Jan 21, 2010

"ಬೇಂದ್ರೆ ಮುಖ್ಯಮಂತ್ರಿಯಾದರೆ..."

’ ಬೀchi ’ ( ಶ್ರೀಯುತ ರಾಯಸಂ ಭೀಮಸೇನರಾವ್ ರವರು ) ಎಂದಾಕ್ಷಣ ಮೊದಲು ನೆನೆಪಿಗೆ ಬರುವುದು ಅವರ ಮಾನಸ ಸೃಷ್ಟಿಯಾದ "ಬೆಳ್ಳಿತಿಂಮ ".  ಅವರ ಬರಹಗಳು ಮೇಲ್ನೋಟಕ್ಕೆ ಹಾಸ್ಯ ಬರಹಗಳಂತೆ ಕಂಡರೂ ಅದರಲ್ಲಿ ಸಮಾಜಮುಖಿಯಾದ ಅನೇಕ ವಿಚಾರಗಳಿವೆ. ಆದರೂ ಬೀchi ಎಂದರೆ ನಗೆ...ನಗು ಎಂದರೆ ಬೀchi ಎನ್ನುವಷ್ಟರ ಮಟ್ಟಿಗೆ ಅವರ ಬರಹಗಳು ಸಾಹಿತ್ಯಕ್ಷೇತ್ರವನ್ನಾವರಿಸಿಕೊಂಡಿವೆ. ಕನ್ನಡದ ಸಾಹಿತಿಗಳು ’ಮುಖ್ಯಮಂತ್ರಿ’ ಯಾದರೆ ಹೇಗಿರುತ್ತದೆ ..ಎಂಬ ಕಲ್ಪನೆಯೊಂದಿಗೆ ಕೆಲವರನ್ನು ( ಅ.ನ.ಕೃ, ಬೇಂದ್ರೆ, ಸ್ವತಃ ಬೀchi ...ಹೀಗೆ)  ಮುಖ್ಯಮಂತ್ರಿ ಮಾಡಿ ಹಾಸ್ಯದ ಹೊನಲನ್ನೇ ಹರಿಸಿದ್ದಾರೆ ಬೀchi ಯವರು....ಅಂದಿನ ದಿನಗಳಲ್ಲಿ ಈ ಮಹಾನುಭಾವರುಗಳ ಸ್ನೇಹ-ವಿಶ್ವಾಸಗಳು ಹೇಗಿತ್ತು ಎಂಬುದನ್ನೂ ಸಹ ನಾವು ಈ ಬರಹಗಳಲ್ಲಿ ಕಾಣಬಹುದು.   ಪ್ರಸ್ತುತ ಇಲ್ಲಿ ನಾನೋದಿದ ಶ್ರೀಯುತರ "ಚಿನ್ನದ ಕಸ " ಸಂಕಲನದಿದ ಆಯ್ದ ಒಂದು ಪ್ರಸಂಗವನ್ನು ನಿಮ್ಮ ಮುಂದಿಡುತ್ತಿದ್ದೇನೆ..ಓದಿ..ನಕ್ಕು’ಬಿಡಿ’.......


" ಬೇಂದ್ರೆ ಮುಖ್ಯಮಂತ್ರಿಯಾದರೆ........  "
{ಕನ್ನಡದ ಸುಪ್ರಸಿದ್ಧ ಕವಿವರ್ಯ ’ಬೇಂದ್ರೆ’ಯವರು  ಮುಖ್ಯಮಂತ್ರಿಯಾಗಿದ್ದಾರೆ.  ತಿಂಮ ಅವರೊಂದಿಗೆ ಸಂದರ್ಶನ ಬೇಡಿ ಬಂದಿದ್ದಾನೆ. ಹೊರಬಾಗಿಲಲ್ಲಿಯೇ ಮು.ಮಂ. ಗಳ ಕಾರ್ಯದರ್ಶಿ ’ತಿಂಮ’ನನ್ನು ತಡೆಯುತ್ತಾನೆ.}


ಕಾರ್ಯದರ್ಶಿ :  ಆರು , ನೀನಾರು ? ಕನ್ನಡಪುತ್ರಾ ನೀನಾರು ? 
(ಬೇಂದ್ರೆಯವರ ಸಹವಾಸದಿಂದ ಇಲ್ಲಿ ಕಾರ್ಯದರ್ಶಿಯೂ ಕವಿಯಾಗಿಬಿಟ್ಟಿದ್ದಾನೆ !)


ತಿಂಮ : ನಾನು ತಿಂಮ ಕಾರ್ಯದರ್ಶಿಗಳೇ, ಮು.ಮಂ. ಗಳೊಡನೆ ಮಹತ್ತರ ಕೆಲಸವಿದೆ. ಅವರನ್ನು ಕೂಡಲೇ ಕಾಣಬೇಕು.


