Apr 19, 2010

ಶಾಪ.. ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
...............................................................*.................................................


.....ಸುಮುಹೂರ್ತ ಸಾವಧಾನ |
     ಸುಲಗ್ನ ಸಾವಧಾನ ||......

ವೇದಘೋಷಗಳ ನಡುವೆ ಮಂಗಳಕರವಾದ  ’ನಿರೀಕ್ಷಣ’ ಮುಹೂರ್ತವು ಯಾವುದೇ ಆತಂಕಗಳಿಲ್ಲದೆ ನೆರವೇರಿತ್ತು. ಚಂದ್ರಗಿರಿಯ ಸಮಸ್ತ ಪ್ರಜೆಗಳೂ ಅಲ್ಲಿ ನೆರೆದಿದ್ದರು. ತಮ್ಮ ಪ್ರಭುವಿನ ವಿವಾಹ ಮುಹೂರ್ತದ ಸುಸಂದರ್ಭವನ್ನು ಕಣ್ಣಾರೆ ಕಂಡು ಆನಂದಿಸಲು ಪುಟ್ಟ ಮಕ್ಕಳಾದಿಯಾಗಿ , ಸೈನಿಕರು, ದಳಪತಿಗಳು, ಮಂತ್ರಿ-ಮಹೋದಯರು, ರಾಜ ಪರಿವಾರದ ದೇವಾಲಯವಾದ ’ನಖರೇಶ್ವರನ’ ಸನ್ನಿಧಿಯಲ್ಲಿನ ಸಾಲಂಕೃತ ವಿವಾಹ ಮಂಟಪದಲ್ಲಿ ತುಂಬಿಕೊಂಡಿದ್ದರು. ಚಂದ್ರಗಿರಿಯ ಸಕಲ ಮಹೋದಯರ ಸಂತಸಕ್ಕೆ , ಮಹತ್ತರವಾದ ಕಾರಣವೊಂದಿತ್ತು...!. ’ಹೊಯ್ಸಳ’ ಸಾಮ್ರಾಜ್ಯದ ಗಂಡೆದೆಯ ವೀರನೆಂದೇ ಪ್ರಖ್ಯಾತನಾಗಿದ್ದ , ಮಹರಾಜ ’ವಿರೂಪಾಕ್ಷ ಬಲ್ಲಾಳ’ ನ ಸಹೋದರಿಯನ್ನು , ಚಂದ್ರಗಿರಿಯ ರಾಜನಿಗೆ ವಿವಾಹ ಸಂಪನ್ನಗೊಳಿಸುವ ವೈಭವದ ಮುಹೂರ್ತವಾಗಿತ್ತದು.  ಬಲ್ಲಾಳರಾಯನ ಇಚ್ಚೆಯಂತೆ, ಅವನ ಸಹೋದರಿ ರಾಣಿ ’ಹರಿಯಾಳ ದೇವಿ’ಯ ವಿವಾಹವು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾದ ’ದ್ವಾರಾವತಿ’ಯಲ್ಲಿ ಸಾಂಗವಾಗಿ ಸಾಗುತ್ತಲಿತ್ತು. ಕನ್ಯಾವರಣ, ಕನ್ಯಾದಾನ, ಅಕ್ಷತಾರೋಪಣ ವಿಧಿಗಳು ಅತ್ಯಂತ ವಿಜೃಂಭಣೆಯಿಂದ , ಕಂಡು-ಕೇಳರಿಯದ ರೀತಿಯಲ್ಲಿ ನೆರವೇರಿತು. ವೈದಿಕರ ವೇದಘೋಷಗಳು, ಸಂಗೀತಗಾರರ ಹಾಡುಗಳೂ, ವಾದ್ಯಗಳೂ, ನೃತ್ಯಗಾರ್ತಿಯರ ಮನಮೋಹಕ ನೃತ್ಯಗಳೂ, ವಿವಿಧ ಕಲಾವಿದರುಗಳ ಕಲಾ ಪ್ರದರ್ಶನವು ನೆರೆದಿದ್ದವರ ಮನಸೂರೆಗೊಂಡಿತು. ಹೊಯ್ಸಳ ಸಾಮ್ರಾಜ್ಯದಲ್ಲಿ  ಕಲೆಗೆ-ಕಲಾವಿದರಿಗೆ ದೊರೆಯುತ್ತಿದ್ದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿತ್ತು ಈ ಎಲ್ಲಾ ಸಂಭ್ರಮಗಳು.
............ಮಹಾರಾಜ ವಿರೂಪಾಕ್ಷ ಬಲ್ಲಾಳ ಪತ್ನಿ ತಿರುಮಾಲಾಂಬೆಯೊಡನೆ ಸುಖಾಸೀನನಾಗಿ ತನ್ನ ಸಹೋದರಿಯ ವಿವಾಹದ ಅಪೂರ್ವ ಕ್ಷಣಗಳ ಆನಂದವನ್ನು ಸವಿಯುತ್ತಲಿದ್ದ.
ತನ್ನೆದುರಿಗೆ ಅನಿರೀಕ್ಷಿತವಾಗಿ ಆಗಮಿಸಿದ ಮಹಾಮಂತ್ರಿಗಳನ್ನು ನೋಡಿ , ಅವರನ್ನು ಕರೆದು ಪಕ್ಕದಲ್ಲೇ ಕುಳ್ಳಿರಿಸಿಕೊಂಡ. ಮಂತ್ರಿಗಳು ರಾಜನ ಕಿವಿಯಲ್ಲಿ ಅದೇನೋ ವಿಷಯವನ್ನು ಹೇಳಿದರು...ವಿಷಯವನ್ನು ಕೇಳಿದ ರಾಜ , ಅರೆಕ್ಷಣ ದಿಗ್ಭ್ರಾಂತನಾದ..!. ತಿರುಮಲಾಂಬೆಗೂ ಮಂತ್ರಿಗಳು ಹೇಳಿದ ವಿಷಯವನ್ನು ತಿಳಿಸಿದ. ಈರ್ವರ ಮುಖಗಳೂ ಬಾಡಿ ಹೋದವು. ಎಚ್ಚೆತ್ತುಕೊಂಡ ಬಲ್ಲಾಳರಾಯ , ಸಮಯವನ್ನು ಅಪವ್ಯಯ ಮಾಡುವುದು ಸರಿಯಲ್ಲವೆಂದು ಚಿಂತಿಸಿ, ನೇರವಾಗಿ ಚಂದ್ರಗಿರಿಯ ರಾಜನ ಮಾತಾ-ಪಿತೃಗಳನ್ನೇ ವಿಚಾರಣೆಗೆ ಆಹ್ವಾನಿಸಿದ. ಬಲ್ಲಾಳರಾಯನ ಮಾತುಗಳಲ್ಲಿ ಕ್ರೋಧವಿತ್ತು ...


