Apr 14, 2011

ನನ್ನಜ್ಜನ ಪತ್ರಕ್ರಾಂತಿಗಳು


ನನ್ನ ಅಜ್ಜ  ನಮ್ಮನ್ನಗಲಿದ್ದು ೧೯೯೨ರಲ್ಲಿ. ಅಂದರೆ ಇಲ್ಲಿಗೆ ೧೯ ವರುಷಗಳು ಕಳೆದುಹೋಗಿದೆ. ಅವರು ಹುಟ್ಟಿದ್ದು ೧೯೦೮ ರಲ್ಲಿ. ಅಲ್ಲಿಗೆ ನನ್ನಜ್ಜ ಬದುಕಿದ್ದು ಒಟ್ಟು ೮೪ ವರುಷಗಳು. ಇನ್ನೊಂದು ತಲೆಮಾರು ಕಳೆದರೆ ಹಿಂದಿನವರು ೮೦ ವರುಷಗಳು ಬದುಕಿರುತ್ತಿದ್ದರೆ ? ! ಎಂದು ಅಚ್ಚರಿಯಿಂದ ಕೇಳುವ ಮಂದಿಯೂ ಇರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.  ನಾನು ಓದುತ್ತಿದ್ದುದು ನನ್ನೂರಿನ ಸರ್ಕಾರೀ ಕನ್ನಡ ಶಾಲೆಯಲ್ಲಿ ಮತ್ತು ನಾನಾಗ ೦೫ ನೆಯ ಇಯತ್ತೆಯಲ್ಲಿದ್ದೆ. ನನ್ನಜ್ಜನಿಗೆ ನನ್ನನ್ನು ಕಂಡರೆ ಬಲು ಪ್ರೀತಿಯಿತ್ತು, ಅದಕ್ಕೆ ಮೊದಲ ಕಾರಣವೆಂದರೆ ನಾನು ಅವರ ಪತ್ರ ಬರೆಯುವ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದುದು. ನಾನು ಪುಕ್ಕಟೆ ಸಹಾಯವನ್ನೇನೂ ಮಾಡುತ್ತಿರಲಿಲ್ಲ. ಎಲ್ಲಾ ಶನಿವಾರಗಳಲ್ಲೂ ನನ್ನ ಶಾಲೆಯಲ್ಲಿ ಬೆಳಗಿನ ವೇಳೆಯ ಕಲಿಕೆಯ ನಂತರ ೧೦ ಗಂಟೆಯಿಂದ  ಕಲಿಕೆಗೆ ಹೊರತಾದ ಕೆಲವು ಚಟುವಟಿಕೆಗಳು ಇರುತ್ತಿದ್ದವು  (ಹಾಡು ಹೇಳುವುದು, ಒಗಟು ಹೇಳುವುದು ಮುಂತಾದವು). ನನ್ನ ಹಾಗೂ ನನ್ನ ಸಹಪಾಟಿಗಳಿಗೆ ಇಂತಹ ಚಟುವಟಿಗೆಗಳು ಬೇಸರ ಬರಿಸುತ್ತಿದ್ದುದರಿಂದ ಇಪ್ಪತ್ತು ಪೈಸೆಗೆ ಕೈತುಂಬಾ ಸಿಗುತ್ತಿದ್ದ ಕಡಲೆಕಾಯಿಬೀಜದ ಪೆಪ್ಪರಮೆಂಟನ್ನು ತಂದು ತಿನ್ನುತ್ತಾ ಕೂರುತ್ತಿದ್ದೆವು. ಶನಿವಾರಗಳಂದು ಇಪ್ಪತ್ತು ಪೈಸೆ ಕೊಡುವ ಹೊಣೆಗಾರಿಕೆ ನನ್ನಜ್ಜನದಾಗಿರುತ್ತಿತ್ತು.  ಆಗ ನನ್ನಜ್ಜನಿಗೆ ೮೦ ವರುಷಗಳಾಗಿದ್ದುದರಿಂದ ವಯಸ್ಸಿಗೆ ಸಹಜವಾಗಿ ಅವರ ಕಣ್ಣಿನ ನೋಟ ಮಂದವಾಗಿತ್ತು. ಅವರೊಂದು ಕನ್ನಡಕವನ್ನೂ ಬಳಸುತ್ತಿದ್ದರು, ಆದರೆ ಅಂದಿನ ಕನ್ನಡಕಗಳು ಇಂದಿನಷ್ಟು ಹೊಸಮಾದರಿಯದಲ್ಲವಾದುದರಿಂದ ಕನ್ನಡಕ ಹಾಕಿಕೊಂಡರೂ ಅವರ ಕಣ್ಣಿನ ನೋಟದಲ್ಲೇನೂ ಸುಧಾರಣೆ ಕಂಡುಬರುತ್ತಿರಲಿಲ್ಲ . ನನ್ನನ್ನು ಪತ್ರ ಬರೆಯಲು ಅವರು ಕೇಳುತ್ತಿದ್ದುದು ಇಳಿಹೊತ್ತಿನ ನಂತರವೇ. ಆಗ ನಾನದರೂ ಅದೇನೋ ಬಹಳ ಕೆಲಸವಿರುವಂತೆ ಆಟವಾಡಿ ಅವರಿಂದ ಕಾಸು ಪಡೆದ ಬಳಿಕವೇ ಪತ್ರ ಬರೆದುಕೊಡಲು ಕೂರುತ್ತಿದ್ದೆ. ಆಗ ೧೫ ಪೈಸೆಯ ಅಂಚೆಪತ್ರಗಳು ನಮ್ಮ ಮನೆಯಲ್ಲಿ ಸಾಕಷ್ಟು ಇರುತ್ತಿತ್ತು. ಅವರು ಪತ್ರ ಬರೆಸುತ್ತಿದ್ದುದು ನಮ್ಮ ನೆಂಟರಿಗಾಗಲೀ ಹತ್ತಿರದವರಿಗಾಗಲೀ ಅಲ್ಲ, ಅದೇನಿದ್ದರೂ ಸರ್ಕಾರದ ದೊಡ್ಡ ಹುದ್ದೆಯಲ್ಲಿರುವ ಮಂತ್ರಿಗಳಿಗೆ ಮಾತ್ರ !.  ಇಳಿಹೊತ್ತಿನಲ್ಲಿ ಕರೆಂಟಿಲ್ಲದಿರುತ್ತಿದ್ದ ಮನೆಯಲ್ಲಿ ಸೀಮೆಎಣ್ಣೆ ಬುಡ್ಡಿ ಬೆಳಗಿಸಿಕೊಂಡು ಪತ್ರ ಬರೆಯುವ ಕಾಯಕಕ್ಕೆ ನಾನು ಮೊದಲಾಗುತ್ತಿದ್ದೆ. ನನ್ನ ತಂದೆಯವರು ಆಗಾಗ ಹೇಳುತ್ತಿದ್ದಂತೆ ನನ್ನ ಅಜ್ಜನಿಗೆ ಮನೆ-ಮಕ್ಕಳು ಎಂಬ ಹೊಣೆಗಾರಿಕೆಯೇ ಇರಲಿಲ್ಲವೇನೊ ಎಂದು ನಾನೂ ಒಮ್ಮೊಮ್ಮೆ ನಂಬುತ್ತಿದ್ದೆ, ಏಕೆಂದರೆ ನಾನು ಆ ಮಂತ್ರಿ ಮಹೋದಯರಿಗೆ ಬರೆದುಕೊಡುತಿದ್ದ ಪತ್ರಗಳಲ್ಲಿ ಯಾವ ಪತ್ರಕ್ಕೂ ತಿರುಗಿ  ಉತ್ತರ ಬಂದಂತೆ ನನಗೆ ತೋರಿರಲಿಲ್ಲ !. ಆದರೂ ಎಲ್ಲಾ ಕೆಲಸಗಳನ್ನೂ ಬದಿಗೊತ್ತಿ ಪತ್ರ ಬರೆಸುವುದನ್ನು ಮಾತ್ರ ಅವರು ತಪ್ಪಿಸುತ್ತಿರಲಿಲ್ಲ. ನನ್ನಜ್ಜ ಹೇಳಿದಂತೆ ನಾನು ಮಂತ್ರಿಗಳಿಗೆ ಬರೆಯುತ್ತಿದ್ದ ಪತ್ರದ ಒಕ್ಕಣೆ-ಸಾರಾಂಶ ಹೀಗಿರುತ್ತಿತ್ತು, ಮಹಾಸ್ವಾಮಿಗಳಾದ ಇಂತಹ ಮಂತ್ರಿಗಳೇ, ನೀವು ಕುಶಲವೆಂದು ನಂಬುತ್ತೇನೆ ..