Feb 15, 2010

ಸುರಭಿ V/S ದೊಡ್ಡಗೌಡ್ರು...

                       News courtesy : Kannadaprabha
ಬದುಕುವ ಹಕ್ಕು ಸಕಲ ಜೀವಿಗಳಿಗೂ ಇದೆ. ’ಆನೆ’ಯಿಂದ ’ಅಮೀಬಾ’ವರೆಗೂ ಜೀವಿಗಳಿಗೆ ತನ್ನದೇ ಆದ ಬದುಕುವ ಪರಿಸರವಿದೆ. ಹಾಗೆಯೇ, ’ಅಮೃತ’ ಸಮಾನವಾದ ಹಾಲನ್ನು ನೀಡುವ ’ಸುರಭಿ’ ಗೂ ತನ್ನಂತ್ಯದವರೆಗೆ ಬದುಕುವ ಎಲ್ಲಾ ಹಕ್ಕನ್ನೂ ಸೃಷ್ಟಿಯೇ ನೀಡಿದೆ. ನಮ್ಮ ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡರು ಹೇಳಿಕೆಯೊಂದನ್ನು ಮಾಧ್ಯಮಗಳಿಗೆ ನೀಡಿ ನನ್ನ ವಿಚಾರಕ್ಕೆ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಲ್ಲಿ ಅವರುದುರಿಸಿರುವ ಅಣಿಮುತ್ತುಗಳನ್ನು ಮಾತ್ರ ವಿಚಾರ ಮಾಡುತ್ತಿದ್ದೇನೆ...
  ಮಾಧ್ಯಮಗಳಿಗೆ ಹೇಳಿಕೆ ನೀಡೀರುವ ದೊಡ್ಡಗೌಡರು, ಗೋಹತ್ಯೆ ನಿಷೇಧವನ್ನು ವೈಜ್ಞಾನಿಕವಾಗಿ ವಿಮರ್ಷಿಸಿ ಜಾರಿಗೆ ತರಬೇಕೆಂದು ಹೇಳುತ್ತಾ ಗೋಹತ್ಯೆ ನಿಷೇಧದ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಷೇಧ ಮಾಡುವುದೇ ಆದರೆ ವೈಜ್ಞಾನಿಕ ವಿಧಾನದಲ್ಲೇ ನಿಷೇಧಿಸೋಣ ಬಿಡಿ !. ಸಮಾಜದ ಒಂದು ಸಮುದಾಯವನ್ನು ಓಲೈಸಲು ’ಆಳುವ ಕೂಟ’ ನೆಡೆಸುತ್ತಿರುವ ಹುನ್ನಾರವೇ ಇದಾದರೆ, ದೊಡ್ಡಗೌಡರ ಮಾತುಗಳೂ ಸಹ ಸಮಾಜದ ಒಂದು ಸಮುದಾಯದ ಪರವಾಗಿಯೇ ಇದೆ. ಗೋಮಾಂಸ ಮಾರಾಟವನ್ನೇ ನೆಚ್ಚಿಕೊಂಡಿರುವ ಸಂಸಾರಗಳು ಬೀದಿಗೆ ಬರುವುದಾದರೆ, ಆಲೂಗೆಡ್ಡೆಗೆ ರೋಗ ಬಂದು , ಅಕಾಲಿಕ ಮಳೆಯಿಂದ ಕಾಫಿಗೆ ಕೊಳೆರೋಗ ಬಂದು ರೈತರೂ ಬೀದಿಗೆ ಬಿದ್ದಿದ್ದಾರೆ. ಅದೂ ಗೌಡರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ..!. ಆದರೆ ಗೌಡರ ಹೋರಾಟವೇಕೋ ’ನೈಸ್’ ರಸ್ತೆಯಲ್ಲೇ ಉರುಳಾಡುತ್ತಿದೆ. ಗೋಹತ್ಯೆ ನಿಷೇಧವನ್ನು ವಿರೋಧಿಸುವುದರಿಂದ ಒಂದು ವರ್ಗದ ಜನರ ವಿಶ್ವಾಸವನ್ನು (ಓಟನ್ನು !) ಗಳಿಸಬಹುದೆಂದು ಗೌಡರು ಭಾವಿಸಿದ್ದರೆ..