Jan 4, 2010

ಪದಾಭಾಸಗಳು

ಕನ್ನಡದಲ್ಲಿ ಪದಾಭಾಸಗಳು ನಿಚ್ಚಳ ಮತ್ತು ಹೆಚ್ಚಳವಾಗಿಯೇ ಇವೆ. ’ಹೋಗು’ ವಿಗೆ ’ಓಗು’ , ’ಹೊಡೆ’ ಗೆ ’ವಡೆ’, ’ಭಾಷೆ’ಗೆ ’ಭಾಸೆ’ ಹೀಗೆ(ಈಗೆ!) ಹಲವಾರು ಆಭಾಸಗಳು ನುಸುಳುತ್ತಲೇ ಇರುತ್ತವೆ. ಈಗ ಕೆಲವು ಊರುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ.

೧. ಮುರುಡೇಶ್ವರ:- ಕರಾವಳಿಯ ಪ್ರಭಾವಳಿಯಂತಿರುವ ಈ ಶಿವಕ್ಷೇತ್ರವನ್ನು ಬಲ್ಲದವರ‍್ಯಾರು. ಆದರೆ ’ಮುರುಡೇಶ್ವರ’ ಎಂಬುದಕ್ಕೆ ಕನ್ನಡದಲ್ಲಿ ಸ್ಪಷ್ಟ ಅರ್ಥವಿಲ್ಲ. ಮುರುಡ+ಈಶ್ವರ ದಲ್ಲಿ ’ಈಶ್ವರ’ ಸರಿಯಾದರೂ "ಮುರುಡ" ಆಭಾಸದಿಂದ ಕೂಡಿದೆ. ಇದರ ಸ್ಪಷ್ಟ ಹೆಸರು "ಮೃಡೇಶ್ವರ". ’ಮೃಡ’ ಎಂದರೆ ಶಿವ, ’ಈಶ್ವರ’ ಎಂದರೆ ಪರಮ(ಉಚ್ಛ). ಹೀಗಾಗಿ ಮೃಡೇಶ್ವರ ಅತ್ಯಂತ ಸೂಕ್ತ ಪದ. ಮೃಡೇಶ್ವರ ಕ್ಷೇತ್ರದಲ್ಲೂ ಸಹ ದೇವಾಲಯದಲ್ಲಿ ಇದೇ ಪದ ಬಳಸಿದ್ದಾರೆ. ಪುರಾಣಗಳೂ ಮೃಡೇಶ್ವರ ಎಂದೇ ಹೇಳುತ್ತವೆ.


೨. ಬೀದರ್ :- ’ಬಿದರಿ’ ಕಲೆಗೆ ಪ್ರಸಿದ್ದಿಯಾದ ಈ ಊರು ’ಬಿದರಿ’ ಎಂದೇ ಕರೆಯಲ್ಪಡುತ್ತಿತ್ತು. ನಂತರ ಆಭಾಸವಾಗಿ ’ಬೀದರ’ ಅಥವಾ ’ಬೀದರ್’ ಆಗಿದೆ. ಹಾಗೆಯೇ ’ಬೆಂಗಳೂರು’, ’ಮೈಸೂರು’ ಇತ್ಯಾದಿಗಳು ಪದಾಭಾಸದಿಂದ ಮೂಲಾರ್ಥವನ್ನೇ ಕಳೆದುಕೊಂಡು ಇಂದು ಅರ್ಥವೇ ಇಲ್ಲವಾಗಿಸಿ ಕೊಂಡಿವೆ. ಹೀಗೇ ಹುಡುಕುತ್ತಾ ಹೋದರೆ ಅರ್ಥವೇ ಇಲ್ಲದ ಸಾಕಷ್ಟು ಊರುಗಳು ದೊರೆಯುತ್ತವೆ.

ಹಾಗೆಯೇ ಕೆಲವೊಂದು ಪದಗಳು ಆಭಾಸವಾಗಿ ಕಂಡರೂ ಅವು ದೊಡ್ಡ ಅರ್ಥವನ್ನೇ ನೀಡುತ್ತಿರುತ್ತವೆ.
ಉದಾಹರಣೆಗೆ....

ಬಹಳ ವರ್ಷಗಳ ಹಿಂದೆ ಮುಂಬೈನಲ್ಲಿ ಬಹು ಮಹಡಿ ಕಟ್ಟಡವೊಂದು ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದು ಸುಮಾರು ೫೬ ಬಾಲಕಾರ್ಮಿಕರು ಮೃತಪಟ್ಟರು. ಆಗ ಪ್ರಖ್ಯಾತ ಆಂಗ್ಲ ದಿನ ಪತ್ರಿಕೆಯೊಂದು ಪ್ರಕಟಿಸಿದ ಹೆಡ್ ಲೈನ್ ಹೀಗಿತ್ತು.
"Sons of toil under tons of soil" (ಶ್ರಮಪಡುವ ಮಕ್ಕಳು ಮಣ್ಣಿನ ಕೆಳಗೆ!)

ಹಾಗೆಯೇ ಸನ್ಮಾನ್ಯ ವೈಎನ್ಕೆ ಯವರ ಪದಪುಂಜವೊಂದನ್ನು ಓದಿರಿ

Mary rose
sat on a pin
Mary rose !

ಇದರರ್ಥ ತಕ್ಷಣಕ್ಕೆ ಹೊಳೆಯಬಲ್ಲುದೆ ? ಒಂದು ಕ್ಲೂ ಕೊಡುತ್ತೇನೆ...’ಮೇರಿರೋಸ್’ ಹುಡುಗಿಯ ಹೆಸರು. ಉತ್ತರ ತಮಗೆ ಗೊತ್ತಿದೆ ಎಂದು ನಂಬುತ್ತೇನೆ..!!
ಉತ್ತರವನ್ನು ದಯಮಾಡಿ ಪ್ರತಿಕ್ರಯಿಸಿ.
ಹೀಗೆ ಕೆಲವೊಂದು ಪದಗಳು ಆಭಾಸಕ್ಕೀಡುಮಾಡಿದರೆ ಕೆಲವೊಂದು ಪದಗಳು ವಿಶಾಲ ಆರ್ಥವನ್ನು ಕೊಡುತ್ತವೆ.
ವಂದನೆಗಳೊಂದಿಗೆ......