Jan 26, 2010

" ಗುಂಡ್ಯ ಗಮ್ಮತ್ತು...... "

  " ಗುಂಡಿನ ಮತ್ತೇ ಗಮ್ಮತ್ತು " ಅಂತ  ಕೇಳೀದೀವಿ...ಇದ್ಯಾವುದು "ಗುಂಡ್ಯ ಗಮ್ಮತ್ತು " ಅಂತೀರಾ
 ...ಹಾಗಾದ್ರೆ ಮುಂದೆ ಓದಿ....




ಪಶ್ಚಿಮ ಘಟ್ಟದ ಬಿಸಿಲೆ ಅರಣ್ಯದಲ್ಲಿ ಹರಿಯುವ ಆ ಸುಂದರ ನದಿಯನ್ನು ನೋಡುತ್ತಿದ್ದ  ನನಗೆ ( i mean ಶಂಭುಲಿಂಗ !) ಅಚಾನಕ್ ಆಗಿ ಘನ ಸರ್ಕಾರದ ’ ಶಾಕ್ ’ ಮಂತ್ರಿಗಳ ದರ್ಶನವಾಯಿತು. 

ಇಂತಹ ಅವಕಾಶವನ್ನು ನಾನು ಬಿಡಲಿಲ್ಲ...ಮಾತಿಗೆಳೆದೇ ಬಿಟ್ಟೆ ’ಶಾಖಾ’ನುಭಾವರನ್ನು....


" ..ಈ ಗುಂಡ್ಯ ಜಲವಿದ್ಯುತ್ ಯೋಜನೆಯೇ ಬೇಕಾ ಸಾರ್ ನಿಮಗೆ ..? ಬೇರೆಲ್ಲೂ ಉತ್ಪಾದನೆ ಮಾಡೋಕಾಗಲ್ವೆ...ನೋಡಿ ಸರ್ ಇಲ್ಲಿ ಸ್ವಚ್ಚವಾಗಿ ಹರಿಯುತ್ತಿರೋ ನದಿಯನ್ನ..ಇದು ’ಕುಮಾರಧಾರ’ ಅಂತ..ಈ ನದಿ ಹರಿದು ಬರೋದು ಅಮೂಲ್ಯ ಖನಿಜ ಸಂಪತ್ತು ಹಾಗೂ ಅತ್ಯಮೂಲ್ಯ ಆಯುರ್ವೇದ ಔಷಧೀಯ ಸಸ್ಯಗಳಿರುವ ಸುಂದರ ಅರಣ್ಯದಿಂದ..ನಿಮಗೆ ಗೊತ್ತಾ ಸಾರ್ ..ಈ ನದಿಯಲ್ಲಿ ಮಿಂದರೆ ಚರ್ಮರೋಗಗಳೂ ಕಮ್ಮಿಯಾಗುತ್ತೆ..ಇಲ್ಲಿ ವಿದ್ಯುತ್ ಯೋಜನೆಗೆ ನೀವು ಅಣೆಕಟ್ಟು ನಿರ್ಮಿಸಿದರೆ ಈ ನದಿ ಬತ್ತಿ ಹೋಗುತ್ತೆ ..ಮತ್ತೆ ಹಿನ್ನೀರು ಅರಣ್ಯದೊಳಗೆ ನುಗ್ಗಿದರೆ ಪ್ರಾಣಿ..ಪಕ್ಷಿಗಳು ಸತ್ತು ಹೋಗುತ್ವೆ..ನೂರಾರು ಹೆಕ್ಟೇರ್ ಕಾಡು ನಾಶ ಆಗುತ್ತೆ..ಅಪಾರ ಸಸ್ಯಸಂಪತ್ತೂ ಮುಳುಗಿಹೋಗುತ್ತೆ....ಬೇಕಾ ಸಾರ್ ಇದು ? "


"ಹಿನ್ನೀರು.. ಡಾಲರ್ಸ್ ಕಾಲೋನಿತನಕ ಏನು ಬರೋದಿಲ್ವಲ್ಲ...ಬಿಡಯ್ಯಾ ಮತ್ತೆ..!!"



" ಹೀಗೆ ಹೇಳ್ದ್ರೆ ಹೇಗೆ ಸರ್... ಈಗಾಗ್ಲೆ ಆಹಾರ ಸಿಗ್ದೆ ಆನೆಗಳೆಲ್ಲಾ ಊರೊಳಗೆ ನುಗ್ಗಿ ದಾಂಧಲೆ ಮಾಡ್ತಿವೆ. ನೂರಾರು ಜೀವಗಳೂ ಹೋಗಿವೆ. ಇನ್ನು ಕಾಡೂ ಕಮ್ಮಿಯಾದ್ರೆ ಹುಲಿ-ಚಿರತೆಗಳೂ ಊರಿಗೆ ಬರುತ್ವೆ ..ಬದ್ಕೊಧ್ಹೇಗೆ ಹೇಳಿ..ಅದೂ ಅಲ್ದೆ ಯೋಜನೆ ಹೆಸ್ರಲ್ಲಿ ಅಮೂಲ್ಯ ಮರಗಳ ಲೂಟಿಯೂ ನೆಡೆಯುತ್ತೆ..ಕಳ್ಳರಿಗೆ ದಾರಿ ಮಾಡಿಕೊಟ್ಟ ಹಾಗೆ ಇದು...ಯೋಜನೆ ಅನುಷ್ಟಾನಕ್ಕೂ ಕಾಡು ನಾಶವಾಗುತ್ತೆ ಯೋಜನೆಯ ನಂತರವೂ ನಾಶವಾಗುತ್ತೆ... ನೀವು ಯೋಜನೆ ಕೈ ಬಿಡದಿದ್ರೆ ನಾನು ಇಲ್ಲಿಯ M.L.A.  ಸಾಹೇಬ್ರ ಜೊತೆ ಧರಣಿ ಮಾಡ್ತಿನಿ.."


" ಮಾಡಯ್ಯ....ನನಗೂ ಸ್ವಲ್ಪ ಪ್ರಚಾರ ಸಿಗುತ್ತೆ.. ಇಷ್ಟಕ್ಕೂ ಆ M.L.A ನೂ ನಮ್ ಪಾರ್ಟೀನೇ ತಿಳ್ಕೊ..!!"


"ಆದ್ರೂ ಸರ್...ನೀವು ಯೋಚನೆ ಮಾಡ್ಬೇಕು..ಈಗಾಗ್ಲೆ ಜನರ ಪರವಾಗಿ  "ಜೈರಾಮ್ ರಮೇಶ್" "ಬಹುಗುಣ" " ಶ್ರೀ ವಿದ್ಯಾಪ್ರಸನ್ನ ತೀರ್ಥರು " ಮಲೆನಾಡು ಹೋರಾಟ ಸಮಿತಿಯವರು ಎಲ್ರೂ ವಿರೋಧ ಮಾಡ್ತಿದ್ದಾರೆ...ಮೇಧಾಪಾಟ್ಕರ್ ಕೂಡ ಬರೋರಿದ್ದಾರೆ... ಬೇರೇ ಎಲ್ಲಾದ್ರು ವಿದ್ಯುತ್ ಉತ್ಪಾದಿಸಿ...ಇಲ್ಲಿಯ ಪ್ರಕೃತಿ ಅತ್ಯಮೂಲ್ಯ ...ನಾವು-ನೀವು ಇದ್ನೆಲ್ಲಾ ಸೃಷ್ಟಿಸೋಕೆ ಆಗೋಲ್ಲ ಸರ್...  "


