Oct 12, 2012
Jul 3, 2012
ಏಕೆಂದರೆ....
ನನಗೂ ಅರಿವಾಗಿರಲಿಲ್ಲ. ’ವಿವೇಕ ಚೂಡಾಮಣಿ’ ಎಂಬ ಬ್ಗಾಗನ್ನು ತೆರೆದು ಬರಹಗಳನ್ನು ಹಾಕಲು ಮೊದಲಿಟ್ಟು ವರುಷವಾಗಿದೆ. ಈಗ ಇನ್ನೊಂದು ಬರಹವನ್ನು ಬ್ಲಾಗಿಗೆ ಏರಿಸಲು ಪುಟವನ್ನು ತೆರೆದಾಗಲೆ ಸಾಲು ಕಳೆದಿರುವುದು ಪತ್ತೆಯಾಗಿದ್ದು. ನಾನೇಕೆ ’ವಿವೇಕ ಚೂಡಾಮಣಿ’ ಯಂತಹ ವೇದಾಂತದ ಮತ್ತು ಕೆಲವೇ ಕೆಲವರು ಅನುಸರಿಸಬಹುದಾದಂತಹ ವಿಚಾರವನ್ನು ಮೇಲಾಗಿಟ್ಟುಕೊಂಡು ಬರೆಯಲು ತೊಡಗಿದೆ ? ಎಂದರೆ, ಉತ್ತರವೂ ನನಗೆ ದೊರಕಿದೆ. ’ಓದುಗರ ಸಹನೆ ದೊಡ್ಡದು’ , ಆ ಉತ್ತರವನ್ನೂ ನಿಮಗೆ ಹೇಳಿಬಿಡುತ್ತೇನೆ.
ವೇದ - ವೇದಾಂತದ ಬಗೆಗಿನೆ ನನ್ನ ಆಸಕ್ತಿ ಸಹಜವಾದುದು ಮತ್ತು ಎಳವೆಯಿಂದ ಬಂದುದು. ಅದು ಒತ್ತಟ್ಟಿಗಿರಲಿ ಬಿಡಿ. ಈಗ ಮುಖ್ಯ ಕಾರಣಗಳನ್ನು ಹೇಳುತ್ತೇನೆ.
ಒಂದು ಕಾರಣ ನಿಮಗೆ ತಿಳಿದಿರಬಹುದು. ಅದನ್ನು ತಿಳಿಯಲು ನೀವು ಈ ಬರಹ ವನ್ನು ಓದಬಹುದು. ಗುರು ಎಂದರೆ ಯಾರು ? ಸನ್ಯಾಸ ಎಂದರೆ ಏನು ? . ಇಂತಹ ಪ್ರಶ್ನೆಗಳೆಲ್ಲಾ ನನ್ನಲ್ಲಿ ಹುಟ್ಟಿದ್ದು ’ಆ’ ಬರಹದಲ್ಲಿ ಬಂದು ಹೋದ ’ಸನ್ಯಾಸಿ’ ಎಂಬ ವ್ಯಕ್ತಿಯಿಂದಲೆ. ಚೂರು-ಪಾರು ಸನ್ಯಾಸ-ವೈರಾಗ್ಯದ ಬಗೆಗೆ ತಿಳಿದಿದ್ದ ನನ್ನನ್ನು ಅದರ ಬೆನ್ನುಹತ್ತಿ ಹೋಗುವಂತೆ ಮಾಡಿದ್ದು ’ಆ’ ಘಟನೆಯೆ. ಅದಾಗಿ ಹತ್ತು-ಹನ್ನೆರೆಡು ವರುಷಗಳ ತರುವಾಯ ಅದರ ಬಗೆಗೆ ಬರೆಯಲು ಆಸಕ್ತಿಯು ಹುಟ್ಟಿ ತಕ್ಕ ಸ್ಥಳವೂ (ಬ್ಲಾಗ್) ದೊರಕಿತು. ಸ್ವೀಕರಿಸುವಂತಹ ಗೆಳೆಯರೂ ದೊರೆತರು. ಹೀಗೆ ತಿಳಿದುಕೊಳ್ಳಲು ಹೊರಟಾಗ ಅನೇಕ ಪುಸ್ತಕಗಳು ನೆರವಿಗೆ ಬಂದುವು. ನಾನಿಲ್ಲಿ ಯಾವುದನ್ನು ಹೇಳಲಿ ?. ಒಂದನ್ನು ಹೇಳಿದರೆ ಇನ್ನೊಂದಕ್ಕೆ ಅಪಚಾರವಾದೀತು. ಶ್ರೀ ಶಂಕರಾಚಾರ್ಯರ ’ವಿವೇಕ ಚೂಡಾಮಣಿ’ಯು ಸನ್ಯಾಸದ , ಗುರುವಿನ ಮಹತ್ವದ ಸಾರವನ್ನೆಲ್ಲಾ ತನ್ನಲ್ಲಿ ಹಿಡಿದಿಟ್ಟುಕೊಂಡಿರುವ ಪ್ರಕರಣವೆಂದು ಓದಿನ ಮೂಲಕ ಅರಿವಾದಾಗ ಅದನ್ನೇ ಇಟ್ಟುಕೊಂಡು ವಿಚಾರಮಾಡುವುದು ಒಳಿತೆನಿಸಿ ಮುಂದುವರಿದೆ. ಅನೇಕ ಮೂಲಗಳಿಂದ ವಿಚಾರಗಳನ್ನು ಹೆಕ್ಕಿತೆಗೆದು ಬರೆಯಲು ತೊಡಗಿದೆ. ಇದಕ್ಕೆ ನನ್ನ ತಾಯಿಯೂ, ಮಡದಿಯೂ ಬೆಂಬಲವಾಗಿ ನಿಂತರು. ಉಳಿದಂತೆ ನೀವೆಲ್ಲರೂ ಮನದುಂಬಿ ಹರಸಿದ್ದೀರಿ. ನಿಮಗಾಗಿ-ನನಗಾಗಿ ಬರೆಯುವುದು ಮುಂದುವರಿಯುತ್ತದೆ.
ಎರಡನೆಯ ಕಾರಣ, ಈಗ್ಗೆ ಹನ್ನೆರೆಡು ವರುಷಗಳ ಹಿಂದೆ ನನ್ನ ತಂದೆಯವರು ದಿವಂಗತರಾದರು. ಅಂದಿನ ದಿನ ನಾನು ಕರ್ಮಭ್ರಷ್ಟನೆನಿಸಿಕೊಂಡೆ !. ಅದಕ್ಕೆ ಕಾರಣ, ಮೊದಲ ದಿನದ ಮುಂಡನ (ತಲೆ ಬೋಳಿಸಿಕೊಳ್ಳುವುದು) ಕರ್ಮವನ್ನು ನಾನು ಮಾಡಿಸಿಕೊಳ್ಳದೆ ಮುಂದಿನ ಕಾರ್ಯಗಳನ್ನು ಮಾಡಿ ಮುಗಿಸಿದ್ದು. ಇತ್ತಗೆ ಹಳ್ಳಿಯೂ ಅಲ್ಲದೆ ಅತ್ತ ನಗರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದು ಕೇರಿಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಆಚರಣೆಗಳನ್ನು ಉಳಿಸಿಕೊಂಡು ಬಂದಿರುವ ಊರು ನನ್ನದು. ನನಗೀಗಲೂ ನಂಬಿಕೆಯಿದೆ ನಾನು ಯಾವ ತಪ್ಪನ್ನೂ ಮಾಡಿಲ್ಲವೆಂದು. ಅಂದಿನ ಸಂದರ್ಭದಲ್ಲಿ ನಾವಿದ್ದ ಸ್ಥಿತಿಯಲ್ಲಿ ಯಾವ ಕರ್ಮದ ಮರ್ಮಗಳೂ ನಮಗೆ ತೋಚಲಿಲ್ಲ ಎಂದು ಹೇಳಬಹುದು. ನಮ್ಮ ಗೋಳು ನಮ್ಮದಾಗಿತ್ತು.
