Oct 5, 2010

ಕುಂಟಮ್ಮನ ಸೇತುವೆ -೨


ಮರಿಯಪ್ಪನ ಮಗ ಯಾವಾಗ ಗುಡಿಯೊಳಗೆ ಹೊಕ್ಕಿದನೊ ಆ ಕ್ಷಣದಿಂದಲೆ ಅವನ ಹೆಸರು ’ಪೂಜಾರಿ’ ಎಂದು ಬದಲಾಯಿತು. ತೀರ ಇತ್ತಿಚಿನವರೆವಿಗೂ ಅವನ ನಿಜವಾದ ಹೆಸರೇನೆಂದು ಆತನಿಗೇ ಮರೆತು ಹೋಗುವಷ್ಟು ’ಪೂಜಾರಿ’ ಎಂಬ ಹೆಸರಿಗೆ ಅವನು ಒಗ್ಗಿಹೋಗಿದ್ದ. ಮೊದಮೊದಲು ಗುಡಿಯೊಳಗೆ ಕಾಲಿಟ್ಟಾಗ ’ಪೂಜಾರಿ’ಗೆ ಏನೊಂದೂ ಕಾಣಿಸಲಿಲ್ಲ. ಕತ್ತಲಿಗೆ ಕಣ್ಣುಗಳು ಹೊಂದಿಕೊಂಡ ನಂತರ ಅವನಿಗೆ ಮೊದಲು ಕಂಡಿದ್ದು ಜೇಡನ ಬಲೆಯಿಂದ ಮುಚ್ಚಿಹೋಗಿದ್ದ  ನಾಲ್ಕು ಕೈ ಮತ್ತು ಒಂದೂವರೆ ಕಾಲಿದ್ದ ಪುಟ್ಟ ಕಲ್ಲಿನ ವಿಗ್ರಹ ಮಾತ್ರ . ಗುಡಿಯನ್ನೆಲ್ಲಾ ಸ್ವಚ್ಚಗೊಳಿಸಿದ ನಂತರವೂ ಪೂಜಾರಿಗೆ ಅದು ಯಾವ ದೇವರ ವಿಗ್ರಹವೆಂದು ನಿರ್ಧರಿಸಲಾಗಲಿಲ್ಲ.  ಹಾಗೆ ನಿರ್ಧರಿಸಲಾಗದಿದ್ದುದಕ್ಕೆ ಏನೋ ಆ ವಿಗ್ರಹಕ್ಕೆ ಅತೀಂದ್ರಿಯ ಶಕ್ತಿಯೊಂದಿದೆ ಎಂದು ತನ್ನಷ್ಟಕ್ಕೆ ಅಂದುಕೊಂಡನೆಂದು ತೋರುತ್ತದೆ. ವಿಗ್ರಹದ ನಾಲ್ಕು ಕೈಗಳಲ್ಲಿ ಕ್ರಮವಾಗಿ ಶಂಖ, ಚಕ್ರ, ಗದೆ ಮತ್ತು ಕಮಲದ ಹೂವೊಂದು ಇದ್ದುದನ್ನು ಪೂಜಾರಿ ಗಮನಿಸಿದನು. ಆದರೆ ಪೂಜಾರಿಗೆ ವಿಗ್ರಹದ ಕಾಲಿನದೇ ಸಮಸ್ಯೆಯಾಯಿತು. ಬಲಗಾಲು ಸರಿಯಾಗಿದ್ದರೂ ಎಡಗಾಲು ಮಾತ್ರ ಮಂಡಿಯಿಂದ ಕೆಳಗೆ ಅದೃಷ್ಯವಾಗಿತ್ತು. ಕೈಯಲ್ಲಿ ಕಮಲದ ಹೂವಿದ್ದು ಮೈತುಂಬ ಕಲ್ಲಿನಲ್ಲಿ ರಚಿಸಿದ್ದ ಆಭರಣಗಳಿದ್ದುದರಿಂದ ಪೂಜಾರಿ ’ಆ’ ದೇವರನ್ನು ’ಅಮ್ಮ’ ಎಂದು ಪರಿಗಣಿಸಿದನೆಂದು ತೋರುತ್ತದೆ. ಒಂದೂವರೆ ಕಾಲಿದ್ದುದರಿಂದ ಅಮ್ಮನನ್ನು ’ಕುಂಟಮ್ಮ’ ಎಂದು ಕರೆಯಲು