Aug 12, 2013

ಪಾಠ

ಗೆಳೆಯಾ,
ಆತುರವು ಬೇಡ !
ಮೋಹಮಾಯೆಗಳ ಸಂಕೀರ್ಣ ಸೆಳಹಿನಲಿ
ಬದುಕನರಸುವ ಗೊಂದಲದ ಮೀನು
ನೀನಾಗಬೇಡ.

ಜೋಡಿ ಜೀವನದಲ್ಲಿ
ಗೆಳೆತನದ ಬಂಧವಿದೆ
ಎಳೆತನದ ಅಂದವಿದೆ
ಅಪ್ಪಿ ಮುದ್ದಾಡುವ ಸಂಬಂಧವಿದೆ !
ಗೆಳೆಯಾ,
ಆತುರವು ಬೇಡ

ಹಗುರಾಗಿ ಎಣಿಸದಿರು
ಬೆರಗಾಗಿ ನೋಡದಿರು
ಇದ್ದುದನಿದ್ದಂತೆ ಗಣಿಸುತಿರು
ತಾಳಿದರೆ ಕಾಣುವುದು ರಹದಾರಿ
ನೀನಂದು ಪೂರ್ಣ ಸಂಸಾರಿ !.

ಬಗೆಬಗೆಯ ಬಣ್ಣಗಳಲ್ಲಿದೆಯೇನು ಅಂದ ?
ನಾನಂತೂ ಕಾಣೆ;
ಕಣ್ಣೊಳಗಿನ ಪಾಪೆಯೂ ಕಪ್ಪು
ನೇಸರನಂತರಂಗವೂ ಕಡುಕಪ್ಪು,
ತಿಂಗಳನ ಮಚ್ಚೆಯೂ ಕಪ್ಪು.
ಕಪ್ಪನ್ನು ಕಪ್ಪೆಂದೆಣಿಸುವುದೇ ತಪ್ಪು !.

ನಿನ್ನಾಯ್ಕೆಯಾ ಮೇಲೆ ನಂಬಿಕೆಯು ಇರಲಿ
ಅವಳಾಯ್ಕೆಯೂ ನೀನೆಂಬ ಹೆಮ್ಮೆಯೂ ಇರಲಿ
!.


[ನನಗೆ ಕವಿತೆ ಬರೆಯಲು ಬರಲ್ಲ.  ಅದರ ನಾಜೂಕು ಗೊತ್ತಿಲ್ಲ. ಸುಮ್ಮನೆ ಇಲ್ಲಿ ಬರೆದಿದ್ದೇನೆ. ನಿಮಗಿಷ್ಟವಾದರೆ ಅದೇ ಸಂತೋಷ :) ]

Jun 15, 2013

ಕೆಳದಿ /ಕೆಳದಿ ಸಂಸ್ಥಾನ


ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತುದಾಗಿಯೂ ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.೧೫೦೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು. ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ೬೦ ವರ್ಷಗಳ ಕಾಲ ಇವನ ವಂಶದವರ ರಾಜಧಾನಿಯಾಗಿ ಅನಂತರ ರಾಜಧಾನಿ ಮೊದಲು ಇದರ ಸಮೀಪದಲ್ಲಿಯೇ ಇದ್ದ ಇಕ್ಕೇರಿಗೂ ಅನಂತರ ಬಿದನೂರಿಗೂ ಬದಲಾಯಿಸಲಾಯಿತಾದರೂ ಈ ಊರು ನಾಯಕರ ಆಳ್ವಿಕೆ ಕೊನೆಗೊಳ್ಳುವವರೆಗೂ ಆ ರಾಜ್ಯದ ಒಂದು ಪ್ರಮುಖ ನಗರವಾಗಿಯೇ ಮುಂದುವರೆಯಿತು. ಆದರೆ ಅನಂತರ ಇದರ ಪ್ರಾಮುಖ್ಯತೆ ಇಳಿಮುಖವಾಗಿ ಕಡೆಗೆ ಒಂದು ಸಾಮಾನ್ಯವಾದ ಹಳ್ಳಿಯಾಗಿ ಉಳಿಯಿತು. ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ ದೇವಾಲಯಗಳೂ, ಕೆರೆ, ಮಠಗಳೂ ಅದರ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ. ಇಲ್ಲಿ ಹೊಯ್ಸಳ-ದ್ರಾವಿಡ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯ ಪ್ರಖ್ಯಾತವಾಗಿದೆ.

ಕೆಳದಿ ಸಂಸ್ಥಾನ

ಹದಿನಾರೆನೆಯ ಶತಮಾನದ ಆರಂಭದಿಂದ ಹದಿನೆಂಟನೆಯ ಶತಮಾನದ ಉತ್ತರಾರ್ಧದವರೆವಿಗೂ ಸಮೃಧ್ಧಿಯ ತಾಣವಾಗಿ ಮೆರೆದದ್ದು ಕೆಳದಿ ಸಂಸ್ಥಾನ. ಕರ್ನಾಟಕದ ಮಲೆನಾಡು ಮತ್ತು ಕರಾವಳಿಯ ಭಾಗಗಳೆರಡನ್ನೂ ತನ್ನ ಆಳ್ವಿಕೆಯಡಿಯಲ್ಲಿ ಇಟ್ಟುಕೊಂಡಿದ್ದರು ಈ ಪ್ರಾಂತ್ಯದ ಅರಸರು. ಕೆಳದಿ ಸಂಸ್ಥಾನವನ್ನು ಆಳಿದ ಅರಸರು ಮೊದಲಿಗೆವಿಜಯನಗರದ ಅರಸರು ಸಾಮಂತರಾಗಿದ್ದು ಅವರ ಪತನಾನಂತರ ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ರೂಢಿಸಿಕೊಂಡರು. ಗಂಡಭೇರುಂಡ ಇವರ ಲಾಂಛನವಾಯಿತು.

