Mar 17, 2010

ಹೀಗೂ ಆಗುತ್ತದೆ...

ಬ್ಲಾಗಿನಲ್ಲಿ , ತೀರಾ ಜಾಳು ಜಾಳಾಗಿ ನಾನು ಬರೆದದ್ದು ನನಗೇ ಬೇಜಾರಾಗಿ ಟಿ.ವಿ. ನೋಡೋಣವೆಂದು ಕುಳಿತೆ !. Sports channel ನಲ್ಲಿ IPL ದೇ ಭರಾಟೆ, News channel ನಲ್ಲಿ ನಿತ್ಯಾನಂದನದೇ ಕರಾಟೆ ..!. ತಲೆ ಕೆದರಿಕೊಂಡು ಒಂದಷ್ಟು ಹಳೆಯ ನೆನಪುಗಳನ್ನು ಕೆದಕಿಕೊಂಡೆ. ಅರೆ..!, ಅಲ್ಲೂ ಒಬ್ಬ ಮಹಾನುಭಾವ ಸಿಕ್ಕೇಬಿಟ್ಟ.....ಓದಿ ಮುಂದೆ,..

 ಇದು ಹತ್ತು ವರ್ಷಗಳ ಹಿಂದಿನ ಘಟನೆ....., ನನಗೆ ಬೇಕಾದ, ತುಂಬಾ ಹತ್ತಿರದ ಆತ್ಮೀಯರೊಬ್ಬರನ್ನು ಮೈಸೂರಿನ ಸಿ.ಎಸ್.ಐ. ಮಿಶನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಮೂತ್ರಕೋಶದ  ತೊಂದರೆಯಿತ್ತು. ಸ್ಪಷ್ಟವಾಗಿ ಹೇಳಬೇಕೆಂದರೆ, ಅವರಿಗೆ ಮೂತ್ರಕೋಶದ ಬ್ಲಾಡರ್ ನಲ್ಲಿ ಗೆಡ್ಡೆಯಾಗಿತ್ತು. ಶಸ್ತ್ರಚಿಕಿತ್ಸೆಯೇ ಆಗಬೇಕೆಂಬ ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ’ವ್ಯವಸ್ಥೆ’ ಮಾಡಲಾಗಿತ್ತು. ಅವರ ಹತ್ತಿರದ ಸಂಬಂಧಿಗಳೆಲ್ಲಾ ದೂರವೇ ಉಳಿದಿದ್ದರಿಂದ ಅನಿವಾರ್ಯವಾಗಿ ನನ್ನ ತಾಯಿಯನ್ನೇ ಅವರ ಉಪಚಾರಕ್ಕಾಗಿ ಅಲ್ಲಿರುವಂತೆ ವ್ಯವಸ್ಥೆ ಮಾಡಿದೆ. ಶಸ್ತ್ರಚಿಕಿತ್ಸೆಯೇನೋ ಆಯಿತು, ಆದರೆ ಅವರ ಆರೋಗ್ಯದಲ್ಲಿ ಸುಧಾರಣೆಯೇನೂ ಕಂಡುಬರಲಿಲ್ಲ. ಒಂದೈದು ಬಾಟಲ್ ರಕ್ತವನ್ನೂ  ರಕ್ತ ಕೇಂದ್ರದಿಂದ ತರಿಸಿಕೊಟ್ಟಿದ್ದೆ. ಅವರ ಗುಂಪಿನ ರಕ್ತವನ್ನು ಹೊಂದಿಸುವುದು ಕಷ್ಟವಾಗಿತ್ತು. ನನ್ನ ರಕ್ತ ಅವರಿಗೆ Match ಆಗಿದ್ದರಿಂದ ನಾನೂ ರಕ್ತ ಕೊಟ್ಟೆ.  ಆದರೆ ಅವರ ಆರೋಗ್ಯ ಸುಧಾರಣೆಗೆ ಇನ್ನೂ ರಕ್ತದ ಅವಶ್ಯಕತೆಯಿತ್ತು. "ಡೊನೇಟ್  ಮಾಡೋರನ್ನ ಹುಡುಕಿ" ಎಂದು ಪುಕ್ಕಟೆ ಸಲಹೆ ಕೊಟ್ಟ ವೈದ್ಯರಿಗೆ ಮನಸಿನಲ್ಲೇ ಬೈದುಕೊಂಡು ಹೊರಗೆ ಬಂದೆ......
ಪೀಚಲು ದೇಹದ, ಕವುಳುಗಳೆಲ್ಲಾ ಒಳಕ್ಕೆ ಹೋದ, ಎಣ್ಣೆಯೇ ಕಾಣದ ತಲೆಕೂದಲಿನ, ದೊಗಲೆ ಇಜಾರ(ಪ್ಯಾಂಟು) ಮೇಲೊಂದು ಅಂಗಿ ತೊಟ್ಟಿದ್ದ , ಸುಮಾರು ೨೧-೨೨ ವಯಸ್ಸಿನ ಹುಡುಗನೊಬ್ಬ ನನ್ನತ್ತಲೇ ಬಂದ..(ನನಗೂ ಆಗ ೨೧ ವಯಸ್ಸು).