" ಅಷ್ಟೈಶ್ವರ್ಯ ಸಂಪತ್ತುಗಳುಳ್ಳ ಹೊಯ್ಸಳ ಸಾಮ್ರಾಜ್ಯದ ಅರಸನಿಗೆ ಮೋಸವೇ ?? ನಿಮ್ಮ ಪುತ್ರನಿಗೆ ಒದಗಿಬಂದಿರುವ ಕ್ಷಯರೋಗದ ವಿಷಯವನ್ನೇಕೆ ನಮಗೆ ತಿಳಿಸಲಿಲ್ಲ ನೀವು ? ಸಾಮಂತರಾಗಿರುವ ನಿಮಗೇ ಇಷ್ಟು ದಾಷ್ಟ್ಯವಿರಬೇಕಾದರೆ..ಅಖಂಡ ಹೊಯ್ಸಳ ಸಾಮ್ರಾಜ್ಯದ ಅಧಿಪತಿ ನಾನು..ನನ್ನಿಂದ ನೀವು ಸತ್ಯವನ್ನು ಮುಚ್ಚಿಟ್ಟುಬಿಟ್ಟಿರಲ್ಲ. ಆಗಲಿ, ...ಇನ್ನೂ ವೇಳೆಯಾಗಿಲ್ಲ..ಮಾಂಗಲ್ಯಧಾರಣ ಮುಹೂರ್ತವೂ ನೆಡೆದಿಲ್ಲ...ಈ ವಿವಾಹವನ್ನು ಇಲ್ಲಿಗೇ ನಿಲ್ಲಿಸಿಬಿಡಿ. ನನ್ನ ಸಹೋದರಿಯ ಜೀವನವನ್ನು ನಾನೇ ಹಾಳುಗೆಡವಲೇ ?  ಒಬ್ಬ ರೋಗಿಗೆ ನನ್ನ ತಂಗಿಯನ್ನು ವಿವಾಹ ಮಾಡಿಕೊಡಲು ನಾನೇನು ರಣಹೇಡಿಯಲ್ಲ..!. ಸಾಕು ಮಾಡಿ ಈ ನಾಟಕ......" 

ಬಲ್ಲಾಳರಾಯನ ಮಾತುಗಳು ಗುಡುಗಿನಂತೆ ವಿವಾಹ ಮಂಟಪದಲ್ಲೆಲ್ಲಾ ಮಾರ್ದನಿಸಿತು. ಚಂದ್ರಗಿರಿಯ ಪ್ರಜೆಗಳು ಶಿಲೆಗಳಂತೆ ಸ್ತಬ್ಧರಾದರು. ಚಂದ್ರಗಿರಿಯ ರಾಜನ ಮಾತಾ-ಪಿತೃಗಳು  ದುಃಖದಿಂದ ಬಲ್ಲಾಳರಾಯನ ಪಾದಕ್ಕೆರಗಿದರು...


"ಮಹಾರಾಜ...ನಮ್ಮಿಂದ ಮಹಾಪರಾಧವಾಗಿದೆ. ನಮ್ಮನ್ನು ಕ್ಷಮಿಸಿ. ನಮ್ಮ ಪುತ್ರನ ರೋಗಕ್ಕೆ ಔಷಧೋಪಚಾರಗಳನ್ನು ನೆಡೆಸುತ್ತಿದ್ದೇವೆ. ಈಗ ಸಾಕಷ್ಟು ಗುಣಮುಖನಾಗಿದ್ದಾನೆ. ಮುಂದಿನ ದಿವಸಗಳಲ್ಲಿ , ಸೌಭಾಗ್ಯವತಿ ರಾಣಿ ’ಹರಿಯಾಳ ದೇವಿ’ಯ ಪಾತಿವ್ರತ್ಯದಿಂದ ನಮ್ಮ ಪುತ್ರನ ರೋಗವು ಸಂಪೂರ್ಣ ಗುಣಮುಖವಾಗುವುದರಲ್ಲಿ , ನಿಮಗೆ ಸಂಶಯವೇ ಬೇಡ. ದಯವಿಟ್ಟು ಅನುಗ್ರಹಿಸಿ...."

ಮಾತಾ-ಪಿತೃಗಳ ಅಶ್ರುಧಾರೆ, ಕಳಕಳಿ, ಆಕ್ರಂದನ ..ಇದ್ಯಾವುದೂ ಬಲ್ಲಾಳರಾಯನ ಮನಸನ್ನು ಗೆಲ್ಲಲಿಲ್ಲ. ಮಹಾರಾಜನ ದೃಷ್ಟಿ..  ಕ್ಷೇತ್ರ ಪುರೋಹಿತರ, ಋತ್ವಿಜರ ಕಡೆಗೆ ತಿರುಗಿತು.


 " ನಾರಯಣ ದೀಕ್ಷಿತರೆ, ತಮಗೆ ಸತ್ಯ ತಿಳಿದಿರಲಿಲ್ಲವೇ? ರಾಜ ಪರಿವಾರದ ದೈವವಾದ ’ ನಖರೇಶ್ವರ’ನನ್ನು ನಿತ್ಯ ಪೂಜಿಸುವವರು ನೀವು,  ವರನ ಜಾತಕಾದಿಗಳನ್ನು ವಿಮರ್ಶಿಸಿದವರು ನೀವು...ನಿಮ್ಮಿಂದ ಅಸತ್ಯ ಹೊರಟಿತೆ..? ನನ್ನಿಂದ ನಂಬಲಾಗುತ್ತಿಲ್ಲ, ಹೇಳಿ...ಸತ್ಯವೇನೆಂದು ಹೇಳಿ..."

ಬಲ್ಲಾಳರಾಯನ ಗುಡುಗಿಗೆ ದೀಕ್ಷಿತರು ಸ್ತಂಭೀಭೂತರಾದರು. ಅವರಿಂದ ಮಾತು ಹೊರಡದಾಯಿತು. ತುಸು ಹೊತ್ತು ಸಾವರಿಸಿಕೊಂಡು, ರಾಯನಿಗೆ ಮನವರಿಕೆ ಮಾಡಿಕೊಡಲನುವಾದರು..