" ಸೃಷ್ಟಿ ಮಾಡೋದು ಬ್ರಹ್ಮ ಅಲ್ವೇನಯ್ಯಾ.....ಇನ್ನೊಂದ್ಸಲ ಎಲ್ಲಾ ಸೃಷ್ಟಿಸ್ತಾನೆ ಬಿಡು !! "


"ನಮ್ಮದು ಪ್ರಜಾಪ್ರಭುತ್ವ ಸಾರ್...ಅಲ್ಲಿನ ಸ್ಥಳೀಯರ ನಿರ್ಧಾರಕ್ಕೆ ಬೆಲೆ ಕೊಡ್ಬೇಕು ...ಅವರಿಗೇ ಬೇಡವಾದ್ದು ನಿಮಗ್ಯಾಕೆ ?  ಕುಕ್ಕೆ ಸುಬ್ರಹ್ಮಣ್ಯ, ಮಾರನಹಳ್ಳಿ, ಬಿಸಲೆ ಅರಣ್ಯದೊಳಗಿನ ಊರುಗಳು, ಇನ್ನೂ ಸಾಕಷ್ಟು ಪ್ರದೇಶಗಳು ಈ ಯೋಜನೆಯಿಂದ ಭಾದಿತವಾಗುತ್ತೆ ...ಇನ್ನಷ್ಟು ಪರಿಸರ ಮಾಲಿನ್ಯ ಉಂಟಾಗುತ್ತೆ...ತಾಪ ಇನ್ನಷ್ಟು ಹೆಚ್ಚಾಗುತ್ತೆ...ಚುನಾವಣೆ ಸಮಯದಲ್ಲಿ ಯಾರಿಂದಲೋ ದುಡ್ಡು ತಗೊಂಡು ಅವರ ಆಸೆ ಪೂರೈಸೋದಕ್ಕೆ ಪರಿಸರ ಬಲಿ ಕೊಡೋದು ನ್ಯಾಯಾನಾ ಸರ್ ? "


" ಚುನಾವಣೆ ಬಂದಾಗ ನೀನು ಬಾರಯ್ಯಾ....ನಿನಗೂ ಕೊಡ್ತೀನಿ...ಓಟು ಹಾಕೋದಷ್ಟೇ ನಿನ್ನ ಕೆಲಸ..ಉಳಿದದ್ದು ಸರ್ಕಾರದ ಕೆಲಸ...ಸುಮ್ನೇ ಹೋಗಯ್ಯಾ...!!"


ನನ್ನ ಕೊನೆ ಪ್ರಯತ್ನ ....


" ಸಾರ್ ಹೇಗೂ 2012 ಕ್ಕೆ ಜಗತ್ಪ್ರಳಯ ಆಗುತ್ತೆ...ನನಗೆ ಪಕ್ಕಾ ಮಾಹಿತಿ ಬಂದಿದೆ !  ಯಾರೂ ಇರೋಲ್ಲ ಅಂದಮೇಲೆ ಈ ಯೋಜನೆ ಯಾಕೆ ಸರ್....ನಿಮಗೆ ಬೇಕಾಗಿರೋದು ಈ ಯೋಜನೆಯಿಂದ ಬರೋ ಹಣ ತಾನೆ...ಒಂದು ಕೆಲಸ ಮಾಡಿ..ಈ ಯೋಜನೆಯ ಪೂರ್ತಿ ಹಣವನ್ನು ನೀವು ಮತ್ತೆ ನಿಮ್ಮ "ಕಡೆಯವರು" ಹಂಚಿಕೊಂಡುಬಿಡಿ...ನಾವೇನೂ ಕೇಳೋಕೆ ಬರೋದಿಲ್ಲ.. ಬೇಕಾದ್ರೆ ನೆರೆ ಪರಿಹಾರಕ್ಕೆ ದೇಣಿಗೆ ಎತ್ತಿ ಕೊಟ್ವಲ್ಲಾ..ಹಾಗೂ ಕೊಟ್ಟು ಬಿಡ್ತೀವಿ...ಆದ್ರೆ  ದಯವಿಟ್ಟು ಈ ಮೂಕ ಪ್ರಾಣಿಗಳನ್ನ, ಸ್ವಚ್ಚಂದವಾಗಿ ಹಾರಾಡ್ತಿರೋ ಹಕ್ಕಿಗಳನ್ನ, ಸದಾ ನಗುತ್ತಿರೋ ಸಸ್ಯಗಳನ್ನ, ಹಸಿರು ತುಂಬಿದಕಾಡನ್ನು. ಈ ನದಿ, ಬೆಟ್ಟ, ಈ ಸಮೃದ್ದ ಪರಿಸರವನ್ನ ಅವುಗಳಿಗೋಸ್ಕರ... ಬಿಟ್ಟುಬಿಡಿ ಸಾರ್...ಬೇಕಾದ್ರೆ ನನ್ನ ಬಲಿ ತಗೊಳ್ಳಿ ಸಾರ್ .."


          ನನ್ನ ಮಾತು ಅವರ ಕಿವಿಗೆ ಬೀಳಲೇ ಇಲ್ಲ....ತಮ್ಮ ಮೋಟಾರು ಹತ್ತಿ ಬುರ್ ಎಂದರು ....!!
....................................................................................................................................................................


ಖೊನೆ ಖಿಡಿ :


ಅಲ್ಲಿ ಬೀಜರಹಿತ ಹಣ್ಣುಗಳ ಸೇವನೆಯ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ನೆಡೆಯುತ್ತಿತ್ತು....ಅಲ್ಲಿ ಶಂಭುಲಿಂಗನೂ ಇದ್ದ !
ಅಲ್ಲೇ ಪ್ರದರ್ಶನಕ್ಕಿಟ್ಟಿದ್ದ ಹಲಸಿನ ಹಣ್ಣೊಂದನ್ನು ತೆಗೆದು ಸುಲಿದೇಬಿಟ್ಟ...ಅತ್ಯಾಶ್ಚರ್ಯದಿಂದ ಅಧಿಕಾರಿಯನ್ನು ಕೇಳಿದ...


ಶಂಭುಲಿಂಗ : ಇದೇನ್ ಬುದ್ದಿ...ಈ ಅಣ್ಣಾಗೇ ಬೀಜ್ವೇ ಇಲ್ಲಾ.... 
ಅಧಿಕಾರಿ :     ಅದು ಸೀಡ್ಲೆಸ್ ಹಣ್ಣು ಕಣಪ್ಪಾ...ಈವಾಗೆಲ್ಲಾ ಹೀಗೇ ಹಣ್ಣುಗಳು ಬರೋದು...
ಶಂಭುಲಿಂಗ : ಅಂಗಾದ್ರೆ... ಇನ್ಮುಂದೆ ಮನುಸ್ರು ಇಂಗೇ ಉಟ್ತಾರಾ ಬುದ್ದಿ ...!!!!!!??
                                            
                                      ಸಿವನೇ ಸಂಭುಲಿಂಗ  :)




ವಂದನೆಗಳೊಂದಿಗೆ ....................



Jan 21, 2010

"ಬೇಂದ್ರೆ ಮುಖ್ಯಮಂತ್ರಿಯಾದರೆ..."

