Jul 19, 2011

ವಿವೇಕ ಚೂಡಾಮಣಿ -೨-ಯಾವುದು ಮಿಗಿಲು ?/The Crest-Jewel of Wisdom

ಪ್ರಕರಣ ಗ್ರಂಥದ ಆರಂಭ
---------------------


जंतूनां नरजन्म दुर्लभमतः पुंस्त्वं ततो विप्रता
तस्माद्   वैदिकधर्ममार्गपरता विद्वत्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसु कृतैः पुण्यैर्विना लभ्यते ॥२॥


ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕ ಧರ್ಮಮಾರ್ಗಪರತಾ ವಿದ್ವತ್ವಮಸ್ಮಾತ್ ಪರಮ್ |
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ
ಮುಕ್ತಿರ್ನೋ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ ||೨||

ಗ್ರಂಥದ ಆರಂಭ ಶ್ಲೋಕವೇ ಚರ್ಚೆಗೀಡುಮಾಡುವಂತಹುದಾಗಿದೆ. ಸರಳವಾಗಿ ಈ ಸೂಕ್ತದ ಭಾವಾರ್ಥವನ್ನು ತಿಳಿಯುವುದಾದರೆ "ಪ್ರಾಣಿಗಳಿಗೆ ಮಾನವ ಜನ್ಮವು ದುರ್ಲಭ. ಅದರಲ್ಲಿ ಪುರುಷತ್ವ, ವಿಪ್ರತ್ವ, ಧರ್ಮಮಾರ್ಗ ಪರತ್ವ ಮತ್ತು ಶಾಸ್ತ್ರಾರ್ಥ ಜ್ಞಾನವು ಒಂದಕ್ಕಿಂತ ಒಂದು ಮಿಗಿಲಾದವುಗಳು ಮತ್ತು ಬೇಕೆಂದಾಗ ಸಿಗದಿರುವಂತಹವು. ಅದರಲ್ಲೂ ಅಳಿವು-ಉಳಿವುಗಳ ಅರಿವನ್ನು ತಿಳಿದು ಆತ್ಮಜ್ಞಾನವನ್ನು ಪಡೆಯುವುದು ಇನ್ನೂ ಮಿಗಿಲಾದುದು. ಇವೆಲ್ಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಲ್ಲದೆ ದೊರೆಯಲಾರದು " .

ದೊರಕದು ಮಾನವಜನ್ಮವದರೊಳು ದೊರಕದು ಪುರುಷತ್ವವು
ಸಿಗದು ವಿಪ್ರತ್ವವದಕಿಂತ ಮಿಗಿಲು ಧರ್ಮದಾಯಿತ್ವವವು
ದೊರಕದು ದಿಟದ ಮೇಲರಿಮೆ ತನ್ನ ತಾನರಿಯದೆ
ಮುಕ್ತನಾಗನು ಕೋಟಿ ಜನುಮಗಳ ಪುಣ್ಯಾಂಶವಿರದೆ 