ಪೂಜಾರಿಗೆ ಸುಲಭ ಸಾಧ್ಯವಾಯಿತು. ಹೀಗೆ ಪೂಜಾರಿಯಿಂದ ನಾಮಕರಣಗೊಂಡ ಕುಂಟಮ್ಮದೇವರು ಸೇತುವೆಯ ಕಾರ‍್ಯಾರಂಭಕ್ಕೆ ಅಭಯವನ್ನಿತ್ತಿದ್ದಳು. ಈ ವಿದ್ಯಮಾನಗಳ ನಡುವೆ ಅಲ್ಲಿ ಇನ್ನೊಂದು ಚೋದ್ಯವೂ ನಡೆದಿತ್ತು. ಪೂಜಾರಿ ’ಆ’ ದೇವರನ್ನು ಕುಂಟಮ್ಮ ಎಂದು ಹೆಸರಿಸಿದಾಗ ಅಲ್ಲೇ ನಿಂತಿದ್ದ ಸಂಪತ್ತಯ್ಯಂಗಾರಿ ಮುಸಿ-ಮುಸಿ ನಕ್ಕಿದ್ದ. ಅಯ್ಯಂಗಾರ್ರು ಹಾಗೆ ನಗಲು ಬಲವಾದ ಕಾರಣವೊಂದಿತ್ತು. ಸಂಪತ್ತಯ್ಯಂಗಾರಿಯ ತಾತ ಆಗಾಗ್ಗೆ, ಅವರ ತಾತ ಪೂಜಿಸುತ್ತಿದ್ದ  ’ವಿಷ್ಣು’ ದೇವರ ಕತೆಯೊಂದನ್ನು ಹೇಳುತ್ತಿದ್ದರು. ಆ ಅಂತೆ-ಕಂತೆಗಳ ಕತೆ ಹೀಗಿದೆ...,  ಮಲ್ಲರಳ್ಳಿಯ ಬ್ರಾಹ್ಮಣರ ಕೇರಿಯಲ್ಲಿ ಪುಟ್ಟದಾದ ’ವಿಜಯ ನಾರಾಯಣ’ನ ಗುಡಿಯೊಂದಿತ್ತಂತೆ. ಆ ದೇವರಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದುದು ಸಂಪತ್ತಯ್ಯಂಗಾರಿಯ ತಾತನ ತಾತನಂತೆ. ಹಾಗೊಂದು ದಿವಸ ನಿತ್ಯಪೂಜಾದಿಗಳೆಲ್ಲಾ ಸಾಂಗವಾದ ನಂತರ ಇದ್ದಕ್ಕಿದ್ದಂತೆ ಬ್ರಾಹ್ಮಣರಲ್ಲಿ ಜಗಳವೊಂದು ಹುಟ್ಟಿತಂತೆ. ಅಯ್ಯಂಗಾರ್ರು ಸೇರಿದಂತೆ ವೈಷ್ಣವರೆಲ್ಲಾ ಶೈವ ಬ್ರಾಹ್ಮಣರನ್ನು "ಸ್ಮಾರ್ತ ಮುಂಡೆವಾ " ಎಂದು ಜರಿದರಂತೆ. ಸ್ಮಾರ್ತರೇನು ಕಡಿಮೆಯೆ ? "ರೆಕ್ಕಿಲ್ಲ ಪುಕ್ಕಿಲ್ಲ ಗರುಡಯ್ಯಂಗಾರಿ" ಎಂದು ಸಂಪತ್ತುವಿನ ತಾತನ ತಾತನವರನ್ನು ಹೀಯಾಳಿಸಿದರಂತೆ. ಇದೇ ಗಲಾಟೆ ದೊಂಬಿಗೆ ತಿರುಗಿ ಹೊಡೆದಾಟಗಳಾಗಿ ಅದ್ಯಾರೋ ಒಬ್ಬರು ನಾರಾಯಣ ದೇವರ ವಿಗ್ರಹವನ್ನು ಕಿತ್ತೆಸದರಂತೆ. ಆಗ ವಿಗ್ರಹದ ಎಡಗಾಲು ಮುರಿದುಹೋಯಿತಂತೆ. ಇಷ್ಟೆಲ್ಲಾ ರಂಪಾಟಗಳು ಮುಗಿದ ನಂತರ ಎಲ್ಲರಿಗೂ ಜ್ಞಾನೋದಯವಾಗಿ ಭಗ್ನಗೊಂಡ ವಿಗ್ರಹವನ್ನು ಹಾಗೆ ಹಾಳು ಬಿಟ್ಟರೆ ಕೇರಿಗೆ ಒಳ್ಳೆಯದಲ್ಲವೆಂದು ತೀರ್ಮಾನಿಸಿ ಊರ ಹೊರವಲಯದಲ್ಲಿಟ್ಟು ನಾಮ್ಕೆವಾಸ್ತೆ ಪುಟ್ಟ ಗುಡಿಯೊಂದನ್ನು ನಿರ್ಮಿಸಿದರಂತೆ. ಈಗ ಕುಂಟಮ್ಮನಾಗಿ ಪರಿವರ್ತನೆ ಹೊಂದಿದ್ದು ಗತಕಾಲದ ನಾರಾಯಣನ ವಿಗ್ರಹವೆ ಎಂದು ತಿಳಿ ಹೇಳಲು ಸಂಪತ್ತಯ್ಯಂಗಾರಿಯೊಬ್ಬನನ್ನು ಬಿಟ್ಟರೆ ಆ ವಿಚಾರವಾಗಿ ತಿಳಿದವರು ಅಲ್ಲ್ಯಾರೂ ಇರಲಿಲ್ಲ. ನಾರಾಯಣನನ್ನು ಕುಂಟಮ್ಮನೆಂದು ಕರೆದಿದ್ದುದಕ್ಕೇ ಸಂಪತ್ತು ಹಾಗೆ ಮುಸಿ-ಮುಸಿ ನಕ್ಕಿದ್ದು. ಇಷ್ಟಾದರೂ "ನಮ್ಮ" ದೇವರಿಗೆ ಈಗಲಾದರೂ ಪೂಜೆಯಾಗುತ್ತಿದೆಯಲ್ಲಾ ಎಂಬ ಕಾರಣಕ್ಕೆ ಸಂಪತ್ತಯ್ಯಂಗಾರಿಯು ನಾರಾಯಣನ ಇತಿಹಾಸವನ್ನು ಮುಚ್ಚಿಟ್ಟುಬಿಟ್ಟನು.

 ........................................*...................................

ಹಾರೆ, ಗುದ್ದಲಿ, ಪಿಕಾಸಿಯೊಡನೆ ಸನ್ನದ್ದರಾಗಿದ್ದ ಮಲ್ಲರಳ್ಳಿಯ ಜಗಜಟ್ಟಿಗಳಿಗೆ ಮೊದಲು ತಲೆಬಿಸಿಯಾದದ್ದು ಕೆರೆಯಿಂದ ಹರಿದುಬರುತ್ತಿದ್ದ ನೀರನ್ನು ಹಳೆಯ ಸೇತುವೆಯ ಹಿಂದೆಯೇ ಅಡ್ಡಗಟ್ಟಿ ನಿಲ್ಲಿಸಬೇಕೆಂದಾಗ !. ( ಹಳೆಯ ಸೇತುವೆಯು ಮಣ್ಣಿನಲ್ಲಿ ಮುಚ್ಚಿಹೋಗಿದ್ದರೆ ಕೆರೆಯಿಂದ ಹರಿದುಬರುತ್ತಿದ್ದ ಹಳ್ಳದ ನೀರು ಎಲ್ಲಿ ಸಾಗುತ್ತಿತ್ತು ಎಂಬ ಬುದ್ದಿವಂತಿಕೆಯ ಪ್ರಶ್ನೆಯನ್ನು ನೀವು ಕೇಳುವಂತಿಲ್ಲ ! , ಏಕೆಂದರೆ ನೀರಿನ ರಭಸಕ್ಕೆ ಹಳೆಯ ಸೇತುವೆಯ ಕೆಳಭಾಗದಲ್ಲಿ ಕೊರಕಲುಗಳು ಉಂಟಾಗಿ ಹಳ್ಳದ ನೀರು ಬಸಿದು ಹೋಗುತ್ತಿತ್ತು , ಮತ್ತು ಹಿಮ್ಮುಖವಾಗಿಯೂ ಒತ್ತುತ್ತಿತ್ತು ಎಂಬುದನ್ನು ನೀವೆ ಕಲ್ಪಿಸಿಕೊಳ್ಳಬೇಕಾಗುತ್ತದೆ !.)  ಹಾಗೆ ಅಡ್ಡಗಟ್ಟಿದರೆ ಹಳ್ಳದ ಹಿನ್ನೀರು ಅಕ್ಕ-ಪಕ್ಕದ ಹೊಲ-ಗದ್ದೆಗಳಿಗೆಲ್ಲಾ ನುಗ್ಗಿ ಬೆಳೆಹಾನಿಯಾಗುವ ಅಪಾಯವು ತಲೆದೋರುತ್ತಿತ್ತು. ಆದರೆ, ಮರಿಯಪ್ಪನ ಚಾಣಾಕ್ಷ ಬುದ್ದಿ ಮತ್ತೆ ಕೆಲಸ ಮಾಡಿತು. ಹಳೆಯ ಸೇತುವೆಯ ಎರಡೂ ಬದಿಯಲ್ಲಿ ಸಣ್ಣ ಕಾಲುವೆಗಳನ್ನು ತೋಡಿ ಅದರ ಮೂಲಕ ಹಳ್ಳದ ನೀರು ಸೇತುವೆ ದಾಟಿ ಮುಂದಿನ ಹಳ್ಳಕ್ಕೆ ಸೇರುವಂತೆ ಮಾಡುವುದೆಂದು ಉಪಾಯವನ್ನು ಸೂಚಿಸಿದನು. ಹಳ್ಳಿಗರೆಲ್ಲಾ ಮರಿಯಪ್ಪನ ಉಪಾಯಕ್ಕೆ ಸರ್ವಸಮ್ಮತವಾಗಿ ಒಪ್ಪಿದರು ಮತ್ತು ಅವನ ಜಾಣ್ಮೆಗೆ ತಲೆದೂಗಿದರು. ಸಾಬರ ವಸೀಮ್ ಖಾನನಂತೂ "ನಿಮ್ದೂಗೆ ಇಂಜಿನಿಯರ್ ಆಗ್ಬೇಕಿತ್ತು" ಎಂಬ ಬಿರುದನ್ನೂ ಮರಿಯಪ್ಪನಿಗೆ ದಯಪಾಲಿಸಿದನು. ಕೆಲಸ ಸುಗಮವಾಗಿ ಮುಂದುವರಿಯಿತು. ಹದಿನೆಂಟು ವರ್ಷಗಳ ಹಿಂದಿನ ಹಳ್ಳಿಗರ ಕಾರ್ಯಸಾಮರ್ಥ್ಯದ ಬಗೆಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲವೆನಿಸುತ್ತದೆ.  ಒಂದು ನಯಾಪೈಸೆಯ ಖರ್ಚಿಲ್ಲದೆ ಸೇತುವೆಯ ನಿರ್ಮಾಣ ಕಾರ್ಯ ಸಾಗಿತ್ತು. ಹಾಳು ಬಿದ್ದಿದ್ದ ಜಮೀನಿಗಳಲ್ಲಿದ್ದ ಫಲವತ್ತಾದ ಮಣ್ಣು ಎತ್ತಿನಗಾಡಿಗಳಲ್ಲಿ ಬಂದು ಬೀಳುತ್ತಿತ್ತು. ದೊಡ್ಡ ದೊಡ್ಡ ಕಲ್ಲುಗಳನ್ನು ಊರ ಹೊರವಲಯದ ಗುಡ್ಡವೊಂದರಿಂದ ಬಂಡಿಗಳಲ್ಲಿ ತರಲಾಗುತ್ತಿತ್ತು. ಇಡೀ ಊರೇ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿತ್ತು. ಹೆಂಗಸರೆಲ್ಲಾ ಕಲೆತು ಸಾಮೂಹಿಕವಾಗಿ ರಾಗಿ ಮತ್ತು ಜೋಳದ ರೊಟ್ಟಿಗಳನ್ನು ತಯಾರಿಸಿ ತರುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆಯ ಜೊತೆಗೆ ಮಜ್ಜಿಗೆ ಅಂಬಲಿಯೂ ಸಿದ್ದವಾಗಿರುತ್ತಿತ್ತು.  