ಕುಮಾರವ್ಯಾಸ ಕವಿಯ ಗದುಗಿನ ಭಾರತವನ್ನು ವರುಷಗಳಷ್ಟು ಹಿಂದೆಯೇ ಓದಿದ್ದರೂ, ಕೇವಲ ಅದರ ಭಾವಾರ್ಥವನ್ನು ಮಾತ್ರ ತಿಳಿಯಲು ಸಾಧ್ಯವಾಗಿತ್ತು. ಗದುಗಿನ ಭಾರತದ ನೇರ ಭಾವಾರ್ಥದ ತಿಳಿವಿಗಿಂತಲೂ ಮೀರಿದ ವಿಚಾರಗಳು ಭಾರತದಲ್ಲಿಡಗಿದ್ದರೂ, ಅರಿಯುವ-ಚರ್ಚಿಸುವ ವ್ಯವಧಾನವಿಲ್ಲದೆ ಅಲ್ಲಿಗೇ ಕೈಚೆಲ್ಲಿದ್ದೆ. ಇದೀಗ ಅಂತರಜಾಲದಲ್ಲಿ ಕರ್ಣಾಟ ಭಾರತ ಕಥಾಮಂಜರಿ ಯನ್ನು ಇ-ಪುಸ್ತಕದ ರೂಪದಲ್ಲಿ ಹಲವು ಮಜಲುಗಳೊಂದಿಗೆ ಹೊರತರಬೇಕೆನ್ನುವ ಆಸಕ್ತಿಯನ್ನು ಶ್ರೀ ಮಂಜುನಾಥರು ತಮ್ಮ ಬ್ಲಾಗಿನಲ್ಲಿ ವ್ಯಕ್ತಪಡಿಸಿದ್ದನ್ನು ಕಂಡು ಅವರ ತಂಡದೊಂದಿಗೆ ನಾನೂ ಒಬ್ಬನಾಗುವ ಆಸಕ್ತಿಯಿಂದ ಗದುಗಿನ ಭಾರತದ ಇ-ಅವತರಣಿಕೆಗೆ ಕಾಲಾಳಾಗಿ ಸೇರಿಕೊಂಡು ಕರ್ಣಪರ್ವದ ಹೊಣೆಯನ್ನು ಇಟ್ಟುಕೊಂಡೆ. ಈ ರೂಪದೊಂದಿಗೆ ಮುಂದುವರಿದಾಗ ಗದುಗಿನ ಭಾರತವನ್ನು ಒಳಹೊಕ್ಕಿ ನೋಡುವ ಆಸಕ್ತಿಯೂ ಕುದುರಿತು. ಆ ನಿಟ್ಟಿನಲ್ಲಿ ಹಲವು ಹೊತ್ತಗೆಗಳನ್ನು ಓದುವ ಅವಕಾಶವೂ ಸಿಕ್ಕಿತು. ಅದರಲ್ಲೊಂದು ಪುಸ್ತಕ ಪ್ರೋ. ಜಿ. ವೆಂಕಟಸುಬ್ಬಯ್ಯನವರು ಬರೆದಿರುವ "ಕುಮಾರವ್ಯಾಸನ ಅಂತರಂಗ- ಯುದ್ಧಪಂಚಕದಲ್ಲಿ’ ಎಂಬ ಹೊತ್ತಗೆ. ನನ್ನ ತಿಳಿವಿನ ಮಟ್ಟಿಗೆ ಇದು ಒಪ್ಪವಾದ ಹೊತ್ತಗೆಯೆನಿಸಿತು. ಜಿ.ವೆಂ. ಅವರು ಕುಮಾರವ್ಯಾಸ ಭಾರತದ ಕೊನೆಯ ಐದು ಪರ್ವಗಳನ್ನು ಮೇಲಾಗಿ ತೆಗೆದುಕೊಂಡು ಅವುಗಳನ್ನು ಯುದ್ಧಪಂಚಕವೆಂದು ಹೆಸರಿಸಿ ಸರಳಾರ್ಥಗಳ ಮೂಲಕ ವಿವರಿಸಿರುತ್ತಾರೆ. (ಸಾಮಾನ್ಯವಾಗಿ ಭಾರತವನ್ನು ವಿವರವಾಗಿ ತಿಳಿಯಲು ಬಯಸುವವರು ಅದನ್ನು ಆದಿಪಂಚಕ ಮತ್ತು ಯುದ್ಧಪಂಚಕವೆಂದು ದ್ವಿಭಾಗಿಸಿ ಓದುತ್ತಾರೆಂದು ಕೇಳಿದ್ದೇನೆ).
