Feb 15, 2010

ಸುರಭಿ V/S ದೊಡ್ಡಗೌಡ್ರು...

                       News courtesy : Kannadaprabha
ಬದುಕುವ ಹಕ್ಕು ಸಕಲ ಜೀವಿಗಳಿಗೂ ಇದೆ. ’ಆನೆ’ಯಿಂದ ’ಅಮೀಬಾ’ವರೆಗೂ ಜೀವಿಗಳಿಗೆ ತನ್ನದೇ ಆದ ಬದುಕುವ ಪರಿಸರವಿದೆ. ಹಾಗೆಯೇ, ’ಅಮೃತ’ ಸಮಾನವಾದ ಹಾಲನ್ನು ನೀಡುವ ’ಸುರಭಿ’ ಗೂ ತನ್ನಂತ್ಯದವರೆಗೆ ಬದುಕುವ ಎಲ್ಲಾ ಹಕ್ಕನ್ನೂ ಸೃಷ್ಟಿಯೇ ನೀಡಿದೆ. ನಮ್ಮ ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡರು ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿ ನನ್ನ ವಿಚಾರಕ್ಕೆ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಲ್ಲಿ ಅವರುದುರಿಸಿರುವ ಅಣಿಮುತ್ತುಗಳನ್ನು ಮಾತ್ರ ವಿಚಾರ ಮಾಡುತ್ತಿದ್ದೇನೆ...
  ಮಾಧ್ಯಮಗಳಿಗೆ ಹೇಳಿಕೆ ನೀಡೀರುವ ದೊಡ್ಡಗೌಡರು, ಗೋಹತ್ಯೆ ನಿಷೇಧವನ್ನು ವೈಜ್ಞಾನಿಕವಾಗಿ ವಿಮರ್ಷಿಸಿ ಜಾರಿಗೆ ತರಬೇಕೆಂದು ಹೇಳುತ್ತಾ ಗೋಹತ್ಯೆ ನಿಷೇಧದ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಷೇಧ ಮಾಡುವುದೇ ಆದರೆ ವೈಜ್ಞಾನಿಕ ವಿಧಾನದಲ್ಲೇ ನಿಷೇಧಿಸೋಣ ಬಿಡಿ !. ಸಮಾಜದ ಒಂದು ಸಮುದಾಯವನ್ನು ಓಲೈಸಲು ’ಆಳುವ ಕೂಟ’ ನೆಡೆಸುತ್ತಿರುವ ಹುನ್ನಾರವೇ ಇದಾದರೆ, ದೊಡ್ಡಗೌಡರ ಮಾತುಗಳೂ ಸಹ ಸಮಾಜದ ಒಂದು ಸಮುದಾಯದ ಪರವಾಗಿಯೇ ಇದೆ. ಗೋಮಾಂಸ ಮಾರಾಟವನ್ನೇ ನೆಚ್ಚಿಕೊಂಡಿರುವ ಸಂಸಾರಗಳು ಬೀದಿಗೆ ಬರುವುದಾದರೆ, ಆಲೂಗೆಡ್ಡೆಗೆ ರೋಗ ಬಂದು , ಅಕಾಲಿಕ ಮಳೆಯಿಂದ ಕಾಫಿಗೆ ಕೊಳೆರೋಗ ಬಂದು ರೈತರೂ ಬೀದಿಗೆ ಬಿದ್ದಿದ್ದಾರೆ. ಅದೂ ಗೌಡರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ..!. ಆದರೆ ಗೌಡರ ಹೋರಾಟವೇಕೋ ’ನೈಸ್’ ರಸ್ತೆಯಲ್ಲೇ ಉರುಳಾಡುತ್ತಿದೆ. ಗೋಹತ್ಯೆ ನಿಷೇಧವನ್ನು ವಿರೋಧಿಸುವುದರಿಂದ ಒಂದು ವರ್ಗದ ಜನರ ವಿಶ್ವಾಸವನ್ನು (ಓಟನ್ನು !) ಗಳಿಸಬಹುದೆಂದು ಗೌಡರು ಭಾವಿಸಿದ್ದರೆ..