Aug 17, 2010

ಪಂಚಾಗ್ನಿ

ಭಾರತೀಯ ಅಥವ ಹಿಂದೂಗಳ ತತ್ವಸೌಧಕ್ಕೆ  ವೇದೋಪನಿಷತ್ತುಗಳೆ  ಆಧಾರಸ್ತಂಭಗಳು.  ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳನ್ನು ಪ್ರಸ್ಥಾನತ್ರಯಗಳೆಂದು ಗೌರವಿಸಲಾಗಿದೆ.  ತತ್ವ, ತರ್ಕ ಮತ್ತು ಮೀಮಾಂಸೆಗಳ ವಿಷಯ ಹೇಳುವವರು ಈ ಪ್ರಸ್ಥಾನತ್ರಯದ ಮೂಲಕ ಹೇಳಿದರೆ ಪ್ರಮಾಣ ದೊರಕುತ್ತದೆ. ಇಲ್ಲವಾದರೆ ಅಂತಹ ವಿಚಾರಗಳು ಪುರಸ್ಕೃತವಾಗುವ ಸಂಭವನೀಯತೆ ಅತ್ಯಲ್ಪ. ಆದಕಾರಣವೇ, ಪ್ರಸ್ಥಾನತ್ರಯದ ಮೇಲೆ ಬಹಳಷ್ಟು ಭಾಷ್ಯಗಳು, ಟೀಕೆಗಳು, ತಾತ್ಪರ್ಯಗಳು ಹುಟ್ಟಿಕೊಂಡಿರುವುದು. ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದವುಗಳು. ಇವುಗಳು ವೇದಗಳಲ್ಲಿ ಬರುವಂತಹವು (ಜ್ಞಾನಕಾಂಡ). ಇದನ್ನು ವೇದಾಂತ ಎನ್ನಲಾಗಿದೆ.   ಪ್ರಮುಖವಾಗಿ ಹತ್ತು ಉಪನಿಷತ್ತುಗಳನ್ನು ಹೆಸರಿಸಬಹುದು. ಅವುಗಳೆಂದರೆ.... ಮಾಂಡೂಕ್ಯೋಪನಿಷತ್ತು, ಕೇನೋಪನಿಷತ್ತು, ಕಠೋಪನಿಷತ್ತು, ತೈತ್ತರೀಯೋಪನಿಷತ್ತು, ಐತರೇಯ ಉಪನಿಷತ್ತು, ಮುಂಡಕೋಪನಿಷತ್ತು, ಈಶಾವಾಸ್ಯೋಪನಿಷತ್ತು, ಪ್ರಶ್ನೋಪನಿಷತ್ತು, ಛಾಂದೋಗ್ಯ ಉಪನಿಷತ್ತು ಮತ್ತು  ಬೃಹ ದಾರಣ್ಯಕ ಉಪನಿಷತ್ತು.  ಉಪನಿಷತ್ತುಗಳಲ್ಲಿ ಆತ್ಮಸಾಕ್ಷಾತ್ಕಾರ, ಅದ್ವೈತ ದರ್ಶನ, ಹುಟ್ಟು-ಸಾವಿನ ಪ್ರಶ್ನೆಗಳು,  ಅತ್ಮದ ಸ್ವರೂಪ ಮತ್ತು ಸೃಷ್ಟಿಯ ವಿಚಾರಗಳು ವಿಸ್ತೃತವಾಗಿ ಹೇಳಲ್ಪಟ್ಟಿದೆ.  ಆತ್ಮಕ್ಕೆ ಅಳಿವಿಲ್ಲ ದೇಹಕ್ಕಷ್ಟೆ ಅಳಿವು ಎಂಬುದನ್ನು ಹಲವು ತೆರನಾಗಿ ವಿವರಿಸಲಾಗಿದೆ.  ಇಲ್ಲಿ ಆತ್ಮದ ಚಿರಂತನವನ್ನು ಪ್ರಾಯೋಗಿಕವಾಗಿ ಸಿದ್ದೀಕರಿಸುವ ವಿಚಾರ ಬಂದಾಗ ಗೊಂದಲಗಳು ಏಳುವುದು ಸಹಜ. ಶತಮಾನಗಳಷ್ಟು ಹಿಂದೆ ಜ್ಞಾನಿಗಳು ಕಂಡುಕೊಂಡಿದ್ದ ಈ ವಿಚಾರಗಳು ಪ್ರಾಯೋಗಿಕವಾಗಿ ಮತ್ತು ಸ್ವಾನುಭವದಿಂದಲೇ ಬಂದದ್ದಿರಬಹುದಲ್ಲವೆ ? ಏಕೆಂದರೆ , ರಸಾಯನಶಾಸ್ತ್ರದ ’ಬ್ರೌನ್ ರಿಂಗ್’ ಟೆಸ್ಟ್ ಅನ್ನು ಪ್ರಾಯೋಗಿಕವಾಗಿ ಸಿದ್ದಿಸಿ ತೋರಿಸಲು ವಿಧ್ಯಾರ್ಥಿಯೋರ್ವನಿಗೆ ಹೇಳಿದರೆ ಆತ ಈ ಹಿಂದೆ ವಿಜ್ಞಾನಿಗಳು ಕಂಡುಕೊಂಡಿರುವ ವಿಧಾನವನ್ನೇ ಅನುಸರಿಸಿ ಪ್ರಯೋಗ ಮಾಡಬೇಕಾಗುತ್ತದೆ. ಹಾಗೆ ಮಾಡಿಯೂ ಆತನಿಗೆ ಪ್ರಥಮ ಪ್ರಯತ್ನದಲ್ಲಿ ಸರಿಯಾದ ಫಲಿತಾಂಶ ದೊರೆಯದೆ ’ಬ್ರೌನ್ ರಿಂಗ್’ ಬರದೇ ಹೋದರೆ ಅದು ಈ ಹಿಂದೆ ಪ್ರಯೋಗದ ಮೂಲಕ ಪ್ರತಿಪಾದಿಸಿರುವ ವಿಜ್ಞಾನಿಯ ತಪ್ಪೇ ? ಅಂತಹ ಪ್ರಯೋಗವನ್ನು ಕೇವಲ ಬೊಗಳೆ ಎಂದು ತಳ್ಳಿಹಾಕಬಹುದೆ ? ನಿಜವಾಗಿಯೂ ಅದು ಆ ವಿಧ್ಯಾರ್ಥಿಯ ಕಲಿಕೆಯ ಮತ್ತು ತಾಳ್ಮೆಯ ಪ್ರಶ್ನೆಯಾಗಿರುತ್ತದೆ. ಎಂಟು-ಹತ್ತು ಬಾರಿ ಏಕಾಗ್ರತೆಯ ಮೂಲಕ ಪ್ರಯೋಗ ಮಾಡಿದಾಗ ಆ ವಿದ್ಯಾರ್ಥಿಯು ಸಮರ್ಪಕ ಫಲಿತಾಂಶವನ್ನು ಪಡೆಯಬಹುದಾಗಿರುತ್ತದೆ. ಹಾಗೆಯೇ ವೇದ ಮತ್ತು ಉಪನಿಷತ್ತುಗಳ ವಿಚಾರಗಳನ್ನೂ  ಸಹ ಶತಮಾನಗಳ ಹಿಂದೆಯೇ ಪ್ರಾಜ್ಞರು ಪ್ರಾಯೋಗಿಕವಾಗಿ ಸಿದ್ದೀಕರಿಸಿಕೊಂಡು ಮುಂದಿನ ಪೀಳಿಗೆಗಾಗಿ ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿ ಬಿಟ್ಟು ಹೋಗಿದ್ದಾರೆನ್ನಬಹುದು. ಇವುಗಳಿಂದ ಸಮರ್ಪಕ ಫಲಿತಾಂಶ ಪಡೆಯುವಷ್ಟು ತಾಳ್ಮೆ , ಆಸಕ್ತಿ ಮತ್ತು ಶಕ್ತಿ ನಮ್ಮಲ್ಲಿರಬೇಕಷ್ಟೆ. ಅಂತಹ ಉತ್ತಮ ಪಲಿತಾಂಶವನ್ನು ಪಡೆಯಲು ಎರಡು ಪ್ರಮುಖ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಒಂದು ಧ್ಯಾನ ಮತ್ತು ಎರಡನೆಯದು ಯೋಗ.