ಭೀಷ್ಮಪರ್ವವೇ ಮೊದಲಾಗಿ ಗದಾಪರ್ವದ ತನಕ ಒಟ್ಟು ೨೧೨ ಪುಟಗಳಲ್ಲಿ ಅನೇಕ ವಿಚಾರಗಳನ್ನು ಓದುಗರ ಮುಂದಿಟ್ಟು ಯುದ್ಧಪಂಚಕದ ಸಮಗ್ರತೆಯನ್ನು ಲೇಖಕರು ಕಟ್ಟಿಕೊಡುತ್ತಾರೆ. ಪುಸ್ತಕದಲ್ಲಿರುವ ವಿಚಾರಗಳನ್ನು ಮುಖ್ಯವಾಗಿ ಏಳು ಸ್ತರಗಳಲ್ಲಿ ವಿಂಗಡಿಸಿದ್ದಾರೆ. ಅವುಗಳೆಂದರೆ,’
೧) ಕನ್ನಡದಲ್ಲಿ ಮಹಾಭಾರತಗಳು
೨) ಕುಮಾರವ್ಯಾಸ ಭಾರತ - ಹೊಸ ವಿಮರ್ಷೆ ಮತ್ತು ಪರಿಷ್ಕರಣದ ಆವಶ್ಯಕತೆ
೩) ಯುದ್ಧಪಂಚಕದ ಪೂರ್ವರಂಗ
೪) ಯುದ್ಧ ಪ್ರಾರಂಭ - ಭೀಷ್ಮ ಸೇನಾಪತ್ಯ
೫) ಕುಮಾರವ್ಯಾಸನ ಸ್ವೋಪಜ್ಞತೆ
೬) ಕರುಣಾರ್ದ್ರಪರ್ವ ಕರ್ಣಪರ್ವ
೭) ಯುದ್ಧಪಂಚಕದ ಉಪಸಂಹಾರ
* ಕನ್ನಡದಲ್ಲಿ ಮಹಾಭಾರತ ಎಂಬುದರ ಬಗೆಗೆ ಹೇಳುವಾಗ , ಕನ್ನಡದ ಆದಿಕವಿಯಂದೇ ಪರಿಗಣಿಸಲ್ಪಟ್ಟಿರುವ ಪಂಪನಿಂದ ಮತ್ತು ಪಂಪಭಾರತದ ವಿವರಣೆಯೊಂದಿಗೆ ಆರಂಭಿಸುತ್ತಾರೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಬರೆದುದರ ಹಿನ್ನಲೆ ಮತ್ತು ಆ ಕಾಲಘಟ್ಟದಲ್ಲಿ ಕಾವ್ಯರಚನೆಯಲ್ಲಿನ ವಾಸ್ತವತೆಯನ್ನು ಹೆಕ್ಕಿಕೊಡುವುದರ ಜೊತೆಗೆ ಪಂಪನು ಅರಿಕೇಸರಿಯ ಆಸ್ಥಾನದಲ್ಲಿದ್ದು ಯೋಧನೂ ಆಗಿದ್ದುದರ ಸಾಮಾಜಿಕ ಜೀವನವನ್ನೂ ತೆರೆದಿಡುತ್ತಾರೆ. ಕಿರಿದರಲ್ಲಿ ಪಿರಿದನ್ನು ಹೇಳುವ ಪಂಪಕವಿಯ ಕಾವ್ಯ ರಚನೆಯಲ್ಲಿನ ಚತುರತೆಯನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತಾರೆ. ಪಂಪನಿಗೆ ತನ್ನ ಒಡೆಯನನ್ನು ಮೆಚ್ಚಿಸುವ ದಾಕ್ಷಿಣ್ಯವೂ (ಬೇರೆ ಪದ ನನಗೆ ಹೊಳೆಯುತ್ತಿಲ್ಲ) ಇದ್ದುದರಿಂದ ತನ್ನ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯವೆಂದು ಹೆಸರಿಸಿದ್ದೂ ಅಲ್ಲದೆ ಅರಿಕೇಸರಿಯನ್ನು ಅರ್ಜುನನೊಡನೆ ಹೋಲಿಸಿ ಭಾರತವನ್ನು ಕಟ್ಟುತ್ತಾನೆ. (ದ್ರೌಪದಿಯನ್ನು ಅರ್ಜುನನೊಬ್ಬನಿಗೇ ಕಟ್ಟುವ ಪ್ರಸಂಗವೇ ಸಾಕಲ್ಲವೆ !?) ಇಷ್ಟೆಲ್ಲದರ ನಡುವೆಯೂ ಪಂಪನ ಭಾರತ ಕಾವ್ಯವನ್ನು ಮೆಚ್ಚಲು ಸಾಕಷ್ಟು ಅರಿವುಗಳನ್ನು, ವಿಚಾರಗಳನ್ನು ಮತ್ತು ಧರ್ಮಸೂಕ್ಷ್ಮಗಳನ್ನು ಆತನು ಒಪ್ಪವಾಗಿ ಹೇಳಿರುವ ಅನೇಕ ಪ್ರಸಂಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಕುಮಾರವ್ಯಾಸನಿಗೆ ಪಂಪನಿಗಿದ್ದ ಯಾವ ದಾಕ್ಷಿಣ್ಯಗಳೂ ಇರುವುದಿಲ್ಲ. ಆತನೊಬ್ಬ ಸ್ವತಂತ್ರ ಆಲೋಚನೆಯ ಚತುರಮತಿ ಕವಿಯೆಂಬುದು ಎಲ್ಲಾ ವಿದ್ವಾಂಸರ ಅಭಿಪ್ರಾಯವಾಗಿದೆ. ’ತನ್ನ ಕಾರ್ಯಕ್ಕೆ ಯಾವುದು ಎಷ್ಟು ಮುಖ್ಯ ಎಂಬುದನ್ನು ಕುಮಾರವ್ಯಾಸನಿಗಿಂತಲೂ ಹೆಚ್ಚಾಗಿ ಅರಿತ ಕವಿ ಮತ್ತಾರೂ ಇಲ್ಲ’ ಎಂಬ ಅಭಿಪ್ರಾಯವನ್ನು ಲೇಖಕರೇ ಹೇಳುತ್ತಾರೆ. ಅದಕ್ಕೊಂದು ಉದಾಹರಣೆಯನ್ನು ಗಮನಿಸುವುದಾದರೆ, ಬಲರಾಮನು ತೀರ್ಥಯಾತ್ರೆಯಿಂದ ಹಿಂದಿರುಗಿದ ಸಂದರ್ಭವನ್ನು ಮೂಲಭಾರತದಲ್ಲಿ ಅತ್ಯಂತ ಪ್ರಾಚೀನ ಪ್ರವಾಸ ಸಾಹಿತ್ಯವೆಂದು ಕರೆಯಬಹುದಾದಷ್ಟು (ಸುಮಾರು ಇಪ್ಪತ್ತು ಅಧ್ಯಾಯಗಳು) ರಚನೆಯಿದೆ. ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಆ ಎಲ್ಲಾ ಅಧ್ಯಾಯಗಳನ್ನೂ ಕೈಬಿಟ್ಟಿದ್ದಾನೆ. ತನ್ನ ಕಾವ್ಯಕ್ಕೆ ಆಹಾರವೆಷ್ಟು ಬೇಕು ಎಂಬುದನ್ನು ಕುಮಾರವ್ಯಾಸ ಮಹಾಕವಿಯು ಎಲ್ಲರಿಗಿಂತಲೂ ಹೆಚ್ಚಾಗಿ ಅರಿತಿದ್ದನಂಬುದಕ್ಕೆ ಮೇಲಿನವು ಸಣ್ಣ ಉದಾಹರಣೆಗಳಷ್ಟೆ.
