Apr 27, 2010

ಶಾಪ.. ೨ ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)   

---------------------------------*------------------

................ಇಡೀ ವಿವಾಹ ಮಂಟಪವೇ ಬಿರಿದು ಹೋಗುವಂತೆ ಅಬ್ಬರಿಸಿದ ಬಲ್ಲಾಳರಾಯ. ಅವನ ಮಾತುಗಳಲ್ಲಿ ನೋವಿನ ಛಾಯೆಯಿತ್ತು.


" ತಿರುಮಲಾಂಬಾ, ನಡೆ ಹೊರಡೋಣ. ಇಂತಹ ಕಪಟಿಗಳೊಂದಿಗೆ ನಮ್ಮ ಸಂಬಂಧವೇನಾದರೂ ಏರ್ಪಟ್ಟರೆ, ಅದು ಈ ದ್ವಾರಾವತಿಗೆ ಬಹು ದೊಡ್ಡ ಕಳಂಕ !. ತುತ್ತನ್ನ ತಿಂದು ಬೆಳೆದ ಸಹೋದರಿಗೇ ಬೇಡವಾದ ಪ್ರೀತ್ಯಾದರಗಳು ನಮಗೇಕೆ ? . ಇನ್ನೊಂದು ಕ್ಷಣವೂ ನಾವಿಲ್ಲಿರಕೂಡದು...ವಿವಾಹವಾದರೂ ಜರುಗಲಿ..ಅಂತ್ಯೇಷ್ಟಿ ಕರ್ಮಾಂತರವಾದರೂ ನಡೆಯಲಿ .., ನಮಗಾವ ಗೊಡವೆಯೂ ಬೇಡ..ಎಲ್ಲವೂ ಪರಮೇಶ್ವರನ ಇಚ್ಚಯಂತೇ ನೆರವೇರಲಿ...ನಾನಿನ್ನೆಂದೂ ಇವರ ಮುಖ ನೋಡಲು ಬಯಸುವುದಿಲ್ಲ ...! "

ಖಚಿತ ನಿರ್ಧಾರದೊಂದಿಗೆ ಹೊರಡಲನುವಾದ ರಾಯ, ತಿರುಮಲಾಂಬೆಯ ಕೈ ಹಿಡಿದು ದರ-ದರನೆ ಎಳೆದುಕೊಂಡು ವಿವಾಹಮಂಟಪದಿಂದ ಹೊರನೆಡೆದ. ಮಹಾರಾಜನ ಅನಿರೀಕ್ಷಿತ ವರ್ತನೆ , ನೆರೆದಿದ್ದವರಲ್ಲಿ ದುಗುಡ ಹುಟ್ಟಿಸಿತು. ಮುಂದೆ ಒದಗಿ ಬರಬಹುದಾದ ಅಪಾಯದ ಸೂಚನೆಯೂ ಅಲ್ಲಿ ನೆರೆದಿದ್ದ ಕೆಲವರಿಗೆ ಅರಿವಾಗಿತ್ತು !.

ಇತ್ತ , ರಾಣಿ ’ಹರಿಯಾಳ’ ದೇವಿಯ ಅಣತಿಯಂತೆ ವಿವಾಹ ಕಾರ್ಯ ಮುಂದುವರಿಯಿತು. ಹೊಯ್ಸಳ ಸಾಮ್ರಾಜ್ಯದ ಅಧಿಪತಿಯ ಅನುಪಸ್ಥಿತಿಯಲ್ಲಿ  ಶಾಸ್ರ್ತೋಕ್ತ ವಿಧಿಗಳೆಲ್ಲಾ ಸಾಂಗವಾಗಿ ನೆರವೇರಿತು ! .  ಸರ್ವರೂ ದ್ವಾರಾವತಿಯನ್ನು ತೊರೆದು ಚಂದ್ರಗಿರಿಯತ್ತ ಪ್ರಯಾಣ ಬೆಳೆಸಿದರು.  ಪ್ರಯಾಣದುದ್ದಕ್ಕೂ ಹರಿಯಾಳ ದೇವಿಯ ಮನದಲ್ಲಿ ಸಹೋದರ ’ವಿರೂಪಾಕ್ಷ ಬಲ್ಲಾಳ’ರಾಯನ ಮಾತುಗಳೇ ಮಾರ್ದನಿಸುತ್ತಿತ್ತು. ಆಕೆ ಮತ್ತಷ್ಟು ಕಠಿಣ ಹೃದಯಿಯಾದಳು...!.

...................................*..........................

ವಿವಾಹದ ತರುವಾಯ, ಚಂದ್ರಗಿರಿಯಲ್ಲಿ ರಾಣಿ ಹರಿಯಾಳ ದೇವಿಯ ಸುಖ-ಸಂಭ್ರಮಕ್ಕೇನೂ ಕೊರತೆಯಿರಲಿಲ್ಲ.  ತಿಂಗಳುಗಳು ಕಳೆದಂತೆ ರಾಣಿಯು ಗರ್ಭವತಿಯಾದಳು. ಮೊಗ್ಗು ಮುಡಿಸುವ ಶಾಸ್ತ್ರವೂ ಸಾಂಗವಾಗಿ ನೆರವೇರಿತು. ಚಂದ್ರಗಿರಿಯ ಸಮಸ್ತ ಪ್ರಜೆಗಳು ವಿಜಯೋತ್ಸವವನ್ನೂ ಆಚರಿಸಿದರು. ವಿಪರ‍್ಯಾಸವೆಂದರೆ, ದ್ವಾರಾವತಿಯ ಯಾರೊಬ್ಬರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಚಂದ್ರಗಿರಿಯ ಸಂಭ್ರಮ , ಬಲ್ಲಾಳರಾಯನ ಕೋಪಾಗ್ನಿಗೆ ತುಪ್ಪ ಸುರಿದಂತಾಗಿತ್ತು.

