Sep 5, 2016

ಹೊಯ್ಸಳ ಶಿಲ್ಪಗಳಲ್ಲಿ 'ಗಣೇಶ ವೈಭವ'


ಹತ್ತನೆಯ ಶತಮಾನದಿಂದ ಹದಿಮೂರನೆ ಶತಮಾನದವರೆಗೆ ಕನ್ನಡನಾಡನ್ನು ಆಳಿದ ಹೊಯ್ಸಳ ರಾಜವಂಶವು ಶಿಲ್ಪಕಲೆಗೆ ಹೆಚ್ಚು ಮಹತ್ವವನ್ನು ನೀಡಿ ನಾಡಿನಾದ್ಯಂತ ನೂರಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿದ  ಕೀರ್ತಿಯನ್ನು ಪಡೆದಿದೆ. ಹೊಯ್ಸಳರ ರಾಜಧಾನಿ ಹಳೇಬೀಡಿನ ಹೊಯ್ಸಳೇಶ್ವರ ದೇಗುಲವು ಕಲೆಯ ಸಾಗರವೆಂದೆ ಜಗದ್ವಿಖ್ಯಾತವಾಗಿದೆ. ಸಾವಿರಾರು ಆನೆ, ಕುದುರೆ, ಪಕ್ಷಿಗಳು, ಯಕ್ಷ-ಗಂಧರ್ವರು, ರಾಮಾಯಣ-ಭಾರತದಂತಹ ಶಿಲ್ಪಕಲಾಕೃತಿಗಳ ಜತೆಗೆ ವಿಶಿಷ್ಟ ಶೈಲಿಯ ಹತ್ತಾರು ಗಣೇಶ ವಿಗ್ರಹಗಳು ಈ ದೇಗುಲದಲ್ಲಿದೆ. ಗಣೇಶ ಚತುರ್ಥಿಯ ಶುಭ ಸಮಯದಲ್ಲಿ ಇಲ್ಲಿನ ಗಣೇಶ ವಿಗ್ರಹಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ಕಮಲದ ಹೂವಿನ ಮೇಲೆ ನರ್ತಿಸುತ್ತಿರುವ ಗಣಪ 

ದೊಡ್ಡ ಹೊಟ್ಟೆಯ ಗಣಪ ಕಮಲದ ಹೂವಿನ ಮೇಲೆ ನರ್ತನ ಮಾಡುವುದನ್ನು ಊಹಿಸಿಕೊಳ್ಳುವುದು ಹೇಗೆ ?. ಆದರೆ, ಶಿಲ್ಪಿಯ ಕಲ್ಪನೆಯಲ್ಲಿ ಅದು ಸಾಕಾರವಾಗಿದೆ.  ಈ ನರ್ತನ ಗಣಪನಿಗೆ ನಾಲ್ಕು ಭುಜಗಳಿವೆ. ಮೈ ತುಂಬ ಗಂಟೆಗಳನ್ನೇ ಆಭರಣದಂತೆ ಧರಿಸಿರುವ ಈ ಗಣೇಶನ ಬಲಬದಿಯಲ್ಲಿ ಗಂಟೆಯ ಸರಪಳಿಯಂತಹ ನಾಜೂಕಿನ ಕೆತ್ತನೆಯನ್ನು ಗಮನಿಸಬಹುದು. ಅಲಂಕಾರಕ್ಕೆ ಮಾಡಿರುವ ಹೂವಿನ ಬಳ್ಳಿಯ ರಚನೆಯ ಪ್ರಭಾವಳಿ ಅತ್ಯಂತ ಆಕರ್ಷಕವಾಗಿದೆ. ಗಣೇಶ ನರ್ತಿಸುತ್ತಿರುವ ರಭಸಕ್ಕೆ ಹಾರಗಳು ಅತ್ತಿತ್ತ ಸರಿದಾಡಿರುವುದನ್ನು ಶಿಲ್ಪಿಯು ಸುಂದರವಾಗಿ ಮೂಡಿಸಿರುವುದನ್ನು ಗಮನಿಸಬಹುದು.  

