Jul 26, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... 2

ಹಾಗೆ ಹುಡುಕುತ್ತಿದ್ದ ಕಣ್ಣಿಗೆ ಮೊದಲು ಕಂಡವರು.... ಬಿಳಿ ಪಂಚೆ, ಮೈಮೇಲೊಂದು ಶಲ್ಯ ಹೊದೆದಿದ್ದ ಮಧ್ಯವಯಸ್ಸಿನ ವ್ಯಕ್ತಿ. ಗೋಪಾಲಯ್ಯ ವ್ಯಕ್ತಿಯ ಮುಖ ನೋಡಿ ನಕ್ಕರು.
"ಚಿರಂತ, ಇವರ ಹೆಸರು ನಾಗಪ್ಪ ಅಂತ. ಹುಡುಗಿಯ ತಂದೆ. ಹುಟ್ಟಿದಾರಭ್ಯ ಇದೇ ಊರಲ್ಲಿದ್ದುಕೊಂಡು ತೋಟದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದಾರೆ ". ಗೋಪಾಲಯ್ಯ ಪರಿಚಯ ಮಾಡಿಕೊಟ್ಟರು. ಚಿರಂತ ಕುಳಿತಲ್ಲಿಂದಲೇ ನಗೆ ಬೀರಿದ. ನಾಗಪ್ಪನವರೂ ನಕ್ಕರು.
" ಬಹಳ ದಣಿದು ಬಂದಿದೀರಿ ಅಲ್ಲವೇ ಗೋಪಾಲಯ್ಯ ? ನಮ್ಮೂರಿನ ಬಸ್ಸಿನ ಕತೆ ಈಗಾಗಲೇ ನಿಮಗೆ ಗೊತ್ತಾಗಿರಬೇಕು. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಧಾನವಾಗಿ ಎಲ್ಲಾ ಮಾತನಾಡೋಣವಂತೆ. ಕುಡಿಯೋದಕ್ಕೆ ಏನಾದ್ರೂ ತರಲೇನು ? "
"ನೀರು ಕೊಡಿ ನಾಗಪ್ಪ ಸಾಕು. ಈಗ ವಿಶೇಷವಾಗಿ ಏನೂ ಮಾಡೊದಕ್ಕೆ ಹೊಗಬೇಡಿ. ತೊಂದರೆ ತೊಗೋಬೇಡಿ. ಈ ಹುಡುಗನ ಕಚೇರಿಗೂ ರಜೆ ಇಲ್ಲ. ಸ್ವಲ್ಪ ಬೇಗನೆ ಹೊರಡ್ತೀವಿ.."
"ಅಯ್ಯೋ !, ಹಾಗಂದ್ರೆ ಹೇಗೆ ? ಬಂದಿರೋದೆ ಅಪರೂಪ. ಇರಿ, ಒಂದು ನಿಮಿಷ ಬಂದು ಬಿಡ್ತೀನಿ " ನಾಗಪ್ಪ ಅಡುಗೆಮನೆಯೊಳಗೆ ಹೋದವರು ನಿಮಿಷಗಳ ತರುವಾಯ ಎರಡು ಲೋಟ ಮತ್ತು ಒಂದು ತಟ್ಟೆಯಲ್ಲಿ ಅವಲಕ್ಕಿ ಬೆಲ್ಲದೊಡನೆ ಪ್ರತ್ಯಕ್ಷರಾದರು. ಅತಿಥಿಗಳ ಮುಂದೆ ಅವಲಕ್ಕಿಯ ತಟ್ಟೆಯನ್ನಿರಿಸಿ, ಲೋಟಗಳಿಗೆ ತಂಬಿಗೆಯಲ್ಲಿದ್ದ ಪಾನಕವನ್ನು ಬಗ್ಗಿಸಿದರು. ಅದು ಬೆಲ್ಲದ ಪಾನಕವೆಂದು ಚಿರಂತನಿಗೆ ತಿಳಿಯಿತು.  ಸ್ವಲ್ಪ ದಾಹವಾದರೂ ತೀರುತ್ತದೆಯಲ್ಲಾ ಎಂದೆನಿಸಿ ಲೋಟವನ್ನೆತ್ತಿ ಪಾನಕವನ್ನು ಕುಡಿಯಲನುವಾದ ಚಿರಂತ. ಇನ್ನೇನು ಬಾಯಿಗೆ ಸುರುಹಬೇಕೆನ್ನುವಷ್ಟರಲ್ಲಿ ಹೆಂಗಸಿನ ಧ್ವನಿಯೊಂದು ತೇಲಿಬಂತು.
"ಅಯ್ಯೊ ! ನಿಲ್ಲಿ " ಅಡುಗೆಮನೆಯಿಂದ ನಾಗಪ್ಪನವರ ಹೆಂಡತಿ ಓಡಿಬಂದರು. " ಬೇಸರ ಪಟ್ಕೋಬೇಡಿ. ಆ ಪಾನಕ ಮತ್ತು ಅವಲಕ್ಕಿಯನ್ನು ನಮ್ಮನೆ ತೋಟದ ಆಳಿಗೆ ಮಾಡಿಟ್ಟದ್ದು. ’ಇವರಿಗೆ’ ಗೊತ್ತಾಗದೆ ನಿಮಗೆ ತಂದು ಕೊಟ್ಟಿದ್ದಾರೆ. ಇಲ್ಲಿ ಕೊಡಿ, ನಿಮಗೆ ಬೇರೆಯದೇ ತಿಂಡಿ ಮಾಡಿಟ್ಟಿದ್ದೇನೆ. ಉಪ್ಪಿಟ್ಟು-ಕೇಸರಿಬಾತು, ಜೊತೆಗೆ ಒಳ್ಳೆಯ ಚಿಕ್ಕಮಗಳೂರು ಕಾಫಿ಼. " ಎಂದು ಒಂದೇ ಸಮನೆ ಉಸುರಿದರು.
