Sep 7, 2011

ವಿವೇಕ ಚೂಡಾಮಣಿ - ಭಾಗ -೧೦

ತಿಮ್ಮಪ್ಪ ಕೈಕೊಟ್ಟ...




ಎತ್ತ ನೋಡಿದರೂ ಸಿರಿ ಸುಗ್ಗಿ,
ಮನೆಯಲ್ಲಿ ಬಾನಲ್ಲಿ ಭುವಿಯ ತಳಪಾಯದಲಿ
ಹಾಸಿಗೆಯ ಅಡಿಯಲ್ಲಿ ದಿಂಬುಗಳ ನಡುವಲ್ಲಿ;
ಕೆದಕಿದರು ಕೆದರಿದರು ಜನುಮ ಜಾಲಾಡಿದರು
ಕಂಡದ್ದು ಹೊನ್ನು ಕಾಣದ್ದು ದಿಗಂತ !
ಮನುಜನಾಸೆಗೆಲ್ಲಿಹುದು ಮಿತಿಯು ?
ಮಿತಿಮೀರಿ ಮತಿಮೀರಿ ಕಂಡಿದ್ದು ಮಾರಿ !
ತಿಮ್ಮಪ್ಪ ಕೈ ಕೊಟ್ಟ ಕರಿಯಪ್ಪ ಸೆರೆ ಕೊಟ್ಟ
ಒಪ್ಪೊತ್ತಿನೂಟ, ಸೊಳ್ಳೆ ಸಾಂಗತ್ಯದಲಿ ಬೇಟ !
ಬೇಕಿತ್ತೆ ಮನುಜ ? ಕಾಂಚಾಣದಾಸೆಯ ದೊಡ್ಡಾಟ
ತಂದಿಟ್ಟಿತೇ ಪ್ರಾಣಸಂಕಟ
ಇನ್ನೆಂದೂ ಬರನು ತಿರುವೆಂಕಟ.
ನೆಗೆದುಬಿದ್ದಿತೇ ನಿನ್ನೆಲ್ಲಾ ಮಾನ-ಧನ
ಯಾರು ಕಾಯ್ವರು ನಿನ್ನನಿನ್ನು ಹೇ - ಜನಾರ್ದನ !?

Aug 1, 2011

ವಿವೇಕ ಚೂಡಾಮಣಿ ಭಾಗ -೫


ನಲ್ಮೆಯ ಓದುಗ ಸ್ನೇಹಿತರೇ,

ವಿವೇಕ ಚೂಡಾಮಣಿಯ ಮುಂದಿನ ಎಲ್ಲಾ ಲೇಖನಗಳು ಅದಕ್ಕಾಗೆ ಮೀಸಲಿಟ್ಟಿರುವ "ವಿವೇಕ ಚೂಡಾಮಣಿ"
ಎಂಬ ಬ್ಲಾಗಿನಲ್ಲಿ  ಬರುತ್ತದೆ. ಇದು ನನ್ನ ಇನ್ನೊಂದು ಬ್ಲಾಗ್ ಆಗಿದ್ದು ಅದರ ಕೊಂಡಿಯನ್ನು ಇಲ್ಲಿ ಕೊಟ್ಟಿದ್ದೇನೆ.
ಎಂದಿನಂತೆ ನಿಮ್ಮ ಪ್ರೋತ್ಸಾಹ , ವಿಶ್ವಾಸಗಳು ನನ್ನದಾಗಿರುತ್ತವೆ ಎಂದು ನಂಬುತ್ತೇನ

ವಿವೇಕ ಚೂಡಾಮಣಿ /Viveka chudamani


ವಂದನೆಗಳೊಂದಿಗೆ.

Jul 27, 2011

ವಿವೇಕ ಚೂಡಾಮಣಿ -೩-ಮುಕ್ತಿಯ ಮಹತ್ವ/The Crest-Jewel of Wisdom



ಗ್ರಂಥದ ಮುಂದುವರಿದ ಭಾಗ.

॥दुर्लभं त्रयमेवैतद् दैवानुग्रहहेतुकम्।
मनुष्यत्वं मुमुक्षुत्वम् महापुरुषसंश्र्यः ॥३||

 ||ದುರ್ಲಭಂ ತ್ರಯಮೇವೈತದ್ ದೈವಾನುಗ್ರಹ ಹೇತುಕಮ್ |
  ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ || ೩||
  

ಈ ಲೋಕದಲ್ಲಿ ಸುಲಭವಾಗಿ ದೊರಕದ (ದುರ್ಲಭವಾದ) ವಿಷಯಗಳನ್ನು ತಿಳಿಸುತ್ತಾ ಶ್ರೀ ಶಂಕರರು ಇನ್ನೂ ಮಹತ್ತರವಾದ ವಿಚಾರವನ್ನು ಪ್ರಸ್ತಾವಿಸುತ್ತಾರೆ.
ಮೇಲಿನ ಶ್ಲೋಕದ ಮೊದಲನೆಯ ಸಾಲನ್ನು ಗಮನಿಸೋಣ

ದುರ್ಲಭಂ ತ್ರಯಮೈವತದ್ ದೈವಾನುಗ್ರಹ ಹೇತುಕಮ್ 
(ದುರ್ಲಭಂ =ಸುಲಭವಾಗಿ ದೊರಕದ, ತ್ರಯಮ್ =ಮೂರು, ದೈವಾನುಗ್ರಹ ಹೇತುಕಮ್ = ದೈವಾನುಗ್ರಹವೇ ಕಾರಣವಾಗಿರುವ )

ದೈವಾನುಗ್ರಹವೇ ಕಾರಣವಾಗಿರುವ ಮೂರು ಮುಖ್ಯ ದುರ್ಲಭವಾದ ಸಂಗತಿಗಳಿವೆ .  ಆ ಸಂಗತಿಗಳನ್ನು ಶ್ಲೋಕದ ಎರಡನೆಯ ಸಾಲಿನಲ್ಲಿ ಹೇಳಲಾಗಿದೆ. ಆ ಎರಡನೆಯ ಸಾಲಿನ ಮೊದಲನೆಯ ಸಂಗತಿಯನ್ನು ಗಮನಿಸೋಣ.

೧) ಮನುಷ್ಯತ್ವಮ್ (= ಮನುಜನಾಗಿರುವುದು)

ಮಾನವ ಜೀವಿಯು 'ಮನುಷ್ಯ' ಎನಿಸಿಕೊಳ್ಳಲು ಆತನಿಗಿರಬೇಕಾದ ಕನಿಷ್ಠ ಅರ್ಹತೆಯೆಂದರೆ ಅದು ಮನುಷ್ಯತ್ವ !. ಕಾಡು ಪ್ರಾಣಿಗಳ ಗುಣವು ನಾಗರೀಕ ಮಾನವನ ಗುಣವಲ್ಲ. ಈ ಮೊದಲು ಹೇಳಿದಂತೆ ಮಾನವನಿಗೆ ಹೆಚ್ಚಿನ ಗುಣಗಳು ಸಂದಾಯವಾಗಿ ಬಂದಿದ್ದರೆ ಕೆಲವೊಂದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಗುಣ ಸಂಪಾದನೆಗೆ ಸ್ವಾನುಭವವೂ ದಾರಿಯಾಗಬಲ್ಲುದು ವೇದಾಂತಗಳ ಅರಿವೂ ಬೆಳಕಾಗಬಲ್ಲುದು.  ಸಂವೇದನಾಶೀಲತೆಯೇ ಮನುಷ್ಯತ್ವದ ಮುಖ್ಯ ಲಕ್ಷಣ ಎನ್ನಬಹುದು. ಸಂವೇದನೆ (ನೋವು-ನಲಿವು ಮುಂತಾದವು )ಗಳಿಗೆ ಮನಸ್ಸು-ಬುದ್ಧಿಯನ್ನು ಬಲಿಗೊಡದೆ ಸ್ಥಿತಪ್ರಜ್ಞರಂತೆ ಇರಬೇಕೆಂದು ’ಗೀತೆ’ಯಲ್ಲಿ ಹೇಳಿದ್ದರೂ ಹಾಗೆ ಹೇಳಿರುವ ಸಂದರ್ಭ ಮತ್ತು ಉದ್ದೇಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಸೂಕ್ಷ್ಮ ಸಂವೇದನೆಗಳಿಲ್ಲದ ಮಾನವನಲ್ಲಿ ಮನುಷ್ಯತ್ವವನ್ನು ಕಾಣಲು ಸಾಧ್ಯವೆ ?. ನಮ್ಮ ಸುತ್ತಲಿನ ಪರಿಸರದ ಮತ್ತು ನಮ್ಮೊಡನೆ ಜೀವಿಸುವ ಜೀವಿಗಳ ಆಗು-ಹೋಗುಗಳ ವಿಷಯದಲ್ಲಿ ಆಸಕ್ತರಾಗಿರುವುದು, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮನುಷ್ಯತ್ವದ ಪ್ರತೀಕ. ಮನುಷ್ಯರಾದ ನಾವು ಮನುಷ್ಯತ್ವವನ್ನು ಸ್ವಾನುಭವದಿಂದಲ್ಲದೆ ಕೇವಲ ಉಪದೇಶಗಳನ್ನು ಕೇಳುವುದರಿಂದಲೇ ಕಂಡುಕೊಳ್ಳಲೆತ್ನಿಸುವುದು ಕಡ್ಡತನವೇ ಸರಿ !. ಗ್ರಂಥದ ಆರಂಭದ ಶ್ಲೋಕದಲ್ಲೇ "ಸ್ವನುಭವೋ" ( ಸು = ಚೆನ್ನಾದ, ಒಳ್ಳೆಯ, ಅನುಭವಃ = ಸಾಕ್ಷಾತ್ಕಾರ, ತಿಳುವಳಿಕೆ) ಎಂದು ಹೇಳಿ ಅದಕ್ಕೆ  ಮಹತ್ವವನ್ನು ನೀಡಲಾಗಿದೆ. ಧ್ಯಾನ (ವಿದ್ಯೆ) ಮತ್ತು ಯೋಗಗಳ ಸಹಾಯದಿಂದ (ಆಚರಣೆಯಿಂದ) ಮನುಷ್ಯತ್ವದ ತಿಳುವಳಿಕೆಯನ್ನು ಪಡೆಯುವ ಮಾರ್ಗವೇ ಉತ್ತಮವೆಂದು ಹೇಳಲಾಗಿದೆ.

೨) ಮುಮುಕ್ಷುತ್ವಮ್ ( = ಮೋಕ್ಷದ ಅಪೇಕ್ಷೆ, ಬಿಡುಗಡೆಯ ಬಯಕೆ )

ಪ್ರಾಪಂಚಿಕ ಸುಖಗಳನ್ನೆಲ್ಲಾ ತೊರೆದು ವೈರಾಗ್ಯವನ್ನು ತಾಳಿದರೆ ಮಾತ್ರ ಮೋಕ್ಷ ದೊರಕುವುದೆಂದಾದರೆ ವಿಶಿಷ್ಟತೆ-ವಿಚಿತ್ರಗಳಿಂದ ಕೂಡಿರುವ ಈ ಲೋಕದಲ್ಲಿ ಹುಟ್ಟುವುದಾದರೂ ಏಕೆ ?! . ಹುಟ್ಟು-ಸಾವುಗಳೆರಡೂ ಸಾಮಾನ್ಯ ಮನುಜನ ಅಂಕೆಯಲ್ಲಿ ಇಲ್ಲದಿರುವುದರಿಂದ ಮೇಲಿನ ಪ್ರಶ್ನೆಗೆ ಸಾಮಾನ್ಯ ಸ್ತರದಲ್ಲಿ  ಉತ್ತರ ದೊರಕುವುದಿಲ್ಲ !.
ಈ ಲೋಕದ ವ್ಯವಹಾರಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ಸಹಕಾರ ಸಂವೇದನೆಗಳು ಏರ್ಪಡುವುದು ಸಹಜ. ಉದಾಹರಣೆಗೆ ;
ನಮ್ಮ ಮನೆಯ ಮುದ್ದಿನ ನಾಯಿಗೆ ಕಾಯಿಲೆಯಾದರೆ ಅದರ ಮೇಲಿನ ವಾತ್ಸಲ್ಯದಿಂದ ಔಷಧಿಗಳನ್ನು ಕೊಟ್ಟು ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ( ಇದು ಮನುಷ್ಯತ್ವ).  ನಾಯಿಗೆ ಕಾಯಿಲೆ ಬಂದಾಗ ಬಾಡುವ ಮನಸ್ಸು, ನಾಯಿಯು ಚೇತರಿಸಿಕೊಂಡು ಪ್ರೀತಿಯಿಂದ ಬಾಲವನ್ನು ಆಡಿಸಿದಾಗ ಅರಳುತ್ತದೆ. ನಮ್ಮ ಔಷಧೋಪಚಾರಕ್ಕೆ ಬೆಲೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ದೊರೆತು ಆತಂಕದಿಂದ ’ಮುಕ್ತಿ’ ಸಿಗುತ್ತದೆ. ಇಂತಹ ಸಣ್ಣ ಸಣ್ಣ ’ಮುಕ್ತಿ’ಗಳೇ ಸಮಷ್ಟಿಯಲ್ಲಿ (ಒಟ್ಟಾರೆ) ಮೋಕ್ಷದ ದಾರಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಕರ್ತವ್ಯ, ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಂತರ ದೊರೆಯುವ ನೆಮ್ಮದಿ ಮತ್ತು ಬಿಡುಗಡೆಯ ಆನಂದವನ್ನು ನಾವು ಅನುಭವಿಸಿಯೇ ಅರಿತಿರುತ್ತೇವೆ.  ಕರ್ಮದ ದಾರಿಯಲ್ಲಿ ಇಂತಹ ಬಿಡುಗಡೆಯನ್ನು ಪಡೆಯುತ್ತಾ ಹೋದಂತೆ ಜ್ಞಾನವೂ ವರ್ಧಿಸುತ್ತಾ ಹೋಗುತ್ತದೆ. ಜ್ಞಾನ ಮಾರ್ಗದಿಂದ ಪಡೆಯುವ ನೆಮ್ಮದಿ ಅಥವಾ ಮೋಕ್ಷವು (ಬ್ರಹ್ಮ ಜ್ಞಾನವು) ಕರ್ಮಮಾರ್ಗದಿಂದ ಪಡೆದಿದುಕ್ಕಿಂತಲೂ ಮಿಗಿಲಾದುದಾಗಿರುತ್ತದೆ.  ಪ್ರಾಪಂಚಿಕ ಸುಖಗಳಲ್ಲಿ ತೊಡಗಿಕೊಂಡ ನಂತರ ಆಯಾ ಕರ್ಮಗಳನ್ನು ಪ್ರಾಮಾಣಿಕವಾಗಿ ಮುಗಿಸಿ ನಿರಾಳತೆಯನ್ನು ಹೊಂದಿದರೆ ಕರ್ಮದಿಂದ ಮುಕ್ತರಾಗಬಹುದು ಆದರೆ ಕರ್ಮಮುಕ್ತಿಯು ಯೋಗ್ಯವಲ್ಲದ್ದು ( ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಗೊಮ್ಮೆ ಪೂರಕ ಪರೀಕ್ಷೆಯಲ್ಲಿ ಸಾರಾ ಸಗಟು ೩೫ ಅಂಕಗಳನ್ನು ನೀಡಿ ಪಾಸು ಮಾಡಿದಂತೆ !) ಎನ್ನುವ ಅಭಿಪ್ರಾಯವಿರುವುದರಿಂದ ಜ್ಞಾನದಿಂದಲೇ ಮುಮುಕ್ಷುತ್ವವನ್ನು ಪಡೆಯುವುದು ಉತ್ತಮ ಎಂದು ಹೇಳಲಾಗಿದೆ.  ಹಾಗಾದರೆ ಕರ್ಮ(ಕರ್ತವ್ಯ)ವನ್ನು ಮಾಡದೆ ನೇರವಾಗಿ ಜ್ಞಾನ ಸಂಪಾದನೆಯನ್ನೇ ಮಾಡಬಹುದಲ್ಲಾ ಎಂದುಕೊಂಡರೆ ಅದೂ ತಪ್ಪಾಗುತ್ತದೆ !. ಕರ್ಮವನ್ನು ಮಾಡುವುದರಿಂದ ಮಾತ್ರ ಅದರ ಬಂಧನದಿಂದ ಬಿಡುಗಡೆ ಹೊಂದಬಹುದೇ ಹೊರತು ಮಾಡದೇ ಇರುವುದರಿಂದಲ್ಲ ( ಬ್ಲಾಗ್ ಪೋಸ್ಟನ್ನು ಬರೆಯುವುದರಿಂದ ಮಾತ್ರವೇ ಆ ಚಟದಿಂದ ಮುಕ್ತರಾಗಬಹುದೇ ಹೊರತು ಬರೆಯದೆ ಸುಮ್ಮನಿರುವುದರಿಂದಲ್ಲ ! ).  ಉಪದೇಶಗಳನ್ನು ಕೇಳುವುದರಿಂದ, ಕೇಳಿದ್ದನ್ನು ಮನನ ಮಾಡುವುದರಿಂದ ಬರುವ ಅನುಭವವು ಉನ್ನತ ಮಟ್ಟದ್ದಾಗಿರುವುದಿಲ್ಲ, *ಜ್ಞಾನಭೂಮಿಕೆ*ಗಳಿಂದ ಪಡೆಯುವ ಅನುಭವವು ಮುಮುಕ್ಷುತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಒಬ್ಬಾತನು ರಾಮಕೃಷ್ಣ ಪರಮಹಂಸರ ಬಳಿಗೆ ತೆರಳಿ "ಮುಮುಕ್ಷುತ್ವ" ಎಂದರೇನು ಎಂದು ಕೇಳಿದನಂತೆ. ಅವರು ವಿವರಣೆ ಕೊಡುವ ಬದಲು ಆತನನ್ನು ಗಂಗಾನದಿಯ ಬಳಿಗೆ ಕರೆದೊಯ್ದು ನದಿಯೊಳಗೆ ನಿಲ್ಲಿಸಿ ಆತನ ಕತ್ತನ್ನು ನೀರಿನೊಳಗೆ ಅದುಮಿ ಹಿಡಿದರಂತೆ. ಆ ಮನುಷ್ಯನು ತನ್ನೆಲ್ಲಾ ಶಕ್ತಿಯನ್ನು ಬಳಸಿ ತಲೆಯನ್ನು ನೀರಿನಿಂದ ಮೇಲೆತ್ತಿದನಂತೆ. "ಯಾಕಯ್ಯ" ಎಂದು ಪರಮಹಂಸರು ಕೇಳಿದರೆ " ಉಸಿರೇ ನಿಂತು ಹೊಗುತ್ತಿತ್ತು" ಎಂದನಂತೆ ಆ ಮನುಷ್ಯ.
"ಇಂತಹ ತೀವ್ರತೆಯೇ ಮುಮುಕ್ಷುತ್ವಕ್ಕೆ ದಾರಿ" ಎಂದರಂತೆ ಪರಮಹಂಸರು !.

೩) ಮಹಾಪುರುಷ ಸಂಶ್ರಯಃ (= ಮಹಾಪುರುಷರ, ಸಜ್ಜನರ ಸಹವಾಸ ಪಡೆಯುವುದು)

’ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಮಾತನ್ನು ಕೇಳಿರುತ್ತೇವೆ. ವೇದಾಂತಿಗಳಾದ ಮಂಡನಮಿಶ್ರರ ಮನೆಯಲ್ಲಿ ಗಿಳಿಗಳೂ ಸಹ ವೇದಾಂತಗಳ ಬಗ್ಗೆ ತರ್ಕವನ್ನು ಮಾಡುತ್ತಿದ್ದುವಂತೆ !.  "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂಬ ಸರ್ವಜ್ಞನ ವಚನವನ್ನು ಓದಿರುತ್ತೇವೆ. ವಿಚಾರಗಳ ತಿಳಿವು ಪಡೆಯಲು ಅರಿತವರೊಂದಿಗೆ, ಮಹಾಪುರುಷರೊಂದಿಗೆ ತರ್ಕಮಾಡಬೇಕೆಂದೇನೂ ಇಲ್ಲ, ಅಂತಹ ಮಹನೀಯರ ನಡುವಿನ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಳ್ಳುವುದರಿಂದಲೇ ಹೆಚ್ಚಿನ ತಿಳಿವನ್ನು ಪಡೆಯಬಹುದು. ಜ್ಞಾನಿಗಳ ಹರಟೆಯ ವಿಷಯಗಳೇ ಆಸಕ್ತರಿಗೆ ಮಹತ್ವವಾಗಿ ಪರಿಣಮಿಸಬಲ್ಲುದು. ಚಾಣಕ್ಯನೆಂಬ ಮಹಾಪುರುಷನ ಸಹವಾಸಕ್ಕೆ ಸಿಲುಕಿದ ಚಂದ್ರಗುಪ್ತನೆಂಬ ಬಾಲಕ ಮುಂದೆ ಮೌರ್ಯ ವಂಶದ ದೊರೆಯಾದದ್ದು ಇತಿಹಾಸ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಮನೋವಿಜ್ಞಾನಿಗಳ ಬಳಿಗೆ ತೆರಳಿ ಸಲಹೆ ಪಡೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯೇ ಆಗಿದೆ. ಅಲ್ಲಿ ಪಡೆಯಬಹುದಾದ ಸಲಹೆಯ ಬಹುಪಾಲು ಅಂಶಗಳು ನಮ್ಮ ಸಂಸ್ಕೃತಿಯ ವೇದೋಪನಿಷತ್ತುಗಳಲ್ಲಿಯೇ ಅಡಗಿದೆ ಎನ್ನುವುದನ್ನು ನಮ್ಮವರೇ (ಜಾಣ) ಮರೆತಿರುವುದು ವಿಪರ‍್ಯಾಸ !.  ಇಂತಹ ಜ್ಞಾನ ದೀವಿಗೆಯನ್ನು ನಮಗಿತ್ತು ಆ ಬೆಳಕಿನಲ್ಲಿ ಅನವರತ ಸಾಗಿರಿ ಎಂದಂತಹ ಮಹಾಪುರುಷರ ಸಹವಾಸ ಇಂದು ಅಗತ್ಯವಾದುದಾಗಿದೆ. ಇಂತಹ ದುರ್ಲಭವಾದ ಸಹವಾಸವನ್ನು ಪಡೆಯುವುದು ಜ್ಞಾನ ಮಾರ್ಗದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
 
|| ದೊರಕದು ಇವು ಮೂರು ದೇವನಂತಃಕರಣವಿಲ್ಲದೆ
 ಮನುಜನಾಗಿರುವುದು, ಮುಕ್ತಿಯು, ಸಜ್ಜನರ ಸಂಗವು ||

***********************************************
ಗ್ರಂಥದ ಮುಂದಿನ ಶ್ಲೋಕವನ್ನು ಗಮನಿಸೋಣ

लब्ध्वा कथन्चित नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्त्यै न यतेत मूढधीः
स आत्महा स्वं विनिहन्त्यसद्ग्रहात ॥४॥

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ |
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಢಧೀಃ ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ ||೪||

ಈ ಸೂಕ್ತಿಯು ಮೇಲಿನ ಮೂರನೆಯ ಸೂಕ್ತಿಗೆ ಪೂರಕವಾದ  ಶ್ಲೋಕವಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ (= ಕದಾಚಿತ್ (ಆಕಸ್ಮಿಕವಾಗಿ) ದೊರಕಿರುವ ದುರ್ಲಭವಾದ ನರಜನ್ಮ)
ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ (= ವೇದಾಂತದರಿವಿಗೆ ಬೇಕಾದ  ಪುರುಷತ್ವ)
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಡಧೀಃ (= ತನ್ನ ಮುಕ್ತಿಗಾಗಿ ಯತ್ನಿಸದ ಮೂಳ (ದಡ್ಡ))
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ (= ಆತ್ಮಘಾತುಕತನ)

