ಈ ಚಿತ್ರದಲ್ಲಿರುವ ಪತ್ರಿಕಾ ವರದಿಯಂತೆ ಈ ಮಹಿಳೆಯು ಮದ್ಯಪಾನ ಮಾಡಿ ತನ್ನ ’ಹೋಂಡಾ c.v.r. ಕಾರು ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣಳಾಗಿದ್ದಾಳೆ. ಈ ಘಟನೆ ನೆಡೆದಿರುವುದು ’ಮುಂಬೈ’ ನಲ್ಲಿ. ಮಹಾರಾಷ್ಟ್ರದ ಜನನಾಯಕರೊಬ್ಬರು ಹೇಳಿದಂತೆ ಇಂತಹ ಘಟನೆಗಳು ’ಮಾಯಾನಗರಿ’ ಯಲ್ಲಿ ಸರ್ವೇ ಸಾಮಾನ್ಯ ಸಂಗತಿ !. ಈ ಮಹಿಳೆ ಸರಿರಾತ್ರಿ ೧ ಘಂಟೆಯ ತನಕ ಪಾರ್ಟಿಯಲ್ಲಿದ್ದು ಚೆನ್ನಾಗಿ ’ಬಾರಿ’ಸಿ ಅದೇ ಅಮಲಿನಲ್ಲಿ ಕಾರು ಚಲಾಯಿಸಿದ್ದಾಳೆ. ಅಷ್ಟೇ ಸಾಲದು ಎಂದು ಕಾರಿನಲ್ಲೂ ಮದ್ಯ ಸೇವಿಸುತ್ತಾ ಜೊತೆಗೆ ’ಸೈಡ್ಸ್’ ಗಳನ್ನೂ ಮೆಲ್ಲುತ್ತಾ ’ ಜೋಷ್’ ನಲ್ಲಿ ಕಾರ್ ಚಲಾಯಿಸುವಾಗ ಕರ್ತವ್ಯನಿರತರಾಗಿದ್ದ ಪೋಲೀಸ್ ಅಧಿಕಾರಿಯ ಮೇಲೇ ಚಲಾಯಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟಕ್ಕೇ ಮುಗಿಸದೇ ಇನ್ನೂ ಮುಂದೆ ಹೋಗಿ ಬೈಕ್ ಸವಾರರೊಬ್ಬರಿಗೆ ಗುದ್ದಿ ಅವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸದ್ಯಕ್ಕೆ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಹಿಳೆ ಮದ್ಯಪಾನಿಸುವುದರ ಪ್ರತಿ ನನ್ನ ತಕರಾರೇನಿಲ್ಲ. ಅದು ಆಕೆಯ ವೈಯಕ್ತಿಕ ವಿಚಾರ. ’ಪರಮಾತ್ಮ’ ಆಡಿಸದಂತೆ ಆಡಲಿ !. ಕುಡಿಯಲಿ...ಕುಡಿದು ಹಾಳಾಗಲಿ..! ಅಮಾಯಕರ ಜೀವವನ್ನೇಕೆ ಬಲಿ ಪಡೆಯಬೇಕು ?. ಈ ಘಟನೆ ಹಣದ ಮದದಲ್ಲಿ ತೇಲಾಡುವ ಇಂತಹ ’ದೊಡ್ಡ’ ಮನುಷ್ಯರ ’Corporate' ದೊರೆಗಳ ಆಂತರಿಕ - ಮಾನಸಿಕ ವ್ಯಸನಗಳನ್ನು ಬಯಲುಮಾಡುತ್ತದೆ. ಸರಿರಾತ್ರಿಯ ತನಕವೂ ’ಬಾರ್’ ಲೈವ್ ಬ್ಯಾಂಡ್’ ’ಡಿಸ್ಕೋಥೆಕ್’ ಗಳನ್ನು ತೆರೆದಿಡುವಂತೆ ಪೋಷಿಸುವವರಿಗೂ ಅಂಕುಶದ ಅಗತ್ಯವಿದೆ. ಇನ್ನು ಸಾವಿಗೀಡಾದ ವ್ಯಕ್ತಿಗಳ ಮಕ್ಕಳು-ಸಂಸಾರದ ಪಾಡೇನು ? ಸರ್ಕಾರ ಆ ಕುಟುಂಬದವರಿಗೆ ಒಂದಷ್ಟು ’ಪರಿಹಾರ’ ನೀಡಿ ಕೈತೊಳೆದುಕೊಳ್ಳಬಹುದು. ಜೀವವನ್ನು