ಗರುಡ ಮತ್ತು ಅರುಣ ಎಂಬ ಹೆಸರುಗಳನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಸಾಮಾನ್ಯವಾಗಿ ಗರುಡಪಕ್ಷಿಯನ್ನು ವಿಷ್ಣುವಿನ ವಾಹನವನ್ನಾಗಿಯೂ ಮತ್ತು ಅರುಣನನ್ನು ಸೂರ್ಯನ ಸಾರಥಿಯನ್ನಾಗಿಯೂ ವರ್ಣಿಸಿರುವುದನ್ನು ಓದಿ, ಕೇಳಿ ತಿಳಿದಿರುತ್ತೇವೆ. ಹಾಗಾದರೆ ಈ ಅರುಣ ಯಾರು ? ಮತ್ತು ಗರುಡಪಕ್ಷಿಗೂ ನಾಗಗಳಿಗೂ (ಹಾವುಗಳು) ವೈರತ್ವವೇಕೆ ?. ಇದಕ್ಕೆ ಸಂಬಂಧಿಸಿದಂತೆ ಗರುಡಪುರಾಣ ಮತ್ತು ಮಹಾಭಾರತದಲ್ಲಿ ಸೊಗಸಾದ ಕತೆಯೊಂದಿದೆ. ಕೆಳಗಿನ ಶಿಲ್ಪಚಿತ್ರವನ್ನು ಗಮನಿಸುತ್ತಾ ಚಿತ್ರದಲ್ಲಿ ಅಡಕವಾಗಿರುವ ಪುರಾಣೋಕ್ತ ವಿವರಣೆಗಳನ್ನು ತಿಳಿಯೋಣ.
ಮೊದಲಿಗೆ, ಅತ್ಯಂತ ಸುಂದರವಾದ ಮೇಲಿನ ಶಿಲ್ಪಕಲಾಚಿತ್ರವನ್ನು ಗಮನಿಸಿದಾಗ ಗರುಡಪಕ್ಷಿಯು ನಾಗಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವುದನ್ನು ಗಮನಿಸಬಹುದಾಗಿದೆ. ಈ ಶಿಲ್ಪಚಿತ್ರವು ಸುಮಾರು ೯೦೦ ವರುಷಗಳಷ್ಟು ಪುರಾತನವಾದ ಹೊಯ್ಸಳರ ಕಾಲದ ದೇವಾಲಯವೊಂದರಲ್ಲಿ ಕಂಡುಬಂದಿರುತ್ತದೆ. ಗರುಡ ಮತ್ತು ನಾಗಗಳ ರಚನೆ , ಶಿಲ್ಪದಲ್ಲಿರುವ ಸಹಜತೆ, ಸೂಕ್ಷ್ಮಕೆತ್ತನೆಗಳನ್ನು ಗಮನಿಸಿದಾಗ ಶಿಲ್ಪಕಾರರಲ್ಲಿ ಇದ್ದಂತಹ ಸಮರ್ಪಣಾ ಮನೋಭಾವ , ತಾಳ್ಮೆ, ಸಂಸ್ಕೃತಿಯ ಅರಿವಿನ ಬಗೆಗೆ ಆಸಕ್ತಿ ಮೂಡುವುದರೊಂದಿಗೆ ಆಶ್ಚರ್ಯವೂ ಆಗುತ್ತದೆ. ಒಂದು ಶಿಲ್ಪ ವಿಗ್ರಹವನ್ನು ಕಡೆಯುವುದರ ಮೂಲಕ ಪುರಾಣದಲ್ಲಿರುವ ವಿಶಿಷ್ಟ ಘಟನೆಯೊಂದನ್ನು ಶಿಲ್ಪಿಯು ಹೇಳಿರುತ್ತಾನೆ. ಆ ಕತೆಯು ಹೀಗೆ ಪ್ರಾರಂಭವಾಗುತ್ತದೆ.