ಹೀಗೆ ಆಕಸ್ಮಿಕವಾಗಿ ದೊರೆತಿರುವ ದುರ್ಲಭವಾದ ಮಾನವ ಜನ್ಮವಿದ್ದು ವೇದಾಂತದ, ಆತ್ಮ ಜ್ಞಾನದ ಅರಿವಿಗೆ ಬೇಕಾದ ಪುರುಷತ್ವವೂ ಇದ್ದು ತನ್ನ ಮುಕ್ತಿಗಾಗಿ ಯತ್ನಿಸದವನು ಮೂರ್ಖನು ಮತ್ತು ಹಾಗೆ ಮಾಡುವುದು ತನ್ನನ್ನೇ ತಾನು ಹತ್ಯೆ ಮಾಡಿಕೊಂಡತಾಗುತ್ತದೆ , ಹೇಗೆಂದರೆ ಮಿಥ್ಯೆ ಎನ್ನುವ ಈ ಜಗತ್ತನ್ನೇ ನಂಬುವುದರ ಮೂಲಕ ಎಂದು ಹೇಳಲಾಗಿದೆ. (’ಜಗನ್ಮಿಥ್ಯಾ’ ಎನ್ನುವುದಕ್ಕೆ ಮುಂದಿನ ಸೂಕ್ತಿಗಳಲ್ಲಿ ಸಾಕಷ್ಟು ವಿವರಣೆಗಳು ಬರಲಿದೆ)

************************

ಗ್ರಂಥದ ಐದನೆಯ ಸೂಕ್ತಿಯನ್ನು ನೋಡೋಣ

इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्यतत्रापि पौरुषम् ॥५॥

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ |
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ ||೫||

ಈ ಸೂಕ್ತಿಯೂ ಸಹ ಮೇಲಿನ ಎರಡು ಮತ್ತು ಮೂರನೆಯ ಶ್ಲೋಕಗಳಿಗೆ ಪೂರಕವಾಗಿ ಹೇಳಿದುದಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಇತಃ ಕೋನ್ವಸ್ತಿ  ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ (=  ತನ್ನ ಹಿತವನ್ನೇ ಕಾಯ್ದುಕೊಳ್ಳದ ಮೂಢ )
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ (= ದುರ್ಲಭವಾದ ಮನುಷ್ಯಜನ್ಮ ಮತ್ತು ಪೌರುಷವನ್ನು ಪಡೆದು)

ಪ್ರಾಣಿಗಳಲ್ಲೇ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದು, ಪುರುಷತ್ವವನ್ನೂ ಪಡೆದು ಧರ್ಮಮಾರ್ಗದಲ್ಲಿ ನಡೆಯುವ ಅಧಿಕಾರವನ್ನು ಪಡೆದು ಆತ್ಮಾನಾತ್ಮ ವಿವೇಚನೆಯನ್ನೂ ಪಡೆದು ಮನುಷ್ಯತ್ವ ಮುಮುಕ್ಷುತ್ವಗಳನ್ನೂ ತಿಳಿದು ಮಹಾಪುರುಷರ ಸಹವಾಸವನ್ನು ಹೊಂದಿದರೂ ಸಹ ತನ್ನ ಹಿತವನ್ನು ಕಾಪಾಡಿಕೊಳ್ಳಲಾಗದವನನ್ನು(ಕಾರ್ಯವನ್ನು ಜಯಿಸುವ ಸಾಮರ್ಥ್ಯವನ್ನು ತೋರದವನು)  ಮೂಢನೆನ್ನದೆ ಏನನ್ನಬೇಕು?. ಅಂತಹವನು ಮಹಾ ಮೂರ್ಖನೇ ಸರಿ ಎಂದು ಹೇಳಲಾಗಿದೆ. ಹೀಗೆ ಐದು ಸೂಕ್ತಿಗಳಲ್ಲಿ ಮುಕ್ತಿಯ ಮಹತ್ವವನ್ನು ಶ್ರೀ ಶಂಕರರು ತಿಳಿಸಿದ್ದಾರೆ.

ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
----------------------------------------------------------------------------------------------------------

ಟಿಪ್ಪಣಿ :

*ಜ್ಞಾನ ಭೂಮಿಕೆಗಳು * (ಸ್ವಾನುಭವಕ್ಕೆ ಪೂರಕವಾದ ಸಂಗತಿಗಳು) ಒಟ್ಟು ಏಳು. ಅವು ಹೀಗಿವೆ.

೧) ಶುಭೇಚ್ಛೆ = ತಾನಿನ್ನೂ ಮೂಳನಾಗಿಯೇ ಇದ್ದೇನೆ, ಧರ್ಮಶಾಸ್ತ್ರಗಳಿಂದ ಮತ್ತು ಸಜ್ಜನರ ಸಹವಾಸದಿಂದ ಆತ್ಮಜ್ಞಾನವನ್ನು ಪಡೆಯಬೇಕು ಎಂಬ ಆಸಕ್ತಿ ಬರುವುದೇ ಶುಭೇಚ್ಛೆ.
೨) ವಿಚಾರಣಾ = ಶಾಸ್ತ್ರಗಳನ್ನು ತಿಳಿದು ಜ್ಞಾನಿಗಳ ಸಹವಾಸವನ್ನು ಪಡೆದು ಸನ್ಮಾರ್ಗದಲ್ಲಿ, ಸದಾಚಾರದಲ್ಲಿ ನಡೆಯುವುದು ವಿಚಾರಣಾ.
೩) ತನುಮಾನಸೀ = ಮೇಲಿನ ಎರಡು ಭೂಮಿಕೆಗಳ ಅಭ್ಯಾಸದಿಂದ ಇಂದ್ರಿಯ ವಿಷಯಗಳಲ್ಲಿ ಉಂಟಾಗುವ ಅತಿಯಾದ ದೌರ್ಬಲ್ಯವನ್ನು ಕಳೆದುಕೊಂಡು ಸಾಮರ್ಥ್ಯವನ್ನು ಪಡೆಯುವುದು ತನುಮಾನಸೀ.
೪) ಸತ್ವಾಪತ್ತಿ = ಮೇಲಿನ ಮೂರು ಅನುಭವ ಮೂಲವಾದ ವಿಷಯಗಳ ಅನುಸರಣೆಯಿಂದ ಹುಟ್ಟುವ ಸತ್ವಗುಣ ಅಥವಾ ನೆಮ್ಮದಿಯ, ಶಾಂತಿಯ ಭಾವವೇ ಸತ್ವಾಪತ್ತಿ.
೫) ಅಸಂಸಕ್ತಿ = ಮೇಲೆ ಹೇಳಿದ ನಾಲ್ಕು ಭೂಮಿಕೆಗಳ ಅಭ್ಯಾಸದಿಂದ ಹೊರಗಿನ ವಿಷಯಗಳಲ್ಲಿ ( ಪ್ರಾಪಂಪಚಿಕ ಸುಖಗಳು) ಅತಿಯಾದ ಆಸಕ್ತಿಯು ನಿವಾರಣೆಯಾಗಿ ನೆಮ್ಮದಿಯ ಭಾವವೇ ವಾಡಿಕೆಯಾಗುವ ಅವಸ್ಥೆಯೇ ಅಸಂಸಕ್ತಿ.
೬) ಪದಾರ್ಥಭಾವನೀ = ಮೇಲೆ ಹೇಳಿದ ಐದು ಭೂಮಿಕೆಗಳ ಅನುಸರಣೆಯಿಂದ ಅಂತರ್ಬಾಹ್ಯ ವಿಷಯಗಳ ಬಗ್ಗೆ ನಿರ್ಲಿಪ್ತತೆಯುಂಟಾಗಿ ಕೇವಲ ಜ್ಞಾನದಿಂದಲೇ ಅವೆಲ್ಲವನ್ನೂ ತಿಳಿಯುವುದು ಪದಾರ್ಥಭಾವನೀ .
೭) ತುರ್ಯಗಾ = ಮೇಲಿನ ಆರೂ ಭೂಮಿಕೆಗಳ ಸತತ ಅಭ್ಯಾಸ ಮತ್ತು ಅನುಸರಣೆಯಿಂದ ಮನಸ್ಸು ಮತ್ತು ಬುದ್ಧಿಯು ಚಂಚಲಗೊಳ್ಳದೆ ಒಂದೇ ಸ್ವಭಾವವು ಜೀವಿಯಲ್ಲಿ ನೆಲೆಗೊಳ್ಳುವುದು ತುರ್ಯಗಾ.

-----------------------------------------------------------------

ವಂದನೆಗಳೊಂದಿಗೆ.

Jul 19, 2011

ವಿವೇಕ ಚೂಡಾಮಣಿ -೨-ಯಾವುದು ಮಿಗಿಲು ?/The Crest-Jewel of Wisdom

ಪ್ರಕರಣ ಗ್ರಂಥದ ಆರಂಭ
---------------------


जंतूनां नरजन्म दुर्लभमतः पुंस्त्वं ततो विप्रता
तस्माद्   वैदिकधर्ममार्गपरता विद्वत्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसु कृतैः पुण्यैर्विना लभ्यते ॥२॥


ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕ ಧರ್ಮಮಾರ್ಗಪರತಾ ವಿದ್ವತ್ವಮಸ್ಮಾತ್ ಪರಮ್ |
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ
ಮುಕ್ತಿರ್ನೋ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ ||೨||

ಗ್ರಂಥದ ಆರಂಭ ಶ್ಲೋಕವೇ ಚರ್ಚೆಗೀಡುಮಾಡುವಂತಹುದಾಗಿದೆ. ಸರಳವಾಗಿ ಈ ಸೂಕ್ತದ ಭಾವಾರ್ಥವನ್ನು ತಿಳಿಯುವುದಾದರೆ "ಪ್ರಾಣಿಗಳಿಗೆ ಮಾನವ ಜನ್ಮವು ದುರ್ಲಭ. ಅದರಲ್ಲಿ ಪುರುಷತ್ವ, ವಿಪ್ರತ್ವ, ಧರ್ಮಮಾರ್ಗ ಪರತ್ವ ಮತ್ತು ಶಾಸ್ತ್ರಾರ್ಥ ಜ್ಞಾನವು ಒಂದಕ್ಕಿಂತ ಒಂದು ಮಿಗಿಲಾದವುಗಳು ಮತ್ತು ಬೇಕೆಂದಾಗ ಸಿಗದಿರುವಂತಹವು. ಅದರಲ್ಲೂ ಅಳಿವು-ಉಳಿವುಗಳ ಅರಿವನ್ನು ತಿಳಿದು ಆತ್ಮಜ್ಞಾನವನ್ನು ಪಡೆಯುವುದು ಇನ್ನೂ ಮಿಗಿಲಾದುದು. ಇವೆಲ್ಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಲ್ಲದೆ ದೊರೆಯಲಾರದು " .

ದೊರಕದು ಮಾನವಜನ್ಮವದರೊಳು ದೊರಕದು ಪುರುಷತ್ವವು
ಸಿಗದು ವಿಪ್ರತ್ವವದಕಿಂತ ಮಿಗಿಲು ಧರ್ಮದಾಯಿತ್ವವವು
ದೊರಕದು ದಿಟದ ಮೇಲರಿಮೆ ತನ್ನ ತಾನರಿಯದೆ
ಮುಕ್ತನಾಗನು ಕೋಟಿ ಜನುಮಗಳ ಪುಣ್ಯಾಂಶವಿರದೆ 

ಹುಟ್ಟುವ ಗುಣವುಳ್ಳ ಪ್ರಾಣಿಗಳಲ್ಲೆಲ್ಲಾ ಮಾನವ ಜನ್ಮವು ದೊಡ್ಡದು ಮತ್ತು  ಬೇಕೆಂದಾಗಲೆಲ್ಲಾ ಸಿಗುವಂತಹುದಲ್ಲ. ಮಾನವ ಪ್ರಾಣಿಗೆ ದೊರಕುವಷ್ಟು ಸೌಕರ್ಯಗಳು ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ.  ’ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಎಂದು ದಾಸರು ಹಾಡಿದ್ದಾರೆ, ಹಾಗಾಗಿ ಬೇರೆ ಜನ್ಮಗಳೂ ಇದೆಯೆಂದಾಗುತ್ತದೆ. ಒಬ್ಬನಿಗೇ ಬೇರೆ ಜನ್ಮಗಳು ಇದೆ ಎಂದಾದಲ್ಲಿ ಜೀವಸ್ವರೂಪನಾದ ಆತ್ಮನು ಶರೀರಕ್ಕಿಂತಲೂ ಬೇರೆ ಎಂದಾಗುತ್ತದೆ. ಹಳೆಯದಾದ ಬಟ್ಟೆಯನ್ನು ತಗೆದುಹಾಕಿ ಹೊಸತನ್ನು ಉಡುವಂತೆ ಆತ್ಮವು ಒಂದೇ ಆದರೂ ಶರೀರವು ಹಲವು ರೂಪಗಳನ್ನು ಪಡೆಯುತ್ತದೆ ಎಂದು ತಿಳಿಯಬೇಕಾಗುತ್ತದೆ. ’ಪಡೆದುಕೊಂಡು ಬಂದದ್ದು’ ಎಂದು
ಹೇಳುವಾಗ ಎಲ್ಲಿಂದ ಪಡೆದುಕೊಂಡು ಬಂದದ್ದು ಎಂಬದೂ ಮುಖ್ಯವಾಗುತ್ತದೆ. ಮಾನವನಿಗೆ ಸಂಪಾದನೆಯಿಂದ ಬರುವುದಕ್ಕಿಂತಲೂ ಸಂದಾಯವಾಗಿ ಬಂದಿರುವುದೇ ಹೆಚ್ಚು. ಆಡುವ ಮಾತು, ಆಹಾರ ಪದ್ಧತಿ, ಉಡುಗೆ-ತೊಡುಗೆ ಮತ್ತು ತನ್ನ ಸುತ್ತಲಿನ ಪರಿಸರದಿಂದ ತಾನು ಪಡೆದುಕೊಂಡು ಬೆಳೆದು ಬಂದದ್ದು , ಇವೆಲ್ಲವೂ ಸಂದಾಯವಾಗಿಯೇ ಬರುವಂತಹವು. "ಅಪ್ಪನಂತೆ ಮಗನಿಗೂ ಮುಂಗೋಪ" ಎಂದು ಹೇಳುವುದನ್ನು ಕೇಳಿರುತ್ತೇವೆ. ಮಗನಿಗೆ ಅಪ್ಪನಿಂದ ಅಂತಹ ವಂಶವಾಹಿನಿಗಳು (Genes) ಹರಿದುಬಂದಿರುತ್ತವೆ. ತಾಯಿಯಿಂದಲೂ, ತಾತನಿಂದಲೂ ಬರಬಹುದು. ’ನಾನು ನಾನೇ’ ಎಂದು ಎಷ್ಟು ಹೇಳಿಕೊಂಡರೂ ಹಿಂತಿರುಗಿ ನೋಡಿದಾಗ ಪಡೆದುಕೊಂಡು ಬಂದಿರುವುದೆಷ್ಟು ಎಂಬುದು ಅರಿವಾಗುತ್ತದೆ.  ಶತಾವಧಾನಿ ಗಣೇಶರು ಹೇಳುವಂತೆ "ಜನ್ಮಾಂತರಗಳನ್ನು ನಂಬದವರು ವಂಶವಾಹಿನಿಗಳನ್ನಾದರೂ ನಂಬಲೇಬೆಕು !" . ಮಾನವ ಜನ್ಮದ ಉಪಯೋಗಗಳು ನಮಗೆಲ್ಲಾ ಅನುಭದಿಂದಲೇ ತಿಳಿಯುತ್ತಿರುವುದರಿಂದ
’ಜಂತೂನಾಂ ನರಜನ್ಮ ದುರ್ಲಭಂ" ಎನ್ನುವುದನ್ನು ಮಾನವ ಪ್ರಾಣಿಗಳೆಲ್ಲರೂ ಒಪ್ಪಲೇಬೇಕಾಗುತ್ತದೆ.

ಮನುಷ್ಯ ಜನ್ಮವೇನೋ ದೊಡ್ಡದು ಆದರೆ ಪುರುಷನಾಗಿ ಹುಟ್ಟುವುದು ಅದಕ್ಕಿಂತಲೂ ಮಿಗಿಲಾದುದೆ ? !.  ಹಲವು ಋಷಿಕೆಯರಿಂದ ರಚಿಸಲ್ಪಟ್ಟಿರುವ ಸೂಕ್ತಗಳನ್ನು ನಾವು ಋಗ್ವೇದದಲ್ಲಿಯೇ ಕಾಣಬಹುದು. ಮಹಿಳೆಯರಿಗೆ ವೇದಾಧ್ಯಯನದ ಜೊತೆಗೆ ಸಂಸ್ಕಾರಗಳಲ್ಲೂ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಋಗ್ವೇದದ ಅಧ್ಯಯನದಿಂದಲೇ ತಿಳಿಯಬಹುದು.  ಮನಗೆ ಬಂದ ಸೊಸೆಯನ್ನು ಸಾಮ್ರಾಜ್ಞಿಯಂತೆ (ರಾಣಿ) ಕಾಣು ಎಂದು ಋಗ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಪುರುಷನಾಗಿ ಹುಟ್ಟುವುದು ಮಿಗಿಲೇಕೆ ? . ಪುರುಷನಾಗಿ ಹುಟ್ಟಿದರೂ ಪುರುಷತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಆತನನ್ನೂ ಸ್ತ್ರೀ ಸ್ವಭಾವದಿಂದಲೇ ಗುರುತಿಸಬೇಕಾಗುತ್ತದೆ.  ’ಕಿರಣ್  ಬೇಡಿ’ ಹೆಣ್ಣಾದರೂ ಅವರಲ್ಲಿದ್ದ ಪುರುಷತ್ವದಿಂದ ಅವರೊಬ್ಬ ಧೈರ್ಯಶಾಲಿ ಆರಕ್ಷಕ ಅಧಿಕಾರಿಯಾದರು. ಪುರುಷತ್ವ ಎನ್ನುವುದು ಗಂಡಸುತನ ಎನ್ನುವುದಕ್ಕೆ ಸಮನಾರ್ಥಕವಾಗಿ ಕಂಡರೂ ಅದು ಗಂಡಸರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಹೆಣ್ಣಿಗೂ ಅನ್ವಯಿಸುತ್ತದೆ.
ಹೆಣ್ಣಿನ ’ಹೈ ಪಿಚ್’ ಗಾಯನಕ್ಕೆ ಗಂಡು ಸರಿಸಾಟಿಯಾಗಲಾರ !. ಪುರುಷತ್ವ ಎಂದರೆ, ಧೈರ್ಯ, ಆತ್ಮಸ್ಥೈರ್ಯ,  ಮನೋಬಲ ಮುಂತಾದ ಧನಾತ್ಮಕ ಅಂಶಗಳ ಸಂಕೇತ. ಇಂತಹ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮಾನವ ಜೀವಿಯು ಪುರುಷತ್ವ( masculine dimesion) ವನ್ನು ಪಡೆಯುತ್ತಾನೆ.

’ವಿಪ್ರ’ನಾಗಿರುವುದು ಇನ್ನೂ ಮಿಗಿಲಾದುದು ಎಂದು ಹೇಳಲಾಗಿದೆ. ವಿಪ್ರನೆಂದರೆ ಬ್ರಾಹ್ಮಣ ಎಂದು ಅರ್ಥವಿದೆ.  ಹಾಗಾದರೆ ಜಾತೀಯ ಬ್ರಾಹ್ಮಣರು ಮಾತ್ರ ಶ್ರೇಷ್ಠರೆ ? ಉಳಿದವರು ಅಧಮರೆ ?. ಜಾತಿಯಿಂದ ಯಾರೂ ಬ್ರಾಹ್ಮಣ ರಾಗಲಾರರು ಎಂದು ವೇದಾಂತವೇ ಹೇಳುತ್ತದೆ. ಬ್ರಹ್ಮಜ್ಞಾನವನ್ನು ಅರಿತವನೇ ಬ್ರಾಹ್ಮಣ ಎಂದು ಶ್ರುತಿಗಳು ಸಾರಿವೆ. ವ್ಯಾಪಾರಿಗಳಿಗೆ, ರಾಜರುಗಳಿಗೆ ಬ್ರಹ್ಮಜ್ಞಾನದ ಜಿಜ್ಞಾಸೆಗೆ ಚಿಂತನೆಗೆ ಕಾಲಾವಕಾಶಗಳು ಕಡಿಮೆ ಇರುತ್ತಿದ್ದರಿಂದ ಮತ್ತು ಅವರ ಮನಸು ಹೊಯ್ದಾಟಗಳಿದ ಕೂಡಿರುವುದರಿಂದ ಅವರನ್ನು ವಿಪ್ರ ಅಥವಾ ಬ್ರಾಹ್ಮಣ ಎಂದು ಕರೆಯಲಾಗದು ಎಂಬ ಅಭಿಪ್ರಾಯವು ವ್ಯಕ್ತವಾಗುತ್ತದೆ. ಯಾರ್ಯಾರು ಬ್ರಹ್ಮನನ್ನು ಅರಿಯುವರೋ ಅವರೆಲ್ಲರೂ ವಿಪ್ರರೆ. ಜ್ಞಾನಮಾರ್ಗದಲ್ಲಿ ಎಲ್ಲರೂ ನಡೆಯಬಹುದು ಆದರೆ ಕರ್ಮಮಾರ್ಗದಲ್ಲಿ ನಡೆಯಲು ಕೆಲವರಿಗೆ ಮಾತ್ರ ಸಾಧ್ಯ. ವೈದ್ಯಶಾಸ್ತ್ರವನ್ನು ಎಲ್ಲರೂ ಓದಿ ತಿಳಿದುಕೊಳ್ಳಬಹುದು ಆದರೆ ಶಾಸ್ತ್ರದ ಪ್ರಯೋಗ ಮಾಡಲು ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಅಥವಾ ನುರಿತ ವೈದ್ಯರು ಮಾತ್ರ ಅರ್ಹರಾಗುತ್ತಾರೆ.