ಕಾ : ಈಗವರು ಯಾರಂ ನೋಡುವಂತಿಲ್ಲ.
      ಭಾವಕರು ಧ್ಯಾನವಂ ಬಿಡುವಂತಿಲ್ಲ !!


ತಿಂ : ಇಂದು ಬೆಳಿಗ್ಗೆ ೯ ಕ್ಕೆ ಬರಲು ನನಗೆ ಪತ್ರ ಬಂದಿದೆ,,ಇಲ್ಲಿದೆ ನೋಡಿ


ಕಾ : ಅಹುದಹುದು ಇರಬಹುದು ! ಬಹುಜನರು ಬರಲಿಹರು ಅವರ ದರುಶನಕಾಗಿ
      ತಾರೀಕು, ಗಂಟೆ ನಿಮಿಷಗಳು ಯಾರಿಗೆ ? ಕವಿವರರು ಕಾಲಾತೀತರು ||


ತಿಂ : (ನಸುಕೋಪದಿಂದ ) ಹಾಗಾದರೆ ನನಗೇಕೆ ಬರಲು ತಿಳಿಸಿದಿರಿ ? 
ನಾನು ಮುಖ್ಯಮಂತ್ರಿಗಳನ್ನು ನೋಡಲೇಬೇಕು..ಅವರೇನು ಮಾಡುತ್ತಿದ್ದಾರೆ ಈಗ ?


ಕಾ : ಮಧರ್ !  ಮಧರ್ ರಂ ನೆನೆಯುತ್ತಾ ಅರ್ಧರ್ಧ ಕಣ್ಮುಚ್ಚಿ ಅತ್ತಿತ್ತ  ಸಾಗುತ್ತಾ !
ಧ್ಯಾನಮಗ್ನರು ಆಗಿ ಮನದೊಳ್  ಮಾತೆಯ ಕಂಡಿಹರು ನೀವು ಪೋಗಿ ||


ತಿಂ : (ಕೋಪಾಶ್ಚರ್ಯದಿಂದ !)  ಹೋಗಿ ? ಹೋಗಿ ಎನ್ನಲು ನೀನ್ಯಾರು ?  ಯಾವೂರಯ್ಯಾ ನಿಂದು ?


ಕಾ : ನನ್ನ ನೀಂ ಅರಿಯೆಯಾ ? ನೀನೆಂಥ ಕನ್ನಡಿಗ ? ಮೇರು ಪರ್ವತದಷ್ಟು 
       ನಾ ಬರೆದ ಕವನಗಳ  ಸಪ್ತಸಾಗರ ತುಂಬಿದವು  ಎನ್ನ ಭಾವಗಳು. 
       ತಪಶ್ಚರ್ಯೆಯಿಂದ ಬರೆಯುವ ಶುದ್ಧ ಕಿರಿ ಕವಿ ನಾನು !
      ಬೇರಾವ ಊರಿನಲ್ಲಿ ದೊರೆಯುವರು  ಕವಿ ಮರಿಗಳು ? 
      ಧಾರವಾಡವು ಎಂದು ಪ್ರತ್ಯೇಕವಾಗಿ ನಾ ಪೇಳಬೇಕೆ !? 


ತಿಂ : ಇದೇನು ಕಾರ್ಯದರ್ಶಿಯಯ್ಯಾ ನೀನು ? ಆಗಿನಿಂದಲೂ ಬರೀ ಕವನಗಳನ್ನೇ ಹೇಳುತ್ತಿರುವೆಯಲ್ಲಾ ? ಇದನ್ನು ತಿಳಿದು ನಾನು ಮಾಡುವುದಾದರೂ ಏನು ? ಸರಿಯಯ್ಯಾ  ನೀನು ...ನನಗೆ ಬೇಕು ಮುಖ್ಯಮಂತ್ರಿಗಳು ...
        [ ಕಾರ್ಯದರ್ಶಿಗಳನ್ನು ಅತ್ತ ದೂಡಿ ತಿಂಮ ಒಳನುಗ್ಗುತ್ತಾನೆ] ....


[ಲೋಡಿಗೆ  ಆತು ಕುಳಿತು ಮುಖ್ಯಮಂತ್ರಿ ಬೇಂದ್ರೆಯವರು ಏನನ್ನೋ ಬರೆಯುತ್ತಲಿದ್ದಾರೆ...ತಿಂಮ ಅವರನ್ನು ದುರುದುರು ನೋಡುತ್ತಾನೆ ]


ತಿಂ : [ಬಹು ಹೊತ್ತು ನಿಂತು ಬೇಸತ್ತು ] ಮಹಾಸ್ವಾಮಿ !