ಪ್ರಸ್ತುತ ಇಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ  ಬರುವ ಮೂವತ್ತೆರಡು ವಿದ್ಯೆಗಳ (ವಿದ್ಯೆ = ಜ್ಞಾನ=ಧ್ಯಾನ ) ಪೈಕಿ ಪಂಚಾಗ್ನಿ ವಿದ್ಯೆಯ ಬಗೆಗೆ ಸಂಕ್ಷಿಪ್ತವಾಗಿ ವಿಚಾರ ಮಾಡೋಣ.
ಛಾಂದೋಗ್ಯ ಉಪನಿಷತ್ತಿನಲ್ಲಿ ವೈಶ್ವಾನರ ವಿದ್ಯೆ, ಸತ್ಯಕಾಮ ವಿದ್ಯೆ, ಪುರುಷ ವಿದ್ಯೆ, ಗಾಯತ್ರಿ ವಿದ್ಯೆ, ಪಂಚಾಗ್ನಿ ವಿದ್ಯೆ..ಇತ್ಯಾದಿ ಧ್ಯಾನಸಂಬಂಧೀ ವಿದ್ಯೆಗಳು ವಿವರಿಸಲ್ಪಟ್ಟಿದೆ. ಪಂಚಾಗ್ನಿ ವಿದ್ಯೆಯೆಂಬುದು ಐದು ರೀತಿಯ ಅಗ್ನಿಗಳ  ಬಗೆಗೆ ತಿಳಿಯುವ ಜ್ಞಾನವಾಗಿದೆ.  ಜಗತ್ತಿನಲ್ಲಿ ಜೀವಿಗಳು ಬರುವುದು ಮತ್ತು ಹೋಗುವುದು ನಡದೇ ಇರುತ್ತದೆ. ಇದನ್ನು ಸಂಸಾರಚಕ್ರವೆನ್ನಬಹುದು. ಇಂತಹ ಚಕ್ರವು ಹೇಗೆ ನಡೆಯುತ್ತದೆ ? ಜೀವಿಗಳು ಬರುವುದು ಮತ್ತು ಹೋಗುವುದು ಎಂದರೇನು ?  ಪಂಚಾಗ್ನಿ ವಿದ್ಯೆಯು ಈ ಪ್ರಶ್ನೆಗಳ ಅಂತರಾಳವನ್ನು ಹೊಕ್ಕಿ ಉತ್ತರವನ್ನು ಹೇಳುತ್ತದೆ.  ಉಪನಿಷತ್ತಿನ ಈ ಧ್ಯಾನದ ವಿದ್ಯೆಯು ಹುಟ್ಟು ಮತ್ತು ಸಾವು ಎಂಬ ಸ್ವಾಭಾವಿಕ ನಡಾವಳಿಯ ಬಗೆಗೆ ವಿಚಾರಮಾಡುತ್ತದೆ ಮತ್ತು ಇದು ಒಂದು ಕತೆಯ ಮೂಲಕ ಪ್ರಾರಂಭವಾಗುತ್ತದೆ.

