Dec 16, 2010

ಗರುಡ ಮತ್ತು ಅರುಣ

ಗರುಡ ಮತ್ತು ಅರುಣ ಎಂಬ ಹೆಸರುಗಳನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಸಾಮಾನ್ಯವಾಗಿ ಗರುಡಪಕ್ಷಿಯನ್ನು ವಿಷ್ಣುವಿನ ವಾಹನವನ್ನಾಗಿಯೂ ಮತ್ತು ಅರುಣನನ್ನು ಸೂರ್ಯನ ಸಾರಥಿಯನ್ನಾಗಿಯೂ ವರ್ಣಿಸಿರುವುದನ್ನು ಓದಿ, ಕೇಳಿ ತಿಳಿದಿರುತ್ತೇವೆ. ಹಾಗಾದರೆ ಈ ಅರುಣ ಯಾರು ? ಮತ್ತು ಗರುಡಪಕ್ಷಿಗೂ ನಾಗಗಳಿಗೂ (ಹಾವುಗಳು) ವೈರತ್ವವೇಕೆ ?. ಇದಕ್ಕೆ ಸಂಬಂಧಿಸಿದಂತೆ ಗರುಡಪುರಾಣ ಮತ್ತು ಮಹಾಭಾರತದಲ್ಲಿ ಸೊಗಸಾದ ಕತೆಯೊಂದಿದೆ. ಕೆಳಗಿನ ಶಿಲ್ಪಚಿತ್ರವನ್ನು ಗಮನಿಸುತ್ತಾ ಚಿತ್ರದಲ್ಲಿ ಅಡಕವಾಗಿರುವ ಪುರಾಣೋಕ್ತ ವಿವರಣೆಗಳನ್ನು ತಿಳಿಯೋಣ.


ಮೊದಲಿಗೆ, ಅತ್ಯಂತ ಸುಂದರವಾದ ಮೇಲಿನ ಶಿಲ್ಪಕಲಾಚಿತ್ರವನ್ನು ಗಮನಿಸಿದಾಗ ಗರುಡಪಕ್ಷಿಯು ನಾಗಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವುದನ್ನು ಗಮನಿಸಬಹುದಾಗಿದೆ. ಈ ಶಿಲ್ಪಚಿತ್ರವು ಸುಮಾರು ೯೦೦ ವರುಷಗಳಷ್ಟು ಪುರಾತನವಾದ ಹೊಯ್ಸಳರ ಕಾಲದ ದೇವಾಲಯವೊಂದರಲ್ಲಿ ಕಂಡುಬಂದಿರುತ್ತದೆ.  ಗರುಡ ಮತ್ತು ನಾಗಗಳ ರಚನೆ , ಶಿಲ್ಪದಲ್ಲಿರುವ ಸಹಜತೆ, ಸೂಕ್ಷ್ಮಕೆತ್ತನೆಗಳನ್ನು ಗಮನಿಸಿದಾಗ ಶಿಲ್ಪಕಾರರಲ್ಲಿ ಇದ್ದಂತಹ ಸಮರ್ಪಣಾ ಮನೋಭಾವ , ತಾಳ್ಮೆ, ಸಂಸ್ಕೃತಿಯ ಅರಿವಿನ ಬಗೆಗೆ ಆಸಕ್ತಿ ಮೂಡುವುದರೊಂದಿಗೆ ಆಶ್ಚರ್ಯವೂ ಆಗುತ್ತದೆ. ಒಂದು ಶಿಲ್ಪ ವಿಗ್ರಹವನ್ನು ಕಡೆಯುವುದರ ಮೂಲಕ ಪುರಾಣದಲ್ಲಿರುವ ವಿಶಿಷ್ಟ ಘಟನೆಯೊಂದನ್ನು ಶಿಲ್ಪಿಯು ಹೇಳಿರುತ್ತಾನೆ. ಆ ಕತೆಯು ಹೀಗೆ ಪ್ರಾರಂಭವಾಗುತ್ತದೆ.

ಚತುರ್ಮುಖ ಬ್ರಹ್ಮನ ಮಗನಾದ ಕಶ್ಯಪಮಹರ್ಷಿಯು ( ಈತ ಬ್ರಹ್ಮರ್ಷಿಯೂ ಆಗಿದ್ದರಿಂದ ’ಕಶ್ಯಪಬ್ರಹ್ಮ’ನೆಂಬ ಉಲ್ಲೇಖವೂ ಕೆಲೆವೆಡೆ ಇದೆ. ವ್ಯತ್ಯಾಸಗಳೂ ಇದೆ.)  ’ದಕ್ಷ’ನ ಹದಿಮೂರು ಮಕ್ಕಳನ್ನು ವಿವಾಹವಾಗುತ್ತಾನೆ. ( ಕೆಲೆವೆಡೆ ’ಇಬ್ಬರು’ ಎಂದಿದೆ). ಅವರ ಹೆಸರುಗಳು ಹೀಗಿವೆ.., ’ಅದಿತಿ, ದಿತಿ, ದನು, ಕಲಾ, ಮುನಿ, ಅನಯೂ, ಕದ್ರು,ಪ್ರಭಾ, ಇರಾ, ಕ್ರೋಧ, ವಿನತ, ಸುರಭಿ ಮತ್ತು ಖಗ’ . ಇವರಲ್ಲಿ ಮುಖ್ಯವಾಗಿ ಅದಿತಿಗೆ ಹನ್ನೆರಡು ಮಕ್ಕಳು ಜನಿಸುತ್ತಾರೆ, ಅವರು ದೈವಾಂಶಮಿಳಿತರಾದ ದ್ವಾದಶ ಆದಿತ್ಯರೆಂದು (೧೨ ಮಂದಿ ಸೂರ್ಯರು !) ಪ್ರಸಿದ್ದರಾಗುತ್ತಾರೆ. ದಿತಿಯ ಮಕ್ಕಳು ದಾನವರೆಂದು ಖ್ಯಾತರಾಗುತ್ತಾರೆ, ಅವರಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪ ಪ್ರಮುಖರು.  ಇರಾ ಎಂಬುವಳು ತರು- ಲತೆಗಳಿಗೆ ತಾಯಿಯೆನಿಸಿಕೊಳ್ಳುತಾಳೆ. ಸುರಭಿಯು ದೈವತ್ವವುಳ್ಳ ಹಸುಗಳಿಗೆ ಜನ್ಮನೀಡುತ್ತಾಳೆ. ಕದ್ರುವಿನ ಮಕ್ಕಳು ನಾಗಗಳು ಮತ್ತು ವಿನತೆಯೆ ಮಕ್ಕಳೇ ಗರುಡ ಮತ್ತು ಅರುಣ.

ಪ್ರಮುಖವಾಗಿ ಕದ್ರು ಮತ್ತು ವಿನತೆಯರಲ್ಲಿ ಸಾಮರಸ್ಯವಿರುವುದಿಲ್ಲ. ಕ್ಷೀರಸಾಗರವನ್ನು ಕಡೆಯುವ ಸಮಯದಲ್ಲಿ   ಹಾಲಾಹಲ, ಕಾಮಧೇನು, ಕಲ್ಪವೃಕ್ಷ ಮತ್ತು ಅಮೃತವು ಹೊರಬಂದಂತೆ ’ಉಚ್ಚೈಶ್ರವಸ್’ ಎಂಬ ಅಪೂರ್ವ ಕುದುರೆಯೂ ಸೃಷ್ಟಿಯಾಗುತ್ತದೆ. ಆದರೆ ಕುದುರೆಯ ಬಣ್ಣದ ವಿಚಾರದಲ್ಲಿ ಕದ್ರುವಿಗೂ ವಿನತೆಗೂ ವಾಗ್ಯುದ್ಧವೇ ನಡೆಯುತ್ತದೆ. ವಿನತೆಯು, ಕುದುರೆಯು ಸಂಪೂರ್ಣ ಬಿಳಿಯಬಣ್ಣದ್ದೆಂದೂ ವಾದಿಸಿದರೆ ಕದ್ರುವು ಕುದುರೆಯ ಅಂಗಗಳಲ್ಲಿ ಕಪ್ಪುಬಣ್ಣವಿದೆ ಎಂದು ವಾದಿಸುತ್ತಾಳೆ. ವಾಸ್ತವದಲ್ಲಿ ಅದು ಶ್ವೇತಕುದುರೆಯೇ ಆಗಿದ್ದರೂ ಸಹಿತ ಕದ್ರುವಿನ ತಾಮಸ ಮನೋಭಾವ ಸೋಲೊಪ್ಪಿಕೊಳ್ಳುವುದಿಲ್ಲ.  ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳುವುದು ಮತ್ತು ಸೋತವರು ಗೆದ್ದವರಿಗೆ ಶರಣಾಗಿ ಸೇವಕಿಯಾಗಿರಬೇಕೆಂದು ತೀರ್ಮಾನಿಸಿ ತಮ್ಮ ಕ್ಷೇತ್ರವಾದ ’ಪಾಟಲ’ ಕ್ಕೆ ಬರುತ್ತಾರೆ. ಈ ನಡುವೆ ಇಬ್ಬರೂ ಸಂತಾನಪ್ರಾಪ್ತಿಗಾಗಿ ಚತುರ್ಮುಖ ಬ್ರಹ್ಮನನ್ನು ಕುರಿತು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗೆ ಓಗೊಡುವ ಬ್ರಹ್ಮನು ಈರ್ವರಿಗೂ ಯಾವ ಬಗೆಯ ಮಕ್ಕಳು ಬೇಕೆಂದು ಕೇಳುತ್ತಾನೆ. ಕದ್ರುವು ಚತುರರಾದ ಸಾವಿರ ಮಕ್ಕಳು ಬೇಕೆಂದು ಕೇಳಿದಾಗ ಬ್ರಹ್ಮನು ಅಸ್ತು ಎಂದು ಕದ್ರುವಿನ ವಂಶವಾಹಿನಿಯಂತೆ  ಸಾವಿರ ಮೊಟ್ಟೆಗಳನ್ನು ನೀಡುತ್ತಾನೆ. ಇತ್ತ ವಿನತೆಯು, ಬಲಶಾಲಿಗಳೂ. ತೇಜೋವಂತರೂ ಆದ ಇಬ್ಬರೇ ಮಕ್ಕಳು ಸಾಕೆಂದೂ ಮತ್ತು ಅಂತಹ ಮಕ್ಕಳನ್ನು ವಿಷ್ಣುವಿಗೆ ಅರ್ಪಿಸುವೆನೆಂದೂ ಹೇಳಿಕೊಳ್ಳತ್ತಾಳೆ.  ಬ್ರಹ್ಮನು ಆಕೆಗೂ ಎರಡು ಮೊಟ್ಟೆಗಳನ್ನು ನೀಡಿ, ಮೊಟ್ಟೆಯೊಡೆದು ತಾನಾಗೆ ಮಕ್ಕಳು ಹೊರಬರುವವರೆವಿಗೂ ಅದನ್ನು ಮುಟ್ಟಬಾರದೆಂಬ ಸೂಚನೆಯನ್ನೂ ನೀಡುತ್ತಾನೆ. ಸಮಪ್ರಮಾಣದ ಶಾಖದಲ್ಲಿಟ್ಟಿದ್ದರೂ ಕದ್ರುವಿನ ಮೊಟ್ಟೆಗಳು ಒಡೆದು ಸಾವಿರ ನಾಗಗಳು ಹೊರಬರುತ್ತವೆ ಆದರೆ ವಿನತೆಯ ಮೊಟ್ಟೆಗಳು ಫಲಪ್ರದವಾಗುವುದಿಲ್ಲ.  ಸಂತಾನ ಪ್ರಾಪ್ತವಾದ ಹಮ್ಮಿನಲ್ಲಿ ಬೀಗುವ ಕದ್ರುವನ್ನು ಕಂಡಾಗಲೆಲ್ಲ ವಿನತೆಯು ಮರುಗುತ್ತಿರುತ್ತಾಳೆ. ಒಂದು ದಿವಸ ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯ ಬಣ್ಣದ ನಿಷ್ಕರ್ಷೆಯು ನೆಡೆಯಬೇಕಾಗುವಾಗ , ಕದ್ರುವು ತನ್ನ ಮಕ್ಕಳಾದ ನಾಗಗಳನ್ನು ಕರೆದು ಕುದುರೆಯ ಬಣ್ಣವನ್ನು ಬದಲಿಸಲು ಕೇಳಿಕೊಳ್ಳುತ್ತಾಳೆ. ಅದರಂತೆ ನೆಡೆಯುವ ನಾಗಗಳು ಕುದುರೆಯ ಬಾಲಕ್ಕೆ ಸುತ್ತಿಕೊಂಡು ಬಾಲವನ್ನು ಕಪ್ಪುಬಣ್ಣಕ್ಕೆ ತಿರುಗಿಸಿಬಿಡುತ್ತವೆ. ಈ ವಂಚನೆಯನ್ನು ಅರಿಯದ ವಿನತೆಯು ಸೋತೆನೆಂದು ಒಪ್ಪಿಕೊಂಡು ಕದ್ರುವಿಗೆ ಸೇವಕಿಯಾಗಿ ಇರಲು ಒಪ್ಪಿ ಆಕೆಯ ಸೇವೆಯನ್ನು ಮಾಡುತ್ತಿರುತ್ತಾಳೆ.  ಹಲವು ವರುಷಗಳು ಕಳೆದರೂ ಬ್ರಹ್ಮನಿಂದ ಕೊಡಲ್ಪಟ್ಟ ಮೊಟ್ಟೆಗಳು ಫಲವಾಗದಿರುವುದನ್ನು ಅರಿತ ವಿನತೆಯು ಕುತೂಹಲದಿಂದ ಮೊಟ್ಟೆಗಳನ್ನಿಟ್ಟಿದ್ದ ಕಲಶಗಳ ಸಮೀಪಕ್ಕೆ ಬರುತ್ತಾಳೆ.  ಒಂದು ಕಲಶದ ಮುಸುಕನ್ನು ತೆಗೆದು ನೋಡಿದಾಗ ಅರ್ಧ ರಚಿತ ಶರೀರವೊಂದು ಹೊರಬರುತ್ತದೆ.  ಅಕಾಲದಲ್ಲಿ ಕಲಶವನ್ನು ತೆರೆದಿದ್ದರಿಂದ ಶರೀರವು ಸಂಪೂರ್ಣ ರಚನೆಯಾಗುವುದಿಲ್ಲ. ಆ ಮಗುವಿಗೆ ಸೊಂಟದ ಕೆಳಗಿನ  ಭಾಗಗಳು ಬೆಳವಣಿಗೆಯಾಗುವುದಿಲ್ಲ. ರುಣ ಎಂದರೆ ತೊಡೆ ಎಂಬರ್ಥವಿರುವುದರಿಂದ ಆ ಮಗುವಿಗೆ ಅ-ರುಣ (ಕಾಲು, ತೊಡೆಗಳಿಲ್ಲದವನು, ಕೆಂಪು ಬಣ್ಣದವನು) ಅಥವ ಅರುಣ ಎಂದು ಕರೆದ ವಿನತೆಯು ಅರುಣನನ್ನು ಸೂರ್ಯನಿಗೆ ಸಾರಥಿಯಾಗಿಸುತ್ತಾಳೆ. ( ಆದಿತ್ಯನು ವಿಷ್ಣುವಿನ ಅಂಶವಾಗಿದ್ದಾನೆ. "ಸೂರ್ಯನಾರಾಯಣ" ! ).  ಹೀಗೆ ಸೂರ್ಯನಿಗೆ ಸಾರಥಿಯಾಗುವ ಅರುಣನು ರಕ್ತವರ್ಣದಿಂದ ಪ್ರಕಾಶಿಸಿ ವಿನತೆಗೆ ಕೆಲವು ಸೂಚನೆಗಳನ್ನು ಕೊಡುತ್ತಾನೆ.

                                                                     ಸೂರ್ಯ (ಆದಿತ್ಯ)

ಇನ್ನೊಂದು ಕಲಶವನ್ನು ಫಲಪ್ರದವಾಗುವವರೆವಿಗೂ ತೆರೆಯದಂತೆ ಹೇಳಿ, ಆ ಮಗುವಿನಿಂದಲೇ ವಿನತೆಯ ದಾಸ್ಯವೂ ಮುಗಿಯುತ್ತದೆಂದು ತಿಳಿಸುತ್ತಾನೆ. ಈ ಘಟನೆಯು ನೆಡೆದು ಐದುನೂರು ವರುಷಗಳ ಬಳಿಕ ಇನ್ನೊಂದು ಮೊಟ್ಟೆಯೂ ಒಡೆದು ತೇಜೋಮಯವಾದ, ಬೃಹದಾಕಾರವಾದ, ದೈವತ್ವಗುಣಗಳನ್ನು ಹೊಂದಿದ್ದ ಪಕ್ಷಿರೂಪದ ಮಗುವು ಹೊರಬರುತ್ತದೆ. ವಿನತೆಯು ಆತನಿಗೆ ’ಗರುಡ’ನೆಂದು ಹೆಸರಿಸುತ್ತಾಳೆ. ಗರುಡನಿಗೆ ತನ್ನ ಪೂರ್ವವೃತ್ತಾಂತವನ್ನೆಲ್ಲಾ ಸ್ಮರಿಸಿ ಹೇಳಿದಾಗ ಗರುಡನು ಮತ್ತೊಮ್ಮೆ ಕುದುರೆಯನ್ನು ಪರೀಕ್ಷಿಸುವ ಪಣವನ್ನು ಮುಂದಿಡುತ್ತಾನೆ. ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯನ್ನು ಬರಮಾಡಿಕೊಂಡು ಪರೀಕ್ಷಿಸಿದಾಗ ಬಾಲವು ಕಪ್ಪಾಗಿರುವುದನ್ನು ಕಂಡು ಗರುಡನು ಕುದುರೆಯ ಬಾಲದಲ್ಲಿ ಅಡಗಿದ್ದ ನಾಗಗಳನ್ನು ಕೈಯಲ್ಲಿ  ಹಿಡಿದು ತರುತ್ತಾನೆ ಮತ್ತು ವಂಚನೆಯನ್ನು ಬಯಲು ಮಾಡುತ್ತಾನೆ.  ಇದರಿಂದ ನಿರಾಶೆಗೊಂಡ ಕದ್ರುವು ವಿನತೆಯ ದಾಸ್ಯವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಬರುತ್ತಾಳೆ.   ಆದರೆ ನಾಗಗಳು ವಿನತೆಯನ್ನು ಬಲವಾಗಿ ಹಿಡಿದಿಟ್ಟುಕೊಂಡು ಗರುಡನಿಗೆ ಶರತ್ತನ್ನು ಒಡ್ಡುತ್ತಾರೆ. ದೇವಲೋಕದ ಅಮೃತವನ್ನು ತಂದುಕೊಟ್ಟಲ್ಲಿ ವಿನತೆಯನ್ನು ಬಿಡುಗಡೆಗೊಳಿಸುವುದಾಗಿ ಹೇಳುತ್ತಾರೆ. ಮಾತಿಗೆ ಒಪ್ಪುವ ಗರುಡನು ದೇವಲೋಕಕ್ಕೆ ಹಾರುತ್ತಾನೆ. ಅಮೃತ ದೊರಕಿಸಿಕೊಳ್ಳಲು ಗರುಡನು ಹಲವು ಸಾಹಸಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿರುಗಾಳಿಯೊಡಗೂಡಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಹಾದುಹೋಗಬೇಕಾದಾಗ ಗರುಡನು ಹಲವು ನದಿಗಳ ನೀರನ್ನು ಕುಡಿದು ಅದರಿಂದ ಬೆಂಕಿಯನ್ನು ನಂದಿಸಿ ಮುಂದುವರಿಯುತ್ತಾನೆ. ಕೊನೆಯಲ್ಲಿ ಬೆಂಕಿಯುಗುಳುವ ಎರಡು ಬೃಹತ್ ಸರ್ಪಗಳನ್ನು ಸೋಲಿಸಿ ಅಮೃತವನ್ನು ಹೊತ್ತುಬರುತ್ತಾನೆ.  ಹೀಗೆ ಅಮೃತವನ್ನು ಕದ್ದು ಹೊತ್ತೊಯ್ಯುತ್ತಿರುವ ಗರುಡನನ್ನು ಕಂಡ ಇಂದ್ರಾದಿಗಳು ಆತನನ್ನು ಅಟ್ಟಿಸಿಕೊಂಡು ಬರುತ್ತಾರೆ. ಆದರೆ ಚಾಣಾಕ್ಷತೆಯಿಂದ ನುಗ್ಗಿ ಬರುವ ಗರುಡನು ’ಪಾಟಲ’ವನ್ನು ತಲುಪಿ ನಾಗಗಳಿಗೆ ಅಮೃತವನ್ನು ಕೊಡುತ್ತಾನೆ. ಅಮೃತ ಕೈಗೆ ಬಂದ ಸಂತಸದಲ್ಲಿ ನಾಗಗಳು ವಿನತೆಯನ್ನು ಬಂಧಮುಕ್ತಗೊಳಿಸುತ್ತಾರೆ. ಆದರೆ , ಅಮೃತವನ್ನು ಕುಡಿಯಬೇಕೆನ್ನುವಷ್ಟರಲ್ಲಿ ಇಂದ್ರಾದಿಗಳು ಬಂದು ಅಮೃತಪಾತ್ರೆಯನ್ನು ಹೊತ್ತೊಯ್ಯುತ್ತಾರೆ. ಇದರಿಂದ ನಾಗಗಳಿಗೆ ಅಮೃತತ್ವವು ಲಭಿಸದಾಗುತ್ತದೆ. ಇಂದ್ರಾದಿಗಳನ್ನು ಕರೆತಂದುದು ಗರುಡನೇ ಎಂಬ ಭಾವವು ನಾಗಗಳಲ್ಲಿ ಉಂಟಾಗಿ ಗರುಡನನ್ನು ದ್ವೇಶಿಸಲಾರಂಭಿಸುತ್ತವೆ. ಅಂತೆಯೇ ಗರುಡನಿಗೂ ನಾಗಗಳ ವಿರುದ್ಧ ದ್ವೇಶವು ಬೆಳೆಯುತ್ತದೆ. ಗರುಡನ ಅಹಾರ ನಾಗಗಳೇ ಆಗುತ್ತವೆ.  ವಿನತೆಯು ಮಾತಿಗೆ ತಪ್ಪದಂತೆ ಗರುಡನನ್ನು ವಿಷ್ಣುವಿಗೆ ನೀಡುತ್ತಾಳೆ. ಮುಂದೆ ಗರುಡನು ವಿಷ್ಣುವಿಗೆ ವಾಹನವಾಗುತ್ತಾನೆ ಮತ್ತು ವಿಷ್ಣುವಿನ ಪ್ರೇರಣೆಯಂತೆ ಗರುಡಪುರಾಣವನ್ನೂ ಪ್ರಕಟಗೊಳಿಸುತ್ತಾನೆ.

ಹೀಗೆ ಪುರಾಣೋಕ್ತ ಕತೆಯೊಂದನ್ನು ಒಂದೇ ಶಿಲ್ಪಕಲಾಕೃತಿಯಲ್ಲಿ ಸಹಜವಾಗಿ ಹಿಡಿದಿಟ್ಟಿರುವ ಕಲೆಗಾರನಿಗೆ, ಶಿಲ್ಪಿಗೆ ಶರಣೆನ್ನಲೇಬೇಕಲ್ಲವೆ ? .

-----------------------------------------------------

ಮನದಮಾತು:

ನಿಮ್ಮೆಲ್ಲರ ಹಾರೈಕೆಗಳಿಂದ ಎಲ್ಲಾ ಕೆಲಸಗಳೂ ಶುಭಪ್ರದವೇ ಆಯಿತು. ಅದಕ್ಕೆ ಧನ್ಯವಾದ. ಸುಮಾರು ಎರಡು ತಿಂಗಳೇ ಅಂದ್ಕೊಳಿ, ಏನೂ ಬರೆಯೋಕೆ ಆಗ್ಲಿಲ್ಲ, ಹಾಗಂತ ನಂಗೇನೂ ಬೇಸರವಿಲ್ಲ. ಒಂದಷ್ಟು ಕೆಲಸಗಳು, ನೆಂಟರಿಷ್ಟರು, ಹರಟೆ, ಪ್ರವಾಸ ಇತ್ಯಾದಿಗಳಲ್ಲಿ ಸಮಯ ಕಳೆದದ್ದು ತಿಳೀಲಿಲ್ಲ.  ಮತ್ತೆ, ಹೇಳಿಕೊಳ್ಳೋದು ಏನಿದೆ ? ಒಂದು ವರ್ಷ ಆಯ್ತು ಬ್ಲಾಗ್ ಅಂತ ಬರೆಯೋಕೆ ಶುರುಮಾಡಿ. ಬರೆದದ್ದು ಬರೀ ಮೂವತ್ತು ಅದೂ ೩೬೫ ದಿನದಲ್ಲಿ. ಬರೆದಷ್ಟಕ್ಕೂ ಮೆಚ್ಚುಗೆಯ ಮಾತುಗಳನ್ನಾಡಿ, ಪ್ರೋತ್ಸಾಹಿಸಿ ಇನ್ನಷ್ಟು ಬರೆಯುವಂತೆ ಪ್ರೇರೇಪಣೆ ನೀಡಿದ್ದು ನೀವು.  ಎಲ್ರಿಗೂ ನಾನು ಕೃತಜ್ಞ.  ಮೂರ್ನಾಲ್ಕು ಕತೆ ಬರೆದಾಗ ಅದಕ್ಕೂ ಬೆನ್ನು ತಟ್ಟಿದೋರು ನೀವು, ಯಾಕೋ ಕತೆಗಳನ್ನೇ ಬರೀಬೇಕು ಅಂತ ಅನ್ನಿಸುತ್ತಾ ಇದೆ. ಮುಂದೆ ಬರೀತೀನಿ.  ಮುಂದಿನ ದಿನಗಳಲ್ಲಿ ಇನ್ನಷ್ಟು ಬರೆಯೋ ಹುಮ್ಮಸ್ಸಿದೆ. ಅದಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ, ಇನ್ನೂ ಒಂದು ವರ್ಷ ಕಳೀಲಿ...ಆಗ ಮತ್ತೆ ಬಂದು ಇದೇ ತರಹ ಜಂಭ ಕೊಚ್ಕೋತೀನಿ.  ಸದ್ಯಕ್ಕೆ ಇಷ್ಟು ಸಾಕು.

------------------------------------------------------

ಕಿಡಿ :

ಶ್ರೀಮಂತ ಶಂಭುಲಿಂಗ ಅಮೇರಿಕೆಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ.
ಎಲ್ಲರೂ ಆಶ್ಚರ್ಯದಿಂದ ಶಂಭುವಿನತ್ತ ನೋಡುವವರೆ .
ಶಂಭು ಧರಿಸಿದ್ದು ಒಂದು ಲಂಗೋಟಿ ಮಾತ್ರ !.
ಕುತೂಹಲ ತಡೆಯಲಾರದೆ ಪುಟುಗೋಸಿಯಲ್ಲಿದ್ದ ಶಂಭುವನ್ನು ಮಹನೀಯನೊಬ್ಬ ಕೇಳಿಯೇ ಬಿಟ್ಟ
"ಸ್ವಾಮಿ, ಇದೇನು ನಿಮ್ಮ ವೇಷ ? ಹೀಗೆಲ್ಲಾ ಬರಬಹುದೆ ? "
ಶಂಭು ನಸುನಕ್ಕಿದ
" ಇದೇ ಒಳ್ಳೆಯದು ಸ್ವಾಮಿ, ಹೇಗೂ ನಿಮ್ಮ ವಿಮಾನನಿಲ್ದಾಣದಲ್ಲಿ ಎಲ್ಲವನ್ನೂ ಬಿಚ್ಚಿಯೇ ಪರೀಕ್ಷಿಸುತ್ತಾರೆ,
ಅದಕ್ಕೆ  ಈ ಲಂಗೋಟಿಯೇ ಬೆಸ್ಟು !!! "

----------------------------------------------------
ವಂದನೆಗಳೊಂದಿಗೆ..

    

Oct 22, 2010

ಪುಟ್ಟ ವಿರಾಮ

ಬ್ಲಾಗೆಂಬ ಸ್ನೇಹಕೂಟದ ಮಿತ್ರರೆಲ್ಲರಿಗೂ ನಮನಗಳು. ಮುಂದಿನ ಮೂರ್ನಾಲ್ಕು ವಾರಗಳು ನಿಮ್ಮೆಲ್ಲರಿಂದ  ದೂರವಿರಬೇಕಾಗಿದೆ. ಕೆಲವು ಶುಭ ಕಾರ್ಯಗಳು ಮತ್ತು ವೈಯಕ್ತಿಕ  ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕಾಗಿರುವುದರಿಂದ ಓದುವಿಕೆ ಮತ್ತು ಬರವಣಿಗೆಗೆ ತಾತ್ಕಾಲಿಕ ವಿರಾಮ ನೀಡಬೇಕಾಗಿದೆ. ಮತ್ತೆ ಬಂದು ನಿಮ್ಮೆಲ್ಲರ ಬರಹಗಳನ್ನು ಓದುವ ಕಾತುರವಿದೆ. ಇಲ್ಲಿಯವರೆವಿಗೂ ನನ್ನನ್ನು ಪ್ರೀತಿಯಿಂದ ಕರೆದುತಂದ ನಿಮ್ಮೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ....ಮತ್ತೆ ಭೇಟಿಯಾಗುತ್ತೇನೆ ಎಂಬ ಆಶಯದೊಂದಿಗೆ ......ಬರುತ್ತೇನೆ.

ಎಲ್ಲರಿಗೂ ಧನ್ಯವಾದಗಳು.

Oct 5, 2010

ಕುಂಟಮ್ಮನ ಸೇತುವೆ -೨


ಮರಿಯಪ್ಪನ ಮಗ ಯಾವಾಗ ಗುಡಿಯೊಳಗೆ ಹೊಕ್ಕಿದನೊ ಆ ಕ್ಷಣದಿಂದಲೆ ಅವನ ಹೆಸರು ’ಪೂಜಾರಿ’ ಎಂದು ಬದಲಾಯಿತು. ತೀರ ಇತ್ತಿಚಿನವರೆವಿಗೂ ಅವನ ನಿಜವಾದ ಹೆಸರೇನೆಂದು ಆತನಿಗೇ ಮರೆತು ಹೋಗುವಷ್ಟು ’ಪೂಜಾರಿ’ ಎಂಬ ಹೆಸರಿಗೆ ಅವನು ಒಗ್ಗಿಹೋಗಿದ್ದ. ಮೊದಮೊದಲು ಗುಡಿಯೊಳಗೆ ಕಾಲಿಟ್ಟಾಗ ’ಪೂಜಾರಿ’ಗೆ ಏನೊಂದೂ ಕಾಣಿಸಲಿಲ್ಲ. ಕತ್ತಲಿಗೆ ಕಣ್ಣುಗಳು ಹೊಂದಿಕೊಂಡ ನಂತರ ಅವನಿಗೆ ಮೊದಲು ಕಂಡಿದ್ದು ಜೇಡನ ಬಲೆಯಿಂದ ಮುಚ್ಚಿಹೋಗಿದ್ದ  ನಾಲ್ಕು ಕೈ ಮತ್ತು ಒಂದೂವರೆ ಕಾಲಿದ್ದ ಪುಟ್ಟ ಕಲ್ಲಿನ ವಿಗ್ರಹ ಮಾತ್ರ . ಗುಡಿಯನ್ನೆಲ್ಲಾ ಸ್ವಚ್ಚಗೊಳಿಸಿದ ನಂತರವೂ ಪೂಜಾರಿಗೆ ಅದು ಯಾವ ದೇವರ ವಿಗ್ರಹವೆಂದು ನಿರ್ಧರಿಸಲಾಗಲಿಲ್ಲ.  ಹಾಗೆ ನಿರ್ಧರಿಸಲಾಗದಿದ್ದುದಕ್ಕೆ ಏನೋ ಆ ವಿಗ್ರಹಕ್ಕೆ ಅತೀಂದ್ರಿಯ ಶಕ್ತಿಯೊಂದಿದೆ ಎಂದು ತನ್ನಷ್ಟಕ್ಕೆ ಅಂದುಕೊಂಡನೆಂದು ತೋರುತ್ತದೆ. ವಿಗ್ರಹದ ನಾಲ್ಕು ಕೈಗಳಲ್ಲಿ ಕ್ರಮವಾಗಿ ಶಂಖ, ಚಕ್ರ, ಗದೆ ಮತ್ತು ಕಮಲದ ಹೂವೊಂದು ಇದ್ದುದನ್ನು ಪೂಜಾರಿ ಗಮನಿಸಿದನು. ಆದರೆ ಪೂಜಾರಿಗೆ ವಿಗ್ರಹದ ಕಾಲಿನದೇ ಸಮಸ್ಯೆಯಾಯಿತು. ಬಲಗಾಲು ಸರಿಯಾಗಿದ್ದರೂ ಎಡಗಾಲು ಮಾತ್ರ ಮಂಡಿಯಿಂದ ಕೆಳಗೆ ಅದೃಷ್ಯವಾಗಿತ್ತು. ಕೈಯಲ್ಲಿ ಕಮಲದ ಹೂವಿದ್ದು ಮೈತುಂಬ ಕಲ್ಲಿನಲ್ಲಿ ರಚಿಸಿದ್ದ ಆಭರಣಗಳಿದ್ದುದರಿಂದ ಪೂಜಾರಿ ’ಆ’ ದೇವರನ್ನು ’ಅಮ್ಮ’ ಎಂದು ಪರಿಗಣಿಸಿದನೆಂದು ತೋರುತ್ತದೆ. ಒಂದೂವರೆ ಕಾಲಿದ್ದುದರಿಂದ ಅಮ್ಮನನ್ನು ’ಕುಂಟಮ್ಮ’ ಎಂದು ಕರೆಯಲು ಪೂಜಾರಿಗೆ ಸುಲಭ ಸಾಧ್ಯವಾಯಿತು. ಹೀಗೆ ಪೂಜಾರಿಯಿಂದ ನಾಮಕರಣಗೊಂಡ ಕುಂಟಮ್ಮದೇವರು ಸೇತುವೆಯ ಕಾರ‍್ಯಾರಂಭಕ್ಕೆ ಅಭಯವನ್ನಿತ್ತಿದ್ದಳು. ಈ ವಿದ್ಯಮಾನಗಳ ನಡುವೆ ಅಲ್ಲಿ ಇನ್ನೊಂದು ಚೋದ್ಯವೂ ನಡೆದಿತ್ತು. ಪೂಜಾರಿ ’ಆ’ ದೇವರನ್ನು ಕುಂಟಮ್ಮ ಎಂದು ಹೆಸರಿಸಿದಾಗ ಅಲ್ಲೇ ನಿಂತಿದ್ದ ಸಂಪತ್ತಯ್ಯಂಗಾರಿ ಮುಸಿ-ಮುಸಿ ನಕ್ಕಿದ್ದ. ಅಯ್ಯಂಗಾರ್ರು ಹಾಗೆ ನಗಲು ಬಲವಾದ ಕಾರಣವೊಂದಿತ್ತು. ಸಂಪತ್ತಯ್ಯಂಗಾರಿಯ ತಾತ ಆಗಾಗ್ಗೆ, ಅವರ ತಾತ ಪೂಜಿಸುತ್ತಿದ್ದ  ’ವಿಷ್ಣು’ ದೇವರ ಕತೆಯೊಂದನ್ನು ಹೇಳುತ್ತಿದ್ದರು. ಆ ಅಂತೆ-ಕಂತೆಗಳ ಕತೆ ಹೀಗಿದೆ...,  ಮಲ್ಲರಳ್ಳಿಯ ಬ್ರಾಹ್ಮಣರ ಕೇರಿಯಲ್ಲಿ ಪುಟ್ಟದಾದ ’ವಿಜಯ ನಾರಾಯಣ’ನ ಗುಡಿಯೊಂದಿತ್ತಂತೆ. ಆ ದೇವರಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದುದು ಸಂಪತ್ತಯ್ಯಂಗಾರಿಯ ತಾತನ ತಾತನಂತೆ. ಹಾಗೊಂದು ದಿವಸ ನಿತ್ಯಪೂಜಾದಿಗಳೆಲ್ಲಾ ಸಾಂಗವಾದ ನಂತರ ಇದ್ದಕ್ಕಿದ್ದಂತೆ ಬ್ರಾಹ್ಮಣರಲ್ಲಿ ಜಗಳವೊಂದು ಹುಟ್ಟಿತಂತೆ. ಅಯ್ಯಂಗಾರ್ರು ಸೇರಿದಂತೆ ವೈಷ್ಣವರೆಲ್ಲಾ ಶೈವ ಬ್ರಾಹ್ಮಣರನ್ನು "ಸ್ಮಾರ್ತ ಮುಂಡೆವಾ " ಎಂದು ಜರಿದರಂತೆ. ಸ್ಮಾರ್ತರೇನು ಕಡಿಮೆಯೆ ? "ರೆಕ್ಕಿಲ್ಲ ಪುಕ್ಕಿಲ್ಲ ಗರುಡಯ್ಯಂಗಾರಿ" ಎಂದು ಸಂಪತ್ತುವಿನ ತಾತನ ತಾತನವರನ್ನು ಹೀಯಾಳಿಸಿದರಂತೆ. ಇದೇ ಗಲಾಟೆ ದೊಂಬಿಗೆ ತಿರುಗಿ ಹೊಡೆದಾಟಗಳಾಗಿ ಅದ್ಯಾರೋ ಒಬ್ಬರು ನಾರಾಯಣ ದೇವರ ವಿಗ್ರಹವನ್ನು ಕಿತ್ತೆಸದರಂತೆ. ಆಗ ವಿಗ್ರಹದ ಎಡಗಾಲು ಮುರಿದುಹೋಯಿತಂತೆ. ಇಷ್ಟೆಲ್ಲಾ ರಂಪಾಟಗಳು ಮುಗಿದ ನಂತರ ಎಲ್ಲರಿಗೂ ಜ್ಞಾನೋದಯವಾಗಿ ಭಗ್ನಗೊಂಡ ವಿಗ್ರಹವನ್ನು ಹಾಗೆ ಹಾಳು ಬಿಟ್ಟರೆ ಕೇರಿಗೆ ಒಳ್ಳೆಯದಲ್ಲವೆಂದು ತೀರ್ಮಾನಿಸಿ ಊರ ಹೊರವಲಯದಲ್ಲಿಟ್ಟು ನಾಮ್ಕೆವಾಸ್ತೆ ಪುಟ್ಟ ಗುಡಿಯೊಂದನ್ನು ನಿರ್ಮಿಸಿದರಂತೆ. ಈಗ ಕುಂಟಮ್ಮನಾಗಿ ಪರಿವರ್ತನೆ ಹೊಂದಿದ್ದು ಗತಕಾಲದ ನಾರಾಯಣನ ವಿಗ್ರಹವೆ ಎಂದು ತಿಳಿ ಹೇಳಲು ಸಂಪತ್ತಯ್ಯಂಗಾರಿಯೊಬ್ಬನನ್ನು ಬಿಟ್ಟರೆ ಆ ವಿಚಾರವಾಗಿ ತಿಳಿದವರು ಅಲ್ಲ್ಯಾರೂ ಇರಲಿಲ್ಲ. ನಾರಾಯಣನನ್ನು ಕುಂಟಮ್ಮನೆಂದು ಕರೆದಿದ್ದುದಕ್ಕೇ ಸಂಪತ್ತು ಹಾಗೆ ಮುಸಿ-ಮುಸಿ ನಕ್ಕಿದ್ದು. ಇಷ್ಟಾದರೂ "ನಮ್ಮ" ದೇವರಿಗೆ ಈಗಲಾದರೂ ಪೂಜೆಯಾಗುತ್ತಿದೆಯಲ್ಲಾ ಎಂಬ ಕಾರಣಕ್ಕೆ ಸಂಪತ್ತಯ್ಯಂಗಾರಿಯು ನಾರಾಯಣನ ಇತಿಹಾಸವನ್ನು ಮುಚ್ಚಿಟ್ಟುಬಿಟ್ಟನು.

 ........................................*...................................