" ಪ್ರಭು, ವರನ ಬಂಧುಗಳು ತಂದು ತೋರಿಸಿದ ಜಾತಕದಲ್ಲಿ ನನಗಾವ ದೊಷಗಳೂ ಕಂಡು ಬಂದಿರಲಿಲ್ಲ..ಆ ಜಾತಕ ಉತ್ತಮವಾದುದೇ ಆಗಿತ್ತು. ರೋಗದ ವಿಚಾರವಾಗಲೀ, ಅಪಮೃತ್ಯುವಿನ ವಿಷಯವಾಗಲಿ ಜಾತಕದಲ್ಲಿ ಇಲ್ಲವೇ ಇಲ್ಲ..!. ಜಾತಕವನ್ನೇ ತಿದ್ದಿರಬಹುದೇ ? ಇದರಲ್ಲಿ ಏನೋ ಮೋಸವಿದೆ ಎನಿಸುತ್ತಿದೆ ರಾಜ .."

ದೀಕ್ಷಿತರ ಮಾತಿನಿಂದ ರಾಯನ ಕೋಪ ತಾರಕಕ್ಕೇರಿತು.   ವಿವಾಹ ಕಾರ್ಯ ನೆರವೇರಿಸಲು ಕುಳಿತಿದ್ದ  ’ಶೇಷಭಟ್ಟ’ರೆಡೆಗೆ ಬಲ್ಲಾಳರಾಯ ಹರಿಹಾಯ್ದ..


" ಋತ್ವಿಜರೇ...ಹೊಯ್ಸಳರ ಪರಮ ದೈವ ’ಹೊಯ್ಸಳೇಶ್ವರನ’ ಉಪಾಸಕರು ನೀವು...ನಿಮ್ಮಿಂದಲಾದರೂ ಸತ್ಯ ಹೊರಬರಲಿ..ಅಥವ ತಾವೂ ಲೋಭಿಗಳಾಗಿಬಿಟ್ಟಿರೋ ಹೇಗೆ ?!. ಸತ್ಯವನ್ನು ಮರೆಮಾಚುವುದು ನಿಮ್ಮಂತಹವರಿಗೆ ತಕ್ಕುದಲ್ಲ..."

ಶೇಷಭಟ್ಟರಿಗೆ ಬಲ್ಲಾಳರಾಯನ ಮಾತುಗಳು ಅನುಚಿತವೆನಿಸಿದರೂ , ರಾಯನಿಗೆ ತಕ್ಕ ಸಮಾಧಾನವನ್ನು ಹೇಳಲನುವಾದರು..


" ಮಹಾರಾಜ, ನನ್ನ ತಿಳುವಳಿಕೆಯಂತೆ..ವರನ ಜಾತಕದಲ್ಲೇ ದೋಷವಿದೆ. ಆತನ ಜನ್ಮದಿನ ಮತ್ತು ಜನ್ಮಸಮಯಕ್ಕನುಸಾರವಾಗಿ ವಿವೇಚಿಸಿದರೆ ...ನಮ್ಮಲ್ಲಿರುವ ವರನ ಜಾತಕವು ತಿದ್ದಿರಬಹುದಾದ ಅಥವ ಬದಲಾಯಿಸಿರಬಹುದಾದ ಜಾತಕವೆನಿಸುತ್ತದೆ...ತಾವೇ ಪರಾಂಬರಿಸಬೇಕು..."

ಭಟ್ಟರ ಮಾತುಗಳನ್ನು  ಕೇಳಿದ ರಾಜನ ಮುಖ ಕೆಂಪಡರಿತು. ತನ್ನ ಸೊಂಟದಲ್ಲಿದ್ದ ವೀರಕತ್ತಿಯನ್ನು ಹಿರಿದು ನಿಂತು ಘರ್ಜಿಸಿದ..


" ಸಹೋದರಿ, ಇಂತಹ ಮೋಸಗಾರರ ಸಂಬಂಧವೇ ನಮಗೆ ಬೇಡ. ಈ ಕ್ಷಣವೇ ಚಂದ್ರಗಿರಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳತ್ತೇನೆ....ಈ ವಂಚಕರನ್ನು ಗಡಿಪಾರು ಮಾಡುತ್ತೇನೆ....ಸಹೋದರಿ, ಹಸೆಮಣೆ ಬಿಟ್ಟು ಎದ್ದು ಬಂದುಬಿಡು...ಇವರ ಸಹವಾಸವೇ ನಮಗೆ ಬೇಡ..ಮುಂದೊಂದು ದಿನ ಉತ್ತಮರೊಂದಿಗೆ ನಿನ್ನ ವಿವಾಹವನ್ನು ಇದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಿಸುತ್ತೇನೆ....ಬಾ ತಂಗಿ..." 

..ಬಲ್ಲಾಳರಾಯನ ನುಡಿಗಳು ಹರಿಯಾಳದೇವಿಯ ಮನಸಿನಲ್ಲಿ ಹೊಯ್ದಾಟವೆಬ್ಬಿಸಿತು. ಅದಾಗಲೇ, ಚಂದ್ರಗಿರಿಯ ರಾಜನೇ ತನ್ನ ಪತಿಯೆಂದು ಆಕೆ ಮಾನಸಿಕವಾಗಿ ಒಪ್ಪಿಯಾಗಿತ್ತು. ಹೃದಯಗಳು ಒಂದಾಗಿಬಿಟ್ಟಿದ್ದವು. ಹರಿಯಾಳದೇವಿಗೆ ಉಭಯಸಂಕಟವಾಯಿತು. ತಾನು ಮೆಚ್ಚಿರುವ, ಪ್ರೀತಿಸುವ ’ಪತಿ’ಯನ್ನು , ಯಕಶ್ಚಿತ್ ರೋಗದ ಕಾರಣಕ್ಕಾಗಿ ಬಿಟ್ಟುಬಿಡಲೆ ? ...ಅಥವ ತನ್ನ ಪಿತೃ ಸಮಾನನಾದ ಅಣ್ಣನ ಮಾತಿಗೆ ಬೆಲೆ ಕೊಡಲೆ ?? ...ಆಕೆ ಅನಿಶ್ಚಿತತೆಯಿಂದ ತೊಳಲಾಡಿದಳು. ಕೊನೆಗೆ , ತನ್ನ ಮನಸಿಗೊಪ್ಪಿರುವ ಪತಿಯನ್ನು ತಿರಸ್ಕರಿಸುವುದು ಅಸಂಬದ್ದವೆನಿತು. ಸಾವರಿಸಿಕೊಂಡು, ಬಲ್ಲಾಳರಾಯನ ಮುಂದೆ ತನ್ನ ಮನೋನಿವೇದನೆ ಮಾಡಿಕೊಂಡಳು ..


