Oct 6, 2014

ನಾನೇ ನನ್ನ ಮನದ ನಾಯಕ ....


ಪೊಲೀಸ್ ಎಸ್ಕಾರ್ಟ್ ಜತೆ  ದಕ್ಷಿಣ ಆಫ್ರಿಕಾದ ರಸ್ತೆಯಲ್ಲಿ ಆ ವಾಹನವು ನಿಧಾನವಾಗಿ ಚಲಿಸುತ್ತಿದೆ.  ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತಿರುವ ಆಫ್ರಿಕಾದ ಮೂಲನಿವಾಸಿಗಳು 'ಮಡೀಬಾ ಮಡೀಬಾ ' ಎಂದು ಜೈಕಾರ ಹಾಕುತ್ತಾ ಕೂಗುತ್ತಿದ್ದಾರೆ. ಆಫ್ರಿಕಾದಲ್ಲಿ ಹೊಸ ಸೂರ್ಯನ ಉದಯವಾಗಿದೆಯೇನೋ ಎನ್ನುವಂತಹ ವಾತಾವರಣ ಮೂಡಿದೆ.
ಇನ್ನೂ ಕೆಲೆವೆಡೆ ಬೀದಿ ಬೀದಿಗಳಲ್ಲಿ ಕಪ್ಪು  ಜನಗಳು ಸಂಭ್ರಮಾಚರಣೆ  ಮಾಡುತ್ತಿದ್ದರೆ ಬಿಳಿಯ ಜನಗಳು ಗಂಟು ಮೂಟೆ ಕಟ್ಟುತ್ತಿದ್ದಾರೆ. ಸ್ವಾಯತ್ತ ಆಫ್ರಿಕಾ ಯಾರದ್ದು ಎನ್ನುವ ನಿರ್ಧಾರ ಹೊರಬಿದ್ದ ಕ್ಷಣವೇ ಬಿಳಿಯ ಜನಗಳು ಸಪ್ಪೆ ಮೋರೆ ಹಾಕಿಕೊಂಡು ದೇಶ ಬಿಡಲು ತಯಾರಾಗುತ್ತಿದ್ದಾರೆ. ಕಪ್ಪು ಜನಗಳು ತಮ್ಮ ರಾಷ್ಟ್ರಗೀತೆ ಯಾವುದಾಗಬೇಕು , ರಾಷ್ಟ್ರಧ್ವಜ ಹೇಗಿರಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ....

ಇಷ್ಟಕ್ಕೆಲ್ಲಾ ಕಾರಣ ಆ 'ಮಡೀಬಾ' ಎಂಬ ವಯಸ್ಸಾದ ವ್ಯಕ್ತಿ . ೨೭ ವರುಷಗಳ ದೀರ್ಘ ಸೆರೆವಾಸ ಮುಗಿಸಿಕೊಂಡು ಸ್ವಾಯತ್ತ ಆಫ್ರಿಕಾದ ಕನಸು ಹೊತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿಲಿದ್ದ 'ನೆಲ್ಸನ್ ಮಂಡೇಲಾ ' ಅಂದು ಆಫ್ರಿಕನ್ ರಸ್ತೆಯಲ್ಲಿ ಸಾಗುತ್ತಿದ್ದರೆ ಇತ್ತ ದೇಶದ ಚಿತ್ರಣವೇ ನಿಧಾನವಾಗಿ ಬದಲಾಗುತ್ತಿತ್ತು.  ಹಳಸಿ ನಾರುತ್ತಿರುವ ಆಫ್ರಿಕನ್ ಮೂಲನಿವಾಸಿಗಳ ಬಾಳನ್ನು ಹಸನಾಗಿಸಲು ಇಳಿ ವಯಸ್ಸಿನಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮಂಡೇಲಾ ನಿರ್ಧರಿಸಿರುತ್ತಾರೆ. ಲೆಕ್ಕಾಚಾರವಾಗಿ ಅದು ಚುನಾವಣೆಯೇ ಅಲ್ಲ. ಅವಿರೋಧ ಆಯ್ಕೆ ಅಷ್ಟೆ.

