Sep 5, 2016

ಹೊಯ್ಸಳ ಶಿಲ್ಪಗಳಲ್ಲಿ 'ಗಣೇಶ ವೈಭವ'


ಹತ್ತನೆಯ ಶತಮಾನದಿಂದ ಹದಿಮೂರನೆ ಶತಮಾನದವರೆಗೆ ಕನ್ನಡನಾಡನ್ನು ಆಳಿದ ಹೊಯ್ಸಳ ರಾಜವಂಶವು ಶಿಲ್ಪಕಲೆಗೆ ಹೆಚ್ಚು ಮಹತ್ವವನ್ನು ನೀಡಿ ನಾಡಿನಾದ್ಯಂತ ನೂರಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿದ  ಕೀರ್ತಿಯನ್ನು ಪಡೆದಿದೆ. ಹೊಯ್ಸಳರ ರಾಜಧಾನಿ ಹಳೇಬೀಡಿನ ಹೊಯ್ಸಳೇಶ್ವರ ದೇಗುಲವು ಕಲೆಯ ಸಾಗರವೆಂದೆ ಜಗದ್ವಿಖ್ಯಾತವಾಗಿದೆ. ಸಾವಿರಾರು ಆನೆ, ಕುದುರೆ, ಪಕ್ಷಿಗಳು, ಯಕ್ಷ-ಗಂಧರ್ವರು, ರಾಮಾಯಣ-ಭಾರತದಂತಹ ಶಿಲ್ಪಕಲಾಕೃತಿಗಳ ಜತೆಗೆ ವಿಶಿಷ್ಟ ಶೈಲಿಯ ಹತ್ತಾರು ಗಣೇಶ ವಿಗ್ರಹಗಳು ಈ ದೇಗುಲದಲ್ಲಿದೆ. ಗಣೇಶ ಚತುರ್ಥಿಯ ಶುಭ ಸಮಯದಲ್ಲಿ ಇಲ್ಲಿನ ಗಣೇಶ ವಿಗ್ರಹಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಕಮಲದ ಹೂವಿನ ಮೇಲೆ ನರ್ತಿಸುತ್ತಿರುವ ಗಣಪ 

ದೊಡ್ಡ ಹೊಟ್ಟೆಯ ಗಣಪ ಕಮಲದ ಹೂವಿನ ಮೇಲೆ ನರ್ತನ ಮಾಡುವುದನ್ನು ಊಹಿಸಿಕೊಳ್ಳುವುದು ಹೇಗೆ ?. ಆದರೆ, ಶಿಲ್ಪಿಯ ಕಲ್ಪನೆಯಲ್ಲಿ ಅದು ಸಾಕಾರವಾಗಿದೆ.  ಈ ನರ್ತನ ಗಣಪನಿಗೆ ನಾಲ್ಕು ಭುಜಗಳಿವೆ. ಮೈ ತುಂಬ ಗಂಟೆಗಳನ್ನೇ ಆಭರಣದಂತೆ ಧರಿಸಿರುವ ಈ ಗಣೇಶನ ಬಲಬದಿಯಲ್ಲಿ ಗಂಟೆಯ ಸರಪಳಿಯಂತಹ ನಾಜೂಕಿನ ಕೆತ್ತನೆಯನ್ನು ಗಮನಿಸಬಹುದು. ಅಲಂಕಾರಕ್ಕೆ ಮಾಡಿರುವ ಹೂವಿನ ಬಳ್ಳಿಯ ರಚನೆಯ ಪ್ರಭಾವಳಿ ಅತ್ಯಂತ ಆಕರ್ಷಕವಾಗಿದೆ. ಗಣೇಶ ನರ್ತಿಸುತ್ತಿರುವ ರಭಸಕ್ಕೆ ಹಾರಗಳು ಅತ್ತಿತ್ತ ಸರಿದಾಡಿರುವುದನ್ನು ಶಿಲ್ಪಿಯು ಸುಂದರವಾಗಿ ಮೂಡಿಸಿರುವುದನ್ನು ಗಮನಿಸಬಹುದು.  