" ಅಣ್ಣಾ...ನಾನಿವರನ್ನು ಮನಸಾರೆ ಒಪ್ಪಿಯಾಗಿದೆ. ರೋಗದ ನೆಪವೊಡ್ಡಿ, ಶಿವನ ಸನ್ನಿಧಿಯಲ್ಲಿ ನಾನಿವರನ್ನು ತಿರಸ್ಕರಿಸಲಾರೆ. ಪರಮೇಶ್ವರನ ಅನುಗ್ರಹವಿದ್ದಲ್ಲಿ, ನನ್ನ ಪತಿ ಶೀಘ್ರ ಗುಣಮುಖರಾಗುತ್ತಾರೆ.  ಇನ್ನೊಂದು ಸತ್ಯ ಹೇಳುತ್ತೇನೆ...ಈಗಾಗಲೇ ನಮ್ಮ ನಿರೀಕ್ಷಣ ಮುಹೂರ್ತವು ಮುಗಿದಿದೆ. ಶಾಸ್ತ್ರಗಳು ನಿನಗೆ ತಿಳಿಯದೇ? ನಿರೀಕ್ಷಣೆಯಾದರೆ..ವಿವಾಹವಾದಂತಯೇ ಸರಿ..!. ನೀನಾವ ಕಾರಣಗಳನ್ನು ಮುಂದಿಟ್ಟರೂ ..ನಾನು ಈ ವಿವಾಹವನ್ನು ತಿರಸ್ಕರಿಸಲಾರೆ. ದಯವಿಟ್ಟು ಸಹಕರಿಸು....ಭಟ್ಟರೇ...ತಾವು ಮುಂದುವರಿಸಿ...." 

 ಸಹೋದರಿಯ ಬಾಯಿಂದ ಹೊರಬಂದ ಮಾತುಗಳು ಬಲ್ಲಾಳರಾಯನನ್ನು ದಿಗ್ಬ್ರಮೆಗೊಳಿಸಿತು. ಅವನ ಅಸ್ತಿತ್ವವನ್ನೇ ಕೆಣಕುವ ಮಾತುಗಳು ಸಹೋದರಿಯ ಬಾಯಿಂದ ಬಂದಿದ್ದವು. ..ತನ್ನ ಪ್ರೀತಿಯ ಸಹೋದರಿಯೇ ..ತನ್ನ ವಿರುದ್ಧ ಮಾತನಾಡಿದ್ದು ? ತಾನು ತುತ್ತಿಟ್ಟು ಬೆಳೆಸಿದ ಪುಟ್ಟ ಬಾಲೆಯೇ..ಹೀಗೆ ಹೇಳಿದ್ದು.....?? ಬಲ್ಲಾಳರಾಯನಿಗೆ ದಿಕ್ಕು ತೋಚದಂತಾಯಿತು.......

 (ಮುಂದುವರಿಯುತ್ತದೆ...)


ವಂದನೆಗಳೊಂದಿಗೆ....

42 comments:

ಮಹಾಬಲ ಭಟ್ಟ said...

ವಾಹ್ ..!. ಐತಿಹಾಸಿಕ ಕಥೆ ಬರೆಯುವ ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆಗಳು. ನಿರೂಪಣೆ ಚೆನ್ನಾಗಿದೆ. ಹೊಯ್ಸಳರ ಕಾಲಕ್ಕೆ ಕೊಂಡೊಯ್ದಿದ್ದೀರಿ....ಮುಂದಿನ ಕಂತಿಗೆ ಕಾಯುತ್ತೇನೆ.

shivu.k said...

ಇದೊಂದು ಉತ್ತಮ ಪ್ರಯತ್ನ. ಓದುತ್ತಾ ಆಗಿನ ಕಾಲಕ್ಕೆ ಹೋದಂತೆ ಆಗುತ್ತದೆ...ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಮುಂದುವರಿಸಿ....

ಚುಕ್ಕಿಚಿತ್ತಾರ said...

ಕಥೆಯ ನಿರೂಪಣೆ ಸು೦ದರವಾಗಿದೆ.
”ನಖರೇಶ್ವರ ”ಹೆಸರಿನ ಮಹತ್ವ ತಿಳಿಸುತ್ತೀರಾ..?
ವ೦ದನೆಗಳು

sunaath said...

ತುಂಬ ಕುತೂಹಲಕರವಾದ ವಿಷಯವಿದು. ಇತಿಹಾಸದ ಗರ್ಭದಲ್ಲಿ ಏನೇನು ಅಡಗಿರುವವೊ? ಮುಂದಿನ ಭಾಗವನ್ನು ಬೇಗನೇ ನೀಡಲು ವಿನಂತಿಸುತ್ತೇನೆ.

ಮನಸು said...

kathe nirupane tumba istavaaytu... aitihaasika kathegaLanna namage tiLiso pari wow!! mundina kantu begane barali...

kshamisi tadavaada anisikegaLige itteechike kelasada ottadadindaagi heegaguttalide..

ಸವಿಗನಸು said...

ವಾಹ್ ...... ಐತಿಹಾಸಿಕ ಕಥೆ ಓದಿ ಬಹಳ ದಿನವಾಗಿತ್ತು....
ನಮಗೆ ನೀಡಿದ್ದಕ್ಕೆ ಧನ್ಯವಾದಗಳು....
ನಿರೂಪಣೆ ಚೆನ್ನಾಗಿದೆ....
ಶುಭ ಹಾರೈಕೆಗಳು....
ಮುಂದಿನ ಕಂತು ಬೇಗ ಬರಲಿ....

ಸೀತಾರಾಮ. ಕೆ. / SITARAM.K said...

ಐತಿಹಾಸಿಕ ಕತೆ ಚೆನ್ನಾಗಿ ಕಣ್ಣೀಗೆ ಕಟ್ಟುವ ಹಾಗೇ ನಿರೂಪಿಸಿದ್ದಿರಾ!! ಕ೦ತುಗಳು ಬೇಗ ಬೇಗ ಬರಲಿ!
ಧನ್ಯವಾದಗಳು.

ಮನಮುಕ್ತಾ said...

ತು೦ಬಾ ಚೆನ್ನಾಗಿ ಐತಿಹಾಸಿಕ ಕತೆಯ ನಿರೂಪಣೆ ಮಾಡಿದ್ದೀರಿ.
ಮು೦ದಿನ ಕ೦ತನ್ನು ಬೇಗನೆ ಹಾಕಿ..

Subrahmanya said...