ನವಮಾಸಗಳು ಪೂರೈಸಿ, ಹತ್ತನೆಯ ತಿಂಗಳಿನಲ್ಲಿ ರಾಣಿಯು ಅವಳಿ ಗಂಡುಮಕ್ಕಳಿಗೆ ಜನ್ಮವಿತ್ತಳು. ಚಂದ್ರಗಿರಿಯ  ಉತ್ತರಾಧಿಕಾರಿಗಳು ಜನಿಸಿದ ಸಂಭ್ರಮಕ್ಕೆ, ಅರಸನಾದಿಯಾಗಿ ಸಮಸ್ತರೂ ಗ್ರಾಮದೈವದ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು. ಜನನವಾದ ಹನ್ನೊಂದನೆಯ ದಿವಸ  ದಂಪತಿಗಳು, ಕ್ಷೇತ್ರ ದೈವವಾದ ’ಚಂದ್ರಶೇಖರ’ ನ ಸನ್ನಿಧಿಯಲ್ಲಿ ..ಶುಭ ಮುಹೂರ್ತದಲ್ಲಿ ಮಕ್ಕಳಿಗೆ ನಾಮಕರಣವನ್ನು ನೆರವೇರಿಸಿದರು.  "ಲಕ್ಷ್ಮಣ" ಮತ್ತು "ವೀರೇಶ್ವರ" ನೆಂದು ನಾಮಾಂಕಿತರಾದ ಮಕ್ಕಳು , ಚಂದ್ರಗಿರಿಯ ಅನರ್ಘ್ಯ ರತ್ನಗಳಂತೆ ಹರಿಯಾಳ ದೇವಿಯ ಆರೈಕೆಯಲ್ಲಿ ಬೆಳೆಯತೊಡಗಿದರು .

ಮಕ್ಕಳಿಗೆ ಎರಡು ವರ್ಷವಾಗುವಾಗ , ಪತಿಯ ಆರೋಗ್ಯ ಕ್ಷೀಣಿಸುತ್ತಿರುವುದು ರಾಣಿಯ ಗಮನಕ್ಕೆ ಬಂದಿತು. ಸತತ ಎರಡು ವರ್ಷಗಳ ಕಾಲ ವೈದ್ಯೋಪಚಾರ ನಡೆಸಿದರೂ, ದಿನೇ-ದಿನೇ ರಾಜನ ಆರೋಗ್ಯ ಹದಗೆಟ್ಟಿತೇ ವಿನಃ ಚೇತರಿಕೆಯೇನೂ ಕಂಡುಬರಲಿಲ್ಲ.  ಜಾತಕದ ದೊಷವೋ-ದುರ್ದೈವವೋ...ಹರಿಯಾಳ ರಾಣಿಯ ಪತಿ, ಚಂದ್ರಗಿರಿಯ ಅರಸು..ಅದೊಂದು ದಿವಸ ಸೂರ್ಯೋದಯದ ಕಾಲದಲ್ಲಿ ವಿಧಿವಶನಾದನು. ನಾಲ್ಕು ವರ್ಷದ ಮಕ್ಕಳನ್ನೂ -ರಾಣಿಯನ್ನೂ ಬಿಟ್ಟು ಇಹಲೋಕವನ್ನು ತ್ಯಜಿಸಿದನು. ಕಷ್ಟಕಾಲವು ಇನ್ನಿಲ್ಲದಂತೆ ರಾಣಿಯನ್ನು ಆವರಿಸಿತು. ಪತಿಯ ಮರಣದ ದುಃಖದಲ್ಲಿ ಮುಳುಗಿದ ರಾಣಿಗೆ ರಾಜ್ಯ-ಕೋಶಗಳಾವುದೂ ಬೇಡವೆನಿಸಿತು. ....ಆದರೂ , ತನ್ನೆರೆಡು ಮಕ್ಕಳನ್ನು ಚಂದ್ರಗಿರಿಯ ಅಧಿಪತಿಗಳನ್ನಾಗಿ ಮೆರೆಸುವವರೆಗೂ ತಾನು ವಿರಮಿಸಬಾರದೆಂಬ ಧೃಡನಿಶ್ಚಯ ಮಾಡಿದಳು.  ಸಹೋದರ ಬಲ್ಲಾಳರಾಯನ ನೆರಳೂ ಸಹ ಚಂದ್ರಗಿರಿಯ ಮೇಲೆ ಬೀಳದಾದಾಗ , ರಾಣಿಯೇ ಸರ್ವ ಅಧಿಕಾರಗಳನ್ನೂ ವಹಿಸಿಕೊಂಡು ದಕ್ಷ ಮಂತ್ರಿ ಹಾಗೂ ಸೇನಾಧಿಕಾರಿಗಳ ನೆರವಿನೊಂದಿಗೆ ರಾಜ್ಯಭಾರ ನೆಡೆಸಲನುವಾದಳು.  ತನ್ನಿಬ್ಬರು ಮಕ್ಕಳು ಪ್ರವರ್ಧಮಾನಕ್ಕೆ ಬರಲು, ಅವರಿಗೆ ಸೂಕ್ತ ವಿಧ್ಯಾಭ್ಯಾಸ, ಶಸ್ತ್ರಾಭ್ಯಾಸ, ವೇದಾಭ್ಯಾಸ ಹಾಗು ರಾಜನೀತಿಗಳ ಸಮಗ್ರ ಅಧ್ಯಯನವನ್ನು ರಾಜ ಗುರುಗಳಿಂದ ಕಲಿಸಿದಳು.

ಅದೊಂದು ದಿವಸ, ವಿದ್ಯೆ ಕಲಿಸಕೊಟ್ಟ ರಾಜ ಗುರುಗಳು ದ್ವಾರಾವತಿಯ ವೈಭವವನ್ನು ಹರಿಯಾಳ ರಾಣಿಯ ಮಕ್ಕಳೆದುರಿಗೆ ವರ್ಣಿಸಿದರು..