ಇತ್ಯಾದಿ. ನಂತರ ಸ್ವಂತದ ಜಮೀನಿನ ವಿಷಯವೋ , ಊರಿಗೆ ಕುಡಿಯುವ ನೀರಿನ ವ್ಯವಸ್ಥೆಗೋ, ದೇವಾಲಯದ ಜೀರ್ಣೋದ್ಧಾರದ ವಿಷಯವಾಗಿಯೋ ಹತ್ತು-ಹನ್ನೆರೆಡು ಸಾಲುಗಳಲ್ಲಿ ಆಗ್ರಹಪೂರ್ವಕವಾಗಿ ಬರೆಯಿಸುತ್ತಿದ್ದರು. ಆಗೆಲ್ಲಾ ನಾನು ಅದೆಷ್ಟು ಪತ್ರಗಳನ್ನು ಬರೆದುಕೊಟ್ಟೆ ಎಂಬುದು ಸರಿಯಾಗಿ ನೆನಪಿಲ್ಲವಾದರೂ ಸರಾಸರಿ ವಾರಕ್ಕೆ ನಾಲ್ಕು ಪತ್ರಗಳಂತೂ ಆಗುತ್ತಿತ್ತು. ಯಾವುದಕ್ಕೂ ಉತ್ತರ ಬರದಿದ್ದರೂ ಮತ್ತೆ-ಮತ್ತೆ ಪತ್ರ ಬರೆಯಿಸುತ್ತಿದ್ದುದನ್ನು ಕಂಡು ನನ್ನ ತಂದೆಯವರು ತಾತನ ಪ್ರತಿ ರೇಗುತ್ತಿದ್ದುದು ಮಾತ್ರ ನನಗೆ ತಿಳಿಯುತ್ತಿತ್ತು. ನನಗಂತೂ ಬರೆದುಕೊಡಲು ಬೇಸರವಾಗುತ್ತಿರಲಿಲ್ಲ, ಕಾರಣ ವಾರದ ಕೊನೆಯಲ್ಲಿ ಸಿಗುತ್ತಿದ್ದ ಕಾಸು !.  ಅಷ್ಟೆಲ್ಲಾ ಪತ್ರಗಳನ್ನು ಬರೆದರೂ ಪ್ರತ್ಯುತ್ತರ ಬರದಿರುವುದಕ್ಕೆ ಮೊದಲ ಮುಳಿಯೆಂದರೆ ಬರೆದ ಪತ್ರಗಳನ್ನು ನನ್ನ ತಾತ ಅಂಚೆ ಡಬ್ಬಕ್ಕೆ ಹಾಕದೆ ಎಲ್ಲವನ್ನೂ ತಮ್ಮ ಹಾಸಿಗೆಯ ತಲೆದಿಂಬಿನಡಿಯಲ್ಲಿಟ್ಟುಕೊಂಡು ಮಲಗುತ್ತಿದ್ದುದು !. ಬೆಳಗಾದಾಗ ನನಗೇನಾದರೂ ನೆನಪಾದರೆ  ಪತ್ರವನ್ನು ಡಬ್ಬಕ್ಕೆ ಹಾಕಲು ತಾತನಿಗೆ ನೆನಪು ಮಾಡುತ್ತಿದ್ದೆ, ಇಲ್ಲವಾದಲ್ಲಿ ಅವು ಹಾಗೇ ದಿಂಬಿನಡಿಯಲ್ಲಿಯೇ ಉಳಿದುಬಿಡುತ್ತಿದ್ದವು. ನನ್ನಮ್ಮ ಆಗಾಗೆ ದಿಂಬಿನಡಿಯಲ್ಲಿ ಕೈಯಾಡಿಸಿ ಪತ್ರಗಳನ್ನು ತೆಗೆದುಕೊಂಡು ಹೋಗಿ ಉರಿಯೊಲೆಗೆ ಹಾಕುತ್ತಿದ್ದರು !. ಅವರು ಹೇಳುತ್ತಿದ್ದ ವಿಳಾಸಗಳು ಸರಿಯಾಗಿ ಅರಿವಾಗುತ್ತಿರಲಿಲ್ಲವಾಗಿ ನನಗೆ ತೋಚಿದಂತೆ ವಿಳಾಸವನ್ನು ಬರೆದು ಬಿಡುತ್ತಿದ್ದೆ. ಹೇಗೂ ನನ್ನ ತಾತನಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲವಲ್ಲಾ !. ಡಬ್ಬಕ್ಕೆ ಹಾಕಿದ ಕೆಲವು ಪತ್ರಗಳು ಅದ್ಯಾವ ತಿಮ್ಮಪ್ಪನನ್ನು ತಲುಪುತ್ತಿತ್ತೋ ನಾಕಾಣೆ, ತಿರುಗಿ ನಮ್ಮ ಮನೆಗಂತೂ ಬರುತ್ತಿರಲಿಲ್ಲ.

