Mar 4, 2010

ಅಪಸ್ವರ



ಸುಗಮ ಸಂಗೀತಕ್ಕೆ ಹಿರಿಮೆ ತಂದುಕೊಟ್ಟವರಲ್ಲಿ ಮೈಸೂರು ಅನಂತಸ್ವಾಮಿಯವರದ್ದು ದೊಡ್ಡ ಹೆಸರು. ಅವರ ಶಿಷ್ಯವರ್ಗವೂ ಅದೇ ಸ್ಥಾಯಿಯನ್ನು ಮುಂದುವರಿಸಿಕೊಂಡು ಬಂದಿರುವುದು ಅಭಿನಂದನೀಯ. ಹಾಡಲಾಗುವ ಕವನಗಳು ಮತ್ತು ಹಾಡಲಾಗದ ಕವನಗಳೆರಡನ್ನೂ ಹಾಡಿ ತೋರಿಸಿದ ಗೇಯ್ಮೆ ಅನಂತಸ್ವಾಮಿಯವರದ್ದು.  ಈ ಎರಡೂ ಪ್ರಕಾರದ ಕವನಗಳ ನಡುವಿನ ತಿಕ್ಕಾಟದ ವಾದಕ್ಕೆ , ಮೊನ್ನೆ ಪತ್ರಿಕೆಯೊಂದರಲ್ಲಿ ಶ್ರೀಯುತ ಡಾ| ನಾ. ಸೋಮೇಶ್ವರರು ಉತ್ತಮ ವಿಚಾರವೊಂದನ್ನು ಬರೆದಿದ್ದಾರೆ. (  ಅದರ ಸಂಪೂರ್ಣ ವಿಷಯ ಇಲ್ಲಿ ಅಪ್ರಸ್ತುತ, ಫೆ-೨೮ ರ ’ ಸಾಪ್ತಾಹಿಕ ಪ್ರಭ ’ ನೋಡಬಹುದು. ) 
ಕೆ.ಎಸ್.ನ, ದ.ರಾ.ಬೇಂದ್ರೆ  ಮುಂತಾದವರ ಕವನಗಳು ಪ್ರಾಸಬದ್ದವಾಗಿ ಹಾಡುವಂತೆಯೂ ಇದ್ದರೆ, ನವ್ಯ ಕವಿಗಳ ಕವನಗಳು ಮೇಲ್ನೋಟಕ್ಕೆ ಹಾಡಲಾಗದಂತೆ ಕಂಡುಬಂದರೂ, ಅವುಗಳನ್ನೂ ಹಾಡನ್ನಾಗಿಸಿದ ಕೀರ್ತಿ ಅನಂತಸ್ವಾಮಿ ಮತ್ತು ಸಿ. ಅಶ್ವತ್ಠ ರಿಗೆ ಸಲ್ಲುತ್ತದೆ.  ಇಂತಹ ಕವನಗಳು ಕೆಳುಗರ ಮನಗೆಲ್ಲುವಲ್ಲಿ ಯಶಸ್ವಿಯೂ ಆಗಿದೆ


  "ಆ ನೀಲಿಕೊಳವನ್ನು ಪ್ರೀತಿಸುವೆ ನಾನು,...
   ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ... ||
  ಆ ಹೊನ್ನೆ ಮರವನ್ನು ಪ್ರೀತಿಸುವೆ ನಾನು,
  ಅಲ್ಲೇ ನಲಿದಾಡಿತ್ತು...ಆ ಕಪ್ಪು ಹುಡುಗಿ..||