ಮಡೀಬಾ ಅಧ್ಯಕ್ಷ ಪದವಿ ಸ್ವೀಕರಿಸಿದ ಮೊದಲ ದಿನವೇ ರಾಜಭವನದ ಅಧಿಕಾರಿಗಳ ಸಭೆ ಕರೆಯುತ್ತಾರೆ . ಗಂಟು ಮೂಟೆ ಕಟ್ಟುತ್ತಿದ್ದ ಬಿಳಿಯ ಅಧಿಕಾರಿಗಳಿಗೆ ಧೈರ್ಯ ತುಂಬುತ್ತಾರೆ. ಎಲ್ಲರ ಸಹಕಾರವನ್ನು ಬೇಡುತ್ತಾರೆ. ಒಂದೇ ಏಟಿಗೆ ಎಲ್ಲಾ ಹಕ್ಕಿಗಳನ್ನು ಹೊಡೆದುರುಳಿಸುತ್ತಾರೆ. ಈ ಸನ್ನಿವೇಷವು ತುಂಬ ಮನೋಜ್ಞವಾದುದು.
ಮಂಡೇಲಾ ಬಿಡುವಿಲ್ಲದ ಕೆಲಸಗಾರರಾಗುತ್ತಾರೆ. ತಮ್ಮ ರಕ್ಷಣೆಗಿದ್ದ ನಾಲ್ಕು ಕರಿಯ ಎಸ್ಕಾರ್ಟ್ ಗಳ ಜೊತೆಗೆ ಇನ್ನೂ ನಾಲ್ಕು ಬಿಳಿಯ ಅಧಿಕಾರಿಗಳನ್ನು ನೇಮಿಸುತ್ತಾರೆ. ಈ ನಾಲ್ಕು ಮತ್ತು ಆ ನಾಲ್ಕುಗಳ ನಡುವೆ ಬಿಗುವಿನ ವಾತಾವರಣ ಇದ್ದೇ
ಇರುತ್ತದೆ. ಆದರೆ, ಅನಿವಾರ್ಯ ಅಧ್ಯಕ್ಷರ ಸೇವೆಯನ್ನು ಇಬ್ಬರೂ ಕೂಡಿಯೇ ಮಾಡಬೇಕಾಗಿರುತ್ತದೆ.

ವಿದೇಶಾಂಗ ವ್ಯವಹಾರಗಳು, ಆರ್ಥಿಕ ಪುನಶ್ಚೇತನ, ಬಡತನ ನಿವಾರಣೆಯಂತಹ ಮುಖ್ಯ ಕೆಲಸಗಳ ನಡುವೆ ಮಡೀಬಾ 'ರಗ್ಬಿ' ಆಟವನ್ನು ತುಂಬ ಹಚ್ಚಿಕೊಳ್ಳುತ್ತಾರೆ. ಮಂಡೇಲಾ ಅಧ್ಯಕ್ಷರಾದ ನಂತರ ದೇಶವು ಆಡಿದ ಮೊದಲ  ಅಂತರರಾಷ್ಟ್ರೀಯ ಪಂದ್ಯದಲ್ಲೇ ಹೀನಾಯವಾಗಿ ಸೋಲುತ್ತದೆ ಮತ್ತು ಆ ಸೋಲನ್ನು ಮಡೀಬಾ ಕಣ್ಣಾರೆ ನೋಡುತ್ತಾರೆ. ರಗ್ಬಿ ವಿಶ್ವಕಪ್ ಆಟಕ್ಕೆ ಇನ್ನೊಂದೇ ವರುಷ ಬಾಕಿಯಿರುತ್ತದೆ.

ರಗ್ಬಿ ತಂಡದಲ್ಲಿ 'ಚೆಸ್ಟರ್' ಒಬ್ಬನೇ‌ ಕರಿಯ ಆಸಾಮಿ. ಮಿಕ್ಕವರೆಲ್ಲಾ ಬಿಳಿಯರೆ.  ಮಡೀಬಾ ರಗ್ಬಿ ತಂಡದ ನಾಯಕನನ್ನು  ತನ್ನ ಕಚೇರಿಗೆ ಬರಮಾಡಿಕೊಳ್ಳುತ್ತಾರೆ. ತುಂಬ ಸಲಿಗೆಯಿಂದ ಮಾತನಾಡಿ ಆತನಿಗೆ ಧೈರ್ಯ ತುಂಬುತ್ತಾರೆ.