ಇದೆಲ್ಲಾ ಕಣ್ಣು ಮಂದವಾದ ನಂತರದ ಕತೆಯಾದರೆ ಕಣ್ಣು ಚೆನ್ನಾಗಿದ್ದಾಗ  ಇನ್ನೂ ರೋಚಕವಾದ ಸನ್ನಿವೇಶಗಳು ನಡೆದಿವೆ. ನಾನಿನ್ನೂ ಹುಟ್ಟಿರದಿದ್ದ  ದಿನಗಳಲ್ಲಿ ನೆಡೆದಿದ್ದ ನಮ್ಮ ತಾತನ ಕ್ರಾಂತಿಗಳನ್ನು ನನ್ನ ತಂದೆಯವರು ಆಗಾಗ ಹೇಳುತ್ತಿದ್ದುದು ನನಗೆ ನೆನಪಿದೆ. 
ನನ್ನ ತಂದೆಯವರು ಹರೆಯದಲ್ಲಿದ್ದಾಗ (ಸುಮಾರು ೨೭-೨೮) ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸೇನೆಗೆ ಸೇರಿದ್ದು ೨೦ನೆಯ ವಯಸ್ಸಿನಲ್ಲಿ. ಸುಮಾರು ೮ ವರುಷಗಳು ಅವರು ನಾಗಾಲ್ಯಾಂಡಿನ ಗಡಿಯಲ್ಲಿ ಸೇನೆಯ ಸಿಪಾಯಿಯಾಗಿ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ನನ್ನ ತಾತನವರು ನನ್ನೂರಿನ ಸರಕಾರೀ ಧಾರ್ಮಿಕ ಕೇಂದ್ರವೊಂದರಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ನನ್ನ ತಾತನವರಿಗೆ ಸರಕಾರದ ವತಿಯಿಂದ ಬರುತ್ತಿದ್ದ ಸಂಬಳ ತಿಂಗಳಿಗೆ ೬೪ ರೂಪಾಯಿಗಳು !. ನನ್ನ ತಾತನಿಗೆ ಪುರೋಹಿತ್ಯದಂತಹ ಇತರೆ ಸಂಪಾದನೆಯಿದ್ದರೂ ಮನೆಗಾಗಿ , ಮನೆಯವರಿಗಾಗಿ  ಅವರು ವ್ಯಯಿಸುತ್ತಿದ್ದುದು ಮಾತ್ರ ನೂರರಲ್ಲಿ ೧ ಪಾಲು ಮಾತ್ರ. ಮಿಕ್ಕಿದ್ದೆಲ್ಲಾ ಅವರ ’ಸಮಾಜೋದ್ದಾರ’ದ ಕೆಲಸಕ್ಕೆ ವ್ಯಯವಾಗುತ್ತಿತ್ತು. ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು. ನನ್ನ ತಂದೆಯವರಿಗೆ ಮೂವರು ತಂಗಿಯರು ಹಾಗೂ ಒಬ್ಬ ತಮ್ಮ. ಇವರೆಲ್ಲರ ಜೀವನದ ಜೋಕಾಲಿಯನ್ನು ನನ್ನ ತಂದೆಯವರು ತಿಂಗಳಿಗೊಮ್ಮೆ ನಾಗಾಲ್ಯಾಂಡಿನಿಂದ ಕಳುಹಿಸುತ್ತಿದ್ದ ಪುಡಿಗಾಸಿನಿಂದಲೇ ತೂಗಬೇಕಾಗಿತ್ತು. ತಿಂಗಳಾಗುವ ಹೊತ್ತಿಗೆ ಸರಿಯಾಗಿ ನನ್ನಜ್ಜ ನನ್ನಪ್ಪನಿಗೆ ಹಣಕ್ಕಾಗಿ ಪತ್ರ ರವಾನಿಸಿರುತ್ತಿದ್ದರು . 