ಕೊಡಲಾದೀತೆ..?? ವ್ಯವಸ್ಥೆಯ ದುರಂತವೆಂದರೆ ಸದ್ಯದಲ್ಲೇ ತನ್ನ ’ಪ್ರಭಾವ’ ದಿಂದ ಈಕೆಯೂ ಜಾಮೀನು ಪಡೆದುಕೊಂಡು ಬಂಧನದಿಂದ ಹೊರಬಂದು ನಿರ್ದೋಶಿಯೂ ಆಗಿಬಿಡಬಹುದು. ಮಹಿಳೆಯರ ಹಕ್ಕುಗಳ, ಸ್ವಾತಂತ್ರ್ಯದ ಪರ ಹೋರಾಡುವ ಮಹಿಳಾ ಸಂಘಟನೆಗಳು ಸಮಾಜದ ಸ್ವಾಸ್ತ್ಯವನ್ನು ಕೆಡಿಸುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬಹುದಲ್ಲವೆ....??? ಇದನ್ನೂ ಸಹ ಮಹಿಳೆಯರ ಸಂಸ್ಕೃತಿ-ಸಂಸ್ಕಾರದ ಮೇಲಾಗುತ್ತಿರುವ ದೌರ್ಜನ್ಯ ( ಪುರುಷರು ಮಾತ್ರ ದೌರ್ಜನ್ಯದ ಪ್ರವರ್ತಕರೇ ?? ) ಎಂದು ಪರಿಗಣಿಸಿ ಹೋರಾಟ ನೆಡೆಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬಹುದಲ್ಲವೇ..! ಕೆಲವೇ ಕೆಲವು ಮಹಿಳೆಯರು ಮಾಡುವ ಇಂತಹ ಕೃತ್ಯಗಳು ಮುಂದಿನ (ತನ್ನದೇ !!) ಪೀಳಿಗೆಯ ಮೇಲೆ ಪ್ರಭಾವ ಬೀರಲಾರದೇ.? ಇದಕ್ಕೆಲ್ಲಾ ಸರ್ಕಾರ-ಕಾನೂನನ್ನು ದೂಷಿಸುವುದು ಕಾಟಾಚಾರವಾಗುತ್ತದೆಯಷ್ಟೆ. ಮನುಷ್ಯ ತನ್ನ ಆಂತರಿಕ ಸ್ವಾಸ್ತ್ಯವನ್ನು ಕಳೆದುಕೊಂಡಾಗಲೇ ಇಂತಹ ಘಟನೆಗಳು ನೆಡೆಯುವುದು. ...........ವರ್ಷದ ಹಿಂದೆ ಬೆಂಗಳೂರಿನಲ್ಲಿ ಆಪ್ತರೊಬ್ಬರ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ೧೨.೩೦ ರ ಸಮಯದಲ್ಲಿ ವಾಪಸಾಗುತ್ತಿದ್ದ ನಮಗೆ (ನನ್ನ ಸ್ನೇಹಿತ) ಅಡ್ಡಬಂದ ನಾಲ್ಚರು ಹುಡುಗಿಯರನ್ನು ಪಕ್ಕಕ್ಕೆ ಸರಿಸಿ ಹೊರಡುವಷ್ಟರಲ್ಲಿ ಸಾಕುಸಾಕಾಗಿತ್ತು ! ನಾಲ್ವರೂ ಕಂಠಪೂರ್ತಿ ಕುಡಿದು ಓಲಾಡುತ್ತಿದ್ದರು. ಇವರೂ ’Corporate' ಸಮಾಜದ ಕುಡಿಗಳೇ.......
" ನಾವೇ ಹಾಳಾಗಿ ಹೋಗಿರುವೆವು..ಪ್ರಪಂಚ ಹಾಳಾಗಿದೆ ಎಂದು ಭಾವಿಸುವೆವು" ಎನ್ನುವ ವಿವೇಕಾನಂದರ ನುಡಿ ಎಷ್ಟು ಪ್ರಸ್ತುತ ಅಲ್ಲವೇ...
ಖೊನೆ ಖಿಡಿ :
ಶಂಭು : ಸಾರಾಯಿ ನಿಲ್ಸುದ್ಮೇಲೆ ಈ ರಮ್ಮು, ಇಸ್ಕಿ, ಬ್ರಾಂಡಿ ಇವೆಲ್ಲಾ ಕಿಕ್ಕೇ ಕೊಡಲ್ಲಾ ಕಣ್ಳಾ....