ಬ್ರಹ್ಮಜ್ಞಾನವನ್ನು ಪಡೆದವನು ಒಳ್ಳೆಯ ದಾರಿಯಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಧರ್ಮಾಧರ್ಮಗಳ ವಿಚಾರಗಳನ್ನು ವಿವರಿಸಬೇಕಾಗುತ್ತದೆ. ವೈದಿಕ ಧರ್ಮಮಾರ್ಗವೆಂದರೆ ಶಾಸ್ತ್ರಗಳನ್ನು ಗೌರವಿಸಿ ಅದರಂತೆ ನಡೆಯುವುದು ಎಂದು ಅರ್ಥ. ಧರ್ಮಶಾಸ್ತ್ರಗಳು ಸಾಮಾನ್ಯರಿಗೆ (ordinary ) ವಿಷಯಾಸಕ್ತರಿಗೆ ಇರುವಂತಹುದಾಗಿದ್ದು ಅಸಾಮಾನ್ಯರಿಗೆ(extrordinary) ,ಅಸಾಧಾರಣರಿಗೆ ಯಾವ ಶಾಸ್ತ್ರಗಳೂ ಇಲ್ಲ !.
ಸಮಾಜಕ್ಕೆ ಒಳಿತಾಗುವಂತಹ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಟ್ಟುಕೊಂಡು ಧರ್ಮಾಧರ್ಮಗಳ ವಿವೇಚನೆಯಿಟ್ಟುಕೊಂಡು ಜ್ಞಾನಮಾರ್ಗದಲ್ಲಿ ನಡೆಯುವುದು ಬ್ರಹ್ಮಜ್ಞಾನಿಯಾದವನ ಕರ್ತವ್ಯವಾಗಿರುತ್ತದೆ. ಕೇವಲ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ ಎಂದು ಮುಂತಾಗಿ ಕರೆಯಿಸಿಕೊಳ್ಳುವುದು ಶಾಸ್ತ್ರಸಮ್ಮತವಲ್ಲ, ಧರ್ಮಶಾಸ್ತ್ರಗಳ ಅನುಷ್ಠಾನದಿಂದ ಮಾತ್ರವೇ ವಿಪ್ರತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಲಾಗಿದೆ. ಅಂತಹ ಜ್ಞಾನವನ್ನು ಪಡೆಯಲು ಮಾನವನು ವೈದಿಕ ಧರ್ಮಮಾರ್ಗದಲ್ಲಿ ನಡೆಯಬೇಕಾಗುತ್ತದೆ ಮತ್ತು ಅಂತಹ ಜ್ಞಾನಿಯು ಎಲ್ಲರಿಗೂ ಮಿಗಿಲಾದವನು ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಯಾರೋ ಒಬ್ಬನನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಲ್ಲ, ಎಲ್ಲರಿಗೂ ಅನ್ವಯವಾಗುವಂತೆ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ. ಜ್ಞಾನಿಗಳು ಅದನ್ನು ತಮಗೆ ಬೇಕಾದಂತೆ ಸರಿಯಾಗಿ ಬಳಸಿಕೊಳ್ಳತ್ತಾರೆ.  ಅನಾಸಕ್ತರಿಗೆ ಯಾವ ಶಾಸ್ತ್ರಗಳೂ ಇಲ್ಲ .

ಆತ್ಮ ಮತ್ತು ಅನಾತ್ಮಗಳ ವಿವೇಚನೆಯುಳ್ಳವನು ಇನ್ನೂ ದೊಡ್ದವನೆಂದು ಹೇಳಲಾಗಿದೆ.  ಅಳಿವು ಮತ್ತು ಉಳಿವಿನ ಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ. ಅಳಿದುಹೋಗುವ ದೇಹದ ಚಿಂತೆಯನ್ನು ಬಿಟ್ಟು ಸದಾಕಾಲ ಉಳಿಯುವ ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ , ಧ್ಯಾನದಿಂದ ಯೋಗಗಳಿಂದ  ತಿಳಿಯುವರೋ ಮತ್ತು ಅಂತಹ ಸ್ವಾನುಭೂತಿಯಿಂದ ಸೃಷ್ಟಿಯಲ್ಲಿ ತಮ್ಮನ್ನು ತಾವು ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿಕೊಳ್ಳವರೋ ಅವರು ಎಲ್ಲರಿಗಿಂತಲೂ, ಎಲ್ಲದಕ್ಕಿಂತಲೂ ಮಿಗಿಲಾದವರು ಎಂದು ಹೇಳಲಾಗಿದೆ. ಮಾನವನಿಗೆ ಒಳಿತು-ಕೆಡುಕುಗಳನ್ನು ವಿವೇಚಿಸುವ ವ್ಯವಧಾನವಿರಬೇಕು ಮತ್ತು ಸ್ವಂತ ಬುದ್ಧಿಯಿಂದ ಶಾಶ್ವತ-ಕ್ಷಣಿಕವಾದುವುಗಳ ಬಗ್ಗೆ ಅರಿಯುವ , ಅದರಂತೆ ಒಳ್ಳೆಯ ದಾರಿಯಲ್ಲಿ ನಡೆಯುವ ವಿವೇಕವಿರಬೇಕು.
ಇವೆಲ್ಲವೂ ಸುಮ್ಮನೆ ಸಿಗುವಂತಹುದಲ್ಲ ಮತ್ತು ಇವುಗಳೆಲ್ಲವೂ ದೊರಕಿ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ನೂರು ಕೋಟಿ ಜನ್ಮಗಳ ಪುಣ್ಯಫಲವಿರಬೇಕು ಎನ್ನಲಾಗಿದೆ. ಅಂತಹ ಪುಣ್ಯಾಂಶವಿಲ್ಲದೆ ಮೇಲಿನ ಯಾವ ಜ್ಞಾನವೂ ದೊರಕುವಿದಿಲ್ಲ ಮತ್ತು ಮುಕ್ತನಾಗಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

ವಂದನೆಗಳೊಂದಿಗೆ....

Jul 11, 2011

ಏಕಾಶೀ ಉಪಾಸ..

ಸುಮ್ನೆ ,  ಜನ ಚೇಂಜ್ ಕೇಳ್ತಾರೆ ನೋಡಿ ಅದಕ್ಕೆ. ಇಂದು ಪ್ರಥಮ ಏಕಾದಶಿ ಉಪವಾಸದ ದಿವಸ. ಯಾರ್ಯಾರು ಹೇಗೆ ವನವಾಸ ಪಟ್ರೋ ಗೊತ್ತಿಲ್ಲ :) ನಮ್ ಸುಬ್ಬಮ್ನೋರ ಉಪಾಸದ ಕತೆ ಇಲ್ಲಿ ಕೇಳಿ. ರಾಜು ಅನಂತಸ್ವಾಮಿ ಕಂಠದಲ್ಲಿ.

*******


ಆಚೆ ಮನೆ ಸುಬ್ಬಮ್ನೋರ್ದು ಏಕಾದಶಿ ಉಪಾಸ
ಏಲ್ಲೋ ಸೊಲ್ಪ ತಿಂತಾರಂತೆ
ಅವಲಕ್ಕಿ ಉಪ್ಪಿಟ್ತು ಪಾಯ್ಸ  ||ಪ||

ಮೂರೋ ನಾಲ್ಕೋ ಬಾಳೇಹಣ್ಣು ಸೊಲ್ಪ ಚಕ್ಲೀ ಕೊಡ್ಬಳೇ
ಗಂಟೇಗ್ ಎರಡು ಕಿತ್ಲೇ ಹಣ್ಣು ಆದಾಗೊಂದು ಸೀಬೇಹಣ್ಣು

ಆಚೆಮನೆ |ಪ|


ಮಧ್ಯಾಹ್ನ್ವೆಲ್ಲಾ ರವೇಉಂಡೆ ಹುರುಳಿಕಾಳಿನ್ ಉಸ್ಲಿ
ಒಂದೊಂದ್ಸಲ ಬಿಸ್ಬಿಸಿ ಸಂಡ್ಗೆ ಒಂದೋ ಎರಡೋ ಇಡ್ಲಿ

ಆಚೆಮನೆ |ಪ|

ರಾತ್ರೆ ಪಾಪ ಉಪ್ಪಿಟ್ಟೇನೆ ಲೋಟದ್ ತುಂಬಾ ಹಾಲು
ಅರೇ... ಚೊಂಬಿನ್ ತುಂಬಾ ಹಾಲು |೨|
ಪಕ್ಕದ್ ಮನೆ ರಾಮೇಗವುಡರ್ ಸೀಮೆ ಹಸುವಿನ್ ಹಾಲು

ಆಚೆಮನೆ |ಪ|

ರಚನೆ : ಜಿ.ಪಿ. ರಾಜರತ್ನಂ

ಈ ಹಾಡನ್ನು ಇಲ್ಲಿ ಕೇಳಿ  :)

">

Jul 3, 2011

ವಿವೇಕ ಚೂಡಾಮಣಿ -೧- ತಲೆಬಾಗುವೆ ತಂದೆಗೆ/Viveka chudamani/The Crest-Jewel of Wisdom


ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ.  ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ.  ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂ ಬಹುದು ಅಥವಾ ಬಂದಿಲ್ಲದೇ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ.  ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ  ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.

ಗ್ರಂಥದ ಆರಂಭದ ಶ್ಲೋಕವು ಹೀಗಿದೆ


सर्व वेदांतसिद्धांत गोचरमं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥



ಸರ್ವವೇದಾಂತ ಸಿದ್ಧಾಂತ ಗೋಚರಂ ತಂ ಅಗೋಚರಮ್ |
ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್ ||೧||

ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ.  ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
 ಆ ಗುರುಗಳಾದರೂ ಎಂತಹವರು ?  ಅವರು ಕಣ್ಣಿಗೆ ಕಾಣುವವರಲ್ಲ,  ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ,  ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .

ದೇಹಕೆ ಸಿಲುಕದ
ಮನಸಿಗೆ ನಿಲುಕದ
ಅರಿವಿಗೆ ತೋರುವ
ಗುರು ಗೋವಿಂದಗೆ
ತಲೆ ಬಾಗಿಸುವೆ          

     ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ.  ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ.  ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ.  ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು  ಶಂಕರರು ಹೇಳುತ್ತಾರೆ.

ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ  ಯಾವಾಗಲೂ ಕಾಣಿಸುತ್ತಾರೆ.  ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ  ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,

ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"
ಎಂದು ಹೇಳುತ್ತಾರೆ.  ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ.  ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.
ಇಲ್ಲಿ ನಮ್ಮ ಕನ್ನಡಕ್ಕೊಬ್ಬರೇ ಕೈಲಾಸಂ ಸಿಡಿಸಿರುವ ಜೋಕೊಂದನ್ನು ನೆನಪಿಸಿಕೊಳ್ಳಬಹುದು

ಆತ : ಗುರುವೇ ಕೇಳುದ್ರಾ, ಆ ಗಣ್ಯ ವ್ಯಕ್ತಿಗಳು ಇವತ್ತು ಹೋಗ್ಬಿಟ್ರಂತೆ !
ಕೈಲಾಸಂ : "ಹೌದೇ, ! ಹೋಗ್ಬಿಟ್ರೇ ?  ....ಛೇ, ಒಳ್ಳೇ ಅವರೇಕಾಯಿ ಸೀಸನ್ನೂsss ಪಾಪ, .... ಹೀಗಾಗ್ಬಾರ್ದಿತ್ತು "

ಅಂದ್ರಂತೆ !. ಇಲ್ಲಿ ಕೈಲಾಸಂರನ್ನು ಕೂಡಾ ಸ್ಥಿತಪ್ರಜ್ಞರೆಂದೇ ಭಾವಿಸಿಕೊಳ್ಳಬಹುದು! .

ಮುಂದಿನ ಬರಹದಲ್ಲಿ ವಿವೇಕ ಚೂಡಾಮಣಿಯ ಆರಂಭದ ಮೊದಲ ಸೂಕ್ತಿಯನ್ನು ತಿಳಿಯೋಣ.

ವಂದನೆಗಳೊಂದಿಗೆ,

Jun 24, 2011

ವಿವೇಕ ಚೂಡಾಮಣಿ./Viveka Chudamani/The Crest-Jewel of Wisdom




ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ. ಭಾರತೀಯ ಪುರಾತನ  ತತ್ತ್ವಶಾಸ್ತ್ರದ  ರಚನಕಾರರು, ಪುರಾತನ ಗುಡಿ-ಕೋಟೆಗಳನ್ನು ಕಟ್ಟಿದವರು, ನಾಗರೀಕ ಜೀವನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅನೇಕ ಮಹಾಮಹಿಮರುಗಳ ಹೆಸರುಗಳು ನಮಗೆ ನಿಶ್ಚಿತವಾಗಿ ದೊರಕುವುದಿಲ್ಲ. ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳಾದ ವೇದೋಪನಿಷತ್ತುಗಳೂ ಸಹ ಇಂತಹ ಅನೇಕ ಅನಾಮಧೇಯ ದೃಷ್ಟಾರರಿಂದಲೇ ಬೆಳಕಿಗೆ ತೆರೆದುಕೊಂಡಿವೆ. ವೇದ-ವೇದಾಂಗಗಳು ಮಾನವನಿಂದ ರಚಿತವಾದವುಗಳಲ್ಲ (ಅಪೌರುಷೇಯ) ಎಂಬ ವಿಚಾರವಿದ್ದರೂ ಮಾನವಕೋಟಿಗೆ ವೇದೋಪನಿಷತ್ತುಗಳ ಸಾರವನ್ನು ತಿಳಿಸಿಕೊಟ್ಟ ಅನೇಕ ಜ್ಞಾನಿಗಳ-ಗುರುಗಳ ವಿವರಗಳು ತಿಳಿದುಬಂದಿಲ್ಲ.  ಸೃಷ್ಟಿಯ ಅನೇಕ ವಿಚಿತ್ರಗಳನ್ನು ವೈವಿಧ್ಯಗಳನ್ನು ಸಾವಿರಾರು ವರುಷಗಳಷ್ಟು ಹಿಂದೆಯೇ ಕಂಡುಕೊಂಡು ಆ ಸತ್ಯಗಳನ್ನು ಉಪನಿಷತ್ತುಗಳ ಮೂಲಕ ತೆರೆದಿಟ್ಟ ಋಷಿಗಳನ್ನು,  ಯಂತ್ರಗಳ ಸಹಾಯದಿಂದಲೇ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿರುವ ಮಾನವನೊಂದಿಗೆ ಹೋಲಿಸಬಹುದೇ ? . ಜಗತ್ತಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವನು ಅನೇಕ ತಾಂತ್ರಿಕ-ವೈಜ್ಞಾನಿಕ ವಸ್ತು-ವಿಧಾನಗಳನ್ನು ಅನ್ವೇಶಿಸಿಕೊಂಡು ತನ್ನ ಬದುಕನ್ನು ನಾಜೂಕಿನ ಗರಡಿಯೊಳಗೆ ದೂಡಿ ಪಳಗಿ ಹೊರಬಂದು ಸ್ವಾರ್ಥದ ಬದುಕನ್ನು ನೆಡೆಸುತ್ತಿರುವ ಇಂದಿನ ಕಾಲಮಾನದ  ಜನಕ್ಕೆ ಉಪನಿಷತ್ತುಗಳ ಸಾರವಾಗಲೀ ಅದರ ಆವಶ್ಯಕತೆಯಾಗಲೀ ಪ್ರಸ್ತುತವಾಗಬಲ್ಲುದೆ ?.  ಭಗವದ್ಗೀತೆಯು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖವಾದ ಮತ್ತು ಪವಿತ್ರವಾದ ಗ್ರಂಥವೆಂದು ಗಣಿಸಲ್ಪಟ್ಟಿದೆ. ಅಲ್ಲಿ ಬರುವ ಧ್ಯಾನ ಶ್ಲೋಕದ ಅರಿತವೊಂದು ಹೀಗಿದೆ, " ಉಪನಿಷತ್ತುಗಳು ಹಸುಗಳು, ಗೋಪಾಲಕನು ಹಾಲನ್ನು ಕರೆಯುವವನು, ಅರ್ಜುನನು ಕರು, ಗೀತೆಯೇ ಅಮೃತಸಮಾನವಾದ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು ". ಹೀಗಾಗಿ ಉಪನಿಷತ್ತೇ ಗೀತೆಗೂ ಆಶ್ರಯವಾದುದು ಎನ್ನಬೇಕಾಗುವುದು. ಇಂದಿನ ಕಾಲಮಾನಕ್ಕೆ ಬಹುತೇಕ ಯುವಜನಾಂಗಕ್ಕೆ  ವೇದೋಪನಿಷತ್ತುಗಳ ಸಾರವು ಅಪ್ರಸ್ತುತವೆನಿಸಿದರೂ, ಮಾನವನ ಜೀವನದ ಹುಟ್ಟು-ಸಾವಿನ ಬಗೆಗೆ ವಿಚಾರ ಮಾಡುವ ಸಮಯ ಬಂದಾಗ , ಸೃಷ್ಟಿಯ ಮೂಲವನ್ನು ಹುಡುಕುವ ಆಸೆ ಹುಟ್ಟಿದಾಗ, ಜೀವವಿಕಾಸಕ್ಕೆ ಕಾರಣಗಳನ್ನು ತಿಳಿಯ ಬಯಸುವಾಗ , ವಿಜ್ಞಾನವು  ಪ್ರಯೋಗಗಳಿಂದ ಸಿದ್ಧಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾಗ ಮತ್ತು ರಕ್ತವು ತಣ್ಣಗಾಗಿ ಬಾಳಿನ ಮುಸ್ಸಂಜೆಯು ಅಪ್ಪಿಕೊಂಡು ಮುಂದೇನು? ಎಂಬ ಗೊಂದಲ ಹುಟ್ಟಿದಾಗ ನೆರವಿಗೆ ಬರುವುದೇ ಉಪನಿಷತ್ತುಗಳು !.  ’ತನ್ನ ಅರಿವು ತನಗೆ ಗುರು’ ಎಂಬ ಮಾತು ಎಲ್ಲಾ ಕಾಲಕ್ಕೂ ಹೊಂದುವಂತೆಯೇ , " ಆತ್ಮವನ್ನರಿಯಲು ಆಧ್ಯಾತ್ಮಿಕ ಗ್ರಂಥವಾಗಲೀ, ಗುರುವಿನ ನುಡಿಗಳಾಗಲೀ ಸಹಾಯಕವಾಗುವುದಿಲ್ಲ. ಅದು ತನಗೆ ತಾನೇ ಒಬ್ಬನ ಅರಿವಿಗೆ ಅನುಗುಣವಾಗಿ ತಿಳಿದುಬರುವಂತಹುದು. ಆದರೂ ಇಂತಹ ಅರಿವನ್ನು ಪಡೆಯಲು ಗ್ರಂಥವೂ , ಗುರುವೂ ಅವಶ್ಯಕ " ಎಂದು ಯೋಗ ವಾಸಿಷ್ಠ ಸಂಗ್ರಹ ಎಂಬ ಗ್ರಂಥದಲ್ಲಿ ಹೇಳಿದೆ. ಅಂದರೆ, ಗ್ರಂಥಗಳು ಮತ್ತು ಗುರುಗಳು ಆತ್ಮಜ್ಞಾನಕ್ಕೆ ದಾರಿ ತೋರಬಲ್ಲರು ಆದರೆ ಒಬ್ಬನು ತನ್ನ ಅರಿವಿನಿಂದ ಮತ್ತು ಧ್ಯಾನಗಳಿಂದ ಆತ್ಮಜ್ಞಾನವನ್ನು ಹೊಂದಬಹುದು ಎಂಬುದು ಮೇಲಿನ ಸೂಕ್ತದ ಉದ್ದೇಶ.  ಉಪನಿಷತ್ತುಗಳಿಂದ ತಿಳಿದುಬರುವ ಸಂಗತಿಗಳು ಎಣಿಕೆಗೆ ನಿಲುಕದ್ದು ಮತ್ತು ಒಂದೊಂದು ಸೂಕ್ತಿಗಳ ಮೇಲೂ ನೂರು ಪುಟಗಳ ಹೊತ್ತಗೆಯನ್ನೇ ಬರೆಯಬಹುದಾದಷ್ಟು ವಿಚಾರಗಳು.  ಉಪನಿಷತ್ತುಗಳನ್ನೇ ಆಧಾರವಾಗಿರಿಸಿಕೊಂಡು ಅನೇಕ ಆಚಾರ್ಯರು ಹತ್ತು-ಹಲವು ಗ್ರಂಥಗಳನ್ನು ಮಾನವನ ಅರಿವಿಗಾಗಿ , ತಿಳಿವಿಗಾಗಿ ಬರೆದಿಟ್ಟಿದ್ದಾರೆ.  ಅಂತಹ ಅತ್ಯುತ್ತಮ ಗ್ರಂಥಗಳಲ್ಲಿ "ವಿವೇಕ ಚೂಡಾಮಣಿ" ಎಂಬ ಗ್ರಂಥವೂ ಒಂದು.  ವಿವೇಕ ಚೂಡಾಮಣಿ ಎಂಬ ಗ್ರಂಥವು ಹಿಂದೂ ಧರ್ಮದ ಪುನರುದ್ಧಾರಕ, ಭಾರತೀಯ ಸಂಸ್ಕೃತಿಗೆ ಮರುಜನ್ಮ ನೀಡಿದ ಮಹಾನ್ ಚೇತನವೆಂದೇ ತಿಳಿಯಲ್ಪಟ್ಟಿರುವ ಶ್ರೀ ಶಂಕರಾಚಾರ್ಯರಿಂದ ರಚನೆಯಾಗಿರುವುದಾಗಿದೆ. ಮಾನವನು ಹೇಗೆ ಹಾರೆ ಗುದ್ದಲಿಗಳಿಂದ (ಯಂತ್ರಗಳಿಂದ)  ನೆಲವನ್ನು ಅಗೆದು ನೀರನ್ನು ಪಡೆಯುತ್ತಾನೋ ಹಾಗೆಯೇ ಗುರುಗಳು ಹೇಳಿರುವ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ-ವಿದ್ಯೆಯನ್ನು ಪಡೆಯಬಹುದು (ಪಡೆಯಬೇಕು).

ಯಥಾ ಖನನ್  ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||

ಶಂಕರಾಚಾರ್ಯರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯು ಆ ಹೆಸರಿಗೆ ಅನ್ವರ್ಥವಾಗಿಯೇ ಇದೆ ಎಂಬುದು ವಿದ್ವಾಸಂರ ಅಭಿಮತ.  ಜ್ಞಾನ ಸಂಪಾದನೆಗೆ ಉತ್ತಮ ಮಾರ್ಗಗಳನ್ನು ಹುಡುಕುತ್ತಾ ಹೋಗುವುದು ವಿವೇಕಿಗಳ ಲಕ್ಷಣವೇ ಆಗಿದೆ.  ಅವಿವೇಕತನದಿಂದ ಬೇಡದ ಕೆಲಸಗಳನ್ನು ಮಾಡಿ ನಂತರ  ವ್ಯಥೆಪಡುವ ಬದಲು ಒಳ್ಳೆಯ ಅರಿವಿನ ದಾರಿಯಲ್ಲಿ ನೆಡೆಯಲು ಉತ್ತಮ ಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವುದು ಒಳಿತೇ ಆಗಿದೆ.
"ಪ್ರಕ್ಷಾಲನಾದ್ದಿ ಪಂಕಸ್ಯ ದೂರಾದಸ್ಪರ್ಶನಂ ವರಮ್ " ಅಂದರೆ, "ಕೆಸರನ್ನು ತುಳಿಯುವುದೇಕೆ ? ಆಮೇಲೆ ತೊಳೆಯುವುದೇಕೆ ? " . ತೊಳೆದರೆ ದೇಹಕ್ಕಂಟಿದ ಕೆಸರು ಹೋಗಬಹುದು ಮನಕ್ಕಂಟಿದ ಕೆಸರು ಹೋಗುವುದೇ ? .
ಇದನ್ನೇ "ದುಷ್ಟರನ್ನು ಕಂಡರೆ ದೂರವಿರು" ಎಂಬ ಮಾತಿನಲ್ಲೂ ಹೇಳಲಾಗಿದೆ.

