೆಗಳೊಂದಿಗೆ...

27 comments:

shivu.k said...

ಸುಬ್ರಮಣ್ಯ ಸರ್,

ಕತೆ ಕುತೂಹಲವಾಗಿದೆ. ಅಷ್ಟರಲ್ಲೇ ಸ್ಟಾಪ್...ಮುಂದೇನು?

ಚುಕ್ಕಿಚಿತ್ತಾರ said...

nice.. and continue...

Narayan Bhat said...

ಕಥೆಯ ಈ ಮೊದಲ ಭಾಗವಂತೂ ಸ್ವಾರಸ್ಯಕರವಾಗಿದೆ..ಕ್ಲೈಮ್ಯಾಕ್ಸ್ ಹೇಗಿರಬಹುದೆಂಬ ಕುತೂಹಲ.

ಸೀತಾರಾಮ. ಕೆ. / SITARAM.K said...

ಕಥೆ ಚೆನ್ನಾಗಿದೆ. ಕುತೂಹಲಭರಿತವಾಗಿದೆ. ಮು೦ದಿನ ಭಾಗ ತಡ ಮಾಡಬೇಡಿ.. ಕಿಡಿ ಸುಪರ್ ಎ೦ದಿನ೦ತೆ...

sunaath said...

ಓಹೋ, ತಂದೆಯ ಕರ್ತವ್ಯಗಳನ್ನು ಪಾಲಿಸುತ್ತಾ ಇರೋದರಿಂದ, ಬ್ಲಾ^ಗಿನಲ್ಲಿ ಬರೆಯೋಕೆ ಆಗಲಿಲ್ಲ ಅನ್ನಿ!

ಕತೆಯನ್ನು ಸ್ವಾರಸ್ಯಪೂರ್ಣವಾಗಿ ಹೇಳ್ತಾ ಇದೀರಿ.ಮುಂದಿನ ಭಾಗಕ್ಕಾಗಿ ಕಾತುರದಿಂದ ಕಾಯ್ತಾ ಇದ್ದೀನಿ!

ತೇಜಸ್ವಿನಿ ಹೆಗಡೆ said...

ಸುಬ್ರಹ್ಮಣ್ಯ ಅವರೆ,

ತುಂಬಾ ದಿವಸಗಳಾಗಿದ್ದಕ್ಕೋ ಏನೊ... ಒಂದು ಉತ್ತಮ ಕಥೆಗೆ ನಾಂದಿ ಹಾಡಿದ್ದೀರಿ. ಪ್ರಾರಂಭ ತುಂಬಾ ಆಸಕ್ತಿಕರವಾಗಿದೆ.... ಕುತೂಹಲಘಟ್ಟದಲ್ಲೇ ನಿಲ್ಲಿಸಿದ್ದೀರಿ. ಪುಟ್ಟ ಪೋರನ ಆಟೋಟಗಳಲ್ಲಿ ಕೊನೆಯ ಕಂತನ್ನು ಮರೆತೀರಿ ಮತ್ತೆ... :) ಆದಷ್ಟು ಬೇಗ ಮುಂದಿನ ಭಾಗವೂ ಬರಲಿ...

ಶಿವಪ್ರಕಾಶ್ said...

ರಾಯರು ಬಂದರೂ ಮಾವನ ಮನೆಗೆ.... ಹ್ಹ ಹ್ಹ ಹ್ಹ... Whats Next....?

ಮನಮುಕ್ತಾ said...

ಸ್ವಾರಸ್ಯ ಕರವಾದ ಕಥೆ...ಬೇಗನೆ ಮು೦ದುವರೆಸಿ.

ಸವಿಗನಸು said...

ಕುತೂಹಲವಾಗಿ ಕಥೆ ಚೆನ್ನಾಗಿದೆ..... ಬೇಗ ಹುಡುಗಿಯನ್ನು ತೋರಿಸಿ ಚಿರಂತನಿಗೆ.....
ಎ೦ದಿನ೦ತೆ ಖಿಡಿ ಬೊಂಬಾಟ್....

Unknown said...