ಗೋಪಾಲಯ್ಯ ಚಿರಂತನಿಗೆ ’ಸೀತಮ್ಮ’ ನ ಪರಿಚಯ ಮಾಡಿಕೊಟ್ಟರು. ಚಿರಂತನಿಗೆ ಪಾನಕ ಕುಡಿಯುವ ಆಸೆಯಿತ್ತು. " ಅಮ್ಮಾ, ಈ ಅವಲಕ್ಕಿಯನ್ನು ತೆಗೆದುಕೊಳ್ಳಿ, ಆದರೆ ಪಾನಕ ಇರಲಿ ಬಿಡಿ. ಬೆಲ್ಲದ ಪಾನಕ ಕುಡಿದು ಅದೆಷ್ಟೋ ವರ್ಷಗಳೇ ಆಗಿದೆ. ಎಂದೋ ನನ್ನಜ್ಜಿ ಮಾಡಿಕೊಟ್ಟದ್ದು".
ಚಿರಂತನ ಮಾತನ್ನು ಅರ್ಧಕ್ಕೇ ತುಂಡರಿಸಿದರು ಸೀತಮ್ಮ " ಅಯ್ಯೋ, ಬೇಡ. ಆಳಿಗೆ ಮಾಡಿಟ್ಟದ್ದು. ನೀವು ಕುಡಿಯೋದು ಸರಿಹೋಗಲ್ಲ" ಎಂದು ತಳಮಳಿಸಿದರು.
ಚಿರಂತನಿಗೆ ಪಾನಕ ಬಿಡುವ ಮನಸಾಗಲಿಲ್ಲ. " ಆ ಉಪ್ಪಿಟ್ಟು-ಬಾತು ಬೇಸರವಾಗಿದೆ. ದಿನಾ ಅದೆಲ್ಲಾ ಇದ್ದೇ ಇರುತ್ತೆ. ಈ ಬೆಲ್ಲದ ಪಾನಕ ಯಾರು ಕೊಡ್ತಾರೆ ಹೇಳಿ ? ಕೊಡಿ ಪರವಾಗಿಲ್ಲ ".  ಚಿರಂತನ ಒತ್ತಾಯಕ್ಕೆ ಮಣಿದ ಸೀತಮ್ಮ ಪಾನಕ ತುಂಬಿದ ಲೋಟವನ್ನು ಚಿರಂತನ ಮುಂದಿಟ್ಟು ಅಡುಗೆಮನೆಯತ್ತ ನಡೆದರು. ಅಲ್ಲೇ ನಿಂತಿದ್ದರು ನಾಗಪ್ಪ !. ಮೆತ್ತಗೆ ಗದರಿಕೊಂಡರು ಪತ್ನಿಯೊಂದಿಗೆ " ಅಲ್ವೇ ಸೀತೂ, ನನಗೆ ಹೇಳ್ಬಾರ‍್ದಾ ನೀನು, ಉಪ್ಪಿಟ್ಟು-ಕೇಸರಿಬಾತು ಮಾಡಿರೋದನ್ನ ? ". ಸೀತಮ್ಮನೂ ಗದರಿದರು " ನಿಮಗೆ ಮೊದಲೆ ಹೇಳಿದ್ರೆ ಬಂದೋರಿಗೆ  ಕೊಡೋದಕ್ಕೆ ಏನು ಉಳಿಸ್ತಿದ್ರಿ ನೀವು ? ತಳ ಕೆರೆದು ಹಾಕಬೇಕಾಕ್ತಿತ್ತು ಅಷ್ಟೆ ! ". ನಾಗಪ್ಪ ಮರುಮಾತನಾಡದೆ ಗೋಪಾಲಯ್ಯನ ಬಳಿಗೆ ತೆರಳಿದರು. ಪಾನಕ ಕುಡಿದ ಚಿರಂತನಿಗೆ ದಾಹ ತಣಿದಂತಾಯಿತು.
ನಾಗಪ್ಪ, ಗೋಪಾಲಯ್ಯನ ಮುಂದಿದ್ದ ಚಿಕ್ಕ ಚಾಪೆಯ ಮೇಲೆ ಕುಳಿತರು. " ಗೋಪಾಲಯ್ಯ, ನೀವು ಬಹಳ ಸಮಯ ಇಲ್ಲ ಅಂದ್ರಿ, ಹಾಗಾಗಿ ನೇರವಾಗಿ ವಿಷಯಕ್ಕೆ ಬರ್ತೇನೆ. ನಿಮ್ಮ ಹುಡುಗ ಸಾಫ಼್ಟವೇರ್ ಇಂಜಿನಿಯರ್ರು ಅಂತಾ ಕೇಳ್ಪಟ್ಟೆ. ನಮಗೂ ಸಂತೋಷವಾಯ್ತು. ನಾವು ಇಂತಹ ಹುಡುಗನನ್ನೇ ಹುಡುಕ್ತಾ ಇದ್ವಿ, ಇಲ್ಲೇನೋ ತುಂಬ ಸಂಬಂಧಗಳು ಬಂದಿದ್ವು, ಆದರೆ ನಮಗೆ ಒಪ್ಪಿಗೆ ಆಗಬೇಕಲ್ವೇ..." ನಾಗಪ್ಪ ಹೇಳುತ್ತಲೇ ಇದ್ದರು. ಚಿರಂತ ಅವರ ಮಾತನ್ನು ತುಂಡರಿಸಿದ
" ಕ್ಷಮಿಸಿ, ನಾಗಪ್ನೋರೆ. ನಾನು software ಇಂಜಿನಿಯರ್ ಅಲ್ಲ. "
ಚಿರಂತನ ಮಾತಿನಿಂದ ಚಕಿತರಾದ ನಾಗಪ್ಪ ಅವನತ್ತಲೇ ತಿರುಗಿದರು. " ಮತ್ತೆ , ತಾವು ದೊಡ್ಡ MNC ಯಲ್ಲಿ ಕೆಲ್ಸ ಮಾಡ್ತೀರಿ, ದಿನದಲ್ಲಿ ೧೮ ಗಂಟೆ ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೀರಿ ,  ಅಂತೆಲ್ಲಾ ಹೇಳಿದ್ರಲ್ಲಾ ನಿಮ್ಮ ತಂದೆಯವರು " .