’ ಬೀchi ’ ( ಶ್ರೀಯುತ ರಾಯಸಂ ಭೀಮಸೇನರಾವ್ ರವರು ) ಎಂದಾಕ್ಷಣ ಮೊದಲು ನೆನೆಪಿಗೆ ಬರುವುದು ಅವರ ಮಾನಸ ಸೃಷ್ಟಿಯಾದ "ಬೆಳ್ಳಿತಿಂಮ ".  ಅವರ ಬರಹಗಳು ಮೇಲ್ನೋಟಕ್ಕೆ ಹಾಸ್ಯ ಬರಹಗಳಂತೆ ಕಂಡರೂ ಅದರಲ್ಲಿ ಸಮಾಜಮುಖಿಯಾದ ಅನೇಕ ವಿಚಾರಗಳಿವೆ. ಆದರೂ ಬೀchi ಎಂದರೆ ನಗೆ...ನಗು ಎಂದರೆ ಬೀchi ಎನ್ನುವಷ್ಟರ ಮಟ್ಟಿಗೆ ಅವರ ಬರಹಗಳು ಸಾಹಿತ್ಯಕ್ಷೇತ್ರವನ್ನಾವರಿಸಿಕೊಂಡಿವೆ. ಕನ್ನಡದ ಸಾಹಿತಿಗಳು ’ಮುಖ್ಯಮಂತ್ರಿ’ ಯಾದರೆ ಹೇಗಿರುತ್ತದೆ ..ಎಂಬ ಕಲ್ಪನೆಯೊಂದಿಗೆ ಕೆಲವರನ್ನು ( ಅ.ನ.ಕೃ, ಬೇಂದ್ರೆ, ಸ್ವತಃ ಬೀchi ...ಹೀಗೆ)  ಮುಖ್ಯಮಂತ್ರಿ ಮಾಡಿ ಹಾಸ್ಯದ ಹೊನಲನ್ನೇ ಹರಿಸಿದ್ದಾರೆ ಬೀchi ಯವರು....ಅಂದಿನ ದಿನಗಳಲ್ಲಿ ಈ ಮಹಾನುಭಾವರುಗಳ ಸ್ನೇಹ-ವಿಶ್ವಾಸಗಳು ಹೇಗಿತ್ತು ಎಂಬುದನ್ನೂ ಸಹ ನಾವು ಈ ಬರಹಗಳಲ್ಲಿ ಕಾಣಬಹುದು.   ಪ್ರಸ್ತುತ ಇಲ್ಲಿ ನಾನೋದಿದ ಶ್ರೀಯುತರ "ಚಿನ್ನದ ಕಸ " ಸಂಕಲನದಿದ ಆಯ್ದ ಒಂದು ಪ್ರಸಂಗವನ್ನು ನಿಮ್ಮ ಮುಂದಿಡುತ್ತಿದ್ದೇನೆ..ಓದಿ..ನಕ್ಕು’ಬಿಡಿ’.......


" ಬೇಂದ್ರೆ ಮುಖ್ಯಮಂತ್ರಿಯಾದರೆ........  "
{ಕನ್ನಡದ ಸುಪ್ರಸಿದ್ಧ ಕವಿವರ್ಯ ’ಬೇಂದ್ರೆ’ಯವರು  ಮುಖ್ಯಮಂತ್ರಿಯಾಗಿದ್ದಾರೆ.  ತಿಂಮ ಅವರೊಂದಿಗೆ ಸಂದರ್ಶನ ಬೇಡಿ ಬಂದಿದ್ದಾನೆ. ಹೊರಬಾಗಿಲಲ್ಲಿಯೇ ಮು.ಮಂ. ಗಳ ಕಾರ್ಯದರ್ಶಿ ’ತಿಂಮ’ನನ್ನು ತಡೆಯುತ್ತಾನೆ.}


ಕಾರ್ಯದರ್ಶಿ :  ಆರು , ನೀನಾರು ? ಕನ್ನಡಪುತ್ರಾ ನೀನಾರು ? 
(ಬೇಂದ್ರೆಯವರ ಸಹವಾಸದಿಂದ ಇಲ್ಲಿ ಕಾರ್ಯದರ್ಶಿಯೂ ಕವಿಯಾಗಿಬಿಟ್ಟಿದ್ದಾನೆ !)


ತಿಂಮ : ನಾನು ತಿಂಮ ಕಾರ್ಯದರ್ಶಿಗಳೇ, ಮು.ಮಂ. ಗಳೊಡನೆ ಮಹತ್ತರ ಕೆಲಸವಿದೆ. ಅವರನ್ನು ಕೂಡಲೇ ಕಾಣಬೇಕು.


ಕಾ : ಈಗವರು ಯಾರಂ ನೋಡುವಂತಿಲ್ಲ.
      ಭಾವಕರು ಧ್ಯಾನವಂ ಬಿಡುವಂತಿಲ್ಲ !!


ತಿಂ : ಇಂದು ಬೆಳಿಗ್ಗೆ ೯ ಕ್ಕೆ ಬರಲು ನನಗೆ ಪತ್ರ ಬಂದಿದೆ,,ಇಲ್ಲಿದೆ ನೋಡಿ


ಕಾ : ಅಹುದಹುದು ಇರಬಹುದು ! ಬಹುಜನರು ಬರಲಿಹರು ಅವರ ದರುಶನಕಾಗಿ
      ತಾರೀಕು, ಗಂಟೆ ನಿಮಿಷಗಳು ಯಾರಿಗೆ ? ಕವಿವರರು ಕಾಲಾತೀತರು ||


ತಿಂ : (ನಸುಕೋಪದಿಂದ ) ಹಾಗಾದರೆ ನನಗೇಕೆ ಬರಲು ತಿಳಿಸಿದಿರಿ ? 
ನಾನು ಮುಖ್ಯಮಂತ್ರಿಗಳನ್ನು ನೋಡಲೇಬೇಕು..ಅವರೇನು ಮಾಡುತ್ತಿದ್ದಾರೆ ಈಗ ?


ಕಾ : ಮಧರ್ !  ಮಧರ್ ರಂ ನೆನೆಯುತ್ತಾ ಅರ್ಧರ್ಧ ಕಣ್ಮುಚ್ಚಿ ಅತ್ತಿತ್ತ  ಸಾಗುತ್ತಾ !
ಧ್ಯಾನಮಗ್ನರು ಆಗಿ ಮನದೊಳ್  ಮಾತೆಯ ಕಂಡಿಹರು ನೀವು ಪೋಗಿ ||


ತಿಂ : (ಕೋಪಾಶ್ಚರ್ಯದಿಂದ !)  ಹೋಗಿ ? ಹೋಗಿ ಎನ್ನಲು ನೀನ್ಯಾರು ?  ಯಾವೂರಯ್ಯಾ ನಿಂದು ?


ಕಾ : ನನ್ನ ನೀಂ ಅರಿಯೆಯಾ ? ನೀನೆಂಥ ಕನ್ನಡಿಗ ? ಮೇರು ಪರ್ವತದಷ್ಟು 
       ನಾ ಬರೆದ ಕವನಗಳ  ಸಪ್ತಸಾಗರ ತುಂಬಿದವು  ಎನ್ನ ಭಾವಗಳು. 
       ತಪಶ್ಚರ್ಯೆಯಿಂದ ಬರೆಯುವ ಶುದ್ಧ ಕಿರಿ ಕವಿ ನಾನು !
      ಬೇರಾವ ಊರಿನಲ್ಲಿ ದೊರೆಯುವರು  ಕವಿ ಮರಿಗಳು ? 
      ಧಾರವಾಡವು ಎಂದು ಪ್ರತ್ಯೇಕವಾಗಿ ನಾ ಪೇಳಬೇಕೆ !? 


ತಿಂ : ಇದೇನು ಕಾರ್ಯದರ್ಶಿಯಯ್ಯಾ ನೀನು ? ಆಗಿನಿಂದಲೂ ಬರೀ ಕವನಗಳನ್ನೇ ಹೇಳುತ್ತಿರುವೆಯಲ್ಲಾ ? ಇದನ್ನು ತಿಳಿದು ನಾನು ಮಾಡುವುದಾದರೂ ಏನು ? ಸರಿಯಯ್ಯಾ  ನೀನು ...ನನಗೆ ಬೇಕು ಮುಖ್ಯಮಂತ್ರಿಗಳು ...
        [ ಕಾರ್ಯದರ್ಶಿಗಳನ್ನು ಅತ್ತ ದೂಡಿ ತಿಂಮ ಒಳನುಗ್ಗುತ್ತಾನೆ] ....


