Feb 4, 2010

'ಒಡೆಯ’ ನ ಕಥೆ...

ಚಹಾ ಅಂಗಡಿ ’ಚಂದ್ರ’ನ ರೇಡಿಯೋ ಅರಚುತ್ತಲೇ ಇತ್ತು. ರೇಡಿಯೋದ ಎಲ್ಲಾ ಭಾಗಗಳನ್ನೂ ಒಗ್ಗೂಡಿಸಿ ಅದರ ಮೇಲೊಂದು ರಬ್ಬರ್ ಬ್ಯಾಂಡ್ ಹಾಕಿಟ್ಟಿದ್ದ ಚಂದ್ರ. ಅವನ ಪ್ರತಿಯ ಅನುಕಂಪದಿಂದಲೋ ಏನೋ , ಅದು ಅರಚುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.
  " ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..."


ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಾ ತಾವು ಹೊದ್ದಿದ್ದ ಶಲ್ಯದಿಂದ ಗಾಳಿಹಾಕಿಕೊಳ್ಳುತ್ತಾ ’ಕೃಷ್ಣರಾಯರು’ ಅಂಗಡಿಯ ಮುಂದೆ ಕುಳಿತಾಗಲೇ ಚಂದ್ರನಿಗೆ ಅರಿವಾದದ್ದು..ಗಿರಾಕಿಯೊಬ್ಬರು ಬಂದಿದ್ದಾರೆ ಎಂದು.  " ಓಹ್ ರಾಯರೇ...ಬಹಳ ದಣಿದಿದ್ದೀರಿ ಅನ್ಸುತ್ತೆ..ಶರಬತ್ತು ಕೊಡಲೇ..?" ರಾಯರು ಚಂದ್ರನನ್ನೊಮ್ಮೆ ಸುಡುವಂತೆ ನೋಡಿದರು.." ಪುಗಸಟ್ಟೆ ಕೊಡೋದಾದ್ರೆ ಕೊಡು..ಇಲ್ಲಾಂದ್ರೆ ಇಲ್ಲಿ ಕೂರೋದಿಲ್ಲ  ನಾನು..." ರಾಯರು ಏಳಲು ಮುಂದಾದರು. ಚಂದ್ರ ಮೊದಲೇ ಮಾಡಿಟ್ಟಿದ್ದ  ಶರಬತ್ತನ್ನು ರಾಯರಿಗೆ ತಂದುಕೊಟ್ಟ.  " ಏನ್ ರಾಯ್ರೆ ನೀವು ..ಈ ಇಳಿ ವಯಸ್ಸಿನಲ್ಲೂ ಆ ತುಂಡು ಭೂಮಿಗಾಗಿ ಅಲೆದಾಡ್ತಾ ಇದ್ದೀರಲ್ಲ..ನಿಮ್ಮ ಮಗನಿಗಾದ್ರು ಹೇಳಬಾರ‍್ದೆ..ಸ್ವಲ್ಪ ಓಡಾಡಿ ಜಮೀನನ್ನ ಬಿಡಿಸಿಕೊಡು ಅಂತ "  ತಗ್ಗಿಸಿದ್ದ ತಲೆಯನ್ನು ರಾಯರು ಎತ್ತಲಿಲ್ಲ. ವಿದೇಶದಲ್ಲಿರುವ ಮಗನಿಗೆ ಜಮೀನಿನ ಚಿಂತೆಯೂ ಇರಲಿಲ್ಲ. ಕಷ್ಟಪಟ್ಟು ಬೆಳೆಸಿದ್ದ ಹತ್ತಾರು ಎಕರೆ ಅಡಿಕೆ ತೋಟ ವಿನಾಕಾರಣ ಅನ್ಯರ ಪಾಲಾಗುವುದು ರಾಯರಿಗೆ ಇಷ್ಟವಿರಲಿಲ್ಲ. ಇಷ್ಟಕ್ಕೂ ರಾಯರದ್ದು ಹುಟ್ಟಿನಿಂದಲೂ ಸಂಕೋಚದ ಸ್ವಭಾವವೇ ! .  