ಚತುರ್ಮುಖ ಬ್ರಹ್ಮನ ಮಗನಾದ ಕಶ್ಯಪಮಹರ್ಷಿಯು ( ಈತ ಬ್ರಹ್ಮರ್ಷಿಯೂ ಆಗಿದ್ದರಿಂದ ’ಕಶ್ಯಪಬ್ರಹ್ಮ’ನೆಂಬ ಉಲ್ಲೇಖವೂ ಕೆಲೆವೆಡೆ ಇದೆ. ವ್ಯತ್ಯಾಸಗಳೂ ಇದೆ.) ’ದಕ್ಷ’ನ ಹದಿಮೂರು ಮಕ್ಕಳನ್ನು ವಿವಾಹವಾಗುತ್ತಾನೆ. ( ಕೆಲೆವೆಡೆ ’ಇಬ್ಬರು’ ಎಂದಿದೆ). ಅವರ ಹೆಸರುಗಳು ಹೀಗಿವೆ.., ’ಅದಿತಿ, ದಿತಿ, ದನು, ಕಲಾ, ಮುನಿ, ಅನಯೂ, ಕದ್ರು,ಪ್ರಭಾ, ಇರಾ, ಕ್ರೋಧ, ವಿನತ, ಸುರಭಿ ಮತ್ತು ಖಗ’ . ಇವರಲ್ಲಿ ಮುಖ್ಯವಾಗಿ ಅದಿತಿಗೆ ಹನ್ನೆರಡು ಮಕ್ಕಳು ಜನಿಸುತ್ತಾರೆ, ಅವರು ದೈವಾಂಶಮಿಳಿತರಾದ ದ್ವಾದಶ ಆದಿತ್ಯರೆಂದು (೧೨ ಮಂದಿ ಸೂರ್ಯರು !) ಪ್ರಸಿದ್ದರಾಗುತ್ತಾರೆ. ದಿತಿಯ ಮಕ್ಕಳು ದಾನವರೆಂದು ಖ್ಯಾತರಾಗುತ್ತಾರೆ, ಅವರಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪ ಪ್ರಮುಖರು. ಇರಾ ಎಂಬುವಳು ತರು- ಲತೆಗಳಿಗೆ ತಾಯಿಯೆನಿಸಿಕೊಳ್ಳುತಾಳೆ. ಸುರಭಿಯು ದೈವತ್ವವುಳ್ಳ ಹಸುಗಳಿಗೆ ಜನ್ಮನೀಡುತ್ತಾಳೆ. ಕದ್ರುವಿನ ಮಕ್ಕಳು ನಾಗಗಳು ಮತ್ತು ವಿನತೆಯೆ ಮಕ್ಕಳೇ ಗರುಡ ಮತ್ತು ಅರುಣ.
ಪ್ರಮುಖವಾಗಿ ಕದ್ರು ಮತ್ತು ವಿನತೆಯರಲ್ಲಿ ಸಾಮರಸ್ಯವಿರುವುದಿಲ್ಲ. ಕ್ಷೀರಸಾಗರವನ್ನು ಕಡೆಯುವ ಸಮಯದಲ್ಲಿ ಹಾಲಾಹಲ, ಕಾಮಧೇನು, ಕಲ್ಪವೃಕ್ಷ ಮತ್ತು ಅಮೃತವು ಹೊರಬಂದಂತೆ ’ಉಚ್ಚೈಶ್ರವಸ್’ ಎಂಬ ಅಪೂರ್ವ ಕುದುರೆಯೂ ಸೃಷ್ಟಿಯಾಗುತ್ತದೆ. ಆದರೆ ಕುದುರೆಯ ಬಣ್ಣದ ವಿಚಾರದಲ್ಲಿ ಕದ್ರುವಿಗೂ ವಿನತೆಗೂ ವಾಗ್ಯುದ್ಧವೇ ನಡೆಯುತ್ತದೆ. ವಿನತೆಯು, ಕುದುರೆಯು ಸಂಪೂರ್ಣ ಬಿಳಿಯಬಣ್ಣದ್ದೆಂದೂ ವಾದಿಸಿದರೆ ಕದ್ರುವು ಕುದುರೆಯ ಅಂಗಗಳಲ್ಲಿ ಕಪ್ಪುಬಣ್ಣವಿದೆ ಎಂದು ವಾದಿಸುತ್ತಾಳೆ. ವಾಸ್ತವದಲ್ಲಿ ಅದು ಶ್ವೇತಕುದುರೆಯೇ ಆಗಿದ್ದರೂ ಸಹಿತ ಕದ್ರುವಿನ ತಾಮಸ ಮನೋಭಾವ ಸೋಲೊಪ್ಪಿಕೊಳ್ಳುವುದಿಲ್ಲ. ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳುವುದು ಮತ್ತು ಸೋತವರು ಗೆದ್ದವರಿಗೆ ಶರಣಾಗಿ ಸೇವಕಿಯಾಗಿರಬೇಕೆಂದು ತೀರ್ಮಾನಿಸಿ ತಮ್ಮ ಕ್ಷೇತ್ರವಾದ ’ಪಾಟಲ’ ಕ್ಕೆ ಬರುತ್ತಾರೆ. ಈ ನಡುವೆ ಇಬ್ಬರೂ ಸಂತಾನಪ್ರಾಪ್ತಿಗಾಗಿ ಚತುರ್ಮುಖ ಬ್ರಹ್ಮನನ್ನು ಕುರಿತು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗೆ ಓಗೊಡುವ ಬ್ರಹ್ಮನು ಈರ್ವರಿಗೂ ಯಾವ ಬಗೆಯ ಮಕ್ಕಳು ಬೇಕೆಂದು ಕೇಳುತ್ತಾನೆ. ಕದ್ರುವು ಚತುರರಾದ ಸಾವಿರ ಮಕ್ಕಳು ಬೇಕೆಂದು ಕೇಳಿದಾಗ ಬ್ರಹ್ಮನು ಅಸ್ತು ಎಂದು ಕದ್ರುವಿನ ವಂಶವಾಹಿನಿಯಂತೆ ಸಾವಿರ ಮೊಟ್ಟೆಗಳನ್ನು ನೀಡುತ್ತಾನೆ. ಇತ್ತ ವಿನತೆಯು, ಬಲಶಾಲಿಗಳೂ. ತೇಜೋವಂತರೂ ಆದ ಇಬ್ಬರೇ ಮಕ್ಕಳು ಸಾಕೆಂದೂ ಮತ್ತು ಅಂತಹ ಮಕ್ಕಳನ್ನು ವಿಷ್ಣುವಿಗೆ ಅರ್ಪಿಸುವೆನೆಂದೂ ಹೇಳಿಕೊಳ್ಳತ್ತಾಳೆ. ಬ್ರಹ್ಮನು ಆಕೆಗೂ ಎರಡು ಮೊಟ್ಟೆಗಳನ್ನು ನೀಡಿ, ಮೊಟ್ಟೆಯೊಡೆದು ತಾನಾಗೆ ಮಕ್ಕಳು ಹೊರಬರುವವರೆವಿಗೂ ಅದನ್ನು ಮುಟ್ಟಬಾರದೆಂಬ ಸೂಚನೆಯನ್ನೂ ನೀಡುತ್ತಾನೆ. ಸಮಪ್ರಮಾಣದ ಶಾಖದಲ್ಲಿಟ್ಟಿದ್ದರೂ ಕದ್ರುವಿನ ಮೊಟ್ಟೆಗಳು ಒಡೆದು ಸಾವಿರ ನಾಗಗಳು ಹೊರಬರುತ್ತವೆ ಆದರೆ ವಿನತೆಯ ಮೊಟ್ಟೆಗಳು ಫಲಪ್ರದವಾಗುವುದಿಲ್ಲ. ಸಂತಾನ ಪ್ರಾಪ್ತವಾದ ಹಮ್ಮಿನಲ್ಲಿ ಬೀಗುವ ಕದ್ರುವನ್ನು ಕಂಡಾಗಲೆಲ್ಲ ವಿನತೆಯು