ಆಚಾರ್ಯ ಶಂಕರರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯ ಅಷ್ಟೂ ಸೂಕ್ತಿಗಳನ್ನೂ ಇದೇ ಬ್ಲಾಗಿನಲ್ಲಿ ಕನ್ನಡ ಭಾವಾರ್ಥದೊಂದಿಗೆ ಬರೆಯಬೇಕೆಂಬ ಅಭಿಲಾಷೆಯಿಂದ ಇಷ್ಟೆಲ್ಲಾ ಪೀಠಿಕೆ ಹಾಕಿದ್ದೇನೆ.  ನಾನು ಹುಡುಕಿದಂತೆ ಅಂತರಜಾಲದಲ್ಲಿ ವಿವೇಕ ಚೂಡಾಮಣಿಯ ಸಂಪೂರ್ಣ ಭಾವಾರ್ಥವು ಲಭ್ಯವಿದ್ದಂತೆ ಕಂಡುಬರಲಿಲ್ಲ. ಲಭ್ಯವಿದ್ದರೂ ಸಹ ನನಗೆ ಅರಿವಿದ್ದಷ್ಟನ್ನೂ ಇಲ್ಲಿ ಬರೆಯಬೇಕೆಂದುಕೊಂಡಿದ್ದೇನೆ. ಓದಲು ಹೇಗೂ ನೀವೆಲ್ಲಾ ಇದ್ದೇ ಇದ್ದೀರಲ್ಲಾ :-).
ಮುಂದಿನ ಪೋಸ್ಟುಗಳಲ್ಲಿ ಒಂದು ಅಥವಾ ಎರಡು ಸೂಕ್ತಿಗಳನ್ನು ತೆಗೆದುಕೊಂಡು ಅರ್ಥದೊಂದಿಗೆ ಬರೆಯಲಿದ್ದೇನೆ.  ಈಗಿನ ಕಾಲಮಾನಕ್ಕೆ ಇದು ಎಷ್ಟು ಪ್ರಸ್ತುತ-ಅಪ್ರಸ್ತುತ ಎಂಬ ವಿಚಾರಕ್ಕಿಂತಲೂ ಯವಾಗ ನಮ್ಮ ತತ್ತ್ವಶಾಸ್ತ್ರದ ಅಗತ್ಯ  ಯಾರಿಗೆ ಬೇಕಾಗುತ್ತದೋ ಆಗ ಅಂತರಜಾಲದಲ್ಲಿ ಈ ವಿವೇಕ ಚೂಡಾಮಣಿಯ ಅರ್ಥವು ಸಿಕ್ಕುವಂತಾದರೆ ನನ್ನ ಪ್ರಯತ್ನ ಸಾರ್ಥಕ.

ಕನ್ನಡದಲ್ಲಿ ಭಾವಾರ್ಥವನ್ನು ಬರೆಯುವೆನೆಂದು ಹೇಳಿ ಬರವಣಿಗೆಯಲ್ಲಿ ಇಷ್ಟೊಂದು ಸಂಸ್ಕೃತವನ್ನು ಬಳಸುವುದು ತರವೇ ? ಎಂದು ಇಲ್ಲಿ ಯಾರಾದರೂ ದೊಡ್ಡೋರಿಗೆ ಅನಿಸಿದರೆ , ಅನಿಸಿದ್ದನ್ನು ಹೊಟ್ಟಗೆ ಹಾಕ್ಕೊಂಡು ಮುಂದಕ್ಕೆ ಓದಿ.
ಅರಿವಿಗೆ ನೂರೆಂಟು ದಾರಿಯಿದೆ , ನೂರಾರು ಕವಲುಗಳಿವೆ ಗುರಿ ಮಾತ್ರ ಒಂದೇ !.


ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿಧ್ಧಿ ಮನಃ ಪ್ರಗ್ರಹಮೇವ ಚ ||
(ಕಠೋಪನಿಷತ್ತು)

ಆತ್ಮನೇ ಬಿಲ್ಲಾಳು,
ದೇಹವೇ ತೇರು,
ಬುದ್ಧಿಯೇ ತೇರಾಳು,
ಮನಸೇ ಲಗಾಮು !
****************************************************************

ವಂದನೆಗಳೊಂದಿಗೆ,

May 23, 2011

ಅಳಿಲು ಸೇವೆ




ಈ ಸೇವೆ ಸುಮ್ಮನೆ ಒದಗಿ ಬಂದಿದ್ದು. ನಮ್ಮನೆ ಹಿತ್ತಿಲಿನಲ್ಲಿ ಸುಮ್ಮನೆ ಚಿಂವ್ ಚಿಂವ್ ಎಂದು ಓಡಾಡಿಕೊಂಡಿದ್ದ ಅಳಿಲಿಗೆ ’ಇರಲಿ’ ಅಂತಾ ಒಂದೆರೆಡು ಅನ್ನದಗುಳನ್ನು ಕಲ್ಲಿನ ಮೇಲಿಟ್ಟು ಬಂದಿದ್ದೆ. ಅಂದಿನಿಂದ ಸಮಯಕ್ಕೆ ಸರಿಯಾಗಿ ಬಂದು ಆ ಕಲ್ಲಿನ ಹತ್ತಿರವೇ ಕೂರುತ್ತಿತ್ತು ಆ ಅಳಿಲು. ನಮ್ಮನೆಯಲ್ಲಿ ಯಾರಾದರೊಬ್ಬರು ಅದಕ್ಕೆ ಒಂದಷ್ಟು ಹಾಲು-ಅನ್ನ ಹಾಕಿ ಬರುತ್ತಿದ್ವಿ. ಅದೂ ನಮ್ಜೊತೆ ಹೊಂದಿಕೊಳ್ತು. ಎಷ್ಟು ಹೊಂದಿಕೆ ಅಂದ್ರೆ ನೇರವಾಗಿ ಅಡಿಗೆ ಮನೆಗೇ ಬಂದು ಚಿಂವ್ ಚಿಂವ್ ಅನ್ನೋಕೆ ಶುರು ಮಾಡ್ತು. ನನ್ನವಳಿಗೆ ಇಂತಹ ಪ್ರಾಣಿಗಳನ್ನು ಕಂಡರೆ ಬಲು ಆಸಕ್ತಿ. ಅಳಿಲಿನ ಉಪಚಾರ ಇನ್ನೂ ಹೆಚ್ಚಾಯ್ತು. ಕೆಲವು ದಿನಗಳ ನಂತರ ಅದರ ಹೊಟ್ಟೆ ದಪ್ಪಗಾಗಿದ್ದನ್ನು ಗಮನಿಸಿದ ನನ್ನವಳು ’ಅದು ಪ್ರೆಗ್ನೆಂಟು’ ಅಂದ್ಲು. ’ಹಾಗಾದ್ರೆ ಇನ್ನೊಂದು ಸಂಸಾರಕ್ಕೆ ಬೇಳೆ-ಕಾಳು ಎಲ್ಲಾ ತಯಾರಿ ಮಾಡಿಡು’ ಅಂದೆ. ಹಾಗೇ ಕೆಲವು ದಿನಗಳು ಕಳೆಯಿತು. ಅಳಿಲಿನ ಕಡೆಗೆ ನಾನು ಅಷ್ಟು ಗಮನಹರಿಸಿರಲಿಲ್ಲ. ನನ್ನವಳು ’ಅದೆಲ್ಲೋ ಮರಿ ಹಾಕಿದೆ ಅನ್ಸುತ್ತೆ’ ಎಂದಾಗ ನಾನು ಉದಾಸೀನದಿಂದ ’ಒಳ್ಳೇದಾಯ್ತು ಬಿಡು’ ಅಂದಿದ್ದೆ.  ಯಾರದೋ ಮನೆಯಲ್ಲಿ ಹೆಗ್ಗಣಕ್ಕೆ ಇಟ್ಟಿದ್ದ ನಂಜನ್ನು ತಿಂದು ಮುದ್ದಾದ ತಾಯಿ ಅಳಿಲು ನಮ್ಮನೆ ತೆಂಗಿನ ಮರದ ಕೆಳಗೆ ನಂಜೇರಿ ನಾಲಿಗೆ ಕಚ್ಚಿಕೊಂಡು ಸತ್ತು ಬಿದ್ದಿತ್ತು. ನನ್ನವಳಿಗೆ-ನನ್ನಮ್ಮನಿಗೆ ಅಂದು ಸರಿಯಾಗಿ ಊಟ-ತಿಂಡಿ ಸೇರಿರಲಿಲ್ಲ. ಇದಾದ ಮೂರು-ನಾಲ್ಕು ದಿನಗಳ ತರುವಾಯ ಮನೆಯೊಳಗೆ ಮಹಡಿಯ ಮೇಲಿಟ್ಟಿದ್ದ ಡಬ್ಬದಿಂದ ಚಿಂವ್ ಚಿಂವ್  ಸದ್ದು ಕೇಳಿ ಬಂತು. ಡಬ್ಬ ತೆರೆದು ನೋಡಿದರೆ ಮುದ್ದಾದ ಮೂರು ಅಳಿಲು ಮರಿಗಳು. ತಾಯಿ ಇಲ್ಲದ ತಬ್ಬಲಿಗಳು. ಎರಡು ಕಣ್ಣು ಬಿಟ್ಟಿದ್ದವು, ಇನ್ನೊಂದು ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಏನ್ಮಾಡೋದು ಎಂದು ಬಹಳ ಹೊತ್ತು ತಪರಾಡಿದ ನಂತರ ಇನ್ನೊಂದು ಹೊಸಾ ಡಬ್ಬಕ್ಕೆ ಮೆತ್ತನೆಯ ಹಾಸು ಹಾಸಿ ಹತ್ತಿ ಇಟ್ಟು ಮೂರೂ ಮರಿಗಳನ್ನು ಸುರಕ್ಷಿತವಾಗಿ ಅದರೊಳಗೆ ಬಿಟ್ಟೆವು. ಪೆನ್ನಿಗೆ ಇಂಕ್ ಹಾಕುವ ಫ಼ಿಲ್ಲರ್ ನಿಂದ ಮೂರೂ ಮರಿಗಳಿಗೂ ಹಾಲುಣಿಸಿದ್ದಾಯ್ತು. ಎರಡು ಮರಿಗಳು ಕೊಂಚ ಅನ್ನವನ್ನೂ ತಿಂದವು. ಈಗ  ಆ ಮರಿಗಳಿಗೆ ಹಾಲು-ಆಹಾರ ಕೊಟ್ಟು ಪೋಶಿಸಿ ಹೇಗಾದರೂ ಮಾಡಿ ಅವನ್ನು ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿದ್ದೇವೆ. ಉಳಿಯುತ್ತೋ-ಅಳಿಯುತ್ತೋ ಎಲ್ಲಾ ಆ ಶಂಭುಲಿಂಗನಿಗೇ ಗೊತ್ತು :-).
ನೀನಾರಿಗಾದೆಯೋ ಎಲೆ ಮಾನವಾ ? ಎಂದರೆ ನಾನು ಅಳಿಲಿಗಾದೆ ಎಂದು ಹೇಳುತ್ತೇನೆ :).

ಮರಿಗಳಿಗೆ ಹೊಟ್ಟೆ ತುಂಬಿಸಲು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ನಿಮ್ಮಲ್ಲೂ ಏನಾದರು ಸಲಹೆಗಳಿದ್ದರೆ ಕೊಡಿ,  ಒಟ್ನಲ್ಲಿ ಅವುಗಳು ಕೊಂಚ ಓಡಾಡೋ ಹಾಗಾದ್ರೆ ಸಾಕು. ಆಮೇಲೆ ಅವುಗಳನ್ನು ಹಿಡಿಯೋದು ನಮ್ಮ ಕೈಲಿಲ್ಲ ಬಿಡಿ ! :)

ಇಲ್ಲೊಂದಷ್ಟು ಚಿತ್ರಗಳು.


                                           ಎಲ್ಲಾ ಫುಲ್ ನಿದ್ದೆ .......


                                               ಹಸಿದಿತ್ತೂ ಅನ್ಸುತ್ತೆ...ಚೆನ್ನಾಗಿ ಕುಡೀತು....                    



                                               ನನ್ ಕೈ ಮೇಲೆ...... ಅನ್ನ ತಿನ್ನಪ್ಪಾ.......            



                                              ನಿದ್ದೆ..ನಿದ್ದೆ....                




                                              ನಮ್ಮನೆ ದೊಡ್ಡಳಿಲು...  :-) ನನ್ನ ಮಗ.      



***********************


ಕಿಡಿ:

ಅಂದು ಶಂಬ್ಲಿಂಗನ ಮೋರೆಯ ಮೇಲೆ ಸಂತಸ ನಲಿದಾಡುತ್ತಿತ್ತು.
ಅದೇ ಮೂಡಿನಲ್ಲಿ ಮನೆಗೆ ಬಂದವನೇ ಹೆಂಡತಿಗೆ ವಿಷಯವನ್ನು ಅರುಹಿದ
" ಇವತ್ತೊಬ್ಬರು ದೊಡ್ಡ ಅಯ್ನೋರು ಸಿಕ್ಕಿದ್ರು, ನನಗೆ ಮುಖ್ಯಮಂತ್ರಿ ಆಗೋ ಯೋಗ ಇದೆ ಅಂತಾ ಹೇಳ್ದ್ರು"

ಶಂಬ್ಲಿಂಗನ ಹೆಂಡತಿಯೂ ಸಂತಸದಿಂದಲೇ ಕಿರುಚಿದಳು.
"ಹೌದಾ, ಅಯ್ಯೋ ! ನನಗೂ ಒಬ್ರು ಅಯ್ನೋರು ಸಿಕ್ಕಿದ್ರು, ನಂಗೆ ರಾಜ್ಯಪಾಲ್ರಾಗೋ ಯೋಗ ಇದೆ ಅಂದ್ರು!! "

ಶಂಭುಲಿಂಗ ಹೇಳದೆ ಕೇಳದೆ ಅಲ್ಲಿಂದ ಕಂಬಿಕಿತ್ತ !.




Apr 14, 2011

ನನ್ನಜ್ಜನ ಪತ್ರಕ್ರಾಂತಿಗಳು


ನನ್ನ ಅಜ್ಜ  ನಮ್ಮನ್ನಗಲಿದ್ದು ೧೯೯೨ರಲ್ಲಿ. ಅಂದರೆ ಇಲ್ಲಿಗೆ ೧೯ ವರುಷಗಳು ಕಳೆದುಹೋಗಿದೆ. ಅವರು ಹುಟ್ಟಿದ್ದು ೧೯೦೮ ರಲ್ಲಿ. ಅಲ್ಲಿಗೆ ನನ್ನಜ್ಜ ಬದುಕಿದ್ದು ಒಟ್ಟು ೮೪ ವರುಷಗಳು. ಇನ್ನೊಂದು ತಲೆಮಾರು ಕಳೆದರೆ ಹಿಂದಿನವರು ೮೦ ವರುಷಗಳು ಬದುಕಿರುತ್ತಿದ್ದರೆ ? ! ಎಂದು ಅಚ್ಚರಿಯಿಂದ ಕೇಳುವ ಮಂದಿಯೂ ಇರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.  ನಾನು ಓದುತ್ತಿದ್ದುದು ನನ್ನೂರಿನ ಸರ್ಕಾರೀ ಕನ್ನಡ ಶಾಲೆಯಲ್ಲಿ ಮತ್ತು ನಾನಾಗ ೦೫ ನೆಯ ಇಯತ್ತೆಯಲ್ಲಿದ್ದೆ. ನನ್ನಜ್ಜನಿಗೆ ನನ್ನನ್ನು ಕಂಡರೆ ಬಲು ಪ್ರೀತಿಯಿತ್ತು, ಅದಕ್ಕೆ ಮೊದಲ ಕಾರಣವೆಂದರೆ ನಾನು ಅವರ ಪತ್ರ ಬರೆಯುವ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದುದು. ನಾನು ಪುಕ್ಕಟೆ ಸಹಾಯವನ್ನೇನೂ ಮಾಡುತ್ತಿರಲಿಲ್ಲ. ಎಲ್ಲಾ ಶನಿವಾರಗಳಲ್ಲೂ ನನ್ನ ಶಾಲೆಯಲ್ಲಿ ಬೆಳಗಿನ ವೇಳೆಯ ಕಲಿಕೆಯ ನಂತರ ೧೦ ಗಂಟೆಯಿಂದ  ಕಲಿಕೆಗೆ ಹೊರತಾದ ಕೆಲವು ಚಟುವಟಿಕೆಗಳು ಇರುತ್ತಿದ್ದವು  (ಹಾಡು ಹೇಳುವುದು, ಒಗಟು ಹೇಳುವುದು ಮುಂತಾದವು). ನನ್ನ ಹಾಗೂ ನನ್ನ ಸಹಪಾಟಿಗಳಿಗೆ ಇಂತಹ ಚಟುವಟಿಗೆಗಳು ಬೇಸರ ಬರಿಸುತ್ತಿದ್ದುದರಿಂದ ಇಪ್ಪತ್ತು ಪೈಸೆಗೆ ಕೈತುಂಬಾ ಸಿಗುತ್ತಿದ್ದ ಕಡಲೆಕಾಯಿಬೀಜದ ಪೆಪ್ಪರಮೆಂಟನ್ನು ತಂದು ತಿನ್ನುತ್ತಾ ಕೂರುತ್ತಿದ್ದೆವು. ಶನಿವಾರಗಳಂದು ಇಪ್ಪತ್ತು ಪೈಸೆ ಕೊಡುವ ಹೊಣೆಗಾರಿಕೆ ನನ್ನಜ್ಜನದಾಗಿರುತ್ತಿತ್ತು.  ಆಗ ನನ್ನಜ್ಜನಿಗೆ ೮೦ ವರುಷಗಳಾಗಿದ್ದುದರಿಂದ ವಯಸ್ಸಿಗೆ ಸಹಜವಾಗಿ ಅವರ ಕಣ್ಣಿನ ನೋಟ ಮಂದವಾಗಿತ್ತು. ಅವರೊಂದು ಕನ್ನಡಕವನ್ನೂ ಬಳಸುತ್ತಿದ್ದರು, ಆದರೆ ಅಂದಿನ ಕನ್ನಡಕಗಳು ಇಂದಿನಷ್ಟು ಹೊಸಮಾದರಿಯದಲ್ಲವಾದುದರಿಂದ ಕನ್ನಡಕ ಹಾಕಿಕೊಂಡರೂ ಅವರ ಕಣ್ಣಿನ ನೋಟದಲ್ಲೇನೂ ಸುಧಾರಣೆ ಕಂಡುಬರುತ್ತಿರಲಿಲ್ಲ . ನನ್ನನ್ನು ಪತ್ರ ಬರೆಯಲು ಅವರು ಕೇಳುತ್ತಿದ್ದುದು ಇಳಿಹೊತ್ತಿನ ನಂತರವೇ. ಆಗ ನಾನದರೂ ಅದೇನೋ ಬಹಳ ಕೆಲಸವಿರುವಂತೆ ಆಟವಾಡಿ ಅವರಿಂದ ಕಾಸು ಪಡೆದ ಬಳಿಕವೇ ಪತ್ರ ಬರೆದುಕೊಡಲು ಕೂರುತ್ತಿದ್ದೆ. ಆಗ ೧೫ ಪೈಸೆಯ ಅಂಚೆಪತ್ರಗಳು ನಮ್ಮ ಮನೆಯಲ್ಲಿ ಸಾಕಷ್ಟು ಇರುತ್ತಿತ್ತು. ಅವರು ಪತ್ರ ಬರೆಸುತ್ತಿದ್ದುದು ನಮ್ಮ ನೆಂಟರಿಗಾಗಲೀ ಹತ್ತಿರದವರಿಗಾಗಲೀ ಅಲ್ಲ, ಅದೇನಿದ್ದರೂ ಸರ್ಕಾರದ ದೊಡ್ಡ ಹುದ್ದೆಯಲ್ಲಿರುವ ಮಂತ್ರಿಗಳಿಗೆ ಮಾತ್ರ !.  ಇಳಿಹೊತ್ತಿನಲ್ಲಿ ಕರೆಂಟಿಲ್ಲದಿರುತ್ತಿದ್ದ ಮನೆಯಲ್ಲಿ ಸೀಮೆಎಣ್ಣೆ ಬುಡ್ಡಿ ಬೆಳಗಿಸಿಕೊಂಡು ಪತ್ರ ಬರೆಯುವ ಕಾಯಕಕ್ಕೆ ನಾನು ಮೊದಲಾಗುತ್ತಿದ್ದೆ. ನನ್ನ ತಂದೆಯವರು ಆಗಾಗ ಹೇಳುತ್ತಿದ್ದಂತೆ ನನ್ನ ಅಜ್ಜನಿಗೆ ಮನೆ-ಮಕ್ಕಳು ಎಂಬ ಹೊಣೆಗಾರಿಕೆಯೇ ಇರಲಿಲ್ಲವೇನೊ ಎಂದು ನಾನೂ ಒಮ್ಮೊಮ್ಮೆ ನಂಬುತ್ತಿದ್ದೆ, ಏಕೆಂದರೆ ನಾನು ಆ ಮಂತ್ರಿ ಮಹೋದಯರಿಗೆ ಬರೆದುಕೊಡುತಿದ್ದ ಪತ್ರಗಳಲ್ಲಿ ಯಾವ ಪತ್ರಕ್ಕೂ ತಿರುಗಿ  ಉತ್ತರ ಬಂದಂತೆ ನನಗೆ ತೋರಿರಲಿಲ್ಲ !. ಆದರೂ ಎಲ್ಲಾ ಕೆಲಸಗಳನ್ನೂ ಬದಿಗೊತ್ತಿ ಪತ್ರ ಬರೆಸುವುದನ್ನು ಮಾತ್ರ ಅವರು ತಪ್ಪಿಸುತ್ತಿರಲಿಲ್ಲ. ನನ್ನಜ್ಜ ಹೇಳಿದಂತೆ ನಾನು ಮಂತ್ರಿಗಳಿಗೆ ಬರೆಯುತ್ತಿದ್ದ ಪತ್ರದ ಒಕ್ಕಣೆ-ಸಾರಾಂಶ ಹೀಗಿರುತ್ತಿತ್ತು, ಮಹಾಸ್ವಾಮಿಗಳಾದ ಇಂತಹ ಮಂತ್ರಿಗಳೇ, ನೀವು ಕುಶಲವೆಂದು ನಂಬುತ್ತೇನೆ ..ಇತ್ಯಾದಿ. ನಂತರ ಸ್ವಂತದ ಜಮೀನಿನ ವಿಷಯವೋ , ಊರಿಗೆ ಕುಡಿಯುವ ನೀರಿನ ವ್ಯವಸ್ಥೆಗೋ, ದೇವಾಲಯದ ಜೀರ್ಣೋದ್ಧಾರದ ವಿಷಯವಾಗಿಯೋ ಹತ್ತು-ಹನ್ನೆರೆಡು ಸಾಲುಗಳಲ್ಲಿ ಆಗ್ರಹಪೂರ್ವಕವಾಗಿ ಬರೆಯಿಸುತ್ತಿದ್ದರು. ಆಗೆಲ್ಲಾ ನಾನು ಅದೆಷ್ಟು ಪತ್ರಗಳನ್ನು ಬರೆದುಕೊಟ್ಟೆ ಎಂಬುದು ಸರಿಯಾಗಿ ನೆನಪಿಲ್ಲವಾದರೂ ಸರಾಸರಿ ವಾರಕ್ಕೆ ನಾಲ್ಕು ಪತ್ರಗಳಂತೂ ಆಗುತ್ತಿತ್ತು. ಯಾವುದಕ್ಕೂ ಉತ್ತರ ಬರದಿದ್ದರೂ ಮತ್ತೆ-ಮತ್ತೆ ಪತ್ರ ಬರೆಯಿಸುತ್ತಿದ್ದುದನ್ನು ಕಂಡು ನನ್ನ ತಂದೆಯವರು ತಾತನ ಪ್ರತಿ ರೇಗುತ್ತಿದ್ದುದು ಮಾತ್ರ ನನಗೆ ತಿಳಿಯುತ್ತಿತ್ತು. ನನಗಂತೂ ಬರೆದುಕೊಡಲು ಬೇಸರವಾಗುತ್ತಿರಲಿಲ್ಲ, ಕಾರಣ ವಾರದ ಕೊನೆಯಲ್ಲಿ ಸಿಗುತ್ತಿದ್ದ ಕಾಸು !.  ಅಷ್ಟೆಲ್ಲಾ ಪತ್ರಗಳನ್ನು ಬರೆದರೂ ಪ್ರತ್ಯುತ್ತರ ಬರದಿರುವುದಕ್ಕೆ ಮೊದಲ ಮುಳಿಯೆಂದರೆ ಬರೆದ ಪತ್ರಗಳನ್ನು ನನ್ನ ತಾತ ಅಂಚೆ ಡಬ್ಬಕ್ಕೆ ಹಾಕದೆ ಎಲ್ಲವನ್ನೂ ತಮ್ಮ ಹಾಸಿಗೆಯ ತಲೆದಿಂಬಿನಡಿಯಲ್ಲಿಟ್ಟುಕೊಂಡು ಮಲಗುತ್ತಿದ್ದುದು !. ಬೆಳಗಾದಾಗ ನನಗೇನಾದರೂ ನೆನಪಾದರೆ  ಪತ್ರವನ್ನು ಡಬ್ಬಕ್ಕೆ ಹಾಕಲು ತಾತನಿಗೆ ನೆನಪು ಮಾಡುತ್ತಿದ್ದೆ, ಇಲ್ಲವಾದಲ್ಲಿ ಅವು ಹಾಗೇ ದಿಂಬಿನಡಿಯಲ್ಲಿಯೇ ಉಳಿದುಬಿಡುತ್ತಿದ್ದವು. ನನ್ನಮ್ಮ ಆಗಾಗೆ ದಿಂಬಿನಡಿಯಲ್ಲಿ ಕೈಯಾಡಿಸಿ ಪತ್ರಗಳನ್ನು ತೆಗೆದುಕೊಂಡು ಹೋಗಿ ಉರಿಯೊಲೆಗೆ ಹಾಕುತ್ತಿದ್ದರು !. ಅವರು ಹೇಳುತ್ತಿದ್ದ ವಿಳಾಸಗಳು ಸರಿಯಾಗಿ ಅರಿವಾಗುತ್ತಿರಲಿಲ್ಲವಾಗಿ ನನಗೆ ತೋಚಿದಂತೆ ವಿಳಾಸವನ್ನು ಬರೆದು ಬಿಡುತ್ತಿದ್ದೆ. ಹೇಗೂ ನನ್ನ ತಾತನಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲವಲ್ಲಾ !. ಡಬ್ಬಕ್ಕೆ ಹಾಕಿದ ಕೆಲವು ಪತ್ರಗಳು ಅದ್ಯಾವ ತಿಮ್ಮಪ್ಪನನ್ನು ತಲುಪುತ್ತಿತ್ತೋ ನಾಕಾಣೆ, ತಿರುಗಿ ನಮ್ಮ ಮನೆಗಂತೂ ಬರುತ್ತಿರಲಿಲ್ಲ.