ಅಕ್ಕ-ಪಕ್ಕ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಕೋಣೆಯ ಮೂಲೆಯಲ್ಲಿ  ನಿಂತು ’ಹೂಸು’ ಬಿಡುವಷ್ಟು ಸಂಕೋಚ ಅವರಿಗೆ !. ತಮ್ಮ ಜಮೀನಿನ ಮೇಲೆ ’ಉಳುವವನೇ ಒಡೆಯ’ ಎಂಬ ಹಕ್ಕನ್ನು ಸಾಧಿಸಹೊರಟಿದ್ದ ’ಚನ್ನಪ್ಪ ’ ನ ವಿರುದ್ದ ನಿಂತಾಗಲೇ ರಾಯರು ತಮ್ಮ ಸಂಕೋಚ, ತಾಳ್ಮೆ, ನಮ್ರತೆ, ಎಲ್ಲವನ್ನೂ ಕಳೆದುಕೊಂಡದ್ದು.  ಚನ್ನಪ್ಪನೂ ಸಾಕಷ್ಟು ಉದಾರತೆಯಿಂದಲೇ ನೆಡೆದುಕೊಂಡಿದ್ದ, ಫಸಲು ಬಂದಾಗಲೆಲ್ಲಾ ಅವರಿಗೆ ತಲುಪಬೇಕಾದ್ದನ್ನು ತಲುಪಿಸುತ್ತಿದ್ದ. ’ಒಡೆಯ’ ನ ಕಾನೂನು ಬಂದಾಗಲೂ ರಾಯರ ಪಾಲನ್ನೇನೂ ಅವನು ಕಡಿಮೆ ಮಾಡಿರಲಿಲ್ಲ. ಆದರೆ ಅದೆಕೋ ಏನೋ ಒಂದು ದಿನ ರಾಯರಿಗೇ ಅನ್ನಿಸಿಬಿಟ್ಟಿತ್ತು..’ ಜಮೀನನ್ನು ಚನ್ನಪ್ಪನಿಂದ ಬಿಡಿಸಿಕೊಂಡು ಸ್ವಂತ ನೆಡೆಸಬೇಕೆಂದು ’ . ಈ ವಿಷಯ ಪ್ರಸ್ತಾಪವಾದಾಗಲೇ ಚನ್ನಪ್ಪನಿಗೆ ಪಿತ್ತ ನೆತ್ತಿಗೇರಿದ್ದು.  ’ಬಿಲ್ ಕುಲ್’ ಆಗುವುದಿಲ್ಲ ,ಎಂದ ಚನ್ನಪ್ಪನ ಹಠಮಾರೀ ಧೋರಣೆಗೆ ಬೇಸತ್ತ ರಾಯರು "ನಿನ್ನನ್ನು ಮಾಟ ಮಾಡಿಸಿಯಾದರೂ ತೆಗೆಯುತ್ತೇನೆ ಕಣೋ " ಎಂದು ಶಪಿಸಿ ಹೊರಬಂದಿದ್ದರು. ಪಾಪ ರಾಯರಿಗೇನು ಗೊತ್ತು, ಚನ್ನಪ್ಪ ಒಳಗಿಂದೊಳಗೇ ಹಣ ಖರ್ಚು ಮಾಡಿ ಜಮೀನಿನ ಖಾತೆ -ಪಹಣಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡದ್ದು. ಈ ವಿಚಾರ ರಾಯರಿಗೆ ತಡವಾಗಿಯೇ ತಿಳಿದರೂ ಅತ್ಯಂತ ಜಾಗ್ರತೆಯಾಗಿ ಪರಿಚಯದ ವಕೀಲರನ್ನು ಭೇಟಿಮಾಡಿ , ತಮ್ಮಲ್ಲಿದ್ದ ಧಾಖಲಾತಿಗಳನ್ನು ಒದಗಿಸಿ "ಏನಾದರೂ" ಮಾಡುವಂತೆ ವಿನಂತಿಸಿದರು. ರಾಯರ ವಯಸ್ಸಿನ ಸೋಲನ್ನು ಅರಿತ ವಕೀಲರು ಸಾಕ್ಷಿಗಳನ್ನಿಟ್ಟುಕೊಂಡು ವಾದ ಮಂಡಿಸಿದರು. ಆಶ್ಚರ್ಯವೆಂಬಂತೆ ತೀರ್ಪು ರಾಯರ ಪರವಾಗಿಯೇ ಬರುವುದರಲ್ಲಿತ್ತು.. ಆದರೂ ರಾಯರಿಗೇನೋ ಅನುಮಾನ-ಚಿಂತೆ ಕಾಡುತ್ತಿತ್ತು, ಕೋರ್ಟಿನ ಮುಂಭಾಗದಲ್ಲಿ ನಿಂತು ಚನ್ನಪ್ಪನಾಡಿದ್ದ ಕಠೋರ ನುಡಿಗಳು ಅವರನ್ನು ಇರಿಯುತ್ತಿತ್ತು.   " ಲೇ ಆರುವಾ..ನಿನ್ನ ಬಿಡಾಕಿಲ್ಲ ಕಣಲೇ ...ಬಿಡಾಕಿಲ್ಲ " ಎಂಬ ಮಾತು ಅವರಲ್ಲಿ ಭಯವನ್ನೂ ಹುಟ್ಟಿಸಿತ್ತು. ಚಂದ್ರ ಕೊಟ್ಟ ಶರಬತ್ತನ್ನು ಕುಡಿದ ರಾಯರು "ಚಂದ್ರ ...ತುಂಬಾ ದಾಹವಾಗಿತ್ತು ಕಣೋ..ಶರಬತ್ತು ಕೊಟ್ಟು ಉಪಕಾರ ಮಾಡಿದೆ..ನಿನ್ನ ಹೊಟ್ಟೆ ತಣ್ಣಗಿರಲಪ್ಪಾ..ಸರಿ ಇನ್ನು ನಾನು ಬರಲೇ" ಎದ್ದು ಹೊರಟ ರಾಯರನ್ನು ಚಂದ್ರ ತಡೆದ " ರಾಯರೇ ..ಚನ್ನಪ್ಪ ಕೊಟ್ಟಷ್ಟು ಹಣ ತೆಗೆದುಕೊಂಡು ಸುಮ್ಮನಾಗಿ ಬಿಡಿ, ಅವನ ಸಹವಾಸ ಕಷ್ಟ, ಇಷ್ಟಕ್ಕೂ ನೀವು ಇನ್ನೇನು ಸಾಧನೆ ಮಾಡಬೇಕಿದೆ ?!...ಬರೋ ಹಣಾನ ಬಡ್ಡಿಗಿಟ್ಟುಕೊಂಡು ನಿಶ್ಚಿಂತರಾಗಿದ್ದುಬಿಡಿ" ರಾಯರಿಗೆ ಚಂದ್ರನ ಮಾತು ರುಚಿಸಲಿಲ್ಲ " ಹಣ ನನ್ನ ಮಗನ ಬಳಿಯೂ ಇದೆ ಕಣೋ, ಏನೋ ಪ್ರಯೋಜನ..ಒಬ್ಬ ತಂದೆಯನ್ನು ಸಾಕೋ ಯೊಗ್ಯತೆಯಿಲ್ವಲ್ಲೋ ಅವನಿಗೆ, ಅಯೋಗ್ಯ ! ಅಡಿಕೆ ಸಸಿಗಳನ್ನ ನನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದೀನಿ ಕಣೋ, ನನಗೆ ಅನ್ನ ಕೊಟ್ಟಿದೆ ಕಣೊ ಅದು, ಚನ್ನಪ್ಪ ಅಲ್ಲ ಅವರಪ್ಪ ಬಂದರೂ ಜಮೀನು ಬಿಟ್ಟುಕೊಡಲ್ಲ , ನಾನು ಸಾಯೋವರ‍್ಗೂ ನೋಡ್ತೀನೋ, ಆಮೇಲೆ ಮಗನಾದ್ರೂ ತಿನ್ಲಿ..ಯಾವೋನಾದ್ರೂ ತಿನ್ಲಿ..ನಂಗೇನು......." ರಾಯರು ಮಾತನಾಡುತ್ತಲೇ ಇದ್ದರು,  ಚನ್ನಪ್ಪ ಕಳುಹಿಸಿದ್ದ ’ಮಾರಿಗುಡಿ’ ಯ ಕೈಯಲ್ಲಿನ ಹರಿತವಾದ ಮಚ್ಚು ರಾಯರ ಮುಂಡವನ್ನು ಅರೆಕ್ಷಣದಲ್ಲಿ ಕತ್ತರಿಸಿ ಹಾಕಿತ್ತು ..!. ಚೆಲ್ಲಾಡಿದ ರಕ್ತವನ್ನು ಚಂದ್ರ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ. ರೇಡಿಯೋ ಅರಚುತ್ತಲೇ ಇತ್ತು....


