Mar 24, 2010

ಹೀಗೊಂದು ನವಮಿ..


ಇಂದು ಶ್ರೀರಾಮನವಮಿ
ಪುಟ್ಟ ಬಾಲ-ಬಾಲೆಯರ
ಸಡಗರದ ನವಮಿ
ಪಾನಕ-ಕೋಸಂಬರಿಗಳ
ಮಿಲನದ ಮಹಾನವಮಿ !

ಗುಡಿಯೊಳಗಿರುವ ರಾಮನಿಗೆ
ತಿನಿಸುಗಳು ಬಗೆಬಗೆ
ಮಜ್ಜಿಗೆ, ರಸಾಯನ
ಹುಳಿಯವಲಕ್ಕಿಗಳ ಲಗು-ಬಗೆ ,

ಗುಡಿಯ ಹೊರಗೆ.....
ಭಿಕಾರಿಗಳ ಅದಮ್ಯ ಯಾಚನೆ,
ಗುಡಿಯೊಳಗೆ....
ಭಕ್ಷ-ಭೋಜ್ಯಗಳ ಬಣ್ಣನೆ !
ನಿಮಿಷಕ್ಕೊಂದು ರುಚಿಯ
ಖಾದ್ಯಗಳ ಸಮಾರಾಧನೆ ..,

ರಾಮನನು ಹೊತ್ತು ಸಾಗುವ ಪರಿ
ನೋಡಲದು ಕಣ್ಣಿಗಚ್ಚರಿ !
ಉತ್ಸವದ ಭರದಲಿ
ಭಕ್ತರ ಸಡಗರದಲಿ,
ಹಸಿದ ಜೀವವ ತಳ್ಳಿ...
ಅವನ ಹೊಟ್ಟೆಗಿಟ್ಟು ಕೊಳ್ಳಿ..
ಮುಂದೆ ಸಾಗಿದ್ದು ತಿಳಿಯಲಿಲ್ಲ,
ರಾಮಚಂದ್ರ ಕಣ್ತೆರೆಯಲಿಲ್ಲ !,

ಇಂತಿಪ್ಪ ರಾಮರಾಜ್ಯದಲಿ
ಬೇಡುವ, ಕಾಡುವ ಜೀವಗಳಿಗಿಲ್ಲ..
ಮಜ್ಜಿಗೆ ಪಾನಕ..
ಕುಡಿದವರೇ ಕುಡಿಯುವರು ಮತ್ತೆ..
ಹಳ್ಳದೆಡೆಗೇ ಸದಾ ನೀರು ಹರಿವಂತೆ ..!


 ----------------------------------------------------------------------------------

ಖೊನೆಖಿಡಿ

ಶಂಭುಲಿಂಗ ತನ್ನ ಮಡದಿ  ಮತ್ತು ನಾಲ್ಕು ಮಕ್ಕಳೊಂದಿಗೆ ಮೋಟಾರಿಗೆ ಕಾಯುತ್ತಾ ನಿಂತಿದ್ದ. ಅಲ್ಲಿಗೆ ಗೌಡರ ಆಗಮನವಾಯಿತು...

ಗೌಡ್ರು : ಏನಯ್ಯಾ ಶಂಭು, ..ಚೆನ್ನಾಗಿದ್ದಾವೆ ಮಕ್ಕಳು...ಯಾವಾಗ್ ಆಯ್ತಯ್ಯಾ ನಾಲ್ಕು ಮಕ್ಕಳು ನಿಂಗೆ ?

ಶಂಭುಲಿಂಗ : ಬುದ್ದಿ..ಇವಳು ಚಿಕ್ಕೋಳು, ನಮ್ಮ ಮಗಳು...ಇವ್ನು ನನ್ನ ಎರಡನೇ ಹೆಂಡ್ತಿ ಮಗ, ಇವ್ಳು ನನ್ನ ಮೊದಲನೆ ಹೆಂಡತಿ ಮಗಳು...ಇವನು ದೊಡ್ಡೋನು......
ಇವನು....ಬುದ್ದಿ ನೆನ್ಪೇ ಆಗ್ತಿಲ್ಲಾ..ಯಾವಾಗ್ ಉಟ್ಟಿದ್ ಇವ್ನು ಅಂತ ...!!!!!

                                             ವಿಶ್ಚಾಸದೊಂದಿಗೆ,