Mar 31, 2010

ಋಗ್ವೇದದ ಜ್ಞಾನ ಮತ್ತು ವಿಜ್ಞಾನ.

ಕಾಲ:

ಚತುರ್ವೇದಗಳಲ್ಲಿ ಅತ್ಯಂತ ಪುರಾತನವಾದ ಮತ್ತು ಮೊದಲನೆಯ ವೇದವೇ ಋಗ್ವೇದ. ದೇವನಾಗರಿ ಲಿಪಿಯಲ್ಲಿ ಮತ್ತು ಸಂಸ್ಕೃತ ಭಾಷೆಯಲ್ಲಿ ತಾಳೆಗರಿ (ತಾಡಪತ್ರ) ಗಳ ಮೇಲೆ ವೈದಿಕರು ಮತ್ತು ಋಷಿಗಳಿಂದ ಸಲಕ್ಷಣವಾಗಿ ಬರೆದಿಡಲ್ಪಟ್ಟ ಋಗ್ವೇದದ ಮೂಲಪ್ರತಿಗಳು ಲಭ್ಯವಿದ್ದರೂ, ಇವುಗಳು ಋಗ್ವೇದದ ಕಾಲದಲ್ಲೇ ಬರೆಯಲ್ಪಟ್ಟಿವೆಯೆಂದು ಹೇಳಲು ಸೂಕ್ತ ಆಧಾರಗಳು ದೊರೆಯುವುದಿಲ್ಲ. ಗುರುಕುಲ ಪದ್ದತಿಯನ್ನು ಅನುಸರಿಸಿ ಕಾಲಾನುಕ್ರಮದಲ್ಲಿ ಬಾಯಿಂದ ಬಾಯಿಗೆ ಹರಿದುಬಂದ ವೇದವಾಕ್ಯಗಳು ಯಾವುದೋ ಒಂದು ಸಮಯದಲ್ಲಿ ಋತ್ವಿಜರಿಂದ ಬರೆದಿಡಲ್ಪಟ್ಟಿದೆಯೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಋಗ್ವೇದದ ಕಾಲವನ್ನು ಹೇಳಲು ಇತಿಹಾಸತಜ್ಞ ಮತ್ತು ಸಂಶೊಧಕನಾದ "ಮ್ಯಾಕ್ಸ್ ಮುಲ್ಲರ್ " ಕೆಲವೊಂದು ಆಕರಗ್ರಂಥಗಳನ್ನು ಪರಿಶೀಲಿಸುತ್ತಾನೆ. ಅವನ ಪ್ರಕಾರ ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ. ೫೦೦ ಎಂದು ನಿರ್ಧರಿಸಲಾಗುತ್ತದೆ. ಆದರೆ ತನ್ನ ಅಂತ್ಯಕಾಲದಲ್ಲಿ ಮುಲ್ಲರನೇ ಈ ಕಾಲವನ್ನು ತಪ್ಪೆಂದು ತಿಳಿಸಿಬಿಡುತ್ತಾನೆ. ನಂತರ ಸಿಂಧೂ ಕಣಿವೆ, ಹರಪ್ಪ- ಮೊಹೆಂಜೊದಾರೋ  ಮುಂತಾದ ನಾಗರೀಕತೆಗಳ ಆಧಾರದಲ್ಲಿ ಕ್ರಿ.ಪೂ. ೩೦೦೦ ನೆ ಇಸವಿ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ನಂತರ ಇದೇ ನಾಗರೀಕತೆಗಳ ’ಸೆಟೆಲೈಟ್’ ಭಾವಚಿತ್ರಗಳ ಅಧ್ಯಯನದ ಮೂಲಕ ಋಗ್ವೇದದ ಕಾಲವನ್ನು ೩೧೦೦ ಅಥವ ಇನ್ನೂ ಪುರಾತನವಾದುದೆಂದು ನಿರ್ಧರಿಸಲಾಗುತ್ತದೆ.  ಆಧ್ಯಾತ್ಮ ಹಾಗೂ ಪೌರಾಣಿಕ ಹಿನ್ನಲೆಯಲ್ಲಿ ಗಮನಿಸಿದರೆ ಋಗ್ವೇದದ ಕಾಲವನ್ನು ಕೃತಯುಗದಿಂದಾಚೆಯೂ ಊಹಿಸಬಹುದು !. ಋಗ್ವೇದದ  ಕಾಲದ ಬಗೆಗಿನ ಜಿಜ್ಞಾಸೆ ಏನೇ ಇರಲಿ...ಅದರೊಳಗಿನ ವಿಚಾರಗಳಂತೂ ಸಾರ್ವಕಾಲಿಕ ಉಪಯುಕ್ತತೆಯನ್ನು ಹೊಂದಿದೆ.

ವಿಶಿಷ್ಟತೆ :

ಋಕ್ಕುಗಳಿಂದ ( ಸೂಕ್ತ ಅಥವ ವಾಕ್ಯಗಳು ) ಕೂಡಿರುವ , ಸಂಸ್ಕೃತ ಭಾಷೆಯಲ್ಲಿ ಹೇಳಲ್ಪಟ್ಟಿರುವ ಪ್ರಕೃತಿದತ್ತ ವಿಚಾರಗಳೇ ಋಗ್ವೇದ. ಹಲವಾರು ಜಾಗತಿಕ ಕ್ರಾಂತಿಗಳ ನಂತರ ಹುಟ್ಟಿದ ಸಹೋದರತೆ, ಸ್ತ್ರೀಸ್ವಾತಂತ್ರ್ಯ, ವೈಜ್ಞಾನಿಕ ಸಂಶೊಧನೆ, ಶಾಂತಿ, ಸಹಬಾಳ್ವೆ ಮುಂತಾದ ವಿಚಾರಗಳು ಅತ್ಯಂತ ಪುರಾತನವಾದ ಋಗ್ವೇದ ಕಾಲದಲ್ಲೇ ಹೇಳಲ್ಪಟ್ಟಿದೆ. ಮೂಲ ಸಂಹಿತೆ (ಗ್ರಂಥ) ಯಲ್ಲಿ ಸ್ವರಪ್ರಸ್ತಾರಗಳ ಸಹಿತ ’ಮಂತ್ರ’ ಗಳಂತೆ ವಿಷಯಗಳನ್ನು ಹೇಳಿರುವುದರಿಂದ ಈ ಸೂಕ್ತಗಳನ್ನು ಮಂತ್ರಗಳಾಗಿಯೂ ಪರಿಗಣಿಸಬಹುದು. ಆಧ್ಯಾತ್ಮಿಕವಾಗಿ ಋಗ್ವೇದದ ವಿಚಾರ ಸಾಗರಕಿಂತ ಅಗಾಧ.
"ಅಗ್ನಿಮೀಳೆ ಪುರೋಹಿತಂ ...." ಎಂದು ಪ್ರಾರಂಭವಾಗುವ ಋಗ್ವೇದದ ಮೊದಲನೆಯ ವಾಕ್ಯದಲ್ಲಿ ಯಾವ ಪುರೋಹಿತನ ಪ್ರಸ್ತಾಪವೂ ಇಲ್ಲ. ಸರಳವಾಗಿ ಹೇಳುವುದಾದರೆ, ಅಗ್ನಿಯು ತನಗರ್ಪಿತವಾದುದನ್ನು ತಲುಪಿಸುವಲ್ಲಿಗೆ ತಲುಪಿಸುತ್ತಾನೆ, ಅಥವ ತಲುಪಿಸು ಎಂದು ಪ್ರಾರ್ಥಿಸುವ ವಿವರಣೆಯಿದೆ. ಹೀಗೆ ಸುಮಾರು ೧೦೫೫೨ ಋಕ್ಕುಗಳು ( ಮಂತ್ರ), ೧೦೨೮ ಸೂಕ್ತಗಳನ್ನು ಒಳಗೊಂಡಿರುವ ಋಗ್ವೇದ ಸಂಹಿತೆಯನ್ನು (ಗ್ರಂಥ) ೧೦ ಮಂಡಲಗಳಾಗಿ (ವಿಭಾಗ) ವರ್ಗೀಕರಿಸಲಾಗಿದೆ. ಒಂದೊಂದು ಸೂಕ್ತದಲ್ಲಿಯೂ ಪ್ರಕೃತಿಯ ವರ್ಣನೆ, ಉಪಯೋಗ ಮತ್ತು ಅನುಷ್ಠಾನಗಳನ್ನು ದೃಷ್ಟಾರರು ( ಬರೆದವರು) ವಿವರಿಸಿದ್ದಾರೆ    .

ರಚನಕಾರರು :

ಋಗ್ವೇದದ ರಚನಕಾರರನ್ನು ದೃಷ್ಟಾರರು ಎಂದು ಕರೆಯಲಾಗುತ್ತದೆ. ಮೊದಲನೆಯ ಸೂಕ್ತದ ರಚನಕಾರರಾದ ಮಾಧುಚ್ಛಂದಾ-ವೈಶ್ವಾಮಿತ್ರರಿಂದ ಪ್ರಾರಂಭವಾಗಿ ಆಂಗೀರಸ, ಭಾರಧ್ವಾಜ, ಬಾರ್ಹಸ್ಪತ್ಯ, ವಸಿಷ್ಠ,  ಅಗಸ್ತ್ಯ, ಮೈತ್ರಾವರುಣಿ ಇತ್ಯಾದಿ ಅನೇಕ ’ಋಷಿ’ ಗಳು ಸಂಹಿತೆಯ ರಚನೆಯಲ್ಲಿ  ಕಂಡುಬರುತ್ತಾರೆ.

ದೇವತೆಗಳು :

ಋಗ್ವೇದದಲ್ಲಿ ಹೆಚ್ಚಿನಪಾಲು ’ಅಗ್ನಿ’ ಗೆ ಸಲ್ಲುತ್ತದೆ. ಪ್ರಕೃತಿಯ ಶಕ್ತಿಗಳಾದ ಅಗ್ನಿ, ವಾಯು, ಜಲ, ಬೆಳಕು (ಸೂರ್ಯ-ಸವಿತೃ ), ಸಂಪತ್ತು, ಮಳೆ, ಭೂಮಿ ಹೀಗೆ ಎಲ್ಲಾ ಪ್ರಾಕೃತಿಕ ಶಕ್ತಿಗಳನ್ನೂ , ಆಯಾ ಶಕ್ತಿಗಳ ಮಹತ್ವವನ್ನೂ ವಿವರಿಸುತ್ತಾ ಈ ಶಕ್ತಿಗಳಿಗೆ ದೈವತ್ವವನ್ನು ಕೊಟ್ಟು ಮೌಲ್ಯವರ್ಧಿತವಾಗುವಂತೆ ವಿವರಿಸಿದ್ದಾರೆ. ಪ್ರಕೃತಿಯನ್ನು ಅದರ ಶಕ್ತಿಯನ್ನು ಗೌರವಿಸಿ , ಉಳಿಸಿ-ಬೆಳಸಿಕೊಳ್ಳುವ ಮನೋಭಾವ ಉಂಟುಮಾಡುವ ಉದಾತ್ತ ಧ್ಯೇಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಹಾಗೆಯೇ ಈ ಶಕ್ತಿಗಳನ್ನು  ಇಂದ್ರ , ಅಗ್ನಿ, ಪ್ರಾಣ,  ವಾಯು, ಸೋಮ , ವರುಣ, ಪೃಥಿವೀ ಮುಂತಾದ ಹೆಸರುಗಳಿಂದ ದೇವತೆಗಳನ್ನಾಗಿ ವರ್ಣಿಸಲಾಗಿದೆ.
ಪರಿಪೂರ‍್ಣ ಜ್ಞಾನವನ್ನು ಇಂದ್ರನೆಂದು ಹೇಳಿದರೆ , ಪ್ರಾಣೋತ್ಪಾದಕನ್ನು ವಾಯು ಎನ್ನುತ್ತಾರೆ. ಅಗ್ನಿಗೆ ಸಂವಹನ ಶಕ್ತಿಯನ್ನು ನೀಡಿ ಸೋಮನಿಗೆ ಅತೀಂದ್ರಿಯ ಶಕ್ತಿಗಳ ಒಡೆಯನ ಸ್ಥಾನವನ್ನು ನೀಡಲಾಗಿದೆ. ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಇದೊಂದು ರೀತಿಯಲ್ಲಿ  Parliment Cabinet ಇದ್ದಂತೆ !.

ಮಹಿಳೆಯರ ಪ್ರಾಧಾನ್ಯತೆ

ವೇದಗಳ ಕಾಲದಲ್ಲಿ ಮಹಿಳೆಯರನ್ನು ಕಡೆಗಣಿಲಾಗಿತ್ತು ಎನ್ನುವ ವಾದವನ್ನು ಋಗ್ವೇದ ಸುಳ್ಳುಮಾಡುತ್ತದೆ. ಇಲ್ಲಿ ಮಹಿಳೆಯರಿಗೆ ಋಷಿಕೆಯರ (ಋಷಿ ಪತ್ನಿಯರು) ಸ್ಥಾನವನ್ನು ನೀಡಲಾಗಿದೆ. ಇವರು ಹವನಗಳನ್ನೂ ನೇರವೇರಿಸುತ್ತಿದ್ದರು ಎಂಬುದಕ್ಕೆ ವೇದಗಳಲ್ಲೇ ಆಧಾರಗಳಿವೆ.  ಋಷಿಕೆಯರಿಂದ ರಚಿತವಾಗಿರುವ ಸೂಕ್ತಗಳಲ್ಲಿ ಅತ್ಯಂತ ಅರ್ಥಪೂರ್ಣ ವಿವರಣೆಗಳಿವೆ. ’ವಾಗಾಂಭೃಣಿ’ ಎನ್ನುವ ಋಷಿಕೆಯಿಂದ ರಚಿತವಾಗಿರುವ "ದೇವಿ ಸೂಕ್ತ"  ಒಂದು ಚಿಕ್ಕ ಉದಾಹರಣೆಯಷ್ಟೆ.  ಮನೆಗೆ ಆಗತಾನೆ ಮದುವೆಯಾಗಿ ಬಂದ ಸೊಸೆಯನ್ನು ಮಹಾರಾಣಿ ( ಸಾಮ್ರಾಜ್ಞಿ) ಯಂತೆ ಕಾಣು ಎನ್ನುವ ಸೂಕ್ತವೂ ಇಲ್ಲಿ ದೊರೆಯುತ್ತದೆ. ಮಹಿಳೆಯರಿಗೆ ಸಿಗಲೇಬೇಕಾದ ಎಲ್ಲಾ ಗೌರವಾದರಗಳೂ ಋಗ್ವೇದಕಾಲದಲ್ಲೇ ಅನುಷ್ಠಾನದಲ್ಲಿತ್ತೆಂದು ಅಧ್ಯಯನದಿಂದ ತಿಳಿಯಬಹುದು.