ಅಲಂಕಾರ ಗಣಪ

ಸೂಕ್ಷ್ಮ ಕುಸುರಿ ಕೆತ್ತನೆ ಇರುವ ಮತ್ತು ಅತಿಹೆಚ್ಚು ಆಭರಣಗಳನ್ನು ಧರಿಸಿರುವ ಗಣೇಶ ಎಂದು ಈ ವಿಗ್ರಹ ಜಗದ್ವಿಖ್ಯಾತವಾಗಿದೆ. ಗಂಟೆಯ ಸರಗಳು, ಕೈಯಲ್ಲಿನ ಮೋದಕ, ರುದ್ರಾಕ್ಷಿ ಸರ, ಪುಟ್ಟ ಗದೆ, ನೂಪುರ, ಕಾಲ್ಗೆಜ್ಜೆ, ಕಿರೀಟ, ವಕ್ಷಹಾರ ಮುಂತಾದ ಕೆತ್ತನೆಗಳು ಗಮನಸೆಳೆಯುತ್ತದೆ . ಎಂಟುತೋಳು (ಅಷ್ಟಭುಜ) ಗಣಪತಿ ಎಂದೇ ಖ್ಯಾತವಾಗಿದ್ದರೂ ಇಂದು 6 ಕೈಗಳನ್ನು ಮಾತ್ರ ಗಮನಿಸಬಹುದು. ಮಿಕ್ಕೆರೆಡು ಕೈಗಳು ತುಂಡಾಗಿವೆ. ಗಣೆಶನ ವಿಗ್ರಹಕ್ಕೆ ಶಿಲ್ಪಿಯು ತೊಡಿಸಿರುವ ಆಭರಣಗಳನ್ನು ಗಮನಿಸಿ ವಿದ್ವಾಂಸರು ಈ ದೇಗುಲವನ್ನು ಆಭರಣಗಳ ಪೆಟ್ಟಿಗೆ ಎಂದು ಕರೆದಿದ್ದಾರೆ.

ಬಲಮುರಿ ಗಣಪ

ಸಾಮಾನ್ಯವಾಗಿ ಗಣಪತಿಯ ಸೊಂಡಿಲು ಎಡಭಾಗಕ್ಕೆ ತಿರುಗಿರುತ್ತದೆ. ಆದರೆ, ಈ ಗಣಪನ ಸೊಂಡಿಲು ಬಲಭಾಗಕ್ಕೆ ಇದೆ. ಬಲಮುರಿ ಗಣಪ ಜನಪದದಲ್ಲಿ ಕೋಪಿಷ್ಠ ಗಣೇಶನೆಂದು ಖ್ಯಾತನಾಗಿದ್ದಾನೆ. ಗಣೇಶ ಬ್ರಹ್ಮಚಾರಿ ಎಂದೇ ಜನಪ್ರಿಯ. ಆದರೆ ಈ ಗಣೇಶನಿಗೆ ವಿವಾಹವಾಗಿದೆ. ಆತನ ಹೊಟ್ಟೆಯ ಮೇಲಿರುವ ಆರು ಎಳೆ ಜನಿವಾರದಿಂದ ಈತ ವಿವಾಹಿತನೆಂದು ಹೇಳಬಹುದು. ಈತನಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಪತ್ನಿಯರೂ , ಶುಭ-ಲಾಭ ಎಂಬ ಇಬ್ಬರು ಮಕ್ಕಳು ಇದ್ದಾರೆಂದೂ ಹೇಳಲಾಗುತ್ತದೆ. ಹೆಸರುಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಗಣೇಶ ಮದುವೆಯಾದವನು ಎಂಬದಕ್ಕೆ 'ಶಿವಪುರಾಣ'ದಲ್ಲಿ ಉಲ್ಲೇಖಗಳಿವೆ. ಬಲಮುರಿ ಗಣಪನಿಗೆ ನಿತ್ಯ ತ್ರಿಕಾಲ ಪೂಜಾದಿಗಳನ್ನು ನಡೆಸಿದರೆ ಮಾತ್ರ ಒಲಿಯುತ್ತಾನೆ ಎಂಬ ಮಾತೂ ಚಾಲ್ತಿಯಲ್ಲಿದೆ. ಶಿಲ್ಪಿಯ ಕೈಚಳಕದಲ್ಲಿ ಈ ಗಣೇಶ ಮಾತ್ರ ಸೌಮ್ಯವಾಗಿ ಸುಂದರವಾಗಿ ಕಾಣುತ್ತಾನೆ.