ಹೆಣ್ಣುಮಕ್ಕಳ ಮದುವೆ, ತಮ್ಮನ ಓದು, ಇದಕ್ಕೆಲ್ಲಾ ಮನೆಯಲ್ಲಿ ನನ್ನ ತಂದೆಯವರೇ ಹೊಣೆಯಾಗಬೇಕಿತ್ತು . ಅಂಡಲೆಯುವ ಕಾಯಕಕ್ಕೆ ಕಟ್ಟು ಬಿದ್ದಿದ್ದ ನನ್ನ ತಾತ ಅದೊಂದು ದಿವಸ ನನ್ನ ತಂದೆಯವರಿಗೆ ಒಂದು ಪತ್ರ ಬರೆದರು.
"ನನ್ನ ಮೈ ಸರಿಯಿಲ್ಲ, ಇನ್ನು ಹೆಚ್ಚು ದಿವಸ ಬದುಕಲಾರೆ ತಕ್ಷಣ ಹೊರಟು ಬಾ ! " ಎಂಬ ಒಕ್ಕಣೆಯ ಪತ್ರವನ್ನು ಕಂಡ ನನ್ನ ತಂದೆಯವರು ದುಗುಡದಿಂದ ಸರಿರಾತ್ರಿಯಲ್ಲೇ ಗಡಿಯಿಂದ ಯಾರಿಗೂ ಹೇಳದೇ ಹೊರಟು ಬಂದಿದ್ದರು. ಮನೆಯಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ನನ್ನ ಅಜ್ಜನ ಆರೋಗ್ಯವೂ ಸಹ !. ಹಾಗೆ ಹೇಳದೆ-ಕೇಳದೆ ಸೇನೆಯನ್ನು ಬಿಟ್ಟು ಬಂದುದರಿಂದ ನನ್ನ ತಂದೆಯವರನ್ನು ಮತ್ತೆ ಸೇನೆಗೆ ಸೇರಿಸಿಕೊಳ್ಳಲಿಲ್ಲ, ಯಥಾಪ್ರಕಾರ ನನ್ನ ತಾತ ಕೆಲಸ ಮಾಡುತ್ತಿದ್ದ ಧಾರ್ಮಿಕ ಕೇಂದ್ರದಲ್ಲೇ ನನ್ನಪ್ಪ ಮುಖ್ಯಸ್ಥರ ಹೊಣೆ ಹೊತ್ತರು. ನನ್ನಜ್ಜನ ಒಂದು ಪತ್ರ ನನ್ನ ತಂದೆಯವರನ್ನು ಅವರಿಷ್ಟಪಟ್ಟಿದ್ದ ದೇಶ ಸೇವೆಯಂತಹ ಕೆಲಸದಿಂದ ವಂಚಿತರಾಗುವಂತೆ ಮಾಡಿತ್ತು. ಸೇನೆಯಲ್ಲಿದ್ದ ನಮ್ಮ ತಂದೆಯವರು ಆ ಕೆಲಸವನ್ನು ತೊರೆದು ಬಂದಿದ್ದರೂ ಸಹ ಆ ಶಿಸ್ತು , ದೇಶಪ್ರೇಮವನ್ನು ಕೊನೆಯವರೆವಿಗೂ ತಮ್ಮ ಬದುಕಿನಲ್ಲಿ ಉಳಿಸಿಕೊಂಡಿದ್ದರು. 