 "ನಿಮ್ಮನ್ನು ವಾರದಿಂದ ನೋಡ್ತಾ ಇದೀನಿ, ಮೂರು ದಿನದಿಂದ ರಕ್ತಕ್ಕಾಗಿ ಪರದಾಡ್ತಾ ಇದೀರ, ನನ್ನದೂ ಅದೇ ಗುಂಪಿನ ರಕ್ತ..ನೋಡಿ, ನಾನು ಬೇಕಾದ್ರೆ ರಕ್ತ ಕೊಡ್ತೀನಿ " ...ಅವನಂದ ಮಾತಿಗೆ ಸಂತೋಷವಾಯ್ತು. ಅವನಿಗೆ ಹಣದ ಅವಶ್ಯಕತೆಯಿತ್ತು, ಚೌಕಾಸಿ ಮಾಡಿ ೩೦೦ ರೂಪಾಯಿ ಕೊಡುವುದಾಗಿ ಒಪ್ಪಿಸಿ ರಕ್ತ ತೆಗೆದುಕೊಳ್ಳುವ ಕೋಣೆಗೆ ಅವನನ್ನು ಕರೆದೊಯ್ದೆ. ನರ್ಸ್‍ಗಳು, ಅವನನ್ನು ತಿನ್ನುವಂತೆ ನೋಡಿದರು. ಆ ಮನುಷ್ಯನಿಗಂತೂ ಅದ್ಯಾವುದರ ಗೊಡವೆಯೂ ಇರಲಿಲ್ಲ. ತೀರಾ ಭಂಡನಂತೆ ಕಾಣುತ್ತಿದ್ದ ಅವನು. ಒಬ್ಬರು ನರ್ಸ್ ನನ್ನ ಹತ್ತಿರ ಬಂದು "ಇವನೇನಾ ನಿಮಗೆ ಸಿಕ್ಕಿದ್ದು, ಬೇರೆ ಯಾರನ್ನಾದ್ರೂ ನೋಡ್ಬಾರ್ದಾ " ಎಂದು ಉಸುರಿದರು. "ಅಯ್ಯೋ, ಇನ್ನ್ಯಾರನ್ನು ಹುಡುಕಲಿ, ಸದ್ಯಕ್ಕೆ ಇವರದ್ದೇ ರಕ್ತ ತೆಗೆದುಕೊಂಡುಬಿಡಿ" ಎಂದು ನಾನೂ ಜಾರಿಕೊಂಡೆ. ಒಂದು ವಾರದಿಂದ ಆಸ್ಪತ್ರೆಯ ಜಂಜಾಟ ನನ್ನನ್ನು ಹೈರಾಣಾಗಿಸಿತ್ತು. ಅದೆಷ್ಟೋ ಮಾತ್ರೆಗಳು, ಔಷಧಿಗಳು, ರಕ್ತ, ಪ್ಲಾಸ್ಮಾ, ಆಲ್ಬುಮಿನ್ (ಇದು ಆಗ ಮೈಸೂರಲ್ಲಿ ಲಭ್ಯವಿರಲಿಲ್ಲ !..ಬೆಂಗಳೂರಿಗೆ ಹೋಗಿ ತರಬೇಕಿತ್ತು)....ತಂದುಕೊಟ್ಟು ನನಗೂ ಈ ಆಸ್ಪತ್ರೆಯ ಸಹವಾಸ ಸಾಕೆನಿಸಿತ್ತು. ನನ್ನ ತಾಯಿಗೂ, ಆ ಗೋಳಾಟ, ಅಳು, ದುಗುಡಗಳು ಮನಸನ್ನು ಕದಡಿತ್ತು.  ಅವನ ರಕ್ತಪರೀಕ್ಷೆ ಮಾಡಿದ ನರ್ಸ್, ಅವನ ರಕ್ತದಲ್ಲಿ ಕೇವಲ ೭.೫ ರಷ್ಟು ಮಾತ್ರ ಹಿಮೋಗ್ಲೋಬಿನ್ ಅಂಶವಿರುವುದನ್ನು  ಹೇಳಿದಾಗ ನನಗೆ ಅವನ ರಕ್ತದ ಮೇಲಿದ್ದ ವ್ಯಾಮೋಹ ಕಮ್ಮಿಯಾಯಿತು. ಅವನ ಕೈಗೆ ೫೦ ರೂ ಇತ್ತು ಹೊರಡಲು ಹೇಳಿದೆ. ಅವ ನನ್ನನ್ನು ಬಿಡಲೇ ಇಲ್ಲ. ’ನಕ್ಷತ್ರಿಕ’ ನಂತೆ ನನ್ನ ಹಿಂದೆ ಸುತ್ತಿದ. ನಾನು ಒಪ್ಪಲೇ ಇಲ್ಲ. ಕೊನೆಗೆ ’ಸೆಂಟಿಮೆಂಟಲ್’ ಆಗಿ ಹೊಡೆದ.."ಸಾರ್.... ನಾನೂ ಬ್ರಾಹ್ಮಣ ಸಾರ್ , ಯಾರೂ ಇಲ್ಲ ಸಾರ್ ನನಗೆ, ಬೇಕಾದ್ರೆ ಜನಿವಾರ ನೋಡಿ, ಹೊಟ್ಟೆಗೂ ತಾಪತ್ರಯ ಆಗಿದೆ...ಹೇಗೋ ದಿನಾ ೨೦-೩೦ ರೂಪಾಯಿ ಕೊಡಿ..ನಿಮ್ಮ ತಾಯಿ ಜೊತೆ ಇದ್ದು ಸಹಾಯ ಮಾಡ್ತೀನಿ ಸಾರ್ "...