Feb 23, 2010

ತುಣುಕಾಟ !

ಕಣ್ಣಲ್ಲಿ ಕನಸು
ಮನದಲ್ಲಿ ಆದರ್ಶ
ತುಂಬಿ ಸಾಗುತ್ತಿರುವೆ
ನಿನ್ನದೇ ದಾರಿಯಲ್ಲಿ
ಅದೇ ಧಾಟಿಯಲ್ಲಿ....


ಬದುಕು ಬಂಜರೆಂದು
ಬೆಳೆಯಲಾಗದೆಂದು
ಕುಗ್ಗಿದ್ದೆ ಮನದಲ್ಲಿ...
ಬದುಕು ಸೊಗಸೆಂದು
ಜೀವನೋತ್ಸಾಹವೆಂದು
ಹೇಳೆಬ್ಬಿಸಿದ್ದೆ ನೀ ಕನಸಲ್ಲಿ ..!


ನೀ ನೆಟ್ಟ ಗಿಡ
ಬೆಳೆದು ಮುಟ್ಟಿದೆ ಮುಗಿಲ !
ಕೊರಗಿತ್ತು ತನು
ಹರುಷಕ್ಕೆ ನೀನಿಲ್ಲ
ಹೇಳಿತ್ತು ಮನ 
ಹೃದಯಕ್ಕೆ ನೀನೆಲ್ಲ...


--------------*-------------


ಈ ಹುಡುಗಿಯರೇ ಹೀಗೆ..
ಮಧು ತುಂಬಿದ ಹೂಗಳ ಹಾಗೆ,
ಹುಡುಗರು...?
ಅತ್ತಿಂದಿತ್ತ ಹಾರಾಡುವ 
ದುಂಬಿಗಳ ಹಾಗೆ !


--------------*----------------
(ಮೊದಲ ಪ್ರಯತ್ನ..ಪ್ರ‍ೋತ್ಸಾಹವಿರಲಿ :) )

Feb 15, 2010

ಸುರಭಿ V/S ದೊಡ್ಡಗೌಡ್ರು...