ಈ ಸಂಸ್ಥಾನದ ರಾಜಧಾನಿಗಳು ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ೮ ಕಿ.ಮೀ. ದೂರದ ಕೆಳದಿ , ೫ ಕಿ.ಮೀ. ದೂರದ ಇಕ್ಕೇರಿ , ಹೊಸನಗರ ತಾಲ್ಲೂಕಿನಲ್ಲಿರುವಬಿದನೂರು(ನಗರ) ಮತ್ತು ತೀರ್ಥಹಳ್ಳಿಗೆ ೧೫ ಕಿ.ಮೀ. ದೂರದಲ್ಲಿರುವ ಕವಲೆದುರ್ಗ.
ಆರಂಭದಲ್ಲಿ ಕೇವಲ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಎಲಗಳಲೆ, ಮೇದೂರು, ಕಲಸೆ, ಲಾತವಾಡಿ ಸೇರಿದಂತೆ ಎಂಟು ಮಾಗಣೆ(ವಿಭಾಗ) ಗಳನ್ನು ಒಳಗೊಂಡಿದ್ದ ಈ ಸಂಸ್ಥಾನವು ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಈಗಿನ ಶಿವಮೊಗ್ಗ ಜಿಲ್ಲೆಚಿಕ್ಕಮಗಳೂರು ಜಿಲ್ಲೆಹಾಸನ ಜಿಲ್ಲೆದಕ್ಷಿಣ ಕನ್ನಡ ಜಿಲ್ಲೆ ಗಳ ಬಹುಭಾಗ ಮತ್ತು ಧಾರವಾಡ ಜಿಲ್ಲೆಚಿತ್ರದುರ್ಗ ಜಿಲ್ಲೆಉತ್ತರಕನ್ನಡ ಜಿಲ್ಲೆ ಗಳ ಕೆಲವು ಭಾಗಗಳ ಪ್ರಭುತ್ವವನ್ನು ಸಾಧಿಸಿದ್ದಲ್ಲದೆ ಕೇರಳ ರಾಜ್ಯದ ಕೆಲವು ಭಾಗಗಳನ್ನೂ ಒಳಗೊಂಡಿತ್ತು.

ವಾಣಿಜ್ಯ-ಉತ್ಪನ್ನಗಳು

ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಆಡಳಿತ ಸೌಕರ್ಯಕ್ಕಾಗಿ ಹಲವು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕೆಳದಿಯ ಪ್ರಸಿದ್ಧ ಅರಸನಾದ ಶಿವಪ್ಪನಾಯಕನು ಜಾರಿಗೆ ತಂದಿದ್ದ ಕಂದಾಯ ವ್ಯವಸ್ಥೆ(ಶಿವಪ್ಪನಾಯಕನ ಶಿಸ್ತು)ಯಿಂದಾಗಿ ಕೃಷಿಕರೂ ನ್ಯಾಯವಾದ ಕಂದಾಯವನ್ನು ಸಲ್ಲಿಸುವಂತಾಗಿತ್ತು.

ಇಲ್ಲಿಯ ಪ್ರಮುಖ ಉತ್ಪನ್ನಗಳಾದ ಮೆಣಸು, ಅಡಿಕೆ, ತಂಬಾಕು, ಶ್ರೀಗಂಧ, ಏಲಕ್ಕಿ, ಜೀರಿಗೆ, ಇಂಗು, ಸಾಸಿವೆ, ತೆಂಗು, ಅರಿಸಿನ ಮುಂತಾದ ನೈಸರ್ಗಿಕ ವಸ್ತುಗಳ ಜೊತೆಗೆ ರೇಷ್ಮೆ, ಬೆಲ್ಲ, ಹತ್ತಿಯಬಟ್ಟೆ ಮುಂತಾದ ಉತ್ಪನ್ನಗಳನ್ನು ಇಲ್ಲಿನ ನಿಡಿದಾದ ಕರವಳಿಯ ಬಂದರಿನ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಬದಲಾಗಿ ಅರಬ್ಬೀ ಕುದುರೆಗಳು, ಅನೇಕ ಬೆಲೆಬಾಳುವ ವಿದೇಶಿ ಪದಾರ್ಥಗಳು ಆಮದಾಗುತ್ತಿದ್ದವು. ಇದರೊಂದಿಗೆ ಪಶ್ಚಿಮಸಮುದ್ರದ ಮೂಲಕ ವಿದೇಶಗಳಿಗೆ ಹೋಗಬೇಕಿದ್ದ ಎಲ್ಲ ಸರಕುಗಳೂ ಇಲ್ಲಿಯಸುಂಕದಕಟ್ಟೆಯ ಮೂಲಕವೇ ಹಾದು ಹೋಗಬೇಕಾಗಿದ್ದಿದ್ದರಿಂದ ಅಪಾರವಾದ ಸುಂಕವು ಸಂಗ್ರಹವಾಗುತ್ತಿತ್ತು.

ಸಾಂಸ್ಕೃತಿಕ ಅಂಶಗಳು 

ಕೆಳದಿ ಅರಸರ ಕಾಲದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂಬುಕೊಡಲಾಯಿತು. ಶಿವಮೊಗ್ಗೆಯಲ್ಲಿರುವ ಶಿವಪ್ಪನಾಯಕನ ಅರಮನೆ, ಕೆಳದಿಯ ರಾಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಬಿದನೂರು ಆಂಜನೇಯ ದೇವಾಲಯ, ಕೋಟೆಗಳು, ಗುಡ್ಡೆ ವೆಂಕಟರಮಣ ದೇವಾಲಯ, ನೀಲಕಂಠೇಶ್ವರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ, ನಗರದ ಬಳಿ ಇರುವ ದೇವಗಂಗೆ ಮುಂತಾದವು ಕೆಳದಿ ಅರಸರ ವಾಸ್ತುಶಿಲ್ಪ ಚಾತುರ್ಯವನ್ನು ಹೇಳುತ್ತವೆ.

'ಸರ್ಪಬಂಧ'ದ ಸುಂದರ ಕೆತ್ತನೆ
ಈ ಅರಸರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಯ ಕವಿ-ವಿದ್ವಾಂಸರಿಗೆ ಆಶ್ರಯವನ್ನಿತ್ತಿದ್ದರು. ಅರಸರೂ ಸಹ ಕವಿ-ವಿದ್ವಾಂಸರುಗಳಾಗಿದ್ದು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹಿರಿಯ ವೆಂಕಟಪ್ಪನಾಯಕನು ಶಿವಗೀತಾವ್ಯಾಖ್ಯಾ , ವೀರಮಾಹೇಶ್ವರ ಸುಧಾವಾರ್ಧಿ , ಹಾಗೂ ತತ್ವಾಧಿಕಾರ ನಿರ್ಣಯಂ ಎಂಬ ಮೂರು ಕೃತಿಗಳನ್ನು ಬರೆದಿದ್ದಾನೆ. ಹಿರಿಯ ಬಸವಪ್ಪನಾಯಕನು ಶಿವತತ್ವರತ್ನಾಕರ , ಸುಭಾಷಿತ ಸುರದ್ರುಮಸೂಕ್ತಿ ಸುಧಾಕರ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ಲಿಂಗಣ್ಣ ಕವಿಯ ಕೆಳದಿ ನೃಪವಿಜಯಂ , ಗಂಗಾದೇವಿಯಕೆಳದಿ ರಾಜ್ಯಾಭ್ಯುದಯಂ , ತಿರುಮಲ ಭಟ್ಟನ ಕರ್ನಾಟಕ ಶಿವಗೀತೆ , ಪರಮದೇವನ ತುರಂಗ ಭಾರತ ಮುಂತಾದವು ಈ ಕಾಲದ ಪ್ರಸಿದ್ಧ ಕೃತಿಗಳು.