ಮರುಗುತ್ತಿರುತ್ತಾಳೆ. ಒಂದು ದಿವಸ ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯ ಬಣ್ಣದ ನಿಷ್ಕರ್ಷೆಯು ನೆಡೆಯಬೇಕಾಗುವಾಗ , ಕದ್ರುವು ತನ್ನ ಮಕ್ಕಳಾದ ನಾಗಗಳನ್ನು ಕರೆದು ಕುದುರೆಯ ಬಣ್ಣವನ್ನು ಬದಲಿಸಲು ಕೇಳಿಕೊಳ್ಳುತ್ತಾಳೆ. ಅದರಂತೆ ನೆಡೆಯುವ ನಾಗಗಳು ಕುದುರೆಯ ಬಾಲಕ್ಕೆ ಸುತ್ತಿಕೊಂಡು ಬಾಲವನ್ನು ಕಪ್ಪುಬಣ್ಣಕ್ಕೆ ತಿರುಗಿಸಿಬಿಡುತ್ತವೆ. ಈ ವಂಚನೆಯನ್ನು ಅರಿಯದ ವಿನತೆಯು ಸೋತೆನೆಂದು ಒಪ್ಪಿಕೊಂಡು ಕದ್ರುವಿಗೆ ಸೇವಕಿಯಾಗಿ ಇರಲು ಒಪ್ಪಿ ಆಕೆಯ ಸೇವೆಯನ್ನು ಮಾಡುತ್ತಿರುತ್ತಾಳೆ. ಹಲವು ವರುಷಗಳು ಕಳೆದರೂ ಬ್ರಹ್ಮನಿಂದ ಕೊಡಲ್ಪಟ್ಟ ಮೊಟ್ಟೆಗಳು ಫಲವಾಗದಿರುವುದನ್ನು ಅರಿತ ವಿನತೆಯು ಕುತೂಹಲದಿಂದ ಮೊಟ್ಟೆಗಳನ್ನಿಟ್ಟಿದ್ದ ಕಲಶಗಳ ಸಮೀಪಕ್ಕೆ ಬರುತ್ತಾಳೆ. ಒಂದು ಕಲಶದ ಮುಸುಕನ್ನು ತೆಗೆದು ನೋಡಿದಾಗ ಅರ್ಧ ರಚಿತ ಶರೀರವೊಂದು ಹೊರಬರುತ್ತದೆ. ಅಕಾಲದಲ್ಲಿ ಕಲಶವನ್ನು ತೆರೆದಿದ್ದರಿಂದ ಶರೀರವು ಸಂಪೂರ್ಣ ರಚನೆಯಾಗುವುದಿಲ್ಲ. ಆ ಮಗುವಿಗೆ ಸೊಂಟದ ಕೆಳಗಿನ ಭಾಗಗಳು ಬೆಳವಣಿಗೆಯಾಗುವುದಿಲ್ಲ. ರುಣ ಎಂದರೆ ತೊಡೆ ಎಂಬರ್ಥವಿರುವುದರಿಂದ ಆ ಮಗುವಿಗೆ ಅ-ರುಣ (ಕಾಲು, ತೊಡೆಗಳಿಲ್ಲದವನು, ಕೆಂಪು ಬಣ್ಣದವನು) ಅಥವ ಅರುಣ ಎಂದು ಕರೆದ ವಿನತೆಯು ಅರುಣನನ್ನು ಸೂರ್ಯನಿಗೆ ಸಾರಥಿಯಾಗಿಸುತ್ತಾಳೆ. ( ಆದಿತ್ಯನು ವಿಷ್ಣುವಿನ ಅಂಶವಾಗಿದ್ದಾನೆ. "ಸೂರ್ಯನಾರಾಯಣ" ! ). ಹೀಗೆ ಸೂರ್ಯನಿಗೆ ಸಾರಥಿಯಾಗುವ ಅರುಣನು ರಕ್ತವರ್ಣದಿಂದ ಪ್ರಕಾಶಿಸಿ ವಿನತೆಗೆ ಕೆಲವು ಸೂಚನೆಗಳನ್ನು ಕೊಡುತ್ತಾನೆ.