ಹಾರೆ, ಗುದ್ದಲಿ, ಪಿಕಾಸಿಯೊಡನೆ ಸನ್ನದ್ದರಾಗಿದ್ದ ಮಲ್ಲರಳ್ಳಿಯ ಜಗಜಟ್ಟಿಗಳಿಗೆ ಮೊದಲು ತಲೆಬಿಸಿಯಾದದ್ದು ಕೆರೆಯಿಂದ ಹರಿದುಬರುತ್ತಿದ್ದ ನೀರನ್ನು ಹಳೆಯ ಸೇತುವೆಯ ಹಿಂದೆಯೇ ಅಡ್ಡಗಟ್ಟಿ ನಿಲ್ಲಿಸಬೇಕೆಂದಾಗ !. ( ಹಳೆಯ ಸೇತುವೆಯು ಮಣ್ಣಿನಲ್ಲಿ ಮುಚ್ಚಿಹೋಗಿದ್ದರೆ ಕೆರೆಯಿಂದ ಹರಿದುಬರುತ್ತಿದ್ದ ಹಳ್ಳದ ನೀರು ಎಲ್ಲಿ ಸಾಗುತ್ತಿತ್ತು ಎಂಬ ಬುದ್ದಿವಂತಿಕೆಯ ಪ್ರಶ್ನೆಯನ್ನು ನೀವು ಕೇಳುವಂತಿಲ್ಲ ! , ಏಕೆಂದರೆ ನೀರಿನ ರಭಸಕ್ಕೆ ಹಳೆಯ ಸೇತುವೆಯ ಕೆಳಭಾಗದಲ್ಲಿ ಕೊರಕಲುಗಳು ಉಂಟಾಗಿ ಹಳ್ಳದ ನೀರು ಬಸಿದು ಹೋಗುತ್ತಿತ್ತು , ಮತ್ತು ಹಿಮ್ಮುಖವಾಗಿಯೂ ಒತ್ತುತ್ತಿತ್ತು ಎಂಬುದನ್ನು ನೀವೆ ಕಲ್ಪಿಸಿಕೊಳ್ಳಬೇಕಾಗುತ್ತದೆ !.)  ಹಾಗೆ ಅಡ್ಡಗಟ್ಟಿದರೆ ಹಳ್ಳದ ಹಿನ್ನೀರು ಅಕ್ಕ-ಪಕ್ಕದ ಹೊಲ-ಗದ್ದೆಗಳಿಗೆಲ್ಲಾ ನುಗ್ಗಿ ಬೆಳೆಹಾನಿಯಾಗುವ ಅಪಾಯವು ತಲೆದೋರುತ್ತಿತ್ತು. ಆದರೆ, ಮರಿಯಪ್ಪನ ಚಾಣಾಕ್ಷ ಬುದ್ದಿ ಮತ್ತೆ ಕೆಲಸ ಮಾಡಿತು. ಹಳೆಯ ಸೇತುವೆಯ ಎರಡೂ ಬದಿಯಲ್ಲಿ ಸಣ್ಣ ಕಾಲುವೆಗಳನ್ನು ತೋಡಿ ಅದರ ಮೂಲಕ ಹಳ್ಳದ ನೀರು ಸೇತುವೆ ದಾಟಿ ಮುಂದಿನ ಹಳ್ಳಕ್ಕೆ ಸೇರುವಂತೆ ಮಾಡುವುದೆಂದು ಉಪಾಯವನ್ನು ಸೂಚಿಸಿದನು. ಹಳ್ಳಿಗರೆಲ್ಲಾ ಮರಿಯಪ್ಪನ ಉಪಾಯಕ್ಕೆ ಸರ್ವಸಮ್ಮತವಾಗಿ ಒಪ್ಪಿದರು ಮತ್ತು ಅವನ ಜಾಣ್ಮೆಗೆ ತಲೆದೂಗಿದರು. ಸಾಬರ ವಸೀಮ್ ಖಾನನಂತೂ "ನಿಮ್ದೂಗೆ ಇಂಜಿನಿಯರ್ ಆಗ್ಬೇಕಿತ್ತು" ಎಂಬ ಬಿರುದನ್ನೂ ಮರಿಯಪ್ಪನಿಗೆ ದಯಪಾಲಿಸಿದನು. ಕೆಲಸ ಸುಗಮವಾಗಿ ಮುಂದುವರಿಯಿತು. ಹದಿನೆಂಟು ವರ್ಷಗಳ ಹಿಂದಿನ ಹಳ್ಳಿಗರ ಕಾರ್ಯಸಾಮರ್ಥ್ಯದ ಬಗೆಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲವೆನಿಸುತ್ತದೆ.  ಒಂದು ನಯಾಪೈಸೆಯ ಖರ್ಚಿಲ್ಲದೆ ಸೇತುವೆಯ ನಿರ್ಮಾಣ ಕಾರ್ಯ ಸಾಗಿತ್ತು. ಹಾಳು ಬಿದ್ದಿದ್ದ ಜಮೀನಿಗಳಲ್ಲಿದ್ದ ಫಲವತ್ತಾದ ಮಣ್ಣು ಎತ್ತಿನಗಾಡಿಗಳಲ್ಲಿ ಬಂದು ಬೀಳುತ್ತಿತ್ತು. ದೊಡ್ಡ ದೊಡ್ಡ ಕಲ್ಲುಗಳನ್ನು ಊರ ಹೊರವಲಯದ ಗುಡ್ಡವೊಂದರಿಂದ ಬಂಡಿಗಳಲ್ಲಿ ತರಲಾಗುತ್ತಿತ್ತು. ಇಡೀ ಊರೇ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿತ್ತು. ಹೆಂಗಸರೆಲ್ಲಾ ಕಲೆತು ಸಾಮೂಹಿಕವಾಗಿ ರಾಗಿ ಮತ್ತು ಜೋಳದ ರೊಟ್ಟಿಗಳನ್ನು ತಯಾರಿಸಿ ತರುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆಯ ಜೊತೆಗೆ ಮಜ್ಜಿಗೆ ಅಂಬಲಿಯೂ ಸಿದ್ದವಾಗಿರುತ್ತಿತ್ತು.  ನಾಗಯ್ಯ, ವಸೀಮ್ ಖಾನ್ , ಪುಟ್ಸಾಮಿ, ಸಂಪತ್ತಯ್ಯಂಗಾರಿ ಇತ್ಯಾದಿಗಳೆಲ್ಲಾ  ಒಟ್ಟಾಗಿ ಕೂಡಿದ್ದು ಸೇತುವೆಯ ಕಾರ್ಯದಲ್ಲೇ ಎನ್ನಬಹುದು.   ಕೆಲಸದ ನಡುವೆ ವಸೀಮ್ ಖಾನನದು ಏನಾದರೊಂದು ರೇಜಿಗೆ ಇದ್ದೇ ಇರುತ್ತಿತ್ತು. ಮಣ್ಣೊಳಗೆ ಯಾವುದೋ ಒಂದು ಹುಳುವನ್ನು ಕಂಡ ವಸೀಮ್ ಖಾನ್ ಎಲ್ಲರನ್ನೂ ಕರೆದು ಅದನ್ನು ತೋರಿಸಿದ್ದ. ಪುಟ್ಸಾಮಿ ರೇಗಿದ ದ್ವನಿಯಿಂದಲೇ ಕೇಳಿದ್ದ " ಏನ್ಲಾ ಸಾಬಿ ಅದು ನಿಂದು, ಎಂತಾ ಹುಳಲ್ನಾ ಅದು ? " ಎಂದು. ಖಾನ್ ಸಾಹೇಬರು " ಕಂಬಳ್ ಕಾ ವುಳ್ " ಎಂದು ಹೇಳಿದ್ದರು. " ಅಂಗಂದ್ರೆನ್ಲಾ ? " ಎಂದು ನಾಗಯ್ಯ ಕೇಳಿದ್ದಕ್ಕೆ ಪುಟ್ಸಾಮಿ ಮತ್ತೊಮ್ಮೆ ಅವನ ತಲೆಯ ಮೇಲೆ ಕುಟ್ಟಿದ್ದ " ಕಂಬ್ಳೀವುಳಾ ಅಂತ ಕಣಲೇ ಅದು ....ಅವನು ಮಾತಾಡದು ಅಂಗೆಯ..ನೀನು ಸುಮ್ಕೆ ಕೆಲ್ಸ ನೋಡು" ಎಂದು ನಾಗಯ್ಯನನ್ನು ಕೆಲಸಕ್ಕೆ ದಬ್ಬಿದ್ದ. ಹೀಗೆ ಹತ್ತು ಹಲವು ಘಟನೆಗಳು ನಡೆದು ಸತತ ಪರಿಶ್ರಮದಿಂದ ತಿಂಗಳಾಗುವುದರೊಳಗಾಗಿ ಕುಂಟಮ್ಮನ ಸೇತುವೆ ನಿರ್ಮಾಣವಾಗಿ ಸೇತುವೆಯ ಕೆಳಗೆ ಹಳ್ಳದ ನೀರು ಸರಾಗವಾಗಿ ಹರಿಯಲು ಪ್ರಾರಂಭವಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮಲ್ಲರಳ್ಳಿಯ ಜನತೆ ನಿಜವಾಗಿಸಿದ್ದರು.

..................*...........................

ಈ ಹದಿನೆಂಟು ವರ್ಷಗಳಲ್ಲಿ ಕುಂಟಮ್ಮನ ಸೇತುವೆಯ ಕೆಳಗೆ ಸಾಕಷ್ಟು ನೀರು ಹರಿದುಹೋಗಿದೆ. ಸೇತುವೆಯ ಮೇಲ್ಗಡೆಯೂ ಸಹ ಹತ್ತು ಹಲವು ತೆರನಾದ ವಾಹನಗಳು ಸಂಚರಿಸಿವೆ ಮತ್ತು ಸಂಚರಿಸುತ್ತಿವೆ. ಮರಿಯಪ್ಪನಿಗೂ ಈಗ ಎಂಬತ್ತು ವರ್ಷಗಳಾಗಿದೆ. ೬೦ ವರ್ಷದವನಾಗಿದ್ದಾಗ ಇದ್ದ ಚೈತನ್ಯ-ಶಕ್ತಿ ಈಗ ಇಲ್ಲವಾಗಿದೆ. ಕೆಲವು ಆಧುನಿಕ ರೋಗಗಳೂ ಮರಿಯಪ್ಪನನ್ನು ಕಾಡುತ್ತಿವೆ. ಅಂದು ಸೇತುವೆಯ ಕಾರ್ಯದಲ್ಲಿ ತೊಡಗಿದ್ದವರೆಲ್ಲಾ ಇಂದು ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ತಿಂದುಂಡು ನೆಮ್ಮದಿಯಾಗಿದ್ದಾರೆ. ಕುಂಟಮ್ಮನ ಸೇತುವೆ ಮಾತ್ರ ಅಚಲವಾಗಿ ಸ್ವಲ್ಪವೂ ಹಾಳಾಗದಂತೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಾಲಕರು ಮತ್ತು ಇತರರಿಗೆಲ್ಲಾ ಕುಂಟಮ್ಮನೇ ಈಗ ಆರಾಧ್ಯದೇವತೆ. ಆಕೆಯ ಮಹಿಮೆ ಎಲ್ಲೆಲ್ಲೂ ಪಸರಿಸಿರುವುದರಿಂದ ಈಗೀಗ ಕುಂಟಮ್ಮನಿಗೆ ಕುರಿ-ಕೋಳಿಗಳ ಎಡೆಯೂ ನಡೆಯುತ್ತಿದೆ.  ( ಮಂಗಳವಾರ , ಶುಕ್ರವಾರಗಳಂದು ಅಲ್ಲಿ ರಕ್ತದ ಕೋಡಿಯೆ ಹರಿಯುತ್ತದೆಂದು ಯಾರೋ ಮರಿಯಪ್ಪನಿಗೆ ಹೇಳಿದಾಗ , ಆತ ಮುಖ ಕಿವುಚಿಕೊಂಡು ಸುಮ್ಮನಾಗಿದ್ದ !) 

ಅಂದು ಮಲ್ಲರಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ವಿದ್ಯುತ್ ಪ್ರಸರಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವಿತ್ತು. ಟೇಪು ಕತ್ತರಿಸಲು ಮಾನ್ಯ ಶಾಸಕರು ಬರುವವರಿದ್ದರು. ಅನ್ಯಕಾರ್ಯ ನಿಮಿತ್ತ ತುಸು ತಡವಾಗಿ ಆಗಮಿಸಿದ ಶಾಸಕರು ಅವಸರದಲ್ಲಿ ಟೇಪು ಕತ್ತರಿಸಿ ಒಂದರ್ಧಗಂಟೆ ಭಾಷಣ ಬಿಗಿದು ಕಟ್ಟೇಪುರಕ್ಕೆ ಹೋಗಲು ಕಾರು ಹತ್ತಿದರು. ಕುಂಟಮ್ಮನ ದುರಾದೃಷ್ಟವೋ ಏನೋ ಮಾನ್ಯರ ಕಾರು ಕುಂಟಮ್ಮನ ಸೇತುವೆಯ ಸನಿಹದಲ್ಲೇ ಅಪಘಾತಕ್ಕೀಡಾಯಿತು. ಮಾನ್ಯರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಯಿತು. ಮಾನ್ಯರ ಮುದ್ದಿನ ನಾಯಿಯೊಂದು ಸ್ಥಳದಲ್ಲೇ ಅಸುನೀಗಿತು. ಕಾರಿನ ಮುಂಭಾಗ ನುಜ್ಜು-ಗುಜ್ಜಾಯಿತು. ಕುಂಟಮ್ಮನ ಗುಡಿಗೂ ತುಸು ಹಾನಿಯಾಯಿತು. ಶಾಸಕರ ಕೋಪ ನೆತ್ತಿಗೇರಿತೆಂದೇ ಅನಿಸುತ್ತದೆ, ಮಾರನೆಯ ದಿವಸವೆ ಕುಂಟಮ್ಮನ ಸೇತುವೆಯನ್ನು ಕೆಡವಿ ಮರು ನಿರ್ಮಿಸಬೇಕೆಂಬ ಆದೇಶವೊಂದು ಮಲ್ಲರಳ್ಳಿಯ ಪಂಚಾಯಿತಿ ಕಚೇರಿಗೆ ಬಂದು ತಲುಪಿತು. ಸೇತುವೆಯ ಜೊತೆಗೆ ಕುಂಟಮ್ಮನ ಗುಡಿಯನ್ನೂ ಕೆಡವಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ( ಕುಂಟಮ್ಮನ ದೆಸೆಯಿಂದಲೇ ಶಾಸಕರಿಗೆ ಅಪಘಾತವಾಗಿದ್ದೆಂದೂ ಆದ ಕಾರಣ ಆ ಗುಡಿಯನ್ನೇ ಅಲ್ಲಿಂದ ತೆಗೆಸಬೇಕೆಂದು ಶಾಸಕರಿಗೆ ದೊಡ್ಡ ಪಟ್ಟಣದ ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದರೆಂದು ಗುಸು-ಗುಸು ಸುದ್ದಿಯೂ ಹಬ್ಬಿತ್ತು !.)  ಈ ಮರು ನಿರ್ಮಾಣಕಾರ್ಯಕ್ಕೆ ಅದೆಷ್ಟೋ ಕೋಟಿ ರೂಗಳ ಅನುದಾನವು ಮಾನ್ಯ ಶಾಸಕರ ಮೂಲಕ ಬರುತ್ತದೆಯೆಂದು ಆದೇಶದಲ್ಲಿ ಹೇಳಲಾಗಿತ್ತು.  ತ್ವರಿತವಾಗಿ ಕೋಟಿ-ಕೋಟಿ ರೂಗಳ ಯೋಜನೆ ಜಾರಿಯಾಯಿತು. ಯಂತ್ರಗಳು ಬಂದು ಕೆಲವೆ ಗಂಟೆಗಳಲ್ಲಿ ಸೇತುವೆಯನ್ನೂ, ಗುಡಿಯನ್ನೂ ನೆಲಸಮ ಮಾಡಿದವು. ಕುಂಟಮ್ಮನ ವಿಗ್ರಹವನ್ನು ಅಲ್ಲಿಂದಲೂ ಆಚೆಗೆ ಎಸೆಯಲಾಯಿತು.  ಅದೇಕೊ..., ಕೆಡವಿದಷ್ಟು ತ್ವರಿತವಾಗಿ ಸೇತುವೆಯ ನಿರ್ಮಾಣಕಾರ್ಯ ಆಗಲೇ ಇಲ್ಲ.
ಸೇತುವೆಯನ್ನು ಕೆಡವಿದ ನಂತರ ಜನ ಮತ್ತು ವಾಹನಗಳು ಸಂಚರಿಸಲೆಂದು ಸಣ್ಣ ದಾರಿಯೊಂದನ್ನು ನಿರ್ಮಿಸಲಾಯಿತು. ದಿನ ಕಳೆದಂತೆ ಹಳ್ಳ-ದಿಣ್ಣೆಗಳಿಂದ ಕೂಡಿದ್ದ ಆ ದಾರಿಯಲ್ಲಿ ದನ-ಕರುಗಳು ಸಂಚರಿಸುವುದೂ ದುಸ್ತರವಾಯಿತು. ಮಳೆಗಾಲದ ಪಾಡನ್ನಂತೂ ಹೇಳಲು ಸಾಧ್ಯವೆ ಇಲ್ಲ..ನರಕ ಸದೃಶವಾಯಿತು. ಕೋಟಿಗಳು ಖರ್ಚಾದವು, ಹಲವು ಅಧಿಕಾರಿಗಳು ಇಂಜಿನಿಯರುಗಳು ಬಂದು ಹೋದರು...ವರ್ಷಗಳು ಕಳೆದರೂ ಸೇತುವೆ ನಿರ್ಮಾಣವಾಗಲೆ ಇಲ್ಲ. ಕೋಟಿಗಳಲ್ಲಿ ಬಿಡುಗಡೆಯಾದ ಹಣ ನಿರ್ಮಾಣಕಾರ್ಯಕ್ಕೆ ಸಾಲದಾಯಿತಂತೆ ಎಂದು ಊರಿನವರು ಮಾತನಾಡಿಕೊಂಡರು.
ಯಾವುದೂ ಯೋಚನೆಯಲ್ಲಿ ಮುಳುಗಿದ್ದ ಮರಿಯಪ್ಪನಿಗೆ ಸೇತುವೆಯ ಸಮಾಚಾರವನ್ನೆಲ್ಲಾ ಯಾರೋ ಒಬ್ಬರು ಹೇಳಿದರು. ಮರಿಯಪ್ಪನಿಗೆ ಸೇತುವೆಯವರೆವಿಗೂ ನಡೆದು ಹೋಗಿ ಬರುವಷ್ಟು ತ್ರಾಣವಿರಲಿಲ್ಲ. ಬದಲಾಗಿದ್ದ ಮಲ್ಲರಳ್ಳಿಯ ಆಧುನಿಕ ಜನತೆಗೆ ಗತಕಾಲದ ನೆನಪೂ ಇರಲಿಲ್ಲ. ಮರಿಯಪ್ಪ ತನ್ನಷ್ಟಕ್ಕೆ ತಾನೆ ನಕ್ಕಿದ್ದ...ಅವನ ನಗುವಿನ ಅರ್ಥವೇನೆಂದು ಅವನು ಯಾರಿಗೂ ಬಿಡಿಸಿ ಹೇಳಲಿಲ್ಲ ಮತ್ತು ಆಗಾಗ್ಗೆ ಸಣ್ಣಗೆ ನಗುತ್ತಲೇ ಇರುತ್ತಿದ್ದ. ಬಿಡುಗಡೆಯಾಗಿದ್ದ ಕೋಟಿಗಟ್ಟಲೆ ಹಣ ಸಾಲದಾಯಿತೆಂದು ಯಾರೋ ಹೇಳಿದಾಗ ಮರಿಯಪ್ಪ ಮತ್ತೊಮ್ಮೆ ಸಣ್ಣಗೆ ನಕ್ಕಿದ್ದ.
----------*---------

ಮರಿಯಪ್ಪನಿಗೆ ನೆಡೆಯುವ ಶಕ್ತಿಯಿಲ್ಲದಿದ್ದರೂ ಅಂದು ಕಷ್ಟದಿಂದಲೇ ಊರಿನ ಹೊರವಲಯಕ್ಕೆ ನೆಡೆದು ಬಂದಿದ್ದ. ನಿರ್ಮಾಣವಾಗದೆ ಹಾಳು ಬಿದ್ದಿದ್ದ ಸೇತುವೆಯನ್ನೂ ನೋಡಿ ಕಾಲುದಾರಿಯಲ್ಲಿ ಇನ್ನೂ ಮುಂದೆ ನೆಡೆದುಹೋಗಿದ್ದ. ಆ ಸೇತುವೆಯಿಂದ ಮೈಲು ದೂರವೇ ನೆಡೆದುಬಂದಿದ್ದನೆಂದು ಹೇಳಬಹುದು. ಮರಿಯಪ್ಪನ ಕಣ್ಣುಗಳು ರಸ್ತೆಯ ಪಕ್ಕದ ಜಮೀನೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಕುಂಟಮ್ಮ ದೇವರನ್ನು ಕಂಡವು. ಕುಂಟಮ್ಮನ ಮುಖದಲ್ಲಿ ಅದೇ ಮಂದಹಾಸ ಮಿನುಗುತ್ತಿತ್ತು ಮತ್ತು ಆ ಮಂದಹಾಸ ಮರಿಯಪ್ಪನನ್ನೂ , ಮಲ್ಲರಳ್ಳಿಯ ಇತಿಹಾಸವನ್ನೂ ಅಣಕಿಸುತ್ತಿರುವಂತೆ ಮರಿಯಪ್ಪನಿಗೆ ತೋರಿತು. ಇದಾದ ಎರಡು ದಿನಗಳಲ್ಲಿ ಮರಿಯಪ್ಪ ಸತ್ತನು , ಅವನೊಂದಿಗೆ ಮಲ್ಲರಳ್ಳಿಯ ಜಗಜಟ್ಟಿಗಳ ಇತಿಹಾಸವೂ ಸತ್ತಿತು.
------------*---------------
(ಮುಗಿಯಿತು)

Sep 29, 2010

ಕುಂಟಮ್ಮನ ಸೇತುವೆ

೧೮ ವರುಷಗಳ ಹಿಂದೆ ಅಂತಹ ಜಬರದಸ್ತಾದ ಮಳೆ ಸುರಿಯದೆ ಇದ್ದಿದ್ದರೆ ಇನ್ನೆಂದೂ ಆ ಕೆರೆ ತುಂಬುತ್ತಲೇ ಇರಲಿಲ್ಲವೇನೊ !. ದೊಡ್ಡಕೆರೆ ಎಂದರೆ ಅದು ಬರೀ ದೊಡ್ಡಕೆರೆಯಲ್ಲ, ಇಡೀ ಹಾಸನ ಜಿಲ್ಲೆಗೆ ಅತ್ಯಂತ ವಿಶಾಲವಾದ ಮತ್ತು ಬೃಹತ್ತಾದ ಕೆರೆ ಅದು. ಸಾವಿರ ಎಕರೆಗೂ ಮೀರಿ ಆವರಿಸಿದ್ದ ಕೆರೆಯ ಪಾತ್ರವನ್ನು ಅಕ್ರಮವಾಗಿ ಜಮೀನು ಮಾಡಿಕೊಂಡು  ೯೦೦ ಎಕರೆಗೆ ತಗ್ಗಿಸಿದ ಕೀರ್ತಿ  ’ಮಲ್ಲರ ಹಳ್ಳಿಯ ’ ಜನರಿಗೇ ಸಲ್ಲಬೇಕು. ಮಲ್ಲರಳ್ಳಿ ಎಂದರೆ , ಆ ಊರಿನ ಜನತೆಗೆ ಅದೇನೋ ವಿಚಿತ್ರ ಅಭಿಮಾನವಿತ್ತು. ರಾಜರುಗಳು ಆಳಿದ್ದ ಕಾಲದಲ್ಲಿ ಮಲ್ಲಯುದ್ದ ಪರಿಣತರು, ಜಗಜಟ್ಟಿಗಳೂ ವಾಸಿಸುತ್ತಿದ್ದ ಊರೆಂದು ಅಲ್ಲಿಯ ಜನ ತಾವು ಹೋದೆಡೆಯೆಲ್ಲಾ ಪರಾಕು ಹೊಡೆಯುತ್ತಿದ್ದರು. ತಾವೆಲ್ಲಾ ಅಂತಹ ಜಟ್ಟಿಗಳ ವಂಶಸ್ಥರೆಂದೇ ಅವರಲ್ಲಿ ಬಲವಾದ ನಂಬಿಕೆ ಬೇರೂರಿತ್ತು. ಆ ದೊಡ್ಡಕೆರೆಯ ಮಹಾತ್ಮೆಯನ್ನಂತೂ ಒಬ್ಬಬ್ಬೊರೂ ಒಂದೊಂದು ರೀತಿ ಬಣ್ಣ ಕಟ್ಟಿ ಹೇಳುವುದರಲ್ಲಿ ನಿಷ್ಣಾತರಾಗಿದ್ದರು. ಕೆಲವರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ ಕೆರೆಯೆಂದು ಬಣ್ಣಿಸಿದರೆ ಕೆಲವರು ’ಚ್ವಾಳ್ರು’ ಕಟ್ಟಿದ್ದೆಂದೂ ಹೇಳುತ್ತಿದ್ದರು. ಇನ್ನೂ ಕೆಲವರು ಅದು ತನಗೆ ತಾನೇ ಉದ್ಬವಿಸಿದ್ದೆಂದೂ ಹೇಳುತ್ತಾ ಆ ಕೆರೆಗೆ ಅನೇಕ ದೈವೀ ಶಕ್ತಿಗಳನ್ನು ಆರೋಪಿಸುತ್ತಿದ್ದರು. ೧೮ ವರುಷಗಳಿಗಿಂತಲೂ ಹಿಂದೆ ಹಲವು ವರುಷಗಳ ಕಾಲ ದೊಡ್ಡಕೆರೆ ತುಂಬದೆ ಹಾಳು ಬಂಜರು ನೆಲವಾಗಿ ಬಿದ್ದಿತ್ತು. ಆಗ ಹಳ್ಳಿಗರೆಲ್ಲಾ ಕೆರೆಗೆ ಯಾವುದೋ ದಯ್ಯವೋ, ದೇವರೋ ಶಾಪ ಕೊಟ್ಟಿರುವುದರಿಂದ ಬರಗಾಲ ಬಂದಿದೆಯೆಂದು ಪುಕಾರು ಹಬ್ಬಿಸಿಕೊಂಡು ಸುತ್ತೇಳು ಹಳ್ಳಿಗರನ್ನೆಲ್ಲಾ ಸೇರಿಸಿ ಹಾಳು ಕೆರೆಯಲ್ಲೇ ’ಪರ’ ಮಾಡಿ  ಪೊಗದಸ್ತಾಗಿ ತಿಂದುಂಡರು. ಅದರಲ್ಲೂ ಮುಖ್ಯವಾಗಿ ’ಪರ’ ಮಾಡಿದ ದಿವಸ ಕಳಸಾಪುರದ ಸುಬ್ಬಾಭಟ್ಟರ ನೇತೃತ್ವದಲ್ಲಿ ನೆಡೆದ ’ರುದ್ರ ಹೋಮ’ ವಂತೂ ಹಳ್ಳಿಗರಲ್ಲಿ ಯಥೇಚ್ಚವಾಗಿ ಭಯ-ಭಕ್ತಿಯನ್ನು ಉಂಟುಮಾಡಿತ್ತು. ಹಲವು ಬಾರಿ ಭಟ್ಟರು ಎದ್ದು ನಿಂತು ಆಕಾಶದ ಕಡೆ ಎರಡೂ ಕೈ ತೋರಿಸಿ "ಪರ್ಜನ್ಯಾsss" , "ವರುಣಾssss" ಎಂದು ಕಿರುಚಿದಾಗಲೆಲ್ಲಾ ಇನ್ನೇನು ಮಳೆ ಸುರಿದೇ ಹೋಯಿತೇನೋ ಎಂಬಂತೆ ಹಳ್ಳಿಗರೆಲ್ಲಾ ಆಕಾಶ ನೋಡಿದ್ದರು. ಎಲ್ಲರ ಅದೃಷ್ಟ ಖುಲಾಯಿಸಿತೆಂದೆ ಅನಿಸುತ್ತದೆ, ನಂತರದ ಮಳೆಗಾಲದಲ್ಲಿ ಸುರಿದ ಮಳೆ ದೊಡ್ಡಕೆರೆಗೆ ಒಂದಷ್ಟು ನೀರನ್ನೂ ಬಿಟ್ಟುಹೋಗಿತ್ತು. ಹದಿನೆಂಟು ವರುಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತುಂಬಿ ಹರಿದ ಕೆರೆ ಮತ್ತೆಂದೂ ಖಾಲಿಯಾಗಲೆ ಇಲ್ಲ. ಪ್ರತೀ ವರ್ಷವೂ ತುಂಬಿ ಹರಿಯುತ್ತಲೆ ಇರುತ್ತದೆ.  ಸುಬ್ಬಾಭಟ್ಟರೂ ಸೇರಿದಂತೆ ಕಾಳೇಗೌಡ, ರಂಗಶೆಟ್ಟಿ, ಹನುಮಯ್ಯ, ನಂಜುಡಪ್ಪ  ಇತ್ಯಾದಿಗಳೆಲ್ಲಾ ಈ ಹದಿನೆಂಟು ವರುಷಗಳ ಕಾಲಾವಧಿಯಲ್ಲಿ ಪರಲೋಕ ಸೇರಿದ್ದರೂ ಅವರ ಸಮಕಾಲೀನರಾಗಿದ್ದೂ ಜೀವಂತವಿದ್ದ ಕೆಲವೇ ಕೆಲವರಲ್ಲಿ ಮುಖ್ಯ ವ್ಯಕ್ತಿಯೆಂದರೆ ಮರಿಯಪ್ಪನೊಬ್ಬನೆ .
  ಮರಿಯಪ್ಪ ಮುಖ್ಯವ್ಯಕ್ತಿ ಎಂದೆನಿಸಿಕೊಳ್ಳಲು ಹಲವು ಕಾರಣಗಳು ಮಲ್ಲರಳ್ಳಿಯಲ್ಲಿ ಉದ್ಭವಿಸಿತು. ೧೮ ವರುಷಗಳ ಹಿಂದೆ ಮೊದಲ ಬಾರಿ ದೊಡ್ಡಕೆರೆಯು ತುಂಬಿ ಕೋಡಿಯಿಂದ ನೀರು ಎಗ್ಗಿಲ್ಲದೆ ಹರಿದು ಹೋಗುವಾಗ , ಅದರ ರಭಸಕ್ಕೆ ಹಳ್ಳದ ಪಾತ್ರದಲ್ಲಿ ’ಹಕ್ಕಿ-ಪಿಕ್ಕ’ರು ಕಟ್ಟಿಕೊಂಡಿದ್ದ ಗುಡಿಸಲುಗಳೂ ತೇಲಿಹೋಗಿದ್ದವು. ಹಕ್ಕಿ-ಪಿಕ್ಕರು ಒಂದೇ ಊರಿನಲ್ಲಿ ನೆಲೆಯೂರುವ ಜಾಯಮಾನದವರಲ್ಲದ ಕಾರಣ ಅವರಿಗೆ ಕೆರೆ ದಂಡೆಯ ಖಾಲಿ ಜಾಗವೇ ಗುಡಿಸಲು ಕಟ್ಟಿಕೊಳ್ಳಲು ಪ್ರಶಸ್ತವಾಗಿತ್ತು. ಗುಡಿಸಲು ತೇಲಿಹೋದ ನಂತರ ’ಹಕ್ಕಿ-ಪಿಕ್ಕ’ರು ಮಲ್ಲರಳ್ಳಿಯಿಂದ ಕಾಣೆಯಾದರು. ಹಳ್ಳಿಯ ಕೆಲವರು ಹಕ್ಕಿ-ಪಿಕ್ಕರು ಬೇರೆ ಊರಿಗೆ ಹೋದರೆಂದೂ , ಇನ್ನೂ ಕೆಲವರು ಹಳ್ಳದ ನೀರಿನ ಜೊತೆಗೆ ಕೊಚ್ಚಿ ಹೋದರೆಂದೂ ತಮ್ಮಷ್ಟಕ್ಕೆ ತಾವೆ ತರಹೇವಾರಿ ಮಾತನಾಡಿಕೊಂಡರು.ಹಳ್ಳದಲ್ಲಿ ಹರಿದು ಹೋಗುತ್ತಿದ್ದ ಕೆರೆಯ ನೀರು ಇನ್ನೊಂದು ರಾದ್ದಾಂತವನ್ನೇ ಸೃಜಿಸಿತು. ಮಲ್ಲರಳ್ಳಿಯ ಕೆರೆಯ ನೀರು ತುಂಬಿ ಹಳ್ಳದಲ್ಲಿ ಹರಿಯಿತೆಂದರೆ ಆ ನೀರು ಅದೇ ಹಳ್ಳದಲ್ಲಿ ಮುಂದುವರೆದು  ಕಟ್ಟೆಪುರದ ಕೆರೆಯನ್ನು ಸೇರಬೇಕಿತ್ತು. ರಾಜರುಗಳ ಕಾಲದಲ್ಲಿ ಹಳ್ಳವು ಹಾಗೇ ಹರಿಯುತ್ತಿತ್ತೆಂದೂ, ಆ ಹಳ್ಳದಲ್ಲಿ ದೈವಾಂಶ ಸಂಭೂತವಾದ ಮೀನೊಂದು ಇತ್ತೆಂದೂ ಹಳ್ಳಿಗರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಕಟ್ಟೆಪುರದ ಕೆರೆಗೆ  ರಭಸದಿಂದ ಹರಿದು ಹೋಗಬೇಕಿದ್ದ ಹಳ್ಳದ ನೀರು ಹಿಮ್ಮುಖವಾಗಿ ಹರಿದು ಬಂದು ಮಲ್ಲರಳ್ಳಿಯ ಕೆಲವು ಪ್ರಮುಖ ವ್ಯಕ್ತಿಗಳ ಮನೆಯೊಳಗೆ ಪ್ರವಾಹದಂತೆ ನುಗ್ಗಿದಾಗಲೇ ಹಳ್ಳಿಗರಿಗೆ ’ಸಮಸ್ಯೆ’ಯ ಗಂಭೀರತೆ ಅರಿವಾದುದು. ಮಲ್ಲರಳ್ಳಿಯಿಂದ ಕಟ್ಟೆಪುರಕ್ಕೆ ಬೆಸೆಯುವ  ೧೨ ಮೈಲುಗಳ ರಸ್ತೆಯೊಂದಿತ್ತು. ಮಲ್ಲರಳ್ಳಿಯ ಹೊರವಲಯದಲ್ಲಿ ಅದೇ ರಸ್ತೆಯ ಕೆಳಗೆ ತೂಬೊಂದನ್ನು ಇರಿಸಿ ಹಳ್ಳದ ನೀರು ಹರಿದುಹೋಗುವಂತೆ ಪುಟ್ಟ ಸೇತುವೆಯೊಂದನ್ನು ಹಿಂದೆಂದೊ ಪಾಳೆಗಾರರ ಕಾಲದಲ್ಲಿ ನಿರ್ಮಿಸಿದ್ದರಂತೆ. ದೀರ್ಘಕಾಲದ ಅನಾವೃಷ್ಟಿಯ ಪರಿಣಾಮದಿಂದಾಗಿ ಆ ತೂಬು ಮಣ್ಣಿನಲ್ಲಿ ಮುಚ್ಚಿಹೋಗಿ ರಸ್ತೆಗೆ ಸಮವಾಗಿ ಎದ್ದುನಿಂತು ಅಲ್ಲೊಂದು ನೀರಿನ ಹರವು ಇದ್ದ ಸೇತುವೆ ಇತ್ತೆಂಬುದು ತಿಳಿಯಲಾಗದಷ್ಟು ಅಧ್ವಾನವೆದ್ದುಹೋಗಿತ್ತು. ಇಂತಹ ಸಂದರ್ಭದಲ್ಲೇ ಮರಿಯಪ್ಪ ತನ್ನ ಬುದ್ದಿವಂತಿಕೆಯನ್ನು ಮೆರೆದಿದ್ದು. ಹಳ್ಳಿಗರನ್ನೆಲ್ಲಾ ಒಟ್ಟಾಗಿ ಸೇರಿಸಿ ಪಂಚಾಯ್ತಿ ನೆಡೆಸಿ ತೂಬು ಸರಿಪಡಿಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಸೇತುವೆಯೊಂದನ್ನು ನಿರ್ಮಿಸುವ ಯೋಜನೆಯನ್ನು ಮರಿಯಪ್ಪನೇ ಪ್ರಚಾರ ಮಾಡಿದನು. ಹಳ್ಳಿಗರಿಗೆ ಮರಿಯಪ್ಪನ ಯೋಜನೆ ಸಮಂಜಸವೆನಿಸಿದರೂ ಇಂತಹ ಯೋಜನೆಗಳನ್ನು ಸರ್ಕಾರವೆ ಮಾಡಬೇಕೆಂದು ಕೆಲವು ಬುದ್ದಿವಂತರೆನಿಕೊಂಡಿದ್ದವರು ಆಕ್ಷೇಪಿಸಿದರು. ಮರಿಯಪ್ಪ ಅವರ ಆಕ್ಷೇಪಕ್ಕೆ ಸಕಾರಣವನ್ನೇ ನೀಡಿದನು. ಸರ್ಕಾರವನ್ನು ನಂಬಿ ಕುಳಿತರೆ ತಕ್ಷಣಕ್ಕೆ ಕೆಲಸವಾಗುವುದಿಲ್ಲವೆಂದು ವಿವರಿಸಿದನು.  ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನೆಡೆಸಿ ಮುಖ್ಯ ಇಂಜಿನಿಯರ್ರಿಗೆ ವರದಿ ನೀಡಿದ ನಂತರ ,  ಮುಖ್ಯ ಇಂಜಿನಿಯರರು ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಅಲ್ಲಿಂದ ಒಪ್ಪಿಗೆ ಪಡೆದು ಹಣವನ್ನು ಬಿಡುಗಡೆ ಮಾಡಿಸಿಕೊಂಡ ನಂತರವಷ್ಟೇ ಕೆಲಸ ಪ್ರಾರಂಭವಾಗಬಹುದೆಂದೂ, ಅಷ್ಟು ಕಾಲವಾಗುವುದರೊಳಗೆ ಇಡೀ ಮಲ್ಲರಹಳ್ಳಿಯೇ ಪ್ರವಾಹದಲ್ಲಿ ತೇಲಿಹೋಗಬಹುದೆಂಬ ಭೀತಿಯನ್ನೂ ಹುಟ್ಟಿಸಿದನು.  ಹೀಗೆ ಹುಟ್ಟಿದ ಭಯವೇ ಮಲ್ಲರಹಳ್ಳಿಯ ಎಲ್ಲಾ ಸೋಮಾರಿಗಳನ್ನೂ, ರೈತರನ್ನೂ, ಹೆಂಗಸರನ್ನೂ ಮತ್ತು ಹಾರುವರನ್ನೂ ಒಟ್ಟಾಗುವಂತೆ ಮಾಡಿದ್ದು. ಕರಸೇವೆಗೆ ಸಿದ್ದರಾದ ಹಳ್ಳಿಯ ಜನಕ್ಕೆ ಕೆಲಸ ಪ್ರಾರಂಭಿಸುವ ಮುನ್ನ ದೇವರ ಪೂಜೆಯಾಗಬೇಕಾದ್ದು ಅನಿವಾರ್ಯವಾಗಿತ್ತು. ’ಹಾಳೂರಿಗೆ ಉಳಿದವನೆ ಗೌಡ’ ಎಂಬಂತೆ ಮುಚ್ಚಿಹೋಗಿದ್ದ ಹಳೆಯ ಸೇತುವೆಯಿಂದ ಹತ್ತಡಿ ದೂರದಲ್ಲಿ ರಸ್ತೆಯ ಪಕ್ಕದಲ್ಲೇ ಪುಟ್ಟದಾದ ಹಾಳು ಗುಡಿಯೊಂದು ಹಳ್ಳಿಗರ ಕಣ್ಣಿಗೆ ಬಿದ್ದಿತು.
ಗುಡಿಯ ಮುಂದೆ ನೆರೆದ ಜನತೆ ಕುರುಬ ಜನಾಂಗದವನಾಗಿದ್ದ ಮರಿಯಪ್ಪನ ಮಗನನ್ನೇ ಪೂಜೆ ಮಾಡೆಂದು ಗುಡಿಯ ಒಳಗೆ ದೂಡಿದರು. ಆತ ಪರಿ-ಪರಿಯಾಗಿ ಒಲ್ಲೆನೆಂದರೂ ಅದನ್ನು ಲೆಕ್ಕಿಸದ ಹಳ್ಳಿಗರು ಅವನೇ ಪೂಜೆ ಮಾಡಬೇಕೆಂದು ಪಟ್ಟುಹಿಡಿದರು. ಒಳನುಗ್ಗಿದ್ದ ಮರಿಯಪ್ಪನ ಮಗನಿಗೆ ವರುಷಗಳಿಂದ ಸುಖವಾಗಿ ಜೀವಿಸುತ್ತಿದ್ದ ಜೇಡಗಳು, ಹಲ್ಲಿಗಳು, ಕಪ್ಪೆಗಳು ಇತ್ಯಾದಿಗಳನ್ನು ಹೊರಗೋಡಿಸಲು ಸಾಕು ಸಾಕಾಯಿತು. ಇದ್ದುದರಲ್ಲಿ ಸ್ವಚ್ಚಗೊಂಡ ಗುಡಿಯಲ್ಲಿ ಪೂಜೆ ಆರಂಭವಾಯಿತು. ಅದ್ಯಾರೋ ಒಬ್ಬರು ಬಿಂದಿಗೆಯಲ್ಲಿ ನೀರು ತಂದುಕೊಟ್ಟರು ಮತ್ತು ಆ ನೀರನ್ನು ಅವರ ಮುತ್ತಜ್ಜ ಕಾಶಿಯಿಂದ ತಂದಿದ್ದ ಗಂಗಾಜಲವೆಂದೇ ಸಾರಿದರು. ಗಂಗಾಭಿಷೇಕದ ನಂತರ ಮತ್ತೊಬ್ಬರು ತಂದಿದ್ದ ಊದುಬತ್ತಿ ಬೆಳಗಿ ಬಾಳೆಹಣ್ಣನ್ನೇ ಎಡೆಯಿಟ್ಟು ಕರ್ಪೂರ ಹಚ್ಚಲಾಯಿತು. ಕೆಲವರು ’ಮರಿ’ಯೊಂದನ್ನು ಕಡಿಯಲೇಬೇಕೆಂದು ಆಗ್ರಹಿಸಿದರೂ, ಮುಖ್ಯಸ್ಥರ ತೀರ್ಮಾನದಂತೆ ಬಾಳೆಹಣ್ಣಿನ ಎಡೆಯಲ್ಲೇ ಪೂಜೆ ನೆರವೇರಿತು. ಹಳ್ಳಿಗರು ತಂದಿದ್ದ ಗುದ್ದಲಿ, ಪಿಕಾಸಿ, ಹಾರೆ, ಮಚ್ಚು, ಬಾಣಲಿಗಳಿಗೂ ಪೂಜೆಯು ಸಂದಾಯವಾಯಿತು.

ಕೂತೂಹಲ ತಡೆಯಲಾರದೆ ಹಳ್ಳಿಗರಲ್ಲಿ ಒಬ್ಬನಾಗಿದ್ದ ಪುಟ್ಸಾಮಿ ಕೇಳಿಯೇ ಬಿಟ್ಟ " ಲೇ ಪೂಜಾರಿ, ಯಾವ್ ದೇವರ‍್ಲಾ ಒಳಗಿರೋದು " ಎಂದು.
ಮರಿಯಪ್ಪನ ಮಗನಿಗೆ ಅದೇನು ತಲೆಗೆ ತೋಚಿತೋ ಜೋರಾಗಿ ಕೂಗಿ ಹೇಳಿದ " ಕುಂಟಮ್ಮ ದ್ಯಾವ್ರು ಕಣ್ರಪಾ " ಎಂದು. ಪುಟ್ಸಾಮಿಗೆ ಅಶ್ಚರ್ಯವಾಯಿತೆಂದು ತೋರುತ್ತದೆ, ಆತನಿಗೆ ಕುಂಟಮ್ಮ ಎಂದರೆ ಯಾವ ದೇವರೆಂದು ಅರ್ಥವಾಗಲಿಲ್ಲ. ಪಕ್ಕದಲ್ಲಿದ್ದ ನಾಗಯ್ಯನನ್ನು ತಿವಿದು  " ಲೇ ನಾಗ, ಕುಂಟಮ್ಮ ಅಂದ್ರೆ ಯಾವ ದೇವರುಲಾ, ನಾನ್ ಕೇಳೇ ಇಲ್ಲಾ ಕಣಾಪಾ....ಈ ಪೂಜಾರಿ ಏನೋ ಸುಳ್ಳು ಏಳ್ತಾವ್ನೆ ಅನ್ಸುತ್ತೆ " ಎಂದು ಹೇಳಿದ. ನಾಗ ಪುಟ್ಸಾಮಿಯ ತಲೆಯ ಮೇಲೆ ಬಲವಾಗಿ ಕುಟ್ಟಿದ " ತಿಕಾ ಮುಚ್ಕಂಡು ಇರಕ್ಕೆನ್ಲಾ ನಿನಗೆ ! ಕುಂಟಮ್ಮ ಅಂದ್ರೆ ಕುಂಟಮ್ಮ ಅಷ್ಟೆಯಾ, ಅದ್ನೆಲ್ಲಾ ಬಿಡ್ಸ್ ಏಳಾಕಾಯ್ತದೆನ್ಲಾ, ಸುಮ್ಕೆ ಕೆಲ್ಸ ನೋಡವಾ ಬಾ " ಎಂದು ಉಗಿದ. ಅಷ್ಟು ವೇಳೆಗಾಗಲೆ ಪೂಜೆಯ ಕೆಲಸಗಳು ಮುಗಿದು ಎಲ್ಲರೂ ಹಳೆಯ ಸೇತುವೆಯ ಬಳಿಯಲ್ಲಿ ನೆರೆದಿದ್ದರು. ಈಗ ಕಟ್ಟಲಾಗುವ ಸೇತುವೆಗೆ "ಕುಂಟಮ್ಮನ ಸೇತುವೆ" ಎಂದು ಮರಿಯಪ್ಪ ನಾಮಕರಣ ಮಾಡಿದನು. ಕೆಲಸ ಪ್ರಾರಂಭವಾಯಿತು.