ಹುಟ್ಟುವ ಗುಣವುಳ್ಳ ಪ್ರಾಣಿಗಳಲ್ಲೆಲ್ಲಾ ಮಾನವ ಜನ್ಮವು ದೊಡ್ಡದು ಮತ್ತು  ಬೇಕೆಂದಾಗಲೆಲ್ಲಾ ಸಿಗುವಂತಹುದಲ್ಲ. ಮಾನವ ಪ್ರಾಣಿಗೆ ದೊರಕುವಷ್ಟು ಸೌಕರ್ಯಗಳು ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ.  ’ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಎಂದು ದಾಸರು ಹಾಡಿದ್ದಾರೆ, ಹಾಗಾಗಿ ಬೇರೆ ಜನ್ಮಗಳೂ ಇದೆಯೆಂದಾಗುತ್ತದೆ. ಒಬ್ಬನಿಗೇ ಬೇರೆ ಜನ್ಮಗಳು ಇದೆ ಎಂದಾದಲ್ಲಿ ಜೀವಸ್ವರೂಪನಾದ ಆತ್ಮನು ಶರೀರಕ್ಕಿಂತಲೂ ಬೇರೆ ಎಂದಾಗುತ್ತದೆ. ಹಳೆಯದಾದ ಬಟ್ಟೆಯನ್ನು ತಗೆದುಹಾಕಿ ಹೊಸತನ್ನು ಉಡುವಂತೆ ಆತ್ಮವು ಒಂದೇ ಆದರೂ ಶರೀರವು ಹಲವು ರೂಪಗಳನ್ನು ಪಡೆಯುತ್ತದೆ ಎಂದು ತಿಳಿಯಬೇಕಾಗುತ್ತದೆ. ’ಪಡೆದುಕೊಂಡು ಬಂದದ್ದು’ ಎಂದು
ಹೇಳುವಾಗ ಎಲ್ಲಿಂದ ಪಡೆದುಕೊಂಡು ಬಂದದ್ದು ಎಂಬದೂ ಮುಖ್ಯವಾಗುತ್ತದೆ. ಮಾನವನಿಗೆ ಸಂಪಾದನೆಯಿಂದ ಬರುವುದಕ್ಕಿಂತಲೂ ಸಂದಾಯವಾಗಿ ಬಂದಿರುವುದೇ ಹೆಚ್ಚು. ಆಡುವ ಮಾತು, ಆಹಾರ ಪದ್ಧತಿ, ಉಡುಗೆ-ತೊಡುಗೆ ಮತ್ತು ತನ್ನ ಸುತ್ತಲಿನ ಪರಿಸರದಿಂದ ತಾನು ಪಡೆದುಕೊಂಡು ಬೆಳೆದು ಬಂದದ್ದು , ಇವೆಲ್ಲವೂ ಸಂದಾಯವಾಗಿಯೇ ಬರುವಂತಹವು. "ಅಪ್ಪನಂತೆ ಮಗನಿಗೂ ಮುಂಗೋಪ" ಎಂದು ಹೇಳುವುದನ್ನು ಕೇಳಿರುತ್ತೇವೆ. ಮಗನಿಗೆ ಅಪ್ಪನಿಂದ ಅಂತಹ ವಂಶವಾಹಿನಿಗಳು (Genes) ಹರಿದುಬಂದಿರುತ್ತವೆ. ತಾಯಿಯಿಂದಲೂ, ತಾತನಿಂದಲೂ ಬರಬಹುದು. ’ನಾನು ನಾನೇ’ ಎಂದು ಎಷ್ಟು ಹೇಳಿಕೊಂಡರೂ ಹಿಂತಿರುಗಿ ನೋಡಿದಾಗ ಪಡೆದುಕೊಂಡು ಬಂದಿರುವುದೆಷ್ಟು ಎಂಬುದು ಅರಿವಾಗುತ್ತದೆ.  ಶತಾವಧಾನಿ ಗಣೇಶರು ಹೇಳುವಂತೆ "ಜನ್ಮಾಂತರಗಳನ್ನು ನಂಬದವರು ವಂಶವಾಹಿನಿಗಳನ್ನಾದರೂ ನಂಬಲೇಬೆಕು !" . ಮಾನವ ಜನ್ಮದ ಉಪಯೋಗಗಳು ನಮಗೆಲ್ಲಾ ಅನುಭದಿಂದಲೇ ತಿಳಿಯುತ್ತಿರುವುದರಿಂದ
’ಜಂತೂನಾಂ ನರಜನ್ಮ ದುರ್ಲಭಂ" ಎನ್ನುವುದನ್ನು ಮಾನವ ಪ್ರಾಣಿಗಳೆಲ್ಲರೂ ಒಪ್ಪಲೇಬೇಕಾಗುತ್ತದೆ.