ಮುಂ (ಬೇಂದ್ರೆ ) : (ತಲೆ ಎತ್ತದೆ) ಬಂದೆ ಬಂದೆ ಒಂದು ನಿಮಿಷ
                                            ಒಂದೆ ವಿಷಯ, ಜಗದ ವಿಷ
                                            ಹಿಂದೆ ಕುಡಿದ ಅವ ಅನಿಮಿಷ
                                            ಭೋ ಬಂದೆ, ಹೋ ಬಂದೆ, 
                                            ತಂಭೋ ಎಂದೆ, ಬಾ ತಂದೆ
                                            ಶಿರದಲಿ, ಕರದಲಿ, ಬರದಲಿ, 
                                            ಮರದಲಿ, ವರದಲಿ, ವದರಲಿ !


ತಿಂ : ಸ್ವಾಮೀ...ಒದರುತ್ತಲೇ ಇದ್ದೇನೆ ಆಗಿನಿಂದ ,


ಮುಂ : [ತಲೆಯೆತ್ತಿ. ಶೂನ್ಯದೃಷ್ಟಿಯಿಂದ !] ಹಾಂ, ಹಾಂ ! ಈಗ ಹೇಳು ತಿಂಮಾ ಏನು ಸಮಾಚಾರ ?


ತಿಂ : ಹೇಳುವುದೇನು ಮಹಾಸ್ವಾಮಿಗಳಾದ ಮುಖ್ಯಮಂತ್ರಿಗಳೇ....


ಮುಂ : ( ತಿಂಮನನ್ನು ತಡೆದು....) 
          ಅಹುದಹುದು, ಮರೆತಿದ್ದೆ, ನಾಂ ಮುಖ್ಯಮಂತ್ರಿ.
         ಮುಖ್ಯಾಮುಖ್ಯವೆಂಬ ಭೇದವಳಿಯಲು ಬೇಕು |
         ದೇವನಾ ದೃಷ್ಟಿಯಲಿ ಎಲ್ಲರೂ ಮುಖ್ಯ
         ಭಾವನಾ ಚೇತನದಿ ಎಲ್ಲರೂ ಸೌಖ್ಯ ||


ತಿಂ :  ಸ್ವಾಮೀ ! ದಯಮಾಡಿ ನಿಮ್ಮ ಕಾವ್ಯ ಪ್ರವಾಹವನ್ನು ನಿಲ್ಲಿಸಿದರೆ ನಾನು ಮಾತನಾಡುತ್ತೇನೆ.  ಮುಂ.ಮಂ. ಯ ಕೆಲಸವೆಂದರೆ ಏನೆಂದು ತಿಳಿದಿರಿ ? ನವ್ಯ ಕಾವ್ಯದ ಗೋಷ್ಟಿಯ ಅಧ್ಯಕ್ಷತೆಯಲ್ಲ ಇದು ..


ಮುಂ: ಆಯಿತಾಯಿತು ಗೆಳೆಯಾ, ಕೋಪ ಬೇಡ ಎಳೆಯಾ !!


ತಿಂ : [ನಡುವೆ ಬಾಯಿ ಹಾಕಿ ] ಛೇ..ನಿಂಮ ..ಮತ್ತೆ ಸುರುಮಾಡಿದಿರಲ್ಲ ? ಜನತೆ ಬೊಬ್ಬೆ ಹೊಡೆಯುತ್ತಿದ್ದಾರೆ...ಮತದಾನ  ಮಾಡಿ ನನ್ನನ್ನು ನಿಮ್ಮನ್ನು ಚುನಾಯಿಸಿದವರೆಲ್ಲಾ  ಬೈಯುತ್ತಿದ್ದಾರೆ..ಬಡಕೂಲಿಯವರಿಗೆಲ್ಲಾ ತಿನ್ನಲು ಅನ್ನವಿಲ್ಲ.


ಮುಂ : [ಆಶ್ಚರ್ಯದಿಂದ]     ಅನ್ನವಿಲ್ಲ ! ಅಯ್ಯ ! ಅನ್ನ , ಅನ್ನ !
                                     ಎಲ್ಲ ದೇವರು ಬಂದರು
                                     ಅನ್ನ ದೇವರು ಬರಲಿಲ್ಲ ! 
                                     ಅವನ ಕಾಣಿರೋ, ನೀವವನ ಕಾಣಿರೋ ||


ಹಾಗಾದರೆ ಇನ್ನೊಂದು ಕೆಲಸ ಮಾಡು. ನನ್ನ ಕಾರ್ಯದರ್ಶಿಯ ಬಳಿ ಹೋಗಿ ಹೇಳಿ...ಮಾರಾಟವಾಗದೇ ಉಳಿದಿರುವ ನನ್ನ ಕವನ ಸಂಗ್ರಹ "ಅನ್ನಪೂರ್ಣ" ದ ಐದುನೂರು ಪ್ರತಿಗಳನ್ನು ತೆಗೆದುಕೊಂಡು ಹೋಗಿ ಹಸಿದ ಜನರಲ್ಲಿ ಹಂಚಿಬಿಡು.