                       News courtesy : Kannadaprabha
ಬದುಕುವ ಹಕ್ಕು ಸಕಲ ಜೀವಿಗಳಿಗೂ ಇದೆ. ’ಆನೆ’ಯಿಂದ ’ಅಮೀಬಾ’ವರೆಗೂ ಜೀವಿಗಳಿಗೆ ತನ್ನದೇ ಆದ ಬದುಕುವ ಪರಿಸರವಿದೆ. ಹಾಗೆಯೇ, ’ಅಮೃತ’ ಸಮಾನವಾದ ಹಾಲನ್ನು ನೀಡುವ ’ಸುರಭಿ’ ಗೂ ತನ್ನಂತ್ಯದವರೆಗೆ ಬದುಕುವ ಎಲ್ಲಾ ಹಕ್ಕನ್ನೂ ಸೃಷ್ಟಿಯೇ ನೀಡಿದೆ. ನಮ್ಮ ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡರು ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿ ನನ್ನ ವಿಚಾರಕ್ಕೆ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಲ್ಲಿ ಅವರುದುರಿಸಿರುವ ಅಣಿಮುತ್ತುಗಳನ್ನು ಮಾತ್ರ ವಿಚಾರ ಮಾಡುತ್ತಿದ್ದೇನೆ...
  ಮಾಧ್ಯಮಗಳಿಗೆ ಹೇಳಿಕೆ ನೀಡೀರುವ ದೊಡ್ಡಗೌಡರು, ಗೋಹತ್ಯೆ ನಿಷೇಧವನ್ನು ವೈಜ್ಞಾನಿಕವಾಗಿ ವಿಮರ್ಷಿಸಿ ಜಾರಿಗೆ ತರಬೇಕೆಂದು ಹೇಳುತ್ತಾ ಗೋಹತ್ಯೆ ನಿಷೇಧದ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಷೇಧ ಮಾಡುವುದೇ ಆದರೆ ವೈಜ್ಞಾನಿಕ ವಿಧಾನದಲ್ಲೇ ನಿಷೇಧಿಸೋಣ ಬಿಡಿ !. ಸಮಾಜದ ಒಂದು ಸಮುದಾಯವನ್ನು ಓಲೈಸಲು ’ಆಳುವ ಕೂಟ’ ನೆಡೆಸುತ್ತಿರುವ ಹುನ್ನಾರವೇ ಇದಾದರೆ, ದೊಡ್ಡಗೌಡರ ಮಾತುಗಳೂ ಸಹ ಸಮಾಜದ ಒಂದು ಸಮುದಾಯದ ಪರವಾಗಿಯೇ ಇದೆ. ಗೋಮಾಂಸ ಮಾರಾಟವನ್ನೇ ನೆಚ್ಚಿಕೊಂಡಿರುವ ಸಂಸಾರಗಳು ಬೀದಿಗೆ ಬರುವುದಾದರೆ, ಆಲೂಗೆಡ್ಡೆಗೆ ರೋಗ ಬಂದು , ಅಕಾಲಿಕ ಮಳೆಯಿಂದ ಕಾಫಿಗೆ ಕೊಳೆರೋಗ ಬಂದು ರೈತರೂ ಬೀದಿಗೆ ಬಿದ್ದಿದ್ದಾರೆ. ಅದೂ ಗೌಡರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ..!. ಆದರೆ ಗೌಡರ ಹೋರಾಟವೇಕೋ ’ನೈಸ್’ ರಸ್ತೆಯಲ್ಲೇ ಉರುಳಾಡುತ್ತಿದೆ. ಗೋಹತ್ಯೆ ನಿಷೇಧವನ್ನು ವಿರೋಧಿಸುವುದರಿಂದ ಒಂದು ವರ್ಗದ ಜನರ ವಿಶ್ವಾಸವನ್ನು (ಓಟನ್ನು !) ಗಳಿಸಬಹುದೆಂದು ಗೌಡರು ಭಾವಿಸಿದ್ದರೆ..ಅದು ಅವರ ಹಳೆಯ ರಾಜಕೀಯ ಲೆಕ್ಕಾಚಾರವೇ ಸರಿ. ಸಮಾಜದ ಎಲ್ಲಾ ವರ್ಗದಲ್ಲೂ ವಿಚಾರವಂತರಿದ್ದಾರೆ , ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ತಿರುವಣ್ಣಾಮಲೈಗೋ, ಮಧುರೈಗೋ ತೆರಳಿ ’ಗೋಮಾತೆ’ಯ ಬಾಲಕ್ಕೇss ಶ್ರದ್ಧಾ-ಭಕ್ತಿಯಿಂದ ಪೂಜೆಗೈಯುವ ಗೌಡರು ಕರ್ನಾಟಕದಲ್ಲಿ ಗೋಹತ್ಯೆ ನಿರಂತರವಾಗಿ ಸಾಗಲಿ ಎಂಬಂಥ ಮಾತುಗಳನ್ನಾಡುತ್ತಾರೆ.
ಆಳುವ ಕೂಟವೂ ಗೋಹತ್ಯೆ ನಿಷೇಧ ವನ್ನು ರಾಜಕೀಯವಾಗಿಯೇ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ವಿರೋಧಿಗಳ ವಿರೋಧವನ್ನು ನಿರೀಕ್ಷಿಸಿಯೇ ಇದ್ದ ರಾಜ-ಮಂತ್ರಿಗಳು ಸರಿಯಾದ ಸಮಯ ನೋಡಿ ’ದಾಳ’ ಹಾಕಿದ್ದಾರಷ್ಟೆ. ಇಂತಹ ’ದಾಳ’ಗಳು ಮಾಧ್ಯಮಗಳಿಗೆ ಆಹಾರವಾಗಬಲ್ಲವೇ ವಿನಹ ಜನಸಾಮಾನ್ಯರ ಮನಗೆಲ್ಲಲು ಸಾಧ್ಯವಾಗುವುದಿಲ್ಲ. ವಿರೋಧದ ನಡುವೆಯೂ ಈ ಕಾಯಿದೆಯೇನಾದರೂ ಅನುಮೋದನೆಗೊಂಡು