ಇದೆಲ್ಲಾ ಕಣ್ಣು ಮಂದವಾದ ನಂತರದ ಕತೆಯಾದರೆ ಕಣ್ಣು ಚೆನ್ನಾಗಿದ್ದಾಗ  ಇನ್ನೂ ರೋಚಕವಾದ ಸನ್ನಿವೇಶಗಳು ನಡೆದಿವೆ. ನಾನಿನ್ನೂ ಹುಟ್ಟಿರದಿದ್ದ  ದಿನಗಳಲ್ಲಿ ನೆಡೆದಿದ್ದ ನಮ್ಮ ತಾತನ ಕ್ರಾಂತಿಗಳನ್ನು ನನ್ನ ತಂದೆಯವರು ಆಗಾಗ ಹೇಳುತ್ತಿದ್ದುದು ನನಗೆ ನೆನಪಿದೆ. 
ನನ್ನ ತಂದೆಯವರು ಹರೆಯದಲ್ಲಿದ್ದಾಗ (ಸುಮಾರು ೨೭-೨೮) ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸೇನೆಗೆ ಸೇರಿದ್ದು ೨೦ನೆಯ ವಯಸ್ಸಿನಲ್ಲಿ. ಸುಮಾರು ೮ ವರುಷಗಳು ಅವರು ನಾಗಾಲ್ಯಾಂಡಿನ ಗಡಿಯಲ್ಲಿ ಸೇನೆಯ ಸಿಪಾಯಿಯಾಗಿ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ನನ್ನ ತಾತನವರು ನನ್ನೂರಿನ ಸರಕಾರೀ ಧಾರ್ಮಿಕ ಕೇಂದ್ರವೊಂದರಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ನನ್ನ ತಾತನವರಿಗೆ ಸರಕಾರದ ವತಿಯಿಂದ ಬರುತ್ತಿದ್ದ ಸಂಬಳ ತಿಂಗಳಿಗೆ ೬೪ ರೂಪಾಯಿಗಳು !. ನನ್ನ ತಾತನಿಗೆ ಪುರೋಹಿತ್ಯದಂತಹ ಇತರೆ ಸಂಪಾದನೆಯಿದ್ದರೂ ಮನೆಗಾಗಿ , ಮನೆಯವರಿಗಾಗಿ  ಅವರು ವ್ಯಯಿಸುತ್ತಿದ್ದುದು ಮಾತ್ರ ನೂರರಲ್ಲಿ ೧ ಪಾಲು ಮಾತ್ರ. ಮಿಕ್ಕಿದ್ದೆಲ್ಲಾ ಅವರ ’ಸಮಾಜೋದ್ದಾರ’ದ ಕೆಲಸಕ್ಕೆ ವ್ಯಯವಾಗುತ್ತಿತ್ತು. ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು. ನನ್ನ ತಂದೆಯವರಿಗೆ ಮೂವರು ತಂಗಿಯರು ಹಾಗೂ ಒಬ್ಬ ತಮ್ಮ. ಇವರೆಲ್ಲರ ಜೀವನದ ಜೋಕಾಲಿಯನ್ನು ನನ್ನ ತಂದೆಯವರು ತಿಂಗಳಿಗೊಮ್ಮೆ ನಾಗಾಲ್ಯಾಂಡಿನಿಂದ ಕಳುಹಿಸುತ್ತಿದ್ದ ಪುಡಿಗಾಸಿನಿಂದಲೇ ತೂಗಬೇಕಾಗಿತ್ತು. ತಿಂಗಳಾಗುವ ಹೊತ್ತಿಗೆ ಸರಿಯಾಗಿ ನನ್ನಜ್ಜ ನನ್ನಪ್ಪನಿಗೆ ಹಣಕ್ಕಾಗಿ ಪತ್ರ ರವಾನಿಸಿರುತ್ತಿದ್ದರು . 
ಹೆಣ್ಣುಮಕ್ಕಳ ಮದುವೆ, ತಮ್ಮನ ಓದು, ಇದಕ್ಕೆಲ್ಲಾ ಮನೆಯಲ್ಲಿ ನನ್ನ ತಂದೆಯವರೇ ಹೊಣೆಯಾಗಬೇಕಿತ್ತು . ಅಂಡಲೆಯುವ ಕಾಯಕಕ್ಕೆ ಕಟ್ಟು ಬಿದ್ದಿದ್ದ ನನ್ನ ತಾತ ಅದೊಂದು ದಿವಸ ನನ್ನ ತಂದೆಯವರಿಗೆ ಒಂದು ಪತ್ರ ಬರೆದರು.
"ನನ್ನ ಮೈ ಸರಿಯಿಲ್ಲ, ಇನ್ನು ಹೆಚ್ಚು ದಿವಸ ಬದುಕಲಾರೆ ತಕ್ಷಣ ಹೊರಟು ಬಾ ! " ಎಂಬ ಒಕ್ಕಣೆಯ ಪತ್ರವನ್ನು ಕಂಡ ನನ್ನ ತಂದೆಯವರು ದುಗುಡದಿಂದ ಸರಿರಾತ್ರಿಯಲ್ಲೇ ಗಡಿಯಿಂದ ಯಾರಿಗೂ ಹೇಳದೇ ಹೊರಟು ಬಂದಿದ್ದರು. ಮನೆಯಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ನನ್ನ ಅಜ್ಜನ ಆರೋಗ್ಯವೂ ಸಹ !. ಹಾಗೆ ಹೇಳದೆ-ಕೇಳದೆ ಸೇನೆಯನ್ನು ಬಿಟ್ಟು ಬಂದುದರಿಂದ ನನ್ನ ತಂದೆಯವರನ್ನು ಮತ್ತೆ ಸೇನೆಗೆ ಸೇರಿಸಿಕೊಳ್ಳಲಿಲ್ಲ, ಯಥಾಪ್ರಕಾರ ನನ್ನ ತಾತ ಕೆಲಸ ಮಾಡುತ್ತಿದ್ದ ಧಾರ್ಮಿಕ ಕೇಂದ್ರದಲ್ಲೇ ನನ್ನಪ್ಪ ಮುಖ್ಯಸ್ಥರ ಹೊಣೆ ಹೊತ್ತರು. ನನ್ನಜ್ಜನ ಒಂದು ಪತ್ರ ನನ್ನ ತಂದೆಯವರನ್ನು ಅವರಿಷ್ಟಪಟ್ಟಿದ್ದ ದೇಶ ಸೇವೆಯಂತಹ ಕೆಲಸದಿಂದ ವಂಚಿತರಾಗುವಂತೆ ಮಾಡಿತ್ತು. ಸೇನೆಯಲ್ಲಿದ್ದ ನಮ್ಮ ತಂದೆಯವರು ಆ ಕೆಲಸವನ್ನು ತೊರೆದು ಬಂದಿದ್ದರೂ ಸಹ ಆ ಶಿಸ್ತು , ದೇಶಪ್ರೇಮವನ್ನು ಕೊನೆಯವರೆವಿಗೂ ತಮ್ಮ ಬದುಕಿನಲ್ಲಿ ಉಳಿಸಿಕೊಂಡಿದ್ದರು. 

ಅಂಚೆಪತ್ರಗಳ ಕತೆ ಒತ್ತಟ್ಟಿಗಿರಲಿ, ನನ್ನಜ್ಜನ ಮತ್ತೊಂದು ದೊಡ್ಡ ಪತ್ರಕ್ರಾಂತಿಯನ್ನು  ಹೇಳಲೇಬೇಕು. ಈಗ ಕ್ರಯಪತ್ರದ ಸರದಿ.

ನನ್ನ ತಂದೆಯವರು ಸೇನೆಯನ್ನು ತೊರೆದು ಊರಿಗೆ  ಬಂದು ಇಲ್ಲಿಯ ಕೆಲಸದ ಹೊಣೆಗಾರಿಕೆಯನ್ನು ಹೊತ್ತ ನಂತರ ಮೊದಲನೆಯ ತಂಗಿಯ ಮದುವೆಯ ಪ್ರಸ್ತಾವನೆಯನ್ನು ನನ್ನ ತಾತನವರ ಮುಂದಿಟ್ಟರು. ರವಷ್ಟು ಹಣ ಹೊಂದಿಸುವಂತೆಯೂ ಹೇಳಿದರು. ಬಿಡಿಗಾಸನ್ನೂ ತನ್ನದೆಂದು ಉಳಿಸಿಕೊಳ್ಳದಿದ್ದ ನನ್ನ ತಾತನ ಬಳಿ ಕಾಸೆಲ್ಲಿಂದ ಬರಬೇಕು ? ಅದಕ್ಕವರು ಮಾಡಿದ ಉಪಾಯವೇನೆಂದರೆ , ಫಲವತ್ತಾಗಿದ್ದ ೩ ಎಕರೆ ಕಪ್ಪುಮಣ್ಣಿನ ಕಬ್ಬಿನ ಗದ್ದೆಯನ್ನು
ಪರಿಚಯಸ್ಥರೊಬ್ಬರಿಗೆ ಅಡವಿಟ್ಟು ಹಣ ಪಡೆಯುವುದು. ಹಾಗೆ ಅಡಮಾನವಿಡುವಾಗ ಪತ್ರದಲ್ಲಿ ನನ್ನ ತಾತ ಬರೆದುಕೊಟ್ಟಿದ್ದು ಹೀಗೆ " ಗದ್ದೆಯನ್ನು ೨೦೦ ರೂಪಾಯಿಗೆ ಅಡವಿಡುತ್ತಿದ್ದೇನೆ, ನನಗೆ ಈ ಹಣವನ್ನು ೨ ತಿಂಗಳಲ್ಲಿ ಹಿಂದಿರುಗಿಸಲಾಗದಿದ್ದಲ್ಲಿ ಇದನ್ನೆ ಕ್ರಯಪತ್ರವೆಂದು ತಿಳಿದು ಗದ್ದೆಯನ್ನು  ಸ್ವಂತಕ್ಕೆ ಮಾಡಿಕೊಳ್ಳುವುದು !". ಎರಡು ತಿಂಗಳಲ್ಲ, ನನ್ನ ತಂದೆಯವರಿಗೆ ಈ ವಿಷಯ ತಿಳಿದದ್ದು ಎರಡು ವರುಷದ ನಂತರ. ಅದಾಗಲೇ ಗದ್ದೆಯನ್ನು ಅಡವಿರಿಸಿಕೊಂಡಿದ್ದವರು ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿಸಿಕೊಂಡಾಗಿತ್ತು. ನನ್ನಜ್ಜನಿಗೆ ಗದ್ದೆಯನ್ನಿಟ್ಟು ೨೦೦ ರೂ ಪಡೆದಿದ್ದ ವಿಷಯ ಯಾವಾಗಲೋ ಮರೆತು ಹೋಗಿತ್ತು !.  ನಂತರ ನನ್ನ  ತಂದೆಯವರ ಕಾನೂನು ಹೋರಾಟ ಮುಂತಾದವುಗಳು ನಡೆದವು. ಇರಲಿ,

ಹೀಗೆ ಹೇಳುತ್ತಾ ಹೊರಟರೆ ಸದ್ಯಕ್ಕೆ ಮುಗಿಯುವುದಿಲ್ಲ. ನನ್ನಜ್ಜನಿಗೆ ಹೊಣೆಗಾರಿಕೆ ಇತ್ತೋ ಇಲ್ಲವೋ , ಹವ್ಯಾಸಕ್ಕಾಗಿ ಹಾಗೆಲ್ಲಾ ವರ್ತಿಸುತ್ತಿದ್ದರೋ ಅಥವಾ ಅಂದಿನ ಕೆಲವು ಜನಗಳ ಮನೋಭಾವವೇ ಹಾಗಿರುತ್ತಿತ್ತೋ ಎಂದೆಲ್ಲಾ ಹಲವು ತೆರನಾಗಿ ಬಹಳ ಸಲ ಯೋಚಿಸುತ್ತೇನೆ. ಒಮ್ಮೊಮ್ಮೆ ನಗುವೂ ಬರುತ್ತದೆ. :)
ಅದೇನೇ ಇದ್ದರು ನನ್ನಜ್ಜ ನನಗೆ ಕೊಡುತ್ತಿದ್ದ ಇಪ್ಪತ್ತು ಪೈಸೆಯ ನೆನಪಾದಾಗ ಮನಸು ಅರಳುತ್ತದೆ,  ದಿಗಂತದೆಡೆಗೆ ಮುಖ ತಿರುಗಿಸಿ ನಗುತ್ತೇನೆ. :) ಮತ್ತೆ ಎದ್ದು ಕೊಡವಿಕೊಂಡು ಕೆಲಸಕ್ಕೆ ಹೊರಡುತ್ತೇನೆ .

( ಇದು ಕಾಲ್ಪನಿಕವಲ್ಲ :))

---------------------------------------------------------

ಕಿಡಿ

" ಜನಲೋಕಪಾಲ ಸಮಿತಿಯಲ್ಲಿರಲು ಅಣ್ಣಾ ಹಜಾರೆಯವರೇನು ಜನರಿಂದ ಆರಿಸಿ ಬಂದಿದ್ದಾರೆಯೇ ? " --ಕೃಷ್ಣ ಭೈರೇಗೌಡ್ರು.

ಇಲ್ಲಾ ಗೌಡ್ರೆ, ನಾವು ಹಜಾರೆಯವರನ್ನು ಹೊಲಸಿನ ಹೊಂಡಕ್ಕೆ ಇಳಿಸುವುದಿಲ್ಲ !!

---------------------------------------------------

ವಂದನೆಗಳೊಂದಿಗೆ.

Mar 21, 2011

ಕುಮಾರವ್ಯಾಸನ ಅಂತರಂಗ



ಕುಮಾರವ್ಯಾಸ ಕವಿಯ ಗದುಗಿನ ಭಾರತವನ್ನು ವರುಷಗಳಷ್ಟು ಹಿಂದೆಯೇ ಓದಿದ್ದರೂ, ಕೇವಲ ಅದರ ಭಾವಾರ್ಥವನ್ನು ಮಾತ್ರ ತಿಳಿಯಲು ಸಾಧ್ಯವಾಗಿತ್ತು. ಗದುಗಿನ ಭಾರತದ ನೇರ ಭಾವಾರ್ಥದ ತಿಳಿವಿಗಿಂತಲೂ ಮೀರಿದ ವಿಚಾರಗಳು ಭಾರತದಲ್ಲಿಡಗಿದ್ದರೂ, ಅರಿಯುವ-ಚರ್ಚಿಸುವ ವ್ಯವಧಾನವಿಲ್ಲದೆ ಅಲ್ಲಿಗೇ ಕೈಚೆಲ್ಲಿದ್ದೆ. ಇದೀಗ ಅಂತರಜಾಲದಲ್ಲಿ ಕರ್ಣಾಟ ಭಾರತ ಕಥಾಮಂಜರಿ ಯನ್ನು ಇ-ಪುಸ್ತಕದ ರೂಪದಲ್ಲಿ ಹಲವು ಮಜಲುಗಳೊಂದಿಗೆ ಹೊರತರಬೇಕೆನ್ನುವ ಆಸಕ್ತಿಯನ್ನು ಶ್ರೀ ಮಂಜುನಾಥರು  ತಮ್ಮ ಬ್ಲಾಗಿನಲ್ಲಿ ವ್ಯಕ್ತಪಡಿಸಿದ್ದನ್ನು ಕಂಡು ಅವರ ತಂಡದೊಂದಿಗೆ ನಾನೂ ಒಬ್ಬನಾಗುವ ಆಸಕ್ತಿಯಿಂದ ಗದುಗಿನ ಭಾರತದ ಇ-ಅವತರಣಿಕೆಗೆ ಕಾಲಾಳಾಗಿ ಸೇರಿಕೊಂಡು ಕರ್ಣಪರ್ವದ ಹೊಣೆಯನ್ನು ಇಟ್ಟುಕೊಂಡೆ. ಈ ರೂಪದೊಂದಿಗೆ ಮುಂದುವರಿದಾಗ ಗದುಗಿನ ಭಾರತವನ್ನು ಒಳಹೊಕ್ಕಿ ನೋಡುವ ಆಸಕ್ತಿಯೂ ಕುದುರಿತು. ಆ ನಿಟ್ಟಿನಲ್ಲಿ ಹಲವು ಹೊತ್ತಗೆಗಳನ್ನು ಓದುವ ಅವಕಾಶವೂ ಸಿಕ್ಕಿತು. ಅದರಲ್ಲೊಂದು ಪುಸ್ತಕ ಪ್ರೋ. ಜಿ. ವೆಂಕಟಸುಬ್ಬಯ್ಯನವರು ಬರೆದಿರುವ "ಕುಮಾರವ್ಯಾಸನ ಅಂತರಂಗ- ಯುದ್ಧಪಂಚಕದಲ್ಲಿ’ ಎಂಬ ಹೊತ್ತಗೆ. ನನ್ನ ತಿಳಿವಿನ ಮಟ್ಟಿಗೆ ಇದು ಒಪ್ಪವಾದ ಹೊತ್ತಗೆಯೆನಿಸಿತು.  ಜಿ.ವೆಂ. ಅವರು ಕುಮಾರವ್ಯಾಸ ಭಾರತದ ಕೊನೆಯ ಐದು ಪರ್ವಗಳನ್ನು ಮೇಲಾಗಿ ತೆಗೆದುಕೊಂಡು ಅವುಗಳನ್ನು ಯುದ್ಧಪಂಚಕವೆಂದು ಹೆಸರಿಸಿ ಸರಳಾರ್ಥಗಳ  ಮೂಲಕ ವಿವರಿಸಿರುತ್ತಾರೆ.  (ಸಾಮಾನ್ಯವಾಗಿ ಭಾರತವನ್ನು ವಿವರವಾಗಿ ತಿಳಿಯಲು ಬಯಸುವವರು ಅದನ್ನು ಆದಿಪಂಚಕ ಮತ್ತು ಯುದ್ಧಪಂಚಕವೆಂದು ದ್ವಿಭಾಗಿಸಿ ಓದುತ್ತಾರೆಂದು ಕೇಳಿದ್ದೇನೆ).
ಭೀಷ್ಮಪರ್ವವೇ ಮೊದಲಾಗಿ ಗದಾಪರ್ವದ ತನಕ ಒಟ್ಟು ೨೧೨ ಪುಟಗಳಲ್ಲಿ ಅನೇಕ ವಿಚಾರಗಳನ್ನು ಓದುಗರ ಮುಂದಿಟ್ಟು ಯುದ್ಧಪಂಚಕದ ಸಮಗ್ರತೆಯನ್ನು ಲೇಖಕರು ಕಟ್ಟಿಕೊಡುತ್ತಾರೆ. ಪುಸ್ತಕದಲ್ಲಿರುವ ವಿಚಾರಗಳನ್ನು ಮುಖ್ಯವಾಗಿ ಏಳು ಸ್ತರಗಳಲ್ಲಿ ವಿಂಗಡಿಸಿದ್ದಾರೆ. ಅವುಗಳೆಂದರೆ,’

೧) ಕನ್ನಡದಲ್ಲಿ ಮಹಾಭಾರತಗಳು
೨) ಕುಮಾರವ್ಯಾಸ ಭಾರತ - ಹೊಸ ವಿಮರ್ಷೆ ಮತ್ತು ಪರಿಷ್ಕರಣದ  ಆವಶ್ಯಕತೆ
೩) ಯುದ್ಧಪಂಚಕದ ಪೂರ್ವರಂಗ
೪) ಯುದ್ಧ ಪ್ರಾರಂಭ - ಭೀಷ್ಮ ಸೇನಾಪತ್ಯ
೫) ಕುಮಾರವ್ಯಾಸನ ಸ್ವೋಪಜ್ಞತೆ
೬) ಕರುಣಾರ್ದ್ರಪರ್ವ ಕರ್ಣಪರ್ವ
೭) ಯುದ್ಧಪಂಚಕದ ಉಪಸಂಹಾರ

