Aug 2, 2010

ಆಹಾ ! ನೊಡದೊ ಹೊನ್ನಿನ ಜಿಂಕೆ... ೩

ನಾಗಪ್ಪನವರ ಮುಖ ವಿಷಣ್ಣವಾಯಿತು, ಅದು ಗೋಪಾಲಯ್ಯನಿಗೂ ಕಂಡಿತು. ಚಿರಂತನಿಗೆ ತಾನೇ ಮಾತನಾಡಬೇಕೆನ್ನಿಸಿದರೂ, ಸಂದರ್ಭ ಸರಿಯಾಗಲಿಕ್ಕಿಲ್ಲ ಎಂದು ಸುಮ್ಮನಾದ. ಕ್ಷಣಕಾಲ ಮೌನ ಆವರಿಸಿತು.  ಅಡುಗೆಮನೆಯಿಂದ ಸೀತಮ್ಮ ಹೊರಬಂದರು. ಗಂಡಸರು ಮಾತನಾಡುವಾಗ ಹೆಂಗಸರು ಮಧ್ಯೆ ಬಾಯಿ ಹಾಕಬಾರದೆನ್ನುವ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು ಸೀತಮ್ಮ. ಯಾರಿಂದಲೂ ಮಾತು ಹೊರಡದಾದಾಗ ತಾವೇ ಮಾತನಾಡುವುದು ಸೂಕ್ತವೆಂದು ಭಾವಿಸಿದರು. ಹಾಗೆ ಮಾತನಾಡಿದರು ಕೂಡ .

" ನಮಗೆ ಇಂಜಿನಿಯರ್ರೇ ಆಗಬೇಕು ಅಂತೇನು ಇರಲಿಲ್ಲ, ನಮ್ಮ ಕುಟುಂಬದವರೆಲ್ಲಾ ಕಂಪ್ಯೂಟರ್ ಇಂಜಿನಿಯರ್ರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವೆಲ್ಲಾ ಈಗ ಫಾ಼ರಿನ್ನು, ಹಾಳು-ಮೂಳು ಅಂತ ತಿರುಗಾಡಿಕೊಂಡಿವೆ. ನಮಗೆ ಇರೋಳು ಒಬ್ಬಳೇ ಮಗಳು. ಮಗಳು ಒಳ್ಳೆ ಕಡೆ ಸೇರಲಿ, ಎಲ್ಲರಂತೆ ಕಾರು-ವಿಮಾನ ಅಂತ ಓಡಾಡ್ಕೊಂಡು ಇರಲಿ ಅನ್ನೋ ಆಸೆ ಅಷ್ಟೆ. ಒಟ್ಟಿನಲ್ಲಿ ಒಳ್ಳೆ ಕೆಲಸ ಆದರೆ ನಮ್ಮ ಅಭ್ಯಂತರವೇನು ಇಲ್ಲ "
ನಾಗಪ್ಪ ಹೆಂಡತಿಯ ಮುಖವನ್ನೊಮ್ಮೆ ನೋಡಿದರು. ಮತ್ತೆ ತಲೆ ಕೆಳಗೆ ಹಾಕಿ ನೆಲವನ್ನೇ ದಿಟ್ಟಿಸತೊಡಗಿದರು.  ಈ ವಿಷಯವನ್ನು ಬೇಗ ಇತ್ಯರ್ಥಗೊಳಿಸಬೇಕು ಎಂದುಕೊಂಡ ಚಿರಂತ. ಮತ್ತೆ-ಮತ್ತೆ  ವೃತ್ತಿ ಸಂಬಂಧ ವಿಚಾರಗಳನ್ನು ಯಾರೂ ಕೆದಕುವುದು ಅವನಿಗೆ ಸರಿಕಂಡುಬರಲಿಲ್ಲ. ತಲೆ ತಗ್ಗಿಸಿ ಕುಳಿತಿದ್ದ ನಾಗಪ್ಪನವರನ್ನೊಮ್ಮೆ ದಿಟ್ಟಿಸಿದ. ತುಸು ಹತಾಶರಾದಂತೆ ಕಂಡುಬಂದಿತು. ಸೀತಮ್ಮನವರೊಟ್ಟಿಗೆ ಮಾತನಾಡುವುದೇ ಸರಿಯೆಂದುಕೊಂಡ.