"ಮಿ. ಕ್ಯಾಪ್ಟನ್, ಆಟದ ಸಮಯದಲ್ಲಿ ನೀವು ಸಹ ಆಟಗಾರರಿಗೆ ಹೇಗೆ  ಸ್ಪೂರ್ತಿ ತುಂಬುತ್ತೀರಿ ? “ ಎಂದು ಮಂಡೇಲಾ ಕೇಳುತ್ತಾರೆ.

ನಾಯಕ ಹೇಳುತ್ತಾನೆ. ""ನಾನು ಸಾಧಕರ ಉದಾಹರಣೆಗಳನ್ನು ಕೊಡುತ್ತೇನೆ. ಆ ಮೂಲಕ ಸ್ಪೂರ್ತಿ ತುಂಬುತ್ತೇನೆ ” ಎನ್ನುತ್ತಾನೆ. ಮಡೀಬಾ ಅವನನ್ನು ಅಭಿನಂದಿಸುತ್ತಾರೆ. ಆತನಿಗೆ ತಾವು ಸೆರೆವಾಸದಲ್ಲಿದ್ದಾಗ ಯಾವುದರಿಂದ ಸ್ಪೂರ್ತಿ ಪಡೆದಿದ್ದೆ ಎನ್ನುವುದನ್ನು ಹೇಳಿ ಕಳುಹಿಸುತ್ತಾರೆ.

ಅಲ್ಲಿಂದ ನಾಯಕನ ಮನಸ್ಥಿತಿಯೇ ಬದಲಾಗುತ್ತದೆ. ಆಟಗಾರರು ಕಠಿಣ ಶ್ರಮವಹಿಸಲು ಆರಂಭಿಸುತ್ತಾರೆ. ಅಧ್ಯಕ್ಷರ ಸೂಚನೆಯ ಮೇರೆಗೆ ಆಟಗಾರರನ್ನು ಅನೇಕ ಮನರಂಜನಾ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಮೂಲನಿವಾಸಿಗಳ ಜೊತೆ ಬೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಸ್ಟೇಡಿಯಮ್ಮಿನ ಹೊರಗಿನ ಬದುಕನ್ನು ಆಟಗಾರರು ಕಾಣುತ್ತಾರೆ. ಒಂದು ದಿನ ಆಟಗಾರರನ್ನು ಮಂಡೇಲಾರನ್ನು ಬಂದಿಯಾಗಿಸಿದ್ದ ಸೆರೆಮನೆಯನ್ನು ತೋರಿಸಲು ಕರೆದೊಯ್ಯಲಾಗುತ್ತದೆ. ನಾಯಕನು ಸೆರೆಮನೆಯೊಳಗೆ ಕಾಲಿರಿಸಿ ಅದರ ಉದ್ದಗಲಗಳನ್ನು ಅಳೆಯುತ್ತಾನೆ. ಅವನ ಮುಖವು ಬಾಡುತ್ತದೆ. ಹೊರಗೆ ಬಂದಾಗ ಆತನ ಪ್ರೇಯಸಿ ಕೇಳುತ್ತಾಳೆ ' ಏನು ? ನಾಳಿನ ಪಂದ್ಯದ ಬಗ್ಗೆ ಯೋಚಿಸುತ್ತಿದ್ದೀಯ ? “ ಎಂದು.
ನಾಯಕ ಹೇಳುತ್ತಾನೆ  " ಇಲ್ಲ , ಆಫ್ರಿಕಾದ ಅಧ್ಯಕ್ಷರು 10x10  ಅಳತೆಯ ಕೋಣೆಯಲ್ಲಿ ೨೭ ವರುಷ ಹೇಗೆ ಕಳೆದರು ಎಂದು ಯೋಚಿಸುತ್ತಿದ್ದೇನೆ " ಎನ್ನುತ್ತಾನೆ.