ಆದರೆ, ಸುಸಜ್ಜಿತ ಕರ್ಮಿಷ್ಠರು ಸುಮ್ಮನೆ ಬಿಡುವವರೆ ? . ಚುಚ್ಚು ಮಾತುಗಳು, ಬೈಗುಳಗಳು, ವ್ಯಂಗ್ಯದ ನುಡಿಗಳು ನಮ್ಮನ್ನು ನೋಯಿಸದೇ ಬಿಡಲಿಲ್ಲ. ನೊಂದಿರುವವರನ್ನು ಕರ್ಮದ ಹೆಸರಿನಲ್ಲಿ ಇನ್ನಷ್ಟು ನೋಯಿಸುವ ಕರ್ಮಠರಿಗೆ ಏನೆಂದು ಕರೆಯುವುದು ?. ನನ್ನ ಈಗಿನ ಅರಿವಿನಂತೆ ನನಗಂದು ಕರ್ಮಗಳನ್ನು ವಿರೋಧಿಸಬೇಕೆಂಬ ಭಾವವೂ ಇರಲಿಲ್ಲ ಹಾಗೆಯೆ ಕಟ್ಟಿಕೊಳ್ಳಬೇಕೆಂಬ ಆಸಕ್ತಿಯೂ ಇರಲಿಲ್ಲ. ಅದು ಆಗ ಆಗಲಿಲ್ಲ ಎನ್ನುವುದಷ್ಟೆ ನಿಜ. ನನಗೆ ಈಗಲೂ ಕರ್ಮದ ಪ್ರತಿಯಾಗಿ ಯಾವ ವಿರೋಧವೂ ಇಲ್ಲ. ’ಚಿತ್ತಸ್ಯ ಶುಧ್ಧಯೇ ಕರ್ಮ’ ಎನ್ನುವುದನ್ನು ನಂಬಿದ್ದೇನೆ. ಆದರೆ, ಹುರುಳು-ತಿರುಳನ್ನು ತಿಳಿಯದೆ ಕರ್ಮಗಳ ಬಗೆಗೆ ಉದ್ದುದ್ದ ಭಾಷಣ ಬಿಗಿಯುವವರನ್ನೂ, ಮಂಡನಮಿಶ್ರರ ತುಂಡುಗಳೇನೋ ಎಂಬಂತೆ ಕರ್ಮಲೋಪಗಳನ್ನು ದಾಷ್ಟ್ಯದಿಂದ ಎತ್ತಾಡುವವರನ್ನು ಕಂಡಾಗ ನಗುವು ಬರುತ್ತದೆ. ಅಂತಹವರಿಗೆ ನಾನೇನೂ ಹೇಳಲು ಸಾಧ್ಯವಿಲ್ಲ. ನನ್ನ ಕರ್ಮಭ್ರಷ್ಟತೆಗೆ ಬೆಂಬಲವಾಗಿ ನಿಂತಿದ್ದು ನನ್ನ ತಾಯಿ. ಅವರನ್ನು ನಾನಿಲ್ಲಿ ನೆನೆಯಲೇಬೇಕು. ಅಂತಹ ಗಟ್ಟಿಗಿತ್ತಿಯನ್ನು ತಾಯಿಯಾಗಿ ಪಡೆದದ್ದು ನನ್ನ ಪುಣ್ಯ. ಮುಂದೊಂದು ದಿವಸ ಯಾವುದೋ (ಪುಣ್ಯ)ಕ್ಷೇತ್ರಕ್ಕೆ ಹೋಗಿ ತಲೆಬೋಳಿಸಿಕೊಂಡು ಬಂದೆ (ಮನಸ್ಸಿನ ಕೊರಗಿನ ನಿವಾರಣೆಗೆ). ಎರಡು ತಿಂಗಳಲ್ಲಿ ಕೂದಲು ಮತ್ತೆ ಹುಲುಸಾಗಿ ಬೆಳೆಯಿತು !. ಕರ್ಮದ ಬೆಂಬತ್ತಿ ಹೋದಾಗ ಆಚಾರ್ಯರ ಜ್ಞಾನ ಪಾರಮ್ಯದ ಈ ಗ್ರಂಥವು ಕರ್ಮದ ಬಗೆಗೆ ಕೆಲವು ಆಸಕ್ತಿಕರವಾದ ವಿಚಾರಗಳನ್ನು ತಿಳಿಸಿತು. ಇದೂ ಒಂದು ಕಾರಣ.