ಮರಿಯಪ್ಪನ ಮಗ ಗುಡಿಯೊಳಗಿದ್ದ ’ಆ’ ದೇವರಿಗೆ ’ಕುಂಟಮ್ಮ’ ಎಂದು ಏಕೆ ಹೆಸರಿಟ್ಟ ಎನ್ನುವುದು ಇನ್ನೂ ಸ್ವಾರಸ್ಯಕರವಾದ ವಿಷಯ.

( ಕತೆ... ಇನ್ನೂ ಇದೆ.. )

----------------------------------------------------------------------------------

ಕೊನೆಕಿಡಿ.

ತಿಂಮನಿಗೆ ಸಮಾಜ ಸೇವೆ ಮಾಡುವ ಮನಸಾಯಿತು. ದೇವ ಮಂದಿರವೊಂದನ್ನು ಕಟ್ಟಿಸುವ ಆಸೆ ವ್ಯಕ್ತಪಡಿಸಿದ. 
ಅಲ್ಲಿಗೆ ಕೇವಲ ಹಿಂದೂಗಳು ಮಾತ್ರ ಬರುತ್ತಾರೆಂದು ಬೇಡವೆನಿಸಿ ಸುಮ್ಮನಾದ.
ಮಸೀದಿಯೊಂದನ್ನು ಕಟ್ಟಿಸಲು ಹವಣಿಸಿದ. ಅಲ್ಲಿಗೆ ಬರೇ ಮುಸಲಮಾನರು ಬರುತ್ತಾರೆಂದು ತೆಪ್ಪಗಾದ.
ಇಗರ್ಜಿ(ಚರ್ಚು) ಯೊಂದನ್ನು ಕಟ್ಟಲು ತೀರ್ಮಾನಿಸಿದ. ಅಲ್ಲಿಗೆ ಕೇವಲ ಕ್ರಿಸ್ತರು ಬರುತ್ತಾರೆಂದು ಅದನ್ನೂ ಬೇಡವೆಂದು ತ್ಯಜಿಸಿದ.
ತಿಂಮನಿಗೆ ಪ್ರಚಂಡ ಉಪಾಯವೊಂದು ಹೊಳೆಯಿತು. ಎಲ್ಲರೂ ಬರುವಂತೆ ಮಾಡಬಹುದಾದುದನ್ನೇ ಕಟ್ಟಿಸಬೇಕೆಂದು ನಿರ್ಣಯಿಸಿದ.
ಸಾಲಾಗಿ ಆರು ಕಕ್ಕಸುಗಳನ್ನು ಕಟ್ಟಿಸಿದ !.

(ಈ ಕಿಡಿ ನನ್ನದಲ್ಲ. ಬೀchi ಯವರ ’ತಿಂಮನತಲೆ’ಯಿಂದ ಹೆಕ್ಕಿದ್ದು. ನಕ್ಕುಬಿಡಿ ) 

Sep 22, 2010

ಭಾರತ ಬಲಿಪಶುವೇ ?

ಹತ್ತೊಂಬತ್ತು ನೂರು ಅರವತ್ತಾರನೆಯ ಇಸವಿಯಲ್ಲಿ ವಿನಾಯಕ ದಾಮೋದರ ಸಾವರಕರರು (ವೀರ ಸಾವರಕರ್) ನಿಧನರಾದಾಗ ಭಾರತದ ಸಂಸತ್ತಿನಲ್ಲಿ ಸಾವರಕರರಿಗೆ ಶ್ರಂದ್ಧಾಂಜಲಿ ಸಲ್ಲಿಸುವ ವಿಷಯವೊಂದು ಪ್ರಸ್ತಾಪವಾಯಿತು. ಅಂದಿನ ಸಭಾಧ್ಯಕ್ಷರು (ನೆಹರು ಕೃಪಾಪೋಷಿತ) ಆ ಪ್ರಸ್ತಾಪವನ್ನು ತಿರಸ್ಕರಿಸಿದರು, ಕಾರಣ ಸಾವರ್ಕರರು ಸಂಸತ್ತಿನ ಸದಸ್ಯರಲ್ಲ ಎನ್ನುವುದು. ಮುಂದಿನ ದಿನಗಳಲ್ಲಿ ಅದೇ ಸಂಸತ್ತು ನಮ್ಮ ದೇಶದವರೇ ಅಲ್ಲದ "ಸ್ಟಾಲಿನ್" ಗೆ ಗೌರವಾರ್ಪಣೆ ಸಲ್ಲಿಸುತ್ತದೆ. ಇದಕ್ಕೆ ಕಾರಣ ಅಂದು ನೆಹರು ಅಪ್ಪಿಕೊಂಡಿದ್ದ ಸೋವಿಯತ್ ಒಕ್ಕೂಟದ ಆಕರ್ಷಣೆಗಳು ಮತ್ತು ತಾನಲ್ಲದೆ ಮತ್ತಾರೂ ರಾಜಕೀಯವಾಗಿ ಬೆಳೆಯಬಾರದೆಂದು ನೆಡೆಸಿದ್ದ ಪಿತೂರಿ. ವಿದೇಶಿ ವ್ಯಾಮೋಹಗಳಲ್ಲೇ ತೇಲಾಡಿದ ವ್ಯಕ್ತಿಯೊಬ್ಬರನ್ನು ಭಾರತದ ಪ್ರಧಾನಿಯಾಗಿ ಪಡೆದದ್ದು ಭಾರತದ ಹಣೆಬರಹವೆ ? ಮುಂದೆ ನೆಹರೂ ಮಾಡಿದ ಎಡವಟ್ಟುಗಳ ಫಲವನ್ನು ನಾವಿಂದಿಗೂ ಉಣ್ಣುತ್ತಲೇ ಇದ್ದೇವೆ. ನಿಜ, ಏಕವ್ಯಕ್ತಿಯನ್ನು ದೂರುವುದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ, ಆದರೆ ಅಂದಿನ ವಿದೇಶಾಂಗ ನೀತಿಗಳು  ಸ್ವದೇಶಿ ಆಚರಣೆಗೆ ಎಂತಹ ದೊಡ್ಡ ಪೆಟ್ಟುಕೊಟ್ಟಿತು ಎನ್ನುವುದನ್ನು ಪ್ರಜ್ಞಾವಂತರಾರೂ ಮರೆಯಲು ಸಾಧ್ಯವಿಲ್ಲ. ಅಂತೂ ಯಾವುದೋ ಒಂದು ದಾರಿಯ ಮೂಲಕ ವಿದೇಶಿಯರು ಭಾರತೀಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿಯೇ ಇಲ್ಲಿಂದ ಹೊರಟರು. ಕಾಂಗ್ರೇಸು "ಕ್ವಿಟ್ ಇಂಡಿಯಾ" ಎಂದರೆ ಸಾವರ್ಕರರು "ಕ್ವಿಟ್ ಇಂಡಿಯಾ ವಿತ್ ಬ್ಯಾಗ್ ಅಂಡ್ ಬ್ಯಾಗೇಜ್" ಎಂದಿದ್ದರು !. ಆದರೆ ಆಂಗ್ಲರು ತಮ್ಮ ಕುರುಹುಗಳನ್ನು ಭಾರತದಲ್ಲಿ ಬಿಟ್ಟು ಹೋಗಲು ಸಹಾಯ ಮಾಡಿದ್ದು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾದವರೆ !. ಇಲ್ಲಿಂದ ಮುಂದೆ ಗ್ಲಾಮರ್ ಪಡೆದುಕೊಂಡ ವಿದೇಶಿ ವ್ಯಾಮೋಹಗಳು ಇಂದಿಗೆ comfortabale ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. " ನನಗೆ ಈ ಡ್ರೆಸ್ comfortable ಆಗಿದೆ, ಅದಕ್ಕೆ ನಾನು ಧರಿಸುತ್ತೇನೆ, ಯಾರು ತಯಾರಿಸಿದ್ದರೆ ನನಗೇನು ? " ಎಂದು ಸವಾಲು ಹಾಕುವ ಯುವಸಮುದಾಯಕ್ಕೆ ತಾವು ಪರೋಕ್ಷವಾಗಿ ವಿದೇಶಿ ಕಂಪನಿಗಳನ್ನು, ರಾಷ್ಟ್ರಗಳನ್ನು ಬೆಳೆಸುತ್ತಾ ಭಾರತವನ್ನು ಅಧೋಗತಿಗೆ ತಳ್ಳುತ್ತಿದ್ದೇವೆಂಬ ಕಲ್ಪನೆ ಇದ್ದೀತೆ?. ಮುಂದೊಂದು ದಿನ ಏನಕೇನ ಪ್ರಕಾರೇಣ ವಿದೇಶಿಯರ ಬೂಟು ನೆಕ್ಕುವ ಪರಿಸ್ಥಿತಿ ಬಂದಾಗಲೆ ಅಂತಹ ಸಮುದಾಯಕ್ಕೆ ಸ್ವತಂತ್ರದ ಮಹತ್ವ ಅರಿವಾಗಬಹುದು. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಭಾರತವೂ ಅದಕ್ಕೆ ಸಮಾನಾಂತರವಾಗಿ ಬೆಳೆಯಬೇಕೆಂಬುದು ಸಮಂಜಸವೇ ಆದರೂ ಅಂತಹ ಪೂರಕ ಬೆಳವಣಿಗೆಯಲ್ಲಿ ಭಾರತೀಯತೆ ಇದ್ದಷ್ಟೂ ನಮ್ಮ ನೆಲ ಗಟ್ಟಿಯಾಗುತ್ತಾ ಹೋಗುತ್ತದೆ. ದೇಶಕ್ಕೆ contribute ಮಾಡುವ ಮನೋಭಾವ ವಿದೇಶಿಗಳಲ್ಲಿರುವುದೇ ಆಯಾ ದೇಶಗಳು ಹೆಚ್ಚಿನ ಪ್ರಗತಿ ಸಾಧಿಸಲು ಕಾರಣವಾಗಿದೆಯೆನ್ನಬಹುದು. ಹಾಗಾದರೆ ಭಾರತೀಯರು ದೇಶಕ್ಕೆ ಕೊಡುಗೆ ನೀಡುವುದಿಲ್ಲವೆ ? ,ಇಲ್ಲಿ ಕೊಡುಗೆ ನೀಡುವ ಪ್ರಶ್ನೆಗಿಂತಲೂ ಅಂತಹ ಕೊಡುಗೆ ಭಾರತದ ಪ್ರಭುತ್ವದಲ್ಲಿ ಸದ್ವಿನಿಯೋಗವಾಗುತ್ತದೆ ಎಂಬುದರ ಬಗ್ಗೆ ಯಾವ ಪ್ರಜ್ಞಾವಂತ ನಾಗರೀಕನಿಗೂ ನಂಬಿಕೆ ಉಳಿದಿಲ್ಲ. ಅಂತಹ ನಂಬಿಕೆಯನ್ನು ಭಾರತವನ್ನಾಳಿದ-ಆಳುತ್ತಿರುವ ಪ್ರಭುಗಳು ಉಳಿಸಿಕೊಂಡಿಲ್ಲವೆಂಬುದು ಸರ್ವವಿದಿತ. ಭಾರತೀಯರ ಇಂತಹ ದೌರ್ಬಲ್ಯಗಳು ವಿದೇಶಗಳಿಗೆ ಮಾರುಕಟ್ಟೆಯ ವಸ್ತುವಾಗಿ ಬಿಡುತ್ತದೆ. ನಮ್ಮಲ್ಲೇ ತಯಾರಾಗುತ್ತಿದ್ದ ಹತ್ತಿಯ ಬಟ್ಟೆಗಳು ತಿರಸ್ಕರಿಸಲ್ಪಡುತ್ತವೆ ಮತ್ತು ವಿದೇಶಿ ಕಂಪೆನಿಯ 100% cotton ಎನ್ನುವ ಹಣೆಪಟ್ಟಿ ಇರುವ ಬಟ್ಟೆಗಳೇ ನಮಗೆ ಹೆಚ್ಚು ಆಕರ್ಷಣಿಯವಾಗುತ್ತದೆ.

ನಾಟಿ ತರಕಾರಿಗಳು, ಬೇಳೆ-ಕಾಳುಗಳನ್ನು ಬೆಳೆದು ತಿನ್ನುತ್ತಿದ್ದ ಭಾರತೀಯರಿಗೆ ದಪ್ಪನೆಯ ಟೋಮ್ಯಾಟೋ ತೋರಿಸಿ ಹೈಬ್ರಿಡ್ ತಳಿಯ ರುಚಿ ಹತ್ತಿಸಲಾಗುತ್ತದೆ. ಅಂತಹ ತಳಿಯನ್ನು ಬೆಳೆಯಲು ಬೀಜಗಳನ್ನು, ಸಸಿಗಳನ್ನು ಪೂರೈಸಲಾಗುತ್ತದೆ. ಅವುಗಳ ಬೆಳವಣಿಗೆಗೆ ಗೊಬ್ಬರ-ರಾಸಾಯನಿಕಗಳು ಬೇಕಾಗುವುದರಿಂದ ಅವುಗಳನ್ನೂ ವ್ಯವಸ್ಥಿತವಾಗಿ ಪೂರೈಸಲಾಗುತ್ತದೆ. ಹೀಗೆ ಬೆಳೆಯಲ್ಪಟ್ಟ ತರಕಾರಿ, ಕಾಳುಗಳಲ್ಲಿ ನಾಟಿ ಆಹಾರದಲ್ಲಿರುತ್ತಿದ್ದ ಪೋಷಕಾಂಶಗಳು ಇಲ್ಲವಾಗಿ ಕೇವಲ ಆಕರ್ಷಣೆಯ ವಸ್ತುವಾಗಿ ಮಾತ್ರ ಉಳಿಯುತ್ತದೆ. ಇಂತಹ ಆಕರ್ಷಣೆಗೆ ಭಾರತೀಯರು ಬಲಿಪಶುಗಳಾಗುತ್ತಾರೆ. ಇವಿಷ್ಟನ್ನೂ ಒಂದು ವಿದೇಶಿ ಕಂಪೆನಿ ವ್ಯವಸ್ಥಿತವಾಗಿ ಮಾಡುತ್ತದೆ. ಏಕೆಂದರೆ ವಿದೇಶಿಯರಿಗೆ ಮೇಯಲು ಭಾರತದಂತಹ ಹುಲ್ಲುಗಾವಲು ಇನ್ನೆಲ್ಲಿ ಸಿಕ್ಕೀತು ?

ಇಂತಹ ಅಪೌಷ್ಟಿಕ ಮತ್ತು chemically treated ಆಹಾರವನ್ನು ತಿನ್ನುವ ಭಾರತೀಯರಿಗೆ ಸಹಜವಾಗಿಯೇ ರೋಗಗಳು ಅಟಕಾಯಿಸಿಕೊಳ್ಳುತ್ತವೆ. (ಥಿಂಕಿಸಿ : ’ಅಸಿಡಿಟಿ’ ಎನ್ನುವ ಮಾರಿ ಈಗ್ಗೆ ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಎಷ್ಟೋ ಮಂದಿಗೆ ಗೊತ್ತೇ ಇರಲಿಲ್ಲ, ಈಗ ಅಸಿಡಿಟಿ ಇಲ್ಲದವರೇ ಇಲ್ಲ !) ಇಂತಹ ರೋಗಗಳಿಗೆಂದೇ ಮಾತ್ರೆಗಳು ಔಷಧಿಗಳು ತಯಾರಾಗುತ್ತವೆ. ಇದರ ಹಿಂದೆ ವಿದೇಶಿ 'pharma company' ಗಳ ದೊಡ್ಡ ಮಾಫಿಯಾವೆ ಇರುತ್ತದೆ. ಇದೊಂದು ರೀತಿ ಸರಪಳಿಯಂತೆ, ಒಂದರ ನಂತರ ಇನ್ನೊಂದು ಅನಿವಾರ್ಯವಾಗಿ ಬಿಡುತ್ತದೆ. ಭಾರತೀಯ ಸಾಯುತ್ತಾನೆ, ವಿದೇಶಗಳು ಉದ್ಧಾರವಾಗುತ್ತವೆ.

ಹೀಗೆ ಸಣ್ಣ-ಪುಟ್ಟ ವಿಷಯಗಳಲ್ಲೆಲ್ಲಾ ತಲೆ ಹಾಕುತ್ತಿರುವ ವಿದೇಶಿಗಳು ಭಾರತವನ್ನು ಮತ್ತೆ ತಮ್ಮ ವಸಾಹತನ್ನಾಗಿ ಮಾಡಿಕೊಳ್ಳುತ್ತಿರುವರೆ ? ನಾವು ಮತ್ತೆ ಅವರಿಗೆ ಅಡಿಯಾಳಾಗುವೆವೆ ? ಯೋಚಿಸಲೇಬೇಕಾಗುತ್ತದೆ. ಇನ್ನೊಂದು ಗಹನವಾದ ವಿಚಾರವನ್ನು ಗಮನಿಸೋಣ...
HIV ಯಿಂದ AIDS ಎಂಬ ಕಾಯಿಲೆ ಬರುತ್ತದೆ ಅನ್ನುವುದನ್ನು ಎಲ್ಲಾ ಮುಂದುವರಿಯುತ್ತಿರುವ ರಾಷ್ಟ್ರಗಳು ಒಪ್ಪಿಕೊಂಡು ಅದರ ವಿರುದ್ದದ ಹೋರಾಟಕ್ಕೆ ಯಾವ ಶಸ್ತ್ರಗಳು ಬೇಕೋ ಅದನ್ನೆಲ್ಲಾ ಸಿದ್ದವಾಗಿಟ್ಟುಕೊಂಡಿವೆ. AIDS ಎನ್ನುವುದು ಹೆಚ್ಚಾಗಿ ಕಂಡುಬರುತ್ತಿರುವುದು ಆಫ್ರಿಕಾದ ಹಿಂದುಳಿದ ರಾಷ್ಟ್ರಗಳಲ್ಲಿ ಮತ್ತು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ . ಅಮೇರಿಕ ಮತ್ತು ಯುರೋಪುಗಳಲ್ಲಿ AIDS ನ ಕಾಟ ಅಷ್ಟಾಗಿ ಇಲ್ಲವೆನ್ನಬಹುದು. ಹಾಗಾದರೆ HIV ಎನ್ನುವ ವೈರಾಣು AIDS ಎನ್ನುವುದನ್ನು ಉಂಟುಮಾಡುತ್ತದೆಯೆ ?  ಇಲ್ಲವೆನ್ನುತ್ತಾರೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು. ( ಗೂಗ್ಲಿಸಿ : Is there any proof that  HIV leads to AIDS ? ). ಯಾವ ವಿಜ್ಞಾನಿಯೂ ವೈರಾಣುವಿನಿಂದ AIDS ಹರಡುತ್ತದೆ ಎಂಬುದಕ್ಕೆ ಸರಿಯಾದ refference ಕೊಡುವುದಿಲ್ಲ. AIDS ನ ಕಲ್ಪನೆಯ ಹಿಂದೆ pharma industry ಗಳ ದೊಡ್ಡ ಮಾಫಿಯಾವೆ ಇದೆ ಎಂದು ಪ್ರತಿಭಟಿಸಿದ ಅಮೇರಿಕದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯೊಬ್ಬರನ್ನು ಸದ್ದಿಲ್ಲದೆ ಭೂಗತನನ್ನಾಗಿ ಮಾಡಲಾಗುತ್ತದೆ. AIDS ಎನ್ನುವುದು ಮಹಾಮಾರಿ ಎಂಬಂತೆ ಚಿತ್ರಿಸಿ ತನ್ನ ಅಂಕೆಯಲ್ಲಿರುವ ದೇಶಗಳ ಮೇಲೆ ಅಮೇರಿಕ ಎಂಬ ದೊಡ್ಡಣ್ಣ pharma ಅಧಿಪತ್ಯವನ್ನು ಸ್ಥಾಪಿಸುತ್ತದೆ. ದಿಗಿಲು ಹುಟ್ಟಿಸುವ ವಿಚಾರವೆಂದರೆ, ಅಮೇರಿಕದ ಒಟ್ಟು ಆದಾಯದಲ್ಲಿ ಅರ್ಧ ಪಾಲು pharma indusrry ಗಳದ್ದೇ ಆಗಿದೆ ಎನ್ನುವುದು !.  ವಿಜ್ಞಾನಿಗಳೇ ಹೇಳುವಂತೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ AIDS ( ’ಸಿಂಡ್ರೋಮ್’ ಅನ್ನುವುದನ್ನು ವಿಜ್ಞಾನಿಗಳು ಇದುವರೆವಿಗೂ ಒಪ್ಪಿಲ್ಲ !)  ಎಂಬ ಕಾಯಿಲೆ ಬರುವ ಸಾಧ್ಯತೆ ಕೇಲವ ಶೇ ೨ ರಷ್ಟು ಮಾತ್ರ !.
ಹಾಗಾದರೆ ಇದು AIDS ( Aquired immune deficiency syndrome) ಅಲ್ಲವಾದರೆ ಮತ್ತೇನು ? ವಿಜ್ಞಾನಿಗಳಿಗೂ ಇದು ಪ್ರಶ್ನೆಯಾಗಿಯೇ ಇದೆ. ಇದನ್ನು failure of science ಎಂತಲೂ ಕೆಲವು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.  ಇಂತಹ AIDS ಅನ್ನು ತಡೆಗಟ್ಟಲೆಂದೋ ಅಥವ ಅರಿವು ಮೂಡೀಸಲೆಂದೋ NACO ಮುಂತಾದ ಸಂಸ್ಥೆಗಳು ಕೋಟಿಗಟ್ಟಲೆ ಹಣ ಬಾಚುತ್ತವೆ. ಮೂರು ಜಿಲ್ಲೆಗಳ ಉಸ್ತುವಾರಿ ಹೊರುವ ಒಬ್ಬ ಮೇಲ್ವಿಚಾರಕನಿಗೆ NACO ೩೦ ರಿಂದ ೫೦ ಸಾವಿರದವರಗೆ ಸಂಬಳ ನೀಡುತ್ತದೆಯೆಂದರೆ ಅದಕ್ಕೆ ಬರುತ್ತಿರುವ funding ಎಷ್ಟಿರಬಹುದು ಮತ್ತು ಅದರ ವ್ಯಾಪ್ತಿ ಎಷ್ಟಿರಬಹುದೆಂದು ಅಂದಾಜಿಸಿಕೊಳ್ಳಬೇಕಾಗುತ್ತದೆ. ಒಬ್ಬ AIDS ತಗುಲಿದೆ ಎನ್ನಲಾಗುವ ರೋಗಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದರೆ , ಆತನಿಗೆ ವಿದೇಶಗಳಿಂದಲೇ (U.S) ಔಷಧಿಗಳು ಪೂರೈಕೆಯಾಗಬೇಕು, ಮತ್ತು ಅಂತಹ ಔಷಧಿಗಳ ಬೆಲೆ ಸಾಮಾನ್ಯರಿಗೆ ಎಟುಕುವಂತಹುದಲ್ಲ. ಹೀಗೆ ತಮ್ಮ ಕರೆನ್ಸಿಗಳನ್ನು ಉತ್ತಮಪಡಿಸಿಕೊಳ್ಳುವ ಸಲುವಾಗಿ ಇತರೆ ರಾಷ್ಟ್ರಗಳನ್ನು ಸದಾ ಮರುಳು ಮಾಡುತ್ತಿರುವ ವಿದೇಶೀ ಕುಯುಕ್ತಿಗೆ ಭಾರತವೂ ಬಲಿಯಾಗಬೇಕೆ ?

ತಮ್ಮಲ್ಲಿರುವ ಹಳೆಯ ಶಸ್ತ್ರಾಸ್ತ್ರಗಳ ಹೊರದಬ್ಭುವಿಕೆಗೆ ವಿದೇಶಗಳು (ಪ್ರಮುಖವಾಗಿ U.S.) ಕಣ್ಣುಹಾಕುವುದು ಪಾಕಿಸ್ಥಾನ ಮತ್ತು ಭಾರತದಂತಹ ರಾಷ್ಟ್ರಗಳ ಮೇಲೆಯೆ. ಭಾರತವನ್ನು ಅದುಮಿಟ್ಟುಕೊಳ್ಳಲು ಪಾಕಿಸ್ಥಾನವನ್ನು ಮೆರೆಸುವ ವಿದೇಶಿ ಕೈಗಳು ಚೀನಾವನ್ನು ಹತ್ತಿಕ್ಕಲು ಭಾರತಕ್ಕೆ ಸಹಾಯ ಮಾಡುವ ಸೋಗು ಹಾಕುತ್ತವೆ. ಹಾಗೂ-ಹೀಗೂ ಅಭದ್ರತೆಯ ಭಯ ಹುಟ್ಟಿಸಿ  ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಮಾರುವ ಮೂಲಕ ಮತ್ತಷ್ಟು ಕರೆನ್ಸಿಗಳನ್ನು ತಮ್ಮ ಬೊಕ್ಕಸಕ್ಕೆ ತುಂಬಿಕೊಳ್ಳುತ್ತವೆ. ಇಲ್ಲೂ ಬಲಿಪಶುವಾಗುವುದು ಭಾರತದಂತಹ ರಾಷ್ಟ್ರಗಳೆ.

ನಗರೀಕರಣದ ಭರದಲ್ಲಿ ಅತಿಯಾದ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅದನ್ನೇ ತತ್ವಾದರ್ಶವೆಂದು ನಂಬಿ ಬದುಕಲು ಹೊರಟಿರುವ  ಯುವಸಮುದಾಯಕ್ಕೆ  ಇತ್ತೀಚಿಗೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಕಾಶ್ಮೀರದ ಹಿಂಸೆ ಎಚ್ಚರಿಕೆಯ ಗಂಟೆಯಾಗಬೇಕಿದೆ. ಸಂಪೂರ್ಣ ಭಾರತೀಯರದ್ದೇ ನೆಲವಾಗಿದ್ದ ಕಾಶ್ಮೀರ ಇಂದು ವಿದೇಶೀ ಶಕ್ತಿಗಳ ಕೈವಾಡದಿಂದಾಗಿ ಭಾರತದ ಕೈತಪ್ಪಿ ಹೋಗುವ ಸ್ಥಿತಿ ಉದ್ಭವವಾಗುತ್ತಿದೆ. ಮುಂದೆ ಅದು ಜಮ್ಮು, ಡೆಹ್ರಾಡೂನ್, ದಿಲ್ಲಿಯವರೆಗೂ ವ್ಯಾಪಿಸಲಾರದು ಎನ್ನುವುದನ್ನು ಸುಖಾಸುಮ್ಮನೆ ತಳ್ಳಿಹಾಕಲಾಗುವುದಿಲ್ಲ.  ಇಷ್ಟಕ್ಕೂ ವಿದೇಶಿ ಆಚರಣೆಗಳಿಗೇ ಮಣೆಹಾಕಿ ಅವರಿಗೇ ಬಹುಪರಾಕ್ ಹೇಳಿ ಮುಂದೊಂದು ದಿನ ನಾವೆಲ್ಲಾ ಅಡಿಯಾಳುಗಳಾದರೆ, ವಿದೇಶಿಯರೇನೂ ನಮ್ಮನ್ನು ಸಿಂಹಾಸನದಲ್ಲಿ ಕುಳ್ಳಿರಿಸುತ್ತಾರೆಯೆ ? ಖಂಡಿತ ಇಲ್ಲ !. ಅವರ ಬೂಟು ಪಾಲೀಶಿಗೋ, ಮಲ ಹೊರುವುದಕ್ಕೋ, ಬಟ್ಟೆ ಒಗೆದುಕೊಡಲೋ ನಮ್ಮನ್ನು ಉಪಯೋಗಿಸಿಕೊಳ್ಳುವುದು ನಿಶ್ಚಿತ.  ಅಣುಬಾಂಬುಗಳನ್ನು ಹೊಂದಿರುವ ಭಾರತ ಎಂತಹ ವಿಪತ್ತನ್ನಾದರೂ ಎದುರಿಸತ್ತದೆ ಎಂದು ಧೈರ‍್ಯವಾಗಿ ಹೇಳಿಕೊಂಡರೂ , ನಮ್ಮ ಭೃಷ್ಟಚಾರದ ಪ್ರಭುತ್ವ ಅಂತಹ ವಿಪತ್ತನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆಯೇ ಎನ್ನುವುದನ್ನು ವಿಮರ್ಷಿಸಬೇಕಾಗಿದೆ. ಇತ್ತೀಚೆಗೆ ಅಂಡಮಾನಿನ ಸೆಲ್ಯುಲರ್ ಜೈಲಿನ ಹೊರಭಾಗದಲ್ಲಿ ಸಾವರ್ಕರ್ ನೆನಪಿಗೆ ಸ್ಥಾಪಿಸಲಾಗಿದ್ದ ಸ್ಮಾರಕವೊಂದನ್ನು ಕಿತ್ತೊಗೆಸಿದ ’ಮಣಿಶಂಕರ್ ಅಯ್ಯರ್’ ರಂತಹ ಎಡಬಿಡಂಗಿ ಜನನಾಯಕರಿರುವ ಭಾರತದಲ್ಲಿ ಭಾರತೀಯರು ಬಲಿಪಶುವಾಗದೇ ಮತ್ತೇನು ಆಗಲು ಸಾಧ್ಯ ?

ಭಾರತದಲ್ಲಿ ವಿದೇಶಿಗಳಿಗಿಂತಲೂ ಅತ್ಯಂತ ಬುದ್ಧಿವಂತ ವೈದ್ಯರುಗಳು, ಇಂಜಿನಿಯರುಗಳು, ಶಿಕ್ಷಕರು, ತತ್ವಜ್ಞಾನಿಗಳು, ಇದ್ದಾರೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವರೆಲ್ಲರ ಶಕ್ತಿ ವ್ಯಯವಾಗುತ್ತಿರುವುದು ವಿದೇಶಿ ಕಂಪೆನಿಗಳಿಗಾಗಿ,  ವಿದೇಶಿಗಳಿಗಾಗಿ ಎಂಬ ಕಹಿಸತ್ಯವನ್ನು ನಾವು ಅರಗಿಸಿಕೊಳ್ಳಲೇಬೇಕಿದೆ. ಭೃಷ್ಟ ಭಾರತೀಯ ಪ್ರಭುತ್ವವು ಭಾರತೀಯ ವಿದ್ಯಾವಂತರನ್ನು ನಡೆಸಿಕೊಳ್ಳುವ ಪರಿಯೇ ಹಾಗಿದೆ. ಸರ್ಕಾರದ ಅಧೀನಕ್ಕೊಳಪಡುವ ಗ್ರಾಮಪಂಚಾಯ್ತಿಯ ಗ್ರಾಮಲೆಕ್ಕಿಗನಿಂದಲೇ ಲಂಚಾವತಾರದ ಪ್ರಹಸನ ಪ್ರಾರಂಭವಾಗುತ್ತದೆ ಮತ್ತು ಇದು ದಿಲ್ಲಿ ಗದ್ದುಗೆಯವರೆಗೂ ತಲುಪುತ್ತದೆ ಎಂದರೆ, ಭೃಷ್ಟಾಚಾರದ ಜಾಲ ಎಂತಹುದು ಎಂಬುದನ್ನು ಯೋಚಿಸಬೇಕಾಗುತ್ತದೆ. ೩೦೦ ವರ್ಷಗಳ ಹಿಂದೆ ’ಈಸ್ಟ್ ಇಂಡಿಯಾ ಕಂಪೆನಿ’ ಹೆಸರಿನಲ್ಲಿ ಭಾರತಕ್ಕೆ ಕಾಲಿಟ್ಟ ವಸಾಹತುಗಳು ಇಂದು ’ಬಹುರಾಷ್ಟ್ರೀಯ ಕಂಪೆನಿ’ ಎಂಬ ಹೆಸರಿನಲ್ಲಿ ಬಂದಿವೆ. ಇದರಿಂದ ಯಾರ‍್ಯಾರಿಗೆ ಎಷ್ಟು ಉಪಯೋಗವಾಗಿದೆಯೋ, ಅಂತೂ ಇದರ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳಿಗೆ ಅಂತಿಮವಾಗಿ ಭಾರತವೇ ಬಲಿಪಶುವಾಗಬೇಕಿದೆ. ಇದಕ್ಕೆಲ್ಲಾ ನಿಯಂತ್ರಣ ತರಲು ಸಾಧ್ಯವಿಲ್ಲವೆ ಎಂದು ಚಿಂತಿಸಿದರೆ, ಅದರ ಬೇರುಗಳು ನಮ್ಮ ದೇಶದ ವ್ಯವಸ್ಥೆಯನ್ನೇ ಅಣಕಿಸುತ್ತಾ ನಿಲ್ಲುತ್ತವೆ........ ತಪ್ಪು ಯಾರದು ?


..................................................................................................................................
ಮಾಹಿತಿ ಸಹಕಾರ: ಮೈಸೂರಿನ CFTRI ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಆತ್ಮೀಯ ಮಿತ್ರ.

................................................................................................................................


ಕೊನೆಕಿಡಿ:

ನಿತ್ಯವೂ ಮನೆಯಲ್ಲಿ ಶಂಭುಲಿಂಗನದೇ ನಳಪಾಕ.  ಹೀಗೊಮ್ಮೆ ರಾತ್ರಿಯ ಊಟದ ನಂತರ ಶಂಭು ತನ್ನ ಮಗನಿಗೆ ತತ್ವವೊಂದನ್ನು ಹೇಳಿದ
"ಮಗನೇ, ಕೆಟ್ಟದನ್ನು ನಾವು ದೂರವಿಡಬೇಕು " ಎಂದ. ಮರಿಲಿಂಗ ತಲೆಯಾಡಿಸಿದ.
ಶಂಭು ಮತ್ತೆ ಕೇಳಿದ
"ಅರ್ಥವಾಯಿತೇನೋ ನಾನು ಹೇಳೀದ್ದು"
"ಹೂಂ ಅಪ್ಪ " ಮರಿಲಿಂಗ ಹೇಳಿದ
"ಏನೋ ನಾನು ಹೇಳಿದುದರ ಅರ್ಥ ? "
"ನೀನು ಮಾಡುವ ಅಡುಗೆ ತಿನ್ನಬಾರದು ಅಂತ ಅಪ್ಪಾ ! " ....ಅಪ್ಪ ಬೆಪ್ಪನಾದ !.

Aug 17, 2010

ಪಂಚಾಗ್ನಿ

ಭಾರತೀಯ ಅಥವ ಹಿಂದೂಗಳ ತತ್ವಸೌಧಕ್ಕೆ  ವೇದೋಪನಿಷತ್ತುಗಳೆ  ಆಧಾರಸ್ತಂಭಗಳು.  ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳನ್ನು ಪ್ರಸ್ಥಾನತ್ರಯಗಳೆಂದು ಗೌರವಿಸಲಾಗಿದೆ.  ತತ್ವ, ತರ್ಕ ಮತ್ತು ಮೀಮಾಂಸೆಗಳ ವಿಷಯ ಹೇಳುವವರು ಈ ಪ್ರಸ್ಥಾನತ್ರಯದ ಮೂಲಕ ಹೇಳಿದರೆ ಪ್ರಮಾಣ ದೊರಕುತ್ತದೆ. ಇಲ್ಲವಾದರೆ ಅಂತಹ ವಿಚಾರಗಳು ಪುರಸ್ಕೃತವಾಗುವ ಸಂಭವನೀಯತೆ ಅತ್ಯಲ್ಪ. ಆದಕಾರಣವೇ, ಪ್ರಸ್ಥಾನತ್ರಯದ ಮೇಲೆ ಬಹಳಷ್ಟು ಭಾಷ್ಯಗಳು, ಟೀಕೆಗಳು, ತಾತ್ಪರ್ಯಗಳು ಹುಟ್ಟಿಕೊಂಡಿರುವುದು. ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದವುಗಳು. ಇವುಗಳು ವೇದಗಳಲ್ಲಿ ಬರುವಂತಹವು (ಜ್ಞಾನಕಾಂಡ). ಇದನ್ನು ವೇದಾಂತ ಎನ್ನಲಾಗಿದೆ.   ಪ್ರಮುಖವಾಗಿ ಹತ್ತು ಉಪನಿಷತ್ತುಗಳನ್ನು ಹೆಸರಿಸಬಹುದು. ಅವುಗಳೆಂದರೆ.... ಮಾಂಡೂಕ್ಯೋಪನಿಷತ್ತು, ಕೇನೋಪನಿಷತ್ತು, ಕಠೋಪನಿಷತ್ತು, ತೈತ್ತರೀಯೋಪನಿಷತ್ತು, ಐತರೇಯ ಉಪನಿಷತ್ತು, ಮುಂಡಕೋಪನಿಷತ್ತು, ಈಶಾವಾಸ್ಯೋಪನಿಷತ್ತು, ಪ್ರಶ್ನೋಪನಿಷತ್ತು, ಛಾಂದೋಗ್ಯ ಉಪನಿಷತ್ತು ಮತ್ತು  ಬೃಹ ದಾರಣ್ಯಕ ಉಪನಿಷತ್ತು.  ಉಪನಿಷತ್ತುಗಳಲ್ಲಿ ಆತ್ಮಸಾಕ್ಷಾತ್ಕಾರ, ಅದ್ವೈತ ದರ್ಶನ, ಹುಟ್ಟು-ಸಾವಿನ ಪ್ರಶ್ನೆಗಳು,  ಅತ್ಮದ ಸ್ವರೂಪ ಮತ್ತು ಸೃಷ್ಟಿಯ ವಿಚಾರಗಳು ವಿಸ್ತೃತವಾಗಿ ಹೇಳಲ್ಪಟ್ಟಿದೆ.  ಆತ್ಮಕ್ಕೆ ಅಳಿವಿಲ್ಲ ದೇಹಕ್ಕಷ್ಟೆ ಅಳಿವು ಎಂಬುದನ್ನು ಹಲವು ತೆರನಾಗಿ ವಿವರಿಸಲಾಗಿದೆ.  ಇಲ್ಲಿ ಆತ್ಮದ ಚಿರಂತನವನ್ನು ಪ್ರಾಯೋಗಿಕವಾಗಿ ಸಿದ್ದೀಕರಿಸುವ ವಿಚಾರ ಬಂದಾಗ ಗೊಂದಲಗಳು ಏಳುವುದು ಸಹಜ. ಶತಮಾನಗಳಷ್ಟು ಹಿಂದೆ ಜ್ಞಾನಿಗಳು ಕಂಡುಕೊಂಡಿದ್ದ ಈ ವಿಚಾರಗಳು ಪ್ರಾಯೋಗಿಕವಾಗಿ ಮತ್ತು ಸ್ವಾನುಭವದಿಂದಲೇ ಬಂದದ್ದಿರಬಹುದಲ್ಲವೆ ? ಏಕೆಂದರೆ , ರಸಾಯನಶಾಸ್ತ್ರದ ’ಬ್ರೌನ್ ರಿಂಗ್’ ಟೆಸ್ಟ್ ಅನ್ನು ಪ್ರಾಯೋಗಿಕವಾಗಿ ಸಿದ್ದಿಸಿ ತೋರಿಸಲು ವಿಧ್ಯಾರ್ಥಿಯೋರ್ವನಿಗೆ ಹೇಳಿದರೆ ಆತ ಈ ಹಿಂದೆ ವಿಜ್ಞಾನಿಗಳು ಕಂಡುಕೊಂಡಿರುವ ವಿಧಾನವನ್ನೇ ಅನುಸರಿಸಿ ಪ್ರಯೋಗ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಆತನಿಗೆ ಪ್ರಥಮ ಪ್ರಯತ್ನದಲ್ಲಿ ಸರಿಯಾದ ಫಲಿತಾಂಶ ದೊರೆಯದೆ ’ಬ್ರೌನ್ ರಿಂಗ್’ ಬರದೇ ಹೋದರೆ ಅದು ಈ ಹಿಂದೆ ಪ್ರಯೋಗದ ಮೂಲಕ ಪ್ರತಿಪಾದಿಸಿರುವ ವಿಜ್ಞಾನಿಯ ತಪ್ಪೇ ? ಅಂತಹ ಪ್ರಯೋಗವನ್ನು ಕೇವಲ ಬೊಗಳೆ ಎಂದು ತಳ್ಳಿಹಾಕಬಹುದೆ ? ನಿಜವಾಗಿಯೂ ಅದು ಆ ವಿಧ್ಯಾರ್ಥಿಯ ಕಲಿಕೆಯ ಮತ್ತು ತಾಳ್ಮೆಯ ಪ್ರಶ್ನೆಯಾಗಿರುತ್ತದೆ. ಎಂಟು-ಹತ್ತು ಬಾರಿ ಏಕಾಗ್ರತೆಯ ಮೂಲಕ ಪ್ರಯೋಗ ಮಾಡಿದಾಗ ಆ ವಿದ್ಯಾರ್ಥಿಯು ಸಮರ್ಪಕ ಫಲಿತಾಂಶವನ್ನು ಪಡೆಯಬಹುದಾಗಿರುತ್ತದೆ. ಹಾಗೆಯೇ ವೇದ ಮತ್ತು ಉಪನಿಷತ್ತುಗಳ ವಿಚಾರಗಳನ್ನೂ  ಸಹ ಶತಮಾನಗಳ ಹಿಂದೆಯೇ ಪ್ರಾಜ್ಞರು ಪ್ರಾಯೋಗಿಕವಾಗಿ ಸಿದ್ದೀಕರಿಸಿಕೊಂಡು ಮುಂದಿನ ಪೀಳಿಗೆಗಾಗಿ ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿ ಬಿಟ್ಟು ಹೋಗಿದ್ದಾರೆನ್ನಬಹುದು. ಇವುಗಳಿಂದ ಸಮರ್ಪಕ ಫಲಿತಾಂಶ ಪಡೆಯುವಷ್ಟು ತಾಳ್ಮೆ , ಆಸಕ್ತಿ ಮತ್ತು ಶಕ್ತಿ ನಮ್ಮಲ್ಲಿರಬೇಕಷ್ಟೆ. ಅಂತಹ ಉತ್ತಮ ಪಲಿತಾಂಶವನ್ನು ಪಡೆಯಲು ಎರಡು ಪ್ರಮುಖ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಒಂದು ಧ್ಯಾನ ಮತ್ತು ಎರಡನೆಯದು ಯೋಗ.

