Jan 12, 2011

ಶಂಭುವಾಣಿ - ೧

ಎಲ್ಲ ಬಲ್ಲವರು ಇಲ್ಲಿಹರು ...
.................................
 ಎಲ್ಲವನ್ನೂ ಬಲ್ಲವರು ಎಲ್ಲೂ ಇರಲು ಸಾಧ್ಯವಿಲ್ಲ ಎಂಬುದು (ಸರ್ವಜ್ಞನನ್ನು ಹೊರತುಪಡಿಸಿ) ಸಾರ್ವತ್ರಿಕ ಸತ್ಯವಾದರೂ ’ನಿಂದೆಲ್ಲಾ ಗೊತ್ತು ಕುಂತ್ಕಳಯ್ಯಾ’ ಎಂದು ರೇವಣ್ಣೋರು ಹೇಳಿದ್ದರಲ್ಲಾಗಲೀ, ’ಬಹಿರಂಗ ಚರ್ಚೆಗೆ ಬಾರಯ್ಯಾ, ನಿನ್ ಬಂಡ್ವಾಳ ನಂಗೂ ಗೊತ್ತು" ಎಂದು ಮುಖ್ಯಮಂತ್ರಿಗಳು ಹೇಳಿದ್ದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲವೆಂದು ಯಾರಾದರೂ ಹೇಳಲು ಸಾಧ್ಯವೆ ! ? . ಸದನದಲ್ಲಿ ಎಲ್ಲರ ಬಂಡ್ವಾಳವೂ ಎಲ್ಲರಿಗೂ ಗೊತ್ತಿರುತ್ತದೆ. ಅಲ್ಲಿ ಎಲ್ಲವನ್ನೂ ಬಲ್ಲವರೇ ಇರುವುದೆಂದು ಈ ಮಾತುಗಳಿಂದ ಸಾಬೀತಾಗುತ್ತದೆ.
ಇಂತಹ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಮಾನ್ಯ ಶಂಭುಲಿಂಗರು ಹೀಗೆ ಥಟ್ಟನೆ ಕವನವೊಂದನ್ನು ವಾಚಿಸಿದರಂತೆ.

                               ದನಗಳು ಹೊಕ್ಕವು
                               ಸದನ,
                               ಅಲ್ಲಿ ನೆಡೆಯಿಸಿದವು
                               ಕದನ.

ಮಾಜಿ ಮುಖ್ಯಮಂತ್ರಿಯೊಬ್ಬರು ಸದನವನ್ನು ಹೆಂಡದಂಗಡಿಗೆ ಹೋಲಿಸಿದ್ದಕ್ಕೆ ಸುಸಜ್ಜಿತ ಬಾರುಗಳೆಲ್ಲಾ ಬೇಸರಪಟ್ಟುಕೊಂಡಿರಬಹುದೆ ? . ಹೆಂಡ ಕುಡಿದು ಅವಾಚ್ಯ ಶಬ್ದಗಳನ್ನು ಉಪಯೋಗಿಸುವವರನ್ನು ’ಕುಡುಕ’ ಎಂದು ಹೇಳಿ ಸುಮ್ಮನಾಗಬಹುದು. ಕುಡಿಯದೇ, ಆಡಬಾರದ್ದನ್ನು ಆಡುವುದು ಸದನಿಗರ ಸತ್ತ ಸಂಪ್ರದಾಯವೆಂಬುದನ್ನು ಮಾನ್ಯ ಶಂಭುಲಿಂಗರು ಅನುಗ್ರಹಪೂರ್ವಕವಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಸದನದ ಘನತೆಯ ಕುರಿತಾಗಿ ಹಾಗೆಲ್ಲಾ ಹೇಳಬಹುದೆ ? , even Homer nods- (’ಐರಾವತವೂ ಅಡಿ ತಪ್ಪುತ್ತೆ ’ ಅಂತ ಕೈಲಾಸಂ ಹೇಳಿದ್ದನ್ನು ಎಲ್ಲೋ ಓದಿದ ನೆನಪಿದೆ, ಆದರೆ ಶಿರಾಡಿ ಘಾಟಿನಲ್ಲಿ ಓಡಾಡುವ ಸರ್ಕಾರಿ ಬಸ್ಸುಗಳು ಮೀಟರನ್ನೂ ತಪ್ಪಿ ಹಾರುತ್ತವೆ ಎನ್ನುವುದು ಶಂಭುವಿನ ಚೋದ್ಯ !)   ಅಂತ ವೈಯೆನ್ಕೆ ನೆನಪಿಸಿದ್ದನ್ನು ಇಲ್ಲಿ ಅನ್ವಯಿಸಿಕೊಳ್ಳೋಣವೆ ? ! . ಹೋಮರನೂ ತೂಕಡಿಸಿದನಂತೆ ( ಎಚ್ಚರ ತಪ್ಪಿದನಂತೆ) ಎಂದು ಆಶ್ಚರ್ಯಸೂಚಕವಾಗಿ ಹೇಳುವುದು ವರ್ತಮಾನಕ್ಕೆ ಸಲ್ಲುವುದಿಲ್ಲ.  ನಮ್ಮ ದೊಡ್ಡಗೌಡರು ತೂಕಡಿಸಿಕೊಂಡೇ ಪ್ರಧಾನಿಯಾದುದು (ಪ್ರಧಾನಿಯಾಗುವ ಹಿಂದಿನ ದಿನ ಭಾರೀ ಎಚ್ಚರಿಕೆಯಲ್ಲಿದ್ದರು ಎಂದು ಶಂಭುಲಿಂಗರು ಹೇಳಿದ್ದಾರೆ !) ಮತ್ತು ಸದನದ ಗಲಾಟೆಗಳ ನಡುವೆಯೂ ಗೊರಕೆ ಹೊಡೆಯುವ ನಾಯಕರನ್ನು ಕರುನಾಡು ಕಂಡದ್ದು ಇತಿಹಾಸದ ಪುಟಗಳನ್ನು ಸೇರಿಲ್ಲವೆ ?.
ಸದನದ ಮರ್ಯಾದೆಯನ್ನು ಉಳಿಸಲು ’ಉದ್ದಮ್ಮ’ನವರು ಹಾಡಿ ಕುಣಿದದ್ದು ಅತ್ಯಾಕರ್ಷಕವಾಗಿತ್ತಂತೆ...