ನಾಗಯ್ಯ, ವಸೀಮ್ ಖಾನ್ , ಪುಟ್ಸಾಮಿ, ಸಂಪತ್ತಯ್ಯಂಗಾರಿ ಇತ್ಯಾದಿಗಳೆಲ್ಲಾ  ಒಟ್ಟಾಗಿ ಕೂಡಿದ್ದು ಸೇತುವೆಯ ಕಾರ್ಯದಲ್ಲೇ ಎನ್ನಬಹುದು.   ಕೆಲಸದ ನಡುವೆ ವಸೀಮ್ ಖಾನನದು ಏನಾದರೊಂದು ರೇಜಿಗೆ ಇದ್ದೇ ಇರುತ್ತಿತ್ತು. ಮಣ್ಣೊಳಗೆ ಯಾವುದೋ ಒಂದು ಹುಳುವನ್ನು ಕಂಡ ವಸೀಮ್ ಖಾನ್ ಎಲ್ಲರನ್ನೂ ಕರೆದು ಅದನ್ನು ತೋರಿಸಿದ್ದ. ಪುಟ್ಸಾಮಿ ರೇಗಿದ ದ್ವನಿಯಿಂದಲೇ ಕೇಳಿದ್ದ " ಏನ್ಲಾ ಸಾಬಿ ಅದು ನಿಂದು, ಎಂತಾ ಹುಳಲ್ನಾ ಅದು ? " ಎಂದು. ಖಾನ್ ಸಾಹೇಬರು " ಕಂಬಳ್ ಕಾ ವುಳ್ " ಎಂದು ಹೇಳಿದ್ದರು. " ಅಂಗಂದ್ರೆನ್ಲಾ ? " ಎಂದು ನಾಗಯ್ಯ ಕೇಳಿದ್ದಕ್ಕೆ ಪುಟ್ಸಾಮಿ ಮತ್ತೊಮ್ಮೆ ಅವನ ತಲೆಯ ಮೇಲೆ ಕುಟ್ಟಿದ್ದ " ಕಂಬ್ಳೀವುಳಾ ಅಂತ ಕಣಲೇ ಅದು ....ಅವನು ಮಾತಾಡದು ಅಂಗೆಯ..ನೀನು ಸುಮ್ಕೆ ಕೆಲ್ಸ ನೋಡು" ಎಂದು ನಾಗಯ್ಯನನ್ನು ಕೆಲಸಕ್ಕೆ ದಬ್ಬಿದ್ದ. ಹೀಗೆ ಹತ್ತು ಹಲವು ಘಟನೆಗಳು ನಡೆದು ಸತತ ಪರಿಶ್ರಮದಿಂದ ತಿಂಗಳಾಗುವುದರೊಳಗಾಗಿ ಕುಂಟಮ್ಮನ ಸೇತುವೆ ನಿರ್ಮಾಣವಾಗಿ ಸೇತುವೆಯ ಕೆಳಗೆ ಹಳ್ಳದ ನೀರು ಸರಾಗವಾಗಿ ಹರಿಯಲು ಪ್ರಾರಂಭವಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮಲ್ಲರಳ್ಳಿಯ ಜನತೆ ನಿಜವಾಗಿಸಿದ್ದರು.

..................*...........................