ತಿಂ : ಪುಸ್ತಕಗಳನ್ನು ಕತ್ತೆಗಳಷ್ಟೇ ತಿನ್ನಬಲ್ಲವು ಮಹಾಸ್ವಾಮಿ. ಅವರು ಮನುಷ್ಯರು ! ಬಾವಿಗಳೆಲ್ಲಾ ಬತ್ತಿಹೋಗಿವೆ. ಮೊದಲು ಅವರಿಗೆ ಕುಡಿಯಲು ನೀರು ಬೇಕು...


ಮುಂ : [ಗೋಣನ್ನು ಎಡಕ್ಕೆ ಎಸೆದು ತತ್ವಜ್ಞಾನಿಯ ನಗೆಯಿಂದ ಹಾಡುವರು]
                   ಬಾರಮ್ಮ ಗಂಗೆ, ಬಾ ಬಾರೆ ತುಂಗೆ
                   ಬೆಟ್ಟದಿಂ ನೀ ಇಳಿದು, ಘಟ್ಟದಿಂ ನೀ ಜಿಗಿದು
                   ದಿಟ್ಟಳಾಗಿಹ ನೀನು ಥಟ್ಟನೆ ಬಾರೆ
                   ಛಟ್ಟನೆ ಬಾರೆ..
                   ಭರ್ರನೆ ಬಾರೆ..  
                   ಢರ್ರನೆ ಬಾರೆ...!
                   ಬಾ ಬಾರೆ ತಾಯೆ, ತಾಯಿಯೇ ಬಾರೆ ...
                  ನೀರಡಿಕೆ ಕಳೆಯಲು ದೂರದಿಂ ಬಾರೆ..




ತಿಂ : [ಕೈಮುಗಿದು] ನಾನು ಬಂದ ಕೆಲಸವಾಯಿತು..ಮುಖ್ಯ ಕವಿ ಮಂತ್ರಿ ಪುಂಗವರೇ..


ಮುಂ : ಇಲ್ಲ..ಇಲ್ಲ..ಇನ್ನೂ ಇದೆ..ಗಂಗಾವತರಣ ಪೂರ್ತಿಯಾಗಿಲ್ಲ..!
                 ಧಬಧಬಯೆಂದು, ಢಬಢಬಯೆಂದು... 
                 ದಿಡಿಲು ದಿಡಿಲೆಂದು ! ಬಾರೆ ಇಂದು..


ತಿಂ : [ಸಿಟ್ಟಿನಿಂದ ] ಬರುತ್ತಾರೆ..ಬರುತ್ತಾರೆ..ನಿಮಗೆ ಓಟುಕೊಟ್ಟುವರು ಬಡಿಗೆ ಹಿಡಿದು ಬರುತ್ತಾರೆ, ನಿಲ್ಲಿಸಿರಿ..ಮುಖ್ಯಮಂತ್ರಿ ಕೆಲಸವೆಂದರೆ ಏನೆಂದು ತಿಳಿದಿರಿ...? ಜನತೆಗೆ ಅನ್ನವಿಲ್ಲ ..ನೀರಿಲ್ಲ...ವಸ್ತ್ರವಿಲ್ಲ...


ಮುಂ : [ನಡುವೆ ಬಾಯಿ ಹಾಕಿ] ...ಬಾ ಕೃಷ್ಣ, ಬೇಗ ದೇವ
                   ದ್ರೌಪದಿಯ ಮಾನವ ಕಾಯ್ದ ದೇವ 
                  ವಸ್ತ್ರಗಳಾ ಹೊತ್ತು ತಾ, ಭಕ್ತರ ಗೋಳಿದು...


        ಹೋಗಿ ಬರುತ್ತಿಯಾ ತಿಂಮಾ...?

ತಿಂ : ಮತ್ತೇಕೆ ಬರಲಿ ಸಾಯಲಿಕ್ಕೆ .....?  [ಹೊರಡುವನು ]


ಮುಂ : [ಪುನಃ ಲೋಡಿಗೆ ಆತು ಕುಳಿತು ]
             ಸಾವು ! ಸಾವೆಂದೇಕೆ ಅಂಜುವಿರಿ
             ಸಾವೊಂದು ಶಿವನಾಟ !
             ಜಾತಸ್ಯ ಮರಣಂ ಧ್ರುವಂ ಎಂಬ 
             ಮಾತಿಗೆ ಇಲ್ಲ ಸಾವು !
             ಸರಸ ಜನನ ! ವಿರಸ ಮರಣ..
             ಸಮರಸವೇ ಜೀವನ..


[ ಮುಖ್ಯಮಂತ್ರಿ ಬೇಂದ್ರೆ ಯವರು ಊಟಕ್ಕೆ ಹೊರಡುವರು !]