ಇತ್ತೀಚಿನ ಘಟನೆಯೊಂದನ್ನು ಹೇಳುವುದಾದರೆ, ನನಗೊಮ್ಮೆ ಶಿವನ ದೇವಾಲಯದಲ್ಲಿ ಬರುವ ಆಸ್ತಿಕರಿಗೆ ತೀರ್ಥ ಕೊಡುವ ಹೊಣೆಗಾರಿಕೆಯು ಬಿತ್ತು :-). ಹಾಗೆ ಕೊಡುತ್ತಿರುವಾಗ ಮಹನೀಯರೊಬ್ಬರು ನನ್ನನ್ನು ಹೀಗೆ ಕೇಳಿದರು " ನೀವು ಶಿವನ ದೇವಾಲಯದಲ್ಲೇಕೆ ತೀರ್ಥ ಕೊಡುತ್ತೀರಿ? ತೀರ್ಥಕ್ಕೆ ತುಳಸಿಯನ್ನೇಕೆ ಸೇರಿಸಿದ್ದೀರಿ ? ಇವೆರಡೂ ಶಿವನಿಗೆ , ಶೈವ ಸಂಪ್ರದಾಯಕ್ಕೆ ವಿರೋಧವಲ್ಲವೆ ? " ಎಂದರು. ಅವರು ಹೀಗೆ ಕೇಳಲು ಕಾರಣ ಈಚೀಚೆಗೆ (ಆರೇಳು ಸಾಲುಗಳಿಂದ) ತಮಿಳುನಾಡಿನ ಶೈವ ಮಂದಿರಗಳಲ್ಲಿ ತೀರ್ಥವನ್ನು ಕೊಡುವುದನ್ನು ನಿಲ್ಲಿಸಿದ್ದಾರೆ. ಅದಕ್ಕೆ ಬೇರೆಯದೇ ಆದ ಕಾರಣವಿದ್ದರೂ ಜನಗಳು ನಂಬಿರುವುದು ಶೈವ-ವೈಷ್ಣವರೆಂಬ ಭೇದವನ್ನು !. ಹೀಗಿದ್ದರೂ ಅವರಿಗೆ ನಾನು ನನಗೆ ತಿಳಿದಂತಹ ವಿಚಾರವನ್ನು ಹೇಳಿದೆ. ಅದನ್ನು ನೀವು ಈ ಬರಹ ದಲ್ಲಿ ಓದಬಹುದು. ಇದಲ್ಲದೆ ಇನ್ನಷ್ಟು ವಿವರಣೆಗಳನ್ನೂ ನೀಡಿದೆ. ಹಾಗೂ ಅವರ ಬುದ್ದಿ ಚುರುಕಾಗಲಿಲ್ಲ. ಕಪ್ಪೆಯು ಬಾವಿಯನ್ನು ಬಿಟ್ಟು ಬರುವುದಿಲ್ಲ ಎಂದರೆ ನಾನೇನು ಮಾಡಲು ಸಾಧ್ಯ ?. ಕಡೆಗೆ ರೇಗಿಕೊಂಡೇ ಹೇಳಿದೆ " ನಿಮ್ಮಂತಹವರನ್ನು ದೂರದ ಅಮೇಜಾನ್ ನಂತಹ ಕಗ್ಗಾಡಿನಲ್ಲಿ ಬಿಟ್ಟು ಬರಬೇಕು. ಅಲ್ಲಿ ಮಠ-ಮಂದಿರಗಳಾಗಲೀ ಮಸೀದಿ-ಇಗರ್ಜಿಗಳಾಗಲೀ ಇಲ್ಲವಂತೆ. ಶಿವ, ವಿಷ್ಣು. ಅಲ್ಲಾಹು ಕ್ರಿಸ್ತನಾದಿಯಾಗಿ ಯಾರನ್ನೂ ಅಲ್ಲಿ ಕಂಡಿಲ್ಲವಂತೆ. ಅಲ್ಲಿರುವುದು ಭಾರೀ ಅನಕೊಂಡಗಳು, ಕಂಡು ಕೇಳರಿಯದ ಮೃಗಗಳು, ದೈತ್ಯ ಮೊಸಳೆಗಳು, ಚಿತ್ರ-ವಿಚಿತ್ರವಾದ ಮರಗಳು ಮತ್ತು ಒಮ್ಮೆ ಕಾಡೊಳಗೆ ಹೊಕ್ಕರೆ ತಿರುಗಿ ಬರುತ್ತೇವೆಂಬ ನಂಬಿಕೆ ಇಲ್ಲದ ಬದುಕು . ಒಂದೆರೆಡು ತಿಂಗಳು ಅಲ್ಲಿದ್ದು ಬಂದು ಮತ್ತೆ ಇಂತಹ ಪ್ರಶ್ನೆಯನ್ನು ಕೇಳಿ " ಎಂದೆ. ಅವರು ಇನ್ನಷ್ಟು ಸಿಡುಕಿಕೊಂಡು ಮುಂದೆ ಹೋದರು :).
ಅದಿರಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನೇ ಗಮನಿಸೋಣ. ಅಬ್ಬಾ !, ಅದೇನ್ರೀ, ಈ ಪಾಟಿ ರಾಜಕೀಯ ಮಾಡೋ ಸ್ವಾಮೀಜಿಗಳನ್ನು ನಾನು ಕಂಡಿರಲಿಲ್ಲ ಕೇಳಿರಲಿಲ್ಲ. ’ನಮ್ಮ ಮಠಕ್ಕಿಷ್ಟು ಹಣವನ್ನು ಕಕ್ಕಿಬಿಡಬೇಕು’ ಎಂದು ಆಗ್ರಹಿಸುವ ಸ್ವಾಮೀಜಿಯೊಬ್ಬರನ್ನು ಟಿ.ವಿ. ಯಲ್ಲಿ ನೋಡಿ ದಂಗಾಗಿದ್ದೆ. ಈಗ ಮಾಜಿಯಾಗಿರುವ ಅಂದಿನ ಮುಖ್ಯಮಂತ್ರಿಯೊಬ್ಬರನ್ನು ಆ ಸ್ಥಾನದಿಂದ ಕೆಳಗಿಳಿಸಿದರೆ ನಮ್ಮ ಮಠವೂ ಸೇರಿದಂತೆ ಇಡೀ ಸಮುದಾಯವೇ ತಿರುಗಿ ಬೀಳಲಿದೆ ಎಂದು ಧಮಕಿ ಹಾಕುವ ಸ್ವಾಮೀಜಿಯೊಬ್ಬರನ್ನು ಅದೇ ಟಿ.ವಿ. ಯಲ್ಲಿ ಕಂಡು ಕಂಗಾಲಾದೆ. ’ಇಬ್ಬಂದಿ’ ರಾಜಕೀಯ ಮಾಡುವ ಮತ್ತೊಬ್ಬರು ಹಿರಿಯ ಸ್ವಾಮಿಗಳನ್ನು ಕಂಡು ಬೇಸರಪಟ್ಟುಕೊಂಡೆ. ನಿತ್ಯವೂ ಆನಂದವನ್ನೇ ಬಯಸುವ ಮತ್ತೊಬ್ಬರನ್ನು ನೋಡಿ ಚಕಿತನಾದೆ. ಸಂಡೆ ಪ್ರಾರ್ಥನೆಗೆ ಇನ್ನೂರು ರೂಪಾಯಿಯ ಆಮಿಷವನ್ನು ತೋರಿಸಿ ಹಿಂದುಳಿದವರೆನಿಕೊಂಡಿರುವವರನ್ನು ಮತಾಂತರ ಮಾಡುತ್ತಿರುವ ಸೂಪರ್ ಗುರುಗಳನ್ನೂ ಕಣ್ಣಾರೆ ಕಂಡೆ !. ಗ್ರೇನೇಡು, ಪಿಸ್ತೂಲುಗಳನ್ನು ಧಾರ್ಮಿಕ ಕೇಂದ್ರಗಳಲ್ಲೇ ಇರಿಸಿಕೊಂಡು ದಂಧೆ ನೆಡೆಸುತ್ತಿರುವ ಅಧ್ಬುತ ಗುರುವಿನ ಬಗೆಗೂ ತಿಳಿದೆ, ಅಚ್ಚರಿಪಟ್ಟುಕೊಂಡೆ. ಹಾಗಾದರೆ ಗುರು ಎಂದರೆ ಯಾರು? ಭಾರತೀಯ ತತ್ವ ದರ್ಶನವು ಗುರುವಿನ ಬಗೆಗೆ ಏನು ಹೇಳುತ್ತದೆ ? ಎಂಬುದನ್ನು ಅರಿಯದಿದ್ದರೆ ಏನು ಸುಖ ಹೇಳಿ ?!. ಸಾವಿರಾರು ಸಾಲುಗಳ ಹಿಂದೆಯೇ , ದೇಶ, ದೇಶಕ್ಕೊಂದು ಧರ್ಮ, ಧರ್ಮಕ್ಕೊಂದು ಸಂಸ್ಕೃತಿ ಇರಲೆಂದು ಮಾಡಿದ್ದು ಒಂದು ಪರಿಮಿತಿಯೊಳಗೆ ಬದುಕುವ ಮಾನವ ಸಮುದಾಯವು ಶಾಂತಿ-ಸಹಬಾಳ್ವೆಯಿಂದ ಇರಲಿ, ಧರ್ಮವು ಬೆಳೆದು ಅಧರ್ಮ-ಅಜ್ಞಾನಗಳು ಅಳಿಯಲಿ ಎಂದೇ ಹೊರತು ಇದನ್ನೆಲ್ಲಾ ಬಳಸಿಕೊಂಡು ರಾಜಕೀಯ ಮಾಡಿ ಕಾಸಿಗೆ ಕಾಸು ಸೇರಿಸಿಕೊಳ್ಳಿ ಎಂದಲ್ಲ ಎನ್ನಬಹುದು. ಮಠ-ಮಂದಿರಗಳ ಹುಟ್ಟಿಗೂ ಇಂತಹುದೇ ಸದುದ್ದೇಶವು ಕಾರಣವಾಗಿದೆ. ಕಾಲನ ಆಟಕ್ಕೆ ಸಿಲುಕಿದರೂ ಒಂದು ದೇಶದ ಧರ್ಮ-ಸಂಸ್ಕೃತಿ ಉಳಿದಿದೆ ಎಂದರೆ ಅದರಲ್ಲಿ ಸತ್ಯತೆ ಇದೆ ಎಂದೇ ಅಲ್ಲವೆ ? . ಆದರೆ, ಅಂದಿನ ಧ್ಯೇಯೋದ್ದೇಶದಲ್ಲಿ ಹುಟ್ಟಿದ ಧರ್ಮ-ಸಂಸ್ಕೃತಿಯು ಇಂದು ಮಾನವನ ಸ್ವಾರ್ಥಕ್ಕೆ ಸಿಲುಕಿ ಮೂಲ ರೂಪ-ಉದ್ದೇಶಗಳನ್ನು ಕಳೆದುಕೊಂಡು ಅಂಗಡಿಯ ಮುಂದೆ ರಂಗಿನ ಸೀರೆಯುಟ್ಟು ನಿಂತಿರುವ ಪ್ರದರ್ಶನ ಬೊಂಬೆಯಾಗಿದೆ ಎಂದರೆ ಸುಳ್ಳಾಗಲಾರದು. ಮಾನವತೆಯ ಅಂತ್ಯಕ್ಕೆ ಇದು ನಾಂದಿಯಿರಬಹುದು. ಆದರೂ ನಮ್ಮ ನಿಮ್ಮಲ್ಲಿ ಉಳಿದಿರುವ ಸದುದ್ದೇಶಗಳು ದೇಶವನ್ನು ಕಾಪಾಡಬಲ್ಲುದು ಎಂಬ ಆಶಯವನ್ನು ಇಟ್ಟುಕೊಳ್ಳೋಣ. Let's have hopes !.