ಮಹಾಬಲ ಭಟ್ಟರೆ,

ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸಲಾರೆ. ಮತ್ತೆ ಬನ್ನಿ.

ತೇಜಸ್ವಿನಿ ಹೆಗಡೆ said...

ತುಂಬಾ ಕುತೂಹಲ ಘಟ್ಟದಲ್ಲಿದೆ ಕಥೆ. ಮುಂದಿನ ತಿರುವಿಗಾಗಿ ಕಾಯುತ್ತಲಿರುವೆ. ಐತಿಹಾಸಿಕ ಕಥೆ ಬರೆಯುವಾಗ ಸಾಕಷ್ಟು ಮಾಹಿತಿಗಳನ್ನು ಅರಿತಿರಬೇಕಾಗುತ್ತದೆ. ನಿಮ್ಮ ಕಥೆಯಲ್ಲಿ ಅದರ ಆಳ ಅರಿವಾಗುತ್ತದೆ. ತುಂಬಾ ಚೆನ್ನಾಗಿ ಮೂಡಿದೆ. ಅಂದಹಾಗೆ ವಿಜಯಶ್ರೀ ಅವರು ಕೇಳಿದ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. "ನಖರೇಶ್ವರ" ಹೆಸರಿನ ಮಹತ್ವ ಹಾಗೂ ಆ ಹೆಸರಿನ ಮೂಲವನ್ನು ತಿಳಿಸುವಿರಾ?

Subrahmanya said...

ಶಿವು ಸರ್,

ನಿಮ್ಮ ಪ್ರೋತ್ಸಾಹ ನಿರಂತರವಾಗಿರಲೆಂದು ಆಶಿಸುತ್ತೇನೆ. ಧನ್ಯವಾದ

Subrahmanya said...

ಚುಕ್ಕಿ ಚಿತ್ತಾರ,
ಮೊದಲಿಗೆ ಧನ್ಯವಾದಗಳು.

’ನಖ’ ಎಂದರೆ ಉಗುರು ಅಥವ ಪಂಜ(ಪ್ರಾಣಿಗಳ) ಎನ್ನುವ ಅರ್ಥ ನಿಘಂಟುಗಳಲ್ಲಿ ದೊರೆಯುತ್ತದೆ. ಇತಿಹಾಸ ನೆಡೆದಿರುವ ಸ್ಥಳದಲ್ಲಿ ದೊರೆತಿರುವ ಶಾಸಗಳಲ್ಲಿ ಇದೇ ಹೆಸರು ಪ್ರಸ್ತಾಪವಾಗಿದೆ. ಈ ಪದಕ್ಕೆ ತೀಕ್ಷ್ಣ , ಅಪಾಯಕಾರಿಯಾದ ಮತ್ತು ತುತ್ತ ತುದಿ .. suprem ಎನ್ನುವ ಅರ್ಥವನ್ನು ಸಂಶೋಧಕರು ಕೊಡುತ್ತಾರೆ. ( ಶಾಸನಾಧರಿತವಾಗಿ). ಆದ್ದರಿಂದ ರಾಜಪರಿವಾರದ ಮುಖ್ಯದೇವಾಲಯವಾದ್ದರಿಂದ ನಖರೇಶ್ವರ ಎಂದು ಹೆಸರಿಸಿರಬಹುದು.

ಇದಕ್ಕೆ ನಗರೇಶ್ವರ ಎಂಬ ಹೆಸರೂ ಕಂಡುಬರುತ್ತದೆ. ( ಶಾಸನಗಳಲ್ಲಿ ಇಲ್ಲ. ಪ್ರಚಲಿತದಲ್ಲಿದೆ..!). ನಗರದ ಅಧಿಪತಿ ’ನಗರೇಶ್ವರ’ನಾಗುತ್ತಾನೆ. ( ನಗ ಎಂಬುದಕ್ಕೆ ಆಭರಣ, ಸಂಪತ್ತು, ಬೆಟ್ಟ ಎಂಬ ಅರ್ಥಗಳೂ ಇದೆ...ಸಂದರ್ಭಾನುಸಾರವಾಗಿ ಬಳಸಿಕೊಳ್ಳಬೇಕಾಗುತ್ತದೆ.).

ಉದಾ : ನಿಮಗೆ ತಮಿಳುನಾಡಿನ ಕಂಚೀಪುರ
( ಕಾಂಚೀಪುರಂ) ಗೊತ್ತೇ ಇರುತ್ತದೆ. ಇಲ್ಲಿ ಎರಡು ಐತಿಹಾಸಿಕ ಮಹತ್ವದ ದೇವಾಲಗಳಿದೆ.
೧) ಕಾಮಾಕ್ಷಿ-ಏಕಾಮ್ರನಾಥ ದೇವಾಲಯ
೨) ವರದರಾಜ ದೇವಾಲಯ.

ಈ ಎರಡೂ ದೇವಾಲಯಗಳೂ ಸಾಕಷ್ಟು ಅಂತರದಲ್ಲಿರುವುದರಿಂದ ..ಕಾಮಾಕ್ಷಿ-ನಾಥ ನಿರುವ ಪ್ರದೇಶ ಶಿವಕಂಚಿಯೆಂತಲೂ, ವರದರಾಜ(ವಿಷ್ಣು) ನಿರುವ ಪ್ರದೇಶವನ್ನು ವಿಷ್ಣು ಕಂಚಿಯೆಂತಲೂ ಕರೆಯಲಾಗುತ್ತದೆ. ..ಆದರೆ...ಇಡೀ ಕಂಚೀಪುರಕ್ಕೆ ಒಬ್ಬ ಒಡೆಯನಿದ್ದಾನೆ..!. ಆತನೇ ನಗರೇಗಶ್ವರ. ಈತ ಎರಡೂ ಕಂಚಿಗಳ ಅಧಿಪತಿ. ಇದಕ್ಕೆ ಪಲ್ಲವ ಮತ್ತು ಚೋಳರ ಕಾಲದ ಐತಿಹ್ಯವಿದೆ.

ನಖ ಅಥವ ನಗ...ಎರಡೂ ಇರಬಹುದು.

ಇನ್ನು, ಕಥೆಯಲ್ಲಿ ಪ್ರಸ್ತಾಪವಾಗಿರುವ ನಖ(ನಗ)ರೇಶ್ವರನ ವಿವರ ಪಡೆಯಲು, ತಾವು ದಯವಿಟ್ಟು ಕಥೆಯ ಕೊನೆಯ ಕಂತಿನವರೆಗೆ ಕಾಯಬೇಕಾಗುತ್ತದೆ. :).