ಈ ಹದಿನೆಂಟು ವರ್ಷಗಳಲ್ಲಿ ಕುಂಟಮ್ಮನ ಸೇತುವೆಯ ಕೆಳಗೆ ಸಾಕಷ್ಟು ನೀರು ಹರಿದುಹೋಗಿದೆ. ಸೇತುವೆಯ ಮೇಲ್ಗಡೆಯೂ ಸಹ ಹತ್ತು ಹಲವು ತೆರನಾದ ವಾಹನಗಳು ಸಂಚರಿಸಿವೆ ಮತ್ತು ಸಂಚರಿಸುತ್ತಿವೆ. ಮರಿಯಪ್ಪನಿಗೂ ಈಗ ಎಂಬತ್ತು ವರ್ಷಗಳಾಗಿದೆ. ೬೦ ವರ್ಷದವನಾಗಿದ್ದಾಗ ಇದ್ದ ಚೈತನ್ಯ-ಶಕ್ತಿ ಈಗ ಇಲ್ಲವಾಗಿದೆ. ಕೆಲವು ಆಧುನಿಕ ರೋಗಗಳೂ ಮರಿಯಪ್ಪನನ್ನು ಕಾಡುತ್ತಿವೆ. ಅಂದು ಸೇತುವೆಯ ಕಾರ್ಯದಲ್ಲಿ ತೊಡಗಿದ್ದವರೆಲ್ಲಾ ಇಂದು ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ತಿಂದುಂಡು ನೆಮ್ಮದಿಯಾಗಿದ್ದಾರೆ. ಕುಂಟಮ್ಮನ ಸೇತುವೆ ಮಾತ್ರ ಅಚಲವಾಗಿ ಸ್ವಲ್ಪವೂ ಹಾಳಾಗದಂತೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಾಲಕರು ಮತ್ತು ಇತರರಿಗೆಲ್ಲಾ ಕುಂಟಮ್ಮನೇ ಈಗ ಆರಾಧ್ಯದೇವತೆ. ಆಕೆಯ ಮಹಿಮೆ ಎಲ್ಲೆಲ್ಲೂ ಪಸರಿಸಿರುವುದರಿಂದ ಈಗೀಗ ಕುಂಟಮ್ಮನಿಗೆ ಕುರಿ-ಕೋಳಿಗಳ ಎಡೆಯೂ ನಡೆಯುತ್ತಿದೆ.  ( ಮಂಗಳವಾರ , ಶುಕ್ರವಾರಗಳಂದು ಅಲ್ಲಿ ರಕ್ತದ ಕೋಡಿಯೆ ಹರಿಯುತ್ತದೆಂದು ಯಾರೋ ಮರಿಯಪ್ಪನಿಗೆ ಹೇಳಿದಾಗ , ಆತ ಮುಖ ಕಿವುಚಿಕೊಂಡು ಸುಮ್ಮನಾಗಿದ್ದ !) 

ಅಂದು ಮಲ್ಲರಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ವಿದ್ಯುತ್ ಪ್ರಸರಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವಿತ್ತು. ಟೇಪು ಕತ್ತರಿಸಲು ಮಾನ್ಯ ಶಾಸಕರು ಬರುವವರಿದ್ದರು. ಅನ್ಯಕಾರ್ಯ ನಿಮಿತ್ತ ತುಸು ತಡವಾಗಿ ಆಗಮಿಸಿದ ಶಾಸಕರು ಅವಸರದಲ್ಲಿ ಟೇಪು ಕತ್ತರಿಸಿ ಒಂದರ್ಧಗಂಟೆ ಭಾಷಣ ಬಿಗಿದು ಕಟ್ಟೇಪುರಕ್ಕೆ ಹೋಗಲು ಕಾರು ಹತ್ತಿದರು. ಕುಂಟಮ್ಮನ ದುರಾದೃಷ್ಟವೋ ಏನೋ ಮಾನ್ಯರ ಕಾರು ಕುಂಟಮ್ಮನ ಸೇತುವೆಯ ಸನಿಹದಲ್ಲೇ ಅಪಘಾತಕ್ಕೀಡಾಯಿತು. ಮಾನ್ಯರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಯಿತು. ಮಾನ್ಯರ ಮುದ್ದಿನ ನಾಯಿಯೊಂದು ಸ್ಥಳದಲ್ಲೇ ಅಸುನೀಗಿತು. ಕಾರಿನ ಮುಂಭಾಗ ನುಜ್ಜು-ಗುಜ್ಜಾಯಿತು. ಕುಂಟಮ್ಮನ ಗುಡಿಗೂ ತುಸು ಹಾನಿಯಾಯಿತು. ಶಾಸಕರ ಕೋಪ ನೆತ್ತಿಗೇರಿತೆಂದೇ ಅನಿಸುತ್ತದೆ, ಮಾರನೆಯ ದಿವಸವೆ ಕುಂಟಮ್ಮನ ಸೇತುವೆಯನ್ನು ಕೆಡವಿ ಮರು ನಿರ್ಮಿಸಬೇಕೆಂಬ ಆದೇಶವೊಂದು ಮಲ್ಲರಳ್ಳಿಯ ಪಂಚಾಯಿತಿ ಕಚೇರಿಗೆ ಬಂದು ತಲುಪಿತು. ಸೇತುವೆಯ ಜೊತೆಗೆ ಕುಂಟಮ್ಮನ ಗುಡಿಯನ್ನೂ ಕೆಡವಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ( ಕುಂಟಮ್ಮನ ದೆಸೆಯಿಂದಲೇ ಶಾಸಕರಿಗೆ ಅಪಘಾತವಾಗಿದ್ದೆಂದೂ ಆದ ಕಾರಣ ಆ ಗುಡಿಯನ್ನೇ ಅಲ್ಲಿಂದ ತೆಗೆಸಬೇಕೆಂದು ಶಾಸಕರಿಗೆ ದೊಡ್ಡ ಪಟ್ಟಣದ ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದರೆಂದು ಗುಸು-ಗುಸು ಸುದ್ದಿಯೂ ಹಬ್ಬಿತ್ತು !.)  ಈ ಮರು ನಿರ್ಮಾಣಕಾರ್ಯಕ್ಕೆ ಅದೆಷ್ಟೋ ಕೋಟಿ ರೂಗಳ ಅನುದಾನವು ಮಾನ್ಯ ಶಾಸಕರ ಮೂಲಕ ಬರುತ್ತದೆಯೆಂದು ಆದೇಶದಲ್ಲಿ ಹೇಳಲಾಗಿತ್ತು.  ತ್ವರಿತವಾಗಿ ಕೋಟಿ-ಕೋಟಿ ರೂಗಳ ಯೋಜನೆ ಜಾರಿಯಾಯಿತು. ಯಂತ್ರಗಳು ಬಂದು ಕೆಲವೆ ಗಂಟೆಗಳಲ್ಲಿ ಸೇತುವೆಯನ್ನೂ, ಗುಡಿಯನ್ನೂ ನೆಲಸಮ ಮಾಡಿದವು. ಕುಂಟಮ್ಮನ ವಿಗ್ರಹವನ್ನು ಅಲ್ಲಿಂದಲೂ ಆಚೆಗೆ ಎಸೆಯಲಾಯಿತು.  ಅದೇಕೊ..., ಕೆಡವಿದಷ್ಟು ತ್ವರಿತವಾಗಿ ಸೇತುವೆಯ ನಿರ್ಮಾಣಕಾರ್ಯ ಆಗಲೇ ಇಲ್ಲ.
ಸೇತುವೆಯನ್ನು ಕೆಡವಿದ ನಂತರ ಜನ ಮತ್ತು ವಾಹನಗಳು ಸಂಚರಿಸಲೆಂದು ಸಣ್ಣ ದಾರಿಯೊಂದನ್ನು ನಿರ್ಮಿಸಲಾಯಿತು. ದಿನ ಕಳೆದಂತೆ ಹಳ್ಳ-ದಿಣ್ಣೆಗಳಿಂದ ಕೂಡಿದ್ದ ಆ ದಾರಿಯಲ್ಲಿ ದನ-ಕರುಗಳು ಸಂಚರಿಸುವುದೂ ದುಸ್ತರವಾಯಿತು. ಮಳೆಗಾಲದ ಪಾಡನ್ನಂತೂ ಹೇಳಲು ಸಾಧ್ಯವೆ ಇಲ್ಲ..ನರಕ ಸದೃಶವಾಯಿತು. ಕೋಟಿಗಳು ಖರ್ಚಾದವು, ಹಲವು ಅಧಿಕಾರಿಗಳು ಇಂಜಿನಿಯರುಗಳು ಬಂದು ಹೋದರು...ವರ್ಷಗಳು ಕಳೆದರೂ ಸೇತುವೆ ನಿರ್ಮಾಣವಾಗಲೆ ಇಲ್ಲ. ಕೋಟಿಗಳಲ್ಲಿ ಬಿಡುಗಡೆಯಾದ ಹಣ ನಿರ್ಮಾಣಕಾರ್ಯಕ್ಕೆ ಸಾಲದಾಯಿತಂತೆ ಎಂದು ಊರಿನವರು ಮಾತನಾಡಿಕೊಂಡರು.
