ಈ ಚಿತ್ರದಲ್ಲಿರುವ ಪತ್ರಿಕಾ ವರದಿಯಂತೆ ಈ ಮಹಿಳೆಯು ಮದ್ಯಪಾನ ಮಾಡಿ ತನ್ನ ’ಹೋಂಡಾ c.v.r. ಕಾರು ಚಲಾಯಿಸಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣಳಾಗಿದ್ದಾಳೆ. ಈ ಘಟನೆ ನೆಡೆದಿರುವುದು ’ಮುಂಬೈ’ ನಲ್ಲಿ. ಮಹಾರಾಷ್ಟ್ರದ ಜನನಾಯಕರೊಬ್ಬರು ಹೇಳಿದಂತೆ ಇಂತಹ ಘಟನೆಗಳು ’ಮಾಯಾನಗರಿ’ ಯಲ್ಲಿ ಸರ್ವೇ ಸಾಮಾನ್ಯ ಸಂಗತಿ !. ಈ ಮಹಿಳೆ ಸರಿರಾತ್ರಿ ೧ ಘಂಟೆಯ ತನಕ ಪಾರ್ಟಿಯಲ್ಲಿದ್ದು ಚೆನ್ನಾಗಿ ’ಬಾರಿ’ಸಿ ಅದೇ ಅಮಲಿನಲ್ಲಿ ಕಾರು ಚಲಾಯಿಸಿದ್ದಾಳೆ. ಅಷ್ಟೇ ಸಾಲದು ಎಂದು ಕಾರಿನಲ್ಲೂ ಮದ್ಯ ಸೇವಿಸುತ್ತಾ ಜೊತೆಗೆ ’ಸೈಡ್ಸ್’ ಗಳನ್ನೂ ಮೆಲ್ಲುತ್ತಾ ’ ಜೋಷ್’ ನಲ್ಲಿ ಕಾರ್ ಚಲಾಯಿಸುವಾಗ ಕರ್ತವ್ಯನಿರತರಾಗಿದ್ದ ಪೋಲೀಸ್ ಅಧಿಕಾರಿಯ ಮೇಲೇ ಚಲಾಯಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟಕ್ಕೇ ಮುಗಿಸದೇ ಇನ್ನೂ ಮುಂದೆ ಹೋಗಿ ಬೈಕ್ ಸವಾರರೊಬ್ಬರಿಗೆ ಗುದ್ದಿ ಅವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸದ್ಯಕ್ಕೆ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಹಿಳೆ ಮದ್ಯಪಾನಿಸುವುದರ ಪ್ರತಿ ನನ್ನ ತಕರಾರೇನಿಲ್ಲ. ಅದು ಆಕೆಯ ವೈಯಕ್ತಿಕ ವಿಚಾರ. ’ಪರಮಾತ್ಮ’ ಆಡಿಸದಂತೆ ಆಡಲಿ !. ಕುಡಿಯಲಿ...ಕುಡಿದು ಹಾಳಾಗಲಿ..! ಅಮಾಯಕರ ಜೀವವನ್ನೇಕೆ ಬಲಿ ಪಡೆಯಬೇಕು ?. ಈ ಘಟನೆ ಹಣದ ಮದದಲ್ಲಿ ತೇಲಾಡುವ ಇಂತಹ ’ದೊಡ್ಡ’ ಮನುಷ್ಯರ ’Corporate' ದೊರೆಗಳ ಆಂತರಿಕ - ಮಾನಸಿಕ ವ್ಯಸನಗಳನ್ನು ಬಯಲುಮಾಡುತ್ತದೆ. ಸರಿರಾತ್ರಿಯ ತನಕವೂ ’ಬಾರ್’ ಲೈವ್ ಬ್ಯಾಂಡ್’ ’ಡಿಸ್ಕೋಥೆಕ್’ ಗಳನ್ನು ತೆರೆದಿಡುವಂತೆ ಪೋಷಿಸುವವರಿಗೂ ಅಂಕುಶದ ಅಗತ್ಯವಿದೆ. ಇನ್ನು ಸಾವಿಗೀಡಾದ ವ್ಯಕ್ತಿಗಳ ಮಕ್ಕಳು-ಸಂಸಾರದ ಪಾಡೇನು ? ಸರ್ಕಾರ ಆ ಕುಟುಂಬದವರಿಗೆ ಒಂದಷ್ಟು ’ಪರಿಹಾರ’ ನೀಡಿ ಕೈತೊಳೆದುಕೊಳ್ಳಬಹುದು. ಜೀವವನ್ನು ಕೊಡಲಾದೀತೆ..?? ವ್ಯವಸ್ಥೆಯ ದುರಂತವೆಂದರೆ ಸದ್ಯದಲ್ಲೇ ತನ್ನ ’ಪ್ರಭಾವ’ ದಿಂದ ಈಕೆಯೂ ಜಾಮೀನು ಪಡೆದುಕೊಂಡು ಬಂಧನದಿಂದ ಹೊರಬಂದು ನಿರ್ದೋಶಿಯೂ ಆಗಿಬಿಡಬಹುದು. ಮಹಿಳೆಯರ ಹಕ್ಕುಗಳ, ಸ್ವಾತಂತ್ರ್ಯದ ಪರ ಹೋರಾಡುವ ಮಹಿಳಾ ಸಂಘಟನೆಗಳು ಸಮಾಜದ ಸ್ವಾಸ್ತ್ಯವನ್ನು ಕೆಡಿಸುವ ಇಂತಹವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬಹುದಲ್ಲವೆ....??? ಇದನ್ನೂ ಸಹ ಮಹಿಳೆಯರ ಸಂಸ್ಕೃತಿ-ಸಂಸ್ಕಾರದ ಮೇಲಾಗುತ್ತಿರುವ ದೌರ್ಜನ್ಯ ( ಪುರುಷರು ಮಾತ್ರ ದೌರ್ಜನ್ಯದ ಪ್ರವರ್ತಕರೇ ?? ) ಎಂದು ಪರಿಗಣಿಸಿ ಹೋರಾಟ ನೆಡೆಸಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬಹುದಲ್ಲವೇ..! ಕೆಲವೇ ಕೆಲವು ಮಹಿಳೆಯರು ಮಾಡುವ ಇಂತಹ ಕೃತ್ಯಗಳು ಮುಂದಿನ (ತನ್ನದೇ !!) ಪೀಳಿಗೆಯ ಮೇಲೆ ಪ್ರಭಾವ ಬೀರಲಾರದೇ.? ಇದಕ್ಕೆಲ್ಲಾ ಸರ್ಕಾರ-ಕಾನೂನನ್ನು ದೂಷಿಸುವುದು ಕಾಟಾಚಾರವಾಗುತ್ತದೆಯಷ್ಟೆ. ಮನುಷ್ಯ ತನ್ನ ಆಂತರಿಕ ಸ್ವಾಸ್ತ್ಯವನ್ನು ಕಳೆದುಕೊಂಡಾಗಲೇ ಇಂತಹ ಘಟನೆಗಳು ನೆಡೆಯುವುದು. ...........ವರ್ಷದ ಹಿಂದೆ ಬೆಂಗಳೂರಿನಲ್ಲಿ ಆಪ್ತರೊಬ್ಬರ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ೧೨.೩೦ ರ ಸಮಯದಲ್ಲಿ ವಾಪಸಾಗುತ್ತಿದ್ದ ನಮಗೆ (ನನ್ನ ಸ್ನೇಹಿತ) ಅಡ್ಡಬಂದ ನಾಲ್ಚರು ಹುಡುಗಿಯರನ್ನು ಪಕ್ಕಕ್ಕೆ ಸರಿಸಿ ಹೊರಡುವಷ್ಟರಲ್ಲಿ ಸಾಕುಸಾಕಾಗಿತ್ತು ! ನಾಲ್ವರೂ ಕಂಠಪೂರ್ತಿ ಕುಡಿದು ಓಲಾಡುತ್ತಿದ್ದರು. ಇವರೂ ’Corporate' ಸಮಾಜದ ಕುಡಿಗಳೇ.......
" ನಾವೇ ಹಾಳಾಗಿ ಹೋಗಿರುವೆವು..ಪ್ರಪಂಚ ಹಾಳಾಗಿದೆ ಎಂದು ಭಾವಿಸುವೆವು" ಎನ್ನುವ ವಿವೇಕಾನಂದರ ನುಡಿ ಎಷ್ಟು ಪ್ರಸ್ತುತ ಅಲ್ಲವೇ...
ಖೊನೆ ಖಿಡಿ :
ಶಂಭು : ಸಾರಾಯಿ ನಿಲ್ಸುದ್ಮೇಲೆ ಈ ರಮ್ಮು, ಇಸ್ಕಿ, ಬ್ರಾಂಡಿ ಇವೆಲ್ಲಾ ಕಿಕ್ಕೇ ಕೊಡಲ್ಲಾ ಕಣ್ಳಾ....
ಲಿಂಗ : ಅದ್ಕೇನ್ ಮಾಡವಾ ಅಂತ್ಯಾ...?
ಶಂಭು : ಕಳ್ಳಭಟ್ಟಿ ತಯಾರ್ ಮಾಡವಾ ...ಏನಂತ್ಯಾ...!!!
ವಂದನೆಗಳೊಂದಿಗೆ.....