" ದೇದಿ ಹಮೆ ಆಜಾದಿ ಬಿನಾ ಖಡ್ಗ್ ಬಿನಾ ಢಾಳ್..
  ಸಾಬರ್ ಮತೀಕೆ ಸಂತ್ ತೂನೆ ಕರ್ ದಿಯಾ ಕಮಾಲ್ "!!




( ಪುಟ್ಟ ವಿನಂತಿ....ನಾನು ಬರೆಯಲು ಪ್ರಾರಂಭಿಸಿದ್ದು ನನ್ನ ಕಾಲೇಜು ದಿನಗಳಲ್ಲಿ. ನಾನು ಓದುತ್ತಿದ್ದ ದ.ಕ.ಜಿಲ್ಲೆಯ ಉಜಿರೆ ಯ SDM {Sri Dharmasthala Manjunaatheshwara College) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಗುರುಗಳಾದ ಶ್ರೀಯುತ ’ನಿರಂಜನ ವಾನಳ್ಳಿ’ ಯವರ ( ಈಗ ಮಾನಸಗಂಗೋತ್ರಿ..ಮೈಸೂರು) ಮಾರ್ಗದರ್ಶನದಲ್ಲಿ ಕೇವಲ ವಿಚಾರ- ವಿಮರ್ಶೆಗಳನ್ನಷ್ಟೇ ಬರೆದುಕೊಂಡು ಬಂದಿದ್ದೆ. ಕಥೆ-ಕವನ ನಾನೆಂದೂ ಬರೆಯಲಿಲ್ಲ. ಈಗ ಬರೆದದ್ದೇ ನನ್ನ ಮೊದಲ ಕಥೆ..(ಹಾಗಂದುಕೊಂಡಿದ್ದೇನೆ !) . ಬ್ಲಾಗಿನ ಗುರುಗಳು, ಸಹೃದಯ ಮಿತ್ರರ ಪ್ರೋತ್ಸಾಹದಿಂದ ೧ ತಿಂಗಳ ಕೂಸು ನನ್ನ  ’ ಶಂಭುಲಿಂಗ ಪುರಾಣ ’ ದಲ್ಲಿ ಹುಮ್ಮಸ್ಸಿನಿಂದ ಕಥೆಯೊಂದನ್ನು ಬರೆದುಬಿಟ್ಟಿದ್ದೇನೆ...ನನಗೆ ಭಾವಗಳ ಆಳ-ಅಗಲಗಳ ಅರಿವಿಲ್ಲ...ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ತಿದ್ದಿ...ತೀಡಿ...ಹರಸಿ...ಹಣ್ಣನ್ನು ಹಂಚಿ ತಿಂದರೇ ರುಚಿ ಎಂದು ನನ್ನ ನಂಬಿಕೆ . ನಿಮ್ಮ ಪ್ರತಿಕ್ರಿಯೆಗಳೇ ನನಗೆ ಪ್ರೋತ್ಸಾಹ...ಇಲ್ಲಿಗೂ ಬರೆಯಿರಿ..subrahmanyahs@gmail.com)