ಈ ಕವನವನ್ನು ಅದೆಷ್ಟು ಸುಶ್ರಾವ್ಯವಾಗಿ ಹಾಡಾಗಿಸಿದ್ದಾರಲ್ಲವೆ ..? . ಇಂತಹ ಹಾಡುಗಳು ಸಾಕಷ್ಟು ಸಿಗುತ್ತವೆ. ಮುಖ್ಯವಾಗಿ ಕಾವ್ಯದ ಪ್ರತಿ  ಸಂಗೀತ ನಿರ್ದೇಶಕನಿಗಿರುವ ಓಲುಮೆಯೇ ಸೊಗಸಾದ ಹಾಡು ಬರಲು ಕಾರಣವಾಗುತ್ತದೆ. ಇಂತಹ ಭಾವಗೀತೆಗಳಿಗೆ ಮೆರುಗು ಬರುವುದು, ಶ್ರುತಿ-ಲಯ-ತಾಳಗಳನ್ನು ಗೌರವಿಸಿ ಹಾಡುವ ಗಾಯಕ/ಗಾಯಕಿಯರಿಂದ ಎನ್ನುವುದು ಸತ್ಯ ಸಂಗತಿ. 
(ಬೇಂದ್ರೆಯವರು ಹಾಡು ಬರೆದು ಅದನ್ನು ತಾವೇ ಹಾಡಿಕೊಂದು ಅನುಭವಿಸುತ್ತಿದ್ದರೆಂದು ಓದಿ ತಿಳಿದೆ. ಹಾಗಾದರೆ ಊಹಿಸಿಕೊಳ್ಳಿ, "ಶ್ರಾವಣ ಬಂತು ಕಾಡಿಗೆ " ಹಾಡನ್ನು ಹೇಗೆ ಹಾಡಿಕೊಂಡು ಕುಣಿದು ಆಸ್ವಾದಿಸಿರಬಹುದೆಂದು !. )
ಶ್ರೀಮತಿ ರತ್ನಮಾಲ ಪ್ರಕಾಶ್ ಮತ್ತು ಎಂ.ಡಿ. ಪಲ್ಲವಿ ಇಬ್ಬರೂ ಗುರುಗಳ ಗರಡಿಯಿಂದ ಬಂದ ಅಪ್ರತಿಮ ಗಾಯಕಿಯರೆ. ಇವರ ಜೊತೆಗೆ  ಬಿ.ಆರ್. ಛಾಯಾ, ಅರ್ಚನಾ ಉಡುಪ  , ಸುಪ್ರಿಯಾ ಆಚಾರ್ಯ ಮುಂತಾದ ಗಾಯಕಿಯರನ್ನು ನಾವಿಂದು ಇಷ್ಟಪಡುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಅವರ ಧ್ವನಿಯಲ್ಲಿರುವ ಇಂಪು. ಆದರೆ....,,,,,
 ಇಲ್ಲೊಂದು ತಕರಾರಿದೆ .....!, ಮೊನ್ನೆಯಷ್ಟೇ ರತ್ನಮಾಲಾ ಪ್ರಕಾಶ್ ಅವರು ಪಲ್ಲವಿಯ ಮೇಲೆ ತಿರುಗಿಬಿದ್ದರು. ಅದೂ ಟಿ.ವಿ. ಮಾಧ್ಯಮಗಳ ಮುಂದೆಯೇ !. ಹಾಗೆ ತಿರುಗಿ ಬೀಳಲು ಕಾರಣ ಪಲ್ಲವಿಯ ಕಂಠದಲ್ಲಿ ಹೊರಬಂದಿರುವ ಭಾವಗೀತೆಗಳ ಸಿ.ಡಿ. ಗಳು. ಈ ಹಾಡುಗಳಲ್ಲಿ ಮೂಲ ಸಂಗೀತ ನಿರ್ದೇಶಕರ ಹೆಸರಿದ್ದರೂ , ಮೂಲ ಗಾಯಕ/ಗಾಯಕಿ ಯರ ಹೆಸರು ಹಾಕದಿರುವುದು ರತ್ನಕ್ಕರ ಕೋಪಕ್ಕೆ ಕಾರಣ. ಮಾಧ್ಯಮಗಳ ಮುಂದೆ ಅವರು ಹೇಳಿದ್ದಿಷ್ಟೆ.. " ಮೂಲ ಗಾಯಕ/ಕಿ ಯರ ಹೆಸರು ಹಾಕದಿರುವುದು ಅಗೌರವದ ಸೂಚಕ. ನಮಗೆ credentiality ಬೇಡವೇ ? ಪಲ್ಲವಿ ತುಂಬಾ Arrogant  ಆಗಿ ವರ್ತಿಸುತ್ತಿದ್ದಾಳೆ, ಆಕೆ arrogance ಬಿಟ್ಟರೆ ಬೆಳೆಯುತ್ತಾಳೆ " ಎಂದೆಲ್ಲಾ ಸ್ವಲ್ಪ arrogant ಆಗೇ ಮಾತನಾಡಿದರು. ಜೊತೆಯಲ್ಲಿ ಬಿ. ಆರ್. ಛಾಯಾ ಸೇರಿದಂತೆ ಇನ್ನೂ ಹಲವು ಸುಗಮಿಗಳಿದ್ದರು ಎನ್ನುವುದು ವಿಶೇಷ. ಲಹರಿ ಸಂಸ್ಥೆಯ ’ವೇಲು’ ಕೂಡ, ತಮ್ಮಿಂದ ಹಕ್ಕು ಪಡೆಯದೇ ಪಲ್ಲವಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು.
 ಇಷ್ಟಕ್ಕೂ ಹಕ್ಕು ಪಡೆಯಬೇಕಾಗಿದ್ದು ಸಿ.ಡಿ. ಹೊರತಂದಿರುವ ಆಡಿಯೋ ಕಂಪೆನಿಯಲ್ಲವೇ ? . ಇನ್ನು ಮೂಲ ಸಂಗೀತ ನಿರ್ದೇಶಕರ ಹೆಸರನ್ನು ಯಥಾವತ್ ಮುದ್ರಿಸಲಾಗಿದೆ.    ರತ್ನಕ್ಕ ಹಾಡಿರುವ ಹಾಡನ್ನು  ಪಲ್ಲವಿ ಹಾಡಿರುವುದು ತನ್ನ ಸ್ವಂತ ಧ್ವನಿಯಲ್ಲಿ !.  ಹಾಡುಗಾರ್ತಿ ತಾನೇ ಆದ್ದರಿಂದ credit ಕೊಡುವ ಅಗತ್ಯವೇನಿದೆ ?? ಎನ್ನುವುದು ಪಲ್ಲವಿಯ ವಿಚಾರವಾಗಿರಬಹುದು. ಆಕೆ ಗಾಯಕಿಯಾದ್ದರಿಂದ ಯಾವ ಹಾಡನ್ನು ಬೇಕಾದರೂ ಆಕೆ ಹಾಡಬಹುದಲ್ಲವೆ.
ಹಾಗಾದರೆ ರತ್ನಕ್ಕರ ಪ್ರಶ್ನೆ credit ನದ್ದೇ ? ರತ್ನಕ್ಕರಿಗೆ ಸಲ್ಲಬೇಕಾದ credit , ಕೇಳುಗರಿಂದ ಎಂದೋ ಸಂದಿದೆ. ಇಂದಿಗೂ ಸಲ್ಲುತ್ತಿದೆ. ರತ್ನಕ್ಕರಂತಹ ಅಪ್ರತಿಮ ಗಾಯಕಿಯ ಹಾಡನ್ನು , ಬೇರೆ ಯಾರೇ ಹಾಡಿದರೂ ಮೂಲದಲ್ಲಿರುವ ಭಾವ ಕಳೆದುಹೋಗಲು ಸಾಧ್ಯವೆ ?
ಅವರಿಗೆ ಸುಗಮ ಸಂಗೀತದ ಭವಿಷ್ಯದ ಚಿಂತೆ ಕಾಡಿರಬಹುದೇನೋ...!!?