ಪ್ರಸ್ತುತ ಇಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ  ಬರುವ ಮೂವತ್ತೆರಡು ವಿದ್ಯೆಗಳ (ವಿದ್ಯೆ = ಜ್ಞಾನ=ಧ್ಯಾನ ) ಪೈಕಿ ಪಂಚಾಗ್ನಿ ವಿದ್ಯೆಯ ಬಗೆಗೆ ಸಂಕ್ಷಿಪ್ತವಾಗಿ ವಿಚಾರ ಮಾಡೋಣ.
ಛಾಂದೋಗ್ಯ ಉಪನಿಷತ್ತಿನಲ್ಲಿ ವೈಶ್ವಾನರ ವಿದ್ಯೆ, ಸತ್ಯಕಾಮ ವಿದ್ಯೆ, ಪುರುಷ ವಿದ್ಯೆ, ಗಾಯತ್ರಿ ವಿದ್ಯೆ, ಪಂಚಾಗ್ನಿ ವಿದ್ಯೆ..ಇತ್ಯಾದಿ ಧ್ಯಾನಸಂಬಂಧೀ ವಿದ್ಯೆಗಳು ವಿವರಿಸಲ್ಪಟ್ಟಿದೆ. ಪಂಚಾಗ್ನಿ ವಿದ್ಯೆಯೆಂಬುದು ಐದು ರೀತಿಯ ಅಗ್ನಿಗಳ  ಬಗೆಗೆ ತಿಳಿಯುವ ಜ್ಞಾನವಾಗಿದೆ.  ಜಗತ್ತಿನಲ್ಲಿ ಜೀವಿಗಳು ಬರುವುದು ಮತ್ತು ಹೋಗುವುದು ನಡದೇ ಇರುತ್ತದೆ. ಇದನ್ನು ಸಂಸಾರಚಕ್ರವೆನ್ನಬಹುದು. ಇಂತಹ ಚಕ್ರವು ಹೇಗೆ ನಡೆಯುತ್ತದೆ ? ಜೀವಿಗಳು ಬರುವುದು ಮತ್ತು ಹೋಗುವುದು ಎಂದರೇನು ?  ಪಂಚಾಗ್ನಿ ವಿದ್ಯೆಯು ಈ ಪ್ರಶ್ನೆಗಳ ಅಂತರಾಳವನ್ನು ಹೊಕ್ಕಿ ಉತ್ತರವನ್ನು ಹೇಳುತ್ತದೆ.  ಉಪನಿಷತ್ತಿನ ಈ ಧ್ಯಾನದ ವಿದ್ಯೆಯು ಹುಟ್ಟು ಮತ್ತು ಸಾವು ಎಂಬ ಸ್ವಾಭಾವಿಕ ನಡಾವಳಿಯ ಬಗೆಗೆ ವಿಚಾರಮಾಡುತ್ತದೆ ಮತ್ತು ಇದು ಒಂದು ಕತೆಯ ಮೂಲಕ ಪ್ರಾರಂಭವಾಗುತ್ತದೆ.

ಮಹಾ ಜ್ಞಾನಿಯಾದ ಉದ್ಧಾಲಕ ಆರುಣಿಯ ಮಗನಾದ ಶ್ವೇತಕೇತುವೆಂಬ ವಿದ್ಯಾರ್ಥಿಯು ಅತ್ಯಂತ ಸಮರ್ಪಕವಾಗಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾನೆ. ಆತನಿಗೆ ತಾನಿನ್ನೇನೂ ಕಲಿಯಲು ಉಳಿದಿಲ್ಲವೆಂಬ ವಿಚಾರವೂ ತನ್ನಷ್ಟಕ್ಕೆ ಮನದಟ್ಟಾಗಿರುತ್ತದೆ. ಆತನ ತಂದೆಯೂ ಮಗನಿಗೆ ಸರ್ವವಿದ್ಯಾಪಾರಂಗತನೆಂದು ಹರಸಿರುತ್ತಾನೆ.  ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಕ್ಷತ್ರಿಯ ರಾಜನಾದ ಪ್ರವಾಹಣ ಜೈವಲಿಯ ಮುಂದೆ ಪ್ರದರ್ಶಿಸಬೇಕೆಂಬ ಆಕಾಂಕ್ಷೆಯಿಂದ ರಾಜನಲ್ಲಿಗೆ ತೆರಳುತ್ತಾನೆ. ಶ್ವೇತಕೇತುವನ್ನು ರಾಜನು ಆದರದಿಂದ ಬರಮಾಡಿಕೊಂಡು ಕುಶಲೋಪರಿಯನ್ನು ವಿಚಾರಿಸಿ,  ತನ್ನಲ್ಲಿಗೆ ಆಗಮಿಸಿದ ವಿಚಾರವನ್ನು ತಿಳಿಯಬಯಸುತ್ತಾನೆ. ಶ್ವೇತಕೇತುವು ತನ್ನ ವಿದ್ಯಾಪಾಂಡಿತ್ಯವನ್ನು ಪ್ರದರ್ಶಿಸಲು ಬಂದಿರುವುದಾಗಿ ಹೇಳಿದಾಗ, ರಾಜನು ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆ ಸಂಭಾಷಣೆ ಹೀಗಿದೆ..

ರಾಜ :  ತಾವು ಸಂಪೂರ್ಣ ಜ್ಞಾನಿಗಳಾಗಿರುವಿರೋ ? ನಿಮ್ಮ ವಿದ್ಯಾಭ್ಯಾಸ ಮುಗಿದಿರುವುದೇ ? ಗುರುಗಳು ನಿಮ್ಮ ವಿದ್ಯೆ ಪೂರ್ಣಗೊಂಡಿರುವುದಕ್ಕೆ ಅಂಕಿತನ್ನು ಹಾಕಿದ್ದಾರೆಯೇ ?

ಶ್ವೇತ  :  ಹೌದು. ನನ್ನ ವಿದ್ಯಾಭ್ಯಾಸ ಸಂಪೂರ್ಣವಾಗಿದೆ. ಗುರುಗಳು ನನ್ನನ್ನು ಹರಸಿದ್ದಾರೆ.

ಹೀಗೆಂದ ಶ್ವೇತಕೇತುವಿಗೆ ರಾಜನು ೫ ಮರುಪ್ರಶ್ನೆಗಳನ್ನು ಕೇಳುತ್ತಾನೆ. ಅವುಗಳೆಂದರೆ,

೧)  ಈ ಪ್ರಪಂಚವನ್ನು ತೊರೆದ ನಂತರ ಜೀವಿಗಳು ಎಲ್ಲಿಗೆ ಹೋಗುತ್ತವೆಂದು ನಿಮಗೆ  ತಿಳಿದಿದೆಯೆ ?
೨) ಈ ಜಗತ್ತಿಗೆ ಜೀವಿಗಳು ಬರುವ ಮುನ್ನ ಅವು ಎಲ್ಲಿರುತ್ತವೆ ಮತ್ತು ಹೇಗೆ ಹುಟ್ಟುತ್ತವೆಯೆಂದು ನಿಮಗೆ ತಿಳಿದಿದೆಯೆ ?
೩) ಜೀವಿಯು ಹುಟ್ಟುವ ಮುನ್ನ ಅವು ನಡೆದು ಬರುವ ದಾರಿಯು ನಿಮಗೆ ತಿಳಿದಿದಿಯೆ ?
೪) ಇಡೀ ಜಗತ್ತು  ಜೀವಿಗಳಿಂದ ಸಂಪೂರ್ಣ ತುಂಬಿಕೊಳ್ಳದೆ ಮರಣಗಳ ಮೂಲಕ ಸಮತೋಲವಾಗುತ್ತಿರುವುದು ಏಕೆಂದು ನಿಮಗೆ ತಿಳಿದಿದೆಯೆ ?
೫) ಜೀವಿಯು ಮಾನವರೂಪ ತಾಳಿ ಬರುವ ಕ್ರಿಯೆಯು ನಿಮಗೆ ತಿಳಿದಿದೆಯೆ ?

ರಾಜನು ಕೇಳಿದ ಮೇಲಿನ ಐದೂ ಪ್ರಶ್ನೆಗಳಿಗೂ ಶ್ವೇತಕೇತುವು ಉತ್ತರಿಸಲಾಗದೆ ಹೋಗುತ್ತಾನೆ. ನಂತರ ತನ್ನ ವಿದ್ಯೆಯು ಅಪೂರ್ಣವೆಂದು ರಾಜನಲ್ಲಿ ಒಪ್ಪಿಕೊಂಡು ಐದು ಪ್ರಶ್ನೆಗಳಿಗೂ ತನಗೆ ಉತ್ತರ ತಿಳಿಸಬೇಕೆಂದು ವಿನಂತಿಸುತ್ತಾನೆ.  ರಾಜನು ಆತನಿಗೆ ತನ್ನ ಶಿಷ್ಯನಾಗಿ ಬರಲು ತಿಳಿಸುತ್ತಾನೆ ಮತ್ತು ಕೆಲವು ಧ್ಯಾನ ಮತ್ತು ಯೋಗಗಳನ್ನು ತಿಳಿಸಿಕೊಡುತ್ತಾನೆ. ಒಂದು ದಿನ ರಾಜನು ಶ್ವೇತಕೇತುವಿನ ಸಂದೇಹಕ್ಕೆ ಪರಿಹಾರವನ್ನು ಹೇಳುತ್ತಾ ಪಂಚಾಗ್ನಿಯ ವಿಚಾರವನ್ನು ಹೀಗೆ ಹೇಳುತ್ತಾನೆ.

"ಶರೀರದಲ್ಲಿ ಜನಿಸಲು ಸುಖಸ್ಥಾನದಿಂದ ಹಿಂತಿರುಗಿ ಬರುವ ಆತ್ಮವು ಹೊಸಶರೀರವನ್ನು ಪಡೆಯಲು ಐದು ಅಗ್ನಿಗಳ ಮೂಲಕ ಹಾದುಹೋಗಬೇಕಾಗುತ್ತದೆ. ಸಹಜವಾಗಿ ಅಗ್ನಿಯು ಶರೀರ ಮತ್ತು ವಸ್ತುಗಳನ್ನು ದಹಿಸುತ್ತದೆ. ಹಾಗಿರುವಾಗ ಅದನ್ನು ರೂಪಗಳ ಜನಕವೆಂದು ಹೇಗೆ ಕರೆಯಬಹುದು ? ಆತ್ಮವು ಐದು ಅಗ್ನಿಗಳ ಮೂಲಕ ಹಾದು ಬರುವುದು ಹೇಗೆ ? .

 ಅಗ್ನಿಗೆ ಎರಡು ಪ್ರಮುಖ ಕ್ರಿಯೆಗಳಿವೆ.
೧) ಸೃಷ್ಟಿ ಮತ್ತು ನಾಶ
೨) ಆತ್ಮಗಳಿಗೆ ಸೂಕ್ಷ್ಮ ಶರೀರಗಳನ್ನು ರಕ್ಷಿಸಿಡುವುದು.

ಆತ್ಮವು ಐದು ಹಂತಗಳನ್ನು ದಾಟಿ ಬರುವಾಗ , ಒಂದೊಂದು ಹಂತದಲ್ಲೂ ಒಂದೊಂದು ಸೂಕ್ಷ್ಮ ಶರೀರವನ್ನು ಅಗ್ನಿಯು ಒದಗಿಸಬೇಕಾಗುತ್ತದೆ.
ಸುಖಸ್ಥಾನ(ಸ್ವರ್ಗವೇ?) ದಲ್ಲಿ ಆತ್ಮಕ್ಕೆ ಅಗ್ನಿಯು ಸೂಕ್ಷ್ಮವಾದ ಮಾನಸಿಕ ರೂಪನೆಲೆ ಕೊಟ್ಟಿರುತ್ತದೆ. ಮೊದಲನೆಯ ಅಗ್ನಿಹೋತ್ರ ಅಥವ ಹೋಮವು ಅಲ್ಲೇ ನಡೆಯುತ್ತದೆ.
ಎರಡನೆಯದು ಜ್ಯೋತಿರ್ಲೋಕದಲ್ಲಿ ಅಂದರೆ ಆತ್ಮವು ಸುಖಸ್ಥಾವನ್ನು ಬಿಟ್ಟು ನಂತರದ ಹಂತಕ್ಕೆ ಬಂದಾಗ  ನಡೆಯುತ್ತದೆ. ಜ್ಯೋತಿರ್ಲೋಕವೆಂದರೆ ಆತ್ಮಕ್ಕೆ  ಸಂಪೂರ್ಣ ಭೌತಿಕ ಶಕ್ತಿಯನ್ನು ಒದಗಿಸುವ ಹಂತ. ಅಲ್ಲಿ ಎರಡನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ಮೂರನೆಯದು ಜಗತ್ತಿನ ಭೌತಿಕ ನೆಲೆಯಲ್ಲಿ ಮನುಷ್ಯ ಶರೀರದಲ್ಲಿ ಸೂಕ್ಷ್ಮರೂಪದಲ್ಲಿ ನಡೆಯುತ್ತದೆ. ಮನುಷ್ಯರು ಸೇವಿಸುವ ಅನ್ನಾಹಾರಗಳಲ್ಲಿ ಬೆರೆತುಹೋಗುತ್ತದೆ. ಇಲ್ಲಿ ಮೂರನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ನಾಲ್ಕನೆಯದು, ಮನುಷ್ಯರು ತಿಂದ ಆಹಾರದಲ್ಲಿ ಪ್ರಾಣಾಗ್ನಿಹೋತ್ರವಾಗಿ ಸಂಭವಿಸುತ್ತದೆ. ಜೀರ್ಣವಾದ ಆಹಾರದಲ್ಲಿ ಬೆರೆತು ಪುರುಷನಲ್ಲಿ ವೀರ್ಯವನ್ನೂ, ಸ್ತ್ರೀಯಲ್ಲಿ ಅಂಡಾಣುಗಳನ್ನು ಉತ್ಪತ್ತಿಮಾಡುವುದರ ಮೂಲಕ ಸೂಕ್ಷ್ಮರೂಪದಲ್ಲಿ ಶರೀರವನ್ನು ಪಡೆದುಕೊಳ್ಳುತ್ತದೆ ಮತ್ತು ನಾಲ್ಕನೆಯ ಹೋಮವಾಗಿ ಪರಿಗಣಿತವಾಗುತ್ತದೆ.
ಪುರುಷನ ವೀರ್ಯವು ಸ್ತ್ರೀಯ ಗರ್ಭವನ್ನು ಪ್ರವೇಶಿಸಿದಾಗ ಐದನೆಯ ಹೋಮವು ನಡೆಯುತ್ತದೆ. ಐದನೆಯ ಅಗ್ನಿಹೋತ್ರವು ನಡೆಯುವುದರ ಮೂಲಕ ಆತ್ಮಕ್ಕೆ ಭೌತಿಕ ದೇಹವು ಲಭಿಸಿ ಶರೀರವು ರಚನೆಯಾಗುತ್ತದೆ " .

ರಾಜನ ಮಾತನ್ನು ಕೇಳಿದ ಶ್ವೇತಕೇತುವು ಸಂತೃಪಿಯಿಂದ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಉತ್ಸುಕನಾಗುತ್ತಾನೆ. .......ಮುಂದಿನ ವಿಷಯಗಳು ಇಲ್ಲಿ ಅಪ್ರಸ್ತುತ.

ಪಂಚಾಗ್ನಿಹೋಮ ಅಥವ ವಿದ್ಯೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ವಿವರಣೆಯನ್ನು ಕೊಡಲಾಗಿದೆ. ಉಪನಿಷತ್ತುಗಳು ಧ್ಯಾನ ಮತ್ತು ಯೋಗಗಳ ಮೂಲಕ ಸೃಷ್ಟಿಯನ್ನು ಅರಿಯುವ ಪ್ರಾಯೋಗಿಕ ಸಿದ್ಧಾಂತವೇ ಆಗಿದೆ.  
............................................................................................

ಉಪ"ಸಂಹಾರ" :
...................
ನನಗೆ ಯಾರನ್ನೂ ವೈಯಕ್ತಿಕವಾಗಿ ತೆಗಳುವುದಕ್ಕೆ ಇಷ್ಟವಾಗುವುದಿಲ್ಲ. ಹಾಗಂತ ನಾನೇನೂ ಪುಣ್ಯಕೋಟಿಯಲ್ಲ. ಪಂಚಾಗ್ನಿಹೋಮ ಮಾಡುತ್ತೇನೆಂದು ನಿತ್ಯಾನಂದ ಮಹಾರಾಜರು ತಮ್ಮ ಸುತ್ತಲೂ ತಾವೇ ಒಂದು ವರ್ತುಲವನ್ನು ನಿರ್ಮಿಸಿ, ಅಲ್ಲೆಲ್ಲಾ ಸೀಮೆ ಎಣ್ಣೆ ಸುರಿದು ಒಂದಷ್ಟು ಕರಟ, ಸೌದೆಗಳನ್ನು ಹಾಕಿ ಬೆಂಕಿ ಹೊತ್ತಿಸಿ ಅದರ ನಡುವೆ ತಾವು ಕೂತು ಧ್ಯಾನ ಮಾಡಿ ಪಂಚಾಗ್ನಿ ಹವನ ಮಾಡಿದೆ ಎಂದು ...ಹೇಳಿದ್ದರಲ್ಲಿ ತಪ್ಪಿಲ್ಲದಿರಬಹುದು. ಕಾರಣ ಅವರಿಗೆ ಮೇಲಿನ ಪಂಚಾಗ್ನಿ ವಿದ್ಯೆಯ ಬಗ್ಗೆ ತಿಳಿದಿಲ್ಲದಿರಬಹುದು. ಎಲ್ಲರಿಗೂ ಎಲ್ಲವೂ ತಿಳಿದಿರಬೇಕೆಂದೇನಿಲ್ಲವಲ್ಲ !. ಅಥವ ಪಂಚಾಗ್ನಿ ಧ್ಯಾನವನ್ನು ಅರಿತಿರಲೂ ಬಹುದು. ಸಿನಿಮಾ ನಟಿ ರಂಜಿತಾರೊಡಗೂಡಿ ’ಐದನೆಯ’ ಅಗ್ನಿಹೋತ್ರವನ್ನು ಪ್ರಾಯೊಗಿಕ ಸಿದ್ದೀಕರಿಸಲು ಪಣತೊಟ್ಟಿದ್ದಿರಲೂಬಹುದು ! . ಯಾವುದೇ ಅಪವಾದವನ್ನು ವೈಯಕ್ತಿಕವಾಗಿ ಹೇಳುವುದಕ್ಕೆ ಮುನ್ನ ವೇದಾಂತಗಳಲ್ಲಿ ಅಂತಹ ಅಪವಾದಗಳಿಗೆ ಏನು ಹೇಳಿದೆ ಎಂಬುದನ್ನು ಅರಿಯುವುದು ಸೂಕ್ತ. ನಿತ್ಯಾನಂದ ಮಹರಾಜರನ್ನು ಹಳಿಯುವುದರ ಮೂಲಕ ಸಮಸ್ತ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ನಾನು ಸುತರಾಂ ಒಪ್ಪುವುದಿಲ್ಲ. ನಾನು ಹುಟ್ಟಿದ ನಂತರ ಹಿಂದುವಾದೆನೋ ಅಥವ ಅದಕ್ಕೆ ಮೊದಲೇ ಆಗಿದ್ದೆನೋ ಗೊತ್ತಿಲ್ಲ. ಈಗಂತೂ ನಾನು ಪಕ್ಕಾ ಹಿಂದೂ ಆಗಿರುವುದು ಸತ್ಯ. ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಪೊಳ್ಳು ಜಾತ್ಯಾತೀತದ ಮುಖವಾಡ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ.  ನಿತ್ಯಾನಂದರು ಬಹಳ ಶ್ರಮಪಟ್ಟು ಛಾಂದೋಗ್ಯದ ಧ್ಯಾನವನ್ನು ಅರಿಯಲು ಬೆಂಕಿಯ ಜೊತೆ ಸರಸವಾಡಿದ್ದು ಅನೇಕರಿಗೆ ತಮಾಷೆಯೆನ್ನಿಸಿರಬಹುದು. ಆದರೆ ಅದೂ ಅರಿಯುವ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯಲ್ಲವೆ ?!.  ’ ಶ್ರೇಯಾಂಸಿ ಬಹು ವಿಘ್ನಾನಿ’ ಎನ್ನುವಂತೆ ಪರಮಹಂಸರಾಗುವವರಿಗೆ ಅಡೆತಡೆಗಳು ಸಹಜ. ಅದನ್ನೆಲ್ಲಾ ದಾಟಿ ಅವರು ಪಂಚಾಗ್ನಿಯನ್ನು ಅರಿಯುತ್ತಾರೆಂದು ಭರವಸೆಯಿಟ್ಟುಕೊಳ್ಳಬಾರದೇಕೆ ?. ಈಗಂತೂ ಅವರು ತಾವು ಸನ್ಯಾಸಿಯೇ ಅಲ್ಲ ತಾನೊಬ್ಬ ಧ್ಯಾನಿ ಎಂದು ಬಹು ಘಂಟಾಘೋಷವಾಗಿ ಹೇಳಿದ್ದಾರೆ. ಹಾಗಾಗಿ ಅವರೀಗ ಉಪನಿಷತ್ತುಗಳಲ್ಲಿಯ ಧ್ಯಾನದ ರಹಸ್ಯವನ್ನು ಅರಿಯಲು ಮೌನಧ್ಯಾನಿಯಾಗಿದ್ದಾರೆಂದು ತಿಳಿಯಬಹುದು . ನನಗೆ ಅವರ ಬಗೆಗೆ ಸಂಪೂರ್ಣ ವಿಶ್ವಾಸವಿದೆ. ಯಾವುದಾಗದಿದ್ದರೂ ಪಂಚಾಗ್ನಿಯ ಐದನೆಯ ಹೋಮವನ್ನಂತೂ ಅವರು ಸಾಧಿಸಿಯೇ ತೀರುತ್ತಾರೆ...

ಬೋಲೋ ಶ್ರೀ ನಿತ್ಯಾನಂದ ಭೂಪಾಲ್ ಮಹರಾಜ್ ಕೀ ........

( ಇಷ್ಟೆಲ್ಲಾ ಓದಿದ ಮೇಲೆ ನಾನೂ ನಿತ್ಯಾನಂದರ ಶಿಷ್ಯನೋ ಅಥವ ಸನ್ಯಾಸಿಯಾಗುವೆನೆಂದು ಮಾತ್ರ ಊಹಿಸಬೇಡಿ. ನನಗೆ ಪ್ರಾಪಂಚಿಕ ಸುಖಗಳು  ಬೇಕು. (Worldly pleasures !)  ಕಾರಣ ನಾನೊಬ್ಬ ಸಾಮಾನ್ಯ ಮನುಷ್ಯ !)      

===========================================================


ಕೊನೆಕಿಡಿ :

ಜನನಾಯಕರೊಬ್ಬರು ಭೀಕರ ಭಾಷಣವನ್ನು ಕೊರೆಯುತ್ತಿದ್ದರು. ಸಾಕಷ್ಟು ಮಂದಿಯೂ ಸೇರಿದ್ದರು. ಅಲ್ಲಿ ಶಂಭುಲಿಂಗನೂ ಇದ್ದ !. ಅದೂ ನಾಯಕರ ಪಕ್ಕದಲ್ಲೆ ಕುಳಿತಿದ್ದ.
ಹರಿಯಿತು ಓತಪ್ರೋತವಾಗಿ ನಾಯಕರ ಭಾಷಣ. ಸಮಯ ಸರಿದಂತೆ ಮಂದಿಯೂ ಕಾಣೆಯಾದರು. ಅಲ್ಲುಳಿದಿದ್ದು ಶಂಭುಲಿಂಗ ಮಾತ್ರ !.
ನಾಯಕರು ಶಂಭುವನ್ನು ಹೊಗಳಿದರು, ತನ್ನ ಮಾತನ್ನು ಕೇಳಲು ಇವನೊಬ್ಬನಾದರೂ ಇರುವನಲ್ಲ ಎಂದು. ಶಂಭು ದೇಶಾವರಿ ನಗೆಯೊಂದನ್ನು ಬಿಸಾಡಿ ಹೇಳಿದ...
" ನಿಮ್ದಾದ ಮ್ಯಾಕೆ ನಂದೇ ಭಾಸ್ನ್ ಸೋಮಿ..ಅದ್ಕೆ ಕುಂತಿವ್ನಿ !! " .

Aug 2, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... ೩

ನಾಗಪ್ಪನವರ ಮುಖ ವಿಷಣ್ಣವಾಯಿತು, ಅದು ಗೋಪಾಲಯ್ಯನಿಗೂ ಕಂಡಿತು. ಚಿರಂತನಿಗೆ ತಾನೇ ಮಾತನಾಡಬೇಕೆನ್ನಿಸಿದರೂ, ಸಂದರ್ಭ ಸರಿಯಾಗಲಿಕ್ಕಿಲ್ಲ ಎಂದು ಸುಮ್ಮನಾದ. ಕ್ಷಣಕಾಲ ಮೌನ ಆವರಿಸಿತು.  ಅಡುಗೆಮನೆಯಿಂದ ಸೀತಮ್ಮ ಹೊರಬಂದರು. ಗಂಡಸರು ಮಾತನಾಡುವಾಗ ಹೆಂಗಸರು ಮಧ್ಯೆ ಬಾಯಿ ಹಾಕಬಾರದೆನ್ನುವ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು ಸೀತಮ್ಮ. ಯಾರಿಂದಲೂ ಮಾತು ಹೊರಡದಾದಾಗ ತಾವೇ ಮಾತನಾಡುವುದು ಸೂಕ್ತವೆಂದು ಭಾವಿಸಿದರು. ಹಾಗೆ ಮಾತನಾಡಿದರು ಕೂಡ .

" ನಮಗೆ ಇಂಜಿನಿಯರ್ರೇ ಆಗಬೇಕು ಅಂತೇನು ಇರಲಿಲ್ಲ, ನಮ್ಮ ಕುಟುಂಬದವರೆಲ್ಲಾ ಕಂಪ್ಯೂಟರ್ ಇಂಜಿನಿಯರ್ರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವೆಲ್ಲಾ ಈಗ ಫಾ಼ರಿನ್ನು, ಹಾಳು-ಮೂಳು ಅಂತ ತಿರುಗಾಡಿಕೊಂಡಿವೆ. ನಮಗೆ ಇರೋಳು ಒಬ್ಬಳೇ ಮಗಳು. ಮಗಳು ಒಳ್ಳೆ ಕಡೆ ಸೇರಲಿ, ಎಲ್ಲರಂತೆ ಕಾರು-ವಿಮಾನ ಅಂತ ಓಡಾಡ್ಕೊಂಡು ಇರಲಿ ಅನ್ನೋ ಆಸೆ ಅಷ್ಟೆ. ಒಟ್ಟಿನಲ್ಲಿ ಒಳ್ಳೆ ಕೆಲಸ ಆದರೆ ನಮ್ಮ ಅಭ್ಯಂತರವೇನು ಇಲ್ಲ "
ನಾಗಪ್ಪ ಹೆಂಡತಿಯ ಮುಖವನ್ನೊಮ್ಮೆ ನೋಡಿದರು. ಮತ್ತೆ ತಲೆ ಕೆಳಗೆ ಹಾಕಿ ನೆಲವನ್ನೇ ದಿಟ್ಟಿಸತೊಡಗಿದರು.  ಈ ವಿಷಯವನ್ನು ಬೇಗ ಇತ್ಯರ್ಥಗೊಳಿಸಬೇಕು ಎಂದುಕೊಂಡ ಚಿರಂತ. ಮತ್ತೆ-ಮತ್ತೆ  ವೃತ್ತಿ ಸಂಬಂಧ ವಿಚಾರಗಳನ್ನು ಯಾರೂ ಕೆದಕುವುದು ಅವನಿಗೆ ಸರಿಕಂಡುಬರಲಿಲ್ಲ. ತಲೆ ತಗ್ಗಿಸಿ ಕುಳಿತಿದ್ದ ನಾಗಪ್ಪನವರನ್ನೊಮ್ಮೆ ದಿಟ್ಟಿಸಿದ. ತುಸು ಹತಾಶರಾದಂತೆ ಕಂಡುಬಂದಿತು. ಸೀತಮ್ಮನವರೊಟ್ಟಿಗೆ ಮಾತನಾಡುವುದೇ ಸರಿಯೆಂದುಕೊಂಡ.

" ಅಮ್ಮಾ, ಇಂಜಿನಿಯರ್ರೇ ಆಗಲಿ, ನಾನೇ ಆಗಲಿ ಅಥವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡ್ತಾ ಇರೋ ನನ್ನಂತಹ ಸಾವಿರಾರು ಜನಗಳ ಬದುಕು , ಹೊರಗಡೆಯಿಂದ ನೋಡೋರಿಗಷ್ಟೆ ಚೆಂದ. ಎಲ್ಲದಕ್ಕೂ ನಾವು ಶನಿವಾರ-ಭಾನುವಾರಗಳನ್ನೇ  ಕಾಯ್ಬೇಕು. ನಾವು ದುಡಿದದ್ದನ್ನು ನೆಮ್ಮದಿಯಾಗಿ ಉಣ್ಣುತ್ತೇವೆಂಬ ನಂಬಿಕೆ ನಮ್ಮಲ್ಲಿ ತುಂಬ ಕಡಿಮೆ. ಒಂದು ರೀತಿಯ ಯಾಂತ್ರಿಕ ಜೀವನ ನಮ್ಮದು. ಅದರಲ್ಲೂ ಬೆಂಗಳೂರು ಅನ್ನೋದು ವಿಲಾಸೀ ಮಾಯಾ ಲೋಕ. ಅಲ್ಲಿ ಬದುಕೋದು ನಮ್ಮ ಸದ್ಯದ ಅನಿವಾರ್ಯತೆ ಮತ್ತು ಅಗತ್ಯ. ಅಂತಹ ಮಾಯಾಮೃಗದ ಬೆನ್ನುಹತ್ತಿ ಹೋಗೋ ಅವಶ್ಯಕತೆ ನಿಮಗಿಲ್ಲ ಅಂದುಕೊಳ್ಳುತ್ತೇನೆ. ಇಷ್ಟಕ್ಕೂ ಯಾರೂ ನಿಮ್ಮ ಮಗಳ ಅಭಿಪ್ರಾಯವನ್ನೇ ಕೇಳಲಿಲ್ಲವಲ್ಲ, ಆಕೆಯನ್ನೇನು ಬಂಧಿಸಿಟ್ಟಿದ್ದೀರೇನು ? ".

 ನಾಗಪ್ಪ ತುಸು ಸಾವರಿಸಿಕೊಂಡವರಂತೆ ಮೇಲೆದ್ದರು. ಮುಖದಲ್ಲಿ ಬಲವಂತದ ನಗುವೊಂದನ್ನು ತಂದುಕೊಂಡರು. ಅದನ್ನು ತೋರಿಕೊಂಡರು ಕೂಡ. ಏನೋ ಹೇಳಲು ಹೊರಟ ಗೋಪಾಲಯ್ಯನವರನ್ನು ಅರ್ಧಕ್ಖೇ ತಡೆದರು ನಾಗಪ್ಪ.

" ಗೋಪಾಲಯ್ಯ, ಹುಡುಗ ಹೇಳೋದು ಸರಿಯಿದೆ. ಹಾಳಾದ್ದು ಈ ಕಂಪ್ಯೂಟರ್ ವಿಷಯ ನಮಗೆ ಗೋತ್ತಾಗೋದಿಲ್ಲ ನೋಡಿ. ಅವರಿಬ್ಬರೇ ಮಾತನಾಡಿಕೊಂಡು ಬಿಡಲಿ ಅಲ್ಲವೆ. ಅವರ ಜೀವನವನ್ನು ಅವರೇ ತೀರ್ಮಾನ ಮಾಡಿಕೊಳ್ಳೋದು ಒಳ್ಳೇದು . ಏನಂತೀರಿ ? "

ಗೋಪಾಲಯ್ಯ ಮನಸಿನಲ್ಲೇ ಹೌದೆಂದುಕೊಂಡರು. ಹೊರಗೆ ತೋರ್ಪಡಿಸದೆ, ಗೋಣು ಹಾಕಿ ಸುಮ್ಮನಾದರು. ಹಜಾರಕ್ಕೆ ಅಂಟಿಕೊಂಡಿದ್ದ ಕೋಣೆಯ ಬಾಗಿಲು ತೆರೆದರು ನಾಗಪ್ಪ. ಮಗಳನ್ನು ಹೊರಬರುವಂತೆ ಕರೆದರು. ಅಲ್ಲಿಯವರೆಗೂ ಒಳಗೆ ಒಂಟಿಯಾಗಿ ಕುಳಿತಿದ್ದರಿಂದಲೋ ಏನೋ ಆಕೆಯ ಮುಖ ಬಾಡಿದಂತಾಗಿತ್ತು. ಸಂಪ್ರದಾಯದಂತೆ ಸೀರೆ ಉಟ್ಟು ತಲೆಗೆ ಹೂ ಮುಡಿದು ನಿಂತಿದ್ದ ಹುಡುಗಿಯನ್ನೊಮ್ಮೆ ಚಿರಂತ ದಿಟ್ಟಿಸಿದ. ಕಿರುನಗೆಯೊಂದು ಅವನ ತುಟಿಯಂಚಿನಲ್ಲಿ ಮಿನುಗಿ ಮಾಯವಾಯಿತು. ಅವನೇ ಮಾತಿಗೆ ಮುಂದಾದ.

" ನಿಮ್ಮ ಅಭ್ಯಂತರವೇನೂ ಇಲ್ಲವೆಂದಾದರೆ ನಾನು, ನಿಮ್ಮ ಮಗಳು ಸ್ವಲ್ಪ ಕಾಲ ನಿಮ್ಮ ತೋಟದಲ್ಲೆ ತಿರುಗಾಡಿಕೊಂಡು ಬರಬಹುದೆ ? ಹಾಗೇ ಒಂದಷ್ಟು ವಿಚಾರ ವಿನಿಮಯವೂ ಆಗಬಹುದೇನೋ ಅಂತ ".

 ನಾಗಪ್ಪ ಮರುಮಾತಿಲ್ಲದೆ ಸಮ್ಮತಿಯಿತ್ತು ಅಡುಗೆಮನೆಯೆಡೆಗೆ ನಡೆದರು. ಹುಡುಗ-ಹುಡುಗಿ ಮನೆಯಿಂದ ಹೊರಬಿದ್ದರು. ಗೋಪಾಲಯ್ಯ ಕೈಯಿಗೆ ಸಿಕ್ಕಿದ ಪುಸ್ತಕವೊಂದನ್ನು ತಿರುವುತ್ತ ಕುಳಿತರು. ಸೀತಮ್ಮ ತುಸು ಗಾಬರಿಯಾಗಿದ್ದರು. ಅವರ ಆತಂಕಕ್ಕೆ ಕಾರಣವೂ ಇತ್ತು. ನಾಗಪ್ಪ ಒಳಬಂದಿದ್ದು ನೋಡಿ ದುಗುಡದಿಂದ ಹೇಳಿಕೊಂಡರು.

"ಇಬ್ಬರನ್ನೇ ಹಾಗೆ ಹೊರಗೆ ಕಳಿಸೋದು ಅದೇನು ಚೆನ್ನಾಗಿರುತ್ತೆ ಹೇಳಿ ? , ಅದೂ ಮದುವೆಗೆ ಮುಂಚೆಯೆ, ಕನಿಷ್ಠ ಲಗ್ನಪತ್ರಿಕೆಯಾದರೂ ಆಗಬಾರದೆ. ನೀವಂತೂ ಇತ್ತೀಚೆಗೆ ಇಂಗು ತಿಂದ ಮಂಗನ ಹಾಗೆ ಆಡ್ತಾ ಇದ್ದೀರಿ. ಅವರೇನೋ ಕೇಳುದ್ರಂತೆ, ಇವರು ಕಳುಹಿಸಿಬಿಟ್ರಂತೆ. ಹೆಚ್ಚು-ಕಮ್ಮಿಯಾದರೆ ಯಾರು ಜವಾಬುದಾರರು? ಅಕ್ಕ-ಪಕ್ಕದವರು ಏನಂದಾರು ".

"ಸೀತೂ, ನೀನಿನ್ನೂ ನಿಮ್ಮಜ್ಜನ ಕಾಲದಲ್ಲೇ ಇದ್ದೀಯ. ಬೆಂಗಳೂರಿನಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಇಷ್ಟಕ್ಕೂ ಬೆಂಗಳೂರನ್ನು ನೀನು ಕಂಡಿದ್ರೆ ತಾನೆ ನಿನಗೆ ಗೊತ್ತಾಗೋದು"

" ಕಾಣೋದಕ್ಕೆ ಕರೆದುಕೊಂಡು ಹೋಗಿದ್ರೆ ತಾನೇ ನೀವು ? ಪಕ್ಕದ ’ಬಾಳೆಹೊನ್ನೂರು’ ತೋರಿಸೋದಕ್ಕೆ ಮದುವೆಯಾಗಿ ೧೦ ವರ್ಷ ತಗೊಂಡ್ರಿ ನೀವು. ಎಂದಾದ್ರೂ ಸ್ವತಂತ್ರವಾಗಿ ನಿರ್ಧಾರತಗೊಳೋಕೆ ಬಿಟ್ರೇನು ನೀವು ? "

"ಆಯ್ತು ಮಹರಾಯ್ತಿ, ಇಲ್ಲಿವರೆಗೂ ನಿನಗೆ ಸ್ವತಂತ್ರ ಸಿಕ್ಕಿರಲಿಲ್ಲ. ಇನ್ನು ಮುಂದೆ ನೀನು ಸರ್ವತಂತ್ರ ಸ್ವತಂತ್ರೆ. ನಿನ್ನ ಮಗಳ ಮದುವೆ ವಿಷಯದಲ್ಲಿ ನೀನೇ ನಿರ್ಧಾರ ತಗೋ , ಆಯ್ತಾ "

ನಾಗಪ್ಪ ಹೊರಬಂದರು. ಅಡುಗೆ ಮನೆಯಲ್ಲಿ ಆಗಾಗ್ಗೆ  ಪಾತ್ರೆಗಳ  ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇತ್ತ , ಪರಸ್ಪರ ಮಾತನಾಡಲೆಂದು ಹೊರಬಂದವರಿಬ್ಬರೂ ಬಹಳ ದೂರ ಮೌನವಾಗೇ ಸಾಗಿ ಬಂದಿದ್ದರು. ಹುಡುಗಿಯೇ ಮಾತನಾಡಿದಳು.

" ನಿಮ್ಮ ಹೆಸರು ಚಿರಂತ್ ಅಂತ ಗೊತ್ತಾಯ್ತು. ನಾನು ಪಲ್ಲವಿ ".

ಹುಡುಗಿಯ ಮಾತಿನಿಂದ ಉತ್ತೇಜಿನಾದಂತೆ ಕಂಡುಬಂದ ಚಿರಂತ.

" ಒಹ್ !. Good name. ಏನು ಒದಿದ್ದೀರಿ ? I mean education ? "

" M.A. ಆಗಿದೆ. ಪೊಲಿಟಿಕಲ್ ಸೈನ್ಸ್ "

"ನಾನು MBA ಮುಗಿಸಿದ್ದೀನಿ. ನನ್ನ ಮಟ್ಟಿಗೆ ಒಳ್ಳೆ ಕೆಲಸನೂ ಇದೆ. ನಿಮಗೆ ಕೆಲ್ಸ ಮಾಡಬೇಕು ಅಂತೇನೂ ಇಲ್ವ ?"

" ಇದೆ. political science ವಿಭಾಗದಲ್ಲಿ  ಅಧ್ಯಾಪಕಿಯಾಗಬೇಕು ಅನ್ನೋ ಆಸೆ ಇದೆ "

"ಒಹ್ !. Thats wonderful !. ಮತ್ತೆ ಸಮಸ್ಯೆ ಏನು ? "

"ನನ್ನ ಮದುವೆಯದು "

 ಚಿರಂತ ಕ್ಷಣಕಲ ಮೌನವಹಿಸಿದ. ಮುಂದೇನು ಕೇಳಬೇಕೆಂದು ಅವನಿಗೆ ತೋಚಲಿಲ್ಲ . ತೀರಾ ವೈಯಕ್ತಿಕವಾಗಬಹುದೆಂದು ಸುಮ್ಮನಾದ. ಪಲ್ಲವಿಯೇ ಮುಂದುವರಿಸಿದಳು.

" ನನಗೆ ನಮ್ಮ ಊರಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಆಸೆಯಿದೆ. ಅದರೊಟ್ಟಿಗೆ ನನ್ನ ತಂದೆ-ತಾಯಿಗಳಿಗೂ ಆಸರೆಯಾಗಿರಬೇಕು ಅನ್ನೋದು ಇನ್ನೊಂದು ಆಸೆ "

ಚಿರಂತನಿಗೆ ಕೊಂಚ ಅರ್ಥವಾಗಲಿಲ್ಲ. ಸ್ವಲ್ಪ ತಡೆದು ಪುನಃ ಕೇಳಿದ

"ಅಂದರೆ ? ನಿಮಗೆ ಮದುವೆ ಬೇಡ ಅಂತಲೆ ? "

"ಹಾಗಲ್ಲ. ನಾನು ಒಬ್ಬಳೇ ಮಗಳು. ಇವರನ್ನು ಬಿಟ್ಟು ೩೫೦ ಕಿ.ಮೀ ದೂರದ ಊರಿಗೆ ಹೋಗಿ ಕುಳಿತರೆ, ಇವರಿಗೆ ಕಷ್ಟಕಾಲ ಬಂದಾಗ ನೋಡೋರು ಯಾರು ? ಅಲ್ಲಿಂದ ಇಲ್ಲಿಗೆ ಬರೋಕೆ ಕನಿಷ್ಠ ೭ ಗಂಟೆ ಪ್ರಯಾಣ. ಅಂತಹ ಪ್ರಯಾಣ ಮಾಡೋದಕ್ಕೂ ಒಂದು ತಿಂಗಳ ಮುಂಚೆಯೇ ತಯಾರಾಗಬೇಕು. ಕಷ್ಟ ಅನ್ನೋದು ಹೇಳಿ-ಕೇಳಿ ಬರೋಲ್ಲವಲ್ಲ."

"ಅದು ನಿಜ. ಮತ್ತೆ, ಏನು ಮಾಡಬೇಕು ಅನ್ನೋದು ನಿಮ್ಮ ಉದ್ದೇಶ ?"