" ಅಮ್ಮಾ, ಇಂಜಿನಿಯರ್ರೇ ಆಗಲಿ, ನಾನೇ ಆಗಲಿ ಅಥವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡ್ತಾ ಇರೋ ನನ್ನಂತಹ ಸಾವಿರಾರು ಜನಗಳ ಬದುಕು , ಹೊರಗಡೆಯಿಂದ ನೋಡೋರಿಗಷ್ಟೆ ಚೆಂದ. ಎಲ್ಲದಕ್ಕೂ ನಾವು ಶನಿವಾರ-ಭಾನುವಾರಗಳನ್ನೇ  ಕಾಯ್ಬೇಕು. ನಾವು ದುಡಿದದ್ದನ್ನು ನೆಮ್ಮದಿಯಾಗಿ ಉಣ್ಣುತ್ತೇವೆಂಬ ನಂಬಿಕೆ ನಮ್ಮಲ್ಲಿ ತುಂಬ ಕಡಿಮೆ. ಒಂದು ರೀತಿಯ ಯಾಂತ್ರಿಕ ಜೀವನ ನಮ್ಮದು. ಅದರಲ್ಲೂ ಬೆಂಗಳೂರು ಅನ್ನೋದು ವಿಲಾಸೀ ಮಾಯಾ ಲೋಕ. ಅಲ್ಲಿ ಬದುಕೋದು ನಮ್ಮ ಸದ್ಯದ ಅನಿವಾರ್ಯತೆ ಮತ್ತು ಅಗತ್ಯ. ಅಂತಹ ಮಾಯಾಮೃಗದ ಬೆನ್ನುಹತ್ತಿ ಹೋಗೋ ಅವಶ್ಯಕತೆ ನಿಮಗಿಲ್ಲ ಅಂದುಕೊಳ್ಳುತ್ತೇನೆ. ಇಷ್ಟಕ್ಕೂ ಯಾರೂ ನಿಮ್ಮ ಮಗಳ ಅಭಿಪ್ರಾಯವನ್ನೇ ಕೇಳಲಿಲ್ಲವಲ್ಲ, ಆಕೆಯನ್ನೇನು ಬಂಧಿಸಿಟ್ಟಿದ್ದೀರೇನು ? ".

 ನಾಗಪ್ಪ ತುಸು ಸಾವರಿಸಿಕೊಂಡವರಂತೆ ಮೇಲೆದ್ದರು. ಮುಖದಲ್ಲಿ ಬಲವಂತದ ನಗುವೊಂದನ್ನು ತಂದುಕೊಂಡರು. ಅದನ್ನು ತೋರಿಕೊಂಡರು ಕೂಡ. ಏನೋ ಹೇಳಲು ಹೊರಟ ಗೋಪಾಲಯ್ಯನವರನ್ನು ಅರ್ಧಕ್ಖೇ ತಡೆದರು ನಾಗಪ್ಪ.

" ಗೋಪಾಲಯ್ಯ, ಹುಡುಗ ಹೇಳೋದು ಸರಿಯಿದೆ. ಹಾಳಾದ್ದು ಈ ಕಂಪ್ಯೂಟರ್ ವಿಷಯ ನಮಗೆ ಗೋತ್ತಾಗೋದಿಲ್ಲ ನೋಡಿ. ಅವರಿಬ್ಬರೇ ಮಾತನಾಡಿಕೊಂಡು ಬಿಡಲಿ ಅಲ್ಲವೆ. ಅವರ ಜೀವನವನ್ನು ಅವರೇ ತೀರ್ಮಾನ ಮಾಡಿಕೊಳ್ಳೋದು ಒಳ್ಳೇದು . ಏನಂತೀರಿ ? "

ಗೋಪಾಲಯ್ಯ ಮನಸಿನಲ್ಲೇ ಹೌದೆಂದುಕೊಂಡರು. ಹೊರಗೆ ತೋರ್ಪಡಿಸದೆ, ಗೋಣು ಹಾಕಿ ಸುಮ್ಮನಾದರು. ಹಜಾರಕ್ಕೆ ಅಂಟಿಕೊಂಡಿದ್ದ ಕೋಣೆಯ ಬಾಗಿಲು ತೆರೆದರು ನಾಗಪ್ಪ. ಮಗಳನ್ನು ಹೊರಬರುವಂತೆ ಕರೆದರು. ಅಲ್ಲಿಯವರೆಗೂ ಒಳಗೆ ಒಂಟಿಯಾಗಿ ಕುಳಿತಿದ್ದರಿಂದಲೋ ಏನೋ ಆಕೆಯ ಮುಖ ಬಾಡಿದಂತಾಗಿತ್ತು. ಸಂಪ್ರದಾಯದಂತೆ ಸೀರೆ ಉಟ್ಟು ತಲೆಗೆ ಹೂ ಮುಡಿದು ನಿಂತಿದ್ದ ಹುಡುಗಿಯನ್ನೊಮ್ಮೆ ಚಿರಂತ ದಿಟ್ಟಿಸಿದ. ಕಿರುನಗೆಯೊಂದು ಅವನ ತುಟಿಯಂಚಿನಲ್ಲಿ ಮಿನುಗಿ ಮಾಯವಾಯಿತು. ಅವನೇ ಮಾತಿಗೆ ಮುಂದಾದ.

