Nov 24, 2015

ನಮಗೀಗ ಎಂತಹವರು ಮಾದರಿಯಾಗಬೇಕು ?



ನಾವೀಗ ಬದಲಾದ ಅಥವಾ ಸೂಕ್ಷ್ಮ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಮ್ಮ ಬಾಲ್ಯದಲ್ಲಿ , ವಿದ್ಯಾಭ್ಯಾಸದ ದಿನಗಳಲ್ಲಿ ನಮಗೆ ಕೆಲವರಾದರೂ ಮಾದರಿ ಎನಿಸುವಂತಹ ವ್ಯಕ್ತಿಗಳಿರುತ್ತಿದ್ದರು. ಶಾಲಾ ದಿನಗಳಲ್ಲಿ ಎಲ್ಲ ಶಿಕ್ಷಕರೂ ನಮಗೆ ‘ಗುರು’ಗಳೇ ಆಗಿದ್ದರು. ನಮ್ಮನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ಆ ಗುರುಗಳಿಗಿದೆ ಎಂಬ ತಿಳಿವಳಿಕೆಯನ್ನು  ನಮ್ಮ ತಂದೆ ತಾಯಿಯವರು ನಮಗೆ  ಹೇಳುತ್ತಿದ್ದರು. ಅಂತಹ ಹಿತವಚನವನ್ನು ಕೇಳುವ ಮತ್ತು ಅದರಂತೆ ನಡೆಯುವ (ಕನಿಷ್ಠ ಭಯದಿಂದಲಾದರೂ) ಗುಣವೂ ನಮ್ಮ ಪೀಳಿಗೆಯಲ್ಲಿತ್ತು. ಅಕ್ಬರ ದೊರೆ ಒಬ್ಬ ಉತ್ತಮ ರಾಜನಾಗಿದ್ದ ಎನ್ನುವುದನ್ನು ಇತಿಹಾಸದ ಪಠ್ಯದಿಂದ ತಿಳಿದುಕೊಂಡಿದ್ದೆವು. ನೆಹರೂ ನಮಗೆಲ್ಲಾ ಚಾಚಾ ಎಂದೇ ಪರಿಚಿತರಾಗಿದ್ದರು. ಭಗತ್ ಸಿಂಗ್ ವಿಚಾರಗಳು ಸಹ ಇದ್ದವು. ಅದನ್ನೆಲ್ಲಾ ಎಡ-ಬಲಗಳ ವಿವೇಚನೆ ಇಲ್ಲದೆ ತಿಳಿದುಕೊಂಡವರು ನಾವು. ಪಠ್ಯ ಪುಸ್ತಕದ ಹೊರತಾಗಿ ಇತಿಹಾಸ ಮತ್ತು ರಾಜಕೀಯವನ್ನು ಅಧ್ಯಯನ ಮಾಡಲು ತೊಡಗಿದಾಗ ಮತ್ತಷ್ಟು ಹೊಸ ವಿಚಾರಗಳು ಕಣ್ಮುಂದೆ ಬಂದವು. ಅದು, ಭಗತ್ ಸಿಂಹನನ್ನು ಕುತಂತ್ರದಿಂದ ನೇಣಿಗೇರಿಸಿದರು, ನೆಹರೂ ಚಾಚಾ ಎನಿಸಿಕೊಳ್ಳಲು ಯೋಗ್ಯರಲ್ಲದ ವ್ಯಕ್ತಿ, ಅಕ್ಬರ್ ಧರ್ಮಾಂಧನಾಗಿದ್ದ ಎನ್ನುವುದರಿಂದ ಆರಂಭಿಸಿ ಇಂದಿನ ಟಿಪ್ಪು ಜಯಂತಿಯವರೆಗೆ !. 