ತಾಂತ್ರಿಕತೆ.

ತಾಂತ್ರಿಕತೆ ಕುರಿತಂತೆ ಹಲವಾರು ವಿಷಯಗಳು ಋಗ್ವೇದದಲ್ಲಿ ಪ್ರಸ್ತಾಪವಾಗಿದೆ. ಒಂದೆರಡು ವಿಷಯಗಳನ್ನಷ್ಟೇ ಇಲ್ಲಿ ಹೇಳುತ್ತೇನೆ.

೧) ಪ್ರತಿಯೊಂದು ಋತುವಿಗೂ (ಕಾಲಕ್ಕೂ)  ಸಂಬಂಧಿಸಿದಂತೆ ಯೋಗ್ಯ ಹವಾಮಾನದ ಸ್ಥಿತಿಯ ವಿವರವನ್ನು ಕೊಡುವುದು, ಅಯಾ ಋತುವಿನಲ್ಲಿ (ಕಾಲದಲ್ಲಿ) ಗಾಳಿ ಬೀಸುವ ದಿಕ್ಕು, ವೇಗ, ಮಳೆಯ ಲಕ್ಷಣ, ಇವುಗಳಿಂದ ಮುಂದೆ ಉಂಟಾಗಬಹುದಾದ ಪರಿಣಾಮ ..ಇವುಗಳನ್ನು ಹೇಗೆ ಅಧ್ಯಯನ ಮಾಡಬಹುದೆಂಬುದನ್ನು ಸೂಕ್ತಗಳ ಮೂಲಕ ವಿವರಿಸಲಾಗಿದೆ.

೨) ಅಗ್ನಿಯನ್ನು ಬಳಸಿ ವಸ್ತುಗಳನ್ನು ನಭಕ್ಕೆ ಚಿಮ್ಮಿಸುವ ( Rocket launching ??) ತಾಂತ್ರಿಕತೆಯ ಕೆಲವು ವಿವರಣೆಯನ್ನೂ ಪಡೆಯಬಹುದು.

೩) ಅಗ್ನಿಯನ್ನು ಸ್ತುತಿಸಿ ಮತ್ತು ಶಕ್ತಿಯನ್ನು ಬಳಸಿ ಮಾಡುವ ಹವನದಿಂದ ಹೇಗೆ ಮಳೆಯನ್ನು ತರಿಸಬಹುದು ಎಂಬುದನ್ನೂ ಸಹ ವರ್ಣಿಸಲಾಗಿದೆ. ವೈಜ್ಞಾನಿಕ ವಿಧಾನಗಳನ್ನೇ ಇಲ್ಲಿ ಸೂಕ್ತಗಳ ರೂಪದಲ್ಲಿ ದೃಷ್ಟಾರರು ಕಂಡುಕೊಂಡು ವಿವರಿಸಿದ್ದಾರೆ.
ಇಂದಿನ ಆಧುನಿಕ ಮೋಡಬಿತ್ತನೆ ( Cloud seeding) ಕಾರ್ಯಕ್ಕೆ ಬಳಸುವ ರಾಸಾಯನಿಕಗಳು , ಋಗ್ವೇದಕಾಲದಲ್ಲಿ ಗಿಡಮೂಲಿಕೆಗಳಿಂದ, ಸಮಿತ್ತುಗಳಿಂದ ( ಕೆಲವು ವಿಶೇಷ ಮರಗಳ ಕಡ್ಡಿಗಳು) ಪಡೆಯಲಾಗುತ್ತಿತ್ತು ಎನ್ನುವುದನ್ನೂ ಗಮನಿಸಬಹುದು.  ಇಲ್ಲಿ ಗಮನಿಸಬೇಕಾಗಿರುವ ಮತ್ತೊಂದು ಅಂಶವೆಂದರೆ , ಇಂತಹ ಸೂಕ್ತಗಳಲ್ಲಿರುವ ವಿಷಯಗಳ "ಸಮರ್ಪಕ ಮತ್ತು ಸಕರ್ಮಕ ಅನುಷ್ಠಾನ " .

೪) ಮಂತ್ರದಿಂದ ಮಳೆ ಬರಿಸಲು ಸಾಧ್ಯವೇ ? ಇದು ಎಲ್ಲಾ ವಿಜ್ಞಾನಿಗಳ ಮೂಲಭೂತ ಪ್ರಶ್ನೆ .  ಇದಕ್ಕೆ ಋಗ್ವೇದದಲ್ಲಿಯೇ ಉತ್ತರವಿದೆ. ವೇದದಲ್ಲಿಯ ಸೂಕ್ತಗಳನ್ನು ಕೇವಲ ಔಪಚಾರಿಕ ಮಂತ್ರಗಳೆಂದು ಸ್ವೀಕರಿಸದೆ ವಿಚಾರಗಳೆಂದು ಗಣಿಸಿ , ಆಳವಾದ ಸಂಶೋಧನೆಗಳಿಂದ ಧೃಡಪಡಿಸಿಕೊಂಡರೆ "ಪ್ರಯೋಗ" ಎನ್ನುವ ತಾಂತ್ರಿಕತೆಯು ದೊರಕುತ್ತದೆ. ಇಂತಹ "ಪ್ರಯೋಗ"ಗಳ ಜ್ಞಾನವು ಇಂದು ಲುಪ್ತವಾಗಿ ಹೋಗಿದೆ. ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳಿಂದಷ್ಟೇ ಮರಳಿ ಪಡೆಯಬಹುದಾಗಿದೆ.

೫) ವಿಶ್ವ ಸೃಷ್ಟಿಯ ವಾದ (ಬಿಗ್ ಬ್ಯಾಂಗ್) ಮತ್ತು ವಿಷಯಗಳಿಗೆ ವೇದದಲ್ಲಿ ವಿವರಣೆಯಿದೆ. Nuclear fusion ಮತ್ತು Fission ನಿಂದ ಹೇಗೆ ಹಂತ-ಹಂತ ವಾಗಿ ಜಗತ್ತು ಸೃಷ್ಟಿಯಾಯಿತು ಎಂದು ಹೇಳಲಾಗಿದೆಯೋ, ಅದನ್ನೇ ಇಲ್ಲಿ..ಮೊದಲು ಜ್ಯೋತಿಯ ಉಗಮ, ನಂತರ ರಾತ್ರಿ, ಆಕಾಶ, ಸಮಯ, ಸೂರ್ಯ , ಚಂದ್ರ, ಆಕಾಶಕಾಯಗಳು ಮತ್ತು ಭೂಮಿಯ ಸೃಷ್ಟಿಯಾಯಿತೆಂದು ಹೇಳಲಾಗಿದೆ. ಸಮಯದ ಸೃಷ್ಟಿ ಮತ್ತು ಚಲನೆಯ ಸೂಕ್ಷ್ಮ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ.
 (  ಬಹು ಪ್ರಖ್ಯಾತ , ಸ್ಟೀಫನ್ ಹಾಕಿಂಗ್ ಬರೆದಿರುವ ಪುಸ್ತಕ A Breif History Of Time ನಲ್ಲಿರುವ ಅನೇಕ ವಿಷಯಗಳು ಋಗ್ವೇದದಲ್ಲಿಯೇ ಪ್ರಸ್ತಾಪವಾಗಿದೆ ಎಂದರೇ..ನೀವು ನಂಬಲೇ ಬೇಕು..!)

ಮನಃಶಾಸ್ತ್ರ:

ಋಗ್ವೇದದ ದೃಷ್ಟಾರರು ಮನುಷ್ಯಜೀವಿಯನ್ನು ದೈವತ್ವದ ಪ್ರತೀಕವೆಂದು ಪರಿಗಣಿಸುತ್ತಾರೆ. ಮನುಷ್ಯನ ಅಂಗಗಳಿಗೂ, ಭಾವನೆಗಳಿಗೂ ಅತ್ಯಂತ ನಿಕಟ ಸಂಪರ್ಕವನ್ನು ಕಲ್ಪಿಸುತ್ತಾರೆ. ಇಚ್ಚೆಗಳು, ಭಾವೋದ್ರೇಕಗಳು, ಅಧಿಕಾರ ದಾಹ, ಕೋಪ, ಮುನ್ನುಗ್ಗುವ ಪ್ರವೃತ್ತಿ, ಶಾಂತಿ, ಮನಃಕೇಂದ್ರೀಕರಣ ಇತ್ಯಾದಿಗಳು ದೇಹದ ಆವರಣಗಳಿಂದ ಹೇಗೆ ಬಿಡುಗಡೆಗೊಳ್ಳುತ್ತವೆ ಮತ್ತು ಅದಕ್ಕೆ ಸಂಬಂಧಪಡುವ ಅಂಗಗಳ ( Organs and Harmones) ಕಾರ್ಯವಿಧಾನವನ್ನು ವಿವರಿಸುತ್ತಾರೆ.
ವ್ಯಕ್ತಿಯು ವಿವೇಚನೆ ಮಾಡುವಾಗ ಮನಸ್ಸಿನ ಲೋಕದಲ್ಲಿ ಸಂವಹಿಸುತ್ತಾನೆ, ಪ್ರೀತಿಯಂತಹ ಭಾವನೆಗಳಿರುವಾಗ ಅಂತರಿಕ್ಷದೊಡನೆ ಸಂಸರ್ಗಿಸುತ್ತಾನೆ, ಬುದ್ದಿಜೀವಿಗಳೆಂದು ಕರೆಯಲ್ಪಡುವವರು ಜೀವಶಕ್ತಿ ಮತ್ತು ಮನಸ್ಸಿನ ಲೋಕದೊಂದಿಗೆ ಮಂಥಿಸುತ್ತಾರೆ...ಹೀಗೆ ಮನಸ್ಸಿನ ಹಲವು ತಾಕಲಾಟಗಳಿಗೆ ಋಗ್ವೇದದಲ್ಲಿ ಉತ್ತರ ದೊರೆಯುತ್ತದೆ.

ಖಗೋಳಶಾಸ್ತ್ರ

ಋಗ್ವೇದದಲ್ಲಿ ಖಗೋಳಶಾಸ್ತ್ರಾಧಾರಿತ ವಿಚಾರಗಳು ವಿಸ್ತೃತವಾಗಿದೆ. ಭಾರತೀಯ ಖಗೋಳಶಾಸ್ತ್ರವು ನಕ್ಷತ್ರಮಾನವನ್ನು ಅವಲಂಬಿಸಿದೆ. ಸೂರ್ಯನ ಉತ್ತರ-ದಕ್ಷಿಣ ಚಲನೆಯ ( ಭೂಮಿ ತಿರುಗುವಿಕೆಯಿಂದ ಉಂಟಾಗುವ) ಕಾಲಘಟ್ಟಗಳನ್ನು ವೇದದಲ್ಲಿ ಸಂಕ್ರಮಣಗಳೆಂದು ಹೇಳುತ್ತಾ , ನಿರ್ಧಿಷ್ಟ "ಡಿಗ್ರಿ" ಗಳನ್ನು ಹೇಗೆ ಗುರುತಿಸಬಹುದು ಎಂದು ವಿವರಿಸುತ್ತಾರೆ. ರಾಶಿ ಚಕ್ರವನ್ನು ೨೭ ಸಮಭಾಗಗಳನ್ನಾಗಿಸಿ  ಈ ಡಿಗ್ರಿ ಗಳನ್ನು ಗುರುತಿಸಬಹುದಾದ ಅಂಶಗಳನ್ನು ವಿವರಿಸುತ್ತಾರೆ. ಇನ್ನು ಅಗ್ನಿ, ವಾಯು, ಮೇಘ, ಆಕಾಶಕಾಯಗಳು, ನಕ್ಷತ್ರಗಳು, ಮುಂತಾದವುಗಳ ಉಗಮ ಮತ್ತು ಶಕ್ತಿಯನ್ನು ಸಾಂಕೇತಿಕವಾಗಿ  ವಿವರಿಸಲಾಗಿದೆ. ಗಣಿತ ಶಾಸ್ತ್ರದ ವೃತ್ತಗಳು, ಪರಿಧಿ, ವ್ಯಾಸ, ಚೌಕಗಳು ಮುಂತಾದವುಗಳನ್ನು ಯಾವ ಪ್ರಮಾನದಲ್ಲಿ ರಚಿಸಬೇಕು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