" ನಿಮ್ಮ ಅಭ್ಯಂತರವೇನೂ ಇಲ್ಲವೆಂದಾದರೆ ನಾನು, ನಿಮ್ಮ ಮಗಳು ಸ್ವಲ್ಪ ಕಾಲ ನಿಮ್ಮ ತೋಟದಲ್ಲೆ ತಿರುಗಾಡಿಕೊಂಡು ಬರಬಹುದೆ ? ಹಾಗೇ ಒಂದಷ್ಟು ವಿಚಾರ ವಿನಿಮಯವೂ ಆಗಬಹುದೇನೋ ಅಂತ ".

 ನಾಗಪ್ಪ ಮರುಮಾತಿಲ್ಲದೆ ಸಮ್ಮತಿಯಿತ್ತು ಅಡುಗೆಮನೆಯೆಡೆಗೆ ನಡೆದರು. ಹುಡುಗ-ಹುಡುಗಿ ಮನೆಯಿಂದ ಹೊರಬಿದ್ದರು. ಗೋಪಾಲಯ್ಯ ಕೈಯಿಗೆ ಸಿಕ್ಕಿದ ಪುಸ್ತಕವೊಂದನ್ನು ತಿರುವುತ್ತ ಕುಳಿತರು. ಸೀತಮ್ಮ ತುಸು ಗಾಬರಿಯಾಗಿದ್ದರು. ಅವರ ಆತಂಕಕ್ಕೆ ಕಾರಣವೂ ಇತ್ತು. ನಾಗಪ್ಪ ಒಳಬಂದಿದ್ದು ನೋಡಿ ದುಗುಡದಿಂದ ಹೇಳಿಕೊಂಡರು.

"ಇಬ್ಬರನ್ನೇ ಹಾಗೆ ಹೊರಗೆ ಕಳಿಸೋದು ಅದೇನು ಚೆನ್ನಾಗಿರುತ್ತೆ ಹೇಳಿ ? , ಅದೂ ಮದುವೆಗೆ ಮುಂಚೆಯೆ, ಕನಿಷ್ಠ ಲಗ್ನಪತ್ರಿಕೆಯಾದರೂ ಆಗಬಾರದೆ. ನೀವಂತೂ ಇತ್ತೀಚೆಗೆ ಇಂಗು ತಿಂದ ಮಂಗನ ಹಾಗೆ ಆಡ್ತಾ ಇದ್ದೀರಿ. ಅವರೇನೋ ಕೇಳುದ್ರಂತೆ, ಇವರು ಕಳುಹಿಸಿಬಿಟ್ರಂತೆ. ಹೆಚ್ಚು-ಕಮ್ಮಿಯಾದರೆ ಯಾರು ಜವಾಬುದಾರರು? ಅಕ್ಕ-ಪಕ್ಕದವರು ಏನಂದಾರು ".

"ಸೀತೂ, ನೀನಿನ್ನೂ ನಿಮ್ಮಜ್ಜನ ಕಾಲದಲ್ಲೇ ಇದ್ದೀಯ. ಬೆಂಗಳೂರಿನಲ್ಲಿ ಇದೆಲ್ಲಾ ಸರ್ವೇಸಾಮಾನ್ಯ. ಇಷ್ಟಕ್ಕೂ ಬೆಂಗಳೂರನ್ನು ನೀನು ಕಂಡಿದ್ರೆ ತಾನೆ ನಿನಗೆ ಗೊತ್ತಾಗೋದು"

" ಕಾಣೋದಕ್ಕೆ ಕರೆದುಕೊಂಡು ಹೋಗಿದ್ರೆ ತಾನೇ ನೀವು ? ಪಕ್ಕದ ’ಬಾಳೆಹೊನ್ನೂರು’ ತೋರಿಸೋದಕ್ಕೆ ಮದುವೆಯಾಗಿ ೧೦ ವರ್ಷ ತಗೊಂಡ್ರಿ ನೀವು. ಎಂದಾದ್ರೂ ಸ್ವತಂತ್ರವಾಗಿ ನಿರ್ಧಾರತಗೊಳೋಕೆ ಬಿಟ್ರೇನು ನೀವು ? "

"ಆಯ್ತು ಮಹರಾಯ್ತಿ, ಇಲ್ಲಿವರೆಗೂ ನಿನಗೆ ಸ್ವತಂತ್ರ ಸಿಕ್ಕಿರಲಿಲ್ಲ. ಇನ್ನು ಮುಂದೆ ನೀನು ಸರ್ವತಂತ್ರ ಸ್ವತಂತ್ರೆ. ನಿನ್ನ ಮಗಳ ಮದುವೆ ವಿಷಯದಲ್ಲಿ ನೀನೇ ನಿರ್ಧಾರ ತಗೋ , ಆಯ್ತಾ "

ನಾಗಪ್ಪ ಹೊರಬಂದರು. ಅಡುಗೆ ಮನೆಯಲ್ಲಿ ಆಗಾಗ್ಗೆ  ಪಾತ್ರೆಗಳ  ಸದ್ದು ಜೋರಾಗಿ ಕೇಳಿಬರುತ್ತಿತ್ತು.