 "ಮಾಡುವವನದಲ್ಲ ಹಾಡು ...ಹಾಡುವವರದು " ....ಅಲ್ಲವೇ .  ಇಲ್ಲಿ ಯಾರೂ ಮೇಲಲ್ಲ , ಯಾರೂ ಕಮ್ಮಿಯಲ್ಲ.  ಈ ಸಿ.ಡಿ. ಯ ಮೆಲೆ Recorded at Live Concert  ಎಂದಿದೆ  ( Copyright act  ಭಯದಿಂದಿರಬಹುದೇ ?) . ಹಾಡುಗಳನ್ನು ಕೇಳಿ, ನನಗದು Recorded ಅನ್ನಿಸಿತೇ ವಿನಃ Live ಅನ್ನಿಸಲಿಲ್ಲ. ಇಲ್ಲೆಲ್ಲೋ ಏನೋ ತಪ್ಪಾಗಿದೆ ಎನಿಸುತ್ತದೆ.  ರತ್ನಕ್ಕರ ಸಮಸ್ಯೆ credit ನದ್ದಾಗಿರುವುದರಿಂದ ಇಲ್ಲೊಂದು ಬೇಡದ ಅಪಸ್ವರ ಎದ್ದಿದೆ ಎಂದರೆ ತಪ್ಪಾಗಲಾರದು.  ನ್ಯಾಶನಲ್ ಕಾಲೇಜಿನಲ್ಲಿ ಒಟ್ಟೊಟ್ಟಿಗೇ ಓದಿದ ಪಲ್ಲವಿ, ಅರ್ಚನಾ ಮತ್ತು ಸಂಗೀತ ಕ್ಷೇತ್ರದಲ್ಲಿ ಸಹವರ್ತಿಗಳಾದ ರತ್ನಕ್ಕ, ಛಾಯಾ, ಸುಪ್ರಿಯ...ಇವರೆಲ್ಲರಿಂದ ಸಂಗೀತಪ್ರಿಯರು ನಿರೀಕ್ಷಿಸುವುದು ಇಂಪಾದ ಹಾಡುಗಳನ್ನೇ ವಿನಃ, ಇಂತಹ ಅಪಸ್ವರಗಳನ್ನಲ್ಲ. ಸಮಸ್ಯೆ ಏನೇ ಇರಲಿ, ಕರೆದು ಕೂಡಿಸಿ ಬಗೆಹರಿಸಿಕೊಳ್ಳುವ ಬದಲು , ಹೀಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದು ಸಂಗೀತ ಪ್ರಿಯರಿಗೆ ತುಸು ಮುಜುಗರದ ವಿಷಯವೆ.  

  ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೇ ಬಾಳಲಿ,
  ಕೊಟ್ಟುದೆಷ್ಟೋ..ಪಡೆದುದೆಷ್ಟೋ..ನಿಮ್ಮ ( ನಮ್ಮ ) ನಂಟೇ ಹೇಳಲಿ !