    ಹೀಗೆ , ಇಂದಿನ ವೈಜ್ಞಾನಿಕ ಸಂಶೋಧನೆಯಿಂದ ದೊರಕುತ್ತಿರುವ  ವಿಚಾರಗಳು ಪ್ರಾಚೀನ ಋಗ್ವೇದದಲ್ಲಿಯೇ ಹೇಳಲ್ಪಟ್ಟಿರುವುದು, ಅಂದಿನೆ ಸಾಧಕರಲ್ಲಿದ್ದ ಪರಿಪೂರ್ಣ ಜ್ಞಾನವನ್ನು ತೋರಿಸಿಕೊಡುತ್ತದೆ. ಅಂದು ಸಂಸ್ಕೃತ ಭಾಷೆಯಲ್ಲಿ ಹೇಳಿದುದು ಇಂದು ನಂಬಿಕೆಯ ಕೊರತೆಯಿಂದಾಗಿಯೋ ಅಥವ ಅಜ್ಞಾನದಿಂದಾಗಿಯೋ ವೇದಗಳು ಕೇವಲ ಪುರೋಹಿತರಿಗೆ , ಬ್ರಾಹ್ಮಣರಿಗೆ ಮತ್ತು ಆ ಕಸುಬು ನೆಡೆಸುವವರಿಗೆ ಮಾತ್ರ ಎಂಬ ಪರಿಸ್ಥಿತಿಯು ಉಂಟಾಗುತ್ತಿದೆ. ವೇದಾರ್ಥವನ್ನೇ       ತಿಳಿಯದ ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಕೆಲವು ಪುರೋಹಿತಶಾಹಿಗಳು, ವೇದಗಳನ್ನು ಅಸ್ಪೃಶ್ಯತೆಯೆಡೆಗೆ ತಳ್ಳುತ್ತಿದ್ದಾರೆ. ವೇದಾರ್ಥಗಳು ಸಂಕೀರ್ಣವಾಗಿದ್ದರೂ, ಯಾವುದೇ ತಾಂತ್ರಿಕ ಕೋರ್ಸ್ ಮಾಡುವಾಗಿನ ಅಧ್ಯಯನವನ್ನು ಇದಕ್ಕೆ ಮೀಸಲಿಟ್ಟರೆ, ವೇದದ ನಿಜವಾದ ಅರ್ಥ ಗೋಚರಿಸುತ್ತದೆ. ವಿದೇಶಿ ಸಂಶೋಧನೆಗಳಿಗೇ ಮಣೆ ಹಾಕುವ ಮಂದಿ, ಅಂತಹ ಎಲ್ಲಾ ವೈಜ್ಞಾನಿಕ ವಿಷಯಗಳೂ ನಮ್ಮ ವೇದಗಳಲ್ಲೇ ಪ್ರಸ್ತಾಪವಾಗಿದೆ ಎನ್ನುವುದನ್ನು ಮನಗಾಣಬೇಕಿದೆ. ವೇದಗಳನ್ನು ಕೇವಲ ಆಧ್ಯಾತ್ಮಕ್ಕೆ ಮಾತ್ರ ಮೀಸಲಿಡದೆ , ಹೊರ ಜಗತ್ತಿಗೆ ವಿಶಿಷ್ಟ ರೀತಿಯಲ್ಲಿ ತೆರೆದಿಡುವ  ಪ್ರಯತ್ನ ಮಾಡಿದರೆ ವೇದ ರಚನೆಯಾದುದಕ್ಕೆ ಸಾರ್ಥಕಭಾವ ಬರುತ್ತದೆ. ವೇದಾಧ್ಯಯನ ಕೇವಲ ಮಠ-ಮಂದಿರಗಳಿಗೆ ಸೀಮಿತವಾಗಿ ಅಲ್ಲಿಯೇ ಹುಟ್ಟಿ,  ಅಲ್ಲೇ ಮಣ್ಣಾಗುವ ಬದಲು ಪ್ರಂಪಚಕ್ಕೆ ತೆರೆದುಕೊಂಡರೆ ಭಾರತೀಯ ಸನಾತನ ಸಂಸ್ಕೃತಿಯ ಅರಿವು ಉಜ್ವಲವಾಗುತ್ತದೆ. ವೇದಗಳು ಯಾರ ಸ್ವತ್ತೂ ಅಲ್ಲ ಎನ್ನುವುದರ ಅರಿವು ಮೊದಲು  ಮೂಡಬೇಕಾಗಿದೆ , ಮತ್ತು ನಾಲ್ಕಾರು ವೇದಸೂಕ್ತಗಳನ್ನು ಬಾಯಲ್ಲಿ ಹರಟಿಕೊಂಡು Psueodo Scientific theory  ಗಳನ್ನು ಹೇಳಿಕೊಂಡು ಸಾಮಾನ್ಯರಿಂದ ವೇದಗಳನ್ನು ದೂರವಿಡುವ ಪದ್ಧತಿ ಹಿಂದಿಗಿಂತಲೂ ಇಂದೇ ಹೆಚ್ಚಾಗಿ ತೋರುತ್ತಿದೆ. ಇದಕ್ಕೆ  ದೂರದರ್ಶನ ಮಾಧ್ಯಮಗಳು ಸಂಪೂರ್ಣ ಕೊಡುಗೆ ನೀಡುತ್ತಿದೆ ಎನ್ನುವುದು ಅನುಮಾನಕ್ಕಾಸ್ಪದವಿಲ್ಲದ ವಿಚಾರ......... "  ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ? "...

ಋಗ್ವೇದದ ವಿಚಾರಗಳನ್ನು ಆಧ್ಯಾತ್ಮದಿಂದ ಹೊರಗಿಟ್ಟು ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ವೇದಗಳನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಅದರ ಮಹತ್ವಗಳನ್ನು ತಿಳಿಸಲೋಸುಗ ಬ್ಲಾಗ್ ಲೋಕದ ಕೆಲವು ಮಿತ್ರರು ವೇದಸುಧೆ  ಎಂಬ ತಾಣವನ್ನು ಹುಟ್ಟುಹಾಕಿದ್ದಾರೆ. ಅಲ್ಲಿಗೂ ಭೇಟಿ ಕೊಡಿ ಎಂದು ವಿನಂತಿಸುತ್ತೇನೆ. ವೇದಗಳ ಆಧ್ಯಾತ್ಮಿಕ ವಿವರಣೆಗಳು ಅಲ್ಲಿ ಲಭ್ಯವಾಗುತ್ತಿದೆ.
ಇಲ್ಲಿ ಋಗ್ವೇದದ ಯಾವ ಸೂಕ್ತಗಳನ್ನೂ ಉದಾಹರಣೆಯಾಗಿ ನಾನು ಕೊಡಮಾಡಿಲ್ಲ, ಕಾರಣ ಮೇಲ್ಕಂಡ ವಿಚಾರಗಳು ಸಂಹಿತೆಯ ಎಲ್ಲಾ ಮಂಡಲಗಳಲ್ಲೂ ಹಂಚಿಹೋಗಿವೆ. ಒಮ್ಮೆ ಋಗ್ವೇದ ಸಂಹಿತೆಯನ್ನು ಮನನ ಮಾಡಿದರೆ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಮಸ್ಯೆಗಳಿಗೆ ತಕ್ಕಮಟ್ಟಿಗಿನ ಉತ್ತರ ದೊರೆಯುದರಲ್ಲಿ ಸಂದೇಹವಿಲ್ಲ.   ಋಗ್ವೇದದಲ್ಲಿನ ಅನೇಕ ವಿಷಯಗಳು ಇಲ್ಲಿ ಬಿಟ್ಟುಹೋಗಿವೆ. ಸಮಯದ ಹಾಗು ಬ್ಲಾಗ್ ನ ಮಿತಿಗಳಿಂದಾಗಿ ಎಲ್ಲವನ್ನೂ ಇಲ್ಲಿ ವಿವರಿಸುವುದು ಕಷ್ಟಸಾಧ್ಯ.
ಮೂಲ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮೇಲ್ಕಂಡ ಎಲ್ಲಾ ವಿಚಾರಗಳಿಗೂ ಸಮರ್ಪಕ ವಿವರಣೆಗಳು ದೊರೆಯುತ್ತದೆ.    

ಕೊನೆ ಮರ್ಮ :  ವೇದಸೂಕ್ತಗಳ ಅರ್ಥವನ್ನೇ ಅರಿಯದೆ, ವಿಚಾರ ಮಂಥನವನ್ನೇ ಮಾಡದೆ , ಕೇವಲ ಎತ್ತರದ ಸ್ವರದಲ್ಲಿ , ರಾಗವಾಗಿ ಸೂಕ್ತಗಳನ್ನು ಹೇಳಿಕೊಂಡು ಪಂಡಿತರೆನಿಸಿಕೊಳ್ಳುವುದರಿಂದ ಯಾವ ಸ್ವರ್ಗವೂ ಸಿಗಲಾರದೆಂದು ಭಾವಿಸುತ್ತೇನೆ. ಇಷ್ಟಕ್ಕೂ ಋಗ್ವೇದದಲ್ಲಿ ಸ್ವರ್ಗ-ನರಕಗಳ ಪ್ರಸ್ತಾಪವೇ ಬರುವುದಿಲ್ಲ !. ಕೇವಲ ಪುರೋಹಿತಶಾಹಿಗಳ, ಒಂದು ವರ್ಗದ ಅಥವ ಸ್ವಯಂಘೋಷಿತ ಬುದ್ಧಿಜೀವಿಗಳ ಅಧ್ಯಯನಕ್ಕಷ್ಟೇ ವೇದಗಳು ಮೀಸಲಲ್ಲ ಎನ್ನುವುದು ಜಗತ್ತಿಗೆ ತಿಳಿಯಬೇಕಿದೆ. ವೇದಗಳು ಪ್ರಪಂಚಕ್ಕೆ ತೆರೆದುಕೊಂಡಾಗ ಸನಾತನ ಭಾರತೀಯ ಸಂಸ್ಕೃತಿಗೆ ಮತ್ತೊಂದು ಗರಿ ಮೂಡುತ್ತದೆ. ಜೀವಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ದಾರಿದೀವಿಗೆಯಾಗಬಲ್ಲಂತಹ ಉತ್ತಮ ವಿಚಾರಗಳೇ ಋಗ್ವೇದದ ಮೆರುಗೆಂದರೆ ತಪ್ಪಾಗಲಾರದು. ವೇದಗಳು ಬಂಧನದಿಂದ ಹೊರಬರಬೇಕಿದೆ, ಜಗತ್ತಿಗೆ ಪಸರಿಸಬೇಕಿದೆ.

ಲೇಖನದ ಆಧಾರ : ಋಗ್ವೇದ ಸಂಹಿತಾ ಮತ್ತು
                      " Why We Read Rig Veda " by Sri. L.R. Kashyap. U.S.        


----------------*--------------------





ವಂದನೆಗಳೊಂದಿಗೆ...

Mar 24, 2010

ಹೀಗೊಂದು ನವಮಿ..


ಇಂದು ಶ್ರೀರಾಮನವಮಿ
ಪುಟ್ಟ ಬಾಲ-ಬಾಲೆಯರ
ಸಡಗರದ ನವಮಿ
ಪಾನಕ-ಕೋಸಂಬರಿಗಳ
ಮಿಲನದ ಮಹಾನವಮಿ !

ಗುಡಿಯೊಳಗಿರುವ ರಾಮನಿಗೆ
ತಿನಿಸುಗಳು ಬಗೆಬಗೆ
ಮಜ್ಜಿಗೆ, ರಸಾಯನ
ಹುಳಿಯವಲಕ್ಕಿಗಳ ಲಗು-ಬಗೆ ,

ಗುಡಿಯ ಹೊರಗೆ.....
ಭಿಕಾರಿಗಳ ಅದಮ್ಯ ಯಾಚನೆ,
ಗುಡಿಯೊಳಗೆ....
ಭಕ್ಷ-ಭೋಜ್ಯಗಳ ಬಣ್ಣನೆ !
ನಿಮಿಷಕ್ಕೊಂದು ರುಚಿಯ
ಖಾದ್ಯಗಳ ಸಮಾರಾಧನೆ ..,

ರಾಮನನು ಹೊತ್ತು ಸಾಗುವ ಪರಿ
ನೋಡಲದು ಕಣ್ಣಿಗಚ್ಚರಿ !
ಉತ್ಸವದ ಭರದಲಿ
ಭಕ್ತರ ಸಡಗರದಲಿ,
ಹಸಿದ ಜೀವವ ತಳ್ಳಿ...
ಅವನ ಹೊಟ್ಟೆಗಿಟ್ಟು ಕೊಳ್ಳಿ..
ಮುಂದೆ ಸಾಗಿದ್ದು ತಿಳಿಯಲಿಲ್ಲ,
ರಾಮಚಂದ್ರ ಕಣ್ತೆರೆಯಲಿಲ್ಲ !,

ಇಂತಿಪ್ಪ ರಾಮರಾಜ್ಯದಲಿ
ಬೇಡುವ, ಕಾಡುವ ಜೀವಗಳಿಗಿಲ್ಲ..
ಮಜ್ಜಿಗೆ ಪಾನಕ..
ಕುಡಿದವರೇ ಕುಡಿಯುವರು ಮತ್ತೆ..
ಹಳ್ಳದೆಡೆಗೇ ಸದಾ ನೀರು ಹರಿವಂತೆ ..!


 ----------------------------------------------------------------------------------

ಖೊನೆಖಿಡಿ

ಶಂಭುಲಿಂಗ ತನ್ನ ಮಡದಿ  ಮತ್ತು ನಾಲ್ಕು ಮಕ್ಕಳೊಂದಿಗೆ ಮೋಟಾರಿಗೆ ಕಾಯುತ್ತಾ ನಿಂತಿದ್ದ. ಅಲ್ಲಿಗೆ ಗೌಡರ ಆಗಮನವಾಯಿತು...

ಗೌಡ್ರು : ಏನಯ್ಯಾ ಶಂಭು, ..ಚೆನ್ನಾಗಿದ್ದಾವೆ ಮಕ್ಕಳು...ಯಾವಾಗ್ ಆಯ್ತಯ್ಯಾ ನಾಲ್ಕು ಮಕ್ಕಳು ನಿಂಗೆ ?

ಶಂಭುಲಿಂಗ : ಬುದ್ದಿ..ಇವಳು ಚಿಕ್ಕೋಳು, ನಮ್ಮ ಮಗಳು...ಇವ್ನು ನನ್ನ ಎರಡನೇ ಹೆಂಡ್ತಿ ಮಗ, ಇವ್ಳು ನನ್ನ ಮೊದಲನೆ ಹೆಂಡತಿ ಮಗಳು...ಇವನು ದೊಡ್ಡೋನು......
ಇವನು....ಬುದ್ದಿ ನೆನ್ಪೇ ಆಗ್ತಿಲ್ಲಾ..ಯಾವಾಗ್ ಉಟ್ಟಿದ್ ಇವ್ನು ಅಂತ ...!!!!!

                                             ವಿಶ್ಚಾಸದೊಂದಿಗೆ,

Mar 17, 2010

ಹೀಗೂ ಆಗುತ್ತದೆ...

ಬ್ಲಾಗಿನಲ್ಲಿ , ತೀರಾ ಜಾಳು ಜಾಳಾಗಿ ನಾನು ಬರೆದದ್ದು ನನಗೇ ಬೇಜಾರಾಗಿ ಟಿ.ವಿ. ನೋಡೋಣವೆಂದು ಕುಳಿತೆ !. Sports channel ನಲ್ಲಿ IPL ದೇ ಭರಾಟೆ, News channel ನಲ್ಲಿ ನಿತ್ಯಾನಂದನದೇ ಕರಾಟೆ ..!. ತಲೆ ಕೆದರಿಕೊಂಡು ಒಂದಷ್ಟು ಹಳೆಯ ನೆನಪುಗಳನ್ನು ಕೆದಕಿಕೊಂಡೆ. ಅರೆ..!, ಅಲ್ಲೂ ಒಬ್ಬ ಮಹಾನುಭಾವ ಸಿಕ್ಕೇಬಿಟ್ಟ.....ಓದಿ ಮುಂದೆ,..