ಜಾರಿಗೆ ಬಂದರೆ, ಪ್ರಾಮಾಣಿಕವಾಗಿ ಅನುಷ್ಟಾನಗೊಂಡರೆ ಅದೊಂದು ರಾಜಕೀಯ ಪವಾಡವೇ ಸರಿ !. ಗೋಮಾಂಸವನ್ನು ಮನೆಯಲ್ಲೂ ಸಂಗ್ರಹಿಸಿಡುವಂತಿಲ್ಲ ಎಂಬ ಅಂಶವೂ ಕಾಯಿದೆಯಲ್ಲಿದೆಯಂತೆ. ಗೌಡರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ’ಕೆಲವರು ಹೊರ ದೇಶಗಳಿಂದ ಆಮದು ಮಾಡಿಕೊಂಡು ’ಬೀಫ್’ ಅನ್ನು ಇಟ್ಟುಕೊಳ್ಳುತ್ತಾರೆ, ಅದನ್ನೂ ಬೇಡವೆಂದರೆ ಹೇಗೆ?’ ಎಂದು ಕೇಳುತ್ತಾರೆ. ಏಕೆ ? ನಮ್ಮ ದೇಶದ ನಾಟಿ ಹಸುಗಳ ಮಾಂಸ ರುಚಿಕರವಲ್ಲವೇ ? ಭರತಖಂಡದ ಪ್ರಧಾನಿಯಾಗಿದ್ದವರು, ಸಮಾಜದ ಎಲ್ಲಾ ಸ್ತರದವರ ಮುಖವಾಣಿಯಾಗಬೇಕಾದವರು ’ಕೆಲವೇ ಕೆಲವರು’ ಸಂಗ್ರಹಿಸಿಟ್ಟುಕೊಳ್ಳುವ ಗೋಮಾಂಸದ ಪರವಾಗಿ ವಕಾಲತ್ತು ವಹಿಸಬೇಕೆ ? ದೊಡ್ಡಗೌಡರು ಇನ್ನೊಂದು ಮೂಲ’ಭೂತ’ವಾದ ಪ್ರಶ್ನೆಯನ್ನೇ ಕೇಳಿದ್ದಾರೆ...
ಹಳ್ಳಿಗಳಲ್ಲಿ ವಯಸ್ಸಾದ-ರೊಗಬಂದಿರುವ ಗೋವುಗಳನ್ನು ಮಾರಾಟಮಾಡುವ ಪದ್ದತಿಯಿದೆ, ಇಂತಹ ಗೋವುಗಳಿಂದ ಪ್ರಯೋಜನವೇನೂ ಇಲ್ಲ, ಇವನ್ನು ಏನು ಮಾಡಬೇಕು ? ಸಾಧ್ಯವಾದರೆ ಗೋಶಾಲೆಗಳನ್ನು ತೆರೆದು ಆಶ್ರಯ ನೀಡಬಹುದಲ್ಲವೇ " ಎನ್ನುತ್ತಾರೆ. ಸರ್ಕಾರೀ ಗೋಮಾಳಗಳ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ !.
ವಯಸ್ಸಾದವರನ್ನೆಲ್ಲಾ ವೃದ್ದಾಶ್ರಮಕ್ಕೆ ಸೇರಿಸಿಬಿಡಿ ಎನ್ನುವಂತಿದೆ ಗೌಡರ ಮಾತು. ಹಾಲು ಕುಡಿದು ಹಣ ಗಳಿಸಿ ಬದುಕುವ ಕಾವಾಡಿಗ ಗೋವಿನ ಅಂತ್ಯಕಾಲದಲ್ಲಿ ಅದರ ಉಪಚಾರ ಮಾಡಲಾರದ ಸ್ಥಿತಿ ತಲುಪಿದ್ದಾನೆಯೇ ? ಜನನಾಯಕರುಗಳ ಇಂತಹ ರಾಜಕೀಯ ಹೇಳಿಕೆಗಳೇ ಜನರ ಮನಸ್ಸು ಕದಡಲು ಕಾರಣವಾಗುತ್ತದೆ. ಇನ್ನು ವಯಸ್ಸಾದ-ರೋಗದ ಗೋವುಗಳನ್ನು ಏನು ಮಾಡಬೇಕು ಎನ್ನುತ್ತಾರೆ....ಗೌಡರಿಗೂ ವಯಸ್ಸಾಗಿದೆ...ರೋಗಗಳು ಬಂದಿರುವುದೂ ಸಹಜ ! , ಏನು ಮಾಡೋಣ ? ಮಾರಾಟ ಮಾಡಿ ಬಿಡೋಣವೇ? ಕಟುಕರಿಗೆ ಒಪ್ಪಿಸಿ ಬಿಡೋಣವೇ? ಇಲ್ಲಾ...ವಯಸ್ಸಾಯಿತೆಂದು ಮನೆಯಿಂದ ಹೊರಹಾಕಿ ಚಾಪೆ-ದಿಂಬು ಕೊಡೋಣವೇ..!? ವಿರೋಧಕ್ಕಾಗಿಯೇ ವಿರೋಧಿಸುವುದು ಪ್ರಸ್ತುತ ದಿನಗಳ ರಾಜಕೀಯ ಜಾಣ್ಮೆಯೇ ಅಲ್ಲ. ಇಂತಹ ವಿರೋಧವನ್ನು   ಗೌಡರಿಂದ  ನಿರೀಕ್ಷಿಸಿಯೇ ಇದ್ದ ’ಆಳುವ ಕೂಟದವರು’ ತಮ್ಮ ರಾಜಕೀಯ ನೈಪುಣ್ಯತೆಯನ್ನು ಮೆರೆದಿದ್ದೇವೆ ಎಂದುಕೊಂಡರೆ ಅದೊಂದು ಮೂರ್ಖತನದ ಪರಮಾವಧಿ. ಪುಣ್ಯಕೋಟಿಯ ನಾಡಲ್ಲಿ ಪ್ರಾಮಾಣಿಕತೆಯನ್ನು ನಾಯಕರಿಂದ ನಿರೀಕ್ಷಿಸಬಹುದೆ ??
 ಅಂದಹಾಗೆ ’ಖೇಣಿ’ ಸಾಹೇಬರು ’ಕುಮಾರಣ್ಣ’ನವರನ್ನು ’ಜಂಟಲ್ ಮ್ಯಾನ್’ ಎಂದು ಕರೆದಿದ್ದಾರಂತೆ. ಕುಮಾರಣ್ಣ ತೋಳೇರಿಸಿ "ಪಗೆವರ ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ " ಎಂದು ನಿಂತರೆ "ಸೂಳ್ಪೆಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂದ ಭೀಷ್ಮರ ಛಾತಿ-ಮುತ್ಸದ್ದಿತನವನ್ನು ದೊಡ್ಡಗೌಡರು ತೋರಿಸಬಲ್ಲರೇ..!!?? 