" ನನ್ನ ತಂದೆ-ತಾಯಿಯವರೇನೋ ಮದುವೆ ಮಾಡಿ ಕಳುಹಿಸಲು ಸಿದ್ದವಾಗಿದ್ದಾರೆ. ಅದು ಅವರ ಮಗಳ ಬಗೆಗಿರೋ ಕಾಳಜಿ. ಅಂತಹುದೇ ಕಾಳಜಿ-ಅಕ್ಕರೆ ನನಗೂ ಇರುತ್ತೇ ಅಲ್ವಾ ? . ನನ್ನ ಮದುವೆ ಮಾಡಿಕೊಟ್ಟಾದ ಮೇಲೆ ಈ ತೋಟವನ್ನೆಲ್ಲಾ  ಮಾರಿ ಬೆಂಗಳೂರಿಗೆ ಬಂದು ಸೇರ್ಕೋತಾರಂತೆ "

ಚಿರಂತ ಹಾವು ತುಳಿದವನಂತೆ ಬೆದರಿದ.

"ಅಯ್ಯೋ!. ಅಂತಹ ತಪ್ಪು ಕೆಲ್ಸ ಮಾಡೋದುಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತೆ. ಬೆಳೆದು ತಿನ್ನೋನೆ ಹೆಚ್ಚು ಸುಖವಾಗಿರ್ತಾನೆ ನೋಡಿ. "

"ಹೌದು.  ಆದರೆ ನನ್ನಿಂದ ಇವರಿಗೆ ಅರ್ಥಮಾಡಿಸಲು ಆಗ್ತಾ ಇಲ್ಲ. "

ವಿಷಯ ಹಳಿತಪ್ಪುತ್ತಿರಬಹುದೆನಿಸಿತು ಚಿರಂತನಿಗೆ. ವಿಷಯವನ್ನು ಅರ್ಧಕ್ಕೆ ತುಂಡರಿಸಿದ.

"ಮದುವೆಯ ಬಗ್ಗೆ ಏನು ಹೇಳಲೇ ಇಲ್ಲ ನೀವು ? "

ಪಲ್ಲವಿಯ ಮುಖ ಮತ್ತಷ್ಟು ಕಳೆಗುಂದಿದಂತಾಗಿದ್ದನ್ನು ಚಿರಂತ ಗಮನಿಸಿದ. ಆಕೆಯೇ ಮಾತನಾಡಲೆಂದು ಸುಮ್ಮನಾದ. ಸಮಯ ಜಾರುತ್ತಿತ್ತು. ಆದರೂ ಸುಮ್ಮನಾದ.

" ಆಗಲೇ ಹೇಳಿದೆನಲ್ಲಾ, ಅಷ್ಟು ದೂರ ಬರೋದಕ್ಕೆ ನನಗಿಷ್ಟವಿಲ್ಲ. ಈ ವಿಷ್ಯಾನ ನಮ್ಮ ಮನೆಯಲ್ಲಿ ಹೇಳೋಕೆ ನನ್ನಿಂದ ಆಗ್ತಿಲ್ಲ. ಹೇಳುದ್ರೂ ಅವರು ಅರ್ಥಮಾಡ್ಕೋತಾರೆ ಅಂತ ನನಗನ್ನಿಸ್ತಿಲ್ಲ "

"I am sorry. ಬೆಂಗಳೂರು ಬಿಟ್ಟು ಬರೋದು ನನಗೂ ಸಾಧ್ಯವಿಲ್ಲ. So , ನಮ್ಮಿಬ್ಬರ ದಾರಿ ಬೇರೆ-ಬೇರೆಯದೇ ಅಂತಾಯ್ತು. ಅದೆಲ್ಲಾ ಸರಿ, ನನ್ನೊಂದಿಗೆ ಹೇಳಿದ ಹಾಗೆ ನಿಮ್ಮ ಪೇರೆಂಟ್ಸ್ ಗೂ ಕನ್ವಿನ್ಸ್ ಮಾಡಬಹುದಲ್ಲ ನೀವು ?"

"ನನ್ನ ಮಾತನ್ನು ಅವರು ಕೇಳೋದಿಲ್ಲ. ಅದೇ ಸಮಸ್ಯೆ "

ಚಿರಂತನ ಮುಖದಲ್ಲಿ ಸಣ್ಣನಗುವೊಂದು ತೇಲಿಬಂತು

"ಇಲ್ಲಿ ಯಾರನ್ನಾದ್ರು ನೋಡಿದೆರೇನು? ನಿಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳೋಕೆ ?"

ಚಿರಂತನ ನೇರ ಪ್ರಶ್ನೆಗೆ ಪಲ್ಲವಿಯ ಉತ್ತರವೂ ಅಷ್ಟೇ ಸಹಜವಾಗಿ ಬಂದಿತು.

"ಹೌದು. ಅವರು ನನ್ನ ಸಹಪಾಠಿ. ಚಿಕ್ಕಮಗಳೂರಿನಲ್ಲಿ ಕೆಲಸ ಮಾಡ್ತಾರೆ. ನನಗೂ ಅಲ್ಲೇ ಕೆಲಸ ಆಗಬಹುದು. ಊರಿಗೆ ಹತ್ತಿರ. ನನ್ನ ಹೆತ್ತವರಿಗೂ ಆಸರೆಯಾಗಿರಬಹುದು ನಾನು"

"ಏನ್ರೀ ನೀವು ? ಒಳಗಡೆ ಬೆಂಕಿಯಿಟ್ಟುಕೊಂಡು ಇಷ್ಟು ದಿನ ಹೇಗ್ರೀ ತಡೆದುಕೊಂಡಿದ್ರೀ ?  any way ನಮ್ಮ ಸ್ನೇಹಕ್ಕಂತೂ ಯಾವ ಕಳಂಕವೂ ಬರೋದಿಲ್ಲ. ನಿಮ್ಮ ಸ್ನೇಹಿತನಾಗಿ ನಾನೀಗ ಏನು ಮಾಡಬೇಕು ಹೇಳಿ ? "

ಪಲ್ಲವಿಯ ಮುಖದಲ್ಲಿ ಮಂದಹಾಸ ಹಾದುಹೋಯಿತು.

" ನಿಮ್ಮಂತಹ ಸ್ನೇಹಿತರು ಸಿಕ್ಕಿದ್ದು ನನಗೂ ಸಂತೋಷವೆ. ಸದ್ಯಕ್ಕೆ ನಿಮ್ಮ ಕೆಲಸ ನನ್ನ ಹೆತ್ತವರನ್ನು ಕನ್ವಿನ್ಸ್ ಮಾಡೋದು ಅಷ್ಟೆ. "

" ನಿಮ್ಮೂರಿನ express ಬಸ್ಸಿನಲ್ಲಿ ಬಂದುದಕ್ಕೆ ಇಷ್ಟೂ ಮಾಡದೇ ಹೋದ್ರೆ ಸರಿಯಾಗುತ್ಯೆ ?  ಆ ಬಸ್ಸಿಗೆ ಅವಮಾನ "

ಮನಃಪೂರ್ವಕವಾಗಿ ನಗುತ್ತಾ ಇಬ್ಬರೂ ಮನೆಯತ್ತ ಹೆಜ್ಜೆ ಹಾಕಿದರು. ಮಾತಿನ ಲಹರಿಯಲ್ಲಿ ಮನೆ ಬಂದುದೇ ತಿಳಿಯಲಿಲ್ಲ ಇಬ್ಬರಿಗೂ. ಒಳಗೆ ಬಂದ ಪಲ್ಲವಿ ಕೋಣೆಯ ಬಾಗಿಲಿಗೆ ಒರಗಿ ನಿಂತಳು. ಚಿರಂತ ಚಾಪೆಯ ಮೇಲೆ ಕೂರದೆ ಟಿ.ವಿ. ಸ್ಟಾಂಡ್ ಪಕ್ಕದಲ್ಲಿದ್ದ ಕುರ್ಚಿಯ ಮೇಲೇ ಕುಳಿತ. ಮಗಳ ಮುಖ ನೋಡಿದ ಸೀತಮ್ಮ ತುಸು ಗೆಲುವಾದರು. ಗೋಪಾಲಯ್ಯ ಅದೇ ಪುಟಗಳನ್ನು ತಿರುವಿಹಾಕುತ್ತಿದ್ದರು. ನಾಗಪ್ಪ ಶುರುಮಾಡಿದರು.

" ಏನ್ ತೀರ್ಮಾನ ತಗೋಂಡ್ರಿ "

ಚಿರಂತ ಗೋಪಾಲಯ್ಯನವರನ್ನೊಮ್ಮೆ ನೋಡಿದ. ನಾಗಪ್ಪನವರೆಡೆಗೆ ತಿರುಗಿದ.

" ನನಗೆ ನಿಮ್ಮ ಮಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ "

ನಾಗಪ್ಪ ಕೊಂಚ ವಿಚಲಿತರಾದವರಂತೆ ಕಂಡರು. ಸಾವರಿಸಿಕೊಂಡು ಮತ್ತೆ ಮುಂದುವರಿಸಿದರು.

" ನಾವು ನಿಮ್ಮ ವೃತ್ತಿ ವಿಚಾರವಾಗಿ ಕೇಳಿದ್ದು ತಮಗೆ ಬೇಸರವಾಯ್ತೇನೋ ? ಗೋಪಾಲಯ್ಯ ಎಲ್ಲವನ್ನೂ ವಿವರಿಸಿ ಹೇಳಿದ್ದಾರೆ. ಆ ವಿಷಯದಲ್ಲಿ ನಮಗೆ ಅಭ್ಯಂತರವಿಲ್ಲ . "

"ಹಾಗೇನಿಲ್ಲ.  ನೋಡಿ ನಾಗಪ್ನೋರೆ, ಮದುವೆ ಅಂತ ಆದಮೇಲೆ ಹೋಗೋದು-ಬರೋದು ಮಾಡಬೇಕಾಗುತ್ತೆ. ನನಗೆ ರಜೆಗಳು ಸಿಗೋದಿಲ್ಲ. ಅದೂ ಅಲ್ಲದೆ ಪ್ರಯಾಣವೇ ಬಹಳ ಹೊತ್ತು ಹಿಡಿಯುತ್ತೆ. ಇದು ನಿಮ್ಮ ಮಗಳಿಗೂ ಕಷ್ಟವಾಗಬಹುದು. ಮುಂದೆ ಅದೇ ಒಡಗಿಕೆ ಕಾರಣವಾಗಬಹುದು "

ಚಿರಂತ ಹೇಳಿಮುಗಿಸುವಷ್ಟರಲ್ಲಿ  ನಾಗಪ್ಪ  ಅವಸರದಲ್ಲಿ ಮಾತನಾಡಿದರು.

"ಇಲ್ಲ, ಇಲ್ಲ. ಹಾಗೇನು ಇಲ್ಲ. ನಿಮಗೆ ಅನುಕೂಲವಾದಾಗ ಬಂದು ಹೋದ್ರೆ ಸಾಕು "

" ಇಲ್ಲಿ ನಿಮ್ಮ ಕ್ಷೇಮ ಯಾರು ನೋಡ್ಕೋತಾರೆ ನಾಗಪ್ನೋರೆ ? "

"ಅಯ್ಯೋ ನಮ್ಮದೇನು ಬಿಡಿ ಹೇಗೋ ಆಗುತ್ತೆ. ಗಾಳಿಗೆ ಬಿದ್ಧ್ಹೋಗೋ ಮರ, ಸತ್ತಮೇಲೆ ಸಮಾಧಿ, ಅಷ್ಟೆ "

ಚಿರಂತ ತುಸು ಗಂಭೀರವಾದ. ಅದೇ ಧಾಟಿಯಲ್ಲೇ ಮಾತನಾಡಿದ.

" ಬದುಕು ಅನ್ನೋದು ಒಂದೇ ಸಲ ಸ್ವಾಮಿ. ಸತ್ತಮೇಲೆ ನಾನು ಚಿರಂತನೂ ಅಲ್ಲ, ನೀವು ನಾಗಪ್ಪನೂ ಅಲ್ಲ.  ಏನಾಗ್ತಿವೀ ಅನ್ನೋದು ಯಾರಿಗೂ ಗೊತ್ತಿಲ್ಲ. ಸತ್ತಮೇಲಲ್ಲ ಸ್ವಾಮಿ ಸಮಾಧಿಯಾಗೋದು, ಬದುಕಿದ್ದಾಗಲೇ ಆಗಬೇಕು. ಇದನ್ನೇ ಕರ್ಮಯೋಗದಲ್ಲಿ ಹೇಳಿರೋದು.  ಬದುಕನ್ನು ಪರಿಪೂರ್ಣವಾಗಿ ಅನುಭವಿಸೋ ಅವಕಾಶ ಇರೋವಾಗ ಅದನ್ನ ನೀವೆ ದೂರ ಮಾಡಿ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಹೋಗ್ತಾ ಇದ್ದೀರಿ. ನಿಮ್ಮ ನಿರ್ಧಾರ ನಿಮ್ಮ ಮಗಳಿಗೂ ಒಪ್ಪಿಗೆ ಇದೆಯೇ ಅಂತಾ ಕೇಳಿದ್ದೀರಾ ? "

ನಾಗಪ್ಪ ಅವಾಕ್ಕಾಗಿ ನಿಂತಿದ್ದರು. ಮಗಳ ಮುಖವನ್ನೊಮ್ಮೆ ನೋಡಿದರು. ಹೆಂಡತಿಯ ಮುಖವನ್ನೂ ನೋಡಿದರು. ಏನೂ ತೋಚಲಿಲ್ಲ.  ಚಿರಂತನನ್ನೇ ಕೇಳಿದರು.

" ಏನಂತಾಳೆ ನಮ್ಮ ಮಗಳು ? ಮತ್ತೆ ನಿಮ್ಮ ಮದುವೆ ವಿಷಯ ? "

ಚಿರಂತ ಪಲ್ಲವಿಯೆಡೆಗೆ ತಿರುಗಿದ. ಇಬ್ಬರ ಮಖದಲ್ಲೂ ನಗು ತೇಲುತ್ತಿತ್ತು

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು  ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ? "

ಪಲ್ಲವಿ ನಗುತ್ತಲೆ ಹೇಳಿದಳು.

" ಸ್ನೇಹಿತರಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ ? ಆ ಹೊಣೆ ನನ್ನದೆ "

ಅಲ್ಲಿದ್ದ ಉಳಿದ ಮೂವರಿಗೂ ಏನೊಂದೂ ಅರ್ಥವಾಗಲಿಲ್ಲ. ಚಿರಂತನೇ ಮುಂದುವರಿಸಿದ

" ಪಲ್ಲವಿಯಂತಹ ಮಗಳನ್ನು ಪಡೆಯೋಕೆ ಪುಣ್ಯ ಮಾಡಿದ್ದೀರಿ ನೀವು. ನಿಮ್ಮ  ಬಾಳಿನ ಮುಸ್ಸಂಜೆಯಲ್ಲಿ ಆಕೆ ನಿಮ್ಮ ಸೇವೆಗೆ ನಿಲ್ಲಬೇಕಂತೆ. ನಿಮಗಿರೋಳು ಆಕೆಯೊಬ್ಬಳೆ.  ಗಂಡು...ಹೆಣ್ಣು. ಎಲ್ಲಾ ಅವಳೆ ನಿಮಗೆ. ಆಕೆಯನ್ನು ಇಲ್ಲಿಯವರಗೆ ಬೆಳೆಸಿ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಕಲಿಸಿಕೊಟ್ಟ ನಿಮ್ಮನ್ನು ಒಂಟಿಯಾಗಿ ಬಿಟ್ಟು , ಆಕೆ ಬೇರೆಲ್ಲೋ ಸಂತೋಷವಾಗಿ ಇರೋದು ಹೇಗೆ ಸಾಧ್ಯ ಹೇಳಿ ?  ಅದಕ್ಕೇ ಅಂತಲೇ ಆಕೆ ಈ ಊರು ಬಿಟ್ಟು ಬರೋಕೆ ತಯಾರಿಲ್ಲ. ಆಕೆ ತನ್ನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಯಂತೆ. ಚಿಕ್ಕಮಗಳೂರು ಕಾಲೇಜಿನಲ್ಲಿ ಉಪನ್ಯಾಸಕರು. ನಿಮ್ಮ ಮಗಳಿಗೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇದೆ. ನೀವು ಸ್ವಲ್ಪ ಉದಾರ ಮನಸು ಮಾಡಿದರೆ, ಎಲ್ಲವೂ ಒಳ್ಳೆಯದೇ ಆಗುತ್ತೆ . ಏನಂತೀರಿ ನಾಗಪ್ನೋರೆ ? "

ನಾಗಪ್ಪ ಸೀತಮ್ಮನ ಮುಖವನ್ನೊಮ್ಮೆ ನೋಡಿದರು. ಆ ಕ್ಷಣಕ್ಕೆ ಸೀತಮ್ಮನ ಮುಖ ಏನೋ ಹೊಸತನ್ನು ಕಂಡಂತೆ ಅರಳಿತ್ತು.  ನಾಗಪ್ಪ ಪಲ್ಲವಿಯ ಬಳಿಗೆ ತೆರಳಿದರು. ಮಗಳ ಮುಖವನ್ನೊಮ್ಮೆ ಸಾದ್ಯಂತ ದಿಟ್ಟಿಸಿದರು. ಅಮೂರ್ತಭಾವವೊಂದು ಅವರನ್ನು ಆವರಿಸಿತು. ಗಟ್ಟಿಯಾಗಿ ಮಗಳನ್ನೊಮ್ಮೆ ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಉದುರುತ್ತಿದ್ದ ಹನಿಗಳು , ಪಲ್ಲವಿಯ ಸೀರೆಯ ಸೆರಗಿನ ಮೇಲೆ ಹನಿ-ಹನಿಯಾಗಿ ಬೀಳುತ್ತಿತ್ತು.

......................................................................................................

( ಮುಗಿಯಿತು ..ಅಂದುಕೊಳ್ಳುತ್ತೇನೆ :-) )

ವಂದನೆಗಳೊಂದಿಗೆ...

Jul 26, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... 2

ಹಾಗೆ ಹುಡುಕುತ್ತಿದ್ದ ಕಣ್ಣಿಗೆ ಮೊದಲು ಕಂಡವರು.... ಬಿಳಿ ಪಂಚೆ, ಮೈಮೇಲೊಂದು ಶಲ್ಯ ಹೊದೆದಿದ್ದ ಮಧ್ಯವಯಸ್ಸಿನ ವ್ಯಕ್ತಿ. ಗೋಪಾಲಯ್ಯ ವ್ಯಕ್ತಿಯ ಮುಖ ನೋಡಿ ನಕ್ಕರು.
"ಚಿರಂತ, ಇವರ ಹೆಸರು ನಾಗಪ್ಪ ಅಂತ. ಹುಡುಗಿಯ ತಂದೆ. ಹುಟ್ಟಿದಾರಭ್ಯ ಇದೇ ಊರಲ್ಲಿದ್ದುಕೊಂಡು ತೋಟದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದಾರೆ ". ಗೋಪಾಲಯ್ಯ ಪರಿಚಯ ಮಾಡಿಕೊಟ್ಟರು. ಚಿರಂತ ಕುಳಿತಲ್ಲಿಂದಲೇ ನಗೆ ಬೀರಿದ. ನಾಗಪ್ಪನವರೂ ನಕ್ಕರು.
" ಬಹಳ ದಣಿದು ಬಂದಿದೀರಿ ಅಲ್ಲವೇ ಗೋಪಾಲಯ್ಯ ? ನಮ್ಮೂರಿನ ಬಸ್ಸಿನ ಕತೆ ಈಗಾಗಲೇ ನಿಮಗೆ ಗೊತ್ತಾಗಿರಬೇಕು. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಧಾನವಾಗಿ ಎಲ್ಲಾ ಮಾತನಾಡೋಣವಂತೆ. ಕುಡಿಯೋದಕ್ಕೆ ಏನಾದ್ರೂ ತರಲೇನು ? "
"ನೀರು ಕೊಡಿ ನಾಗಪ್ಪ ಸಾಕು. ಈಗ ವಿಶೇಷವಾಗಿ ಏನೂ ಮಾಡೊದಕ್ಕೆ ಹೊಗಬೇಡಿ. ತೊಂದರೆ ತೊಗೋಬೇಡಿ. ಈ ಹುಡುಗನ ಕಚೇರಿಗೂ ರಜೆ ಇಲ್ಲ. ಸ್ವಲ್ಪ ಬೇಗನೆ ಹೊರಡ್ತೀವಿ.."
"ಅಯ್ಯೋ !, ಹಾಗಂದ್ರೆ ಹೇಗೆ ? ಬಂದಿರೋದೆ ಅಪರೂಪ. ಇರಿ, ಒಂದು ನಿಮಿಷ ಬಂದು ಬಿಡ್ತೀನಿ " ನಾಗಪ್ಪ ಅಡುಗೆಮನೆಯೊಳಗೆ ಹೋದವರು ನಿಮಿಷಗಳ ತರುವಾಯ ಎರಡು ಲೋಟ ಮತ್ತು ಒಂದು ತಟ್ಟೆಯಲ್ಲಿ ಅವಲಕ್ಕಿ ಬೆಲ್ಲದೊಡನೆ ಪ್ರತ್ಯಕ್ಷರಾದರು. ಅತಿಥಿಗಳ ಮುಂದೆ ಅವಲಕ್ಕಿಯ ತಟ್ಟೆಯನ್ನಿರಿಸಿ, ಲೋಟಗಳಿಗೆ ತಂಬಿಗೆಯಲ್ಲಿದ್ದ ಪಾನಕವನ್ನು ಬಗ್ಗಿಸಿದರು. ಅದು ಬೆಲ್ಲದ ಪಾನಕವೆಂದು ಚಿರಂತನಿಗೆ ತಿಳಿಯಿತು.  ಸ್ವಲ್ಪ ದಾಹವಾದರೂ ತೀರುತ್ತದೆಯಲ್ಲಾ ಎಂದೆನಿಸಿ ಲೋಟವನ್ನೆತ್ತಿ ಪಾನಕವನ್ನು ಕುಡಿಯಲನುವಾದ ಚಿರಂತ. ಇನ್ನೇನು ಬಾಯಿಗೆ ಸುರುಹಬೇಕೆನ್ನುವಷ್ಟರಲ್ಲಿ ಹೆಂಗಸಿನ ಧ್ವನಿಯೊಂದು ತೇಲಿಬಂತು.
"ಅಯ್ಯೊ ! ನಿಲ್ಲಿ " ಅಡುಗೆಮನೆಯಿಂದ ನಾಗಪ್ಪನವರ ಹೆಂಡತಿ ಓಡಿಬಂದರು. " ಬೇಸರ ಪಟ್ಕೋಬೇಡಿ. ಆ ಪಾನಕ ಮತ್ತು ಅವಲಕ್ಕಿಯನ್ನು ನಮ್ಮನೆ ತೋಟದ ಆಳಿಗೆ ಮಾಡಿಟ್ಟದ್ದು. ’ಇವರಿಗೆ’ ಗೊತ್ತಾಗದೆ ನಿಮಗೆ ತಂದು ಕೊಟ್ಟಿದ್ದಾರೆ. ಇಲ್ಲಿ ಕೊಡಿ, ನಿಮಗೆ ಬೇರೆಯದೇ ತಿಂಡಿ ಮಾಡಿಟ್ಟಿದ್ದೇನೆ. ಉಪ್ಪಿಟ್ಟು-ಕೇಸರಿಬಾತು, ಜೊತೆಗೆ ಒಳ್ಳೆಯ ಚಿಕ್ಕಮಗಳೂರು ಕಾಫಿ಼. " ಎಂದು ಒಂದೇ ಸಮನೆ ಉಸುರಿದರು.
ಗೋಪಾಲಯ್ಯ ಚಿರಂತನಿಗೆ ’ಸೀತಮ್ಮ’ ನ ಪರಿಚಯ ಮಾಡಿಕೊಟ್ಟರು. ಚಿರಂತನಿಗೆ ಪಾನಕ ಕುಡಿಯುವ ಆಸೆಯಿತ್ತು. " ಅಮ್ಮಾ, ಈ ಅವಲಕ್ಕಿಯನ್ನು ತೆಗೆದುಕೊಳ್ಳಿ, ಆದರೆ ಪಾನಕ ಇರಲಿ ಬಿಡಿ. ಬೆಲ್ಲದ ಪಾನಕ ಕುಡಿದು ಅದೆಷ್ಟೋ ವರ್ಷಗಳೇ ಆಗಿದೆ. ಎಂದೋ ನನ್ನಜ್ಜಿ ಮಾಡಿಕೊಟ್ಟದ್ದು".
ಚಿರಂತನ ಮಾತನ್ನು ಅರ್ಧಕ್ಕೇ ತುಂಡರಿಸಿದರು ಸೀತಮ್ಮ " ಅಯ್ಯೋ, ಬೇಡ. ಆಳಿಗೆ ಮಾಡಿಟ್ಟದ್ದು. ನೀವು ಕುಡಿಯೋದು ಸರಿಹೋಗಲ್ಲ" ಎಂದು ತಳಮಳಿಸಿದರು.
ಚಿರಂತನಿಗೆ ಪಾನಕ ಬಿಡುವ ಮನಸಾಗಲಿಲ್ಲ. " ಆ ಉಪ್ಪಿಟ್ಟು-ಬಾತು ಬೇಸರವಾಗಿದೆ. ದಿನಾ ಅದೆಲ್ಲಾ ಇದ್ದೇ ಇರುತ್ತೆ. ಈ ಬೆಲ್ಲದ ಪಾನಕ ಯಾರು ಕೊಡ್ತಾರೆ ಹೇಳಿ ? ಕೊಡಿ ಪರವಾಗಿಲ್ಲ ".  ಚಿರಂತನ ಒತ್ತಾಯಕ್ಕೆ ಮಣಿದ ಸೀತಮ್ಮ ಪಾನಕ ತುಂಬಿದ ಲೋಟವನ್ನು ಚಿರಂತನ ಮುಂದಿಟ್ಟು ಅಡುಗೆಮನೆಯತ್ತ ನಡೆದರು. ಅಲ್ಲೇ ನಿಂತಿದ್ದರು ನಾಗಪ್ಪ !. ಮೆತ್ತಗೆ ಗದರಿಕೊಂಡರು ಪತ್ನಿಯೊಂದಿಗೆ " ಅಲ್ವೇ ಸೀತೂ, ನನಗೆ ಹೇಳ್ಬಾರ‍್ದಾ ನೀನು, ಉಪ್ಪಿಟ್ಟು-ಕೇಸರಿಬಾತು ಮಾಡಿರೋದನ್ನ ? ". ಸೀತಮ್ಮನೂ ಗದರಿದರು " ನಿಮಗೆ ಮೊದಲೆ ಹೇಳಿದ್ರೆ ಬಂದೋರಿಗೆ  ಕೊಡೋದಕ್ಕೆ ಏನು ಉಳಿಸ್ತಿದ್ರಿ ನೀವು ? ತಳ ಕೆರೆದು ಹಾಕಬೇಕಾಕ್ತಿತ್ತು ಅಷ್ಟೆ ! ". ನಾಗಪ್ಪ ಮರುಮಾತನಾಡದೆ ಗೋಪಾಲಯ್ಯನ ಬಳಿಗೆ ತೆರಳಿದರು. ಪಾನಕ ಕುಡಿದ ಚಿರಂತನಿಗೆ ದಾಹ ತಣಿದಂತಾಯಿತು.
ನಾಗಪ್ಪ, ಗೋಪಾಲಯ್ಯನ ಮುಂದಿದ್ದ ಚಿಕ್ಕ ಚಾಪೆಯ ಮೇಲೆ ಕುಳಿತರು. " ಗೋಪಾಲಯ್ಯ, ನೀವು ಬಹಳ ಸಮಯ ಇಲ್ಲ ಅಂದ್ರಿ, ಹಾಗಾಗಿ ನೇರವಾಗಿ ವಿಷಯಕ್ಕೆ ಬರ್ತೇನೆ. ನಿಮ್ಮ ಹುಡುಗ ಸಾಫ಼್ಟವೇರ್ ಇಂಜಿನಿಯರ್ರು ಅಂತಾ ಕೇಳ್ಪಟ್ಟೆ. ನಮಗೂ ಸಂತೋಷವಾಯ್ತು. ನಾವು ಇಂತಹ ಹುಡುಗನನ್ನೇ ಹುಡುಕ್ತಾ ಇದ್ವಿ, ಇಲ್ಲೇನೋ ತುಂಬ ಸಂಬಂಧಗಳು ಬಂದಿದ್ವು, ಆದರೆ ನಮಗೆ ಒಪ್ಪಿಗೆ ಆಗಬೇಕಲ್ವೇ..." ನಾಗಪ್ಪ ಹೇಳುತ್ತಲೇ ಇದ್ದರು. ಚಿರಂತ ಅವರ ಮಾತನ್ನು ತುಂಡರಿಸಿದ
" ಕ್ಷಮಿಸಿ, ನಾಗಪ್ನೋರೆ. ನಾನು software ಇಂಜಿನಿಯರ್ ಅಲ್ಲ. "
ಚಿರಂತನ ಮಾತಿನಿಂದ ಚಕಿತರಾದ ನಾಗಪ್ಪ ಅವನತ್ತಲೇ ತಿರುಗಿದರು. " ಮತ್ತೆ , ತಾವು ದೊಡ್ಡ MNC ಯಲ್ಲಿ ಕೆಲ್ಸ ಮಾಡ್ತೀರಿ, ದಿನದಲ್ಲಿ ೧೮ ಗಂಟೆ ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೀರಿ ,  ಅಂತೆಲ್ಲಾ ಹೇಳಿದ್ರಲ್ಲಾ ನಿಮ್ಮ ತಂದೆಯವರು " .

"ಅದು ನಿಜ. ನಾನು ದೊಡ್ಡ ಕಂಪೆನಿಯೊಂದರಲ್ಲೇ ಕೆಲ್ಸ ಮಾಡ್ತಿರೋದು, ದಿನದಲ್ಲಿ ಹೆಚ್ಚು-ಕಡಿಮೆ ೧೮ ಗಂಟೆಗಳು ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೇನೆ. ಆದ್ರೆ, ನಾನು software  ಇಂಜಿನಿಯರ್ ಅಲ್ಲ. ಒಬ್ಬ ಅಕೌಂಟ್ ಮ್ಯಾನೇಜರ್ ಅಷ್ಟೆ ". ಚಿರಂತನ ಮಾತನ್ನು ಕೇಳಿದ ನಾಗಪ್ಪ ಗೋಪಾಲಯ್ಯನ ಮುಖ ನೊಡಿದರು. ಮತ್ತೆ ಚಿರಂತನನ್ನೇ ಕೇಳುವ ಮನಸಾಯಿತು ಅವರಿಗೆ

 " ಅದು ಎಂತಹ ಕೆಲಸ ? ".

ಚಿರಂತನಿಗೆ ನಾಗಪ್ಪನವರ ಪ್ರಶ್ನೆ ಸಹಜವಾಗಿ ತೋರಿತು. " ನಮ್ಮ ಕಂಪೆನಿಗೆ, ಒಂದೆರೆಡು ದೊಡ್ಡ ಬ್ಯಾಂಕುಗಳ ಅಕೌಂಟುಗಳು ಬರುತ್ವೆ. ಅದನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ. Online ಬ್ಯಾಂಕಿಂಗ್ ಅನ್ತಾರೆ ನೋಡಿ, ಅದು. ಬ್ಯಾಂಕುಗಳು ನಮ್ಮ ಕಂಪೆನಿಗೆ contract ಪ್ರೋಜೆಕ್ಟ್ ಗಳನ್ನು ಕೊಟ್ಟಿರ್ತಾರೆ. ಅದನ್ನೆಲ್ಲಾ ನೋಡ್ಕೋತಿವಿ ನಾವು "
ನಾಗಪ್ಪರಿಗೆ ಚಿರಂತ ಹೇಳಿದ್ದರಲ್ಲಿ ಕೆಲವು ಅರ್ಥವಾಗಲಿಲ್ಲ.
" ಅಂದ್ರೆ , ತಮ್ಮದು contract  ಕೆಲಸವೋ ? ಪರ್ಮನೆಂಟ್ ಅಲ್ಲ ಅನ್ನಿ ! "
 ಚಿರಂತನಿಗೆ ನಾಗಪ್ಪನವರಿಗೆ ಅರ್ಥಮಾಡಿಸುವುದು ಕಷ್ಟವೆಂದು ತೋರಿತು. ಅಷ್ಟರಲ್ಲಿ ಸೀತಮ್ಮ ಉಪ್ಪಿಟ್ಟು-ಕೇಸರಿಬಾತಿನೊಡನೆ ಬಂದರು. ಅತಿಥಿಗಳಿಬ್ಬರಿಗೂ ತಿಂಡಿಗಳು ಸರಬರಾಜಾಯಿತು.  ನಾಗಪ್ಪ ಮೇಲೆದ್ದರು.
" ಗೋಪಾಲಯ್ಯ ನೀವು ನಿಧಾನವಾಗಿ ತಿಂಡಿ ತಿನ್ನಿ, ಆಮೇಲೆ ಮಾತನಾಡೋಣವಂತೆ. ಒಂದು ನಿಮಿಷ ನಾನು ಆಳು ಬಂದಿದಾನೋ ಇಲ್ಲವೋ ನೋಡಿ ಬರ್ತೀನಿ ". ನಗುವಿನಲ್ಲೇ ಸಮ್ಮತಿಯಿತ್ತರು ಗೋಪಾಲಯ್ಯ.
ಚಿರಂತನಿಗೆ ತಿಂಡಿಯ ರುಚಿ ಹತ್ತದಾಯಿತು. ಅದೇಕೋ ಅವನ ಕಿವಿ ಅಡುಗೆ ಮನೆಯೊಳಗೆ ನೆಟ್ಟಿತು. ಅಲ್ಲಿಂದ ತೂರಿಬರುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳತೊಡಗಿತು.
" ಗೋಪಾಲಯ್ಯ ಮುಂಚೆ ಹೇಳಿದ್ದು, ಕಂಪ್ಯೂಟರ್ ಇಂಜಿನಿಯರ್ರು ಅಂತ, ಈಗ ಇವರೇನೊ ಬೇರೆ ಹೇಳ್ತಾ ಇದಾರಲ್ಲೇ "
"ಈ ಹಾಳು ಕಂಪ್ಯೂಟರ್ ವಿಷಯ ನಮಗೆ ಹೇಗ್ರೀ ಗೊತ್ತಾಗಬೇಕು. ಅದೇನೊ ಒಂದೂ ಅರ್ಥವಾಗೋಲ್ಲಪ್ಪ ನನಗೆ "
"ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರುಗಳಿಗೆ ಹೆಣ್ಣು ಕೊಟ್ಟಿರೋದು, ಇನ್ನು ನಾವು ಅಕೌಂಟ್ ಮ್ಯಾನೇಜರ್ರಿಗೆ ಕೊಟ್ರೆ ಆಡಿಕೊಳ್ಳೋಲ್ವೆ ಜನ "
"ಅಷ್ಟು ಸಂಬಳವೂ ಬರೋಲ್ಲ ಅನ್ನೋಹಾಗೆ ಕಾಣುತ್ತೆ. ಈ ವರನಿಗಾಗಿ ಇಷ್ಟು ವರ್ಷ ಕಾಯ್ಬೇಕಿತ್ತೇ ? ಸ್ವಲ್ಪ ಸರಿಯಾಗಿ ವಿಚಾರಿಸಿ ಎಲ್ಲಾದನ್ನೂ "
"ಅದೇನೋ ಕಂಟ್ರಾಕ್ಟು ಕೆಲಸ ಅಂತೆ, ಎಷ್ಟು ದಿವಸ ನಡೆದೀತು ಮಹಾ?  ನಮ್ಮ ಮಗಳಿಗೂ ಒಂದು ಭದ್ರನೆಲೆಯಾಗೋದು ಬೇಡ್ವೆ ? "
"ಅದಕ್ಕೆ ಹೇಳಿದ್ದು ಸರಿಯಾಗಿ ವಿಚಾರಿಸಿ ಅಂತ, ಆಮೇಲೆ ಪರಿತಾಪ ಪಡೋದು ಬೇಡ "
" ಸರಿ, ನನಗೂ ಒಂಚೂರು ಉಪ್ಪಿಟ್ಟು ಕೊಡು, ಮಾತಾಡ್ತೀನಿ"
"ಇದಕ್ಕೆನೂ ಕಮ್ಮಿ ಇಲ್ಲ. ಅಲ್ಲೇ ಹೋಗಿ ತಂದುಕೊಡ್ತೀನಿ "
ನಾಗಪ್ಪ ನಗುತ್ತಲೇ ಅಡುಗೆಮನೆ ಕಡೆಯಿಂದ ಬಂದರು. ಗೋಪಾಲಯ್ಯ ಆಗಲೇ ತಿಂಡಿ ಖಾಲಿ ಮಾಡಿದ್ದರು. ಸೀತಮ್ಮನಿಗೆ ಮತ್ತೊಮ್ಮೆ ತಿಂಡಿ ಕೇಳುವ ವಿಷಯ ಮರೆತುಹೋಯಿತು. ಚಿರಂತನ ತಟ್ಟೆಯಲ್ಲಿ ತಿಂಡಿ ಹಾಗೇ ಉಳಿದಿತ್ತು. ಅದೇಕೋ ತಿನ್ನುವ ಮನಸಾಗಲಿಲ್ಲ ಅವನಿಗೆ. ಹೊಟ್ಟೆ ಹಸಿಯುತ್ತಿದ್ದರೂ , ತಿಂಡಿ ಒಳಗೆ ಇಳಿಯದಾಯಿತು. ತಟ್ಟೆ ಕೆಳಗಿಟ್ಟು ಸಾಕೆಂಬಂತೆ ಸನ್ನೆ ಮಾಡಿದ ನಾಗಪ್ಪನವರಿಗೆ. ನಾಗಪ್ಪ ಮತ್ತೆ ಚಾಪೆಯ ಮೇಲೆ ಕುಳಿತರು.
" ನೋಡಿ ಗೋಪಾಲಯ್ಯ. ನಮಗೆ ಹುಡುಗನ ಆಚಾರ-ವಿಚಾರಗಳ ಬಗ್ಗೆ ಗೊತ್ತಿಲ್ಲ. ಆ ವಿಷಯದಲ್ಲಿ ನಾವು ಹೆಚ್ಚು ಒತ್ತಾಯ ಮಾಡೋದು ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನೆಡಸಬೇಕಾದ್ರೆ ಕೆಲವು ಸಂಪ್ರದಾಯಬದ್ದ ಆಚರಣೆಗಳನ್ನ ಗಂಟುಕಟ್ಟಿ ಇಡಬೇಕಾಗುತ್ತೆ ಅನ್ನೋದು ನಮಗೂ ಗೊತ್ತಿದೆ. ಆದರೆ,  ಹುಡುಗನ ಕೆಲಸದ ವಿಷಯದಲ್ಲಿ ನಾವು ರಾಜಿಯಾಗೋಕೆ ತಯಾರಿಲ್ಲ. ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರಿಗೆ ಹೆಣ್ಣು ಕೊಟ್ಟಿರೋದು. ನಾವು ಹಾಗೇ ಮಾಡೋಣ ಅನ್ಕೊಂಡೇ ಇಷ್ಟು ವರ್ಷ ತಡೆದದ್ದು. ಈಗ ನೀವೇನು ಹೇಳ್ತೀರೋ ಯೋಚನೆ ಮಾಡಿ "
 ಗೋಪಾಲಯ್ಯ ಚಿರಂತನ ಮುಖ ನೋಡಿದರು. ಚಿರಂತನ ಮುಖದಲ್ಲಿ ನಸುನಗೆಯಿತ್ತು. ನಗುತ್ತಲೇ ಹೇಳಿದ
" ಅಗತ್ಯವಾಗಿ ನೀವು ಇಂಜಿನಿಯರ್ರಿಗೆ ನಿಮ್ಮ ಹುಡುಗಿಯನ್ನ ಕೊಡಿ, ಅದ್ರಲ್ಲಿ ತಪ್ಪೇನೂ ಇಲ್ಲ. ನಾನು ಕಂಪ್ಯೂಟರ್ ಮುಂದೆ ಕಲಸ ಮಾಡೋದ್ರಿಂದ ನಿಮಗೆಲ್ಲಾ ತಪ್ಪು ಮಾಹಿತಿ ಸಿಕ್ಕಿರಬಹುದು. ನೇರವಾಗಿ ಮಾತನಾಡಿದ್ದು ಒಳ್ಳೆಯದೇ ಆಯ್ತಲ್ಲ. ಏನ್ರೀ ಗೋಪಾಲಯ್ಯ, ನಾವಿನ್ನು ಹೊರೊಡೋಣ್ವಾ, ಮತ್ತೆ ಅದೇ ರಸ್ತೇಲಿ ನಡೆದು, ಅದೇ ತರಹದ ಬಸ್ಸು ಹತ್ತಿ ಹೋಗಬೇಕಲ್ವೇನ್ರಿ, ಹೊರಡಿ ಬೇಗ ಮತ್ತೆ " .
ಗೋಪಾಲಯ್ಯ, ಚಿರಂತನಿಗೆ ಕುಳಿತೇ ಇರುವಂತೆ ಸನ್ನೆ ಮಾಡಿದರು. ನಾಗಪ್ಪನ ಕಡೆ ತಿರುಗಿ ಒಮ್ಮೆ ಅವರ ಮುಖವನ್ನೇ ದಿಟ್ಟಿಸಿದರು.  ಮುಖದಲ್ಲಿ ಅವರ ಮನಸಿನೊಳಗಿದ್ದ ಗೊಂದಲಗಳು ಸ್ಪಷ್ಟವಾಗಿ ತೋರುತ್ತಿತ್ತು.
" ನಾಗಪ್ನೋರೆ, ನಿಮಗೆ ಯಾರನ್ನು ಬೇಕಾದ್ರೂ ಆಯ್ಕೆ ಮಾಡಿಕೊಳ್ಳೋ ಸ್ವಾತಂತ್ರ್ಯ ಇದೆ. ಈ ಹುಡುಗನಿಗೂ ತಿಂಗಳಿಗೆ ಒಂದೈವತ್ತು ಸಾವಿರ ಸಂಬಳ ಬರುತ್ತೆ. ಆದರೆ ಇವನೋ , ಯಾವತ್ತೂ ಅದಕ್ಕೆ ಗಮನ ಕೊಟ್ಟೋನಲ್ಲ. ಸಮಯ ಸಿಕ್ರೆ ಸಾಕು, ಆ ಊರು-ಈ ಊರು ಅಂತ ತಿರುಗ್ತಾನೇ ಇರ್ತಾನೆ.  ಇವನ ಕಚೇರಿಯಲ್ಲಿ ಸೀನಿಯರ್ ಹುದ್ದೆ ಇವನದೆ.  ಅದು software ಇಂಜಿನಿಯರ್ರಿಗಿಂತಲೂ ಒಳ್ಳೆಯ ಹುದ್ದೇನೆ. ಇದೆಲ್ಲಾ ನಮಗೆ-ನಿಮಗೆ ಬೇಗ ಅರ್ಥವಾಗೋ ಅಂತಹುದ್ದಲ್ಲ. ಆದ್ರೆ , ನನಗೆ ಆಶ್ಚರ್ಯ ಆಗ್ತಾ ಇರೋ ವಿಷಯ ಅಂದ್ರೆ, ಅಷ್ಟೊಂದು ವಿಶಾಲ ಮನೋಭಾವ, ಉದಾರದಾಯಿತ್ವ ಹೊಂದಿದ್ದ ನಿಮ್ಮ ಮನಸ್ಸು-ವ್ಯಕ್ತಿತ್ವ ಹೀಗೇಕಾಯ್ತು ಅಂತ ? ! ".