ಅಂಚೆಪತ್ರಗಳ ಕತೆ ಒತ್ತಟ್ಟಿಗಿರಲಿ, ನನ್ನಜ್ಜನ ಮತ್ತೊಂದು ದೊಡ್ಡ ಪತ್ರಕ್ರಾಂತಿಯನ್ನು  ಹೇಳಲೇಬೇಕು. ಈಗ ಕ್ರಯಪತ್ರದ ಸರದಿ.

ನನ್ನ ತಂದೆಯವರು ಸೇನೆಯನ್ನು ತೊರೆದು ಊರಿಗೆ  ಬಂದು ಇಲ್ಲಿಯ ಕೆಲಸದ ಹೊಣೆಗಾರಿಕೆಯನ್ನು ಹೊತ್ತ ನಂತರ ಮೊದಲನೆಯ ತಂಗಿಯ ಮದುವೆಯ ಪ್ರಸ್ತಾವನೆಯನ್ನು ನನ್ನ ತಾತನವರ ಮುಂದಿಟ್ಟರು. ರವಷ್ಟು ಹಣ ಹೊಂದಿಸುವಂತೆಯೂ ಹೇಳಿದರು. ಬಿಡಿಗಾಸನ್ನೂ ತನ್ನದೆಂದು ಉಳಿಸಿಕೊಳ್ಳದಿದ್ದ ನನ್ನ ತಾತನ ಬಳಿ ಕಾಸೆಲ್ಲಿಂದ ಬರಬೇಕು ? ಅದಕ್ಕವರು ಮಾಡಿದ ಉಪಾಯವೇನೆಂದರೆ , ಫಲವತ್ತಾಗಿದ್ದ ೩ ಎಕರೆ ಕಪ್ಪುಮಣ್ಣಿನ ಕಬ್ಬಿನ ಗದ್ದೆಯನ್ನು
ಪರಿಚಯಸ್ಥರೊಬ್ಬರಿಗೆ ಅಡವಿಟ್ಟು ಹಣ ಪಡೆಯುವುದು. ಹಾಗೆ ಅಡಮಾನವಿಡುವಾಗ ಪತ್ರದಲ್ಲಿ ನನ್ನ ತಾತ ಬರೆದುಕೊಟ್ಟಿದ್ದು ಹೀಗೆ " ಗದ್ದೆಯನ್ನು ೨೦೦ ರೂಪಾಯಿಗೆ ಅಡವಿಡುತ್ತಿದ್ದೇನೆ, ನನಗೆ ಈ ಹಣವನ್ನು ೨ ತಿಂಗಳಲ್ಲಿ ಹಿಂದಿರುಗಿಸಲಾಗದಿದ್ದಲ್ಲಿ ಇದನ್ನೆ ಕ್ರಯಪತ್ರವೆಂದು ತಿಳಿದು ಗದ್ದೆಯನ್ನು  ಸ್ವಂತಕ್ಕೆ ಮಾಡಿಕೊಳ್ಳುವುದು !". ಎರಡು ತಿಂಗಳಲ್ಲ, ನನ್ನ ತಂದೆಯವರಿಗೆ ಈ ವಿಷಯ ತಿಳಿದದ್ದು ಎರಡು ವರುಷದ ನಂತರ. ಅದಾಗಲೇ ಗದ್ದೆಯನ್ನು ಅಡವಿರಿಸಿಕೊಂಡಿದ್ದವರು ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿಸಿಕೊಂಡಾಗಿತ್ತು. ನನ್ನಜ್ಜನಿಗೆ ಗದ್ದೆಯನ್ನಿಟ್ಟು ೨೦೦ ರೂ ಪಡೆದಿದ್ದ ವಿಷಯ ಯಾವಾಗಲೋ ಮರೆತು ಹೋಗಿತ್ತು !.  ನಂತರ ನನ್ನ  ತಂದೆಯವರ ಕಾನೂನು ಹೋರಾಟ ಮುಂತಾದವುಗಳು ನಡೆದವು. ಇರಲಿ,