ಅಂತ್ಯದಲ್ಲಿ ವಿವರ ದೊರೆಯುತ್ತದೆ.

...ಧನ್ಯವಾದಗಳು.

Subrahmanya said...

ಕಾಕಾಶ್ರೀ,

ನಿಮ್ಮ ನಿರೀಕ್ಷೆಯೆಂಬ ಪ್ರೋತ್ಸಾಹದಿಂದ ಮುಂದಿನ ಕಂತು ಬೇಗ ಬರೆಯುತ್ತೇನೆ. ಧನ್ಯವಾದಗಳು.

Subrahmanya said...

ಮನಸು,

ಕ್ಷಮೆ ಏಕೆ? ಕೆಲಸದ ಒತ್ತಡ ಇರುವುದೇ ಅಲ್ಲವೇ ? . ನೀವು ಬಂದು ಸ್ಪಂದಿಸಿದ್ದು ಸಂತೋಷವಾಯಿತು.

Subrahmanya said...

ಸವಿಗನಸು,

ನಿಜವಾಗಿ ಐತಿಹಾಸಿಕ ಕಥೆಗಳು ಇತ್ತೀಚಿಗೆ ಮರೆಯಾಗಿವೆ. ಆ ನಿತ್ಟಿನಲ್ಲಿ ನನ್ನದೊಂದು ಪುಟ್ಟ ಪ್ರಯತ್ನ. ಮುಂದಿನ ಭಾಗ ಅತಿ ಶೀಘ್ರದಲ್ಲಿ.

Subrahmanya said...

ಸೀತಾರಾಮ ಗುರುಗಳೇ,

ಧನ್ಯವಾದ. ಆದಷ್ಟು ಬೇಗ ಬರೆಯುತ್ತೇನೆ.

Subrahmanya said...

ಮನಮುಕ್ತಾ,

ಧನ್ಯವಾದ. ಬೇಗ ಬರುತ್ತೇನೆ ಮುಂದಿನ ಕಂತಿನೊಂದಿಗೆ.

Subrahmanya said...

ತೇಜಸ್ವಿನಿ ಹೆಗಡೆಯವರೆ,

ನಿಮ್ಮ ಮಾತು ಸತ್ಯ. ಐತಿಹಾಸಿಕ ಕತೆಯನ್ನು ಹೇಳಹೊರಟಾಗ ಸಾಕಷ್ಟು ಪೂರ್ವ ತಯಾರಿಗಳು ಅವಶ್ಯಕ. ಅಂತಹ ಪ್ರಯತ್ನವನ್ನು ಮಾಡಿದ್ದೇನೆ. ನಿಮಗದು ಇಷ್ಟವಾದುದಕ್ಕೆ
ಧನ್ಯವಾದಗಳು. ಕೂತೂಹಲ ತಣಿಸಲು ಬೇಗ ಬರುತ್ತೇನೆ.

ಸಾಗರದಾಚೆಯ ಇಂಚರ said...

ಐತಿಹಾಸಿಕ ಕಥೆಯನ್ನು ಬರೆಯುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
ಸುಂದರ ಆರಂಬ
ಇನ್ನೂ ಹೆಚ್ಚೆಚ್ಚು ಇತಿಹಾಸ ಕೆದಕಿ ನಮಗೆ ಉಣಬಡಿಸುತ್ತಿರಿ ಎಂದು ನಂಬುತ್ತೇನೆ

Unknown said...

Vivarane chennaagide.. Munduvaresi..

ಮನಸಿನಮನೆಯವನು said...

-->Subrahmanya,

ಐತಿಹಾಸಿಕ ಕಥೆ ಬರೆದಿರುವುದಕ್ಕೆ ತುಂಬಾ ಧನ್ಯವಾದ..
ಉತ್ತಮ ಸಂಭಾಷಣೆಗಳು..
ಸುಸೂತ್ರವಾಗಿ ಮುಂದುವರಿಯಲಿ..

prabhamani nagaraja said...

ಇತಿಹಾಸಿಕ ಕಾದ೦ಬರಿಯ ಭಾಷೆ ಸಮರ್ಪಕವಾಗಿದೆ. ಸು೦ದರವಾಗಿ ಮೂಡಿಬರುತ್ತಿದೆ. ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿದ್ದೀರಿ. ಮು೦ದುವರಿಸಿ. ಅಭಿನ೦ದನೆಗಳು.

Snow White said...

mundina kantige kayutirruve sir :)

Subrahmanya said...

ಸಾಗರದಾಚೆಗಿನ ಗುರುಮೂರ್ತಿಯವರೆ,

ನಿಮ್ಮ ನಿರೀಕ್ಷೆ ಹುಸಿಗೊಳಿಸದೆ, ಬೇಗ ಬರುವೆ. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.

Subrahmanya said...

ರವಿಕಾಂತರೆ,

ಸ್ಪಂದನೆಗೆ ಧನ್ಯವಾದ. ಮತ್ತೆ ಬನ್ನಿ.

Subrahmanya said...

!! ಜ್ಞಾನಾರ್ಪಣಮಸ್ತು !!

ನೀವು ’ಅಸ್ತು’ಎಂದಿದ್ದು ಸಂತೋಷವಾಯಿತು. ಪುನಃ ಬನ್ನಿ. ಧನ್ಯವಾದ

Subrahmanya said...

ಪ್ರಭಾಮಣಿಯವರೆ,

ನಿಮ್ಮ ಆಗಮನ ನನಗೆ ಸಂತೋಷಕೊಟ್ಟಿತು. ಸಲಹೆಗಳನ್ನು ನೀಡಿ, ಇನ್ನಷ್ಟು ಬರೆಯಲು ವಿಶ್ವಾಸ ಹೆಚ್ಚುತ್ತದೆ. ಬರುತ್ತಿರಿ. ಧನ್ಯವಾದ.

Subrahmanya said...

Snow white..,

ಧನ್ಯವಾದ ನಿಮಗೂ. ಕಾಯುತ್ತಿರಿ, ಬೇಗ ಬರೆಯುತ್ತೇನೆ.

shridhar said...

ಸರ್,
ಐತಿಹಾಸಿಕ ಕಥೆ ಚೆನ್ನಾಗಿದೆ. ನನಗೆ ಮೂದಲಿನಿಂದಲೂ ಶಾಸನಗಳು , ಇತಿಹಾಸ ಒದುವುದೆಂದರೆ ಇಷ್ಟ.ಮತ್ತು ಆಸಕ್ತಿದಾಯಕ ಕೂಡ.ತಾವು ಬರೆಯುತ್ತಿರುವ ಕಥೆ ಇಷ್ಟವಾಯ್ತು.
ತಪ್ಪು ತಿಳಿಯದಿದ್ದರೆ. ಕಥೆಯ ಮೂಲ ಆಕರಗಳನ್ನು ತಿಳಿಸುವಿರಾ !!.
ಧನ್ಯವಾದಗಳು.

