Feb 22, 2011

ಶಂಭುವಾಣಿ - ೨


ದಯೆ ಮತ್ತು ಮರಣ

"ದಯವೇ (ದಯೆಯೇ) ಧರ್ಮದ ಮೂಲವಯ್ಯಾ" ಎಂದು ಬಸವಣ್ಣ ಮಹಾಶಯರು ಹೇಳಿದಾಗ ಜಗತ್ತಿನಲ್ಲಿ ದಯೆಯ ಔಚಿತ್ಯವನ್ನು ಯಾರೂ ಪ್ರಶ್ನಿಸಲಿಲ್ಲ. ಸಾಂಸ್ಕೃತಿಕ ಕಲಸು ಮೇಲೋಗರಗಳ ಇಂದಿನ ಜಗತ್ತಿನಲ್ಲಿ ದಯೆ, ಕರುಣೆ,ಮಾನವೀಯತೆಗಳೇ ’ಮೂಲವ್ಯಾಧಿ’ಯಯ್ಯಾ ಎಂದು ಮಾನ್ಯ ಶಂಭುಲಿಂಗರು ಹೇಳಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಭಿಕ್ಷುಕನೊಬ್ಬನಿಗೆ ಒಂದು ರೂಪಾಯಿ ಹಾಕಿದರೆ , ಪಾರ್ಟಿಯನ್ನೊಮ್ಮೆ ತಲೆಯಿಂದ ಕಾಲಿನವರೆವಿಗೂ ನೋಡಿ ’ಒಳ್ಳೆ ಸೂಟು-ಬೂಟು ಆಕ್ಕಂಡವ್ನೆ, ಇಷ್ಟೆಯಾ ಇವ್ನ ಯೇಗ್ಯತೆ’ ಎಂದು ಬೈದುಕೊಂಡು ಹೋಗುವುದನ್ನು ಅನುಭವಿಸಿರುವವರು ಹೇರಳ.  ಕರುಣೆಗೆ ಬೆಲೆ ಎಲ್ಲಿದೆ ಸ್ವಾಮಿ !?.

ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ಯ ನಿರ್ದೇಶನದ ’ಗುಜಾರಿಶ್’ ಎಂಬ ಹಿಂದಿ ಚಲನಚಿತ್ರದ ಕಥಾವಸ್ತು ’ದಯಾಮರಣ’. ಚಿತ್ರದ ನಾಯಕ ಖ್ಯಾತ ಜಾದುಗಾರ. obviously ಆತನಿಗೊಬ್ಬ ವಿಲನ್ ಜಾದುಗಾರ ಇರುತ್ತಾನೆ. ನಾಯಕನ ಜಾದೂ ಕಾರ್ಯಕ್ರಮ ನೆಡೆಯುವಾಗ ವಿಲನ್ ಜಾದುಗಾರ ಆತನನ್ನು ’ಮುಗಿಸುವ’ ಸಂಚು ಮಾಡುತ್ತಾನೆ. ಅದೃಷ್ಟವಶಾತ್ ನಾಯಕ ಸಾಯುವುದಿಲ್ಲ. ದುರಾದೃಷ್ಟಕ್ಕೆ ಆತ ಬದುಕಿಯೂ ಸತ್ತಂತಾಗುತ್ತಾನೆ. ಆತನ ಕೈ-ಕಾಲು-ಬೆನ್ನೆಲುಬುಗಳೆಲ್ಲವೂ ನಿಷ್ಕ್ರಿಯವಾಗಿ ಆತನೊಬ್ಬ ವರ್ತಮಾನದ ’ಭೂತ’ವಾಗುತ್ತಾನೆ. ಇಷ್ಟಾದರೂ, ನಾಯಕನ ಕುತ್ತಿಗೆಯ ಮೇಲ್ಭಾಗದ ಎಲ್ಲಾ ಅಂಗಗಳೂ ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಆತನಿಗೊಬ್ಬ care taker (cum ಸಂಗಾತಿ !) ಇರುತ್ತಾಳೆ. ಆಕೆಯೇ ಆತನ ’ಸಂಪೂರ್ಣ’ ಹೊಣೆಯನ್ನು ಹೊರುವವಳು !. ಮಲಗಿದಲ್ಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಬೇಕಾದ ಆತನಿಗೆ ಆಕೆಯೇ ಕೈ-ಕಾಲು-ಬೆನ್ನೆಲುಬಾಗಿ ನಿಲ್ಲತ್ತಾಳೆ.  ಅವರ ವೈಯಕ್ತಿಕ ಪ್ರಪಂಚದಲ್ಲಿ ಬೇರಾರಿಗೂ ಪ್ರವೇಶವಿರುವುದಿಲ್ಲ. ಇಷ್ಟಾದರೂ ನಾಯಕ ಮಾತ್ರ ಯಾವತ್ತೂ ಉತ್ಸಾಹದ ಚಿಲುಮೆಯಂತಿರುತ್ತಾನೆ. ತನ್ನಿಂದ ಇತರರಿಗೇಕೆ ತೊಂದರೆ (ತನಗೂ ಸಹ!) ಎಂಬ ಗೊಂದಲಕ್ಕೆ ಬೀಳುವ ನಾಯಕ ತನಗೆ ದಯಾಮರಣ ಕಲ್ಪಿಸುವಂತೆ ನ್ಯಾಯಾಲಯವನ್ನು ಕೇಳಿಕೊಳ್ಳುತ್ತಾನೆ. ಆತನ ಮತ್ತೊಬ್ಬ ವಕೀಲ ಸ್ನೇಹಿತೆ ಆತನ ಪರವಾಗಿ ವಕಾಲತ್ತು ವಹಿಸುತ್ತಾಳೆ          ( ಇದೆಲ್ಲಾ ತೀರಾ ಭಾವನಾತ್ಮಕ ಸನ್ನಿವೇಶಗಳು, ಭಾವುಕರು ಕರವಸ್ತ್ರ ಇಟ್ಟುಕೊಳ್ಳಬಹುದು). ನ್ಯಾಯಾಲಯ ಆತನಿಗೆ ದಯಾಮರಣವನ್ನು ಕಲ್ಪಿಸುವುದಿಲ್ಲ (according to ಸಾಂವಿಧಾನಿಕ ನಿಯಮಗಳು). ನಾಯಕನ ಅರ್ಜಿ ಅನೂರ್ಜಿತವಾಗುತ್ತದೆ. ಕಟ್ಟಕಡೆಗೆ ನಾಯಕನೇ ತನ್ನ ಪ್ರೀತಿ ಪಾತ್ರರೆಲ್ಲರನ್ನೂ ಕರೆದು ’ಪಾರ್ಟಿ’ ಕೊಟ್ಟು self ದಯಾಮರಣದ ನಿರ್ಧಾರವನ್ನು ಪ್ರಕಟಿಸುತ್ತಾನೆ.  ಮುಂದಿನದೆಲ್ಲಾ ಅವನಿಚ್ಚೆಯಂತೆಯೇ ನೆರವೇರುತ್ತದೆ.

ಬದುಕುವ ಹಕ್ಕು ಎಲ್ಲರಿಗೂ ಇರುವಂತೆ ಸಾಯುವ ಹಕ್ಕೂ ಇರಬಾರದೇಕೆ ಎಂದು ಮಾನ್ಯ ಶಂಭುಲಿಂಗರು ಕೊಶ್ನಿಸಿದ್ದಾರೆ. ಸಾಯುವ ಹಕ್ಕು ಬಂದರೆ ಆತ್ಮಹತ್ಯೆ ಎನ್ನುವ ಪದವೇ ನೆಗೆದು ಬಿದ್ದು ಹೋಗಬಹುದು.  ವಾಸ್ತವದಲ್ಲಿ ಚಿತ್ರದ ನಾಯಕನ ಉತ್ಸಾಹ ಎಲ್ಲರಿಗೂ ಮಾದರಿಯಾಗುವಂತಹುದೆ, ಪುಸ್ತಕವನ್ನೋದಲು ಆತನು ಬಳಸುವ ತಂತ್ರವೂ ಆಕರ್ಷಕವಾಗಿದೆ. ಇಷ್ಟಾದರೂ ’ಚಿತ್ರ’ ತುಸು ಬೋರ್ ಹೊಡೆಸಿದರೆ ಅದಕ್ಕೆ ಶ್ರೀ ಶಂಭುಲಿಂಗರು ಹೊಣೆಯಲ್ಲ !.  ಚಿತ್ರವನ್ನೊಮ್ಮೆ ನೋಡಿದರೆ ನಾಯಕನಿಗೆ ದಯಾಮರಣದ ಯೋಚನೆ ಏಕೆ ಬಂತೆಂಬುದು ಅರಿವಾಗುತ್ತದೆ. ಸಾಯುವುದಕ್ಕೂ ಸ್ವತಂತ್ರ ಬೇಕಲ್ಲವೆ ? . ಟಿಪಿಕಲ್ ಕೈಲಾಸಂ ೧೯೪೬ ರಲ್ಲಿ ಸತ್ತರು. ಇನ್ನೊಂದು ವರುಷ ಬದುಕ್ಕಿದ್ದಿದ್ದರೆ ಅವರೂ ಸ್ವತಂತ್ರವಾಗಿ ಸಾಯಬಹುದಿತ್ತು.   ಸಿನಿಮಾ ದಯಾಮರಣದ ಅಗತ್ಯ ಯಾರಿಗೂ ಬರದಿರಲೆಂದು ಆಶಿಸೋಣ. ಬದುಕು ಎಲ್ಲರಿಗಾಗಿ ಮತ್ತು ಎಲ್ಲರೂ ಬದುಕುವುದಕ್ಕಾಗಿ ಬದುಕೋಣ.

......................................................................................