ಇಲಿಯ ಮೇಲೆ ನಾಟ್ಯ ಗಣೇಶ 

ಗಣೇಶ ಇಲಿಯ ಮೇಲೆ ನರ್ತಿಸುವುದು ಎಂದರೇನು ?. ಆತನ ತೂಕವನ್ನು ಆ ಚಿಕ್ಕ ಪ್ರಾಣಿ ತಡೆದೀತೆ ?. ಆದರೆ, ಶಿಲ್ಪಿಯ ಕಲ್ಪನೆಯಲ್ಲಿ ಅವೆಲ್ಲವೂ ಸಾಧ್ಯವಾಗಿದೆ. ಈ ಸುಂದರ ಗಣೇಶ ತನ್ನ ವಾಹನ ಇಲಿಯ ಮೇಲೆ ಸಂತಸದಿಂದ ನರ್ತಿಸುತ್ತಿದ್ದಾನೆ. ಆತನ ದೇಹಭಾರವನ್ನು ತಡೆಯದ ಇಲಿಯು ನಾಲಿಗೆಯನ್ನು ಹೊರಚಾಚಿ ಚೀರುತ್ತಿದೆ. ಇಲಿಯ ಕಾಲಿನ ಉಗುರುಗಳು ಹೊರಬಂದು ಭೂಮಿಯ ಒಳಗೆ ನಾಟಿವೆ !. ಇದೆಲ್ಲವನ್ನೂ ಗಮನಿಸಿದರೆ ಶಿಲ್ಪಿಯ ತನ್ಮಯತೆ, ಸಮರ್ಪಣಾ ಮನೋಭಾವದ ಅರಿವು ಮೂಡುತ್ತದೆ. ಈ ವಿಗ್ರಹವನ್ನು ನೋಡಿಯೆ 'ಗಣಪನಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ' ಎಂದು ಹೇಳಿರಬಹುದು !. 

ಸಂಧಾನ ಗಣಪತಿ


ದೇಗುಲದ ದಕ್ಷಿಣ ಮಹಾದ್ವಾರದಲ್ಲಿರುವ ಈ ಬೃಹತ್ ಗಣಪತಿಗೆ ರಾಜರ ಕಾಲದಲ್ಲಿ ಮೊದಲ ಪೂಜೆ ಸಲ್ಲುತ್ತಿತ್ತು ಎಂದು ಹೇಳಲಾಗಿದೆ. ಹೊಯ್ಸಳ ಶಿಲ್ಪಗಳಲ್ಲೆ ಇದು ಅತ್ಯಂತ ಆಕರ್ಷಕ ಮೂರ್ತಿ ಎನಿಸಿಕೊಂಡಿದೆ. ಈ ಗಣೇಶನನ್ನು ಸಂಧಾನ ಗಣಪತಿ ಅಥವಾ ಸಂಧಿ ಗಣಪತಿ ಎಂದು ಕರೆಯಲಾಗುತ್ತಿತ್ತು ಎನ್ನುವುದಕ್ಕೆ ಸಂಶೋಧಕರು ಶಾಸನಾಧಾರಗಳನ್ನು ಒದಗಿಸಿದ್ದಾರೆ. ನಾಡಿನ ವಿವಿಧ ಬಗೆಯ ವ್ಯಾಜ್ಯಗಳನ್ನು ಈ ಗಣೇಶನ ಮುಂದೆ ಪರಿಹರಿಸಲಾಗುತ್ತಿತ್ತು. ಇಲ್ಲಿನ ಶಾಸನದ ದಾಖಲೆಯಂತೆ, ಕಳ್ಳತನ ಮಾಡಿದ ನಾಯಕನ ಮಗನೊಬ್ಬನಿಗೆ ನ್ಯಾಯ ತೀರ್ಮಾನದಂತೆ ಚಿನ್ನದ ಕಡ್ಡಿಗಳನ್ನು ಕಾಯಿಸಿ ಇದೇ ಗಣಪತಿಯ ಮುಂದೆ ಬರೆ ಹಾಕಿರುವ ಬಗ್ಗೆ ಉಲ್ಲೇಖವಿದೆ. ಪ್ರಸ್ತುತ ನಾಲ್ಕು ಕೈಗಳಲ್ಲಿ ಎರಡು ಹಾಳಾಗಿದ್ದರೂ ಮೂರ್ತಿಯ ಅಂದಕ್ಕೆನೂ ಚ್ಯುತಿ ಬಂದಿಲ್ಲ.