ಇಲ್ಲಿ ಬೇರೇನಾದರೂ ಇದೆಯೇ( ರಾಜಕೀಯ )? ..ಎಂಬುದಂತೂ ನನಗೆ ತಿಳಿದಿಲ್ಲ. ಇರದಿರಲಿ ಎನ್ನುವುದು ನನ್ನ ಆಶಯ.  ತಪ್ಪು ಪಲ್ಲವಿಯದ್ದೋ, ಕಂಪನಿಯದ್ದೋ..ಯಾರದ್ದೋ ..! ಆದರದು ಗಾಯಕಿಯರ ಪ್ರತಿ ಕೇಳುಗರಲ್ಲಿ ಕೆಟ್ಟ ಅಭಿಪ್ರಾಯ ತರದಿದ್ದರೆ ಅಷ್ಟೇ ಸಾಕು. ಇಂತಹ ಅಪಸ್ವರಗಳು ಸುಗಮ ಸಂಗೀತದಲ್ಲಿ ಬರದಿರಲೆಂದು ಆಶಿಸುತ್ತೇನೆ. ಆದಷ್ಟು ಬೇಗ ಕತ್ತಲು ಕಳೆದು ಬೆಳಕು ಮೂಡಲಿ.  ಇಷ್ಟೆಲ್ಲಾ ನೋಡಿ-ಕೇಳಿ,..ಏಕೋ..ಬೇಂದ್ರೆಕಾಕ ಬರೆದ ಹಾಡು ಕಾಡಿತು...


   .........   ನಿಜದಲ್ಲೇ  ಒಲವಿರಲಿ,
               ಚೆಲುವಿನಲೆ ನಲಿವಿರಲಿ,
               ಒಳಿತಿನಲೇ ಬಲವಿರಲಿ ..
               ಜೀವಕ್ಕೆಳೆಯಾ..(ಗೆಳೆಯಾ)..  
               ದೇವ ಜೀವನ ಕೇಂದ್ರ,
               ಒಬ್ಬೊಬ್ಬನೂ ಇಂದ್ರ,
               ಏನಿದ್ದರೂ ಎಲ್ಲ..ಎಲ್ಲೆ ತಿಳಿಯಾ... 
              ”’
              ”
              ” 
                      ಕೊನೆಯ ಸಾಲುಗಳು
             
              ಈ ನಾನು...ಆ ನೀನು...ಒಂದೆ ತಾನಿನ ತಾನು,
              ತಾಳ ಲಯ ರಾಗಗಳು ಸಹಜ ಬರಲಿ..,
              ಬದುಕು ಮಾಯೆಯ ಮಾಟ...... 
                                                                  
  ------------------------------------------------------------------


    ಖೊನೆಖಿಡಿ
           ಶಂಭುಲಿಂಗ ತನ್ನ ಮರಿಲಿಂಗನನ್ನು ಶಾಲೆಗೆ ಸೇರಿಸಲು ಬಂದ. ಗುಮಾಸ್ತನ ದಯೆಯಿಂದ 
          ಎಲ್ಲವೂ ಸಾಂಗವಾಯಿತು. ಕೊನೆಯದ್ದೇ..ಶಂಭುಲಿಂಗನ ರುಜು. ಗೊತ್ತಲ್ಲ..ಶಂಭು ಹೆಬ್ಬೆಟ್ಟೆಂದು.. .ಗುಮಾಸ್ತ ಒತ್ತುವ    ಶಾಯಿಪೆಟ್ಟಿಯನ್ನು ಮುಂದಿಟ್ಟ. ಶಂಭು..ಒತ್ತುವ ಬದಲು ಗುಮಾಸ್ತನ ಮುಂದೆ ಅಂಗೈ ಚಾಚಿದ...

        ಗುಮಾಸ್ತ    : ಯಾಕಯ್ಯಾ..ಕೈ ತೋರಿಸ್ತೀ...ಹೆಬ್ಬೆಟ್ಟೊತ್ತಯ್ಯಾ ಇಲ್ಲಿ..

        ಶಂಭುಲಿಂಗ : ಓದ್ ತಿಂಗ್ಳು ಓಟ್ ಆಕಿಸಕಳವಾಗ ಇಂಗೇ ಒತ್ತಕ್ಕೆ ೧೦೦ ರೂಪ್ಯಾ ಕಾಸು ಕೊಟ್ಟಿದ್ರು... ಅಂಗೆ ನೀವು ಕೊಟ್ರೆ ಎಲ್ ಬೇಕಾದ್ರು ಒತ್ತೀನ್ ಬುದ್ದಿ..!!         
   




                                                                        ವಂದನೆಗಳೊಂದಿಗೆ