ಮಹಾ ಜ್ಞಾನಿಯಾದ ಉದ್ಧಾಲಕ ಆರುಣಿಯ ಮಗನಾದ ಶ್ವೇತಕೇತುವೆಂಬ ವಿದ್ಯಾರ್ಥಿಯು ಅತ್ಯಂತ ಸಮರ್ಪಕವಾಗಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುತ್ತಾನೆ. ಆತನಿಗೆ ತಾನಿನ್ನೇನೂ ಕಲಿಯಲು ಉಳಿದಿಲ್ಲವೆಂಬ ವಿಚಾರವೂ ತನ್ನಷ್ಟಕ್ಕೆ ಮನದಟ್ಟಾಗಿರುತ್ತದೆ. ಆತನ ತಂದೆಯೂ ಮಗನಿಗೆ ಸರ್ವವಿದ್ಯಾಪಾರಂಗತನೆಂದು ಹರಸಿರುತ್ತಾನೆ.  ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಕ್ಷತ್ರಿಯ ರಾಜನಾದ ಪ್ರವಾಹಣ ಜೈವಲಿಯ ಮುಂದೆ ಪ್ರದರ್ಶಿಸಬೇಕೆಂಬ ಆಕಾಂಕ್ಷೆಯಿಂದ ರಾಜನಲ್ಲಿಗೆ ತೆರಳುತ್ತಾನೆ. ಶ್ವೇತಕೇತುವನ್ನು ರಾಜನು ಆದರದಿಂದ ಬರಮಾಡಿಕೊಂಡು ಕುಶಲೋಪರಿಯನ್ನು ವಿಚಾರಿಸಿ,  ತನ್ನಲ್ಲಿಗೆ ಆಗಮಿಸಿದ ವಿಚಾರವನ್ನು ತಿಳಿಯಬಯಸುತ್ತಾನೆ. ಶ್ವೇತಕೇತುವು ತನ್ನ ವಿದ್ಯಾಪಾಂಡಿತ್ಯವನ್ನು ಪ್ರದರ್ಶಿಸಲು ಬಂದಿರುವುದಾಗಿ ಹೇಳಿದಾಗ, ರಾಜನು ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆ ಸಂಭಾಷಣೆ ಹೀಗಿದೆ..