ಕೆಳದಿ ನಾಯಕರ ವಂಶಾವಳಿ

ಕೆಳದಿ ಅರಸರ ಕಾಲದ ಸಾಹಿತ್ಯ ಮತ್ತು ಅಂದಿನ ಶಾಸನಗಳ ವಿಚಾರಗಳನ್ನು ಅನುಸರಿಸಿ ಕೆಳದಿ ನಾಯಕರ ಕಾಲವನ್ನು ಸಂಶೋಧಕರು ಅಂದಾಜಿಸಿದ್ದಾರೆ.

  • ಚೌಡಗೌಡ (ಸುಮಾರು ೧೫೦೦-೧೫೩೦)
ಚೌಡಪ್ಪನಾಯಕ ಎಂದೂ ಹೆಸರಾದ ಈತ ಪಳ್ಳಿಚೈಲು ಎಂಬ ಹಳ್ಳಿಯಲ್ಲಿ ರೈತ ದಂಪತಿಗಳ ಮಗನಾಗಿ ಜನಿಸುತ್ತಾನೆ. ಸ್ವಸಾಮರ್ಥ್ಯದಿಂದ ತನ್ನದೇ ಪಾಳೆಯಪಟ್ಟನ್ನು ಕಟ್ಟಿಕೊಂಡು ನಾಯಕನಾಗಿ ಬೆಳೆಯುತ್ತಾನೆ.
  • ಸದಾಶಿವ ನಾಯಕ (ಸುಮಾರು ೧೫೩೦-೧೫೬೭)
ಚೌಡಪ್ಪನಾಯಕನ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವನು ಸದಾಶಿವ ನಾಯಕ. ಕಿರಿಯವನು ಭದ್ರಪ್ಪನಾಯಕ. ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು (೧೫೬೭ ರಿಂದ೧೫೮೨)ವರುಷಗಳ ರಾಜ್ಯಭಾರ ಮಾಡುತ್ತಾರೆ.
  • ವೆಂಕಟಪ್ಪ ನಾಯಕ (೧೫೮೨-೧೬೨೯)
ಸಮರ್ಥ ಅರಸನಾಗಿದ್ದ ಈತನ ಕಾಲ್ದಲ್ಲಿ ಸಂಸ್ಥಾನವು ಸಂಪೂರ್ಣ ಸ್ವತಂತ್ರವಾಗುತ್ತದೆ. ಕೆಳದಿಯ ಮೇಲೆ ದಂಡೆತ್ತಿ ಬರುವ ಬಿಜಾಪುರದ ಸುಲ್ತಾನನನ್ನು ಸೋಲಿಸಿ ಅದರ ಸಂಕೇತವಾಗಿ ಹಾನಗಲ್ನಲ್ಲಿ ವಿಜಯಸ್ಥಂಭವನ್ನು ಸ್ಥಾಪಿಸುತ್ತಾನೆ. ಈತನ ಮೊಮ್ಮಗನಾದ ವೀರಭದ್ರ ನಾಯಕನ(೧೬೨೯-೧೬೪೫) ಕಾಲದಲ್ಲಿ ರಾಜ್ಯವು ಪದೇಪದೆ ಅನ್ಯರ ಧಾಳಿಗೆ ತುತ್ತಾಗುತ್ತದೆ. ಪೋರ್ಚುಗೀಸರು ಮತ್ತು ಆದಿಲ್ ಶಾಹಿಗಳು ಕೆಳದಿಯನ್ನು ಕಬಳಿಸಲು ಯತ್ನಿಸುತ್ತಾರೆ.
  • ಶಿವಪ್ಪನಾಯಕ (೧೬೪೫-೧೬೬೦)
ಕೆಳದಿ ಸಂಸ್ಥಾನವು ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದು ಈತನ ಕಾಲದಲ್ಲೆ. ರಾಜಧಾನಿಯಾಗಿದ್ದಬಿದನೂರುನಗರವನ್ನು ಅಭಿವೃದ್ಧಿಪಡಿಸಿ ಕೋಟೆಗಳನ್ನು ನಿರ್ಮಿಸಿದನು. ದೇಶದ ನಾನಾ ಭಾಗಳ ವ್ಯಾಪಾರಿಗಳನ್ನೂ ಕುಶಲಕರ್ಮಿಗಳನ್ನೂ ಆಕರ್ಷಿಸಿ ವ್ಯಾಪಾರ-ವಾಣಿಜ್ಯವನ್ನು ಉತ್ತಮಪಡಿಸಿದನು. ಈತನ ಆಡಳಿತ ವ್ಯವಸ್ಥೆಯು ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಯಿತು. ಪೋರ್ಚುಗೀಸರನ್ನೂ ಸೋಲಿಸಿದ ಹೆಗ್ಗಳಿಕೆ ಇವನದು. ಇವನ ನಂತರ ೧೨ ವರುಷಗಳ ಕಾಲ ಕೆಳದಿಯ ವೈಭವವು ಕೊಂಚ ಮಂಕಾಯಿತು.
  • ಎರಡನೆ ವೆಂಕಟಪ್ಪ ನಾಯಕ (೧೬೬೦-೧೬೬೧)
  • ಭದ್ರಪ್ಪ ನಾಯಕ (೧೬೬೧-೧೬೬೩)
  • ಹಿರಿಯ ಸೋಮಶೇಖರ ನಾಯಕ(೧೬೬೩-೧೬೭೧)
  • ಚೆನ್ನಮ್ಮ (೧೬೭೧-೧೬೯೭)
ಹಿರಿಯ ಸೋಮಶೇಖರ ನಾಯಕನ ಪತ್ನಿಯಾದ ಈಕೆಯು ಮಂಕಾಗಿದ್ದ ಕೆಳದಿ ಸಂಸ್ಥಾನವನ್ನು ತನ್ನ ಸಾಹಸ ಹಾಗೂ ಸಾಮರ್ಥ್ಯಗಳಿಂದ ಉತ್ತಮಗೊಳಿಸಿದಳು. ಹುಲಿಕೆರೆ ಎಂಬಲ್ಲಿ ಕೋಟೆಯನ್ನು ಕಟ್ಟಿಸಿ ಅದಕ್ಕೆ ಚೆನ್ನಗಿರಿ ಎಂದು ಹೆಸರಿಟ್ಟಳು.ಶಿವಾಜಿಯ ಮಗನಾದ ರಾಜಾರಾಮನಿಗೆ ಆಶ್ರಯವನ್ನು ನೀಡಿ ಔರಂಗಜೇಬನಂತಹ ಪ್ರಬಲನನ್ನು ಎದುರಿಸಿದ ದಿಟ್ಟೆ ಈಕೆ.
  • ಬಸವಪ್ಪನಾಯಕ (೧೬೯೨-೧೭೧೪)
  • ಇಮ್ಮಡಿ ಸೋಮಶೇಖರ ನಾಯಕ (೧೭೧೪-೧೭೩೧)
  • ಇಮ್ಮಡಿ ಬಸವಪ್ಪ ನಾಯಕ (೧೭೩೧-೧೭೫೪)
  • ವೀರಮ್ಮಾಜಿ -ಚೆನ್ನಬಸವನಾಯಕ
ಇಮ್ಮಡಿ ಬಸವಪ್ಪ ನಾಯಕನ ಕಾಲದವರೆವಿಗೂ ಉತ್ತಮವಾಗಿಯೇ ಇದ್ದ ಆಡಳಿತವು ವೀರಮ್ಮಾಜಿಯ ಕಾಲದಲ್ಲಿ ಹಿಡಿತ ತಪ್ಪಿ ಗೊಂದಲಗಳ ಗೂಡಾಗುತ್ತದೆ. ಈಕೆಯ ಮಗನಾದ ಚೆನ್ನಬಸವ ನಾಯಕ(೧೭೫೪-೧೭೫೬)ನು ಸಮರ್ಥನಾಗಿದ್ದರೂ ಸಹ ಅಧಿಕಾರವನ್ನು ಬಿಟ್ಟುಕೊಡದ ತಾಯಿ ಮತ್ತು ಆಂತರಿಕ ಹಿತಾಸಕ್ತಿಗಳ ದೆಸೆಯಿಂದ ಈತನಿಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ದೌರ್ಬಲ್ಯವನ್ನು ಅರಿಯುವ ಹೈದರಾಲಿಯು ಕೆಳದಿಯ ಮೇಲೆ ಆಕ್ರಮಣ ಮಾಡುವುದರೊಂದಿಗೆ ಸಂಸ್ಥಾನವು ಅವನತಿಯ ಹಾದಿಯನ್ನು ಹಿಡಿಯುತ್ತದೆ.