ಅದು ಅವರ ಹಳೆಯ ರಾಜಕೀಯ ಲೆಕ್ಕಾಚಾರವೇ ಸರಿ. ಸಮಾಜದ ಎಲ್ಲಾ ವರ್ಗದಲ್ಲೂ ವಿಚಾರವಂತರಿದ್ದಾರೆ , ಅರಿವು ಮೂಡಿಸುವ ಪ್ರಯತ್ನವೂ ಸಾಗಿದೆ. ತಿರುವಣ್ಣಾಮಲೈಗೋ, ಮಧುರೈಗೋ ತೆರಳಿ ’ಗೋಮಾತೆ’ಯ ಬಾಲಕ್ಕೇss ಶ್ರದ್ಧಾ-ಭಕ್ತಿಯಿಂದ ಪೂಜೆಗೈಯುವ ಗೌಡರು ಕರ್ನಾಟಕದಲ್ಲಿ ಗೋಹತ್ಯೆ ನಿರಂತರವಾಗಿ ಸಾಗಲಿ ಎಂಬಂಥ ಮಾತುಗಳನ್ನಾಡುತ್ತಾರೆ.
ಆಳುವ ಕೂಟವೂ ಗೋಹತ್ಯೆ ನಿಷೇಧ ವನ್ನು ರಾಜಕೀಯವಾಗಿಯೇ ಬಳಸಿಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ವಿರೋಧಿಗಳ ವಿರೋಧವನ್ನು ನಿರೀಕ್ಷಿಸಿಯೇ ಇದ್ದ ರಾಜ-ಮಂತ್ರಿಗಳು ಸರಿಯಾದ ಸಮಯ ನೋಡಿ ’ದಾಳ’ ಹಾಕಿದ್ದಾರಷ್ಟೆ. ಇಂತಹ ’ದಾಳ’ಗಳು ಮಾಧ್ಯಮಗಳಿಗೆ ಆಹಾರವಾಗಬಲ್ಲವೇ ವಿನಹ ಜನಸಾಮಾನ್ಯರ ಮನಗೆಲ್ಲಲು ಸಾಧ್ಯವಾಗುವುದಿಲ್ಲ. ವಿರೋಧದ ನಡುವೆಯೂ ಈ ಕಾಯಿದೆಯೇನಾದರೂ ಅನುಮೋದನೆಗೊಂಡು ಜಾರಿಗೆ ಬಂದರೆ, ಪ್ರಾಮಾಣಿಕವಾಗಿ ಅನುಷ್ಟಾನಗೊಂಡರೆ ಅದೊಂದು ರಾಜಕೀಯ ಪವಾಡವೇ ಸರಿ !. ಗೋಮಾಂಸವನ್ನು ಮನೆಯಲ್ಲೂ ಸಂಗ್ರಹಿಸಿಡುವಂತಿಲ್ಲ ಎಂಬ ಅಂಶವೂ ಕಾಯಿದೆಯಲ್ಲಿದೆಯಂತೆ. ಗೌಡರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ’ಕೆಲವರು ಹೊರ ದೇಶಗಳಿಂದ ಆಮದು ಮಾಡಿಕೊಂಡು ’ಬೀಫ್’ ಅನ್ನು ಇಟ್ಟುಕೊಳ್ಳುತ್ತಾರೆ, ಅದನ್ನೂ ಬೇಡವೆಂದರೆ ಹೇಗೆ?’ ಎಂದು ಕೇಳುತ್ತಾರೆ. ಏಕೆ ? ನಮ್ಮ ದೇಶದ ನಾಟಿ ಹಸುಗಳ ಮಾಂಸ ರುಚಿಕರವಲ್ಲವೇ ? ಭರತಖಂಡದ ಪ್ರಧಾನಿಯಾಗಿದ್ದವರು, ಸಮಾಜದ ಎಲ್ಲಾ ಸ್ತರದವರ ಮುಖವಾಣಿಯಾಗಬೇಕಾದವರು ’ಕೆಲವೇ ಕೆಲವರು’ ಸಂಗ್ರಹಿಸಿಟ್ಟುಕೊಳ್ಳುವ ಗೋಮಾಂಸದ ಪರವಾಗಿ ವಕಾಲತ್ತು ವಹಿಸಬೇಕೆ ? ದೊಡ್ಡಗೌಡರು ಇನ್ನೊಂದು ಮೂಲ’ಭೂತ’ವಾದ ಪ್ರಶ್ನೆಯನ್ನೇ ಕೇಳಿದ್ದಾರೆ...