Aug 29, 2016

Typing in Kannada (Mac OS/X ) / ಮ್ಯಾಕ್ ಓಎಸ್ /ಎಕ್ಸ್ ಸಿಸ್ಟಮ್ ನಲ್ಲಿ ಕನ್ನಡದಲ್ಲಿ ಬರೆಯಲು ಕೆಲವು ವಿಧಾನಗಳು




ಆಪಲ್ ಸರಣಿಯ ಗಣಕಯಂತ್ರಗಳಲ್ಲಿ ಕನ್ನಡದಲ್ಲಿ ಬರೆಯಲಿಕ್ಕಾಗದು ಎನ್ನುವ ಕಾಲವೊಂದಿತ್ತು.  ಬಹಳಷ್ಟು ಕಸರತ್ತು ಮಾಡಿಕೊಂಡು ಕೆಲವರು  ಬರೆಯುತ್ತಿದ್ದರು. ಕನ್ನಡದಲ್ಲಿ ಪಠ್ಯವನ್ನು ಓದಲಿಕ್ಕೆ ಸಾಧ್ಯವಾದರೂ ಅಂತರಜಾಲದ ಸಹಾಯವಿಲ್ಲದೆ ಬರೆಯುವ ಅನುಕೂಲ ಇತ್ತೀಚಿನವರೆವಿಗೂ ಇರಲಿಲ್ಲ. 
ಮ್ಯಾಕ್/ಓಎಸ್-ಎಕ್ಸ್ ಎನ್ನುವುದು ವಿಂಡೋಸ್ ಹಾಗೂ ಲಿನಕ್ಸ್ ನಂತೆಯೇ ಕಾರ್ಯನಿರ್ವಹಿಸುವ ಆಪರೇಟಿಂಗ್ ಸಿಸ್ಟಮ್. ಇದನ್ನು ಆಪಲ್ ಸರಣಿಯ ಕಂಪ್ಯೂಟರುಗಳಲ್ಲಿ ಸ್ಥಾಪಿಸಲಾಗಿರುತ್ತದೆ.