 ಇದು ಹತ್ತು ವರ್ಷಗಳ ಹಿಂದಿನ ಘಟನೆ....., ನನಗೆ ಬೇಕಾದ, ತುಂಬಾ ಹತ್ತಿರದ ಆತ್ಮೀಯರೊಬ್ಬರನ್ನು ಮೈಸೂರಿನ ಸಿ.ಎಸ್.ಐ. ಮಿಶನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಮೂತ್ರಕೋಶದ  ತೊಂದರೆಯಿತ್ತು. ಸ್ಪಷ್ಟವಾಗಿ ಹೇಳಬೇಕೆಂದರೆ, ಅವರಿಗೆ ಮೂತ್ರಕೋಶದ ಬ್ಲಾಡರ್ ನಲ್ಲಿ ಗೆಡ್ಡೆಯಾಗಿತ್ತು. ಶಸ್ತ್ರಚಿಕಿತ್ಸೆಯೇ ಆಗಬೇಕೆಂಬ ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ’ವ್ಯವಸ್ಥೆ’ ಮಾಡಲಾಗಿತ್ತು. ಅವರ ಹತ್ತಿರದ ಸಂಬಂಧಿಗಳೆಲ್ಲಾ ದೂರವೇ ಉಳಿದಿದ್ದರಿಂದ ಅನಿವಾರ್ಯವಾಗಿ ನನ್ನ ತಾಯಿಯನ್ನೇ ಅವರ ಉಪಚಾರಕ್ಕಾಗಿ ಅಲ್ಲಿರುವಂತೆ ವ್ಯವಸ್ಥೆ ಮಾಡಿದೆ. ಶಸ್ತ್ರಚಿಕಿತ್ಸೆಯೇನೋ ಆಯಿತು, ಆದರೆ ಅವರ ಆರೋಗ್ಯದಲ್ಲಿ ಸುಧಾರಣೆಯೇನೂ ಕಂಡುಬರಲಿಲ್ಲ. ಒಂದೈದು ಬಾಟಲ್ ರಕ್ತವನ್ನೂ  ರಕ್ತ ಕೇಂದ್ರದಿಂದ ತರಿಸಿಕೊಟ್ಟಿದ್ದೆ. ಅವರ ಗುಂಪಿನ ರಕ್ತವನ್ನು ಹೊಂದಿಸುವುದು ಕಷ್ಟವಾಗಿತ್ತು. ನನ್ನ ರಕ್ತ ಅವರಿಗೆ Match ಆಗಿದ್ದರಿಂದ ನಾನೂ ರಕ್ತ ಕೊಟ್ಟೆ.  ಆದರೆ ಅವರ ಆರೋಗ್ಯ ಸುಧಾರಣೆಗೆ ಇನ್ನೂ ರಕ್ತದ ಅವಶ್ಯಕತೆಯಿತ್ತು. "ಡೊನೇಟ್  ಮಾಡೋರನ್ನ ಹುಡುಕಿ" ಎಂದು ಪುಕ್ಕಟೆ ಸಲಹೆ ಕೊಟ್ಟ ವೈದ್ಯರಿಗೆ ಮನಸಿನಲ್ಲೇ ಬೈದುಕೊಂಡು ಹೊರಗೆ ಬಂದೆ......
ಪೀಚಲು ದೇಹದ, ಕವುಳುಗಳೆಲ್ಲಾ ಒಳಕ್ಕೆ ಹೋದ, ಎಣ್ಣೆಯೇ ಕಾಣದ ತಲೆಕೂದಲಿನ, ದೊಗಲೆ ಇಜಾರ(ಪ್ಯಾಂಟು) ಮೇಲೊಂದು ಅಂಗಿ ತೊಟ್ಟಿದ್ದ , ಸುಮಾರು ೨೧-೨೨ ವಯಸ್ಸಿನ ಹುಡುಗನೊಬ್ಬ ನನ್ನತ್ತಲೇ ಬಂದ..(ನನಗೂ ಆಗ ೨೧ ವಯಸ್ಸು).
 "ನಿಮ್ಮನ್ನು ವಾರದಿಂದ ನೋಡ್ತಾ ಇದೀನಿ, ಮೂರು ದಿನದಿಂದ ರಕ್ತಕ್ಕಾಗಿ ಪರದಾಡ್ತಾ ಇದೀರ, ನನ್ನದೂ ಅದೇ ಗುಂಪಿನ ರಕ್ತ..ನೋಡಿ, ನಾನು ಬೇಕಾದ್ರೆ ರಕ್ತ ಕೊಡ್ತೀನಿ " ...ಅವನಂದ ಮಾತಿಗೆ ಸಂತೋಷವಾಯ್ತು. ಅವನಿಗೆ ಹಣದ ಅವಶ್ಯಕತೆಯಿತ್ತು, ಚೌಕಾಸಿ ಮಾಡಿ ೩೦೦ ರೂಪಾಯಿ ಕೊಡುವುದಾಗಿ ಒಪ್ಪಿಸಿ ರಕ್ತ ತೆಗೆದುಕೊಳ್ಳುವ ಕೋಣೆಗೆ ಅವನನ್ನು ಕರೆದೊಯ್ದೆ. ನರ್ಸ್‍ಗಳು, ಅವನನ್ನು ತಿನ್ನುವಂತೆ ನೋಡಿದರು. ಆ ಮನುಷ್ಯನಿಗಂತೂ ಅದ್ಯಾವುದರ ಗೊಡವೆಯೂ ಇರಲಿಲ್ಲ. ತೀರಾ ಭಂಡನಂತೆ ಕಾಣುತ್ತಿದ್ದ ಅವನು. ಒಬ್ಬರು ನರ್ಸ್ ನನ್ನ ಹತ್ತಿರ ಬಂದು "ಇವನೇನಾ ನಿಮಗೆ ಸಿಕ್ಕಿದ್ದು, ಬೇರೆ ಯಾರನ್ನಾದ್ರೂ ನೋಡ್ಬಾರ್ದಾ " ಎಂದು ಉಸುರಿದರು. "ಅಯ್ಯೋ, ಇನ್ನ್ಯಾರನ್ನು ಹುಡುಕಲಿ, ಸದ್ಯಕ್ಕೆ ಇವರದ್ದೇ ರಕ್ತ ತೆಗೆದುಕೊಂಡುಬಿಡಿ" ಎಂದು ನಾನೂ ಜಾರಿಕೊಂಡೆ. ಒಂದು ವಾರದಿಂದ ಆಸ್ಪತ್ರೆಯ ಜಂಜಾಟ ನನ್ನನ್ನು ಹೈರಾಣಾಗಿಸಿತ್ತು. ಅದೆಷ್ಟೋ ಮಾತ್ರೆಗಳು, ಔಷಧಿಗಳು, ರಕ್ತ, ಪ್ಲಾಸ್ಮಾ, ಆಲ್ಬುಮಿನ್ (ಇದು ಆಗ ಮೈಸೂರಲ್ಲಿ ಲಭ್ಯವಿರಲಿಲ್ಲ !..ಬೆಂಗಳೂರಿಗೆ ಹೋಗಿ ತರಬೇಕಿತ್ತು)....ತಂದುಕೊಟ್ಟು ನನಗೂ ಈ ಆಸ್ಪತ್ರೆಯ ಸಹವಾಸ ಸಾಕೆನಿಸಿತ್ತು. ನನ್ನ ತಾಯಿಗೂ, ಆ ಗೋಳಾಟ, ಅಳು, ದುಗುಡಗಳು ಮನಸನ್ನು ಕದಡಿತ್ತು.  ಅವನ ರಕ್ತಪರೀಕ್ಷೆ ಮಾಡಿದ ನರ್ಸ್, ಅವನ ರಕ್ತದಲ್ಲಿ ಕೇವಲ ೭.೫ ರಷ್ಟು ಮಾತ್ರ ಹಿಮೋಗ್ಲೋಬಿನ್ ಅಂಶವಿರುವುದನ್ನು  ಹೇಳಿದಾಗ ನನಗೆ ಅವನ ರಕ್ತದ ಮೇಲಿದ್ದ ವ್ಯಾಮೋಹ ಕಮ್ಮಿಯಾಯಿತು. ಅವನ ಕೈಗೆ ೫೦ ರೂ ಇತ್ತು ಹೊರಡಲು ಹೇಳಿದೆ. ಅವ ನನ್ನನ್ನು ಬಿಡಲೇ ಇಲ್ಲ. ’ನಕ್ಷತ್ರಿಕ’ ನಂತೆ ನನ್ನ ಹಿಂದೆ ಸುತ್ತಿದ. ನಾನು ಒಪ್ಪಲೇ ಇಲ್ಲ. ಕೊನೆಗೆ ’ಸೆಂಟಿಮೆಂಟಲ್’ ಆಗಿ ಹೊಡೆದ.."ಸಾರ್.... ನಾನೂ ಬ್ರಾಹ್ಮಣ ಸಾರ್ , ಯಾರೂ ಇಲ್ಲ ಸಾರ್ ನನಗೆ, ಬೇಕಾದ್ರೆ ಜನಿವಾರ ನೋಡಿ, ಹೊಟ್ಟೆಗೂ ತಾಪತ್ರಯ ಆಗಿದೆ...ಹೇಗೋ ದಿನಾ ೨೦-೩೦ ರೂಪಾಯಿ ಕೊಡಿ..ನಿಮ್ಮ ತಾಯಿ ಜೊತೆ ಇದ್ದು ಸಹಾಯ ಮಾಡ್ತೀನಿ ಸಾರ್ "...ಎಂದ. ನನಗೂ ಅವನ ಮಾತು ಸರಿಯೆನಿಸಿತು, ನಾನೂ ನನ್ನೂರಿಗೆ ಹೋಗಿ-ಬಂದು ಮಾಡಬೇಕಿತ್ತು. ನನ್ನಮ್ಮನ ಜೊತೆಗೊಬ್ಬರಿದ್ದರೆ ಅನುಕೂಲ ಎಂದುಕೊಂಡು ಅವನಿಗೆ ಒಪ್ಪಿಗೆ ಕೊಟ್ಟೆ. ಆಗ, ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಅವನಿಗೆ ಎಲ್ಲಾ ವಿವರಿಸಿ ಹೇಳಿ ನನ್ನ ತಾಯಿಗೂ ಎಚ್ಚರಿಕೆ ಹೇಳಿ, ನನ್ನೂರಿಗೆ ಹೊರಟು ಬಂದೆ.  ಆಸ್ಪತ್ರೆಯಲ್ಲಿ ಯಥಾಸ್ಥಿತಿ ಮುಂದುವರೆದಿತ್ತು . ಎರಡು ದಿನದ ಬಳಿಕ ಮೈಸೂರಾಸ್ಪತ್ರೆಗೆ ಮತ್ತೆ ಬಂದೆ . ನನ್ನಮ್ಮ ನಕ್ಷತ್ರಿಕನ ಪುರಾಣ ಶುರುವಿಟ್ಟರು " ಬೆಳಿಗ್ಗೆ ಕಾಫಿಗೆ ೧೦ ರೂ, ತಿಂಡಿಗೆ ೨೦ರೂ, ಊಟಕ್ಕೆ ೨೦ರೂ, ಮತ್ತೆ ಮಾತ್ರೆ..ಅದೂ..ಇದೂ ಅಂತ ತರೋಕೆ ಹೋದಾಗ ಅದರಲ್ಲೂ ದುಡ್ಡು ಉಳಿಸ್ಕೋತಾನೆ, ಮತ್ತೂ ತಲೆ ತಿನ್ತಾನೆ ನನಗೆ " ಎಂದು ಒಂದೇ ಸಮನೆ ಉಸುರಿದರು. ನಕ್ಷತ್ರಿಕನನ್ನು ಹತ್ತಿರ ಕರೆದು ಅವನ ಶಾಲೆಯ ಓದಿನ ಕುರಿತು ವಿಚಾರಿಸಿದೆ. ವಿದ್ಯೆ..ನೈವೇದ್ಯವೆಂದು ತಿಳಿಯಿತು ..!. ಅವನಿಗೆ ಒಂದಷ್ಟು ಎಚ್ಚರಿಕೆ ಕೊಟ್ಟೆ. ತೀರಾ ಬೇಸರವಾಗಿ, ’ ೫೦೦ ರೂ ಕೊಡ್ತೇನೆ ..ಜಾಗ ಖಾಲಿ ಮಾಡು ’ ಎಂದೆ, ಆದರೂ ಅವ ಬಗ್ಗಲಿಲ್ಲ..ಕಣ್ಣಿರಿಟ್ಟುಬಿಟ್ಟ. ಇದೊಳ್ಳೆ ಗ್ರಹಚಾರವಾಯ್ತಲ್ಲ ಎಂದು, ನನ್ನ ತಾಯಿಗೆ ಸಮಾಧಾನ ಹೇಳಿ ಒಂದೆರೆಡು ದಿನ ಅಲ್ಲೇ ಕಳೆದೆ. ನನ್ನ ಆತ್ಮೀಯರ ಜೊತೆ ಈ ನಕ್ಷತ್ರಿಕನನ್ನೂ ನೋಡಿಕೊಳ್ಳುವ ಜಂಜಡವಾಯಿತು ನನಗೆ. ಅದೊಂದು ದಿನ ನನ್ನ ಆತ್ಮೀಯರು ನಮ್ಮನ್ನಗಲಿದರು. ನನ್ನ ತಾಯಿಯನ್ನು ಸಮಾಧಾನ ಪಡಿಸಲು ನಾನು ಅಶಕ್ಯನಾದೆ. ಅಂತೂ ಬಿಲ್ ಕ್ಲಿಯರ್ ಮಾಡಿ "Body " (ಸತ್ತ ಮೇಲೆ ಇಷ್ಟೇ ಅಲ್ಲವೇ !! ) ತೆಗೆದುಕೊಂಡು ಹೊರಬಂದೆವು. ಹೊರಡುವಾಗ ಮತ್ತೆ ನಕ್ಷತ್ರಿಕ ಕಾಡಿದ.  ಅವ ನಮ್ಮ ಸೇವೆ ಮಾಡಿದ್ದಕ್ಕೆ ಪ್ರತಿಯಾಗಿ ೧೦೦೦ ರೂ ಕೊಡಲೇಬೇಕೆಂದು ಪೀಡಿಸಿದ . ನನ್ನಮ್ಮನಿಗೆ ಅದೆಲ್ಲಿತ್ತೋ ಕೋಪ, ಉಗಿದು ಉಪ್ಪಿನಕಾಯಿ ಹಾಕಿದರು ಅವನನ್ನ !. ಕೊನೆಗೆ ನಾನೇ ಸೋತು..೫೦೦ ರೂ ಅವನ ಕೈಗಿತ್ತು ವ್ಯಾನ್ ಹತ್ತಿದೆ. ಮುಂದೆ...ಅಂತ್ಯಸಂಸ್ಕಾರ, ಕರ್ಮಾಂತರಗಳು...ಸಮಾರಾಧನೆ...ಇತ್ಯಾದಿ...........