"ಅದು ನಿಜ. ನಾನು ದೊಡ್ಡ ಕಂಪೆನಿಯೊಂದರಲ್ಲೇ ಕೆಲ್ಸ ಮಾಡ್ತಿರೋದು, ದಿನದಲ್ಲಿ ಹೆಚ್ಚು-ಕಡಿಮೆ ೧೮ ಗಂಟೆಗಳು ಕಂಪ್ಯೂಟರ್ ಮುಂದೆಯೇ ಕುಳಿತಿರುತ್ತೇನೆ. ಆದ್ರೆ, ನಾನು software  ಇಂಜಿನಿಯರ್ ಅಲ್ಲ. ಒಬ್ಬ ಅಕೌಂಟ್ ಮ್ಯಾನೇಜರ್ ಅಷ್ಟೆ ". ಚಿರಂತನ ಮಾತನ್ನು ಕೇಳಿದ ನಾಗಪ್ಪ ಗೋಪಾಲಯ್ಯನ ಮುಖ ನೊಡಿದರು. ಮತ್ತೆ ಚಿರಂತನನ್ನೇ ಕೇಳುವ ಮನಸಾಯಿತು ಅವರಿಗೆ

 " ಅದು ಎಂತಹ ಕೆಲಸ ? ".

ಚಿರಂತನಿಗೆ ನಾಗಪ್ಪನವರ ಪ್ರಶ್ನೆ ಸಹಜವಾಗಿ ತೋರಿತು. " ನಮ್ಮ ಕಂಪೆನಿಗೆ, ಒಂದೆರೆಡು ದೊಡ್ಡ ಬ್ಯಾಂಕುಗಳ ಅಕೌಂಟುಗಳು ಬರುತ್ವೆ. ಅದನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ. Online ಬ್ಯಾಂಕಿಂಗ್ ಅನ್ತಾರೆ ನೋಡಿ, ಅದು. ಬ್ಯಾಂಕುಗಳು ನಮ್ಮ ಕಂಪೆನಿಗೆ contract ಪ್ರೋಜೆಕ್ಟ್ ಗಳನ್ನು ಕೊಟ್ಟಿರ್ತಾರೆ. ಅದನ್ನೆಲ್ಲಾ ನೋಡ್ಕೋತಿವಿ ನಾವು "
ನಾಗಪ್ಪರಿಗೆ ಚಿರಂತ ಹೇಳಿದ್ದರಲ್ಲಿ ಕೆಲವು ಅರ್ಥವಾಗಲಿಲ್ಲ.
" ಅಂದ್ರೆ , ತಮ್ಮದು contract  ಕೆಲಸವೋ ? ಪರ್ಮನೆಂಟ್ ಅಲ್ಲ ಅನ್ನಿ ! "
 ಚಿರಂತನಿಗೆ ನಾಗಪ್ಪನವರಿಗೆ ಅರ್ಥಮಾಡಿಸುವುದು ಕಷ್ಟವೆಂದು ತೋರಿತು. ಅಷ್ಟರಲ್ಲಿ ಸೀತಮ್ಮ ಉಪ್ಪಿಟ್ಟು-ಕೇಸರಿಬಾತಿನೊಡನೆ ಬಂದರು. ಅತಿಥಿಗಳಿಬ್ಬರಿಗೂ ತಿಂಡಿಗಳು ಸರಬರಾಜಾಯಿತು.  ನಾಗಪ್ಪ ಮೇಲೆದ್ದರು.
" ಗೋಪಾಲಯ್ಯ ನೀವು ನಿಧಾನವಾಗಿ ತಿಂಡಿ ತಿನ್ನಿ, ಆಮೇಲೆ ಮಾತನಾಡೋಣವಂತೆ. ಒಂದು ನಿಮಿಷ ನಾನು ಆಳು ಬಂದಿದಾನೋ ಇಲ್ಲವೋ ನೋಡಿ ಬರ್ತೀನಿ ". ನಗುವಿನಲ್ಲೇ ಸಮ್ಮತಿಯಿತ್ತರು ಗೋಪಾಲಯ್ಯ.
ಚಿರಂತನಿಗೆ ತಿಂಡಿಯ ರುಚಿ ಹತ್ತದಾಯಿತು. ಅದೇಕೋ ಅವನ ಕಿವಿ ಅಡುಗೆ ಮನೆಯೊಳಗೆ ನೆಟ್ಟಿತು. ಅಲ್ಲಿಂದ ತೂರಿಬರುತ್ತಿದ್ದ ಮಾತುಗಳು ಅಸ್ಪಷ್ಟವಾಗಿ ಕಿವಿಗೆ ಬೀಳತೊಡಗಿತು.
" ಗೋಪಾಲಯ್ಯ ಮುಂಚೆ ಹೇಳಿದ್ದು, ಕಂಪ್ಯೂಟರ್ ಇಂಜಿನಿಯರ್ರು ಅಂತ, ಈಗ ಇವರೇನೊ ಬೇರೆ ಹೇಳ್ತಾ ಇದಾರಲ್ಲೇ "
"ಈ ಹಾಳು ಕಂಪ್ಯೂಟರ್ ವಿಷಯ ನಮಗೆ ಹೇಗ್ರೀ ಗೊತ್ತಾಗಬೇಕು. ಅದೇನೊ ಒಂದೂ ಅರ್ಥವಾಗೋಲ್ಲಪ್ಪ ನನಗೆ "
"ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರುಗಳಿಗೆ ಹೆಣ್ಣು ಕೊಟ್ಟಿರೋದು, ಇನ್ನು ನಾವು ಅಕೌಂಟ್ ಮ್ಯಾನೇಜರ್ರಿಗೆ ಕೊಟ್ರೆ ಆಡಿಕೊಳ್ಳೋಲ್ವೆ ಜನ "
"ಅಷ್ಟು ಸಂಬಳವೂ ಬರೋಲ್ಲ ಅನ್ನೋಹಾಗೆ ಕಾಣುತ್ತೆ. ಈ ವರನಿಗಾಗಿ ಇಷ್ಟು ವರ್ಷ ಕಾಯ್ಬೇಕಿತ್ತೇ ? ಸ್ವಲ್ಪ ಸರಿಯಾಗಿ ವಿಚಾರಿಸಿ ಎಲ್ಲಾದನ್ನೂ "
"ಅದೇನೋ ಕಂಟ್ರಾಕ್ಟು ಕೆಲಸ ಅಂತೆ, ಎಷ್ಟು ದಿವಸ ನಡೆದೀತು ಮಹಾ?  ನಮ್ಮ ಮಗಳಿಗೂ ಒಂದು ಭದ್ರನೆಲೆಯಾಗೋದು ಬೇಡ್ವೆ ? "
"ಅದಕ್ಕೆ ಹೇಳಿದ್ದು ಸರಿಯಾಗಿ ವಿಚಾರಿಸಿ ಅಂತ, ಆಮೇಲೆ ಪರಿತಾಪ ಪಡೋದು ಬೇಡ "
" ಸರಿ, ನನಗೂ ಒಂಚೂರು ಉಪ್ಪಿಟ್ಟು ಕೊಡು, ಮಾತಾಡ್ತೀನಿ"
"ಇದಕ್ಕೆನೂ ಕಮ್ಮಿ ಇಲ್ಲ. ಅಲ್ಲೇ ಹೋಗಿ ತಂದುಕೊಡ್ತೀನಿ "