" ಮಕ್ಕಳೇ, ನಿಮ್ಮ ಸೋದರಮಾವ ಮಹಾರಾಜ ವಿರೂಪಾಕ್ಷ ಬಲ್ಲಾಳ’ನು ದ್ವಾರಾವತಿಯಲ್ಲಿ ಅತ್ಯಂತ ವೈಭವದಿಂದ ರಾಜ್ಯಭಾರವನ್ನು ಮಾಡುತ್ತಲಿದ್ದಾನೆ. ತನ್ನ ರಾಜಧಾನಿಯ ಸುತ್ತ ಕೋಟೆಯನ್ನು ನಿರ್ಮಿಸಿ ಮನೋಹರವಾದ ಅರಮನೆಯನ್ನು ಕಟ್ಟಿಸಿದ್ದಾನೆ.  ಜಗತ್ಪ್ರಸಿದ್ದವಾಗಬಲ್ಲಂತಹ ಅಪೂರ್ವ ಶಿಲ್ಪಕಲಾ ವೈಭವವನ್ನು ಹೊಂದಿರುವ ಆಲಯಗಳನ್ನು ನಿರ್ಮಿಸಿದ್ದಾರೆ. ನವರತ್ನಗಳ ರಾಶಿಯನ್ನೇ ಆಲಯಗಳಿಗೆ ದಾನ ಕೊಟ್ಟಿದ್ದಾರೆ.  ರಾಜ ಪರಿವಾರದ ’ನಖರೇಶ್ವರ’ ನ ಆಲಯದ ಸೊಬಗನ್ನು ಕಣ್ಣಾರೆ ನೋಡಿಯೇ ಸವಿಯಬೇಕು. ಸನಿಹದಲ್ಲೇ ಅರಮನೆಯೂ ಇದೆ.  ಮಹಾಮಂತ್ರಿ ಕಟ್ಟಿಸಿಕೊಟ್ಟಿರುವ ಅತ್ಯಪೂರ್ವ ’ಹೊಯ್ಸಳೇಶ್ವರ’ನ ಆಲಯದ ವೈಭವವನ್ನು ನೀವೊಮ್ಮೆ ಅಲ್ಲಿಗೆ ಹೋಗಿ ಸವಿದುಬರಬೇಕು, ದ್ವಾರಾವತಿಯು ನಿಜವಾಗಿ ಇನ್ನೊಂದು ಅಮರಾವತಿಯೇ ಸರಿ..."  

ಪ್ರಬುದ್ಧ ಯುವಕರಿಗೆ , ಇಂತಹ ಸಿರಿಯನ್ನು ಕಣ್ಣಾರೆ ನೋಡಲೇಬೇಕೆಂಬ ಆಕಾಂಕ್ಷೆ ಒಡಮೂಡಿತು. ತಮ್ಮ ಸೋದರಮಾವನ ಅರಮನೆಯ ವೈಭವವನ್ನು ಕಣ್ಣಾರೆ ನೋಡುವುದು ಸೌಭಾಗ್ಯವೇ ಸರಿಯೆಂಬ ನಿರ್ಧಾರ ಯುವಕರಲ್ಲಿ ಮೂಡಿತು. ರಾಜಗುರುಗಳ ಪಾದಾರವಿಂದಗಳಿಗೆರಗೆ, ದ್ವಾರಾವತಿಯ ಯಾತ್ರೆಗೆ ಅನುಮತಿ ಪಡೆಯಲು ತಾಯಿಯ ಬಳಿಗೆ ತೆರಳಿದರು.

ರಾಣಿ ಹರಿಯಾಳ ದೇವಿಯು ವಿಶ್ರಾಂತಿಯಲ್ಲಿದ್ದಳು. ಯುವಕರು ಮುಚ್ಚುಮರೆಯಿಲ್ಲದೆ , ತಮ್ಮ ಆಕಾಂಕ್ಷೆಯನ್ನು  ತಿಳಿಸಲನುವಾದರು.

" ಅಮ್ಮಾ, ಗುರುಗಳಿಂದ ನಮಗಿಂದು ದ್ವಾರಾವತಿಯ ವೈಭವವು ತಿಳಿಯಲ್ಪಟ್ಟಿತು. ಬಲ್ಲಾಳರಾಯರು ನಮ್ಮ ಮಾವನೇ ಅಲ್ಲವೇ ? ನಾವೇಕೆ ಅವರಿಂದ ದೂರವಿರಬೇಕು ? ನೀನೆಂದೂ ದ್ವಾರವತಿಯ ಸಂಬಂಧದ ವಿಷಯವನ್ನು ನಮಗೆ ತಿಳಿಸಿ ಹೇಳಲೇ ಇಲ್ಲ..ಏಕೆಂದು ತಿಳಿಸುವೆಯಾ ? " 
 ..ಪ್ರಥಮ ಬಾರಿಗೆ ತನ್ನ ಮಕ್ಕಳ ಬಾಯಿಂದ ದ್ವಾರಾವತಿಯ ವಿಚಾರವು ಬಂದುದು, ರಾಣಿಗೆ ಆಶ್ಚರ್ಯವನ್ನುಂಟುಮಾಡಿತು. ತನ್ನ ಕಠಿಣ ನಿರ್ಧಾರಕ್ಕೆ ಅವಳು ಬದ್ದಳಾಗಿದ್ದಳು..

" ಮಕ್ಕಳೇ, ದ್ವಾರಾವತಿಯ ಅರಸು ನಮಗೆ ಸಂಬಂಧಿಕನೇ ಇರಬಹುದು, ರಾಜತಾಂತ್ರಿಕವಾಗಿ ನಾವವರ ಅಧೀನದಲ್ಲೇ ಇದ್ದೇವೆ. ಕಾಲಕಾಲಕ್ಕೆ ಕಪ್ಪವನ್ನೂ ಸಲ್ಲಿಸುತ್ತಿದ್ದೇವೆ, ಅಂದ ಮಾತ್ರಕ್ಕೆ ನಾವು ಅವರ ಅಡಿಯಾಳುಗಳಲ್ಲ ..! . ಹಿಂದೆಂದೋ ಕಡಿದು ಹೋದ ಸಂಬಂಧವನ್ನು ಹೇಳಿಕೊಂಡು ಮತ್ತೆ ಅವರ ಮನೆ ಬಾಗಿಲಿಗೆ ಹೋಗುವುದು ಉಚಿತವಲ್ಲ...ಅಂತಹ ಆಸೆಯನ್ನು ಬಿಟ್ಟುಬಿಡಿ.."