                          ಎಲ್ಲಾ ಮಾಯವೋ ರಂಗಾ,
                          ಮಾನ-ಮರ್ಯಾದೆಗಳು,
                          ಸಿದ್ದಾಂತ-ಚಾರಿತ್ರ್ಯಗಳು,
                          ಮುಖ್ಯಮಂತ್ರಿಯೆಂಬ ಸಿಂಗನ ಮುಂದೆ ..!

ಹಾಡಿ ಕುಣಿಯುವಾಗ ಉದ್ದಮ್ಮನವರ ಸೀರೆ ಜಾರಿದ್ದನ್ನು ಮಾತ್ರ ಗೋಪ್ಯವಾಗಿಡಲಾಗಿದೆಯೆಂದು ಮಾನ್ಯ ಶಂಭುಲಿಂಗರು ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ಕದನಕ್ಕೆ ಕಾರಣವಾಗಿರುವ ಅಕ್ರಮ ಗಣಿಗಾರಿಕೆಯ ವಿಚಾರದ ಒಟ್ಟು ಮೊತ್ತವನ್ನು ’ಸಗಣಿ ಎರಚುವ ಕದನ’ ಎಂದು ವಿಶ್ಲೇಶಿಸಬಹುದಲ್ಲವೆ ?!.

ಇದರ ನಡುವೆ ಚರ್ಚೆಗೆ ಬಂದ ಮತ್ತೊಂದು ಅಂಶವೆಂದರೆ, ಮಂದಿರವೇ ಬೇಕೆಂದು ಹಠ ಹಿಡಿದಿದ್ದ ಪಕ್ಷವೊಂದರ ದೊಡ್ಡ ನಾಯಕರೆಲ್ಲಾ ಅದೊಂದು ದಿವಸ ಯಾವುದೋ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ’ಮಂದಿರಾ ಬೇಡಿ’ ಮಂದಿರಾ ಬೇಡಿ’ ಎಂದು ಕಿರುಚಾಡಿದರಂತೆ.  ಇದನ್ನು ಕಂಡಂತಹ ವಿಪಕ್ಷದ ದಡ್ಡ ನಾಯಕರೆಲ್ಲಾ ಇದೂ ಒಂದು ರಾಜಕೀಯದ ವರಸೆಯೇ ಇರಬೇಕೆಂದು ಭ್ರಮಿಸಿ "ಮಂದಿರವೇ ಬೇಕು" ಎಂದು ಠಳಾಯಿಸಿದರಂತೆ. ಪಕ್ಷಗಳ ವಿಚಾರಗಳು-ಸಿದ್ದಾಂತಗಳು ಉಲ್ಟಾ ಆಗಿದ್ದನ್ನು ಕಂಡಂತಹ ಶಂಭುಲಿಂಗರು ಬೇಸರಗೊಂಡು , ಸಮಾರಂಭದಲ್ಲಿ ’ಮಂದೀರಾ ಬೇಡಿ’ ಎಂಬ ಐವತ್ತರ ನವತರುಣಿಯೊಬ್ಬಳು ಬಿಜಯಂಗೈದಿದ್ದನ್ನು ಸ್ಪಷ್ಟಪಡಿಸುವಷ್ಟರಲ್ಲಿ  ಮದಿರೆಯ ನಶೆ ಮಂದಿರವನ್ನು ಮರೆಸಿತ್ತಂತೆ !.