ಹಳ್ಳಿಗಳಲ್ಲಿ ವಯಸ್ಸಾದ-ರೊಗಬಂದಿರುವ ಗೋವುಗಳನ್ನು ಮಾರಾಟಮಾಡುವ ಪದ್ದತಿಯಿದೆ, ಇಂತಹ ಗೋವುಗಳಿಂದ ಪ್ರಯೋಜನವೇನೂ ಇಲ್ಲ, ಇವನ್ನು ಏನು ಮಾಡಬೇಕು ? ಸಾಧ್ಯವಾದರೆ ಗೋಶಾಲೆಗಳನ್ನು ತೆರೆದು ಆಶ್ರಯ ನೀಡಬಹುದಲ್ಲವೇ " ಎನ್ನುತ್ತಾರೆ. ಸರ್ಕಾರೀ ಗೋಮಾಳಗಳ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ !.
ವಯಸ್ಸಾದವರನ್ನೆಲ್ಲಾ ವೃದ್ದಾಶ್ರಮಕ್ಕೆ ಸೇರಿಸಿಬಿಡಿ ಎನ್ನುವಂತಿದೆ ಗೌಡರ ಮಾತು. ಹಾಲು ಕುಡಿದು ಹಣ ಗಳಿಸಿ ಬದುಕುವ ಕಾವಾಡಿಗ ಗೋವಿನ ಅಂತ್ಯಕಾಲದಲ್ಲಿ ಅದರ ಉಪಚಾರ ಮಾಡಲಾರದ ಸ್ಥಿತಿ ತಲುಪಿದ್ದಾನೆಯೇ ? ಜನನಾಯಕರುಗಳ ಇಂತಹ ರಾಜಕೀಯ ಹೇಳಿಕೆಗಳೇ ಜನರ ಮನಸ್ಸು ಕದಡಲು ಕಾರಣವಾಗುತ್ತದೆ. ಇನ್ನು ವಯಸ್ಸಾದ-ರೋಗದ ಗೋವುಗಳನ್ನು ಏನು ಮಾಡಬೇಕು ಎನ್ನುತ್ತಾರೆ....ಗೌಡರಿಗೂ ವಯಸ್ಸಾಗಿದೆ...ರೋಗಗಳು ಬಂದಿರುವುದೂ ಸಹಜ ! , ಏನು ಮಾಡೋಣ ? ಮಾರಾಟ ಮಾಡಿ ಬಿಡೋಣವೇ? ಕಟುಕರಿಗೆ ಒಪ್ಪಿಸಿ ಬಿಡೋಣವೇ? ಇಲ್ಲಾ...ವಯಸ್ಸಾಯಿತೆಂದು ಮನೆಯಿಂದ ಹೊರಹಾಕಿ ಚಾಪೆ-ದಿಂಬು ಕೊಡೋಣವೇ..!? ವಿರೋಧಕ್ಕಾಗಿಯೇ ವಿರೋಧಿಸುವುದು ಪ್ರಸ್ತುತ ದಿನಗಳ ರಾಜಕೀಯ ಜಾಣ್ಮೆಯೇ ಅಲ್ಲ. ಇಂತಹ ವಿರೋಧವನ್ನು   ಗೌಡರಿಂದ  ನಿರೀಕ್ಷಿಸಿಯೇ ಇದ್ದ ’ಆಳುವ ಕೂಟದವರು’ ತಮ್ಮ ರಾಜಕೀಯ ನೈಪುಣ್ಯತೆಯನ್ನು ಮೆರೆದಿದ್ದೇವೆ ಎಂದುಕೊಂಡರೆ ಅದೊಂದು ಮೂರ್ಖತನದ ಪರಮಾವಧಿ. ಪುಣ್ಯಕೋಟಿಯ ನಾಡಲ್ಲಿ ಪ್ರಾಮಾಣಿಕತೆಯನ್ನು ನಾಯಕರಿಂದ ನಿರೀಕ್ಷಿಸಬಹುದೆ ??
 ಅಂದಹಾಗೆ ’ಖೇಣಿ’ ಸಾಹೇಬರು ’ಕುಮಾರಣ್ಣ’ನವರನ್ನು ’ಜಂಟಲ್ ಮ್ಯಾನ್’ ಎಂದು ಕರೆದಿದ್ದಾರಂತೆ. ಕುಮಾರಣ್ಣ ತೋಳೇರಿಸಿ "ಪಗೆವರ ನಿಟ್ಟೆಲ್ವಂ ಮುರಿವೊಡೆನೆಗೆ ಪಟ್ಟಂಗಟ್ಟಾ " ಎಂದು ನಿಂತರೆ "ಸೂಳ್ಪೆಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂದ ಭೀಷ್ಮರ ಛಾತಿ-ಮುತ್ಸದ್ದಿತನವನ್ನು ದೊಡ್ಡಗೌಡರು ತೋರಿಸಬಲ್ಲರೇ..!!?? 