ಗಣ -ಗಣತಿ

ಈಗ ಮತ್ತೆ ಗಣತಿ ಮೊದಲಾಗಿದೆ. ಹಲವು ಸರ್ಕಾರೀ ಸಾಂಪ್ರದಾಯಿಕ ವ್ಯವಸ್ಥೆಗಳೆಲ್ಲಾ ಈಗಾಗಲೇ ಗಣಕೀಕೃತಗೊಂಡಿರುವುದರಿಂದ ಈ ಬಾರಿಯ ಗಣತಿಯನ್ನು ನಿಜಕ್ಕೂ ’ಗಣ-ತಿ’ ಎನ್ನಬಹುದು. ಗಣತಿಯಿಂದ ಏನೇನು ಉಪಯೋಗವಿದೆ ಎಂದು ಕೆಲವರನ್ನು ಕೇಳಿದರೆ ಹಲವು ತೆರನಾದ ಉತ್ತರಗಳು ಬರುವುದು ನಿಶ್ಚಿತ.  ಗಣತಿಗೆ ನಿಗದಿ ಪಡಿಸಿರುವ ದಿನಗಳಿಗಿಂತ ಮುಂಚಿತವಾಗಿ ಗಣತಿಯನ್ನು ಮುಗಿಸಿ ಮಿಕ್ಕ ದಿನಗಳನ್ನು ಸಂಸಾರದ ಜೊತೆ ’ಕಳೆಯ’ಬಹುದಾದ ಉಪಯೋಗ ಶಿಕ್ಷಕರಿಗಿದೆ ಎಂದು ಮಾನ್ಯ ಶಂಭುರವರು ಪಿಸುದನಿಯಲ್ಲಿ ಹೇಳಿದ್ದಾರೆ. ಗಣತಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿರುವುದರಿಂದ ಅವರೀಗ ನಿಜಕ್ಕೂ ’ಶಿಕ್ಷಿತರೇ ’ ಎನ್ನಬಹುದು.  ಸುಶಿಕ್ಷಿತರು ಎಂಬ ಪದವನ್ನು ಶಿಕ್ಷಕರೆಲ್ಲಾ ಸೇರಿಕೊಂಡು ಒಳ್ಳೆಯ ಶಿಕ್ಷೆ ಅನುಭವಿಸುತ್ತಿರುವವರು ಎಂದು ಬದಲಾಯಿಸಿಕೊಳ್ಳಬಹುದು. ಯಾರಿಗೆ ಏನಾಗಲೀ , ಬಿಡಲಿ ’ಮಂಗಳಮುಖಿ’ಯರಿಗಂತೂ ಈ ಬಾರಿಯ ಗಣತಿಯಲ್ಲಿ ಅವರನ್ನೂ (ಮಕ್ಕಳನ್ನೂ, ತಂದೆಯ(ರ)ನ್ನೂ means ಪೋಷಕರನ್ನು) ’ಗಣ’ನೆಗೆ ತೆಗೆದುಕೊಳ್ಳುವ ಭರವಸೆ ದೊರೆತಿದೆ ಮತ್ತು ಈಡೇರುತ್ತಿದೆ. ಮಂಗಳಮುಖಿಯರ ವಿಚಾರ ಇಲ್ಲಿ ಬರೆಯಲು ಕಾರಣ, ಇದೀಗ ನಾನು ಓದುತ್ತಿರುವ ಭಾಷಾಪರಿಣತ, ಭಾಷಾಶಾಸ್ತ್ರ ಅನುವಾದಕ ಶ್ರೀಯುತ A.K. ರಾಮಾನುಜನ್ ಅವರ ಪುಸ್ತಕ. ತೆಲುಗಿನ ಕ್ಷೇತ್ರಯ್ಯ, ಅನ್ನಮಯ್ಯ, ಸಾರಂಗಪಾಣಿ ಮುಂತಾದವರ ಪದಗಳನ್ನು ಆಂಗ್ಲಭಾಷೆಯಲ್ಲಿ ಅನುವಾದಿಸಿ ಅವರು ಬರೆದಿರುವ ಪುಸ್ತಕ "When God is a customer"( ದೇವರು ಗಿರಾಕಿಯಾಗಿ !) .  
{ಪುಸ್ತಕ ಎಲ್ಲೆಲ್ಲೂ ಅಲಭ್ಯ. ಗೂಗಲ್-ಇ-ಬುಕ್ಸ್ ನಲ್ಲಿ ಹುಡುಕಿದಾಗ ಕೇವಲ ಟಿಪ್ಪಣಿ ಮತ್ತು ಪರಿಚಯವಷ್ಟೇ ದೊರೆತದ್ದು. ಕಡೆಗೆ Landmark ಪುಸ್ತಕ ಮಳಿಗೆಯಲ್ಲಿ ಇದೆ ಎಂದು ತಿಳಿದು ಕಾಸು ಕೊಟ್ಟು ತಂದಿರಿಸಿಕೊಂಡಿದ್ದೇನೆ.}
ಭಾಷಾನುವಾದದಲ್ಲಿ A.K. (A=ಆಂಗ್ಲ, K=ಕನ್ನಡ ಎನ್ನೋಣವೇ ? ) ರಾಮಾನುಜನ್ ಅವರಿಗೆ ಸರಿಸಾಟಿಯಾಗಬಲ್ಲವರು ಇಲ್ಲವೆಂದು ಹೇಳುವುದು ಅತಿಶಯೋಕ್ತಿಯಾದರೂ, ಒಂದರ್ಥದಲ್ಲಿ ಅದೂ ನಿಜವೇ ಆಗುತ್ತದೆ. (ರಾಮಾನುಜನ್ನೇ ’ಏಕೆ’ ? ಇನ್ನೊಬ್ಬ ಭಟ್ಟರೋ, ಶೆಟ್ಟರೋ ಆಗಬಾರದೇ ?  ಎಂದು ಯಾರಾದರೂ ಪ್ರಶ್ನಿಸಿದರೆ  ಅದಕ್ಕೆ ಮಾನ್ಯ ’ಶಂ’ ರವರ ಬಳಿ ಉತ್ತರವಿಲ್ಲ !). ಪುಸ್ತಕದ ಅನುವಾದವನ್ನು ಓದುತ್ತಿದ್ದರೆ, ಮುಗಿಸುವಷ್ಟರಲ್ಲಿ ನಾನೇನಾದರೂ ಇಂದ್ರಿಯಾತೀತನಾಗಿ (’ಕುಂಡಲಿನಿ’ ಸಿಡಿದು !) ಬಿಡುತ್ತೇನೇನೋ ಎಂದು ಅನಿಸುತ್ತಿದೆ.
When God is a customer ನಲ್ಲಿ ದೇವರೇ ಮಂಗಳಮುಖಿಯರ ಬಳಿ ಬರುತ್ತಾನೆ. (ಇಂದಿನ ಸಾಮಜಿಕ ಸ್ಥಿತಿಗೆ ತದ್ವಿರುದ್ದ) . ಆತನೇ ಗಿರಾಕಿಯಾಗುತ್ತಾನೆ, ಹಣ ನೀಡುತ್ತಾನೆ !.
ಇದು ಮೀರಾ-ಮಾಧವ, ಗೋಪಿ-ಕೃಷ್ಣರ ಕತೆಗಳಿಗೆ ವಿರುದ್ದವಾಗಿಯೇ ನೆಡೆಯುತ್ತದೆ. ಅದಕ್ಕೇ ಪುಸ್ತಕದ ಹೆಸರು "When God is a customer" .
ದೇವರಿಗೆ ಭಕ್ತರು ಇರಲೇಬೇಕೆಂದೇನೂ ಇಲ್ಲ. ಆದರೆ ಭಕ್ತರಿಗೆ ದೇವರಂತೂ ಬೇಕು ಕನಿಷ್ಟ ಭಕ್ತ/ಭಕ್ತೆ ಎನಿಸಿಕೊಳ್ಳಲು.   ಪುಸ್ತಕ ಓದಿ ಮುಗಿಸಿದ ನಂತರ ’ಸಾಧ್ಯವಾದಲ್ಲಿ’ ಇನ್ನಷ್ಟು ಬರೆಯುತ್ತೇನೆ.
....................................................

ಕಿಡಿ :

ಇತ್ತೀಚೆಗೆ ಮಂತ್ರಿವರ್ಯರೊಬ್ಬರು ತಮಿಳುನಾಡಿನ ಕಾಮಾಕ್ಷಿ ದೇವಾಲಯಕ್ಕೆ ಮುಗಿಬಿದ್ದಿದ್ದರು. ’ಕೋವಿಲ್ (ಕೋಯಿಲ್)’ ನ ಒಳಗಡೆ ನಿಂತಿದ್ದಾಗ ಅವರ ಜೇಬಿನಿಂದ ಅಚಾನಕ್ಕಾಗಿ  ಅಮೂಲ್ಯ ವಸ್ತುವೊಂದು ಕೆಳಗೆ ಬಿದ್ದಿತಂತೆ. ಬಿದ್ದುದನ್ನು ತೆಗೆದುಕೊಳ್ಳಲು ಬಗ್ಗಿದಾಗ ’ಟೈಟ್’ ಆಗಿದ್ದ ಮಾನ್ಯರ ಪ್ಯಾಂಟಿನ ಹಿಂಭಾಗ ಸಿಡಿದು-ಭಾಗವಾಗಿ ಹಿಂಬದಿಯಲ್ಲಿದ್ದವರೆಲ್ಲರಿಗೂ ಅವರ ಅಂಡಿನ ದರ್ಶನವಾಯಿತಂತೆ. (ಅವರೇನು ಒಳವಸ್ತ್ರ ಹಾಕಿರಲಿಲ್ಲವೇ ? ಎಂಬ ಕಿಡಿಗೇಡಿ ಪ್ರಶ್ನೆಯನ್ನು ಮಾನ್ಯ ಶಂಭುಲಿಂಗರು ಕೇಳಿದ್ದಾರೆ).

ಕಣ್ಣಾರೆ ಕಂಡೆ ನಾ
ಕಾಮಾಕ್ಷಿಯ ...

ಎಂಬ ಹಾಡಿರುವಂತೆ

ಕಣ್ಣಾರೆ ಕಂಡೆ ನಾ
ಖಂಡೇರಾಯನ ಕುಂಡೀನಾsss....

ಎಂಬ ಎ’ಲೈಟ್’ ಪದ್ಯದೊಂದಿಗೆ ಮುಗಿಸೋಣ.

..............................*.......................................

Jan 12, 2011

ಶಂಭುವಾಣಿ - ೧

ಎಲ್ಲ ಬಲ್ಲವರು ಇಲ್ಲಿಹರು ...
.................................
 ಎಲ್ಲವನ್ನೂ ಬಲ್ಲವರು ಎಲ್ಲೂ ಇರಲು ಸಾಧ್ಯವಿಲ್ಲ ಎಂಬುದು (ಸರ್ವಜ್ಞನನ್ನು ಹೊರತುಪಡಿಸಿ) ಸಾರ್ವತ್ರಿಕ ಸತ್ಯವಾದರೂ ’ನಿಂದೆಲ್ಲಾ ಗೊತ್ತು ಕುಂತ್ಕಳಯ್ಯಾ’ ಎಂದು ರೇವಣ್ಣೋರು ಹೇಳಿದ್ದರಲ್ಲಾಗಲೀ, ’ಬಹಿರಂಗ ಚರ್ಚೆಗೆ ಬಾರಯ್ಯಾ, ನಿನ್ ಬಂಡ್ವಾಳ ನಂಗೂ ಗೊತ್ತು" ಎಂದು ಮುಖ್ಯಮಂತ್ರಿಗಳು ಹೇಳಿದ್ದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲವೆಂದು ಯಾರಾದರೂ ಹೇಳಲು ಸಾಧ್ಯವೆ ! ? . ಸದನದಲ್ಲಿ ಎಲ್ಲರ ಬಂಡ್ವಾಳವೂ ಎಲ್ಲರಿಗೂ ಗೊತ್ತಿರುತ್ತದೆ. ಅಲ್ಲಿ ಎಲ್ಲವನ್ನೂ ಬಲ್ಲವರೇ ಇರುವುದೆಂದು ಈ ಮಾತುಗಳಿಂದ ಸಾಬೀತಾಗುತ್ತದೆ.
ಇಂತಹ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಮಾನ್ಯ ಶಂಭುಲಿಂಗರು ಹೀಗೆ ಥಟ್ಟನೆ ಕವನವೊಂದನ್ನು ವಾಚಿಸಿದರಂತೆ.

                               ದನಗಳು ಹೊಕ್ಕವು
                               ಸದನ,
                               ಅಲ್ಲಿ ನೆಡೆಯಿಸಿದವು
                               ಕದನ.