ಎಂದ. ನನಗೂ ಅವನ ಮಾತು ಸರಿಯೆನಿಸಿತು, ನಾನೂ ನನ್ನೂರಿಗೆ ಹೋಗಿ-ಬಂದು ಮಾಡಬೇಕಿತ್ತು. ನನ್ನಮ್ಮನ ಜೊತೆಗೊಬ್ಬರಿದ್ದರೆ ಅನುಕೂಲ ಎಂದುಕೊಂಡು ಅವನಿಗೆ ಒಪ್ಪಿಗೆ ಕೊಟ್ಟೆ. ಆಗ, ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಅವನಿಗೆ ಎಲ್ಲಾ ವಿವರಿಸಿ ಹೇಳಿ ನನ್ನ ತಾಯಿಗೂ ಎಚ್ಚರಿಕೆ ಹೇಳಿ, ನನ್ನೂರಿಗೆ ಹೊರಟು ಬಂದೆ.  ಆಸ್ಪತ್ರೆಯಲ್ಲಿ ಯಥಾಸ್ಥಿತಿ ಮುಂದುವರೆದಿತ್ತು . ಎರಡು ದಿನದ ಬಳಿಕ ಮೈಸೂರಾಸ್ಪತ್ರೆಗೆ ಮತ್ತೆ ಬಂದೆ . ನನ್ನಮ್ಮ ನಕ್ಷತ್ರಿಕನ ಪುರಾಣ ಶುರುವಿಟ್ಟರು " ಬೆಳಿಗ್ಗೆ ಕಾಫಿಗೆ ೧೦ ರೂ, ತಿಂಡಿಗೆ ೨೦ರೂ, ಊಟಕ್ಕೆ ೨೦ರೂ, ಮತ್ತೆ ಮಾತ್ರೆ..ಅದೂ..ಇದೂ ಅಂತ ತರೋಕೆ ಹೋದಾಗ ಅದರಲ್ಲೂ ದುಡ್ಡು ಉಳಿಸ್ಕೋತಾನೆ, ಮತ್ತೂ ತಲೆ ತಿನ್ತಾನೆ ನನಗೆ " ಎಂದು ಒಂದೇ ಸಮನೆ ಉಸುರಿದರು. ನಕ್ಷತ್ರಿಕನನ್ನು ಹತ್ತಿರ ಕರೆದು ಅವನ ಶಾಲೆಯ ಓದಿನ ಕುರಿತು ವಿಚಾರಿಸಿದೆ. ವಿದ್ಯೆ..ನೈವೇದ್ಯವೆಂದು ತಿಳಿಯಿತು ..!. ಅವನಿಗೆ ಒಂದಷ್ಟು ಎಚ್ಚರಿಕೆ ಕೊಟ್ಟೆ. ತೀರಾ ಬೇಸರವಾಗಿ, ’ ೫೦೦ ರೂ ಕೊಡ್ತೇನೆ ..ಜಾಗ ಖಾಲಿ ಮಾಡು ’ ಎಂದೆ, ಆದರೂ ಅವ ಬಗ್ಗಲಿಲ್ಲ..ಕಣ್ಣಿರಿಟ್ಟುಬಿಟ್ಟ. ಇದೊಳ್ಳೆ ಗ್ರಹಚಾರವಾಯ್ತಲ್ಲ ಎಂದು, ನನ್ನ ತಾಯಿಗೆ ಸಮಾಧಾನ ಹೇಳಿ ಒಂದೆರೆಡು ದಿನ ಅಲ್ಲೇ ಕಳೆದೆ. ನನ್ನ ಆತ್ಮೀಯರ ಜೊತೆ ಈ ನಕ್ಷತ್ರಿಕನನ್ನೂ ನೋಡಿಕೊಳ್ಳುವ ಜಂಜಡವಾಯಿತು ನನಗೆ. ಅದೊಂದು ದಿನ ನನ್ನ ಆತ್ಮೀಯರು ನಮ್ಮನ್ನಗಲಿದರು. ನನ್ನ ತಾಯಿಯನ್ನು ಸಮಾಧಾನ ಪಡಿಸಲು ನಾನು ಅಶಕ್ಯನಾದೆ. ಅಂತೂ ಬಿಲ್ ಕ್ಲಿಯರ್ ಮಾಡಿ "Body " (ಸತ್ತ ಮೇಲೆ ಇಷ್ಟೇ ಅಲ್ಲವೇ !! ) ತೆಗೆದುಕೊಂಡು ಹೊರಬಂದೆವು. ಹೊರಡುವಾಗ ಮತ್ತೆ ನಕ್ಷತ್ರಿಕ ಕಾಡಿದ.  ಅವ ನಮ್ಮ ಸೇವೆ ಮಾಡಿದ್ದಕ್ಕೆ ಪ್ರತಿಯಾಗಿ ೧೦೦೦ ರೂ ಕೊಡಲೇಬೇಕೆಂದು ಪೀಡಿಸಿದ . ನನ್ನಮ್ಮನಿಗೆ ಅದೆಲ್ಲಿತ್ತೋ ಕೋಪ, ಉಗಿದು ಉಪ್ಪಿನಕಾಯಿ ಹಾಕಿದರು ಅವನನ್ನ !. ಕೊನೆಗೆ ನಾನೇ ಸೋತು..೫೦೦ ರೂ ಅವನ ಕೈಗಿತ್ತು ವ್ಯಾನ್ ಹತ್ತಿದೆ. ಮುಂದೆ...ಅಂತ್ಯಸಂಸ್ಕಾರ, ಕರ್ಮಾಂತರಗಳು...ಸಮಾರಾಧನೆ...ಇತ್ಯಾದಿ...........