ಇತ್ತ , ಪರಸ್ಪರ ಮಾತನಾಡಲೆಂದು ಹೊರಬಂದವರಿಬ್ಬರೂ ಬಹಳ ದೂರ ಮೌನವಾಗೇ ಸಾಗಿ ಬಂದಿದ್ದರು. ಹುಡುಗಿಯೇ ಮಾತನಾಡಿದಳು.

" ನಿಮ್ಮ ಹೆಸರು ಚಿರಂತ್ ಅಂತ ಗೊತ್ತಾಯ್ತು. ನಾನು ಪಲ್ಲವಿ ".

ಹುಡುಗಿಯ ಮಾತಿನಿಂದ ಉತ್ತೇಜಿನಾದಂತೆ ಕಂಡುಬಂದ ಚಿರಂತ.

" ಒಹ್ !. Good name. ಏನು ಒದಿದ್ದೀರಿ ? I mean education ? "

" M.A. ಆಗಿದೆ. ಪೊಲಿಟಿಕಲ್ ಸೈನ್ಸ್ "

"ನಾನು MBA ಮುಗಿಸಿದ್ದೀನಿ. ನನ್ನ ಮಟ್ಟಿಗೆ ಒಳ್ಳೆ ಕೆಲಸನೂ ಇದೆ. ನಿಮಗೆ ಕೆಲ್ಸ ಮಾಡಬೇಕು ಅಂತೇನೂ ಇಲ್ವ ?"

" ಇದೆ. political science ವಿಭಾಗದಲ್ಲಿ  ಅಧ್ಯಾಪಕಿಯಾಗಬೇಕು ಅನ್ನೋ ಆಸೆ ಇದೆ "

"ಒಹ್ !. Thats wonderful !. ಮತ್ತೆ ಸಮಸ್ಯೆ ಏನು ? "

"ನನ್ನ ಮದುವೆಯದು "

 ಚಿರಂತ ಕ್ಷಣಕಲ ಮೌನವಹಿಸಿದ. ಮುಂದೇನು ಕೇಳಬೇಕೆಂದು ಅವನಿಗೆ ತೋಚಲಿಲ್ಲ . ತೀರಾ ವೈಯಕ್ತಿಕವಾಗಬಹುದೆಂದು ಸುಮ್ಮನಾದ. ಪಲ್ಲವಿಯೇ ಮುಂದುವರಿಸಿದಳು.

" ನನಗೆ ನಮ್ಮ ಊರಲ್ಲೇ ಇದ್ದು ಕೆಲಸ ಮಾಡಬೇಕು ಅಂತ ಆಸೆಯಿದೆ. ಅದರೊಟ್ಟಿಗೆ ನನ್ನ ತಂದೆ-ತಾಯಿಗಳಿಗೂ ಆಸರೆಯಾಗಿರಬೇಕು ಅನ್ನೋದು ಇನ್ನೊಂದು ಆಸೆ "

ಚಿರಂತನಿಗೆ ಕೊಂಚ ಅರ್ಥವಾಗಲಿಲ್ಲ. ಸ್ವಲ್ಪ ತಡೆದು ಪುನಃ ಕೇಳಿದ

"ಅಂದರೆ ? ನಿಮಗೆ ಮದುವೆ ಬೇಡ ಅಂತಲೆ ? "

"ಹಾಗಲ್ಲ. ನಾನು ಒಬ್ಬಳೇ ಮಗಳು. ಇವರನ್ನು ಬಿಟ್ಟು ೩೫೦ ಕಿ.ಮೀ ದೂರದ ಊರಿಗೆ ಹೋಗಿ ಕುಳಿತರೆ, ಇವರಿಗೆ ಕಷ್ಟಕಾಲ ಬಂದಾಗ ನೋಡೋರು ಯಾರು ? ಅಲ್ಲಿಂದ ಇಲ್ಲಿಗೆ ಬರೋಕೆ ಕನಿಷ್ಠ ೭ ಗಂಟೆ ಪ್ರಯಾಣ. ಅಂತಹ ಪ್ರಯಾಣ ಮಾಡೋದಕ್ಕೂ ಒಂದು ತಿಂಗಳ ಮುಂಚೆಯೇ ತಯಾರಾಗಬೇಕು. ಕಷ್ಟ ಅನ್ನೋದು ಹೇಳಿ-ಕೇಳಿ ಬರೋಲ್ಲವಲ್ಲ."

"ಅದು ನಿಜ. ಮತ್ತೆ, ಏನು ಮಾಡಬೇಕು ಅನ್ನೋದು ನಿಮ್ಮ ಉದ್ದೇಶ ?"

