Aug 12, 2013

ಪಾಠ

ಗೆಳೆಯಾ,
ಆತುರವು ಬೇಡ !
ಮೋಹಮಾಯೆಗಳ ಸಂಕೀರ್ಣ ಸೆಳಹಿನಲಿ
ಬದುಕನರಸುವ ಗೊಂದಲದ ಮೀನು
ನೀನಾಗಬೇಡ.

ಜೋಡಿ ಜೀವನದಲ್ಲಿ
ಗೆಳೆತನದ ಬಂಧವಿದೆ
ಎಳೆತನದ ಅಂದವಿದೆ
ಅಪ್ಪಿ ಮುದ್ದಾಡುವ ಸಂಬಂಧವಿದೆ !
ಗೆಳೆಯಾ,
ಆತುರವು ಬೇಡ

ಹಗುರಾಗಿ ಎಣಿಸದಿರು
ಬೆರಗಾಗಿ ನೋಡದಿರು
ಇದ್ದುದನಿದ್ದಂತೆ ಗಣಿಸುತಿರು
ತಾಳಿದರೆ ಕಾಣುವುದು ರಹದಾರಿ
ನೀನಂದು ಪೂರ್ಣ ಸಂಸಾರಿ !.

ಬಗೆಬಗೆಯ ಬಣ್ಣಗಳಲ್ಲಿದೆಯೇನು ಅಂದ ?
ನಾನಂತೂ ಕಾಣೆ;
ಕಣ್ಣೊಳಗಿನ ಪಾಪೆಯೂ ಕಪ್ಪು
ನೇಸರನಂತರಂಗವೂ ಕಡುಕಪ್ಪು,
ತಿಂಗಳನ ಮಚ್ಚೆಯೂ ಕಪ್ಪು.
ಕಪ್ಪನ್ನು ಕಪ್ಪೆಂದೆಣಿಸುವುದೇ ತಪ್ಪು !.

ನಿನ್ನಾಯ್ಕೆಯಾ ಮೇಲೆ ನಂಬಿಕೆಯು ಇರಲಿ
ಅವಳಾಯ್ಕೆಯೂ ನೀನೆಂಬ ಹೆಮ್ಮೆಯೂ ಇರಲಿ
!.


[ನನಗೆ ಕವಿತೆ ಬರೆಯಲು ಬರಲ್ಲ.  ಅದರ ನಾಜೂಕು ಗೊತ್ತಿಲ್ಲ. ಸುಮ್ಮನೆ ಇಲ್ಲಿ ಬರೆದಿದ್ದೇನೆ. ನಿಮಗಿಷ್ಟವಾದರೆ ಅದೇ ಸಂತೋಷ :) ]

4 comments:

sunaath said...

ಕುಮಾರವ್ಯಾಸ ಅನ್ನೋ ಒಬ್ಬ ಮಹಾಕವಿ ‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ’ಎಂದು ಹೇಳುತ್ತ ತಾನು ನಿರಕ್ಷರಿ ಎಂದು ಸಾರಿದ. ‘ಕವನ ಬರೆಯುವ ನಾಜೂಕು ಗೊತ್ತಿಲ್ಲ’ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಇದಕ್ಕಿಂತ ನಾಜೂಕು ಕವನ ಎಲ್ಲಿದೆ,ಸ್ವಾಮಿ? ಸಂಸಾರದ ಸಾರವನ್ನು ಶೈಲಿಯ ಸಾರದೊಂದಿಗೆ ಸೇರಿಸಿದಾಗ, ಇಂತಹ ಕವನ ಹುಟ್ಟಿಕೊಳ್ಳುತ್ತದೆ; ಬರೆದವನಿಗೂ ಓದುವವನಿಗೂ ಮುದ ಕೊಡುತ್ತದೆ.

ಬಾಲು said...

ಸಂಸಾರದ ಪಾಠ ಚೆನ್ನಾಗಿ ಹೇಳಿದ್ದೀರಿ.
ಮೊನ್ನೆ ತಾನೇ ತೀರ ಆಪ್ತರು "ದಾಂಪತ್ಯ ಸಹಲೆ" (Family Counselor) ಗಾಗಿ ವಿಚಾರಿಸುತ್ತಾ ಇದ್ದರು.
ಅವರಿಗೆ ಈ "ಪಾಠ" ದ ಅಗತ್ಯ ಇದೆ.
ಪ್ರಿಂಟ್ ಔಟ್ ತಗೊಂಡೆ.

ವಿ.ರಾ.ಹೆ. said...

ಚೆನ್ನಾಗಿದೆ ಕವನ ಕಮ್ ಪಾಠ ! :)

Karthik Kamanna said...

"ಇದ್ದುದನಿದ್ದಂತೆ ಗಣಿಸುತಿರು..."
ಆತ್ಮಾನಂದ ಅನಂತವಹುದಾಗ! ಸಾರಭರಿತ ಪದ್ಯ :)