ರಾಜ :  ತಾವು ಸಂಪೂರ್ಣ ಜ್ಞಾನಿಗಳಾಗಿರುವಿರೋ ? ನಿಮ್ಮ ವಿದ್ಯಾಭ್ಯಾಸ ಮುಗಿದಿರುವುದೇ ? ಗುರುಗಳು ನಿಮ್ಮ ವಿದ್ಯೆ ಪೂರ್ಣಗೊಂಡಿರುವುದಕ್ಕೆ ಅಂಕಿತನ್ನು ಹಾಕಿದ್ದಾರೆಯೇ ?

ಶ್ವೇತ  :  ಹೌದು. ನನ್ನ ವಿದ್ಯಾಭ್ಯಾಸ ಸಂಪೂರ್ಣವಾಗಿದೆ. ಗುರುಗಳು ನನ್ನನ್ನು ಹರಸಿದ್ದಾರೆ.

ಹೀಗೆಂದ ಶ್ವೇತಕೇತುವಿಗೆ ರಾಜನು ೫ ಮರುಪ್ರಶ್ನೆಗಳನ್ನು ಕೇಳುತ್ತಾನೆ. ಅವುಗಳೆಂದರೆ,

೧)  ಈ ಪ್ರಪಂಚವನ್ನು ತೊರೆದ ನಂತರ ಜೀವಿಗಳು ಎಲ್ಲಿಗೆ ಹೋಗುತ್ತವೆಂದು ನಿಮಗೆ  ತಿಳಿದಿದೆಯೆ ?
೨) ಈ ಜಗತ್ತಿಗೆ ಜೀವಿಗಳು ಬರುವ ಮುನ್ನ ಅವು ಎಲ್ಲಿರುತ್ತವೆ ಮತ್ತು ಹೇಗೆ ಹುಟ್ಟುತ್ತವೆಯೆಂದು ನಿಮಗೆ ತಿಳಿದಿದೆಯೆ ?
೩) ಜೀವಿಯು ಹುಟ್ಟುವ ಮುನ್ನ ಅವು ನಡೆದು ಬರುವ ದಾರಿಯು ನಿಮಗೆ ತಿಳಿದಿದಿಯೆ ?
೪) ಇಡೀ ಜಗತ್ತು  ಜೀವಿಗಳಿಂದ ಸಂಪೂರ್ಣ ತುಂಬಿಕೊಳ್ಳದೆ ಮರಣಗಳ ಮೂಲಕ ಸಮತೋಲವಾಗುತ್ತಿರುವುದು ಏಕೆಂದು ನಿಮಗೆ ತಿಳಿದಿದೆಯೆ ?
೫) ಜೀವಿಯು ಮಾನವರೂಪ ತಾಳಿ ಬರುವ ಕ್ರಿಯೆಯು ನಿಮಗೆ ತಿಳಿದಿದೆಯೆ ?