ಮುಂದೆ ಲೇಖಕರು ಜೈಮಿನಿ ಭಾರತದ ಬಗೆಗೆ ಬರೆಯುತ್ತಾರೆ. ಜೈಮಿನಿ ಭಾರತವು "ಗಮಕ ವಾಚನ ಭಾರತ" ವಾಗಿ ಏಕೆ ಹೆಚ್ಚುಗಾರಿಕೆಯನ್ನು ಪಡೆಯಿತು ಎನ್ನುವುದನ್ನು ವಿವರಿಸುತ್ತಾರೆ. ಇತ್ತೀಚೆಗೆ ಜೈಮಿನಿ ಭಾರತಕ್ಕಿಂತಲೂ ಗದುಗಿನ ಭಾರತವೇ ಗಮಕವಾಚನಕಾರರಿಗೆ ಏಕೆ ಇಷ್ಟವಾಯಿತು ಎಂಬದನ್ನು ತರ್ಕಬದ್ದವಾಗಿ ಮಂಡಿಸುತ್ತಾರೆ. ಅದೇ ರೀತಿ , ಕೃಷ್ಣಶಾಸ್ತ್ರಿಗಳ ವಚನಭಾರತ, ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್ ಎಂಬ ನಾಟಕ, ಗೋವಿಂದ ಪೈಗಳ ಹೆಬ್ಬೆರೆಳು, ಕುವೆಂಪುರವರ ಬೆರಳ್ಗೆ ಕೊರಳ್ ಮುಂತಾದ ನವ್ಯ ಮತ್ತು ಸಮಕಾಲೀನ ಕೃತಿಗಳ ಬಗೆಗೆ ಚರ್ಚಿಸುತ್ತಾರೆ.
*ಗದುಗಿನ ಭಾರತಕ್ಕೆ ವಿಮರ್ಷಾಯುಕ್ತವಾದ ಹೊಸ ಪರಿಷ್ಕರಣೆಯ ಅಗತ್ಯವನ್ನು ಲೇಖಕರು ತಮ್ಮ ಹೊತ್ತಗೆಯಲ್ಲಿ ಸವಿವರವಾಗಿ ಅನೇಕ ಉದಾಹರಣೆಗಳ ಮೂಲಕ ಎಂಟು ಪುಟಗಳಲ್ಲಿ ಹೇಳುತ್ತಾರೆ. ಈ ವಿವರಣೆಗಳು ೧೯-೦೪-೧೯೯೩ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಿ.ವಿ. ಅವರು ಕುಮಾರವ್ಯಾಸ ಭಾರತದ ಹೊಸ ಪರಿಷ್ಕರಣದ ವಿಚಾರವಾಗಿ ಮಾಡಿದ ಭಾಷಣದ ಯಥಾರೂಪವೇ ಆಗಿರುತ್ತದೆ. ಇಲ್ಲಿಯವರೆವಿಗೂ ಅಂತಹ ಹೊಸ ಪರಿಷ್ಕೃತ ಸವಿವಾರವಾಗಿ ಚರ್ಚಿತವಾದ ವ್ಯಾಖ್ಯಾನಗಳು ಕುಮಾರವ್ಯಾಸ ಭಾರತಕ್ಕೆ ಬರೆಯಲ್ಪಟ್ಟಿಲ್ಲವೆಂದು ಭಾವಿಸುತ್ತೇನೆ. ನೇರ ಭಾವಾರ್ಥಗಳನ್ನು ಹೊರತುಪಡಿಸಿ ವಿಷಯಾಧಾರಿತ ಚರ್ಚೆಗಳು ನಡೆದು ಗದುಗಿನ ಭಾರತಕ್ಕೆ ಮತ್ತೊಂದು ಭಾಷ್ಯವನ್ನು ಬರೆಯುವಲ್ಲಿ ಕನ್ನಡ ಸಾಹಿತ್ಯಾಸಕ್ತರು ವಿದ್ವಾಂಸರು ಮನಸು ಮಾಡಬೇಕಿದೆಯೆನಿಸುತ್ತದೆ. ಪುಸ್ತಕದಲ್ಲಿ ಲೇಖಕರು ಮಾಡಿರುವ ಚಿಂತನೆಗಳು ಪ್ರಸ್ತುತತೆಯನ್ನು ಕಾಯ್ದುಕೊಂಡಿವೆ.