ಟಿಪ್ಪಣಿ: "ಪಗೆವರ...ಗಟ್ಟಾ"...ಎಂಬ ವಾಕ್ಯ ಪಂಪಭಾರತದ್ದು..ಕರ್ಣ, ಭೀಷ್ಮರ ವಯಸ್ಸನ್ನು-ಶಕ್ತಿಯನ್ನು ಹಾಸ್ಯಮಾಡಿ ಯುದ್ಧದಲ್ಲಿ ಅವರ ಬದಲು ನನಗೆ ಪಟ್ಟಕಟ್ಟು..ವೈರಿಗಳನ್ನು ಹೊಡೆದೋಡಿಸುತ್ತೇನೆ ಎಂದಾಗ , ಭೀಷ್ಮರು ಮಾರ್ಮಿಕವಾಗಿ "ಸೂಳ್ಪೆಡೆಯ....ದೊಳ್" ..ಅಯ್ಯಾ ಈ ಮಹಾರಂಗದಲ್ಲಿ ನಿನಗೂ ಒಂದು ಸಮಯ ಬರುತ್ತದೆ ಅಣ್ಣಾ ಎನ್ನುತ್ತಾರೆ ! 




ಖೊನೆ ಖಿಡಿ :


ಶಂಭುಲಿಂಗ ಮಹಾನ್ ದೈವಭಕ್ತ !. ಅಂದು ಗುಡಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದ...


ಪೂಜ್ಯರು ( ಪೂಜಾರ್ರೇ ...??) : ಏನಯ್ಯಾ ಶಂಭು ಇವತ್ತು ಇಲ್ಲಿವರೆಗೂ ಬಂದೆ ?


ಶಂಭುಲಿಂಗ                   : ಇವತ್ತು ಸಿವರಾತ್ರಿ ಅಲ್ಲ್ವರಾ...ಅದ್ಕೆ ಬಂದೆ ಬುದ್ದಿ...


ಪೂಜ್ಯರು                      : ದಿನಾ ಬಂದು ನಮಸ್ಕಾರ ಮಾಡಯ್ಯಾ...
                                     ನಿನಗೆ ಪುಣ್ಯ ಬರುತ್ತೆ...ಸ್ವರ್ಗ ಸಿಗುತ್ತೆ...


ಶಂಭುಲಿಂಗ                   : ನೀವೂ ದಿನಾ ಬತ್ತೀರ...ಅಡ್ ಬುಳ್ತೀರಾ...ಅಂಗಾರೆ ದಿಸಾ 
                                     ಸ್ವರ್ಗ  ನೋಡ್ಕಂಬತ್ತೀರಾ ಬುದ್ದಿ !!!!!??               

22 comments:

ದಿನಕರ ಮೊಗೇರ said...

ಭಟ್ ಸರ್,
ಈ ದೇವೇಗೌಡರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ..... ಅವರ ದೇಶಭಕ್ತಿ , ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ....