" ನನ್ನ ತಂದೆ-ತಾಯಿಯವರೇನೋ ಮದುವೆ ಮಾಡಿ ಕಳುಹಿಸಲು ಸಿದ್ದವಾಗಿದ್ದಾರೆ. ಅದು ಅವರ ಮಗಳ ಬಗೆಗಿರೋ ಕಾಳಜಿ. ಅಂತಹುದೇ ಕಾಳಜಿ-ಅಕ್ಕರೆ ನನಗೂ ಇರುತ್ತೇ ಅಲ್ವಾ ? . ನನ್ನ ಮದುವೆ ಮಾಡಿಕೊಟ್ಟಾದ ಮೇಲೆ ಈ ತೋಟವನ್ನೆಲ್ಲಾ  ಮಾರಿ ಬೆಂಗಳೂರಿಗೆ ಬಂದು ಸೇರ್ಕೋತಾರಂತೆ "

ಚಿರಂತ ಹಾವು ತುಳಿದವನಂತೆ ಬೆದರಿದ.

"ಅಯ್ಯೋ!. ಅಂತಹ ತಪ್ಪು ಕೆಲ್ಸ ಮಾಡೋದುಬೇಡ. ಇನ್ನು ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತೆ. ಬೆಳೆದು ತಿನ್ನೋನೆ ಹೆಚ್ಚು ಸುಖವಾಗಿರ್ತಾನೆ ನೋಡಿ. "

"ಹೌದು.  ಆದರೆ ನನ್ನಿಂದ ಇವರಿಗೆ ಅರ್ಥಮಾಡಿಸಲು ಆಗ್ತಾ ಇಲ್ಲ. "

ವಿಷಯ ಹಳಿತಪ್ಪುತ್ತಿರಬಹುದೆನಿಸಿತು ಚಿರಂತನಿಗೆ. ವಿಷಯವನ್ನು ಅರ್ಧಕ್ಕೆ ತುಂಡರಿಸಿದ.

"ಮದುವೆಯ ಬಗ್ಗೆ ಏನು ಹೇಳಲೇ ಇಲ್ಲ ನೀವು ? "

ಪಲ್ಲವಿಯ ಮುಖ ಮತ್ತಷ್ಟು ಕಳೆಗುಂದಿದಂತಾಗಿದ್ದನ್ನು ಚಿರಂತ ಗಮನಿಸಿದ. ಆಕೆಯೇ ಮಾತನಾಡಲೆಂದು ಸುಮ್ಮನಾದ. ಸಮಯ ಜಾರುತ್ತಿತ್ತು. ಆದರೂ ಸುಮ್ಮನಾದ.

" ಆಗಲೇ ಹೇಳಿದೆನಲ್ಲಾ, ಅಷ್ಟು ದೂರ ಬರೋದಕ್ಕೆ ನನಗಿಷ್ಟವಿಲ್ಲ. ಈ ವಿಷ್ಯಾನ ನಮ್ಮ ಮನೆಯಲ್ಲಿ ಹೇಳೋಕೆ ನನ್ನಿಂದ ಆಗ್ತಿಲ್ಲ. ಹೇಳುದ್ರೂ ಅವರು ಅರ್ಥಮಾಡ್ಕೋತಾರೆ ಅಂತ ನನಗನ್ನಿಸ್ತಿಲ್ಲ "

"I am sorry. ಬೆಂಗಳೂರು ಬಿಟ್ಟು ಬರೋದು ನನಗೂ ಸಾಧ್ಯವಿಲ್ಲ. So , ನಮ್ಮಿಬ್ಬರ ದಾರಿ ಬೇರೆ-ಬೇರೆಯದೇ ಅಂತಾಯ್ತು. ಅದೆಲ್ಲಾ ಸರಿ, ನನ್ನೊಂದಿಗೆ ಹೇಳಿದ ಹಾಗೆ ನಿಮ್ಮ ಪೇರೆಂಟ್ಸ್ ಗೂ ಕನ್ವಿನ್ಸ್ ಮಾಡಬಹುದಲ್ಲ ನೀವು ?"

"ನನ್ನ ಮಾತನ್ನು ಅವರು ಕೇಳೋದಿಲ್ಲ. ಅದೇ ಸಮಸ್ಯೆ "

ಚಿರಂತನ ಮುಖದಲ್ಲಿ ಸಣ್ಣನಗುವೊಂದು ತೇಲಿಬಂತು

"ಇಲ್ಲಿ ಯಾರನ್ನಾದ್ರು ನೋಡಿದೆರೇನು? ನಿಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳೋಕೆ ?"

ಚಿರಂತನ ನೇರ ಪ್ರಶ್ನೆಗೆ ಪಲ್ಲವಿಯ ಉತ್ತರವೂ ಅಷ್ಟೇ ಸಹಜವಾಗಿ ಬಂದಿತು.