ಮ್ಯಾಕ್ ನ ಮೌಂಟೆನ್ ಲಯನ್ ಎನ್ನುವ ಆವೃತ್ತಿ ( ವಿಂಡೋಸ್ ಎಕ್ಸ್ ಪಿ ಇದ್ದಹಾಗೆ)ಯಲ್ಲಿ ಕನ್ನಡವನ್ನು ಅಚ್ಚಿಸುವ ಸೌಲಭ್ಯಕ್ಕಾಗಿ ‘ಕನ್ನಡ ಕ್ವೆರಟಿ ( QWERTY)’ ಎನ್ನುವ ಮಾಧ್ಯಮವನ್ನು ಪರಿಚಯಿಸಲಾಯಿತು. ಈ ಮಾಧ್ಯಮ ಮ್ಯಾಕ್ ನ ಜತೆಗೇ (ಬ್ಯುಲ್ಟ್ ಇನ್) ಬಂದಿದ್ದು ಒಂದು ರೀತಿ ಅನುಕೂಲವಾಯಿತು.
ಆದರೆ, ಈಗಾಗಲೇ ಬರಹ, ನುಡಿ ಮುಂತಾದ ತಂತ್ರಾಂಶಗಳನ್ನು ಬಳಸಿ ಯುನಿಕೋಡ್ ಫಾಂಟ್ ಉಪಯೋಗಿಸಿ ಕೆ.ಪಿ.ರಾವ್ ಮತ್ತು ಐ-ಟ್ರಾನ್ಸ್ ಮಾದರಿಯಲ್ಲಿ ಕನ್ನಡ ಅಚ್ಚಿಸುವ ಅಭ್ಯಾಸ ಇರುವ ಜನಕ್ಕೆ ಕ್ವೆರಟಿ ಮಾದರಿ ಅಷ್ಟು ಸಹಕಾರಿಯಾಗುವುದಿಲ್ಲ. 

ಕಾರಣ, ಕೀಬೋರ್ಡ್ ವಿನ್ಯಾಸದಲ್ಲಿ ಉಂಟಾಗುವ ಬದಲಾವಣೆ. 
ಇನ್ನು ಮ್ಯಾಕ್ ನ ಇತ್ತೀಚಿನ ಆವೃತ್ತಿ ಯೋಸೆಮಿಟೆ (YOSEMITE) ಹಾಗೂ ‘ಎಲ್ ಕ್ಯಾಪಿಟಾನ್’ (El Capitan) ನಲ್ಲಿ ಹೊಸತಾಗಿ ಯಾವ ಅನುಕೂಲವನ್ನು ಕನ್ನಡಕ್ಕಾಗಿ ಒದಗಿಸಿಲ್ಲ. ನುಡಿ, ಬರಹ, ಪದ ಮುಂತಾದ  ಕನ್ನಡ ಬರಹದ ತಂತ್ರಾಂಶಗಳು  ಮ್ಯಾಕ್ ಸಿಸ್ಟಮ್ ಗೆ ಇನ್ನೂ ತಯಾರಾಗಿಲ್ಲ. 

ಇದರ ಹೊರತಾಗಿ ಮ್ಯಾಕ್ ನಲ್ಲಿ ಕನ್ನಡ ಬರೆಯಲು ಮೂರು ದಾರಿಗಳಿವೆ. ಅದರಲ್ಲಿ  ‘ಮ್ಯಾಕ್ ಯುಐಎಮ್ ‘ (MacUIM) ಹಾಗೂ Lipika IME ಎನ್ನುವ Input Source ಮತ್ತು Wine application. ಮೊದಲೆರೆಡು ಮಾದರಿಗಳು ಕನ್ನಡ ಸಂಹವನ ಹೊಂದಿರುವ ಯುನಿಕೋಡ್ ಶಿಷ್ಟತೆ. Mac UIM ನಲ್ಲಿ ಎಲ್ಲ ಕೀಬೋರ್ಡ್ ಮಾದರಿಗಳೂ ನಿಮಗೆ ದೊರಕುತ್ತವೆ. ಕನ್ನಡ ಅಚ್ಚಿಸಲು ಯುನಿಕೋಡ್ ಫಾಂಟ್ಗಳನ್ನು ಅಂತರಜಾಲದಿಂದ ಇಳಿಸಿಕೊಂಡರೆ, ಆ ಎಲ್ಲಾ ಫಾಂಟ್ಗಳಲ್ಲೂ ತಂಟೆ-ತಕರಾರಿಲ್ಲದೆ ಕನ್ನಡ ಬರಹವನ್ನು ಮೂಡಿಸಬಹುದು. ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುವ ವಿಧಾನ ಇಂತಿದೆ,