SANTA said...

Wonderful konekhidi subbu!

V.R.BHAT said...

ಲೇಖನ ಚೆನ್ನಾಗಿದೆ ಭಟ್ಟರೇ, ನಿಮ್ಮ ಕೊನೇಖಿಡಿ ಸ್ವಲ್ಪ ಜೋರಾಗೇ ಹಾರಲಿ!
ಧನ್ಯವಾದಗಳು

Guruprasad said...

ಶಿವನೆ ಶಂಬುಲಿಂಗ,,,, ಇದು ಕಲಿ ಯುಗ ಕಣಪ್ಪ.....ರಾಜಕೀಯ ಅಂದ್ರೆ ಇದೆನೆಯ.....ಯಾವ ದೊಡ್ಡ ಗೌಡ್ನೂ ಚಿಕ್ಕ ಗೌಡನೋ.....ಒಟ್ಟ್ನಲ್ಲಿ ಅವರ ಹೆಸರು ಓಡಾಡ್ತಾ ಇರಬೇಕು.....ಹಂಗೆಯ ಓಟು ಕೂಡ......ಅದಕ್ಕೆ ಈ ಅನಿಸ್ಟ ಮುಂಡೇವು ಏನ್ ಬೇಕಾದರೂ ಮಾಡ್ತವೆ,,,,ಮಾತಾಡ್ತವೆ........ :-)

ಲೇಖನ ತುಂಬ ಚೆನ್ನಾಗಿ ಇದೆ ಭಟ್ರೆ

ಚುಕ್ಕಿಚಿತ್ತಾರ said...

ಕೆಸರಲ್ಲಿ ಮೊಸರನ್ನು ಹುಡುಕಲು ಸಾಧ್ಯವೇ....
ರಾಜಕೀಯ ಮಾಡಲು ಹಸು ಆದರೇನು...ರಸ್ತೆಯಾದರೇನು...?
ಎಲ್ಲಾ ಪಕ್ಷದವರದ್ದೂ ಒ೦ದೇ ಕ್ವಾಲಿಫಿಕೇಶನ್.....!!!!!

ವಿಚಾರ ಚನ್ನಾಗಿದೆ...

ಮನಮುಕ್ತಾ said...

ಗೋಸು೦ಬೆ ತನ್ನ ರಕ್ಷಾಣೆಗಾಗಿ ಬಣ್ಣ ಬದಲಾಯಿಸಿದರೆ,ರಾಜಕೀಯದವರು ಖುರ್ಚಿ ಮತ್ತು ದುಡ್ಡಿಗಾಗಿ ಅಲ್ಲಲ್ಲಿಗೆ ಬೇಕಾದ ರೀತಿಯಲ್ಲಿ ಬಣ್ಣ ಮಾತು ಚಲನ ವಲನ ಎಲ್ಲವನ್ನೂ ಬದಲಿಸಿಬಿಡುತ್ತಾರೆ!
ಅವರಿ೦ದ ಪ್ರಾಮಾಣಿಕತನದ ಮಾಡುವುದೇ??..ಅ೦ತಹ ಶಬ್ದಗಳ ಪರಿಚಯವಿಟ್ಟುಕೊಳ್ಳುವ ಅಭ್ಯಾಸವೆ ಅವರಿಗಿಲ್ಲ!
ಲೇಖನ ಚೆನ್ನಾಗಿದೆ.ಮತ್ತೆ ಬರುತ್ತಿರಲಿ..

ತೇಜಸ್ವಿನಿ ಹೆಗಡೆ said...

ಮನುಷ್ಯರನ್ನು ಮನುಷ್ಯರೇ ಕಿತ್ತುತಿನ್ನುವ ಕಾಲವಿದೆ. ಇಂತಹ ಯುಗದಲ್ಲಿ ಬಡ ಹಸುವಿನ ರಕ್ಷಣೆಗೆ ನಿಂತಿರುವವರು ಇಂಥವರು!!! ಏನನ್ನು ನಿರೀಕ್ಷಿಸಬಹುದು ಇವರಿಂದ?!

ಸೀತಾರಾಮ. ಕೆ. / SITARAM.K said...