[ಲೋಡಿಗೆ  ಆತು ಕುಳಿತು ಮುಖ್ಯಮಂತ್ರಿ ಬೇಂದ್ರೆಯವರು ಏನನ್ನೋ ಬರೆಯುತ್ತಲಿದ್ದಾರೆ...ತಿಂಮ ಅವರನ್ನು ದುರುದುರು ನೋಡುತ್ತಾನೆ ]


ತಿಂ : [ಬಹು ಹೊತ್ತು ನಿಂತು ಬೇಸತ್ತು ] ಮಹಾಸ್ವಾಮಿ !


ಮುಂ (ಬೇಂದ್ರೆ ) : (ತಲೆ ಎತ್ತದೆ) ಬಂದೆ ಬಂದೆ ಒಂದು ನಿಮಿಷ
                                            ಒಂದೆ ವಿಷಯ, ಜಗದ ವಿಷ
                                            ಹಿಂದೆ ಕುಡಿದ ಅವ ಅನಿಮಿಷ
                                            ಭೋ ಬಂದೆ, ಹೋ ಬಂದೆ, 
                                            ತಂಭೋ ಎಂದೆ, ಬಾ ತಂದೆ
                                            ಶಿರದಲಿ, ಕರದಲಿ, ಬರದಲಿ, 
                                            ಮರದಲಿ, ವರದಲಿ, ವದರಲಿ !


ತಿಂ : ಸ್ವಾಮೀ...ಒದರುತ್ತಲೇ ಇದ್ದೇನೆ ಆಗಿನಿಂದ ,


ಮುಂ : [ತಲೆಯೆತ್ತಿ. ಶೂನ್ಯದೃಷ್ಟಿಯಿಂದ !] ಹಾಂ, ಹಾಂ ! ಈಗ ಹೇಳು ತಿಂಮಾ ಏನು ಸಮಾಚಾರ ?


ತಿಂ : ಹೇಳುವುದೇನು ಮಹಾಸ್ವಾಮಿಗಳಾದ ಮುಖ್ಯಮಂತ್ರಿಗಳೇ....


ಮುಂ : ( ತಿಂಮನನ್ನು ತಡೆದು....) 
          ಅಹುದಹುದು, ಮರೆತಿದ್ದೆ, ನಾಂ ಮುಖ್ಯಮಂತ್ರಿ.
         ಮುಖ್ಯಾಮುಖ್ಯವೆಂಬ ಭೇದವಳಿಯಲು ಬೇಕು |
         ದೇವನಾ ದೃಷ್ಟಿಯಲಿ ಎಲ್ಲರೂ ಮುಖ್ಯ
         ಭಾವನಾ ಚೇತನದಿ ಎಲ್ಲರೂ ಸೌಖ್ಯ ||


ತಿಂ :  ಸ್ವಾಮೀ ! ದಯಮಾಡಿ ನಿಮ್ಮ ಕಾವ್ಯ ಪ್ರವಾಹವನ್ನು ನಿಲ್ಲಿಸಿದರೆ ನಾನು ಮಾತನಾಡುತ್ತೇನೆ.  ಮುಂ.ಮಂ. ಯ ಕೆಲಸವೆಂದರೆ ಏನೆಂದು ತಿಳಿದಿರಿ ? ನವ್ಯ ಕಾವ್ಯದ ಗೋಷ್ಟಿಯ ಅಧ್ಯಕ್ಷತೆಯಲ್ಲ ಇದು ..


ಮುಂ: ಆಯಿತಾಯಿತು ಗೆಳೆಯಾ, ಕೋಪ ಬೇಡ ಎಳೆಯಾ !!


ತಿಂ : [ನಡುವೆ ಬಾಯಿ ಹಾಕಿ ] ಛೇ..ನಿಂಮ ..ಮತ್ತೆ ಸುರುಮಾಡಿದಿರಲ್ಲ ? ಜನತೆ ಬೊಬ್ಬೆ ಹೊಡೆಯುತ್ತಿದ್ದಾರೆ...ಮತದಾನ  ಮಾಡಿ ನನ್ನನ್ನು ನಿಮ್ಮನ್ನು ಚುನಾಯಿಸಿದವರೆಲ್ಲಾ  ಬೈಯುತ್ತಿದ್ದಾರೆ..ಬಡಕೂಲಿಯವರಿಗೆಲ್ಲಾ ತಿನ್ನಲು ಅನ್ನವಿಲ್ಲ.


ಮುಂ : [ಆಶ್ಚರ್ಯದಿಂದ]     ಅನ್ನವಿಲ್ಲ ! ಅಯ್ಯ ! ಅನ್ನ , ಅನ್ನ !
                                     ಎಲ್ಲ ದೇವರು ಬಂದರು
                                     ಅನ್ನ ದೇವರು ಬರಲಿಲ್ಲ ! 
                                     ಅವನ ಕಾಣಿರೋ, ನೀವವನ ಕಾಣಿರೋ ||


ಹಾಗಾದರೆ ಇನ್ನೊಂದು ಕೆಲಸ ಮಾಡು. ನನ್ನ ಕಾರ್ಯದರ್ಶಿಯ ಬಳಿ ಹೋಗಿ ಹೇಳಿ...ಮಾರಾಟವಾಗದೇ ಉಳಿದಿರುವ ನನ್ನ ಕವನ ಸಂಗ್ರಹ "ಅನ್ನಪೂರ್ಣ" ದ ಐದುನೂರು ಪ್ರತಿಗಳನ್ನು ತೆಗೆದುಕೊಂಡು ಹೋಗಿ ಹಸಿದ ಜನರಲ್ಲಿ ಹಂಚಿಬಿಡು.


ತಿಂ : ಪುಸ್ತಕಗಳನ್ನು ಕತ್ತೆಗಳಷ್ಟೇ ತಿನ್ನಬಲ್ಲವು ಮಹಾಸ್ವಾಮಿ. ಅವರು ಮನುಷ್ಯರು ! ಬಾವಿಗಳೆಲ್ಲಾ ಬತ್ತಿಹೋಗಿವೆ. ಮೊದಲು ಅವರಿಗೆ ಕುಡಿಯಲು ನೀರು ಬೇಕು...


ಮುಂ : [ಗೋಣನ್ನು ಎಡಕ್ಕೆ ಎಸೆದು ತತ್ವಜ್ಞಾನಿಯ ನಗೆಯಿಂದ ಹಾಡುವರು]
                   ಬಾರಮ್ಮ ಗಂಗೆ, ಬಾ ಬಾರೆ ತುಂಗೆ
                   ಬೆಟ್ಟದಿಂ ನೀ ಇಳಿದು, ಘಟ್ಟದಿಂ ನೀ ಜಿಗಿದು
                   ದಿಟ್ಟಳಾಗಿಹ ನೀನು ಥಟ್ಟನೆ ಬಾರೆ
                   ಛಟ್ಟನೆ ಬಾರೆ..
                   ಭರ್ರನೆ ಬಾರೆ..  
                   ಢರ್ರನೆ ಬಾರೆ...!
                   ಬಾ ಬಾರೆ ತಾಯೆ, ತಾಯಿಯೇ ಬಾರೆ ...
                  ನೀರಡಿಕೆ ಕಳೆಯಲು ದೂರದಿಂ ಬಾರೆ..