ಅಗತ್ಯಗಳು:
೧. ಆಪಲ್ ಸರಣಿಯ ಗಣಕಯಂತ್ರ . :) 
೨. ಅಂತರಜಾಲ ಸಂಪರ್ಕ
೩. ಮ್ಯಾಕ್/ Lion, Mountain Lion,  ಮತ್ತು ನಂತರದ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್
೪. ಕನಿಷ್ಟ ೨ ಜಿಬಿ ಹಾರ್ಡ್ ಡಿಸ್ಕ್ ಸ್ಥಳ ಹಾಗೂ ಮೆಮರಿ.

ಅಳವಡಿಸಿಕೊಳ್ಳುವ ಬಗೆ
೧. ಸಫಾರಿ ಅಥವಾ ಇನ್ಯಾವುದೇ ಹೊಂದಾಣಿಕೆಯಾಗಬಲ್ಲ ಬ್ರೌಸರ್ ತೆರೆದು ಹುಡುಕುವ ಪಟ್ಟಿಯಲ್ಲಿ ‘ಮ್ಯಾಕ್ ಯುಐಎಮ್’ (MacUIM Download)  ಎಂದು ಟೈಪ್ ಮಾಡಿ ಹುಡುಕಿ
೨. ಮುಂದೆ ಬರುವ ಪುಟದಲ್ಲಿ MacUIM ಅನ್ನು ಇಳಿಸಿಕೊಳ್ಳುವ ಕೊಂಡಿಗಳು ಸಿಗುತ್ತವೆ.
೩. ಅದರಲ್ಲಿ MacUIM 0.6.16-1.dmg ಎನ್ನುವ ಕಡತವನ್ನು ಇಳಿಸಿಕೊಳ್ಳಿ ( https://code.google.com/archive/p/macuim/downloads )
೪. ಬಳಿಕ ಮೇಲೆ ಹೇಳಿದ ಕಡತದ ಹೆಸರಿನ ಮೇಲೆ ಕ್ಲಿಕ್ ಮಾಡಿ ಅಥವಾ ಎಂಟರ್ ಒತ್ತಿ
೫. ಈಗ ತೆರೆದುಕೊಳ್ಳುವ ಪುಟದಲ್ಲಿ MacUIM.pkg ಎನ್ನುವ ಹೆಸರಿನ ಮೇಲೆ ಕ್ಲಿಕ್ ಮಾಡಿ
೬.  ಮುಂದೆ ತಂತಾನೆ ತಂತ್ರಾಂಶವು ನಿಮ್ಮ ಕಂಪ್ಯೂಟರಿನಲ್ಲಿ ಸ್ಥಾಪನೆಯಾಗುತ್ತದೆ.
೭. ನಂತರ application menu ವಿಗೆ ಹೋಗಿ system preferences ಎನ್ನುವ ಆಯ್ಕೆಯನ್ನು ತೆರೆಯಿರಿ