ಅನಂತರ ವಿಶ್ವಕಪ್ ಪಂದ್ಯಾವಳಿಗಳು ಆರಂಭವಾಗುತ್ತದೆ. ಎಲ್ಲಾ ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡವು ಜಯಗಳಿಸುತ್ತಾ ಸಾಗುತ್ತದೆ. ಪಂದ್ಯವು ಅಂತಿಮ ಹಂತಕ್ಕೆ ಬರುವಷ್ಟರಲ್ಲಿ ಮಂಡೇಲಾರ ಮಹತ್ವಾಕಾಂಕ್ಷೆಯೊಂದು ಈಡೇರಿರುತ್ತದೆ. ರಾಜಭವನದ ಹುಲ್ಲುಹಾಸಿನ ಮೇಲೆ ಎಂಟೂ ಜನ ಎಸ್ಕಾರ್ಟ್ ಅಧಿಕಾರಿಗಳು ನಗುನಗುತ್ತಾ ರಗ್ಬಿ ಆಡುತ್ತಿರುತ್ತಾರೆ.  ಆಗ ಮಡೀಬಾ ತಮ್ಮ ಕಾರ್ಯದರ್ಶಿಗೆ ಹೇಳುತ್ತಾರೆ  ” ಏನು ಮೇರಿ,  ದೇಶದ ಸಮಸ್ಯೆಗಳ ನಡುವೆ ಈ ರಗ್ಬಿ ಆಟ ಬೇಕಿತ್ತಾ ? ಎಂದು ಈಗಲೂ ನೀನು ನನ್ನ ಕೇಳ್ತೀಯಾ  “ ಎಂದು ನಗುತ್ತಾರೆ.
ಅಂತಿಮ ಪಂದ್ಯದ ಆರಂಭಕ್ಕೆ ಮುನ್ನ ಅಧ್ಯಕ್ಷರು ತಂಡದ ಆಟಗಾರರನ್ನು ಭೇಟಿಯಾಗಿ ಹುರಿದುಂಬಿಸುತ್ತಾರೆ.  ತಮಗೆ ಎಂದಿಗೂ ಸ್ಪೂರ್ತಿಯಾಗಿರುವ ಪದ್ಯವೊಂದನ್ನು ಬರೆದು ನಾಯಕನ ಕೈಗೆ ಕೊಟ್ಟು ಹೊರಡುತ್ತಾರೆ.

ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ವಿಶ್ವಕಪ್ ರಗ್ಬಿಯ ಅಂತಿಮ ಪಂದ್ಯ ನಿಗದಿಯಾಗುತ್ತದೆ. ಆ ಪಂದ್ಯವನ್ನು ನೋಡಲು ಅಧ್ಯಕ್ಷರೇ ಕ್ರೀಡಾಂಗಣಕ್ಕೆ ಬರುತ್ತಾರೆ. ಕ್ರೀಡಾಂಗಣದ ತುಂಬೆಲ್ಲಾ ' ಓಲೆ ಓಲೆ ' ಕೇಳುತ್ತಿರುತ್ತದೆ. ಕರಿಯ-ಬಿಳಿಯರೆಲ್ಲರೂ ದೇಶದ ಬಾವುಟವನ್ನು ಬೀಸುತ್ತಿರುತ್ತಾರೆ. ಅವರೆಲ್ಲರೂ ಮನಸಾರೆ ದಕ್ಷಿಣ ಆಫ್ರಿಕನ್ನರೇ ಆಗಿ ಹೋಗಿರುತ್ತಾರೆ. ಮುಂದೇನಾಗುತ್ತದೆ ? .  ದಕ್ಷಿಣ ಆಫ್ರಿಕಾ ತಂಡ ಗೆಲ್ಲುತ್ತದೆಯಾ ?  . ರಗ್ಬಿ ಆಟದ ಮೂಲಕ ಮಂಡೇಲಾ ಸಾಧಿಸಿದ್ದಾದರೂ ಏನು ?  ನಾಯಕನಿಗೆ ಮತ್ತವನ ಸಹ ಆಟಗಾರರಿಗೆ ಸ್ಪೂರ್ತಿಯಾದ ಆ ಪದ್ಯವಾದರೂ ಯಾವುದು ? .