...ಯುವಕರಿಗೆ ತಾಯಿಯ ಮಾತುಗಳು ರುಚಿಸಲಿಲ್ಲ.  ಮಾತೆಯನ್ನು ಓಲೈಸಲು ಅನುವಾದರು.

" ಮಾತೆ, ಬಾಹ್ಯಸಂಬಂಧ ಕಡಿದುಹೋದ ಮಾತ್ರಕ್ಕೆ ರಕ್ತಸಂಬಂಧ ಕಡಿದುಹೋಗುವುದೇ ? ಬಲ್ಲಾಳರಾಯರ ಆಶಿರ್ವಾದ ನಮಗೆ ದೊರತಲ್ಲಿ ನಮ್ಮ ಸೇನಾಬಲವು ಮತ್ತಷ್ಟು ಹೆಚ್ಚುತ್ತದೆ. ನಮ್ಮ ರಾಜತಾಂತ್ರಿಕ ಶಕ್ತಿಯೂ ಬಲಗೊಳ್ಳುತ್ತದೆ. ದ್ವಾರಾವತಿಯನ್ನೊಮ್ಮೆ ದರ್ಶಿಸಿ, ಅವರೊಂದಿಗೆ ಸಂತೋಷದಿಂದಿರುವ ಬಯಕೆ ನಮ್ಮದು, ನಿಮ್ಮ ಅನುಮತಿಗಾಗಿ ಇಲ್ಲಿಗೆ ಬಂದಿದ್ದೇವೆ, ಹರಸಿ ತಾಯಿ.."  

ಮಕ್ಕಳ ಮಾತುಗಳು ರಣಹೇಡಿಗಳ ಮಾತಿನಂತೆ ಕೇಳಿಸಿದವು ಹರಿಯಾಳ ದೇವಿಗೆ. ಆಕೆ ಮತ್ತಷ್ಟು ಕ್ರೋಧಗೊಂಡಳು..

" ಪುತ್ರರೇ, ನೀವು ದ್ವಾರಾವತಿಯನ್ನು ಸಂದರ್ಶಿಸುವ ಆಸೆಯನ್ನು ಬಿಟ್ಟುಬಿಡಿ, ನಿಮ್ಮ ಮಾತುಗಳು ಕ್ಷಾತ್ರ ಧರ್ಮಕ್ಕೆ ಉಚಿತವಾದುದಲ್ಲ. ದೈನ್ಯತೆಯಿಂದ ಪಾದಕ್ಕೆರಗಿ ಶರಣಾಗುವುದು ಕ್ಷತ್ರಿಯರ ಲಕ್ಷಣವಲ್ಲ. ಇಷ್ಟು ವರ್ಷಗಳ ಕಾಲ ನಿಮಗೆ ಕ್ಷಾತ್ರ ಧರ್ಮವನ್ನು ಭೋದಿಸಿದ್ದು ವ್ಯರ್ಥವಾಯಿತೆನ್ನಿಸುತ್ತಿದೆ. ದ್ವಾರಾವತಿಗೂ ನಮಗೂ ಯಾವುದೇ ರೀತಿಯ ಬಾಂಧವ್ಯವಿಲ್ಲ....ನೀವೆಂದಿಗೂ ಅಲ್ಲಿಗೆ ಹೋಗಕೂಡದು...ಇದು ರಾಣಿ ಹರಿಯಾಳ ದೇವಿಯ ಕಟ್ಟಾಜ್ಞೆ..!!. "

ಸ್ಪಷ್ಟಮಾತುಗಳಲ್ಲಿ ಹರಿಯಾಳ ದೇವಿಯು ಮಕ್ಕಳ ದ್ವಾರಾವತೀ ಯಾತ್ರೆಯ ಅಕಾಂಕ್ಷೆಯನ್ನು ಖಂಡಿಸಿದಳು.  ಯುವಕರಿಗೆ ತಾಯಿಯ ಮಾತುಗಳು ನುಂಗಲಾರದ ತುತ್ತಾಯಿತು. ಮನಸಿನ ಮೂಲೆಯಲ್ಲಿ ದ್ವಾರಾವತಿಯನ್ನು ದರ್ಶಿಸುವ ಆಸೆ ಹಾಗೇ ಉಳಿದಿತ್ತು. ತಮ್ಮ ಆಸೆಯನ್ನು ನೆರೆವೇರಿಸಿಕೊಳ್ಳುವ ರೀತಿಯನ್ನು ಚಿಂತಿಸತೊಡಗಿದರು. ........ಕೊನೆಗೆ, ಇಬ್ಬರು ಯುವಕರು ನಿರ್ಧಾರವೊಂದನ್ನು ಗುಟ್ಟಾಗಿ ಹಂಚಿಕೊಂಡರು..!.

ಅದೊಂದು ದಿನ, ಲಕ್ಷ್ಮಣ-ವೀರೇಶ್ವರರಿಬ್ಬರೂ ಅಮಾವಾಸ್ಯೆಯ ಕಗ್ಗತ್ತಿಲಿನಲ್ಲಿ ಚಂದ್ರಗಿರಿಯ ಅರಮನೆಯ ಸುರಂಗ ಮಾರ್ಗದ ದ್ವಾರದಿಂದ ನುಸುಳಿ, ತಮಗಾಗಿ ಮೊದಲೇ ಕಾದಿರಿಸಿದ್ದ ಅಶ್ವಗಳನ್ನೇರಿ ದ್ವಾರಾವತಿಯೆಡೆಗೆ ಹೊರಟೇಬಿಟ್ಟರು....ರಾಣಿ ಹರಿಯಾಳ ದೇವಿಯು ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿದ್ದಳು....!.