ಬಹುಷಃ ನನ್ನಂತೆ ಕೋಟ್ಯಂತರ ಯುವಕರು ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಕಾರಣ, ಇಂದು ನಮಗೆ ಮಾದರಿ ಎನ್ನುವಂತಹ ಅಥವಾ ಹಾಗೆ ನಂಬಿಕೊಳ್ಳಬಹುದಾದ ಯಾವ ವ್ಯಕ್ತಿ -ವಿಚಾರಗಳೂ  ಕಣ್ಮುಂದೆ ಬರುತ್ತಿಲ್ಲ. ಶಿಶುನಾಳ ಶರೀಫರೇ ?, ವಿವೇಕಾನಂದರೆ ? . ಎಷ್ಟು ದಿವಸ ಹಾಡಿದ್ದೇ ರಾಗವನ್ನು ಹಾಡುವುದು ?!. ವೈಚಾರಿಕತೆ ಎನ್ನುವುದು ವಿಷಯಗಳಿಗೆ ವಿಸ್ತಾರವನ್ನು ಒದಗಿಸುವುದರ ಬದಲಾಗಿ ಕಗ್ಗಂಟಾಗಿ ಪರಿಣಮಿಸುತ್ತಿದೆ. 

ನಮಗೆ ನಮ್ಮ ಬಾಲ್ಯದ ಸಂಸ್ಕಾರವಾದರೂ ಇದೆ. ಆದರೆ, ಇಂದಿನ ಹೊಸ ಪೀಳಿಗೆಯ ಕಿವಿಗೆ ಬೀಳುತ್ತಿರುವ ವಿಚಾರವಾದರೂ ಎಂತಹವು. ಕಡಿ, ಕೊಲ್ಲು, ತಿನ್ನು , ಇಕ್ಕಿರಿ ಮತ್ತು ಒದೆಯಿರಿ ಎನ್ನುವ ಖಂಡತುಂಡ ಮಾತುಗಳು. ಬಾಯಿ ಬಿಟ್ಟರೆ ಶೋಷಣೆ, ದೌರ್ಜನ್ಯ ಎನ್ನುವ ತಥಾಕಥಿತ ಸವಕಲು ಬಡಬಡಿಸುವಿಕೆ. ನಮ್ಮ ಮಕ್ಕಳು ಯಾರನ್ನು ಅಥವಾ ಯಾವ ವಿಚಾರವನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯುತ್ತಾರೆ, ಅಧ್ಯಯನ ನಡೆಸುತ್ತಾರೆ ಎಂದು ಯೋಚಿಸಿದರೆ , ಭವಿಷ್ಯವನ್ನು ನೆನೆದರೆ ಭಯವಾಗುತ್ತದೆ.

ಇಲ್ಲ. ಇಂದು ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳಿದರೆ ಅದು ಶೋಷಣೆ, ಮನುವಾದ. ಬಾರಲಾ ಎಣ್ಣೆ ಹಾಕಣ, ಬೀಫ್ ತಿನ್ನೋಣ ಎಂದರೆ ಅದು ಪ್ರಗತಿಪರತೆ !. ಎಲ್ಲಿಗೆ ಬಂತು ಯಾರಿಗೆ ಬಂತು ಸ್ವಾತಂತ್ರ ಎಂದು ಕೇಳುವ ಸ್ಥಿತಿ ಇಂದು ನಿಜಕ್ಕೂ ನಮಗೆ ಒದಗಿ ಬಂದಿದೆ. ಅಧಿಕಾರದಲ್ಲಿರುವ ಬುದ್ಧಿವಂತರ ವಲಯವೇ ಸಮಾಜದ ಸಾಮರಸ್ಯವನ್ನು ಹಾಳುಗೆಡವಿ ಜಾತಿ-ಜಾತಿಗಳ ಮಧ್ಯೆ ವೈಮನಸ್ಸು ಹಚ್ಚುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿವೆ. ಎಲ್ಲವೂ ಋಣಸಂದಾಯಕ್ಕಾಗಿ ಮತ್ತು ಕುತ್ಸಿತ ರಾಜಕಾರಣಕ್ಕಾಗಿ.