Subrahmanya said...

ಶ್ರೀಧರ್ ಅವರೆ,

ನಿಮಗೆ ಇತಿಹಾಸ ಮತ್ತು ಶಾಸನಗಳ ಬಗೆಗಿನ ಆಸಕ್ತಿ ತಿಳಿತು ಖುಷಿಯಾಯಿತು.
ನಾನು ಬರೆಯುತ್ತಿರುವ ಕಥೆ, ಮೊದಲೇ ತಿಳಿಸಿರುವಂತೆ , ಆಯಾ ಪ್ರದೇಶಗಳಲ್ಲಿ ಜನಜನಿತವಾಗಿರುವ ದಂತಕತೆ(=ಕಲ್ಪಿತ, ಬಾಯಿಂದ ಬಾಯಿಗೆ ಹರಿದು ಬಂದಿರುವ) ಮತ್ತು ಇತಿಹಾಸ ನಡೆದಿರುವ ಘಟನೆಗಳ ಸಂಗ್ರಹ. ಕೆಲವೊಂದು ಸನ್ನಿವೇಷಗಳು ಸ್ಥಳೀಯ ಶಾಸನಗಳಲ್ಲೂ ಉಲ್ಲೇಖಿತವಾಗಿದೆ. ( ಕಥೆಯ ಅಂತ್ಯದಲ್ಲಿ ನಿಮಗದು ತಿಳಿಯಲಿದೆ).

ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ, ಐತಿಹಾಸಿಕ ಕಥೆ-ಕಾದಂಬರಿಗಳು ಇತಿಹಾಸದ ಯಥಾವತ್ ದರ್ಶನವಾಗಿರುವುದಿಲ್ಲ. ಕಥೆಯ ಓಘಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತಾರೆ. ಹಾಗಾಗಿ, ಮೂಲ ಆಕರಗಳನ್ನು ಹೇಳುವುದಾದರೆ, ನನ್ನ ಸಲಹೆ,

1) Epigraphica karnataka Vol 11
2) Hoysala architecture..A glance.

ಈ ಎರಡೂ ಪುಸ್ತಕಗಳು ದಾಖಲೆ ಸಹಿತವಾಗಿ ಅಂದು ನಡೆದಿರುವ ಎಲ್ಲಾ ಘಟನೆಗಳನ್ನೂ ತೆರೆದಿಡುತ್ತದೆ. ಇವುಗಳ ಆಧಾರದಲ್ಲಿ ನನ್ನ ಕಥೆಯನ್ನು ಹೆಣೆದಿದ್ದೇನೆ. ಇಲ್ಲಿ ಬರೆದಿರುವ ಎಲ್ಲಾ ಸನ್ನಿವೇಷಗಳಿಗೂ ಸೂಕ್ತ ಶಾಸನಾಧರಿತ ಅಥವ ಇನ್ನ್ಯಾವುದೇ ದಾಖಲೆಗಳು ದೊರೆಯುವುದಿಲ್ಲ. ಸಿಕ್ಕಿರುವ ಮಾಹಿತಿಗಳಿಂದ ಹೀಗಾಗಿರಬಹುದು..ಎಂಬ ಅಭಿಪ್ರಾಯದೊಡನೆ ( ಸಂಶೋಧಕರ ಅಭಿಪ್ರಾಯದಂತೆ) ಬರೆಯುತ್ತಿದ್ದೇನೆ. ಆದ್ದರಿಂದ ತಾವು , Exact ಮಾಹಿತಿಗಾಗಿ ಮೇಲಿನೆರಡು ಪುಸ್ತಕಗಳ ಮೊರೆ ಹೋಗುವುದು ಒಳ್ಳೆಯದು.

...ಕೆ.ವಿ. ಅಯ್ಯರ್ ಅವರು ಬರೆದಿರುವ ’ಶಾಂತಲಾ’ ವನ್ನು ಒಂದು ಕಾದಂಬರಿಯಾಗಿ ಓದಿದರೆ, ಅದು ಅಧ್ಬುತ. ಅಲ್ಲಿರುವುದೇ ಸತ್ಯ ಎಂದುಕೊಂಡರೆ....ಸ್ಥಳೀಯ ಐತಿಹಾಸಿಕ ದಾಖಲೆಗಳು ಅದನ್ನು ಸುಳ್ಳು ಎಂದು ತೋರಿಸುತ್ತವೆ.

ಇದೇ ಘಟನೆಯನ್ನಿಟ್ಟುಕೊಂಡು ತಾ.ಪು. ವೆಂಕಟರಾಯರು ಕಾದಂಬರಿಯೊಂದನ್ನು ಬರೆದಿದ್ದಾರೆಂದು ಕೇಳಿದ್ದೇನೆ. ಓದಿಲ್ಲ. ನಿಮಗದು ದೊರೆತರೆ, ಓದಬಹುದು.

ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಧನ್ಯವಾದಗಳು.

shridhar said...

ಸರ್,
ಆಕರಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ನಿಜ ನೀವು ಹೇಳಿದಂತೆ ಐತಿಹಾಸಿಕ ಕಥೆ , ಸಂಪೂರ್ಣ ಇತಿಹಾಸದ ಮೇಲೆ
ಅವಲಂಬಿತವಾಗಿರುವುದಿಲ್ಲ. ಕಥೆಗೆ ತಕ್ಕಂತೆ ಮಾರ್ಪಾಡು ಅಗತ್ಯ.
ಇಂತಹ ವಿಷಯಗಳನ್ನೊಳಗೊಂಡ ಕಥೆ , ಲೆಖನ , ಬರಹಗಳು ಇನ್ನಷ್ಟು ಬರಲಿ ...
ಇದರ ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇನೆ.

Subrahmanya said...

ಶ್ರೀಧರ್ ಅವರೆ,

ಧನ್ಯವಾದಗಳು.

PrashanthKannadaBlog said...

Excellent. Keep writing.

Subrahmanya said...

@ಪ್ರಶಾಂತ್,-----> ಥ್ಯಾಂಕ್ಯು.

Ittigecement said...

ಸುಬ್ರಮಣ್ಯ...

ಕುತೂಹಲ ತಡೆಯಲಾರದಾದೆ...
ಬಹಳ ಚೆನ್ನಾಗಿದೆ ನಿಮ್ಮ ಬರವಣಿಗೆ...