ಟಿಪ್ಪಣಿ: "ಪಗೆವರ...ಗಟ್ಟಾ"...ಎಂಬ ವಾಕ್ಯ ಪಂಪಭಾರತದ್ದು..ಕರ್ಣ, ಭೀಷ್ಮರ ವಯಸ್ಸನ್ನು-ಶಕ್ತಿಯನ್ನು ಹಾಸ್ಯಮಾಡಿ ಯುದ್ಧದಲ್ಲಿ ಅವರ ಬದಲು ನನಗೆ ಪಟ್ಟಕಟ್ಟು..ವೈರಿಗಳನ್ನು ಹೊಡೆದೋಡಿಸುತ್ತೇನೆ ಎಂದಾಗ , ಭೀಷ್ಮರು ಮಾರ್ಮಿಕವಾಗಿ "ಸೂಳ್ಪೆಡೆಯ....ದೊಳ್" ..ಅಯ್ಯಾ ಈ ಮಹಾರಂಗದಲ್ಲಿ ನಿನಗೂ ಒಂದು ಸಮಯ ಬರುತ್ತದೆ ಅಣ್ಣಾ ಎನ್ನುತ್ತಾರೆ ! 
ಖೊನೆ ಖಿಡಿ :


ಶಂಭುಲಿಂಗ ಮಹಾನ್ ದೈವಭಕ್ತ !. ಅಂದು ಗುಡಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದ...