  (ಮುಂದುವರಿಯುತ್ತದೆ..)

  ವಂದನೆಗಳೊಂದಿಗೆ....

Apr 19, 2010

ಶಾಪ.. ( ಐತಿಹಾಸಿಕ ಕಥೆ)

 ( ಕಥೆಯಲ್ಲಿ ಬರುವ ಪ್ರದೇಶಗಳಲ್ಲಿ ಪ್ರಚಲಿತವಿರುವ ದಂತಕತೆಗಳು ಮತ್ತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿರುವ ವಿಷಯಗಳಿಂದ ಸಂಗ್ರಹಿಸಲಾಗಿದೆ)
...............................................................*.................................................


.....ಸುಮುಹೂರ್ತ ಸಾವಧಾನ |
     ಸುಲಗ್ನ ಸಾವಧಾನ ||......

ವೇದಘೋಷಗಳ ನಡುವೆ ಮಂಗಳಕರವಾದ  ’ನಿರೀಕ್ಷಣ’ ಮುಹೂರ್ತವು ಯಾವುದೇ ಆತಂಕಗಳಿಲ್ಲದೆ ನೆರವೇರಿತ್ತು. ಚಂದ್ರಗಿರಿಯ ಸಮಸ್ತ ಪ್ರಜೆಗಳೂ ಅಲ್ಲಿ ನೆರೆದಿದ್ದರು. ತಮ್ಮ ಪ್ರಭುವಿನ ವಿವಾಹ ಮುಹೂರ್ತದ ಸುಸಂದರ್ಭವನ್ನು ಕಣ್ಣಾರೆ ಕಂಡು ಆನಂದಿಸಲು ಪುಟ್ಟ ಮಕ್ಕಳಾದಿಯಾಗಿ , ಸೈನಿಕರು, ದಳಪತಿಗಳು, ಮಂತ್ರಿ-ಮಹೋದಯರು, ರಾಜ ಪರಿವಾರದ ದೇವಾಲಯವಾದ ’ನಖರೇಶ್ವರನ’ ಸನ್ನಿಧಿಯಲ್ಲಿನ ಸಾಲಂಕೃತ ವಿವಾಹ ಮಂಟಪದಲ್ಲಿ ತುಂಬಿಕೊಂಡಿದ್ದರು. ಚಂದ್ರಗಿರಿಯ ಸಕಲ ಮಹೋದಯರ ಸಂತಸಕ್ಕೆ , ಮಹತ್ತರವಾದ ಕಾರಣವೊಂದಿತ್ತು...!. ’ಹೊಯ್ಸಳ’ ಸಾಮ್ರಾಜ್ಯದ ಗಂಡೆದೆಯ ವೀರನೆಂದೇ ಪ್ರಖ್ಯಾತನಾಗಿದ್ದ , ಮಹರಾಜ ’ವಿರೂಪಾಕ್ಷ ಬಲ್ಲಾಳ’ ನ ಸಹೋದರಿಯನ್ನು , ಚಂದ್ರಗಿರಿಯ ರಾಜನಿಗೆ ವಿವಾಹ ಸಂಪನ್ನಗೊಳಿಸುವ ವೈಭವದ ಮುಹೂರ್ತವಾಗಿತ್ತದು.  ಬಲ್ಲಾಳರಾಯನ ಇಚ್ಚೆಯಂತೆ, ಅವನ ಸಹೋದರಿ ರಾಣಿ ’ಹರಿಯಾಳ ದೇವಿ’ಯ ವಿವಾಹವು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾದ ’ದ್ವಾರಾವತಿ’ಯಲ್ಲಿ ಸಾಂಗವಾಗಿ ಸಾಗುತ್ತಲಿತ್ತು. ಕನ್ಯಾವರಣ, ಕನ್ಯಾದಾನ, ಅಕ್ಷತಾರೋಪಣ ವಿಧಿಗಳು ಅತ್ಯಂತ ವಿಜೃಂಭಣೆಯಿಂದ , ಕಂಡು-ಕೇಳರಿಯದ ರೀತಿಯಲ್ಲಿ ನೆರವೇರಿತು. ವೈದಿಕರ ವೇದಘೋಷಗಳು, ಸಂಗೀತಗಾರರ ಹಾಡುಗಳೂ, ವಾದ್ಯಗಳೂ, ನೃತ್ಯಗಾರ್ತಿಯರ ಮನಮೋಹಕ ನೃತ್ಯಗಳೂ, ವಿವಿಧ ಕಲಾವಿದರುಗಳ ಕಲಾ ಪ್ರದರ್ಶನವು ನೆರೆದಿದ್ದವರ ಮನಸೂರೆಗೊಂಡಿತು. ಹೊಯ್ಸಳ ಸಾಮ್ರಾಜ್ಯದಲ್ಲಿ  ಕಲೆಗೆ-ಕಲಾವಿದರಿಗೆ ದೊರೆಯುತ್ತಿದ್ದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿತ್ತು ಈ ಎಲ್ಲಾ ಸಂಭ್ರಮಗಳು.
............ಮಹಾರಾಜ ವಿರೂಪಾಕ್ಷ ಬಲ್ಲಾಳ ಪತ್ನಿ ತಿರುಮಾಲಾಂಬೆಯೊಡನೆ ಸುಖಾಸೀನನಾಗಿ ತನ್ನ ಸಹೋದರಿಯ ವಿವಾಹದ ಅಪೂರ್ವ ಕ್ಷಣಗಳ ಆನಂದವನ್ನು ಸವಿಯುತ್ತಲಿದ್ದ.
ತನ್ನೆದುರಿಗೆ ಅನಿರೀಕ್ಷಿತವಾಗಿ ಆಗಮಿಸಿದ ಮಹಾಮಂತ್ರಿಗಳನ್ನು ನೋಡಿ , ಅವರನ್ನು ಕರೆದು ಪಕ್ಕದಲ್ಲೇ ಕುಳ್ಳಿರಿಸಿಕೊಂಡ. ಮಂತ್ರಿಗಳು ರಾಜನ ಕಿವಿಯಲ್ಲಿ ಅದೇನೋ ವಿಷಯವನ್ನು ಹೇಳಿದರು...ವಿಷಯವನ್ನು ಕೇಳಿದ ರಾಜ , ಅರೆಕ್ಷಣ ದಿಗ್ಭ್ರಾಂತನಾದ..!. ತಿರುಮಲಾಂಬೆಗೂ ಮಂತ್ರಿಗಳು ಹೇಳಿದ ವಿಷಯವನ್ನು ತಿಳಿಸಿದ. ಈರ್ವರ ಮುಖಗಳೂ ಬಾಡಿ ಹೋದವು. ಎಚ್ಚೆತ್ತುಕೊಂಡ ಬಲ್ಲಾಳರಾಯ , ಸಮಯವನ್ನು ಅಪವ್ಯಯ ಮಾಡುವುದು ಸರಿಯಲ್ಲವೆಂದು ಚಿಂತಿಸಿ, ನೇರವಾಗಿ ಚಂದ್ರಗಿರಿಯ ರಾಜನ ಮಾತಾ-ಪಿತೃಗಳನ್ನೇ ವಿಚಾರಣೆಗೆ ಆಹ್ವಾನಿಸಿದ. ಬಲ್ಲಾಳರಾಯನ ಮಾತುಗಳಲ್ಲಿ ಕ್ರೋಧವಿತ್ತು ...


