May 27, 2010
ಚಿ.ಮೂ. ಅವರ ಮನವಿ
ಈಗ ಮನವಿ ಮಾಡಿಕೊಂಡಿರುವವರು ಹಿರಿಯ ಸಾಹಿತಿ-ಚಿಂತಕ ಶ್ರೀಯುತ ಡಾ. ಎಂ. ಚಿದಾನಂದಮೂರ್ತಿಯವರು. ಶ್ರೀಯುತರು ಪುಸ್ತಕವೊಂದನ್ನು ಬರೆಯುವ ಉದ್ದೇಶದಿಂದ ಪತ್ರಿಕಾ ಮಾಧ್ಯಮಗಳಲ್ಲಿ ಪತ್ರಮುಖೇನ ಸಮಸ್ತ ಕನ್ನಡಿಗರೆಲ್ಲರಲ್ಲಿ ಸಂಬಂಧಪಟ್ಟ ವಿಚಾರದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಶ್ರೀ. ಚಿ.ಮೂ. ಅವರು ಬರೆಯುತ್ತಿರುವ ಪುಸ್ತಕ "ಗೋವು-ಗೋಮಾತೆ-ಗೋಹತ್ಯೆ ನಿಷೇಧ" ಬಗೆಗೆ. ಪುಸ್ತಕದ ವಿಚಾರವರ್ಧನೆಗಾಗಿ ಸಮಸ್ತರಿಂದಲೂ ಅವರು ಮಾಹಿತಿಯನ್ನು ಬಯಸಿದ್ದಾರೆ. ಅವರ ಕೋರಿಕೆಗೆ ಸ್ಪಂದಿಸುವ ಹೊಣೆ ನಮ್ಮೆಲರದು ಎಂಬುದು ನನ್ನ ಅಭಿಪ್ರಾಯ. ಆ ಮನವಿ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.
ಗೋವಿನಿಂದ ದೊರೆಯುವ "ಪಂಚಗವ್ಯ"ದ ವಿಚಾರವಾಗಿ ಇಲ್ಲಿ ಸ್ವಲ್ಪ ಹೇಳಬಯಸುತ್ತೇನೆ.
ಪಂಚಗವ್ಯವೆಂದರೆ ಗೋವಿನಿಂದ ದೊರೆಯುವ ಐದು ಪ್ರಮುಖ ಮೂಲಾಂಶಗಳು. ಅವು ಹೀಗಿವೆ.
೧) ಗೋಮೂತ್ರ (ಗಂಜಲ)
೨) ಸೆಗಣಿ (ಗೋಮಯ)
೩) ಹಾಲು (ಕ್ಷೀರ)
೪) ಮೊಸರು (ದಧಿ)
೫) ಸರ್ಪಿ (ತುಪ್ಪ)
ವೇದಗಳಲ್ಲಿ ( ಪರಾಶರೋಕ್ತಾಗಮ ಸೂತ್ರ, ಆಶ್ವಲಾಯನ ಸೂತ್ರ, ಶೌನಕಾದ್ಯಾಚಾರ್ಯ ಗ್ರಂಥ ಪ್ರಕಾರೇಣ) ಗೋವಿನಿಂದ ದೊರೆಯುವ ಪಂಚಗವ್ಯಕ್ಕೆ ಪವಿತ್ರಸ್ಥಾನವನ್ನು ನೀಡಲಾಗಿದೆ. ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶಿಲಾಮೂರ್ತಿಗೆ (ಲಿಂಗಕ್ಕೆ) ಪಂಚಗವ್ಯ ಸ್ನಪನ (ಸ್ನಾನ) ಅತ್ಯಂತ ಮುಖ್ಯವಾದುದು. ಪ್ರತ್ಯೇಕವಾಗಿ ಸಂಗ್ರಹಿಸಿದ ಪಂಚಗವ್ಯವನ್ನು ಮೇಳೈಸುವ( ಬೆರೆಸುವ, ಸೇರಿಸುವ) ಮೊದಲು ಮಂತ್ರೋಕ್ತವಾಗಿ ದೇವತೆಗಳನ್ನು ಆವಾಹನೆ ಮಾಡಲಾಗುತ್ತದೆ. ಮೊದಲಿಗೆ ಚತುರಶ್ರ ಮಂಡಲವನ್ನು ರಚಿಸಿ (ಚೌಕಾಕಾರ) ಅದರ ಮೇಲೆ ಧಾನ್ಯವನ್ನು ಹರಡಿ ಪಂಚಗವ್ಯ ತುಂಬಿದ ಪಾತ್ರೆಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ.
ಪೂರ್ವಕ್ಕೆ ಗೋಮೂತ್ರವನ್ನು (ಗಂಜಲ)
ದಕ್ಷಿಣಕ್ಕೆ ಗೋಮಯವನ್ನು (ಸೆಗಣಿ)
ಪಶ್ಚಿಮಕ್ಕೆ ಕ್ಷೀರವನ್ನು (ಹಾಲು)
ಉತ್ರರಕ್ಕೆ ದಧಿಯನ್ನು (ಮೊಸರು)
ಮಧ್ಯದಲ್ಲಿ ಸರ್ಪಿಯನ್ನು (ತುಪ್ಪ) ಕ್ರಮವಾಗಿ ಇರಿಸಿ, ಈಶಾನ್ಯದಲ್ಲಿ ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು (ದರ್ಭೆ+ನೀರು) ಇರಿಸಿ ಮಂತ್ರೋಕ್ತವಾಗಿ ದೇವತೆಗಳನ್ನು ಅವಾಹಿಸಲಾಗುತ್ತದೆ.