*ಯುದ್ಧಪಂಚಕದ ಪೂರ್ವರಂಗದಲ್ಲಿ ಮುಂದೆ ಮಹಾಭಾರತದ ಯುದ್ಧಕ್ಕೆ ಕಾರಣವಾಗುವ ಪ್ರಸಂಗಗಳನ್ನು ಪ್ರಮುಖವಾಗಿ ಉದ್ಯೋಗಪರ್ವ ಮತ್ತು ವಿರಾಟಪರ್ವಗಳ ವ್ಯಾಖ್ಯಾನದ ಮೂಲಕ ಲೇಖಕರು ವಿವರಿಸುತ್ತಾರೆ. ಈ ಎರಡು ಪರ್ವಗಳೇ ಜಿ.ವಿ. ಅವರಿಗೂ ಹೆಚ್ಚು ಪ್ರಿಯವಾಗಿರುವಂತೆ ಕಂಡುಬರುತ್ತದೆ. ಕುಮಾರವ್ಯಾಸನು "ನಾನು ಕೃಷ್ಣನ ಕತೆಯನ್ನು ಹೇಳುತ್ತೇನೆ " ಎಂದು ಪ್ರಾರಂಭಿಸಿ ಕೃಷ್ಣನಿಗೆ ಜಗನ್ನಿಯಾಮಕನ ಸ್ಥಾನವನ್ನು ಕಲ್ಪಿಸುತ್ತಾನೆ, ಆದರೆ ಜಿ.ವೆಂ. ಅವರ ವಿಮರ್ಷೆಯಲ್ಲಿ ಕೃಷ್ಣನು ಉದ್ದೇಶಸಾಧನೆಯ ಕರ್ತನಾಗಿ ಕಾಣಿಸಿಕೊಳ್ಳುತ್ತಾನೆ. "ಕೃಷ್ಣನ ಉದ್ದೇಶಸಾಧನೆಯು ನೆರವೇರುವುದು ಭಾರತದ ಕೊನೆಯ ಐದು ಪರ್ವಗಳಲ್ಲಿ " ಎಂದು ಲೇಖನವನ್ನು ಆರಂಭಿಸುವ ಜಿ.ವಿ ಅವರು ದ್ರುಪದ, ಕೃಷ್ಣ, ಬಲರಾಮ, ಧರ್ಮರಾಯ ಮತ್ತು ಸಾತ್ಯಕಿಗಳ ನಡುವೆ ನಡೆಯುವ ಕುತೂಹಲಭರಿತ ವಾದಗಳನ್ನು ಕುಮಾರವ್ಯಾಸನ ಅಂತರಂಗವು ಕಂಡಂತೆ ರೋಚಕವಾಗಿ ಬಣ್ಣಿಸುತ್ತಾರೆ. ಯುದ್ಧಪಂಚಕಕ್ಕೆ ಅದರ ಹಿಂದಿನ ಪರ್ವಗಳು ಹೇಗೆ ಪೂರ್ವರಂಗವಾಗಿ ಮೂಡಿಬಂದಿದೆ ಎಂಬುದನ್ನು ಸುಮಾರು ಮೂವತ್ತೇಳು ಪುಟಗಳ ವಿಮರ್ಷಾಯುಕ್ತವಾದ ವಿವರಣೆಯೊಂದಿಗೆ ತೆರೆದಿಡುತ್ತಾರೆ.
*ಭೀಷ್ಮಪರ್ವವೇ ಯುದ್ದಪಂಚಕದಲ್ಲಿ ಮೊದಲೆನೆಯ ಪರ್ವ. ಇಲ್ಲಿ ಕರ್ಣ-ಭೀಷ್ಮ-ದ್ರೋಣ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಗಳು ಮತ್ತು ಭೀಷ್ಮರಿಗೆ ಸೇನಾಪಟ್ಟವನ್ನು ಕಟ್ಟಬೇಕಾದುದರ ಅನಿವಾರ್ಯತೆ ಮತ್ತು ಅಗತ್ಯಗಳನ್ನು ನಾರಾಣಪ್ಪನು ತನ್ನ ಕಾವ್ಯರಚನೆಯ ಕುಶಲತೆಯ ಮೂಲಕ ಹೇಗೆ ವಿವರಿಸಿದ್ದಾನೆ ಎಂಬುದನ್ನು ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದೊಡನೆ ಹೋಲಿಸಿ ಕುಮಾರವ್ಯಾಸನು ಯಾವ-ಯಾವ ಸಂದರ್ಭಗಳಲ್ಲಿ ಇತರ ಕವಿಗಳಿಗಿಂತಲೂ ಕಾವ್ಯದ ನೆಲೆಯಲ್ಲಿ ಭಿನ್ನವಾಗಿ ಮತ್ತು ಹೆಚ್ಚು ಪಾಂಡಿತ್ಯಪೂರ್ಣತೆಯಿಂದ ಕಂಡುಬರುತ್ತಾನೆಂಬುದನ್ನು ಲೇಖಕರು ವಿವರಿಸುತ್ತಾರೆ. ಪಂಪ ಮತ್ತು ಕುಮಾರವ್ಯಾಸರ ನಡುವಿನ ಹೋಲಿಕೆಯ ವಿಚಾರ ಬಂದಾಗ ಲೇಖಕರು ತಮ್ಮ ಪುಸ್ತಕದಲ್ಲಿ ಹೇಳಿರದ ಪ್ರಸಂಗವೊಂದು ನನ್ನ ಗಮನಕ್ಕೆ ಬಂದಿತು. ಪಂಪಭಾರತದಲ್ಲಿ ಭೀಷ್ಮರಿಗೆ ಸೇನಾಪಟ್ಟವನ್ನು ಕಟ್ಟುವ ಸಂದರ್ಭ ಬಂದಾಗ ಕರ್ಣನು ದುರ್ಯೋಧನಾದಿಗಳ ಮುಂದೆ ಭೀಷ್ಮರನ್ನು ಮುದುಕರೆಂದು ಮೂದಲಿಸುತ್ತಾನೆ. "ಕಣ್ಣು ಕಾಣದ ಮುದುಕನಿಗೆ ಸೇನಾಪಟ್ಟವನ್ನು ಕಟ್ಟುವ ಬದಲು ವೈರಿಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲಂತಹ ನನಗೆ ಪಟ್ಟಕಟ್ಟಯ್ಯಾ ’ ಎಂಬ ವೀರಾವೇಶದ ಮಾತುಗಳನ್ನಾಡುತ್ತಾನೆ.