ತಿಂ : [ಕೈಮುಗಿದು] ನಾನು ಬಂದ ಕೆಲಸವಾಯಿತು..ಮುಖ್ಯ ಕವಿ ಮಂತ್ರಿ ಪುಂಗವರೇ..


ಮುಂ : ಇಲ್ಲ..ಇಲ್ಲ..ಇನ್ನೂ ಇದೆ..ಗಂಗಾವತರಣ ಪೂರ್ತಿಯಾಗಿಲ್ಲ..!
                 ಧಬಧಬಯೆಂದು, ಢಬಢಬಯೆಂದು... 
                 ದಿಡಿಲು ದಿಡಿಲೆಂದು ! ಬಾರೆ ಇಂದು..


ತಿಂ : [ಸಿಟ್ಟಿನಿಂದ ] ಬರುತ್ತಾರೆ..ಬರುತ್ತಾರೆ..ನಿಮಗೆ ಓಟುಕೊಟ್ಟುವರು ಬಡಿಗೆ ಹಿಡಿದು ಬರುತ್ತಾರೆ, ನಿಲ್ಲಿಸಿರಿ..ಮುಖ್ಯಮಂತ್ರಿ ಕೆಲಸವೆಂದರೆ ಏನೆಂದು ತಿಳಿದಿರಿ...? ಜನತೆಗೆ ಅನ್ನವಿಲ್ಲ ..ನೀರಿಲ್ಲ...ವಸ್ತ್ರವಿಲ್ಲ...


ಮುಂ : [ನಡುವೆ ಬಾಯಿ ಹಾಕಿ] ...ಬಾ ಕೃಷ್ಣ, ಬೇಗ ದೇವ
                   ದ್ರೌಪದಿಯ ಮಾನವ ಕಾಯ್ದ ದೇವ 
                  ವಸ್ತ್ರಗಳಾ ಹೊತ್ತು ತಾ, ಭಕ್ತರ ಗೋಳಿದು...


        ಹೋಗಿ ಬರುತ್ತಿಯಾ ತಿಂಮಾ...?

ತಿಂ : ಮತ್ತೇಕೆ ಬರಲಿ ಸಾಯಲಿಕ್ಕೆ .....?  [ಹೊರಡುವನು ]


ಮುಂ : [ಪುನಃ ಲೋಡಿಗೆ ಆತು ಕುಳಿತು ]
             ಸಾವು ! ಸಾವೆಂದೇಕೆ ಅಂಜುವಿರಿ
             ಸಾವೊಂದು ಶಿವನಾಟ !
             ಜಾತಸ್ಯ ಮರಣಂ ಧ್ರುವಂ ಎಂಬ 
             ಮಾತಿಗೆ ಇಲ್ಲ ಸಾವು !
             ಸರಸ ಜನನ ! ವಿರಸ ಮರಣ..
             ಸಮರಸವೇ ಜೀವನ..


[ ಮುಖ್ಯಮಂತ್ರಿ ಬೇಂದ್ರೆ ಯವರು ಊಟಕ್ಕೆ ಹೊರಡುವರು !]




  ಹೀಗೇ ಬೀchi ಯವರ ಹಾಸ್ಯ-ವಿಡಂಬನೆಗಳು ಇಡೀ ಪುಸ್ತಕದ ತುಂಬೆಲ್ಲಾ ಹರಡಿಕೊಂಡಿವೆ.... ’ಹುಚ್ಚು ಹುರುಳು ’ ’ಚಿನ್ನದ ಕಸ ’ ಬೆಳ್ಳಿತಿಂಮ ನೂರೆಂಟು ಹೇಳಿದ’ ಇತ್ಯಾದಿ ಪುಸ್ತಕಗಳು ಧಾರವಾಡದ ’ಸಮಾಜ ಪುಸ್ತಕಾಲಯ’ ವತಿಯಿಂದ ಪ್ರಕಾಶಿಸಲ್ಪಟ್ಟಿವೆ. ಎಲ್ಲರೂ ’ಕೊಂಡು’ ಓದಿ..ಕನ್ನಡ ಇನ್ನಷ್ಟು ಬೆಳೆಯಲಿ. ಬೀchi ಯವರ ಬಗ್ಗೆ ಒಂದಷ್ಟು ಮಾತುಗಳನ್ನು ಬರೆಯಬೇಕೆಂದುಕೊಂಡಿದ್ದೆ...ಆದರೆ ಅವರ ಬಗ್ಗೆ ಗುರುಗಳಾದ ’ಸುನಾಥ್’ ರವರೇ ಹೇಳಿದರೆ ಇನ್ನಷ್ಟು ಮೆರಗು ಬರುತ್ತದೆ ಎಂದು ನನ್ನ ಅನಿಸಿಕೆ.....ಹೇಳುತ್ತಾರೆ ಎಂದು ನಿರೀಕ್ಷಿಸುತ್ತಾ...... :)
....................................................................................................................................................................


ಖೊನೆ ಖಿಡಿ :


ಗಣರಾಜ್ಯೋತ್ಸವದ ಭೀಕರ ’ಗೀಷಣ’ ವನ್ನು ಮುಗಿಸಿದ ಜನನಾಯಕರು ತಾವು ಕರೆತಂದಿದ್ದ ಮಹಾಜನಗಳಿಗೆ ವರ್ಣಮಯ ಪಂಚೆ (ಲುಂಗಿ !) ಗಳನ್ನು ತಲಾವಾರು ಹಂಚಿದರು..
ಇಂಥ ಕಡೆ ನಮ್ಮ ಶಂಭುಲಿಂಗನೂ ಇರಲೇಬೇಕಲ್ಲವೇ ...? ಸಿಕ್ಕಿತು.. ಅವನಿಗೂ ಒಂದು ರಂಗಿನ ಲುಂಗಿ...ಇಷ್ಟಾದಮೇಲೆ ನಮ್ಮ  ಶಂಭುಲಿಂಗ  ನಾಯಕರನ್ನು ಮಾತನಾಡಿಸದೆ ಬಿಡಲಿಲ್ಲ..


ಶಂಭುಲಿಂಗ :   ಬುದ್ದಿ...ಈ ಅಬ್ಬ ಮತ್ಯಾವಾಗ್ ಬತ್ತದೆ....? ( ಪಾಪ ಮುಗ್ಧ !)
’ನಾಯ’ಕರು :  ಯಾಕಪ್ಪಾ...?
ಶಂಭುಲಿಂಗ :  ಈ ಸಲ ಬರೀ ಲುಂಗಿ ಕೊಟ್ಟೀರಿ...ಮುಂದ್ಲು ಸಲ ಚಡ್ಡಿ , ಸಲ್ಟು, ಎಲ್ಲಾ ಕೊಡಿ ಅತ್ಲಾಗೆ ಅಂತ ...  


                    ವಂದನೆಗಳೊಂದಿಗೆ...

Jan 14, 2010

ಅಚ್ಚರಿ-ವಿಸ್ಮಯ!