ಮನುಷ್ಯ ಜನ್ಮವೇನೋ ದೊಡ್ಡದು ಆದರೆ ಪುರುಷನಾಗಿ ಹುಟ್ಟುವುದು ಅದಕ್ಕಿಂತಲೂ ಮಿಗಿಲಾದುದೆ ? !.  ಹಲವು ಋಷಿಕೆಯರಿಂದ ರಚಿಸಲ್ಪಟ್ಟಿರುವ ಸೂಕ್ತಗಳನ್ನು ನಾವು ಋಗ್ವೇದದಲ್ಲಿಯೇ ಕಾಣಬಹುದು. ಮಹಿಳೆಯರಿಗೆ ವೇದಾಧ್ಯಯನದ ಜೊತೆಗೆ ಸಂಸ್ಕಾರಗಳಲ್ಲೂ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಋಗ್ವೇದದ ಅಧ್ಯಯನದಿಂದಲೇ ತಿಳಿಯಬಹುದು.  ಮನಗೆ ಬಂದ ಸೊಸೆಯನ್ನು ಸಾಮ್ರಾಜ್ಞಿಯಂತೆ (ರಾಣಿ) ಕಾಣು ಎಂದು ಋಗ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಪುರುಷನಾಗಿ ಹುಟ್ಟುವುದು ಮಿಗಿಲೇಕೆ ? . ಪುರುಷನಾಗಿ ಹುಟ್ಟಿದರೂ ಪುರುಷತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಆತನನ್ನೂ ಸ್ತ್ರೀ ಸ್ವಭಾವದಿಂದಲೇ ಗುರುತಿಸಬೇಕಾಗುತ್ತದೆ.  ’ಕಿರಣ್  ಬೇಡಿ’ ಹೆಣ್ಣಾದರೂ ಅವರಲ್ಲಿದ್ದ ಪುರುಷತ್ವದಿಂದ ಅವರೊಬ್ಬ ಧೈರ್ಯಶಾಲಿ ಆರಕ್ಷಕ ಅಧಿಕಾರಿಯಾದರು. ಪುರುಷತ್ವ ಎನ್ನುವುದು ಗಂಡಸುತನ ಎನ್ನುವುದಕ್ಕೆ ಸಮನಾರ್ಥಕವಾಗಿ ಕಂಡರೂ ಅದು ಗಂಡಸರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಹೆಣ್ಣಿಗೂ ಅನ್ವಯಿಸುತ್ತದೆ.
ಹೆಣ್ಣಿನ ’ಹೈ ಪಿಚ್’ ಗಾಯನಕ್ಕೆ ಗಂಡು ಸರಿಸಾಟಿಯಾಗಲಾರ !. ಪುರುಷತ್ವ ಎಂದರೆ, ಧೈರ್ಯ, ಆತ್ಮಸ್ಥೈರ್ಯ,  ಮನೋಬಲ ಮುಂತಾದ ಧನಾತ್ಮಕ ಅಂಶಗಳ ಸಂಕೇತ. ಇಂತಹ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮಾನವ ಜೀವಿಯು ಪುರುಷತ್ವ( masculine dimesion) ವನ್ನು ಪಡೆಯುತ್ತಾನೆ.