   ------------*--------------------

ಇದಾಗಿ ನಾಲ್ಕು ವರ್ಷ ಕಳೆದಿತ್ತು.  ನಾನು ನಿತ್ಯ ಕೆಲಸ ಮಾಡುವ ನನ್ನ ದೊಡ್ಡಾಫೀಸಿನ ದೊಡ್ಡ ಬಾಗಿಲಿನ ಮುಂದೆ ನಿಂತಿದ್ದೆ. ಅಂದು ಅಷ್ಟೇನೂ ಕೆಲಸದ ಒತ್ತಡವಿರಲಿಲ್ಲ. ಹೊರಗೆ ಸುಂದರ ಹಸಿರು ಪಾರ್ಕು, ನಳನಳಿಸುವ ಹೂಗಳು, ..ಆಸ್ವಾದಿಸುತ್ತಾ ಯಾವುದೋ ಲೋಕದಲ್ಲಿದ್ದೆ...!. ಹಿಂದಿನಿಂದ ದ್ವನಿಯೊಂದು ತೇಲಿ ಬಂತು. ತಿರುಗಿ ನೋಡಿದೆ. ಕಾವೀಧಾರೀ ಯುವಕರೊಬ್ಬರು ನನ್ನ ಮುಂದಿದ್ದರು. ಕೈಯಲ್ಲೊಂದು ಕೋಲು, ಅದಕ್ಕೊಂದು ಕೆಂಪು ಬಟ್ಟೆ (ಸನ್ಯಾಸಿಗಳು ಹಿಡಿಯುವ ದಂಡ !) , ಹೆಗಲಿಗೊಂದು ಲೆದರ್ ಜೋಳಿಗೆ, ....ಮುಖ ನೋಡಿದೆ..ಅಹಾ ! ಸೇಬಿನಂತೆ ಕೆಂಪಗಿದ್ದ ಕೆನ್ನೆಗಳು, ಲಿಪ್‍ಸ್ಟಿಕ್ ಹಚ್ಚಿದಂತಿದ್ದ ತುಟಿಗಳು, ಅರಳಿದ ಮುಖ, ಹಣೆಯಲ್ಲಿ ಸಿಂದೂರ ತಿಲಕ, ...ಅರೆರೆ.. ! ಎಲ್ಲೋ ನೋಡಿದ್ದೇನೆಲ್ಲಾ ಈ ಮುಖವನ್ನು ಎನ್ನಿಸಿತು. ಕಾವೀಧಾರಿಯೇ ಶುರುವಿಟ್ಟರು.. " ನನ್ನ ಗುರುತು ಸಿಕ್ಕಿತಾ ? ನೋಡಿ ಸಂದರ್ಭ ನಮ್ಮನ್ನು ಹೇಗೆ ಸೇರಿಸುತ್ತದೆ ಎಂದು.."...ಆ ಧ್ವನಿಯೂ ಪರಿಚಿತವಾದದ್ದೇ...ತಕ್ಷಣ ನೆನಪಾಯಿತು,  ಆ ’ನಕ್ಷತ್ರಿಕ ’ನೇ ಇವನೆಂದು. ’ಇದೇನು ಕಾವೀ ಕತೆಯೆಂದು ಕೂತುಹಲದಿಂದ ಅವರನ್ನೇ ಕೇಳಿದೆ.." ಹೀಗೆ, ಮನಸ್ಸು ಬದಲಾವಣೆಯಾಯ್ತು, ಸನ್ಯಾಸಿಯಾದೆ. ನೀವಿಲ್ಲಿರುವುದು ತಿಳಿದಿರಲಿಲ್ಲ, ಶ್ರೀ ಶಂಕರರ ತತ್ವಪ್ರಸಾರಕ್ಕಾಗಿ ತಿರುಗುತ್ತಿದ್ದೇನೆ. ಮೈಸೂರಿನಲ್ಲೊಂದು ’ತತ್ವಮಸಿ’ ಎಂಬ ಕೇಂದ್ರವನ್ನು ಹೆಬ್ಬಾಳ ಕೆರೆಯ ಪಕ್ಕದಲ್ಲಿ ( ನನಗೆ ಆ ಏರಿಯಾ ಗೊತ್ತಿರಲಿಲ್ಲ ) ತೆರೆದಿದ್ದೇನೆ..ಇನ್ನೂ ಬೆಳೆಸಬೇಕಿದೆ,ಅದಕ್ಕೆ ಗುರುಕಾಣಿಕೆ ಪಡೆಯಲು ಈ ಊರಿಗೆ ಬಂದಿದ್ದೇನೆ...." ..ಗಂಭೀರವಾಗಿ, ನಿರ್ಭಾವುಕರಾಗಿ ಹೇಳಿದ ಅವರ ಮಾತುಗಳನ್ನು ಕೇಳಿದ ನಂತರ ನನಗನ್ನಿಸಿತು, ನಾನು ಅವರನ್ನು..ಅವರು ನನ್ನನ್ನು  ನನ್ನ ಜಾಗದಲ್ಲಿ ಭೇಟಿಯಾಗಿದ್ದು ಆಕಸ್ಮಿಕ ಮತ್ತು ಅನಿರೀಕ್ಷಿತವೆಂದು..!. ಆಶ್ಚರ್ಯವಾಯಿತು ನನಗೆ, ನಾಲ್ಕು ವರ್ಷಗಳಲ್ಲಿ ಇಷ್ಟೊಂದು ಬದಲಾವಣೆಯೆ ? ಇರಬಹುದೇನೋ..ಎಂದುಕೊಂಡು ಅವರ ಮುಂದಿನ ಕಾರ್ಯಕ್ರಮ ಕೇಳಿದೆ. ನನ್ನೂರಿನ ನಮ್ಮ ಸಂಘ-ಸಮಾಜದಿಂದ ಒಂದಷ್ಟು ಕಾಣಿಕೆ ಕೊಡಿಸುವಂತೆ ಕೇಳಿದರು. ಶ್ರೀ ಶಂಕರರ ಹೆಸರಿಗೆ ಕಟ್ಟುಬಿದ್ದು ಒಪ್ಪಿಕೊಂಡೆ. ನಮ್ಮ ಸಮಾಜದ ಅಧ್ಯಕ್ಷರ ಮುಂದೆ ಅವರನ್ನು ನಿಲ್ಲಿಸಿ ಎಲ್ಲವನ್ನೂ ವಿವರಿಸಿದೆ. ಖಜಾಂಚಿಯಂತೂ ದೀರ್ಘದಂಡ ನಮಸ್ಕಾರವನ್ನೇ ಮಾಡಿಬಿಟ್ಟ !. ತಮಾಷೆಯೆಂದರೆ, ಅವರ‍್ಯಾರಿಗೂ  ಗುರುಕಾಣಿಕೆ ನೀಡುವ ಮನಸೇ ಬರಲಿಲ್ಲ ..!. ಅಧ್ಯಕ್ಷರು, ಕಾವೀಧಾರಿ ಯನ್ನು ಸ್ನೇಹಿತರ ಅಂಗಡಿಯೊಂದರಲ್ಲಿ ಕುಳ್ಳಿರಿಸಿ, ಈಗ ಬರುತ್ತೇನೆಂದು ಹೇಳಿ ಕಾಲ್ಕಿತ್ತರು. ಉಳಿದಿದ್ದು ನಾನು ಮತ್ತು ಖಜಾಂಚಿ. "ನನಗೆ ಪಾದುಕೆಗಳಿಲ್ಲ, ನೆಡೆದಾಡಲು ಕಷ್ಟವಾಗುತ್ತಿದೆ, ತಮಗೇನಾದರೂ ಪಾದುಕೆ ಮಾಡಿಸಿಕೊಡಲು ಸಾಧ್ಯವೆ ? " ..ಕಾವೀಧಾರಿಗಳು ಕೇಳಿದುದಕ್ಕೆ ಖಜಾಂಚಿಗಳು ಮನಸಾರೆ ಒಪ್ಪಿದರು. ಹಾಗೆಯೇ ಕಾವೀಧಾರಿಗಳ  ’ರಿಲಯನ್ಸ್’ ಮೊಬೈಲ್ ಗೆ ಚಾರ್ಜರ್ ಅನ್ನೂ ತಂದುಕೊಟ್ಟರು. ಖಂಜಾಂಚಿಗಳು ಲೆಕ್ಕಾಚಾರ ಹಾಕಿದರು.." ಪಾದುಕೆ, ಮಾವಿನ ಮರದ್ದೋ..ಹಲಸಿನದೋ ಆಗಬಹುದಲ್ಲವೇ.." ಎಂದು ಕೇಳಿದರು. ಕಾವೀಧಾರಿಗಳು "ಅದು ಅಷ್ಟೇನೂ ಸರಿಯಾಗದು, ತೇಗ ಅಥವಾ ಮಹಾನಂದಿಯದ್ದಾದರೆ ಉತ್ತಮ " ಎಂದರು. ಖಜಾಂಚಿಗಳು ಅಲ್ಲಿಂದ ಕಂಬಿಕಿತ್ತರು !. ಉಳಿದಿದ್ದು ನಾನು ಮತ್ತು ಅಂಗಡಿಯ ಮಾಲಿಕ, ಇಬ್ಬರೆ. ನನಗೂ ಏಕೋ ಈ ಕಾವೀಧಾರಿಯ ವರ್ತನೆ ಸರಿಹೋಗಲಿಲ್ಲ. ಅದೂ-ಇದೂ ಮಾತಾಡಿ ಸತಾಯಿಸಿ, ಬರುತ್ತೇನೆಂದು ಹೇಳಿ ಮೆಲ್ಲಗೆ ಅಲ್ಲಿಂದ ತಪ್ಪಿಸಿಕೊಂಡು ನನ್ನ ಕೆಲಸದ ’ಗೂಡು’ ಸೇರಿದೆ. ಸುಮಾರು ೨ ಗಂಟೆಗಳ ತರುವಾಯ ನನ್ನ ಜಾಗದಲ್ಲಿ ಮತ್ತೆ ಕಾವೀಧಾರಿಗಳು ಪ್ರತ್ಯಕ್ಷರಾದರು. ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು. " ಹೀಗೆ ಮಾಡಬಾರದಿತ್ತು ನೀವು,  ಅನುಷ್ಠಾನವುಳ್ಳ ಒಬ್ಬ ಗುರುವನ್ನು ನೆಡೆಸಿಕೊಳ್ಳುವ ರೀತಿಯೇ ಇದು..ಒಂದು ಚಿಕ್ಕ ಕಾಣಿಕೆಯನ್ನೂ ಕೊಡಲಾಗಲಿಲ್ಲವಲ್ಲ ನಿಮಗೆ..ಹೋಗಲಿ ಜೊತೆ ಪಾದುಕೆಯನ್ನಾದರೂ.. " ನನಗೇಕೋ ಕಸಿವಿಸಿಯಾಯಿತು, ನನ್ನಲ್ಲಿದ್ದ ೧೦೦ ರೂಪಾಯಿ ತೆಗೆದು ಅವರಿಗೆ ಕೊಡಲನುವಾದೆ.   " ಬರೀ ೧೦೦ ರೂಪಾಯಿಗೆ ನಾನು ಇಷ್ಟೆಲ್ಲಾ ಸುತ್ತಬೇಕಾಯಿತ,  ನಿಮಗೆ ಗುರುಶಾಪ ತಟ್ಟದೇ ಬಿಡುವುದಿಲ್ಲ "  ಎಂದು ಧಮಕಿಯನ್ನೂ ಹಾಕಿದರು. ನನ್ನ ಬುದ್ದಿಯೂ ಚುರುಕಾಯಿತು, ನಾನು ಏರಿದ ಧ್ವನಿಯಲ್ಲೇ ಹೇಳಿದೆ  " ಶಾಪ ಕೊಡಲು ವಸಿಷ್ಟ-ವಿಶ್ವಾಮಿತ್ರರ ಕಾಲವಲ್ರೀ ಇದು, ಈಗ ಸುಮ್ಮನೆ ಇಲ್ಲಿಂದ ಹೋದ್ರೆ ಸರಿ..ಇಲ್ಲಾಂದ್ರೆ ನಿನ್ನ ಹಳೇ ಪುರಾಣವನ್ನೆಲ್ಲಾ ತೆಗೀಬೇಕಾಗುತ್ತೆ ".. ನಾನು ಹೇಳಿದ್ದಿಷ್ಟೆ.  ಕಾವೀಧಾರಿಗಳು ಕಾಣದಂತೆ ಮಾಯವಾದರು.