" ಅಷ್ಟೈಶ್ವರ್ಯ ಸಂಪತ್ತುಗಳುಳ್ಳ ಹೊಯ್ಸಳ ಸಾಮ್ರಾಜ್ಯದ ಅರಸನಿಗೆ ಮೋಸವೇ ?? ನಿಮ್ಮ ಪುತ್ರನಿಗೆ ಒದಗಿಬಂದಿರುವ ಕ್ಷಯರೋಗದ ವಿಷಯವನ್ನೇಕೆ ನಮಗೆ ತಿಳಿಸಲಿಲ್ಲ ನೀವು ? ಸಾಮಂತರಾಗಿರುವ ನಿಮಗೇ ಇಷ್ಟು ದಾಷ್ಟ್ಯವಿರಬೇಕಾದರೆ..ಅಖಂಡ ಹೊಯ್ಸಳ ಸಾಮ್ರಾಜ್ಯದ ಅಧಿಪತಿ ನಾನು..ನನ್ನಿಂದ ನೀವು ಸತ್ಯವನ್ನು ಮುಚ್ಚಿಟ್ಟುಬಿಟ್ಟಿರಲ್ಲ. ಆಗಲಿ, ...ಇನ್ನೂ ವೇಳೆಯಾಗಿಲ್ಲ..ಮಾಂಗಲ್ಯಧಾರಣ ಮುಹೂರ್ತವೂ ನೆಡೆದಿಲ್ಲ...ಈ ವಿವಾಹವನ್ನು ಇಲ್ಲಿಗೇ ನಿಲ್ಲಿಸಿಬಿಡಿ. ನನ್ನ ಸಹೋದರಿಯ ಜೀವನವನ್ನು ನಾನೇ ಹಾಳುಗೆಡವಲೇ ?  ಒಬ್ಬ ರೋಗಿಗೆ ನನ್ನ ತಂಗಿಯನ್ನು ವಿವಾಹ ಮಾಡಿಕೊಡಲು ನಾನೇನು ರಣಹೇಡಿಯಲ್ಲ..!. ಸಾಕು ಮಾಡಿ ಈ ನಾಟಕ......" 

ಬಲ್ಲಾಳರಾಯನ ಮಾತುಗಳು ಗುಡುಗಿನಂತೆ ವಿವಾಹ ಮಂಟಪದಲ್ಲೆಲ್ಲಾ ಮಾರ್ದನಿಸಿತು. ಚಂದ್ರಗಿರಿಯ ಪ್ರಜೆಗಳು ಶಿಲೆಗಳಂತೆ ಸ್ತಬ್ಧರಾದರು. ಚಂದ್ರಗಿರಿಯ ರಾಜನ ಮಾತಾ-ಪಿತೃಗಳು  ದುಃಖದಿಂದ ಬಲ್ಲಾಳರಾಯನ ಪಾದಕ್ಕೆರಗಿದರು...


"ಮಹಾರಾಜ...ನಮ್ಮಿಂದ ಮಹಾಪರಾಧವಾಗಿದೆ. ನಮ್ಮನ್ನು ಕ್ಷಮಿಸಿ. ನಮ್ಮ ಪುತ್ರನ ರೋಗಕ್ಕೆ ಔಷಧೋಪಚಾರಗಳನ್ನು ನೆಡೆಸುತ್ತಿದ್ದೇವೆ. ಈಗ ಸಾಕಷ್ಟು ಗುಣಮುಖನಾಗಿದ್ದಾನೆ. ಮುಂದಿನ ದಿವಸಗಳಲ್ಲಿ , ಸೌಭಾಗ್ಯವತಿ ರಾಣಿ ’ಹರಿಯಾಳ ದೇವಿ’ಯ ಪಾತಿವ್ರತ್ಯದಿಂದ ನಮ್ಮ ಪುತ್ರನ ರೋಗವು ಸಂಪೂರ್ಣ ಗುಣಮುಖವಾಗುವುದರಲ್ಲಿ , ನಿಮಗೆ ಸಂಶಯವೇ ಬೇಡ. ದಯವಿಟ್ಟು ಅನುಗ್ರಹಿಸಿ...."

ಮಾತಾ-ಪಿತೃಗಳ ಅಶ್ರುಧಾರೆ, ಕಳಕಳಿ, ಆಕ್ರಂದನ ..ಇದ್ಯಾವುದೂ ಬಲ್ಲಾಳರಾಯನ ಮನಸನ್ನು ಗೆಲ್ಲಲಿಲ್ಲ. ಮಹಾರಾಜನ ದೃಷ್ಟಿ..  ಕ್ಷೇತ್ರ ಪುರೋಹಿತರ, ಋತ್ವಿಜರ ಕಡೆಗೆ ತಿರುಗಿತು.


 " ನಾರಯಣ ದೀಕ್ಷಿತರೆ, ತಮಗೆ ಸತ್ಯ ತಿಳಿದಿರಲಿಲ್ಲವೇ? ರಾಜ ಪರಿವಾರದ ದೈವವಾದ ’ ನಖರೇಶ್ವರ’ನನ್ನು ನಿತ್ಯ ಪೂಜಿಸುವವರು ನೀವು,  ವರನ ಜಾತಕಾದಿಗಳನ್ನು ವಿಮರ್ಶಿಸಿದವರು ನೀವು...ನಿಮ್ಮಿಂದ ಅಸತ್ಯ ಹೊರಟಿತೆ..? ನನ್ನಿಂದ ನಂಬಲಾಗುತ್ತಿಲ್ಲ, ಹೇಳಿ...ಸತ್ಯವೇನೆಂದು ಹೇಳಿ..."

ಬಲ್ಲಾಳರಾಯನ ಗುಡುಗಿಗೆ ದೀಕ್ಷಿತರು ಸ್ತಂಭೀಭೂತರಾದರು. ಅವರಿಂದ ಮಾತು ಹೊರಡದಾಯಿತು. ತುಸು ಹೊತ್ತು ಸಾವರಿಸಿಕೊಂಡು, ರಾಯನಿಗೆ ಮನವರಿಕೆ ಮಾಡಿಕೊಡಲನುವಾದರು..

" ಪ್ರಭು, ವರನ ಬಂಧುಗಳು ತಂದು ತೋರಿಸಿದ ಜಾತಕದಲ್ಲಿ ನನಗಾವ ದೊಷಗಳೂ ಕಂಡು ಬಂದಿರಲಿಲ್ಲ..ಆ ಜಾತಕ ಉತ್ತಮವಾದುದೇ ಆಗಿತ್ತು. ರೋಗದ ವಿಚಾರವಾಗಲೀ, ಅಪಮೃತ್ಯುವಿನ ವಿಷಯವಾಗಲಿ ಜಾತಕದಲ್ಲಿ ಇಲ್ಲವೇ ಇಲ್ಲ..!. ಜಾತಕವನ್ನೇ ತಿದ್ದಿರಬಹುದೇ ? ಇದರಲ್ಲಿ ಏನೋ ಮೋಸವಿದೆ ಎನಿಸುತ್ತಿದೆ ರಾಜ .."

ದೀಕ್ಷಿತರ ಮಾತಿನಿಂದ ರಾಯನ ಕೋಪ ತಾರಕಕ್ಕೇರಿತು.   ವಿವಾಹ ಕಾರ್ಯ ನೆರವೇರಿಸಲು ಕುಳಿತಿದ್ದ  ’ಶೇಷಭಟ್ಟ’ರೆಡೆಗೆ ಬಲ್ಲಾಳರಾಯ ಹರಿಹಾಯ್ದ..


" ಋತ್ವಿಜರೇ...ಹೊಯ್ಸಳರ ಪರಮ ದೈವ ’ಹೊಯ್ಸಳೇಶ್ವರನ’ ಉಪಾಸಕರು ನೀವು...ನಿಮ್ಮಿಂದಲಾದರೂ ಸತ್ಯ ಹೊರಬರಲಿ..ಅಥವ ತಾವೂ ಲೋಭಿಗಳಾಗಿಬಿಟ್ಟಿರೋ ಹೇಗೆ ?!. ಸತ್ಯವನ್ನು ಮರೆಮಾಚುವುದು ನಿಮ್ಮಂತಹವರಿಗೆ ತಕ್ಕುದಲ್ಲ..."

ಶೇಷಭಟ್ಟರಿಗೆ ಬಲ್ಲಾಳರಾಯನ ಮಾತುಗಳು ಅನುಚಿತವೆನಿಸಿದರೂ , ರಾಯನಿಗೆ ತಕ್ಕ ಸಮಾಧಾನವನ್ನು ಹೇಳಲನುವಾದರು..


" ಮಹಾರಾಜ, ನನ್ನ ತಿಳುವಳಿಕೆಯಂತೆ..ವರನ ಜಾತಕದಲ್ಲೇ ದೋಷವಿದೆ. ಆತನ ಜನ್ಮದಿನ ಮತ್ತು ಜನ್ಮಸಮಯಕ್ಕನುಸಾರವಾಗಿ ವಿವೇಚಿಸಿದರೆ ...ನಮ್ಮಲ್ಲಿರುವ ವರನ ಜಾತಕವು ತಿದ್ದಿರಬಹುದಾದ ಅಥವ ಬದಲಾಯಿಸಿರಬಹುದಾದ ಜಾತಕವೆನಿಸುತ್ತದೆ...ತಾವೇ ಪರಾಂಬರಿಸಬೇಕು..."

ಭಟ್ಟರ ಮಾತುಗಳನ್ನು  ಕೇಳಿದ ರಾಜನ ಮುಖ ಕೆಂಪಡರಿತು. ತನ್ನ ಸೊಂಟದಲ್ಲಿದ್ದ ವೀರಕತ್ತಿಯನ್ನು ಹಿರಿದು ನಿಂತು ಘರ್ಜಿಸಿದ..


