Sep 29, 2010

ಕುಂಟಮ್ಮನ ಸೇತುವೆ

೧೮ ವರುಷಗಳ ಹಿಂದೆ ಅಂತಹ ಜಬರದಸ್ತಾದ ಮಳೆ ಸುರಿಯದೆ ಇದ್ದಿದ್ದರೆ ಇನ್ನೆಂದೂ ಆ ಕೆರೆ ತುಂಬುತ್ತಲೇ ಇರಲಿಲ್ಲವೇನೊ !. ದೊಡ್ಡಕೆರೆ ಎಂದರೆ ಅದು ಬರೀ ದೊಡ್ಡಕೆರೆಯಲ್ಲ, ಇಡೀ ಹಾಸನ ಜಿಲ್ಲೆಗೆ ಅತ್ಯಂತ ವಿಶಾಲವಾದ ಮತ್ತು ಬೃಹತ್ತಾದ ಕೆರೆ ಅದು. ಸಾವಿರ ಎಕರೆಗೂ ಮೀರಿ ಆವರಿಸಿದ್ದ ಕೆರೆಯ ಪಾತ್ರವನ್ನು ಅಕ್ರಮವಾಗಿ ಜಮೀನು ಮಾಡಿಕೊಂಡು  ೯೦೦ ಎಕರೆಗೆ ತಗ್ಗಿಸಿದ ಕೀರ್ತಿ  ’ಮಲ್ಲರ ಹಳ್ಳಿಯ ’ ಜನರಿಗೇ ಸಲ್ಲಬೇಕು. ಮಲ್ಲರಳ್ಳಿ ಎಂದರೆ , ಆ ಊರಿನ ಜನತೆಗೆ ಅದೇನೋ ವಿಚಿತ್ರ ಅಭಿಮಾನವಿತ್ತು. ರಾಜರುಗಳು ಆಳಿದ್ದ ಕಾಲದಲ್ಲಿ ಮಲ್ಲಯುದ್ದ ಪರಿಣತರು, ಜಗಜಟ್ಟಿಗಳೂ ವಾಸಿಸುತ್ತಿದ್ದ ಊರೆಂದು ಅಲ್ಲಿಯ ಜನ ತಾವು ಹೋದೆಡೆಯೆಲ್ಲಾ ಪರಾಕು ಹೊಡೆಯುತ್ತಿದ್ದರು. ತಾವೆಲ್ಲಾ ಅಂತಹ ಜಟ್ಟಿಗಳ ವಂಶಸ್ಥರೆಂದೇ ಅವರಲ್ಲಿ ಬಲವಾದ ನಂಬಿಕೆ ಬೇರೂರಿತ್ತು. ಆ ದೊಡ್ಡಕೆರೆಯ ಮಹಾತ್ಮೆಯನ್ನಂತೂ ಒಬ್ಬಬ್ಬೊರೂ ಒಂದೊಂದು ರೀತಿ ಬಣ್ಣ ಕಟ್ಟಿ ಹೇಳುವುದರಲ್ಲಿ ನಿಷ್ಣಾತರಾಗಿದ್ದರು. ಕೆಲವರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ ಕೆರೆಯೆಂದು ಬಣ್ಣಿಸಿದರೆ ಕೆಲವರು ’ಚ್ವಾಳ್ರು’ ಕಟ್ಟಿದ್ದೆಂದೂ ಹೇಳುತ್ತಿದ್ದರು. ಇನ್ನೂ ಕೆಲವರು ಅದು ತನಗೆ ತಾನೇ ಉದ್ಬವಿಸಿದ್ದೆಂದೂ ಹೇಳುತ್ತಾ ಆ ಕೆರೆಗೆ ಅನೇಕ ದೈವೀ ಶಕ್ತಿಗಳನ್ನು ಆರೋಪಿಸುತ್ತಿದ್ದರು. ೧೮ ವರುಷಗಳಿಗಿಂತಲೂ ಹಿಂದೆ ಹಲವು ವರುಷಗಳ ಕಾಲ ದೊಡ್ಡಕೆರೆ ತುಂಬದೆ ಹಾಳು ಬಂಜರು ನೆಲವಾಗಿ ಬಿದ್ದಿತ್ತು. ಆಗ ಹಳ್ಳಿಗರೆಲ್ಲಾ ಕೆರೆಗೆ ಯಾವುದೋ ದಯ್ಯವೋ, ದೇವರೋ ಶಾಪ ಕೊಟ್ಟಿರುವುದರಿಂದ ಬರಗಾಲ ಬಂದಿದೆಯೆಂದು ಪುಕಾರು ಹಬ್ಬಿಸಿಕೊಂಡು ಸುತ್ತೇಳು ಹಳ್ಳಿಗರನ್ನೆಲ್ಲಾ ಸೇರಿಸಿ ಹಾಳು ಕೆರೆಯಲ್ಲೇ ’ಪರ’ ಮಾಡಿ  ಪೊಗದಸ್ತಾಗಿ ತಿಂದುಂಡರು. ಅದರಲ್ಲೂ ಮುಖ್ಯವಾಗಿ ’ಪರ’ ಮಾಡಿದ ದಿವಸ ಕಳಸಾಪುರದ ಸುಬ್ಬಾಭಟ್ಟರ ನೇತೃತ್ವದಲ್ಲಿ ನೆಡೆದ ’ರುದ್ರ ಹೋಮ’ ವಂತೂ ಹಳ್ಳಿಗರಲ್ಲಿ ಯಥೇಚ್ಚವಾಗಿ ಭಯ-ಭಕ್ತಿಯನ್ನು ಉಂಟುಮಾಡಿತ್ತು. ಹಲವು ಬಾರಿ ಭಟ್ಟರು ಎದ್ದು ನಿಂತು ಆಕಾಶದ ಕಡೆ ಎರಡೂ ಕೈ ತೋರಿಸಿ "ಪರ್ಜನ್ಯಾsss" , "ವರುಣಾssss" ಎಂದು ಕಿರುಚಿದಾಗಲೆಲ್ಲಾ ಇನ್ನೇನು ಮಳೆ ಸುರಿದೇ ಹೋಯಿತೇನೋ ಎಂಬಂತೆ ಹಳ್ಳಿಗರೆಲ್ಲಾ ಆಕಾಶ ನೋಡಿದ್ದರು. ಎಲ್ಲರ ಅದೃಷ್ಟ ಖುಲಾಯಿಸಿತೆಂದೆ ಅನಿಸುತ್ತದೆ, ನಂತರದ ಮಳೆಗಾಲದಲ್ಲಿ ಸುರಿದ ಮಳೆ ದೊಡ್ಡಕೆರೆಗೆ ಒಂದಷ್ಟು ನೀರನ್ನೂ ಬಿಟ್ಟುಹೋಗಿತ್ತು. ಹದಿನೆಂಟು ವರುಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತುಂಬಿ ಹರಿದ ಕೆರೆ ಮತ್ತೆಂದೂ ಖಾಲಿಯಾಗಲೆ ಇಲ್ಲ. ಪ್ರತೀ ವರ್ಷವೂ ತುಂಬಿ ಹರಿಯುತ್ತಲೆ ಇರುತ್ತದೆ.  ಸುಬ್ಬಾಭಟ್ಟರೂ ಸೇರಿದಂತೆ ಕಾಳೇಗೌಡ, ರಂಗಶೆಟ್ಟಿ, ಹನುಮಯ್ಯ, ನಂಜುಡಪ್ಪ  ಇತ್ಯಾದಿಗಳೆಲ್ಲಾ ಈ ಹದಿನೆಂಟು ವರುಷಗಳ ಕಾಲಾವಧಿಯಲ್ಲಿ ಪರಲೋಕ ಸೇರಿದ್ದರೂ ಅವರ ಸಮಕಾಲೀನರಾಗಿದ್ದೂ ಜೀವಂತವಿದ್ದ ಕೆಲವೇ ಕೆಲವರಲ್ಲಿ ಮುಖ್ಯ ವ್ಯಕ್ತಿಯೆಂದರೆ ಮರಿಯಪ್ಪನೊಬ್ಬನೆ .
  ಮರಿಯಪ್ಪ ಮುಖ್ಯವ್ಯಕ್ತಿ ಎಂದೆನಿಸಿಕೊಳ್ಳಲು ಹಲವು ಕಾರಣಗಳು ಮಲ್ಲರಳ್ಳಿಯಲ್ಲಿ ಉದ್ಭವಿಸಿತು. ೧೮ ವರುಷಗಳ ಹಿಂದೆ ಮೊದಲ ಬಾರಿ ದೊಡ್ಡಕೆರೆಯು ತುಂಬಿ ಕೋಡಿಯಿಂದ ನೀರು ಎಗ್ಗಿಲ್ಲದೆ ಹರಿದು ಹೋಗುವಾಗ , ಅದರ ರಭಸಕ್ಕೆ ಹಳ್ಳದ ಪಾತ್ರದಲ್ಲಿ ’ಹಕ್ಕಿ-ಪಿಕ್ಕ’ರು ಕಟ್ಟಿಕೊಂಡಿದ್ದ ಗುಡಿಸಲುಗಳೂ ತೇಲಿಹೋಗಿದ್ದವು. ಹಕ್ಕಿ-ಪಿಕ್ಕರು ಒಂದೇ ಊರಿನಲ್ಲಿ ನೆಲೆಯೂರುವ ಜಾಯಮಾನದವರಲ್ಲದ ಕಾರಣ ಅವರಿಗೆ ಕೆರೆ ದಂಡೆಯ ಖಾಲಿ ಜಾಗವೇ ಗುಡಿಸಲು ಕಟ್ಟಿಕೊಳ್ಳಲು ಪ್ರಶಸ್ತವಾಗಿತ್ತು. ಗುಡಿಸಲು ತೇಲಿಹೋದ ನಂತರ ’ಹಕ್ಕಿ-ಪಿಕ್ಕ’ರು ಮಲ್ಲರಳ್ಳಿಯಿಂದ ಕಾಣೆಯಾದರು. ಹಳ್ಳಿಯ ಕೆಲವರು ಹಕ್ಕಿ-ಪಿಕ್ಕರು ಬೇರೆ ಊರಿಗೆ ಹೋದರೆಂದೂ , ಇನ್ನೂ ಕೆಲವರು ಹಳ್ಳದ ನೀರಿನ ಜೊತೆಗೆ ಕೊಚ್ಚಿ ಹೋದರೆಂದೂ ತಮ್ಮಷ್ಟಕ್ಕೆ ತಾವೆ ತರಹೇವಾರಿ ಮಾತನಾಡಿಕೊಂಡರು.ಹಳ್ಳದಲ್ಲಿ ಹರಿದು ಹೋಗುತ್ತಿದ್ದ ಕೆರೆಯ ನೀರು ಇನ್ನೊಂದು ರಾದ್ದಾಂತವನ್ನೇ ಸೃಜಿಸಿತು. ಮಲ್ಲರಳ್ಳಿಯ ಕೆರೆಯ ನೀರು ತುಂಬಿ ಹಳ್ಳದಲ್ಲಿ ಹರಿಯಿತೆಂದರೆ ಆ ನೀರು ಅದೇ ಹಳ್ಳದಲ್ಲಿ ಮುಂದುವರೆದು  ಕಟ್ಟೆಪುರದ ಕೆರೆಯನ್ನು ಸೇರಬೇಕಿತ್ತು. ರಾಜರುಗಳ ಕಾಲದಲ್ಲಿ ಹಳ್ಳವು ಹಾಗೇ ಹರಿಯುತ್ತಿತ್ತೆಂದೂ, ಆ ಹಳ್ಳದಲ್ಲಿ ದೈವಾಂಶ ಸಂಭೂತವಾದ ಮೀನೊಂದು ಇತ್ತೆಂದೂ ಹಳ್ಳಿಗರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಕಟ್ಟೆಪುರದ ಕೆರೆಗೆ  ರಭಸದಿಂದ ಹರಿದು ಹೋಗಬೇಕಿದ್ದ ಹಳ್ಳದ ನೀರು ಹಿಮ್ಮುಖವಾಗಿ ಹರಿದು ಬಂದು ಮಲ್ಲರಳ್ಳಿಯ ಕೆಲವು ಪ್ರಮುಖ ವ್ಯಕ್ತಿಗಳ ಮನೆಯೊಳಗೆ ಪ್ರವಾಹದಂತೆ ನುಗ್ಗಿದಾಗಲೇ ಹಳ್ಳಿಗರಿಗೆ ’ಸಮಸ್ಯೆ’ಯ ಗಂಭೀರತೆ ಅರಿವಾದುದು. ಮಲ್ಲರಳ್ಳಿಯಿಂದ ಕಟ್ಟೆಪುರಕ್ಕೆ ಬೆಸೆಯುವ  ೧೨ ಮೈಲುಗಳ ರಸ್ತೆಯೊಂದಿತ್ತು. ಮಲ್ಲರಳ್ಳಿಯ ಹೊರವಲಯದಲ್ಲಿ ಅದೇ ರಸ್ತೆಯ ಕೆಳಗೆ ತೂಬೊಂದನ್ನು ಇರಿಸಿ ಹಳ್ಳದ ನೀರು ಹರಿದುಹೋಗುವಂತೆ ಪುಟ್ಟ ಸೇತುವೆಯೊಂದನ್ನು ಹಿಂದೆಂದೊ ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ್ದರಂತೆ. ದೀರ್ಘಕಾಲದ ಅನಾವೃಷ್ಟಿಯ ಪರಿಣಾಮದಿಂದಾಗಿ ಆ ತೂಬು ಮಣ್ಣಿನಲ್ಲಿ ಮುಚ್ಚಿಹೋಗಿ ರಸ್ತೆಗೆ ಸಮವಾಗಿ ಎದ್ದುನಿಂತು ಅಲ್ಲೊಂದು ನೀರಿನ ಹರವು ಇದ್ದ ಸೇತುವೆ ಇತ್ತೆಂಬುದು ತಿಳಿಯಲಾಗದಷ್ಟು ಅಧ್ವಾನವೆದ್ದುಹೋಗಿತ್ತು. ಇಂತಹ ಸಂದರ್ಭದಲ್ಲೇ ಮರಿಯಪ್ಪ ತನ್ನ ಬುದ್ದಿವಂತಿಕೆಯನ್ನು ಮೆರೆದಿದ್ದು. ಹಳ್ಳಿಗರನ್ನೆಲ್ಲಾ ಒಟ್ಟಾಗಿ ಸೇರಿಸಿ ಪಂಚಾಯ್ತಿ ನೆಡೆಸಿ ತೂಬು ಸರಿಪಡಿಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಸೇತುವೆಯೊಂದನ್ನು ನಿರ್ಮಿಸುವ ಯೋಜನೆಯನ್ನು ಮರಿಯಪ್ಪನೇ ಪ್ರಚಾರ ಮಾಡಿದನು. ಹಳ್ಳಿಗರಿಗೆ ಮರಿಯಪ್ಪನ ಯೋಜನೆ ಸಮಂಜಸವೆನಿಸಿದರೂ ಇಂತಹ ಯೋಜನೆಗಳನ್ನು ಸರ್ಕಾರವೆ ಮಾಡಬೇಕೆಂದು ಕೆಲವು ಬುದ್ದಿವಂತರೆನಿಕೊಂಡಿದ್ದವರು ಆಕ್ಷೇಪಿಸಿದರು. ಮರಿಯಪ್ಪ ಅವರ ಆಕ್ಷೇಪಕ್ಕೆ ಸಕಾರಣವನ್ನೇ ನೀಡಿದನು. ಸರ್ಕಾರವನ್ನು ನಂಬಿ ಕುಳಿತರೆ ತಕ್ಷಣಕ್ಕೆ ಕೆಲಸವಾಗುವುದಿಲ್ಲವೆಂದು ವಿವರಿಸಿದನು.  ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನೆಡೆಸಿ ಮುಖ್ಯ ಇಂಜಿನಿಯರ್ರಿಗೆ ವರದಿ ನೀಡಿದ ನಂತರ ,  ಮುಖ್ಯ ಇಂಜಿನಿಯರರು ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಅಲ್ಲಿಂದ ಒಪ್ಪಿಗೆ ಪಡೆದು ಹಣವನ್ನು ಬಿಡುಗಡೆ ಮಾಡಿಸಿಕೊಂಡ ನಂತರವಷ್ಟೇ ಕೆಲಸ ಪ್ರಾರಂಭವಾಗಬಹುದೆಂದೂ, ಅಷ್ಟು ಕಾಲವಾಗುವುದರೊಳಗೆ ಇಡೀ ಮಲ್ಲರಹಳ್ಳಿಯೇ ಪ್ರವಾಹದಲ್ಲಿ ತೇಲಿಹೋಗಬಹುದೆಂಬ ಭೀತಿಯನ್ನೂ ಹುಟ್ಟಿಸಿದನು.  