ನಾಗಪ್ಪ ನಗುತ್ತಲೇ ಅಡುಗೆಮನೆ ಕಡೆಯಿಂದ ಬಂದರು. ಗೋಪಾಲಯ್ಯ ಆಗಲೇ ತಿಂಡಿ ಖಾಲಿ ಮಾಡಿದ್ದರು. ಸೀತಮ್ಮನಿಗೆ ಮತ್ತೊಮ್ಮೆ ತಿಂಡಿ ಕೇಳುವ ವಿಷಯ ಮರೆತುಹೋಯಿತು. ಚಿರಂತನ ತಟ್ಟೆಯಲ್ಲಿ ತಿಂಡಿ ಹಾಗೇ ಉಳಿದಿತ್ತು. ಅದೇಕೋ ತಿನ್ನುವ ಮನಸಾಗಲಿಲ್ಲ ಅವನಿಗೆ. ಹೊಟ್ಟೆ ಹಸಿಯುತ್ತಿದ್ದರೂ , ತಿಂಡಿ ಒಳಗೆ ಇಳಿಯದಾಯಿತು. ತಟ್ಟೆ ಕೆಳಗಿಟ್ಟು ಸಾಕೆಂಬಂತೆ ಸನ್ನೆ ಮಾಡಿದ ನಾಗಪ್ಪನವರಿಗೆ. ನಾಗಪ್ಪ ಮತ್ತೆ ಚಾಪೆಯ ಮೇಲೆ ಕುಳಿತರು.
" ನೋಡಿ ಗೋಪಾಲಯ್ಯ. ನಮಗೆ ಹುಡುಗನ ಆಚಾರ-ವಿಚಾರಗಳ ಬಗ್ಗೆ ಗೊತ್ತಿಲ್ಲ. ಆ ವಿಷಯದಲ್ಲಿ ನಾವು ಹೆಚ್ಚು ಒತ್ತಾಯ ಮಾಡೋದು ಇಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನೆಡಸಬೇಕಾದ್ರೆ ಕೆಲವು ಸಂಪ್ರದಾಯಬದ್ದ ಆಚರಣೆಗಳನ್ನ ಗಂಟುಕಟ್ಟಿ ಇಡಬೇಕಾಗುತ್ತೆ ಅನ್ನೋದು ನಮಗೂ ಗೊತ್ತಿದೆ. ಆದರೆ,  ಹುಡುಗನ ಕೆಲಸದ ವಿಷಯದಲ್ಲಿ ನಾವು ರಾಜಿಯಾಗೋಕೆ ತಯಾರಿಲ್ಲ. ನಮ್ಮ ಸಂಬಂಧಿಕರೆಲ್ಲಾ software ಇಂಜಿನಿಯರ್ರಿಗೆ ಹೆಣ್ಣು ಕೊಟ್ಟಿರೋದು. ನಾವು ಹಾಗೇ ಮಾಡೋಣ ಅನ್ಕೊಂಡೇ ಇಷ್ಟು ವರ್ಷ ತಡೆದದ್ದು. ಈಗ ನೀವೇನು ಹೇಳ್ತೀರೋ ಯೋಚನೆ ಮಾಡಿ "
 ಗೋಪಾಲಯ್ಯ ಚಿರಂತನ ಮುಖ ನೋಡಿದರು. ಚಿರಂತನ ಮುಖದಲ್ಲಿ ನಸುನಗೆಯಿತ್ತು. ನಗುತ್ತಲೇ ಹೇಳಿದ
" ಅಗತ್ಯವಾಗಿ ನೀವು ಇಂಜಿನಿಯರ್ರಿಗೆ ನಿಮ್ಮ ಹುಡುಗಿಯನ್ನ ಕೊಡಿ, ಅದ್ರಲ್ಲಿ ತಪ್ಪೇನೂ ಇಲ್ಲ. ನಾನು ಕಂಪ್ಯೂಟರ್ ಮುಂದೆ ಕಲಸ ಮಾಡೋದ್ರಿಂದ ನಿಮಗೆಲ್ಲಾ ತಪ್ಪು ಮಾಹಿತಿ ಸಿಕ್ಕಿರಬಹುದು. ನೇರವಾಗಿ ಮಾತನಾಡಿದ್ದು ಒಳ್ಳೆಯದೇ ಆಯ್ತಲ್ಲ. ಏನ್ರೀ ಗೋಪಾಲಯ್ಯ, ನಾವಿನ್ನು ಹೊರೊಡೋಣ್ವಾ, ಮತ್ತೆ ಅದೇ ರಸ್ತೇಲಿ ನಡೆದು, ಅದೇ ತರಹದ ಬಸ್ಸು ಹತ್ತಿ ಹೋಗಬೇಕಲ್ವೇನ್ರಿ, ಹೊರಡಿ ಬೇಗ ಮತ್ತೆ " .
ಗೋಪಾಲಯ್ಯ, ಚಿರಂತನಿಗೆ ಕುಳಿತೇ ಇರುವಂತೆ ಸನ್ನೆ ಮಾಡಿದರು. ನಾಗಪ್ಪನ ಕಡೆ ತಿರುಗಿ ಒಮ್ಮೆ ಅವರ ಮುಖವನ್ನೇ ದಿಟ್ಟಿಸಿದರು.  ಮುಖದಲ್ಲಿ ಅವರ ಮನಸಿನೊಳಗಿದ್ದ ಗೊಂದಲಗಳು ಸ್ಪಷ್ಟವಾಗಿ ತೋರುತ್ತಿತ್ತು.
" ನಾಗಪ್ನೋರೆ, ನಿಮಗೆ ಯಾರನ್ನು ಬೇಕಾದ್ರೂ ಆಯ್ಕೆ ಮಾಡಿಕೊಳ್ಳೋ ಸ್ವಾತಂತ್ರ್ಯ ಇದೆ. ಈ ಹುಡುಗನಿಗೂ ತಿಂಗಳಿಗೆ ಒಂದೈವತ್ತು ಸಾವಿರ ಸಂಬಳ ಬರುತ್ತೆ. ಆದರೆ ಇವನೋ , ಯಾವತ್ತೂ ಅದಕ್ಕೆ ಗಮನ ಕೊಟ್ಟೋನಲ್ಲ. ಸಮಯ ಸಿಕ್ರೆ ಸಾಕು, ಆ ಊರು-ಈ ಊರು ಅಂತ ತಿರುಗ್ತಾನೇ ಇರ್ತಾನೆ.  ಇವನ ಕಚೇರಿಯಲ್ಲಿ ಸೀನಿಯರ್ ಹುದ್ದೆ ಇವನದೆ.  ಅದು software ಇಂಜಿನಿಯರ್ರಿಗಿಂತಲೂ ಒಳ್ಳೆಯ ಹುದ್ದೇನೆ. ಇದೆಲ್ಲಾ ನಮಗೆ-ನಿಮಗೆ ಬೇಗ ಅರ್ಥವಾಗೋ ಅಂತಹುದ್ದಲ್ಲ. ಆದ್ರೆ , ನನಗೆ ಆಶ್ಚರ್ಯ ಆಗ್ತಾ ಇರೋ ವಿಷಯ ಅಂದ್ರೆ, ಅಷ್ಟೊಂದು ವಿಶಾಲ ಮನೋಭಾವ, ಉದಾರದಾಯಿತ್ವ ಹೊಂದಿದ್ದ ನಿಮ್ಮ ಮನಸ್ಸು-ವ್ಯಕ್ತಿತ್ವ ಹೀಗೇಕಾಯ್ತು ಅಂತ ? ! ".