ಅಲಂಕಾರ ಗಣಪ

ಸೂಕ್ಷ್ಮ ಕುಸುರಿ ಕೆತ್ತನೆ ಇರುವ ಮತ್ತು ಅತಿಹೆಚ್ಚು ಆಭರಣಗಳನ್ನು ಧರಿಸಿರುವ ಗಣೇಶ ಎಂದು ಈ ವಿಗ್ರಹ ಜಗದ್ವಿಖ್ಯಾತವಾಗಿದೆ. ಗಂಟೆಯ ಸರಗಳು, ಕೈಯಲ್ಲಿನ ಮೋದಕ, ರುದ್ರಾಕ್ಷಿ ಸರ, ಪುಟ್ಟ ಗದೆ, ನೂಪುರ, ಕಾಲ್ಗೆಜ್ಜೆ, ಕಿರೀಟ, ವಕ್ಷಹಾರ ಮುಂತಾದ ಕೆತ್ತನೆಗಳು ಗಮನಸೆಳೆಯುತ್ತದೆ . ಎಂಟುತೋಳು (ಅಷ್ಟಭುಜ) ಗಣಪತಿ ಎಂದೇ ಖ್ಯಾತವಾಗಿದ್ದರೂ ಇಂದು 6 ಕೈಗಳನ್ನು ಮಾತ್ರ ಗಮನಿಸಬಹುದು. ಮಿಕ್ಕೆರೆಡು ಕೈಗಳು ತುಂಡಾಗಿವೆ. ಗಣೆಶನ ವಿಗ್ರಹಕ್ಕೆ ಶಿಲ್ಪಿಯು ತೊಡಿಸಿರುವ ಆಭರಣಗಳನ್ನು ಗಮನಿಸಿ ವಿದ್ವಾಂಸರು ಈ ದೇಗುಲವನ್ನು ಆಭರಣಗಳ ಪೆಟ್ಟಿಗೆ ಎಂದು ಕರೆದಿದ್ದಾರೆ.

ಬಲಮುರಿ ಗಣಪ

ಸಾಮಾನ್ಯವಾಗಿ ಗಣಪತಿಯ ಸೊಂಡಿಲು ಎಡಭಾಗಕ್ಕೆ ತಿರುಗಿರುತ್ತದೆ. ಆದರೆ, ಈ ಗಣಪನ ಸೊಂಡಿಲು ಬಲಭಾಗಕ್ಕೆ ಇದೆ. ಬಲಮುರಿ ಗಣಪ ಜನಪದದಲ್ಲಿ ಕೋಪಿಷ್ಠ ಗಣೇಶನೆಂದು ಖ್ಯಾತನಾಗಿದ್ದಾನೆ. ಗಣೇಶ ಬ್ರಹ್ಮಚಾರಿ ಎಂದೇ ಜನಪ್ರಿಯ. ಆದರೆ ಈ ಗಣೇಶನಿಗೆ ವಿವಾಹವಾಗಿದೆ. ಆತನ ಹೊಟ್ಟೆಯ ಮೇಲಿರುವ ಆರು ಎಳೆ ಜನಿವಾರದಿಂದ ಈತ ವಿವಾಹಿತನೆಂದು ಹೇಳಬಹುದು. ಈತನಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಪತ್ನಿಯರೂ , ಶುಭ-ಲಾಭ ಎಂಬ ಇಬ್ಬರು ಮಕ್ಕಳು ಇದ್ದಾರೆಂದೂ ಹೇಳಲಾಗುತ್ತದೆ. ಹೆಸರುಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಗಣೇಶ ಮದುವೆಯಾದವನು ಎಂಬದಕ್ಕೆ 'ಶಿವಪುರಾಣ'ದಲ್ಲಿ ಉಲ್ಲೇಖಗಳಿವೆ. ಬಲಮುರಿ ಗಣಪನಿಗೆ ನಿತ್ಯ ತ್ರಿಕಾಲ ಪೂಜಾದಿಗಳನ್ನು ನಡೆಸಿದರೆ ಮಾತ್ರ ಒಲಿಯುತ್ತಾನೆ ಎಂಬ ಮಾತೂ ಚಾಲ್ತಿಯಲ್ಲಿದೆ. ಶಿಲ್ಪಿಯ ಕೈಚಳಕದಲ್ಲಿ ಈ ಗಣೇಶ ಮಾತ್ರ ಸೌಮ್ಯವಾಗಿ ಸುಂದರವಾಗಿ ಕಾಣುತ್ತಾನೆ.

