Dec 20, 2009

ಹೆಣ್ಣು ಭ್ರೂಣಹತ್ಯೆ ---ದಕ್ಷಿಣದಲ್ಲಿ ಕರ್ನಾಟಕ ನಂ ೧


ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದಂತೆ ಭಾರತದಲ್ಲಿ ಪಂಜಾಬ್ ರಾಜ್ಯ ಭ್ರೂಣಹತ್ಯೆಯಲ್ಲಿ ಪ್ರಥಮ ಸ್ಠಾನ ಪಡೆದಿದ್ದರೆ ದಕ್ಷಿಣದಲ್ಲಿ ಕರ್ನಾಟಕ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದೆ. ಅಂಕಿ-ಅಂಶಗಳು ಹಾಗೂ ಧಾಖಲಾತಿ ಪ್ರಕಾರ ಪಂಜಾಬ್ ಹಾಗೂ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ ೮೧ ಹಾಗೂ ೨೫ ಹೆಣ್ಣು ಭ್ರೂಣಹತ್ಯೆಗಳಾಗಿವೆಯಂತೆ !!. ಸರ್ಕಾರದ ಇಲಾಖೆಗಳು ಯಾವ ಆಧಾರದಲ್ಲಿ ಈ ಅಂಕಿ-ಅಂಶಗಳನ್ನು ಧಾಖಲಿಸಿ ಪ್ರಚುರ ಪಡಿಸುತ್ತವೆ ಎಂಬುದೇ ಗಮನಾರ್ಹ. ಆಸ್ಪತ್ರೆಗಳಲ್ಲಿ ಭ್ರೂಣಲಿಂಗಪತ್ತೆಯೇ ನಿಷಿಧ್ಧ. ಅಕ್ರಮ ಹಾಗು ಅನೈತಿಕವಾಗಿ ನೆಡೆಯುವ ಭ್ರೂಣಹತ್ಯೆಯೇ ಸರ್ಕಾರಗಳಿಗೆ ಮಾನದಂಡವಾಗಿದ್ದಲ್ಲಿ ...೧೦೯೫ ದಿನಗಳಲ್ಲಿ ಕರ್ನಾಟಕದಲ್ಲಿ ಹತ್ಯೆಯಾಗಿದ್ದು ಕೇವಲ ೨೫ ಭ್ರೂಣಗಳು ಮಾತ್ರವೆ ? ಈ ಅಂಕಿ-ಅಂಶಗಳೇ ಹಾಸ್ಯಾಸ್ಪದವೆನಿಸುತ್ತವೆ. ಇಂದಿಗೂ ಆಸ್ಪತ್ರೆಗಳಲ್ಲಿ , ಮನೆಗಳಲ್ಲಿ, ಲೇಡೀಸ್ ಹಾಸ್ಟೆಲ್ ಗಳಲ್ಲಿ ಹೆಣ್ಣು ಭ್ರೂಣಹತ್ಯೆಗಳಾಗುತ್ತಲೇ ಇವೆ. ಬೀದಿ ನಾಯಿಗಳು ಎಳೆದಾಡುವ ಭ್ರೂಣಗಳು , ಕಸದ ತೊಟ್ಟಿಯಲ್ಲಿ ಸಿಗುವ ಭ್ರೂಣಗಳು , ಇವೆಲ್ಲಾ ಅಂಕಿ-ಅಂಶಗಳಲ್ಲಿ ಸೇರ್ಪಡೆಯಾಗುವುದು ಹೇಗೆ? ಆದರೂ ಪ್ರಯೋಜನವೇನು ? ಅಂಕಿ-ಅಂಶಗಳನ್ನು ಪ್ರಕಟಿಸಿ ರಾಜ್ಯಗಳಿಗೆ ಸ್ಥಾನಗಳನ್ನು ಘೋಷಿಸಿದರೆ ಮುಗಿಯಿತು ಸರ್ಕಾರದ ಕೆಲಸ ! ಉಳಿದದ್ದು ದೇವರ ಕೆಲಸ !!.