" ಸಹೋದರಿ, ಇಂತಹ ಮೋಸಗಾರರ ಸಂಬಂಧವೇ ನಮಗೆ ಬೇಡ. ಈ ಕ್ಷಣವೇ ಚಂದ್ರಗಿರಿಯನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳತ್ತೇನೆ....ಈ ವಂಚಕರನ್ನು ಗಡಿಪಾರು ಮಾಡುತ್ತೇನೆ....ಸಹೋದರಿ, ಹಸೆಮಣೆ ಬಿಟ್ಟು ಎದ್ದು ಬಂದುಬಿಡು...ಇವರ ಸಹವಾಸವೇ ನಮಗೆ ಬೇಡ..ಮುಂದೊಂದು ದಿನ ಉತ್ತಮರೊಂದಿಗೆ ನಿನ್ನ ವಿವಾಹವನ್ನು ಇದಕ್ಕಿಂತಲೂ ವಿಜೃಂಭಣೆಯಿಂದ ನೆರವೇರಿಸುತ್ತೇನೆ....ಬಾ ತಂಗಿ..." 

..ಬಲ್ಲಾಳರಾಯನ ನುಡಿಗಳು ಹರಿಯಾಳದೇವಿಯ ಮನಸಿನಲ್ಲಿ ಹೊಯ್ದಾಟವೆಬ್ಬಿಸಿತು. ಅದಾಗಲೇ, ಚಂದ್ರಗಿರಿಯ ರಾಜನೇ ತನ್ನ ಪತಿಯೆಂದು ಆಕೆ ಮಾನಸಿಕವಾಗಿ ಒಪ್ಪಿಯಾಗಿತ್ತು. ಹೃದಯಗಳು ಒಂದಾಗಿಬಿಟ್ಟಿದ್ದವು. ಹರಿಯಾಳದೇವಿಗೆ ಉಭಯಸಂಕಟವಾಯಿತು. ತಾನು ಮೆಚ್ಚಿರುವ, ಪ್ರೀತಿಸುವ ’ಪತಿ’ಯನ್ನು , ಯಕಶ್ಚಿತ್ ರೋಗದ ಕಾರಣಕ್ಕಾಗಿ ಬಿಟ್ಟುಬಿಡಲೆ ? ...ಅಥವ ತನ್ನ ಪಿತೃ ಸಮಾನನಾದ ಅಣ್ಣನ ಮಾತಿಗೆ ಬೆಲೆ ಕೊಡಲೆ ?? ...ಆಕೆ ಅನಿಶ್ಚಿತತೆಯಿಂದ ತೊಳಲಾಡಿದಳು. ಕೊನೆಗೆ , ತನ್ನ ಮನಸಿಗೊಪ್ಪಿರುವ ಪತಿಯನ್ನು ತಿರಸ್ಕರಿಸುವುದು ಅಸಂಬದ್ದವೆನಿತು. ಸಾವರಿಸಿಕೊಂಡು, ಬಲ್ಲಾಳರಾಯನ ಮುಂದೆ ತನ್ನ ಮನೋನಿವೇದನೆ ಮಾಡಿಕೊಂಡಳು ..


" ಅಣ್ಣಾ...ನಾನಿವರನ್ನು ಮನಸಾರೆ ಒಪ್ಪಿಯಾಗಿದೆ. ರೋಗದ ನೆಪವೊಡ್ಡಿ, ಶಿವನ ಸನ್ನಿಧಿಯಲ್ಲಿ ನಾನಿವರನ್ನು ತಿರಸ್ಕರಿಸಲಾರೆ. ಪರಮೇಶ್ವರನ ಅನುಗ್ರಹವಿದ್ದಲ್ಲಿ, ನನ್ನ ಪತಿ ಶೀಘ್ರ ಗುಣಮುಖರಾಗುತ್ತಾರೆ.  ಇನ್ನೊಂದು ಸತ್ಯ ಹೇಳುತ್ತೇನೆ...ಈಗಾಗಲೇ ನಮ್ಮ ನಿರೀಕ್ಷಣ ಮುಹೂರ್ತವು ಮುಗಿದಿದೆ. ಶಾಸ್ತ್ರಗಳು ನಿನಗೆ ತಿಳಿಯದೇ? ನಿರೀಕ್ಷಣೆಯಾದರೆ..ವಿವಾಹವಾದಂತಯೇ ಸರಿ..!. ನೀನಾವ ಕಾರಣಗಳನ್ನು ಮುಂದಿಟ್ಟರೂ ..ನಾನು ಈ ವಿವಾಹವನ್ನು ತಿರಸ್ಕರಿಸಲಾರೆ. ದಯವಿಟ್ಟು ಸಹಕರಿಸು....ಭಟ್ಟರೇ...ತಾವು ಮುಂದುವರಿಸಿ...." 

 ಸಹೋದರಿಯ ಬಾಯಿಂದ ಹೊರಬಂದ ಮಾತುಗಳು ಬಲ್ಲಾಳರಾಯನನ್ನು ದಿಗ್ಬ್ರಮೆಗೊಳಿಸಿತು. ಅವನ ಅಸ್ತಿತ್ವವನ್ನೇ ಕೆಣಕುವ ಮಾತುಗಳು ಸಹೋದರಿಯ ಬಾಯಿಂದ ಬಂದಿದ್ದವು. ..ತನ್ನ ಪ್ರೀತಿಯ ಸಹೋದರಿಯೇ ..ತನ್ನ ವಿರುದ್ಧ ಮಾತನಾಡಿದ್ದು ? ತಾನು ತುತ್ತಿಟ್ಟು ಬೆಳೆಸಿದ ಪುಟ್ಟ ಬಾಲೆಯೇ..ಹೀಗೆ ಹೇಳಿದ್ದು.....?? ಬಲ್ಲಾಳರಾಯನಿಗೆ ದಿಕ್ಕು ತೋಚದಂತಾಯಿತು.......

 (ಮುಂದುವರಿಯುತ್ತದೆ...)


ವಂದನೆಗಳೊಂದಿಗೆ....