Jun 15, 2013

ಕೆಳದಿ /ಕೆಳದಿ ಸಂಸ್ಥಾನ


ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತುದಾಗಿಯೂ ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.೧೫೦೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು. ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ೬೦ ವರ್ಷಗಳ ಕಾಲ ಇವನ ವಂಶದವರ ರಾಜಧಾನಿಯಾಗಿ ಅನಂತರ ರಾಜಧಾನಿ ಮೊದಲು ಇದರ ಸಮೀಪದಲ್ಲಿಯೇ ಇದ್ದ ಇಕ್ಕೇರಿಗೂ ಅನಂತರ ಬಿದನೂರಿಗೂ ಬದಲಾಯಿಸಲಾಯಿತಾದರೂ ಈ ಊರು ನಾಯಕರ ಆಳ್ವಿಕೆ ಕೊನೆಗೊಳ್ಳುವವರೆಗೂ ಆ ರಾಜ್ಯದ ಒಂದು ಪ್ರಮುಖ ನಗರವಾಗಿಯೇ ಮುಂದುವರೆಯಿತು. ಆದರೆ ಅನಂತರ ಇದರ ಪ್ರಾಮುಖ್ಯತೆ ಇಳಿಮುಖವಾಗಿ ಕಡೆಗೆ ಒಂದು ಸಾಮಾನ್ಯವಾದ ಹಳ್ಳಿಯಾಗಿ ಉಳಿಯಿತು. ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ ದೇವಾಲಯಗಳೂ, ಕೆರೆ, ಮಠಗಳೂ ಅದರ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ. ಇಲ್ಲಿ ಹೊಯ್ಸಳ-ದ್ರಾವಿಡ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯ ಪ್ರಖ್ಯಾತವಾಗಿದೆ.

ಕೆಳದಿ ಸಂಸ್ಥಾನ

ಹದಿನಾರೆನೆಯ ಶತಮಾನದ ಆರಂಭದಿಂದ ಹದಿನೆಂಟನೆಯ ಶತಮಾನದ ಉತ್ತರಾರ್ಧದವರೆವಿಗೂ ಸಮೃಧ್ಧಿಯ ತಾಣವಾಗಿ ಮೆರೆದದ್ದು ಕೆಳದಿ ಸಂಸ್ಥಾನ. ಕರ್ನಾಟಕದ ಮಲೆನಾಡು ಮತ್ತು ಕರಾವಳಿಯ ಭಾಗಗಳೆರಡನ್ನೂ ತನ್ನ ಆಳ್ವಿಕೆಯಡಿಯಲ್ಲಿ ಇಟ್ಟುಕೊಂಡಿದ್ದರು ಈ ಪ್ರಾಂತ್ಯದ ಅರಸರು. ಕೆಳದಿ ಸಂಸ್ಥಾನವನ್ನು ಆಳಿದ ಅರಸರು ಮೊದಲಿಗೆವಿಜಯನಗರದ ಅರಸರು ಸಾಮಂತರಾಗಿದ್ದು ಅವರ ಪತನಾನಂತರ ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ರೂಢಿಸಿಕೊಂಡರು. ಗಂಡಭೇರುಂಡ ಇವರ ಲಾಂಛನವಾಯಿತು.