ರಾಜನು ಕೇಳಿದ ಮೇಲಿನ ಐದೂ ಪ್ರಶ್ನೆಗಳಿಗೂ ಶ್ವೇತಕೇತುವು ಉತ್ತರಿಸಲಾಗದೆ ಹೋಗುತ್ತಾನೆ. ನಂತರ ತನ್ನ ವಿದ್ಯೆಯು ಅಪೂರ್ಣವೆಂದು ರಾಜನಲ್ಲಿ ಒಪ್ಪಿಕೊಂಡು ಐದು ಪ್ರಶ್ನೆಗಳಿಗೂ ತನಗೆ ಉತ್ತರ ತಿಳಿಸಬೇಕೆಂದು ವಿನಂತಿಸುತ್ತಾನೆ.  ರಾಜನು ಆತನಿಗೆ ತನ್ನ ಶಿಷ್ಯನಾಗಿ ಬರಲು ತಿಳಿಸುತ್ತಾನೆ ಮತ್ತು ಕೆಲವು ಧ್ಯಾನ ಮತ್ತು ಯೋಗಗಳನ್ನು ತಿಳಿಸಿಕೊಡುತ್ತಾನೆ. ಒಂದು ದಿನ ರಾಜನು ಶ್ವೇತಕೇತುವಿನ ಸಂದೇಹಕ್ಕೆ ಪರಿಹಾರವನ್ನು ಹೇಳುತ್ತಾ ಪಂಚಾಗ್ನಿಯ ವಿಚಾರವನ್ನು ಹೀಗೆ ಹೇಳುತ್ತಾನೆ.

"ಶರೀರದಲ್ಲಿ ಜನಿಸಲು ಸುಖಸ್ಥಾನದಿಂದ ಹಿಂತಿರುಗಿ ಬರುವ ಆತ್ಮವು ಹೊಸಶರೀರವನ್ನು ಪಡೆಯಲು ಐದು ಅಗ್ನಿಗಳ ಮೂಲಕ ಹಾದುಹೋಗಬೇಕಾಗುತ್ತದೆ. ಸಹಜವಾಗಿ ಅಗ್ನಿಯು ಶರೀರ ಮತ್ತು ವಸ್ತುಗಳನ್ನು ದಹಿಸುತ್ತದೆ. ಹಾಗಿರುವಾಗ ಅದನ್ನು ರೂಪಗಳ ಜನಕವೆಂದು ಹೇಗೆ ಕರೆಯಬಹುದು ? ಆತ್ಮವು ಐದು ಅಗ್ನಿಗಳ ಮೂಲಕ ಹಾದು ಬರುವುದು ಹೇಗೆ ? .

 ಅಗ್ನಿಗೆ ಎರಡು ಪ್ರಮುಖ ಕ್ರಿಯೆಗಳಿವೆ.
೧) ಸೃಷ್ಟಿ ಮತ್ತು ನಾಶ
೨) ಆತ್ಮಗಳಿಗೆ ಸೂಕ್ಷ್ಮ ಶರೀರಗಳನ್ನು ರಕ್ಷಿಸಿಡುವುದು.