ಸೂರ್ಯ (ಆದಿತ್ಯ)
ಇನ್ನೊಂದು ಕಲಶವನ್ನು ಫಲಪ್ರದವಾಗುವವರೆವಿಗೂ ತೆರೆಯದಂತೆ ಹೇಳಿ, ಆ ಮಗುವಿನಿಂದಲೇ ವಿನತೆಯ ದಾಸ್ಯವೂ ಮುಗಿಯುತ್ತದೆಂದು ತಿಳಿಸುತ್ತಾನೆ. ಈ ಘಟನೆಯು ನೆಡೆದು ಐದುನೂರು ವರುಷಗಳ ಬಳಿಕ ಇನ್ನೊಂದು ಮೊಟ್ಟೆಯೂ ಒಡೆದು ತೇಜೋಮಯವಾದ, ಬೃಹದಾಕಾರವಾದ, ದೈವತ್ವಗುಣಗಳನ್ನು ಹೊಂದಿದ್ದ ಪಕ್ಷಿರೂಪದ ಮಗುವು ಹೊರಬರುತ್ತದೆ. ವಿನತೆಯು ಆತನಿಗೆ ’ಗರುಡ’ನೆಂದು ಹೆಸರಿಸುತ್ತಾಳೆ. ಗರುಡನಿಗೆ ತನ್ನ ಪೂರ್ವವೃತ್ತಾಂತವನ್ನೆಲ್ಲಾ ಸ್ಮರಿಸಿ ಹೇಳಿದಾಗ ಗರುಡನು ಮತ್ತೊಮ್ಮೆ ಕುದುರೆಯನ್ನು ಪರೀಕ್ಷಿಸುವ ಪಣವನ್ನು ಮುಂದಿಡುತ್ತಾನೆ. ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯನ್ನು ಬರಮಾಡಿಕೊಂಡು ಪರೀಕ್ಷಿಸಿದಾಗ ಬಾಲವು ಕಪ್ಪಾಗಿರುವುದನ್ನು ಕಂಡು ಗರುಡನು ಕುದುರೆಯ ಬಾಲದಲ್ಲಿ ಅಡಗಿದ್ದ ನಾಗಗಳನ್ನು ಕೈಯಲ್ಲಿ ಹಿಡಿದು ತರುತ್ತಾನೆ ಮತ್ತು ವಂಚನೆಯನ್ನು ಬಯಲು ಮಾಡುತ್ತಾನೆ. ಇದರಿಂದ ನಿರಾಶೆಗೊಂಡ ಕದ್ರುವು ವಿನತೆಯ ದಾಸ್ಯವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಬರುತ್ತಾಳೆ. ಆದರೆ ನಾಗಗಳು ವಿನತೆಯನ್ನು ಬಲವಾಗಿ ಹಿಡಿದಿಟ್ಟುಕೊಂಡು ಗರುಡನಿಗೆ ಶರತ್ತನ್ನು ಒಡ್ಡುತ್ತಾರೆ. ದೇವಲೋಕದ ಅಮೃತವನ್ನು ತಂದುಕೊಟ್ಟಲ್ಲಿ ವಿನತೆಯನ್ನು ಬಿಡುಗಡೆಗೊಳಿಸುವುದಾಗಿ ಹೇಳುತ್ತಾರೆ. ಮಾತಿಗೆ ಒಪ್ಪುವ ಗರುಡನು ದೇವಲೋಕಕ್ಕೆ ಹಾರುತ್ತಾನೆ. ಅಮೃತ ದೊರಕಿಸಿಕೊಳ್ಳಲು ಗರುಡನು ಹಲವು ಸಾಹಸಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿರುಗಾಳಿಯೊಡಗೂಡಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಹಾದುಹೋಗಬೇಕಾದಾಗ ಗರುಡನು ಹಲವು ನದಿಗಳ ನೀರನ್ನು ಕುಡಿದು ಅದರಿಂದ ಬೆಂಕಿಯನ್ನು ನಂದಿಸಿ ಮುಂದುವರಿಯುತ್ತಾನೆ. ಕೊನೆಯಲ್ಲಿ ಬೆಂಕಿಯುಗುಳುವ ಎರಡು ಬೃಹತ್ ಸರ್ಪಗಳನ್ನು ಸೋಲಿಸಿ ಅಮೃತವನ್ನು ಹೊತ್ತುಬರುತ್ತಾನೆ. ಹೀಗೆ ಅಮೃತವನ್ನು ಕದ್ದು ಹೊತ್ತೊಯ್ಯುತ್ತಿರುವ ಗರುಡನನ್ನು ಕಂಡ ಇಂದ್ರಾದಿಗಳು ಆತನನ್ನು ಅಟ್ಟಿಸಿಕೊಂಡು ಬರುತ್ತಾರೆ. ಆದರೆ ಚಾಣಾಕ್ಷತೆಯಿಂದ ನುಗ್ಗಿ ಬರುವ ಗರುಡನು ’ಪಾಟಲ’ವನ್ನು ತಲುಪಿ ನಾಗಗಳಿಗೆ ಅಮೃತವನ್ನು ಕೊಡುತ್ತಾನೆ. ಅಮೃತ ಕೈಗೆ ಬಂದ ಸಂತಸದಲ್ಲಿ ನಾಗಗಳು ವಿನತೆಯನ್ನು ಬಂಧಮುಕ್ತಗೊಳಿಸುತ್ತಾರೆ. ಆದರೆ , ಅಮೃತವನ್ನು ಕುಡಿಯಬೇಕೆನ್ನುವಷ್ಟರಲ್ಲಿ ಇಂದ್ರಾದಿಗಳು ಬಂದು ಅಮೃತಪಾತ್ರೆಯನ್ನು ಹೊತ್ತೊಯ್ಯುತ್ತಾರೆ. ಇದರಿಂದ ನಾಗಗಳಿಗೆ ಅಮೃತತ್ವವು ಲಭಿಸದಾಗುತ್ತದೆ. ಇಂದ್ರಾದಿಗಳನ್ನು ಕರೆತಂದುದು ಗರುಡನೇ ಎಂಬ ಭಾವವು ನಾಗಗಳಲ್ಲಿ ಉಂಟಾಗಿ ಗರುಡನನ್ನು ದ್ವೇಶಿಸಲಾರಂಭಿಸುತ್ತವೆ. ಅಂತೆಯೇ ಗರುಡನಿಗೂ ನಾಗಗಳ ವಿರುದ್ಧ ದ್ವೇಶವು ಬೆಳೆಯುತ್ತದೆ. ಗರುಡನ ಅಹಾರ ನಾಗಗಳೇ ಆಗುತ್ತವೆ. ವಿನತೆಯು ಮಾತಿಗೆ ತಪ್ಪದಂತೆ ಗರುಡನನ್ನು ವಿಷ್ಣುವಿಗೆ ನೀಡುತ್ತಾಳೆ. ಮುಂದೆ ಗರುಡನು ವಿಷ್ಣುವಿಗೆ ವಾಹನವಾಗುತ್ತಾನೆ ಮತ್ತು ವಿಷ್ಣುವಿನ ಪ್ರೇರಣೆಯಂತೆ ಗರುಡಪುರಾಣವನ್ನೂ ಪ್ರಕಟಗೊಳಿಸುತ್ತಾನೆ.
ಹೀಗೆ ಪುರಾಣೋಕ್ತ ಕತೆಯೊಂದನ್ನು ಒಂದೇ ಶಿಲ್ಪಕಲಾಕೃತಿಯಲ್ಲಿ ಸಹಜವಾಗಿ ಹಿಡಿದಿಟ್ಟಿರುವ ಕಲೆಗಾರನಿಗೆ, ಶಿಲ್ಪಿಗೆ ಶರಣೆನ್ನಲೇಬೇಕಲ್ಲವೆ ? .