ದೇವೆಗೌಡರ ಬಗ್ಗೆ ಯೋಚಿಸಬೇಕಾದಾಗ ನಾನು ನೆನಪಿಸಿಕೊಳ್ಳುವದು ಗಾ೦ಧೀಜಿಯ ಮೂರು ಮ೦ಗಗಳ ತತ್ವವನ್ನು. ಲೇಖನ ಸುಕ್ತವಾಗಿದೆ.

sunaath said...

ಶಂಭು ಪುತ್ತರ್,
ದೊಡ್ಡ ಗೌಡರ ಮನಸ್ಸನ್ನು ಅರಿಯುವದು ಪಾಮರರಿಗೆ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ, ದೊಡ್ಡ ಗೌಡರು "ನಾನು ಮುಂದಿನ ಜಲುಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ" ಎಂದು ಒಂದು ಫತ್ವಾ ಹೊರಡಿಸಿದ್ದರು. ಎಲ್ಲಾ ಹುಚ್ಚು ರಾಜಕಾರಣಿಗಳು ಈ ಘೋಷಣೆಯನ್ನು ಅಲ್ಪಸಂಖ್ಯಾತರ ಓಲೈಕೆ ಎಂದೇ ತಪ್ಪಾಗಿ ತಿಳಿದಿದ್ದರು. ದಡ್ಡ ಗೌಡರು ಮನೆಗೆ ಕಾಲಿಟ್ಟ ಒಡನೆ ಚೆನ್ನಮ್ಮ ಮಂಗಳಾರತಿ ಎತ್ತಿದರಲ್ಲ! "ಯಾಕಲೇ ಗೌಡಾ, ಎರಡೆರಡು ಮದುವಿ ಆಗಾಕಂತ, ಮುಸಲ ಆಗಿ ಹುಟ್ಟಾವಿದ್ದೀಯಾ?" ಅಂತ ಪೊರಕೆ ಎತ್ತಿಕೊಂಡರು ನೋಡಿ. ಗೌಡರದೆಲ್ಲವನ್ನೂ ಬಲ್ಲ ಚೆನ್ನಮ್ಮನಿಗೆ ಮಾತ್ರ ಅವರ ಸತ್ಯ ಅರ್ಥ ಆಗಿತ್ತು! ಅದಕ್ಕೇ ಗೋಹತ್ಯೆ ನಿಷೇಧದ ವಿರುದ್ಧ ಗೌಡರು ಎತ್ತುವ ಸೊಲ್ಲಿನ ಹಿಂದೆ ಇರುವ ಅರ್ಥ ತಿಳಿಯಲು ಚೆನ್ನಮ್ಮನಿಗೇ ಸಾಧ್ಯ!
-ಕಾಕಾಶ್ರೀ

Subrahmanya said...

* ದಿನಕರ್ ಸರ್...
ದೊಡ್ಡಗೌಡರ ದೇಶಭಕ್ತಿಯ ಬಗ್ಗೆ ಮಾತನಾಡುವುದೇ..!?? ಅದೊಂದು ಮಹಾಕಾವ್ಯ ವಾಗಿಬಿಡುತ್ತದೆ.! ಧನ್ಯವಾದಗಳು

* ವಸಂತ ರವರೇ...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಖಿಡಿ ಇನ್ನೂ ಜೋರಾಗಲಿದೆ..:) Thank u

* ವಿ.ಆರ್. ಭಟ್ಟರೇ...
ಆಗಲಿ..ಖಿಡಿಯನ್ನು ಜೋರಾಗಿ ಹಾರಿಸಲು ಪ್ರಯತ್ನಿಸುತ್ತೇನೆ..ನೀವಿರುತ್ತೀರಲ್ಲಾ..? ಸರಿ ಮತ್ತೆ..:) ಧನ್ಯವಾದಗಳು

* ಗುರು...
ಏನು ಬೇಕಾದ್ರು ..ಹೇಗೆ ಬೇಕಾದ್ರು ಮಾತಡ್ತಾರೆ ಗುರುವೇ..! ಈ ರಾಜಕಾರಣಕ್ಕೆ ಮುಕ್ತಿ ಸಿಗಬಹುದೆ ? ಧನ್ಯವಾದ..