( ಕಟ್ಟಿದ ಪಟ್ಟಮ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ|
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ | )
ಈ ಮಾತಿಗೆ ಸಿಡಿದು ಬೀಳುವ ದ್ರೋಣರು ಕರ್ಣನಿಗೆ "ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಅಲ್ಲಗೆಳೆಯಬೇಡ " ಎಂಬ ಹಿತವಾಕ್ಯವನ್ನು ನುಡಿಯತ್ತಾರೆ. ಭೀಷ್ಮರೂ ಸಹ "ಅಯ್ಯಾ ಈ ಮಹಾಯುದ್ಧರಂಗದಲ್ಲಿ ನಿನಗೂ ಒಂದು ದಿನ ಬರುತ್ತದೆಯಯ್ಯಾ " ಎಂದು ಮಾರ್ಮಿಕವಾಗಿ ಕರ್ಣನನ್ನು ಲಕ್ಷಿಸಿ ಹೇಳುತ್ತಾರೆ. ಪಂಪನು ಕಾವ್ಯಾಸಕ್ತರಿಗೆ ಪ್ರಿಯನಾಗುವುದು ಇಂತಹ ರಚನೆಗಳಿಂದಲೇ (ಕಿರಿದರೊಳ್ ಪಿರಿದರ್ಥವಂ !) ಎನ್ನುವುದು ವಿದ್ವಾಂಸರ ಅಭಿಮತ. ಇದೇ ಸಂದರ್ಭವನ್ನು ಕುಮಾರವ್ಯಾಸನು ಕಟ್ಟಿಕೊಡುವ ರೀತಿ ಬೆರಗು ಹುಟ್ಟಿಸುತ್ತದೆ. ತನ್ನ ರೂಪಕಗಳಿಂದಲೇ ಕಾವ್ಯಪ್ರೌಡಿಮೆಯನ್ನು ಮೆರೆದಿರುವ ನಾರಾಣಪ್ಪನಿಗೆ ಇಂತಹ ಪ್ರಸಂಗಗಳು ’ರೋಗಿ ಬಯಸಿದ್ದು ವೈದ್ಯ ಹೇಳಿದ್ದು’ ಎಂಬ ಉಕ್ತಿಗೆ ಅನ್ವರ್ಥವಾಗಿ ಬಿಡುತ್ತದೆ !. ಇಲ್ಲೂ ಸಹ ಕರ್ಣನು ದುರ್ಯೋಧನಾದಿಗಳ ಮುಂದೆ " ದುರ್ಯೋಧನ, ನಿನ್ನ ಹತ್ತಿರಕ್ಕೆ ಬರುವಷ್ಟು ಮಹತ್ತಾದುದೇ ಈ ಯುದ್ಧದ ವರ್ತಮಾನ ? ನನಗೆ ವೀಳೆಯವನ್ನು ಕೊಡು ಪಾಂಡವರ ಸೇನಾಸಾಗರವನ್ನು ಕಲಕಿಬಿಡುತ್ತೇನೆ, ರಥಗಳಲ್ಲಿ ಅವರ ತಲೆಗಳ ರಾಶಿಯನ್ನು ಕಳುಹಿಸುತ್ತೇನೆ " ಎಂದು ಹೇಳುತ್ತಾ ಮುಂದೆ ದುರ್ಯೋಧನನು ಭೀಷ್ಮರಿಗೆ ಪಟ್ಟಕಟ್ಟುವ ವಿಚಾರಕ್ಕೆ ಬಂದಾಗ ಕರ್ಣನು " ಸುಯೋಧನ , ನೀನೊಬ್ಬ ಮರುಳ. ಭೀಷ್ಮರು ಪಿತಾಮಹರೆಂಬುದು ನಿಜ ಆದರೆ ಶಿವನನ್ನೇ ಎದುರಿಸಬಲ್ಲಂತಹ ಪರಾಕ್ರಮಿಗಳಿರುವಾಗ ಇಂತಹ ಮುಪ್ಪಿನ ಮುಗುದಗೆ ಪಟ್ಟಕಟ್ಟುವೆಯಲ್ಲಾ , ಇದು ರಾಮನು ಜಾಂಬವನನ್ನು ನಂಬಿದಂತಾಯಿತು, ಸುಮ್ಮನೆ ಸಾವಿರಾರು ಜನರ ಕೊಲೆ ಮಾಡಿಸುವ ಬದಲು ನನಗೆ ಸೇನಾಪತ್ಯವನ್ನು ಕೊಡು " ಎಂಬಂತಹ ಕಲಿತನದ ಮಾತುಗಳನ್ನಾಡುತ್ತಾನೆ. ಕರ್ಣನ ಮಾತುಗಳನ್ನು ಕೇಳಿ ಕೆರಳುವ ದ್ರೋಣರು " ನಿನ್ನ ಯೋಗ್ಯತೆಯ ಮಟ್ಟಕ್ಕೆ ಇಳಿಯುವಂತಹವರೇ ಭೀಷ್ಮರು ? ಜಾಂಬವನೇನು ಸಾಮಾನ್ಯನಲ್ಲ ಎಂಬುದನ್ನು ತಿಳಿ " ಎಂದು ತಿಳಿ ಹೇಳುತ್ತಾರೆ. ಇಲ್ಲಿ ವಿಷಯ ಮತ್ತು ಸಂದರ್ಭಸಾಮ್ಯತೆಗಳಿದ್ದರೂ ಸಹ ಅದನ್ನು ವರ್ಣಿಸುವ ಸೊಬಗಿನಲ್ಲಿ ಇಬ್ಬರೂ ಮಹಾಕವಿಗಳೆನಿಸಿಕೊಳ್ಳುತ್ತಾರೆ. ಜಿ.ವಿ. ಯವರು ಇದಕ್ಕೆ ಇನ್ನೊಂದು ಉದಾಹರಣೆಯನ್ನು ಕೊಡುತ್ತಾರೆ. ಯುದ್ಧರಂಗದಲ್ಲಿ ಭೀಷ್ಮಾ ರ್ಜುನರು ಪರಸ್ಪರ ಇದಿರಾದಾಗ ಹೇಳುವ ಈ ವಾಕ್ಯ ಕುಮಾರವ್ಯಾಸನನ್ನು ಮಹಾಕವಿಯ ಪಟ್ಟಕ್ಕೇರಿಸುತ್ತದೆ.