ಅದು ಅವರ ಹಳೆಯ ರಾಜಕೀಯ ಲೆಕ್ಕಾಚಾರವೇ ಸರಿ. ಸಮಾಜದ ಎಲ್ಲಾ ವರ್ಗದಲ್ಲೂ ವಿಚಾರವಂತರಿದ್ದಾರೆ , ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ತಿರುವಣ್ಣಾಮಲೈಗೋ, ಮಧುರೈಗೋ ತೆರಳಿ ’ಗೋಮಾತೆ’ಯ ಬಾಲಕ್ಕೇss ಶ್ರದ್ಧಾ-ಭಕ್ತಿಯಿಂದ ಪೂಜೆಗೈಯುವ ಗೌಡರು ಕರ್ನಾಟಕದಲ್ಲಿ ಗೋಹತ್ಯೆ ನಿರಂತರವಾಗಿ ಸಾಗಲಿ ಎಂಬಂಥ ಮಾತುಗಳನ್ನಾಡುತ್ತಾರೆ.
ಆಳುವ ಕೂಟವೂ ಗೋಹತ್ಯೆ ನಿಷೇಧ ವನ್ನು ರಾಜಕೀಯವಾಗಿಯೇ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ವಿರೋಧಿಗಳ ವಿರೋಧವನ್ನು ನಿರೀಕ್ಷಿಸಿಯೇ ಇದ್ದ ರಾಜ-ಮಂತ್ರಿಗಳು ಸರಿಯಾದ ಸಮಯ ನೋಡಿ ’ದಾಳ’ ಹಾಕಿದ್ದಾರಷ್ಟೆ. ಇಂತಹ ’ದಾಳ’ಗಳು ಮಾಧ್ಯಮಗಳಿಗೆ ಆಹಾರವಾಗಬಲ್ಲವೇ ವಿನಹ ಜನಸಾಮಾನ್ಯರ ಮನಗೆಲ್ಲಲು ಸಾಧ್ಯವಾಗುವುದಿಲ್ಲ. ವಿರೋಧದ ನಡುವೆಯೂ ಈ ಕಾಯಿದೆಯೇನಾದರೂ ಅನುಮೋದನೆಗೊಂಡು ಜಾರಿಗೆ ಬಂದರೆ, ಪ್ರಾಮಾಣಿಕವಾಗಿ ಅನುಷ್ಟಾನಗೊಂಡರೆ ಅದೊಂದು ರಾಜಕೀಯ ಪವಾಡವೇ ಸರಿ !. ಗೋಮಾಂಸವನ್ನು ಮನೆಯಲ್ಲೂ ಸಂಗ್ರಹಿಸಿಡುವಂತಿಲ್ಲ ಎಂಬ ಅಂಶವೂ ಕಾಯಿದೆಯಲ್ಲಿದೆಯಂತೆ. ಗೌಡರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ’ಕೆಲವರು ಹೊರ ದೇಶಗಳಿಂದ ಆಮದು ಮಾಡಿಕೊಂಡು ’ಬೀಫ್’ ಅನ್ನು ಇಟ್ಟುಕೊಳ್ಳುತ್ತಾರೆ, ಅದನ್ನೂ ಬೇಡವೆಂದರೆ ಹೇಗೆ?’ ಎಂದು ಕೇಳುತ್ತಾರೆ. ಏಕೆ ? ನಮ್ಮ ದೇಶದ ನಾಟಿ ಹಸುಗಳ ಮಾಂಸ ರುಚಿಕರವಲ್ಲವೇ ? ಭರತಖಂಡದ ಪ್ರಧಾನಿಯಾಗಿದ್ದವರು, ಸಮಾಜದ ಎಲ್ಲಾ ಸ್ತರದವರ ಮುಖವಾಣಿಯಾಗಬೇಕಾದವರು ’ಕೆಲವೇ ಕೆಲವರು’ ಸಂಗ್ರಹಿಸಿಟ್ಟುಕೊಳ್ಳುವ ಗೋಮಾಂಸದ ಪರವಾಗಿ ವಕಾಲತ್ತು ವಹಿಸಬೇಕೆ ? ದೊಡ್ಡಗೌಡರು ಇನ್ನೊಂದು ಮೂಲ’ಭೂತ’ವಾದ ಪ್ರಶ್ನೆಯನ್ನೇ ಕೇಳಿದ್ದಾರೆ...