  ಹೀಗೇ ಬೀchi ಯವರ ಹಾಸ್ಯ-ವಿಡಂಬನೆಗಳು ಇಡೀ ಪುಸ್ತಕದ ತುಂಬೆಲ್ಲಾ ಹರಡಿಕೊಂಡಿವೆ.... ’ಹುಚ್ಚು ಹುರುಳು ’ ’ಚಿನ್ನದ ಕಸ ’ ಬೆಳ್ಳಿತಿಂಮ ನೂರೆಂಟು ಹೇಳಿದ’ ಇತ್ಯಾದಿ ಪುಸ್ತಕಗಳು ಧಾರವಾಡದ ’ಸಮಾಜ ಪುಸ್ತಕಾಲಯ’ ವತಿಯಿಂದ ಪ್ರಕಾಶಿಸಲ್ಪಟ್ಟಿವೆ. ಎಲ್ಲರೂ ’ಕೊಂಡು’ ಓದಿ..ಕನ್ನಡ ಇನ್ನಷ್ಟು ಬೆಳೆಯಲಿ. ಬೀchi ಯವರ ಬಗ್ಗೆ ಒಂದಷ್ಟು ಮಾತುಗಳನ್ನು ಬರೆಯಬೇಕೆಂದುಕೊಂಡಿದ್ದೆ...ಆದರೆ ಅವರ ಬಗ್ಗೆ ಗುರುಗಳಾದ ’ಸುನಾಥ್’ ರವರೇ ಹೇಳಿದರೆ ಇನ್ನಷ್ಟು ಮೆರಗು ಬರುತ್ತದೆ ಎಂದು ನನ್ನ ಅನಿಸಿಕೆ.....ಹೇಳುತ್ತಾರೆ ಎಂದು ನಿರೀಕ್ಷಿಸುತ್ತಾ...... :)
....................................................................................................................................................................


ಖೊನೆ ಖಿಡಿ :


ಗಣರಾಜ್ಯೋತ್ಸವದ ಭೀಕರ ’ಗೀಷಣ’ ವನ್ನು ಮುಗಿಸಿದ ಜನನಾಯಕರು ತಾವು ಕರೆತಂದಿದ್ದ ಮಹಾಜನಗಳಿಗೆ ವರ್ಣಮಯ ಪಂಚೆ (ಲುಂಗಿ !) ಗಳನ್ನು ತಲಾವಾರು ಹಂಚಿದರು..
ಇಂಥ ಕಡೆ ನಮ್ಮ ಶಂಭುಲಿಂಗನೂ ಇರಲೇಬೇಕಲ್ಲವೇ ...? ಸಿಕ್ಕಿತು.. ಅವನಿಗೂ ಒಂದು ರಂಗಿನ ಲುಂಗಿ...ಇಷ್ಟಾದಮೇಲೆ ನಮ್ಮ  ಶಂಭುಲಿಂಗ  ನಾಯಕರನ್ನು ಮಾತನಾಡಿಸದೆ ಬಿಡಲಿಲ್ಲ..


ಶಂಭುಲಿಂಗ :   ಬುದ್ದಿ...ಈ ಅಬ್ಬ ಮತ್ಯಾವಾಗ್ ಬತ್ತದೆ....? ( ಪಾಪ ಮುಗ್ಧ !)
’ನಾಯ’ಕರು :  ಯಾಕಪ್ಪಾ...?
ಶಂಭುಲಿಂಗ :  ಈ ಸಲ ಬರೀ ಲುಂಗಿ ಕೊಟ್ಟೀರಿ...ಮುಂದ್ಲು ಸಲ ಚಡ್ಡಿ , ಸಲ್ಟು, ಎಲ್ಲಾ ಕೊಡಿ ಅತ್ಲಾಗೆ ಅಂತ ...  


                    ವಂದನೆಗಳೊಂದಿಗೆ...

18 comments:

ಸವಿಗನಸು said...

ಸೂಪರ್ ಆಗಿತ್ತು ಸಂಭಾಷಣೆ....

ಖೊನೆ ಖಿಡಿ ಸಹ.....

ಆನಂದ said...

ಸಖತ್ತಾಗಿದೆ. ಬೀchiಯವರ ಸಾಕಷ್ಟು ಪುಸ್ತಕಗಳನ್ನು ಓದಿದ್ದರೂ, ಈ ಪುಸ್ತಕವನ್ನು ಓದಿರಲಿಲ್ಲ.
ನಿಮ್ಮ ಶಂಭುಲಿಂಗ ಕೂಡ ತಿಂಮನ ಜೊತೆ competitionಗೆ ಇಳಿದಹಾಗಿದ್ದಾನೆ. :)

Narayan Bhat said...