ಬೆಂಗಳೂರಿನ (ವಿಸ್ಮಯ ನಗರಿಯ!?) ಗವಿ ಗಂಗಾಧರೇಶ್ವರ ದೇವಾಲಯದಲ್ಲಿಂದು (ದಿನಾಂಕ ೧೪) ಶಿವಲಿಂಗದ ಮೇಲೆ ಸೂರ್ಯ ರಶ್ಮಿಯು ಚುಂಬಿಸಿದ ವಿಸ್ಮಯ ಮತ್ತು ಅಚ್ಚರಿ ನಡೆದೇಹೋಯಿತು! ಭಕ್ತರೆಲ್ಲರೂ ಪುನೀತರಾದರು. (ಆ ಪಾವಿತ್ರ್ಯತೆಯ ಬಗ್ಗೆ ನನ್ನ ಯಾವ ಆಕ್ಷೇಪಣೆಯೂ ಇಲ್ಲ!!). ದೂರದರ್ಶನದ ಖಾಸಗಿ ವಾಹಿನಿಗಳಂತೂ ನೇರ ಪ್ರಸಾರ ಮಾಡಿ ಇದನ್ನು ವಿಸ್ಮಯ ಮತ್ತು ಅಚ್ಚರಿ ಎಂದು ಸಾರಿದವು. ಈ ವಿಸ್ಮಯ ಹೇಗೆ ಸಾಧ್ಯವಾಯಿತು ? ....., ನಿಮಗೊಂದು ಉದಾಹರಣೆ ಕೊಡುತ್ತೇನೆ. ನಿಮ್ಮದೊಂದು ಚಂದದ ಮನೆಯುಂಟಲ್ಲಾ..... ಆ ಮನೆಯ ಪೂರ್ವ ಅಥವಾ ಪಶ್ಚಿಮದ ಗೋಡೆಯ ಮೇಲೆ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲೊಂದು ಕಿಟಕಿ ಮಾಡಿಸಿಡಿ. ಕಿಟಕಿಯಿಂದ ಸೂರ್ಯರಶ್ಮಿ ಒಳಗೆ ಬರಲೇ ಬೇಕಲ್ಲವೇ?! ಮನೆಯೊಳಗೆ ಬಂದ ಕಿರಣಗಳು ಎಲ್ಲಿ ಬೀಳುವುದೋ ಆ ಸ್ಥಳದಲ್ಲಿ ಅಭಿಮುಖವಾಗಿ ಒಂದು ದೇವರ ವಿಗ್ರಹವನ್ನಿಡಿ... ಅರೆ! ವಿಗ್ರಹದ ಮೇಲೆ ಬಿತ್ತಲ್ಲಾ ಸೂರ್ಯರಶ್ಮಿ...! ಸರಿಯಾಗಿ ಸಮಯ ನೋಡಿಕೊಳ್ಳಿ ಮತ್ತೆ ಮುಂದಿನ ವರ್ಷ ಅರ್ಧ-ಮುಕ್ಕಾಲು ಗಂಟೆ ಹೆಚ್ಚು-ಕಮ್ಮಿ ಸೂರ್ಯರಶ್ಮಿ ನೀವಿಟ್ಟ ದೇವರ ವಿಗ್ರಹದ ಮೇಲೆ ಬಿದ್ದೇ ಬೀಳುತ್ತದೆ.... ಕಾರಣ ಸೂರ್ಯನ ಬೆಳಕು ಮತ್ತು ಕಿಟಕಿ. ಕಿಟಕಿಯೇ ಇಲ್ಲದ್ದಿದ್ದರೆ ಸೂರ್ಯರಶ್ಮಿ ಒಳಗೆ ಬರಲು ಸಾಧ್ಯವೇ? ಹಾಗೆಯೇ ಗಂಗಾಧರೇಶ್ವರ ದೇವಾಲಯದಲ್ಲೂ ಸರಿಯಾದ ಸಮಯಕ್ಕೆ ಕಿಟಕಿ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುತ್ತದೆ. ಸೂರ್ಯ ತನ್ನ ನಿರ್ಧಿಷ್ಟ ಕೋನಕ್ಕೆ ಬಂದಾಗ ವಕ್ರೀಭವನದ ಮೂಲಕ ಬೆಳಕು ಎಲ್ಲೆಡೆಯಲ್ಲಿಯೂ ಪಸರಿಸಲೇಬೇಕು... ಕಿಟಕಿಯ ಮೂಲಕವೂ ಸಹ. ಕಿಟಕಿ ಎಲ್ಲಿಡಬೇಕು ಅಥವಾ ಎಲ್ಲಿರಬೇಕು ಎಂಬ ಜಾಣ್ಮೆಯಷ್ಟೇ ಇಲ್ಲಿ ಮುಖ್ಯ. ಹೀಗೆ ಮಕರ ಸಂಕ್ರಮಣದಂದು ಕಿಟಕಿಯ ಮೂಲಕ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬೀಳುವುದು ಒಂದು ಸಹಜ ಪ್ರಕ್ರಿಯೆ. ಇದರಲ್ಲಿ ವಿಸ್ಮಯವಾಗಲೀ ಅಚ್ಚರಿಯಾಗಲೀ ಇಲ್ಲವೆಂದೇ ನನ್ನ ಅಭಿಮತ. ’ಶೃಂಗೇರಿ’ಯ ವಿದ್ಯಾಶಂಕರ ದೇವಾಲಯದಲ್ಲೂ ೧೨ರಾಶಿಗಳ ಕಂಬಗಳಿವೆ. ಈ ದೇವಾಲಯ ನಿರ್ಮಾಣ ಮಾಡುವಾಗಲೇ ಸೂರ್ಯರಶ್ಮಿಯು ಯಾವ-ಯಾವ ಕೋನದಿಂದ ಎಲ್ಲೆಲ್ಲಿ ನಿಖರವಾಗಿ ಬೀಳಬಹುದು ಎಂದು ವೈಜ್ಞಾನಿಕವಾಗಿ ಅಂದಾಜಿಸಿ ಸೌರಮಾನ ಪದ್ದತಿಯ ರೀತಿ ಸೂರ್ಯನ ಮೇಷಾದಿ ರಾಶಿ ಪ್ರವೇಶವಾದಾಗ ಆ ನಿರ್ದಿಷ್ಟ ರಾಶಿಯ ಕಂಬದ ಮೇಲೆ ಬೆಳಕು ಬೀಳುವಂತೆ ನಿರ್ಮಿಸಿದ್ದಾರೆ. ಇದು ನಿರ್ಮಾಣದ ಮತ್ತು ನಿರ್ಮಾತೃವಿನ ಪಾಂಡಿತ್ಯ, ಕೌಶಲ್ಯದ ವಿಸ್ಮಯವೇ ಹೊರತು ಸೂರ್ಯರಶ್ಮಿಯದ್ದಲ್ಲ.( ಅಂತಹ ಮಹಾನುಭಾವರನ್ನು ಮರೆತುಬಿಡುತ್ತಾರೆ.... ಇಂತಹ (ಅ)ವಿಸ್ಮಯಗಳು ಪ್ರಚಾರವಾಗುತ್ತದೆ .!) ಇದು ಎಲ್ಲಾ ದೇವಾಲಯಗಳಲ್ಲೂ ಮತ್ತು ನಮ್ಮ ನಿಮ್ಮ ಮನೆಗಳಲ್ಲೂ ನೆಡೆಯುವ ಸಾಮಾನ್ಯ ಕ್ರಿಯೆ.
( ಮುಖ್ಯವಾಗಿ ಸೂರ್ಯನ ಕಿರಣಗಳ ಪ್ರವೇಶಕ್ಕೆ ಯಾವುದೇ ಅಡೆ-ತಡೆಗಳಿರಬಾರದಷ್ಟೆ. ಕಾಂಕ್ರೀಟ್ ಕಾಡಿನಲ್ಲಿ ಇದು ಕಷ್ಟವೇ ಸರಿ !) ಈ ಸಹಜ ಪ್ರಕ್ರಿಯೆಯನ್ನು ಅಚ್ಚರಿ-ವಿಸ್ಮಯ ಎಂದೆಲ್ಲಾ ಸಾರಿ.. ನಂಬುವ ಜನರನ್ನು ಇನ್ನಷ್ಟು ಮೌಢ್ಯಕ್ಕೆ ತಳ್ಳುವ ಅವಶ್ಯಕತೆಯಿದೆಯೇ ?? ಜಗತ್ತನ್ನೇ ಬೆಳಗುತ್ತಿರುವ ಸೂರ್ಯನ ಕಿರಣಗಳು ಎಲ್ಲೆಡೆಯೂ ಪಸರಿಸಲೇಬೇಕಲ್ಲವೇ ? ಆದರೂ ಇದಕ್ಕೆಲ್ಲಾ ಇನ್ನೊಂದು ಮಹತ್ತರವಾದ ಮತ್ತು ಅತ್ಯಂತ ಪ್ರಮುಖವಾದ ಕಾರಣವೊಂದಿದೆ....ಅದೇನು ಗೊತ್ತೆ.........???
???
???