’ವಿಪ್ರ’ನಾಗಿರುವುದು ಇನ್ನೂ ಮಿಗಿಲಾದುದು ಎಂದು ಹೇಳಲಾಗಿದೆ. ವಿಪ್ರನೆಂದರೆ ಬ್ರಾಹ್ಮಣ ಎಂದು ಅರ್ಥವಿದೆ.  ಹಾಗಾದರೆ ಜಾತೀಯ ಬ್ರಾಹ್ಮಣರು ಮಾತ್ರ ಶ್ರೇಷ್ಠರೆ ? ಉಳಿದವರು ಅಧಮರೆ ?. ಜಾತಿಯಿಂದ ಯಾರೂ ಬ್ರಾಹ್ಮಣ ರಾಗಲಾರರು ಎಂದು ವೇದಾಂತವೇ ಹೇಳುತ್ತದೆ. ಬ್ರಹ್ಮಜ್ಞಾನವನ್ನು ಅರಿತವನೇ ಬ್ರಾಹ್ಮಣ ಎಂದು ಶ್ರುತಿಗಳು ಸಾರಿವೆ. ವ್ಯಾಪಾರಿಗಳಿಗೆ, ರಾಜರುಗಳಿಗೆ ಬ್ರಹ್ಮಜ್ಞಾನದ ಜಿಜ್ಞಾಸೆಗೆ ಚಿಂತನೆಗೆ ಕಾಲಾವಕಾಶಗಳು ಕಡಿಮೆ ಇರುತ್ತಿದ್ದರಿಂದ ಮತ್ತು ಅವರ ಮನಸು ಹೊಯ್ದಾಟಗಳಿದ ಕೂಡಿರುವುದರಿಂದ ಅವರನ್ನು ವಿಪ್ರ ಅಥವಾ ಬ್ರಾಹ್ಮಣ ಎಂದು ಕರೆಯಲಾಗದು ಎಂಬ ಅಭಿಪ್ರಾಯವು ವ್ಯಕ್ತವಾಗುತ್ತದೆ. ಯಾರ್ಯಾರು ಬ್ರಹ್ಮನನ್ನು ಅರಿಯುವರೋ ಅವರೆಲ್ಲರೂ ವಿಪ್ರರೆ. ಜ್ಞಾನಮಾರ್ಗದಲ್ಲಿ ಎಲ್ಲರೂ ನಡೆಯಬಹುದು ಆದರೆ ಕರ್ಮಮಾರ್ಗದಲ್ಲಿ ನಡೆಯಲು ಕೆಲವರಿಗೆ ಮಾತ್ರ ಸಾಧ್ಯ. ವೈದ್ಯಶಾಸ್ತ್ರವನ್ನು ಎಲ್ಲರೂ ಓದಿ ತಿಳಿದುಕೊಳ್ಳಬಹುದು ಆದರೆ ಶಾಸ್ತ್ರದ ಪ್ರಯೋಗ ಮಾಡಲು ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಅಥವಾ ನುರಿತ ವೈದ್ಯರು ಮಾತ್ರ ಅರ್ಹರಾಗುತ್ತಾರೆ.

ಬ್ರಹ್ಮಜ್ಞಾನವನ್ನು ಪಡೆದವನು ಒಳ್ಳೆಯ ದಾರಿಯಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಧರ್ಮಾಧರ್ಮಗಳ ವಿಚಾರಗಳನ್ನು ವಿವರಿಸಬೇಕಾಗುತ್ತದೆ. ವೈದಿಕ ಧರ್ಮಮಾರ್ಗವೆಂದರೆ ಶಾಸ್ತ್ರಗಳನ್ನು ಗೌರವಿಸಿ ಅದರಂತೆ ನಡೆಯುವುದು ಎಂದು ಅರ್ಥ. ಧರ್ಮಶಾಸ್ತ್ರಗಳು ಸಾಮಾನ್ಯರಿಗೆ (ordinary ) ವಿಷಯಾಸಕ್ತರಿಗೆ ಇರುವಂತಹುದಾಗಿದ್ದು ಅಸಾಮಾನ್ಯರಿಗೆ(extrordinary) ,ಅಸಾಧಾರಣರಿಗೆ ಯಾವ ಶಾಸ್ತ್ರಗಳೂ ಇಲ್ಲ !.
ಸಮಾಜಕ್ಕೆ ಒಳಿತಾಗುವಂತಹ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಟ್ಟುಕೊಂಡು ಧರ್ಮಾಧರ್ಮಗಳ ವಿವೇಚನೆಯಿಟ್ಟುಕೊಂಡು ಜ್ಞಾನಮಾರ್ಗದಲ್ಲಿ ನಡೆಯುವುದು ಬ್ರಹ್ಮಜ್ಞಾನಿಯಾದವನ ಕರ್ತವ್ಯವಾಗಿರುತ್ತದೆ. ಕೇವಲ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ ಎಂದು ಮುಂತಾಗಿ ಕರೆಯಿಸಿಕೊಳ್ಳುವುದು ಶಾಸ್ತ್ರಸಮ್ಮತವಲ್ಲ, ಧರ್ಮಶಾಸ್ತ್ರಗಳ ಅನುಷ್ಠಾನದಿಂದ ಮಾತ್ರವೇ ವಿಪ್ರತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಲಾಗಿದೆ. ಅಂತಹ ಜ್ಞಾನವನ್ನು ಪಡೆಯಲು ಮಾನವನು ವೈದಿಕ ಧರ್ಮಮಾರ್ಗದಲ್ಲಿ ನಡೆಯಬೇಕಾಗುತ್ತದೆ ಮತ್ತು ಅಂತಹ ಜ್ಞಾನಿಯು ಎಲ್ಲರಿಗೂ ಮಿಗಿಲಾದವನು ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಯಾರೋ ಒಬ್ಬನನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಲ್ಲ, ಎಲ್ಲರಿಗೂ ಅನ್ವಯವಾಗುವಂತೆ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ. ಜ್ಞಾನಿಗಳು ಅದನ್ನು ತಮಗೆ ಬೇಕಾದಂತೆ ಸರಿಯಾಗಿ ಬಳಸಿಕೊಳ್ಳತ್ತಾರೆ.  ಅನಾಸಕ್ತರಿಗೆ ಯಾವ ಶಾಸ್ತ್ರಗಳೂ ಇಲ್ಲ .