(ಮುಂದುವರಿಸುತ್ತೇನೆ..)

Jul 21, 2010

ಆಹಾ ! ನೋಡದೊ ಹೊನ್ನಿನ ಜಿಂಕೆ ...

ಅದೊಂದು ಬಸ್ಸು. ಆ ಬಸ್ಸಿಗೆ ಬಾಗಿಲುಗಳಿರಲಿಲ್ಲ. ಬಸ್ಸೇ ಬಿರಿದು ಸಿಡಿದು ಹೋಗುವಂತೆ ಜನ ಅದರೊಳಗೆ ತುರುಕಿಕೊಂಡಿದ್ದರು. ಹಳ್ಳ-ಗುಂಡಿಗಳಿಂದ ಕೂಡಿದ್ದ ’ರಸ್ತೆ’ ಎನ್ನುವುದರ ಮೇಲೆ ಆ ’ಬಸ್ಸು’ ನಿಧಾನವಾಗಿ ಚಲಿಸುತ್ತಿತ್ತು. ಅದು express ಬಸ್ಸು. ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ನಾನಾ ಸ್ಟಾಪುಗಳು. ಒಂದೊಂದು ಸ್ಟಾಪಿನಲ್ಲೂ ಹತ್ತರಿಂದ ಹದಿನೈದು ನಿಮಿಷಗಳ ಕಮರ್ಷಿಯಲ್ ಬ್ರೇಕ್ !. ಡಯಾಬಿಟಿಸ್ ಇದ್ದು, ಹದಿನೈದು ನಿಮಿಷಕ್ಕೊಮ್ಮೆ ಮೂತ್ರವಿಸರ್ಜನೆ ಮಾಡಲೇಬೇಕಾದವರಿಗೆ ’ಈ’ ಬಸ್ಸು ಹೇಳಿ ಮಾಡಿಸಿದಂತಿತ್ತು. ತಾವು ಇಳಿಯಬೇಕಾಗಿರುವ ಸ್ಥಳ ಬಂದರೂ, ಸೀಟು ಬಿಟ್ಟು ಏಳಲೊಲ್ಲೆ ಎಂಬ ಮನೋಭಾವದಲ್ಲಿ ಅಂಟಿಕೊಂಡು ಕುಳಿತಿರುತ್ತಿದ್ದ ಜನರನ್ನು ಕಂಡಕ್ಟರನೇ ಕರೆದು ’ಎಬ್ಬಿಸಿ’ ಕೆಳಗೆ ಇಳಿಸಬೇಕಿತ್ತು. ಇಂತಹ ಅಪೂರ್ವವಾದ ಬಸ್ಸಿನಲ್ಲೇ ’ಗೋಪಾಲಯ್ಯ’ ಮತ್ತು ’ಚಿರಂತ’ ಪ್ರಯಾಣಿಸಲೇಬೇಕಾದ ಸಂದರ್ಭ ಒದಗಿ ಬಂದಿತ್ತು. ಬೆಂಗಳೂರಿನಿಂದ ಸಂಗಮೇಶ್ವರ ಪೇಟೆಯ ತನಕ ಸುಮಾರು ೩೦೦ ಕಿ.ಮೀ ದೂರವನ್ನು ನಿರಾಳವಾಗಿ ಕ್ರಮಿಸಿದ್ದ ಚಿರಂತನಿಗೆ , ಮುಂದಿನ ೨೦ ಕಿ.ಮೀ. ದೂರದ ’ಮಾರ್ಕಂಡೇಯ ಪುರವನ್ನು ತಲುಪುವುದು ಪ್ರಯಾಸದ ಪ್ರಯಾಣವಾಗಿತ್ತು. ಸಂಗಮೇಶ್ವರ ಪೇಟೆಯಲ್ಲಿಳಿದು ಇನ್ನೊಂದು ಸರ್ಕಾರಿ ಬಸ್ಸು ಹಿಡಿದು ಮಾರ್ಕಂಡೇಯ ಪುರವನ್ನು ತಲುಪಬೇಕಿತ್ತು. ಹಾಗೆಯೇ, ಆಶ್ಚರ್ಯವೆಂಬಂತೆ ನಿಗದಿತ ಸಮಯಕ್ಕೆ ಸರಿಯಾಗಿ ಬಂದ ಬಸ್ಸೊಂದನ್ನು ಹತ್ತಿದ ಗೋಪಾಲಯ್ಯ ಮತ್ತು ಚಿರಂತ, ಮಾರ್ಕಂಡೇಯ ಪುರಕ್ಕೆ ಎರಡು ಟಿಕೀಟುಗಳನ್ನು ಪಡೆದುಕೊಂಡರು. ಟಿಕೀಟಿನ ಮುಖದ ಮೇಲೆ express ಎಂದಿದುದನ್ನು ನೋಡಿ ಚಿರಂತನಿಗೆ ರವಷ್ಟು ಸಂತೋಷವಾಗಿತ್ತು. ಬಸ್ಸು ಐದು ಕಿ.ಮೀ. ಕ್ರಮಿಸುವಷ್ಟರಲ್ಲಿ ಅವನ ಮುಖ ಹರಳೆಣ್ಣೆ ಕುಡಿದವರ ಮುಖದಂತಾಗಿತ್ತು. ಬೆಂಗಳೂರಿನಲ್ಲಿ ತನ್ನ ಐಶಾರಾಮಿ ಬೈಕಿನಲ್ಲಿ ಬುರ್ರೆಂದು ತಿರುಗಾಡಿಕೊಂಡಿದ್ದವನನ್ನು ದಿಢೀರೆಂದು ಎತ್ತಿನ ಬಂಡಿಯ ಮೇಲೆ ಕುಳ್ಳಿರಿಸಿ ’ನಡೆ ಮುಂದೆ’ ಎಂದರೆ ಹೇಗಾಗಬೇಕು !?.  ಗೋಪಾಲಯ್ಯನವರದು ಷಷ್ಟಬ್ದಿ ಪೂರೈಸಿದ್ದ ವಯಸ್ಸು. ಚಿರಂತನಿಗೆ ಈಗಷ್ಟೇ ವಿವಾಹದ ವಯಸ್ಸು. ಬೆಂಗಳೂರಿನ ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಯೊಗ್ಯ ಕೆಲಸ ಮಾಡಿಕೊಂಡಿರುವವನು. ತಮ್ಮ ವಯಸ್ಸು ಹಾಗೂ ಅನುಭವಕ್ಕೆ ತಕ್ಕಂತೆ ಗೋಪಾಲಯ್ಯ ಎಲ್ಲಿ ಬೇಕಾದರೂ ತಿರುಗಬಲ್ಲವರಾಗಿದ್ದರು. ಚಿರಂತನಿಗೆ ಅಂತಹ ಅನುಭವಗಳು ಕಡಿಮೆಯಿತ್ತು. ತಂದೆಯ ಮಾತಿಗೆ ಕಟ್ಟುಬಿದ್ದು ’ಹೆಣ್ಣು’ ನೋಡುವುದಕ್ಕೆ ಗೋಪಾಲಯ್ಯನವರೊಟ್ಟಿಗೆ ಚಿರಂತ ಮಾರ್ಕಂಡೇಯ ಪುರಕ್ಕೆ ಹೊರಟಿದ್ದು ಅವನ ಮಟ್ಟಿಗೆ ಒಂದು ಸಾಧನೆಯೆ !.  ’ಈಗಲೇ ಮದುವೆ ಬೇಡ’ ಎಂದು ಹಟ ಹಿಡಿದಿದ್ದ ಮಗನನ್ನು ಹಾಗೂ-ಹೀಗೂ ಓಲೈಸಿ , ತಮ್ಮ ಸ್ನೇಹಿತ ಗೋಪಾಲಯ್ಯನೊಟ್ಟಿಗೆ ಹೆಣ್ಣು ನೋಡಿಕೊಂಡು ಬರಲು ಕಳುಹಿಸಿದ್ದರು ಶ್ರೀನಿವಾಸರಾಯರು. ಗೋಪಾಲಯ್ಯನವರಿಗೂ ರಾಯರ ಬಗೆಗೆ ಅನನ್ಯ ಪ್ರೀತಿಯಿತ್ತು. ಅವರಿಬ್ಬರೂ ಬಾಲ್ಯದ ಗೆಳೆಯರು. ಅದೂ, ಚಡ್ಡಿ ಹಾಕಿಕೊಳ್ಳುವುದಕ್ಕೂ ಮುಂಚಿನಿಂದಲೆ !. ಅಂದಮೇಲೆ ರಾಯರ ಮಾತಿಗೆ ಗೋಪಾಲಯ್ಯ ಇಲ್ಲವೆಂದಾರೆ ?. ಹೊರಟಿತು ’ಸವಾರಿ’ ಮಾರ್ಕಂಡೇಯ ಪುರಕ್ಕೆ. ಬಹಳ ತ್ರಾಸದಾಯಕ ಪ್ರಯಾಣದ ನಂತರ ಇಬ್ಬರೂ ಮಾರ್ಕಂಡೇಯ ಪುರದಲ್ಲಿ ಬಂದಿಳಿದಾಗ ಮಧ್ಯಾಹ್ನ ೧೨ ಗಂಟೆಯಾಗಿತ್ತು. ಮುಂಗಾರಿನ ಮೋಡಗಳು ಬಿಸಿಲ ಝಳವನ್ನು ಕಡಿಮೆಗೊಳಿಸಿದ್ದರಿಂದ ಚಿರಂತನಿಗೆ ಒಂದಷ್ಟು ಸಮಾಧಾನವಾಯಿತು.