ಖ್ಯಾತ ಬರಹಗಾರ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಇತ್ತೀಚಿನ ತಮ್ಮ ಲೇಖನದಲ್ಲಿ ಬರೆಯುತ್ತಾ ‘ ನಾವೀಗ ಸಂವಾದವೇ ಸಾಧ್ಯವಾಗದ ಸ್ಥಿತಿಯಲ್ಲಿದ್ದವೆ. ನಿನ್ನ ಬಗ್ಗೆ ನನಗೆ ಗೌರವವಿದೆ ಆದರೆ ನಿನ್ನ ಅಭಿಪ್ರಾಯ ನನಗೆ ಒಪ್ಪಿತವಿಲ್ಲ ಎಂದು ಹೇಳುವ ಸೌಜನ್ಯವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ ‘ ಎಂದು ಆತಂಕ ವ್ಯಕ್ತಪಡಿಸಿದ್ದರು. ಸುಂದರ ಹೂವುಗಳಂತಹ ಇತಿಹಾಸವನ್ನು ಕಂಡವರಿಂದ ಇಂತಹ ಆತಂಕದ ಮಾತುಗಳು ಬಂದಿವೆ ಎಂದರೆ ನಾವೀಗ ಸಂಕಷ್ಟದ ಸ್ಥಿತಿಯಲ್ಲಿ ಇದ್ದೇವೆ ಎಂದಲ್ಲವೆ ?.

ಬದುಕಿಗೆ ಆದರ್ಶಗಳು ಬೇಕೆಂದರೆ  ಆದರ್ಶಪ್ರಾಯರಾದ ವ್ಯಕ್ತಿಗಳನ್ನು ರೂಪಿಸುವ ಹೊಣೆ ನಮ್ಮದೇ ಆಗಿದೆ.  ಈಚೆಗೆ ಸಾಮಾಜಿಕ ತಾಣದಲ್ಲಿ ಒಬ್ಬರು ಹಾಕಿದ್ದ ಸ್ಟೇಟಸ್ ಹೀಗಿತ್ತು 



ಇದರ ಜತೆಗೆ ರಾಜಕಾರಣಿಗಳ ಬಾಲಬಡುಕರೂ ಎಂದು ಸೇರಿದರೆ ಸರಿಯಾಗುತ್ತದೆ. ಅದಕ್ಕೆ ಹೇಳಿದ್ದು ನಾವೀಗ ಸೂಕ್ಷ್ಮ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ ಎಂದು. ಕುವೆಂಪು, ಬೇಂದ್ರೆ ಯವರನ್ನು ಸಹ ಜಾತಿಯಲ್ಲಿ ವಿಂಗಡಿಸಿ ತೋರಿಸಿದ್ದಾಯಿತು. ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲೇ ಒಬ್ಬನ ಬದುಕು ಮುಗಿಯುವ ಹಾಗಿದ್ದರೆ ಆತಂಕದ ಸನ್ನಿವೇಷ ಎದುರಾಗುತ್ತಿರಲಿಲ್ಲ. ಆತ ಸಮಾಜದೊಡನೆ ಬೆರೆಯಬೇಕು, ಕಷ್ಟ-ನಷ್ಟಗಳಲ್ಲಿ ಪಾಲ್ಗೊಳ್ಳಬೇಕು. ಅದಕ್ಕಾಗಿ ನಾವು ವಿವೇಕಯುತವಾದ ಸಮಾಜವನ್ನು ರೂಪಿಸಬೇಕು. ಇಂದಿನ ದಿನಮಾನದಲ್ಲಿ ಅದು ಸಾಧ್ಯವಾ ? ಎನ್ನುವ ಆತಂಕ ೬೦ ವಯಸ್ಸು ಮೀರಿರುವ ಅನೇಕ ಹಿರಿಯರನ್ನು ಕಾಡುತ್ತಿದೆ. ನನ್ನ ಅಭಿಪ್ರಾಯ  ತಪ್ಪು ಅನಿಸಿದರೆ ನಾಲ್ಕು ಜನ , ೬೦ ದಾಟಿರುವ ಹಿರಿಯರನ್ನು ಮಾತನಾಡಿಸಿ. ಹೇಳಿ ನಮಗೀಗ ಯಾರು ಮಾದರಿಯಾಗಬೇಕು ? ಅಥವಾ  ಯಾವ ವಿಚಾರಗಳು ?.