(ಮುಂದುವರಿಸುತ್ತೇನೆ..)

Jul 21, 2010

ಆಹಾ ! ನೋಡದೊ ಹೊನ್ನಿನ ಜಿಂಕೆ ...

ಅದೊಂದು ಬಸ್ಸು. ಆ ಬಸ್ಸಿಗೆ ಬಾಗಿಲುಗಳಿರಲಿಲ್ಲ. ಬಸ್ಸೇ ಬಿರಿದು ಸಿಡಿದು ಹೋಗುವಂತೆ ಜನ ಅದರೊಳಗೆ ತುರುಕಿಕೊಂಡಿದ್ದರು. ಹಳ್ಳ-ಗುಂಡಿಗಳಿಂದ ಕೂಡಿದ್ದ ’ರಸ್ತೆ’ ಎನ್ನುವುದರ ಮೇಲೆ ಆ ’ಬಸ್ಸು’ ನಿಧಾನವಾಗಿ ಚಲಿಸುತ್ತಿತ್ತು. ಅದು express ಬಸ್ಸು. ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ನಾನಾ ಸ್ಟಾಪುಗಳು. ಒಂದೊಂದು ಸ್ಟಾಪಿನಲ್ಲೂ ಹತ್ತರಿಂದ ಹದಿನೈದು ನಿಮಿಷಗಳ ಕಮರ್ಷಿಯಲ್ ಬ್ರೇಕ್ !. ಡಯಾಬಿಟಿಸ್ ಇದ್ದು, ಹದಿನೈದು ನಿಮಿಷಕ್ಕೊಮ್ಮೆ ಮೂತ್ರವಿಸರ್ಜನೆ ಮಾಡಲೇಬೇಕಾದವರಿಗೆ ’ಈ’ ಬಸ್ಸು ಹೇಳಿ ಮಾಡಿಸಿದಂತಿತ್ತು. ತಾವು ಇಳಿಯಬೇಕಾಗಿರುವ ಸ್ಥಳ ಬಂದರೂ, ಸೀಟು ಬಿಟ್ಟು ಏಳಲೊಲ್ಲೆ ಎಂಬ ಮನೋಭಾವದಲ್ಲಿ ಅಂಟಿಕೊಂಡು ಕುಳಿತಿರುತ್ತಿದ್ದ ಜನರನ್ನು ಕಂಡಕ್ಟರನೇ ಕರೆದು ’ಎಬ್ಬಿಸಿ’ ಕೆಳಗೆ ಇಳಿಸಬೇಕಿತ್ತು. ಇಂತಹ ಅಪೂರ್ವವಾದ ಬಸ್ಸಿನಲ್ಲೇ ’ಗೋಪಾಲಯ್ಯ’ ಮತ್ತು ’ಚಿರಂತ’ ಪ್ರಯಾಣಿಸಲೇಬೇಕಾದ ಸಂದರ್ಭ ಒದಗಿ ಬಂದಿತ್ತು. ಬೆಂಗಳೂರಿನಿಂದ ಸಂಗಮೇಶ್ವರ ಪೇಟೆಯ ತನಕ ಸುಮಾರು ೩೦೦ ಕಿ.ಮೀ ದೂರವನ್ನು ನಿರಾಳವಾಗಿ ಕ್ರಮಿಸಿದ್ದ ಚಿರಂತನಿಗೆ , ಮುಂದಿನ ೨೦ ಕಿ.ಮೀ. ದೂರದ ’ಮಾರ್ಕಂಡೇಯ ಪುರವನ್ನು ತಲುಪುವುದು ಪ್ರಯಾಸದ ಪ್ರಯಾಣವಾಗಿತ್ತು. ಸಂಗಮೇಶ್ವರ ಪೇಟೆಯಲ್ಲಿಳಿದು ಇನ್ನೊಂದು ಸರ್ಕಾರಿ ಬಸ್ಸು ಹಿಡಿದು ಮಾರ್ಕಂಡೇಯ ಪುರವನ್ನು ತಲುಪಬೇಕಿತ್ತು. ಹಾಗೆಯೇ, ಆಶ್ಚರ್ಯವೆಂಬಂತೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದ ಬಸ್ಸೊಂದನ್ನು ಹತ್ತಿದ ಗೋಪಾಲಯ್ಯ ಮತ್ತು ಚಿರಂತ, ಮಾರ್ಕಂಡೇಯ ಪುರಕ್ಕೆ ಎರಡು ಟಿಕೀಟುಗಳನ್ನು ಪಡೆದುಕೊಂಡರು. ಟಿಕೀಟಿನ ಮುಖದ ಮೇಲೆ express ಎಂದಿದುದನ್ನು ನೋಡಿ ಚಿರಂತನಿಗೆ ರವಷ್ಟು ಸಂತೋಷವಾಗಿತ್ತು. ಬಸ್ಸು ಐದು ಕಿ.ಮೀ. ಕ್ರಮಿಸುವಷ್ಟರಲ್ಲಿ ಅವನ ಮುಖ ಹರಳೆಣ್ಣೆ ಕುಡಿದವರ ಮುಖದಂತಾಗಿತ್ತು. ಬೆಂಗಳೂರಿನಲ್ಲಿ ತನ್ನ ಐಶಾರಾಮಿ ಬೈಕಿನಲ್ಲಿ ಬುರ್ರೆಂದು ತಿರುಗಾಡಿಕೊಂಡಿದ್ದವನನ್ನು ದಿಢೀರೆಂದು ಎತ್ತಿನ ಬಂಡಿಯ ಮೇಲೆ ಕುಳ್ಳಿರಿಸಿ ’ನಡೆ ಮುಂದೆ’ ಎಂದರೆ ಹೇಗಾಗಬೇಕು !?.  ಗೋಪಾಲಯ್ಯನವರದು ಷಷ್ಟಬ್ದಿ ಪೂರೈಸಿದ್ದ ವಯಸ್ಸು. ಚಿರಂತನಿಗೆ ಈಗಷ್ಟೇ ವಿವಾಹದ ವಯಸ್ಸು. ಬೆಂಗಳೂರಿನ ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಯೊಗ್ಯ ಕೆಲಸ ಮಾಡಿಕೊಂಡಿರುವವನು. ತಮ್ಮ ವಯಸ್ಸು ಹಾಗೂ ಅನುಭವಕ್ಕೆ ತಕ್ಕಂತೆ ಗೋಪಾಲಯ್ಯ ಎಲ್ಲಿ ಬೇಕಾದರೂ ತಿರುಗಬಲ್ಲವರಾಗಿದ್ದರು. ಚಿರಂತನಿಗೆ ಅಂತಹ ಅನುಭವಗಳು ಕಡಿಮೆಯಿತ್ತು. ತಂದೆಯ ಮಾತಿಗೆ ಕಟ್ಟುಬಿದ್ದು ’ಹೆಣ್ಣು’ ನೋಡುವುದಕ್ಕೆ ಗೋಪಾಲಯ್ಯನವರೊಟ್ಟಿಗೆ ಚಿರಂತ ಮಾರ್ಕಂಡೇಯ ಪುರಕ್ಕೆ ಹೊರಟಿದ್ದು ಅವನ ಮಟ್ಟಿಗೆ ಒಂದು ಸಾಧನೆಯೆ !.  ’ಈಗಲೇ ಮದುವೆ ಬೇಡ’ ಎಂದು ಹಟ ಹಿಡಿದಿದ್ದ ಮಗನನ್ನು ಹಾಗೂ-ಹೀಗೂ ಓಲೈಸಿ , ತಮ್ಮ ಸ್ನೇಹಿತ ಗೋಪಾಲಯ್ಯನೊಟ್ಟಿಗೆ ಹೆಣ್ಣು ನೋಡಿಕೊಂಡು ಬರಲು ಕಳುಹಿಸಿದ್ದರು ಶ್ರೀನಿವಾಸರಾಯರು. ಗೋಪಾಲಯ್ಯನವರಿಗೂ ರಾಯರ ಬಗೆಗೆ ಅನನ್ಯ ಪ್ರೀತಿಯಿತ್ತು. ಅವರಿಬ್ಬರೂ ಬಾಲ್ಯದ ಗೆಳೆಯರು. ಅದೂ, ಚಡ್ಡಿ ಹಾಕಿಕೊಳ್ಳುವುದಕ್ಕೂ ಮುಂಚಿನಿಂದಲೆ !. ಅಂದಮೇಲೆ ರಾಯರ ಮಾತಿಗೆ ಗೋಪಾಲಯ್ಯ ಇಲ್ಲವೆಂದಾರೆ ?. ಹೊರಟಿತು ’ಸವಾರಿ’ ಮಾರ್ಕಂಡೇಯ ಪುರಕ್ಕೆ. ಬಹಳ ತ್ರಾಸದಾಯಕ ಪ್ರಯಾಣದ ನಂತರ ಇಬ್ಬರೂ ಮಾರ್ಕಂಡೇಯ ಪುರದಲ್ಲಿ ಬಂದಿಳಿದಾಗ ಮಧ್ಯಾಹ್ನ ೧೨ ಗಂಟೆಯಾಗಿತ್ತು. ಮುಂಗಾರಿನ ಮೋಡಗಳು ಬಿಸಿಲ ಝಳವನ್ನು ಕಡಿಮೆಗೊಳಿಸಿದ್ದರಿಂದ ಚಿರಂತನಿಗೆ ಒಂದಷ್ಟು ಸಮಾಧಾನವಾಯಿತು.

" ರೀ ಗೋಪಾಲಯ್ಯ, ಎಲ್ರೀ ಅವರ ಮನೆ ? "
ತಮ್ಮಷ್ಟಕ್ಕೆ ಅದೇನನ್ನೋ ಯೋಚಿಸುತ್ತಿದ್ದ ಗೋಪಾಲಯ್ಯ, ಚಿರಂತನ ಮಾತಿನಿಂದ ವಾಸ್ತವಕ್ಕೆ ಬಂದರು.
" ಇಲ್ಲೇ, ಇನ್ನು ಎರಡು ಕಿ.ಮೀ. ಇದೇ ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಬಿಟ್ಟರೆ ರಸ್ತೆ ಬದಿಯಲ್ಲಿ ಕಾಫಿ಼ ತೋಟವೊಂದು ಸಿಗುತ್ತೆ, ಅಲ್ಲೇ ಇರೋದು ಅವರ ಮನೆ "  ಇಷ್ಟು ಹೇಳಿ ಗೋಪಾಲಯ್ಯ ಸರಸರನೆ ಹೆಜ್ಜೆ ಹಾಕಲು ಶುರುವಾದರು.
" ಇಷ್ಟಾಗಿದ್ದಲ್ಲದೆ ಇನ್ನು ನೆಡೆದು ಬೇರೆ ಹೋಗಬೇಕೆನ್ರಿ, ಮೊದಲೆ ಹೇಳಿದ್ದರೆ ನಾನು ಖಂಡಿತ ಬರ್ತಿರಲಿಲ್ಲ " ಚಿರಂತ ತನ್ನ ಹೆಗಲಲ್ಲಿದ್ದ ಬ್ಯಾಗನ್ನು  ಕೆಳಗೆ ಬಿಸುಟು ನಿಂತ.
ಚಿರಂತನ ಬಳಲಿಕೆಯನ್ನು ಅರಿತ ಗೋಪಾಲಯ್ಯ ಸಾವಧಾನವಾಗಿ ಬ್ಯಾಗನ್ನು ಮತ್ತೆ ಅವನ ಹೆಗಲಿಗೇರಿಸಿದರು.
"ಹುಡುಗಿ ತುಂಬ ಒಳ್ಳೆಯವಳು ಚಿರಂತ. ಆಚಾರ-ವಿಚಾರ ತಿಳಿದುಕೊಂಡಿರುವವಳು. ಸಂಪ್ರದಾಯಸ್ತರ ಮನೆಯ ಹುಡುಗಿ. ಆಕೆಯ ತಂದೆ-ತಾಯಿ ನನಗೂ ಆತ್ಮೀಯರಾಗಬೇಕು. ನೀನೊಮ್ಮೆ ವಧುವನ್ನು ನೋಡಿದೆಯೆಂದರೆ, ’ಇಲ್ಲ’ ಅನ್ನೋ ಮಾತೆ ನಿನ್ನಿಂದ ಬರೋದಿಲ್ಲ. ನೀನು ಒಪ್ಪಿಕೊಂಡ ನಂತರ ಸಂಪ್ರದಾಯದಂತೆ ಹೆಣ್ಣು ನೋಡೋ ಶಾಸ್ತ್ರ ಮಾಡೊಣ. ಏನಂತಿಯಾ ? "
" ನಾನು ಒಪ್ಪಿದರೆ ಸಾಕೆನ್ರೀ, ಆ ಹುಡುಗಿನೂ ಒಪ್ಪಬೇಕಲ್ವಾ, ನನ್ನಂತಹ ಎಡಬಿಡಂಗಿಯನ್ನು ಆಕೆ ಒಪ್ಪಿಕೊಂಡರೆ ಅದು ಆಕೆಯ ದುರಾದೃಷ್ಟವಷ್ಟೆ. ಹೋಗಲಿ ಬಿಡಿ.., ಇದೇನ್ರೀ ಗೋಪಾಲಯ್ಯ , ಬರೀ ಕಾಡಿನ ತರಹ ಕಾಣ್ತಾ ಇದೆ. ಮನೆಗಳೇ ಇಲ್ವೇನ್ರೀ ಇಲ್ಲಿ !? " ತಾನು ನಡೆದುಕೊಂಡು ಬಂದ ಅರ್ಧ ಕಿ.ಮೀ. ದಾರಿಯಲ್ಲಿ ಮನೆಗಳನ್ನು ಕಾಣದೆ ಕೇವಲ ಮರ-ಗಿಡಗಳನ್ನು ಕಂಡ ಚಿರಂತನ ಪ್ರಶ್ನೆ ಸಹಜವೆನಿಸಿತು ಗೋಪಾಲಯ್ಯನವರಿಗೆ.
ಆತ್ಮೀಯತೆಯಿಂದ ಅವನ ಬೆನ್ನುತಟ್ಟಿದರು ಗೋಪಾಲಯ್ಯ.  " ಇದು ಕಾಡಿನ ದಾರಿಯೇ ರಾಜ !. ಕಾಡಿನ ಒಳಗೆ ತಮ್ಮದೇ ಒಂದು ಕಾಫಿ಼ತೋಟ ಮಾಡಿಕೊಂಡು, ಸ್ವಂತ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಮಾಡ್ತಾ ಇದ್ದಾರೆ ನಿನ್ನ ಭಾವೀ ಮಾವನವರು ! "
ಗೋಪಾಲಯ್ಯನವರ ಮಾತನ್ನು ಕೇಳಿ ಚಿರಂತನಿಗೆ ನಗೆಯುಕ್ಕಿತು. " ಅಲ್ರೀ, ನಾನಿನ್ನು ಯಾರನ್ನೂ ನೋಡಿಯೇ ಇಲ್ಲ. ಭೇಟಿಯೂ ಆಗಿಲ್ಲ. ಆಗಲೇ ಸಂಬಂಧ ಕಲ್ಪಿಸ್ತಾ ಇದೀರಲ್ರೀ.., ಏನೋ , ನಿಮ್ಮ ಜೊತೆ ಬರದೇ ಇದ್ರೆ ನಮ್ಮಪ್ಪ ನನಗೆ ’ಕ್ಲಾಸ್’ ತಗೋತಿದ್ರು..ಬೇಸರ ಪಟ್ಟುಕೊಳ್ತಾ ಇದ್ರು ಅನ್ನೋ ಒಂದೇ ಕಾರಣಕ್ಕೆ ನಿಮ್ಮ ಜೊತೆ ಬಂದಿದೀನಿ ಅಷ್ಟೆ. ನೀವು ಈಗಲೇ ಸಂಬಂಧ ಕಲ್ಪಿಸಬೇಡ್ರಿ.."
ಹೀಗೇ ಸಾಗಿತ್ತು ಮಾತಿನ ಲಹರಿ.  ಕ್ರಮಿಸುತ್ತಿದ್ದ ದೂರವೂ ಸಾಗಿತ್ತು.  ಹಾಗೆ ಸಾಗುತ್ತಲೆ ಇದ್ದ ಚಿರಂತನಿಗೆ ನಾಮ ಫಲಕವೊಂದು ಕಾಣಿಸಿತು.  "ಭದ್ರಾ ವನ್ಯಧಾಮ" ಎಂದು ಬರೆದಿದ್ದುದರ ಕೆಳಗೆ ದಪ್ಪಕ್ಷರಗಳಲ್ಲಿ "ಆನೆಗಳಿವೆ ಎಚ್ಚರಿಕೆ" ಎಂದು ಬರೆಯಲಾಗಿತ್ತು. ಚಿರಂತ ಬೋರ್ಡಿನತ್ತ ಗೋಪಾಲಯ್ಯನವರ ಗಮನವನ್ನು ಸೆಳೆದ,...
" ಗೋಪಾಲಯ್ಯ, "ಆನೆಗಳಿವೆ ಎಚ್ಚರಿಕೆ" ಅನ್ನೋದು symbollic ಇರಬಹುದೇನ್ರೀ ? " ಚಿರಂತ ನಗುತ್ತಾ ಕೇಳಿದ. ಗೋಪಾಲಯ್ಯನವರೂ ನಕ್ಕರು..
"ಹಾಗೇನಿಲ್ಲಪ್ಪಾ , ನಿನ್ನ ಭಾವೀ ಪತ್ನಿ ಶಾಖವಾಗಿದ್ದಾಳೆ. ಶರೀರ-ಶಾರೀರಗಳನ್ನು ಹಿತ-ಮಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ನಿನಗೆ ಆಕೆಯ ಶರೀರದ ಬಗೆಗೆ ಯಾವ ಆತಂಕವೂ ಬೇಡ ".
ಇನ್ನೂ ಹೆಚ್ಚು ಮಾತನಾಡಿದರೆ ಈಗಲೇ ಎಲ್ಲರೊಡನೆಯೂ ಸಂಬಂಧ ಕಲ್ಪಿಸಿಬಿಡುತ್ತಾರೆನ್ನುವ ಯೋಚನೆಯಲ್ಲಿ ಚಿರಂತ ಮಾತಿಗೆ ತಾತ್ಕಾಲಿಕ ವಿರಾಮವನ್ನಿಟ್ಟ. ಮುಂದಿನ ದಾರಿ ಮೌನವಾಗಿಯೇ ಸಾಗಿತು. ಕಾಡಿನದಾರಿ, ಹಸಿರಿನ ಪರಿಸರ , ನಿತ್ಯವೂ ಮಾಲಿನ್ಯದೊಳಗೇ ಸಂಚರಿಸುತ್ತಿದ್ದ ಚಿರಂತನ ಮನಸಿಗೆ ಹಿತವೆನಿಸತೊಡಗಿತು. ಅದೇ ಮಧುರಲಹರಿಯಲ್ಲಿರುವಾಗಲೇ ಗೋಪಾಲಯ್ಯ ’ಮನೆ’ ಬಂತೆಂದು ಎಚ್ಚರಿಸಿದರು. ಸುತ್ತಲೂ ’ಕಾಫಿ಼’ ಗಿಡಗಳು. ಗಿಡಗಳ ಮಧ್ಯೆ  ಹತ್ತಾಳೆತ್ತರದ ಮರಗಳು, ಮರಗಳನ್ನು  ತಬ್ಬಿಕೊಂಡು ಹಬ್ಬಿದ್ದ ಏಲಕ್ಕಿ, ಮೆಣಸು, ವೀಳ್ಯದೆಲೆಯ ಬಳ್ಳಿಗಳು , ಇಡೀ ಪರಿಸರ ಚಿರಂತನ ಮನಸನ್ನು ಹಿಡಿದಿಟ್ಟಿತು. ಇವುಗಳ ನಡುವೆ ದೊಡ್ಡದೇ ಎನ್ನಬಹುದಾದ ಮಂಗಳೂರು ಹೆಂಚಿನ ಮನೆ. ಹಾಗೇ ಮೈಮರೆತಿದ್ದ ಚಿರಂತನನ್ನು ಗೋಪಾಲಯ್ಯ ಮನೆಯೊಳಗೆ ಬರುವಂತೆ ಕರೆದರು. ’ಶೂ’ ಕಳಚಿಟ್ಟ ಚಿರಂತನ ಕೈಯಿಗೆ ಹೆಂಗಸೊಬ್ಬರು ನೀರಿತ್ತರು. ಕೈ-ಕಾಲು ತೊಳೆದುಕೊಂಡು ಮನೆಯ ಹಜಾರಕ್ಕೆ ಕಾಲಿಟ್ಟವನಿಗೆ ಯಾವುದೋ ಸಿನಿಮಾದಲ್ಲಿಯ ತೊಟ್ಟಿ ಮನೆಯನ್ನು ನೋಡಿದ ಅನುಭವವಾಯ್ತು. ಗೋಪಾಲಯ್ಯ ಅದಾಗಲೇ ಚಾಪೆಯ ಮೇಲೆ ತಳವೂರಿದ್ದರು. ಚಿರಂತ ಅವರ ಪಕ್ಕದಲ್ಲೇ ಕುಳಿತುಕೊಂಡ. ಕುಳಿತುಕೊಂಡಿದ್ದು ನೆಪವಷ್ಟೆ..ಅವನ ಕಣ್ಣು ಬೇರೇನನ್ನೋ ಹುಡುಕುತ್ತಿತ್ತು !.

(ಮುಂದುವರಿಸುತ್ತೇನೆ..)  
............................................................................

{ ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು,
ಎತ್ತಿಕೊಳಲು ಹೋದರದಕೆ ಕೋಪ ಬರುವುದು,
ಕೋಪ ಬಂದು ತನ್ನ ಮೈಯ ಪರಚಿಕೊಳುವುದು,
ಪರಚಿಕೊಂಡು ತನಗೆ ತಾನೇ ಅತ್ತುಬಿಡುವುದು . ಜಿ.ಪಿ.ಆರ್. }

(ಮೂರುವರೆ ತಿಂಗಳಿನ ನನ್ನ ಮಗನ ತುಂಟಾಟಗಳಿಂದಾಗಿ ಒಂದು ತಿಂಗಳಿನಿಂದ ನನ್ನ ಬ್ಲಾಗಿನಲ್ಲಿ ಏನೂ ಬರೆಯಲಾಗಿರಲಿಲ್ಲ. ಸದ್ಯಕ್ಕೆ ಕತೆಯೊಂದರ ಭಾಗವನ್ನು ಬರೆದಿದ್ದೇನೆ. ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ. ಎಂದಿನಂತೆ ಸ್ವೀಕರಿಸುವೆರೆಂದು ನಂಬಿದ್ದೇನೆ. )

****************************************************

ಕೊನೆಕಿಡಿ.

ಶಂಭುಲಿಂಗನಿಗೆ ಅಚಾನಕ್ಕಾಗಿ ಮಾತು ನಿಂತುಹೋಯಿತು. ವೈದ್ಯರನ್ನು ಕಾಣಲು ಒಡೋಡಿ ಹೋದ.
ಡಾಕ್ಟರೆದುರಿಗೆ ಇಟ್ಟಿದ್ದ ಹಾಳೆಯೊಂದರ ಮೇಲೆ ತನ್ನ ಸಮಸ್ಯೆಯನ್ನು ಬರೆದ. " ನನಗೆ ಮಾತು ನಿಂತು ಹೋಗಿದೆ " ಎಂದು.
ವೈದ್ಯ ಮಹಾಶಯರಿಗೆ ಅರ್ಥವಾಯಿತು. ಶಂಭುಲಿಂಗನನ್ನು ಪ್ರಶ್ನಿಸಿದರು..

" ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ನಿಮ್ಮ ಮಾತು ನಿಂತುಹೋಗಿರುವುದು ದೊಡ್ಡ ಸಮಸ್ಯೆಯೇನಲ್ಲ. ಇದನ್ನು ಖಂಡಿತ ಗುಣಪಡಿಸಬಹುದು. ಈಗ ಹೇಳಿ..ಅಂದಹಾಗೆ
 ಯಾವಾಗ ಹೀಗಾಯಿತು ನಿಮಗೆ...ಒಂದಷ್ಟು ನಿಮ್ಮ ಮಾತಿನಲ್ಲೇ ಹೇಳಿ..! "

 ಶಂಭುಲಿಂಗ ತನ್ನ  ಮುಂದಿದ್ದ ಮೇಜಿಗೆ ಹಣೆ ಚಚ್ಚಿಕೊಂಡ !!.

 ---------------------------------------------------------------------------------

                                                 ವಂದನೆಗಳೊಂದಿಗೆ...