   ------------*--------------------

ಇದಾಗಿ ನಾಲ್ಕು ವರ್ಷ ಕಳೆದಿತ್ತು.  ನಾನು ನಿತ್ಯ ಕೆಲಸ ಮಾಡುವ ನನ್ನ ದೊಡ್ಡಾಫೀಸಿನ ದೊಡ್ಡ ಬಾಗಿಲಿನ ಮುಂದೆ ನಿಂತಿದ್ದೆ. ಅಂದು ಅಷ್ಟೇನೂ ಕೆಲಸದ ಒತ್ತಡವಿರಲಿಲ್ಲ. ಹೊರಗೆ ಸುಂದರ ಹಸಿರು ಪಾರ್ಕು, ನಳನಳಿಸುವ ಹೂಗಳು, ..ಆಸ್ವಾದಿಸುತ್ತಾ ಯಾವುದೋ ಲೋಕದಲ್ಲಿದ್ದೆ...!. ಹಿಂದಿನಿಂದ ದ್ವನಿಯೊಂದು ತೇಲಿ ಬಂತು. ತಿರುಗಿ ನೋಡಿದೆ. ಕಾವೀಧಾರೀ ಯುವಕರೊಬ್ಬರು ನನ್ನ ಮುಂದಿದ್ದರು. ಕೈಯಲ್ಲೊಂದು ಕೋಲು, ಅದಕ್ಕೊಂದು ಕೆಂಪು ಬಟ್ಟೆ (ಸನ್ಯಾಸಿಗಳು ಹಿಡಿಯುವ ದಂಡ !) , ಹೆಗಲಿಗೊಂದು ಲೆದರ್ ಜೋಳಿಗೆ, ....ಮುಖ ನೋಡಿದೆ..ಅಹಾ ! ಸೇಬಿನಂತೆ ಕೆಂಪಗಿದ್ದ ಕೆನ್ನೆಗಳು, ಲಿಪ್‍ಸ್ಟಿಕ್ ಹಚ್ಚಿದಂತಿದ್ದ ತುಟಿಗಳು, ಅರಳಿದ ಮುಖ, ಹಣೆಯಲ್ಲಿ ಸಿಂದೂರ ತಿಲಕ, ...ಅರೆರೆ.. ! ಎಲ್ಲೋ ನೋಡಿದ್ದೇನೆಲ್ಲಾ ಈ ಮುಖವನ್ನು ಎನ್ನಿಸಿತು. ಕಾವೀಧಾರಿಯೇ ಶುರುವಿಟ್ಟರು.. " ನನ್ನ ಗುರುತು ಸಿಕ್ಕಿತಾ ? ನೋಡಿ ಸಂದರ್ಭ ನಮ್ಮನ್ನು ಹೇಗೆ ಸೇರಿಸುತ್ತದೆ ಎಂದು.."...ಆ ಧ್ವನಿಯೂ ಪರಿಚಿತವಾದದ್ದೇ...ತಕ್ಷಣ ನೆನಪಾಯಿತು,  ಆ ’ನಕ್ಷತ್ರಿಕ ’ನೇ ಇವನೆಂದು. ’ಇದೇನು ಕಾವೀ ಕತೆಯೆಂದು ಕೂತುಹಲದಿಂದ ಅವರನ್ನೇ ಕೇಳಿದೆ.." ಹೀಗೆ, ಮನಸ್ಸು ಬದಲಾವಣೆಯಾಯ್ತು, ಸನ್ಯಾಸಿಯಾದೆ. ನೀವಿಲ್ಲಿರುವುದು ತಿಳಿದಿರಲಿಲ್ಲ, ಶ್ರೀ ಶಂಕರರ ತತ್ವಪ್ರಸಾರಕ್ಕಾಗಿ ತಿರುಗುತ್ತಿದ್ದೇನೆ. ಮೈಸೂರಿನಲ್ಲೊಂದು ’ತತ್ವಮಸಿ’ ಎಂಬ ಕೇಂದ್ರವನ್ನು ಹೆಬ್ಬಾಳ ಕೆರೆಯ ಪಕ್ಕದಲ್ಲಿ ( ನನಗೆ ಆ ಏರಿಯಾ ಗೊತ್ತಿರಲಿಲ್ಲ ) ತೆರೆದಿದ್ದೇನೆ..ಇನ್ನೂ ಬೆಳೆಸಬೇಕಿದೆ,ಅದಕ್ಕೆ ಗುರುಕಾಣಿಕೆ ಪಡೆಯಲು ಈ ಊರಿಗೆ ಬಂದಿದ್ದೇನೆ...." ..ಗಂಭೀರವಾಗಿ, ನಿರ್ಭಾವುಕರಾಗಿ ಹೇಳಿದ ಅವರ ಮಾತುಗಳನ್ನು ಕೇಳಿದ ನಂತರ ನನಗನ್ನಿಸಿತು, ನಾನು ಅವರನ್ನು..