ಪೂಜ್ಯರು ( ಪೂಜಾರ್ರೇ ...??) : ಏನಯ್ಯಾ ಶಂಭು ಇವತ್ತು ಇಲ್ಲಿವರೆಗೂ ಬಂದೆ ?


ಶಂಭುಲಿಂಗ                   : ಇವತ್ತು ಸಿವರಾತ್ರಿ ಅಲ್ಲ್ವರಾ...ಅದ್ಕೆ ಬಂದೆ ಬುದ್ದಿ...


ಪೂಜ್ಯರು                      : ದಿನಾ ಬಂದು ನಮಸ್ಕಾರ ಮಾಡಯ್ಯಾ...
                                     ನಿನಗೆ ಪುಣ್ಯ ಬರುತ್ತೆ...ಸ್ವರ್ಗ ಸಿಗುತ್ತೆ...


ಶಂಭುಲಿಂಗ                   : ನೀವೂ ದಿನಾ ಬತ್ತೀರ...ಅಡ್ ಬುಳ್ತೀರಾ...ಅಂಗಾರೆ ದಿಸಾ 
                                     ಸ್ವರ್ಗ  ನೋಡ್ಕಂಬತ್ತೀರಾ ಬುದ್ದಿ !!!!!??               

Feb 4, 2010

'ಒಡೆಯ’ ನ ಕಥೆ...

ಚಹಾ ಅಂಗಡಿ ’ಚಂದ್ರ’ನ ರೇಡಿಯೋ ಅರಚುತ್ತಲೇ ಇತ್ತು. ರೇಡಿಯೋದ ಎಲ್ಲಾ ಭಾಗಗಳನ್ನೂ ಒಗ್ಗೂಡಿಸಿ ಅದರ ಮೇಲೊಂದು ರಬ್ಬರ್ ಬ್ಯಾಂಡ್ ಹಾಕಿಟ್ಟಿದ್ದ ಚಂದ್ರ. ಅವನ ಪ್ರತಿಯ ಅನುಕಂಪದಿಂದಲೋ ಏನೋ , ಅದು ಅರಚುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.
  " ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..."


ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಾ ತಾವು ಹೊದ್ದಿದ್ದ ಶಲ್ಯದಿಂದ ಗಾಳಿಹಾಕಿಕೊಳ್ಳುತ್ತಾ ’ಕೃಷ್ಣರಾಯರು’ ಅಂಗಡಿಯ ಮುಂದೆ ಕುಳಿತಾಗಲೇ ಚಂದ್ರನಿಗೆ ಅರಿವಾದದ್ದು..ಗಿರಾಕಿಯೊಬ್ಬರು ಬಂದಿದ್ದಾರೆ ಎಂದು.  " ಓಹ್ ರಾಯರೇ...ಬಹಳ ದಣಿದಿದ್ದೀರಿ ಅನ್ಸುತ್ತೆ..ಶರಬತ್ತು ಕೊಡಲೇ..?" ರಾಯರು ಚಂದ್ರನನ್ನೊಮ್ಮೆ ಸುಡುವಂತೆ ನೋಡಿದರು.." ಪುಗಸಟ್ಟೆ ಕೊಡೋದಾದ್ರೆ ಕೊಡು..ಇಲ್ಲಾಂದ್ರೆ ಇಲ್ಲಿ ಕೂರೋದಿಲ್ಲ  ನಾನು..." ರಾಯರು ಏಳಲು ಮುಂದಾದರು. ಚಂದ್ರ ಮೊದಲೇ ಮಾಡಿಟ್ಟಿದ್ದ  ಶರಬತ್ತನ್ನು ರಾಯರಿಗೆ ತಂದುಕೊಟ್ಟ.  " ಏನ್ ರಾಯ್ರೆ ನೀವು ..ಈ ಇಳಿ ವಯಸ್ಸಿನಲ್ಲೂ ಆ ತುಂಡು ಭೂಮಿಗಾಗಿ ಅಲೆದಾಡ್ತಾ ಇದ್ದೀರಲ್ಲ..ನಿಮ್ಮ ಮಗನಿಗಾದ್ರು ಹೇಳಬಾರ‍್ದೆ..ಸ್ವಲ್ಪ ಓಡಾಡಿ ಜಮೀನನ್ನ ಬಿಡಿಸಿಕೊಡು ಅಂತ "  ತಗ್ಗಿಸಿದ್ದ ತಲೆಯನ್ನು ರಾಯರು ಎತ್ತಲಿಲ್ಲ. ವಿದೇಶದಲ್ಲಿರುವ ಮಗನಿಗೆ ಜಮೀನಿನ ಚಿಂತೆಯೂ ಇರಲಿಲ್ಲ. ಕಷ್ಟಪಟ್ಟು ಬೆಳೆಸಿದ್ದ ಹತ್ತಾರು ಎಕರೆ ಅಡಿಕೆ ತೋಟ ವಿನಾಕಾರಣ ಅನ್ಯರ ಪಾಲಾಗುವುದು ರಾಯರಿಗೆ ಇಷ್ಟವಿರಲಿಲ್ಲ. ಇಷ್ಟಕ್ಕೂ ರಾಯರದ್ದು ಹುಟ್ಟಿನಿಂದಲೂ ಸಂಕೋಚದ ಸ್ವಭಾವವೇ ! .  ಅಕ್ಕ-ಪಕ್ಕ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಕೋಣೆಯ ಮೂಲೆಯಲ್ಲಿ  ನಿಂತು ’ಹೂಸು’ ಬಿಡುವಷ್ಟು ಸಂಕೋಚ ಅವರಿಗೆ !. ತಮ್ಮ ಜಮೀನಿನ ಮೇಲೆ ’ಉಳುವವನೇ ಒಡೆಯ’ ಎಂಬ ಹಕ್ಕನ್ನು ಸಾಧಿಸಹೊರಟಿದ್ದ ’ಚನ್ನಪ್ಪ ’ ನ ವಿರುದ್ದ ನಿಂತಾಗಲೇ ರಾಯರು ತಮ್ಮ ಸಂಕೋಚ, ತಾಳ್ಮೆ, ನಮ್ರತೆ, ಎಲ್ಲವನ್ನೂ ಕಳೆದುಕೊಂಡದ್ದು.  ಚನ್ನಪ್ಪನೂ ಸಾಕಷ್ಟು ಉದಾರತೆಯಿಂದಲೇ ನೆಡೆದುಕೊಂಡಿದ್ದ, ಫಸಲು ಬಂದಾಗಲೆಲ್ಲಾ ಅವರಿಗೆ ತಲುಪಬೇಕಾದ್ದನ್ನು ತಲುಪಿಸುತ್ತಿದ್ದ. ’ಒಡೆಯ’ ನ ಕಾನೂನು ಬಂದಾಗಲೂ ರಾಯರ ಪಾಲನ್ನೇನೂ ಅವನು ಕಡಿಮೆ ಮಾಡಿರಲಿಲ್ಲ. ಆದರೆ ಅದೆಕೋ ಏನೋ ಒಂದು ದಿನ ರಾಯರಿಗೇ ಅನ್ನಿಸಿಬಿಟ್ಟಿತ್ತು..’ ಜಮೀನನ್ನು ಚನ್ನಪ್ಪನಿಂದ ಬಿಡಿಸಿಕೊಂಡು ಸ್ವಂತ ನೆಡೆಸಬೇಕೆಂದು ’ . ಈ ವಿಷಯ ಪ್ರಸ್ತಾಪವಾದಾಗಲೇ ಚನ್ನಪ್ಪನಿಗೆ ಪಿತ್ತ ನೆತ್ತಿಗೇರಿದ್ದು.  ’ಬಿಲ್ ಕುಲ್’ ಆಗುವುದಿಲ್ಲ ,ಎಂದ ಚನ್ನಪ್ಪನ ಹಠಮಾರೀ ಧೋರಣೆಗೆ ಬೇಸತ್ತ ರಾಯರು "ನಿನ್ನನ್ನು ಮಾಟ ಮಾಡಿಸಿಯಾದರೂ ತೆಗೆಯುತ್ತೇನೆ ಕಣೋ " ಎಂದು ಶಪಿಸಿ ಹೊರಬಂದಿದ್ದರು. ಪಾಪ ರಾಯರಿಗೇನು ಗೊತ್ತು, ಚನ್ನಪ್ಪ ಒಳಗಿಂದೊಳಗೇ ಹಣ ಖರ್ಚು ಮಾಡಿ ಜಮೀನಿನ ಖಾತೆ -ಪಹಣಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡದ್ದು. ಈ ವಿಚಾರ ರಾಯರಿಗೆ ತಡವಾಗಿಯೇ ತಿಳಿದರೂ ಅತ್ಯಂತ ಜಾಗ್ರತೆಯಾಗಿ ಪರಿಚಯದ ವಕೀಲರನ್ನು ಭೇಟಿಮಾಡಿ , ತಮ್ಮಲ್ಲಿದ್ದ ಧಾಖಲಾತಿಗಳನ್ನು ಒದಗಿಸಿ "ಏನಾದರೂ" ಮಾಡುವಂತೆ ವಿನಂತಿಸಿದರು. ರಾಯರ ವಯಸ್ಸಿನ ಸೋಲನ್ನು ಅರಿತ ವಕೀಲರು ಸಾಕ್ಷಿಗಳನ್ನಿಟ್ಟುಕೊಂಡು ವಾದ ಮಂಡಿಸಿದರು. ಆಶ್ಚರ್ಯವೆಂಬಂತೆ ತೀರ್ಪು ರಾಯರ ಪರವಾಗಿಯೇ ಬರುವುದರಲ್ಲಿತ್ತು.. ಆದರೂ ರಾಯರಿಗೇನೋ ಅನುಮಾನ-ಚಿಂತೆ ಕಾಡುತ್ತಿತ್ತು, ಕೋರ್ಟಿನ ಮುಂಭಾಗದಲ್ಲಿ ನಿಂತು ಚನ್ನಪ್ಪನಾಡಿದ್ದ ಕಠೋರ ನುಡಿಗಳು ಅವರನ್ನು ಇರಿಯುತ್ತಿತ್ತು.   " ಲೇ ಆರುವಾ..ನಿನ್ನ ಬಿಡಾಕಿಲ್ಲ ಕಣಲೇ ...ಬಿಡಾಕಿಲ್ಲ " ಎಂಬ ಮಾತು ಅವರಲ್ಲಿ ಭಯವನ್ನೂ ಹುಟ್ಟಿಸಿತ್ತು. ಚಂದ್ರ ಕೊಟ್ಟ ಶರಬತ್ತನ್ನು ಕುಡಿದ ರಾಯರು "ಚಂದ್ರ ...ತುಂಬಾ ದಾಹವಾಗಿತ್ತು ಕಣೋ..ಶರಬತ್ತು ಕೊಟ್ಟು ಉಪಕಾರ ಮಾಡಿದೆ..ನಿನ್ನ ಹೊಟ್ಟೆ ತಣ್ಣಗಿರಲಪ್ಪಾ..ಸರಿ ಇನ್ನು ನಾನು ಬರಲೇ" ಎದ್ದು ಹೊರಟ ರಾಯರನ್ನು ಚಂದ್ರ ತಡೆದ " ರಾಯರೇ ..ಚನ್ನಪ್ಪ ಕೊಟ್ಟಷ್ಟು ಹಣ ತೆಗೆದುಕೊಂಡು ಸುಮ್ಮನಾಗಿ ಬಿಡಿ, ಅವನ ಸಹವಾಸ ಕಷ್ಟ, ಇಷ್ಟಕ್ಕೂ ನೀವು ಇನ್ನೇನು ಸಾಧನೆ ಮಾಡಬೇಕಿದೆ ?!...ಬರೋ ಹಣಾನ ಬಡ್ಡಿಗಿಟ್ಟುಕೊಂಡು ನಿಶ್ಚಿಂತರಾಗಿದ್ದುಬಿಡಿ" ರಾಯರಿಗೆ ಚಂದ್ರನ ಮಾತು ರುಚಿಸಲಿಲ್ಲ " ಹಣ ನನ್ನ ಮಗನ ಬಳಿಯೂ ಇದೆ ಕಣೋ, ಏನೋ ಪ್ರಯೋಜನ..ಒಬ್ಬ ತಂದೆಯನ್ನು ಸಾಕೋ ಯೊಗ್ಯತೆಯಿಲ್ವಲ್ಲೋ ಅವನಿಗೆ, ಅಯೋಗ್ಯ ! ಅಡಿಕೆ ಸಸಿಗಳನ್ನ ನನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದೀನಿ ಕಣೋ, ನನಗೆ ಅನ್ನ ಕೊಟ್ಟಿದೆ ಕಣೊ ಅದು, ಚನ್ನಪ್ಪ ಅಲ್ಲ ಅವರಪ್ಪ ಬಂದರೂ ಜಮೀನು ಬಿಟ್ಟುಕೊಡಲ್ಲ , ನಾನು ಸಾಯೋವರ‍್ಗೂ ನೋಡ್ತೀನೋ, ಆಮೇಲೆ ಮಗನಾದ್ರೂ ತಿನ್ಲಿ..ಯಾವೋನಾದ್ರೂ ತಿನ್ಲಿ..ನಂಗೇನು......." ರಾಯರು ಮಾತನಾಡುತ್ತಲೇ ಇದ್ದರು,  ಚನ್ನಪ್ಪ ಕಳುಹಿಸಿದ್ದ ’ಮಾರಿಗುಡಿ’ ಯ ಕೈಯಲ್ಲಿನ ಹರಿತವಾದ ಮಚ್ಚು ರಾಯರ ಮುಂಡವನ್ನು ಅರೆಕ್ಷಣದಲ್ಲಿ ಕತ್ತರಿಸಿ ಹಾಕಿತ್ತು ..!. ಚೆಲ್ಲಾಡಿದ ರಕ್ತವನ್ನು ಚಂದ್ರ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ. ರೇಡಿಯೋ ಅರಚುತ್ತಲೇ ಇತ್ತು....