"ಹೌದು. ಅವರು ನನ್ನ ಸಹಪಾಠಿ. ಚಿಕ್ಕಮಗಳೂರಿನಲ್ಲಿ ಕೆಲಸ ಮಾಡ್ತಾರೆ. ನನಗೂ ಅಲ್ಲೇ ಕೆಲಸ ಆಗಬಹುದು. ಊರಿಗೆ ಹತ್ತಿರ. ನನ್ನ ಹೆತ್ತವರಿಗೂ ಆಸರೆಯಾಗಿರಬಹುದು ನಾನು"

"ಏನ್ರೀ ನೀವು ? ಒಳಗಡೆ ಬೆಂಕಿಯಿಟ್ಟುಕೊಂಡು ಇಷ್ಟು ದಿನ ಹೇಗ್ರೀ ತಡೆದುಕೊಂಡಿದ್ರೀ ?  any way ನಮ್ಮ ಸ್ನೇಹಕ್ಕಂತೂ ಯಾವ ಕಳಂಕವೂ ಬರೋದಿಲ್ಲ. ನಿಮ್ಮ ಸ್ನೇಹಿತನಾಗಿ ನಾನೀಗ ಏನು ಮಾಡಬೇಕು ಹೇಳಿ ? "

ಪಲ್ಲವಿಯ ಮುಖದಲ್ಲಿ ಮಂದಹಾಸ ಹಾದುಹೋಯಿತು.

" ನಿಮ್ಮಂತಹ ಸ್ನೇಹಿತರು ಸಿಕ್ಕಿದ್ದು ನನಗೂ ಸಂತೋಷವೆ. ಸದ್ಯಕ್ಕೆ ನಿಮ್ಮ ಕೆಲಸ ನನ್ನ ಹೆತ್ತವರನ್ನು ಕನ್ವಿನ್ಸ್ ಮಾಡೋದು ಅಷ್ಟೆ. "

" ನಿಮ್ಮೂರಿನ express ಬಸ್ಸಿನಲ್ಲಿ ಬಂದುದಕ್ಕೆ ಇಷ್ಟೂ ಮಾಡದೇ ಹೋದ್ರೆ ಸರಿಯಾಗುತ್ಯೆ ?  ಆ ಬಸ್ಸಿಗೆ ಅವಮಾನ "

ಮನಃಪೂರ್ವಕವಾಗಿ ನಗುತ್ತಾ ಇಬ್ಬರೂ ಮನೆಯತ್ತ ಹೆಜ್ಜೆ ಹಾಕಿದರು. ಮಾತಿನ ಲಹರಿಯಲ್ಲಿ ಮನೆ ಬಂದುದೇ ತಿಳಿಯಲಿಲ್ಲ ಇಬ್ಬರಿಗೂ. ಒಳಗೆ ಬಂದ ಪಲ್ಲವಿ ಕೋಣೆಯ ಬಾಗಿಲಿಗೆ ಒರಗಿ ನಿಂತಳು. ಚಿರಂತ ಚಾಪೆಯ ಮೇಲೆ ಕೂರದೆ ಟಿ.ವಿ. ಸ್ಟಾಂಡ್ ಪಕ್ಕದಲ್ಲಿದ್ದ ಕುರ್ಚಿಯ ಮೇಲೇ ಕುಳಿತ. ಮಗಳ ಮುಖ ನೋಡಿದ ಸೀತಮ್ಮ ತುಸು ಗೆಲುವಾದರು. ಗೋಪಾಲಯ್ಯ ಅದೇ ಪುಟಗಳನ್ನು ತಿರುವಿಹಾಕುತ್ತಿದ್ದರು. ನಾಗಪ್ಪ ಶುರುಮಾಡಿದರು.

" ಏನ್ ತೀರ್ಮಾನ ತಗೋಂಡ್ರಿ "

ಚಿರಂತ ಗೋಪಾಲಯ್ಯನವರನ್ನೊಮ್ಮೆ ನೋಡಿದ. ನಾಗಪ್ಪನವರೆಡೆಗೆ ತಿರುಗಿದ.

" ನನಗೆ ನಿಮ್ಮ ಮಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ "

ನಾಗಪ್ಪ ಕೊಂಚ ವಿಚಲಿತರಾದವರಂತೆ ಕಂಡರು. ಸಾವರಿಸಿಕೊಂಡು ಮತ್ತೆ ಮುಂದುವರಿಸಿದರು.