ಅಪ್ಪನಾಗಿದ್ದಕ್ಕೆ ಶುಭಾಶಯಗಳು.. ಕಥೆ ಬೇಗನೆ ಮುಂದುವರೆಸಿ.. ಶಂಭೋ ಶಂಕರ..:)

shridhar said...

ಸುಬ್ರಮಣ್ಯ ಸರ್,
ಕಥೆ ಚೆನಾಗಿದೆ .. ಕುತೂಹಲ ಘಟ್ಟ .. ಮುಂದಿನ ಭಾಗದಲ್ಲಿ ಇನ್ನು ಹೆಚ್ಚಿನ ನಿರೀಕ್ಷೆ ಇದೆ .
ಬೇಗ ಮುಂದುವರೆಸಿ.

ನಿಮ್ಮ ಪುಟ್ಟನ ಆಟೋಟಗಳು ತಮಗೆ ಇನ್ನಷ್ಟು ಬರೆಯಲು ಉತ್ತೇಜನವ ನೀಡಲಿ.

Manjunatha Kollegala said...

ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ express bus ಆಗಲ್ಲ ತಾನೆ?

ಕತೆ ತುಂಬಾ ಚೆನ್ನಾಗಿ ಬರುತ್ತಿದೆ. ಶೈಲಿ ಹಿಡಿಸಿತು. ಸ್ವಲ್ಪ ತೇಜಸ್ವಿಯವರನ್ನು ನೆನಪಿಗೆ ತಂದಿತು. ಅದು complimentಓ criticismಓ ನೀವೇ ನಿರ್ಧರಿಸಿ. ಆದರೆ ಕತೆ ಚೆನ್ನಾಗಿ ಬರುತ್ತಿದೆ. ಮುಂದುವರೆಸಿ

ಸುಮ said...

ಪ್ರಾರಂಭ ಚೆನ್ನಾಗಿದೆ....ಮುಂದುವರೆಸಿ.... ಪುಟ್ಟ ಪಾಪ ತನ್ನ ತುಂಟಾಟದಿಂದ ನಿಮಗಿನ್ನಷ್ಟು ಕಾಟಕೊಡಲಿ :)

Raghu said...

ಮುಂದುವರಿಸಿ...ಗುಡ್ ಸ್ಟಾರ್ಟ್...
ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು,
ಎತ್ತಿಕೊಳಲು ಹೋದರದಕೆ ಕೋಪ ಬರುವುದು,
ಕೋಪ ಬಂದು ತನ್ನ ಮೈಯ ಪರಚಿಕೊಳುವುದು,
ಪರಚಿಕೊಂಡು ತನಗೆ ತಾನೇ ಅತ್ತುಬಿಡುವುದು..ನೈಸ್ ಒನ್..
ನಿಮ್ಮವ,
ರಾಘು.

Subrahmanya said...

* ಶಿವು ಸರ್,

ಇದು ಸುಮ್ನೆ ಸ್ಟಾಪ್ !. ಬೇಗ ಬರ್ತೀನಿ.

*ಚುಕ್ಕಿ ಚಿತ್ತಾರ,

ಥ್ಯಾಂಕ್ಸು.

* ನಾರಾಯಣ ಭಟ್ಟರೆ,

ಕ್ಲೈಮ್ಯಾಕ್ಸ್ ವರೆಗೂ ಇದೇ ಕುತೂಹಲ ಉಳಿಸಿಕೊಳ್ಳಲು ಯತ್ನಿಸುತ್ತೇನೆ.

*ಸೀತಾರಾಮ ಗುರೂಜಿ,

ಬೇಗ ಬರೆಯುವೆ. ಕಿಡಿ ಮೆಚ್ಚಿದ್ದಕ್ಕೆ ಥ್ಯಾಂಕ್ಸು.

* ಕಾಕ,

ನಿಜ , ನಿಜ. ತಂದೆಯ ಕರ್ತವ್ಯಪಾಲನೆಯಲ್ಲಿ ನನ್ನ ಹೆಚ್ಚಿನ ಸಮಯ ಕಳೆಯಬೇಕಾಗಿದೆ.