ಆತ್ಮವು ಐದು ಹಂತಗಳನ್ನು ದಾಟಿ ಬರುವಾಗ , ಒಂದೊಂದು ಹಂತದಲ್ಲೂ ಒಂದೊಂದು ಸೂಕ್ಷ್ಮ ಶರೀರವನ್ನು ಅಗ್ನಿಯು ಒದಗಿಸಬೇಕಾಗುತ್ತದೆ.
ಸುಖಸ್ಥಾನ(ಸ್ವರ್ಗವೇ?) ದಲ್ಲಿ ಆತ್ಮಕ್ಕೆ ಅಗ್ನಿಯು ಸೂಕ್ಷ್ಮವಾದ ಮಾನಸಿಕ ರೂಪನೆಲೆ ಕೊಟ್ಟಿರುತ್ತದೆ. ಮೊದಲನೆಯ ಅಗ್ನಿಹೋತ್ರ ಅಥವ ಹೋಮವು ಅಲ್ಲೇ ನಡೆಯುತ್ತದೆ.
ಎರಡನೆಯದು ಜ್ಯೋತಿರ್ಲೋಕದಲ್ಲಿ ಅಂದರೆ ಆತ್ಮವು ಸುಖಸ್ಥಾವನ್ನು ಬಿಟ್ಟು ನಂತರದ ಹಂತಕ್ಕೆ ಬಂದಾಗ  ನಡೆಯುತ್ತದೆ. ಜ್ಯೋತಿರ್ಲೋಕವೆಂದರೆ ಆತ್ಮಕ್ಕೆ  ಸಂಪೂರ್ಣ ಭೌತಿಕ ಶಕ್ತಿಯನ್ನು ಒದಗಿಸುವ ಹಂತ. ಅಲ್ಲಿ ಎರಡನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ಮೂರನೆಯದು ಜಗತ್ತಿನ ಭೌತಿಕ ನೆಲೆಯಲ್ಲಿ ಮನುಷ್ಯ ಶರೀರದಲ್ಲಿ ಸೂಕ್ಷ್ಮರೂಪದಲ್ಲಿ ನಡೆಯುತ್ತದೆ. ಮನುಷ್ಯರು ಸೇವಿಸುವ ಅನ್ನಾಹಾರಗಳಲ್ಲಿ ಬೆರೆತುಹೋಗುತ್ತದೆ. ಇಲ್ಲಿ ಮೂರನೆಯ ಅಗ್ನಿಹೋತ್ರ ಅಥವ ಹೋಮವು ನಡೆಯುತ್ತದೆ.
ನಾಲ್ಕನೆಯದು, ಮನುಷ್ಯರು ತಿಂದ ಆಹಾರದಲ್ಲಿ ಪ್ರಾಣಾಗ್ನಿಹೋತ್ರವಾಗಿ ಸಂಭವಿಸುತ್ತದೆ. ಜೀರ್ಣವಾದ ಆಹಾರದಲ್ಲಿ ಬೆರೆತು ಪುರುಷನಲ್ಲಿ ವೀರ್ಯವನ್ನೂ, ಸ್ತ್ರೀಯಲ್ಲಿ ಅಂಡಾಣುಗಳನ್ನು ಉತ್ಪತ್ತಿಮಾಡುವುದರ ಮೂಲಕ ಸೂಕ್ಷ್ಮರೂಪದಲ್ಲಿ ಶರೀರವನ್ನು ಪಡೆದುಕೊಳ್ಳುತ್ತದೆ ಮತ್ತು ನಾಲ್ಕನೆಯ ಹೋಮವಾಗಿ ಪರಿಗಣಿತವಾಗುತ್ತದೆ.
ಪುರುಷನ ವೀರ್ಯವು ಸ್ತ್ರೀಯ ಗರ್ಭವನ್ನು ಪ್ರವೇಶಿಸಿದಾಗ ಐದನೆಯ ಹೋಮವು ನಡೆಯುತ್ತದೆ. ಐದನೆಯ ಅಗ್ನಿಹೋತ್ರವು ನಡೆಯುವುದರ ಮೂಲಕ ಆತ್ಮಕ್ಕೆ ಭೌತಿಕ ದೇಹವು ಲಭಿಸಿ ಶರೀರವು ರಚನೆಯಾಗುತ್ತದೆ " .

ರಾಜನ ಮಾತನ್ನು ಕೇಳಿದ ಶ್ವೇತಕೇತುವು ಸಂತೃಪಿಯಿಂದ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಉತ್ಸುಕನಾಗುತ್ತಾನೆ. .......ಮುಂದಿನ ವಿಷಯಗಳು ಇಲ್ಲಿ ಅಪ್ರಸ್ತುತ.

ಪಂಚಾಗ್ನಿಹೋಮ ಅಥವ ವಿದ್ಯೆ ಎಂಬುದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಹೀಗೆ ವಿವರಣೆಯನ್ನು ಕೊಡಲಾಗಿದೆ. ಉಪನಿಷತ್ತುಗಳು ಧ್ಯಾನ ಮತ್ತು ಯೋಗಗಳ ಮೂಲಕ ಸೃಷ್ಟಿಯನ್ನು ಅರಿಯುವ ಪ್ರಾಯೋಗಿಕ ಸಿದ್ಧಾಂತವೇ ಆಗಿದೆ.  
............................................................................................