ಲಿಂಗ : ಅದ್ಕೇನ್ ಮಾಡವಾ ಅಂತ್ಯಾ...?
ಶಂಭು : ಕಳ್ಳಭಟ್ಟಿ ತಯಾರ್ ಮಾಡವಾ ...ಏನಂತ್ಯಾ...!!!
ವಂದನೆಗಳೊಂದಿಗೆ.....
15 comments:
ಹೌದು ಸಾರ್...
ಕೆಲವೇ ಕೆಲವರು ಮಾಡುವ ಈ ಅಸಭ್ಯ, ಅನಾರೋಗ್ಯಕರ ಕೃತ್ಯಗಳು ಇಡೀ ಹೆಣ್ಕುಲವೇ ನಾಚಿ ತಲೆ ತಗ್ಗಿಸುವಂತಿದೆ.... ಆಂತರಿಕ ಸ್ವಾಸ್ಥ್ಯ ಕಳೆದುಕೊಂಡು ಇನ್ನೊಬ್ಬರ ಪ್ರಾಣ ತೆಗೆಯುವುದು ಯಾವ ದೊಡ್ಡ ಸಾಧನೆಯೋ ಕಾಣೆ. ಅಷ್ಟಕ್ಕೂ ಇವರು ಅಂತಹ ಸ್ವಾಸ್ಥ್ಯ ಕಳೆದುಕೊಂಡವರ ಗುಂಪಿನವರಂತೆ ನನಗೆ ಕಾಣಲಿಲ್ಲ. ಧನಪಿಶಾಚಿಯ ವಂಶದವರಾದ ಇವರಂಥವರು, ಇದನ್ನೆಲ್ಲಾ ’ನವ ನಾಗರಿಕತೆ’ ಎನ್ನುವ ಛಾದರದಡಿ ಮಾಡುತ್ತಾರೆಂಬ ಆಕ್ರೋಶ ನನಗೆ.
ನಿಮ್ಮ ಖೊನೆ ಕಿಡಿ ಸಕ್ಕತ್....
ಶ್ಯಾಮಲ
ಏನು ಹೇಳೊಣ.?ಸ್ವಾತ೦ತ್ರ್ಯ ಮತ್ತು ಸ್ವೇಚ್ಚೆಗೆ ವ್ಯತ್ಯಾಸ ತಿಳಿಯದಿದ್ದರೆ...,ಮತಿಯಲ್ಲಿ ಮಿತಿಯಿಲ್ಲದಿದ್ದರೆ....,ಶ೦ಭುಲಿ೦ಗಾ ಇದೇ ಗತಿ
well said shambulinga...
ಕಾಲ ಬದಲಾಗಿದೆ....
ಸಮಾನತೆ ಎಲ್ಲಾ ಕಡೆ ಇದೆ...
ಕುಡಿಯುವುದರಲ್ಲೂ...
ನ೦ತರ ಅದರ ಫಲಾಫಲಾದಲ್ಲೂ....
...
...
ಬೇಜಾರಾಗ್ತಾ ಇದೆ... ಏನ್ಮಾಡೋದು....
ತಮ್ಮ ಚಿ೦ತನೆ ತು೦ಬಾ ಪ್ರಸ್ತುತ. ಮಾರ್ಮಿಕ ಹಾಗು ಕಳಕಳಿಯ ಲೇಖನ. ಧನ್ಯವಾದಗಳು.
ವ್ಯವಸ್ಥೆಯನ್ನು ದೂರುವ ಬದಲು ನಾವು ಹೇಗಿರಬೇಕು ಎಂಬುದನ್ನು ಕಲಿತಿರಬೇಕು ದುಡ್ಡು ಇದೆಯೆಂದು ಈ ರೀತಿ ಬಳಸಿ ಬೇರೊಬ್ಬರಿಗೆ ತೊಂದರೆ ಕೊಡಬಾರದು. ಇದೇ ರೀತಿ ಬೆಂಗಳೂರಿನಲ್ಲೂಂದು ನೆಡೆದಿತ್ತು ರಾತ್ರಿ ಎಲ್ಲ ಪಾನಮತ್ತನಾಗಿ ಬೆಳಗಿನಜಾವ ವಾಕ್ ಗೆ ಬಂದವರು ಹಿಂದಿರುಗಿ ಮನೆಗೆ ಹೋಗಲೇ ಇಲ್ಲ. ಇಲ್ಲಿ ಸಾವಿಗೀಡಾದವರು ನಮ್ಮ ಸ್ನೇಹಿತರ ಅಪ್ಪರಲ್ಲೂಬ್ಬರಾಗಿದ್ದರು. ಆ ಶ್ರೀಮಂತ ಹುಡುಗ ಅಪಘಾತವೇನೋ ಮಾಡಿದ ಆನಂತರ ಜಾಮೀನು ಕೂಡ ಸಿಕ್ಕಿತೆಂದು ಕೇಳಿಪಟ್ಟೆ. ಹೀಗೆ ನೆಡೆಯುತ್ತಲೇ ಇರುತ್ತದೆ ಇದಕ್ಕೆ ಕಡಿವಾಣವಾಕುವವರು ಯಾರು.
ಕುಡಿದು ತೂರಾಡುವುದರಲ್ಲಿ ,ಮತ್ತಿನಲ್ಲಿ ಬೇರೆಯವರಿಗೆ ತೊಂದರೆ ಕೊಡುವುದರಲ್ಲೂ ಸಮಾನತೆ !! ಬಾರ್ ಗಳು ಮಧ್ಯರಾತ್ರಿ ಕುಡಿದವರನ್ನು ಹೊರಗೇ ಬಿಡದೆ ಬೆಳಗಾ್ಗಿ ನಶೆ ಇಳಿದ ಮೇಲೆ ಬಿಡುವುದು ಒಳ್ಳೆಯದೇನೊ.
ಪೇಪರ್ನಲ್ಲಿ ಓದಿ ನನಗೂ ಬೇಸರವಾಯಿತು.. ನಿಜ ..ಕೆಲವೇ ಕೆಲವರು ಈ ರೀತಿಯಲ್ಲಿ ನಡೆದು ಕೊ೦ಡು ಇಡಿ ಯುವ ಜನತೆಯೇ ಹಾಳು ಎ೦ದು ನಿರೂಪಿಸಿ ಬಿಡುತ್ತಾರೆ. ಇ೦ತಹ ಘಟನೆಗಳು ನಡೆಯುತ್ತಿರುವುದಕ್ಕೆ ಹೊಣೆಯಾರು ಎ೦ಬುದು ದೊಡ್ಡ ಪ್ರಶ್ನೆ.
ಇ೦ಥವರಿಗೆ ಬಲಿಯಾದ ಕುಟು೦ಬದವರಿಗಾದ ನಷ್ಟವನ್ನು ಭರಿಸಲು ಸಾಧ್ಯವೆ?
ನಿಮ್ಮ ಖೊನೆ ಖಿಡಿ ಚೆನ್ನಾಗಿದೆ.
Corporate culture ಅಂತೀರಾ? ಬಹಿರಂಗವಾಗಿ ಬಾರಿನಲ್ಲಿ ಕೊಲೆ ಮಾಡಿದವರೇ ಮುಕ್ತರಾಗಿ ತಿರುಗುತ್ತಿದ್ದಾರೆ, ಇನ್ನು ಈ ಮಹಿಳೆಗೆ(-ಹಾಗೆ ಕರೆಯಬಹುದೆ?-)ಏನು ಶಿಕ್ಷೆಯಾದೀತು?
ಸರಿಯಾಗಿ ಹೇಳಿದ್ದೀರ....
ಏನಿದ್ದರೂ ಅದೆಲ್ಲ ಆಧುನಿಕ ಸಂಸ್ಕಾರದ ಹಣೆಬರಹ, ಹೇಳಿದರೆ ಮಹಿಳಾ ಸಂಘಟನೆಗಳು ಅಟ್ಟಿಸಿಕೊಂಡು ಬರಬಹುದು !