---------------*----------------

ಇತ್ತೀಚಿಗೆ ೨ ವರ್ಷಗಳ ಹಿಂದೆ ನನ್ನ ಮದುವೆಯಾಯಿತು. ಅಲ್ಲಿಗೆ ಮುಗಿಯಿತು !. ಹೆಂಡತಿಯ ಮಾತನ್ನು ಕೇಳದಿದ್ದರಾಗುತ್ತದೆಯೇ..?? ಅಲ್ಲಿ-ಇಲ್ಲಿ ಒಂದಷ್ಟು ಯಾತ್ರೆ ಮುಗಿಸಿಕೊಂಡು ಬಂದೆವು. ನನ್ನ ಮಾತಾಶ್ರ‍ೀ ಗದರಿದಾಗಲೇ ನನ್ನ ಪೌರಾಣಿಕ ಜನನಕ್ಕೆ ಕಾರಣನಾದ ಕುಕ್ಕೆ ಸುಬ್ರಹ್ಮಣ್ಯನ ನೆನಪಾದದ್ದು !. ಬಾಲ ಸುಬ್ರಹ್ಮಣ್ಯನ ದರ್ಶನಕ್ಕೆ ಹೋಗಿ ಬರಬೇಕೆಂದು ನನ್ನ ತಾಯಿ ಫರ್ಮಾನು ಹೊರಡಿಸಿದರು.  ಅದೊಂದೆ ಏಕೆ ? ಅಲ್ಲಿಂದ ಮುಂದೆ ..ಮಂಗಳೂರು, ಉಡುಪಿ, ಕುಂಭಾಶಿ, ಮರವಂತೆ, ಕೊಲ್ಲೂರು..ಇತ್ಯಾದಿ... ನನ್ನಾಕೆ ಪೋಣಿಸಿದಳು. ಒಂದೈದು ದಿನದ  ’ಪ್ರಯಾಸಕ್ಕೆ’ ನಾನು ಮಾನಸಿಕವಾಗಿ ಸಿದ್ಧನಾದೆ.  ನಾವು ಕುಕ್ಕೆ ತಲುಪಿದ್ದ ದಿನ ಅಲ್ಲಿ ವಿಶೇಷವಿತ್ತು. ಅಂದು ’ಕಿರುಷಷ್ಟಿ’ (ತುಳು ಷಷ್ಟಿ) . ಮಧ್ಯಾಹ್ನ ೧.೩೦ ಕ್ಕೆಲ್ಲಾ ಪ್ರಸಾದ ಭೋಜನದ ವ್ಯವಸ್ಥೆಯಿತ್ತು. ಪ್ರಾಂಗಣದಲ್ಲಿ ನಾನೂ-ನನ್ನಾಕೆ ಸೀಟು ಭದ್ರಪಡಿಸಿಕೊಂಡು ಕುಳಿತಿದ್ದೆವು!. ಅಂದಿನ ವಿಶೇಷಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿಗಳು ಬರುವವರಿದ್ದರು. ಮೈಕಿನಲ್ಲಿ ಅವರ ಬರುವಿಕೆಯ ಸಮಾಚಾರವನ್ನು ಆಗಾಗ್ಗೆ ಅನೌನ್ಸ್ ಮಾಡುತ್ತಿದ್ದರು. ಅದರ ಜೊತೆಗೆ  "ದೇವಳದೊಳಗೆ  ಸಾಲಾಗಿ ಬನ್ನಿ, ಶರ್ಟು-ಬನಿಯನ್ ತೆಗೆದು ಒಳಗೆ ಬನ್ನಿ ( ಗಂಡಸರು ಮಾತ್ರ !), ನಿಮ್ಮ ವಸ್ತುಗಳಿಗೆ ನೀವೇ ಜವಾಬುದಾರರು (ಹೆಂಡತಿಯನ್ನು ಬಿಟ್ಟು !) " ಇತ್ಯಾದಿಗಳು ಕೇಳಿ ಬರುತ್ತಿತ್ತು. ಅಂತೂ ’ಶ್ರೀ’ ಗಳು ಪುರ ಪ್ರವೇಶ ಮಾಡಿದ್ದನ್ನು ಮೈಕಿನಲ್ಲಿ ಅರುಹಿದರು. ’ಸೀಟು’ ಮತ್ತೆ ಸಿಗದೆನ್ನುವ ಕಾರಣಕ್ಕೆ.. ನನ್ನಾಕೆ , ಅವರ ದರ್ಶನಕ್ಕೆ ಹೋಗಲು ನನ್ನನ್ನು ಬಿಡಲಿಲ್ಲ !. ಹೇಗೂ ಇರುತ್ತಾರೆ ಆಮೇಲೆ ನೋಡಿದರಾಯ್ತು ಎಂದು ನಾನೂ ಸುಮ್ಮನಾದೆ.  ಅಷ್ಟರಲ್ಲಿ , ನಾಲ್ಕೈದು ಜನ ಸುಬ್ರಹ್ಮಣ್ಯ ಮಠದೊಳಗೆ ದುಡ-ದುಡನೆ ಹೋದರು.., ಅವರ ಹಿಂದೆ ಕಟ್ಟುಮಸ್ತಾದ, ಹಣೆಯಲ್ಲಿ ಭಸ್ಮ ಧರಿಸಿದ್ದ, ಕೊರಳಲ್ಲಿ ರುದ್ರಾಕ್ಷಿಮಾಲೆ ಹಾಕಿದ್ದ , ಕಾವೀಧಾರೀ ವ್ಯಕ್ತಿಯೊಬ್ಬರು ಮಠದೊಳಗೆ ಹೋಗಿ ಮತ್ತೆ ಅದೇನೋ ಸನ್ನೆ ಮಾಡಿಕೊಂಡು ಹೊರಗೆ ಬಂದರು. ಅವರ ಮುಖದಲ್ಲಿನ ’ಕಾಂತಿ’ ಎದ್ದು ಕಾಣುತ್ತಿತ್ತು. ನನ್ನ ಕಣ್ಣನ್ನು ನಾನೇ ನಂಬಲಿಲ್ಲ..ಅರೆರೆ ! ಅದೇ ’ನಕ್ಷತ್ರಿಕ’ ಮಹಾಶಯ, ಇಲ್ಲಿ ಹೇಗೆ ? ಎಂದು ಕುತೂಹಲವಾಯಿತು ನನಗೆ. ನನ್ನಾಕೆಯ ರಗಳೆಯ ನಡುವೆಯೇ ಎದ್ದು, ಹತ್ತಿರ ಹೋದೆ..ನನಗೆ ಖಾತರಿಯಾಯಿತು...’ನಕ್ಷತ್ರಿಕನೇ’ ಈ ಕಾವೀಧಾರಿಯೆಂದು !. ಅವರ ಜೊತೆಯಲ್ಲಿದ್ದವರನ್ನು ವಿಚಾರಿಸಿದೆ.." ಇವರು ರಾಮಚಂದ್ರಾಪುರ ಮಠದಲ್ಲಿದ್ದಾರೆ, ಶ್ರೀ ಗಳು ಬರುವ ಮುನ್ನ ಎಲ್ಲವನ್ನೂ ಅಣಿಗೊಳಿಸುತ್ತಾರೆ, ದೊಡ್ಡ ವಿದ್ವಾಂಸರು, ೭ ನೇ ವರ್ಷದಿಂದಲೇ ವೇದಪಾರಂಗತರು..." ಎಂದೆಲ್ಲಾ ಹೊಗಳಿದರು................

 ವಿದ್ಯೆ ಇಷ್ಟು ಸುಲಭವಾದುದೇ ..? ೫-೬ ವರ್ಷಗಳಲ್ಲಿ ವಿದ್ವಾಂಸರಾಗಬಹುದೇ ..? ಅಂತಹ ಹಿನ್ನಲೆಯುಳ್ಳ ಸಂಸ್ಕಾರವಂತ ವ್ಯಕ್ತಿಯೇ ಈ ’ನಕ್ಷತ್ರಿಕ’ ........ ಆತ ಇನ್ನೂ ಎಲ್ಲೆಲ್ಲಿ ಏನೇನು ಹೇಳಿಕೊಂಡು ತನ್ನ ಕರಾಮತ್ತು ತೋರಿಸಬಹುದೋ....ನನ್ನ ಯೋಚನಾ ಲಹರಿ ಸಾಗಿತ್ತು......ಮುಂದೊಂದು ದಿನ ..ಚಿತ್ರಾನಂದನೋ, ವಿಚಿತ್ರಾನಂದನೋ ಆಗಿ ಧುತ್ತೆಂದು ಕಣ್ಮುಂದೆ ಬರುವ ಮೊದಲು ಸಮಾಜ ಇಂತಹವರ ಪ್ರತಿ ಎಚ್ಚರದಿಂದಿರುವುದು ಒಳಿತು.

---------------*----------------        


 ಖೊನೆಖಿಡಿ :

 ಶಂಭುಲಿಂಗ , ತನ್ನ ಹಾಳಾದ ಮರದ ಎತ್ತಿನ ಬಂಡಿಯ ಚಕ್ರಗಳನ್ನು ವ್ಯಾಪಾರಕ್ಕಿಟ್ಟ. ಪಾಪ...ಅವನ ಗ್ರಹಚಾರಕ್ಕೆ ಯಾರೂ ಅವನ್ನು    ಕೊಳ್ಳಲು ಬರಲಿಲ್ಲ. ಪುಕ್ಕಟೆ ಕೊಡುತ್ತೇನೆಂದ.., ಆದರೂ ಯಾರೂ ಬರಲಿಲ್ಲ.
 ರಾತ್ರಿ ಮಲಗುವಾಗ ಚಕ್ರಗಳ ಮೇಲೆ " ಎರಡು ಚಕ್ರಗಳ ಬೆಲೆ ೨೦೦ ರೂಪಾಯಿ " ಎಂದು ಬರೆದಿಟ್ಟು ನಿದ್ದೆಹೋದ. ಬೆಳಗಾಗುವಷ್ಟರಲ್ಲಿ ಚಕ್ರಗಳು ಕಳುವಾಗಿದ್ದವು..!!!


--------------------*---------------
{ ಈ ಲೇಖವನ್ನೋದಿದ ಕೆಲವು ಬ್ಲಾಗ್ ಮಿತ್ರರು ಮತ್ತು ಶ್ರೀ ರಾಮಚಂದ್ರಾಪುರ ಮಠದ ಹಿತೈಶಿಗಳು ನನ್ನಿಂದ ಕೆಲವು ವಿವರಣೆಯನ್ನು ಬಯಸಿ ಕೇಳಿದ ಪ್ರಶ್ನೆಗಳನ್ನು ಅನುಸರಿಸಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ನನ್ನ ಮಿತ್ರರನ್ನು ವಿಚಾರಿಸಲಾಗಿ, ಕಿರುಷಷ್ಟಿಯ ದಿನ ನನ್ನ ಲೇಖನದ ನಕ್ಷತ್ರಿಕ ಅಲ್ಲಿಗೆ ಬಂದು, ಶ್ರೀ ಮಠದ ಹೆಸರು ಹೇಳಿ, ಅಲ್ಲಿದ್ದ ಕೆಲವರನ್ನು ನಂಬಿಸಿ, ಹಣ ಪಡೆದು, ಸೋಗು ಹಾಕಿ ಅಲ್ಲಿನ ಕೆಲವು ಜನರಿಂದ ಉಗಿಸಿಕೊಂಡು ಹೋಗಿರುವ ವಿಚಾರವನ್ನು ತಿಳಿಸಿದರು. ಶ್ರೀ ಮಠದಲ್ಲಿ ೨ ವರ್ಷಗಳ ಹಿಂದೆ ಇಂತಹುದೇ ವ್ಯಕ್ತಿಯೊಬ್ಬನನ್ನು (ಮೈಸೂರು ಮೂಲದ) ಅಲ್ಲಿಂದ ಹೊರ ಹಾಕಿರುವ ವಿಚಾರವೂ ತಿಳಿಯಿತು. ಶ್ರೀ ಮಠದಲ್ಲಿ ಇಂತಹ ಕಾವೀಧಾರಿಗಳಾರೂ ಗುರುಗಳ ಸೇವೆಗೆ ಇರುವುದಿಲ್ಲವೆಂಬ ವಿಚಾರವೂ ತಿಳಿಯಿತು. ಹಾಗಾಗಿ, ಇಂತಹ ಸೋಗಲಾಡಿ ವ್ಯಕ್ತಿ, ಶ್ರೀ ಶಂಕರರ ಅಥವಾ ರಾಮಚಂದ್ರಾಪುರ ಮಠದ ಹೆಸರು ಹೇಳಿಕೊಂಡು ಬಂದಲ್ಲಿ , ಸರ್ವದಾ ಎಚ್ಚರಿಕೆಯಿಂದ ಇರುವುದು ಒಳಿತೆನಿಸುತ್ತದೆ. ..ಆಸಕ್ತಿ ವಹಿಸಿ ಮಾಹಿತಿ ಕೊಟ್ಟ ಮಿತ್ರರು-ಹಿರಿಯರಿಗೆ  ಧನ್ಯವಾದಗಳನ್ನು ಸಲ್ಲಿಸುತ್ತೇನೆ. }
-----------------*--------------------


                                                     ವಂದನೆಗಳೊಂದಿಗೆ

Mar 12, 2010

ಕನ್ನಡದ ಪ್ರಥಮ ಶಿಲಾ ಶಾಸನ

 ಕನ್ನಡಕ್ಕೆ ಶಾಸ್ತ್ರೀಯ (Classical) ಗರಿಮೆ ದೊರಕಿಸಿಕೊಡುವಲ್ಲಿ ಕನ್ನಡದ ಹಲವು ಸಾಹಿತ್ಯ ಪ್ರಥಮಗಳು ಮುನ್ನುಡಿಯಾಗಿವೆ. ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ "ವಡ್ಡಾರಾಧನೆ" ಕನ್ನಡದ ಮೊದಲ ಗದ್ಯವಾದರೆ," ಕವಿರಾಜಮಾರ್ಗ" ಕನ್ನಡದ ಮೊದಲ ಕಾವ್ಯ ಅಥವಾ ಛಂದಸ್ಸು(ವ್ಯಾಕರಣ) ಎನ್ನುವ ಹಿರಿಮೆಗೆ ಪಾತ್ರವಾಗಿದೆ.  ಕನ್ನಡ, ಆಡು ನುಡಿಯಾಗಿ ಬಳಕೆಗೆ ಬಂದಿರುವ ಕಾಲವನ್ನು ಸಂಶೋಧಕರು ವಿವಿಧ ರೀತಿಯಲ್ಲಿ ವಿಮರ್ಶಿಸಿ, ಹಲವು ಸಾವಿರ ವರ್ಷಗಳ ಇತಿಹಾಸವನ್ನು ಹೇಳಿದರೆ, ಇನ್ನೂ ಕೆಲವರು ಕನ್ನಡವೇ ಸಂಸ್ಕೃತದ ತಾಯಿ ನುಡಿಯೆಂದೂ ಬಣ್ಣಿಸಿದ್ದಾರೆ. ಇದಕ್ಕೆ ಬಲವಾದ ಆಧಾರಗಳು ಇನ್ನೂ ದೊರೆತಿಲ್ಲ. ಸಂಶೋಧನೆಗಳು ಆ ನಿಟ್ಟಿನಲ್ಲಿ ಇನ್ನೂ ಏರುಗತಿಯಲ್ಲಿ ಸಾಗಬೇಕಿದೆ. ಇತಿಹಾಸ ಹೇಳುವಂತೆ ’ಶಾತವಾಹನ’ ರಾಜ ವಂಶದ ನಂತರ ಪಟ್ಟಕ್ಕೆ ಬಂದ ’ಕದಂಬರು’ ಕನ್ನಡವನ್ನು ನಾಡು ನುಡಿಯನ್ನಾಗಿಸಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈಗಿನ ಉತ್ತರಕನ್ನಡ ಜಿಲ್ಲೆಯ ’ಬನವಾಸಿ’ ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನಂತರ , ತಮ್ಮ ಆಳ್ವಿಕೆಯನ್ನು ದಕ್ಷಿಣ ಒಳನಾಡಿನವರೆಗೂ ವಿಸ್ತರಿಸಿ ಅಲ್ಲಲ್ಲಿ ಸಾಮಂತರನ್ನೂ, ಅಧಿಕಾರಿಗಳನ್ನೂ ನೇಮಿಸಿ ತಮ್ಮ ರಾಜ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಕನ್ನಡ ನುಡಿಯ ತಾತ್ವಿಕ ಬೆಳವಣಿಗೆಗಾಗಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕದಂಬರ ಕಾಲದ ಕನ್ನಡವನ್ನು ಪೂರ್ವ ಹಳಗನ್ನಡವೆಂದು ತಿಳಿಯಲಾಗಿದೆ. ಕದಂಬರ ಕಾಲದ ಕನ್ನಡ ಲಿಪಿ ಹಳಗನ್ನಡದ ಲಿಪಿಗಿಂತಲೂ ವಿಭಿನ್ನವಾಗಿ ಕಂಡುಬರುತ್ತದೆ, . ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ, ಇಂತಹ ಲಿಪಿಯಲ್ಲಿ ದೊರೆತಿರುವ ಕನ್ನಡದ ಅಂತ್ಯಂತ ಹಳೆಯ ಶಿಲಾ ಶಾಸನ "ಹಲ್ಮಿಡಿ ಶಾಸನ" . ಈ ಶಾಸನದ ಕಾಲವನ್ನು ಕ್ರಿ.ಶ. ೪೫೦ ಎಂದು ಅಂದಾಜಿಸಲಾಗಿದೆ. ಶಾಸನದಲ್ಲಿ ದೊರೆತಿರುವ ಕೆಲವು ಮಾಹಿತಿಗಳ ಆಧಾರದಲ್ಲಿ ಈ ಕಾಲವನ್ನು ಹೇಳಲಾಗಿದ್ದು , ಇದು ಕನ್ನಡದ ಪ್ರಥಮ ಶಿಲಾ ಶಾಸನವೆಂಬ ಹಿರಿಮೆಗೂ ಪಾತ್ರವಾಗಿದೆ. ಕನ್ನಡದ ಹಲವು ಪ್ರಥಮಗಳಲ್ಲಿ ಈ ಶಾಸನ, ಮೊದಲ ಸ್ಥಾನವನ್ನು ಪಡೆಯುತ್ತದೆ. 