೮. ಅಲ್ಲಿಯ ಕೀಬೋರ್ಡ್ ಮೆನುವಿನಲ್ಲಿ , ನೀವು ಕೀಬೋರ್ಡ್ ಮಾದರಿಯನ್ನು ಸೇರಿಸಲು ಪ್ಲಸ್ (+) ಚಿಹ್ನೆ ಕಾಣುತ್ತದೆ. ಅದನ್ನು ಒತ್ತಿ. ಅಲ್ಲಿ ಇಂಗ್ಲಿಷ್ ಭಾಷೆ ಆಯ್ಕೆ ಮಾಡಿ. ಬಳಿಕ MacUIM (ರೋಮನ್) ಎನ್ನುವ ಆಯ್ಕೆ ಬಂದಾಗ ಅದನ್ನು ಆಯ್ಕೆ ಮಾಡಿ. 
೯.  ಕೀಬೋರ್ಡ್ ಮಾದರಿಯನ್ನು ಮುಖ್ಯಪುಟದಲ್ಲಿ ತೋರಿಸು ಎನ್ನುವ ಆಯ್ಕೆಯನ್ನು ಚೆಕ್ ಮಾಡುವುದನ್ನು ಮರೆಯಬಾರದು
೧೦. ಮುಖ್ಯಪುಟ ಅಥವಾ ಡೆಸ್ಕ್ ಟಾಪ್ ಗೆ ಬಂದಾಗ ಮೇಲ್ಭಾಗದ ಬಲ ಮೂಲೆಯಲ್ಲಿ ಕೀಬೋರ್ಡ್ ಮಾದರಿ ಕಾಣುತ್ತದೆ. ಅದರಲ್ಲಿ US ಮತ್ತು MacUIM ಎನ್ನುವ ಎರಡು ಆಯ್ಕೆಗಳಲ್ಲಿ UIM ಅನ್ನು ಸೆಲೆಕ್ಟ್ ಮಾಡಿ.
೧೧. ನಂತರ ಅದರ ಪಕ್ಕದಲ್ಲೆ  ಕಂಡುಬರುವ ‘IM’ ಎನ್ನುವ ಮೆನುವನ್ನು ತೆರೆದು preferences ಎನ್ನುವ ಉಪ ಮೆನುವನ್ನು ಆಯ್ಕೆ ಮಾಡಿ. ಅಲ್ಲಿ ನೀವು m17-n kgp, m17-n -itrans ಮುಂತಾದ ಕನ್ನಡ ಬರಹಕ್ಕೆ ಸಹಾಯಕವಾಗುವ ಮಾದರಿಯನ್ನು ಆರಿಸಿಕೊಳ್ಳಬಹುದು. ಅದೇ ಮೆನುವಿನಲ್ಲಿ Helper ಎನ್ನುವ ಉಪಮೆನುವನ್ನು ತೆರೆದು Use Helper applet ಎಂಬದನ್ನು ಆಯ್ಕೆ ಮಾಡಿಕೊಳ್ಳಬೇಕು.  
ಬಳಿಕ ನಿಮ್ಮಿಷ್ಟದ ಯುನಿಕೋಡ್ ಫಾಂಟನ್ನು ಸೆಟ್ ಮಾಡಿದರೆ , ಬೇಕಾದ ಪೇಜ್ ನಲ್ಲಿ ಕನ್ನಡವನ್ನು ಸುಲಭವಾಗಿ ಬರೆಯಬಹುದು.