ಹೀಗೆ ಹುಟ್ಟಿದ ಭಯವೇ ಮಲ್ಲರಹಳ್ಳಿಯ ಎಲ್ಲಾ ಸೋಮಾರಿಗಳನ್ನೂ, ರೈತರನ್ನೂ, ಹೆಂಗಸರನ್ನೂ ಮತ್ತು ಹಾರುವರನ್ನೂ ಒಟ್ಟಾಗುವಂತೆ ಮಾಡಿದ್ದು. ಕರಸೇವೆಗೆ ಸಿದ್ದರಾದ ಹಳ್ಳಿಯ ಜನಕ್ಕೆ ಕೆಲಸ ಪ್ರಾರಂಭಿಸುವ ಮುನ್ನ ದೇವರ ಪೂಜೆಯಾಗಬೇಕಾದ್ದು ಅನಿವಾರ್ಯವಾಗಿತ್ತು. ’ಹಾಳೂರಿಗೆ ಉಳಿದವನೆ ಗೌಡ’ ಎಂಬಂತೆ ಮುಚ್ಚಿಹೋಗಿದ್ದ ಹಳೆಯ ಸೇತುವೆಯಿಂದ ಹತ್ತಡಿ ದೂರದಲ್ಲಿ ರಸ್ತೆಯ ಪಕ್ಕದಲ್ಲೇ ಪುಟ್ಟದಾದ ಹಾಳು ಗುಡಿಯೊಂದು ಹಳ್ಳಿಗರ ಕಣ್ಣಿಗೆ ಬಿದ್ದಿತು.
ಗುಡಿಯ ಮುಂದೆ ನೆರೆದ ಜನತೆ ಕುರುಬ ಜನಾಂಗದವನಾಗಿದ್ದ ಮರಿಯಪ್ಪನ ಮಗನನ್ನೇ ಪೂಜೆ ಮಾಡೆಂದು ಗುಡಿಯ ಒಳಗೆ ದೂಡಿದರು. ಆತ ಪರಿ-ಪರಿಯಾಗಿ ಒಲ್ಲೆನೆಂದರೂ ಅದನ್ನು ಲೆಕ್ಕಿಸದ ಹಳ್ಳಿಗರು ಅವನೇ ಪೂಜೆ ಮಾಡಬೇಕೆಂದು ಪಟ್ಟುಹಿಡಿದರು. ಒಳನುಗ್ಗಿದ್ದ ಮರಿಯಪ್ಪನ ಮಗನಿಗೆ ವರುಷಗಳಿಂದ ಸುಖವಾಗಿ ಜೀವಿಸುತ್ತಿದ್ದ ಜೇಡಗಳು, ಹಲ್ಲಿಗಳು, ಕಪ್ಪೆಗಳು ಇತ್ಯಾದಿಗಳನ್ನು ಹೊರಗೋಡಿಸಲು ಸಾಕು ಸಾಕಾಯಿತು. ಇದ್ದುದರಲ್ಲಿ ಸ್ವಚ್ಚಗೊಂಡ ಗುಡಿಯಲ್ಲಿ ಪೂಜೆ ಆರಂಭವಾಯಿತು. ಅದ್ಯಾರೋ ಒಬ್ಬರು ಬಿಂದಿಗೆಯಲ್ಲಿ ನೀರು ತಂದುಕೊಟ್ಟರು ಮತ್ತು ಆ ನೀರನ್ನು ಅವರ ಮುತ್ತಜ್ಜ ಕಾಶಿಯಿಂದ ತಂದಿದ್ದ ಗಂಗಾಜಲವೆಂದೇ ಸಾರಿದರು. ಗಂಗಾಭಿಷೇಕದ ನಂತರ ಮತ್ತೊಬ್ಬರು ತಂದಿದ್ದ ಊದುಬತ್ತಿ ಬೆಳಗಿ ಬಾಳೆಹಣ್ಣನ್ನೇ ಎಡೆಯಿಟ್ಟು ಕರ್ಪೂರ ಹಚ್ಚಲಾಯಿತು. ಕೆಲವರು ’ಮರಿ’ಯೊಂದನ್ನು ಕಡಿಯಲೇಬೇಕೆಂದು ಆಗ್ರಹಿಸಿದರೂ, ಮುಖ್ಯಸ್ಥರ ತೀರ್ಮಾನದಂತೆ ಬಾಳೆಹಣ್ಣಿನ ಎಡೆಯಲ್ಲೇ ಪೂಜೆ ನೆರವೇರಿತು. ಹಳ್ಳಿಗರು ತಂದಿದ್ದ ಗುದ್ದಲಿ, ಪಿಕಾಸಿ, ಹಾರೆ, ಮಚ್ಚು, ಬಾಣಲಿಗಳಿಗೂ ಪೂಜೆಯು ಸಂದಾಯವಾಯಿತು.

ಕೂತೂಹಲ ತಡೆಯಲಾರದೆ ಹಳ್ಳಿಗರಲ್ಲಿ ಒಬ್ಬನಾಗಿದ್ದ ಪುಟ್ಸಾಮಿ ಕೇಳಿಯೇ ಬಿಟ್ಟ " ಲೇ ಪೂಜಾರಿ, ಯಾವ್ ದೇವರ‍್ಲಾ ಒಳಗಿರೋದು " ಎಂದು.
ಮರಿಯಪ್ಪನ ಮಗನಿಗೆ ಅದೇನು ತಲೆಗೆ ತೋಚಿತೋ ಜೋರಾಗಿ ಕೂಗಿ ಹೇಳಿದ " ಕುಂಟಮ್ಮ ದ್ಯಾವ್ರು ಕಣ್ರಪಾ " ಎಂದು. ಪುಟ್ಸಾಮಿಗೆ ಅಶ್ಚರ್ಯವಾಯಿತೆಂದು ತೋರುತ್ತದೆ, ಆತನಿಗೆ ಕುಂಟಮ್ಮ ಎಂದರೆ ಯಾವ ದೇವರೆಂದು ಅರ್ಥವಾಗಲಿಲ್ಲ. ಪಕ್ಕದಲ್ಲಿದ್ದ ನಾಗಯ್ಯನನ್ನು ತಿವಿದು  " ಲೇ ನಾಗ, ಕುಂಟಮ್ಮ ಅಂದ್ರೆ ಯಾವ ದೇವರುಲಾ, ನಾನ್ ಕೇಳೇ ಇಲ್ಲಾ ಕಣಾಪಾ....ಈ ಪೂಜಾರಿ ಏನೋ ಸುಳ್ಳು ಏಳ್ತಾವ್ನೆ ಅನ್ಸುತ್ತೆ " ಎಂದು ಹೇಳಿದ. ನಾಗ ಪುಟ್ಸಾಮಿಯ ತಲೆಯ ಮೇಲೆ ಬಲವಾಗಿ ಕುಟ್ಟಿದ " ತಿಕಾ ಮುಚ್ಕಂಡು ಇರಕ್ಕೆನ್ಲಾ ನಿನಗೆ ! ಕುಂಟಮ್ಮ ಅಂದ್ರೆ ಕುಂಟಮ್ಮ ಅಷ್ಟೆಯಾ, ಅದ್ನೆಲ್ಲಾ ಬಿಡ್ಸ್ ಏಳಾಕಾಯ್ತದೆನ್ಲಾ, ಸುಮ್ಕೆ ಕೆಲ್ಸ ನೋಡವಾ ಬಾ " ಎಂದು ಉಗಿದ. ಅಷ್ಟು ವೇಳೆಗಾಗಲೆ ಪೂಜೆಯ ಕೆಲಸಗಳು ಮುಗಿದು ಎಲ್ಲರೂ ಹಳೆಯ ಸೇತುವೆಯ ಬಳಿಯಲ್ಲಿ ನೆರೆದಿದ್ದರು. ಈಗ ಕಟ್ಟಲಾಗುವ ಸೇತುವೆಗೆ "ಕುಂಟಮ್ಮನ ಸೇತುವೆ" ಎಂದು ಮರಿಯಪ್ಪ ನಾಮಕರಣ ಮಾಡಿದನು. ಕೆಲಸ ಪ್ರಾರಂಭವಾಯಿತು.