ಆತ್ಮ ಮತ್ತು ಅನಾತ್ಮಗಳ ವಿವೇಚನೆಯುಳ್ಳವನು ಇನ್ನೂ ದೊಡ್ದವನೆಂದು ಹೇಳಲಾಗಿದೆ.  ಅಳಿವು ಮತ್ತು ಉಳಿವಿನ ಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ. ಅಳಿದುಹೋಗುವ ದೇಹದ ಚಿಂತೆಯನ್ನು ಬಿಟ್ಟು ಸದಾಕಾಲ ಉಳಿಯುವ ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ , ಧ್ಯಾನದಿಂದ ಯೋಗಗಳಿಂದ  ತಿಳಿಯುವರೋ ಮತ್ತು ಅಂತಹ ಸ್ವಾನುಭೂತಿಯಿಂದ ಸೃಷ್ಟಿಯಲ್ಲಿ ತಮ್ಮನ್ನು ತಾವು ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿಕೊಳ್ಳವರೋ ಅವರು ಎಲ್ಲರಿಗಿಂತಲೂ, ಎಲ್ಲದಕ್ಕಿಂತಲೂ ಮಿಗಿಲಾದವರು ಎಂದು ಹೇಳಲಾಗಿದೆ. ಮಾನವನಿಗೆ ಒಳಿತು-ಕೆಡುಕುಗಳನ್ನು ವಿವೇಚಿಸುವ ವ್ಯವಧಾನವಿರಬೇಕು ಮತ್ತು ಸ್ವಂತ ಬುದ್ಧಿಯಿಂದ ಶಾಶ್ವತ-ಕ್ಷಣಿಕವಾದುವುಗಳ ಬಗ್ಗೆ ಅರಿಯುವ , ಅದರಂತೆ ಒಳ್ಳೆಯ ದಾರಿಯಲ್ಲಿ ನಡೆಯುವ ವಿವೇಕವಿರಬೇಕು.
ಇವೆಲ್ಲವೂ ಸುಮ್ಮನೆ ಸಿಗುವಂತಹುದಲ್ಲ ಮತ್ತು ಇವುಗಳೆಲ್ಲವೂ ದೊರಕಿ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ನೂರು ಕೋಟಿ ಜನ್ಮಗಳ ಪುಣ್ಯಫಲವಿರಬೇಕು ಎನ್ನಲಾಗಿದೆ. ಅಂತಹ ಪುಣ್ಯಾಂಶವಿಲ್ಲದೆ ಮೇಲಿನ ಯಾವ ಜ್ಞಾನವೂ ದೊರಕುವಿದಿಲ್ಲ ಮತ್ತು ಮುಕ್ತನಾಗಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

ವಂದನೆಗಳೊಂದಿಗೆ....