ಉಪ"ಸಂಹಾರ" :
...................
ನನಗೆ ಯಾರನ್ನೂ ವೈಯಕ್ತಿಕವಾಗಿ ತೆಗಳುವುದಕ್ಕೆ ಇಷ್ಟವಾಗುವುದಿಲ್ಲ. ಹಾಗಂತ ನಾನೇನೂ ಪುಣ್ಯಕೋಟಿಯಲ್ಲ. ಪಂಚಾಗ್ನಿಹೋಮ ಮಾಡುತ್ತೇನೆಂದು ನಿತ್ಯಾನಂದ ಮಹಾರಾಜರು ತಮ್ಮ ಸುತ್ತಲೂ ತಾವೇ ಒಂದು ವರ್ತುಲವನ್ನು ನಿರ್ಮಿಸಿ, ಅಲ್ಲೆಲ್ಲಾ ಸೀಮೆ ಎಣ್ಣೆ ಸುರಿದು ಒಂದಷ್ಟು ಕರಟ, ಸೌದೆಗಳನ್ನು ಹಾಕಿ ಬೆಂಕಿ ಹೊತ್ತಿಸಿ ಅದರ ನಡುವೆ ತಾವು ಕೂತು ಧ್ಯಾನ ಮಾಡಿ ಪಂಚಾಗ್ನಿ ಹವನ ಮಾಡಿದೆ ಎಂದು ...ಹೇಳಿದ್ದರಲ್ಲಿ ತಪ್ಪಿಲ್ಲದಿರಬಹುದು. ಕಾರಣ ಅವರಿಗೆ ಮೇಲಿನ ಪಂಚಾಗ್ನಿ ವಿದ್ಯೆಯ ಬಗ್ಗೆ ತಿಳಿದಿಲ್ಲದಿರಬಹುದು. ಎಲ್ಲರಿಗೂ ಎಲ್ಲವೂ ತಿಳಿದಿರಬೇಕೆಂದೇನಿಲ್ಲವಲ್ಲ !. ಅಥವ ಪಂಚಾಗ್ನಿ ಧ್ಯಾನವನ್ನು ಅರಿತಿರಲೂ ಬಹುದು. ಸಿನಿಮಾ ನಟಿ ರಂಜಿತಾರೊಡಗೂಡಿ ’ಐದನೆಯ’ ಅಗ್ನಿಹೋತ್ರವನ್ನು ಪ್ರಾಯೊಗಿಕ ಸಿದ್ದೀಕರಿಸಲು ಪಣತೊಟ್ಟಿದ್ದಿರಲೂಬಹುದು ! . ಯಾವುದೇ ಅಪವಾದವನ್ನು ವೈಯಕ್ತಿಕವಾಗಿ ಹೇಳುವುದಕ್ಕೆ ಮುನ್ನ ವೇದಾಂತಗಳಲ್ಲಿ ಅಂತಹ ಅಪವಾದಗಳಿಗೆ ಏನು ಹೇಳಿದೆ ಎಂಬುದನ್ನು ಅರಿಯುವುದು ಸೂಕ್ತ. ನಿತ್ಯಾನಂದ ಮಹರಾಜರನ್ನು ಹಳಿಯುವುದರ ಮೂಲಕ ಸಮಸ್ತ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ನಾನು ಸುತರಾಂ ಒಪ್ಪುವುದಿಲ್ಲ. ನಾನು ಹುಟ್ಟಿದ ನಂತರ ಹಿಂದುವಾದೆನೋ ಅಥವ ಅದಕ್ಕೆ ಮೊದಲೇ ಆಗಿದ್ದೆನೋ ಗೊತ್ತಿಲ್ಲ. ಈಗಂತೂ ನಾನು ಪಕ್ಕಾ ಹಿಂದೂ ಆಗಿರುವುದು ಸತ್ಯ. ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಪೊಳ್ಳು ಜಾತ್ಯಾತೀತದ ಮುಖವಾಡ ಹಾಕಿಕೊಳ್ಳುವುದರಲ್ಲಿ ಅರ್ಥವಿಲ್ಲ.  ನಿತ್ಯಾನಂದರು ಬಹಳ ಶ್ರಮಪಟ್ಟು ಛಾಂದೋಗ್ಯದ ಧ್ಯಾನವನ್ನು ಅರಿಯಲು ಬೆಂಕಿಯ ಜೊತೆ ಸರಸವಾಡಿದ್ದು ಅನೇಕರಿಗೆ ತಮಾಷೆಯೆನ್ನಿಸಿರಬಹುದು. ಆದರೆ ಅದೂ ಅರಿಯುವ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯಲ್ಲವೆ ?!.  ’ ಶ್ರೇಯಾಂಸಿ ಬಹು ವಿಘ್ನಾನಿ’ ಎನ್ನುವಂತೆ ಪರಮಹಂಸರಾಗುವವರಿಗೆ ಅಡೆತಡೆಗಳು ಸಹಜ. ಅದನ್ನೆಲ್ಲಾ ದಾಟಿ ಅವರು ಪಂಚಾಗ್ನಿಯನ್ನು ಅರಿಯುತ್ತಾರೆಂದು ಭರವಸೆಯಿಟ್ಟುಕೊಳ್ಳಬಾರದೇಕೆ ?. ಈಗಂತೂ ಅವರು ತಾವು ಸನ್ಯಾಸಿಯೇ ಅಲ್ಲ ತಾನೊಬ್ಬ ಧ್ಯಾನಿ ಎಂದು ಬಹು ಘಂಟಾಘೋಷವಾಗಿ ಹೇಳಿದ್ದಾರೆ. ಹಾಗಾಗಿ ಅವರೀಗ ಉಪನಿಷತ್ತುಗಳಲ್ಲಿಯ ಧ್ಯಾನದ ರಹಸ್ಯವನ್ನು ಅರಿಯಲು ಮೌನಧ್ಯಾನಿಯಾಗಿದ್ದಾರೆಂದು ತಿಳಿಯಬಹುದು . ನನಗೆ ಅವರ ಬಗೆಗೆ ಸಂಪೂರ್ಣ ವಿಶ್ವಾಸವಿದೆ. ಯಾವುದಾಗದಿದ್ದರೂ ಪಂಚಾಗ್ನಿಯ ಐದನೆಯ ಹೋಮವನ್ನಂತೂ ಅವರು ಸಾಧಿಸಿಯೇ ತೀರುತ್ತಾರೆ...