ಕೆಳದಿ ನಾಯಕರ ನಾಣ್ಯಗಳು

ಕೆಳದಿ ನಾಯಕರು ವಿಜಯನಗರದ ನಾಣ್ಯ ಪಧ್ಧತಿಯನ್ನೇ ಅನುಕರಿಸಿದ್ದಾರೆ. ನಮೂನೆ, ಚಿಹ್ನೆ ಮತ್ತು ತೂಕಗಳಲ್ಲಿ ಸಾಮ್ಯತೆಯು ಕಂಡುಬರುತ್ತದೆ. ಕೆಳದಿ ರಾಜ್ಯದ ಟಂಕಶಾಲೆಯು ಬಿದನೂರು ಮತ್ತು ಇಕ್ಕೇರಿ ಗಳಲ್ಲಿ ಇದ್ದೀತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಾಸನಗಳು ಮತ್ತು ಬರೆಹಗಳನ್ನು ಆಧರಿಸಿ ನಾಯಕರ ಕಾಲದ ನಾಣ್ಯ ಪದ್ಧತಿಯ ಕೋಷ್ಟಕವನ್ನು ಹೀಗೆ ರಚಿಸಲಾಗಿದೆ.

  • ವರಹ = ಗದ್ಯಾಣ =೫೨ ಗ್ರೈನ್ = ೨ ಹೊನ್ನು
  • ೧ ಹೊನ್ನು = ೨ ಧರಣ = ೨೬ ಗ್ರೈನ್ = ೫ ಹಣ
  • ೩/೪ ಹಣ = ಮುಪ್ಪಾಗ = ೩.೫ ಗ್ರೈನ್
  • ೧ ಹಣ =೨ ಅಡ್ಡ = ೫ ಗ್ರೈನ್
  • ೧ ಅಡ್ಡ = ೨ ಹಾಗ = ೨.೫ ಗ್ರೈನ್
  • ೧ ಹಾಗ = ೨ ಬೇಳೆ = ೧.೨೫ ಗ್ರೈನ್
  • ೧ ಹಾಗ = ೪ ವೀಸ = ೧.೨೫ ಗ್ರೈನ್
  • ೧ ವೀಸ = ೨ ಅರೆವೀಸ = ೦.೬ ಗ್ರೈನ್
  • ೧ ಹಾಗ = ೧೬ ಕಾಸು = ೧.೨೫ ಗ್ರೈನ್
  • ೧ ತಾರ = ೪ ಕಾಸು
  • ೧ ಅರೆವೀಸ = ೨ ಕಾಸು
ಕೆಳದಿ ನಾಯಕರ ಚಿನ್ನದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಪ್ರಸಿದ್ಧವಾದ ಇಕ್ಕೇರಿ ವರಹವನ್ನು ಸದಾಶಿವ ನಾಯಕನು ಅಚ್ಚುಮಾಡಿಸಿದನೆಂದು ಹೇಳಲಾಗಿದೆ. ಈ ನಮೂನೆಯ ನಾಣ್ಯದ ಒಂದು ಬದಿಯಲ್ಲಿ ಶಿವ-ಪಾರ್ವತಿಯರ ಚಿತ್ರವಿದ್ದು ಇನ್ನೊಂದು ಬದಿಯಲ್ಲಿ ಶ್ರೀ ಸದಾ/ಶಿವ ಎಂದು ನಾಗರಿ ಯಲ್ಲಿ ಬರೆಯಿಸಲಾಗಿದೆ. ಹಾಗೆಯೇ ಗಂಡಭೇರುಂಡ, ನಂದಿಯ ಚಿತ್ರಗಳೂ ನಾಣ್ಯಗಳಲ್ಲಿ ಕಂಡುಬರುತ್ತದೆ.

***( ಈ ಲೇಖನ ಕನ್ನಡ ವಿಕಿಪೀಡಿಯಕ್ಕೆ ಬರೆದಿದ್ದು. ಅದನ್ನೇ ಹೇಗಿತ್ತೋ ಹಾಗೆ ಇಲ್ಲಿ ಹಾಕಿದ್ದೇನೆ. ಬ್ಲಾಗ್ update ಮಾಡದೆ ಬಹಳ ದಿನಗಳಾಗಿತ್ತು. ಹೀಗಾದರೂ ಬ್ಲಾಗ್ ಜೀವಂತವಾಗಿರಲಿ ಎಂಬ ಆಸೆ :) . ಈ ಲೇಖನದ ಮೊದಲ ಪ್ಯಾರಾವನ್ನು ಬೇರೆ ಯಾರೋ ಬರೆದಿದ್ದಾರೆ (ಬಹುಶಃ ಎಮ್.ಜಿ. ಹರೀಶ್ ಇರಬೇಕು). ಅವರಿಗೆ ನನ್ನ ಕೃತಜ್ಞತೆಗಳು. ಮಿಕ್ಕ ಮಾಹಿತಿಗಳನ್ನು ಕಲೆಹಾಕಿ ಬರೆದಿದ್ದೇನೆ. ) *** 





Jul 3, 2012

ಏಕೆಂದರೆ....