ಈ ಸಂಸ್ಥಾನದ ರಾಜಧಾನಿಗಳು ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ೮ ಕಿ.ಮೀ. ದೂರದ ಕೆಳದಿ , ೫ ಕಿ.ಮೀ. ದೂರದ ಇಕ್ಕೇರಿ , ಹೊಸನಗರ ತಾಲ್ಲೂಕಿನಲ್ಲಿರುವಬಿದನೂರು(ನಗರ) ಮತ್ತು ತೀರ್ಥಹಳ್ಳಿಗೆ ೧೫ ಕಿ.ಮೀ. ದೂರದಲ್ಲಿರುವ ಕವಲೆದುರ್ಗ.
ಆರಂಭದಲ್ಲಿ ಕೇವಲ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಎಲಗಳಲೆ, ಮೇದೂರು, ಕಲಸೆ, ಲಾತವಾಡಿ ಸೇರಿದಂತೆ ಎಂಟು ಮಾಗಣೆ(ವಿಭಾಗ) ಗಳನ್ನು ಒಳಗೊಂಡಿದ್ದ ಈ ಸಂಸ್ಥಾನವು ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಚಿಕ್ಕಮಗಳೂರು ಜಿಲ್ಲೆಹಾಸನ ಜಿಲ್ಲೆದಕ್ಷಿಣ ಕನ್ನಡ ಜಿಲ್ಲೆ ಗಳ ಬಹುಭಾಗ ಮತ್ತು ಧಾರವಾಡ ಜಿಲ್ಲೆಚಿತ್ರದುರ್ಗ ಜಿಲ್ಲೆಉತ್ತರಕನ್ನಡ ಜಿಲ್ಲೆ ಗಳ ಕೆಲವು ಭಾಗಗಳ ಪ್ರಭುತ್ವವನ್ನು ಸಾಧಿಸಿದ್ದಲ್ಲದೆ ಕೇರಳ ರಾಜ್ಯದ ಕೆಲವು ಭಾಗಗಳನ್ನೂ ಒಳಗೊಂಡಿತ್ತು.

ವಾಣಿಜ್ಯ-ಉತ್ಪನ್ನಗಳು

ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಆಡಳಿತ ಸೌಕರ್ಯಕ್ಕಾಗಿ ಹಲವು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕೆಳದಿಯ ಪ್ರಸಿದ್ಧ ಅರಸನಾದ ಶಿವಪ್ಪನಾಯಕನು ಜಾರಿಗೆ ತಂದಿದ್ದ ಕಂದಾಯ ವ್ಯವಸ್ಥೆ(ಶಿವಪ್ಪನಾಯಕನ ಶಿಸ್ತು)ಯಿಂದಾಗಿ ಕೃಷಿಕರೂ ನ್ಯಾಯವಾದ ಕಂದಾಯವನ್ನು ಸಲ್ಲಿಸುವಂತಾಗಿತ್ತು.

ಇಲ್ಲಿಯ ಪ್ರಮುಖ ಉತ್ಪನ್ನಗಳಾದ ಮೆಣಸು, ಅಡಿಕೆ, ತಂಬಾಕು, ಶ್ರೀಗಂಧ, ಏಲಕ್ಕಿ, ಜೀರಿಗೆ, ಇಂಗು, ಸಾಸಿವೆ, ತೆಂಗು, ಅರಿಸಿನ ಮುಂತಾದ ನೈಸರ್ಗಿಕ ವಸ್ತುಗಳ ಜೊತೆಗೆ ರೇಷ್ಮೆ, ಬೆಲ್ಲ, ಹತ್ತಿಯಬಟ್ಟೆ ಮುಂತಾದ ಉತ್ಪನ್ನಗಳನ್ನು ಇಲ್ಲಿನ ನಿಡಿದಾದ ಕರವಳಿಯ ಬಂದರಿನ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಬದಲಾಗಿ ಅರಬ್ಬೀ ಕುದುರೆಗಳು, ಅನೇಕ ಬೆಲೆಬಾಳುವ ವಿದೇಶಿ ಪದಾರ್ಥಗಳು ಆಮದಾಗುತ್ತಿದ್ದವು. ಇದರೊಂದಿಗೆ ಪಶ್ಚಿಮಸಮುದ್ರದ ಮೂಲಕ ವಿದೇಶಗಳಿಗೆ ಹೋಗಬೇಕಿದ್ದ ಎಲ್ಲ ಸರಕುಗಳೂ ಇಲ್ಲಿಯಸುಂಕದಕಟ್ಟೆಯ ಮೂಲಕವೇ ಹಾದು ಹೋಗಬೇಕಾಗಿದ್ದಿದ್ದರಿಂದ ಅಪಾರವಾದ ಸುಂಕವು ಸಂಗ್ರಹವಾಗುತ್ತಿತ್ತು.