6 comments:

sunaath said...

ನಮ್ಮ ಸಮಾಜ ದಿಕ್ಕು ತಪ್ಪಿ ಹೋಗಿದೆ ಎಂದು ಅನಿಸುತ್ತಿದೆ. ಸ್ವಾರ್ಥಿ ರಾಜಕಾರಣಿಗಳು ಸಮಾಜವನ್ನು ಒಡೆಯುತ್ತಿರುವಾಗ, ಸರಿ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ನಿಮ್ಮ ಲೇಖನ ವರ್ತಮಾನಕ್ಕೆ ಹಿಡಿದ ಕನ್ನಡಿಯಾಗಿದೆ.
(ಅಡಿಟಿಪ್ಪಣಿ: ಇಷ್ಟು ಕಾಲ ಶಂಭುಲಿಂಗ ಎಲ್ಲಿ ಮಾಯವಾಗಿದ್ದ?)

ಸುಬ್ರಹ್ಮಣ್ಯ said...

ಕಾಕಾ,
ಒತ್ತಡ ಹೆಚ್ಚಾದಾಗ ಇನ್ನೊಂದು ಕೆಲಸ ಮೈಮೇಲೆ ಎಳೆದುಕೊಂಡು ಸಂತೋಷಪಡೋದು ಅಂತಾರಲ್ಲಾ , ಹಾಗೆ. ನಿಜ ಹೇಳಬೇಕೆಂದರೆ ಸೋಮಾರಿತನ :೦

ವಿ.ರಾ.ಹೆ. said...

ದಾರಿ ಕಾಣದಾಗಿದೆ ಶಂಭುಲಿಂಗನೇ... ರಾಜಕಾರಣಿಗಳೂ ಹಾಗೆ ತಕ್ಕನಾಗಿ ಜನರೂ ಹಾಗೆ !

rashmi said...

Well said.Nowadays in some educational institutions every thing is discussed except studies

Manjunatha Kollegala said...

ನಿಮ್ಮನ್ನು ಇಲ್ಲಿ ನೋಡಿ ಬಹುಕಾಲವಾಗಿತ್ತು :)


ನಮ್ಮೆಲ್ಲರ ಕಳಕಳಿಯನ್ನು ಸ್ಪಷ್ಟವಾಗಿ ನಿರೂಪಿಸಿದ್ದೀರಿ. ಆದರೂ ಉಳಿಯುವ ಪ್ರಶ್ನೆ, ಇದನ್ನು ಕೇಳುವವರಾರು :(
ಒಡೆಯುವವರಿಗೆ ಅವರಿಗೆ ಒಪ್ಪೊತ್ತಿನ ಬಾಟ್ಲಿಗೆ ದಾರಿಯಾದರೆ ಮುಗಿಯಿತು, ನಾಳೆ ಉಪವಾಸ ಬೀಳುವ ಚಿಂತೆಯಿಲ್ಲ, ಏನು ಮಾಡುವುದು!

prabhamani nagaraja said...

ಬ್ಲಾಗ್ ಲೋಕಕ್ಕೆ ನಿಮ್ಮ ಮರುಪ್ರವೇಶ ಸ೦ತಸ ತ೦ದಿದೆ. ಎಲ್ಲರೂ ಚಿ೦ತಿಸಲೇಬೇಕಾದ ವಿಷಯವನ್ನು ಪ್ರಸ್ತಾಪಿಸಿದ್ದೀರಿ ಸರ್,ಧನ್ಯವಾದಗಳು :)