13 comments:

ಬಾಲು said...

ತುಂಬಾ ಚೆನ್ನಾಗಿ ವಿವರಿಸಿದ್ದೀರಿ.

Manjunatha Kollegala said...

ಚೆನ್ನಾಗಿ ಮೂಡಿ ಬರುತ್ತಿದೆ. ಒಂದು ಸಲಹೆ: ಶ್ಲೋಕದ ನಂತರ ನೀವು ಕೊಡುವ ಗದ್ಯರೂಪದ ಭಾವಾರ್ಥಕ್ಕೂ ಅನಂತರ ಕೊಡುವ ಕನ್ನಡ ರೂಪಾಂತರಕ್ಕೂ ಹೆಚ್ಚು ವ್ಯತ್ಯಾಸವಿಲ್ಲ, ಏಕೆಂದರೆ ಭಾವಾರ್ಥದ ಕೆಲಸವನ್ನು ಕನ್ನಡದ ಶ್ಲೋಕ ತಾನೇ ಮಾಡುತ್ತದೆ. ಅದಾದಮೇಲೆ ಅದರ ಚರ್ಚೆಯನ್ನು ಹೇಗೂ ನಡೆಸುವಿರಿ. ಆದ್ದರಿಂದ ಶ್ಲೋಕವಾದ ತಕ್ಷಣ ಕೊಡುವ ಭಾವಾರ್ಥದ ಬದಲಿಗೆ ಅಲ್ಲಿ ಪ್ರತಿಪದಾರ್ಥವಿದ್ದರೆ ಬರಹ ಇನ್ನಷ್ಟು ಸ್ಫುಟಗೊಳ್ಳುತ್ತದೆ.

ಗಿರೀಶ್.ಎಸ್ said...

ನೀವು ಹೇಳಿದಂತೆ ಹುಟ್ಟಿನಿಂದ ಯಾರ ಜಾತಿಯನ್ನು ಪರಿಗಣಿಸಲಾಗುವುದಿಲ್ಲ...ವಿವರಣೆ ಚೆನ್ನಾಗಿದೆ !!!

ಜನ್ಮನಾ ಜಾಯತೇ ಶೂದ್ರಹ,
ಕರ್ಮಣಾ ದ್ವಿಜ ಉಚ್ಯತೇ !!!

PARAANJAPE K.N. said...

ಶ್ಲೋಕಾರ್ಥ ಮತ್ತು ಅದರ ವಿಶ್ಲೇಷಣೆ ಚೆನ್ನಾಗಿ ಬಂದಿದೆ. ಮು೦ದುವರಿಸಿ ಸ್ವಾಮಿ.

ಮನಸು said...

ಸರ್,
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಎಂತಾ ಅರ್ಥಗಳಿವೆ ಒಂದೊಂದು ಸಾಲುಗಳಲ್ಲಿ ಎನಿಸಿತು. ಯಾರು ಯಾವುದು ಮಿಗಿಲು ಎನ್ನುವುದೇನಿಲ್ಲ ಎಂದು ತಿಳಿಯಿತು...ಹುಟ್ಟಿನಿಂದ ಯಾರೂ ಜಾತಿಯನ್ನು ಹೊತ್ತು ತಂದವರೇನಲ್ಲ ಇದು ನಿಜವೇ ಸರಿ..

ಹೀಗೆ ಮತ್ತಷ್ಟು ವಿವರಗಳೊಂದಿಗೆ ಒಂದು ಪುಸ್ತಕವನ್ನೇ ಮಾಡಿಬಿಡಿ .... ಚೆನ್ನಾಗಿರುತ್ತದೆ.

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ ಅರ್ಥ ವಿವರಿಸಿದ್ದೀರಿ. ಇನ್ನು ಬರಲಿ.

sunaath said...