ಮಾಜಿ ಮುಖ್ಯಮಂತ್ರಿಯೊಬ್ಬರು ಸದನವನ್ನು ಹೆಂಡದಂಗಡಿಗೆ ಹೋಲಿಸಿದ್ದಕ್ಕೆ ಸುಸಜ್ಜಿತ ಬಾರುಗಳೆಲ್ಲಾ ಬೇಸರಪಟ್ಟುಕೊಂಡಿರಬಹುದೆ ? . ಹೆಂಡ ಕುಡಿದು ಅವಾಚ್ಯ ಶಬ್ದಗಳನ್ನು ಉಪಯೋಗಿಸುವವರನ್ನು ’ಕುಡುಕ’ ಎಂದು ಹೇಳಿ ಸುಮ್ಮನಾಗಬಹುದು. ಕುಡಿಯದೇ, ಆಡಬಾರದ್ದನ್ನು ಆಡುವುದು ಸದನಿಗರ ಸತ್ತ ಸಂಪ್ರದಾಯವೆಂಬುದನ್ನು ಮಾನ್ಯ ಶಂಭುಲಿಂಗರು ಅನುಗ್ರಹಪೂರ್ವಕವಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಸದನದ ಘನತೆಯ ಕುರಿತಾಗಿ ಹಾಗೆಲ್ಲಾ ಹೇಳಬಹುದೆ ? , even Homer nods- (’ಐರಾವತವೂ ಅಡಿ ತಪ್ಪುತ್ತೆ ’ ಅಂತ ಕೈಲಾಸಂ ಹೇಳಿದ್ದನ್ನು ಎಲ್ಲೋ ಓದಿದ ನೆನಪಿದೆ, ಆದರೆ ಶಿರಾಡಿ ಘಾಟಿನಲ್ಲಿ ಓಡಾಡುವ ಸರ್ಕಾರಿ ಬಸ್ಸುಗಳು ಮೀಟರನ್ನೂ ತಪ್ಪಿ ಹಾರುತ್ತವೆ ಎನ್ನುವುದು ಶಂಭುವಿನ ಚೋದ್ಯ !)   ಅಂತ ವೈಯೆನ್ಕೆ ನೆನಪಿಸಿದ್ದನ್ನು ಇಲ್ಲಿ ಅನ್ವಯಿಸಿಕೊಳ್ಳೋಣವೆ ? ! . ಹೋಮರನೂ ತೂಕಡಿಸಿದನಂತೆ ( ಎಚ್ಚರ ತಪ್ಪಿದನಂತೆ) ಎಂದು ಆಶ್ಚರ್ಯಸೂಚಕವಾಗಿ ಹೇಳುವುದು ವರ್ತಮಾನಕ್ಕೆ ಸಲ್ಲುವುದಿಲ್ಲ.  ನಮ್ಮ ದೊಡ್ಡಗೌಡರು ತೂಕಡಿಸಿಕೊಂಡೇ ಪ್ರಧಾನಿಯಾದುದು (ಪ್ರಧಾನಿಯಾಗುವ ಹಿಂದಿನ ದಿನ ಭಾರೀ ಎಚ್ಚರಿಕೆಯಲ್ಲಿದ್ದರು ಎಂದು ಶಂಭುಲಿಂಗರು ಹೇಳಿದ್ದಾರೆ !) ಮತ್ತು ಸದನದ ಗಲಾಟೆಗಳ ನಡುವೆಯೂ ಗೊರಕೆ ಹೊಡೆಯುವ ನಾಯಕರನ್ನು ಕರುನಾಡು ಕಂಡದ್ದು ಇತಿಹಾಸದ ಪುಟಗಳನ್ನು ಸೇರಿಲ್ಲವೆ ?.
ಸದನದ ಮರ್ಯಾದೆಯನ್ನು ಉಳಿಸಲು ’ಉದ್ದಮ್ಮ’ನವರು ಹಾಡಿ ಕುಣಿದದ್ದು ಅತ್ಯಾಕರ್ಷಕವಾಗಿತ್ತಂತೆ...

                          ಎಲ್ಲಾ ಮಾಯವೋ ರಂಗಾ,
                          ಮಾನ-ಮರ್ಯಾದೆಗಳು,
                          ಸಿದ್ದಾಂತ-ಚಾರಿತ್ರ್ಯಗಳು,
                          ಮುಖ್ಯಮಂತ್ರಿಯೆಂಬ ಸಿಂಗನ ಮುಂದೆ ..!

ಹಾಡಿ ಕುಣಿಯುವಾಗ ಉದ್ದಮ್ಮನವರ ಸೀರೆ ಜಾರಿದ್ದನ್ನು ಮಾತ್ರ ಗೋಪ್ಯವಾಗಿಡಲಾಗಿದೆಯೆಂದು ಮಾನ್ಯ ಶಂಭುಲಿಂಗರು ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ಕದನಕ್ಕೆ ಕಾರಣವಾಗಿರುವ ಅಕ್ರಮ ಗಣಿಗಾರಿಕೆಯ ವಿಚಾರದ ಒಟ್ಟು ಮೊತ್ತವನ್ನು ’ಸಗಣಿ ಎರಚುವ ಕದನ’ ಎಂದು ವಿಶ್ಲೇಶಿಸಬಹುದಲ್ಲವೆ ?!.

ಇದರ ನಡುವೆ ಚರ್ಚೆಗೆ ಬಂದ ಮತ್ತೊಂದು ಅಂಶವೆಂದರೆ, ಮಂದಿರವೇ ಬೇಕೆಂದು ಹಠ ಹಿಡಿದಿದ್ದ ಪಕ್ಷವೊಂದರ ದೊಡ್ಡ ನಾಯಕರೆಲ್ಲಾ ಅದೊಂದು ದಿವಸ ಯಾವುದೋ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ’ಮಂದಿರಾ ಬೇಡಿ’ ಮಂದಿರಾ ಬೇಡಿ’ ಎಂದು ಕಿರುಚಾಡಿದರಂತೆ.  ಇದನ್ನು ಕಂಡಂತಹ ವಿಪಕ್ಷದ ದಡ್ಡ ನಾಯಕರೆಲ್ಲಾ ಇದೂ ಒಂದು ರಾಜಕೀಯದ ವರಸೆಯೇ ಇರಬೇಕೆಂದು ಭ್ರಮಿಸಿ "ಮಂದಿರವೇ ಬೇಕು" ಎಂದು ಠಳಾಯಿಸಿದರಂತೆ. ಪಕ್ಷಗಳ ವಿಚಾರಗಳು-ಸಿದ್ದಾಂತಗಳು ಉಲ್ಟಾ ಆಗಿದ್ದನ್ನು ಕಂಡಂತಹ ಶಂಭುಲಿಂಗರು ಬೇಸರಗೊಂಡು , ಸಮಾರಂಭದಲ್ಲಿ ’ಮಂದೀರಾ ಬೇಡಿ’ ಎಂಬ ಐವತ್ತರ ನವತರುಣಿಯೊಬ್ಬಳು ಬಿಜಯಂಗೈದಿದ್ದನ್ನು ಸ್ಪಷ್ಟಪಡಿಸುವಷ್ಟರಲ್ಲಿ  ಮದಿರೆಯ ನಶೆ ಮಂದಿರವನ್ನು ಮರೆಸಿತ್ತಂತೆ !.

ಸದನದಲ್ಲಿ ಅತ್ಯಪೂರ್ವ ಕದನವನ್ನು ಕಂಡಂತಹ ದನಗಳೆಲ್ಲಾ ಬಾಲವನ್ನೆತ್ತಿಕೊಂಡು ಹೀಗೆ ಹಾಡಿದುವಂತೆ..

ಬನ್ನಿ ಬಂಧುಗಳೆ
ಬನ್ನಿ ನಮ್ಮೆಡೆಗೆ
ಹಿಂಡಿ-ಬೂಸವನು ತಿನ್ನಲು,
ಅವರಿವರ ಮನೆಯ
ಕೊಳೆತ ತರಕಾರಿಗಳ
ಕಲಗಚ್ಚು ಕುಡಿಯಲು

ನಾವು ನೀಡುವೆವು
ಶುದ್ಧ ಹಾಲನು,
ನೀವು ನೀಡಿರಿ
ಆಲ್ಕೋಹಾಲನು !



ಪುಲಿಗೆರೆಯ ಸೋಮನಾಥರ ಸೋಮೇಶ್ವರ ಶತಕದ ವರ್ಣನೆಯಂತೆ ನಮ್ಮ ನಾಯಕರನ್ನು ಯಾರದರೂ ಬದಲಾಯಿಸಲು ಸಾಧ್ಯವೆ ?

 "ಬಡಿಗೋಲಂ ಸಮಮಾಡಲಕ್ಕು ಮರೆಯೊಳ್ ಕೂಪಂಗಳಂ ತೋಡಲ
  ಕ್ಕಿಡಿಮಕ್ಕಂ ಮೃದುಮಾಡಲಕ್ಕು ಮಳಲೊಳ್ ತೈಲಂಗಳಂ ಹಿಂಡಲ |
  ಲಕ್ಕಡವೀ ಸಿಂಗವ ತಿದ್ದಲಕ್ಕು ಕರೆಯಲ್ ಬಕ್ಕುಗ್ರದ ವ್ಯಾಘ್ರಮಂ
  ಕಡು ಮೂರ್ಖಂ ಹಿತಕೇಳ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ || "

 ಎಂದು ಸುಮ್ಮನಾಗಬಹುದಷ್ಟೆ !.


..........................*........................

ಕಿಡಿ :

 ಮಹನೀಯರೊಬ್ಬರು, ಬ್ಲಾಗು ಬರಹಗಳನ್ನು ಹೂಸಿನ ವಾಸನೆಗೆ ಹೋಲಿಸಿದ್ದಕ್ಕೆ ಮಾನ್ಯ ಶಂಭುಲಿಂಗರು ಅನುಕಂಪ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಹೂಸುಗಳೂ ವಾಸನೆ ಬರುವುದಿಲ್ಲವೆಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
"ಡರ್ ಬುರ್ ಮಹಾಪುಣ್ಯಂ, ಟುಸ್ ಪುಸ್ ಮಹಾಪಾಪಂ’ ಎಂಬ ಹಳೆಯ ತುಂಡು ವಕ್ರೋಕ್ತಿಯನ್ನು ಮತ್ತೆ-ಮತ್ತೆ ನೆನಪಿಸಿದ್ದಾರೆ.
"ಬೆಳ್ಳಗಿರುವುದೆಲ್ಲಾ ಹಾಲಲ್ಲ" ಎಂಬ ಗಾದೆಯಿರುವಂತೆ " ಬಿಟ್ಟ ಹೂಸುಗಳೆಲ್ಲಾ ದುರ್ನಾತ ಬೀರುವುದಿಲ್ಲ" ಎಂಬ ಗಾದೆಯನ್ನು ಶಂಭುಲಿಂಗರು ಗಾಳಿಯಲ್ಲಿ ತೇಲಿಬಿಟ್ಟಿದ್ದಾರೆ !.


....................*.......................

ವಂದನೆಗಳೊಂದಿಗೆ....

Dec 16, 2010

ಗರುಡ ಮತ್ತು ಅರುಣ

ಗರುಡ ಮತ್ತು ಅರುಣ ಎಂಬ ಹೆಸರುಗಳನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಸಾಮಾನ್ಯವಾಗಿ ಗರುಡಪಕ್ಷಿಯನ್ನು ವಿಷ್ಣುವಿನ ವಾಹನವನ್ನಾಗಿಯೂ ಮತ್ತು ಅರುಣನನ್ನು ಸೂರ್ಯನ ಸಾರಥಿಯನ್ನಾಗಿಯೂ ವರ್ಣಿಸಿರುವುದನ್ನು ಓದಿ, ಕೇಳಿ ತಿಳಿದಿರುತ್ತೇವೆ. ಹಾಗಾದರೆ ಈ ಅರುಣ ಯಾರು ? ಮತ್ತು ಗರುಡಪಕ್ಷಿಗೂ ನಾಗಗಳಿಗೂ (ಹಾವುಗಳು) ವೈರತ್ವವೇಕೆ ?. ಇದಕ್ಕೆ ಸಂಬಂಧಿಸಿದಂತೆ ಗರುಡಪುರಾಣ ಮತ್ತು ಮಹಾಭಾರತದಲ್ಲಿ ಸೊಗಸಾದ ಕತೆಯೊಂದಿದೆ. ಕೆಳಗಿನ ಶಿಲ್ಪಚಿತ್ರವನ್ನು ಗಮನಿಸುತ್ತಾ ಚಿತ್ರದಲ್ಲಿ ಅಡಕವಾಗಿರುವ ಪುರಾಣೋಕ್ತ ವಿವರಣೆಗಳನ್ನು ತಿಳಿಯೋಣ.


ಮೊದಲಿಗೆ, ಅತ್ಯಂತ ಸುಂದರವಾದ ಮೇಲಿನ ಶಿಲ್ಪಕಲಾಚಿತ್ರವನ್ನು ಗಮನಿಸಿದಾಗ ಗರುಡಪಕ್ಷಿಯು ನಾಗಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವುದನ್ನು ಗಮನಿಸಬಹುದಾಗಿದೆ. ಈ ಶಿಲ್ಪಚಿತ್ರವು ಸುಮಾರು ೯೦೦ ವರುಷಗಳಷ್ಟು ಪುರಾತನವಾದ ಹೊಯ್ಸಳರ ಕಾಲದ ದೇವಾಲಯವೊಂದರಲ್ಲಿ ಕಂಡುಬಂದಿರುತ್ತದೆ.  ಗರುಡ ಮತ್ತು ನಾಗಗಳ ರಚನೆ , ಶಿಲ್ಪದಲ್ಲಿರುವ ಸಹಜತೆ, ಸೂಕ್ಷ್ಮಕೆತ್ತನೆಗಳನ್ನು ಗಮನಿಸಿದಾಗ ಶಿಲ್ಪಕಾರರಲ್ಲಿ ಇದ್ದಂತಹ ಸಮರ್ಪಣಾ ಮನೋಭಾವ , ತಾಳ್ಮೆ, ಸಂಸ್ಕೃತಿಯ ಅರಿವಿನ ಬಗೆಗೆ ಆಸಕ್ತಿ ಮೂಡುವುದರೊಂದಿಗೆ ಆಶ್ಚರ್ಯವೂ ಆಗುತ್ತದೆ. ಒಂದು ಶಿಲ್ಪ ವಿಗ್ರಹವನ್ನು ಕಡೆಯುವುದರ ಮೂಲಕ ಪುರಾಣದಲ್ಲಿರುವ ವಿಶಿಷ್ಟ ಘಟನೆಯೊಂದನ್ನು ಶಿಲ್ಪಿಯು ಹೇಳಿರುತ್ತಾನೆ. ಆ ಕತೆಯು ಹೀಗೆ ಪ್ರಾರಂಭವಾಗುತ್ತದೆ.