ಇಲ್ಲಿ ಬರೆದ ವಿಚಾರಗಳು ತೀರಾ ವೈಯಕ್ತಿಕವಾದುವುಗಳೆನಿಸಿದರೆ ಕ್ಷಮಿಸಿಬಿಡಿ. ಇಂತಹ ಹತ್ತೆಂಟು ಅನುಭವಗಳು ’ವಿವೇಕ ಚೂಡಾಮಣಿಯನ್ನು’ ಬರೆಯಲು ಪ್ರೇರೇಪಿಸಿದೆ. ಅದರೊಟ್ಟಿಗೆ ಗ್ರಂಥದಲ್ಲಿರುವ ವೈಚಾರಿಕತೆಯೂ ನನ್ನನ್ನು ಸೆಳೆದಿದೆ. ನಿಮ್ಮೆಲ್ಲರ ’ಸಪೋರ್ಟೂ’ ಇರುವುದರಿಂದ ನನಗೆ ಇನ್ನೆರೆಡು ಕೊಂಬೂ ಬಂದಿದೆ !. ಇನ್ನಷ್ಟು ಚೆಂದವಾಗಿ ಬರಹಮಾಲಿಕೆಯನ್ನು ಕಟ್ಟಿಕೊಡುವ ಹೊಣೆಗಾರಿಯೂ ಹೆಚ್ಚಿದೆ. ವರುಷ ಪೂರೈಸಿಕೊಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
ಇದರೊಂದಿಗೆ ’ವಿವೇಕ ಚೂಡಾಮಣಿ’ಯ ಮುಂದಿನ ಕಂತನ್ನು ಸೇರಿಸಿದ್ದೇನೆ.
ಭಾಗ -೨೧
ಧನ್ಯವಾದಗಳು.
Apr 14, 2012
Feb 13, 2012
Jan 12, 2012
ವಿವೇಕ ಚೂಡಾಮಣಿ-ಭಾಗ-೧೮
ನಲ್ಮೆಯ ಗೆಳೆಯ/ತಿಯರಿಗೆಲ್ಲಾ ಸಂಕ್ರಾತಿಯ ಶುಭಾಶಯಗಳು.
ಬ್ಲಾಗೋದುಗರ ಬೆಂಬಲದಿಂದ ಶಂಭುಲಿಂಗನ ಪುರಾಣಕ್ಕೆ ಎರಡು ವರುಷ ತುಂಬಿ ಮೂರನೆಯದು ಸಾಗುತ್ತಿದೆ. ಸಾಗುತ್ತಲೇ ಇದ್ದರೆ ಚೆನ್ನ ಎನ್ನುವುದು ನನ್ನ ಅನಿಸಿಕೆ. ಶಿಖರದ ತುತ್ತತುದಿಯನ್ನು ತಲುಪಿ ಬಿಟ್ಟರೆ ಮುಂದೇನು ಎನ್ನುವ ಸಮಸ್ಯೆ ಮೊದಲಾಗುತ್ತದೆ. ನಂತರ ಅಲ್ಲಿಂದ ಕೆಳಮುಖವಾಗಿ ಇಳಿಯಲೇ ಬೇಕು !. ಅಧೋಗತಿಗಿಂತಲೂ ಏರುಗತಿಯೇ ಸೊಗಸು ಅಲ್ಲವೆ ?! :). ’ಕೊನೆಯನೆಂದು ಮುಟ್ಟದಿರು’ ಎನ್ನುವ ಕವಿವಾಣಿಯಂತೆ ಜೀವನದ ಪ್ರತಿಯೊಂದು ಕ್ಷಣವನ್ನು ’ಈಗಿನದೇ’ ಎನ್ನುವಷ್ಟು ಹೊಸತರಂತೆ ಅನುಭವಿಸೋಣ. ’ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ(ಜೀವನ)’ ಎಂದು ವರಕವಿಯ ವಾಣಿಯು ನಮ್ಮ ಬೆನ್ನು ತಟ್ಟುತ್ತಿರುತ್ತದೆ. ಈ ವರುಷದಲ್ಲಿ ಎಲ್ಲಾ ಸದಭಿರುಚಿಯ ಬ್ಲಾಗುಗಳೂ Update ಆಗಲಿ ಎಂದು ಹಾರೈಸೋಣ. ಇದರೊಟ್ಟಿಗೆ ವಿವೇಕ ಚೂಡಾಮಣಿಯ ಮುಂದಿನ ಕಂತನ್ನು ಸೇರಿಸಿದ್ದೇನೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.
ವಿವೇಕ ಚೂಡಾಮಣಿ-ಭಾಗ-೧೮
Subscribe to:
Posts (Atom)