 * ಕನ್ನಡದಲ್ಲಿ ಮಹಾಭಾರತ ಎಂಬುದರ ಬಗೆಗೆ ಹೇಳುವಾಗ , ಕನ್ನಡದ ಆದಿಕವಿಯಂದೇ ಪರಿಗಣಿಸಲ್ಪಟ್ಟಿರುವ ಪಂಪನಿಂದ ಮತ್ತು ಪಂಪಭಾರತದ ವಿವರಣೆಯೊಂದಿಗೆ ಆರಂಭಿಸುತ್ತಾರೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಬರೆದುದರ ಹಿನ್ನಲೆ ಮತ್ತು ಆ ಕಾಲಘಟ್ಟದಲ್ಲಿ ಕಾವ್ಯರಚನೆಯಲ್ಲಿನ ವಾಸ್ತವತೆಯನ್ನು ಹೆಕ್ಕಿಕೊಡುವುದರ ಜೊತೆಗೆ ಪಂಪನು ಅರಿಕೇಸರಿಯ ಆಸ್ಥಾನದಲ್ಲಿದ್ದು ಯೋಧನೂ ಆಗಿದ್ದುದರ ಸಾಮಾಜಿಕ ಜೀವನವನ್ನೂ ತೆರೆದಿಡುತ್ತಾರೆ. ಕಿರಿದರಲ್ಲಿ ಪಿರಿದನ್ನು ಹೇಳುವ ಪಂಪಕವಿಯ ಕಾವ್ಯ ರಚನೆಯಲ್ಲಿನ ಚತುರತೆಯನ್ನು ಕೆಲವು ಉದಾಹರಣೆಗಳ ಮೂಲಕ  ವಿವರಿಸುತ್ತಾರೆ.  ಪಂಪನಿಗೆ ತನ್ನ ಒಡೆಯನನ್ನು ಮೆಚ್ಚಿಸುವ ದಾಕ್ಷಿಣ್ಯವೂ (ಬೇರೆ ಪದ ನನಗೆ ಹೊಳೆಯುತ್ತಿಲ್ಲ) ಇದ್ದುದರಿಂದ ತನ್ನ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯವೆಂದು ಹೆಸರಿಸಿದ್ದೂ ಅಲ್ಲದೆ ಅರಿಕೇಸರಿಯನ್ನು ಅರ್ಜುನನೊಡನೆ ಹೋಲಿಸಿ ಭಾರತವನ್ನು ಕಟ್ಟುತ್ತಾನೆ. (ದ್ರೌಪದಿಯನ್ನು ಅರ್ಜುನನೊಬ್ಬನಿಗೇ ಕಟ್ಟುವ ಪ್ರಸಂಗವೇ ಸಾಕಲ್ಲವೆ !?) ಇಷ್ಟೆಲ್ಲದರ ನಡುವೆಯೂ ಪಂಪನ ಭಾರತ ಕಾವ್ಯವನ್ನು ಮೆಚ್ಚಲು ಸಾಕಷ್ಟು ಅರಿವುಗಳನ್ನು, ವಿಚಾರಗಳನ್ನು ಮತ್ತು ಧರ್ಮಸೂಕ್ಷ್ಮಗಳನ್ನು ಆತನು ಒಪ್ಪವಾಗಿ ಹೇಳಿರುವ ಅನೇಕ ಪ್ರಸಂಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಕುಮಾರವ್ಯಾಸನಿಗೆ ಪಂಪನಿಗಿದ್ದ ಯಾವ ದಾಕ್ಷಿಣ್ಯಗಳೂ ಇರುವುದಿಲ್ಲ. ಆತನೊಬ್ಬ ಸ್ವತಂತ್ರ ಆಲೋಚನೆಯ  ಚತುರಮತಿ ಕವಿಯೆಂಬುದು ಎಲ್ಲಾ ವಿದ್ವಾಂಸರ ಅಭಿಪ್ರಾಯವಾಗಿದೆ. ’ತನ್ನ ಕಾರ್ಯಕ್ಕೆ ಯಾವುದು ಎಷ್ಟು ಮುಖ್ಯ ಎಂಬುದನ್ನು ಕುಮಾರವ್ಯಾಸನಿಗಿಂತಲೂ ಹೆಚ್ಚಾಗಿ ಅರಿತ ಕವಿ ಮತ್ತಾರೂ ಇಲ್ಲ’ ಎಂಬ ಅಭಿಪ್ರಾಯವನ್ನು ಲೇಖಕರೇ ಹೇಳುತ್ತಾರೆ. ಅದಕ್ಕೊಂದು ಉದಾಹರಣೆಯನ್ನು ಗಮನಿಸುವುದಾದರೆ, ಬಲರಾಮನು ತೀರ್ಥಯಾತ್ರೆಯಿಂದ ಹಿಂದಿರುಗಿದ ಸಂದರ್ಭವನ್ನು ಮೂಲಭಾರತದಲ್ಲಿ ಅತ್ಯಂತ ಪ್ರಾಚೀನ ಪ್ರವಾಸ ಸಾಹಿತ್ಯವೆಂದು ಕರೆಯಬಹುದಾದಷ್ಟು (ಸುಮಾರು ಇಪ್ಪತ್ತು ಅಧ್ಯಾಯಗಳು) ರಚನೆಯಿದೆ. ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಆ ಎಲ್ಲಾ ಅಧ್ಯಾಯಗಳನ್ನೂ ಕೈಬಿಟ್ಟಿದ್ದಾನೆ.  ತನ್ನ ಕಾವ್ಯಕ್ಕೆ ಆಹಾರವೆಷ್ಟು ಬೇಕು ಎಂಬುದನ್ನು ಕುಮಾರವ್ಯಾಸ ಮಹಾಕವಿಯು ಎಲ್ಲರಿಗಿಂತಲೂ ಹೆಚ್ಚಾಗಿ ಅರಿತಿದ್ದನಂಬುದಕ್ಕೆ ಮೇಲಿನವು ಸಣ್ಣ ಉದಾಹರಣೆಗಳಷ್ಟೆ.
ಮುಂದೆ ಲೇಖಕರು ಜೈಮಿನಿ ಭಾರತದ ಬಗೆಗೆ ಬರೆಯುತ್ತಾರೆ. ಜೈಮಿನಿ ಭಾರತವು "ಗಮಕ ವಾಚನ ಭಾರತ" ವಾಗಿ ಏಕೆ ಹೆಚ್ಚುಗಾರಿಕೆಯನ್ನು ಪಡೆಯಿತು ಎನ್ನುವುದನ್ನು ವಿವರಿಸುತ್ತಾರೆ. ಇತ್ತೀಚೆಗೆ ಜೈಮಿನಿ ಭಾರತಕ್ಕಿಂತಲೂ ಗದುಗಿನ ಭಾರತವೇ ಗಮಕವಾಚನಕಾರರಿಗೆ ಏಕೆ ಇಷ್ಟವಾಯಿತು ಎಂಬದನ್ನು ತರ್ಕಬದ್ದವಾಗಿ ಮಂಡಿಸುತ್ತಾರೆ.  ಅದೇ ರೀತಿ , ಕೃಷ್ಣಶಾಸ್ತ್ರಿಗಳ ವಚನಭಾರತ, ಬಿ.ಎಂ.ಶ್ರೀ. ಅವರ ಅಶ್ವತ್ಥಾಮನ್ ಎಂಬ ನಾಟಕ, ಗೋವಿಂದ ಪೈಗಳ ಹೆಬ್ಬೆರೆಳು, ಕುವೆಂಪುರವರ ಬೆರಳ್ಗೆ ಕೊರಳ್ ಮುಂತಾದ ನವ್ಯ ಮತ್ತು ಸಮಕಾಲೀನ ಕೃತಿಗಳ ಬಗೆಗೆ ಚರ್ಚಿಸುತ್ತಾರೆ.

*ಗದುಗಿನ ಭಾರತಕ್ಕೆ ವಿಮರ್ಷಾಯುಕ್ತವಾದ ಹೊಸ ಪರಿಷ್ಕರಣೆಯ ಅಗತ್ಯವನ್ನು ಲೇಖಕರು ತಮ್ಮ ಹೊತ್ತಗೆಯಲ್ಲಿ ಸವಿವರವಾಗಿ ಅನೇಕ ಉದಾಹರಣೆಗಳ ಮೂಲಕ ಎಂಟು ಪುಟಗಳಲ್ಲಿ  ಹೇಳುತ್ತಾರೆ. ಈ ವಿವರಣೆಗಳು ೧೯-೦೪-೧೯೯೩ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಿ.ವಿ. ಅವರು ಕುಮಾರವ್ಯಾಸ ಭಾರತದ ಹೊಸ ಪರಿಷ್ಕರಣದ ವಿಚಾರವಾಗಿ ಮಾಡಿದ ಭಾಷಣದ ಯಥಾರೂಪವೇ ಆಗಿರುತ್ತದೆ.  ಇಲ್ಲಿಯವರೆವಿಗೂ ಅಂತಹ ಹೊಸ ಪರಿಷ್ಕೃತ ಸವಿವಾರವಾಗಿ ಚರ್ಚಿತವಾದ  ವ್ಯಾಖ್ಯಾನಗಳು ಕುಮಾರವ್ಯಾಸ ಭಾರತಕ್ಕೆ ಬರೆಯಲ್ಪಟ್ಟಿಲ್ಲವೆಂದು ಭಾವಿಸುತ್ತೇನೆ. ನೇರ ಭಾವಾರ್ಥಗಳನ್ನು ಹೊರತುಪಡಿಸಿ ವಿಷಯಾಧಾರಿತ ಚರ್ಚೆಗಳು ನಡೆದು ಗದುಗಿನ ಭಾರತಕ್ಕೆ ಮತ್ತೊಂದು ಭಾಷ್ಯವನ್ನು ಬರೆಯುವಲ್ಲಿ ಕನ್ನಡ ಸಾಹಿತ್ಯಾಸಕ್ತರು ವಿದ್ವಾಂಸರು ಮನಸು ಮಾಡಬೇಕಿದೆಯೆನಿಸುತ್ತದೆ.  ಪುಸ್ತಕದಲ್ಲಿ ಲೇಖಕರು ಮಾಡಿರುವ ಚಿಂತನೆಗಳು ಪ್ರಸ್ತುತತೆಯನ್ನು ಕಾಯ್ದುಕೊಂಡಿವೆ.

*ಯುದ್ಧಪಂಚಕದ ಪೂರ್ವರಂಗದಲ್ಲಿ ಮುಂದೆ ಮಹಾಭಾರತದ ಯುದ್ಧಕ್ಕೆ ಕಾರಣವಾಗುವ ಪ್ರಸಂಗಗಳನ್ನು ಪ್ರಮುಖವಾಗಿ ಉದ್ಯೋಗಪರ್ವ ಮತ್ತು ವಿರಾಟಪರ್ವಗಳ ವ್ಯಾಖ್ಯಾನದ ಮೂಲಕ ಲೇಖಕರು ವಿವರಿಸುತ್ತಾರೆ.  ಈ ಎರಡು ಪರ್ವಗಳೇ ಜಿ.ವಿ. ಅವರಿಗೂ ಹೆಚ್ಚು ಪ್ರಿಯವಾಗಿರುವಂತೆ ಕಂಡುಬರುತ್ತದೆ. ಕುಮಾರವ್ಯಾಸನು "ನಾನು ಕೃಷ್ಣನ ಕತೆಯನ್ನು ಹೇಳುತ್ತೇನೆ " ಎಂದು ಪ್ರಾರಂಭಿಸಿ ಕೃಷ್ಣನಿಗೆ ಜಗನ್ನಿಯಾಮಕನ ಸ್ಥಾನವನ್ನು ಕಲ್ಪಿಸುತ್ತಾನೆ, ಆದರೆ ಜಿ.ವೆಂ. ಅವರ ವಿಮರ್ಷೆಯಲ್ಲಿ ಕೃಷ್ಣನು ಉದ್ದೇಶಸಾಧನೆಯ ಕರ್ತನಾಗಿ  ಕಾಣಿಸಿಕೊಳ್ಳುತ್ತಾನೆ. "ಕೃಷ್ಣನ ಉದ್ದೇಶಸಾಧನೆಯು ನೆರವೇರುವುದು ಭಾರತದ ಕೊನೆಯ ಐದು ಪರ್ವಗಳಲ್ಲಿ " ಎಂದು ಲೇಖನವನ್ನು ಆರಂಭಿಸುವ ಜಿ.ವಿ ಅವರು ದ್ರುಪದ, ಕೃಷ್ಣ, ಬಲರಾಮ, ಧರ್ಮರಾಯ ಮತ್ತು ಸಾತ್ಯಕಿಗಳ ನಡುವೆ ನಡೆಯುವ ಕುತೂಹಲಭರಿತ ವಾದಗಳನ್ನು ಕುಮಾರವ್ಯಾಸನ ಅಂತರಂಗವು ಕಂಡಂತೆ ರೋಚಕವಾಗಿ ಬಣ್ಣಿಸುತ್ತಾರೆ. ಯುದ್ಧಪಂಚಕಕ್ಕೆ ಅದರ ಹಿಂದಿನ ಪರ್ವಗಳು ಹೇಗೆ ಪೂರ್ವರಂಗವಾಗಿ ಮೂಡಿಬಂದಿದೆ ಎಂಬುದನ್ನು ಸುಮಾರು ಮೂವತ್ತೇಳು ಪುಟಗಳ ವಿಮರ್ಷಾಯುಕ್ತವಾದ ವಿವರಣೆಯೊಂದಿಗೆ ತೆರೆದಿಡುತ್ತಾರೆ.

*ಭೀಷ್ಮಪರ್ವವೇ ಯುದ್ದಪಂಚಕದಲ್ಲಿ ಮೊದಲೆನೆಯ ಪರ್ವ. ಇಲ್ಲಿ ಕರ್ಣ-ಭೀಷ್ಮ-ದ್ರೋಣ ಮತ್ತು ದುರ್ಯೋಧನರ ನಡುವಿನ  ಸಂಭಾಷಣೆಗಳು ಮತ್ತು ಭೀಷ್ಮರಿಗೆ ಸೇನಾಪಟ್ಟವನ್ನು ಕಟ್ಟಬೇಕಾದುದರ ಅನಿವಾರ್ಯತೆ ಮತ್ತು ಅಗತ್ಯಗಳನ್ನು ನಾರಾಣಪ್ಪನು ತನ್ನ ಕಾವ್ಯರಚನೆಯ ಕುಶಲತೆಯ ಮೂಲಕ ಹೇಗೆ ವಿವರಿಸಿದ್ದಾನೆ ಎಂಬುದನ್ನು ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದೊಡನೆ ಹೋಲಿಸಿ ಕುಮಾರವ್ಯಾಸನು ಯಾವ-ಯಾವ ಸಂದರ್ಭಗಳಲ್ಲಿ ಇತರ ಕವಿಗಳಿಗಿಂತಲೂ ಕಾವ್ಯದ ನೆಲೆಯಲ್ಲಿ ಭಿನ್ನವಾಗಿ ಮತ್ತು ಹೆಚ್ಚು ಪಾಂಡಿತ್ಯಪೂರ್ಣತೆಯಿಂದ ಕಂಡುಬರುತ್ತಾನೆಂಬುದನ್ನು ಲೇಖಕರು ವಿವರಿಸುತ್ತಾರೆ.  ಪಂಪ ಮತ್ತು ಕುಮಾರವ್ಯಾಸರ ನಡುವಿನ ಹೋಲಿಕೆಯ ವಿಚಾರ ಬಂದಾಗ  ಲೇಖಕರು ತಮ್ಮ ಪುಸ್ತಕದಲ್ಲಿ ಹೇಳಿರದ ಪ್ರಸಂಗವೊಂದು ನನ್ನ ಗಮನಕ್ಕೆ ಬಂದಿತು.  ಪಂಪಭಾರತದಲ್ಲಿ ಭೀಷ್ಮರಿಗೆ ಸೇನಾಪಟ್ಟವನ್ನು ಕಟ್ಟುವ ಸಂದರ್ಭ ಬಂದಾಗ ಕರ್ಣನು ದುರ್ಯೋಧನಾದಿಗಳ ಮುಂದೆ ಭೀಷ್ಮರನ್ನು ಮುದುಕರೆಂದು ಮೂದಲಿಸುತ್ತಾನೆ. "ಕಣ್ಣು ಕಾಣದ ಮುದುಕನಿಗೆ ಸೇನಾಪಟ್ಟವನ್ನು ಕಟ್ಟುವ ಬದಲು ವೈರಿಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲಂತಹ ನನಗೆ ಪಟ್ಟಕಟ್ಟಯ್ಯಾ ’ ಎಂಬ ವೀರಾವೇಶದ ಮಾತುಗಳನ್ನಾಡುತ್ತಾನೆ.

 ( ಕಟ್ಟಿದ ಪಟ್ಟಮ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ|
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ | )

ಈ ಮಾತಿಗೆ ಸಿಡಿದು ಬೀಳುವ ದ್ರೋಣರು ಕರ್ಣನಿಗೆ "ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಅಲ್ಲಗೆಳೆಯಬೇಡ " ಎಂಬ ಹಿತವಾಕ್ಯವನ್ನು ನುಡಿಯತ್ತಾರೆ. ಭೀಷ್ಮರೂ ಸಹ "ಅಯ್ಯಾ ಈ ಮಹಾಯುದ್ಧರಂಗದಲ್ಲಿ ನಿನಗೂ ಒಂದು ದಿನ ಬರುತ್ತದೆಯಯ್ಯಾ " ಎಂದು ಮಾರ್ಮಿಕವಾಗಿ ಕರ್ಣನನ್ನು ಲಕ್ಷಿಸಿ ಹೇಳುತ್ತಾರೆ. ಪಂಪನು ಕಾವ್ಯಾಸಕ್ತರಿಗೆ ಪ್ರಿಯನಾಗುವುದು ಇಂತಹ ರಚನೆಗಳಿಂದಲೇ (ಕಿರಿದರೊಳ್ ಪಿರಿದರ್ಥವಂ !)  ಎನ್ನುವುದು ವಿದ್ವಾಂಸರ ಅಭಿಮತ.  ಇದೇ ಸಂದರ್ಭವನ್ನು ಕುಮಾರವ್ಯಾಸನು ಕಟ್ಟಿಕೊಡುವ ರೀತಿ ಬೆರಗು ಹುಟ್ಟಿಸುತ್ತದೆ. ತನ್ನ ರೂಪಕಗಳಿಂದಲೇ ಕಾವ್ಯಪ್ರೌಡಿಮೆಯನ್ನು ಮೆರೆದಿರುವ ನಾರಾಣಪ್ಪನಿಗೆ ಇಂತಹ ಪ್ರಸಂಗಗಳು ’ರೋಗಿ ಬಯಸಿದ್ದು ವೈದ್ಯ ಹೇಳಿದ್ದು’ ಎಂಬ ಉಕ್ತಿಗೆ ಅನ್ವರ್ಥವಾಗಿ ಬಿಡುತ್ತದೆ !.  ಇಲ್ಲೂ ಸಹ ಕರ್ಣನು ದುರ್ಯೋಧನಾದಿಗಳ ಮುಂದೆ " ದುರ್ಯೋಧನ, ನಿನ್ನ ಹತ್ತಿರಕ್ಕೆ ಬರುವಷ್ಟು ಮಹತ್ತಾದುದೇ ಈ ಯುದ್ಧದ ವರ್ತಮಾನ ? ನನಗೆ ವೀಳೆಯವನ್ನು ಕೊಡು ಪಾಂಡವರ ಸೇನಾಸಾಗರವನ್ನು ಕಲಕಿಬಿಡುತ್ತೇನೆ, ರಥಗಳಲ್ಲಿ ಅವರ ತಲೆಗಳ ರಾಶಿಯನ್ನು ಕಳುಹಿಸುತ್ತೇನೆ " ಎಂದು ಹೇಳುತ್ತಾ ಮುಂದೆ ದುರ್ಯೋಧನನು ಭೀಷ್ಮರಿಗೆ ಪಟ್ಟಕಟ್ಟುವ ವಿಚಾರಕ್ಕೆ ಬಂದಾಗ ಕರ್ಣನು " ಸುಯೋಧನ , ನೀನೊಬ್ಬ ಮರುಳ. ಭೀಷ್ಮರು ಪಿತಾಮಹರೆಂಬುದು ನಿಜ ಆದರೆ ಶಿವನನ್ನೇ ಎದುರಿಸಬಲ್ಲಂತಹ ಪರಾಕ್ರಮಿಗಳಿರುವಾಗ ಇಂತಹ ಮುಪ್ಪಿನ ಮುಗುದಗೆ  ಪಟ್ಟಕಟ್ಟುವೆಯಲ್ಲಾ , ಇದು ರಾಮನು ಜಾಂಬವನನ್ನು ನಂಬಿದಂತಾಯಿತು, ಸುಮ್ಮನೆ ಸಾವಿರಾರು ಜನರ ಕೊಲೆ ಮಾಡಿಸುವ ಬದಲು ನನಗೆ ಸೇನಾಪತ್ಯವನ್ನು ಕೊಡು  " ಎಂಬಂತಹ ಕಲಿತನದ ಮಾತುಗಳನ್ನಾಡುತ್ತಾನೆ. ಕರ್ಣನ ಮಾತುಗಳನ್ನು ಕೇಳಿ ಕೆರಳುವ ದ್ರೋಣರು " ನಿನ್ನ ಯೋಗ್ಯತೆಯ ಮಟ್ಟಕ್ಕೆ ಇಳಿಯುವಂತಹವರೇ ಭೀಷ್ಮರು ? ಜಾಂಬವನೇನು ಸಾಮಾನ್ಯನಲ್ಲ ಎಂಬುದನ್ನು ತಿಳಿ " ಎಂದು ತಿಳಿ ಹೇಳುತ್ತಾರೆ.  ಇಲ್ಲಿ ವಿಷಯ ಮತ್ತು ಸಂದರ್ಭಸಾಮ್ಯತೆಗಳಿದ್ದರೂ ಸಹ ಅದನ್ನು ವರ್ಣಿಸುವ ಸೊಬಗಿನಲ್ಲಿ ಇಬ್ಬರೂ ಮಹಾಕವಿಗಳೆನಿಸಿಕೊಳ್ಳುತ್ತಾರೆ.  ಜಿ.ವಿ. ಯವರು ಇದಕ್ಕೆ ಇನ್ನೊಂದು ಉದಾಹರಣೆಯನ್ನು ಕೊಡುತ್ತಾರೆ. ಯುದ್ಧರಂಗದಲ್ಲಿ ಭೀಷ್ಮಾ ರ್ಜುನರು ಪರಸ್ಪರ ಇದಿರಾದಾಗ  ಹೇಳುವ ಈ ವಾಕ್ಯ ಕುಮಾರವ್ಯಾಸನನ್ನು ಮಹಾಕವಿಯ ಪಟ್ಟಕ್ಕೇರಿಸುತ್ತದೆ.
" ಬರಿಯ ಮಾತೋ ! ಚಾಪವಿದ್ಯದೊಳರಿತ  ಉಂಟೋ  ? ಹೊತ್ತುಗಳೆಯದೆ ಹೆರಿಸಿರೇ ನಿಮ್ಮಯ ಬಾಣಗರ್ಭಿಣಿಯ ! "  ಇಷ್ಟು ಸಾಕಲ್ಲವೆ ನಾರಾಣಪ್ಪನ ಕುಶಲತೆಯನ್ನು ತಿಳಿಯಲು !.
ಪಂಪ ಮತ್ತು ಕುಮಾರವ್ಯಾಸರ ಕಾವ್ಯದ ತೌಲನಿಕ ಅಧ್ಯಯನ ಮತ್ತು ವಿಮರ್ಷೆಯು ನಾಲ್ಕಾರು ವಿದ್ವಾಂಸರುಗಳು ಕೂಡಿ ಮಾಡಬೇಕಾಗಿರುವ ಕಾರ್ಯ, ಅಂತಹ ಕಾರ್ಯವಿಚಾರವನ್ನು  ನಾನಿಲ್ಲಿ ಹೇಳುವುದು ನನ್ನಿಂದ ಅಸಾಧ್ಯ.