" ಬರಿಯ ಮಾತೋ ! ಚಾಪವಿದ್ಯದೊಳರಿತ ಉಂಟೋ ? ಹೊತ್ತುಗಳೆಯದೆ ಹೆರಿಸಿರೇ ನಿಮ್ಮಯ ಬಾಣಗರ್ಭಿಣಿಯ ! " ಇಷ್ಟು ಸಾಕಲ್ಲವೆ ನಾರಾಣಪ್ಪನ ಕುಶಲತೆಯನ್ನು ತಿಳಿಯಲು !.
ಪಂಪ ಮತ್ತು ಕುಮಾರವ್ಯಾಸರ ಕಾವ್ಯದ ತೌಲನಿಕ ಅಧ್ಯಯನ ಮತ್ತು ವಿಮರ್ಷೆಯು ನಾಲ್ಕಾರು ವಿದ್ವಾಂಸರುಗಳು ಕೂಡಿ ಮಾಡಬೇಕಾಗಿರುವ ಕಾರ್ಯ, ಅಂತಹ ಕಾರ್ಯವಿಚಾರವನ್ನು ನಾನಿಲ್ಲಿ ಹೇಳುವುದು ನನ್ನಿಂದ ಅಸಾಧ್ಯ.
* ಕುಮಾರವ್ಯಾಸನ ಸ್ವೋಪಜ್ಞತೆ ಮತ್ತು ಕರುಣಾರ್ದ್ರಪರ್ವ ಕರ್ಣಪರ್ವ ಎಂಬ ತಲೆಬರಹದಡಿಯಲ್ಲಿ ಸುಮಾರು ನೂರಾಐದು ಪುಟಗಳಷ್ಟು ವಿಚಾರಗಳನ್ನು ಸಾದ್ಯಂತವಾಗಿ ಷಟ್ಪದಿಗಳ ಉದಾಹರಣೆಯೊಂದಿಗೆ ಅರ್ಥದೊಂದಿಗೆ ವಿವರಿಸುತ್ತಾರೆ. ವಾಸ್ತವದಲ್ಲಿ ಕುಮಾರವ್ಯಾಸನಿಗೆ ಕೃಷ್ಣನ ನಂತರ ಕರ್ಣನೇ ಹೆಚ್ಚು ಪ್ರಿಯವಾದ ವ್ಯಕ್ತಿಯಿರಬೇಕೆನಿಸುತ್ತದೆ ಹಾಗಾಗಿ ಕರ್ಣಪರ್ವಕ್ಕೆ ಹೆಚ್ಚು ಸಂಧಿಗಳನ್ನು ಮೀಸಲಿಟ್ಟು ವಿಶೇಷ ರೂಪಕಗಳೊಂದಿಗೆ ಮನಮುಟ್ಟುವಂತೆ ಪ್ರಸಂಗಗಳನ್ನು ಕಟ್ಟಿಕೊಡುತ್ತಾನೆ. ಮೂಲಭಾರತದಿಂದ ಕುಮಾರವ್ಯಾಸನು ತನ್ನ ಕಾವ್ಯರಚನೆಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳೇನು ? ಯಾವುವು ? ಮತ್ತು ಅದರ ಅಗತ್ಯಗಳೇನು ? ಅಂತಹ ಬದಲಾವಣೆಗಳು ಕಾವ್ಯದೃಷ್ಟಿಯಿಂದ ಎಷ್ಟು ಪೂರಕವಾಗಿದೆ ಎಂಬುದನ್ನು ಜಿ.ವಿ.ಯವರು ವಿಶ್ಲೇಶಿಸುತ್ತಾರೆ. ಇಡೀ ಪುಸ್ತಕದ ಅಗತ್ಯವು ಸಾರ್ಥಕವಾಗುವುದೇ ಈ ನೂರು ಪುಟಗಳಲ್ಲಿ. ಕುಮಾರವ್ಯಾಸನ ಕಾವ್ಯದ ಅಂತರಂಗವನ್ನು ಈ ಎರಡು ಭಾಗಗಳಲ್ಲಿ ಕಾವ್ಯದಲ್ಲಿನ ಸಾರ್ವತ್ರಿಕತೆ ಮತ್ತು ವಿಶಿಷ್ಟತೆಯನ್ನಾಧರಿಸಿ ಇಡೀ ಕರ್ಣಪರ್ವದ ಪ್ರಸಂಗವನ್ನು ವಿವರವಾಗಿ ಓದುಗರ ಮುಂದೆ ತೆರೆದಿಡುತ್ತಾರೆ. ಇಲ್ಲಿ ಇನ್ನು ಇದರ ಬಗೆಗೆ ಹೆಚ್ಚು ಹೇಳಲಾರೆ. ಓದಿ-ಆನಂದಿಸಿ !.