ಚತುರ್ಮುಖ ಬ್ರಹ್ಮನ ಮಗನಾದ ಕಶ್ಯಪಮಹರ್ಷಿಯು ( ಈತ ಬ್ರಹ್ಮರ್ಷಿಯೂ ಆಗಿದ್ದರಿಂದ ’ಕಶ್ಯಪಬ್ರಹ್ಮ’ನೆಂಬ ಉಲ್ಲೇಖವೂ ಕೆಲೆವೆಡೆ ಇದೆ. ವ್ಯತ್ಯಾಸಗಳೂ ಇದೆ.)  ’ದಕ್ಷ’ನ ಹದಿಮೂರು ಮಕ್ಕಳನ್ನು ವಿವಾಹವಾಗುತ್ತಾನೆ. ( ಕೆಲೆವೆಡೆ ’ಇಬ್ಬರು’ ಎಂದಿದೆ). ಅವರ ಹೆಸರುಗಳು ಹೀಗಿವೆ.., ’ಅದಿತಿ, ದಿತಿ, ದನು, ಕಲಾ, ಮುನಿ, ಅನಯೂ, ಕದ್ರು,ಪ್ರಭಾ, ಇರಾ, ಕ್ರೋಧ, ವಿನತ, ಸುರಭಿ ಮತ್ತು ಖಗ’ . ಇವರಲ್ಲಿ ಮುಖ್ಯವಾಗಿ ಅದಿತಿಗೆ ಹನ್ನೆರಡು ಮಕ್ಕಳು ಜನಿಸುತ್ತಾರೆ, ಅವರು ದೈವಾಂಶಮಿಳಿತರಾದ ದ್ವಾದಶ ಆದಿತ್ಯರೆಂದು (೧೨ ಮಂದಿ ಸೂರ್ಯರು !) ಪ್ರಸಿದ್ದರಾಗುತ್ತಾರೆ. ದಿತಿಯ ಮಕ್ಕಳು ದಾನವರೆಂದು ಖ್ಯಾತರಾಗುತ್ತಾರೆ, ಅವರಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪ ಪ್ರಮುಖರು.  ಇರಾ ಎಂಬುವಳು ತರು- ಲತೆಗಳಿಗೆ ತಾಯಿಯೆನಿಸಿಕೊಳ್ಳುತಾಳೆ. ಸುರಭಿಯು ದೈವತ್ವವುಳ್ಳ ಹಸುಗಳಿಗೆ ಜನ್ಮನೀಡುತ್ತಾಳೆ. ಕದ್ರುವಿನ ಮಕ್ಕಳು ನಾಗಗಳು ಮತ್ತು ವಿನತೆಯೆ ಮಕ್ಕಳೇ ಗರುಡ ಮತ್ತು ಅರುಣ.

ಪ್ರಮುಖವಾಗಿ ಕದ್ರು ಮತ್ತು ವಿನತೆಯರಲ್ಲಿ ಸಾಮರಸ್ಯವಿರುವುದಿಲ್ಲ. ಕ್ಷೀರಸಾಗರವನ್ನು ಕಡೆಯುವ ಸಮಯದಲ್ಲಿ   ಹಾಲಾಹಲ, ಕಾಮಧೇನು, ಕಲ್ಪವೃಕ್ಷ ಮತ್ತು ಅಮೃತವು ಹೊರಬಂದಂತೆ ’ಉಚ್ಚೈಶ್ರವಸ್’ ಎಂಬ ಅಪೂರ್ವ ಕುದುರೆಯೂ ಸೃಷ್ಟಿಯಾಗುತ್ತದೆ. ಆದರೆ ಕುದುರೆಯ ಬಣ್ಣದ ವಿಚಾರದಲ್ಲಿ ಕದ್ರುವಿಗೂ ವಿನತೆಗೂ ವಾಗ್ಯುದ್ಧವೇ ನಡೆಯುತ್ತದೆ. ವಿನತೆಯು, ಕುದುರೆಯು ಸಂಪೂರ್ಣ ಬಿಳಿಯಬಣ್ಣದ್ದೆಂದೂ ವಾದಿಸಿದರೆ ಕದ್ರುವು ಕುದುರೆಯ ಅಂಗಗಳಲ್ಲಿ ಕಪ್ಪುಬಣ್ಣವಿದೆ ಎಂದು ವಾದಿಸುತ್ತಾಳೆ. ವಾಸ್ತವದಲ್ಲಿ ಅದು ಶ್ವೇತಕುದುರೆಯೇ ಆಗಿದ್ದರೂ ಸಹಿತ ಕದ್ರುವಿನ ತಾಮಸ ಮನೋಭಾವ ಸೋಲೊಪ್ಪಿಕೊಳ್ಳುವುದಿಲ್ಲ.  ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳುವುದು ಮತ್ತು ಸೋತವರು ಗೆದ್ದವರಿಗೆ ಶರಣಾಗಿ ಸೇವಕಿಯಾಗಿರಬೇಕೆಂದು ತೀರ್ಮಾನಿಸಿ ತಮ್ಮ ಕ್ಷೇತ್ರವಾದ ’ಪಾಟಲ’ ಕ್ಕೆ ಬರುತ್ತಾರೆ. ಈ ನಡುವೆ ಇಬ್ಬರೂ ಸಂತಾನಪ್ರಾಪ್ತಿಗಾಗಿ ಚತುರ್ಮುಖ ಬ್ರಹ್ಮನನ್ನು ಕುರಿತು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಗೆ ಓಗೊಡುವ ಬ್ರಹ್ಮನು ಈರ್ವರಿಗೂ ಯಾವ ಬಗೆಯ ಮಕ್ಕಳು ಬೇಕೆಂದು ಕೇಳುತ್ತಾನೆ. ಕದ್ರುವು ಚತುರರಾದ ಸಾವಿರ ಮಕ್ಕಳು ಬೇಕೆಂದು ಕೇಳಿದಾಗ ಬ್ರಹ್ಮನು ಅಸ್ತು ಎಂದು ಕದ್ರುವಿನ ವಂಶವಾಹಿನಿಯಂತೆ  ಸಾವಿರ ಮೊಟ್ಟೆಗಳನ್ನು ನೀಡುತ್ತಾನೆ. ಇತ್ತ ವಿನತೆಯು, ಬಲಶಾಲಿಗಳೂ. ತೇಜೋವಂತರೂ ಆದ ಇಬ್ಬರೇ ಮಕ್ಕಳು ಸಾಕೆಂದೂ ಮತ್ತು ಅಂತಹ ಮಕ್ಕಳನ್ನು ವಿಷ್ಣುವಿಗೆ ಅರ್ಪಿಸುವೆನೆಂದೂ ಹೇಳಿಕೊಳ್ಳತ್ತಾಳೆ.  ಬ್ರಹ್ಮನು ಆಕೆಗೂ ಎರಡು ಮೊಟ್ಟೆಗಳನ್ನು ನೀಡಿ, ಮೊಟ್ಟೆಯೊಡೆದು ತಾನಾಗೆ ಮಕ್ಕಳು ಹೊರಬರುವವರೆವಿಗೂ ಅದನ್ನು ಮುಟ್ಟಬಾರದೆಂಬ ಸೂಚನೆಯನ್ನೂ ನೀಡುತ್ತಾನೆ. ಸಮಪ್ರಮಾಣದ ಶಾಖದಲ್ಲಿಟ್ಟಿದ್ದರೂ ಕದ್ರುವಿನ ಮೊಟ್ಟೆಗಳು ಒಡೆದು ಸಾವಿರ ನಾಗಗಳು ಹೊರಬರುತ್ತವೆ ಆದರೆ ವಿನತೆಯ ಮೊಟ್ಟೆಗಳು ಫಲಪ್ರದವಾಗುವುದಿಲ್ಲ.  ಸಂತಾನ ಪ್ರಾಪ್ತವಾದ ಹಮ್ಮಿನಲ್ಲಿ ಬೀಗುವ ಕದ್ರುವನ್ನು ಕಂಡಾಗಲೆಲ್ಲ ವಿನತೆಯು ಮರುಗುತ್ತಿರುತ್ತಾಳೆ. ಒಂದು ದಿವಸ ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯ ಬಣ್ಣದ ನಿಷ್ಕರ್ಷೆಯು ನೆಡೆಯಬೇಕಾಗುವಾಗ , ಕದ್ರುವು ತನ್ನ ಮಕ್ಕಳಾದ ನಾಗಗಳನ್ನು ಕರೆದು ಕುದುರೆಯ ಬಣ್ಣವನ್ನು ಬದಲಿಸಲು ಕೇಳಿಕೊಳ್ಳುತ್ತಾಳೆ. ಅದರಂತೆ ನೆಡೆಯುವ ನಾಗಗಳು ಕುದುರೆಯ ಬಾಲಕ್ಕೆ ಸುತ್ತಿಕೊಂಡು ಬಾಲವನ್ನು ಕಪ್ಪುಬಣ್ಣಕ್ಕೆ ತಿರುಗಿಸಿಬಿಡುತ್ತವೆ. ಈ ವಂಚನೆಯನ್ನು ಅರಿಯದ ವಿನತೆಯು ಸೋತೆನೆಂದು ಒಪ್ಪಿಕೊಂಡು ಕದ್ರುವಿಗೆ ಸೇವಕಿಯಾಗಿ ಇರಲು ಒಪ್ಪಿ ಆಕೆಯ ಸೇವೆಯನ್ನು ಮಾಡುತ್ತಿರುತ್ತಾಳೆ.  ಹಲವು ವರುಷಗಳು ಕಳೆದರೂ ಬ್ರಹ್ಮನಿಂದ ಕೊಡಲ್ಪಟ್ಟ ಮೊಟ್ಟೆಗಳು ಫಲವಾಗದಿರುವುದನ್ನು ಅರಿತ ವಿನತೆಯು ಕುತೂಹಲದಿಂದ ಮೊಟ್ಟೆಗಳನ್ನಿಟ್ಟಿದ್ದ ಕಲಶಗಳ ಸಮೀಪಕ್ಕೆ ಬರುತ್ತಾಳೆ.  ಒಂದು ಕಲಶದ ಮುಸುಕನ್ನು ತೆಗೆದು ನೋಡಿದಾಗ ಅರ್ಧ ರಚಿತ ಶರೀರವೊಂದು ಹೊರಬರುತ್ತದೆ.  ಅಕಾಲದಲ್ಲಿ ಕಲಶವನ್ನು ತೆರೆದಿದ್ದರಿಂದ ಶರೀರವು ಸಂಪೂರ್ಣ ರಚನೆಯಾಗುವುದಿಲ್ಲ. ಆ ಮಗುವಿಗೆ ಸೊಂಟದ ಕೆಳಗಿನ  ಭಾಗಗಳು ಬೆಳವಣಿಗೆಯಾಗುವುದಿಲ್ಲ. ರುಣ ಎಂದರೆ ತೊಡೆ ಎಂಬರ್ಥವಿರುವುದರಿಂದ ಆ ಮಗುವಿಗೆ ಅ-ರುಣ (ಕಾಲು, ತೊಡೆಗಳಿಲ್ಲದವನು, ಕೆಂಪು ಬಣ್ಣದವನು) ಅಥವ ಅರುಣ ಎಂದು ಕರೆದ ವಿನತೆಯು ಅರುಣನನ್ನು ಸೂರ್ಯನಿಗೆ ಸಾರಥಿಯಾಗಿಸುತ್ತಾಳೆ. ( ಆದಿತ್ಯನು ವಿಷ್ಣುವಿನ ಅಂಶವಾಗಿದ್ದಾನೆ. "ಸೂರ್ಯನಾರಾಯಣ" ! ).  ಹೀಗೆ ಸೂರ್ಯನಿಗೆ ಸಾರಥಿಯಾಗುವ ಅರುಣನು ರಕ್ತವರ್ಣದಿಂದ ಪ್ರಕಾಶಿಸಿ ವಿನತೆಗೆ ಕೆಲವು ಸೂಚನೆಗಳನ್ನು ಕೊಡುತ್ತಾನೆ.