" ರೀ ಗೋಪಾಲಯ್ಯ, ಎಲ್ರೀ ಅವರ ಮನೆ ? "
ತಮ್ಮಷ್ಟಕ್ಕೆ ಅದೇನನ್ನೋ ಯೋಚಿಸುತ್ತಿದ್ದ ಗೋಪಾಲಯ್ಯ, ಚಿರಂತನ ಮಾತಿನಿಂದ ವಾಸ್ತವಕ್ಕೆ ಬಂದರು.
" ಇಲ್ಲೇ, ಇನ್ನು ಎರಡು ಕಿ.ಮೀ. ಇದೇ ದಾರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಬಿಟ್ಟರೆ ರಸ್ತೆ ಬದಿಯಲ್ಲಿ ಕಾಫಿ಼ ತೋಟವೊಂದು ಸಿಗುತ್ತೆ, ಅಲ್ಲೇ ಇರೋದು ಅವರ ಮನೆ "  ಇಷ್ಟು ಹೇಳಿ ಗೋಪಾಲಯ್ಯ ಸರಸರನೆ ಹೆಜ್ಜೆ ಹಾಕಲು ಶುರುವಾದರು.
" ಇಷ್ಟಾಗಿದ್ದಲ್ಲದೆ ಇನ್ನು ನೆಡೆದು ಬೇರೆ ಹೋಗಬೇಕೆನ್ರಿ, ಮೊದಲೆ ಹೇಳಿದ್ದರೆ ನಾನು ಖಂಡಿತ ಬರ್ತಿರಲಿಲ್ಲ " ಚಿರಂತ ತನ್ನ ಹೆಗಲಲ್ಲಿದ್ದ ಬ್ಯಾಗನ್ನು  ಕೆಳಗೆ ಬಿಸುಟು ನಿಂತ.
ಚಿರಂತನ ಬಳಲಿಕೆಯನ್ನು ಅರಿತ ಗೋಪಾಲಯ್ಯ ಸಾವಧಾನವಾಗಿ ಬ್ಯಾಗನ್ನು ಮತ್ತೆ ಅವನ ಹೆಗಲಿಗೇರಿಸಿದರು.
"ಹುಡುಗಿ ತುಂಬ ಒಳ್ಳೆಯವಳು ಚಿರಂತ. ಆಚಾರ-ವಿಚಾರ ತಿಳಿದುಕೊಂಡಿರುವವಳು. ಸಂಪ್ರದಾಯಸ್ತರ ಮನೆಯ ಹುಡುಗಿ. ಆಕೆಯ ತಂದೆ-ತಾಯಿ ನನಗೂ ಆತ್ಮೀಯರಾಗಬೇಕು. ನೀನೊಮ್ಮೆ ವಧುವನ್ನು ನೋಡಿದೆಯೆಂದರೆ, ’ಇಲ್ಲ’ ಅನ್ನೋ ಮಾತೆ ನಿನ್ನಿಂದ ಬರೋದಿಲ್ಲ. ನೀನು ಒಪ್ಪಿಕೊಂಡ ನಂತರ ಸಂಪ್ರದಾಯದಂತೆ ಹೆಣ್ಣು ನೋಡೋ ಶಾಸ್ತ್ರ ಮಾಡೊಣ. ಏನಂತಿಯಾ ? "
" ನಾನು ಒಪ್ಪಿದರೆ ಸಾಕೆನ್ರೀ, ಆ ಹುಡುಗಿನೂ ಒಪ್ಪಬೇಕಲ್ವಾ, ನನ್ನಂತಹ ಎಡಬಿಡಂಗಿಯನ್ನು ಆಕೆ ಒಪ್ಪಿಕೊಂಡರೆ ಅದು ಆಕೆಯ ದುರಾದೃಷ್ಟವಷ್ಟೆ. ಹೋಗಲಿ ಬಿಡಿ.., ಇದೇನ್ರೀ ಗೋಪಾಲಯ್ಯ , ಬರೀ ಕಾಡಿನ ತರಹ ಕಾಣ್ತಾ ಇದೆ. ಮನೆಗಳೇ ಇಲ್ವೇನ್ರೀ ಇಲ್ಲಿ !? " ತಾನು ನಡೆದುಕೊಂಡು ಬಂದ ಅರ್ಧ ಕಿ.ಮೀ. ದಾರಿಯಲ್ಲಿ ಮನೆಗಳನ್ನು ಕಾಣದೆ ಕೇವಲ ಮರ-ಗಿಡಗಳನ್ನು ಕಂಡ ಚಿರಂತನ ಪ್ರಶ್ನೆ ಸಹಜವೆನಿಸಿತು ಗೋಪಾಲಯ್ಯನವರಿಗೆ.
ಆತ್ಮೀಯತೆಯಿಂದ ಅವನ ಬೆನ್ನುತಟ್ಟಿದರು ಗೋಪಾಲಯ್ಯ.  " ಇದು ಕಾಡಿನ ದಾರಿಯೇ ರಾಜ !. ಕಾಡಿನ ಒಳಗೆ ತಮ್ಮದೇ ಒಂದು ಕಾಫಿ಼ತೋಟ ಮಾಡಿಕೊಂಡು, ಸ್ವಂತ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಮಾಡ್ತಾ ಇದ್ದಾರೆ ನಿನ್ನ ಭಾವೀ ಮಾವನವರು ! "
ಗೋಪಾಲಯ್ಯನವರ ಮಾತನ್ನು ಕೇಳಿ ಚಿರಂತನಿಗೆ ನಗೆಯುಕ್ಕಿತು. " ಅಲ್ರೀ, ನಾನಿನ್ನು ಯಾರನ್ನೂ ನೋಡಿಯೇ ಇಲ್ಲ. ಭೇಟಿಯೂ ಆಗಿಲ್ಲ. ಆಗಲೇ ಸಂಬಂಧ ಕಲ್ಪಿಸ್ತಾ ಇದೀರಲ್ರೀ.., ಏನೋ , ನಿಮ್ಮ ಜೊತೆ ಬರದೇ ಇದ್ರೆ ನಮ್ಮಪ್ಪ ನನಗೆ ’ಕ್ಲಾಸ್’ ತಗೋತಿದ್ರು..ಬೇಸರ ಪಟ್ಟುಕೊಳ್ತಾ ಇದ್ರು ಅನ್ನೋ ಒಂದೇ ಕಾರಣಕ್ಕೆ ನಿಮ್ಮ ಜೊತೆ ಬಂದಿದೀನಿ ಅಷ್ಟೆ. ನೀವು ಈಗಲೇ ಸಂಬಂಧ ಕಲ್ಪಿಸಬೇಡ್ರಿ.."