ಮರಿಯಪ್ಪನ ಮಗ ಗುಡಿಯೊಳಗಿದ್ದ ’ಆ’ ದೇವರಿಗೆ ’ಕುಂಟಮ್ಮ’ ಎಂದು ಏಕೆ ಹೆಸರಿಟ್ಟ ಎನ್ನುವುದು ಇನ್ನೂ ಸ್ವಾರಸ್ಯಕರವಾದ ವಿಷಯ.

( ಕತೆ... ಇನ್ನೂ ಇದೆ.. )

----------------------------------------------------------------------------------

ಕೊನೆಕಿಡಿ.

ತಿಂಮನಿಗೆ ಸಮಾಜ ಸೇವೆ ಮಾಡುವ ಮನಸಾಯಿತು. ದೇವ ಮಂದಿರವೊಂದನ್ನು ಕಟ್ಟಿಸುವ ಆಸೆ ವ್ಯಕ್ತಪಡಿಸಿದ. 
ಅಲ್ಲಿಗೆ ಕೇವಲ ಹಿಂದೂಗಳು ಮಾತ್ರ ಬರುತ್ತಾರೆಂದು ಬೇಡವೆನಿಸಿ ಸುಮ್ಮನಾದ.
ಮಸೀದಿಯೊಂದನ್ನು ಕಟ್ಟಿಸಲು ಹವಣಿಸಿದ. ಅಲ್ಲಿಗೆ ಬರೇ ಮುಸಲಮಾನರು ಬರುತ್ತಾರೆಂದು ತೆಪ್ಪಗಾದ.
ಇಗರ್ಜಿ(ಚರ್ಚು) ಯೊಂದನ್ನು ಕಟ್ಟಲು ತೀರ್ಮಾನಿಸಿದ. ಅಲ್ಲಿಗೆ ಕೇವಲ ಕ್ರಿಸ್ತರು ಬರುತ್ತಾರೆಂದು ಅದನ್ನೂ ಬೇಡವೆಂದು ತ್ಯಜಿಸಿದ.
ತಿಂಮನಿಗೆ ಪ್ರಚಂಡ ಉಪಾಯವೊಂದು ಹೊಳೆಯಿತು. ಎಲ್ಲರೂ ಬರುವಂತೆ ಮಾಡಬಹುದಾದುದನ್ನೇ ಕಟ್ಟಿಸಬೇಕೆಂದು ನಿರ್ಣಯಿಸಿದ.
ಸಾಲಾಗಿ ಆರು ಕಕ್ಕಸುಗಳನ್ನು ಕಟ್ಟಿಸಿದ !.

(ಈ ಕಿಡಿ ನನ್ನದಲ್ಲ. ಬೀchi ಯವರ ’ತಿಂಮನತಲೆ’ಯಿಂದ ಹೆಕ್ಕಿದ್ದು. ನಕ್ಕುಬಿಡಿ ) 

17 comments:

Manjunatha Kollegala said...

ನನಗೆ ಒಂದೇಒಂದು ಸಾಲು ಇಷ್ಟವಾಗಲಿಲ್ಲ! "ಇನ್ನೂ ಇದೆ"

ಉಳಿದಂತೆ ಕತೆ ಚೆನ್ನಾಗಿದೆ :)

ಪ್ರಗತಿ ಹೆಗಡೆ said...

ಕು೦ಟಮ್ಮನ ಪವಾಡ ಚೆನ್ನಾಗಿದೆ... ಕೊನೇ ಕಿಡಿ ಅಂತೂ ಬೊಂಬಾಟ್...

Ittigecement said...

ಸ್ವಾರಸ್ಯಕರ ಘಟ್ಟದಲ್ಲಿದೆ..

ಅಲ್ಲಿ ದೇವರು ಇತ್ತಾ?

ಬೀಚಿಯವರ ತಲೆ ಕೂಡಾ ಸೂಪರ್...

ಕಾಯಿಸ ಬೇಡಿ ಮುಂದುವರೆಸಿ...

ಮನಸು said...

super.... aa kone kidi ellinda hudukteeri neevu hahaha

ಸವಿಗನಸು said...

munduvarsi gurugaLe bega....

chennagide .....

Unknown said...

ಹುಹ್.. ಚೆನ್ನಾಗಿದೆ.. ಬೇಗನೆ ಬರೆಯಿರಿ...

ಮನಮುಕ್ತಾ said...

ಕುತೂಹಲಕಾರಿ ಕಥೆ.....ಮು೦ದೇ?
ಆದಷ್ಟು ಬೇಗನೆ ಬರುತ್ತದಲ್ಲವೆ?... :)
ಖಿಡಿ..ಮಸ್ತ್.

sunaath said...