ನನಗೂ ಅರಿವಾಗಿರಲಿಲ್ಲ. ’ವಿವೇಕ ಚೂಡಾಮಣಿ’ ಎಂಬ ಬ್ಗಾಗನ್ನು ತೆರೆದು ಬರಹಗಳನ್ನು ಹಾಕಲು ಮೊದಲಿಟ್ಟು ವರುಷವಾಗಿದೆ. ಈಗ ಇನ್ನೊಂದು ಬರಹವನ್ನು ಬ್ಲಾಗಿಗೆ ಏರಿಸಲು ಪುಟವನ್ನು ತೆರೆದಾಗಲೆ ಸಾಲು ಕಳೆದಿರುವುದು ಪತ್ತೆಯಾಗಿದ್ದು.  ನಾನೇಕೆ ’ವಿವೇಕ ಚೂಡಾಮಣಿ’ ಯಂತಹ ವೇದಾಂತದ ಮತ್ತು ಕೆಲವೇ ಕೆಲವರು ಅನುಸರಿಸಬಹುದಾದಂತಹ ವಿಚಾರವನ್ನು ಮೇಲಾಗಿಟ್ಟುಕೊಂಡು ಬರೆಯಲು ತೊಡಗಿದೆ ? ಎಂದರೆ, ಉತ್ತರವೂ ನನಗೆ ದೊರಕಿದೆ. ’ಓದುಗರ ಸಹನೆ ದೊಡ್ಡದು’ ,  ಆ ಉತ್ತರವನ್ನೂ ನಿಮಗೆ ಹೇಳಿಬಿಡುತ್ತೇನೆ. 
  ವೇದ - ವೇದಾಂತದ ಬಗೆಗಿನೆ ನನ್ನ ಆಸಕ್ತಿ ಸಹಜವಾದುದು ಮತ್ತು ಎಳವೆಯಿಂದ ಬಂದುದು. ಅದು ಒತ್ತಟ್ಟಿಗಿರಲಿ ಬಿಡಿ. ಈಗ ಮುಖ್ಯ ಕಾರಣಗಳನ್ನು ಹೇಳುತ್ತೇನೆ.
ಒಂದು ಕಾರಣ ನಿಮಗೆ ತಿಳಿದಿರಬಹುದು. ಅದನ್ನು ತಿಳಿಯಲು ನೀವು ಈ ಬರಹ ವನ್ನು ಓದಬಹುದು.  ಗುರು ಎಂದರೆ ಯಾರು ? ಸನ್ಯಾಸ ಎಂದರೆ ಏನು ? . ಇಂತಹ ಪ್ರಶ್ನೆಗಳೆಲ್ಲಾ ನನ್ನಲ್ಲಿ ಹುಟ್ಟಿದ್ದು ’ಆ’ ಬರಹದಲ್ಲಿ ಬಂದು ಹೋದ ’ಸನ್ಯಾಸಿ’ ಎಂಬ ವ್ಯಕ್ತಿಯಿಂದಲೆ. ಚೂರು-ಪಾರು ಸನ್ಯಾಸ-ವೈರಾಗ್ಯದ ಬಗೆಗೆ ತಿಳಿದಿದ್ದ ನನ್ನನ್ನು ಅದರ ಬೆನ್ನುಹತ್ತಿ ಹೋಗುವಂತೆ ಮಾಡಿದ್ದು ’ಆ’ ಘಟನೆಯೆ. ಅದಾಗಿ ಹತ್ತು-ಹನ್ನೆರೆಡು ವರುಷಗಳ ತರುವಾಯ ಅದರ ಬಗೆಗೆ ಬರೆಯಲು ಆಸಕ್ತಿಯು ಹುಟ್ಟಿ ತಕ್ಕ ಸ್ಥಳವೂ (ಬ್ಲಾಗ್) ದೊರಕಿತು. ಸ್ವೀಕರಿಸುವಂತಹ ಗೆಳೆಯರೂ ದೊರೆತರು.  ಹೀಗೆ ತಿಳಿದುಕೊಳ್ಳಲು ಹೊರಟಾಗ ಅನೇಕ ಪುಸ್ತಕಗಳು ನೆರವಿಗೆ ಬಂದುವು. ನಾನಿಲ್ಲಿ ಯಾವುದನ್ನು ಹೇಳಲಿ ?. ಒಂದನ್ನು ಹೇಳಿದರೆ ಇನ್ನೊಂದಕ್ಕೆ ಅಪಚಾರವಾದೀತು.  ಶ್ರೀ ಶಂಕರಾಚಾರ್ಯರ ’ವಿವೇಕ ಚೂಡಾಮಣಿ’ಯು ಸನ್ಯಾಸದ , ಗುರುವಿನ ಮಹತ್ವದ ಸಾರವನ್ನೆಲ್ಲಾ ತನ್ನಲ್ಲಿ ಹಿಡಿದಿಟ್ಟುಕೊಂಡಿರುವ ಪ್ರಕರಣವೆಂದು ಓದಿನ ಮೂಲಕ ಅರಿವಾದಾಗ ಅದನ್ನೇ ಇಟ್ಟುಕೊಂಡು ವಿಚಾರಮಾಡುವುದು ಒಳಿತೆನಿಸಿ ಮುಂದುವರಿದೆ. ಅನೇಕ ಮೂಲಗಳಿಂದ ವಿಚಾರಗಳನ್ನು ಹೆಕ್ಕಿತೆಗೆದು ಬರೆಯಲು ತೊಡಗಿದೆ.  ಇದಕ್ಕೆ ನನ್ನ ತಾಯಿಯೂ, ಮಡದಿಯೂ ಬೆಂಬಲವಾಗಿ ನಿಂತರು. ಉಳಿದಂತೆ ನೀವೆಲ್ಲರೂ ಮನದುಂಬಿ ಹರಸಿದ್ದೀರಿ. ನಿಮಗಾಗಿ-ನನಗಾಗಿ ಬರೆಯುವುದು ಮುಂದುವರಿಯುತ್ತದೆ.