ಇದೆಲ್ಲಾ ತಿಳಿದುಕೊಳ್ಳಬೇಕು ಅಂದ್ರೆ Clint Eastwood ಅವರ ನಿರ್ದೇಶನದ Invictus  ಎನ್ನುವ ಸಿನಿಮಾವನ್ನು ನೀವು ನೋಡಬೇಕು . ಮೇಲೆ ಬರೆದಿರೋದು ಇದೇ‌ ಸಿನಿಮಾದ ಸಾರಾಂಶ. ಇದೊಂದು ಅತ್ಯುತ್ತಮ ಚಿತ್ರ ಎನ್ನುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಕ್ಲಿಂಟ್ ಅಭಿನಯದ/ನಿರ್ದೇಶನದ ಸಿನಿಮಾಗಳೆಂದರೆ ಇತಿಹಾಸ ಮತ್ತು ಸಂದೇಶವಿರುವ ಚಿತ್ರಗಳೇ ಆಗಿರುತ್ತವೆ. ಕೇವಲ ಫ್ಯಾಂಟಸಿಗಾಗಿ ದುಡ್ಡಿಗಾಗಿ  ಸಿನಿಮಾ ಮಾಡುವ ಜಾಯಮಾನವೇ ಆತನದಲ್ಲ.
ಸಿನಿಮಾ ನೋಡಿ , ಹೇಗಿದೆ ಹೇಳಿ.

ಅಂದಹಾಗೆ ನೆಲ್ಸನ್ ಮಂಡೇಲಾರಿಗೆ ಸ್ಪೂರ್ತಿಯಾಗಿದ್ದ ಪದ್ಯ ಯಾವುದು ಗೊತ್ತಾ ?. ವಿಲಿಯಮ್ ಹೆನ್ಲೇ ಬರೆದಿರುವ "ಇನ್ವಿಕ್ಟಸ್ " ಎನ್ನುವ ಪದ್ಯ . ಪದ್ಯದ ಪೂರ್ಣಪಾಠವನ್ನು ಕೆಳಗೆ ಕೊಟ್ಟಿದ್ದೇನೆ. ಈ ಪದ್ಯದ ಕಡೆಯ ಎರಡು ವಾಕ್ಯಗಳನ್ನು ಮಂಡೇಲಾ ಅವರು ಯಾವಾಗಲೂ ಗುನುಗುತ್ತಿದ್ದರು ಎಂದು ಅವರ ಆತ್ಮೀಯರು ಹೇಳುತ್ತಾರೆ. ಅದು ಅವರ ಘೋಷವಾಕ್ಯವಾಗಿತ್ತಂತೆ. ಈ ಪದ್ಯ ಓದುತ್ತಿದ್ದರೆ ಯಾರಿಗೆ ತಾನೆ ಸ್ಪೂರ್ತಿ ಬಾರದು !.

Invictus

Out of the night that covers me,
Black as the pit from pole to pole,
I thank whatever gods may be
For my unconquerable soul.

In the fell clutch of circumstance
I have not winced nor cried aloud.
Under the bludgeonings of chance
My head is bloody, but unbowed.

Beyond this place of wrath and tears
Looms but the Horror of the shade,
And yet the menace of the years
Finds and shall find me unafraid.

It matters not how strait the gate,
How charged with punishments the scroll,
I am the master of my fate,
I am the captain of my soul.

----------------------William Ernest Henleyಈ ಕವನವನ್ನು ಕನ್ನಡದಲ್ಲಿ ಬರೆದಿದ್ದೇನೆ , ಅಷ್ಟೆ. ಬಹತೇಕ ಇದು ಪದಶಃ ಅನುವಾದವೆನಿಸಬಹುದು. ನನ್ನಿಂದಾಗಿದ್ದು ಇಷ್ಟೆ.
ಕವನದ ಆಶಯವನ್ನು ಒಟ್ಟಾರೆಯಾಗಿ ಗ್ರಹಿಸಿ ಬರೆಯುವುದು ನಿಜವಾದ ಭಾವಾನುವಾದವಾಗಬಹುದು . ಕವನವನ್ನು ಅರಿಯುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ. ಇದನ್ನು ಇನ್ಯಾರಾದರೂ ಕನ್ನಡದಲ್ಲಿ ತುಂಬ ಚೆನ್ನಾಗಿ ಬರೆದಿದ್ದರೆ ದಯವಿಟ್ಟು ತಿಳಿಸಿ.

