ಎತ್ತ ನೋಡಿದರೂ ಸಿರಿ ಸುಗ್ಗಿ,
ಮನೆಯಲ್ಲಿ ಬಾನಲ್ಲಿ ಭುವಿಯ ತಳಪಾಯದಲಿ
ಹಾಸಿಗೆಯ ಅಡಿಯಲ್ಲಿ ದಿಂಬುಗಳ ನಡುವಲ್ಲಿ;
ಕೆದಕಿದರು ಕೆದರಿದರು ಜನುಮ ಜಾಲಾಡಿದರು
ಕಂಡದ್ದು ಹೊನ್ನು ಕಾಣದ್ದು ದಿಗಂತ !
ಮನುಜನಾಸೆಗೆಲ್ಲಿಹುದು ಮಿತಿಯು ?
ಮಿತಿಮೀರಿ ಮತಿಮೀರಿ ಕಂಡಿದ್ದು ಮಾರಿ !
ತಿಮ್ಮಪ್ಪ ಕೈ ಕೊಟ್ಟ ಕರಿಯಪ್ಪ ಸೆರೆ ಕೊಟ್ಟ
ಒಪ್ಪೊತ್ತಿನೂಟ, ಸೊಳ್ಳೆ ಸಾಂಗತ್ಯದಲಿ ಬೇಟ !
ಬೇಕಿತ್ತೆ ಮನುಜ ? ಕಾಂಚಾಣದಾಸೆಯ ದೊಡ್ಡಾಟ
ತಂದಿಟ್ಟಿತೇ ಪ್ರಾಣಸಂಕಟ
ಇನ್ನೆಂದೂ ಬರನು ತಿರುವೆಂಕಟ.
ನೆಗೆದುಬಿದ್ದಿತೇ ನಿನ್ನೆಲ್ಲಾ ಮಾನ-ಧನ
ಯಾರು ಕಾಯ್ವರು ನಿನ್ನನಿನ್ನು ಹೇ - ಜನಾರ್ದನ !?
9 comments:
ಅರ್ಥಸಂಪೂರ್ಣ
ವಾಸ್ತವಕ್ಕೆ ಹಿಡಿದ ಕನ್ನಡಿ
ಚನ್ನಾಗಿದೆ
ಚೆನ್ನಾಗಿದೆ...ತಿಮ್ಮಪ್ಪಂಗೆ ಕಿರೀಟ ತೊಡಿಸಿ
ಮಸ್ಕಾ ಹೊಡೆದದ್ದು ವೇಸ್ಟ್ ಆಯ್ತು..:)
ಸೂಪರ್... ಇದಕ್ಕೆ ಜನಾರ್ದನನ ಮಾರುಲಿ ಹೀಗಿರಬಹುದೇ:
ತಾಳುವಿಕೆಗಿಂತನ್ಯ ತಪವು ಇಲ್ಲ, ಕೇಳಬಲ್ಲವರಿಗೆ ಹೇಳುವೆನು ಸೊಲ್ಲ
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ
ರಾಮಗಾಯಿತು ಹದಿನಾಲ್ಕು ವರುಷ, ನನಗೋ ಹದಿನಾಲ್ಕು ದಿವಸ, ಹೆಚ್ಚಲ್ಲ
ಜೈಲು ಜೈಲೆಂದೇಕೆ ಬೀಳುಗಳೆಯುವಿರಿ ಫೈಲು ಕಾಣದ ಗಾವಿಲರು
ಜೈಲಲ್ಲವೆ ಶ್ರೀಕೃಷ್ಣನ ಜನ್ಮಸ್ಥಾನ, ಜೈಲಲ್ಲವೆ ನಮ್ಮೆಲ್ಲರ ಪೊರೆಯುವ ತಾಣ
ಬಯಲೊಳೇನಿದೆ ಮಣ್ಣು, ಅದಿರು ಸೋಸಿದ ಬರಿಯ ಕೆಮ್ಮಣ್ಣು
ಛೀ ಬಿಡು ಬಿಡು ಅದರಾಸೆಯಿನ್ನು;
ಜೈಲೇ ರಾಜಾಸ್ಥಾನ ಜೈಲೇ ಅಮರರ ತಾಣ
ಕಿವಿಗಿನಿಯ ಕನಿಮೊೞಿಯು ತುಂಬಿದುದ್ಯಾನ
ಹುಲುಬಯಲ ವಾಸಿಗಿದಭೇದ್ಯ ವಜ್ರದ ಕೋಟೆ, ಕಲ್ಮಾಡಿ
ಇದೆಯೆನ್ನ ದಿಟದ ಮನೆ, ಅಲ್ಲಿ ಬಂದಿದ್ದೆ ಸುಮ್ಮನೆ
ಬೈ ಬೈ... :)
hha..haa..
sariyaagide..
Manjunatha Kollegala-- 100+
"ಕಂಡದ್ದು ಹೊನ್ನು ಕಾಣದ್ದು ದಿಗಂತ!"
ಪುತ್ತರ್,
ತುಂಬ ಅರ್ಥಪೂರ್ಣವಾದ ಹಾಗು ರಚನೆಯಲ್ಲಿ ಸುಂದರವಾದ ಕವನ.
ಪ್ರತಿಕ್ರಿಯೆ ನೀಡಿ ಒಳ್ಳೆಯ ಮಾತುಗಳನ್ನು ಹೇಳಿದ ಎಲ್ಲರಿಗೂ ಧನ್ಯವಾದಗಳು.
Masth aagide sir !!!
Post a Comment