Jan 14, 2010

ಅಚ್ಚರಿ-ವಿಸ್ಮಯ!


ಬೆಂಗಳೂರಿನ (ವಿಸ್ಮಯ ನಗರಿಯ!?) ಗವಿ ಗಂಗಾಧರೇಶ್ವರ ದೇವಾಲಯದಲ್ಲಿಂದು (ದಿನಾಂಕ ೧೪) ಶಿವಲಿಂಗದ ಮೇಲೆ ಸೂರ್ಯ ರಶ್ಮಿಯು ಚುಂಬಿಸಿದ ವಿಸ್ಮಯ ಮತ್ತು ಅಚ್ಚರಿ ನಡೆದೇಹೋಯಿತು! ಭಕ್ತರೆಲ್ಲರೂ ಪುನೀತರಾದರು. (ಆ ಪಾವಿತ್ರ್ಯತೆಯ ಬಗ್ಗೆ ನನ್ನ ಯಾವ ಆಕ್ಷೇಪಣೆಯೂ ಇಲ್ಲ!!). ದೂರದರ್ಶನದ ಖಾಸಗಿ ವಾಹಿನಿಗಳಂತೂ ನೇರ ಪ್ರಸಾರ ಮಾಡಿ ಇದನ್ನು ವಿಸ್ಮಯ ಮತ್ತು ಅಚ್ಚರಿ ಎಂದು ಸಾರಿದವು. ಈ ವಿಸ್ಮಯ ಹೇಗೆ ಸಾಧ್ಯವಾಯಿತು ? ....., ನಿಮಗೊಂದು ಉದಾಹರಣೆ ಕೊಡುತ್ತೇನೆ. ನಿಮ್ಮದೊಂದು ಚಂದದ ಮನೆಯುಂಟಲ್ಲಾ..... ಆ ಮನೆಯ ಪೂರ್ವ ಅಥವಾ ಪಶ್ಚಿಮದ ಗೋಡೆಯ ಮೇಲೆ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲೊಂದು ಕಿಟಕಿ ಮಾಡಿಸಿಡಿ. ಕಿಟಕಿಯಿಂದ ಸೂರ್ಯರಶ್ಮಿ ಒಳಗೆ ಬರಲೇ ಬೇಕಲ್ಲವೇ?! ಮನೆಯೊಳಗೆ ಬಂದ ಕಿರಣಗಳು ಎಲ್ಲಿ ಬೀಳುವುದೋ ಆ ಸ್ಥಳದಲ್ಲಿ ಅಭಿಮುಖವಾಗಿ ಒಂದು ದೇವರ ವಿಗ್ರಹವನ್ನಿಡಿ... ಅರೆ! ವಿಗ್ರಹದ ಮೇಲೆ ಬಿತ್ತಲ್ಲಾ ಸೂರ್ಯರಶ್ಮಿ...! ಸರಿಯಾಗಿ ಸಮಯ ನೋಡಿಕೊಳ್ಳಿ ಮತ್ತೆ ಮುಂದಿನ ವರ್ಷ ಅರ್ಧ-ಮುಕ್ಕಾಲು ಗಂಟೆ ಹೆಚ್ಚು-ಕಮ್ಮಿ ಸೂರ್ಯರಶ್ಮಿ ನೀವಿಟ್ಟ ದೇವರ ವಿಗ್ರಹದ ಮೇಲೆ ಬಿದ್ದೇ ಬೀಳುತ್ತದೆ.... ಕಾರಣ ಸೂರ್ಯನ ಬೆಳಕು ಮತ್ತು ಕಿಟಕಿ. ಕಿಟಕಿಯೇ ಇಲ್ಲದ್ದಿದ್ದರೆ ಸೂರ್ಯರಶ್ಮಿ ಒಳಗೆ ಬರಲು ಸಾಧ್ಯವೇ? ಹಾಗೆಯೇ ಗಂಗಾಧರೇಶ್ವರ ದೇವಾಲಯದಲ್ಲೂ ಸರಿಯಾದ ಸಮಯಕ್ಕೆ ಕಿಟಕಿ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುತ್ತದೆ. ಸೂರ್ಯ ತನ್ನ ನಿರ್ಧಿಷ್ಟ ಕೋನಕ್ಕೆ ಬಂದಾಗ ವಕ್ರೀಭವನದ ಮೂಲಕ ಬೆಳಕು ಎಲ್ಲೆಡೆಯಲ್ಲಿಯೂ ಪಸರಿಸಲೇಬೇಕು... ಕಿಟಕಿಯ ಮೂಲಕವೂ ಸಹ. ಕಿಟಕಿ ಎಲ್ಲಿಡಬೇಕು ಅಥವಾ ಎಲ್ಲಿರಬೇಕು ಎಂಬ ಜಾಣ್ಮೆಯಷ್ಟೇ ಇಲ್ಲಿ ಮುಖ್ಯ. ಹೀಗೆ ಮಕರ ಸಂಕ್ರಮಣದಂದು ಕಿಟಕಿಯ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುವುದು ಒಂದು ಸಹಜ ಪ್ರಕ್ರಿಯೆ. ಇದರಲ್ಲಿ ವಿಸ್ಮಯವಾಗಲೀ ಅಚ್ಚರಿಯಾಗಲೀ ಇಲ್ಲವೆಂದೇ ನನ್ನ ಅಭಿಮತ. ’ಶೃಂಗೇರಿ’ಯ ವಿದ್ಯಾಶಂಕರ ದೇವಾಲಯದಲ್ಲೂ ೧೨ರಾಶಿಗಳ ಕಂಬಗಳಿವೆ. ಈ ದೇವಾಲಯ ನಿರ್ಮಾಣ ಮಾಡುವಾಗಲೇ ಸೂರ್ಯರಶ್ಮಿಯು ಯಾವ-ಯಾವ ಕೋನದಿಂದ ಎಲ್ಲೆಲ್ಲಿ ನಿಖರವಾಗಿ ಬೀಳಬಹುದು ಎಂದು ವೈಜ್ಞಾನಿಕವಾಗಿ ಅಂದಾಜಿಸಿ ಸೌರಮಾನ ಪದ್ದತಿಯ ರೀತಿ ಸೂರ್ಯನ ಮೇಷಾದಿ ರಾಶಿ ಪ್ರವೇಶವಾದಾಗ ಆ ನಿರ್ದಿಷ್ಟ ರಾಶಿಯ ಕಂಬದ ಮೇಲೆ ಬೆಳಕು ಬೀಳುವಂತೆ ನಿರ್ಮಿಸಿದ್ದಾರೆ. ಇದು ನಿರ್ಮಾಣದ ಮತ್ತು ನಿರ್ಮಾತೃವಿನ ಪಾಂಡಿತ್ಯ, ಕೌಶಲ್ಯದ ವಿಸ್ಮಯವೇ ಹೊರತು ಸೂರ್ಯರಶ್ಮಿಯದ್ದಲ್ಲ.( ಅಂತಹ ಮಹಾನುಭಾವರನ್ನು ಮರೆತುಬಿಡುತ್ತಾರೆ.... ಇಂತಹ (ಅ)ವಿಸ್ಮಯಗಳು ಪ್ರಚಾರವಾಗುತ್ತದೆ .!) ಇದು ಎಲ್ಲಾ ದೇವಾಲಯಗಳಲ್ಲೂ ಮತ್ತು ನಮ್ಮ ನಿಮ್ಮ ಮನೆಗಳಲ್ಲೂ ನೆಡೆಯುವ ಸಾಮಾನ್ಯ ಕ್ರಿಯೆ.
( ಮುಖ್ಯವಾಗಿ ಸೂರ್ಯನ ಕಿರಣಗಳ ಪ್ರವೇಶಕ್ಕೆ ಯಾವುದೇ ಅಡೆ-ತಡೆಗಳಿರಬಾರದಷ್ಟೆ. ಕಾಂಕ್ರೀಟ್ ಕಾಡಿನಲ್ಲಿ ಇದು ಕಷ್ಟವೇ ಸರಿ !) ಈ ಸಹಜ ಪ್ರಕ್ರಿಯೆಯನ್ನು ಅಚ್ಚರಿ-ವಿಸ್ಮಯ ಎಂದೆಲ್ಲಾ ಸಾರಿ.. ನಂಬುವ ಜನರನ್ನು ಇನ್ನಷ್ಟು ಮೌಢ್ಯಕ್ಕೆ ತಳ್ಳುವ ಅವಶ್ಯಕತೆಯಿದೆಯೇ ?? ಜಗತ್ತನ್ನೇ ಬೆಳಗುತ್ತಿರುವ ಸೂರ್ಯನ ಕಿರಣಗಳು ಎಲ್ಲೆಡೆಯೂ ಪಸರಿಸಲೇಬೇಕಲ್ಲವೇ ? ಆದರೂ ಇದಕ್ಕೆಲ್ಲಾ ಇನ್ನೊಂದು ಮಹತ್ತರವಾದ ಮತ್ತು ಅತ್ಯಂತ ಪ್ರಮುಖವಾದ ಕಾರಣವೊಂದಿದೆ....ಅದೇನು ಗೊತ್ತೆ.........???
???
???

???

" ಭೂಮಿ ತಿರುಗುತ್ತಿದೆ........ಅದೂsss ತನ್ನ ಕ್ಷಿತಿಜದಲ್ಲಿ....ಅತ್ಯಂತ ನಿಖರವಾಗಿ....!!! " ( ಭೂಮಿಯ ನಿಖರ ಚಲನೆಯಿಂದಲೇ ಅಲ್ಲವೇ ಹಗಲು, ರಾತ್ರಿ, ಸಂಕ್ರಮಣ, ಗ್ರಹಣ....ಎಲ್ಲವೂ..!!ಸೂರ್ಯ ಚಲಿಸುವುದಿಲ್ಲ...ಚಲಿಸುವುದು ಭೂಮಿ ಮಾತ್ರ...: ಇದನ್ನೇ ಆಧಾರವಾಗಿಟ್ಟುಕೊಂಡು ಮತ್ತೊಮ್ಮೆ ಲೇಖನವನ್ನು ಓದಿ ನೋಡಿ..... :)
.................................................................................................................................................................................................................

ಖೊನೆ ಖಿಡಿ :

ಸಂಬು : ಯಾಕ್ಲಾ ಲಿಂಗ ಬರೀ ಪುಟುಗೋಸಿಲಿ ಕುಂತೀಯಾ ?
ಲಿಂಗ : ಆ ದೊಡ್ ಮನ್ಸ್ರೆಲ್ಲಾ ಶೆಖೆ ಕಮ್ಮಿ ಮಾಡವಾ ಅಂತ ಸೂಟು-ಬೂಟು ಆಕ್ಯಂಡು ಅದೆಲ್ಲೊ ಸೇರಿದ್ದ್ರಂತಲ್ಲಾ......ಅದ್ಕೆಯಾ ..ನಾನ್ ಇಷ್ಟಾದ್ರೂ ಮಾಡನಾ ಅಂತ !!
( ಜಾಗತಿಕ ತಾಪಮಾನದ ಬಿಸಿ ಶಂಭುಲಿಂಗರಿಗೆ ತಟ್ಟಿದ್ದ ಪರಿ ಇದು !!)