                                                                     ಸೂರ್ಯ (ಆದಿತ್ಯ)

ಇನ್ನೊಂದು ಕಲಶವನ್ನು ಫಲಪ್ರದವಾಗುವವರೆವಿಗೂ ತೆರೆಯದಂತೆ ಹೇಳಿ, ಆ ಮಗುವಿನಿಂದಲೇ ವಿನತೆಯ ದಾಸ್ಯವೂ ಮುಗಿಯುತ್ತದೆಂದು ತಿಳಿಸುತ್ತಾನೆ. ಈ ಘಟನೆಯು ನೆಡೆದು ಐದುನೂರು ವರುಷಗಳ ಬಳಿಕ ಇನ್ನೊಂದು ಮೊಟ್ಟೆಯೂ ಒಡೆದು ತೇಜೋಮಯವಾದ, ಬೃಹದಾಕಾರವಾದ, ದೈವತ್ವಗುಣಗಳನ್ನು ಹೊಂದಿದ್ದ ಪಕ್ಷಿರೂಪದ ಮಗುವು ಹೊರಬರುತ್ತದೆ. ವಿನತೆಯು ಆತನಿಗೆ ’ಗರುಡ’ನೆಂದು ಹೆಸರಿಸುತ್ತಾಳೆ. ಗರುಡನಿಗೆ ತನ್ನ ಪೂರ್ವವೃತ್ತಾಂತವನ್ನೆಲ್ಲಾ ಸ್ಮರಿಸಿ ಹೇಳಿದಾಗ ಗರುಡನು ಮತ್ತೊಮ್ಮೆ ಕುದುರೆಯನ್ನು ಪರೀಕ್ಷಿಸುವ ಪಣವನ್ನು ಮುಂದಿಡುತ್ತಾನೆ. ಕಶ್ಯಪ ಮಹರ್ಷಿಯ ಸಮ್ಮುಖದಲ್ಲಿ ಕುದುರೆಯನ್ನು ಬರಮಾಡಿಕೊಂಡು ಪರೀಕ್ಷಿಸಿದಾಗ ಬಾಲವು ಕಪ್ಪಾಗಿರುವುದನ್ನು ಕಂಡು ಗರುಡನು ಕುದುರೆಯ ಬಾಲದಲ್ಲಿ ಅಡಗಿದ್ದ ನಾಗಗಳನ್ನು ಕೈಯಲ್ಲಿ  ಹಿಡಿದು ತರುತ್ತಾನೆ ಮತ್ತು ವಂಚನೆಯನ್ನು ಬಯಲು ಮಾಡುತ್ತಾನೆ.  ಇದರಿಂದ ನಿರಾಶೆಗೊಂಡ ಕದ್ರುವು ವಿನತೆಯ ದಾಸ್ಯವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಬರುತ್ತಾಳೆ.   ಆದರೆ ನಾಗಗಳು ವಿನತೆಯನ್ನು ಬಲವಾಗಿ ಹಿಡಿದಿಟ್ಟುಕೊಂಡು ಗರುಡನಿಗೆ ಶರತ್ತನ್ನು ಒಡ್ಡುತ್ತಾರೆ. ದೇವಲೋಕದ ಅಮೃತವನ್ನು ತಂದುಕೊಟ್ಟಲ್ಲಿ ವಿನತೆಯನ್ನು ಬಿಡುಗಡೆಗೊಳಿಸುವುದಾಗಿ ಹೇಳುತ್ತಾರೆ. ಮಾತಿಗೆ ಒಪ್ಪುವ ಗರುಡನು ದೇವಲೋಕಕ್ಕೆ ಹಾರುತ್ತಾನೆ. ಅಮೃತ ದೊರಕಿಸಿಕೊಳ್ಳಲು ಗರುಡನು ಹಲವು ಸಾಹಸಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿರುಗಾಳಿಯೊಡಗೂಡಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಹಾದುಹೋಗಬೇಕಾದಾಗ ಗರುಡನು ಹಲವು ನದಿಗಳ ನೀರನ್ನು ಕುಡಿದು ಅದರಿಂದ ಬೆಂಕಿಯನ್ನು ನಂದಿಸಿ ಮುಂದುವರಿಯುತ್ತಾನೆ. ಕೊನೆಯಲ್ಲಿ ಬೆಂಕಿಯುಗುಳುವ ಎರಡು ಬೃಹತ್ ಸರ್ಪಗಳನ್ನು ಸೋಲಿಸಿ ಅಮೃತವನ್ನು ಹೊತ್ತುಬರುತ್ತಾನೆ.  ಹೀಗೆ ಅಮೃತವನ್ನು ಕದ್ದು ಹೊತ್ತೊಯ್ಯುತ್ತಿರುವ ಗರುಡನನ್ನು ಕಂಡ ಇಂದ್ರಾದಿಗಳು ಆತನನ್ನು ಅಟ್ಟಿಸಿಕೊಂಡು ಬರುತ್ತಾರೆ. ಆದರೆ ಚಾಣಾಕ್ಷತೆಯಿಂದ ನುಗ್ಗಿ ಬರುವ ಗರುಡನು ’ಪಾಟಲ’ವನ್ನು ತಲುಪಿ ನಾಗಗಳಿಗೆ ಅಮೃತವನ್ನು ಕೊಡುತ್ತಾನೆ. ಅಮೃತ ಕೈಗೆ ಬಂದ ಸಂತಸದಲ್ಲಿ ನಾಗಗಳು ವಿನತೆಯನ್ನು ಬಂಧಮುಕ್ತಗೊಳಿಸುತ್ತಾರೆ. ಆದರೆ , ಅಮೃತವನ್ನು ಕುಡಿಯಬೇಕೆನ್ನುವಷ್ಟರಲ್ಲಿ ಇಂದ್ರಾದಿಗಳು ಬಂದು ಅಮೃತಪಾತ್ರೆಯನ್ನು ಹೊತ್ತೊಯ್ಯುತ್ತಾರೆ. ಇದರಿಂದ ನಾಗಗಳಿಗೆ ಅಮೃತತ್ವವು ಲಭಿಸದಾಗುತ್ತದೆ. ಇಂದ್ರಾದಿಗಳನ್ನು ಕರೆತಂದುದು ಗರುಡನೇ ಎಂಬ ಭಾವವು ನಾಗಗಳಲ್ಲಿ ಉಂಟಾಗಿ ಗರುಡನನ್ನು ದ್ವೇಶಿಸಲಾರಂಭಿಸುತ್ತವೆ. ಅಂತೆಯೇ ಗರುಡನಿಗೂ ನಾಗಗಳ ವಿರುದ್ಧ ದ್ವೇಶವು ಬೆಳೆಯುತ್ತದೆ. ಗರುಡನ ಅಹಾರ ನಾಗಗಳೇ ಆಗುತ್ತವೆ.  ವಿನತೆಯು ಮಾತಿಗೆ ತಪ್ಪದಂತೆ ಗರುಡನನ್ನು ವಿಷ್ಣುವಿಗೆ ನೀಡುತ್ತಾಳೆ. ಮುಂದೆ ಗರುಡನು ವಿಷ್ಣುವಿಗೆ ವಾಹನವಾಗುತ್ತಾನೆ ಮತ್ತು ವಿಷ್ಣುವಿನ ಪ್ರೇರಣೆಯಂತೆ ಗರುಡಪುರಾಣವನ್ನೂ ಪ್ರಕಟಗೊಳಿಸುತ್ತಾನೆ.

ಹೀಗೆ ಪುರಾಣೋಕ್ತ ಕತೆಯೊಂದನ್ನು ಒಂದೇ ಶಿಲ್ಪಕಲಾಕೃತಿಯಲ್ಲಿ ಸಹಜವಾಗಿ ಹಿಡಿದಿಟ್ಟಿರುವ ಕಲೆಗಾರನಿಗೆ, ಶಿಲ್ಪಿಗೆ ಶರಣೆನ್ನಲೇಬೇಕಲ್ಲವೆ ? .

-----------------------------------------------------

ಮನದಮಾತು:

ನಿಮ್ಮೆಲ್ಲರ ಹಾರೈಕೆಗಳಿಂದ ಎಲ್ಲಾ ಕೆಲಸಗಳೂ ಶುಭಪ್ರದವೇ ಆಯಿತು. ಅದಕ್ಕೆ ಧನ್ಯವಾದ. ಸುಮಾರು ಎರಡು ತಿಂಗಳೇ ಅಂದ್ಕೊಳಿ, ಏನೂ ಬರೆಯೋಕೆ ಆಗ್ಲಿಲ್ಲ, ಹಾಗಂತ ನಂಗೇನೂ ಬೇಸರವಿಲ್ಲ. ಒಂದಷ್ಟು ಕೆಲಸಗಳು, ನೆಂಟರಿಷ್ಟರು, ಹರಟೆ, ಪ್ರವಾಸ ಇತ್ಯಾದಿಗಳಲ್ಲಿ ಸಮಯ ಕಳೆದದ್ದು ತಿಳೀಲಿಲ್ಲ.  ಮತ್ತೆ, ಹೇಳಿಕೊಳ್ಳೋದು ಏನಿದೆ ? ಒಂದು ವರ್ಷ ಆಯ್ತು ಬ್ಲಾಗ್ ಅಂತ ಬರೆಯೋಕೆ ಶುರುಮಾಡಿ. ಬರೆದದ್ದು ಬರೀ ಮೂವತ್ತು ಅದೂ ೩೬೫ ದಿನದಲ್ಲಿ. ಬರೆದಷ್ಟಕ್ಕೂ ಮೆಚ್ಚುಗೆಯ ಮಾತುಗಳನ್ನಾಡಿ, ಪ್ರೋತ್ಸಾಹಿಸಿ ಇನ್ನಷ್ಟು ಬರೆಯುವಂತೆ ಪ್ರೇರೇಪಣೆ ನೀಡಿದ್ದು ನೀವು.  ಎಲ್ರಿಗೂ ನಾನು ಕೃತಜ್ಞ.  ಮೂರ್ನಾಲ್ಕು ಕತೆ ಬರೆದಾಗ ಅದಕ್ಕೂ ಬೆನ್ನು ತಟ್ಟಿದೋರು ನೀವು, ಯಾಕೋ ಕತೆಗಳನ್ನೇ ಬರೀಬೇಕು ಅಂತ ಅನ್ನಿಸುತ್ತಾ ಇದೆ. ಮುಂದೆ ಬರೀತೀನಿ.  ಮುಂದಿನ ದಿನಗಳಲ್ಲಿ ಇನ್ನಷ್ಟು ಬರೆಯೋ ಹುಮ್ಮಸ್ಸಿದೆ. ಅದಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ, ಇನ್ನೂ ಒಂದು ವರ್ಷ ಕಳೀಲಿ...ಆಗ ಮತ್ತೆ ಬಂದು ಇದೇ ತರಹ ಜಂಭ ಕೊಚ್ಕೋತೀನಿ.  ಸದ್ಯಕ್ಕೆ ಇಷ್ಟು ಸಾಕು.