ಬೋಲೋ ಶ್ರೀ ನಿತ್ಯಾನಂದ ಭೂಪಾಲ್ ಮಹರಾಜ್ ಕೀ ........

( ಇಷ್ಟೆಲ್ಲಾ ಓದಿದ ಮೇಲೆ ನಾನೂ ನಿತ್ಯಾನಂದರ ಶಿಷ್ಯನೋ ಅಥವ ಸನ್ಯಾಸಿಯಾಗುವೆನೆಂದು ಮಾತ್ರ ಊಹಿಸಬೇಡಿ. ನನಗೆ ಪ್ರಾಪಂಚಿಕ ಸುಖಗಳು  ಬೇಕು. (Worldly pleasures !)  ಕಾರಣ ನಾನೊಬ್ಬ ಸಾಮಾನ್ಯ ಮನುಷ್ಯ !)      

===========================================================


ಕೊನೆಕಿಡಿ :

ಜನನಾಯಕರೊಬ್ಬರು ಭೀಕರ ಭಾಷಣವನ್ನು ಕೊರೆಯುತ್ತಿದ್ದರು. ಸಾಕಷ್ಟು ಮಂದಿಯೂ ಸೇರಿದ್ದರು. ಅಲ್ಲಿ ಶಂಭುಲಿಂಗನೂ ಇದ್ದ !. ಅದೂ ನಾಯಕರ ಪಕ್ಕದಲ್ಲೆ ಕುಳಿತಿದ್ದ.
ಹರಿಯಿತು ಓತಪ್ರೋತವಾಗಿ ನಾಯಕರ ಭಾಷಣ. ಸಮಯ ಸರಿದಂತೆ ಮಂದಿಯೂ ಕಾಣೆಯಾದರು. ಅಲ್ಲುಳಿದಿದ್ದು ಶಂಭುಲಿಂಗ ಮಾತ್ರ !.
ನಾಯಕರು ಶಂಭುವನ್ನು ಹೊಗಳಿದರು, ತನ್ನ ಮಾತನ್ನು ಕೇಳಲು ಇವನೊಬ್ಬನಾದರೂ ಇರುವನಲ್ಲ ಎಂದು. ಶಂಭು ದೇಶಾವರಿ ನಗೆಯೊಂದನ್ನು ಬಿಸಾಡಿ ಹೇಳಿದ...
" ನಿಮ್ದಾದ ಮ್ಯಾಕೆ ನಂದೇ ಭಾಸ್ನ್ ಸೋಮಿ..ಅದ್ಕೆ ಕುಂತಿವ್ನಿ !! " .