ಸದನದಲ್ಲಿ ಅತ್ಯಪೂರ್ವ ಕದನವನ್ನು ಕಂಡಂತಹ ದನಗಳೆಲ್ಲಾ ಬಾಲವನ್ನೆತ್ತಿಕೊಂಡು ಹೀಗೆ ಹಾಡಿದುವಂತೆ..

ಬನ್ನಿ ಬಂಧುಗಳೆ
ಬನ್ನಿ ನಮ್ಮೆಡೆಗೆ
ಹಿಂಡಿ-ಬೂಸವನು ತಿನ್ನಲು,
ಅವರಿವರ ಮನೆಯ
ಕೊಳೆತ ತರಕಾರಿಗಳ
ಕಲಗಚ್ಚು ಕುಡಿಯಲು

ನಾವು ನೀಡುವೆವು
ಶುದ್ಧ ಹಾಲನು,
ನೀವು ನೀಡಿರಿ
ಆಲ್ಕೋಹಾಲನು !ಪುಲಿಗೆರೆಯ ಸೋಮನಾಥರ ಸೋಮೇಶ್ವರ ಶತಕದ ವರ್ಣನೆಯಂತೆ ನಮ್ಮ ನಾಯಕರನ್ನು ಯಾರದರೂ ಬದಲಾಯಿಸಲು ಸಾಧ್ಯವೆ ?

 "ಬಡಿಗೋಲಂ ಸಮಮಾಡಲಕ್ಕು ಮರೆಯೊಳ್ ಕೂಪಂಗಳಂ ತೋಡಲ
  ಕ್ಕಿಡಿಮಕ್ಕಂ ಮೃದುಮಾಡಲಕ್ಕು ಮಳಲೊಳ್ ತೈಲಂಗಳಂ ಹಿಂಡಲ |
  ಲಕ್ಕಡವೀ ಸಿಂಗವ ತಿದ್ದಲಕ್ಕು ಕರೆಯಲ್ ಬಕ್ಕುಗ್ರದ ವ್ಯಾಘ್ರಮಂ
  ಕಡು ಮೂರ್ಖಂ ಹಿತಕೇಳ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || "

 ಎಂದು ಸುಮ್ಮನಾಗಬಹುದಷ್ಟೆ !.


..........................*........................

ಕಿಡಿ :

 ಮಹನೀಯರೊಬ್ಬರು, ಬ್ಲಾಗು ಬರಹಗಳನ್ನು ಹೂಸಿನ ವಾಸನೆಗೆ ಹೋಲಿಸಿದ್ದಕ್ಕೆ ಮಾನ್ಯ ಶಂಭುಲಿಂಗರು ಅನುಕಂಪ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಹೂಸುಗಳೂ ವಾಸನೆ ಬರುವುದಿಲ್ಲವೆಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
"ಡರ್ ಬುರ್ ಮಹಾಪುಣ್ಯಂ, ಟುಸ್ ಪುಸ್ ಮಹಾಪಾಪಂ’ ಎಂಬ ಹಳೆಯ ತುಂಡು ವಕ್ರೋಕ್ತಿಯನ್ನು ಮತ್ತೆ-ಮತ್ತೆ ನೆನಪಿಸಿದ್ದಾರೆ.
"ಬೆಳ್ಳಗಿರುವುದೆಲ್ಲಾ ಹಾಲಲ್ಲ" ಎಂಬ ಗಾದೆಯಿರುವಂತೆ " ಬಿಟ್ಟ ಹೂಸುಗಳೆಲ್ಲಾ ದುರ್ನಾತ ಬೀರುವುದಿಲ್ಲ" ಎಂಬ ಗಾದೆಯನ್ನು ಶಂಭುಲಿಂಗರು ಗಾಳಿಯಲ್ಲಿ ತೇಲಿಬಿಟ್ಟಿದ್ದಾರೆ !.


....................*.......................

ವಂದನೆಗಳೊಂದಿಗೆ....