ಬೇಗ ಬರೆಯುತ್ತೀನಿ .

* ತೇಜಸ್ವಿನಿ ಹೆಗಡೆ,

ಹೌದು ಅನ್ನಿಸುತ್ತೆ. :). ಖಂಡಿತ ಮರೆಯಲ್ಲ. ಬೇಗ ಮುಂದಿನ ಭಾಗ ಹಾಕ್ತೀನಿ.

*ಶಿವಪ್ರಕಾಶ್,

:). ಥ್ಯಾಂಕ್ಸ್. ಪುನಃ ಬನ್ನಿ.

*ಮನಮುಕ್ತಾ,

ಧನ್ಯವಾದ. ಮತ್ತೆ ಬನ್ನಿ.

*ಸವಿಗನಸು,

ಖಂಡಿತ ತೋರುಸ್ತೀನಿ ಬಾಸ್. ಇಲ್ಲಾಂದ್ರೆ ಕತೆ ಮುಂದುವರೆಯೋದು ಹೇಗೆ ? :).

*ಗೋರೆ,

ಥ್ಯಾಂಕ್ಯು. ಹರಹರಮಹಾದೇವ :).

*ಶ್ರೀಧರ್ ಸರ್,

ನಿಮ್ಮ ನೀರೀಕ್ಷೆಯನ್ನು ಹುಸಿಗೊಳಿಸಲಾರೆನೆಂಬ ನಂಬಿಕೆಯಿದೆ. ಪ್ರೋತ್ಸಾಕಹ್ಹೆ ಧನ್ಯವಾದಗಳು. ಮತ್ತೆ ಬನ್ನಿ.

Subrahmanya said...

* ಕೊಳ್ಳೆಗಾಲದವರೆ,

ಹಂಸಕ್ಷೀರನ್ಯಾಯದಂತೆ ಸ್ವೀಕರಿಸಲೆ ? :). ಎರಡನ್ನೂ ನಿಮ್ಮಿಂದ ಅಪೇಕ್ಷಿಸುತ್ತಲೇ ಇರುತ್ತೇನೆ. ಪ್ರಯತ್ನ ನನ್ನದು , ಫಲ ಆ "ಮಂಜುನಾಥ" ನಿಗೆ ಬಿಟ್ಟಿದೇನೆ. :).

ಬನ್ನಿ ಮತ್ತೆ.

Subrahmanya said...

* ಸುಮ ಅವರೆ,

ಧನ್ಯವಾದ. ನಿಮ್ಮ ಹಾರೈಕೆಯೇ ನನ್ನ ಮನಸಿನ ಅಂತರಾಳವೂ ಆಗಿದೆ :). ಪುನಃ ಬನ್ನಿ.

Subrahmanya said...

ರಾಘು,

ಆ ಕವನ ಜಿ.ಪಿ.ರಾಜರತ್ನಂ ಅವರದು. ನಾನು ಎರಡನೇ ತರಗತಿಯಲ್ಲಿದ್ದಾಗ ನನಗೆ ಆ ಪದ್ಯವಿತ್ತು. ನೆನಪಿನಿಂದ ಬರೆದಿದ್ದೇನೆ. ಧನ್ಯವಾದ ನಿಮಗೆ. ಮತ್ತೆ ಬನ್ನಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕತೆ ಕುತೂಹಲವಾಗಿದೆ.....????

ಸಾಗರಿ.. said...

ಶಂಭುಲಿಂಗ ಅವರೇ,
ಬಹಳ ದಿನದ ನಂತರ ತಮ್ಮ ಬ್ಲಾಗನ್ನು ಓದುವ ಅವಕಾಶ ದೊರಕಿದೆ, ಅಂಥಾದ್ರಲ್ಲಿ ಕತೆಯನ್ನು ಕುತೂಹಲಕಾರಿ ಘಟ್ಟದಲ್ಲಿ ನಿಲ್ಲಿಸುವುದೇ??? ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

ಮನದಾಳದಿಂದ............ said...