" ದೇದಿ ಹಮೆ ಆಜಾದಿ ಬಿನಾ ಖಡ್ಗ್ ಬಿನಾ ಢಾಳ್..
  ಸಾಬರ್ ಮತೀಕೆ ಸಂತ್ ತೂನೆ ಕರ್ ದಿಯಾ ಕಮಾಲ್ "!!
( ಪುಟ್ಟ ವಿನಂತಿ....ನಾನು ಬರೆಯಲು ಪ್ರಾರಂಭಿಸಿದ್ದು ನನ್ನ ಕಾಲೇಜು ದಿನಗಳಲ್ಲಿ. ನಾನು ಓದುತ್ತಿದ್ದ ದ.ಕ.ಜಿಲ್ಲೆಯ ಉಜಿರೆ ಯ SDM {Sri Dharmasthala Manjunaatheshwara College) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಗುರುಗಳಾದ ಶ್ರೀಯುತ ’ನಿರಂಜನ ವಾನಳ್ಳಿ’ ಯವರ ( ಈಗ ಮಾನಸಗಂಗೋತ್ರಿ..ಮೈಸೂರು) ಮಾರ್ಗದರ್ಶನದಲ್ಲಿ ಕೇವಲ ವಿಚಾರ- ವಿಮರ್ಶೆಗಳನ್ನಷ್ಟೇ ಬರೆದುಕೊಂಡು ಬಂದಿದ್ದೆ. ಕಥೆ-ಕವನ ನಾನೆಂದೂ ಬರೆಯಲಿಲ್ಲ. ಈಗ ಬರೆದದ್ದೇ ನನ್ನ ಮೊದಲ ಕಥೆ..(ಹಾಗಂದುಕೊಂಡಿದ್ದೇನೆ !) . ಬ್ಲಾಗಿನ ಗುರುಗಳು, ಸಹೃದಯ ಮಿತ್ರರ ಪ್ರೋತ್ಸಾಹದಿಂದ ೧ ತಿಂಗಳ ಕೂಸು ನನ್ನ  ’ ಶಂಭುಲಿಂಗ ಪುರಾಣ ’ ದಲ್ಲಿ ಹುಮ್ಮಸ್ಸಿನಿಂದ ಕಥೆಯೊಂದನ್ನು ಬರೆದುಬಿಟ್ಟಿದ್ದೇನೆ...ನನಗೆ ಭಾವಗಳ ಆಳ-ಅಗಲಗಳ ಅರಿವಿಲ್ಲ...ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ತಿದ್ದಿ...ತೀಡಿ...ಹರಸಿ...ಹಣ್ಣನ್ನು ಹಂಚಿ ತಿಂದರೇ ರುಚಿ ಎಂದು ನನ್ನ ನಂಬಿಕೆ . ನಿಮ್ಮ ಪ್ರತಿಕ್ರಿಯೆಗಳೇ ನನಗೆ ಪ್ರೋತ್ಸಾಹ...ಇಲ್ಲಿಗೂ ಬರೆಯಿರಿ..subrahmanyahs@gmail.com)  