ಅವರು ನನ್ನನ್ನು  ನನ್ನ ಜಾಗದಲ್ಲಿ ಭೇಟಿಯಾಗಿದ್ದು ಆಕಸ್ಮಿಕ ಮತ್ತು ಅನಿರೀಕ್ಷಿತವೆಂದು..!. ಆಶ್ಚರ್ಯವಾಯಿತು ನನಗೆ, ನಾಲ್ಕು ವರ್ಷಗಳಲ್ಲಿ ಇಷ್ಟೊಂದು ಬದಲಾವಣೆಯೆ ? ಇರಬಹುದೇನೋ..ಎಂದುಕೊಂಡು ಅವರ ಮುಂದಿನ ಕಾರ್ಯಕ್ರಮ ಕೇಳಿದೆ. ನನ್ನೂರಿನ ನಮ್ಮ ಸಂಘ-ಸಮಾಜದಿಂದ ಒಂದಷ್ಟು ಕಾಣಿಕೆ ಕೊಡಿಸುವಂತೆ ಕೇಳಿದರು. ಶ್ರೀ ಶಂಕರರ ಹೆಸರಿಗೆ ಕಟ್ಟುಬಿದ್ದು ಒಪ್ಪಿಕೊಂಡೆ. ನಮ್ಮ ಸಮಾಜದ ಅಧ್ಯಕ್ಷರ ಮುಂದೆ ಅವರನ್ನು ನಿಲ್ಲಿಸಿ ಎಲ್ಲವನ್ನೂ ವಿವರಿಸಿದೆ. ಖಜಾಂಚಿಯಂತೂ ದೀರ್ಘದಂಡ ನಮಸ್ಕಾರವನ್ನೇ ಮಾಡಿಬಿಟ್ಟ !. ತಮಾಷೆಯೆಂದರೆ, ಅವರ‍್ಯಾರಿಗೂ  ಗುರುಕಾಣಿಕೆ ನೀಡುವ ಮನಸೇ ಬರಲಿಲ್ಲ ..!. ಅಧ್ಯಕ್ಷರು, ಕಾವೀಧಾರಿ ಯನ್ನು ಸ್ನೇಹಿತರ ಅಂಗಡಿಯೊಂದರಲ್ಲಿ ಕುಳ್ಳಿರಿಸಿ, ಈಗ ಬರುತ್ತೇನೆಂದು ಹೇಳಿ ಕಾಲ್ಕಿತ್ತರು. ಉಳಿದಿದ್ದು ನಾನು ಮತ್ತು ಖಜಾಂಚಿ. "ನನಗೆ ಪಾದುಕೆಗಳಿಲ್ಲ, ನೆಡೆದಾಡಲು ಕಷ್ಟವಾಗುತ್ತಿದೆ, ತಮಗೇನಾದರೂ ಪಾದುಕೆ ಮಾಡಿಸಿಕೊಡಲು ಸಾಧ್ಯವೆ ? " ..ಕಾವೀಧಾರಿಗಳು ಕೇಳಿದುದಕ್ಕೆ ಖಜಾಂಚಿಗಳು ಮನಸಾರೆ ಒಪ್ಪಿದರು. ಹಾಗೆಯೇ ಕಾವೀಧಾರಿಗಳ  ’ರಿಲಯನ್ಸ್’ ಮೊಬೈಲ್ ಗೆ ಚಾರ್ಜರ್ ಅನ್ನೂ ತಂದುಕೊಟ್ಟರು. ಖಂಜಾಂಚಿಗಳು ಲೆಕ್ಕಾಚಾರ ಹಾಕಿದರು.." ಪಾದುಕೆ, ಮಾವಿನ ಮರದ್ದೋ..ಹಲಸಿನದೋ ಆಗಬಹುದಲ್ಲವೇ.." ಎಂದು ಕೇಳಿದರು. ಕಾವೀಧಾರಿಗಳು "ಅದು ಅಷ್ಟೇನೂ ಸರಿಯಾಗದು, ತೇಗ ಅಥವಾ ಮಹಾನಂದಿಯದ್ದಾದರೆ ಉತ್ತಮ " ಎಂದರು. ಖಜಾಂಚಿಗಳು ಅಲ್ಲಿಂದ ಕಂಬಿಕಿತ್ತರು !. ಉಳಿದಿದ್ದು ನಾನು ಮತ್ತು ಅಂಗಡಿಯ ಮಾಲಿಕ, ಇಬ್ಬರೆ. ನನಗೂ ಏಕೋ ಈ ಕಾವೀಧಾರಿಯ ವರ್ತನೆ ಸರಿಹೋಗಲಿಲ್ಲ. ಅದೂ-ಇದೂ ಮಾತಾಡಿ ಸತಾಯಿಸಿ, ಬರುತ್ತೇನೆಂದು ಹೇಳಿ ಮೆಲ್ಲಗೆ ಅಲ್ಲಿಂದ ತಪ್ಪಿಸಿಕೊಂಡು ನನ್ನ ಕೆಲಸದ ’ಗೂಡು’ ಸೇರಿದೆ. ಸುಮಾರು ೨ ಗಂಟೆಗಳ ತರುವಾಯ ನನ್ನ ಜಾಗದಲ್ಲಿ ಮತ್ತೆ ಕಾವೀಧಾರಿಗಳು ಪ್ರತ್ಯಕ್ಷರಾದರು. ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು. " ಹೀಗೆ ಮಾಡಬಾರದಿತ್ತು ನೀವು,  ಅನುಷ್ಠಾನವುಳ್ಳ ಒಬ್ಬ ಗುರುವನ್ನು ನೆಡೆಸಿಕೊಳ್ಳುವ ರೀತಿಯೇ ಇದು..ಒಂದು ಚಿಕ್ಕ ಕಾಣಿಕೆಯನ್ನೂ ಕೊಡಲಾಗಲಿಲ್ಲವಲ್ಲ ನಿಮಗೆ..ಹೋಗಲಿ ಜೊತೆ ಪಾದುಕೆಯನ್ನಾದರೂ.. " ನನಗೇಕೋ ಕಸಿವಿಸಿಯಾಯಿತು, ನನ್ನಲ್ಲಿದ್ದ ೧೦೦ ರೂಪಾಯಿ ತೆಗೆದು ಅವರಿಗೆ ಕೊಡಲನುವಾದೆ.   " ಬರೀ ೧೦೦ ರೂಪಾಯಿಗೆ ನಾನು ಇಷ್ಟೆಲ್ಲಾ ಸುತ್ತಬೇಕಾಯಿತ,  ನಿಮಗೆ ಗುರುಶಾಪ ತಟ್ಟದೇ ಬಿಡುವುದಿಲ್ಲ "  ಎಂದು ಧಮಕಿಯನ್ನೂ ಹಾಕಿದರು. ನನ್ನ ಬುದ್ದಿಯೂ ಚುರುಕಾಯಿತು, ನಾನು ಏರಿದ ಧ್ವನಿಯಲ್ಲೇ ಹೇಳಿದೆ  " ಶಾಪ ಕೊಡಲು ವಸಿಷ್ಟ-ವಿಶ್ವಾಮಿತ್ರರ ಕಾಲವಲ್ರೀ ಇದು, ಈಗ ಸುಮ್ಮನೆ ಇಲ್ಲಿಂದ ಹೋದ್ರೆ ಸರಿ..ಇಲ್ಲಾಂದ್ರೆ ನಿನ್ನ ಹಳೇ ಪುರಾಣವನ್ನೆಲ್ಲಾ ತೆಗೀಬೇಕಾಗುತ್ತೆ ".. ನಾನು ಹೇಳಿದ್ದಿಷ್ಟೆ.  ಕಾವೀಧಾರಿಗಳು ಕಾಣದಂತೆ ಮಾಯವಾದರು.

---------------*----------------

ಇತ್ತೀಚಿಗೆ ೨ ವರ್ಷಗಳ ಹಿಂದೆ ನನ್ನ ಮದುವೆಯಾಯಿತು. ಅಲ್ಲಿಗೆ ಮುಗಿಯಿತು !. ಹೆಂಡತಿಯ ಮಾತನ್ನು ಕೇಳದಿದ್ದರಾಗುತ್ತದೆಯೇ..?? ಅಲ್ಲಿ-ಇಲ್ಲಿ ಒಂದಷ್ಟು ಯಾತ್ರೆ ಮುಗಿಸಿಕೊಂಡು ಬಂದೆವು. ನನ್ನ ಮಾತಾಶ್ರ‍ೀ ಗದರಿದಾಗಲೇ ನನ್ನ ಪೌರಾಣಿಕ ಜನನಕ್ಕೆ ಕಾರಣನಾದ ಕುಕ್ಕೆ ಸುಬ್ರಹ್ಮಣ್ಯನ ನೆನಪಾದದ್ದು !. ಬಾಲ ಸುಬ್ರಹ್ಮಣ್ಯನ ದರ್ಶನಕ್ಕೆ ಹೋಗಿ ಬರಬೇಕೆಂದು ನನ್ನ ತಾಯಿ ಫರ್ಮಾನು ಹೊರಡಿಸಿದರು.  ಅದೊಂದೆ ಏಕೆ ? ಅಲ್ಲಿಂದ ಮುಂದೆ ..ಮಂಗಳೂರು, ಉಡುಪಿ, ಕುಂಭಾಶಿ, ಮರವಂತೆ, ಕೊಲ್ಲೂರು..ಇತ್ಯಾದಿ... ನನ್ನಾಕೆ ಪೋಣಿಸಿದಳು. ಒಂದೈದು ದಿನದ  ’ಪ್ರಯಾಸಕ್ಕೆ’ ನಾನು ಮಾನಸಿಕವಾಗಿ ಸಿದ್ಧನಾದೆ.  ನಾವು ಕುಕ್ಕೆ ತಲುಪಿದ್ದ ದಿನ ಅಲ್ಲಿ ವಿಶೇಷವಿತ್ತು. ಅಂದು ’ಕಿರುಷಷ್ಟಿ’ (ತುಳು ಷಷ್ಟಿ) . ಮಧ್ಯಾಹ್ನ ೧.