ಸಾಂಸ್ಕೃತಿಕ ಅಂಶಗಳು 

ಕೆಳದಿ ಅರಸರ ಕಾಲದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂಬುಕೊಡಲಾಯಿತು. ಶಿವಮೊಗ್ಗೆಯಲ್ಲಿರುವ ಶಿವಪ್ಪನಾಯಕನ ಅರಮನೆ, ಕೆಳದಿಯ ರಾಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಬಿದನೂರು ಆಂಜನೇಯ ದೇವಾಲಯ, ಕೋಟೆಗಳು, ಗುಡ್ಡೆ ವೆಂಕಟರಮಣ ದೇವಾಲಯ, ನೀಲಕಂಠೇಶ್ವರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ, ನಗರದ ಬಳಿ ಇರುವ ದೇವಗಂಗೆ ಮುಂತಾದವು ಕೆಳದಿ ಅರಸರ ವಾಸ್ತುಶಿಲ್ಪ ಚಾತುರ್ಯವನ್ನು ಹೇಳುತ್ತವೆ.

'ಸರ್ಪಬಂಧ'ದ ಸುಂದರ ಕೆತ್ತನೆ
ಈ ಅರಸರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಯ ಕವಿ-ವಿದ್ವಾಂಸರಿಗೆ ಆಶ್ರಯವನ್ನಿತ್ತಿದ್ದರು. ಅರಸರೂ ಸಹ ಕವಿ-ವಿದ್ವಾಂಸರುಗಳಾಗಿದ್ದು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹಿರಿಯ ವೆಂಕಟಪ್ಪನಾಯಕನು ಶಿವಗೀತಾವ್ಯಾಖ್ಯಾ , ವೀರಮಾಹೇಶ್ವರ ಸುಧಾವಾರ್ಧಿ , ಹಾಗೂ ತತ್ವಾಧಿಕಾರ ನಿರ್ಣಯಂ ಎಂಬ ಮೂರು ಕೃತಿಗಳನ್ನು ಬರೆದಿದ್ದಾನೆ. ಹಿರಿಯ ಬಸವಪ್ಪನಾಯಕನು ಶಿವತತ್ವರತ್ನಾಕರ , ಸುಭಾಷಿತ ಸುರದ್ರುಮಸೂಕ್ತಿ ಸುಧಾಕರ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ಲಿಂಗಣ್ಣ ಕವಿಯ ಕೆಳದಿ ನೃಪವಿಜಯಂ , ಗಂಗಾದೇವಿಯಕೆಳದಿ ರಾಜ್ಯಾಭ್ಯುದಯಂ , ತಿರುಮಲ ಭಟ್ಟನ ಕರ್ನಾಟಕ ಶಿವಗೀತೆ , ಪರಮದೇವನ ತುರಂಗ ಭಾರತ ಮುಂತಾದವು ಈ ಕಾಲದ ಪ್ರಸಿದ್ಧ ಕೃತಿಗಳು.

ಕೆಳದಿ ನಾಯಕರ ವಂಶಾವಳಿ

ಕೆಳದಿ ಅರಸರ ಕಾಲದ ಸಾಹಿತ್ಯ ಮತ್ತು ಅಂದಿನ ಶಾಸನಗಳ ವಿಚಾರಗಳನ್ನು ಅನುಸರಿಸಿ ಕೆಳದಿ ನಾಯಕರ ಕಾಲವನ್ನು ಸಂಶೋಧಕರು ಅಂದಾಜಿಸಿದ್ದಾರೆ.

  • ಚೌಡಗೌಡ (ಸುಮಾರು ೧೫೦೦-೧೫೩೦)
ಚೌಡಪ್ಪನಾಯಕ ಎಂದೂ ಹೆಸರಾದ ಈತ ಪಳ್ಳಿಚೈಲು ಎಂಬ ಹಳ್ಳಿಯಲ್ಲಿ ರೈತ ದಂಪತಿಗಳ ಮಗನಾಗಿ ಜನಿಸುತ್ತಾನೆ. ಸ್ವಸಾಮರ್ಥ್ಯದಿಂದ ತನ್ನದೇ ಪಾಳೆಯಪಟ್ಟನ್ನು ಕಟ್ಟಿಕೊಂಡು ನಾಯಕನಾಗಿ ಬೆಳೆಯುತ್ತಾನೆ.
  • ಸದಾಶಿವ ನಾಯಕ (ಸುಮಾರು ೧೫೩೦-೧೫೬೭)
ಚೌಡಪ್ಪನಾಯಕನ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವನು ಸದಾಶಿವ ನಾಯಕ. ಕಿರಿಯವನು ಭದ್ರಪ್ಪನಾಯಕ. ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು (೧೫೬೭ ರಿಂದ೧೫೮೨)ವರುಷಗಳ ರಾಜ್ಯಭಾರ ಮಾಡುತ್ತಾರೆ.
  • ವೆಂಕಟಪ್ಪ ನಾಯಕ (೧೫೮೨-೧೬೨೯)
ಸಮರ್ಥ ಅರಸನಾಗಿದ್ದ ಈತನ ಕಾಲ್ದಲ್ಲಿ ಸಂಸ್ಥಾನವು ಸಂಪೂರ್ಣ ಸ್ವತಂತ್ರವಾಗುತ್ತದೆ. ಕೆಳದಿಯ ಮೇಲೆ ದಂಡೆತ್ತಿ ಬರುವ ಬಿಜಾಪುರದ ಸುಲ್ತಾನನನ್ನು ಸೋಲಿಸಿ ಅದರ ಸಂಕೇತವಾಗಿ ಹಾನಗಲ್ನಲ್ಲಿ ವಿಜಯಸ್ಥಂಭವನ್ನು ಸ್ಥಾಪಿಸುತ್ತಾನೆ. ಈತನ ಮೊಮ್ಮಗನಾದ ವೀರಭದ್ರ ನಾಯಕನ(೧೬೨೯-೧೬೪೫) ಕಾಲದಲ್ಲಿ ರಾಜ್ಯವು ಪದೇಪದೆ ಅನ್ಯರ ಧಾಳಿಗೆ ತುತ್ತಾಗುತ್ತದೆ. ಪೋರ್ಚುಗೀಸರು ಮತ್ತು ಆದಿಲ್ ಶಾಹಿಗಳು ಕೆಳದಿಯನ್ನು ಕಬಳಿಸಲು ಯತ್ನಿಸುತ್ತಾರೆ.
  • ಶಿವಪ್ಪನಾಯಕ (೧೬೪೫-೧೬೬೦)
ಕೆಳದಿ ಸಂಸ್ಥಾನವು ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದು ಈತನ ಕಾಲದಲ್ಲೆ. ರಾಜಧಾನಿಯಾಗಿದ್ದಬಿದನೂರುನಗರವನ್ನು ಅಭಿವೃದ್ಧಿಪಡಿಸಿ ಕೋಟೆಗಳನ್ನು ನಿರ್ಮಿಸಿದನು. ದೇಶದ ನಾನಾ ಭಾಗಳ ವ್ಯಾಪಾರಿಗಳನ್ನೂ ಕುಶಲಕರ್ಮಿಗಳನ್ನೂ ಆಕರ್ಷಿಸಿ ವ್ಯಾಪಾರ-ವಾಣಿಜ್ಯವನ್ನು ಉತ್ತಮಪಡಿಸಿದನು. ಈತನ ಆಡಳಿತ ವ್ಯವಸ್ಥೆಯು ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಯಿತು. ಪೋರ್ಚುಗೀಸರನ್ನೂ ಸೋಲಿಸಿದ ಹೆಗ್ಗಳಿಕೆ ಇವನದು. ಇವನ ನಂತರ ೧೨ ವರುಷಗಳ ಕಾಲ ಕೆಳದಿಯ ವೈಭವವು ಕೊಂಚ ಮಂಕಾಯಿತು.
  • ಎರಡನೆ ವೆಂಕಟಪ್ಪ ನಾಯಕ (೧೬೬೦-೧೬೬೧)
  • ಭದ್ರಪ್ಪ ನಾಯಕ (೧೬೬೧-೧೬೬೩)
  • ಹಿರಿಯ ಸೋಮಶೇಖರ ನಾಯಕ(೧೬೬೩-೧೬೭೧)
  • ಚೆನ್ನಮ್ಮ (೧೬೭೧-೧೬೯೭)
ಹಿರಿಯ ಸೋಮಶೇಖರ ನಾಯಕನ ಪತ್ನಿಯಾದ ಈಕೆಯು ಮಂಕಾಗಿದ್ದ ಕೆಳದಿ ಸಂಸ್ಥಾನವನ್ನು ತನ್ನ ಸಾಹಸ ಹಾಗೂ ಸಾಮರ್ಥ್ಯಗಳಿಂದ ಉತ್ತಮಗೊಳಿಸಿದಳು. ಹುಲಿಕೆರೆ ಎಂಬಲ್ಲಿ ಕೋಟೆಯನ್ನು ಕಟ್ಟಿಸಿ ಅದಕ್ಕೆ ಚೆನ್ನಗಿರಿ ಎಂದು ಹೆಸರಿಟ್ಟಳು.ಶಿವಾಜಿಯ ಮಗನಾದ ರಾಜಾರಾಮನಿಗೆ ಆಶ್ರಯವನ್ನು ನೀಡಿ ಔರಂಗಜೇಬನಂತಹ ಪ್ರಬಲನನ್ನು ಎದುರಿಸಿದ ದಿಟ್ಟೆ ಈಕೆ.
  • ಬಸವಪ್ಪನಾಯಕ (೧೬೯೨-೧೭೧೪)
  • ಇಮ್ಮಡಿ ಸೋಮಶೇಖರ ನಾಯಕ (೧೭೧೪-೧೭೩೧)
  • ಇಮ್ಮಡಿ ಬಸವಪ್ಪ ನಾಯಕ (೧೭೩೧-೧೭೫೪)
  • ವೀರಮ್ಮಾಜಿ -ಚೆನ್ನಬಸವನಾಯಕ
ಇಮ್ಮಡಿ ಬಸವಪ್ಪ ನಾಯಕನ ಕಾಲದವರೆವಿಗೂ ಉತ್ತಮವಾಗಿಯೇ ಇದ್ದ ಆಡಳಿತವು ವೀರಮ್ಮಾಜಿಯ ಕಾಲದಲ್ಲಿ ಹಿಡಿತ ತಪ್ಪಿ ಗೊಂದಲಗಳ ಗೂಡಾಗುತ್ತದೆ. ಈಕೆಯ ಮಗನಾದ ಚೆನ್ನಬಸವ ನಾಯಕ(೧೭೫೪-೧೭೫೬)ನು ಸಮರ್ಥನಾಗಿದ್ದರೂ ಸಹ ಅಧಿಕಾರವನ್ನು ಬಿಟ್ಟುಕೊಡದ ತಾಯಿ ಮತ್ತು ಆಂತರಿಕ ಹಿತಾಸಕ್ತಿಗಳ ದೆಸೆಯಿಂದ ಈತನಿಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ದೌರ್ಬಲ್ಯವನ್ನು ಅರಿಯುವ ಹೈದರಾಲಿಯು ಕೆಳದಿಯ ಮೇಲೆ ಆಕ್ರಮಣ ಮಾಡುವುದರೊಂದಿಗೆ ಸಂಸ್ಥಾನವು ಅವನತಿಯ ಹಾದಿಯನ್ನು ಹಿಡಿಯುತ್ತದೆ.