* ಯುದ್ಧಪಂಚಕದ ಉಪಸಂಹಾರದಲ್ಲಿ, ಮೂಲಭಾರತ ಮತ್ತು ಗದುಗಿನಭಾರತವು ಹೇಗೆ ಸಾಮ್ಯತೆಯನ್ನು ಪಡೆಯುತ್ತದೆ ಮತ್ತು ಅಂತಹ ಸಾಮ್ಯತೆ ಮತ್ತು ಬದಲಾವಣೆಗಳನ್ನು ಕಾವ್ಯಾಲಂಕಾರ ಶಾಸ್ತ್ರಕ್ಕೆ, ಧರ್ಮಕ್ಕೆ ಮತ್ತು ಮೂಲಭಾರತದ ಇಂಗಿತಕ್ಕೆ ಚ್ಯುತಿ ತಾರದಂತೆ ಕುಮಾರವ್ಯಾಸನು ಹೇಗೆ ನಿರ್ವಹಿಸಿದ್ದಾನೆ ಎಂಬುದನ್ನು ಲೇಖಕರು ವಿಶ್ಲೇಶಿಸುತ್ತಾರೆ. ಗದಾಪರ್ವದ ಅನೇಕ ಪದ್ಯಗಳನ್ನು ಅರ್ಥಸಹಿತವಾಗಿ ವಿವರಿಸುವುದರ ಜೊತೆಗೆ ಅಲ್ಲಿ ನಿರೂಪಿತವಾಗಿರುವ ರೂಪಕಗಳಿಗೂ ವಿಶೇಷ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಪುಸ್ತಕದ ಸಮಗ್ರತೆಗೆ ಉಪಸಂಹಾರವು ಪೇಟದ ಮೇಲಿನ ನವಿಲುಗರಿಯಂತೆ ಶೋಭಿಸುತ್ತದೆ !.
ಇದರೊಟ್ಟಿಗೆ ಕೆಲವು ಚಮತ್ಕಾರಿಕ ಶ್ಲೋಕಗಳನ್ನು ಕೊಡಮಾಡುತ್ತಾರೆ.
" ಮಹತ್ವೇಚ ಗುರುತ್ವೇಚ ಧ್ರಿಯಮಾಣಂ ಯಥೋಧಿಕಮ್
ಮಹತ್ವಾತ್ ಭಾರವತ್ವಾಚ್ಚ ಮಹಾಭಾರತಮುಚ್ಯತೇ | "
( ಭಾರತವನ್ನು ಯಾವುದಕ್ಕೆ ಹೋಲಿಸಿದರೂ ಭಾರತವೇ ಮಹತ್ವದ್ದೂ, ಗುರುತರವಾದುದೂ ಆಗಿ ಕಂಡು ಬಂದುದರಿಂದ ಅದು ಮಹಾಭಾರತವಾಯಿತು !) .
ಹೀಗೆ ಕುಮಾರವ್ಯಾಸನು ಭಾರತವನ್ನೇ ತನ್ನ ಕಾವ್ಯರಚನೆಗೆ ಏಕೆ ಬಳಸಿಕೊಂಡನು, ಆತನೊಬ್ಬ ದೈವಶಿಖಾಮಣಿಯೇ? ಕೃಷ್ಣನ ಪರಮ ಭಕ್ತನೇ ? ಎಂಬ ಜಿಜ್ಞಾಸೆಯ ನಡುವೆಯೇ ಲೇಖಕರು ಮಹಾಕವಿಯ ಕಾವ್ಯೋದ್ಧೇಶಗಳನ್ನು ಸೋದಾಹರಣವಾಗಿ ವಿವರಿಸುತ್ತಾರೆ. ಕುಮಾರವ್ಯಾಸನಿಗೆ ಕೃಷ್ಣನಿಂದ ಧರ್ಮಸಂಸ್ಥಾಪನೆಯಾದ ನಂತರ ಕಾವ್ಯವನ್ನು ಮುಂದುವರಿಸುವ ಔಚಿತ್ಯತೆ ಇರುವುದಿಲ್ಲ ಎಂಬುದು ಕವಿಯ ಘೋಷವಾಕ್ಯದಿಂದಲೇ ತಿಳಿಯುತ್ತದೆ. ಮೊದಲಿಗೇ ಕವಿಯು ತಾನು "ಕೃಷ್ಣನ ಮಹಿಮೆಯನ್ನು (ಕತೆ) ಹೇಳುತ್ತೇನೆ " ಎಂದು ಪ್ರಾರಂಭಿಸಿರುತ್ತಾನೆ. ಕವಿಯ ಕೃಷ್ಣನ ದೈವತ್ವದ ಪರವಾದ ನಿಲುವು ಗದುಗಿನ ಭಾರತದ ಕೊನೆಯ ಷಟ್ಪದಿಯಲ್ಲಿ ಫಲಶ್ರುತಿಯ ರೂಪದಲ್ಲಿ ಪ್ರಕಟಗೊಂಡಿದೆಯೆಂದು ನಾನು ಭಾವಿಸುತ್ತೇನೆ.
ವೇದ ಪಾರಾಯಾಣದ ಫಲ ಗಂ
ಗಾದಿ ತೀರ್ಥಸ್ನಾನದ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ |
ಎಂದು ಹೇಳಿ ಕವಿಯು ತನ್ನ ಕಾವ್ಯವನ್ನು ಮುಗಿಸುತ್ತಾನೆ. ಈ ಪರಿಯ ಫಲಶ್ರುತಿಯನ್ನು ಕವಿಯು ಬರೆದಿರುವ ಹಿನ್ನಲೆಯನ್ನು ಗಮನಿಸಿದಾಗ, ಕವಿಯು ಕೃಷ್ಣನನ್ನು ಜಗನ್ನಿಯಾಮಕನಾದ ಪರಮಾತ್ಮನೆಂದೇ ಬಗೆದು, ಅವನ ಕತೆಯನ್ನೇ ಹೇಳುವುದರಿಂದ ಕಾವ್ಯವನ್ನು ಅತ್ಯಂತ ಪವಿತ್ರ ಸ್ಥಾನಕ್ಕೇರಿಸಿ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿರಬಹುದೆನ್ನಿಸಿತು. ಕೊನೆಯ ಷಟ್ಪದಿಯ ಅರ್ಥವನ್ನು ಇಲ್ಲಿ ಗಮನಿಸೋಣ.