’ಹಲ್ಮಿಡಿ’ ಎಂಬುದು ಒಂದು ಊರಿನ ಹೆಸರಾಗಿದ್ದು , ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ. ೪೫೦ ನೆಯ ಇಸವಿಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನ, ಕದಂಬರ ರಾಜ ’ಕಾಕುಸ್ಥ(ತ್ಸ) ವರ್ಮನ ಅಧಿಪತ್ಯವನ್ನು ಹೇಳುತ್ತದೆ. ಈ ಶಾಸನ ’ವೀರಗಲ್ಲು’ (Hero Stone)  ಎಂದೂ ಪರಿಗಣಿಸಲ್ಪಟ್ಟಿದೆ. ಮೇಲಿನ ಚಿತ್ರದಲ್ಲಿ ಕಾಣುವಂತೆ , ಕನ್ನಡ ಲಿಪಿಯು ’ಪಲ್ಲವ ಗ್ರಾಂಥಿಕ’ (elongated sricpts) ರಚನೆಯನ್ನು ಹೋಲುವಂತಿದ್ದು , ಇದು ಕದಂಬರ ಕಾಲದ ಕನ್ನಡ ಲಿಪಿಯೆಂದು ಹೇಳಲಾಗಿದೆ. ಲಿಪಿಯು ವಿಭಿನ್ನವಾಗಿದ್ದರೂ ಸಹ , ಶಾಸನದಲ್ಲಿರುವ ವಿಷಯ ಮತ್ತು ನುಡಿ , ಕನ್ನಡದ ಕಂಪನ್ನು ಪ್ರಸ್ತುತ ಪಡಿಸುತ್ತದೆ.

ಮೇಲಿನ ಚಿತ್ರದಲ್ಲಿ ಕಾಣುವ  ಶಾಸನದ ತಿರುಳನ್ನು ಹೊಸಗನ್ನಡ ನುಡಿಯಲ್ಲಿ ಕೆತ್ತಿಸಿ ಇಲ್ಲಿ ಸಂರಕ್ಷಿಸಿಡಲಾಗಿದೆ. ಮೂಲ ಶಾಸನವನ್ನು ಬೆಂಗಳೂರಿನ , ರಾಜ್ಯ ಪುರಾತತ್ವ ಸರ್ವೇಕ್ಷಣದ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ಪ್ರಸ್ತುತ ಇಲ್ಲಿ ಶಾಸನದ ಎರಕ ಹೊಯ್ದ (Moulded) ನಕಲು ಶಿಲೆಯನ್ನಿಡಲಾಗಿದ್ದು ,  ಒಂದು ಸ್ಮಾರಕದ ರೂಪ ಕೊಟ್ಟು ತಕ್ಕಮಟ್ಟಿಗಿನ ಭದ್ರತೆಯನ್ನು ಕಲ್ಪಿಸಲಾಗಿದೆ. 

 ಹಲ್ಮಿಡಿ ಶಾಸನದ ತಿರುಳು ಹೀಗಿದೆ,
 ಮೊದಲೆರಡು ಸಾಲುಗಳಲ್ಲಿ ಅಚ್ಯುತನ (ವಿಷ್ಣು ??) ಧ್ಯಾನವನ್ನು ಹೇಳಲಾಗಿದೆ,
  "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " .....ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. 
 " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ  ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು.  ಇವರ ಅಧೀನದಲ್ಲಿ  ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲ ಆಕಾಶಕ್ಕೆ , ’ಚಂದ್ರ’ನಂತೆ ’ಪಶುಪತಿ’ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು, ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು , ವೀರದಾನ ಕೊಡುವ ಸಮಾರಂಭವಾಗಲು , ನಾಡ ಅಧಿಕಾರಿಗಳಾದ ಶ್ರೀ  ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ, ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. "  ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ, ಅದು ಹೀಗಿದೆ..
" ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " .

ಈ ಶಾಸನವನ್ನು ಗಮನಿಸಿದಾಗ , ಅಂದಿನ ಪದಪ್ರಯೋಗವು ಎಷ್ಟು ರಸವತ್ತಾಗಿತ್ತೆಂದು ತಿಳಿಯುತ್ತದೆ. ’ನಿರ್ಮಲ ಆಕಾಶಕ್ಕೆ ಚಂದ್ರನಂತೆ’, ಮತ್ತು ಯುದ್ದವೆಂಬ ಯಗ್ನ ಗಳನ್ನು ಮಾಡಿ’ ಎನ್ನುವ ಪದಗಳು ಆಕರ್ಷಣೀಯವೆನಿಸುತ್ತದೆ. ಈ ಶಾಸನ ದೊರೆತದ್ದು ಇದೇ ಊರಿನ ವೀರಭದ್ರೇಶ್ವರ ದೇವಾಲಯ ಆವರಣದಲ್ಲಾದ್ದರಿಂದ , ಈ ದೇವಾಲಯದ ಪಕ್ಕದಲ್ಲಿ , ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಸಂಘ-ಸಂಸ್ಥೆಗಳ ನೆರವಿನಿಂದ ಒಂದು ಸ್ಮಾರಕವನ್ನು ನಿರ್ಮಿಸಿ ’ಹಲ್ಮಿಡಿ ಶಾಸನ’ ದೊರೆತ ಸ್ಥಳಕ್ಕೆ ಕಾಯಕಲ್ಪ ನೀಡಲಾಗಿದೆ.  ಈ ಊರು , ಇನ್ನೂ ಸಾಕಷ್ಟು ಮೂಲ ಸೌಕರ್ಯಗಳನ್ನು ಕಾಣಬೇಕಿದೆ. ಹಲ್ಮಿಡಿ ಎಂಬ ಹೆಸರು ’ಪಲ್ಮಿಡಿ’ ಎಂಬುದರ ರೂಪಾಂತರವೆಂಬುದನ್ನು ಶಾಸನದಿಂದಲೇ ತಿಳಿಯಬಹುದು. ಸ್ಥಳೀಯರು ಈ ಹೆಸರಿನೆ ಬಗೆಗೆ ನಾನಾ ಕಥೆಗಳನ್ನು ಹೇಳುತ್ತಾರೆ. ಕೇಳಲು ರಸವತ್ತಾಗಿರುತ್ತದೆ !. 


ನೀವೂ ಇಲ್ಲಿಗೆ ಬರುವಿರಾದರೆ, ಹೀಗೆ ಬರಬಹುದು...ಬೆಂಗಳೂರಿಗರು, ಮೈಸೂರಿಗರು .. ನೇರವಾಗಿ ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ  ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು.  ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಮಂಗಳೂರು ಕಡೆಯಿಂದ ಬರುವವರು ಬೇಲೂರು ಅಥವಾ ಚಿಕ್ಕಮಗಳೂರಿನ ದಾರಿಯನ್ನು ಆರಿಸಿಕೊಳ್ಳಬಹುದು.  ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಜಾಗವನ್ನು ಒಮ್ಮೆ ಸಂದರ್ಶಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಬೇಕಿದೆ. ಮೂಲ ಸೌಕರ್ಯಗಳ ಕೊರತೆಯಿದ್ದರೂ , ಉತ್ತಮ ರಸ್ತೆಯಿರುವ (ಸದ್ಯಕ್ಕೆ !) ಕಾರಣ ಇಲ್ಲಿಗೆ ತಲುಪುವುದು ಪ್ರಯಾಸವಲ್ಲ. ಸಂದರ್ಶಕರ , ಪ್ರವಾಸಿಗರ ಭೇಟಿ ಹೆಚ್ಚಾದಲ್ಲಿ, ಸೌಕರ್ಯಗಳು ಈ ಊರನ್ನು ತಲುಪುವ ನಿರೀಕ್ಷೆಯಿಟ್ಟುಕೊಳ್ಳಬಹುದು.         


(ಚಿತ್ರ ತೆಗೆದದ್ದು : ಶಂಭುಲಿಂಗ)


   --------------------------------------*--------------




 ಖೊನೆಖಿಡಿ :

  ಭಿಕ್ಷುಕ ಶಂಭುಲಿಂಗ ತನ್ನೆದುರಿಗ ಸಿಕ್ಕಿದ ಸಿರಿವಂತನೊಬ್ಬನನ್ನು ಯಾಚಿಸಿದ. 

 ಸಿರಿವಂತ : ಲೇ, ಮೂದೇವಿ..ಬರೀ ಕೇಳೋದಲ್ಲ ..ಕೊಡೋ ಬುದ್ದೀನೂ ಇರ್ಬೇಕು ಗೊತ್ತಾಯ್ತಾ...ನಿನಗೆ ೧೦ ರೂ ಕೊಡ್ತೀನಿ..ಅದ್ರಲ್ಲಿ ೫ ರೂ ನಿನಗಿಟ್ಟುಕೊಂಡು ಇನ್ನೈದು ರೂ ನ ದಾನ ಮಾಡಿಬಿಡು..ಗೊತ್ತಾಯ್ತಾ..


 ಶಂಭುಲಿಂಗ : ಆಯ್ತು ಬುದ್ದಿ..ಅಂಗಾರೆ ನೀವೂ ದಾನ ಮಾಡಿ ಸೋಮಿ, ನಿಮ್ ಕಾರು ನನ್ ಮಗಂಗೆ ಕೊಡಿ. ನಿಮ್ಮನೆ ನಂಗೇ ಕೊಡಿ, ನಿಮ್ಮ ದುಡ್ಡು ನನ್ ಎಂಡ್ರುಗೇ ಕೊಡಿ, ಇಂಗೇ ಎಲ್ಲಾ ಕೊಟ್ಬಿಡಿ ಬುದ್ದಿ..!


 ಸಿರಿವಂತ : ಏನಯ್ಯಾ..... ತಮಾಷೆ ಮಾಡ್ತಾ ಇದಿಯಾ..?


 ಶಂಭುಲಿಂಗ : ಮತ್ತೆ...ನೀವೇ ಅಲ್ವರಾ ಬುದ್ದಿ.. ಸುರು ಮಾಡಿದ್ದು.. !!!   


(ಕೆಲ ವರ್ಷಗಳ ಹಿಂದೆ Readers digest ನಲ್ಲಿ ಬಂದಿದ್ದ ಜೋಕೊಂದರ ಸ್ಪೂರ್ತಿ)  



  ವಂದನೆಗಳೊಂದಿಗೆ...

Mar 4, 2010

ಅಪಸ್ವರ



ಸುಗಮ ಸಂಗೀತಕ್ಕೆ ಹಿರಿಮೆ ತಂದುಕೊಟ್ಟವರಲ್ಲಿ ಮೈಸೂರು ಅನಂತಸ್ವಾಮಿಯವರದ್ದು ದೊಡ್ಡ ಹೆಸರು. ಅವರ ಶಿಷ್ಯವರ್ಗವೂ ಅದೇ ಸ್ಥಾಯಿಯನ್ನು ಮುಂದುವರಿಸಿಕೊಂಡು ಬಂದಿರುವುದು ಅಭಿನಂದನೀಯ. ಹಾಡಲಾಗುವ ಕವನಗಳು ಮತ್ತು ಹಾಡಲಾಗದ ಕವನಗಳೆರಡನ್ನೂ ಹಾಡಿ ತೋರಿಸಿದ ಗೇಯ್ಮೆ ಅನಂತಸ್ವಾಮಿಯವರದ್ದು.  ಈ ಎರಡೂ ಪ್ರಕಾರದ ಕವನಗಳ ನಡುವಿನ ತಿಕ್ಕಾಟದ ವಾದಕ್ಕೆ , ಮೊನ್ನೆ ಪತ್ರಿಕೆಯೊಂದರಲ್ಲಿ ಶ್ರೀಯುತ ಡಾ| ನಾ. ಸೋಮೇಶ್ವರರು ಉತ್ತಮ ವಿಚಾರವೊಂದನ್ನು ಬರೆದಿದ್ದಾರೆ. (  ಅದರ ಸಂಪೂರ್ಣ ವಿಷಯ ಇಲ್ಲಿ ಅಪ್ರಸ್ತುತ, ಫೆ-೨೮ ರ ’ ಸಾಪ್ತಾಹಿಕ ಪ್ರಭ ’ ನೋಡಬಹುದು. ) 
ಕೆ.ಎಸ್.ನ, ದ.ರಾ.ಬೇಂದ್ರೆ  ಮುಂತಾದವರ ಕವನಗಳು ಪ್ರಾಸಬದ್ದವಾಗಿ ಹಾಡುವಂತೆಯೂ ಇದ್ದರೆ, ನವ್ಯ ಕವಿಗಳ ಕವನಗಳು ಮೇಲ್ನೋಟಕ್ಕೆ ಹಾಡಲಾಗದಂತೆ ಕಂಡುಬಂದರೂ, ಅವುಗಳನ್ನೂ ಹಾಡನ್ನಾಗಿಸಿದ ಕೀರ್ತಿ ಅನಂತಸ್ವಾಮಿ ಮತ್ತು ಸಿ. ಅಶ್ವತ್ಠ ರಿಗೆ ಸಲ್ಲುತ್ತದೆ.  ಇಂತಹ ಕವನಗಳು ಕೆಳುಗರ ಮನಗೆಲ್ಲುವಲ್ಲಿ ಯಶಸ್ವಿಯೂ ಆಗಿದೆ


  "ಆ ನೀಲಿಕೊಳವನ್ನು ಪ್ರೀತಿಸುವೆ ನಾನು,...
   ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ... ||
  ಆ ಹೊನ್ನೆ ಮರವನ್ನು ಪ್ರೀತಿಸುವೆ ನಾನು,
  ಅಲ್ಲೇ ನಲಿದಾಡಿತ್ತು...ಆ ಕಪ್ಪು ಹುಡುಗಿ..||