ಭ್ರೂಣಹತ್ಯೆಗೆ ಇತ್ತೀಚಿನ ಕೆಲವು ಕಾರಣಗಳು :-
೧) ಸಮಯಾಭಾವ :- ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಮೂಡದ ಜಾಗೃತಿ ಭ್ರೂಣ ಫಲಿತವಾಗುತ್ತಲೇ ಬಂದುಬಿಡುತ್ತದೆ ಇಂದಿನ ಕೆಲವು ಮಹಾಜನರಿಗೆ. ಅದರಲ್ಲೂ ಹೆಣ್ಣು ಶಿಶುವಾದರಂತೂ ಅಮ್ಮನಿಗೆ ಬೇಡ ಎಂದೋ, ಹೆಂಡತಿಗೆ ಇಷ್ಟವಿಲ್ಲವೆಂದೋ, ಗಂಡನಿಗೆ ಪಾಲನೆ ಮಾಡಲು ಸಮಯವಿಲ್ಲವೆಂದೋ ..ಅದು ಅಲ್ಲೇ ನಿಷ್ಕ್ರ‍ಿಯವಾಗಿಬಿಡುತ್ತದೆ. ಗಂಡ ತನಗೆ ಇದೆಕ್ಕೆಲ್ಲಾ ಸಮವಿಲ್ಲವೆಂದು ಜಾರಿಕೊಂಡರೆ ಹೆಂಡತಿ me too also ಎನ್ನುತ್ತಾಳೆ. ಅಲ್ಲಿಗೆ ಅವರ ತೆವಲು ಮುಗಿದು ಮತ್ತೊಂದು ಹತ್ಯೆಯಾಗುತ್ತದೆ. !

೨) ಜ್ಯೋತಿಷ್ಯ - ನಂಬಿಕೆಗಳು :- ಜ್ಯೋತಿಷ್ಯ ಶಾಸ್ತ್ರಗಳಲ್ಲಿ- ಶ್ರುತಿಗಳಲ್ಲಿ ( ಶ್ರುತಿ-ಸ್ಮೃತಿ-ಪುರಾಣಾನಾಂ !) ಕೆಲವೊಂದು ನಕ್ಷತ್ರಗಳಲ್ಲಿ, ಸಮಯದಲ್ಲಿ ಹುಟ್ಟುವ ಮಕ್ಕಳು ಆತಂಕಗಳನ್ನು ತರುತ್ತವೆ ಎಂದು ಕೆಲವೆಡೆ ಉಲ್ಲೇಖಿಸಿರುವುದು ಸ್ಪಷ್ಟ. ಆದರೆ ಪ್ರಸಕ್ತ ಪರಿಸ್ಠಿತಿಯಲ್ಲಿ ಮಾನವೀಯ ದೃಷ್ಟಿಯಿಂದ ಜ್ಯೋತಿಷಿಗಳು ಅಂತಹ ವಿಚಾರಗಳನ್ನು ನೇರವಾಗಿ ಹೇಳುವ ಬದಲು ಪರಿಹಾರೋಪಾಯಗಳನ್ನು ತಿಳಿಸಬಹುದಲ್ಲವೆ ? ಏಕೆಂದರೆ ದೇಶದ ೯೦ ಭಾಗ ಜನರು ಬದುಕುತ್ತಿರುವುದೇ ನಂಬಿಕೆಗಳ ಅಧಾರದಲ್ಲಿ !. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ " ಅಭುಕ್ತ ಮೂಲದಲ್ಲಿ (ಮೂಲ ನಕ್ಷತ್ರ) ಜನಿಸಿದ ಶಿಶುವನ್ನು ತ್ಯಜಿಸತಕ್ಕದ್ದು " ಎಂದು ಪ್ರಖ್ಯಾತ ಹಿಂದೂ ಪಂಚಾಗವೊಂದು ( ನೋಡಿ : ಯಾವುದೇ ಸಂವತ್ಸರದ ಒಂಟಿಕೊಪ್ಪಲ್ ಮೈಸೂರು ಪಂಚಾಂಗ - ಮೂಲಾ ನಕ್ಷತ್ರ ಜನನ ವಿಚಾರ) ಮುದ್ರಿಸಿ ಪ್ರಚುರ ಪಡಿಸುತ್ತದೆ. ನಂಬುವವರ ಪಾಡೇನಾಗಬೇಕು ಹೇಳಿ ?! ಇತ್ತೀಚಿನ ದಿನಗಳಲ್ಲಿ ಉತ್ತಮ ನಕ್ಷತ್ರವಿರುವ ದಿನದಂದೇ ಹೆರಿಗೆ ಮಾಡಿಸುವ ಅಥವಾ ಸಿಸೇರಿಯನ್ ಮಾಡಿಸುವ (ಅ) ಸಂಪ್ರದಾಯವೂ ಬಂದಿದೆ !. ಕೆಲವು ನಕ್ಷತ್ರಗಳಲ್ಲಿ ಹುಟ್ಟಿದರೆ ಮನೆಯಲ್ಯಾರಿಗೋ ಗಂಡಾಂತರವೆಂದು ಹೆದರಿಸುವ ಪಂಡಿತರಿಗೇನೂ ಕಮ್ಮಿಯಿಲ್ಲ !. ಜ್ಯೋತಿಷ್ಯ ಶಾಸ್ತ್ರ ತನ್ನ ಇತಿ-ಮಿತಿ ಗಳನ್ನು ಮೀರುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರ -ಪತ್ರಿಕಾಮಾಧ್ಯಮಗಳು-ವಿಶೇಷವಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳು ಈ ವಿಚಾರದಲ್ಲಿ ಚಿಂತನೆ ಮಾಡುವುದು ಒಳಿತೆನಿಸುತ್ತದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿರುವ ಅದೆಷ್ಟೋ ಹೆಣ್ಣುಮಕ್ಕಳು ಸಮಾಜದಲ್ಲಿ ಪ್ರಖ್ಯಾತರಾದವರಿದ್ದಾರೆ. ಜೀವನದಲ್ಲಿ ಇಂತಹ ನಂಬಿಕೆಗಳಿಗಿಂತಲೂ ಮಾನವೀಯ ಮೌಲ್ಯಗಳೇ ಮುಖ್ಯವಲ್ಲವೇ ? ನೆನಪಿಡಿ "ಭ್ರೂಣಹತ್ಯೆ ಮಹಾಪಾಪ " ...ಶ್ರುತಿಗಳು, ಶಾಸ್ತ್ರಗಳೂ ಸಹ ಇದನ್ನೇ ಹೇಳುತ್ತವೆ. ಭ್ರೂಣಹತ್ಯೆ ಮಾಡುವುದರಿಂದ ಆ ಕುಟುಂಬದಲ್ಲಿ ಮುಂದೆ ಮಕ್ಕಳಾಗದೆನ್ನುವ ಶಾಸ್ತ್ರಾಧಾರವೂ ಇದೆ..ಅನಾಥಪ್ರೇತ ಸಂಸ್ಕಾರದಿಂದಲೂ ಪಾಪ ಪರಿಹಾರವಾಗುದಿಲ್ಲವೆಂದೂ ಶಾಸ್ತ್ರಗಳು ಹೇಳುತ್ತವೆ....!! ಮರೆಯಬೇಡಿ " ಭ್ರೂಣಹತ್ಯೆ ಮಹಾಪಾಪ" ಏಕೆಂದರೆ ಸರ್ಕಾರ ಈ ಸ್ಲೋಗನ್ ಗಾಗಿ ಲಕ್ಷಾಂತರ ರೂ ಖರ್ಚು ಮಾಡುತ್ತದೆ ..!!!!