ಎರಡನೆಯ ಕಾರಣ, ಈಗ್ಗೆ ಹನ್ನೆರೆಡು ವರುಷಗಳ ಹಿಂದೆ ನನ್ನ ತಂದೆಯವರು ದಿವಂಗತರಾದರು. ಅಂದಿನ ದಿನ ನಾನು ಕರ್ಮಭ್ರಷ್ಟನೆನಿಸಿಕೊಂಡೆ !. ಅದಕ್ಕೆ ಕಾರಣ, ಮೊದಲ ದಿನದ ಮುಂಡನ (ತಲೆ ಬೋಳಿಸಿಕೊಳ್ಳುವುದು) ಕರ್ಮವನ್ನು ನಾನು ಮಾಡಿಸಿಕೊಳ್ಳದೆ ಮುಂದಿನ ಕಾರ್ಯಗಳನ್ನು ಮಾಡಿ ಮುಗಿಸಿದ್ದು.  ಇತ್ತಗೆ ಹಳ್ಳಿಯೂ ಅಲ್ಲದೆ ಅತ್ತ ನಗರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದು ಕೇರಿಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಆಚರಣೆಗಳನ್ನು ಉಳಿಸಿಕೊಂಡು ಬಂದಿರುವ ಊರು ನನ್ನದು. ನನಗೀಗಲೂ ನಂಬಿಕೆಯಿದೆ ನಾನು ಯಾವ ತಪ್ಪನ್ನೂ ಮಾಡಿಲ್ಲವೆಂದು. ಅಂದಿನ ಸಂದರ್ಭದಲ್ಲಿ ನಾವಿದ್ದ ಸ್ಥಿತಿಯಲ್ಲಿ ಯಾವ ಕರ್ಮದ ಮರ್ಮಗಳೂ ನಮಗೆ ತೋಚಲಿಲ್ಲ ಎಂದು ಹೇಳಬಹುದು. ನಮ್ಮ ಗೋಳು ನಮ್ಮದಾಗಿತ್ತು.
ಆದರೆ, ಸುಸಜ್ಜಿತ ಕರ್ಮಿಷ್ಠರು ಸುಮ್ಮನೆ ಬಿಡುವವರೆ ? . ಚುಚ್ಚು ಮಾತುಗಳು, ಬೈಗುಳಗಳು, ವ್ಯಂಗ್ಯದ ನುಡಿಗಳು ನಮ್ಮನ್ನು ನೋಯಿಸದೇ ಬಿಡಲಿಲ್ಲ. ನೊಂದಿರುವವರನ್ನು ಕರ್ಮದ ಹೆಸರಿನಲ್ಲಿ ಇನ್ನಷ್ಟು ನೋಯಿಸುವ ಕರ್ಮಠರಿಗೆ ಏನೆಂದು ಕರೆಯುವುದು ?. ನನ್ನ ಈಗಿನ ಅರಿವಿನಂತೆ ನನಗಂದು ಕರ್ಮಗಳನ್ನು ವಿರೋಧಿಸಬೇಕೆಂಬ ಭಾವವೂ ಇರಲಿಲ್ಲ ಹಾಗೆಯೆ ಕಟ್ಟಿಕೊಳ್ಳಬೇಕೆಂಬ ಆಸಕ್ತಿಯೂ ಇರಲಿಲ್ಲ. ಅದು ಆಗ ಆಗಲಿಲ್ಲ ಎನ್ನುವುದಷ್ಟೆ ನಿಜ. ನನಗೆ ಈಗಲೂ ಕರ್ಮದ ಪ್ರತಿಯಾಗಿ ಯಾವ ವಿರೋಧವೂ ಇಲ್ಲ. ’ಚಿತ್ತಸ್ಯ ಶುಧ್ಧಯೇ ಕರ್ಮ’ ಎನ್ನುವುದನ್ನು ನಂಬಿದ್ದೇನೆ. ಆದರೆ, ಹುರುಳು-ತಿರುಳನ್ನು ತಿಳಿಯದೆ ಕರ್ಮಗಳ ಬಗೆಗೆ ಉದ್ದುದ್ದ ಭಾಷಣ ಬಿಗಿಯುವವರನ್ನೂ, ಮಂಡನಮಿಶ್ರರ ತುಂಡುಗಳೇನೋ ಎಂಬಂತೆ ಕರ್ಮಲೋಪಗಳನ್ನು ದಾಷ್ಟ್ಯದಿಂದ ಎತ್ತಾಡುವವರನ್ನು ಕಂಡಾಗ ನಗುವು ಬರುತ್ತದೆ. ಅಂತಹವರಿಗೆ ನಾನೇನೂ ಹೇಳಲು ಸಾಧ್ಯವಿಲ್ಲ. ನನ್ನ ಕರ್ಮಭ್ರಷ್ಟತೆಗೆ ಬೆಂಬಲವಾಗಿ ನಿಂತಿದ್ದು ನನ್ನ ತಾಯಿ. ಅವರನ್ನು ನಾನಿಲ್ಲಿ ನೆನೆಯಲೇಬೇಕು. ಅಂತಹ ಗಟ್ಟಿಗಿತ್ತಿಯನ್ನು ತಾಯಿಯಾಗಿ ಪಡೆದದ್ದು ನನ್ನ ಪುಣ್ಯ. ಮುಂದೊಂದು ದಿವಸ ಯಾವುದೋ (ಪುಣ್ಯ)ಕ್ಷೇತ್ರಕ್ಕೆ ಹೋಗಿ ತಲೆಬೋಳಿಸಿಕೊಂಡು ಬಂದೆ (ಮನಸ್ಸಿನ ಕೊರಗಿನ ನಿವಾರಣೆಗೆ). ಎರಡು ತಿಂಗಳಲ್ಲಿ ಕೂದಲು ಮತ್ತೆ ಹುಲುಸಾಗಿ ಬೆಳೆಯಿತು !. ಕರ್ಮದ ಬೆಂಬತ್ತಿ ಹೋದಾಗ ಆಚಾರ್ಯರ ಜ್ಞಾನ ಪಾರಮ್ಯದ ಈ ಗ್ರಂಥವು ಕರ್ಮದ ಬಗೆಗೆ ಕೆಲವು ಆಸಕ್ತಿಕರವಾದ ವಿಚಾರಗಳನ್ನು ತಿಳಿಸಿತು. ಇದೂ ಒಂದು ಕಾರಣ.