Jun 21, 2010

ನನ್ನೂರಿನ ಜನತೆ

ಸತೀಶ ವಟಗುಟ್ಟುತ್ತಲೇ ಇದ್ದ. ನನ್ನ ಆತ್ಮೀಯ ಸ್ನೇಹಿತನೆನ್ನುವ ಕಾರಣಕ್ಕೆ ಅವನ ವಾಚಾಳಿತನವನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದೇನೆ. ಕಪ್ಪೆಯನ್ನು ತೆಗೆದು ಎಲ್ಲೇ ಎಸೆದರೂ, ಅದು ವಟಗುಟ್ಟುವುದನ್ನು ಬಿಡುವುದೇ ? , ಈ ಸತೀಶನೂ ಹಾಗೆಯೆ. ಮಿತಿಮೀರಿ ಮಾತನಾಡಿದರೂ ಅವನ ಮಾತುಗಳಲ್ಲಿ ವಿಷಯವಿರುತ್ತದೆ. ಅದೊಂದೆ ಕಾರಣಕ್ಕೆ ಅವನ ಎಲ್ಲಾ ವಟಗುಟ್ಟುವಿಕೆಯನ್ನೂ ಸಹನೆಯಿಂದ ಕೇಳುತ್ತೇನೆ. ಇಂದೂ ಸಹ ವಟಗುಟ್ಟಿಕೊಂಡೇ ಬಂದ ಸತೀಶ.
" ಆ ಸ್ವಾಮೀಜಿಗೆ ಬಿಳಿ ತೊನ್ನುರೋಗ ಇತ್ತೂಂತ ಅನ್ಸುತ್ತೆ. ನಾನು ಒಮ್ಮೆ ಅವರ ಮೈಮೇಲೆ ಬಿಳಿ ಕಲೆಗಳನ್ನು ನೋಡಿದ್ದೆ.  ನಾವ್ಯಾಕೆ ಒಮ್ಮೆ ಪರೀಕ್ಷೆ ಮಾಡಬಾರದು ? "
ಅವನ ಮಾತು ಕೇಳಿ ನನಗೆ ಗಾಬರಿಯಾಯ್ತು. ಯಾವುದೋ ದುಃಸಾಹಸದ ಕಾರ್ಯಕ್ಕೆ ಕೈಹಾಕುತ್ತಿದ್ದಾನೆ ಅನಿಸಿತು.
" ಎಂತಹ ಪರೀಕ್ಷೆ ಮಾಡ್ತೀಯಪ್ಪಾ ನೀನು ? ಏನಾದ್ರೂ ಗಲಾಟೆ ಹೂಡಿ ತಗಾದೆ ತಂದು ಹಾಕಿ ತಮಾಷೆ ನೋಡೋಲ್ಲ ತಾನೆ  ?".  ನನ್ನ ಆತಂಕ ಸತೀಶನ ಆಲೋಚನೆಯ ಧಾಟಿಯನ್ನೇನೂ ಬದಲಾಯಿಸಲಿಲ್ಲ. ಪುನಃ ವಟಗುಟ್ಟಲು ಪ್ರಾರಂಭಿಸಿದ.
"ಬಿಳಿ ತೊನ್ನು ರೋಗ ಇದ್ದ ಸ್ವಾಮಿಯನ್ನ ಮಣ್ಣು ಮಾಡಿದರಲ್ಲ , ಈಗ ನೋಡು, ಈ ವರ್ಷ ಮಳೆಗಾಲ ಮುಗಿಯಕ್ಕೆ ಬಂದ್ರೂ ಇನ್ನೂ ಒಂದು ಹನಿಯೂ ಸಹ ಭೂಮಿಗೆ ಉದ್ರಿಲ್ಲ, ತೊನ್ನು ಬಂದೋರ‍್ನ ಹೂಳ್ಬಾರ್ದಂತೆ ಕಣೋ..ಸುಟ್ಟು ಹಾಕಬೇಕಂತೆ,ಹಾಗೆ ಹೂತಾಕಿದ್ದರಿಂದಲೇ ಈಗ ಮಳೆ ಬರ್ತಾ ಇಲ್ಲ. ಈಗಾಗಲೇ ಮಳೆಗಾಲ ಮುಗೀತಾ ಇದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವರ್ಷ ತೊಳೆದುಕೊಳ್ಳೋಕು ನೀರಿರಲ್ಲ ಮತ್ತೆ  "  ಹೊಸದೊಂದು ಸಂಶೊಧನೆ ಮಾಡಿದವನಂತೆ ವದರಿದ ಸತೀಶ.
ಅವನು ಇಷ್ಟೆಲ್ಲಾ ಯೋಚಿಸುವುದಕ್ಕೆ ಪ್ರಭಲವಾದ ಕಾರಣವೂ ಇತ್ತು. ನಮ್ಮೂರಲ್ಲಿ ಮಳೆಗಾಲ ಇಲ್ಲದ ತಿಂಗಳೆಂದರೆ ಜನವರಿ ಮತ್ತು ಫೆಬ್ರವರಿ ಮಾತ್ರ !. ಮಾರ್ಚಿ ತಿಂಗಳಿನಲ್ಲಿ ಗುಡುಗಿಕೊಂಡು ಬರುವ  ಬಿರುಸುಮಳೆ, ಮುಂದಿನ ಮುಂಗಾರು ಬರುವವರೆಗೂ ಆರ್ಭಟಿಸುತ್ತಲೇ ಇರುತ್ತದೆ. ಜೂನ್ ತಿಂಗಳಲ್ಲಿ ಪ್ರಾರಂಭವಾಗುವ ಜಿಟಿ-ಜಿಟಿ ಮುಂಗಾರುಮಳೆ ಗಣಪತಿ ಹಬ್ಬ ಮುಗಿಯುವವರೆಗೂ ನನ್ನೂರನ್ನು ತೋಯಿಸುತ್ತದೆ. ನಂತರ ಯಥಾಪ್ರಕಾರ ಮಿಂಚು-ಗುಡುಗಿನ ಆರ್ಭಟದೊಂದಿಗೆ ಡಿಸಂಬರ್ ಮೊದಲವಾರದವರೆವಿಗೂ ಆಗಾಗ್ಗೆ ಬಂದು ಹೋಗುತ್ತಿರುತ್ತದೆ. ಇಂತಹ ನನ್ನೂರಿಗೆ ಈ ವರ್ಷ ಮಳೆಯ ಒಂದು ಹನಿಯೂ ಬಿದ್ದಿಲ್ಲವೆಂದಮೇಲೆ...., ಸತೀಶ ಮಾತನಾಡದೇ ಇರಲು ಸಾಧ್ಯವೆ ?. ಆದರೆ ಸತೀಶನ ಆಲೋಚನೆಯ ಹಿಂದಿರುವ ಪ್ರಸಂಗ ಮಾತ್ರ ಕೂತುಹಲಕರವಾದುದು. ಅದೇನು ಗ್ರಹಚಾರವೋ, ಈ ವರ್ಷ ಮಳೆರಾಯ ಮಾತ್ರ ಭೂತ ನೋಡಿ ಬೆದರಿವರಂತೆ ಮೋಡದಿಂದ ಕೆಳಗಿಳಿದಿರಲಿಲ್ಲ. ನನ್ನೂರು, ನದಿ ಮೂಲದ ನೀರಾವರಿ ಇಲ್ಲದ ಪ್ರದೇಶವಾದ್ದರಿಂದ ರೈತರೆಲ್ಲಾ ಕಂಗಾಲಾಗಿ ಬೆಳೆ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದರು. ಕೆರೆ-ಬಾವಿಗಳೆಲ್ಲಾ ಖಾಲಿಯಾಗಿದ್ದವು. ಕುಡಿಯುವ ನೀರಿನ ಕೊಳವೆ ಬಾವಿಗಳು ಸೋತು ಸೊರಗಿದ್ದವು.  ನನ್ನೂರಿನ ಸುತ್ತೆಲ್ಲಾ ಉತ್ತಮ ಮಳೆಯಾಗುತ್ತಿದ್ದರೂ , ನನ್ನೂರಿಗೆ ಮಾತ್ರ ಹನಿಯೂ ಉದುರಿರಲಿಲ್ಲ !. ಸತೀಶ ಬಹಳ "ಮಂಡೆಬಿಸಿ" ಮಾಡಿಕೊಂಡಿದ್ದ. ಅವನೊಬ್ಬನೇ ಅಲ್ಲ, ನನ್ನೂರಿನ ಸಮಸ್ತರಿಗೂ ಈ ಮಳೆ ಎನ್ನುವುದು ಬಿಡಿಸಲಾಗದ ಒಗಟಾಯಿತು.  ಬಾರದಮಳೆ ನನ್ನೂರಿನ ಮಹಾಜನಗಳಲ್ಲಿ ಅನೇಕ ಯೋಚನೆಗಳನ್ನು ಹುಟ್ಟುಹಾಕಿತು. ಅದರಲ್ಲಿ ಪ್ರಮುಖವಾಗಿ ಎರಡು ವಿಷಯಗಳು ತೀವ್ರ ಚರ್ಚೆಗೆ ಈಡುಮಾಡಿತು, ಮೊದಲನೆಯ ವಿಷಯ ನನ್ನೂರಿನ ಗ್ರಾಮದೇವತೆಯದು, ಎರಡನೆಯದು ಮಠದ ಸ್ವಾಮಿಗಳು.
ಮೊದಲನೆಯ ವಿಷಯಕ್ಕೆ ಬಂದರೆ, ಗ್ರಾಮದೇವತೆಯ ವಿಚಾರ ಮಾತನಾಡುವಾಗ ಸ್ವಲ್ಪ ಅಂಜಿಕೆಯಾಗುತ್ತದೆ !. ಆದರೂ ಹೇಳುತ್ತೇನೆ...ಈಗಿರುವ ನನ್ನೂರಿನ ಗ್ರಾಮದೇವತೆಯ ದೇವಾಲಯ ಬಹಳ ಪುರಾತನ ಕಾಲದ್ದು. ಬಿದ್ದು ಹೋಗುವ ಗೋಳಿನಲ್ಲಿದ್ದ ದೇವಾಲಯವನ್ನು ಸುಂದರ ದೇವಾಲಯವನ್ನಾಗಿ ಮರು ನಿರ್ಮಿಸಿದ ಕೀರ್ತಿ ನನ್ನೂರಿನ ಯುವಕರ ಬಳಗಕ್ಕೆ ಸಲ್ಲುತ್ತದೆ. ಯುವಕರ ಬಳಗದಲ್ಲಿ ಕುರುಬರು ಹಾಗು ಒಕ್ಕಲಿಗರೇ ಬಹುಸಂಖ್ಯಾತರು. ನಿರ್ಮಾಣದ ಕಾರ್ಯವೇನೋ ಸುಗಮವಾಗಿ ನೆರವೇರಿತು, ಆದರೆ ಹೊಸದಾಗಿ ದೇವಾಲಯವನ್ನು ನಿರ್ಮಿಸುವಾಗ ಗುಡಿಯೊಳಗಿದ್ದ  ಮೊಲವಿಗ್ರಹದ ಮೂಗು ಅದು ’ಹೇಗೋ’ ಮುರಿದುಹೋಗಿಬಿಟ್ಟಿತ್ತು !. ಇನ್ನು ಭಗ್ನಗೊಂಡ ಮೂರ್ತಿಪೂಜೆ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದ ಯುವಕರು , ನವೀನ ವಿಗ್ರಹವೊಂದನ್ನು ತಯಾರುಮಾಡಿಸಿ ಸ್ಥಾಪಿಸಲು ಮುಂದಾದರು. ಇಷ್ಟಾಗುವಷ್ಟರಲ್ಲಿ ’ಬಳಗದ’ ಜೇಬು ಖಾಲಿಯಾಗಿತ್ತು. ವಿಗ್ರಹ ಸ್ಥಾಪನೆಗೆ, ದೇವಾಲಯದ ಪ್ರವೇಶ ಉತ್ಸವಕ್ಕೆ ಹಣ ಹೊಂದಿಸುವುದು ಯುವಕರಿಗೆ ಕಬ್ಬಿಣದ ಕಡಲೆಯಾಯಿತು. ಇಂತಹ ಸಂದರ್ಭದಲ್ಲೆ ದಾನಿ ಚಂದ್ರಣ್ಣನವರು , ದೇವಾಲಯದ ಧಾರ್ಮಿಕಕಾರ್ಯಗಳ ಸಂಪೂರ್ಣ ಖರ್ಚನ್ನು ಹೊರಲು ಸಿದ್ದರಾದರು. ಅವರದ್ದೊಂದು ಷರತ್ತು. ಧಾರ್ಮಿಕ ಪೂಜಾವಿಧಿಗಳನ್ನು ವೀರಶೈವರೇ , ಅದರಲ್ಲೂ ಜಂಗಮರೇ ನಿರ್ವಹಿಸಬೇಕೆಂಬುದು.  ಕಾರಣ, ಚಂದ್ರಣ್ಣನವರು ಲಿಂಗಾಯತ ಕೋಮಿಗೆ ಸೇರಿದವರು. ಸ್ವಜಾತಿ ಪ್ರೇಮ !.  ಇದು ಒಕ್ಕಲಿಗರು, ಕುರುಬರಿಂದ ಕೂಡಿದ್ದ  ಯುವಕರ ಬಳಗಕ್ಕೆ ನುಂಗಲಾರದ ತುತ್ತಾಯಿತು. ಸತಿಶನಂತಹ ಕೆಲವು ಹುಡುಗರು ಆಕ್ಷೇಪಣೇಯನ್ನೂ ಎತ್ತಿದರು.
"ಅದೆಂಗ್ಲಾ ಆಯ್ತದೆ ? ಆರುವಯ್ನೋರೇ ಇದ್ನೆಲ್ಲಾ ಮಾಡ್ಬೇಕು ಕಣಲಾ, ಇಲ್ಲಾಂದ್ರೆ ಮುಂದೆ ಗರಬಡಿತದೆ ನಮ್ಮೂರ್ಗೆ ನೋಡ್ಕಳಿ " . ಹೀಗೆ ಆಕ್ಷೇಪಿಸಿದ ಹುಡುಗರ ಮಾತಿಗೆ ಕಿಮ್ಮತ್ತು ದೊರೆಯಲಿಲ್ಲ. ಚಂದ್ರಣ್ಣನ ಹಣದ ಥೈಲಿಯ ಮುಂದೆ ಬಳಗದ ಹುಡುಗರು ಮೊಕರಾದರು. ಬ್ರಾಹ್ಮಣರಿಗೆ, ಒಕ್ಕಲಿಗರಿಗೆ ಒಳಗೊಳಗೆ ಅಸಹನೆಯಿದ್ದರೂ, ಕೆಲಸವಾಗಲಿ ಎಂದು ತೆಪ್ಪಗಾದರು. ಜಂಗಮರು ಹೋಮ ಸುಟ್ಟರು !. ಮೊರ್ತಿ ಸ್ಥಾಪನೆಯೂ ಆಯಿತು.  ಅಲ್ಲಿಂದ ಕೈಕೊಟ್ಟ ಮಳೆ ,  ಮುಂಗಾರು ಮುಗಿಯುತ್ತಾ ಬಂದರೂ ಹನಿಯುದುರಿಸಲಿಲ್ಲ. ಇಷ್ಟು ಸಾಕಿತ್ತು ಬಳಗದ ಯುವಕರಿಗೆ, ಗ್ರಾಮದೇವತೆಯ ಪ್ರತಿಷ್ಠಾಪನೆಯ ವಿಧಿಯಲ್ಲಿ ಅಪಚಾರವಾಗಿದೆಯೆಂದು ಊರೆಲ್ಲಾ ಸುದ್ದಿಯನ್ನು ಹರಡಿದರು. ಇದಕ್ಕೆ ಲಿಂಗಾಯತರೇ ಕಾರಣವೆಂಬ ಗುಲ್ಲೆದ್ದಿತು. ಲಿಂಗಾಯತರು ಹಾಗೂ ಮಿಕ್ಕುಳಿದ ಪಂಗಡಗಳ ನಡುವೆ ದ್ವೇಷದ ಹೊಗೆ ಕಪ್ಪು ಕಾರ್ಮೋಡದಂತೆ ದಟ್ಟೈಸತೊಡಗಿತು.
ಇನ್ನು ಎರಡನೆಯ ವಿಷಯಕ್ಕೆ ಬಂದರೆ, ನನ್ನೂರಿನ ಸನಿಹದಲ್ಲೇ ಲಿಂಗಾಯತರ ಮಠವೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಘನ ಸರ್ಕಾರದ ’ಆಸಕ್ತಿ’ಯಿಂದಾಗಿ ಮಠ ಸಮೃದ್ಧಿಯಾಗಿ ಬೆಳೆಯಿತು. ಒಕ್ಕಲಿಗರು ಹಾಗೂ ಇತರೆ ಜಾತಿಯ ಜನಗಳಿಗೆ ಮಠದ ಏಳಿಗೆಯನ್ನು ಸಹಿಸಲಾಗುತ್ತಿರಲಿಲ್ಲ. ಮಠಕ್ಕೊಬ್ಬರು ಸ್ವಾಮಿಗಳೂ ಇದ್ದರು. ಅವರಿಗ್ಯಾವುದೋ ಕಾಯಿಲೆ ಬಂದು ನರಳಾಡಿ , ಕೊನೆಗೊಂದು ದಿವಸ ಕೊನೆಯುಸಿರೆಳೆದರು. ವೀರಶೈವ ಪದ್ಧತಿಯಂತೆ ಅವರ ಸಮಾಧಿಯನ್ನು ಮಠದ ಆವರಣದಲ್ಲೇ ನಿರ್ಮಿಸಲಾಯಿತು. ಸ್ವಾಮಿಗಳನ್ನು ಮಣ್ಣುಮಾಡುವ ಸಮಯದಲ್ಲಿ ಹಾಜರಿದ್ದ ಕೆಲವರಿಗೆ , ಅವರ ಮೈಮೇಲಿದ್ದ ಬಿಳಿಕಲೆಗಳು ಕಾಣಿಸಿಕೊಂಡವು. ಗುಸುಗುಸು ಮಾತನಾಡಿಕೊಂಡರು. " ತೊನ್ನಿದ್ದವರನ್ನ ಸುಡಬೇಕು ಕಣ್ರಲಾ..ಊತಾಕುದ್ರೆ ಬರಗಾಲ ಬತ್ತದೆ !". ಇಂತಹ ಮಾತುಗಳು ಮಠದ ಆಡಳಿತಗಾರರನ್ನು ತಲುಪಿದರೂ ಸಹ , ಸಮಾಧಿ ನಿರ್ಮಾಣವಾಯಿತು. ಅಲ್ಲಿಂದ ಶುರುವಾಯಿತು ನನ್ನೂರಿನ ಬರಗಾಲ. ಮಳೆ ಬರಲೇ ಇಲ್ಲ !.  ಸತೀಶ ಕ್ರಾಂತಿಕಾರನಂತೆ ಬುಸುಗುಡುತ್ತಿದ್ದ. ಏನಾದರೂ ಸರಿಯೇ , ನನ್ನೂರಿಗೆ ಮಳೆ ತರಿಸಲೇಬೇಕೆಂಬ ಹಟತೊಟ್ಟವನಂತೆ ವ್ಯಗ್ರನಾಗಿ ಕುಳಿತಿದ್ದ.  ನಾನು ಸ್ವಲ್ಪ ಸಮಾಧಾನ ಪಡಿಸಲು ಯತ್ನಿಸಿದೆ. " ಸತೀಶ ಬಿಳಿ ಚರ್ಮದ ಸ್ವಾಮಿಗೂ, ಮಳೆಗೂ ಏನು ಸಂಬಂಧನಯ್ಯಾ ? ಏನೇನೋ ಮಾತನಾಡಿ ಜನಗಳನ್ನ ತಪ್ಪುದಾರಿಗೆ ಎಳೀಬೇಡ ನೀನು ". ನನ್ನ ಉಪದೇಶಗಳಾವುದೂ ಅವನಿಗೆ ಬೇಕೆನಿಸಲಿಲ್ಲ. ಮತ್ತೆ ಬುಸುಗುಟ್ಟಿದ. "ಹಾಗಾದ್ರೆ  ತಿಂಗಳ ಹಿಂದೆ ಪಕ್ಕದೂರಿವವರು ಗ್ರಾಮದೇವತೆಗೆ ಪೂಜೆ ಮಾಡ್ಕಂಡು ಹೋದ್ರಲಾ..ಅಲ್ಲಿ ಎಂಥಾ ಮಳೆ ಆಯ್ತು ಗೊತ್ತಾ..? ಕೆರೆ ಕಟ್ಟೆ ಎಲ್ಲಾ ತುಂಬಿ ಹೋದವಂತೆ..ನಂಬಿಕೆ ಮುಖ್ಯ . ಆ ತೊನ್ನು ಸ್ವಾಮಿಯನ್ನ ಹೂಳದೆ ಸುಟ್ಟಿದ್ದರೆ , ಇಷ್ಟು ಹೊತ್ತಿಗಾಗಲೇ ಮಳೆ ಸುರಿದುಹೋಗಿರೋದು ಗೊತ್ತಾ ?! ಈಗಲೂ ಹೂತಿರೋ ಆ  ಹೆಣ ತೆಗೆದು ಸುಟ್ಟರೆ ಮಳೆ ಬರುತ್ತೆ ನೊಡು ! " ಸತೀಶನ ಮಾತಿಗೆ ನಗಬೇಕೋ , ಅಳಬೇಕೋ ನನಗೆ ತಿಳಿಯಲಿಲ್ಲ. " ಸತೀಶ, ಪೂಜೆ- ಆಚರಣೆಗಳಿಂದ ಧಾರ್ಮಿಕ ಶ್ರದ್ಧೆ, ನಂಬಿಕೆ ಸಂಸ್ಕೃತಿ ಬೇಳೆಯುತ್ತೆ ಅನ್ನೋದು ನಿಜ, ಆದರೆ ಹೂತಿರುವ ಹೆಣ ತೆಗೆದು ಸುಡೋದು ಯಾವ ಸಂಸ್ಕೃತಿನಯ್ಯಾ ? ". ಸತೀಶನಿಗೆ ನನ್ನೋಡನೆ ಚರ್ಚೆಮಾಡುವ ಆಸಕ್ತಿಯಿರಲಿಲ್ಲ. ಯುವಕರ ಬಳಗದ ಗುಂಪು ನಾವಿದ್ದೆಡೆಗೆ ಬರಲು , ಸತೀಶ ಅವರನ್ನು ಸೇರಿಕೊಂಡ.  ನಾನು ಅಲ್ಲಿಂದ ಕಳಚಿಕೊಂಡೆ. ಸತೀಶ ಒಕ್ಕಲಿಗ ಕುಟುಂಬದಿಂದ ಬಂದಿದ್ದ ಹುಡುಗ . ಒರಟು ಸ್ವಭಾವದವನಾದರೂ ನನ್ನೂರಿನ ಬಗೆಗೆ ಅತೀವ ಅಭಿಮಾನವಿರಿಸಿಕೊಂಡಿದ್ದ. ಒಮ್ಮೊಮ್ಮೆ ಅಭಿಮಾನ ಅತಿರೇಕಕ್ಕೆ ತಿರುಗಿ ಸಂಘರ್ಷಗಳಾಗುತ್ತಿದ್ದವು. ಯುವಕರ ಬಳಗದವರು ಮಳೆ ತರಿಸಲು ಶೃಂಗೇರಿಯಿಂದ ದೀಕ್ಷಿತರನ್ನು ಕರೆತರಲು ತೀರ್ಮಾನಿಸಿದರು. ಅದರಂತೆ ಸಕಾಲಕ್ಕೆ ಬಂದ ಆಚಾರ್ಯರು ಮೂರು ದಿವಸಗಳ ಕಾಲ ಯಾಗಗಳನ್ನು ನಡೆಸಿ ಮಳೆಯಾಗಲೆಂದು ಹರಸಿದರು. ಕೊನೆಯ ದಿವಸ ತಿರ್ಥ-ಪ್ರಸಾದ ವಿನಿಯೋಗ. ಅಂದು ಲಿಂಗಾಯತ ಮುಖಂಡ ಚಂದ್ರಣ್ಣನೂ ಅಲ್ಲಿಗೆ ಬಂದಿದ್ದು ವಿಶೇಷವಾಗಿತ್ತು. ತೀರ್ಥ ಪಡೆದುಕೊಳ್ಳಲು ಮುಗಿಬಿದ್ದ ಜನರನ್ನು ನೋಡಿ ಚಂದ್ರಣ್ಣ ಛೇಡಿಸಿದ್ದ " ದೇಸಕ್ಕೆ ಓರಾಟ ಮಾಡ್ರುಲಾ ಅಂದ್ರೆ, ಅಯ್ನೋರ್ ಕೊಡೊ ತೀರ್ಥಕ್ ಓರಾಟ ಮಾಡ್ತಿರಲ್ರುಲಾ " . ಚಂದ್ರಣ್ಣನ ಮಾತಿನಿಂದ ಸಿಟ್ಟಿಗೆದ್ದಿದ್ದ ಮಿಕ್ಕುಳಿದವರು  ಅಂದಿನ ದಿನ ರಾತ್ರಿಯೇ ಸಭೆ ಸೇರಿದರು. ಲಿಂಗಾಯತರನ್ನು ಹೊರತುಪಡಿಸಿ ಮಿಕ್ಕುಳಿದ ಎಲ್ಲಾ ಪಂಗಡದವರೂ ಮಠದೊಳಕ್ಕೆ ನುಗ್ಗಿ ಸಮಾಧಿಯಿಂದ ಸ್ವಾಮಿಗಳ ಹೆಣ ತೆಗೆದು ಸುಡಬೇಕೆಂಬ ನಿರ್ಧಾರಕ್ಕೆ ಬಂದರು. ಅದು ಹೇಗೋ ಲಿಂಗಾಯತ ಮುಖಂಡರಿಗೆ ಈ ವಿಷಯ ತಿಳಿದುಹೋಯಿತು.  ಬೆಳಗಾಗುವಷ್ಟರಲ್ಲಿ ದೊಣ್ಣೆ, ಮಚ್ಚು ಹಿಡಿದ ಹತ್ತಾರು ಲಿಂಗಾಯತ ಯೋಧರು ಸಮಾಧಿಯ ಕಾವಲಿಗೆ ನಿಂತರು. ಇನ್ನೊಂದು ದಿಕ್ಕಿನಿಂದ ಚೈನು, ಮಚ್ಚು, ದೊಣ್ಣೆಗಳನ್ನು ಹಿಡಿದ ಯುವಕರ ಗುಂಪು ಸಮಾಧಿಯ ಮೇಲೆ ದಾಳಿಯಿಟ್ಟಿತು. ದೊಡ್ಡ ಸಂಗ್ರಾಮವೇ ನಡೆದುಹೋಯಿತು. ಒಂದಷ್ಟು ಹೆಣಗಳೂ ಬಿದ್ದವು. ಕೈ-ಕಾಲುಗಳು ತುಂಡಾಗಿ ಬಿದ್ದಿತು. ಹೊಡೆತ ತಾಳಲಾರದೆ ಕೆಲವರು ಪಲಾಯನಗೈದರು. ಇನ್ನೂ ಕೆಲವರು ಕೊನೆಯವರೆಗೂ ಹೋರಾಡಿ ವೀರಮರಣವನ್ನಪ್ಪಿದರು !. ಇದರ ನಡುವೆಯೇ , ಅದ್ಯರೋ ಒಬ್ಬರು ಸಮಾಧಿಯನ್ನು ಬಗೆದುಬಿಟ್ಟರು. ಸ್ವಾಮಿಗಳ ದೇಹ ಅರ್ಧದಷ್ಟು ಹೊರಗೆ ಬಂದಿತು. ಅಷ್ಟರಲ್ಲಿ ಪೋಲಿಸಿನವರ ಆಗಮನವಾಗಲು ಅಳಿದುಳಿದ ಮಂದಿಯೂ ದಿಕ್ಕುಪಾಲಾದರು. ಇಷ್ಟಾದ ನಂತರ ಮಠದೆಡೆಗೆ ಹೋಗಲು ಜನಗಳು ಹಿಂಜರಿಯತೊಡಗಿದರು. ಸ್ವಾಮಿಗಳ ಜೊತೆಗೆ ಇನ್ನಷ್ಟು ಹೆಣಗಳು ಅವರ ಸಖ್ಯ ಬೆಳಸಿದವು !.  ನನಗೆ ಸತೀಶನ ನೆನಪಾಯಿತು. ಹುಡುಕಿಕೊಂಡು ಹೊರಟೆ. ಹೊಂಗೆ ಮರದ  ಬುಡದಲ್ಲಿ ಕುಳಿತು ಯೋಚನಾಮಗ್ನನಾಗಿದ್ದವನನ್ನು ಮಾತಿಗೆಳೆದೆ. " ಏನೋ ಸತೀಶ, ಅವತ್ತು ಹೊಡೆದಾಟವಾದಾಗ ನೀನಲ್ಲಿರಲಿಲ್ಲವಂತೆ ?". ಕೂತೂಹಲದಿಂದ ಕೇಳಿದೆ. ಸತೀಶನ ಬಳಿ ಉತ್ತರ ಸಿದ್ಧವಾಗಿತ್ತು. " ಹೌದಪ್ಪಾ, ಅಂದು ನಾನು ಊರಿನಲ್ಲಿರಲಿಲ್ಲ..ನಾನೇನಾದರೂ ಇದ್ದಿದ್ದರೆ..ಆ ಸ್ವಾಮಿಯ ಹೆಣ ತೆಗೆದು ಸುಟ್ಟುಬರುತ್ತಿದ್ದೆ !". ಕಟಕಟನೆ ಹಲ್ಲುಕಡಿದ ಸತೀಶ. ಇಷ್ಟಾದರೂ ಇವನಿಗೆ ಬುದ್ಧಿ ಬರಲಿಲ್ಲವಲ್ಲಾ ಎಂದು ಮರುಗಲು ಅಲ್ಲಿದ್ದುದು ನಾನೊಬ್ಬನೆ !. ಸತೀಶ ಮತ್ತೆ ವಟಗುಟ್ಟಲು ಶುರುಮಾಡಿದ. " ಉತ್ತರ, ಹಸ್ತ, ಚಿತ್ತ, ಸ್ವಾತಿ, ವಿಶಾಖ..ಎಲ್ಲಾ ಮಳೇನೂ ಮುಗೀತು. ಇನ್ನೇನು ಚಳಿಗಾಲನೂ ಶುರುವಾಗುತ್ತೆ. ಇನ್ನೆಲ್ಲಿಂದ ಮಳೆ ಬರುತ್ತಯ್ಯಾ ? ಮುಂದೆ ಗತಿಯೇನು ? ನಮ್ಮನ್ನ ಆ ದೇವರೇ ಕಾಪಾಡಬೇಕು " . ನಾನು ರೇಗಿಸಲೆಂದೇ ಸತೀಶನನ್ನು ಕೆಣಕಿದೆ. " ಅಲ್ಲಯ್ಯಾ, ಸ್ವಾಮಿಗಳ ಸಮಾಧಿನೂ ಬಗೆದಾಯ್ತು, ಶೃಂಗೇರಿಯಿಂದ ಬ್ರಾಂಬ್ರನ್ನೇ ಕರೆಸಿ ಪೂಜೆ ಮಾಡಿಸಿದ್ದಾಯ್ತು..ಇನ್ನೂ ಯಾಕೆ ಮಳೆ ಬರಲಿಲ್ಲ ಈ ಊರಿಗೆ ?". ಸತೀಶನ ಮುಖ ಚಿಕ್ಕದಾಯಿತು. ಡಿಸಂಬರ್ ಆರಂಭದ ಸಣ್ಣ ಚಳಿಯಲ್ಲೂ ಆತ ತುಸು ಬೆವರಿದ್ದು ನನಗೆ ತಿಳಿಯಿತು. ಆದರೂ ಅವನು ಹಠ ಬಿಡಲಿಲ್ಲ. " ಮಳೆಗಾಲ ಮುಗಿದು ಚಳಿ ಶುರುವಾಯ್ತು. ಈಗಿನ್ನೆಂಥಾ ಮಳೆ ಬರುತ್ತೆ. ಇನ್ನು ಮುಂದೆ ಬಹಿರ್ದೆಸೆಗೆ ಹೋಗೋವಾಗ ಕಾಗದ ತೆಗೆದುಕೊಂಡು ಹೋಗಬೇಕಾಗುತ್ತೆ. ಆದರು ನಾನು ಬಿಡಲ್ಲ..ನಾಳೆ ನೀನೂ ನನ್ನ ಜೊತೆ ಬಾ..ಆ ಸ್ವಾಮಿಯನ್ನ ಸಮಾಧಿಯಿಂದ ತಗೆದು ಸುಟ್ಟಾಕಿ ಬರೋಣ , ಆಮೇಲೆ ನೋಡು ಮಳೆ ಹೇಗೆ ಬರುತ್ತೆ ಅಂತ ..". ಅವನ ವಿತಂಡವಾದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಗ್ರಾಮದೇವತೆಯ ದೇವಾಲಯದ ನೂತನ ಶಿಖರದ ನೆರಳು ಅಷ್ಟುದ್ದಕ್ಕೂ ಬಿದ್ದಿತ್ತು. ಸೂರ್ಯ ತನ್ನ ನಿತ್ಯಕಾರ್ಯ ಮುಗಿಸಿ ಮರೆಯಾಗುತ್ತಲಿದ್ದ. ಕತ್ತಲಾಗುತ್ತಲಿದ್ದರಿಂದ ಅವನಿಂದ ಬಿಡುಗಡೆಗೊಂಡು ನಾನು ಮನೆ ಸೇರಿದೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯ ಹೆಂಚಿನ ಮೇಲೆ  ಸಣ್ಣ ಮಳೆ ಹನಿಗಳು ಬಿದ್ದ ಸದ್ದಾಯಿತು. ಒಂಬತ್ತು ಗಂಟೆಯಾಗುವಷ್ಟರಲ್ಲಿ ದೊಡ್ಡ ಹನಿಗಳು ಶುರುವಾಗಿದ್ದವು. ಅಕಾಲದಲ್ಲಿ ಇದೆಂತಹ ಮಳೆಯೆಂದು ಆಶ್ಚರ್ಯಗೊಂಡು ನೋಡುವಷ್ಟರಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ನನ್ನೂರಿನ ಜನತೆ ಇತಿಹಾಸದಲ್ಲಿ ಕಂಡು ಕೇಳರಿಯದಿದ್ದ ಬಿರುಸಾದ ಮಳೆ ಅದು. ಬಿರುಗಾಳಿಯ ಸಹಿತ ಸುರಿದ ಕುಂಭದ್ರೋಣ ಮಳೆ ನಿಂತಾಗ ಬೆಳಗಿನ ಜಾವ ಸುಮಾರು ಐದು ಗಂಟೆ !.  ಎಂದಿನಂತೆ ಬೆಳಗಾಗೆದ್ದು ಮನೆಯಿಂದ ಹೊರಬಂದು ಬೀದಿಯನ್ನೊಮ್ಮೆ ದಿಟ್ಟಿಸಿದೆ. ಎಲ್ಲೆಲ್ಲು ನೀರು. ಮಳೆ ನೀರು. ತಕ್ಷಣ ಸತೀಶನ ನೆನಪಾಯಿತು.  ಅವನನ್ನು ಮಾತನಾಡಿಸಲೆಂದು  ಬನಿಯನ್ ಮೇಲೆ ಅಂಗಿ ಧರಿಸಿ ಹೊರಟೆ. ಅರೆ !  ನನ್ನೂರಿನ ಗ್ರಾಮದೇವತೆಯ ದೇವಾಲಯದ ಮುಂದೆ ಜನವೋ ಜನ !. ಹತ್ತಿರ ಹೋಗಿ ನೋಡಿದೆ...ರಾತ್ರಿ ಸುರಿದ ಬಿರುಗಾಳಿ ಮಳೆಗೆ ದೇವಾಲಯ ಶಿಖರದ ಸಮೇತ ಕುಸಿದು ಬಿದ್ದಿದೆ. ಗ್ರಾಮದೇವತೆ ಕಲ್ಲುಗಳಡಿಯಲ್ಲಿ ಅಪ್ಪಚ್ಚಿ !. ಸತೀಶ ಏದುಸಿರು ಬಿಡುತ್ತಾ ಓಡೋಡಿ ಬಂದ..ವಟಗುಟ್ಟಿದ.."ಹೆಣ ತೆಗೆಯೋಣ ಅಂತ ಮಠದ ಹತ್ತಿರ ಹೋಗಿದ್ದೆ ಕಣೊ, ಅಲ್ಲಿ ಸಮಾಧಿಯೇ ಇಲ್ಲ !. ಮಳೆ ನೀರಲ್ಲಿ ಎಲ್ಲಾ ಕೊಚ್ಕೊಂಡು ಹೋಗಿದೆ..ಅಲ್ಲಿ ಏನಿತ್ತು ಅಂತಲೂ ಗೊತ್ತಾಗುತ್ತಿಲ್ಲ ..!" .
ಪ್ರಕೃತಿಯ ಮುಂದೆ, ಜಾತಿ-ಪಂಗಡಗಳನ್ನು ಮೇಳೈಸಿಕೊಂಡಿರುವ ಮನುಷ್ಯ ತೀರಾ ಕುಬ್ಜನೆನಿಸಿತು ನನಗೆ. ಸೀದಾ ಮನಗೆ ಹೋಗಿ ಬೆಚ್ಚಗೆ ರಗ್ ಹೊದೆದು ಮಲಗಿದೆ.  


 (ಈ ಕತೆಯಲ್ಲಿರುವುದೆಲ್ಲವೂ ಕೇವಲ ಕಾಲ್ಪನಿಕ. ಯಾರಿಗೂ ಸಂಬಧಿಸಿದ್ದಲ್ಲ !)  
...............................................................................................

 ಖೊನೆಖಿಡಿ:

ಶಂಭುಲಿಂಗನಿಗೆ ಪರೋಪಕಾರವೆಂದರೆ ಬಲು ಪ್ರೀತಿ !. ಹೀಗೆ ಒಮ್ಮೆ ವಾಯುವಿಹಾರಕ್ಕೆ ಹೊರಟ ಶಂಭುವಿಗೆ ವಿಚಿತ್ರವೊಂದು ಕಾಣಿಸಿತು. ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಹುಲ್ಲನ್ನು ವ್ಯಕ್ತಿಯೊಬ್ಬ ಗಬಗಬನೆ ತಿನ್ನುತ್ತಿದ್ದ. ಚಕಿತನಾದ ಶಂಭು ವ್ಯಕ್ತಿಯನ್ನು ಮಾತಿಗೆಳೆದ

" ಏನಾಯ್ತಯ್ಯಾ ನಿನಗೆ ? ದನಗಳ ತರಹ ಹುಲ್ಲು ತಿನ್ನುತ್ತಿದ್ದೀ ! "
"ಬುದ್ದಿ, ನಂಗೆ ತಿನ್ನಕ್ಕೆ ಏನು ಇಲ್ರಾ...ಹೊಟ್ಟೆಗಿಲ್ದೆ ವಾರಾತು ಸೋಮಿ.." ಗೋಳಾಡಿತು ಆ ವ್ಯಕ್ತಿ.
" ಹಾಗಾದರೆ ನೀನು ನನ್ನ ಜೊತೆ ಬರಲೇಬೇಕು " ಶಂಭು ಉಪಕರಿಸಲು ಮುಂದಾದ.  ವ್ಯಕ್ತಿ ಹರುಷಗೊಂಡಿತು.
" ಆಗಲಿ ಬುದ್ದಿ, ಮತ್ತೇ ನಂಜೊತೆ ನನ್ ಹೆಂಡ್ರು, ೩ ಮಕ್ಳು ಎಲ್ಲಾ ಇದಾರಲ್ಲಾ ಸೋಮಿ "
"ಹೆದರಬೇಡ !. ಎಲ್ಲರನ್ನೂ ಕರೆದುಕೊಂಡು ಬಾ " 
"ಆಗಲಿ ಬುದ್ದಿ " ಓಡಿ ಹೋದ ಆ ವ್ಯಕ್ತಿ ತನ್ನ ಕುಟುಂಬವನ್ನು ಕರೆದುಕೊಂಡು ಬಂದ. ವ್ಯಕ್ತಿಯ ಹೆಂಡತಿ ಶಂಭುವಿನ ಉಪಕಾರವನ್ನು ಹೊಗಳಿತು.
"  ಭೋ ಉಪ್ಕಾರ ಆತು ಸೋಮಿ , ನೀವು ತುಂಬಾ ದೊಡ್ಡೋರು ...ನಮ್ ಕೆಲ್ಸ ಏನು ಬುದ್ದಿ ? " 
ಶಂಭು ನಸುನಕ್ಕಿದ  "ಒಳ್ಳೆಯದು , ವಿಷಯ ಏನಪ್ಪಾ ಅಂದ್ರೆ, ಒಂದು ವರ್ಷದಿಂದ ನನ್ನ ಮನೆಯ ತೋಟದ ಹುಲ್ಲು ಕತ್ತರಿಸಿಲ್ಲ ನಾನು !!!!. ನಿಮ್ಮಿಂದ ನನಗೇ ಉಪಕಾರವಾಗುತ್ತದೆ .ಬನ್ನಿ !! "  

.......................................................

ವಂದನೆಗಳೊಂದಿಗೆ...
Jun 10, 2010

ಹೇಳು ಹೇಳು ಶರೀಫಾ....ಬಹಳ ವರ್ಷಗಳ ಹಿಂದೆ ಈ ಹಾಡು ಕೇಳಿದ್ದೆ. ನನ್ನ ಸಂಗೀತದ store ನಲ್ಲಿ ಈ ಹಾಡಿರುವುದು ಮರೆತುಹೋಗಿತ್ತು. ಮೊನ್ನೆ ಆಕಸ್ಮಿಕವಾಗಿ ಮತ್ತೆ ಇದೇ ಹಾಡು ದೊರಕಿತು. ನನ್ನ ಮನಸಿಗೆ ತಟ್ಟಿದ, ತುಂಬ ಇಷ್ಟವಾದ ಹಾಡು ನಿಮಗೂ ಇಷ್ಟವಾಗಬಹುದೆಂಬ ಭಂಡಧೈರ್ಯದಿಂದ ಇಲ್ಲಿ ಅಚ್ಚಿಸಿದ್ದೇನೆ.  ಸುಮಧುರ ಗಾಯಕರಾದ ’ರಾಜು ಅನಂತಸ್ವಾಮಿ’ (ದಿವಂಗತ ಎನ್ನಲು ಬೇಸರವಾಗುತ್ತಿದೆ) ಯವರು ಈ ಹಾಡು ಹಾಡಿದ್ದಾರೆ. ಹಾಡು ಶರಿಫಜ್ಜನ ಬಗೆಗೆ ಬರೆದುದಾಗಿದೆ. ಗೀತ ರಚನಕಾರರು ಯಾರು ಎನ್ನುವುದು ಮರೆತುಹೋಗಿದೆ. (ಹೀಗೆ ಹೇಳಲೂ ಬೇಸರವಾಗುತ್ತಿದೆ !) ಮಿತ್ರರಲ್ಲಿ ಯಾರಿಗಾದರೂ ತಿಳಿದಿದ್ದರೆ-ತಿಳಿದರೆ ದಯವಿಟ್ಟು ಹೇಳಿ, ರಚನಕಾರರ ಹೆಸರನ್ನೂ ಇಲ್ಲಿ ನಮೂದಿಸುತ್ತೇನೆ.  ಶಿಶುನಾಳದ ಶರೀಫಜ್ಜನ ಬದುಕನ್ನು ಈ ಕವಿತೆಯಲ್ಲಿ ಅರ್ಥಪೂರ್ಣವಾಗಿ, ಮನಮುಟ್ಟುವಂತೆ ಹೇಳಿದ್ದಾರೆಂದು ನನಗನ್ನಿಸಿತು, ತುಂಬಾ ಇಷ್ಟವೂ ಆಯಿತು. ನಿಮ್ಮ ಮುಂದೆ ಹಾಡಿನ Audio Link ಕೂಡಾ ಕೊಟ್ಟಿದ್ದೇನೆ . ಎಲ್ಲಾ OS ಗಳಲ್ಲೂ ಈ ಹಾಡು ಬರುತ್ತದೋ ಇಲ್ಲವೋ ಗೊತ್ತಿಲ್ಲ....ಕೇಳಿ...ಮಜಾಮಾಡಿ...ಶುಭವಾಗಲಿ.  

(ನಾರಾಯಣ ಭಟ್ಟರ ಸಲಹೆ :  ಅಂತರ್ಜಾಲದಿಂದ QuickTimeInstaller.exe [http://www.apple.com/quicktime/download/] ಎಂಬ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡರೆ ಈ ಹಾಡನ್ನು ಕೇಳಬಹುದು.)

.................................
ಒಂದು ಧರ್ಮಕೆ ಮೊಳೆತು
ಇನ್ನೊಂದರಲಿ ಕಲಿತು,
ಸಾರವೊಂದೇss ಎಂದು ಹಾಡಿದಾತ


ಹನಿಸೇರಿ ಹೊಳೆಯಾಗಿ
ಗುರಿಸೇರಿ ಕಡಲಾಗಿ
ನಭವೇರಿ ಮುಗಿಲಾಗಿ ಆಡಿದಾತ


ಹತ್ತು ವನಗಳ ಸುತ್ತಿ
ಹೂ ಹೂವನೂ ಮುತ್ತಿ
ಒಂದು ಜೇನಿನ ಹುಟ್ಟು ಕಟ್ಟಿದಾತ


ಎಲ್ಲಿ ಹೇಳೋ ತಾತ
ಹಿಂದೆ ಆ ಅವದೂತ
ಸಾಧಿಸಿದ ನಿನ್ನಂತೆ ಧರ್ಮವನ್ನು
ಕಾವ್ಯದಲಿ ಕಡೆದಾ ಮರ್ಮವನ್ನು


ಸೃಷ್ಟಿ ಮರೆಸಿಟ್ಟಿರುವ ಗುಟ್ಟುಗಳನು
ಸಪ್ತಸ್ವರ ಮೀರಿದಾ ಮಟ್ಟುಗಳನು
ನಿನ್ನ ನುಡಿಯಲ್ಲಿಟ್ಟೆ
ಮಾತಿಗರ್ಥವ ಕೊಟ್ಟೆ
ಹಾಡು ಮಾಡಿದೆ ನಿನ್ನ ವ್ಯಥೆಗಳನ್ನು ೨
ಹೇಳು ಹೇಳು ಶರೀಫ..
ಹಿಂದೆ ಯಾವ ಖಲೀಫಾ
ಏರಿದ್ದ ಈ ಹೊನ್ನಿನಟ್ಟವನ್ನು
ಮಣಿಸಿದ್ದ ಮಾತುಗಳ ಬೆಟ್ಟವನ್ನು


ಏನು ಜೀವನ ಧರ್ಮ
ಏನು ಸೃಷ್ಟಿಯ ಮರ್ಮ
ಏನು ಎಲ್ಲಿ ಯಾಕೆ ತಾಕಿದವನು
ಬೆಟ್ಟ ಬೆಟ್ಟವ ಕುಲುಕಿ
ಸಪ್ತ ಸಾಗರ ಕಲಕಿ
ಸೃಷ್ಟಿ ಮೂಲವ ಹುಡುಕಿ ಜೀಕಿದವನು


ಹೇಳು ಹೇಳು ಶರೀಫಾ
ಬೇರೊಬ್ಬ ಯಾರವನು
ನಿನ್ನಂತೆ ನಡೆ-ನುಡಿಯ ಕಾಡಿದವನು
ತೀರದಾಚೆಯ ತಾರೆ ಕೂಡಿದವನು


ಅನ್ನ ನೆಲ ಮಾತು ಮತ ಎಲ್ಲ ಬೇರಾದರೂ
ಪ್ರೀತಿಯಲಿ ಅವನೆಲ್ಲ ಕಲಸಿಬಿಟ್ಟೆ
ಬಣ್ಣ ಏಳಾದರು ಒಂದೆ ಕಾಮನಬಿಲ್ಲು
ಚಂದವಾದಂತೆ ನೀ ಬಾಳಿಬಿಟ್ಟೆ


ಗಡಿ ಮೀರಿ ಮಡಿ ಮೀರಿ
ಬಾನಿನಲಿ ಕುಡಿಯೂರಿ
ಗಾಳಿಯಲಿ ಬಾಳಪಟ ತೇಲಿಬಿಟ್ಟೆ,
ಹೇಳು ಹೇಳು ಶರೀಫಾ
ಯಾವ ಭಾವ ಕಲಾಪ
ಇಂಥ ಬಿಡುಗಡೆ ಕೊಟ್ಟ ಸೂತ್ರವಾಯ್ತು
ಹೇಗೆ ಬರಿನೀರು ಪರಿಶುಧ್ಹ ತೀರ್ಥವಾಯ್ತು ೨


-------------------------------------------------


ಖೊನೆಖಿಡಿ:


ಮಹಾನ್ ಜಿಪುಣ ಶಂಭುಲಿಂಗನಿಗೆ ಕಡೆಗೂ ಸಾವು ಬಂದೇಬಿಟ್ಟಿತು !. ಮರಣೋನ್ಮುಖನಾಗಿದ್ದ ಅವನ ಸುತ್ತ ಬಂಧು-ಮಿತ್ರರೆಲ್ಲರೂ ನೆರೆದರು.
ಶಂಭುಲಿಂಗನಿಗೆ ತನ್ನ ಹೆಂಡತಿಯನ್ನು ನೋಡುವ ಆಸೆಯಾಯಿತು..


" ಏ ..ಎಲ್ಲಿದಿಯೇ ? ಬಾರೆ ಇಲ್ಲಿ.."


" ಇಲ್ಲೇ ಇದ್ದಿನ್ರೀ, ನಿಮ್ಮ ಪಕ್ಕದಲ್ಲೇ " ಸೀರೆ ಸೆರಗಿನಿಂದ ಕಣ್ಣೊರೆಸಿಕೊಂಡಳು ಅವನ ಪತ್ನಿ.


" ಮಗನೇ ಎಲ್ಲಿದಿಯಪ್ಪಾ ? " 


" ಇಲ್ಲೇ ಇದ್ದೀನಪ್ಪಾ..ನಿನ್ನ ಪಕ್ಕದಲ್ಲೇ " ಮಗರಾಯ ಗೋಳೋ ಎಂದು ಗೋಳಿಟ್ಟ


"ಮಗಳೇ ಬಾರಮ್ಮಾ ಇಲ್ಲಿ..ಎಲ್ಲಿದ್ದಿಯಮ್ಮಾ ನೀನು "


" ನಾನೂ ಇಲ್ಲೇ ನಿನ್ನ ಪಕ್ಕದಲ್ಲೇ ಇದ್ದೀನಪ್ಪಾ "  ದುಃಖ ತಡೆಯಲಾರದೆ ಮಗಳು ಅತ್ತಳು.


 " ಸರಿ.." ಶಂಭುಲಿಂಗ ಅವಲತ್ತುಕೊಂಡ  "ಎಲ್ಲಾ ಇಲ್ಲೇ ಇದ್ದೀರಾ ಅಂದಮೇಲೆ ಅಡುಗೆಮನೆ ಲೈಟ್ ಯಾಕೆ ಉರಿಬೇಕು !!!! "  


--------------------------


 ವಂದನೆಗಳೊಂದಿಗೆ.    

May 27, 2010

ಚಿ.ಮೂ. ಅವರ ಮನವಿಈಗ ಮನವಿ ಮಾಡಿಕೊಂಡಿರುವವರು ಹಿರಿಯ ಸಾಹಿತಿ-ಚಿಂತಕ ಶ್ರೀಯುತ ಡಾ. ಎಂ. ಚಿದಾನಂದಮೂರ್ತಿಯವರು. ಶ್ರೀಯುತರು ಪುಸ್ತಕವೊಂದನ್ನು ಬರೆಯುವ ಉದ್ದೇಶದಿಂದ ಪತ್ರಿಕಾ ಮಾಧ್ಯಮಗಳಲ್ಲಿ ಪತ್ರಮುಖೇನ ಸಮಸ್ತ ಕನ್ನಡಿಗರೆಲ್ಲರಲ್ಲಿ ಸಂಬಂಧಪಟ್ಟ ವಿಚಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಶ್ರೀ. ಚಿ.ಮೂ. ಅವರು ಬರೆಯುತ್ತಿರುವ ಪುಸ್ತಕ "ಗೋವು-ಗೋಮಾತೆ-ಗೋಹತ್ಯೆ ನಿಷೇಧ" ಬಗೆಗೆ. ಪುಸ್ತಕದ ವಿಚಾರವರ್ಧನೆಗಾಗಿ ಸಮಸ್ತರಿಂದಲೂ ಅವರು ಮಾಹಿತಿಯನ್ನು ಬಯಸಿದ್ದಾರೆ. ಅವರ ಕೋರಿಕೆಗೆ ಸ್ಪಂದಿಸುವ ಹೊಣೆ ನಮ್ಮೆಲರದು ಎಂಬುದು ನನ್ನ ಅಭಿಪ್ರಾಯ. ಆ ಮನವಿ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.
                           
ಗೋವಿನಿಂದ ದೊರೆಯುವ "ಪಂಚಗವ್ಯ"ದ ವಿಚಾರವಾಗಿ ಇಲ್ಲಿ ಸ್ವಲ್ಪ ಹೇಳಬಯಸುತ್ತೇನೆ.
ಪಂಚಗವ್ಯವೆಂದರೆ ಗೋವಿನಿಂದ ದೊರೆಯುವ ಐದು ಪ್ರಮುಖ ಮೂಲಾಂಶಗಳು. ಅವು ಹೀಗಿವೆ.
೧) ಗೋಮೂತ್ರ (ಗಂಜಲ)
೨) ಸೆಗಣಿ  (ಗೋಮಯ)
೩) ಹಾಲು (ಕ್ಷೀರ)
೪) ಮೊಸರು (ದಧಿ)
೫) ಸರ್ಪಿ (ತುಪ್ಪ)


ವೇದಗಳಲ್ಲಿ ( ಪರಾಶರೋಕ್ತಾಗಮ ಸೂತ್ರ, ಆಶ್ವಲಾಯನ ಸೂತ್ರ, ಶೌನಕಾದ್ಯಾಚಾರ್ಯ ಗ್ರಂಥ ಪ್ರಕಾರೇಣ) ಗೋವಿನಿಂದ ದೊರೆಯುವ ಪಂಚಗವ್ಯಕ್ಕೆ ಪವಿತ್ರಸ್ಥಾನವನ್ನು ನೀಡಲಾಗಿದೆ. ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶಿಲಾಮೂರ್ತಿಗೆ (ಲಿಂಗಕ್ಕೆ) ಪಂಚಗವ್ಯ ಸ್ನಪನ (ಸ್ನಾನ) ಅತ್ಯಂತ ಮುಖ್ಯವಾದುದು. ಪ್ರತ್ಯೇಕವಾಗಿ ಸಂಗ್ರಹಿಸಿದ ಪಂಚಗವ್ಯವನ್ನು ಮೇಳೈಸುವ( ಬೆರೆಸುವ, ಸೇರಿಸುವ) ಮೊದಲು ಮಂತ್ರೋಕ್ತವಾಗಿ ದೇವತೆಗಳನ್ನು ಆವಾಹನೆ ಮಾಡಲಾಗುತ್ತದೆ. ಮೊದಲಿಗೆ ಚತುರಶ್ರ ಮಂಡಲವನ್ನು ರಚಿಸಿ (ಚೌಕಾಕಾರ) ಅದರ ಮೇಲೆ ಧಾನ್ಯವನ್ನು ಹರಡಿ ಪಂಚಗವ್ಯ ತುಂಬಿದ ಪಾತ್ರೆಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ.
ಪೂರ್ವಕ್ಕೆ ಗೋಮೂತ್ರವನ್ನು (ಗಂಜಲ)
ದಕ್ಷಿಣಕ್ಕೆ ಗೋಮಯವನ್ನು (ಸೆಗಣಿ)
ಪಶ್ಚಿಮಕ್ಕೆ ಕ್ಷೀರವನ್ನು (ಹಾಲು)
ಉತ್ರರಕ್ಕೆ ದಧಿಯನ್ನು (ಮೊಸರು)
ಮಧ್ಯದಲ್ಲಿ ಸರ್ಪಿಯನ್ನು (ತುಪ್ಪ)  ಕ್ರಮವಾಗಿ ಇರಿಸಿ, ಈಶಾನ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು (ದರ್ಭೆ+ನೀರು) ಇರಿಸಿ ಮಂತ್ರೋಕ್ತವಾಗಿ ದೇವತೆಗಳನ್ನು ಅವಾಹಿಸಲಾಗುತ್ತದೆ.


ಗೋಮೂತ್ರಕ್ಕೆ --ಸವಿತೃವನ್ನು ( ಸೂರ್ಯ , ತತ್ಸವಿತುಃ ,ಇತಿ ಮಂತ್ರೇಣ)
ಗೋಮಯಕ್ಕೆ -- ಶ್ರಿಯಂ ( "ಶ್ರೀ"=ಸಿರಿ=ಲಕ್ಷ್ಮಿ, ಪಾರ್ವತಿ ಇತ್ಯಾದಿ.  ಗಂಧದ್ವಾರಾ, .........)
ಕ್ಷೀರಕ್ಕೆ -- ಸೋಮನನ್ನು ( ಆಪ್ವಾಯಸ್ವ...)
ದಧಿಗೆ  --ಇಂದ್ರನನ್ನು (ದಧಿಕ್ರಾವ್ಣ...)
ಸರ್ಪಿಗೆ -- ಪರಮೇಷ್ಥಿಯನ್ನು ( ಶುಕ್ರಮಸಿ...)
ಮಂತ್ರೋಕ್ತವಾಗಿ  ಆವಾಹಿಸಿ ಅಂತ್ಯದಲ್ಲಿ ಕುಶೋದಕಕ್ಕೆ "ಬ್ರಹ್ಮ"ನನ್ನು ಆವಾಹಿಸಲಾಗುತ್ತದೆ. ಮುಂದಿನದು ಶಾಸ್ತ್ರೋಕ್ತ ರೀತಿಯ ಪೂಜಾದಿಗಳು. ನಂತರ ಪ್ರತ್ಯೇಕವಾಗಿಟ್ಟಿರುವ ಪಂಚಗವ್ಯವನ್ನು ಒಂದೇ ಪಾತ್ರೆಯಲ್ಲಿ ಸೇರಿಸುವ ಕ್ರಮ. ಮೇಳನದ ನಿಯಮ ಮತ್ತು ಕ್ರಮ ಹೀಗಿದೆ.


|| ಪಲಮೇಕಂತು ಗೋಮೂತ್ರಂ ಅಂಗುಷ್ಠಾರ್ಧಂತು ಗೋಮಯಂ |
ಕ್ಷೀರಂ ಸಪ್ತಪಲಂ ಪ್ರೋಕ್ತಂ ದಧಿತ್ರಿಪಲ ಮೇವಚ |
ಸರ್ಪಿರೇಕಪಲಂ ಪ್ರೋಕ್ತಂ ತ್ರಿಪಲಂತು ಕುಶೋದಕಂ|


"ಒಂದು ಬಾರಿ ಹೆಚ್ಚೇ ಎನ್ನುವಂತೆ ಗೋಮೂತ್ರವನ್ನೂ, ಅಂಗುಷ್ಠ (ಹೆಬ್ಬೆರಳು)ದ ಅರ್ಧದಷ್ಟು ಸೆಗಣಿಯನ್ನೂ, ಏಳು ಬಾರಿ ಹಾಲನ್ನೂ, ಮೂರು ಬಾರಿ ಮೊಸರನ್ನೂ , ಒಂದು ಬಾರಿ ತುಪ್ಪವನ್ನೂ ಬೇರೊಂದು ಪಾತ್ರೆಯಲ್ಲಿ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು ಸೇರಿಸುವುದು. ವೇದಾಗಮಶಾಸ್ತ್ರಗಳಲ್ಲಿ "ಗೋವಿನ" ಉತ್ಪನ್ನಗಳಿಗೆ ಅತ್ಯುಚ್ಚ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇಂತಹ ಪಂಚಗವ್ಯ ಸ್ನಾನ ಮತ್ತು ಪಾನದಿಂದ ಆರೋಗ್ಯವೃಧ್ದಿಸುವುದು ಅತ್ಯಂತ ಖಚಿತ. 
ಶ್ರೀ ಚಿ.ಮೂ. ಅವರ ಮನವಿಗೆ ನಾನೂ ಕೂಡ ಸ್ಪಂದಿಸಲಿದ್ದೇನೆ. ನಿಮ್ಮ ಸಹಕಾರವೂ ಇರಲೆಂದು ಪ್ರಾರ್ಥಿಸುತ್ತೇನೆ.


ಚಿ.ಮೂ. ಅವರ ವಿಳಾಸ.


ಡಾ. ಎಂ . ಚಿದಾನಂದಮೂರ್ತಿ
1013B, 4ನೆಯ ಅಡ್ಡರಸ್ತೆ, 11ನೆಯ ಮುಖ್ಯರಸ್ತೆ, ಹಂಪಿನಗರ,
ಬೆಂಗಳೂರು- 560104.    