------------------------------------------------------

ಕಿಡಿ :

ಶ್ರೀಮಂತ ಶಂಭುಲಿಂಗ ಅಮೇರಿಕೆಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ.
ಎಲ್ಲರೂ ಆಶ್ಚರ್ಯದಿಂದ ಶಂಭುವಿನತ್ತ ನೋಡುವವರೆ .
ಶಂಭು ಧರಿಸಿದ್ದು ಒಂದು ಲಂಗೋಟಿ ಮಾತ್ರ !.
ಕುತೂಹಲ ತಡೆಯಲಾರದೆ ಪುಟುಗೋಸಿಯಲ್ಲಿದ್ದ ಶಂಭುವನ್ನು ಮಹನೀಯನೊಬ್ಬ ಕೇಳಿಯೇ ಬಿಟ್ಟ
"ಸ್ವಾಮಿ, ಇದೇನು ನಿಮ್ಮ ವೇಷ ? ಹೀಗೆಲ್ಲಾ ಬರಬಹುದೆ ? "
ಶಂಭು ನಸುನಕ್ಕಿದ
" ಇದೇ ಒಳ್ಳೆಯದು ಸ್ವಾಮಿ, ಹೇಗೂ ನಿಮ್ಮ ವಿಮಾನನಿಲ್ದಾಣದಲ್ಲಿ ಎಲ್ಲವನ್ನೂ ಬಿಚ್ಚಿಯೇ ಪರೀಕ್ಷಿಸುತ್ತಾರೆ,
ಅದಕ್ಕೆ  ಈ ಲಂಗೋಟಿಯೇ ಬೆಸ್ಟು !!! "

----------------------------------------------------
ವಂದನೆಗಳೊಂದಿಗೆ..









    

Oct 22, 2010

ಪುಟ್ಟ ವಿರಾಮ

ಬ್ಲಾಗೆಂಬ ಸ್ನೇಹಕೂಟದ ಮಿತ್ರರೆಲ್ಲರಿಗೂ ನಮನಗಳು. ಮುಂದಿನ ಮೂರ್ನಾಲ್ಕು ವಾರಗಳು ನಿಮ್ಮೆಲ್ಲರಿಂದ  ದೂರವಿರಬೇಕಾಗಿದೆ. ಕೆಲವು ಶುಭ ಕಾರ್ಯಗಳು ಮತ್ತು ವೈಯಕ್ತಿಕ  ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕಾಗಿರುವುದರಿಂದ ಓದುವಿಕೆ ಮತ್ತು ಬರವಣಿಗೆಗೆ ತಾತ್ಕಾಲಿಕ ವಿರಾಮ ನೀಡಬೇಕಾಗಿದೆ. ಮತ್ತೆ ಬಂದು ನಿಮ್ಮೆಲ್ಲರ ಬರಹಗಳನ್ನು ಓದುವ ಕಾತುರವಿದೆ. ಇಲ್ಲಿಯವರೆವಿಗೂ ನನ್ನನ್ನು ಪ್ರೀತಿಯಿಂದ ಕರೆದುತಂದ ನಿಮ್ಮೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ....ಮತ್ತೆ ಭೇಟಿಯಾಗುತ್ತೇನೆ ಎಂಬ ಆಶಯದೊಂದಿಗೆ ......ಬರುತ್ತೇನೆ.

ಎಲ್ಲರಿಗೂ ಧನ್ಯವಾದಗಳು.

Oct 5, 2010

ಕುಂಟಮ್ಮನ ಸೇತುವೆ -೨






ಮರಿಯಪ್ಪನ ಮಗ ಯಾವಾಗ ಗುಡಿಯೊಳಗೆ ಹೊಕ್ಕಿದನೊ ಆ ಕ್ಷಣದಿಂದಲೆ ಅವನ ಹೆಸರು ’ಪೂಜಾರಿ’ ಎಂದು ಬದಲಾಯಿತು. ತೀರ ಇತ್ತಿಚಿನವರೆವಿಗೂ ಅವನ ನಿಜವಾದ ಹೆಸರೇನೆಂದು ಆತನಿಗೇ ಮರೆತು ಹೋಗುವಷ್ಟು ’ಪೂಜಾರಿ’ ಎಂಬ ಹೆಸರಿಗೆ ಅವನು ಒಗ್ಗಿಹೋಗಿದ್ದ. ಮೊದಮೊದಲು ಗುಡಿಯೊಳಗೆ ಕಾಲಿಟ್ಟಾಗ ’ಪೂಜಾರಿ’ಗೆ ಏನೊಂದೂ ಕಾಣಿಸಲಿಲ್ಲ. ಕತ್ತಲಿಗೆ ಕಣ್ಣುಗಳು ಹೊಂದಿಕೊಂಡ ನಂತರ ಅವನಿಗೆ ಮೊದಲು ಕಂಡಿದ್ದು ಜೇಡನ ಬಲೆಯಿಂದ ಮುಚ್ಚಿಹೋಗಿದ್ದ  ನಾಲ್ಕು ಕೈ ಮತ್ತು ಒಂದೂವರೆ ಕಾಲಿದ್ದ ಪುಟ್ಟ ಕಲ್ಲಿನ ವಿಗ್ರಹ ಮಾತ್ರ . ಗುಡಿಯನ್ನೆಲ್ಲಾ ಸ್ವಚ್ಚಗೊಳಿಸಿದ ನಂತರವೂ ಪೂಜಾರಿಗೆ ಅದು ಯಾವ ದೇವರ ವಿಗ್ರಹವೆಂದು ನಿರ್ಧರಿಸಲಾಗಲಿಲ್ಲ.  ಹಾಗೆ ನಿರ್ಧರಿಸಲಾಗದಿದ್ದುದಕ್ಕೆ ಏನೋ ಆ ವಿಗ್ರಹಕ್ಕೆ ಅತೀಂದ್ರಿಯ ಶಕ್ತಿಯೊಂದಿದೆ ಎಂದು ತನ್ನಷ್ಟಕ್ಕೆ ಅಂದುಕೊಂಡನೆಂದು ತೋರುತ್ತದೆ. ವಿಗ್ರಹದ ನಾಲ್ಕು ಕೈಗಳಲ್ಲಿ ಕ್ರಮವಾಗಿ ಶಂಖ, ಚಕ್ರ, ಗದೆ ಮತ್ತು ಕಮಲದ ಹೂವೊಂದು ಇದ್ದುದನ್ನು ಪೂಜಾರಿ ಗಮನಿಸಿದನು. ಆದರೆ ಪೂಜಾರಿಗೆ ವಿಗ್ರಹದ ಕಾಲಿನದೇ ಸಮಸ್ಯೆಯಾಯಿತು. ಬಲಗಾಲು ಸರಿಯಾಗಿದ್ದರೂ ಎಡಗಾಲು ಮಾತ್ರ ಮಂಡಿಯಿಂದ ಕೆಳಗೆ ಅದೃಷ್ಯವಾಗಿತ್ತು. ಕೈಯಲ್ಲಿ ಕಮಲದ ಹೂವಿದ್ದು ಮೈತುಂಬ ಕಲ್ಲಿನಲ್ಲಿ ರಚಿಸಿದ್ದ ಆಭರಣಗಳಿದ್ದುದರಿಂದ ಪೂಜಾರಿ ’ಆ’ ದೇವರನ್ನು ’ಅಮ್ಮ’ ಎಂದು ಪರಿಗಣಿಸಿದನೆಂದು ತೋರುತ್ತದೆ. ಒಂದೂವರೆ ಕಾಲಿದ್ದುದರಿಂದ ಅಮ್ಮನನ್ನು ’ಕುಂಟಮ್ಮ’ ಎಂದು ಕರೆಯಲು ಪೂಜಾರಿಗೆ ಸುಲಭ ಸಾಧ್ಯವಾಯಿತು. ಹೀಗೆ ಪೂಜಾರಿಯಿಂದ ನಾಮಕರಣಗೊಂಡ ಕುಂಟಮ್ಮದೇವರು ಸೇತುವೆಯ ಕಾರ‍್ಯಾರಂಭಕ್ಕೆ ಅಭಯವನ್ನಿತ್ತಿದ್ದಳು. ಈ ವಿದ್ಯಮಾನಗಳ ನಡುವೆ ಅಲ್ಲಿ ಇನ್ನೊಂದು ಚೋದ್ಯವೂ ನಡೆದಿತ್ತು. ಪೂಜಾರಿ ’ಆ’ ದೇವರನ್ನು ಕುಂಟಮ್ಮ ಎಂದು ಹೆಸರಿಸಿದಾಗ ಅಲ್ಲೇ ನಿಂತಿದ್ದ ಸಂಪತ್ತಯ್ಯಂಗಾರಿ ಮುಸಿ-ಮುಸಿ ನಕ್ಕಿದ್ದ. ಅಯ್ಯಂಗಾರ್ರು ಹಾಗೆ ನಗಲು ಬಲವಾದ ಕಾರಣವೊಂದಿತ್ತು. ಸಂಪತ್ತಯ್ಯಂಗಾರಿಯ ತಾತ ಆಗಾಗ್ಗೆ, ಅವರ ತಾತ ಪೂಜಿಸುತ್ತಿದ್ದ  ’ವಿಷ್ಣು’ ದೇವರ ಕತೆಯೊಂದನ್ನು ಹೇಳುತ್ತಿದ್ದರು. ಆ ಅಂತೆ-ಕಂತೆಗಳ ಕತೆ ಹೀಗಿದೆ...,  ಮಲ್ಲರಳ್ಳಿಯ ಬ್ರಾಹ್ಮಣರ ಕೇರಿಯಲ್ಲಿ ಪುಟ್ಟದಾದ ’ವಿಜಯ ನಾರಾಯಣ’ನ ಗುಡಿಯೊಂದಿತ್ತಂತೆ. ಆ ದೇವರಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದುದು ಸಂಪತ್ತಯ್ಯಂಗಾರಿಯ ತಾತನ ತಾತನಂತೆ. ಹಾಗೊಂದು ದಿವಸ ನಿತ್ಯಪೂಜಾದಿಗಳೆಲ್ಲಾ ಸಾಂಗವಾದ ನಂತರ ಇದ್ದಕ್ಕಿದ್ದಂತೆ ಬ್ರಾಹ್ಮಣರಲ್ಲಿ ಜಗಳವೊಂದು ಹುಟ್ಟಿತಂತೆ. ಅಯ್ಯಂಗಾರ್ರು ಸೇರಿದಂತೆ ವೈಷ್ಣವರೆಲ್ಲಾ ಶೈವ ಬ್ರಾಹ್ಮಣರನ್ನು "ಸ್ಮಾರ್ತ ಮುಂಡೆವಾ " ಎಂದು ಜರಿದರಂತೆ. ಸ್ಮಾರ್ತರೇನು ಕಡಿಮೆಯೆ ? "ರೆಕ್ಕಿಲ್ಲ ಪುಕ್ಕಿಲ್ಲ ಗರುಡಯ್ಯಂಗಾರಿ" ಎಂದು ಸಂಪತ್ತುವಿನ ತಾತನ ತಾತನವರನ್ನು ಹೀಯಾಳಿಸಿದರಂತೆ. ಇದೇ ಗಲಾಟೆ ದೊಂಬಿಗೆ ತಿರುಗಿ ಹೊಡೆದಾಟಗಳಾಗಿ ಅದ್ಯಾರೋ ಒಬ್ಬರು ನಾರಾಯಣ ದೇವರ ವಿಗ್ರಹವನ್ನು ಕಿತ್ತೆಸದರಂತೆ. ಆಗ ವಿಗ್ರಹದ ಎಡಗಾಲು ಮುರಿದುಹೋಯಿತಂತೆ. ಇಷ್ಟೆಲ್ಲಾ ರಂಪಾಟಗಳು ಮುಗಿದ ನಂತರ ಎಲ್ಲರಿಗೂ ಜ್ಞಾನೋದಯವಾಗಿ ಭಗ್ನಗೊಂಡ ವಿಗ್ರಹವನ್ನು ಹಾಗೆ ಹಾಳು ಬಿಟ್ಟರೆ ಕೇರಿಗೆ ಒಳ್ಳೆಯದಲ್ಲವೆಂದು ತೀರ್ಮಾನಿಸಿ ಊರ ಹೊರವಲಯದಲ್ಲಿಟ್ಟು ನಾಮ್ಕೆವಾಸ್ತೆ ಪುಟ್ಟ ಗುಡಿಯೊಂದನ್ನು ನಿರ್ಮಿಸಿದರಂತೆ. ಈಗ ಕುಂಟಮ್ಮನಾಗಿ ಪರಿವರ್ತನೆ ಹೊಂದಿದ್ದು ಗತಕಾಲದ ನಾರಾಯಣನ ವಿಗ್ರಹವೆ ಎಂದು ತಿಳಿ ಹೇಳಲು ಸಂಪತ್ತಯ್ಯಂಗಾರಿಯೊಬ್ಬನನ್ನು ಬಿಟ್ಟರೆ ಆ ವಿಚಾರವಾಗಿ ತಿಳಿದವರು ಅಲ್ಲ್ಯಾರೂ ಇರಲಿಲ್ಲ. ನಾರಾಯಣನನ್ನು ಕುಂಟಮ್ಮನೆಂದು ಕರೆದಿದ್ದುದಕ್ಕೇ ಸಂಪತ್ತು ಹಾಗೆ ಮುಸಿ-ಮುಸಿ ನಕ್ಕಿದ್ದು. ಇಷ್ಟಾದರೂ "ನಮ್ಮ" ದೇವರಿಗೆ ಈಗಲಾದರೂ ಪೂಜೆಯಾಗುತ್ತಿದೆಯಲ್ಲಾ ಎಂಬ ಕಾರಣಕ್ಕೆ ಸಂಪತ್ತಯ್ಯಂಗಾರಿಯು ನಾರಾಯಣನ ಇತಿಹಾಸವನ್ನು ಮುಚ್ಚಿಟ್ಟುಬಿಟ್ಟನು.