ಹಳ್ಳಿಗಳಲ್ಲಿ ವಯಸ್ಸಾದ-ರೊಗಬಂದಿರುವ ಗೋವುಗಳನ್ನು ಮಾರಾಟಮಾಡುವ ಪದ್ದತಿಯಿದೆ, ಇಂತಹ ಗೋವುಗಳಿಂದ ಪ್ರಯೋಜನವೇನೂ ಇಲ್ಲ, ಇವನ್ನು ಏನು ಮಾಡಬೇಕು ? ಸಾಧ್ಯವಾದರೆ ಗೋಶಾಲೆಗಳನ್ನು ತೆರೆದು ಆಶ್ರಯ ನೀಡಬಹುದಲ್ಲವೇ " ಎನ್ನುತ್ತಾರೆ. ಸರ್ಕಾರೀ ಗೋಮಾಳಗಳ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ !.
ವಯಸ್ಸಾದವರನ್ನೆಲ್ಲಾ ವೃದ್ದಾಶ್ರಮಕ್ಕೆ ಸೇರಿಸಿಬಿಡಿ ಎನ್ನುವಂತಿದೆ ಗೌಡರ ಮಾತು. ಹಾಲು ಕುಡಿದು ಹಣ ಗಳಿಸಿ ಬದುಕುವ ಕಾವಾಡಿಗ ಗೋವಿನ ಅಂತ್ಯಕಾಲದಲ್ಲಿ ಅದರ ಉಪಚಾರ ಮಾಡಲಾರದ ಸ್ಥಿತಿ ತಲುಪಿದ್ದಾನೆಯೇ ? ಜನನಾಯಕರುಗಳ ಇಂತಹ ರಾಜಕೀಯ ಹೇಳಿಕೆಗಳೇ ಜನರ ಮನಸ್ಸು ಕದಡಲು ಕಾರಣವಾಗುತ್ತದೆ. ಇನ್ನು ವಯಸ್ಸಾದ-ರೋಗದ ಗೋವುಗಳನ್ನು ಏನು ಮಾಡಬೇಕು ಎನ್ನುತ್ತಾರೆ....ಗೌಡರಿಗೂ ವಯಸ್ಸಾಗಿದೆ...ರೋಗಗಳು ಬಂದಿರುವುದೂ ಸಹಜ ! , ಏನು ಮಾಡೋಣ ? ಮಾರಾಟ ಮಾಡಿ ಬಿಡೋಣವೇ? ಕಟುಕರಿಗೆ ಒಪ್ಪಿಸಿ ಬಿಡೋಣವೇ? ಇಲ್ಲಾ...ವಯಸ್ಸಾಯಿತೆಂದು ಮನೆಯಿಂದ ಹೊರಹಾಕಿ ಚಾಪೆ-ದಿಂಬು ಕೊಡೋಣವೇ..!? ವಿರೋಧಕ್ಕಾಗಿಯೇ ವಿರೋಧಿಸುವುದು ಪ್ರಸ್ತುತ ದಿನಗಳ ರಾಜಕೀಯ ಜಾಣ್ಮೆಯೇ ಅಲ್ಲ. ಇಂತಹ ವಿರೋಧವನ್ನು   ಗೌಡರಿಂದ  ನಿರೀಕ್ಷಿಸಿಯೇ ಇದ್ದ ’ಆಳುವ ಕೂಟದವರು’ ತಮ್ಮ ರಾಜಕೀಯ ನೈಪುಣ್ಯತೆಯನ್ನು ಮೆರೆದಿದ್ದೇವೆ ಎಂದುಕೊಂಡರೆ ಅದೊಂದು ಮೂರ್ಖತನದ ಪರಮಾವಧಿ. ಪುಣ್ಯಕೋಟಿಯ ನಾಡಲ್ಲಿ ಪ್ರಾಮಾಣಿಕತೆಯನ್ನು ನಾಯಕರಿಂದ ನಿರೀಕ್ಷಿಸಬಹುದೆ ??
 ಅಂದಹಾಗೆ ’ಖೇಣಿ’ ಸಾಹೇಬರು ’ಕುಮಾರಣ್ಣ’ನವರನ್ನು ’ಜಂಟಲ್ ಮ್ಯಾನ್’ ಎಂದು ಕರೆದಿದ್ದಾರಂತೆ. ಕುಮಾರಣ್ಣ ತೋಳೇರಿಸಿ "ಪಗೆವರ ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ " ಎಂದು ನಿಂತರೆ "ಸೂಳ್ಪೆಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂದ ಭೀಷ್ಮರ ಛಾತಿ-ಮುತ್ಸದ್ದಿತನವನ್ನು ದೊಡ್ಡಗೌಡರು ತೋರಿಸಬಲ್ಲರೇ..!!?? 