ಹೀಗೇ ಸಾಗಿತ್ತು ಮಾತಿನ ಲಹರಿ.  ಕ್ರಮಿಸುತ್ತಿದ್ದ ದೂರವೂ ಸಾಗಿತ್ತು.  ಹಾಗೆ ಸಾಗುತ್ತಲೆ ಇದ್ದ ಚಿರಂತನಿಗೆ ನಾಮ ಫಲಕವೊಂದು ಕಾಣಿಸಿತು.  "ಭದ್ರಾ ವನ್ಯಧಾಮ" ಎಂದು ಬರೆದಿದ್ದುದರ ಕೆಳಗೆ ದಪ್ಪಕ್ಷರಗಳಲ್ಲಿ "ಆನೆಗಳಿವೆ ಎಚ್ಚರಿಕೆ" ಎಂದು ಬರೆಯಲಾಗಿತ್ತು. ಚಿರಂತ ಬೋರ್ಡಿನತ್ತ ಗೋಪಾಲಯ್ಯನವರ ಗಮನವನ್ನು ಸೆಳೆದ,...
" ಗೋಪಾಲಯ್ಯ, "ಆನೆಗಳಿವೆ ಎಚ್ಚರಿಕೆ" ಅನ್ನೋದು symbollic ಇರಬಹುದೇನ್ರೀ ? " ಚಿರಂತ ನಗುತ್ತಾ ಕೇಳಿದ. ಗೋಪಾಲಯ್ಯನವರೂ ನಕ್ಕರು..
"ಹಾಗೇನಿಲ್ಲಪ್ಪಾ , ನಿನ್ನ ಭಾವೀ ಪತ್ನಿ ಶಾಖವಾಗಿದ್ದಾಳೆ. ಶರೀರ-ಶಾರೀರಗಳನ್ನು ಹಿತ-ಮಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ನಿನಗೆ ಆಕೆಯ ಶರೀರದ ಬಗೆಗೆ ಯಾವ ಆತಂಕವೂ ಬೇಡ ".
ಇನ್ನೂ ಹೆಚ್ಚು ಮಾತನಾಡಿದರೆ ಈಗಲೇ ಎಲ್ಲರೊಡನೆಯೂ ಸಂಬಂಧ ಕಲ್ಪಿಸಿಬಿಡುತ್ತಾರೆನ್ನುವ ಯೋಚನೆಯಲ್ಲಿ ಚಿರಂತ ಮಾತಿಗೆ ತಾತ್ಕಾಲಿಕ ವಿರಾಮವನ್ನಿಟ್ಟ. ಮುಂದಿನ ದಾರಿ ಮೌನವಾಗಿಯೇ ಸಾಗಿತು. ಕಾಡಿನದಾರಿ, ಹಸಿರಿನ ಪರಿಸರ , ನಿತ್ಯವೂ ಮಾಲಿನ್ಯದೊಳಗೇ ಸಂಚರಿಸುತ್ತಿದ್ದ ಚಿರಂತನ ಮನಸಿಗೆ ಹಿತವೆನಿಸತೊಡಗಿತು. ಅದೇ ಮಧುರಲಹರಿಯಲ್ಲಿರುವಾಗಲೇ ಗೋಪಾಲಯ್ಯ ’ಮನೆ’ ಬಂತೆಂದು ಎಚ್ಚರಿಸಿದರು. ಸುತ್ತಲೂ ’ಕಾಫಿ಼’ ಗಿಡಗಳು. ಗಿಡಗಳ ಮಧ್ಯೆ  ಹತ್ತಾಳೆತ್ತರದ ಮರಗಳು, ಮರಗಳನ್ನು  ತಬ್ಬಿಕೊಂಡು ಹಬ್ಬಿದ್ದ ಏಲಕ್ಕಿ, ಮೆಣಸು, ವೀಳ್ಯದೆಲೆಯ ಬಳ್ಳಿಗಳು , ಇಡೀ ಪರಿಸರ ಚಿರಂತನ ಮನಸನ್ನು ಹಿಡಿದಿಟ್ಟಿತು. ಇವುಗಳ ನಡುವೆ ದೊಡ್ಡದೇ ಎನ್ನಬಹುದಾದ ಮಂಗಳೂರು ಹೆಂಚಿನ ಮನೆ. ಹಾಗೇ ಮೈಮರೆತಿದ್ದ ಚಿರಂತನನ್ನು ಗೋಪಾಲಯ್ಯ ಮನೆಯೊಳಗೆ ಬರುವಂತೆ ಕರೆದರು. ’ಶೂ’ ಕಳಚಿಟ್ಟ ಚಿರಂತನ ಕೈಯಿಗೆ ಹೆಂಗಸೊಬ್ಬರು ನೀರಿತ್ತರು. ಕೈ-ಕಾಲು ತೊಳೆದುಕೊಂಡು ಮನೆಯ ಹಜಾರಕ್ಕೆ ಕಾಲಿಟ್ಟವನಿಗೆ ಯಾವುದೋ ಸಿನಿಮಾದಲ್ಲಿಯ ತೊಟ್ಟಿ ಮನೆಯನ್ನು ನೋಡಿದ ಅನುಭವವಾಯ್ತು. ಗೋಪಾಲಯ್ಯ ಅದಾಗಲೇ ಚಾಪೆಯ ಮೇಲೆ ತಳವೂರಿದ್ದರು. ಚಿರಂತ ಅವರ ಪಕ್ಕದಲ್ಲೇ ಕುಳಿತುಕೊಂಡ. ಕುಳಿತುಕೊಂಡಿದ್ದು ನೆಪವಷ್ಟೆ..ಅವನ ಕಣ್ಣು ಬೇರೇನನ್ನೋ ಹುಡುಕುತ್ತಿತ್ತು !.