೩೦ ಕ್ಕೆಲ್ಲಾ ಪ್ರಸಾದ ಭೋಜನದ ವ್ಯವಸ್ಥೆಯಿತ್ತು. ಪ್ರಾಂಗಣದಲ್ಲಿ ನಾನೂ-ನನ್ನಾಕೆ ಸೀಟು ಭದ್ರಪಡಿಸಿಕೊಂಡು ಕುಳಿತಿದ್ದೆವು!. ಅಂದಿನ ವಿಶೇಷಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿಗಳು ಬರುವವರಿದ್ದರು. ಮೈಕಿನಲ್ಲಿ ಅವರ ಬರುವಿಕೆಯ ಸಮಾಚಾರವನ್ನು ಆಗಾಗ್ಗೆ ಅನೌನ್ಸ್ ಮಾಡುತ್ತಿದ್ದರು. ಅದರ ಜೊತೆಗೆ  "ದೇವಳದೊಳಗೆ  ಸಾಲಾಗಿ ಬನ್ನಿ, ಶರ್ಟು-ಬನಿಯನ್ ತೆಗೆದು ಒಳಗೆ ಬನ್ನಿ ( ಗಂಡಸರು ಮಾತ್ರ !), ನಿಮ್ಮ ವಸ್ತುಗಳಿಗೆ ನೀವೇ ಜವಾಬುದಾರರು (ಹೆಂಡತಿಯನ್ನು ಬಿಟ್ಟು !) " ಇತ್ಯಾದಿಗಳು ಕೇಳಿ ಬರುತ್ತಿತ್ತು. ಅಂತೂ ’ಶ್ರೀ’ ಗಳು ಪುರ ಪ್ರವೇಶ ಮಾಡಿದ್ದನ್ನು ಮೈಕಿನಲ್ಲಿ ಅರುಹಿದರು. ’ಸೀಟು’ ಮತ್ತೆ ಸಿಗದೆನ್ನುವ ಕಾರಣಕ್ಕೆ.. ನನ್ನಾಕೆ , ಅವರ ದರ್ಶನಕ್ಕೆ ಹೋಗಲು ನನ್ನನ್ನು ಬಿಡಲಿಲ್ಲ !. ಹೇಗೂ ಇರುತ್ತಾರೆ ಆಮೇಲೆ ನೋಡಿದರಾಯ್ತು ಎಂದು ನಾನೂ ಸುಮ್ಮನಾದೆ.  ಅಷ್ಟರಲ್ಲಿ , ನಾಲ್ಕೈದು ಜನ ಸುಬ್ರಹ್ಮಣ್ಯ ಮಠದೊಳಗೆ ದುಡ-ದುಡನೆ ಹೋದರು.., ಅವರ ಹಿಂದೆ ಕಟ್ಟುಮಸ್ತಾದ, ಹಣೆಯಲ್ಲಿ ಭಸ್ಮ ಧರಿಸಿದ್ದ, ಕೊರಳಲ್ಲಿ ರುದ್ರಾಕ್ಷಿಮಾಲೆ ಹಾಕಿದ್ದ , ಕಾವೀಧಾರೀ ವ್ಯಕ್ತಿಯೊಬ್ಬರು ಮಠದೊಳಗೆ ಹೋಗಿ ಮತ್ತೆ ಅದೇನೋ ಸನ್ನೆ ಮಾಡಿಕೊಂಡು ಹೊರಗೆ ಬಂದರು. ಅವರ ಮುಖದಲ್ಲಿನ ’ಕಾಂತಿ’ ಎದ್ದು ಕಾಣುತ್ತಿತ್ತು. ನನ್ನ ಕಣ್ಣನ್ನು ನಾನೇ ನಂಬಲಿಲ್ಲ..ಅರೆರೆ ! ಅದೇ ’ನಕ್ಷತ್ರಿಕ’ ಮಹಾಶಯ, ಇಲ್ಲಿ ಹೇಗೆ ? ಎಂದು ಕುತೂಹಲವಾಯಿತು ನನಗೆ. ನನ್ನಾಕೆಯ ರಗಳೆಯ ನಡುವೆಯೇ ಎದ್ದು, ಹತ್ತಿರ ಹೋದೆ..ನನಗೆ ಖಾತರಿಯಾಯಿತು...’ನಕ್ಷತ್ರಿಕನೇ’ ಈ ಕಾವೀಧಾರಿಯೆಂದು !. ಅವರ ಜೊತೆಯಲ್ಲಿದ್ದವರನ್ನು ವಿಚಾರಿಸಿದೆ.." ಇವರು ರಾಮಚಂದ್ರಾಪುರ ಮಠದಲ್ಲಿದ್ದಾರೆ, ಶ್ರೀ ಗಳು ಬರುವ ಮುನ್ನ ಎಲ್ಲವನ್ನೂ ಅಣಿಗೊಳಿಸುತ್ತಾರೆ, ದೊಡ್ಡ ವಿದ್ವಾಂಸರು, ೭ ನೇ ವರ್ಷದಿಂದಲೇ ವೇದಪಾರಂಗತರು..." ಎಂದೆಲ್ಲಾ ಹೊಗಳಿದರು................