 * ಕುಮಾರವ್ಯಾಸನ ಸ್ವೋಪಜ್ಞತೆ ಮತ್ತು ಕರುಣಾರ್ದ್ರಪರ್ವ ಕರ್ಣಪರ್ವ ಎಂಬ ತಲೆಬರಹದಡಿಯಲ್ಲಿ ಸುಮಾರು ನೂರಾಐದು ಪುಟಗಳಷ್ಟು ವಿಚಾರಗಳನ್ನು ಸಾದ್ಯಂತವಾಗಿ ಷಟ್ಪದಿಗಳ ಉದಾಹರಣೆಯೊಂದಿಗೆ ಅರ್ಥದೊಂದಿಗೆ ವಿವರಿಸುತ್ತಾರೆ.  ವಾಸ್ತವದಲ್ಲಿ ಕುಮಾರವ್ಯಾಸನಿಗೆ ಕೃಷ್ಣನ ನಂತರ ಕರ್ಣನೇ ಹೆಚ್ಚು ಪ್ರಿಯವಾದ ವ್ಯಕ್ತಿಯಿರಬೇಕೆನಿಸುತ್ತದೆ ಹಾಗಾಗಿ ಕರ್ಣಪರ್ವಕ್ಕೆ ಹೆಚ್ಚು ಸಂಧಿಗಳನ್ನು ಮೀಸಲಿಟ್ಟು ವಿಶೇಷ ರೂಪಕಗಳೊಂದಿಗೆ ಮನಮುಟ್ಟುವಂತೆ ಪ್ರಸಂಗಗಳನ್ನು ಕಟ್ಟಿಕೊಡುತ್ತಾನೆ.  ಮೂಲಭಾರತದಿಂದ ಕುಮಾರವ್ಯಾಸನು ತನ್ನ ಕಾವ್ಯರಚನೆಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳೇನು ? ಯಾವುವು ? ಮತ್ತು ಅದರ ಅಗತ್ಯಗಳೇನು ? ಅಂತಹ ಬದಲಾವಣೆಗಳು ಕಾವ್ಯದೃಷ್ಟಿಯಿಂದ ಎಷ್ಟು ಪೂರಕವಾಗಿದೆ ಎಂಬುದನ್ನು ಜಿ.ವಿ.ಯವರು ವಿಶ್ಲೇಶಿಸುತ್ತಾರೆ.  ಇಡೀ ಪುಸ್ತಕದ ಅಗತ್ಯವು ಸಾರ್ಥಕವಾಗುವುದೇ ಈ ನೂರು ಪುಟಗಳಲ್ಲಿ.  ಕುಮಾರವ್ಯಾಸನ ಕಾವ್ಯದ ಅಂತರಂಗವನ್ನು ಈ ಎರಡು ಭಾಗಗಳಲ್ಲಿ ಕಾವ್ಯದಲ್ಲಿನ ಸಾರ್ವತ್ರಿಕತೆ ಮತ್ತು ವಿಶಿಷ್ಟತೆಯನ್ನಾಧರಿಸಿ  ಇಡೀ ಕರ್ಣಪರ್ವದ ಪ್ರಸಂಗವನ್ನು ವಿವರವಾಗಿ ಓದುಗರ ಮುಂದೆ ತೆರೆದಿಡುತ್ತಾರೆ.  ಇಲ್ಲಿ ಇನ್ನು ಇದರ ಬಗೆಗೆ ಹೆಚ್ಚು ಹೇಳಲಾರೆ. ಓದಿ-ಆನಂದಿಸಿ !.

* ಯುದ್ಧಪಂಚಕದ ಉಪಸಂಹಾರದಲ್ಲಿ, ಮೂಲಭಾರತ ಮತ್ತು ಗದುಗಿನಭಾರತವು ಹೇಗೆ ಸಾಮ್ಯತೆಯನ್ನು ಪಡೆಯುತ್ತದೆ ಮತ್ತು ಅಂತಹ ಸಾಮ್ಯತೆ ಮತ್ತು ಬದಲಾವಣೆಗಳನ್ನು ಕಾವ್ಯಾಲಂಕಾರ ಶಾಸ್ತ್ರಕ್ಕೆ, ಧರ್ಮಕ್ಕೆ ಮತ್ತು ಮೂಲಭಾರತದ ಇಂಗಿತಕ್ಕೆ ಚ್ಯುತಿ ತಾರದಂತೆ ಕುಮಾರವ್ಯಾಸನು ಹೇಗೆ ನಿರ್ವಹಿಸಿದ್ದಾನೆ ಎಂಬುದನ್ನು ಲೇಖಕರು ವಿಶ್ಲೇಶಿಸುತ್ತಾರೆ.  ಗದಾಪರ್ವದ ಅನೇಕ ಪದ್ಯಗಳನ್ನು ಅರ್ಥಸಹಿತವಾಗಿ ವಿವರಿಸುವುದರ ಜೊತೆಗೆ ಅಲ್ಲಿ ನಿರೂಪಿತವಾಗಿರುವ ರೂಪಕಗಳಿಗೂ ವಿಶೇಷ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಪುಸ್ತಕದ ಸಮಗ್ರತೆಗೆ ಉಪಸಂಹಾರವು ಪೇಟದ ಮೇಲಿನ ನವಿಲುಗರಿಯಂತೆ ಶೋಭಿಸುತ್ತದೆ !.
  ಇದರೊಟ್ಟಿಗೆ ಕೆಲವು ಚಮತ್ಕಾರಿಕ ಶ್ಲೋಕಗಳನ್ನು ಕೊಡಮಾಡುತ್ತಾರೆ.

 " ಮಹತ್ವೇಚ ಗುರುತ್ವೇಚ ಧ್ರಿಯಮಾಣಂ ಯಥೋಧಿಕಮ್
   ಮಹತ್ವಾತ್ ಭಾರವತ್ವಾಚ್ಚ ಮಹಾಭಾರತಮುಚ್ಯತೇ | "

( ಭಾರತವನ್ನು ಯಾವುದಕ್ಕೆ ಹೋಲಿಸಿದರೂ ಭಾರತವೇ ಮಹತ್ವದ್ದೂ, ಗುರುತರವಾದುದೂ ಆಗಿ ಕಂಡು ಬಂದುದರಿಂದ ಅದು ಮಹಾಭಾರತವಾಯಿತು !) .

ಹೀಗೆ ಕುಮಾರವ್ಯಾಸನು ಭಾರತವನ್ನೇ ತನ್ನ ಕಾವ್ಯರಚನೆಗೆ ಏಕೆ ಬಳಸಿಕೊಂಡನು, ಆತನೊಬ್ಬ ದೈವಶಿಖಾಮಣಿಯೇ? ಕೃಷ್ಣನ ಪರಮ ಭಕ್ತನೇ ?  ಎಂಬ ಜಿಜ್ಞಾಸೆಯ ನಡುವೆಯೇ ಲೇಖಕರು ಮಹಾಕವಿಯ ಕಾವ್ಯೋದ್ಧೇಶಗಳನ್ನು   ಸೋದಾಹರಣವಾಗಿ ವಿವರಿಸುತ್ತಾರೆ.  ಕುಮಾರವ್ಯಾಸನಿಗೆ ಕೃಷ್ಣನಿಂದ ಧರ್ಮಸಂಸ್ಥಾಪನೆಯಾದ ನಂತರ ಕಾವ್ಯವನ್ನು ಮುಂದುವರಿಸುವ ಔಚಿತ್ಯತೆ ಇರುವುದಿಲ್ಲ ಎಂಬುದು ಕವಿಯ ಘೋಷವಾಕ್ಯದಿಂದಲೇ ತಿಳಿಯುತ್ತದೆ. ಮೊದಲಿಗೇ ಕವಿಯು ತಾನು "ಕೃಷ್ಣನ ಮಹಿಮೆಯನ್ನು (ಕತೆ) ಹೇಳುತ್ತೇನೆ " ಎಂದು ಪ್ರಾರಂಭಿಸಿರುತ್ತಾನೆ. ಕವಿಯ ಕೃಷ್ಣನ ದೈವತ್ವದ ಪರವಾದ ನಿಲುವು ಗದುಗಿನ ಭಾರತದ ಕೊನೆಯ ಷಟ್ಪದಿಯಲ್ಲಿ ಫಲಶ್ರುತಿಯ ರೂಪದಲ್ಲಿ ಪ್ರಕಟಗೊಂಡಿದೆಯೆಂದು ನಾನು ಭಾವಿಸುತ್ತೇನೆ.

ವೇದ ಪಾರಾಯಾಣದ ಫಲ ಗಂ
ಗಾದಿ ತೀರ್ಥಸ್ನಾನದ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ |

ಎಂದು ಹೇಳಿ ಕವಿಯು ತನ್ನ ಕಾವ್ಯವನ್ನು ಮುಗಿಸುತ್ತಾನೆ. ಈ ಪರಿಯ ಫಲಶ್ರುತಿಯನ್ನು ಕವಿಯು ಬರೆದಿರುವ ಹಿನ್ನಲೆಯನ್ನು ಗಮನಿಸಿದಾಗ, ಕವಿಯು ಕೃಷ್ಣನನ್ನು ಜಗನ್ನಿಯಾಮಕನಾದ ಪರಮಾತ್ಮನೆಂದೇ ಬಗೆದು, ಅವನ ಕತೆಯನ್ನೇ ಹೇಳುವುದರಿಂದ ಕಾವ್ಯವನ್ನು ಅತ್ಯಂತ ಪವಿತ್ರ ಸ್ಥಾನಕ್ಕೇರಿಸಿ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿರಬಹುದೆನ್ನಿಸಿತು.  ಕೊನೆಯ ಷಟ್ಪದಿಯ ಅರ್ಥವನ್ನು ಇಲ್ಲಿ ಗಮನಿಸೋಣ.

ಚತುರ್ವೇದಗಳನ್ನು ಓದಿದುದರ ಫಲ
ಗಂಗಾದಿ ( ಗಂಗೇಚ ಯುಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ) ನದಿಗಳ ಸ್ನಾನದ ಪುಣ್ಯಫಲ,
ಕೃಚ್ಛ್ರಾಚರಣೆಯಿಂದ ನಿಯಮಿಸಲ್ಪಟ್ಟ ತಪದ ಫಲ,
ಜ್ಯೋತಿ(ಅಗ್ನಿ ?)ಷ್ಟೋಮ ಎಂಬ ಯಾಗದ ಫಲ,
ಭೂದಾನ, ಗೋದಾನ, ವಸ್ತ್ರದಾನ, ಕನ್ಯಾದಾನ ( ದಶದಾನಾದಿಗಳು ) ಗಳಿಂದ ದೊರಕುವ ಪುಣ್ಯಫಲವು  
ಈ ಭಾರತವನ್ನು ಓದಿದವರಿಗೆ ಅಥವಾ ಭಾರತದೊಳೊಂದಕ್ಷರವ ಕೇಳ್ದರಿಗೆ ಆದರಿಸಿ ಬರುವುದೆಂದು ಕವಿಯು ಬಣ್ಣಿಸುತ್ತಾನೆ. ಇಲ್ಲಿ, ಜ್ಯೋತಿಷ್ಟೋಮ ಎಂದು ಬರುವ ಯಾಗದ ಹೆಸರನ್ನು  ನಾನೆಲ್ಲೂ ಕೇಳಿಲ್ಲ ಆದರೆ ಅದು ’ಅಗ್ನಿಷ್ಟೋಮ’ ವಿರಬಹುದೆ ? ಎಂಬ ಜಿಜ್ಞಾಸೆ ನನ್ನದು. ( ಜಿ.ವಿ. ಯವರೂ ಸಹ ಇದರ ಬಗೆಗೆ ಏನನ್ನೂ ಬರೆಯುವುದಿಲ್ಲ ). ವೇದಾಂಗಗಳಲ್ಲಿ ಬಳಕೆಯಾಗಿರುವ "ತ್ರಿಗುಣಿಕೃತ, ಅಗ್ನಿಷ್ಟೋಮ, ಅತಿರಾತ್ರ, ವಾಜಪೇಯ, ಪೌಂಡರೀಕ, ರಾಜಸೂಯ ಮತ್ತು ಅಶ್ವಮೇಧ " ಇವು ಏಳು ಮಹಾಯಾಗಗಳಾಗಿದ್ದು ಇವುಗಳನ್ನು ಭೂಪಾಲರು, ಚಕ್ರವರ್ತಿಗಳು, ಮಹಾರಾಜರೆನಿಸಿಕೊಂಡವರು ಮಾತ್ರವೇ ನೆರವೇರಿಸಬಹುದಾಗಿದ್ದುದೆಂದು ತಿಳಿದುಬರುತ್ತದೆ. "ಜ್ಯೋತಿಷ್ಟೋಮ" ಎಂಬ ಯಾಗದ ಬಗೆಗೆ ವಿವರಗಳಿದ್ದಲ್ಲಿ ಬಲ್ಲವರು ತಿಳಿಸಿರೆಂದು ವಿನಂತಿಸುತ್ತೇನೆ.

ಕುಮಾರವ್ಯಾಸನ ಅಂತರಂಗವನ್ನು ಸಾರ್ಥಕವಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿರುವ ಜಿ.ವೆಂ. ಅವರಿಗೇ ಪುಸ್ತಕದ ಸರ್ವಪಾಲು ಸಲ್ಲುತ್ತದೆ.  ಹತ್ತು ಹಲವು ಮಜಲುಗಳೊಂದಿಗೆ ಸಾರ್ವಕಾಲಿಕವಾಗಿ ಕಾವ್ಯಾಸಕ್ತರ ವಿದ್ವಾಂಸರ ಪಾಲಿಗೆ ಅಮೃತವಾಗಿರುವ ಗದುಗಿನ ಭಾರತದ ರಚನಕಾರನಾದ ಮಹಾಕವಿ ನಾರಾಣಪ್ಪನಿಗೆ ನಾನೂ ನಮಿಸುತ್ತೇನೆ.
ಗದುಗಿನ ಭಾರತದಲ್ಲಿ ಕುಮಾರವ್ಯಾಸನ ಕೃಷ್ಣನಿಗಿಂತಲೂ ಕುಮಾರವ್ಯಾಸನೇ  ನನಗೆ ಹೆಚ್ಚು ದೇವಕಳೆಯಿಂದ ಗೋಚರಿಸುತ್ತಾನೆ !.

................................................................................*..........................................................................................


ಪುಸ್ತಕದ ಹೆಸರು  : ಕುಮಾರವ್ಯಾಸನ ಅಂತರಂಗ- ಯುದ್ಧಪಂಚಕದಲ್ಲಿ
ಲೇಖಕರು          : ಪ್ರೋ. ಜಿ. ವೆಂಕಟಸುಬ್ಬಯ್ಯ
ಪುಟಗಳು           :೨೧೨
ಬೆಲೆ                 : ರೂ ೧೪೫
ಪ್ರಕಾಶನ           : ಪ್ರಿಸಂ ಬುಕ್ಸ್. ಬೆಂಗಳೂರು.



Feb 22, 2011

ಶಂಭುವಾಣಿ - ೨


ದಯೆ ಮತ್ತು ಮರಣ

"ದಯವೇ (ದಯೆಯೇ) ಧರ್ಮದ ಮೂಲವಯ್ಯಾ" ಎಂದು ಬಸವಣ್ಣ ಮಹಾಶಯರು ಹೇಳಿದಾಗ ಜಗತ್ತಿನಲ್ಲಿ ದಯೆಯ ಔಚಿತ್ಯವನ್ನು ಯಾರೂ ಪ್ರಶ್ನಿಸಲಿಲ್ಲ. ಸಾಂಸ್ಕೃತಿಕ ಕಲಸು ಮೇಲೋಗರಗಳ ಇಂದಿನ ಜಗತ್ತಿನಲ್ಲಿ ದಯೆ, ಕರುಣೆ,ಮಾನವೀಯತೆಗಳೇ ’ಮೂಲವ್ಯಾಧಿ’ಯಯ್ಯಾ ಎಂದು ಮಾನ್ಯ ಶಂಭುಲಿಂಗರು ಹೇಳಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಭಿಕ್ಷುಕನೊಬ್ಬನಿಗೆ ಒಂದು ರೂಪಾಯಿ ಹಾಕಿದರೆ , ಪಾರ್ಟಿಯನ್ನೊಮ್ಮೆ ತಲೆಯಿಂದ ಕಾಲಿನವರೆವಿಗೂ ನೋಡಿ ’ಒಳ್ಳೆ ಸೂಟು-ಬೂಟು ಆಕ್ಕಂಡವ್ನೆ, ಇಷ್ಟೆಯಾ ಇವ್ನ ಯೇಗ್ಯತೆ’ ಎಂದು ಬೈದುಕೊಂಡು ಹೋಗುವುದನ್ನು ಅನುಭವಿಸಿರುವವರು ಹೇರಳ.  ಕರುಣೆಗೆ ಬೆಲೆ ಎಲ್ಲಿದೆ ಸ್ವಾಮಿ !?.

ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ಯ ನಿರ್ದೇಶನದ ’ಗುಜಾರಿಶ್’ ಎಂಬ ಹಿಂದಿ ಚಲನಚಿತ್ರದ ಕಥಾವಸ್ತು ’ದಯಾಮರಣ’. ಚಿತ್ರದ ನಾಯಕ ಖ್ಯಾತ ಜಾದುಗಾರ. obviously ಆತನಿಗೊಬ್ಬ ವಿಲನ್ ಜಾದುಗಾರ ಇರುತ್ತಾನೆ. ನಾಯಕನ ಜಾದೂ ಕಾರ್ಯಕ್ರಮ ನೆಡೆಯುವಾಗ ವಿಲನ್ ಜಾದುಗಾರ ಆತನನ್ನು ’ಮುಗಿಸುವ’ ಸಂಚು ಮಾಡುತ್ತಾನೆ. ಅದೃಷ್ಟವಶಾತ್ ನಾಯಕ ಸಾಯುವುದಿಲ್ಲ. ದುರಾದೃಷ್ಟಕ್ಕೆ ಆತ ಬದುಕಿಯೂ ಸತ್ತಂತಾಗುತ್ತಾನೆ. ಆತನ ಕೈ-ಕಾಲು-ಬೆನ್ನೆಲುಬುಗಳೆಲ್ಲವೂ ನಿಷ್ಕ್ರಿಯವಾಗಿ ಆತನೊಬ್ಬ ವರ್ತಮಾನದ ’ಭೂತ’ವಾಗುತ್ತಾನೆ. ಇಷ್ಟಾದರೂ, ನಾಯಕನ ಕುತ್ತಿಗೆಯ ಮೇಲ್ಭಾಗದ ಎಲ್ಲಾ ಅಂಗಗಳೂ ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಆತನಿಗೊಬ್ಬ care taker (cum ಸಂಗಾತಿ !) ಇರುತ್ತಾಳೆ. ಆಕೆಯೇ ಆತನ ’ಸಂಪೂರ್ಣ’ ಹೊಣೆಯನ್ನು ಹೊರುವವಳು !. ಮಲಗಿದಲ್ಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಬೇಕಾದ ಆತನಿಗೆ ಆಕೆಯೇ ಕೈ-ಕಾಲು-ಬೆನ್ನೆಲುಬಾಗಿ ನಿಲ್ಲತ್ತಾಳೆ.  ಅವರ ವೈಯಕ್ತಿಕ ಪ್ರಪಂಚದಲ್ಲಿ ಬೇರಾರಿಗೂ ಪ್ರವೇಶವಿರುವುದಿಲ್ಲ. ಇಷ್ಟಾದರೂ ನಾಯಕ ಮಾತ್ರ ಯಾವತ್ತೂ ಉತ್ಸಾಹದ ಚಿಲುಮೆಯಂತಿರುತ್ತಾನೆ. ತನ್ನಿಂದ ಇತರರಿಗೇಕೆ ತೊಂದರೆ (ತನಗೂ ಸಹ!) ಎಂಬ ಗೊಂದಲಕ್ಕೆ ಬೀಳುವ ನಾಯಕ ತನಗೆ ದಯಾಮರಣ ಕಲ್ಪಿಸುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳುತ್ತಾನೆ. ಆತನ ಮತ್ತೊಬ್ಬ ವಕೀಲ ಸ್ನೇಹಿತೆ ಆತನ ಪರವಾಗಿ ವಕಾಲತ್ತು ವಹಿಸುತ್ತಾಳೆ          ( ಇದೆಲ್ಲಾ ತೀರಾ ಭಾವನಾತ್ಮಕ ಸನ್ನಿವೇಶಗಳು, ಭಾವುಕರು ಕರವಸ್ತ್ರ ಇಟ್ಟುಕೊಳ್ಳಬಹುದು). ನ್ಯಾಯಾಲಯ ಆತನಿಗೆ ದಯಾಮರಣವನ್ನು ಕಲ್ಪಿಸುವುದಿಲ್ಲ (according to ಸಾಂವಿಧಾನಿಕ ನಿಯಮಗಳು). ನಾಯಕನ ಅರ್ಜಿ ಅನೂರ್ಜಿತವಾಗುತ್ತದೆ. ಕಟ್ಟಕಡೆಗೆ ನಾಯಕನೇ ತನ್ನ ಪ್ರೀತಿ ಪಾತ್ರರೆಲ್ಲರನ್ನೂ ಕರೆದು ’ಪಾರ್ಟಿ’ ಕೊಟ್ಟು self ದಯಾಮರಣದ ನಿರ್ಧಾರವನ್ನು ಪ್ರಕಟಿಸುತ್ತಾನೆ.  ಮುಂದಿನದೆಲ್ಲಾ ಅವನಿಚ್ಚೆಯಂತೆಯೇ ನೆರವೇರುತ್ತದೆ.

ಬದುಕುವ ಹಕ್ಕು ಎಲ್ಲರಿಗೂ ಇರುವಂತೆ ಸಾಯುವ ಹಕ್ಕೂ ಇರಬಾರದೇಕೆ ಎಂದು ಮಾನ್ಯ ಶಂಭುಲಿಂಗರು ಕೊಶ್ನಿಸಿದ್ದಾರೆ. ಸಾಯುವ ಹಕ್ಕು ಬಂದರೆ ಆತ್ಮಹತ್ಯೆ ಎನ್ನುವ ಪದವೇ ನೆಗೆದು ಬಿದ್ದು ಹೋಗಬಹುದು.  ವಾಸ್ತವದಲ್ಲಿ ಚಿತ್ರದ ನಾಯಕನ ಉತ್ಸಾಹ ಎಲ್ಲರಿಗೂ ಮಾದರಿಯಾಗುವಂತಹುದೆ, ಪುಸ್ತಕವನ್ನೋದಲು ಆತನು ಬಳಸುವ ತಂತ್ರವೂ ಆಕರ್ಷಕವಾಗಿದೆ. ಇಷ್ಟಾದರೂ ’ಚಿತ್ರ’ ತುಸು ಬೋರ್ ಹೊಡೆಸಿದರೆ ಅದಕ್ಕೆ ಶ್ರೀ ಶಂಭುಲಿಂಗರು ಹೊಣೆಯಲ್ಲ !.  ಚಿತ್ರವನ್ನೊಮ್ಮೆ ನೋಡಿದರೆ ನಾಯಕನಿಗೆ ದಯಾಮರಣದ ಯೋಚನೆ ಏಕೆ ಬಂತೆಂಬುದು ಅರಿವಾಗುತ್ತದೆ. ಸಾಯುವುದಕ್ಕೂ ಸ್ವತಂತ್ರ ಬೇಕಲ್ಲವೆ ? . ಟಿಪಿಕಲ್ ಕೈಲಾಸಂ ೧೯೪೬ ರಲ್ಲಿ ಸತ್ತರು. ಇನ್ನೊಂದು ವರುಷ ಬದುಕ್ಕಿದ್ದಿದ್ದರೆ ಅವರೂ ಸ್ವತಂತ್ರವಾಗಿ ಸಾಯಬಹುದಿತ್ತು.   ಸಿನಿಮಾ ದಯಾಮರಣದ ಅಗತ್ಯ ಯಾರಿಗೂ ಬರದಿರಲೆಂದು ಆಶಿಸೋಣ. ಬದುಕು ಎಲ್ಲರಿಗಾಗಿ ಮತ್ತು ಎಲ್ಲರೂ ಬದುಕುವುದಕ್ಕಾಗಿ ಬದುಕೋಣ.