ಚತುರ್ವೇದಗಳನ್ನು ಓದಿದುದರ ಫಲ
ಗಂಗಾದಿ ( ಗಂಗೇಚ ಯುಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ) ನದಿಗಳ ಸ್ನಾನದ ಪುಣ್ಯಫಲ,
ಕೃಚ್ಛ್ರಾಚರಣೆಯಿಂದ ನಿಯಮಿಸಲ್ಪಟ್ಟ ತಪದ ಫಲ,
ಜ್ಯೋತಿ(ಅಗ್ನಿ ?)ಷ್ಟೋಮ ಎಂಬ ಯಾಗದ ಫಲ,
ಭೂದಾನ, ಗೋದಾನ, ವಸ್ತ್ರದಾನ, ಕನ್ಯಾದಾನ ( ದಶದಾನಾದಿಗಳು ) ಗಳಿಂದ ದೊರಕುವ ಪುಣ್ಯಫಲವು
ಈ ಭಾರತವನ್ನು ಓದಿದವರಿಗೆ ಅಥವಾ ಭಾರತದೊಳೊಂದಕ್ಷರವ ಕೇಳ್ದರಿಗೆ ಆದರಿಸಿ ಬರುವುದೆಂದು ಕವಿಯು ಬಣ್ಣಿಸುತ್ತಾನೆ. ಇಲ್ಲಿ, ಜ್ಯೋತಿಷ್ಟೋಮ ಎಂದು ಬರುವ ಯಾಗದ ಹೆಸರನ್ನು ನಾನೆಲ್ಲೂ ಕೇಳಿಲ್ಲ ಆದರೆ ಅದು ’ಅಗ್ನಿಷ್ಟೋಮ’ ವಿರಬಹುದೆ ? ಎಂಬ ಜಿಜ್ಞಾಸೆ ನನ್ನದು. ( ಜಿ.ವಿ. ಯವರೂ ಸಹ ಇದರ ಬಗೆಗೆ ಏನನ್ನೂ ಬರೆಯುವುದಿಲ್ಲ ). ವೇದಾಂಗಗಳಲ್ಲಿ ಬಳಕೆಯಾಗಿರುವ "ತ್ರಿಗುಣಿಕೃತ, ಅಗ್ನಿಷ್ಟೋಮ, ಅತಿರಾತ್ರ, ವಾಜಪೇಯ, ಪೌಂಡರೀಕ, ರಾಜಸೂಯ ಮತ್ತು ಅಶ್ವಮೇಧ " ಇವು ಏಳು ಮಹಾಯಾಗಗಳಾಗಿದ್ದು ಇವುಗಳನ್ನು ಭೂಪಾಲರು, ಚಕ್ರವರ್ತಿಗಳು, ಮಹಾರಾಜರೆನಿಸಿಕೊಂಡವರು ಮಾತ್ರವೇ ನೆರವೇರಿಸಬಹುದಾಗಿದ್ದುದೆಂದು ತಿಳಿದುಬರುತ್ತದೆ. "ಜ್ಯೋತಿಷ್ಟೋಮ" ಎಂಬ ಯಾಗದ ಬಗೆಗೆ ವಿವರಗಳಿದ್ದಲ್ಲಿ ಬಲ್ಲವರು ತಿಳಿಸಿರೆಂದು ವಿನಂತಿಸುತ್ತೇನೆ.
ಕುಮಾರವ್ಯಾಸನ ಅಂತರಂಗವನ್ನು ಸಾರ್ಥಕವಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿರುವ ಜಿ.ವೆಂ. ಅವರಿಗೇ ಪುಸ್ತಕದ ಸರ್ವಪಾಲು ಸಲ್ಲುತ್ತದೆ. ಹತ್ತು ಹಲವು ಮಜಲುಗಳೊಂದಿಗೆ ಸಾರ್ವಕಾಲಿಕವಾಗಿ ಕಾವ್ಯಾಸಕ್ತರ ವಿದ್ವಾಂಸರ ಪಾಲಿಗೆ ಅಮೃತವಾಗಿರುವ ಗದುಗಿನ ಭಾರತದ ರಚನಕಾರನಾದ ಮಹಾಕವಿ ನಾರಾಣಪ್ಪನಿಗೆ ನಾನೂ ನಮಿಸುತ್ತೇನೆ.
ಗದುಗಿನ ಭಾರತದಲ್ಲಿ ಕುಮಾರವ್ಯಾಸನ ಕೃಷ್ಣನಿಗಿಂತಲೂ ಕುಮಾರವ್ಯಾಸನೇ ನನಗೆ ಹೆಚ್ಚು ದೇವಕಳೆಯಿಂದ ಗೋಚರಿಸುತ್ತಾನೆ !.
................................................................................*..........................................................................................
ಪುಸ್ತಕದ ಹೆಸರು : ಕುಮಾರವ್ಯಾಸನ ಅಂತರಂಗ- ಯುದ್ಧಪಂಚಕದಲ್ಲಿ
ಲೇಖಕರು : ಪ್ರೋ. ಜಿ. ವೆಂಕಟಸುಬ್ಬಯ್ಯ
ಪುಟಗಳು :೨೧೨
ಬೆಲೆ : ರೂ ೧೪೫
ಪ್ರಕಾಶನ : ಪ್ರಿಸಂ ಬುಕ್ಸ್. ಬೆಂಗಳೂರು.