ಯಾವುದೂ ಯೋಚನೆಯಲ್ಲಿ ಮುಳುಗಿದ್ದ ಮರಿಯಪ್ಪನಿಗೆ ಸೇತುವೆಯ ಸಮಾಚಾರವನ್ನೆಲ್ಲಾ ಯಾರೋ ಒಬ್ಬರು ಹೇಳಿದರು. ಮರಿಯಪ್ಪನಿಗೆ ಸೇತುವೆಯವರೆವಿಗೂ ನಡೆದು ಹೋಗಿ ಬರುವಷ್ಟು ತ್ರಾಣವಿರಲಿಲ್ಲ. ಬದಲಾಗಿದ್ದ ಮಲ್ಲರಳ್ಳಿಯ ಆಧುನಿಕ ಜನತೆಗೆ ಗತಕಾಲದ ನೆನಪೂ ಇರಲಿಲ್ಲ. ಮರಿಯಪ್ಪ ತನ್ನಷ್ಟಕ್ಕೆ ತಾನೆ ನಕ್ಕಿದ್ದ...ಅವನ ನಗುವಿನ ಅರ್ಥವೇನೆಂದು ಅವನು ಯಾರಿಗೂ ಬಿಡಿಸಿ ಹೇಳಲಿಲ್ಲ ಮತ್ತು ಆಗಾಗ್ಗೆ ಸಣ್ಣಗೆ ನಗುತ್ತಲೇ ಇರುತ್ತಿದ್ದ. ಬಿಡುಗಡೆಯಾಗಿದ್ದ ಕೋಟಿಗಟ್ಟಲೆ ಹಣ ಸಾಲದಾಯಿತೆಂದು ಯಾರೋ ಹೇಳಿದಾಗ ಮರಿಯಪ್ಪ ಮತ್ತೊಮ್ಮೆ ಸಣ್ಣಗೆ ನಕ್ಕಿದ್ದ.
----------*---------

ಮರಿಯಪ್ಪನಿಗೆ ನೆಡೆಯುವ ಶಕ್ತಿಯಿಲ್ಲದಿದ್ದರೂ ಅಂದು ಕಷ್ಟದಿಂದಲೇ ಊರಿನ ಹೊರವಲಯಕ್ಕೆ ನೆಡೆದು ಬಂದಿದ್ದ. ನಿರ್ಮಾಣವಾಗದೆ ಹಾಳು ಬಿದ್ದಿದ್ದ ಸೇತುವೆಯನ್ನೂ ನೋಡಿ ಕಾಲುದಾರಿಯಲ್ಲಿ ಇನ್ನೂ ಮುಂದೆ ನೆಡೆದುಹೋಗಿದ್ದ. ಆ ಸೇತುವೆಯಿಂದ ಮೈಲು ದೂರವೇ ನೆಡೆದುಬಂದಿದ್ದನೆಂದು ಹೇಳಬಹುದು. ಮರಿಯಪ್ಪನ ಕಣ್ಣುಗಳು ರಸ್ತೆಯ ಪಕ್ಕದ ಜಮೀನೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಕುಂಟಮ್ಮ ದೇವರನ್ನು ಕಂಡವು. ಕುಂಟಮ್ಮನ ಮುಖದಲ್ಲಿ ಅದೇ ಮಂದಹಾಸ ಮಿನುಗುತ್ತಿತ್ತು ಮತ್ತು ಆ ಮಂದಹಾಸ ಮರಿಯಪ್ಪನನ್ನೂ , ಮಲ್ಲರಳ್ಳಿಯ ಇತಿಹಾಸವನ್ನೂ ಅಣಕಿಸುತ್ತಿರುವಂತೆ ಮರಿಯಪ್ಪನಿಗೆ ತೋರಿತು. ಇದಾದ ಎರಡು ದಿನಗಳಲ್ಲಿ ಮರಿಯಪ್ಪ ಸತ್ತನು , ಅವನೊಂದಿಗೆ ಮಲ್ಲರಳ್ಳಿಯ ಜಗಜಟ್ಟಿಗಳ ಇತಿಹಾಸವೂ ಸತ್ತಿತು.
------------*---------------
(ಮುಗಿಯಿತು)