ಕೆಳದಿ ನಾಯಕರ ನಾಣ್ಯಗಳು

ಕೆಳದಿ ನಾಯಕರು ವಿಜಯನಗರದ ನಾಣ್ಯ ಪಧ್ಧತಿಯನ್ನೇ ಅನುಕರಿಸಿದ್ದಾರೆ. ನಮೂನೆ, ಚಿಹ್ನೆ ಮತ್ತು ತೂಕಗಳಲ್ಲಿ ಸಾಮ್ಯತೆಯು ಕಂಡುಬರುತ್ತದೆ. ಕೆಳದಿ ರಾಜ್ಯದ ಟಂಕಶಾಲೆಯು ಬಿದನೂರು ಮತ್ತು ಇಕ್ಕೇರಿ ಗಳಲ್ಲಿ ಇದ್ದೀತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಾಸನಗಳು ಮತ್ತು ಬರೆಹಗಳನ್ನು ಆಧರಿಸಿ ನಾಯಕರ ಕಾಲದ ನಾಣ್ಯ ಪದ್ಧತಿಯ ಕೋಷ್ಟಕವನ್ನು ಹೀಗೆ ರಚಿಸಲಾಗಿದೆ.

  • ವರಹ = ಗದ್ಯಾಣ =೫೨ ಗ್ರೈನ್ = ೨ ಹೊನ್ನು
  • ೧ ಹೊನ್ನು = ೨ ಧರಣ = ೨೬ ಗ್ರೈನ್ = ೫ ಹಣ
  • ೩/೪ ಹಣ = ಮುಪ್ಪಾಗ = ೩.೫ ಗ್ರೈನ್
  • ೧ ಹಣ =೨ ಅಡ್ಡ = ೫ ಗ್ರೈನ್
  • ೧ ಅಡ್ಡ = ೨ ಹಾಗ = ೨.೫ ಗ್ರೈನ್
  • ೧ ಹಾಗ = ೨ ಬೇಳೆ = ೧.೨೫ ಗ್ರೈನ್
  • ೧ ಹಾಗ = ೪ ವೀಸ = ೧.೨೫ ಗ್ರೈನ್
  • ೧ ವೀಸ = ೨ ಅರೆವೀಸ = ೦.೬ ಗ್ರೈನ್
  • ೧ ಹಾಗ = ೧೬ ಕಾಸು = ೧.೨೫ ಗ್ರೈನ್
  • ೧ ತಾರ = ೪ ಕಾಸು
  • ೧ ಅರೆವೀಸ = ೨ ಕಾಸು
ಕೆಳದಿ ನಾಯಕರ ಚಿನ್ನದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಪ್ರಸಿದ್ಧವಾದ ಇಕ್ಕೇರಿ ವರಹವನ್ನು ಸದಾಶಿವ ನಾಯಕನು ಅಚ್ಚುಮಾಡಿಸಿದನೆಂದು ಹೇಳಲಾಗಿದೆ. ಈ ನಮೂನೆಯ ನಾಣ್ಯದ ಒಂದು ಬದಿಯಲ್ಲಿ ಶಿವ-ಪಾರ್ವತಿಯರ ಚಿತ್ರವಿದ್ದು ಇನ್ನೊಂದು ಬದಿಯಲ್ಲಿ ಶ್ರೀ ಸದಾ/ಶಿವ ಎಂದು ನಾಗರಿ ಯಲ್ಲಿ ಬರೆಯಿಸಲಾಗಿದೆ. ಹಾಗೆಯೇ ಗಂಡಭೇರುಂಡ, ನಂದಿಯ ಚಿತ್ರಗಳೂ ನಾಣ್ಯಗಳಲ್ಲಿ ಕಂಡುಬರುತ್ತದೆ.

***( ಈ ಲೇಖನ ಕನ್ನಡ ವಿಕಿಪೀಡಿಯಕ್ಕೆ ಬರೆದಿದ್ದು. ಅದನ್ನೇ ಹೇಗಿತ್ತೋ ಹಾಗೆ ಇಲ್ಲಿ ಹಾಕಿದ್ದೇನೆ. ಬ್ಲಾಗ್ update ಮಾಡದೆ ಬಹಳ ದಿನಗಳಾಗಿತ್ತು. ಹೀಗಾದರೂ ಬ್ಲಾಗ್ ಜೀವಂತವಾಗಿರಲಿ ಎಂಬ ಆಸೆ :) . ಈ ಲೇಖನದ ಮೊದಲ ಪ್ಯಾರಾವನ್ನು ಬೇರೆ ಯಾರೋ ಬರೆದಿದ್ದಾರೆ (ಬಹುಶಃ ಎಮ್.ಜಿ. ಹರೀಶ್ ಇರಬೇಕು). ಅವರಿಗೆ ನನ್ನ ಕೃತಜ್ಞತೆಗಳು. ಮಿಕ್ಕ ಮಾಹಿತಿಗಳನ್ನು ಕಲೆಹಾಕಿ ಬರೆದಿದ್ದೇನೆ. ) ***