 ವಿದ್ಯೆ ಇಷ್ಟು ಸುಲಭವಾದುದೇ ..? ೫-೬ ವರ್ಷಗಳಲ್ಲಿ ವಿದ್ವಾಂಸರಾಗಬಹುದೇ ..? ಅಂತಹ ಹಿನ್ನಲೆಯುಳ್ಳ ಸಂಸ್ಕಾರವಂತ ವ್ಯಕ್ತಿಯೇ ಈ ’ನಕ್ಷತ್ರಿಕ’ ........ ಆತ ಇನ್ನೂ ಎಲ್ಲೆಲ್ಲಿ ಏನೇನು ಹೇಳಿಕೊಂಡು ತನ್ನ ಕರಾಮತ್ತು ತೋರಿಸಬಹುದೋ....ನನ್ನ ಯೋಚನಾ ಲಹರಿ ಸಾಗಿತ್ತು......ಮುಂದೊಂದು ದಿನ ..ಚಿತ್ರಾನಂದನೋ, ವಿಚಿತ್ರಾನಂದನೋ ಆಗಿ ಧುತ್ತೆಂದು ಕಣ್ಮುಂದೆ ಬರುವ ಮೊದಲು ಸಮಾಜ ಇಂತಹವರ ಪ್ರತಿ ಎಚ್ಚರದಿಂದಿರುವುದು ಒಳಿತು.

---------------*----------------        


 ಖೊನೆಖಿಡಿ :

 ಶಂಭುಲಿಂಗ , ತನ್ನ ಹಾಳಾದ ಮರದ ಎತ್ತಿನ ಬಂಡಿಯ ಚಕ್ರಗಳನ್ನು ವ್ಯಾಪಾರಕ್ಕಿಟ್ಟ. ಪಾಪ...ಅವನ ಗ್ರಹಚಾರಕ್ಕೆ ಯಾರೂ ಅವನ್ನು    ಕೊಳ್ಳಲು ಬರಲಿಲ್ಲ. ಪುಕ್ಕಟೆ ಕೊಡುತ್ತೇನೆಂದ.., ಆದರೂ ಯಾರೂ ಬರಲಿಲ್ಲ.
 ರಾತ್ರಿ ಮಲಗುವಾಗ ಚಕ್ರಗಳ ಮೇಲೆ " ಎರಡು ಚಕ್ರಗಳ ಬೆಲೆ ೨೦೦ ರೂಪಾಯಿ " ಎಂದು ಬರೆದಿಟ್ಟು ನಿದ್ದೆಹೋದ. ಬೆಳಗಾಗುವಷ್ಟರಲ್ಲಿ ಚಕ್ರಗಳು ಕಳುವಾಗಿದ್ದವು..!!!


--------------------*---------------
{ ಈ ಲೇಖವನ್ನೋದಿದ ಕೆಲವು ಬ್ಲಾಗ್ ಮಿತ್ರರು ಮತ್ತು ಶ್ರೀ ರಾಮಚಂದ್ರಾಪುರ ಮಠದ ಹಿತೈಶಿಗಳು ನನ್ನಿಂದ ಕೆಲವು ವಿವರಣೆಯನ್ನು ಬಯಸಿ ಕೇಳಿದ ಪ್ರಶ್ನೆಗಳನ್ನು ಅನುಸರಿಸಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ನನ್ನ ಮಿತ್ರರನ್ನು ವಿಚಾರಿಸಲಾಗಿ, ಕಿರುಷಷ್ಟಿಯ ದಿನ ನನ್ನ ಲೇಖನದ ನಕ್ಷತ್ರಿಕ ಅಲ್ಲಿಗೆ ಬಂದು, ಶ್ರೀ ಮಠದ ಹೆಸರು ಹೇಳಿ, ಅಲ್ಲಿದ್ದ ಕೆಲವರನ್ನು ನಂಬಿಸಿ, ಹಣ ಪಡೆದು, ಸೋಗು ಹಾಕಿ ಅಲ್ಲಿನ ಕೆಲವು ಜನರಿಂದ ಉಗಿಸಿಕೊಂಡು ಹೋಗಿರುವ ವಿಚಾರವನ್ನು ತಿಳಿಸಿದರು. ಶ್ರೀ ಮಠದಲ್ಲಿ ೨ ವರ್ಷಗಳ ಹಿಂದೆ ಇಂತಹುದೇ ವ್ಯಕ್ತಿಯೊಬ್ಬನನ್ನು (ಮೈಸೂರು ಮೂಲದ) ಅಲ್ಲಿಂದ ಹೊರ ಹಾಕಿರುವ ವಿಚಾರವೂ ತಿಳಿಯಿತು. ಶ್ರೀ ಮಠದಲ್ಲಿ ಇಂತಹ ಕಾವೀಧಾರಿಗಳಾರೂ ಗುರುಗಳ ಸೇವೆಗೆ ಇರುವುದಿಲ್ಲವೆಂಬ ವಿಚಾರವೂ ತಿಳಿಯಿತು. ಹಾಗಾಗಿ, ಇಂತಹ ಸೋಗಲಾಡಿ ವ್ಯಕ್ತಿ, ಶ್ರೀ ಶಂಕರರ ಅಥವಾ ರಾಮಚಂದ್ರಾಪುರ ಮಠದ ಹೆಸರು ಹೇಳಿಕೊಂಡು ಬಂದಲ್ಲಿ , ಸರ್ವದಾ ಎಚ್ಚರಿಕೆಯಿಂದ ಇರುವುದು ಒಳಿತೆನಿಸುತ್ತದೆ. ..ಆಸಕ್ತಿ ವಹಿಸಿ ಮಾಹಿತಿ ಕೊಟ್ಟ ಮಿತ್ರರು-ಹಿರಿಯರಿಗೆ  ಧನ್ಯವಾದಗಳನ್ನು ಸಲ್ಲಿಸುತ್ತೇನೆ. }
-----------------*--------------------


                                                     ವಂದನೆಗಳೊಂದಿಗೆ