???

" ಭೂಮಿ ತಿರುಗುತ್ತಿದೆ........ಅದೂsss ತನ್ನ ಕ್ಷಿತಿಜದಲ್ಲಿ....ಅತ್ಯಂತ ನಿಖರವಾಗಿ....!!! " ( ಭೂಮಿಯ ನಿಖರ ಚಲನೆಯಿಂದಲೇ ಅಲ್ಲವೇ ಹಗಲು, ರಾತ್ರಿ, ಸಂಕ್ರಮಣ, ಗ್ರಹಣ....ಎಲ್ಲವೂ..!!ಸೂರ್ಯ ಚಲಿಸುವುದಿಲ್ಲ...ಚಲಿಸುವುದು ಭೂಮಿ ಮಾತ್ರ...: ಇದನ್ನೇ ಆಧಾರವಾಗಿಟ್ಟುಕೊಂಡು ಮತ್ತೊಮ್ಮೆ ಲೇಖನವನ್ನು ಓದಿ ನೋಡಿ..... :)
.................................................................................................................................................................................................................

ಖೊನೆ ಖಿಡಿ :

ಸಂಬು : ಯಾಕ್ಲಾ ಲಿಂಗ ಬರೀ ಪುಟುಗೋಸಿಲಿ ಕುಂತೀಯಾ ?
ಲಿಂಗ : ಆ ದೊಡ್ ಮನ್ಸ್ರೆಲ್ಲಾ ಶೆಖೆ ಕಮ್ಮಿ ಮಾಡವಾ ಅಂತ ಸೂಟು-ಬೂಟು ಆಕ್ಯಂಡು ಅದೆಲ್ಲೊ ಸೇರಿದ್ದ್ರಂತಲ್ಲಾ......ಅದ್ಕೆಯಾ ..ನಾನ್ ಇಷ್ಟಾದ್ರೂ ಮಾಡನಾ ಅಂತ !!
( ಜಾಗತಿಕ ತಾಪಮಾನದ ಬಿಸಿ ಶಂಭುಲಿಂಗರಿಗೆ ತಟ್ಟಿದ್ದ ಪರಿ ಇದು !!)

Jan 9, 2010

ಮಂಗಳಾರತಿ ಮತ್ತು ತೀರ್ಥ....



ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ.....

ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು ? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ...


ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್ಥವೇ ಅಲ್ಲ!) ನಂತರ ಅಭಿಷೇಕ ಹಾಗೂ ಮಂಗಳಾರತಿ ಸಮಯಗಳಲ್ಲಿ ಜೋರಾಗಿ ಘಂಟಾನಾದವನ್ನು ಮಾಡಲಾಗುತಿರುತ್ತದೆ. ಆ ನಾದದ ಮಾರ್ದನಿಯೊಂದಿಗೆ ಅದರಿಂದ ’ಅಯಾನಿಕ್’ ತರಂಗಗಳೂ ( Ionic waves ) ಸಹ ಉತ್ಪತ್ತಿಯಾಗುತ್ತದೆ. ಇಂತಹ ಅಯಾನ್ ಗಳು ಗರ್ಭಾಂಗಣದ ತುಂಬೆಲ್ಲಾ ಪ್ರವೇಶಿಸಿ ಹಿಡಿದಿಟ್ಟ ತೀರ್ಥದಲ್ಲೂ ವಿಲೀನವಾಗುತ್ತವೆ. "ಅಯಾನ್" ಗಳಿಗೆ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವ ಶಕ್ತಿಯು ಇದ್ದು ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಸತ್ವಗಳನ್ನು ಒದಗಿಸುತ್ತದೆ. ಇಂತಹ ಅಯಾನ್ ಯುಕ್ತ ಅಥವಾ ಖನಿಜಯುಕ್ತ ತೀರ್ಥಕ್ಕೆ ಅಂತಿಮವಾಗಿ ತುಳಸಿಯನ್ನು ಸೇರಿಸಲಾಗುತ್ತದೆ. ತುಳಸಿಗೆ ಆಯುರ್ವೇದದಲ್ಲಿ ಎಂತಹ ಪ್ರಮುಖ ಸ್ಥಾನವಿದೆ ಎಂಬುದು ತಿಳಿದಿರುವ ವಿಚಾರವೇ. ಇವುಗಳೆಲ್ಲದರಿಂದ ಕೂಡಿದ ಜಲ ಕೇವಲ ಜಲವಾಗದೇ ಔಷಧೀಯ ಗುಣಗಳುಳ್ಳ ತೀರ್ಥವಾಗುತ್ತದೆ. (ಇನ್ನು ಪಚ್ಚಕರ್ಪೂರ, ಕೇಸರಿ ಮುಂತಾದವುಗಳನ್ನು ತೀರ್ಥಕ್ಕೆ ಬೆರೆಸುತ್ತಾರೆ. ಅದೇನು ಅಷ್ಟು ಉಚಿತವಲ್ಲ. ಇಂದು ಉತ್ತಮ ಪಚ್ಚಕರ್ಪೂರ, ಕೇಸರಿ ದೊರೆಯುವುದೇ ದುರ್ಲಭವಾಗಿದೆಯಲ್ಲಾ!).
ಇನ್ನು ಮಂಗಳಾರತಿಯ ವಿಷಯಕ್ಕೆ ಬಂದರೆ ತುಪ್ಪದಲ್ಲಿ ಅದ್ದಿದ(ನೆನೆಸಿದ) ಹತ್ತಿಯಿಂದ ಮಾಡಿದ
( ನಿರ್ಧಿಷ್ಟವಾಗಿ ಹೇಳಿದ್ದೇನೆ....ಗಮನಿಸಿ... ’ಕರ್ಪೂರ’ ಇಂದು ಇಂಗಾಲ ಮತ್ತು ವ್ಯಾಕ್ಸ್ ಮಯವಾಗಿಹೋಗಿದೆ.) ಬತ್ತಿಯನ್ನು ಹಚ್ಚಿ ಬೆಳಗುವುದರಿಂದ...... ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ. ಈ ರೀತಿ ಶುಧ್ದ ಅಂಗೈನಿಂದ ಮೇಲೆ ಹೇಳಿದ ತೀರ್ಥವನ್ನು ತೆಗೆದುಕೊಂಡು ಕುಡಿದರೆ ನಮ್ಮ ದೇಹಕ್ಕೆ ಆರೋಗ್ಯ ಲಭಿಸುತ್ತದೆಯಲ್ಲವೆ!!? ಇನ್ನು ಮೂರು ಬಾರಿ ತೆಗೆದುಕೊಳ್ಳುವುದು ಒಂದು ಬಾರಿ ತೆಗೆದುಕೊಳ್ಳುವುದೆಲ್ಲಾ ಶಾಸ್ತ್ರಾಧಾರಿತ ವಿಚಾರ. ’ಅಕಾಲ ಮೃತ್ಯುಹರಣಂ’ ಎಂಬ ಸೂಕ್ತ ಹೇಳಿ ತೆಗೆದುಕೊಳ್ಳಲೂ ಬಹುದು. ಸೂಕ್ತ ಹೇಳಿದಾಕ್ಷಣ ಅಕಾಲ ಮೃತ್ಯು ಪರಿಹಾರವಾಗುತ್ತದೆಯೆ? ಆತ್ಮಶುಧ್ದಿಯಿರಬೇಕಷ್ಟೆ !! . ಆದ್ದರಿಂದ ಮೊದಲು ಆರತಿ ನಂತರ ತೀರ್ಥ ಸರಿಯಾದ ಕ್ರಮ. ಇಂದಿನ ದೇವಾಲಯಗಳು ಹೈಟೆಕ್ ( ಟೈಲ್ಸ್, ಎಗ್ಸಾಸ್ಟ್ ಫ಼್ಯಾನ್ , ಇತ್ಯಾದಿ ..!) ವ್ಯವಸ್ಥೆಗಳನ್ನು ಹೊಂದಿರುವುದರಿಂದ ಮೇಲಿನ ಪಾವಿತ್ರ್ಯತೆಯನ್ನು ನೀರಿಕ್ಷಿಸಿವುದು ತಪ್ಪಾಗಬಹುದು....