.................................................................................................


  
ಖೊನೆಖಿಡಿ :


ಕೈಲಾಸಂ ಹೇಳಿದ್ದು. ನಾನು ಕದ್ದಿದ್ದು !.

" ಸೆರ‍್ಮನೆಗೋದ್ರೂ ಸೆರ‍್ಮನೀಸ್ನ ಬಿಡ್ಬಾರ‍್ದೂ ನನ್ರಾಜಾ "


  
ವಂದನೆಗಳೊಂದಿಗೆ.... 

May 12, 2010

ಶಾಪ..೪ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
-----------------------------------------------------------------------------

...ಹರಿಯಾಳ ರಾಣಿಯ ಮನಸು ದ್ವಾರಾವತಿಯೆಡೆಗೆ ಸೆಳೆಯುತ್ತಿತ್ತು. ಮಕ್ಕಳೇನಾದರೂ ನನ್ನಾಜ್ಞೆಯನ್ನು ಮೀರಿ ದ್ವಾರಾವತಿಗೆ ಹೋಗಿಬಿಟ್ಟರೆ ? ಅಲ್ಲೇನಾದರೂ ಅವಘಡಗಳು ಸಂಭವಿಸಿರಬಹುದೆ ? ರಾಣಿಗೆ ಅಪಶಕುನಗಳೇ ಹೆಚ್ಚಾಯಿತು. ಮನದಲ್ಲಿ ಎನೋ ಕಸಿವಿಸಿ, ಆತಂಕ. ರಾಣಿಯ ಮನಸ್ಸು ತಡೆಯಲಿಲ್ಲ . ದ್ವಾರವತಿಗೊಮ್ಮೆ ಹೋಗಿ ಬರುವ ತವಕ ಹೆಚ್ಚಾಗತೊಡಗಿತು. ಮಕ್ಕಳೇನಾದರು ದ್ವಾರಾವತಿಗೆ ಹೋಗಿರಬಹುದಾದರೆ, ಅರಮನೆಯ ಕಾವಲುಗಾರರ ಸಹಾಯವಿರಲೇಬೇಕೆಂಬ ಯೋಚನೆ ರಾಣಿಯ ಸ್ಮೃತಿಪಟಲದಲ್ಲೊಮ್ಮೆ ಹಾದುಹೋಯಿತು. ಗುಪ್ತ ಸುರಂಗಮಾರ್ಗದ ಮೇಲ್ವಿಚಾರಕನನ್ನು ರಾಣಿಯು ಬರಹೇಳಿದಳು. ರಾಣಿಯ ಅಬ್ಬರಿಕೆಯ ಮುಂದೆ ಕಾವಲುಗಾರ ಕಂಪಿಸಿಹೋದ !. ಮಕ್ಕಳಿಬ್ಬರಿಗೂ ದ್ವಾರಾವತಿಯನ್ನು ದರ್ಶಿಸಲು ಕುದುರೆಗಳ ವ್ಯವಸ್ಥೆಯನ್ನು ಮಾಡಿಕೊಟ್ಟುದನ್ನು ಅನಿವಾರ್ಯವಾಗಿ ರಾಣಿಯ ಮುಂದೆ ಹೇಳಿದ. ರಾಣಿಯ ಆತಂಕ ಮತ್ತಷ್ಟು ಹೆಚ್ಚಾಯಿತು. ನನ್ನ ಮಾತು ಕೇಳದೆ ದ್ವಾರಾವತಿಗೆ ಹೋದ ಮಕ್ಕಳಿಗೆ ಅಲ್ಲಿ ಎಂತಹ ಪರಿಸ್ಥಿತಿ ಉಂಟಾಗಿದೆಯೋ ಎಂದು ಹಲುಬಿದಳು. ಇನ್ನು ತಡಮಾಡುವುದು ತರವಲ್ಲವೆಂದು ಹರಿಯಾಳ ದೇವಿಯು ಕುದುರೆಯೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟಳು. ಮನಸಿನ ವೇಗದಂತೆ ಕುದುರೆಯನ್ನೂ ರಭಸದಿಂದ ಮುನ್ನೆಡೆಸಿದಳು. ಯಾವಾಗ ತನ್ನ ಮಕ್ಕಳನ್ನು ನೋಡುತ್ಟೇನೋ, ದ್ವಾರಾವತಿಯಲ್ಲಿ ತನ್ನ ಮಕ್ಕಳಿಗೆ ಎಂತಹ ಪರಿಸ್ಥಿತಿಯುಂಟಾಗಿದೆಯೋ ಎಂಬ ದುಗುಡವೊಂದೆ ಅವಳ ಮನದಲ್ಲಿ ತುಂಬಿಕೊಂಡಿತ್ತು. ಹಲವು ತಾಸುಗಳ ಪ್ರಯಾಣದ ನಂತರ ರಾಣಿಯು ದ್ವಾರಾವತಿಯನ್ನು ಸಮೀಪಿಸಿದಳು. ನೇರವಾಗಿ ತನ್ನ ಅಣ್ಣ ಬಲ್ಲಾಳರಾಜನಲ್ಲೇ ತನ್ನ ಮಕ್ಕಳ ವಿಚಾರವನ್ನು ಕೇಳುವುದು ಸೂಕ್ತವೆಂದೆಣಿಸಿ ಅರಮನೆಯನ್ನು ತಲುಪಿದಳು. ರಾಣಿ ಹರಿಯಾಳ ದೇವಿಗೆ ಅರಮನೆಯ ಪ್ರವೇಶವು ಸುಲಭಸಾಧ್ಯವಾಗಲಿಲ್ಲ. ಅದಾಗಲೆ ಬಲಾಳರಾಯನು, ಹರಿಯಾಳ ದೇವಿಗೆ ದ್ವಾರಾವತಿಯಲ್ಲಿ ಹನಿ ನೀರನ್ನೂ ಸಹ ಕೊಡಬಾರದೆಂದು ಆಜ್ಞಾಪಿಸಿದ್ದನು. ತನ್ನ ಮಾತಿಗೆ ಎದುರಾಡಿ ಚಂದ್ರಗಿರಿಗೆ ಹೋದ ಹರಿಯಾಳ ರಾಣಿಗೆ ದ್ವಾರಾವತಿಯಲ್ಲಿ ಅನ್ನಾಹಾರಗಳನ್ನು ನಿಡಬಾರದೆಂಬ ಕಟ್ಟಾಜ್ಞೆಯನ್ನು ಬಲ್ಲಾಳರಾಜ ಜಾರಿಯಲ್ಲಿಟ್ಟಿದ್ದ.    ರಾಣಿಗೆ ಅರಮನೆಯ ಪ್ರವೇಶವು ದೊರೆಯಲಿಲ್ಲ. ದ್ವಾರಾವತಿಯ ಮಗಳೆಂಬ ಕಿಂಚಿತ್ತು ಗೌರವವೂ ಸಿಗಲಿಲ್ಲ. ಕಾವಲುಗಾರರು ರಾಣಿಯನ್ನು ದ್ವಾರದಲ್ಲಿಯೇ ತಡೆದರು.

" ತಾವು ಅರಮನೆಗೆ ಪ್ರವೆಶಿಸುವಂತಿಲ್ಲ, ಇದು ರಾಜಾಜ್ಞೆ !". 

 ಭಟರ ಮಾತಿಗೆ ಅಳುಕದ ರಾಣಿ ತಾನು ಬಂದಿರುವ ವಿಚಾರವನ್ನು ತಿಳಿಸಿದಳು.

" ನಾನಿಲ್ಲಿ ನಿಮ್ಮ ರಾಜನನ್ನಾಗಲಿ, ಈ ವೈಭೋಗಗಳನ್ನಾಗಲಿ ಸವಿಯಲು ಬಂದಿಲ್ಲ, ನನ್ನಿಬ್ಬರು ಮಕ್ಕಳು ನನ್ನಪ್ಪಣೆಯನ್ನು ಮೀರಿ ಇಲ್ಲಿಗೆ ಬಂದಿದ್ದಾರೆ. ಅವರೆಲ್ಲಿಹರೆಂದು ತಿಳಿಯಲೋಸುಗ ಇಲ್ಲಿಗೆ ಬಂದಿದ್ದೇನೆಷ್ಟೆ, ನಿಮಗೆ ನನ್ನ ಮಕ್ಕಳೆಲ್ಲಿಹರೆಂದು  ತಿಳಿದಿದ್ದರೆ ಹೇಳಿ, ಈ ಕ್ಷಣವೆ ಅವರೊಡಗೂಡಿ ಇಲ್ಲಿಂದ ಹೊರಟು ಬಿಡುವೆ .."

" ಒಹೋ..! ಅವರುಗಳೆ ? ಆ ಇಬ್ಬರು ಅವಳಿ ಯುವಕರು ನಿಮ್ಮ ಮಕ್ಕಳೊ ? ಎಂತಹ ಮಕ್ಕಳನ್ನು ಹೆತ್ತಿದ್ದೀಯಮ್ಮ ನೀನು..! "

" ಏಕೆ ? ನನ್ನ ಮಕ್ಕಳು ನೀತಿವಂತರಲ್ಲವೆ ? ಅವರು ಸಾತ್ವಿಕರು, ಅನ್ಯರಿಗೆ ಕೇಡು ಬಗೆಯುವ ಸ್ವಭಾವದವರಲ್ಲ, ಬಹಳ ಮುಗ್ಧರು ನನ್ನ ಮಕ್ಕಳು...ದಯವಿಟ್ಟು ಎಲ್ಲಿದ್ದಾರೆಂದು ತಿಳಿಸಿಕೊಡಿ.."

" ಮುಗ್ಧರೇ ನಿನ್ನ ಮಕ್ಕಳು !? ಅಬ್ಬಾ..! ಅವರು ನಡೆಸಿರುವ ಕೃತ್ಯಕ್ಕೆ ಕ್ಷಮಯೇ ಇಲ್ಲವಾಗಿದೆ. ಮಹಾರಾಜರು ಅವರಿಗೆ ಸರಿಯಾದ ಗತಿಯನ್ನೇ ಕಾಣಿಸಿದ್ದಾರೆ. ತಾವು ವಿನಾಕಾರಣ ವ್ಯಥೆಪಡುತ್ತಲಿದ್ದೀರಿ. ನಿಮ್ಮ ಮಕ್ಕಳ ನಿರೀಕ್ಷೆಯನ್ನು ಬಿಟ್ಟು ಸುಖವಾಗಿ ಸ್ವಸ್ಥಾನಕ್ಕೆ ತೆರಳಿರಿ.." 

 ಭಟರು ಅಪಹಾಸ್ಯದಿಂದ ನಕ್ಕರು. ರಾಣಿಗೆ ಮನದೊಳಗೆ ಕಸಿವಿಯಾಯಿತು. ಇದೆಂತಹ ಕೆಟ್ಟಗಳಿಗೆ ಒದಗಿಬಂದಿತೆಂದು ಚಿಂತಿಸಿದಳು. ಪ್ರವೇಶದ್ವಾರದಲ್ಲಿ ರಾಣಿಯ ಆಗಮನದ ವಾರ್ತೆಯನ್ನು ಕೇಳಿದ ಬಲ್ಲಾಳರಾಯ , ತಾನೇ ಅಲ್ಲಿಗೆ ಆಗಮಿಸಿದ. ಕಳೆಗುಮ್ದಿದ ಹರಿಯಾಳ ದೇವಿಯ ಮುಖವನ್ನು ನೋಡಿದ ರಾಯನಿಗೆ ವಿಚಿತ್ರವಾದ ಆನಂದವುಂಟಾಯಿತು. ಅಪಹಾಸ್ಯದಿಂದಲೇ ರಾಣಿಯನ್ನು ಮಾತನಾಡಿಸಿದ..

" ಮಹಾರಾಣಿ ಹರಿಯಾಳ ದೇವಿಯವರು ಇಲ್ಲಿಯವರೆಗೂ ಬಂದ ಮಹತ್ತರ ವಿಚಾರವನ್ನು ಈ ಪಾಮರನು ತಿಳಿದುಕೊಳ್ಳಬಹುದೆ ? " 

" ರಾಜ, ನಿನ್ನ ಹೀಯಾಳಿಕೆಯ ವಾಕ್ಯಗಳು ನನಗರ್ಥವಾಗುತ್ತಿದೆ. ಆದರೆ ನನಗೆ ಅದನ್ನು ಮುಂದುವರಿಸುವಷ್ಟು ಸಹನೆ , ಸಮಯಗಳು ಇಲ್ಲವಾಗಿದೆ. ದಯಮಾಡಿ ನನ್ನ ಮಕ್ಕಳಾದ ಲಕ್ಷ್ಮಣ-ವೀರೇಶರು ಎಲ್ಲಿಹರೆಂದು ತಿಳಿಸಿಕೊಡು, ನಾನೀಗ ಅವರನ್ನು ನೋಡಬೇಕಿದೆ .." 

ಹರಿಯಾಳ ರಾಣಿಯ ಆರ್ತನಾದ , ಬಲ್ಲಾಳರಾಯನಿಗೆ ಮಹದಾನಂದವನ್ನುಂಟುಮಾಡಿತು. ತನ್ನ ಪ್ರತಿಷ್ಠೆಗೆ ಕಳಂಕವಿತ್ತವಳನ್ನು ಇನ್ನಷ್ಟು ಹೀಯಾಳಿಸುವ ಮನಸಾಯಿತು ರಾಯನಿಗೆ..

" ನಿನ್ನ ಮಕ್ಕಳು ಮಹಾನ್ ರಸಿಕರಮ್ಮಾ ! ಅವರಿಗೆ  ಮೃಷ್ಟಾನ್ನ ಭೋಜನವೆ ಬೇಕಂತೆ .  ಆದರೇನು ಮಾಡುವುದು, ನನ್ನ ದ್ವಾರಾವತಿಯಲ್ಲಿ ಕೇವಲ ಹಣ್ಣು-ಗೆಡ್ಡೆಗಳಷ್ಟೆ ಲಭ್ಯವಿದೆ. ! ನಿನ್ನ ಮಕ್ಕಳು ನಿನ್ನಂತಯೇ ಹೀನ  ಕೃತ್ಯವೆಸಗಿದರು.
  ನನ್ನ ರಾಣಿಯ , ಮನದನ್ನೆಯ ಸೌಂದರ್ಯವೇ ಅವರ ಉಪಾಸನೆಗೆ ಅವಶ್ಯವಾಗಿತ್ತು. ದ್ವಾರಾವತಿಯ ಮಹಾರಾಣಿಯನ್ನೇ ಮಾನಭಂಗಗೊಳಿಸಲು ಯತ್ನಿಸಿದ ಧೂರ್ತರವರು. ಶೀಲಾಪಹರಣಕ್ಕೆ ಬಲ್ಲಾಳರಾಜನ ರಾಜ್ಯದಲ್ಲಿ ಯಾವ ಶಿಕ್ಷೆಯಿದೆಯೆಂದು ನಿನಗೆ ತಿಳಿದೇ ಇದೆ. ಅದರಂತೆ , ಕಲ್ಯಾಣಿಯಿರುವ ಉದ್ಯಾನವನದಲ್ಲಿ ನಿನ್ನ ಮಕ್ಕಳೀರ್ವರನ್ನೂ ಶೂಲಕ್ಕೇರಿಸಲಾಗಿದೆ. ನಿನಗೆ ಚೈತನ್ಯವಿದ್ದರೆ ಅಲ್ಲಿಗೆ ಹೋಗಿ ನೊಡು..." 

 ದರ್ಪದಿಂದ ಅಬ್ಬರಿಸಿದ  ಬಲ್ಲಾಳರಾಯ ತಿರುಗಿಯೂ ನೋಡದೆ ಅರಮನೆಯೊಳಗೆ ನಡೆದುಹೋರಟ. ತನ್ನ ಮಕ್ಕಳನ್ನು ಶೂಲಕ್ಕೇರಿಸಲಾಗಿದೆ  ಎಂಬ ಸುದ್ದಿ ಕಿವಿಗೆ ಬಿದ್ದಾಕ್ಷಣವೆ ಹರಿಯಾಳ ರಾಣಿಗೆ ಭೂಮಿ ಬಾಯ್ಬಿಟ್ಟಂತೆ ಭಾಸವವಾಯಿತು. ನಿಂತಿರುವ ನೆಲ ಕುಸಿಯುತ್ತಿರುವಂತೆನಿಸಿತು. ತನ್ನ ಕೇಳಿದ ಸುದ್ದಿಯನ್ನು ನಂಬಲಾಗಲಿಲ್ಲ ರಾಣಿಗೆ. ಕುದುರೆಯನ್ನೇರಿ ಶರವೇಗದಲ್ಲಿ ಉದ್ಯಾನವನ್ನು ತಲುಪಿದಳು. ಶೂಲಕ್ಕೇರಿಸಿ ಹಲವು ದಿನಗಳಾದರೂ ಹಾಗೆಯೇ ಬಿಟ್ಟಿದ್ದ ತನ್ನ ಮಕ್ಕಳ ಹುಳು ಬಿದ್ದ ದೇಹಗಳನ್ನು ಕಂಡು ಕಣ್ಣು ಕಪ್ಪಿಂಟಾಯಿತು. ಆಗಸವೇ ಬಿರಿಯುವಂತೆ ರೋಧಿಸಿದಳು. ಆಕೆಯ ಆಕ್ರಂದನಕ್ಕೆ ದನಿಗೂಡಿಸಲು, ಸಮಾಧಾನಗೊಳಿಸಲು ದ್ವಾರವತಿಯಲ್ಲಿ ಯಾರೊಬ್ಬರೂ ಧಾವಿಸಲಿಲ್ಲ. ಬಹಳ ತ್ರಾಸಪಟ್ಟು ಮಕ್ಕಳ ದೇಹಗಳನ್ನು ಕೆಳಗಿಳಿಸಿ, ಅದೇ ಉದ್ಯಾನದಲ್ಲಿ ತನ್ನ ಸ್ವಹಸ್ತದಿಮ್ದ ಕಳೇಬರಗಳಿಗೆ ಸಮಾಧಿ ಮಾಡಿದಳು. ಬಲ್ಲಾಳರಾಜನ ಅನ್ಯಾಯಕ್ಕೆ ಧಿಕ್ಕಾರವೆಂದಳು. ಅವಳ ನೋವಿಗೆ ಆಸರೆಯಾಗಲು ಬಲ್ಲಾಳರಾಯನ ಕಟ್ಟಪ್ಪಣೆಯು ಪುರಜನರಿಗೆ ಅಡ್ಡಿಯಾಗಿತ್ತು. ಮಕ್ಕಳನ್ನು ಕಳೇದುಕೊಂಡ ದುಃಖದಲ್ಲಿ ಮಾನಸಿಕವಾಗಿ ಜರ್ಝರಿತಗೊಂಡಳು ಹರಿಯಾಳ ರಾಣಿ. ಸಂಪೂರ್ಣ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಂತೆ ವರ್ತಿಸತೊಡಗಿದಳು. ನೀರು-ಅನ್ನಾಹಾರಗಳಿಲ್ಲದೆ ದೇಹವೂ ಸೊರಗಿಹೋಯಿತು. ಚಂದ್ರಗಿರಿಗೆ ಹಿಂತಿರುಗುವ ಚೈತನ್ಯವೂ, ಸ್ವಾಸ್ಥ್ಯವೂ ಅವಳಿಗಿಲ್ಲವಾಯಿತು. ಹಲವು ದಿನಗಳು ದ್ವಾರಾವತಿಯ ಬೀದಿಗಳನ್ನು ಸುತ್ತುತ್ತಾ ಗೋಗರೆದಳು. ಅದೊಂದು ದಿನ ಮಧ್ಯಾಹ್ನ ಭಾಸ್ಕರ ನಡುನೆತ್ತಿಯಲ್ಲಿದ್ದನು. ದ್ವಾರಾವತಿಯ ಕುಂಬಾರರ ಕೇರಿಯಲ್ಲಿ ದಾಹ ಪೀಡಿತಳಾಗಿ , ಪ್ರಜ್ಞಾಶೂನ್ಯಳಾಗಿ ಬಿದ್ದುಬಿಟ್ಟಳು.  ಹನಿ ನೀರನ್ನೂ ಕೊಡಬಾರದೆಮ್ಬ ಆದೇಶಕ್ಕೆ ಹೆದರಿ ಆಕೆಯನ್ನು ಸಮೀಪಿಸಲೂ ಜನರು ಬರಲಿಲ್ಲ. ಮುದುಕ ರಾಜಯ್ಯ ಕುಂಬಾರನ ಮನೆಯ ಮುಂದೆ ರಾಣಿಯು ನಿಸ್ತೇಜಳಾಗಿ ಬಿದ್ದಿದ್ದಳು. ಹರಿಯಾಳ ದೇವಿಯನ್ನು ಗುರುತಿಸಿದ ರಾಜಯ್ಯನು , ಆಕೆಯ ಸ್ಥಿತಿಯನ್ನು ಕಂಡು ಮರುಗಿದನು..

" ಇದೇನವ್ವ ತಾಯಿ, ನಿನಗೆ ಇಂತಹ ಗತಿ  ಬಂದುಬಿಡ್ತಲ್ಲಾ, ಆ ಶಿವನಿಗೂ ನಿನ್ ಮ್ಯಾಲೆ ಕರುಣೆ ಇಲ್ಲವಾಯ್ತಲ್ಲಾ, ಇರವ್ವ ನೀರು ತರ್ತೇನೆ.."  

ಮನೆಯೊಳಗೆ ಹೋದ ಕುಂಬಾರ ರಾಜಯ್ಯನು ತಂಬಿಗೆಯಲ್ಲಿ ನೀರು ತಂದು ರಾಣಿಯ ಮುಖದ ಮೇಲೆ ಚಿಮುಕಿಸಿದನು. ಚೇತರಿಸಿಕೊಂದ ರಾಣಿಯು ರಾಜಯ್ಯನ ಮುಖವನ್ನೊಮ್ಮೆ ನೋಡಿ, ಅತನನ್ನು ಗುರುತಿಸಿದಳು. 

"ತಾತ, ನಿಮ್ಮ ಮಹಾರಾಜ ನನಗೆ ನೀರನ್ನೂ ಕೊಡಬಾರದೆಂದು ಅಪ್ಪಣೆಮಾಡಿದ್ದಾನೆ , ಅಂತಹುದರಲ್ಲಿ ನೀನು ನೀರು ಕೊಟ್ಟೆಯಲ್ಲಾ..ನಿನಗೆ ಶಿಕ್ಷೆಯಾಗುವುದಿಲ್ಲವೇ.."  ರಾಣಿಯು ಆಶ್ಚರ್ಯದಿಂದ ಕೇಳಿದಳು.

" ಅಯ್ಯೋ , ಬಿಡವ್ವ,.. ನಾನು ಗಾಳಿಗೆ ಬಿದ್ದೋಗೊ ಮರ !. ನಾನಿದ್ದು ತಾನೆ ಏನು ಮಾಡಬೇಕು..?"  

ಎಂದು ಹೇಳಿದ ಕುಂಬಾರನ ಮಾತನ್ನು ಕೇಳಿ ರಾಣಿಗೆ ಅಮಿತಾನಂದವಾಯಿತು. ಕುಂಬಾರ ತಾತನ ತೊಡೆಯಮೇಲೆ ಮಲಗಿದಳು. ತನಗೆ , ತನ್ನ ಮಕ್ಕಳಿಗಾದ ನೋವು ಆಕೆಯನ್ನು ಕ್ರುದ್ದಗೊಳಿಸಿತು. ಕ್ರೋಧದಕಿಡಿ ಆಕೆಯ ಮನಸಿನಲ್ಲಿ ಹೊತ್ತಿ ಉರಿಯುತ್ತಿತ್ತು.  ಅದೇ ಆವೇಶದಲ್ಲಿ ಗುಡುಗಿನ ಆರ್ಭಟದಂತೆ ಹರಿಯಾಳ ರಾಣಿಯು ಶಾಪವಿತ್ತಳು.

" ಹೊಯ್ಸಳ ಸಾಮ್ರಾಜ್ಯ , ಈ ವೈಭೋಗದ ಬೀಡು ಹಾಳಾಗಿ ಹೋಗಲಿ, ನಶಿಸಿಹೋಗಲಿ. ದಾಹಕ್ಕೆ ನೀರಿತ್ತ ಈ ಕುಂಬಾರಕೇರಿ ಉದ್ದಾರವಾಗಲಿ.." . 

 ರಾಣಿಯ ಮನಸಿನಾಳದಿಂದ ಶಾಪದಂತೆ ಬಂದ ವಾಕ್ಯಗಳು, ಕುಂಬಾರಕೇರಿಯಲ್ಲಿ ಮಾರ್ದನಿಸಿತು. ಶಾಪವಿತ್ತ ರಾಣಿಯ ಜೀವ ಕುಂಬಾರ ರಾಜಯ್ಯನ ತೊಡೆಯ ಮೇಲೆ ನಿಸ್ತೇಜವಾಯಿತು. ಅವಳ ಅಂತರಾತ್ಮ ವಿಶ್ವಶಕ್ತಿಯಲ್ಲಿ ಲೀನವಾಯಿತು. 

ಕೆಲವೇ ವರುಷಗಳಲ್ಲಿ ರಾಣಿ ಹರಿಯಾಳ ದೇವಿಯ ಶಾಪ ಫಲಿಸಿತು. ವೈಭೋಗದ ಹೊಯ್ಸಳರ ರಾಜಧಾನಿ ದ್ವಾರಾವತಿ-ದ್ವಾರಸಮುದ್ರ ನಾಶವಾಯಿತು.  ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ದಕ್ಷಿಣ ಭಾರತವೇ ಅರಾಜಕತೆಗೆ ತಳ್ಳಲ್ಪಟ್ಟಿತು. ಪರಕೀಯರ ಆಳ್ವಿಕೆಗೆ ಕನ್ನಡನಾಡೂ ಸೇರಿದಂತೆ ಇಡೀ ದಕ್ಷಿಣ ಭಾರತವೇ ತಲೆಬಾಗಬೇಕಾಯಿತು.         

(ಮುಗಿಯಿತು)
----------------------*-------------------------------

ಟಿಪ್ಪಣಿ :

ರಾಜ ವಿರೂಪಾಕ್ಷ ಬಲ್ಲಾಳ :  
ಈತ ಹೊಯ್ಸಳ ಸಾಮ್ರಾಜ್ಯದ ಪ್ರಮುಖ ಅರಸು. ಹೊಯ್ಸಳರು ತಮ್ಮ ೩೫೦ ವರ್ಷಗಳ ಆಡಳಿತದಲ್ಲಿ ಎಂದೂ ಸಾರ್ವಭೌಮರಾಗಲೇ ಇಲ್ಲ , ಸಾಮಂತರಾಗಿಯೇ ಉಳಿದುಬಂದರು. ಇದ್ದುದರಲ್ಲಿ ಮಹಾರಾಜ "ವಿಷ್ಣುವರ್ಧನ " ಮತ್ತು ನಂತರ ಬಂದ "ವಿರೂಪಾಕ್ಷ ಬಲ್ಲಾಳ" ರು ಮಾತ್ರ ಸ್ವಯಂಪ್ರಭೆಯಿಂದ ಆಡಳಿತ ನಡೆಸಿದರು. ಬಲ್ಲಾಳರಾಯನು ಮೊದಮೊದಲು ದಕ್ಷತೆಯಿಂದ ಆಡಳಿತ ನಡೆಸಿದರೂ, ಅಂತ್ಯಕಾಲದಲ್ಲಿ, ಆಂತರಿಕ ಕಲಹಗಳು, ಅವಿವೇಕತನ, ವೈಚಾರಿಕತೆಯ ಕೊರತೆಯಿಂದ ಅದಕ್ಷನಾಗಿಬಿಟ್ಟನು. ಇದು ಪರಕೀಯರಿಗೆ ಸುಲಭದ ತುತ್ತಾಯಿತು. ಇವನ ನಂತರ ಬಂದ "ರಾಮನಾಥ" ಹಾಗೂ "ವಿಶ್ವನಾಥ" ಬಲ್ಲಾಳರು ನಾಮಕೆವಾಸ್ತೇ ರಾಜ್ಯಭಾರವನ್ನಷ್ಟೇ ನಡೆಸಿದರು. 
ಹೊಯ್ಸಳರ ಕಾಲಮಾನ ಮತ್ತು ನವ ಬಲ್ಲಾಳರ ವಂಶಾವಳಿಯನ್ನು ಸಂಶೋಧಕರ ಅಭಿಪ್ರಾಯದಂತೆ ಇಲ್ಲಿ ಕೊಟ್ಟಿದ್ದೇನೆ.

ಕಾಲಮಾನ                                       ರಾಜರುಗಳು
೧೦ ರಿಂದ ೧೧ ನೆಯ ಶತಮಾನ                 ೧) ನೃಪಕಾಮ (ಸಳ) ಹೊಯ್ಸಳರ  ಮೂಲಪುರುಷ 
                                                               (ರಾಜ ಎರೆಯಂಗ ?)
                                                        ೨) ಚನ್ನಮ್ಮ ದಂಡಾಧೀಶ
                                                        ೩) ವೀರಬಲ್ಲಾಳ 
                                                             ೪) ಬಿಟ್ಟಿದೇವ 
                                                            ( ರಾಜ ವಿಷ್ಣುವರ್ಧನ-ರಾಣಿ ಶಾಂತಲಾದೇವಿ)

೧೧ ರಿಂದ ೧೨ ನೆಯ ಶತಮಾನ              ೫) ಲಕ್ಷ್ಮೀ ನರಸಿಂಹ ಬಲ್ಲಾಳ
                                                      ೬) ೨ನೆಯ ನರಸಿಂಹ ಬಲ್ಲಾಳ

೧೨ ರಿಂದ ೧೩ ನೆಯ ಶತಮಾನ              ೭) ವಿರೂಪಾಕ್ಷಬಲ್ಲಾಳ
                                                       ೮) ರಾಮನಾಥ ಬಲ್ಲಾಳ
                                                       ೯) ವಿಶ್ವನಾಥ ಬಲ್ಲಾಳ

( ೧೩ ನೆಯ ಶತಮಾನದ ಆದಿಯಲ್ಲಿಯೇ ಹೊಯ್ಸಳರ ಪತನ ಪ್ರಾರಂಭವಾಯಿತು)

ದ್ವಾರಾವತಿ-ದ್ವಾರಸಮುದ್ರ
ಇದು ಹೊಯ್ಸಳರ ರಾಜಧಾನಿಯಾಗಿ ಮೆರೆದ ಊರು. ಇದೇ ಇಂದಿನ "ಹಳೇಬೀಡು" .  ಹರಿಯಾಳ ರಾಣಿಯ ಶಾಪವೋ , ಹೊಯ್ಸಳರಲ್ಲಿ ಬುಗಿಲೆದ್ದ ಆಂತರಿಕ ಕಲಹಗಳೊ, ಅಥವ ದ್ವಾರಾವತಿಯ ವೈಭೋಗದ ಮೇಲಿದ್ದ ಚಾಪಲ್ಯವೋ...ಅಂತೂ ೧೩ ನೆಯ ಶತಮಾನದ ಆದಿಭಾಗದಲ್ಲಿ ( ೧೩೨೯) ಅಲ್ಲಾವುದ್ದೀನ್ ಖಿಲ್ಜಿ ಮತ್ತು ಅವನ ದಂಡನಾಯಕ ಮಾಲಿಕಾಫರ್ ದಂಡಯಾತ್ರೆ ಕೈಗೊಂಡು ಹೊಯ್ಸಳ ಸಾಮ್ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ( ೮ ಬಾರಿ ದಾಳಿಯಾಯಿತೆಂದು ಕೆಲವರು ಅಭಿಪ್ರಾಯ ಪಡುತ್ತಾರೆ) , ಅಪಾರ ಸಂಪತ್ತನ್ನು ಶೇಕರಿಸಿಟ್ಟಿದ್ದ ಹಲವು ದೇವಾಲಯಗಳ ಮೇಲೂ ದಾಳಿ ನಡೆಸಿ ನಾಶಗೊಳಿಸುತ್ತಾರೆ. ದ್ವಾರಾವತಿ ಹಾಳಾದ ಬೀಡಾಗುತ್ತದೆ. ರಾಷ್ಟ್ರಕೂಟರ ಕಾಲದಲ್ಲೇ ಅಸ್ತಿತ್ವದಲ್ಲಿದ್ದ ಊರಾದ್ದರಿಂದ ದ್ವಾರಾವತಿಗೆ ಹಳೇಬಿಡು (Old setttlement, Old city)  ಎಂಬ ನಾಮವೂ ಬಂದಿದೆ. ಹಾಳಾದ ಊರು ಹಳೇಬೀಡು ಎನ್ನುವುದನ್ನು ನಾನು ಒಪ್ಪುವುದಿಲ್ಲ.  ಹಳೆಯ ಊರು ಹಳೇಬಿಡಾಗಿದೆ. ಹೀಗೆ ಹರಿಯಾಳ ರಾಣಿಯ ಶಾಪವೂ ಪಲಿಸಿದೆ. ಸುಮಾರು ೯೦೦ ವರ್ಷಗಳ ಇತಿಹಾಸ ಸಾರುವ ದೇವಾಲಯಗಳು ಇಂದಿಗೂ ಇಲ್ಲಿ ರಾರಾಜಿಸುತ್ತಿದೆ.

ನಖ(ಗ)ರೇಶ್ವರ-ಹೊಯ್ಸಳೇಶ್ವರ :
 ಕತೆಯಲ್ಲಿ ಪ್ರಸ್ತಾಪವಾಗಿರುವ ಈ ಎರಡು ಆಲಯಗಳು ದ್ವಾರಾವತಿಯಲ್ಲೇ( ಹಳೇಬೀಡು) ಇದೆ.  ವಿಷ್ಣುವರ್ಧನನ ಕಾಲದಲ್ಲಿ ಪ್ರಾರಂಭವಾದ ಈ ದೇವಾಲಯಗಳ ನಿರ್ಮಾಣ ವಿರೂಪಾಕ್ಷ ಬಲ್ಲಾಳನ ಕಾಲದಲ್ಲಿ ಮುಕ್ತಾಯವಾಯಿತೆಂದು ಅಭಿಪ್ರಾಯವಿದೆ. ( ಸುಮಾರು ನಾಲ್ಕುತಲೆಮಾರುಗಳ ಕಾಲ) . ನಗರೇಶ್ವರ ದೇವಾಯಲವೇ ಅತಿ ಮುಖ್ಯ ದೇವಾಲಯವಾಗಿದ್ದು, ಇದು ರಾಜ ಪರಿವಾರದ ದೇವಾಲಯವೂ ಆಗಿತ್ತು. ಸಮಸ್ತ ಸಂಪತ್ತೂ ಇಲ್ಲೇ ಶೇಖರವಾಗಿತ್ತೆನ್ನಲಾಗಿದೆ. ಅರಮನೆಗೆ ಸನಿಹದಲ್ಲೇ ಇದೆ.
ಆದ್ದರಿಂದ ಪರಕೀಯರ ದಾಳಿಯಾದಾಗ ಮೊದಲು ಬಲಿಯಾಗಿದ್ದು ನಗರೇಶ್ವರ ದೇವಾಲಯ ಮತ್ತು ಅರಮನೆ. ಇಂದು ಅರಮನೆಯ ತಳಪಾಯ ಮತ್ತು ದೇವಾಲಯದ ಜಗತಿಯನ್ನು (Flatform) ಮಾತ್ರ ಕಾಣಬಹುದಾಗಿದೆ !. ಅಷ್ಟರಮಟ್ಟಿಗೆ ದಾಳಿಗೆ  ತುತ್ತಾಗಿದೆ. ಇದು ಇಂದು ಪ್ರವಾಸಿಗರು ದರ್ಶಿಸುತ್ತಿರುವ ಹೊಯ್ಸಳೇಶ್ವರ ದೇವಾಲಯಕ್ಕಿಂತಲೂ ಎರಡು ಪಟ್ಟು ದೊಡ್ಡ ವಿಸ್ತಾರವನ್ನು ಹೊಂದಿದೆ.   ಹೊಯ್ಸಳ ಸಾಮ್ರಾಜ್ಯಕ್ಕೆ ಇದೇ ಮುಖ್ಯ ದೇವಾಲಯವಾಗಿತ್ತು.

ಹೊಯ್ಸಳೇಶ್ವರ ದೇವಾಲಯ , ಬಲ್ಲಾಳರಾಯನ ಮಂತ್ರಿ ಕಟ್ಟಿಸಿದನೆಂಬ ಪ್ರತೀತಿಯೆದೆ. ರಾಜ ವಂಶದ ಹೆಸರಿನಲ್ಲಿ ಕಟ್ಟಿಸಿರುವ ಶಿವನ ದೇವಾಲಯವಿದು.  ಅಂದಿನ ಕಾಲಕ್ಕೆ ಇದೊಂದು ಸಾಮಾನ್ಯ ದೇವಾಲಯವಾಗಿತ್ತು. (Just like Out house !). ಇಂದು ನಮಗೆ ಇದೇ ವಿಸ್ಮಯಗಳ ಆಗರ !. ಇಲ್ಲಿ ರಾಜಧನ ಸಂಪತ್ತುಗಳನ್ನೇನೂ ಇಟ್ಟಿರಿಲಿಲ್ಲವೆಂದು ತಿಳಿದುಬರುತ್ತದೆ. ಆದ್ದರಿಂದ ಇಡೀ ದ್ವಾರಾವತಿಯಲ್ಲಿ ಸದ್ಯಕ್ಕೆ ಇದೊಂದೇ ದೇವಾಲಯ ಸುಸ್ಥಿತಿಯಲ್ಲಿದೆ (Active temple)  !.  ಇಂದು ಸಂದರ್ಶಕರು-ಪ್ರವಾಸಿಗರು  ಅದ್ಭುತವೆಂದು ಮಾರುಹೋಗುವ ದೇವಾಲಯವೂ ಇದೇ ಆಗಿದೆ. ನಗರೇಶ್ವರ ಆಲಯವೇನಾದರೂ ಸುಸ್ಥಿತಿಯಲ್ಲಿದ್ದಿದ್ದರೆ..???? ಹೇಗಿರಬಹುದಿತ್ತು ಅದರ ವೈಭವ ? ನೀವೇ ಊಹಿಸಿಕೊಳ್ಳಿ !. ದ್ವಾರಾವತಿಯಲ್ಲಿದ್ದ ನೂರಾರು ಜೈನ ಬಸದಿಗಳು ಹತ್ತಾರು ಶಿಲ್ಪಕಲಾ ವೈಭವದ ಆಲಯಗಳು ದಾಳಿಗೆ ತುತ್ತಾಗಿ ಹಾಳಾಗಿದ್ದರೆ, ಹೊಯ್ಸಳೇಶ್ವರ ದೇವಾಲಯವೊಂದೆ ನಮಗಾಗಿ ಉಳಿದುಕೊಂಡಿರುವುದು (Still active-worshipping) .  ಈ ಎಲ್ಲಾ ಅವಶೇಷಗಳು ಮತ್ತು ಆಲಯಗಳು ಇಂದು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲ್ಪಟ್ಟು ಕೇಂದ್ರಸರ್ಕಾರದ ಅಧೀನದಲ್ಲಿದೆ ( Archeological Survey of India). ಸದ್ಯದಲ್ಲೇ ವಿಶ್ವಪರಂಪರೆಯ ತಾಣವಾಗುವ ಭಾಗ್ಯವೂ ಇದಕ್ಕೆ ಒದಗಿಬರಲಿದೆ.

ಲಕ್ಷ್ಮಣ-ವೀರೇಶ :  
ಇವರಿಬ್ಬರನ್ನು ಶೂಲಕ್ಕೇರಿಸಿದ ಸ್ಥಳವನ್ನು ಇಂದು ಸ್ಮಾರಕವನ್ನಾಗಿ ಗುರ್ತಿಸಲಾಗಿದೆ. ಇದಕ್ಕೆ ಶೂಲವನವೆಂದೂ ಕರೆಯಲಾಗುತ್ತದೆ. ಸನಿಹದಲ್ಲೇ ಮನಸೆಳೆಯುವ ಕಲ್ಯಾಣಿಯೂ(ನೀರಿನ ಕೊಳ) ಇದೆ. ಗ್ರಾಮ್ಯ ಭಾಷೆಯಲ್ಲಿ ಇದು "ಲಕ್ಕಣ್ಣ -ವೀರಣ್ಣ" ಎಂದು ಕರೆಯಲಾಗಿ ಎರಡು ವೀರಗಲ್ಲುಗಳನ್ನೂ ಕೆತ್ತಿಸಲಾಗಿದೆ (೧೩ ನೆಯ ಶತಮಾನದಲ್ಲಿ) . ಈ ವೀರಗಲ್ಲುಗಳಿಗೆ ಇಂದು ಧಾರ್ಮಿಕ ವಿಧಿಗಳು ಸಲ್ಲುತ್ತಿದೆ !. ಇದು ಹಳೇಬಿಡಿನಿಂದ ೨ ಕಿ.ಮೀ. ದೂರದಲ್ಲಿದೆ. 

ರಾಣಿ ಹರಿಯಾಳ ದೇವಿಯ ಶಾಪವೋ, ಆಕ್ರಮಣಕ್ಕೆ ತುತ್ತಾಗಿಯೊ ಹೊಯ್ಸಳಸಾಮ್ರಾಜ್ಯನಾಶವಾಗುವುದರೋದಿಗೆ ಮುಂದೆ ದಕ್ಷಿಣಭಾರತದಲ್ಲಿ ಅರಾಜಕತೆಯುಂಟಾಗುತ್ತದೆ . ದ್ವಾರವತಿ ಹಳೇಬೀಡಾದರೂ, ಇಲ್ಲಿ ಇಂದಿಗೂ ಕುಂಬಾರಕೇರಿ ಉರ್ಜಿತವಾಗಿರುವುದು ಮತ್ತೊಂದು ವಿಶೇಷ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರವೇ ಕನ್ನಡನಾಡು ಮತ್ತೆ ಉದಯಿಸಿದ್ದು. ವಿಜಯನಗರ ನಾಯಕರುಗಳ ಕಾಲದಲ್ಲಿ ದ್ವಾರಾವತಿಯ ಹಲವು ದೇವಾಲಯಗಳಿಗೆ ಕಾಯಕಲ್ಪವನ್ನು ನೀಡಲಾಗಿದೆ.  

ಇದು ಹೊಯ್ಸಳ ಇತಿಹಾಸದ-ಪ್ರಸ್ತುತ ಸ್ಥಿತಿಯ ಅತ್ಯಂತ ಸಂಕ್ಷಿಪ್ತ ವಿವರ. ಕತೆಯಲ್ಲಿ ಉದ್ಭವಿಸಿರಬಹುದಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಮಾಡಿದ್ದೇನೆ. ನಿಮ್ಮ ಸಲಹೆಗಳನ್ನು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇನೆ. ...


ವಂದನೆಗಳೊಂದಿಗೆ...