" ನಾವು ನಿಮ್ಮ ವೃತ್ತಿ ವಿಚಾರವಾಗಿ ಕೇಳಿದ್ದು ತಮಗೆ ಬೇಸರವಾಯ್ತೇನೋ ? ಗೋಪಾಲಯ್ಯ ಎಲ್ಲವನ್ನೂ ವಿವರಿಸಿ ಹೇಳಿದ್ದಾರೆ. ಆ ವಿಷಯದಲ್ಲಿ ನಮಗೆ ಅಭ್ಯಂತರವಿಲ್ಲ . "

"ಹಾಗೇನಿಲ್ಲ.  ನೋಡಿ ನಾಗಪ್ನೋರೆ, ಮದುವೆ ಅಂತ ಆದಮೇಲೆ ಹೋಗೋದು-ಬರೋದು ಮಾಡಬೇಕಾಗುತ್ತೆ. ನನಗೆ ರಜೆಗಳು ಸಿಗೋದಿಲ್ಲ. ಅದೂ ಅಲ್ಲದೆ ಪ್ರಯಾಣವೇ ಬಹಳ ಹೊತ್ತು ಹಿಡಿಯುತ್ತೆ. ಇದು ನಿಮ್ಮ ಮಗಳಿಗೂ ಕಷ್ಟವಾಗಬಹುದು. ಮುಂದೆ ಅದೇ ಒಡಗಿಕೆ ಕಾರಣವಾಗಬಹುದು "

ಚಿರಂತ ಹೇಳಿಮುಗಿಸುವಷ್ಟರಲ್ಲಿ  ನಾಗಪ್ಪ  ಅವಸರದಲ್ಲಿ ಮಾತನಾಡಿದರು.

"ಇಲ್ಲ, ಇಲ್ಲ. ಹಾಗೇನು ಇಲ್ಲ. ನಿಮಗೆ ಅನುಕೂಲವಾದಾಗ ಬಂದು ಹೋದ್ರೆ ಸಾಕು "

" ಇಲ್ಲಿ ನಿಮ್ಮ ಕ್ಷೇಮ ಯಾರು ನೋಡ್ಕೋತಾರೆ ನಾಗಪ್ನೋರೆ ? "

"ಅಯ್ಯೋ ನಮ್ಮದೇನು ಬಿಡಿ ಹೇಗೋ ಆಗುತ್ತೆ. ಗಾಳಿಗೆ ಬಿದ್ಧ್ಹೋಗೋ ಮರ, ಸತ್ತಮೇಲೆ ಸಮಾಧಿ, ಅಷ್ಟೆ "

ಚಿರಂತ ತುಸು ಗಂಭೀರವಾದ. ಅದೇ ಧಾಟಿಯಲ್ಲೇ ಮಾತನಾಡಿದ.

" ಬದುಕು ಅನ್ನೋದು ಒಂದೇ ಸಲ ಸ್ವಾಮಿ. ಸತ್ತಮೇಲೆ ನಾನು ಚಿರಂತನೂ ಅಲ್ಲ, ನೀವು ನಾಗಪ್ಪನೂ ಅಲ್ಲ.  ಏನಾಗ್ತಿವೀ ಅನ್ನೋದು ಯಾರಿಗೂ ಗೊತ್ತಿಲ್ಲ. ಸತ್ತಮೇಲಲ್ಲ ಸ್ವಾಮಿ ಸಮಾಧಿಯಾಗೋದು, ಬದುಕಿದ್ದಾಗಲೇ ಆಗಬೇಕು. ಇದನ್ನೇ ಕರ್ಮಯೋಗದಲ್ಲಿ ಹೇಳಿರೋದು.  ಬದುಕನ್ನು ಪರಿಪೂರ್ಣವಾಗಿ ಅನುಭವಿಸೋ ಅವಕಾಶ ಇರೋವಾಗ ಅದನ್ನ ನೀವೆ ದೂರ ಮಾಡಿ ಯಾವುದೋ ಮರಿಚಿಕೆಯ ಬೆನ್ನು ಹತ್ತಿ ಹೋಗ್ತಾ ಇದ್ದೀರಿ. ನಿಮ್ಮ ನಿರ್ಧಾರ ನಿಮ್ಮ ಮಗಳಿಗೂ ಒಪ್ಪಿಗೆ ಇದೆಯೇ ಅಂತಾ ಕೇಳಿದ್ದೀರಾ ? "

ನಾಗಪ್ಪ ಅವಾಕ್ಕಾಗಿ ನಿಂತಿದ್ದರು. ಮಗಳ ಮುಖವನ್ನೊಮ್ಮೆ ನೋಡಿದರು. ಹೆಂಡತಿಯ ಮುಖವನ್ನೂ ನೋಡಿದರು. ಏನೂ ತೋಚಲಿಲ್ಲ.  ಚಿರಂತನನ್ನೇ ಕೇಳಿದರು.