(ಮುಂದುವರಿಸುತ್ತೇನೆ..)  
............................................................................

{ ನಮ್ಮ ಮನೆಯಲೊಂದು ಪುಟ್ಟ ಪಾಪವಿರುವುದು,
ಎತ್ತಿಕೊಳಲು ಹೋದರದಕೆ ಕೋಪ ಬರುವುದು,
ಕೋಪ ಬಂದು ತನ್ನ ಮೈಯ ಪರಚಿಕೊಳುವುದು,
ಪರಚಿಕೊಂಡು ತನಗೆ ತಾನೇ ಅತ್ತುಬಿಡುವುದು . ಜಿ.ಪಿ.ಆರ್. }

(ಮೂರುವರೆ ತಿಂಗಳಿನ ನನ್ನ ಮಗನ ತುಂಟಾಟಗಳಿಂದಾಗಿ ಒಂದು ತಿಂಗಳಿನಿಂದ ನನ್ನ ಬ್ಲಾಗಿನಲ್ಲಿ ಏನೂ ಬರೆಯಲಾಗಿರಲಿಲ್ಲ. ಸದ್ಯಕ್ಕೆ ಕತೆಯೊಂದರ ಭಾಗವನ್ನು ಬರೆದಿದ್ದೇನೆ. ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ. ಎಂದಿನಂತೆ ಸ್ವೀಕರಿಸುವೆರೆಂದು ನಂಬಿದ್ದೇನೆ. )

****************************************************

ಕೊನೆಕಿಡಿ.

ಶಂಭುಲಿಂಗನಿಗೆ ಅಚಾನಕ್ಕಾಗಿ ಮಾತು ನಿಂತುಹೋಯಿತು. ವೈದ್ಯರನ್ನು ಕಾಣಲು ಒಡೋಡಿ ಹೋದ.
ಡಾಕ್ಟರೆದುರಿಗೆ ಇಟ್ಟಿದ್ದ ಹಾಳೆಯೊಂದರ ಮೇಲೆ ತನ್ನ ಸಮಸ್ಯೆಯನ್ನು ಬರೆದ. " ನನಗೆ ಮಾತು ನಿಂತು ಹೋಗಿದೆ " ಎಂದು.
ವೈದ್ಯ ಮಹಾಶಯರಿಗೆ ಅರ್ಥವಾಯಿತು. ಶಂಭುಲಿಂಗನನ್ನು ಪ್ರಶ್ನಿಸಿದರು..

" ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ನಿಮ್ಮ ಮಾತು ನಿಂತುಹೋಗಿರುವುದು ದೊಡ್ಡ ಸಮಸ್ಯೆಯೇನಲ್ಲ. ಇದನ್ನು ಖಂಡಿತ ಗುಣಪಡಿಸಬಹುದು. ಈಗ ಹೇಳಿ..ಅಂದಹಾಗೆ
 ಯಾವಾಗ ಹೀಗಾಯಿತು ನಿಮಗೆ...ಒಂದಷ್ಟು ನಿಮ್ಮ ಮಾತಿನಲ್ಲೇ ಹೇಳಿ..! "

 ಶಂಭುಲಿಂಗ ತನ್ನ  ಮುಂದಿದ್ದ ಮೇಜಿಗೆ ಹಣೆ ಚಚ್ಚಿಕೊಂಡ !!.

 ---------------------------------------------------------------------------------

                                                 ವಂದನೆಗಳೊಂದಿಗೆ...