Subrahmanya said...

* ಚುಕ್ಕಿ ಚಿತ್ತಾರ...
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲಂತೆ ! ಹಾಗೆ ದೊಡ್ಡೇಗೌಡರಿಗೆ ಯಾವುದು ರುಚಿಸಬಹುದೆಂದು ದೇವರೇ ಹೇಳಬೇಕು..ಒಟ್ನಲ್ಲಿ ರಾಜಕೀಯ ಮಾಡೋಕೆ..ಸುದ್ದಿಲಿರೋಕೆ ವಿಷಯ ಬೇಕು ಅಷ್ಟೆ.....ಧನ್ಯವಾದ

* ಮನಮುಕ್ತಾ...
ನಿಜ..ಪ್ರಾಮಾಣಿಕತೆ ಅನ್ನುವುದಕ್ಕೆ ರಾಜಕಾರನದಲ್ಲಿ ಅವಕಾಶವೇ ಇಲ್ಲ..ಅದೇನಿದ್ದರು ಕಾಸು ಮಾಡುವ ದಂಧೆಯಷ್ಟೆ...ಬರುತ್ತಾ ಇರಿ..ಧನ್ಯವಾದ

* ತೇಜಸ್ವಿನಿ ಹೆಗಡೆ ಯವರೆ...
ನಾವೇ ಆರಿಸಿ ಕಳುಹಿಸಿರುವ ನಾಯಕರಲ್ಲವೇ ಅವರು..ತಪ್ಪು ಯಾರದ್ದು ಹೇಳಿ?! ಈಗ ಅನುಭವಿಸಬೇಕಾದವರೂ ನಾವೇ. ಹಸುಗಳ ರಕ್ಷಣೆಗೆ ಗೋಪಾಲಕನೇ ಅವತಾರವೆತ್ತಿ ಬರಬೇಕೇನೋ..:) ..ಧನ್ಯವಾದ

Subrahmanya said...

* ಸೀತಾರಾಮ ಗುರುಗಳೇ ...
ಒಳ್ಳೆಯ ಹೋಲಿಕೆ ಕೊಟ್ಟಿದ್ದೀರಿ. ಏನು ಮಾಡುವುದು, ಬೇಡವೆನ್ದರೂ ಕಣ್ಣಿಗೆ ಕಂಡು, ಕಿವಿಗೆ ಕೇಳಿ, ಬಾಯಿಂದ ಮಾತನಾಡುವಂತಾಗಿಬಿಡುತ್ತದೆ...ನಾಯಕರನ್ನಾಗಿ ಮಾಡಿದ ತಪ್ಪಿಗೆ ಅನುಭವಿಸಲೇ ಬೇಕಲ್ಲವೇ...ಧನ್ಯವಾದ ಗುರುಗಳೇ

Subrahmanya said...

* ಕಾಕಾಶ್ರೀ...
ಒಂದು ಅದ್ಭುತ ರಹಸ್ಯವನ್ನು ನನ್ನ ಕಿವಿಲ್ಲುಸಿರಿದ್ದಕ್ಕೆ ನಿಮಗೆ ನನ್ನ ಬಹಿರಂಗ ಧನ್ಯವಾದಗಳು!. ಗೌಡರಿಗೆ ವರ್ಷಗಳ ಹಿಂದಯೇ ಜಲುಮಾಂತರದ ಪಕ್ಕಾ ಮಾಹಿತಿಯಿತ್ತು ನೋಡಿ, ಈ ಟಿ.ವಿ. ಯವರು ಈಗಷ್ಟೇ ಪ್ರಚುರಿಸುತ್ತಿದ್ದಾರೆ.!
ನಾನು ತಪ್ಪು ಮಾಡಿಬಿಟ್ಟೆ ಕಾಕಾಶ್ರೀ..ಇಲ್ಲಿ ಬರೆಯುವ ಬದಲು ಚೆನ್ನಾಮ್ಮಾಜಿಯವರಿಗೆ ಹೇಳಿಬಿಟ್ಟಿದ್ದರೆ ಇನ್ನೊಂದು ಮಹಾಮಂಗಳಾರತಿ ಆಗುತ್ತಿತ್ತೇನೋ..
ನಿಮ್ಮ ರಹಸ್ಯ ’ಛೇದನೆ’ಯ ವಿಧಾನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು..:)...ಧನ್ಯವಾದ

ಸವಿಗನಸು said...