ಟಿಪ್ಪಣಿ: "ಪಗೆವರ...ಗಟ್ಟಾ"...ಎಂಬ ವಾಕ್ಯ ಪಂಪಭಾರತದ್ದು..ಕರ್ಣ, ಭೀಷ್ಮರ ವಯಸ್ಸನ್ನು-ಶಕ್ತಿಯನ್ನು ಹಾಸ್ಯಮಾಡಿ ಯುದ್ಧದಲ್ಲಿ ಅವರ ಬದಲು ನನಗೆ ಪಟ್ಟಕಟ್ಟು..ವೈರಿಗಳನ್ನು ಹೊಡೆದೋಡಿಸುತ್ತೇನೆ ಎಂದಾಗ , ಭೀಷ್ಮರು ಮಾರ್ಮಿಕವಾಗಿ "ಸೂಳ್ಪೆಡೆಯ....ದೊಳ್" ..ಅಯ್ಯಾ ಈ ಮಹಾರಂಗದಲ್ಲಿ ನಿನಗೂ ಒಂದು ಸಮಯ ಬರುತ್ತದೆ ಅಣ್ಣಾ ಎನ್ನುತ್ತಾರೆ ! 




ಖೊನೆ ಖಿಡಿ :


ಶಂಭುಲಿಂಗ ಮಹಾನ್ ದೈವಭಕ್ತ !. ಅಂದು ಗುಡಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದ...


ಪೂಜ್ಯರು ( ಪೂಜಾರ್ರೇ ...??) : ಏನಯ್ಯಾ ಶಂಭು ಇವತ್ತು ಇಲ್ಲಿವರೆಗೂ ಬಂದೆ ?


ಶಂಭುಲಿಂಗ                   : ಇವತ್ತು ಸಿವರಾತ್ರಿ ಅಲ್ಲ್ವರಾ...ಅದ್ಕೆ ಬಂದೆ ಬುದ್ದಿ...


ಪೂಜ್ಯರು                      : ದಿನಾ ಬಂದು ನಮಸ್ಕಾರ ಮಾಡಯ್ಯಾ...
                                     ನಿನಗೆ ಪುಣ್ಯ ಬರುತ್ತೆ...ಸ್ವರ್ಗ ಸಿಗುತ್ತೆ...


ಶಂಭುಲಿಂಗ                   : ನೀವೂ ದಿನಾ ಬತ್ತೀರ...ಅಡ್ ಬುಳ್ತೀರಾ...ಅಂಗಾರೆ ದಿಸಾ 
                                     ಸ್ವರ್ಗ  ನೋಡ್ಕಂಬತ್ತೀರಾ ಬುದ್ದಿ !!!!!??