ಗೋಮೂತ್ರಕ್ಕೆ --ಸವಿತೃವನ್ನು ( ಸೂರ್ಯ , ತತ್ಸವಿತುಃ ,ಇತಿ ಮಂತ್ರೇಣ)
ಗೋಮಯಕ್ಕೆ -- ಶ್ರಿಯಂ ( "ಶ್ರೀ"=ಸಿರಿ=ಲಕ್ಷ್ಮಿ, ಪಾರ್ವತಿ ಇತ್ಯಾದಿ. ಗಂಧದ್ವಾರಾ, .........)
ಕ್ಷೀರಕ್ಕೆ -- ಸೋಮನನ್ನು ( ಆಪ್ವಾಯಸ್ವ...)
ದಧಿಗೆ --ಇಂದ್ರನನ್ನು (ದಧಿಕ್ರಾವ್ಣ...)
ಸರ್ಪಿಗೆ -- ಪರಮೇಷ್ಥಿಯನ್ನು ( ಶುಕ್ರಮಸಿ...)
ಮಂತ್ರೋಕ್ತವಾಗಿ ಆವಾಹಿಸಿ ಅಂತ್ಯದಲ್ಲಿ ಕುಶೋದಕಕ್ಕೆ "ಬ್ರಹ್ಮ"ನನ್ನು ಆವಾಹಿಸಲಾಗುತ್ತದೆ. ಮುಂದಿನದು ಶಾಸ್ತ್ರೋಕ್ತ ರೀತಿಯ ಪೂಜಾದಿಗಳು. ನಂತರ ಪ್ರತ್ಯೇಕವಾಗಿಟ್ಟಿರುವ ಪಂಚಗವ್ಯವನ್ನು ಒಂದೇ ಪಾತ್ರೆಯಲ್ಲಿ ಸೇರಿಸುವ ಕ್ರಮ. ಮೇಳನದ ನಿಯಮ ಮತ್ತು ಕ್ರಮ ಹೀಗಿದೆ.
|| ಪಲಮೇಕಂತು ಗೋಮೂತ್ರಂ ಅಂಗುಷ್ಠಾರ್ಧಂತು ಗೋಮಯಂ |
ಕ್ಷೀರಂ ಸಪ್ತಪಲಂ ಪ್ರೋಕ್ತಂ ದಧಿತ್ರಿಪಲ ಮೇವಚ |
ಸರ್ಪಿರೇಕಪಲಂ ಪ್ರೋಕ್ತಂ ತ್ರಿಪಲಂತು ಕುಶೋದಕಂ|
"ಒಂದು ಬಾರಿ ಹೆಚ್ಚೇ ಎನ್ನುವಂತೆ ಗೋಮೂತ್ರವನ್ನೂ, ಅಂಗುಷ್ಠ (ಹೆಬ್ಬೆರಳು)ದ ಅರ್ಧದಷ್ಟು ಸೆಗಣಿಯನ್ನೂ, ಏಳು ಬಾರಿ ಹಾಲನ್ನೂ, ಮೂರು ಬಾರಿ ಮೊಸರನ್ನೂ , ಒಂದು ಬಾರಿ ತುಪ್ಪವನ್ನೂ ಬೇರೊಂದು ಪಾತ್ರೆಯಲ್ಲಿ ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ಕುಶೋದಕವನ್ನು ಸೇರಿಸುವುದು. ವೇದಾಗಮಶಾಸ್ತ್ರಗಳಲ್ಲಿ "ಗೋವಿನ" ಉತ್ಪನ್ನಗಳಿಗೆ ಅತ್ಯುಚ್ಚ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇಂತಹ ಪಂಚಗವ್ಯ ಸ್ನಾನ ಮತ್ತು ಪಾನದಿಂದ ಆರೋಗ್ಯವೃಧ್ದಿಸುವುದು ಅತ್ಯಂತ ಖಚಿತ.
ಶ್ರೀ ಚಿ.ಮೂ. ಅವರ ಮನವಿಗೆ ನಾನೂ ಕೂಡ ಸ್ಪಂದಿಸಲಿದ್ದೇನೆ. ನಿಮ್ಮ ಸಹಕಾರವೂ ಇರಲೆಂದು ಪ್ರಾರ್ಥಿಸುತ್ತೇನೆ.
ಚಿ.ಮೂ. ಅವರ ವಿಳಾಸ.
ಡಾ. ಎಂ . ಚಿದಾನಂದಮೂರ್ತಿ
1013B, 4ನೆಯ ಅಡ್ಡರಸ್ತೆ, 11ನೆಯ ಮುಖ್ಯರಸ್ತೆ, ಹಂಪಿನಗರ,
ಬೆಂಗಳೂರು- 560104.
.................................................................................................
ಖೊನೆಖಿಡಿ :
ಕೈಲಾಸಂ ಹೇಳಿದ್ದು. ನಾನು ಕದ್ದಿದ್ದು !.
" ಸೆರ‍್ಮನೆಗೋದ್ರೂ ಸೆರ‍್ಮನೀಸ್ನ ಬಿಡ್ಬಾರ‍್ದೂ ನನ್ರಾಜಾ "
ವಂದನೆಗಳೊಂದಿಗೆ....
Subscribe to:
Posts (Atom)