ದೇವೇಗೌಡ ದೇಶಭಕ್ತ......ಹಹಹಹಹಾ...

Subrahmanya said...

* ಸವಿಗನಸಿನ ಮಹೇಶ್...
ಏನಿದು ! ಗೌಡರ ದೇಶಭಕುತಿಯ ಬಗ್ಗೆ ನಗುವೆ ? ಮಾಜಿ ಪ್ರಧಾನಿಗಳವರು..!
ಧನ್ಯವಾದ ನಿಮಗೆ, ಬಂದಿದ್ದಕ್ಕೆ...ನಕ್ಕಿದ್ದಕ್ಕೆ. :)

Unknown said...

ನಾಯಿ ಬಾಲ ಡೊ0ಕಲ್ವೆ ಸಾರ್.. ಗೌಡರೂ ಸಹ ಹಾಗೆ...

Subrahmanya said...

* ರವಿಕಾಂತ ಗೋರೆ ಯವರೇ...
ನಿಜ...ಡೊಂಕು ಬಾಲದ ನಾಯಕರೇ ಸರಿ. ಧನ್ಯವಾದ

PARAANJAPE K.N. said...

ಚೆನ್ನಾಗಿದೆ ಲೇಖನ, ಕೊನೆ ಕಿಡಿ (ಖಿಡಿ) ಸೂಪರ್

Subrahmanya said...

* ಪರಾಂಜಪೆಯವರೇ...
ನೀವು ನನ್ನ ಪುರಾಣವನ್ನೋದಲು ಬಂದದ್ದು ಆನಂದವಾಯಿತು. ನಿಮ್ಮ ಪ್ರೋತ್ಸಾಹ-ಆಶೀರ್ವಾದ ಸದಾ ಈ ಶಂಭುಲಿಂಗನ ಮೇಲಿರಲಿ. ಖಿಡಿ ಮೆಚ್ಚಿದ್ದಕೆ ಧನ್ಯವಾದ. ಬರುತ್ತಾ ಇರಿ.

ಜಲನಯನ said...

ದೊಡ್ಡಣ್ಣನಡ್ಡನೀತಿಗೆ ಗಡ್ಡ ಕೆರೆದುಕೊಳ್ಳುವ ತತ್ವ-ವೇದಾಮ್ತಿಗೂ ನಿಲುಕದ ಗಹನತೆಯತ್ತ ವಿಷಯವನ್ನು ತಂದು ಹಲಸಿನ ತೊಳೆಯಂತೆ ಬಿಡಿಸಿದ್ದೀರಿ ಸುಬ್ರಮಣ್ಯ ಭಟ್ರೇ...ವಿರೋಧಿಸುವುದೇ ವಿರೋಧಪಕ್ಷದ ನಿಲುವು ಎನ್ನುವುದನ್ನು ಎಲ್ಲ ಪಕ್ಷಗಳೂ ಪಾಲಿಸಿವೆ...ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ....ಬಿಡಿ....

Subrahmanya said...

* ’ಜಲನಯನ’ದವರೇ....
ಕೈಗೆ ಎಣ್ಣೆ ಹಚ್ಚಿಕೊಳ್ಳಲೇ ಬೇಕು ಸರ್ !. ಏಕೆಂದರೆ ನಾವುಗಳು ರಾಜಕೀಯದವರಲ್ಲ ನೋಡಿ :). ’ಏನಾದರೂ ಮಾಡು ರಾಜಕೀಯ ಮಾಡು’ ಎನ್ನುವದಷ್ಟೇ ಇವರ ಧ್ಯೇಯ. ಪರಿತಪಿಸುವವರು ನಾವು-ನೀವು ಅಷ್ಟೆ. ನೀವು ಬಂದದ್ದು ಸಮ್ತೋಷವಾಯ್ತು..:). ಧನ್ಯವಾದ

Karthikesh Sarthavalli said...

Deve Gowdra kannigoo idu beelbeku