ಈ ಕವನವನ್ನು ಅದೆಷ್ಟು ಸುಶ್ರಾವ್ಯವಾಗಿ ಹಾಡಾಗಿಸಿದ್ದಾರಲ್ಲವೆ ..? . ಇಂತಹ ಹಾಡುಗಳು ಸಾಕಷ್ಟು ಸಿಗುತ್ತವೆ. ಮುಖ್ಯವಾಗಿ ಕಾವ್ಯದ ಪ್ರತಿ  ಸಂಗೀತ ನಿರ್ದೇಶಕನಿಗಿರುವ ಓಲುಮೆಯೇ ಸೊಗಸಾದ ಹಾಡು ಬರಲು ಕಾರಣವಾಗುತ್ತದೆ. ಇಂತಹ ಭಾವಗೀತೆಗಳಿಗೆ ಮೆರುಗು ಬರುವುದು, ಶ್ರುತಿ-ಲಯ-ತಾಳಗಳನ್ನು ಗೌರವಿಸಿ ಹಾಡುವ ಗಾಯಕ/ಗಾಯಕಿಯರಿಂದ ಎನ್ನುವುದು ಸತ್ಯ ಸಂಗತಿ. 
(ಬೇಂದ್ರೆಯವರು ಹಾಡು ಬರೆದು ಅದನ್ನು ತಾವೇ ಹಾಡಿಕೊಂದು ಅನುಭವಿಸುತ್ತಿದ್ದರೆಂದು ಓದಿ ತಿಳಿದೆ. ಹಾಗಾದರೆ ಊಹಿಸಿಕೊಳ್ಳಿ, "ಶ್ರಾವಣ ಬಂತು ಕಾಡಿಗೆ " ಹಾಡನ್ನು ಹೇಗೆ ಹಾಡಿಕೊಂಡು ಕುಣಿದು ಆಸ್ವಾದಿಸಿರಬಹುದೆಂದು !. )
ಶ್ರೀಮತಿ ರತ್ನಮಾಲ ಪ್ರಕಾಶ್ ಮತ್ತು ಎಂ.ಡಿ. ಪಲ್ಲವಿ ಇಬ್ಬರೂ ಗುರುಗಳ ಗರಡಿಯಿಂದ ಬಂದ ಅಪ್ರತಿಮ ಗಾಯಕಿಯರೆ. ಇವರ ಜೊತೆಗೆ  ಬಿ.ಆರ್. ಛಾಯಾ, ಅರ್ಚನಾ ಉಡುಪ  , ಸುಪ್ರಿಯಾ ಆಚಾರ್ಯ ಮುಂತಾದ ಗಾಯಕಿಯರನ್ನು ನಾವಿಂದು ಇಷ್ಟಪಡುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಅವರ ಧ್ವನಿಯಲ್ಲಿರುವ ಇಂಪು. ಆದರೆ....,,,,,
 ಇಲ್ಲೊಂದು ತಕರಾರಿದೆ .....!, ಮೊನ್ನೆಯಷ್ಟೇ ರತ್ನಮಾಲಾ ಪ್ರಕಾಶ್ ಅವರು ಪಲ್ಲವಿಯ ಮೇಲೆ ತಿರುಗಿಬಿದ್ದರು. ಅದೂ ಟಿ.ವಿ. ಮಾಧ್ಯಮಗಳ ಮುಂದೆಯೇ !. ಹಾಗೆ ತಿರುಗಿ ಬೀಳಲು ಕಾರಣ ಪಲ್ಲವಿಯ ಕಂಠದಲ್ಲಿ ಹೊರಬಂದಿರುವ ಭಾವಗೀತೆಗಳ ಸಿ.ಡಿ. ಗಳು. ಈ ಹಾಡುಗಳಲ್ಲಿ ಮೂಲ ಸಂಗೀತ ನಿರ್ದೇಶಕರ ಹೆಸರಿದ್ದರೂ , ಮೂಲ ಗಾಯಕ/ಗಾಯಕಿ ಯರ ಹೆಸರು ಹಾಕದಿರುವುದು ರತ್ನಕ್ಕರ ಕೋಪಕ್ಕೆ ಕಾರಣ. ಮಾಧ್ಯಮಗಳ ಮುಂದೆ ಅವರು ಹೇಳಿದ್ದಿಷ್ಟೆ.. " ಮೂಲ ಗಾಯಕ/ಕಿ ಯರ ಹೆಸರು ಹಾಕದಿರುವುದು ಅಗೌರವದ ಸೂಚಕ. ನಮಗೆ credentiality ಬೇಡವೇ ? ಪಲ್ಲವಿ ತುಂಬಾ Arrogant  ಆಗಿ ವರ್ತಿಸುತ್ತಿದ್ದಾಳೆ, ಆಕೆ arrogance ಬಿಟ್ಟರೆ ಬೆಳೆಯುತ್ತಾಳೆ " ಎಂದೆಲ್ಲಾ ಸ್ವಲ್ಪ arrogant ಆಗೇ ಮಾತನಾಡಿದರು. ಜೊತೆಯಲ್ಲಿ ಬಿ. ಆರ್. ಛಾಯಾ ಸೇರಿದಂತೆ ಇನ್ನೂ ಹಲವು ಸುಗಮಿಗಳಿದ್ದರು ಎನ್ನುವುದು ವಿಶೇಷ. ಲಹರಿ ಸಂಸ್ಥೆಯ ’ವೇಲು’ ಕೂಡ, ತಮ್ಮಿಂದ ಹಕ್ಕು ಪಡೆಯದೇ ಪಲ್ಲವಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದರು.
 ಇಷ್ಟಕ್ಕೂ ಹಕ್ಕು ಪಡೆಯಬೇಕಾಗಿದ್ದು ಸಿ.ಡಿ. ಹೊರತಂದಿರುವ ಆಡಿಯೋ ಕಂಪೆನಿಯಲ್ಲವೇ ? . ಇನ್ನು ಮೂಲ ಸಂಗೀತ ನಿರ್ದೇಶಕರ ಹೆಸರನ್ನು ಯಥಾವತ್ ಮುದ್ರಿಸಲಾಗಿದೆ.    ರತ್ನಕ್ಕ ಹಾಡಿರುವ ಹಾಡನ್ನು  ಪಲ್ಲವಿ ಹಾಡಿರುವುದು ತನ್ನ ಸ್ವಂತ ಧ್ವನಿಯಲ್ಲಿ !.  ಹಾಡುಗಾರ್ತಿ ತಾನೇ ಆದ್ದರಿಂದ credit ಕೊಡುವ ಅಗತ್ಯವೇನಿದೆ ?? ಎನ್ನುವುದು ಪಲ್ಲವಿಯ ವಿಚಾರವಾಗಿರಬಹುದು. ಆಕೆ ಗಾಯಕಿಯಾದ್ದರಿಂದ ಯಾವ ಹಾಡನ್ನು ಬೇಕಾದರೂ ಆಕೆ ಹಾಡಬಹುದಲ್ಲವೆ.
ಹಾಗಾದರೆ ರತ್ನಕ್ಕರ ಪ್ರಶ್ನೆ credit ನದ್ದೇ ? ರತ್ನಕ್ಕರಿಗೆ ಸಲ್ಲಬೇಕಾದ credit , ಕೇಳುಗರಿಂದ ಎಂದೋ ಸಂದಿದೆ. ಇಂದಿಗೂ ಸಲ್ಲುತ್ತಿದೆ. ರತ್ನಕ್ಕರಂತಹ ಅಪ್ರತಿಮ ಗಾಯಕಿಯ ಹಾಡನ್ನು , ಬೇರೆ ಯಾರೇ ಹಾಡಿದರೂ ಮೂಲದಲ್ಲಿರುವ ಭಾವ ಕಳೆದುಹೋಗಲು ಸಾಧ್ಯವೆ ?
ಅವರಿಗೆ ಸುಗಮ ಸಂಗೀತದ ಭವಿಷ್ಯದ ಚಿಂತೆ ಕಾಡಿರಬಹುದೇನೋ...!!?


 "ಮಾಡುವವನದಲ್ಲ ಹಾಡು ...ಹಾಡುವವರದು " ....ಅಲ್ಲವೇ .  ಇಲ್ಲಿ ಯಾರೂ ಮೇಲಲ್ಲ , ಯಾರೂ ಕಮ್ಮಿಯಲ್ಲ.  ಈ ಸಿ.ಡಿ. ಯ ಮೆಲೆ Recorded at Live Concert  ಎಂದಿದೆ  ( Copyright act  ಭಯದಿಂದಿರಬಹುದೇ ?) . ಹಾಡುಗಳನ್ನು ಕೇಳಿ, ನನಗದು Recorded ಅನ್ನಿಸಿತೇ ವಿನಃ Live ಅನ್ನಿಸಲಿಲ್ಲ. ಇಲ್ಲೆಲ್ಲೋ ಏನೋ ತಪ್ಪಾಗಿದೆ ಎನಿಸುತ್ತದೆ.  ರತ್ನಕ್ಕರ ಸಮಸ್ಯೆ credit ನದ್ದಾಗಿರುವುದರಿಂದ ಇಲ್ಲೊಂದು ಬೇಡದ ಅಪಸ್ವರ ಎದ್ದಿದೆ ಎಂದರೆ ತಪ್ಪಾಗಲಾರದು.  ನ್ಯಾಶನಲ್ ಕಾಲೇಜಿನಲ್ಲಿ ಒಟ್ಟೊಟ್ಟಿಗೇ ಓದಿದ ಪಲ್ಲವಿ, ಅರ್ಚನಾ ಮತ್ತು ಸಂಗೀತ ಕ್ಷೇತ್ರದಲ್ಲಿ ಸಹವರ್ತಿಗಳಾದ ರತ್ನಕ್ಕ, ಛಾಯಾ, ಸುಪ್ರಿಯ...ಇವರೆಲ್ಲರಿಂದ ಸಂಗೀತಪ್ರಿಯರು ನಿರೀಕ್ಷಿಸುವುದು ಇಂಪಾದ ಹಾಡುಗಳನ್ನೇ ವಿನಃ, ಇಂತಹ ಅಪಸ್ವರಗಳನ್ನಲ್ಲ. ಸಮಸ್ಯೆ ಏನೇ ಇರಲಿ, ಕರೆದು ಕೂಡಿಸಿ ಬಗೆಹರಿಸಿಕೊಳ್ಳುವ ಬದಲು , ಹೀಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದು ಸಂಗೀತ ಪ್ರಿಯರಿಗೆ ತುಸು ಮುಜುಗರದ ವಿಷಯವೆ.  

  ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೇ ಬಾಳಲಿ,
  ಕೊಟ್ಟುದೆಷ್ಟೋ..ಪಡೆದುದೆಷ್ಟೋ..ನಿಮ್ಮ ( ನಮ್ಮ ) ನಂಟೇ ಹೇಳಲಿ !


ಇಲ್ಲಿ ಬೇರೇನಾದರೂ ಇದೆಯೇ( ರಾಜಕೀಯ )? ..ಎಂಬುದಂತೂ ನನಗೆ ತಿಳಿದಿಲ್ಲ. ಇರದಿರಲಿ ಎನ್ನುವುದು ನನ್ನ ಆಶಯ.  ತಪ್ಪು ಪಲ್ಲವಿಯದ್ದೋ, ಕಂಪನಿಯದ್ದೋ..ಯಾರದ್ದೋ ..! ಆದರದು ಗಾಯಕಿಯರ ಪ್ರತಿ ಕೇಳುಗರಲ್ಲಿ ಕೆಟ್ಟ ಅಭಿಪ್ರಾಯ ತರದಿದ್ದರೆ ಅಷ್ಟೇ ಸಾಕು. ಇಂತಹ ಅಪಸ್ವರಗಳು ಸುಗಮ ಸಂಗೀತದಲ್ಲಿ ಬರದಿರಲೆಂದು ಆಶಿಸುತ್ತೇನೆ. ಆದಷ್ಟು ಬೇಗ ಕತ್ತಲು ಕಳೆದು ಬೆಳಕು ಮೂಡಲಿ.  ಇಷ್ಟೆಲ್ಲಾ ನೋಡಿ-ಕೇಳಿ,..ಏಕೋ..ಬೇಂದ್ರೆಕಾಕ ಬರೆದ ಹಾಡು ಕಾಡಿತು...


   .........   ನಿಜದಲ್ಲೇ  ಒಲವಿರಲಿ,
               ಚೆಲುವಿನಲೆ ನಲಿವಿರಲಿ,
               ಒಳಿತಿನಲೇ ಬಲವಿರಲಿ ..
               ಜೀವಕ್ಕೆಳೆಯಾ..(ಗೆಳೆಯಾ)..  
               ದೇವ ಜೀವನ ಕೇಂದ್ರ,
               ಒಬ್ಬೊಬ್ಬನೂ ಇಂದ್ರ,
               ಏನಿದ್ದರೂ ಎಲ್ಲ..ಎಲ್ಲೆ ತಿಳಿಯಾ... 
              ”’
              ”
              ” 
                      ಕೊನೆಯ ಸಾಲುಗಳು
             
              ಈ ನಾನು...ಆ ನೀನು...ಒಂದೆ ತಾನಿನ ತಾನು,
              ತಾಳ ಲಯ ರಾಗಗಳು ಸಹಜ ಬರಲಿ..,
              ಬದುಕು ಮಾಯೆಯ ಮಾಟ...... 
                                                                  
  ------------------------------------------------------------------


    ಖೊನೆಖಿಡಿ
           ಶಂಭುಲಿಂಗ ತನ್ನ ಮರಿಲಿಂಗನನ್ನು ಶಾಲೆಗೆ ಸೇರಿಸಲು ಬಂದ. ಗುಮಾಸ್ತನ ದಯೆಯಿಂದ 
          ಎಲ್ಲವೂ ಸಾಂಗವಾಯಿತು. ಕೊನೆಯದ್ದೇ..ಶಂಭುಲಿಂಗನ ರುಜು. ಗೊತ್ತಲ್ಲ..ಶಂಭು ಹೆಬ್ಬೆಟ್ಟೆಂದು.. .ಗುಮಾಸ್ತ ಒತ್ತುವ    ಶಾಯಿಪೆಟ್ಟಿಯನ್ನು ಮುಂದಿಟ್ಟ. ಶಂಭು..ಒತ್ತುವ ಬದಲು ಗುಮಾಸ್ತನ ಮುಂದೆ ಅಂಗೈ ಚಾಚಿದ...

        ಗುಮಾಸ್ತ    : ಯಾಕಯ್ಯಾ..ಕೈ ತೋರಿಸ್ತೀ...ಹೆಬ್ಬೆಟ್ಟೊತ್ತಯ್ಯಾ ಇಲ್ಲಿ..

        ಶಂಭುಲಿಂಗ : ಓದ್ ತಿಂಗ್ಳು ಓಟ್ ಆಕಿಸಕಳವಾಗ ಇಂಗೇ ಒತ್ತಕ್ಕೆ ೧೦೦ ರೂಪ್ಯಾ ಕಾಸು ಕೊಟ್ಟಿದ್ರು... ಅಂಗೆ ನೀವು ಕೊಟ್ರೆ ಎಲ್ ಬೇಕಾದ್ರು ಒತ್ತೀನ್ ಬುದ್ದಿ..!!         
   




                                                                        ವಂದನೆಗಳೊಂದಿಗೆ