..................................................................................................................................
ವಂದನೆಗಳೊಂದಿಗೆ

Jan 4, 2010

ಪದಾಭಾಸಗಳು

ಕನ್ನಡದಲ್ಲಿ ಪದಾಭಾಸಗಳು ನಿಚ್ಚಳ ಮತ್ತು ಹೆಚ್ಚಳವಾಗಿಯೇ ಇವೆ. ’ಹೋಗು’ ವಿಗೆ ’ಓಗು’ , ’ಹೊಡೆ’ ಗೆ ’ವಡೆ’, ’ಭಾಷೆ’ಗೆ ’ಭಾಸೆ’ ಹೀಗೆ(ಈಗೆ!) ಹಲವಾರು ಆಭಾಸಗಳು ನುಸುಳುತ್ತಲೇ ಇರುತ್ತವೆ. ಈಗ ಕೆಲವು ಊರುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ.

೧. ಮುರುಡೇಶ್ವರ:- ಕರಾವಳಿಯ ಪ್ರಭಾವಳಿಯಂತಿರುವ ಈ ಶಿವಕ್ಷೇತ್ರವನ್ನು ಬಲ್ಲದವರ‍್ಯಾರು. ಆದರೆ ’ಮುರುಡೇಶ್ವರ’ ಎಂಬುದಕ್ಕೆ ಕನ್ನಡದಲ್ಲಿ ಸ್ಪಷ್ಟ ಅರ್ಥವಿಲ್ಲ. ಮುರುಡ+ಈಶ್ವರ ದಲ್ಲಿ ’ಈಶ್ವರ’ ಸರಿಯಾದರೂ "ಮುರುಡ" ಆಭಾಸದಿಂದ ಕೂಡಿದೆ. ಇದರ ಸ್ಪಷ್ಟ ಹೆಸರು "ಮೃಡೇಶ್ವರ". ’ಮೃಡ’ ಎಂದರೆ ಶಿವ, ’ಈಶ್ವರ’ ಎಂದರೆ ಪರಮ(ಉಚ್ಛ). ಹೀಗಾಗಿ ಮೃಡೇಶ್ವರ ಅತ್ಯಂತ ಸೂಕ್ತ ಪದ. ಮೃಡೇಶ್ವರ ಕ್ಷೇತ್ರದಲ್ಲೂ ಸಹ ದೇವಾಲಯದಲ್ಲಿ ಇದೇ ಪದ ಬಳಸಿದ್ದಾರೆ. ಪುರಾಣಗಳೂ ಮೃಡೇಶ್ವರ ಎಂದೇ ಹೇಳುತ್ತವೆ.


೨. ಬೀದರ್ :- ’ಬಿದರಿ’ ಕಲೆಗೆ ಪ್ರಸಿದ್ದಿಯಾದ ಈ ಊರು ’ಬಿದರಿ’ ಎಂದೇ ಕರೆಯಲ್ಪಡುತ್ತಿತ್ತು. ನಂತರ ಆಭಾಸವಾಗಿ ’ಬೀದರ’ ಅಥವಾ ’ಬೀದರ್’ ಆಗಿದೆ. ಹಾಗೆಯೇ ’ಬೆಂಗಳೂರು’, ’ಮೈಸೂರು’ ಇತ್ಯಾದಿಗಳು ಪದಾಭಾಸದಿಂದ ಮೂಲಾರ್ಥವನ್ನೇ ಕಳೆದುಕೊಂಡು ಇಂದು ಅರ್ಥವೇ ಇಲ್ಲವಾಗಿಸಿ ಕೊಂಡಿವೆ. ಹೀಗೇ ಹುಡುಕುತ್ತಾ ಹೋದರೆ ಅರ್ಥವೇ ಇಲ್ಲದ ಸಾಕಷ್ಟು ಊರುಗಳು ದೊರೆಯುತ್ತವೆ.

ಹಾಗೆಯೇ ಕೆಲವೊಂದು ಪದಗಳು ಆಭಾಸವಾಗಿ ಕಂಡರೂ ಅವು ದೊಡ್ಡ ಅರ್ಥವನ್ನೇ ನೀಡುತ್ತಿರುತ್ತವೆ.
ಉದಾಹರಣೆಗೆ....

ಬಹಳ ವರ್ಷಗಳ ಹಿಂದೆ ಮುಂಬೈನಲ್ಲಿ ಬಹು ಮಹಡಿ ಕಟ್ಟಡವೊಂದು ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದು ಸುಮಾರು ೫೬ ಬಾಲಕಾರ್ಮಿಕರು ಮೃತಪಟ್ಟರು. ಆಗ ಪ್ರಖ್ಯಾತ ಆಂಗ್ಲ ದಿನ ಪತ್ರಿಕೆಯೊಂದು ಪ್ರಕಟಿಸಿದ ಹೆಡ್ ಲೈನ್ ಹೀಗಿತ್ತು.
"Sons of toil under tons of soil" (ಶ್ರಮಪಡುವ ಮಕ್ಕಳು ಮಣ್ಣಿನ ಕೆಳಗೆ!)

ಹಾಗೆಯೇ ಸನ್ಮಾನ್ಯ ವೈಎನ್ಕೆ ಯವರ ಪದಪುಂಜವೊಂದನ್ನು ಓದಿರಿ

Mary rose
sat on a pin
Mary rose !

ಇದರರ್ಥ ತಕ್ಷಣಕ್ಕೆ ಹೊಳೆಯಬಲ್ಲುದೆ ? ಒಂದು ಕ್ಲೂ ಕೊಡುತ್ತೇನೆ...’ಮೇರಿರೋಸ್’ ಹುಡುಗಿಯ ಹೆಸರು. ಉತ್ತರ ತಮಗೆ ಗೊತ್ತಿದೆ ಎಂದು ನಂಬುತ್ತೇನೆ..!!
ಉತ್ತರವನ್ನು ದಯಮಾಡಿ ಪ್ರತಿಕ್ರಯಿಸಿ.
ಹೀಗೆ ಕೆಲವೊಂದು ಪದಗಳು ಆಭಾಸಕ್ಕೀಡುಮಾಡಿದರೆ ಕೆಲವೊಂದು ಪದಗಳು ವಿಶಾಲ ಆರ್ಥವನ್ನು ಕೊಡುತ್ತವೆ.
ವಂದನೆಗಳೊಂದಿಗೆ......