Feb 3, 2010

ಮಹಿಳೆ ಮತ್ತು ಮದ್ಯಪಾನ..

ಈ ಚಿತ್ರದಲ್ಲಿರುವ ಪತ್ರಿಕಾ ವರದಿಯಂತೆ ಈ ಮಹಿಳೆಯು ಮದ್ಯಪಾನ ಮಾಡಿ ತನ್ನ ’ಹೋಂಡಾ c.v.r. ಕಾರು ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣಳಾಗಿದ್ದಾಳೆ. ಈ ಘಟನೆ ನೆಡೆದಿರುವುದು ’ಮುಂಬೈ’ ನಲ್ಲಿ. ಮಹಾರಾಷ್ಟ್ರದ ಜನನಾಯಕರೊಬ್ಬರು ಹೇಳಿದಂತೆ ಇಂತಹ ಘಟನೆಗಳು ’ಮಾಯಾನಗರಿ’ ಯಲ್ಲಿ ಸರ್ವೇ ಸಾಮಾನ್ಯ ಸಂಗತಿ !. ಈ ಮಹಿಳೆ ಸರಿರಾತ್ರಿ ೧ ಘಂಟೆಯ ತನಕ ಪಾರ್ಟಿಯಲ್ಲಿದ್ದು ಚೆನ್ನಾಗಿ ’ಬಾರಿ’ಸಿ ಅದೇ ಅಮಲಿನಲ್ಲಿ ಕಾರು ಚಲಾಯಿಸಿದ್ದಾಳೆ. ಅಷ್ಟೇ ಸಾಲದು ಎಂದು ಕಾರಿನಲ್ಲೂ ಮದ್ಯ ಸೇವಿಸುತ್ತಾ ಜೊತೆಗೆ ’ಸೈಡ್ಸ್’ ಗಳನ್ನೂ ಮೆಲ್ಲುತ್ತಾ ’ ಜೋಷ್’ ನಲ್ಲಿ ಕಾರ್ ಚಲಾಯಿಸುವಾಗ ಕರ್ತವ್ಯನಿರತರಾಗಿದ್ದ ಪೋಲೀಸ್ ಅಧಿಕಾರಿಯ ಮೇಲೇ  ಚಲಾಯಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟಕ್ಕೇ ಮುಗಿಸದೇ ಇನ್ನೂ ಮುಂದೆ ಹೋಗಿ ಬೈಕ್ ಸವಾರರೊಬ್ಬರಿಗೆ ಗುದ್ದಿ ಅವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸದ್ಯಕ್ಕೆ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಹಿಳೆ ಮದ್ಯಪಾನಿಸುವುದರ ಪ್ರತಿ ನನ್ನ ತಕರಾರೇನಿಲ್ಲ. ಅದು ಆಕೆಯ ವೈಯಕ್ತಿಕ ವಿಚಾರ. ’ಪರಮಾತ್ಮ’ ಆಡಿಸದಂತೆ ಆಡಲಿ !. ಕುಡಿಯಲಿ...ಕುಡಿದು ಹಾಳಾಗಲಿ..! ಅಮಾಯಕರ ಜೀವವನ್ನೇಕೆ ಬಲಿ ಪಡೆಯಬೇಕು ?.  ಈ ಘಟನೆ  ಹಣದ ಮದದಲ್ಲಿ ತೇಲಾಡುವ ಇಂತಹ ’ದೊಡ್ಡ’ ಮನುಷ್ಯರ  ’Corporate' ದೊರೆಗಳ ಆಂತರಿಕ - ಮಾನಸಿಕ ವ್ಯಸನಗಳನ್ನು ಬಯಲುಮಾಡುತ್ತದೆ.  ಸರಿರಾತ್ರಿಯ ತನಕವೂ ’ಬಾರ್’ ಲೈವ್ ಬ್ಯಾಂಡ್’ ’ಡಿಸ್ಕೋಥೆಕ್’ ಗಳನ್ನು ತೆರೆದಿಡುವಂತೆ ಪೋಷಿಸುವವರಿಗೂ ಅಂಕುಶದ ಅಗತ್ಯವಿದೆ. ಇನ್ನು ಸಾವಿಗೀಡಾದ ವ್ಯಕ್ತಿಗಳ ಮಕ್ಕಳು-ಸಂಸಾರದ ಪಾಡೇನು ? ಸರ್ಕಾರ ಆ ಕುಟುಂಬದವರಿಗೆ ಒಂದಷ್ಟು ’ಪರಿಹಾರ’ ನೀಡಿ ಕೈತೊಳೆದುಕೊಳ್ಳಬಹುದು. ಜೀವವನ್ನು ಕೊಡಲಾದೀತೆ..?? ವ್ಯವಸ್ಥೆಯ ದುರಂತವೆಂದರೆ ಸದ್ಯದಲ್ಲೇ ತನ್ನ ’ಪ್ರಭಾವ’ ದಿಂದ ಈಕೆಯೂ ಜಾಮೀನು ಪಡೆದುಕೊಂಡು ಬಂಧನದಿಂದ ಹೊರಬಂದು ನಿರ್ದೋಶಿಯೂ ಆಗಿಬಿಡಬಹುದು. ಮಹಿಳೆಯರ ಹಕ್ಕುಗಳ, ಸ್ವಾತಂತ್ರ್ಯದ ಪರ ಹೋರಾಡುವ ಮಹಿಳಾ ಸಂಘಟನೆಗಳು ಸಮಾಜದ ಸ್ವಾಸ್ತ್ಯವನ್ನು ಕೆಡಿಸುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬಹುದಲ್ಲವೆ....??? ಇದನ್ನೂ ಸಹ ಮಹಿಳೆಯರ ಸಂಸ್ಕೃತಿ-ಸಂಸ್ಕಾರದ ಮೇಲಾಗುತ್ತಿರುವ ದೌರ್ಜನ್ಯ ( ಪುರುಷರು ಮಾತ್ರ ದೌರ್ಜನ್ಯದ ಪ್ರವರ್ತಕರೇ ?? ) ಎಂದು ಪರಿಗಣಿಸಿ ಹೋರಾಟ ನೆಡೆಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬಹುದಲ್ಲವೇ..! ಕೆಲವೇ ಕೆಲವು ಮಹಿಳೆಯರು ಮಾಡುವ ಇಂತಹ ಕೃತ್ಯಗಳು ಮುಂದಿನ (ತನ್ನದೇ !!) ಪೀಳಿಗೆಯ ಮೇಲೆ ಪ್ರಭಾವ ಬೀರಲಾರದೇ.?  ಇದಕ್ಕೆಲ್ಲಾ ಸರ್ಕಾರ-ಕಾನೂನನ್ನು ದೂಷಿಸುವುದು ಕಾಟಾಚಾರವಾಗುತ್ತದೆಯಷ್ಟೆ. ಮನುಷ್ಯ ತನ್ನ  ಆಂತರಿಕ ಸ್ವಾಸ್ತ್ಯವನ್ನು ಕಳೆದುಕೊಂಡಾಗಲೇ ಇಂತಹ ಘಟನೆಗಳು ನೆಡೆಯುವುದು. ...........ವರ್ಷದ ಹಿಂದೆ ಬೆಂಗಳೂರಿನಲ್ಲಿ ಆಪ್ತರೊಬ್ಬರ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ೧೨.೩೦ ರ ಸಮಯದಲ್ಲಿ ವಾಪಸಾಗುತ್ತಿದ್ದ ನಮಗೆ (ನನ್ನ ಸ್ನೇಹಿತ) ಅಡ್ಡಬಂದ ನಾಲ್ಚರು ಹುಡುಗಿಯರನ್ನು ಪಕ್ಕಕ್ಕೆ ಸರಿಸಿ ಹೊರಡುವಷ್ಟರಲ್ಲಿ ಸಾಕುಸಾಕಾಗಿತ್ತು ! ನಾಲ್ವರೂ ಕಂಠಪೂರ್ತಿ ಕುಡಿದು ಓಲಾಡುತ್ತಿದ್ದರು. ಇವರೂ ’Corporate' ಸಮಾಜದ ಕುಡಿಗಳೇ.......
  " ನಾವೇ ಹಾಳಾಗಿ ಹೋಗಿರುವೆವು..ಪ್ರಪಂಚ ಹಾಳಾಗಿದೆ ಎಂದು ಭಾವಿಸುವೆವು"  ಎನ್ನುವ ವಿವೇಕಾನಂದರ ನುಡಿ ಎಷ್ಟು ಪ್ರಸ್ತುತ ಅಲ್ಲವೇ...          
ಖೊನೆ ಖಿಡಿ :


ಶಂಭು : ಸಾರಾಯಿ ನಿಲ್ಸುದ್ಮೇಲೆ ಈ  ರಮ್ಮು, ಇಸ್ಕಿ, ಬ್ರಾಂಡಿ ಇವೆಲ್ಲಾ ಕಿಕ್ಕೇ ಕೊಡಲ್ಲಾ ಕಣ್ಳಾ....
ಲಿಂಗ : ಅದ್ಕೇನ್ ಮಾಡವಾ ಅಂತ್ಯಾ...?
ಶಂಭು : ಕಳ್ಳಭಟ್ಟಿ ತಯಾರ್ ಮಾಡವಾ  ...ಏನಂತ್ಯಾ...!!!

                                                                           ವಂದನೆಗಳೊಂದಿಗೆ.....