ಅಜೇಯ :

ಕಂದಕದೊಳಗಿನ ಕಗ್ಗತ್ತಲೆಯಂತೆ ಈ ರಾತ್ರಿಗಳು ,
ನನ್ನನಾವರಿಸಿ ದಿಗಿಲುಹುಟ್ತಿಸುತ್ತಿವೆ .
ಆದರೂ, ನನ್ನೊಳಗಿನ ಚೈತನ್ಯವು ಇನ್ನೂ ನುಗ್ಗಾಗಿಲ್ಲ
ಅದಕ್ಕಾಗಿ , ಆ ದೇವರುಗಳನ್ನು ನಾನು ನೆನೆಯುತ್ತೇನೆ. ||

ಕಣ್ಣೆದಿರಿಗೇ ಪರಿಸ್ಥಿತಿಗಳು ಹದಗೆಡುತ್ತಿದ್ದವು. ಆದರೂ,
ನಾನು ಹಿಂಜರಿಯಲಿಲ್ಲ - ಅಳುಕಲಿಲ್ಲ.
ಇಂತಹ ಏರುಪೇರುಗಳ ಸಂಕಟದ ನಡುವೆ
ನನ್ನ ತಲೆಯು ಕೆಡಬಹುದು , ಆದರೆ ಅದೆಂದಿಗೂ ಬಾಗವುದಿಲ್ಲ. ||

ಈ ಜಗದ ಮೇಲಿನ ಅಶಾಂತಿ ಕಣ್ಣೀರುಗಳ ಮುಂದೆ
ನನ್ನೀ ಸಾವಿನ ನೆರಳೇನೂ ನನಗೆ ಭಯಾನಕವೆನಿಸುತ್ತಿಲ್ಲ.
ಈ ಹಾದಿಯಲಿ ಏನೆಲ್ಲಾ ಬಂತೋ - ಬರಬಹುದೋ ,
ಅದ್ಯಾವುದರ ಬಗೆಗೂ ನನಗೆ ಆತಂಕವಿಲ್ಲ. ||

ಜೀವನದ ದಾರಿ ಎಷ್ಟು ಕಿರಿದಾಗಿದ್ದರೇನು ? ಕಟುವಾಗಿದ್ದರೇನು ?
ಏನೆಲ್ಲಾ ಕಷ್ಟ-ನಷ್ಟಗಳು ಬಂದೊದಗಿದರೇನು ?
ನನ್ನ ಪಾಡಿಗೆ ನಾನೇ ಅಂಬಿಗ
ನನ್ನ ಮನಸಿಗೆ ನಾನೇ ನಾಯಕ ||5 comments:

ವಿ.ರಾ.ಹೆ. said...

ಸಿನೆಮಾವನ್ನು ನೋಡಲೇಬೇಕು.

ಅನುವಾದವು ಇಷ್ಟವಾಯಿತು.

ಬಾಲು said...

ಒಮ್ಮೆ ಸಿನಿಮಾ ನೋಡಬೇಕು ಹಾಗಾದ್ರೆ. :)

ಚುಕ್ಕಿಚಿತ್ತಾರ said...

ಸಿನಿಮಾ ಕುರಿತ ಬರಹ ಚನ್ನಾಗಿದೆ.ಸಿನಿಮ ನೋಡಬೇಕು..

sunaath said...

ತುಂಬ ಸೊಗಸಾಗಿ ಸಿನೆಮಾದ ಸಾರವನ್ನು ತಿಳಿಸಿದ್ದೀರಿ. ಕವನ ಹಾಗು ಅನುವಾದ ಇಷ್ಟವಾದವು.

ಮನಸಿನಮನೆಯವನು said...

ಅನುವಾದ ಇಷ್ಟವಾಯಿತು..
ಹೌದು, ಅವರವರ ಮನಸಿಗೆ ಅವ್ರೆ ನಾಯಕರು.