ಸುಬ್ರಮಣ್ಯ ಸರ್,
ನನಗೆ ತ್ರಿವೇಣಿಯವರ ಕಾದಂಬರಿ ಓದಲು ಶುರುಮಾಡಿದಂತೆ ಆಯಿತು..............
ಕತೆ ಪ್ರಾರಂಭದಲ್ಲೇ ಕುತೂಹಲಕಾರಿಯಾಗಿದೆ.
ಅಲ್ಲೇ ಒಂದು ಸಸ್ಪೆನ್ಸ್ ಇಟ್ರಲ್ಲಾ!
ಬೇಗ ಮುಂದುವರೆಸಿ, ಜೊತೆಗೇ ಮಗನ ತುಂಟಾಟದ ಮೋಜು ಅನುಭವಿಸಲು ಮರೆಯಬೇಡಿ!!!
ಕೊನೆ ಖಿಡಿ ಎಂದಿನಂತೆ ಖಿಡಿಯೇ.........!

V.R.BHAT said...

ಕಥೆ ಚೆನ್ನಾಗಿದೆ, ಕಿಡಿಹಾರಿಸಿ ಅಲ್ಲೆಲ್ಲೋ ಮೂಲೆಯಲ್ಲಡಗಿ ನಿಂತು ಮಜಾತೆಗೆದುಕೊಳ್ಳುವ ಪರಿ ಇಷ್ಟವಾಯ್ತು, ಧನ್ಯವಾದಗಳು

ಮನಸು said...

kathe tumba chennagide..... aa kone kidi ellinda hudukteeri neevu bhaLa chennagiruttave hahah...

maguvina jote samaya kaLedu naavu kaayuvante maadabedi...aadastu bega mundhina kathe barali....

nimmantaha barahagaararu nammondigiruvude kushi....

dhanyavadagaLu

AntharangadaMaathugalu said...

ಒಳ್ಳೇ ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿದ್ದೀರಿ. ಕಥೆ ತುಂಬಾ ಚೆನ್ನಾಗಿದೆ. ಬೇಗ ಮುಂದುವರೆಸಿ....

ಶ್ಯಾಮಲ

Subrahmanya said...

* ಕು.ಸು.ಮು.

ಧನ್ಯವಾದ ಸರ್.


*ಸಾಗರಿ,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

*ಪ್ರವೀಣ್ ಅವರೆ,

*ಮನಸು,

* ಶ್ಯಾಮಲ ಅವರೆ

ಮೂವರಿಗೂ ಧನ್ಯವಾದಗಳು. ಮತ್ತೆ ಬನ್ನಿ, ಬೇಗ ಬರೆಯುತ್ತೇನೆ.

ಮನಸಿನಮನೆಯವನು said...

Subrahmanya ,

ಕಥೆ ಚೆನ್ನಾಗಿದೆ.. ಮುಂದುವರೆಸಿ..
ನಿಮ್ಮ ಕೊನೆಖಿಡಿ ಸೂಪರ್.. ಅದೇ ರೀತಿಯ ಒಂದು ಸಂದೇಶ ಓದಿದ್ದು ಜ್ಞಾಪಕ..

Subrahmanya said...

ಕತ್ತಲೆಮನೆ,

ನಿಮ್ಮ ಮನಸಿನ ಮನೆಗೆ ಭೇಟಿಯಿತ್ತು ಬಂದೆ. ನಿಮ್ಮ ಮನೆ-ಮನಸ್ಸು ಬೆಳಕಿನಿಂದ ಕಂಗೊಳಿಸಲೆಂದು ಆಶಿಸುತ್ತೇನೆ.

ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ.

ಕಿಡಿಯಲ್ಲಿರುವ ಜೋಕನ್ನು ಎಂದೋ ಯಾರೋ ನನ್ನ ಮಿತ್ರನೊಬ್ಬ ಹೇಳಿದ್ದ ನೆನೆಪಿನಿಂದ ಬರೆದೆ. ನೀವೆಂದಂತೆ ಸಂದೇಶವೂ ಇರಬಹುದೇನೋ !.