" ಏನಂತಾಳೆ ನಮ್ಮ ಮಗಳು ? ಮತ್ತೆ ನಿಮ್ಮ ಮದುವೆ ವಿಷಯ ? "

ಚಿರಂತ ಪಲ್ಲವಿಯೆಡೆಗೆ ತಿರುಗಿದ. ಇಬ್ಬರ ಮಖದಲ್ಲೂ ನಗು ತೇಲುತ್ತಿತ್ತು

"ಪಲ್ಲವಿಯವರೆ, ನಮ್ಮಲ್ಲಿ ಮದುವೆಗೆ ಹೆಣ್ಣು ಸಿಗೋದು  ಕಷ್ಟವಾಗಿದೆ. ನನಗೆ ಹೆಣ್ಣು ಹುಡುಕಿಕೊಡೊ ಹೊಣೆ ನಿಮ್ಮದೆ . ಏನಂತೀರಿ ? "

ಪಲ್ಲವಿ ನಗುತ್ತಲೆ ಹೇಳಿದಳು.

" ಸ್ನೇಹಿತರಿಗೆ ಅಷ್ಟೂ ಮಾಡದಿದ್ರೆ ಹೇಗೆ ಹೇಳಿ ? ಆ ಹೊಣೆ ನನ್ನದೆ "

ಅಲ್ಲಿದ್ದ ಉಳಿದ ಮೂವರಿಗೂ ಏನೊಂದೂ ಅರ್ಥವಾಗಲಿಲ್ಲ. ಚಿರಂತನೇ ಮುಂದುವರಿಸಿದ

" ಪಲ್ಲವಿಯಂತಹ ಮಗಳನ್ನು ಪಡೆಯೋಕೆ ಪುಣ್ಯ ಮಾಡಿದ್ದೀರಿ ನೀವು. ನಿಮ್ಮ  ಬಾಳಿನ ಮುಸ್ಸಂಜೆಯಲ್ಲಿ ಆಕೆ ನಿಮ್ಮ ಸೇವೆಗೆ ನಿಲ್ಲಬೇಕಂತೆ. ನಿಮಗಿರೋಳು ಆಕೆಯೊಬ್ಬಳೆ.  ಗಂಡು...ಹೆಣ್ಣು. ಎಲ್ಲಾ ಅವಳೆ ನಿಮಗೆ. ಆಕೆಯನ್ನು ಇಲ್ಲಿಯವರಗೆ ಬೆಳೆಸಿ ಒಳ್ಳೆಯ ಸಂಸ್ಕಾರ-ಸಂಸ್ಕೃತಿ ಕಲಿಸಿಕೊಟ್ಟ ನಿಮ್ಮನ್ನು ಒಂಟಿಯಾಗಿ ಬಿಟ್ಟು , ಆಕೆ ಬೇರೆಲ್ಲೋ ಸಂತೋಷವಾಗಿ ಇರೋದು ಹೇಗೆ ಸಾಧ್ಯ ಹೇಳಿ ?  ಅದಕ್ಕೇ ಅಂತಲೇ ಆಕೆ ಈ ಊರು ಬಿಟ್ಟು ಬರೋಕೆ ತಯಾರಿಲ್ಲ. ಆಕೆ ತನ್ನ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಯಂತೆ. ಚಿಕ್ಕಮಗಳೂರು ಕಾಲೇಜಿನಲ್ಲಿ ಉಪನ್ಯಾಸಕರು. ನಿಮ್ಮ ಮಗಳಿಗೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇದೆ. ನೀವು ಸ್ವಲ್ಪ ಉದಾರ ಮನಸು ಮಾಡಿದರೆ, ಎಲ್ಲವೂ ಒಳ್ಳೆಯದೇ ಆಗುತ್ತೆ . ಏನಂತೀರಿ ನಾಗಪ್ನೋರೆ ? "

ನಾಗಪ್ಪ ಸೀತಮ್ಮನ ಮುಖವನ್ನೊಮ್ಮೆ ನೋಡಿದರು. ಆ ಕ್ಷಣಕ್ಕೆ ಸೀತಮ್ಮನ ಮುಖ ಏನೋ ಹೊಸತನ್ನು ಕಂಡಂತೆ ಅರಳಿತ್ತು.  ನಾಗಪ್ಪ ಪಲ್ಲವಿಯ ಬಳಿಗೆ ತೆರಳಿದರು. ಮಗಳ ಮುಖವನ್ನೊಮ್ಮೆ ಸಾದ್ಯಂತ ದಿಟ್ಟಿಸಿದರು. ಅಮೂರ್ತಭಾವವೊಂದು ಅವರನ್ನು ಆವರಿಸಿತು. ಗಟ್ಟಿಯಾಗಿ ಮಗಳನ್ನೊಮ್ಮೆ ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಉದುರುತ್ತಿದ್ದ ಹನಿಗಳು , ಪಲ್ಲವಿಯ ಸೀರೆಯ ಸೆರಗಿನ ಮೇಲೆ ಹನಿ-ಹನಿಯಾಗಿ ಬೀಳುತ್ತಿತ್ತು.

......................................................................................................

( ಮುಗಿಯಿತು ..ಅಂದುಕೊಳ್ಳುತ್ತೇನೆ :-) )

ವಂದನೆಗಳೊಂದಿಗೆ...