* ಶ್ಯಾಮಲಾ ಮೇಡಂ ,
ಸಂಸ್ಕಾರವಂತರೆಲ್ಲರಿಗೂ ಇಂತಹ ಸಂಗತಿಗಳು ಬೇಸರ ತರಿಸುತ್ತವೆ. ನಿಮ್ಮ ಮಾತುಗಳು ಅಕ್ಷರಶಃ ಸತ್ಯ..ಆತ್ಮೀಯವಾಗಿ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
* ಕೂಸು ಮುಳಿಯಾಳ ದವರೇ..,
ಮತಿಗೆಟ್ಟವರಿಗಾದರೂ ಕ್ಷಮೆ-ಅನುಕಂಪ ತೋರಬೇಕಾಗುತ್ತದೆ. ಇಂತಹವರಿಗೆ ’ಪರಮಾತ್ಮ’ನೇ ಬುದ್ಧಿ ಕೊಡಬೇಕು. ಧನ್ಯವಾದಗಳು
* ಶಿವು ಮಹರಾಜ್..,
ಶಂಭುಲಿಂಗ ಎಂದದ್ದು ಸಂತೋಷವಾಯ್ತು...:) Thank u
* ಚುಕ್ಕಿ ಚಿತ್ತಾರ ..,
ವರದಿ ಓದಿದಾಗ ನನಗೂ ಬೇಸರವಾಯ್ತು...ಏನ್ಮಾಡೋದು ? ನನಗೂ ಇದೇ ಪ್ರಶ್ನೆ ಕಾಡಿದ್ದು...ನೀವೆಂದಂತೆ ಸಮಾನತೆ ಸಮವಾಗಿದೆ ಬಿಡಿ..:) "ಕಾಲಾಯ ತಸ್ಮೈ ನಮಃ" ..ಧನ್ಯವಾದಗಳು
* ಸೀತಾರಾಮ ಗುರುಗಳೇ..,
ನಿಮ್ಮ ಪ್ರೋತ್ಸಾಹವೇ ನನ್ನ ಚಿಂತನೆಗಳಿಗೆ ಆಹಾರ. ಧನ್ಯವಾದಗಳು
* ಮನಸು..,
ನಿಜ ನಿಮ್ಮ ಅಭಿಪ್ರಾಯ. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದೀರಿ..
ಮನಸ್ಸು ಹಿಂಡಿದಂತಾಗುತ್ತದೆಯಲ್ಲವೇ...ಇಂತಹವರಿಗೆ ಕಠಿಣ ಶಿಕ್ಷೆಯಾದರೇ ಕಡಿವಾಣ ಬೀಳಬಹುದೇನೋ..ಧನ್ಯವಾದಗಳು
* ’ಸುಮ’ರವರೇ
ಹ್ಹ..ಹ್ಹಾ..ಒಳ್ಳೆ ಉಪಾಯವೇ..ನಶೆ ಇಳಿದ ನಂತರ ಹೊರಬಿಡುವುದು
ಸೂಕ್ತವೇ ಹೌದು....ಹೊರಗೆ ಬಿಡಲಿಲ್ಲ ಎಂದು ರಾತ್ರಿಯೆಲ್ಲಾ ’ಸೇವಿ’ಸುತ್ತಾ ಕುಳಿತರೇನು ಮಾಡುವುದು..ಸುಪ್ರಭಾತಕ್ಕೇ Ambulance ಕರೆಸಬೇಕಾದೀತು..:) ಧನ್ಯವಾದಗಳು.
* ಮನಮುಕ್ತಾ ...,
ನಷ್ಟ ಆರ್ಥಿಕವಾದದ್ದಾದರೆ ಹೇಗೋ ಭರಿಸಬಹುದು..ಜೀವನಷ್ಟವನ್ನು ಭರಿಸುವುದೆಂತು ? ಧನ್ಯವಾದಗಳು
* ’ಸುನಾಥ’ ಗುರುಗಳೇ..
ನಿಜ...ಹಣದ ಥೈಲಿಯ ಕುಣಿತದ ಮುಂದೆ ಏನೂ ನಡೆಯದು. ಶಿಕ್ಷೆಯಾಗುವುದನ್ನು ಕಾದು ನೋಡಬೇಕಷ್ಟೆ. ಕಾಲವೇ ಎಲ್ಲಕ್ಕೂ ಉತ್ತರಿಸಬೇಕು. ಧನ್ಯವಾದಗಳು .
* ಸವಿಗನಸು..,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
* ವಿ. ಆರ್. ಭಟ್ಟರೇ..,
ಹ್ಹ..ಹ್ಹಾ..’ಹಮ್ ಹೈ ನಯಾ..ಅಂದಾಜ಼್ ಕ್ಯೂಂ ಹೋ ಪುರಾನಾ’ ಅಂತಾರ್ರೀ ಜಾಸ್ತಿ ಮಾತಾಡಿದ್ರೇ.. ಧನ್ಯವಾದಗಳು
Post a Comment