ಇತ್ತೀಚಿನ ಘಟನೆಯೊಂದನ್ನು ಹೇಳುವುದಾದರೆ, ನನಗೊಮ್ಮೆ ಶಿವನ ದೇವಾಲಯದಲ್ಲಿ ಬರುವ ಆಸ್ತಿಕರಿಗೆ ತೀರ್ಥ ಕೊಡುವ ಹೊಣೆಗಾರಿಕೆಯು ಬಿತ್ತು :-). ಹಾಗೆ ಕೊಡುತ್ತಿರುವಾಗ ಮಹನೀಯರೊಬ್ಬರು ನನ್ನನ್ನು ಹೀಗೆ ಕೇಳಿದರು " ನೀವು ಶಿವನ ದೇವಾಲಯದಲ್ಲೇಕೆ ತೀರ್ಥ ಕೊಡುತ್ತೀರಿ? ತೀರ್ಥಕ್ಕೆ ತುಳಸಿಯನ್ನೇಕೆ ಸೇರಿಸಿದ್ದೀರಿ ? ಇವೆರಡೂ ಶಿವನಿಗೆ , ಶೈವ ಸಂಪ್ರದಾಯಕ್ಕೆ ವಿರೋಧವಲ್ಲವೆ ? " ಎಂದರು. ಅವರು ಹೀಗೆ ಕೇಳಲು ಕಾರಣ ಈಚೀಚೆಗೆ (ಆರೇಳು ಸಾಲುಗಳಿಂದ) ತಮಿಳುನಾಡಿನ ಶೈವ ಮಂದಿರಗಳಲ್ಲಿ ತೀರ್ಥವನ್ನು ಕೊಡುವುದನ್ನು ನಿಲ್ಲಿಸಿದ್ದಾರೆ. ಅದಕ್ಕೆ ಬೇರೆಯದೇ ಆದ ಕಾರಣವಿದ್ದರೂ ಜನಗಳು ನಂಬಿರುವುದು ಶೈವ-ವೈಷ್ಣವರೆಂಬ ಭೇದವನ್ನು !. ಹೀಗಿದ್ದರೂ ಅವರಿಗೆ ನಾನು ನನಗೆ ತಿಳಿದಂತಹ ವಿಚಾರವನ್ನು ಹೇಳಿದೆ. ಅದನ್ನು ನೀವು ಈ ಬರಹ ದಲ್ಲಿ ಓದಬಹುದು. ಇದಲ್ಲದೆ ಇನ್ನಷ್ಟು ವಿವರಣೆಗಳನ್ನೂ ನೀಡಿದೆ. ಹಾಗೂ ಅವರ ಬುದ್ದಿ ಚುರುಕಾಗಲಿಲ್ಲ. ಕಪ್ಪೆಯು ಬಾವಿಯನ್ನು ಬಿಟ್ಟು ಬರುವುದಿಲ್ಲ ಎಂದರೆ ನಾನೇನು ಮಾಡಲು ಸಾಧ್ಯ ?. ಕಡೆಗೆ ರೇಗಿಕೊಂಡೇ ಹೇಳಿದೆ " ನಿಮ್ಮಂತಹವರನ್ನು ದೂರದ ಅಮೇಜಾನ್ ನಂತಹ ಕಗ್ಗಾಡಿನಲ್ಲಿ ಬಿಟ್ಟು ಬರಬೇಕು. ಅಲ್ಲಿ ಮಠ-ಮಂದಿರಗಳಾಗಲೀ ಮಸೀದಿ-ಇಗರ್ಜಿಗಳಾಗಲೀ ಇಲ್ಲವಂತೆ. ಶಿವ, ವಿಷ್ಣು. ಅಲ್ಲಾಹು ಕ್ರಿಸ್ತನಾದಿಯಾಗಿ ಯಾರನ್ನೂ ಅಲ್ಲಿ ಕಂಡಿಲ್ಲವಂತೆ. ಅಲ್ಲಿರುವುದು ಭಾರೀ ಅನಕೊಂಡಗಳು, ಕಂಡು ಕೇಳರಿಯದ ಮೃಗಗಳು, ದೈತ್ಯ ಮೊಸಳೆಗಳು, ಚಿತ್ರ-ವಿಚಿತ್ರವಾದ ಮರಗಳು ಮತ್ತು ಒಮ್ಮೆ ಕಾಡೊಳಗೆ ಹೊಕ್ಕರೆ ತಿರುಗಿ ಬರುತ್ತೇವೆಂಬ ನಂಬಿಕೆ ಇಲ್ಲದ ಬದುಕು . ಒಂದೆರೆಡು ತಿಂಗಳು ಅಲ್ಲಿದ್ದು ಬಂದು ಮತ್ತೆ ಇಂತಹ ಪ್ರಶ್ನೆಯನ್ನು ಕೇಳಿ " ಎಂದೆ. ಅವರು ಇನ್ನಷ್ಟು ಸಿಡುಕಿಕೊಂಡು ಮುಂದೆ ಹೋದರು :).