೧೨. ವಿಂಡೋಸ್ ನಲ್ಲಿ ಕನ್ನಡವನ್ನು ಬರೆಯುವ  ಮುನ್ನ ಬರಹ, ನುಡಿ , ಪದ ತಂತ್ರಾಂಶಗಳನ್ನು ಚಾಲನೆ ಮಾಡುವಂತೆ ಇಲ್ಲೂ ಸಹ ಯುಐಎಮ್ ಮೀಡಿಯಾವನ್ನು ಚಾಲೂಗೊಳಿಸಿದರೆ ಆಯಿತು. (ಕನ್ನಡ ಹಾಗೂ ಆಂಗ್ಲ ಬಾಷೆಗೆ ಆಗಾಗ್ಗೆ ಬದಲಾಯಿಸಿಕೊಳ್ಳಲು Shift+Space key ಯನ್ನು ಬಳಸಬಹುದು. ಏಕೆಂದರೆ ಕೆಲವೊಮ್ಮೆ Helper applet Menu ಕೈಕೊಡುವ ಸಾಧ್ಯತೆ ಇರುತ್ತದೆ !)


ಎರಡನೇ ದಾರಿ Lipika IME ಬಳಸುವುದು. ಇದು ಸುಲಭದ ಮಾದರಿ. ಅಂತರಜಾಲದಲ್ಲಿ ಹುಡುಕಿ ನಿಮ್ಮ ಗಣಕಕ್ಕೆ ಇಳಿಸಿ ಸ್ಥಾಪಿಸಿಕೊಂಡರೆ ಆಯಿತು. (https://github.com/ratreya/Lipika_IME/wiki#installation) ಕೀಬೋರ್ಡ್ ಸೆಟ್ಟಿಂಗ್ಸ್ ಮೇಲೆ ಹೇಳಿದ ರೀತಿಯಂತೆ ಮಾಡಿಕೊಳ್ಳಬೇಕು. Itrans ಹಾಗೂ ಬರಹ ಮಾದರಿಯಲ್ಲಿ ಬರೆದು ಅಭ್ಯಾಸವಿರುವವರಿಗೆ ಇದು ಸುಲಭ ಸಾಧನ. ನುಡಿ ಮಾದರಿ ಅಂದರೆ Kgp ಮಾದರಿ ಇಲ್ಲಿ ಲಭ್ಯವಿಲ್ಲ. 

ಮೂರನೆಯದು Wine ಹಾಕಿಕೊಳ್ಳುವುದು. :) .
Wine ಒಂದು ವಿಂಡೋಸ್ ಸಪೋರ್ಟೀವ್ ಪ್ರೋಗ್ರಾಮ್. ಅಂತರಜಾಲದಿಂದ ಮೊದಲು Wine application ಸ್ಥಾಪಿಸಿಕೊಳ್ಳಬೇಕು. ಅದರ ಸಂಪೂರ್ಣ ವಿವರ ನಿಮಗೆ ಯುಟ್ಯೂಬ್ ನಲ್ಲಿ ಈ ಲಿಂಕ್ ನಲ್ಲಿ ಲಭ್ಯವಿದೆ. (https://www.youtube.com/watch?v=m0BBkISOcEA ). ವೈನ್ ಸ್ಥಾಪಿಸಿಕೊಂಡ ಬಳಿಕ ಎಲ್ಲ .EXE ಕಡತಗಳನ್ನು ವಿಂಡೋಸ್ ನಲ್ಲಿ ತೆರೆಯುವಂತೆಯೆ ಸುಲಭವಾಗಿ ತೆರೆದು (Nudi, Baraha, Ms Office etc) ನಿಮ್ಮ ಕೆಲಸ ಮಾಡಿಕೊಳ್ಳಬಹುದು.  ಪ್ರತಿ ಬಾರಿ ವೈನ್ ಇಂಜಿನ್ ಚಾಲನೆ ಮಾಡಬೇಕು. ಇದರ ಮುಖ್ಯ ಲೋಪವೆಂದರೆ, ಎಲ್ಲ ವಿಂಡೋಸ್ ಅಪ್ಲಿಕೇಶನ್ ಗಳನ್ನು ಸಪೋರ್ಟ್ ಮಾಡದಿರುವುದು. ಸಹಕಾರಿಯಾದರೂ ಆಗಾಗ್ಗೆ ಕೈಕೊಡುವ ಸಂಭವ ಹೆಚ್ಚು. ಉದಾ: Ms Word ಪ್ರೋಗ್ರಾಮ್ ನಲ್ಲಿ ಇರುವ ಎಲ್ಲ ಆಯ್ಕೆಗಳು ವೈನ್ ಅಡಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಲ್ಯಾಪ್ ಟಾಪ್ ಬಳಸುತ್ತಿದ್ದರೆ ಅದರ ಕಾರ್ಯಕ್ಷಮತೆ ಕಡಿಮೆ ಆಗುವುದರ ಜತೆಗೆ ಬ್ಯಾಟರಿ ಕೂಡಾ ಬೇಗ ಖಾಲಿಯಾಗುತ್ತದೆ. ವಿಂಡೋಸ್ ಪ್ರೇಮಿಗಳು ಇದೆಲ್ಲವನ್ನೂ ಸಹಿಸಿಕೊಂಡು ಕಾಯಕ ಮುಂದುವರಿಸಬೇಕಾಗುತ್ತದೆ.    

ಮತ್ತೆ ಮುಂದ ….
ಮಜಾ ಮಾಡಿ :)



——————