ಪುತ್ತರ್,
ಮೆಚ್ಚುವಂತಹ ವಿವರಣೆ ನೀಡಿದ್ದೀರಿ. There is clarity in the narration. ಮುಂದಿನ ಕಂತನ್ನು ನಿರೀಕ್ಷಿಸುತ್ತೇನೆ.

Subrahmanya said...

@ ಬಾಲು > ಬರ್ತಾ ಇರಿ :)

@ ಮಂಜುನಾಥ ;> ನೀವು ಹೇಳಿದ್ದು ಈಗ ಅರ್ಥವಾಯಿತು :). ಸರಿ ಮಾಡ್ತೀನಿ.

@ಗಿರೀಶ :> ಥ್ಯಾಂಕ್ಯು. ನಿಮ್ಮಿಂದ ಇನ್ನಷ್ಟು ವೈಚಾರಿಕ ಬರಹಗಳನ್ನು ನಿರೀಕ್ಷಿಸುತ್ತಿದ್ದೇನೆ.

@ ಪರಾಂಜಪೆ :> ಆಗಲಿ ಸ್ವಾಮಿ. ನೀವಿ ಬರ್ತಾ ಇದ್ರೆ ಸಲೀಸಾಗಿ ಹೋಗ್ತಾ ಇರುತ್ತೆ. :)

@ಮನಸು :> ಪುಸ್ತಕ ಎಲ್ಲಾ ನಮಗ್ಯಾಕೆ ಬಿಡಿ ಮೇಡಂ. ನೀವು ಓದಿ ಸಂತೋಷಪಟ್ರೆ ಅಷ್ಟೇ ಸಾಕು. :)

@ ಸೀತಾರಾಮ ಗುರೂಜಿ > ಧನ್ಯವಾದ. ನಿಮ್ಮ ಸಲಹೆಗಳನ್ನು ಕೊಡಿ, ಇನ್ನಷ್ಟು ಸರಿಪಡಿಸುವೆ.

@ಕಾಕಾ > ಹಾಂ, ಮುಂದೆಯೂ ಇದೇ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹವೇ ಶ್ರೀರಕ್ಷೆ :). ಥ್ಯಾಂಕ್ಯು.

rashmi said...

ಸ್ಪಷ್ಟವಾದ ವಿವರಣೆ..ಸೂಕ್ತವಾದ ಪದಗಳ ಜೋಡಣೆ..
good one

prabhamani nagaraja said...

ವಿವೇಕ ಚೂಡಾಮಣಿಯನ್ನು ಪರಿಚಯಿಸುತ್ತಿರುವುದಕ್ಕಾಗಿ ಧನ್ಯವಾದಗಳು. ಆಯಾ ಕಾಲ ಘಟ್ಟಕ್ಕೆ ಅನುಗುಣವಾದ ಸಾಹಿತ್ಯ ಮೂಡಿ ಬರುತ್ತದೆ. ನಿಮ್ಮ ವಿವರಣೆ ಚೆನ್ನಾಗಿದೆ.

Subrahmanya said...

@ ವಿ ಆರ್. ಭಟ್ರು :> ಧನ್ಯವಾದ.

@ ರಶ್ನಿ > ಹೀಗೆ ಬರುತ್ತಿರಿ. ಧನ್ಯವಾದ ನಿಮಗೂ.

@ ಪ್ರಭಾಮಣಿಯವರೆ > ನಿಜ. ವರ್ತಮಾನಕ್ಕೆ ಸಲ್ಲುವಂತೆ ಹೇಳಬೇಕಾಗುವಾಗ ಸಾಹಿತ್ಯದಲ್ಲೂ ಬದಲಾವಣೆ ಅಗತ್ಯ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಮನಮುಕ್ತಾ said...

ಸರಳ ಹಾಗೂ ಅರ್ಥಪೂರ್ಣ ವಿವರಣೆ.. ಇಷ್ಟವಾಯ್ತು..ಮು೦ದುವರೆಯಲಿ..

Subrahmanya said...

@ ಮನಮುಕ್ತಾ:> ಧನ್ಯವಾದ. ಮತ್ತೆ ಬನ್ನಿ.