ಅದಿರಲಿ, ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನೇ ಗಮನಿಸೋಣ. ಅಬ್ಬಾ !, ಅದೇನ್ರೀ, ಈ ಪಾಟಿ ರಾಜಕೀಯ ಮಾಡೋ ಸ್ವಾಮೀಜಿಗಳನ್ನು ನಾನು ಕಂಡಿರಲಿಲ್ಲ ಕೇಳಿರಲಿಲ್ಲ. ’ನಮ್ಮ ಮಠಕ್ಕಿಷ್ಟು ಹಣವನ್ನು ಕಕ್ಕಿಬಿಡಬೇಕು’ ಎಂದು ಆಗ್ರಹಿಸುವ ಸ್ವಾಮೀಜಿಯೊಬ್ಬರನ್ನು ಟಿ.ವಿ. ಯಲ್ಲಿ ನೋಡಿ ದಂಗಾಗಿದ್ದೆ.  ಈಗ ಮಾಜಿಯಾಗಿರುವ ಅಂದಿನ ಮುಖ್ಯಮಂತ್ರಿಯೊಬ್ಬರನ್ನು ಆ ಸ್ಥಾನದಿಂದ ಕೆಳಗಿಳಿಸಿದರೆ ನಮ್ಮ ಮಠವೂ ಸೇರಿದಂತೆ ಇಡೀ ಸಮುದಾಯವೇ ತಿರುಗಿ ಬೀಳಲಿದೆ ಎಂದು ಧಮಕಿ ಹಾಕುವ ಸ್ವಾಮೀಜಿಯೊಬ್ಬರನ್ನು ಅದೇ ಟಿ.ವಿ. ಯಲ್ಲಿ ಕಂಡು ಕಂಗಾಲಾದೆ. ’ಇಬ್ಬಂದಿ’ ರಾಜಕೀಯ ಮಾಡುವ ಮತ್ತೊಬ್ಬರು ಹಿರಿಯ ಸ್ವಾಮಿಗಳನ್ನು ಕಂಡು ಬೇಸರಪಟ್ಟುಕೊಂಡೆ. ನಿತ್ಯವೂ ಆನಂದವನ್ನೇ ಬಯಸುವ ಮತ್ತೊಬ್ಬರನ್ನು ನೋಡಿ ಚಕಿತನಾದೆ. ಸಂಡೆ ಪ್ರಾರ್ಥನೆಗೆ ಇನ್ನೂರು ರೂಪಾಯಿಯ ಆಮಿಷವನ್ನು ತೋರಿಸಿ ಹಿಂದುಳಿದವರೆನಿಕೊಂಡಿರುವವರನ್ನು ಮತಾಂತರ ಮಾಡುತ್ತಿರುವ ಸೂಪರ್ ಗುರುಗಳನ್ನೂ ಕಣ್ಣಾರೆ ಕಂಡೆ !. ಗ್ರೇನೇಡು, ಪಿಸ್ತೂಲುಗಳನ್ನು ಧಾರ್ಮಿಕ ಕೇಂದ್ರಗಳಲ್ಲೇ ಇರಿಸಿಕೊಂಡು ದಂಧೆ ನೆಡೆಸುತ್ತಿರುವ ಅಧ್ಬುತ ಗುರುವಿನ ಬಗೆಗೂ ತಿಳಿದೆ, ಅಚ್ಚರಿಪಟ್ಟುಕೊಂಡೆ.  ಹಾಗಾದರೆ ಗುರು ಎಂದರೆ ಯಾರು? ಭಾರತೀಯ ತತ್ವ ದರ್ಶನವು ಗುರುವಿನ ಬಗೆಗೆ ಏನು ಹೇಳುತ್ತದೆ ? ಎಂಬುದನ್ನು ಅರಿಯದಿದ್ದರೆ ಏನು ಸುಖ ಹೇಳಿ ?!.  ಸಾವಿರಾರು ಸಾಲುಗಳ ಹಿಂದೆಯೇ , ದೇಶ, ದೇಶಕ್ಕೊಂದು ಧರ್ಮ, ಧರ್ಮಕ್ಕೊಂದು ಸಂಸ್ಕೃತಿ ಇರಲೆಂದು ಮಾಡಿದ್ದು ಒಂದು ಪರಿಮಿತಿಯೊಳಗೆ ಬದುಕುವ ಮಾನವ ಸಮುದಾಯವು ಶಾಂತಿ-ಸಹಬಾಳ್ವೆಯಿಂದ ಇರಲಿ, ಧರ್ಮವು ಬೆಳೆದು ಅಧರ್ಮ-ಅಜ್ಞಾನಗಳು ಅಳಿಯಲಿ ಎಂದೇ ಹೊರತು ಇದನ್ನೆಲ್ಲಾ ಬಳಸಿಕೊಂಡು ರಾಜಕೀಯ ಮಾಡಿ ಕಾಸಿಗೆ ಕಾಸು ಸೇರಿಸಿಕೊಳ್ಳಿ ಎಂದಲ್ಲ ಎನ್ನಬಹುದು. ಮಠ-ಮಂದಿರಗಳ ಹುಟ್ಟಿಗೂ ಇಂತಹುದೇ ಸದುದ್ದೇಶವು ಕಾರಣವಾಗಿದೆ. ಕಾಲನ ಆಟಕ್ಕೆ ಸಿಲುಕಿದರೂ ಒಂದು ದೇಶದ ಧರ್ಮ-ಸಂಸ್ಕೃತಿ ಉಳಿದಿದೆ ಎಂದರೆ ಅದರಲ್ಲಿ ಸತ್ಯತೆ ಇದೆ ಎಂದೇ ಅಲ್ಲವೆ ? . ಆದರೆ, ಅಂದಿನ ಧ್ಯೇಯೋದ್ದೇಶದಲ್ಲಿ ಹುಟ್ಟಿದ ಧರ್ಮ-ಸಂಸ್ಕೃತಿಯು ಇಂದು ಮಾನವನ ಸ್ವಾರ್ಥಕ್ಕೆ ಸಿಲುಕಿ ಮೂಲ ರೂಪ-ಉದ್ದೇಶಗಳನ್ನು ಕಳೆದುಕೊಂಡು ಅಂಗಡಿಯ ಮುಂದೆ ರಂಗಿನ ಸೀರೆಯುಟ್ಟು ನಿಂತಿರುವ ಪ್ರದರ್ಶನ ಬೊಂಬೆಯಾಗಿದೆ ಎಂದರೆ ಸುಳ್ಳಾಗಲಾರದು. ಮಾನವತೆಯ ಅಂತ್ಯಕ್ಕೆ ಇದು ನಾಂದಿಯಿರಬಹುದು. ಆದರೂ ನಮ್ಮ ನಿಮ್ಮಲ್ಲಿ ಉಳಿದಿರುವ ಸದುದ್ದೇಶಗಳು ದೇಶವನ್ನು ಕಾಪಾಡಬಲ್ಲುದು ಎಂಬ ಆಶಯವನ್ನು ಇಟ್ಟುಕೊಳ್ಳೋಣ. Let's have hopes !.

ಇಲ್ಲಿ ಬರೆದ ವಿಚಾರಗಳು ತೀರಾ ವೈಯಕ್ತಿಕವಾದುವುಗಳೆನಿಸಿದರೆ ಕ್ಷಮಿಸಿಬಿಡಿ.   ಇಂತಹ ಹತ್ತೆಂಟು ಅನುಭವಗಳು ’ವಿವೇಕ ಚೂಡಾಮಣಿಯನ್ನು’ ಬರೆಯಲು ಪ್ರೇರೇಪಿಸಿದೆ. ಅದರೊಟ್ಟಿಗೆ ಗ್ರಂಥದಲ್ಲಿರುವ ವೈಚಾರಿಕತೆಯೂ ನನ್ನನ್ನು ಸೆಳೆದಿದೆ.  ನಿಮ್ಮೆಲ್ಲರ ’ಸಪೋರ್ಟೂ’ ಇರುವುದರಿಂದ ನನಗೆ ಇನ್ನೆರೆಡು ಕೊಂಬೂ ಬಂದಿದೆ !.  ಇನ್ನಷ್ಟು ಚೆಂದವಾಗಿ ಬರಹಮಾಲಿಕೆಯನ್ನು ಕಟ್ಟಿಕೊಡುವ ಹೊಣೆಗಾರಿಯೂ ಹೆಚ್ಚಿದೆ. ವರುಷ ಪೂರೈಸಿಕೊಟ್ಟಿದ್ದಕ್ಕೆ  ನಿಮ್ಮೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
ಇದರೊಂದಿಗೆ ’ವಿವೇಕ ಚೂಡಾಮಣಿ’ಯ ಮುಂದಿನ ಕಂತನ್ನು ಸೇರಿಸಿದ್ದೇನೆ.

ಭಾಗ -೨೧

ಧನ್ಯವಾದಗಳು.