-----------------------------------------------------
ಮನದಮಾತು:
ನಿಮ್ಮೆಲ್ಲರ ಹಾರೈಕೆಗಳಿಂದ ಎಲ್ಲಾ ಕೆಲಸಗಳೂ ಶುಭಪ್ರದವೇ ಆಯಿತು. ಅದಕ್ಕೆ ಧನ್ಯವಾದ. ಸುಮಾರು ಎರಡು ತಿಂಗಳೇ ಅಂದ್ಕೊಳಿ, ಏನೂ ಬರೆಯೋಕೆ ಆಗ್ಲಿಲ್ಲ, ಹಾಗಂತ ನಂಗೇನೂ ಬೇಸರವಿಲ್ಲ. ಒಂದಷ್ಟು ಕೆಲಸಗಳು, ನೆಂಟರಿಷ್ಟರು, ಹರಟೆ, ಪ್ರವಾಸ ಇತ್ಯಾದಿಗಳಲ್ಲಿ ಸಮಯ ಕಳೆದದ್ದು ತಿಳೀಲಿಲ್ಲ. ಮತ್ತೆ, ಹೇಳಿಕೊಳ್ಳೋದು ಏನಿದೆ ? ಒಂದು ವರ್ಷ ಆಯ್ತು ಬ್ಲಾಗ್ ಅಂತ ಬರೆಯೋಕೆ ಶುರುಮಾಡಿ. ಬರೆದದ್ದು ಬರೀ ಮೂವತ್ತು ಅದೂ ೩೬೫ ದಿನದಲ್ಲಿ. ಬರೆದಷ್ಟಕ್ಕೂ ಮೆಚ್ಚುಗೆಯ ಮಾತುಗಳನ್ನಾಡಿ, ಪ್ರೋತ್ಸಾಹಿಸಿ ಇನ್ನಷ್ಟು ಬರೆಯುವಂತೆ ಪ್ರೇರೇಪಣೆ ನೀಡಿದ್ದು ನೀವು. ಎಲ್ರಿಗೂ ನಾನು ಕೃತಜ್ಞ. ಮೂರ್ನಾಲ್ಕು ಕತೆ ಬರೆದಾಗ ಅದಕ್ಕೂ ಬೆನ್ನು ತಟ್ಟಿದೋರು ನೀವು, ಯಾಕೋ ಕತೆಗಳನ್ನೇ ಬರೀಬೇಕು ಅಂತ ಅನ್ನಿಸುತ್ತಾ ಇದೆ. ಮುಂದೆ ಬರೀತೀನಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರೆಯೋ ಹುಮ್ಮಸ್ಸಿದೆ. ಅದಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ, ಇನ್ನೂ ಒಂದು ವರ್ಷ ಕಳೀಲಿ...ಆಗ ಮತ್ತೆ ಬಂದು ಇದೇ ತರಹ ಜಂಭ ಕೊಚ್ಕೋತೀನಿ. ಸದ್ಯಕ್ಕೆ ಇಷ್ಟು ಸಾಕು.
------------------------------------------------------
ಕಿಡಿ :
ಶ್ರೀಮಂತ ಶಂಭುಲಿಂಗ ಅಮೇರಿಕೆಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ.
ಎಲ್ಲರೂ ಆಶ್ಚರ್ಯದಿಂದ ಶಂಭುವಿನತ್ತ ನೋಡುವವರೆ .
ಶಂಭು ಧರಿಸಿದ್ದು ಒಂದು ಲಂಗೋಟಿ ಮಾತ್ರ !.
ಕುತೂಹಲ ತಡೆಯಲಾರದೆ ಪುಟುಗೋಸಿಯಲ್ಲಿದ್ದ ಶಂಭುವನ್ನು ಮಹನೀಯನೊಬ್ಬ ಕೇಳಿಯೇ ಬಿಟ್ಟ
"ಸ್ವಾಮಿ, ಇದೇನು ನಿಮ್ಮ ವೇಷ ? ಹೀಗೆಲ್ಲಾ ಬರಬಹುದೆ ? "
ಶಂಭು ನಸುನಕ್ಕಿದ
" ಇದೇ ಒಳ್ಳೆಯದು ಸ್ವಾಮಿ, ಹೇಗೂ ನಿಮ್ಮ ವಿಮಾನನಿಲ್ದಾಣದಲ್ಲಿ ಎಲ್ಲವನ್ನೂ ಬಿಚ್ಚಿಯೇ ಪರೀಕ್ಷಿಸುತ್ತಾರೆ,
ಅದಕ್ಕೆ ಈ ಲಂಗೋಟಿಯೇ ಬೆಸ್ಟು !!! "
----------------------------------------------------
ವಂದನೆಗಳೊಂದಿಗೆ..