ಹೀಗೆ ಹೇಳುತ್ತಾ ಹೊರಟರೆ ಸದ್ಯಕ್ಕೆ ಮುಗಿಯುವುದಿಲ್ಲ. ನನ್ನಜ್ಜನಿಗೆ ಹೊಣೆಗಾರಿಕೆ ಇತ್ತೋ ಇಲ್ಲವೋ , ಹವ್ಯಾಸಕ್ಕಾಗಿ ಹಾಗೆಲ್ಲಾ ವರ್ತಿಸುತ್ತಿದ್ದರೋ ಅಥವಾ ಅಂದಿನ ಕೆಲವು ಜನಗಳ ಮನೋಭಾವವೇ ಹಾಗಿರುತ್ತಿತ್ತೋ ಎಂದೆಲ್ಲಾ ಹಲವು ತೆರನಾಗಿ ಬಹಳ ಸಲ ಯೋಚಿಸುತ್ತೇನೆ. ಒಮ್ಮೊಮ್ಮೆ ನಗುವೂ ಬರುತ್ತದೆ. :)
ಅದೇನೇ ಇದ್ದರು ನನ್ನಜ್ಜ ನನಗೆ ಕೊಡುತ್ತಿದ್ದ ಇಪ್ಪತ್ತು ಪೈಸೆಯ ನೆನಪಾದಾಗ ಮನಸು ಅರಳುತ್ತದೆ,  ದಿಗಂತದೆಡೆಗೆ ಮುಖ ತಿರುಗಿಸಿ ನಗುತ್ತೇನೆ. :) ಮತ್ತೆ ಎದ್ದು ಕೊಡವಿಕೊಂಡು ಕೆಲಸಕ್ಕೆ ಹೊರಡುತ್ತೇನೆ .

( ಇದು ಕಾಲ್ಪನಿಕವಲ್ಲ :))

---------------------------------------------------------

ಕಿಡಿ

" ಜನಲೋಕಪಾಲ ಸಮಿತಿಯಲ್ಲಿರಲು ಅಣ್ಣಾ ಹಜಾರೆಯವರೇನು ಜನರಿಂದ ಆರಿಸಿ ಬಂದಿದ್ದಾರೆಯೇ ? " --ಕೃಷ್ಣ ಭೈರೇಗೌಡ್ರು.

ಇಲ್ಲಾ ಗೌಡ್ರೆ, ನಾವು ಹಜಾರೆಯವರನ್ನು ಹೊಲಸಿನ ಹೊಂಡಕ್ಕೆ ಇಳಿಸುವುದಿಲ್ಲ !!

---------------------------------------------------

ವಂದನೆಗಳೊಂದಿಗೆ.