ಇಲಿಯ ಮೇಲೆ ನಾಟ್ಯ ಗಣೇಶ 

ಗಣೇಶ ಇಲಿಯ ಮೇಲೆ ನರ್ತಿಸುವುದು ಎಂದರೇನು ?. ಆತನ ತೂಕವನ್ನು ಆ ಚಿಕ್ಕ ಪ್ರಾಣಿ ತಡೆದೀತೆ ?. ಆದರೆ, ಶಿಲ್ಪಿಯ ಕಲ್ಪನೆಯಲ್ಲಿ ಅವೆಲ್ಲವೂ ಸಾಧ್ಯವಾಗಿದೆ. ಈ ಸುಂದರ ಗಣೇಶ ತನ್ನ ವಾಹನ ಇಲಿಯ ಮೇಲೆ ಸಂತಸದಿಂದ ನರ್ತಿಸುತ್ತಿದ್ದಾನೆ. ಆತನ ದೇಹಭಾರವನ್ನು ತಡೆಯದ ಇಲಿಯು ನಾಲಿಗೆಯನ್ನು ಹೊರಚಾಚಿ ಚೀರುತ್ತಿದೆ. ಇಲಿಯ ಕಾಲಿನ ಉಗುರುಗಳು ಹೊರಬಂದು ಭೂಮಿಯ ಒಳಗೆ ನಾಟಿವೆ !. ಇದೆಲ್ಲವನ್ನೂ ಗಮನಿಸಿದರೆ ಶಿಲ್ಪಿಯ ತನ್ಮಯತೆ, ಸಮರ್ಪಣಾ ಮನೋಭಾವದ ಅರಿವು ಮೂಡುತ್ತದೆ. ಈ ವಿಗ್ರಹವನ್ನು ನೋಡಿಯೆ 'ಗಣಪನಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ' ಎಂದು ಹೇಳಿರಬಹುದು !. 

ಸಂಧಾನ ಗಣಪತಿ


ದೇಗುಲದ ದಕ್ಷಿಣ ಮಹಾದ್ವಾರದಲ್ಲಿರುವ ಈ ಬೃಹತ್ ಗಣಪತಿಗೆ ರಾಜರ ಕಾಲದಲ್ಲಿ ಮೊದಲ ಪೂಜೆ ಸಲ್ಲುತ್ತಿತ್ತು ಎಂದು ಹೇಳಲಾಗಿದೆ. ಹೊಯ್ಸಳ ಶಿಲ್ಪಗಳಲ್ಲೆ ಇದು ಅತ್ಯಂತ ಆಕರ್ಷಕ ಮೂರ್ತಿ ಎನಿಸಿಕೊಂಡಿದೆ. ಈ ಗಣೇಶನನ್ನು ಸಂಧಾನ ಗಣಪತಿ ಅಥವಾ ಸಂಧಿ ಗಣಪತಿ ಎಂದು ಕರೆಯಲಾಗುತ್ತಿತ್ತು ಎನ್ನುವುದಕ್ಕೆ ಸಂಶೋಧಕರು ಶಾಸನಾಧಾರಗಳನ್ನು ಒದಗಿಸಿದ್ದಾರೆ. ನಾಡಿನ ವಿವಿಧ ಬಗೆಯ ವ್ಯಾಜ್ಯಗಳನ್ನು ಈ ಗಣೇಶನ ಮುಂದೆ ಪರಿಹರಿಸಲಾಗುತ್ತಿತ್ತು. ಇಲ್ಲಿನ ಶಾಸನದ ದಾಖಲೆಯಂತೆ, ಕಳ್ಳತನ ಮಾಡಿದ ನಾಯಕನ ಮಗನೊಬ್ಬನಿಗೆ ನ್ಯಾಯ ತೀರ್ಮಾನದಂತೆ ಚಿನ್ನದ ಕಡ್ಡಿಗಳನ್ನು ಕಾಯಿಸಿ ಇದೇ ಗಣಪತಿಯ ಮುಂದೆ ಬರೆ ಹಾಕಿರುವ ಬಗ್ಗೆ ಉಲ್ಲೇಖವಿದೆ. ಪ್ರಸ್ತುತ ನಾಲ್ಕು ಕೈಗಳಲ್ಲಿ ಎರಡು ಹಾಳಾಗಿದ್ದರೂ ಮೂರ್ತಿಯ ಅಂದಕ್ಕೆನೂ ಚ್ಯುತಿ ಬಂದಿಲ್ಲ.