......................................................................................

ಗಣ -ಗಣತಿ

ಈಗ ಮತ್ತೆ ಗಣತಿ ಮೊದಲಾಗಿದೆ. ಹಲವು ಸರ್ಕಾರೀ ಸಾಂಪ್ರದಾಯಿಕ ವ್ಯವಸ್ಥೆಗಳೆಲ್ಲಾ ಈಗಾಗಲೇ ಗಣಕೀಕೃತಗೊಂಡಿರುವುದರಿಂದ ಈ ಬಾರಿಯ ಗಣತಿಯನ್ನು ನಿಜಕ್ಕೂ ’ಗಣ-ತಿ’ ಎನ್ನಬಹುದು. ಗಣತಿಯಿಂದ ಏನೇನು ಉಪಯೋಗವಿದೆ ಎಂದು ಕೆಲವರನ್ನು ಕೇಳಿದರೆ ಹಲವು ತೆರನಾದ ಉತ್ತರಗಳು ಬರುವುದು ನಿಶ್ಚಿತ.  ಗಣತಿಗೆ ನಿಗದಿ ಪಡಿಸಿರುವ ದಿನಗಳಿಗಿಂತ ಮುಂಚಿತವಾಗಿ ಗಣತಿಯನ್ನು ಮುಗಿಸಿ ಮಿಕ್ಕ ದಿನಗಳನ್ನು ಸಂಸಾರದ ಜೊತೆ ’ಕಳೆಯ’ಬಹುದಾದ ಉಪಯೋಗ ಶಿಕ್ಷಕರಿಗಿದೆ ಎಂದು ಮಾನ್ಯ ಶಂಭುರವರು ಪಿಸುದನಿಯಲ್ಲಿ ಹೇಳಿದ್ದಾರೆ. ಗಣತಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿರುವುದರಿಂದ ಅವರೀಗ ನಿಜಕ್ಕೂ ’ಶಿಕ್ಷಿತರೇ ’ ಎನ್ನಬಹುದು.  ಸುಶಿಕ್ಷಿತರು ಎಂಬ ಪದವನ್ನು ಶಿಕ್ಷಕರೆಲ್ಲಾ ಸೇರಿಕೊಂಡು ಒಳ್ಳೆಯ ಶಿಕ್ಷೆ ಅನುಭವಿಸುತ್ತಿರುವವರು ಎಂದು ಬದಲಾಯಿಸಿಕೊಳ್ಳಬಹುದು. ಯಾರಿಗೆ ಏನಾಗಲೀ , ಬಿಡಲಿ ’ಮಂಗಳಮುಖಿ’ಯರಿಗಂತೂ ಈ ಬಾರಿಯ ಗಣತಿಯಲ್ಲಿ ಅವರನ್ನೂ (ಮಕ್ಕಳನ್ನೂ, ತಂದೆಯ(ರ)ನ್ನೂ means ಪೋಷಕರನ್ನು) ’ಗಣ’ನೆಗೆ ತೆಗೆದುಕೊಳ್ಳುವ ಭರವಸೆ ದೊರೆತಿದೆ ಮತ್ತು ಈಡೇರುತ್ತಿದೆ. ಮಂಗಳಮುಖಿಯರ ವಿಚಾರ ಇಲ್ಲಿ ಬರೆಯಲು ಕಾರಣ, ಇದೀಗ ನಾನು ಓದುತ್ತಿರುವ ಭಾಷಾಪರಿಣತ, ಭಾಷಾಶಾಸ್ತ್ರ ಅನುವಾದಕ ಶ್ರೀಯುತ A.K. ರಾಮಾನುಜನ್ ಅವರ ಪುಸ್ತಕ. ತೆಲುಗಿನ ಕ್ಷೇತ್ರಯ್ಯ, ಅನ್ನಮಯ್ಯ, ಸಾರಂಗಪಾಣಿ ಮುಂತಾದವರ ಪದಗಳನ್ನು ಆಂಗ್ಲಭಾಷೆಯಲ್ಲಿ ಅನುವಾದಿಸಿ ಅವರು ಬರೆದಿರುವ ಪುಸ್ತಕ "When God is a customer"( ದೇವರು ಗಿರಾಕಿಯಾಗಿ !) .  
{ಪುಸ್ತಕ ಎಲ್ಲೆಲ್ಲೂ ಅಲಭ್ಯ. ಗೂಗಲ್-ಇ-ಬುಕ್ಸ್ ನಲ್ಲಿ ಹುಡುಕಿದಾಗ ಕೇವಲ ಟಿಪ್ಪಣಿ ಮತ್ತು ಪರಿಚಯವಷ್ಟೇ ದೊರೆತದ್ದು. ಕಡೆಗೆ Landmark ಪುಸ್ತಕ ಮಳಿಗೆಯಲ್ಲಿ ಇದೆ ಎಂದು ತಿಳಿದು ಕಾಸು ಕೊಟ್ಟು ತಂದಿರಿಸಿಕೊಂಡಿದ್ದೇನೆ.}
ಭಾಷಾನುವಾದದಲ್ಲಿ A.K. (A=ಆಂಗ್ಲ, K=ಕನ್ನಡ ಎನ್ನೋಣವೇ ? ) ರಾಮಾನುಜನ್ ಅವರಿಗೆ ಸರಿಸಾಟಿಯಾಗಬಲ್ಲವರು ಇಲ್ಲವೆಂದು ಹೇಳುವುದು ಅತಿಶಯೋಕ್ತಿಯಾದರೂ, ಒಂದರ್ಥದಲ್ಲಿ ಅದೂ ನಿಜವೇ ಆಗುತ್ತದೆ. (ರಾಮಾನುಜನ್ನೇ ’ಏಕೆ’ ? ಇನ್ನೊಬ್ಬ ಭಟ್ಟರೋ, ಶೆಟ್ಟರೋ ಆಗಬಾರದೇ ?  ಎಂದು ಯಾರಾದರೂ ಪ್ರಶ್ನಿಸಿದರೆ  ಅದಕ್ಕೆ ಮಾನ್ಯ ’ಶಂ’ ರವರ ಬಳಿ ಉತ್ತರವಿಲ್ಲ !). ಪುಸ್ತಕದ ಅನುವಾದವನ್ನು ಓದುತ್ತಿದ್ದರೆ, ಮುಗಿಸುವಷ್ಟರಲ್ಲಿ ನಾನೇನಾದರೂ ಇಂದ್ರಿಯಾತೀತನಾಗಿ (’ಕುಂಡಲಿನಿ’ ಸಿಡಿದು !) ಬಿಡುತ್ತೇನೇನೋ ಎಂದು ಅನಿಸುತ್ತಿದೆ.
When God is a customer ನಲ್ಲಿ ದೇವರೇ ಮಂಗಳಮುಖಿಯರ ಬಳಿ ಬರುತ್ತಾನೆ. (ಇಂದಿನ ಸಾಮಜಿಕ ಸ್ಥಿತಿಗೆ ತದ್ವಿರುದ್ದ) . ಆತನೇ ಗಿರಾಕಿಯಾಗುತ್ತಾನೆ, ಹಣ ನೀಡುತ್ತಾನೆ !.
ಇದು ಮೀರಾ-ಮಾಧವ, ಗೋಪಿ-ಕೃಷ್ಣರ ಕತೆಗಳಿಗೆ ವಿರುದ್ದವಾಗಿಯೇ ನೆಡೆಯುತ್ತದೆ. ಅದಕ್ಕೇ ಪುಸ್ತಕದ ಹೆಸರು "When God is a customer" .
ದೇವರಿಗೆ ಭಕ್ತರು ಇರಲೇಬೇಕೆಂದೇನೂ ಇಲ್ಲ. ಆದರೆ ಭಕ್ತರಿಗೆ ದೇವರಂತೂ ಬೇಕು ಕನಿಷ್ಟ ಭಕ್ತ/ಭಕ್ತೆ ಎನಿಸಿಕೊಳ್ಳಲು.   ಪುಸ್ತಕ ಓದಿ ಮುಗಿಸಿದ ನಂತರ ’ಸಾಧ್ಯವಾದಲ್ಲಿ’ ಇನ್ನಷ್ಟು ಬರೆಯುತ್ತೇನೆ.
....................................................

ಕಿಡಿ :

ಇತ್ತೀಚೆಗೆ ಮಂತ್ರಿವರ್ಯರೊಬ್ಬರು ತಮಿಳುನಾಡಿನ ಕಾಮಾಕ್ಷಿ ದೇವಾಲಯಕ್ಕೆ ಮುಗಿಬಿದ್ದಿದ್ದರು. ’ಕೋವಿಲ್ (ಕೋಯಿಲ್)’ ನ ಒಳಗಡೆ ನಿಂತಿದ್ದಾಗ ಅವರ ಜೇಬಿನಿಂದ ಅಚಾನಕ್ಕಾಗಿ  ಅಮೂಲ್ಯ ವಸ್ತುವೊಂದು ಕೆಳಗೆ ಬಿದ್ದಿತಂತೆ. ಬಿದ್ದುದನ್ನು ತೆಗೆದುಕೊಳ್ಳಲು ಬಗ್ಗಿದಾಗ ’ಟೈಟ್’ ಆಗಿದ್ದ ಮಾನ್ಯರ ಪ್ಯಾಂಟಿನ ಹಿಂಭಾಗ ಸಿಡಿದು-ಭಾಗವಾಗಿ ಹಿಂಬದಿಯಲ್ಲಿದ್ದವರೆಲ್ಲರಿಗೂ ಅವರ ಅಂಡಿನ ದರ್ಶನವಾಯಿತಂತೆ. (ಅವರೇನು ಒಳವಸ್ತ್ರ ಹಾಕಿರಲಿಲ್ಲವೇ ? ಎಂಬ ಕಿಡಿಗೇಡಿ ಪ್ರಶ್ನೆಯನ್ನು ಮಾನ್ಯ ಶಂಭುಲಿಂಗರು ಕೇಳಿದ್ದಾರೆ).

ಕಣ್ಣಾರೆ ಕಂಡೆ ನಾ
ಕಾಮಾಕ್ಷಿಯ ...

ಎಂಬ ಹಾಡಿರುವಂತೆ

ಕಣ್ಣಾರೆ ಕಂಡೆ ನಾ
ಖಂಡೇರಾಯನ ಕುಂಡೀನಾsss....

ಎಂಬ ಎ’ಲೈಟ್’ ಪದ್ಯದೊಂದಿಗೆ ಮುಗಿಸೋಣ.

..............................*.......................................

Jan 12, 2011

ಶಂಭುವಾಣಿ - ೧

ಎಲ್ಲ ಬಲ್ಲವರು ಇಲ್ಲಿಹರು ...
.................................
 ಎಲ್ಲವನ್ನೂ ಬಲ್ಲವರು ಎಲ್ಲೂ ಇರಲು ಸಾಧ್ಯವಿಲ್ಲ ಎಂಬುದು (ಸರ್ವಜ್ಞನನ್ನು ಹೊರತುಪಡಿಸಿ) ಸಾರ್ವತ್ರಿಕ ಸತ್ಯವಾದರೂ ’ನಿಂದೆಲ್ಲಾ ಗೊತ್ತು ಕುಂತ್ಕಳಯ್ಯಾ’ ಎಂದು ರೇವಣ್ಣೋರು ಹೇಳಿದ್ದರಲ್ಲಾಗಲೀ, ’ಬಹಿರಂಗ ಚರ್ಚೆಗೆ ಬಾರಯ್ಯಾ, ನಿನ್ ಬಂಡ್ವಾಳ ನಂಗೂ ಗೊತ್ತು" ಎಂದು ಮುಖ್ಯಮಂತ್ರಿಗಳು ಹೇಳಿದ್ದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲವೆಂದು ಯಾರಾದರೂ ಹೇಳಲು ಸಾಧ್ಯವೆ ! ? . ಸದನದಲ್ಲಿ ಎಲ್ಲರ ಬಂಡ್ವಾಳವೂ ಎಲ್ಲರಿಗೂ ಗೊತ್ತಿರುತ್ತದೆ. ಅಲ್ಲಿ ಎಲ್ಲವನ್ನೂ ಬಲ್ಲವರೇ ಇರುವುದೆಂದು ಈ ಮಾತುಗಳಿಂದ ಸಾಬೀತಾಗುತ್ತದೆ.
ಇಂತಹ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಮಾನ್ಯ ಶಂಭುಲಿಂಗರು ಹೀಗೆ ಥಟ್ಟನೆ ಕವನವೊಂದನ್ನು ವಾಚಿಸಿದರಂತೆ.

                               ದನಗಳು ಹೊಕ್ಕವು
                               ಸದನ,
                               ಅಲ್ಲಿ ನೆಡೆಯಿಸಿದವು
                               ಕದನ.

ಮಾಜಿ ಮುಖ್ಯಮಂತ್ರಿಯೊಬ್ಬರು ಸದನವನ್ನು ಹೆಂಡದಂಗಡಿಗೆ ಹೋಲಿಸಿದ್ದಕ್ಕೆ ಸುಸಜ್ಜಿತ ಬಾರುಗಳೆಲ್ಲಾ ಬೇಸರಪಟ್ಟುಕೊಂಡಿರಬಹುದೆ ? . ಹೆಂಡ ಕುಡಿದು ಅವಾಚ್ಯ ಶಬ್ದಗಳನ್ನು ಉಪಯೋಗಿಸುವವರನ್ನು ’ಕುಡುಕ’ ಎಂದು ಹೇಳಿ ಸುಮ್ಮನಾಗಬಹುದು. ಕುಡಿಯದೇ, ಆಡಬಾರದ್ದನ್ನು ಆಡುವುದು ಸದನಿಗರ ಸತ್ತ ಸಂಪ್ರದಾಯವೆಂಬುದನ್ನು ಮಾನ್ಯ ಶಂಭುಲಿಂಗರು ಅನುಗ್ರಹಪೂರ್ವಕವಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಸದನದ ಘನತೆಯ ಕುರಿತಾಗಿ ಹಾಗೆಲ್ಲಾ ಹೇಳಬಹುದೆ ? , even Homer nods- (’ಐರಾವತವೂ ಅಡಿ ತಪ್ಪುತ್ತೆ ’ ಅಂತ ಕೈಲಾಸಂ ಹೇಳಿದ್ದನ್ನು ಎಲ್ಲೋ ಓದಿದ ನೆನಪಿದೆ, ಆದರೆ ಶಿರಾಡಿ ಘಾಟಿನಲ್ಲಿ ಓಡಾಡುವ ಸರ್ಕಾರಿ ಬಸ್ಸುಗಳು ಮೀಟರನ್ನೂ ತಪ್ಪಿ ಹಾರುತ್ತವೆ ಎನ್ನುವುದು ಶಂಭುವಿನ ಚೋದ್ಯ !)   ಅಂತ ವೈಯೆನ್ಕೆ ನೆನಪಿಸಿದ್ದನ್ನು ಇಲ್ಲಿ ಅನ್ವಯಿಸಿಕೊಳ್ಳೋಣವೆ ? ! . ಹೋಮರನೂ ತೂಕಡಿಸಿದನಂತೆ ( ಎಚ್ಚರ ತಪ್ಪಿದನಂತೆ) ಎಂದು ಆಶ್ಚರ್ಯಸೂಚಕವಾಗಿ ಹೇಳುವುದು ವರ್ತಮಾನಕ್ಕೆ ಸಲ್ಲುವುದಿಲ್ಲ.  ನಮ್ಮ ದೊಡ್ಡಗೌಡರು ತೂಕಡಿಸಿಕೊಂಡೇ ಪ್ರಧಾನಿಯಾದುದು (ಪ್ರಧಾನಿಯಾಗುವ ಹಿಂದಿನ ದಿನ ಭಾರೀ ಎಚ್ಚರಿಕೆಯಲ್ಲಿದ್ದರು ಎಂದು ಶಂಭುಲಿಂಗರು ಹೇಳಿದ್ದಾರೆ !) ಮತ್ತು ಸದನದ ಗಲಾಟೆಗಳ ನಡುವೆಯೂ ಗೊರಕೆ ಹೊಡೆಯುವ ನಾಯಕರನ್ನು ಕರುನಾಡು ಕಂಡದ್ದು ಇತಿಹಾಸದ ಪುಟಗಳನ್ನು ಸೇರಿಲ್ಲವೆ ?.
ಸದನದ ಮರ್ಯಾದೆಯನ್ನು ಉಳಿಸಲು ’ಉದ್ದಮ್ಮ’ನವರು ಹಾಡಿ ಕುಣಿದದ್ದು ಅತ್ಯಾಕರ್ಷಕವಾಗಿತ್ತಂತೆ...

                          ಎಲ್ಲಾ ಮಾಯವೋ ರಂಗಾ,
                          ಮಾನ-ಮರ್ಯಾದೆಗಳು,
                          ಸಿದ್ದಾಂತ-ಚಾರಿತ್ರ್ಯಗಳು,
                          ಮುಖ್ಯಮಂತ್ರಿಯೆಂಬ ಸಿಂಗನ ಮುಂದೆ ..!

ಹಾಡಿ ಕುಣಿಯುವಾಗ ಉದ್ದಮ್ಮನವರ ಸೀರೆ ಜಾರಿದ್ದನ್ನು ಮಾತ್ರ ಗೋಪ್ಯವಾಗಿಡಲಾಗಿದೆಯೆಂದು ಮಾನ್ಯ ಶಂಭುಲಿಂಗರು ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ಕದನಕ್ಕೆ ಕಾರಣವಾಗಿರುವ ಅಕ್ರಮ ಗಣಿಗಾರಿಕೆಯ ವಿಚಾರದ ಒಟ್ಟು ಮೊತ್ತವನ್ನು ’ಸಗಣಿ ಎರಚುವ ಕದನ’ ಎಂದು ವಿಶ್ಲೇಶಿಸಬಹುದಲ್ಲವೆ ?!.

ಇದರ ನಡುವೆ ಚರ್ಚೆಗೆ ಬಂದ ಮತ್ತೊಂದು ಅಂಶವೆಂದರೆ, ಮಂದಿರವೇ ಬೇಕೆಂದು ಹಠ ಹಿಡಿದಿದ್ದ ಪಕ್ಷವೊಂದರ ದೊಡ್ಡ ನಾಯಕರೆಲ್ಲಾ ಅದೊಂದು ದಿವಸ ಯಾವುದೋ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ’ಮಂದಿರಾ ಬೇಡಿ’ ಮಂದಿರಾ ಬೇಡಿ’ ಎಂದು ಕಿರುಚಾಡಿದರಂತೆ.  ಇದನ್ನು ಕಂಡಂತಹ ವಿಪಕ್ಷದ ದಡ್ಡ ನಾಯಕರೆಲ್ಲಾ ಇದೂ ಒಂದು ರಾಜಕೀಯದ ವರಸೆಯೇ ಇರಬೇಕೆಂದು ಭ್ರಮಿಸಿ "ಮಂದಿರವೇ ಬೇಕು" ಎಂದು ಠಳಾಯಿಸಿದರಂತೆ. ಪಕ್ಷಗಳ ವಿಚಾರಗಳು-ಸಿದ್ದಾಂತಗಳು ಉಲ್ಟಾ ಆಗಿದ್ದನ್ನು ಕಂಡಂತಹ ಶಂಭುಲಿಂಗರು ಬೇಸರಗೊಂಡು , ಸಮಾರಂಭದಲ್ಲಿ ’ಮಂದೀರಾ ಬೇಡಿ’ ಎಂಬ ಐವತ್ತರ ನವತರುಣಿಯೊಬ್ಬಳು ಬಿಜಯಂಗೈದಿದ್ದನ್ನು ಸ್ಪಷ್ಟಪಡಿಸುವಷ್ಟರಲ್ಲಿ  ಮದಿರೆಯ ನಶೆ ಮಂದಿರವನ್ನು ಮರೆಸಿತ್ತಂತೆ !.

ಸದನದಲ್ಲಿ ಅತ್ಯಪೂರ್ವ ಕದನವನ್ನು ಕಂಡಂತಹ ದನಗಳೆಲ್ಲಾ ಬಾಲವನ್ನೆತ್ತಿಕೊಂಡು ಹೀಗೆ ಹಾಡಿದುವಂತೆ..

ಬನ್ನಿ ಬಂಧುಗಳೆ
ಬನ್ನಿ ನಮ್ಮೆಡೆಗೆ
ಹಿಂಡಿ-ಬೂಸವನು ತಿನ್ನಲು,
ಅವರಿವರ ಮನೆಯ
ಕೊಳೆತ ತರಕಾರಿಗಳ
ಕಲಗಚ್ಚು ಕುಡಿಯಲು

ನಾವು ನೀಡುವೆವು
ಶುದ್ಧ ಹಾಲನು,
ನೀವು ನೀಡಿರಿ
ಆಲ್ಕೋಹಾಲನು !



ಪುಲಿಗೆರೆಯ ಸೋಮನಾಥರ ಸೋಮೇಶ್ವರ ಶತಕದ ವರ್ಣನೆಯಂತೆ ನಮ್ಮ ನಾಯಕರನ್ನು ಯಾರದರೂ ಬದಲಾಯಿಸಲು ಸಾಧ್ಯವೆ ?

 "ಬಡಿಗೋಲಂ ಸಮಮಾಡಲಕ್ಕು ಮರೆಯೊಳ್ ಕೂಪಂಗಳಂ ತೋಡಲ
  ಕ್ಕಿಡಿಮಕ್ಕಂ ಮೃದುಮಾಡಲಕ್ಕು ಮಳಲೊಳ್ ತೈಲಂಗಳಂ ಹಿಂಡಲ |
  ಲಕ್ಕಡವೀ ಸಿಂಗವ ತಿದ್ದಲಕ್ಕು ಕರೆಯಲ್ ಬಕ್ಕುಗ್ರದ ವ್ಯಾಘ್ರಮಂ
  ಕಡು ಮೂರ್ಖಂ ಹಿತಕೇಳ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || "

 ಎಂದು ಸುಮ್ಮನಾಗಬಹುದಷ್ಟೆ !.


..........................*........................

ಕಿಡಿ :

 ಮಹನೀಯರೊಬ್ಬರು, ಬ್ಲಾಗು ಬರಹಗಳನ್ನು ಹೂಸಿನ ವಾಸನೆಗೆ ಹೋಲಿಸಿದ್ದಕ್ಕೆ ಮಾನ್ಯ ಶಂಭುಲಿಂಗರು ಅನುಕಂಪ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಹೂಸುಗಳೂ ವಾಸನೆ ಬರುವುದಿಲ್ಲವೆಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
"ಡರ್ ಬುರ್ ಮಹಾಪುಣ್ಯಂ, ಟುಸ್ ಪುಸ್ ಮಹಾಪಾಪಂ’ ಎಂಬ ಹಳೆಯ ತುಂಡು ವಕ್ರೋಕ್ತಿಯನ್ನು ಮತ್ತೆ-ಮತ್ತೆ ನೆನಪಿಸಿದ್ದಾರೆ.
"ಬೆಳ್ಳಗಿರುವುದೆಲ್ಲಾ ಹಾಲಲ್ಲ" ಎಂಬ ಗಾದೆಯಿರುವಂತೆ " ಬಿಟ್ಟ ಹೂಸುಗಳೆಲ್ಲಾ ದುರ್ನಾತ ಬೀರುವುದಿಲ್ಲ" ಎಂಬ ಗಾದೆಯನ್ನು ಶಂಭುಲಿಂಗರು ಗಾಳಿಯಲ್ಲಿ ತೇಲಿಬಿಟ್ಟಿದ್ದಾರೆ !.


....................*.......................

ವಂದನೆಗಳೊಂದಿಗೆ....