ನಿಮ್ಮದು ಸ್ವಾರಸ್ಯಕರವಾದ ಬರವಣಿಗೆ. ಮುಂದಿನ ಭಾಗವನ್ನು ಬೇಗನೇ ನೀಡಿರಿ ಎಂದು ವಿನಂತಿಸುತ್ತೇನೆ.
ಬೀchiಯವರ ಕಿಡಿ ಸೂಪರ್ ಆಗಿದೆ.

shridhar said...

ಸುಂದರ ನಿರೂಪಣೆಯೊಂದಿಗೆ ಬೆಸೆದ ಕತೆ ಚೆನ್ನಾಗಿದೆ .. ಮುಂದುವರೆಯಲಿ ..

ತೇಜಸ್ವಿನಿ ಹೆಗಡೆ said...

ಕುತೂಹಲಘಟ್ಟದಲ್ಲೇ ನಿಲ್ಲಿಸಿದ್ದೀರಿ... ಬಹು ಬೇಗ ಮುಂದುವರಿಸಿ..

ಈ ಸಲದ ಕೊನೆಯ ಕಿಡಿ ಚೆನ್ನಾಗಿದೆ :)

shivu.k said...

ಸುಬ್ರಮಣ್ಯ ಸರ್,

ಸಾವಿರ ಎಕರೆಯ ಕೆರೆ, ಅದರ ಪ್ರವಾಸ ಅದಕ್ಕೊಂದು ಸೇತುವೆ, ಕೊನೆಯಲ್ಲಿ ಕುಂಟಮ್ಮ ದೇವರ ಕಥೆ ತುಂಬಾ ಚೆನ್ನಾಗಿದೆ..ಬೇಗ ಮುಂದುವರಿಸಿ..ಕೊನೆಯ ಕಿಡಿ ಸಕ್ಕತ್ ಪಂಚ್ ಆಗಿದೆ..

ಅಪ್ಪ-ಅಮ್ಮ(Appa-Amma) said...

ಹಾಗೇ ಅಲೆಯುವಾಗ ನಿಮ್ಮ ಬ್ಲಾಗ್ ನೋಡಿದೆ.

ಕುಂಟಮ್ಮನ ಸೇತುವೆ ಕತೆ ಸೂಪರ್ !

ಅನಂತ್ ರಾಜ್ said...

ಕುತೂಹಲ ಮೂಡಿಸುತ್ತಾ ಸಾಗುವ ಶೈಲಿ ತು೦ಬ ಇಷ್ಟವಾಯಿತು. ಕು೦ಟಮ್ಮನ ಸೇತುವೆಯ ಕೆಲಸ ಬೇಗ ಮು೦ದುವರಿಯಲಿ.

ಶುಭಾಶಯಗಳು
ಅನ೦ತ್

PARAANJAPE K.N. said...

ಚೆನ್ನಾಗಿದೆ ಗುರುವೇ, ಮುಂದುವರಿಯಲಿ. ಕೊನೆ ಕಿಡಿ ಯಾವತ್ತಿನ೦ತೆ ಸೂಪರ್

ದಿನಕರ ಮೊಗೇರ said...

ಸುಬ್ರಮಣ್ಯ ಸರ್,
ಕಥೆ ಚೆನ್ನಾಗಿ ಮೂಡಿ ಬರುತ್ತಿದೆ...... ಖಿಡಿ ಚೆನ್ನಾಗಿದೆ.... ಹ್ಹ ಹ್ಹಾ....

ಮನಸಿನಮನೆಯವನು said...

ಸ್ವಾರಸ್ಯಕರವಾಗಿದೆ..
ಮುಂದುವರೆಸಿ..
ಬೀಚಿಯವರ ಈ ಖಿಡಿ ಮೊದಲೇ ಓದಿದ್ದೆ.. ಅದರೂ ಮತ್ತೆ ಮತ್ತೆ ಓದಬೇಕೆನಿಸುವಂತಿದೆ ಅಲ್ಲವೇ..

ಸೀತಾರಾಮ. ಕೆ. / SITARAM.K said...

ತುಂಬಾ ಸ್ವಾರಸ್ಯಕರವಾಗಿದೆ. ಕಥಾಶೈಲಿ ವರದಿಯನ್ತಿದ್ದು ನವಿರು ಹಾಸ್ಯ ಹೊಂದಿದ್ದು ಸರಾಗವಾಗಿ ಓಡಿಸಿಕೊಂಡು ಓದಿಸುತ್ತದೆ.
ಬೀಚಿಯವರ ಖಿಡಿ ಸುಪರ್