3 comments:

ಚುಕ್ಕಿಚಿತ್ತಾರ said...

ಒಳ್ಳೆಯ ವಿಚಾರ ಸರಣಿ...
ಹೆಣ್ಣಾಗಲೀ, ಗ೦ಡಾಗಲೀ ನಮ್ಮ ಮಗು ಎನ್ನುವ ವಿವೇಕ ಬೆಳೆಸಿಕೊಳ್ಳುವುದು ಮುಖ್ಯ..
ಮದುವೆಗೆ ಹೆಣ್ಣುಮಕ್ಕಳ ಕೊರತೆ ಎದುರಿಸುತ್ತಿರುವಾಗಲೂ ಲಿ೦ಗ ಬೇಧ ಕಡಿಮೆಯಾಗಿಲ್ಲ..
ವ೦ದನೆಗಳು.

Subrahmanya said...

ಚುಕ್ಕಿಚಿತ್ತಾರ ರವರೆ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಹೇಳಿದ ಹಾಗೆ ವಿವೇಕ, ವಿವೇಚನೆ ಅಗತ್ಯ

sunaath said...

ಭ್ರೂಣಫಲಿತಕ್ಕೆ ಹಾಗು ಹತ್ಯೆಗೆ ನೀವು ನೀಡಿದ ಕಾರಣಗಳು ವಿಚಾರಪೂರ್ಣವಾಗಿವೆ.
Prevention is better than abortion ಎನ್ನುವದು ನಮ್ಮ ಜನಗಳಿಗೆ ತಿಳಿಯುವದು ಯಾವಗಲೊ?