ವಾಹ್, ಬೀchi ಯವರ ವಿಡಂಬನಾತ್ಮಕ ಪ್ರಹಸನ ತುಂಬಾ ಚೆನ್ನಾಗಿದೆ. ಒದಗಿಸಿಕೊಟ್ಟ ನಿಮಗೆ ಥ್ಯಾಂಕ್ಸ್. ಅಂದ್ಹಂಗೆ, ನಿಮ್ಮೂರ್ 'ಅಬ್ಬ' ಆದಾಗ ನಮ್ಗೂ ಯೋಳಿ, ನಾವೂ ಬತ್ತೀವಿ.

ಚುಕ್ಕಿಚಿತ್ತಾರ said...

ಬೀchi ಯವರ ಮುಖ್ಯಮ೦ತ್ರಿಬೇ೦ದ್ರೆ.... ಚೆನ್ನಾಗಿದೆ...ವ೦ದನೆಗಳು.

ಸೀತಾರಾಮ. ಕೆ. / SITARAM.K said...

ತಿಮ್ಮನಿ೦ದ ಮುಖ್ಯಮ೦ತ್ರಿ ಬೇ೦ದ್ರೆಯವರ ಸ೦ದರ್ಶನ ಚೆನ್ನಾಗಿ ಮೂದಿ ಬ೦ದಿದೆ.. ಸ೦ಗ್ರಹಿಸಿದ್ದಕ್ಕೆ ಧನ್ಯವಾದಗಳು.
ಶ೦ಭುಲಿ೦ಗನ ಖಿಡಿ ಎ೦ದಿನ೦ತೆ ಸೂಪರ್.

sunaath said...

ಸುಬ್ರಹ್ಮಣ್ಯರೆ,
ಬೀchiಯವರ ಹಾಸ್ಯದ sample ತೋರಿಸಿ, ತುಂಬಾ ನಗಿಸಿದಿರಿ. ಧನ್ಯವಾದಗಳು. ನಿಮ್ಮ ಖೊನೆಯ ಖಿಡಿಯೂ ಸಹ ಸಾಕಷ್ಟು ಖಿಡಿಖಿಡಿಯಾಗಿದೆ. ಬೀchiಯ ಬಗೆಗೆ ಬರೆಯುವದೆಂದರೆ ಸಾಗರವನ್ನು ಈಜಿದಂತೆ. ನನ್ನಿಂದ ಆದೀತೆಂದು ಅನಿಸೋದಿಲ್ರಿ!

ಮನಮುಕ್ತಾ said...

ಹಹಹಾ....
ಎಲ್ಲರನ್ನೂ ನಗಿಸಲಿಕ್ಕೆ ಪ್ರಾರ೦ಭ ಮಾಡಿದ್ದೀರಿ.. ಮು೦ದುವರೆಸಿ.
ಚೆನ್ನಾಗಿ ಬರೆದಿದ್ದೀರಿ.

ಮನಸು said...

hahaha super aagide nagisuvudu ellarigu baruvudilla nimage nagisuva kale ide ellarannu nagisiddakke dhanyavaadagaLu.

Unknown said...

ಅಯ್ಯೋ ಚೊಂಬುಲಿ೦ಗರೆ (ಶಂಭು ಲಿಂಗರೇ),

ನಿಮ್ಮ ಬ್ಲಾಗ್ ಗೆ ಬಂದೆ.. ಮಸ್ತ್ ಮಜಾ ಇದೆ...

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನಿಮ್ಮ ಕಲ್ಪನೆಯಯನ್ನು ಬರಹಕ್ಕಿಳಿಸಿದ ರೀತಿ ಚೊಕ್ಕದಾಗಿದೆ.
ಅಭಿನ೦ದನೆಗಳು

Raghu said...

hahaha....nice one...!!
Nimmava,
Raaghu.

ಶಿವಪ್ರಕಾಶ್ said...

shivane, shambulinga...
ಬೀchi avara hasya pragne mecchuvantaddu.. avaru bareda ee prasangavannu namma jote hanchikondiddakke thanks kanri..
last punch kikku kodtu :)

ತೇಜಸ್ವಿನಿ ಹೆಗಡೆ said...

ನಾನು ಬೀಚಿಯವರ ಹೆಚ್ಚು ಪುಸ್ತಕಗಳನ್ನೋದಲಿಲ್ಲ. ಅವರ ಹಾಸ್ಯರಸದಿಂದ ಒಂದು ಗುಟುಕನ್ನು ನೀವಿತ್ತಿದ್ದಕ್ಕೆ ಧನ್ಯವಾದಗಳು. ಕೆಲವೊಂದು ಸಂಭಾಷಣೆಗಳು ಬಹು ನಗು ತರಿಸಿದವು. :)