ಐತಿಹಾಸಿಕ ಘಟನೆಗಳನ್ನು ಬರೆಯುವದು ಬಲು ಕಷ್ಟ...

ಅಗಿನ..
ಅಲ್ಲಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ..

ಮುಂದೆ ಏನಾಯಿತು ?

(ನನ್ನ ಪರಿಚಯದವರೊಬ್ಬರ ಮದುವೆ ಜಾತಕ ನೋಡಿಯೇ ಮಾಡಿದ್ದರು..
ಮಗು ಹುಟ್ಟಿದ ಮೇಲೆ ಅಪ್ಪ, ಅಮ್ಮನ ಜಾತಕ ಫಲ ಬದಲಾಗ ಬಹುದಂತೆ...
ಇಲ್ಲಿ ಇದು ಅನಾವಶ್ಯಕ ಅನಿಸಿದರೂ..
ಯಾಕೊ ಹೇಳಿಕೊಳ್ಳ ಬೇಕೆನಿಸಿತು...
ನನ್ನ ಸ್ನೇಹಿತರು ಈಗಿಲ್ಲ...
ಅವರ ಮಗುವಿಗೆ ತಂದೆಯ ಭಾಗ್ಯ ಇಲ್ಲವಂತೆ..
ಮತ್ತೇಕೆ.. ಈ ಜಾತಕ ?)

ನಿಮ್ಮ ಬಳಿ ಇನ್ನೊಂದು ವಿನಂತಿ...

ಭಾಸ್ಕರಾಚಾರ್ಯನ ಮಗಳ ಮದುವೆ ಸಂದರ್ಭ ದಯವಿಟ್ಟು ಬರೆಯಿರಿ...
ನನಗೆ ಪೂರ್ತಿಯಾಗಿ ಗೊತ್ತಿಲ್ಲ..
ನಿಮ್ಮ ಶೈಲಿಯಲ್ಲಿ ಓದುವಾಸೆ....

ಚಂದದ ಕಥಾನಕ... ಅಭಿನಂದನೆಗಳು..

Subrahmanya said...

ಪ್ರಕಾಶಣ್ಣ,

ನಿಮ್ಮ ಪ್ರತಿಕ್ರಿಯೆ ಓದಿ ಮನಸು ತುಂಬಿ ಬಂತು. ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಬರೆಯುವ ವಿಶ್ವಾಸ ಹೆಚ್ಚಿದೆ.
ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ.

ಭಾಸ್ಕರಾಚಾರ್ಯನ ಮಗಳ ಮದುವೆ ಸಂದರ್ಭದ ಐತಿಹ್ಯ ನನಗೂ ಅಷ್ಟಾಗಿ ತಿಳಿದಿಲ್ಲ. ( ಎಲ್ಲೋ ಓದಿದ ನೆನಪಿದೆ ಅಷ್ಟೆ). ಅದನ್ನು ಅಧ್ಯಯನ ಮಾಡಿ, ಸಂಗ್ರಹಿಸಿ ಮುಂದೆ ಬರೆಯುವ ಪ್ರಯತ್ನವನ್ನು ಮಾಡುತ್ತೇನೆ.

ನಿಮ್ಮ ವಿಶ್ವಾಸಕ್ಕೆ ಆಭಾರಿ. ಧನ್ಯವಾದಗಳು.

ಜಲನಯನ said...

ಸುಬ್ರಮಣ್ಯರೇ ..ಬಹಳ ಚನ್ನಾಗಿದೆ ನಿಮ್ಮ ನಿರೂಪಣೆ ...ಐತಿಹಾಸಿಕೆ ಶೈಲಿಯೇ ವಿಶಿಷ್ಟ ..ಐ ಪ್ರಯತ್ನವೇ ಶ್ಲಾಘನೀಯ...ಕಾಯುತ್ತೇನೆ ಮುಂದಿನ ಭಾಗಕ್ಕೆ...

ಸಾಗರಿ.. said...

ಶಂಭುಲಿಂಗ ಅವರೇ,
ಕಥೆ ಬಹಳ ಚೆನ್ನಾಗಿದೆ. ಕಥೆ ಆಯ್ದುಕೊಂಡ ಮೂಲ ಯಾವುದು? ನಿರೂಪಣೆ ಬಹಳ ಚೆನ್ನಾಗಿದೆ. ಮುಂದಿನ ಭಾಗಕ್ಕೆ ಕಾಯುತ್ತಲಿದ್ದೇನೆ.

Subrahmanya said...

ಆಜಾದ್ ಸರ್,

ನಿಮ್ಮ ಸ್ಪಂದನೆಗೆ ಧನ್ಯವಾದ. ನಿಮ್ಮ ಕಾಯುವಿಕೆಯನ್ನು ಹುಸಿಗೊಳಿಸದೆ ಬರುತ್ತೇನೆ.

Subrahmanya said...

ಸಾಗರಿಯವರೆ,

ಕಥೆಯ ಮೂಲವನ್ನು ಈಗಾಗಲೇ ಮೇಲಿನ ಕಾಮೆಂಟುಗಳಲ್ಲಿ ತಿಳಿಸಿದ್ದೇನೆ. ಶಾಸನಾಧಾರಿತ ವಿಷಯಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Shriniwas M Katti said...

ಕಥೆ ತುಂಬ ಕುತೂಹಲಕಾರಿಯಾಗಿದೆ. ಹೊಯ್ಸಳರ ಇತಿಹಾಸದ ಕೆಲವು ಕಾದಂಬರಿಗಳನ್ನು ಓದಿದ್ದೇನೆ. ಆದರೆ ಹರಿಯಾಳದೇವಿಯ ವಿವಾಹದ ಕಥೆ ಗೊತ್ತಿರಲಿಲ್ಲ. ನಿಮ್ಮ ಬರವಣಿಗೆ ಮತ್ತು ಅಭಿವ್ಯಕ್ತಿ ಬಹಳೇ ಚೆನ್ನಾಗಿದೆ. ಕಥೆಯ ಮುಂದಿನ ಭಾಗವನ್ನು ಬೇಗ ಬರೆಯಿರಿ.

Subrahmanya said...

ಮಾನ್ಯ ಶ್ರೀ ಕಟ್ಟಿಯವರೇ,

ನಿಮ್ಮಾಗಮನ ಖುಷಿ ತಂದಿದೆ. ಮುಂದಿನ ಭಾಗವನ್ನೋದಲು ಪುನಃ ಬನ್ನಿ. ಧನ್ಯವಾದ.