 ........................................*...................................

ಹಾರೆ, ಗುದ್ದಲಿ, ಪಿಕಾಸಿಯೊಡನೆ ಸನ್ನದ್ದರಾಗಿದ್ದ ಮಲ್ಲರಳ್ಳಿಯ ಜಗಜಟ್ಟಿಗಳಿಗೆ ಮೊದಲು ತಲೆಬಿಸಿಯಾದದ್ದು ಕೆರೆಯಿಂದ ಹರಿದುಬರುತ್ತಿದ್ದ ನೀರನ್ನು ಹಳೆಯ ಸೇತುವೆಯ ಹಿಂದೆಯೇ ಅಡ್ಡಗಟ್ಟಿ ನಿಲ್ಲಿಸಬೇಕೆಂದಾಗ !. ( ಹಳೆಯ ಸೇತುವೆಯು ಮಣ್ಣಿನಲ್ಲಿ ಮುಚ್ಚಿಹೋಗಿದ್ದರೆ ಕೆರೆಯಿಂದ ಹರಿದುಬರುತ್ತಿದ್ದ ಹಳ್ಳದ ನೀರು ಎಲ್ಲಿ ಸಾಗುತ್ತಿತ್ತು ಎಂಬ ಬುದ್ದಿವಂತಿಕೆಯ ಪ್ರಶ್ನೆಯನ್ನು ನೀವು ಕೇಳುವಂತಿಲ್ಲ ! , ಏಕೆಂದರೆ ನೀರಿನ ರಭಸಕ್ಕೆ ಹಳೆಯ ಸೇತುವೆಯ ಕೆಳಭಾಗದಲ್ಲಿ ಕೊರಕಲುಗಳು ಉಂಟಾಗಿ ಹಳ್ಳದ ನೀರು ಬಸಿದು ಹೋಗುತ್ತಿತ್ತು , ಮತ್ತು ಹಿಮ್ಮುಖವಾಗಿಯೂ ಒತ್ತುತ್ತಿತ್ತು ಎಂಬುದನ್ನು ನೀವೆ ಕಲ್ಪಿಸಿಕೊಳ್ಳಬೇಕಾಗುತ್ತದೆ !.)  ಹಾಗೆ ಅಡ್ಡಗಟ್ಟಿದರೆ ಹಳ್ಳದ ಹಿನ್ನೀರು ಅಕ್ಕ-ಪಕ್ಕದ ಹೊಲ-ಗದ್ದೆಗಳಿಗೆಲ್ಲಾ ನುಗ್ಗಿ ಬೆಳೆಹಾನಿಯಾಗುವ ಅಪಾಯವು ತಲೆದೋರುತ್ತಿತ್ತು. ಆದರೆ, ಮರಿಯಪ್ಪನ ಚಾಣಾಕ್ಷ ಬುದ್ದಿ ಮತ್ತೆ ಕೆಲಸ ಮಾಡಿತು. ಹಳೆಯ ಸೇತುವೆಯ ಎರಡೂ ಬದಿಯಲ್ಲಿ ಸಣ್ಣ ಕಾಲುವೆಗಳನ್ನು ತೋಡಿ ಅದರ ಮೂಲಕ ಹಳ್ಳದ ನೀರು ಸೇತುವೆ ದಾಟಿ ಮುಂದಿನ ಹಳ್ಳಕ್ಕೆ ಸೇರುವಂತೆ ಮಾಡುವುದೆಂದು ಉಪಾಯವನ್ನು ಸೂಚಿಸಿದನು. ಹಳ್ಳಿಗರೆಲ್ಲಾ ಮರಿಯಪ್ಪನ ಉಪಾಯಕ್ಕೆ ಸರ್ವಸಮ್ಮತವಾಗಿ ಒಪ್ಪಿದರು ಮತ್ತು ಅವನ ಜಾಣ್ಮೆಗೆ ತಲೆದೂಗಿದರು. ಸಾಬರ ವಸೀಮ್ ಖಾನನಂತೂ "ನಿಮ್ದೂಗೆ ಇಂಜಿನಿಯರ್ ಆಗ್ಬೇಕಿತ್ತು" ಎಂಬ ಬಿರುದನ್ನೂ ಮರಿಯಪ್ಪನಿಗೆ ದಯಪಾಲಿಸಿದನು. ಕೆಲಸ ಸುಗಮವಾಗಿ ಮುಂದುವರಿಯಿತು. ಹದಿನೆಂಟು ವರ್ಷಗಳ ಹಿಂದಿನ ಹಳ್ಳಿಗರ ಕಾರ್ಯಸಾಮರ್ಥ್ಯದ ಬಗೆಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲವೆನಿಸುತ್ತದೆ.  ಒಂದು ನಯಾಪೈಸೆಯ ಖರ್ಚಿಲ್ಲದೆ ಸೇತುವೆಯ ನಿರ್ಮಾಣ ಕಾರ್ಯ ಸಾಗಿತ್ತು. ಹಾಳು ಬಿದ್ದಿದ್ದ ಜಮೀನಿಗಳಲ್ಲಿದ್ದ ಫಲವತ್ತಾದ ಮಣ್ಣು ಎತ್ತಿನಗಾಡಿಗಳಲ್ಲಿ ಬಂದು ಬೀಳುತ್ತಿತ್ತು. ದೊಡ್ಡ ದೊಡ್ಡ ಕಲ್ಲುಗಳನ್ನು ಊರ ಹೊರವಲಯದ ಗುಡ್ಡವೊಂದರಿಂದ ಬಂಡಿಗಳಲ್ಲಿ ತರಲಾಗುತ್ತಿತ್ತು. ಇಡೀ ಊರೇ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿತ್ತು. ಹೆಂಗಸರೆಲ್ಲಾ ಕಲೆತು ಸಾಮೂಹಿಕವಾಗಿ ರಾಗಿ ಮತ್ತು ಜೋಳದ ರೊಟ್ಟಿಗಳನ್ನು ತಯಾರಿಸಿ ತರುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆಯ ಜೊತೆಗೆ ಮಜ್ಜಿಗೆ ಅಂಬಲಿಯೂ ಸಿದ್ದವಾಗಿರುತ್ತಿತ್ತು.  ನಾಗಯ್ಯ, ವಸೀಮ್ ಖಾನ್ , ಪುಟ್ಸಾಮಿ, ಸಂಪತ್ತಯ್ಯಂಗಾರಿ ಇತ್ಯಾದಿಗಳೆಲ್ಲಾ  ಒಟ್ಟಾಗಿ ಕೂಡಿದ್ದು ಸೇತುವೆಯ ಕಾರ್ಯದಲ್ಲೇ ಎನ್ನಬಹುದು.   ಕೆಲಸದ ನಡುವೆ ವಸೀಮ್ ಖಾನನದು ಏನಾದರೊಂದು ರೇಜಿಗೆ ಇದ್ದೇ ಇರುತ್ತಿತ್ತು. ಮಣ್ಣೊಳಗೆ ಯಾವುದೋ ಒಂದು ಹುಳುವನ್ನು ಕಂಡ ವಸೀಮ್ ಖಾನ್ ಎಲ್ಲರನ್ನೂ ಕರೆದು ಅದನ್ನು ತೋರಿಸಿದ್ದ. ಪುಟ್ಸಾಮಿ ರೇಗಿದ ದ್ವನಿಯಿಂದಲೇ ಕೇಳಿದ್ದ " ಏನ್ಲಾ ಸಾಬಿ ಅದು ನಿಂದು, ಎಂತಾ ಹುಳಲ್ನಾ ಅದು ? " ಎಂದು. ಖಾನ್ ಸಾಹೇಬರು " ಕಂಬಳ್ ಕಾ ವುಳ್ " ಎಂದು ಹೇಳಿದ್ದರು. " ಅಂಗಂದ್ರೆನ್ಲಾ ? " ಎಂದು ನಾಗಯ್ಯ ಕೇಳಿದ್ದಕ್ಕೆ ಪುಟ್ಸಾಮಿ ಮತ್ತೊಮ್ಮೆ ಅವನ ತಲೆಯ ಮೇಲೆ ಕುಟ್ಟಿದ್ದ " ಕಂಬ್ಳೀವುಳಾ ಅಂತ ಕಣಲೇ ಅದು ....ಅವನು ಮಾತಾಡದು ಅಂಗೆಯ..ನೀನು ಸುಮ್ಕೆ ಕೆಲ್ಸ ನೋಡು" ಎಂದು ನಾಗಯ್ಯನನ್ನು ಕೆಲಸಕ್ಕೆ ದಬ್ಬಿದ್ದ. ಹೀಗೆ ಹತ್ತು ಹಲವು ಘಟನೆಗಳು ನಡೆದು ಸತತ ಪರಿಶ್ರಮದಿಂದ ತಿಂಗಳಾಗುವುದರೊಳಗಾಗಿ ಕುಂಟಮ್ಮನ ಸೇತುವೆ ನಿರ್ಮಾಣವಾಗಿ ಸೇತುವೆಯ ಕೆಳಗೆ ಹಳ್ಳದ ನೀರು ಸರಾಗವಾಗಿ ಹರಿಯಲು ಪ್ರಾರಂಭವಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮಲ್ಲರಳ್ಳಿಯ ಜನತೆ ನಿಜವಾಗಿಸಿದ್ದರು.

..................*...........................