ಆದರೂ ಅದೇಕೋ ಏನೋ ಬೀಚಿಯವರ ’ತಿಂ’ ಕವಿತೆಗಳನ್ನು, ಕಾವ್ಯಸಾಹಿತ್ಯವನ್ನು, ಅದರಲ್ಲೂ ಬೇಂದ್ರೆಯವರನ್ನು ಸ್ವಲ್ಪ ಅತಿಯಾಗಿ ಹಾಸ್ಯಮಾಡಿದಂತೆನಿಸಿತು ಅಲ್ಲಲ್ಲಿ.! [ಇದು ಬೇಂದ್ರೆಯವರ ಪ್ರತಿ ಹಾಗೂ ಕವಿ-ಕಾವ್ಯದ ಪ್ರತಿ ನನಗಿರುವ ಅತಿಹೆಚ್ಚಿನ ಅಭಿಮಾನದಿಂದಲೂ ಅನಿಸಿದ್ದಿರಬಹುದು. ವೈಕ್ತಿಕ ಅಭಿಪ್ರಾಯವಷ್ಟೇ]

Subrahmanya said...

* ಸವಿಗನಸು ಕಾಣುವವರೇ....
ನೀವು ನಕ್ಕರೆ ಅದೇ ಅಕ್ಕರೆ....ಧನ್ಯವಾದಗಳು...

*ಆನಂದ ವಾಗಿರುವವರೇ ....
ತಿಂಮನಿಗೆ ತಿಂಮನೇ ಸಾಟೀ...ನನ್ನದೊಂದು ಪುಟ್ಟಪ್ರಯತ್ನವಷ್ಟೆ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

*ನಾರಾಯಣ ಭಟ್ ರವರೇ...
ನಮ್ಮೂರ್ ಅಬ್ಬಕ್ಕೆ ಕಂಡಿತಾ ಯೋಳ್ತೀನಿ....ವಸಿ ಮುಂಚೆನೇ ಬರೀರಂತೆ....ನಿಮ್ಮ ಪ್ರೋತ್ಸಹವೇ ಶಂಭುಲಿಂಗನ ಜೀವ...

*ಚುಕ್ಕಿಚಿತ್ತಾರ ದವರೇ,...
ಧನ್ಯವಾದಗಳು...

*ಸೀತಾರಾಮ್ ಗುರುಗಳೇ...
ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ....ನಿಮ್ಮ ಹಾರೈಕೆ ಹೀಗೇ ಇರಲಿ...

*ಸುನಾಥ್ ಗುರುಗಳೇ....
ಶಂಭುಲಿಂಗನ ಗುಡಿಗೆ ಸ್ವಾಗತ. ಬೀchi ಯವರ ಸಾಹಿತ್ಯ ಸಾಗರವನ್ನು ಈಜುವುದು ನಿಮ್ಮಿಂದ ಆಗದ ವಿಷಯವೇನಲ್ಲ...ನನಗಂತೂ ಆ ವಿಶ್ವಾಸವಿದೆ. ಮುಂದೊಂದು ದಿನ ನಿಮ್ಮ ತಾಣದಲ್ಲಿ ಬೀchi ಬರಲಿ ಎಂದು ನೀರೀಕ್ಷಿಸುತ್ತೇನೆ...ಖಿಡಿ ಮೆಚ್ಚಿದ್ದಕ್ಕೆ...ಪ್ರೋತ್ಸಾಹಿಸಿದ್ದಕ್ಕೆ ... ಧನ್ಯವಾದಗಳು

*ಮನಮುಕ್ತಾ ರವರೇ....
ನಕ್ಕರೇ ಅದೇ ಸ್ವರ್ಗವಲ್ಲವೇ....ಧನ್ಯವಾದಗಳು :)

*ಮನಸು ಮಾಡಿದವರೇ,....
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...ಶಂಭುಲಿಂಗನೂ ಇರುತ್ತಾನೆ....ಧನ್ಯವಾದಗಳು...

*ರವಿಕಾಂತ್ ’ಗೊರಕೆ’ sorry ಗೋರೆ ಯವರೇ ....
ಮಸ್ತ್ ಮಜಾ ಮಾಡಿ’ಬಿಡಿ’ ....ಧನ್ಯವಾದಗಳು.

*ಕೂಸು ಮುಳಿಯಾಳ ದವರೇ......
ನಿಮ್ಮ ಅಭಿನಂದನೆಗೆ ನಾನು ಆಭಾರಿ....ಗುಡಿಗೆ ಸ್ವಾಗತ.