ಈ ಹದಿನೆಂಟು ವರ್ಷಗಳಲ್ಲಿ ಕುಂಟಮ್ಮನ ಸೇತುವೆಯ ಕೆಳಗೆ ಸಾಕಷ್ಟು ನೀರು ಹರಿದುಹೋಗಿದೆ. ಸೇತುವೆಯ ಮೇಲ್ಗಡೆಯೂ ಸಹ ಹತ್ತು ಹಲವು ತೆರನಾದ ವಾಹನಗಳು ಸಂಚರಿಸಿವೆ ಮತ್ತು ಸಂಚರಿಸುತ್ತಿವೆ. ಮರಿಯಪ್ಪನಿಗೂ ಈಗ ಎಂಬತ್ತು ವರ್ಷಗಳಾಗಿದೆ. ೬೦ ವರ್ಷದವನಾಗಿದ್ದಾಗ ಇದ್ದ ಚೈತನ್ಯ-ಶಕ್ತಿ ಈಗ ಇಲ್ಲವಾಗಿದೆ. ಕೆಲವು ಆಧುನಿಕ ರೋಗಗಳೂ ಮರಿಯಪ್ಪನನ್ನು ಕಾಡುತ್ತಿವೆ. ಅಂದು ಸೇತುವೆಯ ಕಾರ್ಯದಲ್ಲಿ ತೊಡಗಿದ್ದವರೆಲ್ಲಾ ಇಂದು ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ತಿಂದುಂಡು ನೆಮ್ಮದಿಯಾಗಿದ್ದಾರೆ. ಕುಂಟಮ್ಮನ ಸೇತುವೆ ಮಾತ್ರ ಅಚಲವಾಗಿ ಸ್ವಲ್ಪವೂ ಹಾಳಾಗದಂತೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಚಾಲಕರು ಮತ್ತು ಇತರರಿಗೆಲ್ಲಾ ಕುಂಟಮ್ಮನೇ ಈಗ ಆರಾಧ್ಯದೇವತೆ. ಆಕೆಯ ಮಹಿಮೆ ಎಲ್ಲೆಲ್ಲೂ ಪಸರಿಸಿರುವುದರಿಂದ ಈಗೀಗ ಕುಂಟಮ್ಮನಿಗೆ ಕುರಿ-ಕೋಳಿಗಳ ಎಡೆಯೂ ನಡೆಯುತ್ತಿದೆ.  ( ಮಂಗಳವಾರ , ಶುಕ್ರವಾರಗಳಂದು ಅಲ್ಲಿ ರಕ್ತದ ಕೋಡಿಯೆ ಹರಿಯುತ್ತದೆಂದು ಯಾರೋ ಮರಿಯಪ್ಪನಿಗೆ ಹೇಳಿದಾಗ , ಆತ ಮುಖ ಕಿವುಚಿಕೊಂಡು ಸುಮ್ಮನಾಗಿದ್ದ !) 

ಅಂದು ಮಲ್ಲರಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ವಿದ್ಯುತ್ ಪ್ರಸರಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವಿತ್ತು. ಟೇಪು ಕತ್ತರಿಸಲು ಮಾನ್ಯ ಶಾಸಕರು ಬರುವವರಿದ್ದರು. ಅನ್ಯಕಾರ್ಯ ನಿಮಿತ್ತ ತುಸು ತಡವಾಗಿ ಆಗಮಿಸಿದ ಶಾಸಕರು ಅವಸರದಲ್ಲಿ ಟೇಪು ಕತ್ತರಿಸಿ ಒಂದರ್ಧಗಂಟೆ ಭಾಷಣ ಬಿಗಿದು ಕಟ್ಟೇಪುರಕ್ಕೆ ಹೋಗಲು ಕಾರು ಹತ್ತಿದರು. ಕುಂಟಮ್ಮನ ದುರಾದೃಷ್ಟವೋ ಏನೋ ಮಾನ್ಯರ ಕಾರು ಕುಂಟಮ್ಮನ ಸೇತುವೆಯ ಸನಿಹದಲ್ಲೇ ಅಪಘಾತಕ್ಕೀಡಾಯಿತು. ಮಾನ್ಯರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಯಿತು. ಮಾನ್ಯರ ಮುದ್ದಿನ ನಾಯಿಯೊಂದು ಸ್ಥಳದಲ್ಲೇ ಅಸುನೀಗಿತು. ಕಾರಿನ ಮುಂಭಾಗ ನುಜ್ಜು-ಗುಜ್ಜಾಯಿತು. ಕುಂಟಮ್ಮನ ಗುಡಿಗೂ ತುಸು ಹಾನಿಯಾಯಿತು. ಶಾಸಕರ ಕೋಪ ನೆತ್ತಿಗೇರಿತೆಂದೇ ಅನಿಸುತ್ತದೆ, ಮಾರನೆಯ ದಿವಸವೆ ಕುಂಟಮ್ಮನ ಸೇತುವೆಯನ್ನು ಕೆಡವಿ ಮರು ನಿರ್ಮಿಸಬೇಕೆಂಬ ಆದೇಶವೊಂದು ಮಲ್ಲರಳ್ಳಿಯ ಪಂಚಾಯಿತಿ ಕಚೇರಿಗೆ ಬಂದು ತಲುಪಿತು. ಸೇತುವೆಯ ಜೊತೆಗೆ ಕುಂಟಮ್ಮನ ಗುಡಿಯನ್ನೂ ಕೆಡವಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ( ಕುಂಟಮ್ಮನ ದೆಸೆಯಿಂದಲೇ ಶಾಸಕರಿಗೆ ಅಪಘಾತವಾಗಿದ್ದೆಂದೂ ಆದ ಕಾರಣ ಆ ಗುಡಿಯನ್ನೇ ಅಲ್ಲಿಂದ ತೆಗೆಸಬೇಕೆಂದು ಶಾಸಕರಿಗೆ ದೊಡ್ಡ ಪಟ್ಟಣದ ಖ್ಯಾತ ಜ್ಯೋತಿಷಿಯೊಬ್ಬರು ಹೇಳಿದರೆಂದು ಗುಸು-ಗುಸು ಸುದ್ದಿಯೂ ಹಬ್ಬಿತ್ತು !.)  ಈ ಮರು ನಿರ್ಮಾಣಕಾರ್ಯಕ್ಕೆ ಅದೆಷ್ಟೋ ಕೋಟಿ ರೂಗಳ ಅನುದಾನವು ಮಾನ್ಯ ಶಾಸಕರ ಮೂಲಕ ಬರುತ್ತದೆಯೆಂದು ಆದೇಶದಲ್ಲಿ ಹೇಳಲಾಗಿತ್ತು.  ತ್ವರಿತವಾಗಿ ಕೋಟಿ-ಕೋಟಿ ರೂಗಳ ಯೋಜನೆ ಜಾರಿಯಾಯಿತು. ಯಂತ್ರಗಳು ಬಂದು ಕೆಲವೆ ಗಂಟೆಗಳಲ್ಲಿ ಸೇತುವೆಯನ್ನೂ, ಗುಡಿಯನ್ನೂ ನೆಲಸಮ ಮಾಡಿದವು. ಕುಂಟಮ್ಮನ ವಿಗ್ರಹವನ್ನು ಅಲ್ಲಿಂದಲೂ ಆಚೆಗೆ ಎಸೆಯಲಾಯಿತು.  ಅದೇಕೊ..., ಕೆಡವಿದಷ್ಟು ತ್ವರಿತವಾಗಿ ಸೇತುವೆಯ ನಿರ್ಮಾಣಕಾರ್ಯ ಆಗಲೇ ಇಲ್ಲ.
ಸೇತುವೆಯನ್ನು ಕೆಡವಿದ ನಂತರ ಜನ ಮತ್ತು ವಾಹನಗಳು ಸಂಚರಿಸಲೆಂದು ಸಣ್ಣ ದಾರಿಯೊಂದನ್ನು ನಿರ್ಮಿಸಲಾಯಿತು. ದಿನ ಕಳೆದಂತೆ ಹಳ್ಳ-ದಿಣ್ಣೆಗಳಿಂದ ಕೂಡಿದ್ದ ಆ ದಾರಿಯಲ್ಲಿ ದನ-ಕರುಗಳು ಸಂಚರಿಸುವುದೂ ದುಸ್ತರವಾಯಿತು. ಮಳೆಗಾಲದ ಪಾಡನ್ನಂತೂ ಹೇಳಲು ಸಾಧ್ಯವೆ ಇಲ್ಲ..ನರಕ ಸದೃಶವಾಯಿತು. ಕೋಟಿಗಳು ಖರ್ಚಾದವು, ಹಲವು ಅಧಿಕಾರಿಗಳು ಇಂಜಿನಿಯರುಗಳು ಬಂದು ಹೋದರು...ವರ್ಷಗಳು ಕಳೆದರೂ ಸೇತುವೆ ನಿರ್ಮಾಣವಾಗಲೆ ಇಲ್ಲ. ಕೋಟಿಗಳಲ್ಲಿ ಬಿಡುಗಡೆಯಾದ ಹಣ ನಿರ್ಮಾಣಕಾರ್ಯಕ್ಕೆ ಸಾಲದಾಯಿತಂತೆ ಎಂದು ಊರಿನವರು ಮಾತನಾಡಿಕೊಂಡರು.
ಯಾವುದೂ ಯೋಚನೆಯಲ್ಲಿ ಮುಳುಗಿದ್ದ ಮರಿಯಪ್ಪನಿಗೆ ಸೇತುವೆಯ ಸಮಾಚಾರವನ್ನೆಲ್ಲಾ ಯಾರೋ ಒಬ್ಬರು ಹೇಳಿದರು. ಮರಿಯಪ್ಪನಿಗೆ ಸೇತುವೆಯವರೆವಿಗೂ ನಡೆದು ಹೋಗಿ ಬರುವಷ್ಟು ತ್ರಾಣವಿರಲಿಲ್ಲ. ಬದಲಾಗಿದ್ದ ಮಲ್ಲರಳ್ಳಿಯ ಆಧುನಿಕ ಜನತೆಗೆ ಗತಕಾಲದ ನೆನಪೂ ಇರಲಿಲ್ಲ. ಮರಿಯಪ್ಪ ತನ್ನಷ್ಟಕ್ಕೆ ತಾನೆ ನಕ್ಕಿದ್ದ...ಅವನ ನಗುವಿನ ಅರ್ಥವೇನೆಂದು ಅವನು ಯಾರಿಗೂ ಬಿಡಿಸಿ ಹೇಳಲಿಲ್ಲ ಮತ್ತು ಆಗಾಗ್ಗೆ ಸಣ್ಣಗೆ ನಗುತ್ತಲೇ ಇರುತ್ತಿದ್ದ. ಬಿಡುಗಡೆಯಾಗಿದ್ದ ಕೋಟಿಗಟ್ಟಲೆ ಹಣ ಸಾಲದಾಯಿತೆಂದು ಯಾರೋ ಹೇಳಿದಾಗ ಮರಿಯಪ್ಪ ಮತ್ತೊಮ್ಮೆ ಸಣ್ಣಗೆ ನಕ್ಕಿದ್ದ.
----------*---------

ಮರಿಯಪ್ಪನಿಗೆ ನೆಡೆಯುವ ಶಕ್ತಿಯಿಲ್ಲದಿದ್ದರೂ ಅಂದು ಕಷ್ಟದಿಂದಲೇ ಊರಿನ ಹೊರವಲಯಕ್ಕೆ ನೆಡೆದು ಬಂದಿದ್ದ. ನಿರ್ಮಾಣವಾಗದೆ ಹಾಳು ಬಿದ್ದಿದ್ದ ಸೇತುವೆಯನ್ನೂ ನೋಡಿ ಕಾಲುದಾರಿಯಲ್ಲಿ ಇನ್ನೂ ಮುಂದೆ ನೆಡೆದುಹೋಗಿದ್ದ. ಆ ಸೇತುವೆಯಿಂದ ಮೈಲು ದೂರವೇ ನೆಡೆದುಬಂದಿದ್ದನೆಂದು ಹೇಳಬಹುದು. ಮರಿಯಪ್ಪನ ಕಣ್ಣುಗಳು ರಸ್ತೆಯ ಪಕ್ಕದ ಜಮೀನೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಕುಂಟಮ್ಮ ದೇವರನ್ನು ಕಂಡವು. ಕುಂಟಮ್ಮನ ಮುಖದಲ್ಲಿ ಅದೇ ಮಂದಹಾಸ ಮಿನುಗುತ್ತಿತ್ತು ಮತ್ತು ಆ ಮಂದಹಾಸ ಮರಿಯಪ್ಪನನ್ನೂ , ಮಲ್ಲರಳ್ಳಿಯ ಇತಿಹಾಸವನ್ನೂ ಅಣಕಿಸುತ್ತಿರುವಂತೆ ಮರಿಯಪ್ಪನಿಗೆ ತೋರಿತು. ಇದಾದ ಎರಡು ದಿನಗಳಲ್ಲಿ ಮರಿಯಪ್ಪ ಸತ್ತನು , ಅವನೊಂದಿಗೆ ಮಲ್ಲರಳ್ಳಿಯ ಜಗಜಟ್ಟಿಗಳ ಇತಿಹಾಸವೂ ಸತ್ತಿತು.
------------*---------------
(ಮುಗಿಯಿತು)