*ರಾಘು...
Thank u very much...:)

*ಶಿವು ಮಹಾರಾಜ್.....
ತುಂಬಾ ಧನ್ಯವಾದಗಳು....ಶಂಭುಲಿಂಗನ ಗಾಡಿಗೆ self strat ಇಲ್ಲ ಹಾಗಾಗಿ kik start ಮಾಡ್ಲೇಬೇಕು...ಹ್ಹ.ಹ್ಹ......:)

*ತೇಜಸ್ವಿನಿ ಹೆಗಡೆ ಯವರೇ...
ಮೊದಲಿಗೆ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಬೀchi ಯವರ ಈ ಹಾಸ್ಯಬರಹ ಕೆಲವೊಂದು ಕಡೆ ಸ್ವಲ್ಪ ಹೆಚ್ಚೇ ಎನಿಸಿದರೂ ಒಟ್ಟಾರೆ ನವಿರಾಗಿದೆ ಎಂದು ನನ್ನ ಅಭಿಪ್ರಾಯ. ಬೇಂದ್ರೆಯಯರಲ್ಲಿ ನೀವಿಟ್ಟಿರುವ ಅಭಿಮಾನ ನಿಮ್ಮ ಅಭಿಪ್ರಾಯಕ್ಕೆ ಕಾರಣವಾಗಿರಬಹುದು....ಅದೂ ಒಳ್ಳೆಯದೇ ಅಲ್ಲವೇ...:) ಅಂದಿನ ಈ ಸಾಹಿತಿಗಳ ನಡುವಿನ ಅತೀವ ಬಾಂಧವ್ಯವೂ ತುಸು ಹೆಚ್ಚೆನಿಸುವ ಹಾಸ್ಯಕ್ಕೆ ಕಾರಣವಾಗಿರಬಹುದು...:)....ಮತ್ತೊಮ್ಮೆ ಧನ್ಯವಾದಗಳು.

Snow White said...

chennagide sir..tadavaagi bandadakke kshamisi :)

Subrahmanya said...

ಬಂದಿದ್ದು ok...ಕ್ಷಮೆ ಯಾಕೆ !? :) ....ಪ್ರೋತ್ಸಾಹಕ್ಕೆ ಧನ್ಯವಾದಗಳು. ಬರ್ತಾ ಇರಿ.

V.R.BHAT said...

good, munde hogli shambhulinga.....

murudu endare 'mukku' ennuvudara jote shabdha, Ravana muridu bisadida lingada tundaagiddaringa ee shambhulinganige murudeshwara ennutteve. adarali aabhaasvannu ganisuvudilla, aa abhaasa ennuvudu onthara 'pshycology'yalli p iddahaage, adanne bhaktiyinda nodbekashte,kelavukade devarige 'huchhappa' antella annodillave haage, devarige hesaru eniddaroo aata jagalakkenoo baruvudilla andamele bidi sumne yake

Subrahmanya said...

ವಿ. ಆರ್. ಭಟ್ಟರೇ...
’ಮುಕ್ಕು’ ಎನ್ನುವುದು ಕನ್ನಡದಲ್ಲಿ ಕೆಲವು ಸೀಮೆಯ ಲೋಕಾರೂಢಿ ಪದ...ಇದಕ್ಕೆ ಬೇರೇ ಅರ್ಥಗಳೂ ಇವೆ ( ಮಣ್ಣು ಮುಕ್ಕು....ಮುಕ್ಕಾಗಿದೆ (ಮುರಿದಿದೆ) ಹೀಗೆ !!) ಇನ್ನು ಮುರುದು ಅಥವಾ ಮುರಿದದ್ದು ನೀವು ಹೇಳಿದಂತೆ ಮುರಿದ ಈಶ್ವರ "ಮುರುದೇಶ್ವರ ’" ಅಥವಾ "ಮುರುಡೇಶ್ವರ " ಆಗಿರಬಹುದು...ಆದರೆ ಅದೇ ದೇವಾಲಯದಲ್ಲಿ ಇರುವ ಫಲಕದಲ್ಲಿ ದೇವರ ಧ್ಯಾನ ಶ್ಲೋಕವು " ನಮೋ ಮೃಡೇಶ ಲಿಂಗಾಯ ...." ಎಂದು ಪ್ರಾರಂಭವಾಗುತ್ತದೆ....ಅಲ್ಲಿಯ ಆಗಮೀಕರೂ ಸಹ ಇದನ್ನು ಧೃಡಪಡಿಸಿರುತ್ತಾರೆ....ಸ್ಕಂದಪುರಾಣದಲ್ಲೂ ಇದರ ಉಲ್ಲೇಖ ಇದೆ....ಆಡು ಭಾಷೆಗೆ ಬಂದಾಗ ನೀವು ಹೇಳಿದಂತೆ "psychology " ಯಲ್ಲಿ 'P' ಇದ್ದಂತೆಯೇ ಸರಿ........ಆಭಾಸವನ್ನು ಪರಿಗಣಿಸುವುದಿಲ್ಲ ಎಂದು ಹೇಳಿದ್ದೀರಿ...ಅಂದಮೇಲೆ ಮುಂದಕ್ಕೆ ಮಾತೇ ಇಲ್ಲ....ಹ್ಹ ...ಹಹಹ್ಹಾ.....ಬಂದದ್ದಕ್ಕೆ...ಬರೆದು ಇನ್ನಷ್ಟು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...ಹೀಗೇ ಬರ್ತಾನೆ ಇರಿ....